ವ : ತದನಂತರಂ

ಕುಂತಳಭಾರಮಂ ಪಿಡಿದು ಸಂತಯಿಸುತ್ತು ಸಡಿಲ್ದು ನೀವಿಯಃ
ಕಾಂತಸುವರ್ಣಕಾಂಚಿಯೊಳಮರ್ಚಿ ತೊಡಂಕಿಸುತುಂ ವಿಲೋಚನ
ಪ್ರಾಂತದ ಕಾಂತಿಸಂತತಿಗಳಿಂ ಧವಳೀಕರಿಸುತ್ತು ಸುತ್ತನಾ
ಕಾಂತೆ ಮರಾಳಿಕಾಗಮನದಿಂ ನಡೆದಳ್ ಬಳಿಸುತ್ತೆ ತೋಳ್ಗಳಂ        ೫೧

ವ : ಇಂತು ಮನ್ಮಥನ ವಶ್ಯಮಂತ್ರಾಧಿದೇವತೆಯೆ ಮೂರ್ತಿವಡೆದು ನಡೆದು ಬರುತ್ತಿರ್ದುದೆಂಬಂತೆ ಕೇಸಡಿಗಳ ವಿನ್ಯಾಸವಿಳಾಸದಿಂ ಪಳಿಕಿನ ನೆಲಕ್ಕೆ ಮಿಸುಪಸುಕೆಯ ಪೊಸಕೆಸುದಳಿರ ರಚನೆಯನೆಸಗುತ್ತುಂ ಬಂದೊಂದು ಮನೋಹಾರಿವಿರಚಿತ ಶೃಂಗಾರದಾಗಾರಮಂ ಪುಗುವುದುಮಾಗಳೊಡವಂದ ಕಡುಜಾಣೆಯರಪ್ಪ ಮಡದಿಯರುಡಿಸುವ ತೊಡಿಸುವ ಬೆಸನಂ ಪಡೆದು

ಪಲತೆಱದ ಬಣ್ಣವಣ್ಣಿಗೆ
ಗಳಿನೊಪ್ಪಂಬೆತ್ತು ರಂಜಿಸುವ ಸೀರೆಯನಂ
ದೊಲವಿಂ ನಿಱಿವಿಡಿದುಡಿಸಿದ
ಳೆಳಸುವಿನಂ ನೋಳ್ಪ ಜನದ ಕಣ್ಣುಂ ಮನಮುಂ                       ೫೨

ಪೊಳೆವ ಕದಂಪಿನಲ್ಲಿ ಕೊರಳಲ್ಲಿ ಭುಜಾಗ್ರದ ಮೇಲೆ ಪೀನಮಂ
ಜುಳಕುಚಯುಗ್ಮದೊಳ್ ಮಕರಿಕಾದಿವಿಚಿತ್ರಿತಪತ್ರಭಂಗಮಂ
ವಿಳಸಿತಗಂಧಸಾರರಸದಿಂ ಬರೆದಳ್ ಕಡುಜಾಣೆಯೊರ್ವಳ
ಗ್ಗಳದ ಮನೋಜವಶ್ಯಕರಮಂತ್ರಮುಮಂ ಬರೆವಂತಿರಾಕ್ಷಣಂ       ೫೩

ಕೆಂದಾವರೆಯರಲ್ಗಳನೊ
ಲ್ದಂದೆಳವಿಸಿಲೆಳಸಿ ಬಳಸಿತೆನೆ ಲಾಕ್ಷಾರಸ
ದಿಂದಡಿಗಳನೂಡಿದಳೊಲ
ವಿಂದೀಕ್ಷಿಪರಲ್ಲಿ ರಾಗಮಿಮ್ಮಡಿಸುವಿನಂ         ೫೪

ಚರಣನಖಚಂದ್ರಮಂಡಳ
ಪರಿಸರದೊಳ್ ಪೊಳೆವ ತಾರಕಾಮಾಲೆಗಳಂ
ತಿರೆ ಮುಕ್ತಾಫಳಮಯನೂ
ಪುರಂಗಳಂ ಕಾಲ್ಗಳಲ್ಲಿ ತೊಡಿಸಿದಳೊರ್ವಳ್    ೫೫

ಆ ವಧುವಿನ ಕಟಿತಟದೊಳ್
ಪೀವರಮಣಿಕಿಂಕಿಣೀರಣನ್ಮೇಖಳೆಯಂ
ಭಾವಕಿ ತೊಡಿಸಿದಳೊರ್ವಳ್
ತೀವುವಿನಂ ನೋಳ್ಪರೆರ್ದೆಯೊಳತ್ಯಾಶ್ಚರ್ಯಂ  ೫೬

ಬಿಡದ ಪಯೋಧರ ಮಂಡಳ
ದೆಡೆಯೊಳ್ ವರಪಂಚವರ್ಣಪರಿರಂಜನೆ ಮುಂ
ದಿ[ಡೆ] ರನ್ನದೈಸರಂಗಳ
ನಡಸಿಟ್ಟಳದಿಂದ್ರಚಾಪಮಂ ಬೀಱುವಿನಂ         ೫೭

ನಳಿತೋಳ್ಗಳೆಂಬ ಮೃದುಲತೆ
ಗಳ ಬೀಳಲಿವೆಂಬ ಮಾಳ್ಕೆಯಿಂ ನವರತ್ನಂ
ಗಳ ಕಾಂತಿ ಕವಲ್ವರಿವಿನ
ಮಳವಡಿಸಿದಳಂಗದಂಗಳಂ ಬಾಹುಗಳೊಳ್      ೫೮

ಸಿರಿಸದ ಪೂಮಾಲೆಗಳಂ
ದ್ವಿರೇಫಮಾಲೆಗಳ ಬಳಸಿದಂತಿಕ್ಕಿದಳಾ
ತರುಣಿಯ ಮುಂಗೈಗಳೊಳಂ
ಹರಿನೀಲದ ಪಿಂಡುಗಂಕಣಂಗಳನಾಗಳ್           ೫೯

ಅರಳಸರಳ್ಗಲಿಂಗೆ ರತಿಯುಂ ಗಱಿಗಟ್ಟುವ ಮಾಳ್ಕೆಯಿಂದೆ ಸೌಂ
ದರಿಯ ಲಸತ್ಕರಾಂಗುಳಿಗಳಲ್ಲಿ ಹರಿನ್ಮಣಿಮುದ್ರಿಕಾಪರಂ
ಪರೆಗಳ ಸೆಕ್ಕಿದಳ್ ಕೆಳದಿಯೊರ್ವಳವಾಕ್ಷಣಮೀಕ್ಷಣಂಗಳಿಂ
ಗುರುತರರಾಗಮಂ ಬಿಡದೆ ಪುಟ್ಟಿಸುತಿರ್ದುವು ನೋಳ್ಪಡದ್ಭುತಂ  ೬೦

ಮತ್ತೊರ್ವಳ್ ಕೌಶಲ್ಯಂ
ಬೆತ್ತು ಕುಮಾರಿಕೆಯ ಚೆಲ್ವ ನುಣ್ಗೊರಳೊಳ್ ಮಿಗೆ
ಬಿತ್ತರಿಸಿ ಕಟ್ಟಿದಳ್ ಪೊಳೆ
ವುತ್ತಿರ್ದುಱೆ ತೋರಮುತ್ತುಗಳ ಸರವೇಳಂ     ೬೧

ಬೇಕೆಂಬ ಕುಮಾರಕ ಚಿ
ತ್ತಾಕರ್ಷಣಘುಟಿಕೆಯಂತೆ ರಂಜಿಪ ಪರಮಾ
ಸ್ತೋಕಮೌಕ್ತಿಕದಿನೊಪ್ಪುವ
ಮೂಕುತಿಯಂ ಮೂಗಿನಲ್ಲಿ ಸಾರ್ಚಿದಳೊಲವಿಂ            ೬೨

ನಗೆಮೊಗಮೆಂಬ ಚಂದ್ರಮನ ತಣ್ಗದಿರ್ದೊಂಗಲೆ ಘಟ್ಟಿಗೊಂಡೆರ
ಳ್ಬಗೆಯೊಳೆ ಪುಂಜಿಸಿರ್ದು ಪರಿಲಂಬಿಗಳಾದುವಿವೆಂಬ ಮಾಳ್ಕೆಯಿಂ
ಸೊಗಯಿಪ ಮುತ್ತಿನೋಲೆಗಳನಿಕ್ಕಿ ಮನೋಹರಕರ್ಣಪಾಳಿಕಾ
ಯುಗದೊಳಮರ್ಚಿದಳ್ ಕಡುಕಿನೋಳಿಯನಾತ್ತವಿಮೌಕ್ತಿಕಾಳಿಯಂ೬೩

ನಗೆಗಣ್ಗಳೊಳಂಜನಮಂ
ಬಗೆಗೊಳ್ವಿನಮೆಚ್ಚಿದಳ್ ವಿಳಾಸಿಯೊರ್ವಳ್
ಮಿಗುವ ಪೊಸಮಸೆಯ ನನೆಯಂ
ಬುಗಳಿಂಗಂ ಪಡೆವ ಮಾಳ್ಕೆಯಿಂ ನುಣ್ಬೊಗರಂ೬೪

ಶೃಂಗಾರಮೆಂಬ ಲತೆಯ ಮ
ನಂ‌ಗೊಳಿಸುವ ತುತ್ತತುದಿಯೊಳೊಗೆದಿರ್ದಲರೊ
ಳ್ದೊಂಗಲವೊಲ್ ಪೆಱೆನೊಸಲೊಳ್
ಸಂಗಳಿಸಿದಳಳೆವ ತೋರಮುತ್ತಿನ ಬೊಟ್ಟಂ      ೬೫

ತ್ರಿಗುಣಿಸಿದ ಮಲ್ಲಿಕಾಮಾ
ಲೆಗಳಂ ಕಡುತೋರಮಾದ ಮುಡಿಯಲ್ಲಿ ಮನಂ
ಬುಗುವಂತಿರೆ ಮುಡಿಸಿಟ್ಟಳ್
ಮೃಗಧರಕಳೆಗಳನೆ ರಾಹು ಮುಕ್ಕುಳಿಸಿದವೊಲ್            ೬೬

ರನ್ನದ ಮುಂದಂಡೆಗಳಿಂ
ಚೆನ್ನಂಬಡೆದಿರ್ದು ತೋರತೊಂಗಲ್ಗಳಿನೆಸೆ
ವನ್ನಂ ಮುತ್ತಿನ ಮುಡಿಯಂ
ಕನ್ನೆಗೆ ಜಾಣಿಂದೆ ತೊಡಿಸಿದಳ್ ಮತ್ತೊರ್ವಳ್   ೬೭

ವ : ಇಂತು ತತ್ತತ್ಕರ್ಮಕೌಶಲ್ಯನಿರತೆಯರಪ್ಪ ಪರಿಚಾರಕಿಯರಾ ಶೃಂಗಾರವತೀದೇವಿಯ ನತಿಶಯಮಾಗಿ ಕೆಯ್ಗೆಯ್ಸಿದಾಗಳ್

ಮನದನುರಾಗದೇಳ್ಗೆಗೆ ದಲಾಗರಮೀಕ್ಷಿಪರೀಕ್ಷಣಂಗಳಿಂ
ಗನವಧಿಸೌಖ್ಯಕಾರಕಮಶೇಷಜನಪ್ರಿಯಮಾಗಿ ಕೌತುಕಂ
ತನಗಳವಟ್ಟು ತೋಱೆ ಪರಿಭೂಷಿತಕನ್ನೆಯ ರೂಪು ಲೋಕಮಂ
ಘನಮೆನೆ ಮೋಹಿಸುತ್ತು ಪುಳಕಾಂಕುರಸಂಕುಳಮಾಗಳೇಳ್ವಿನಂ      ೬೮

ಮನಸಿಜನ ಮಂತ್ರದೇವತೆ
ಯೆನೆ ಮದನನ ವೀರಲಕ್ಷ್ಮಿಯಂತಿರೆ ರತಿನಾ
ಥನ ಮೋಹನಶಕ್ತಿಯವೊಲ್
ಜನಮಂ ಮೋಹಿಸುತುಮಿರ್ದಳಚ್ಚರಿಯಿಂದಂ   ೬೯

ವ : ಆಗಳ್

ಎಯ್ದೆ ಮೂಲೋಕಮಂ ಕೆ
ಯ್ಗೆಯ್ದೀಕೆಯ ರೂಪಿದೊಂದೆ ಸಾಲದೆ ಗೆಲಲಿ
ನ್ನಯ್ದುಬಾಣಂಗಳಂ ಪಿಡಿ
ದೆಯ್ದುವ ಸಂಕ್ಲೇಶಮೇವುದೆಂಬಂ ಮದನಂ    ೭೦

ವ : ಸಮನಂತರಮಾ ಪ್ರತಾಪರಾಜನಾದೇಶದಿಂದಂ ಮೌಹೂರ್ತಿಕನೊರ್ಬಂ ಶುಭಮುಹೂರ್ತವಿನಿಮಗ್ನ ಶುಭಲಗ್ನದೊಳನೇಕವಿಧಮಣೀಯ ರಚನಾವಿಶೇಷ ಪರಿರಂಜಿತಮುಂ ಪರಿಪೂರ್ಣಮನೋರಥಮುಮೆನಿಪ್ಪ ಸುವರ್ಣರಥಮಂ ತಂದು ಮುಂದಿರಿಸುವುದುಮಾಗಳಾ ಶೃಂಗಾರವತೀದೇವಿ ತನ್ನಯ ನೂತ್ನರತ್ನಮಯಸಮುದಾರ ನಾನಾ ಶೃಂಗಾರಸಾರದಂಗೀಕಾರದಿಂ ಚಾರುತೆವಡೆದ ಹಡಪದ ಡವಕೆಯ ಕನ್ನಡಿಯ ಸಂಚದ ಮೇಳದಂಗನೆಯರೊಡಗೂಡಿ ಸಕಳರಾಜಕುಮಾರವಂಶವೀರ್ಯಪರಾಕ್ರಮ ಕ್ರಮಸ್ವರೂಪ ನಿರೂಪಣ ನಿಪುಣೀಕೃತಬುದ್ಧಿಸಮೃದ್ಧಿಯಪ್ಪ ಸುಭದ್ರೆಯೆಂಬ ವೃದ್ಧಕಂಚುಕೆವೆರಸು ಕಡುನಲವಿಂದ ಬಂದಾ ರಥಮನೇಱುವುದುಂ

ಪರಿವೇಷಂಬಡೆದಿರ್ದ ಪೂರ್ಣಶಶಿಬಿಂಬಂ ತಾನಿದೆಂಬಂದದಿಂ
ಪರಭಾಗಂಬಡೆದಿರ್ದ ಪಲ್ಲವದಿನೊಪ್ಪಂಬೆತ್ತುದಂ ಛತ್ರಮಂ
ಧರಿಸಿರ್ದಳ್ ಕೆಲದಲ್ಲಿಯೊರ್ವಳೊಲವಿಂ ಮತ್ತಿರ್ವರುಂ ರತ್ನಬಂ
ಧುರದಂಡಾಂಚಿತ ಚಾಮರಂಗಳನೆರಳ್ಭಾಗಂಗಳಲ್ಲಿಕ್ಕಿದರ್          ೭೧

ವ : ಆಪೊತ್ತಿನೊಳ್

ಮಂಗಳಪಾಠಕಪ್ರಕರಮೋದುವ ಪಾವನಪದ್ಯಗದ್ಯನಾ
ದಂಗಳ ಕೂಡೆ ಸಂಗಣಿಸಿ ಮಂಗಳಗಾಯಕಗಾಯಕೀ ನಿಕಾ
ಯಂಗಳ ಚಾರುಗೀತನಿನದಂಗಳವೆಣ್ದೆಸೆಯಂ ಪಳಂಚಲು
ತ್ತುಂಗಗಭೀರಹೃದ್ಯತರಮಂಗಳವಾದ್ಯರವಂಗಳುಣ್ಮಲುಂ           ೭೨

ಕುಲವೃದ್ಧೆಯರೆಲ್ಲಂ ನೆರೆ
ದೊಲವಿಂದಂ ಪರಸಿ ಮಂಗಳಾಕ್ಷತಚಯಮಂ
ತಳಿಯಲವಂ ಕೈಕೊಳುತುಂ
ತಳರ್ದಲ್ಲಿಂ ಪೋಗುತಿರ್ದಳತಿಶಯದಿಂದಂ      ೭೩

ತುಂಗತರಮಂಗಳದ್ರ
ವ್ಯಂಗಳ ಬಳಗಂಗಳಿಂದೆ ತುಂಬಿದ ಹರಿಯಾ
ಣಂಗಳ ಪಂತಿಗಳಂ ಪಿಡಿ
ದಂಗನೆಯರ್ ನೆರೆದು ಮುಂದೆ ಪೋಗುತ್ತಿರ್ದರ್            ೭೪

ಪರಿವಾರವಾರನಾರೀ
ಪರಿಕರನಿಕರಂಗಳಾ ವರೂಥದ ಸುತ್ತಲ್
ನೆರೆದು ಬರುತ್ತಿರ್ದರ್ ಬಿ
ತ್ತರಿಸುತ್ತುಂ ಕಾಮದೇವಮಹಿಮಾಸ್ಥಿತಿಯಂ   ೭೫

ವ : ಇಂತಾಕೆಯೊಡನಾಡಿಗಳಪ್ಪ ಸಾಸಿರ್ವರ್ ಮೇಳದ ಕೆಳದಿರ್ ಪಿಂಡುಗೊಂಡು ತದ್ಯೋಗ್ಯ ನಾನಾಪ್ರಕಾರ ನವೀನಮಣಿಮಯಮಂಗಳೋಪಕರಣಂಗಳಂ ಪಿಡಿದಾ ಸ್ಯಂದನದ ಸುತ್ತಲುಂ ಮಂದೈಸಿ ನಡೆಯೆ

ಉರ್ಬಿದ ಗರ್ವದಿಂದೆ ಮದನಂ ಗೊಲೆಗೇಱಿಸಿ ಕಬ್ಬುವಿಲ್ಲುಮಂ
ಕೊರ್ಬಿದ ಪೂವಿನಂಬುಗಳನಲ್ಲಿ ತೊಡರ್ಚಿ ವಿಶೇಷಶೌರ್ಯದಿಂ
ಬೊಬ್ಬಿಱಿದಾರ್ದು ಮುಂದೆ ನಡೆಯಲ್ ಮುದದಿಂದಮೆ ಬಂದುಪೊಕ್ಕಳಾ
ಸರ್ವನುತ ಸ್ವಯಂವರದ ಚಿತ್ರಿತಗೋಪುರದಂತರಾಳಮಂ            ೭೬

ವ : ಅಂತಾ ಶೃಂಗಾರವತೀದೇವಿಯೆಂಬ ಕನ್ಯಾರತ್ನಂ ಮಹಾಮಹಿಮೆವೆರಸಿ ಬಂದು ತತ್ಸ್ವಯಂವರಮಂದಿರದೊಳಗಂ ಪುಗುವುದುಮಾಗಳಲ್ಲಿರ್ದ ರಾಜನ್ಯಕಮೆಲ್ಲಂ ವಸಂತಲಕ್ಷ್ಮಿಯ ಬರವಿನೊಳವನೀರುಹಂಗಳಂಕುರಸಂಕುಳಂಗಳಂ ತಾಳ್ದುವಂತೆ ವಿಪುಳಪುಳಕಂಗಳಂ ತಾಳ್ದಿ ಮತ್ತಮವರ ಕಣ್ಗಳುಂ ಮನಂಗಳುಂ ವಾಸರಶ್ರೀಯ ಪ್ರವೇಶದೊಳ್ ತಾವರೆಯಲರ್ಗಳಲರ್ವಂತೆ ವಿಕಾಶಶ್ರೀಯನಪ್ಪುಕೆಯ್ವುದುಂ

ಸೊಗಯಿಪ ಕನ್ಯಾರತ್ನಂ
ಮಿಗೆರಾಜಕುಮಾರರೀಕ್ಷಣಾಕರ್ಷಣಮಂ
ಬಗೆಗಳ್ಗಾಕೃಷ್ಟಿಯಂ ಕೆ
ಯ್ಮಿಗಲೊರ್ಮೊದಲಲ್ಲಿ ಮಾಡಿದಳ್ ಕೌತುಕಮಂ         ೭೭

ವ : ಆಗಳಾ ರಾಜಕುಮಾರಿ ಮೆಲ್ಲಮೆಲ್ಲನೆ ಸಲ್ಲೀಲೆಯಿಂದಂ ಬಂದು ತತ್ಸ್ವಯಂ ವರಮಂಡಪಮಧ್ಯಸ್ಥಳಕ್ಕಳಂಕಾರಮೆನಿಸಿ ಕಣ್ಗೊಳಿಪ ಗೋಮೇದವೇದಿಕಾಗ್ರ ಭಾಗದಲ್ಲಿ ಥಳಥಳಿಸಿ ಪೊಳೆವ ವಿಮಳತರಮುಕ್ತಾಫಳಮಾಲಾಲಂಭೂಷಾದಿ ರಚನಾವಿಶೇಷ ಪರಿಭೂಷಿತರಮಣೀಯ ಹರಿನೀಳ ಶಿಳಾಮಯಸ್ತಂಭಮಂ ಮಲಂಗಿ ನಿರತಿಶಯಮಾಗಿ ನಿಂದಿರ್ಪುದುಂ

ತಾರಾವಳಿಗಳ್ ಬಳಸಿದ
ಚಾರುಸುಧಾಕಿರಣಕಳೆಯ ತೆಱದಿಂದೆ ಮನೋ
ಹಾರಿಸ್ತ್ರೀಯರ ಬಳಸಿಂ
ದಾ ರಾಜಕುಮಾರಿ ಮನಕೆ ಪಡೆದಳಗುರ್ವಂ      ೭೮

ರತಿಯಂ ಪ್ರತಿಷ್ಠೆಗೆಯ್ದುಂ
ಪಿತಾಮಹಂ ಸಕಳಜನಮನಃಪೀಠದೊಳೆಂ
ಬತಿಶಯಮಂ ಪುಟ್ಟಿಸುತುಂ
ಸತಿನೋಡುತ್ತಿರ್ದಳಖಿಳರಾಜನ್ಯಕಮಂ            ೭೯

ವ : ಆಗಳಖಿಳಭೂಪಾಳಕುಮಾರಕರ ಕಣ್ಮಲರ್ಗಳೊರ್ಮೊದಲೊಳ್ ಕಡು ತವಕದಿಂ ಋಜವರ್ಧಋಜುವಕ್ರಮರ್ಧವಕ್ರಾದಿ ಬಹುವಿಧ ಗತಿಭೇದದಿಂ ಪರಿದು ಪೋಗಿಯಾ ರಾಜಕುಮಾರಿಯನೆಳಸಿ ಬಳಸಿಯೋರೈಸಿಯಟ್ಟಿಮುಟ್ಟಿ ಪತ್ತಿ ಸುತ್ತಿಮುತ್ತು ತ್ತುಮಿರೆ

ಮಿಕ್ಕ ನಾಲ್ಕಿಂದ್ರಿಯಂಗಳ
ನೊಕ್ಕು ಕರಂ ಬಿಟ್ಟುಮವಱ ವಿಷಯಂಗಳುಮಂ
ಸೊಕ್ಕಿರ್ದ ದೃಗಿಂದ್ರಿಯಮೊಂ
ದಕ್ಕನುವಶರಾಗೆ ನೋಡಿದರ್ ಕನ್ಯಕೆಯಂ        ೮೦

ಮತ್ತೊರ್ವಂ ರಾಜಸುತಂ
ಬಿತ್ತರದಿಂ ನೋಡಿನೋಡಿ ಕಣ್ಸೋಲಂ ಮೆ
ಯ್ವೆತ್ತೆಮೆಯಿಕ್ಕದೆ ಬಗೆಗೊಳಿ
ಸುತ್ತಿರ್ದಂ ಸುರಕುಮಾರನೆಂಬಿನಮಾಗಳ್        ೮೧

ಸುವಿಪಂಚೀಕಳನಾದಮೆಂಬ ತೆಱದಿಂ ಕರ್ಣಾಮೃತಸ್ಯಂದನೋ
ತ್ಸವಮಂ ಮಾಳ್ಪ ಗಭೀರಸಾರಮಟದುವಪ್ಪೊಳ್ಮಾತುಮಂ ಕನ್ನೆಯ
ನ್ಯವಧೂವಕ್ತ್ರಮನೀಕ್ಷಿಸುತ್ತು ನುಡಿಯಲ್ತೆನ್ನಂ ದಲೆಂದೊರ್ವನು
ಜ್ಜುಗದಿಂ ಪೋಗಿರೆ ಮುಂದೆ ಲೆಕ್ಕಿಸದಿರಲ್ಕಾದಂ ಸುಹಾಸ್ಯಾಶ್ರಯಂ           ೮೨

ಪಿರಿದುಂ ಕೌತುಕಮಾದ ರೂಪಭರಮಂ ಕಣ್ಸೋಲ್ತು ನಟ್ಟಾಲಿಗೊಂ
ಡರೆಬರ್ ನೋಡುವ ಪೊತ್ತಿನಲ್ಲಿ ನಿಜಚೇಷ್ಟಾಭಾವಮಂ ಬಿಟ್ಟು ಮೆ
ಯ್ಗರೆದರ್ ಲೆಪ್ಪದ ಚಿತ್ರಿಸಿರ್ದ ವಿಲಸಚ್ಚಿತ್ರಂಗಳೆಂಬಂದದಿಂ
ಮರವಟ್ಟರ್ ಕರಮಾ ಕುಮಾರಕಿಯ ಸೌಂದರ್ಯಕ್ಕಿದಾಶ್ಚರ್ಯಮೇ          ೮೩

ಪೊಂಗಳಸಂಗಳಂತೆಸೆವ ವೃತ್ತಕುಚಂಗಳ ಚೆಲ್ವಿನೇಳ್ಗೆಯಂ
ಪಿಂಗದೆ ಸೋಲ್ತು ನೋಡುವೆಡೆಯೊಳ್ ಪುಳಕಂಗಳನಪ್ಪುಕೆಯ್ಯಲಂ
ದಂಗಜ ಮೂರ್ಚೆಯಿಂದೆ ಮರವಟ್ಟಿರೆ ರಾಜಕುಮಾರರೆಲ್ಲರುಂ
ತುಂಗಮದಶ್ರುಧಾರೆಗಳಿನೆಚ್ಚಱುಮಂ ಪಡೆದಿರ್ದರಾಕ್ಷಣಂ            ೮೪

ಲಲನಾತಿಳಕದ ನಳಿತೋ
ಳೆಳಕುಳಿಗೊಳೆ ಕಾಮಪಾಸದಂತಿರೆ ಮನಮಂ
ಕಳವಳಿದದನೀಕ್ಷಿಸುತುಂ
ತಳವೆಳಗಾದಂ ನೃಪಾಳತನಯನದೊರ್ವಂ        ೮೫

ಮಿಸುನಿಯ ಕುಂಡಳಮಂ ಸಂ
ತಸದಿಂದಳವಡಿಸುವೊಂದು ನೆವದಿಂದೊರ್ವಂ
ನಸುಮುರಿದು ಗೋಣನಂದೀ
ಕ್ಷಿಸಿದಂ ನೃಪಸುತೆಯ ಮಿಸುಪ ನಗೆಮೊಗದೊಳ್ಪಂ         ೮೬

ನೀ ಱೆಯ ಪೆಱೆನೊಸಲೊಳ್ ಬೆ
ಳ್ಪೇಱಿದ ತಿಳಕಂ ಮನೋಜವಶ್ಯದ ತಿಳಕಂ
ತೋಱಿರಲದನೀಕ್ಷಿಸುತುಂ
ಬೇಱೊರ್ವಂ ಮಱುಗಿ ನೆಱೆಯೆ ಬೆಱಗಾಗಿರ್ದಂ೮೭

ವ : ಅಂತು ಕಂತುರಾಜನ ಸಮ್ಮೋಹದೀಪಕಳಿಕೆಯಂತೆ ಕಮನೀಯ ಕಾಯ ಕಾಂತಿಸಂತತಿಯಿಂದುಜ್ವಳಿಸುತ್ತುಮಿರ್ದ ಮಂಗಳಮಯಶೃಂಗಾರಭಂಗಿಯನಂಗೀಕರಿಸಿ ಕಂಗೊಳಿಪ ಚೆಲ್ವಿಂದಗ್ಗಳಮಾದ ಶೃಂಗಾರವತೀದೇವಿಯಂ ಕಂಡು ಮನಂಗೊಂಡನೇಕ ರಾಜಕುಮಾರಕಲೋಕಮೆಲ್ಲಂ ನಾನಾಪ್ರಕಾರ ಕಾಮವಿಕಾರ ಪರಿಪಾಕಸಮುದ್ರೇಕ ಸಮಾಕ್ರಾಂತಮನೋವಿಕಾರದೊಡನೊಡನಂಗಂಗಳ ದುಷ್ಟಚೇಷ್ಟಾಪರಂಪರೆಯನವ ಷ್ಟಂಭಿಸುವುದುಂ

ಆಸತಿಯ ಚಾರುಲಾವ
ಣ್ಯಾಸವರಸಸೇವೆಯಿಂದೆ ಸೊಕ್ಕಿತ್ತು ಕರಂ
ಭಾಸುರಕುಮಾರವೃಂದಂ
ಸೂಸುವಿನಂ ಮದನಚೇಷ್ಟೆ ಬಹುಮುಖದಿಂದಂ            ೮೮

ಒಂದೊಂದು ನೆವದ ಮಱೆಯಿಂ
ದಂದಾ ನೃಪಸುತೆಗೆ ತಮ್ಮ ಚೆಲ್ವಂ ತೋಱಿಸ
ಲೆಂದು ಮಾಡಿದರನೇಕ
ಚ್ಛಂದದ ಚೇಷ್ಟೆಗಳನಾ ಕುಮಾರಕರರೆಬರ್     ೮೯

ವ : ಅದೆಂತೆನೆ

ಮುಡಿದ ಪೂಮಾಲೆ ಮತ್ತಿ
ಮ್ಮಡಿಸಲ್ ನಖದೀಪ್ತಿಮಾಲೆಯಿಂ ಯುವನೊರ್ವಂ
ಕಡುತೋರದುಱುಂಬಂ ಸಂ
ಗಡಿಸುವ ನೆವದಿಂದೆ ತನ್ನ ಚೆಲ್ವಂ ಮೆಱೆದಂ    ೯೦

ಸುಕುಮಾರಕನೊರ್ವಂ ಮಣಿ
ಮಕುಟಮುಮಂ ತಿರ್ದುವೊಂದು ನೆವದಿಂದೆ ಭುಜಾ
ಧಿಕಶೋಭೆಯನಾಕ್ಷಣದೊಳ್
ಪ್ರಕಟಿಸಿ ಮೆಱೆದಂ ಸುರೂಪಮಂ ವೈಭವಮಂ೯೧

ಭಾಸುರಮುಕ್ತಾಹಾರಮ
ನೋಸರಿಸುವ ನೆವದಿನಂದು ಪೇರುರದೊಳ್ಪಂ
ಲೇಸಾಗಿಯೆ ತೋಱಿಸಿದಂ
ಸಾಸಿಗನೊರ್ವಂ ಕುಮಾರಕಂ ಕಡುನೀಱಂ         ೯೨

ಅಂಗದಮಂ ತಿರ್ದುವ ಪರಿ
ಭಂಗಿಯಿನೊರ್ವಂ ಕುಮಾರಕಂ ತೋಱಿಸಿದಂ
ತುಂಗತರ ಬಾಹುದಂಡಾ
ಗ್ರಂಗಳ ಪಿರಿದಾದ ಚೆಲ್ವಿನೊಂದು ಬೆಡಂಗಂ      ೯೩

ವರಪಾಣಿಪದ್ಮರಾಗದೆ
ಪರಭಾಗಂಬಡೆದ ಪದ್ಮರಾಗದ ಮುದ್ರೋ
ತ್ಕರಮಂ ತಿರ್ದುವ ನೆವದಿಂ
ಬೆರಳ್ಗಳ ಕಡುಚೆಲ್ವನಂದು ತೋಱಿಸುತಿರ್ದಂ  ೯೪

ಲೀಲಾರ್ಥಂ ಪಿಡಿದಿರ್ದಭಿ
ಲಾಲಿತವಿಕಚಾರವಿಂದಮಂ ತಿರಿಗಿಸಿದಂ
ಬಾಲೆಯನೀಕ್ಷಿಸುತುಂ ಭೂ
ಪಾಲಂ ಮನ್ಮಥವಿಕಾರವಶದಿಂದೊರ್ವಂ         ೯೫

ವ : ಇಂತನಂಗನೆಂಬ ಖಳಗ್ರಹವಿಕಾರವಿಜೃಂಭಣಾವಶಕ್ಕನುಕೂಲರಾಗಿ ರಾಜರೆಲ್ಲರು ಮಂಗೋಪಾಂಗವಿಕಾರಭಂಗಿಯನಂಗೀಕರಿಸುತ್ತುಮಿರೆ

ಶಿಷ್ಟಕುಮಾರಿಯ ತನುಲತೆ
ಮುಷ್ಟಿಗ್ರಾಹ್ಯೈಕಮಧ್ಯಮಾಗಿರ್ದು ಧನು
ರ್ಯಷ್ಟಿಯ ತೆಱದಿಂ ಚೆಲ್ವನ
ವಷ್ಟಂಭಿಸೆ ಕಾಮನದಱ ಬಲದಿಂ ಬಲಿದಂ        ೯೬

ತನುವಂ ಬೇಡಿ ಸದಂತರಂಗದೊಳೆ ನೋವಂ ಮಾಳ್ಪ ವೈಚಿತ್ಯ್ರಮೋ
ಹನ ಬಾಣಂ ಪಿಡಿವಾಗಳೊಂದು ತೊಡುವಾಗಳ್ ಮೂಱು ಪೋಪಾಗಳೊ
ಯ್ಕನೆ ಸಾಹಸ್ರಕಮೆಯ್ದೆ ತಾಗುವೆಡೆಯೊಳ್ ಲಕ್ಷಂ ವೃಥಾಪಾದನಾ
ನನದೊಳ್ ಕೋಟಿ ದಲಾಗಿ ಭೂಪಸುತರಂ ತೊಟ್ಟೆಚ್ಚನಾ ಮನ್ಮಥಂ          ೯೭

ಮೋಹನಬಾಣಮುಚ್ಚಿದೊಡೆ ಮಸ್ತಕಕಂಪನಮಾದುದೆಂಬಿನಂ
ಸಾಹಸಿಕರ್ ಕುಮಾರವರರಾಕೆಯ ಚೆಲ್ವನಭೀಕ್ಷಿಸುತ್ತುಮಿ
ರ್ದೂಹಿತವಚ್ಚಮತ್ಕೃತಿಕರಾಗಿ ಕರಂ ತಲೆದೂಗುತಿರ್ದರು
ತ್ಸಾಹಿಸದಿರ್ಪರೇ ಜಗದೊಳಚ್ಚರಿಯಂ ನೆಱೆಕಂಡ ಮಾನಸರ್       ೯೮

ನೋಡುವ ಕಣ್ಗಳಾವೆಡೆಯೊಳಿರ್ದವವಲ್ಲಿಯ ಕಾಂತಿಯಲ್ಲಿ ತೇಂ
ಕಾಡುತುಮಿರ್ದು ಮತ್ತುಳಿದಪಾಂಗವಿಲೋಕನಮಿಲ್ಲದಿರ್ದೊಡಂ
ನಾಡೆಯುಮಿಂದ್ರನಂತಿರೆ ಸಹಸ್ರವಿಲೋಚನಮುಳ್ಳೊಡಂತದಂ
ನೋಡುವ ಸೌಖ್ಯಮಂ ಪಡೆಯಲಕ್ಕೆನುತುಂ ನುಡಿದರ್ ಕುಮಾರಕರ್          ೯೯

ವ : ಇಂತು ಕಡುತಿಣ್ಣಂ ಗಾಡಿವಡೆದ ಪಣ್ಣಮೇಲೆ ಕಣ್ಣಾಗಿರ್ದ ರಾಜನ್ಯಕ ಮೆಲ್ಲಂ ತಂತಮ್ಮ ಬಲ್ಲಂತಪ್ಪ ಸ್ತ್ರೀವಶ್ಯದ ಯಂತ್ರಮಂತ್ರತಂತ್ರಂಗಳ ಬಲ್ಪಿಂ ಸ್ವತಂತ್ರಂ ಮಾಡಲ್ವೇಡಿ

ಒರ್ವಂ ವಶ್ಯದ ಚೂರ್ಣಮಂ ತಳಿದನೊರ್ವಂ ಧ್ಯಾನಿಸುತ್ತಿರ್ದನೊ
ಲ್ದೊರ್ವಂ ಮಂತ್ರಮನೋದಿದಂ ತಿಳಕಮಂ ಮತ್ತೊರ್ವನಿಟ್ಟಂ ಸಮಂ
ತುರ್ವಿಂದಾ ಸತಿಯಂ ವಶೀಕರಿಸಲೆಂದಿಂತಪ್ಪುಪಾಯಂಗಳಂ
ಸರ್ವರ್ ಮಾಡುತುಮಿರ್ದರುತ್ಸುಕತೆಯಿಂ ಗೆಲ್ವಂತಿರೊರ್ವೊರ್ವರಂ           ೧೦೦

ಘನಮನುರಾಗಂಬೆತ್ತುದು
ಜನಚಿತ್ತಂ ರಾಗಿಣಿಯೋಪಾದಿಯ ವಶದಿಂ
ವಿನುತಸ್ಫಟಿಕೋಪಳಮಂ
ತ್ಯನುರಕ್ತಿಯನೆಯ್ದುವಂತುಪಾಧಿಯ ವಶದಿಂ  ೧೦೧

ವ : ಅನಂತರಮಾ ಶೃಂಗಾರವತೀದೇವಿಗೆ ವೃದ್ಧಕಂಚುಕಿಯೊರ್ವಳವರವರ ವಂಶವೀರ್ಯವೀಭವಪರಾಕ್ರಮಪ್ರಭಾವಮನನುಕ್ರಮದಿಂ ಪೇಳ್ದು ಸುಟ್ಟುಂಬೆಯಿಂ ತೋಱಿತೋಱಿ ಬೇಱೆವೇಱೆ ಪೆಸರ್ಗೊಂಡು ಪರಿವಿಡಿಯಿಂದಂ ತೋಱಿಸುತ್ತುಮಿರ್ಪುದುಂ

ಈತಂ ಮಾಳವಭೂಮಿಪಾಳವರನೀತಂ ಕುಂತಳಾಧೀಶನಿಂ
ತೀತಂ ಗೂರ್ಜರಭೂಭುಜಂ ಮಗಧದೇಶಾಧೀಶನೀತಂ ಸಮಂ
ತೀತಂ ಚೋಳನರೇಶ್ವರಂ ಬಗೆವೊಡೀತಂ ಪಾಂಡ್ಯಭೂಪಾಳನಿಂ
ತೀತಂ ಕೇರಳಭೂಪನೆಂದುಸಿರ್ದು ತೋಱುತ್ತಿರ್ದಳಂದೆಲ್ಲರಂ        ೧೦೨

ಈತಂ ಮತ್ತಕಳಿಂಗದೇಶದೊಡೆಯಂ ನೇಪಾಳಭೂಪಾಳನಿಂ
ತೀತಂ ಸಿಂಹಣಮೆಂಬ ನಾಡಿನರಸೀತಂ ವಂಗರಾಜ್ಯೇಶನಿಂ
ತೀತಂ ಕೇರಪನೀತನಿಂದ್ರವಿಷಯಶ್ರೀನಾಥನೀತಂ ಮಹಾ
ಖ್ಯಾತಕ್ಷೋಣಿಪನಾಮವಂ ತಿಳಿಪುತುಂ ಸುಟ್ಟುಂಬೆಯಿಂ ತೋಱಿದಳ್         ೧೦೩

ವ : ಇಂತು ತೋಱಿ ದಟ್ಟಮಾಗಿ ತಳ್ತು ನಿಮಿರ್ದೆಮೆದುಱುಗಲ್ ಕಡುನೀಳ್ದ ಕುಡಿವುರ್ವುಗಳನೌಂಕೆ ಬಿಂಕದಿಂ ನೀಡುಂನೋಡುವೆಡೆಯೊಳ್ ನಾಡೆಯುಂ ಪೊಗರೇಱಿದ ಮೊಗರಸಮೆಂಬ ಕಡಲ ನಡುವೆ ತಡೆಯದೆಡೆಯಾಡಿ ಪೊಳೆವೆಳವಾಳೆಯಮೀಂಗಳ ಬೆಡಂಗನೊಳಕೊಂಡು ರಾಜಕನ್ಯೆಯ ಚಲ್ಲೆಗಣ್ಗಳಂ ಚಳಿಸುತ್ತುಮಿರೆ

ಕಾಮನ ಕೆಯ್ಯ ಮೋಹನ ಸುಬಾಣದ ಮೆಯ್ವೊಳಸೆಂಬ ಮಾಳ್ಕೆಯಿಂ
ಸೋಮನ ತಣ್ಪುವೆತ್ತ ಕಡುನುಣ್ಗದಿರ್ದೊಂಗಲಿದೆಂಬ ಮಾಳ್ಕೆಯಿಂ
ಪೂಮಳೆಯೆಂಬ ಮಾಳ್ಕೆಯಿನುದಾರಕುಮಾರರ ಮೇಲೆ ಲೀಲೆಯಿಂ
ಭಾಮೆಯ ಲೋಳಲೋಚನವಿಶಾಳಮರೀಚಿ ನಿಮಿರ್ದುದೆತ್ತಲುಂ    ೧೦೪

ವ : ಅಂತಾ ಯುವತೀರತ್ನಂ ಸುತ್ತಲುಂ ಮೊತ್ತಂಗೊಂಡು ಕುಳ್ಳಿರ್ದ ಯುವ ರಾಜಕುಂಜರರಂ ನಿರೀಕ್ಷಣಂಗೆಯ್ವುತ್ತುಂ ನಟ್ಟನಡುವೆ ಕುಳ್ಳಿರ್ದ ಧರ್ಮನಾಥನಂತಿಕಕ್ಕೆವರೆ

ತುಂಬಿಗಳೊಳೆ ಸಂಪಗೆಯ ಪೂಗಳನೊಲ್ಲದೆ ಬಿಟ್ಟುಬಂದು ಮ
ತ್ತೆಂಬಿನ ಕಲ್ಪವೃಕ್ಷಕುಸುಮಸ್ತಬಕಕ್ಕೆಱಗುತ್ತುಮಿರ್ಪವೋ
ಲಂಬುಜಪತ್ರನೇತ್ರೆಯಲರ್ಗಂಗಳವನ್ಯರನೊಲ್ಲದೆಯ್ದೆ ಚೆ
ಲ್ವಂಬಡೆದಿರ್ದ ಧರ್ಮಜಿನಪಂಗೆಱಗಿರ್ದವತೀವ ಹರ್ಷದಿಂ            ೧೦೫

ಸುಳಿಸುಳಿದೆಲ್ಲಿಯುಂ ತಿರಿಗಿಬಂದ ಪರಿಶ್ರಮಮಂ ಕಳಲ್ಚಿ ನಿ
ಶ್ಚಳತೆಯಿನಿಪ್ಪುದೊಂದು ಬಗೆಯಿಂದೆ ಕುಮಾರಿಯ ಲೋಚನಂಗಳುಂ
ನೆಲಸಿದವಂದು ಧರ್ಮಜಿನನಾಥನ ಮೂರ್ತಿಯೊಳೊಂದಱಲ್ಲಿ ಸಂ
ಗಳಿಸಿದವಲ್ಲಿ ಮತ್ತಮದಱಿಂ ಪೆಱಪಿಂಗದೆ ನಟ್ಟವೆಂಬಿನಂ           ೧೦೬

ಕಣ್ಣಱಿದು ವೃದ್ಧಕಂಚುಕಿ
ತಿಣ್ಣಂ ತದ್ಧರ್ಮನಾಥ ಮಹಿಮಾಕ್ರಮಮಂ
ಬಣ್ಣಿಸಲುದ್ಯೋಗಿಸಿದಳ್
ಕಣ್ಣಿಂದಱಿಯಿಂ ವಿವೇಕಿಗಳ್ ಪರಮನಮಂ     ೧೦೭

ಈತಂ ಸಾಮಾನ್ಯನಲ್ಲಂ ತ್ರಿಜಗದಧಿಪ ಸಂಪೂಜ್ಯನಿಕ್ಷ್ವಾಕುವಂಶೋ
ದ್ಭೂತಂ ಸತ್ಯೈಕವಾಕ್ಯಂ ಚರಮತನುಮಹಾಸೇನರಾಜಾತ್ಮಜಂ ವಿ
ಖ್ಯಾತಂ ನಿಷ್ಕರ್ಮಕಂ ಪಂಚದಶಪರಮತೀರ್ಥಂಕರಂ ಕೌಸಳೇಶಂ
ಸ್ಫೀತಾಜ್ಞಾಸ್ಫೂರ್ತಿಕಂ ರತ್ನಪುರಪರಿವೃಢಂ ಧರ್ಮನಾಥಾಭಿಧಾನಂ            ೧೦೮

ಈತನ ವಧುವಾಗಿಯೆ ನೀಂ
ಭೂತಳಜನವಂದ್ಯೆಯಾಗು ಕಾಮಿನಿ ಕೇಳೆಂ
ದೋತು ಪೇಳಲ್ಕೆ ಕಂಚುಕಿ
ಸಾತಿಶಯಪ್ರೀತಿಯಿಂದಮೇಗೊಂಡಳದಂ         ೧೦೯

ಎರಡುಂ ಕಣ್ಗಳಿವೆಯ್ದವೆಂದು ಸುರಪಂ ಚಕ್ಷುಸಹಸ್ರಂಗಳಂ
ಧರಿಸಿ ಪ್ರೀತಿಯಿನೀತನೊಂದು ರಮಣೀಯಕಾರಸಂಪತ್ತಿಯಂ
ಪಿರಿದುಂ ನೋಡುತುಮಿರ್ದೆನೆಂದೊಡುಳಿದಲ್ಪರ್ ಬಣ್ಣಿಸಲ್ ಬಲ್ಲರೇ
ವರನಾನಾಶುಭಲಕ್ಷಣಂಬೆರಸಿದತ್ಯಾಶ್ಚರ್ಯಸೌಂದರ್ಯಮಂ        ೧೧೦

ವ : ಅದುಕಾರಣಂ ನಿನಗೀ ಧರ್ಮನಾಥಕುಮಾರವರನೆ ವರನಾಗಲ್ ತಕ್ಕನೆಂದು ಸುಭದ್ರೆಯೆಂಬ ವೃದ್ಧಕಂಚುಕಿ ಪೇಳ್ವುದುಮದಂ ಮನದೆಗೊಂಡು ಸಮಾಲೋಕನ ಮಾತ್ರಸಮುದ್ಭೂತರೋಮಾಂಚಸಂಚಯಸಮಂಚಿತ ಶರೀರೆಯಾದ ಶೃಂಗಾರವತೀ ದೇವಿಯೆನಗನುರೂಪನಪ್ಪ ವರನಾದನೆಂದು ಹರ್ಷಸಮುತ್ಕರ್ಷವ್ಯಭೂಷ್ಯ ಮಾಣಮಾನಸೆಯಾಗುತ್ತುಂ ಸಕಳಸುಕುಮಾರಶಿರೋಮಣಿಗೆ ಸ್ವಯಂವರಮಾಲೆಯ ನಿಕ್ಕಲೆಂದು

ಪಿರಿದುಂ ನಿರ್ಮಳಭಾವಮಂ ಪಡೆದು ಪದ್ಮಾನಂದಮಂ ಕೂಡಿಕೊಂ
ಡುರುಗಂಗಾನದಿಯೆಂಬಿನಂ ರಸಮಯಶ್ರೀಮೂರ್ತಿಯಾಗಿರ್ದ ಸೌಂ
ದರಿ ದುಃಪಲ್ವಲಮೆಂಬವೋಲೆಸೆವ ಧಾತ್ರೀಪಾಳರಂ ಬಿಟ್ಟು ಬಂ
ಧುರರತ್ನಾಕರದಂತೆ ತೋರ್ಪ ಜಿನನಂ ಬಂದೆಯ್ದಿದಳ್ ಪ್ರೀತಿಯಿಂ೧೧೧

ರತಿ ಹೂವಿನ ಸರಮಂ ನಿಜ
ಪತಿಗೆ ಕೊಡಲ್ವೇಡಿ ಬಪ್ಪವೊಲಿದಿರಾಗಿ ಮಹಾ
ಸತಿ ಪುಷ್ಪ ಮಾಲೆಯಂ ಪಿಡಿ
ದತಿಶಯದಿಂ ಬಂದಳಾ ಜಿನೇಶಂಗಿದಿರಂ           ೧೧೨

ವ : ಅಂತಾತನ ಕಣ್ಗಂ ಮನಕ್ಕಂ ಬಪ್ಪಂತು ಬಂದು ಮುಂದೆನಿಂದು

ದಿಟ್ಟಿಸಿ ಮೋಹದಿಂ ಬಿಡದೆ ನೋಡುವ ಕನ್ನೆಯ ಭಾವಭೇದಮಂ
ನಿಟ್ಟಿಸಿ ಮೇಳದಂಗನೆ ವಿನೋದದಿನಾಕೆಯ ಕೈವೆರಳ್ಗಳಂ
ಮುಟ್ಟಿ ನಗುತ್ತಮೆಲ್ವಿಡಿದು ಬಾಯೆನುತುಂ ತೆಗೆಯಲ್ಕೆ ಲಜ್ಜೆಯಂ
ಬಿಟ್ಟು ಮರಳ್ದುನೋಡಿ ಸೆಳೆದಳ್ ಕಡುಪಿಂದಮೆ ಕೆಯ್ಯನಾಕ್ಷಣಂ   ೧೧೩

ಒಡೆಯನ ಸರ್ವಾಂಗಂಗಳ
ನಡರ್ದಪ್ಪುವ ತವಕದೊದವು ತೀವಿರೆ ಮನದೊಳ್
ಪಿಡಿದಿರ್ದ ಮಾಲೆವೂವಂ
ಸಡಗರದಿಂ ಜಿನನ ಕೊರಳೊಳಿಕ್ಕಲ್ ಬಗೆದಳ್   ೧೧೪

ಪೊಂಪುಳಿಸುತ್ತುಮಿರ್ದ ತನಿಗಂಪಿನ ಸೊಂಪು ಕವಲ್ತು ಸುತ್ತಲುಂ
ಪೆಂಪನದಾಳ್ದು ತೋಱೆ ಪೊಸಪೂವಿನ ಮಾಲೆಯನಂದು ಲೀಲೆಯಿಂ
ದಂ ಪದೆದಿಕ್ಕಿದಳ್ ಜಿನನ ನುಣ್ಗೊರಳಲ್ಲಿ ನಖಾಂಶುಮಾಲಿಕಾ
ಸಂಪದದಿಂದ ಕೆಂದಳದ ಕೆಂಪುಗಳಿಂದತಿಚಿತ್ರಮಾದುದಂ    ೧೧೫

ನೋಡುವ ಸರ್ವಭೂಪಸುತರುಂ ಮನಮಿಕ್ಕುವಿನಂ ಲತಾಂಗಿ ಚೆ
ಲ್ವೋಡದ ಧರ್ಮನಾಥನೃಪಕಂಠದೊಳಿಕ್ಕಿದಳಾ ಸ್ವಯಂಬರಾ
ರೂಢಲತಾಂತಮಾಲೆಯನಿದಂ ಹೋಗರೇಱಿದ ತೋಳಮೂಳಮುಂ
ಮಾಡುವಿನಂ ಮನಕ್ಕೆ ವಿಷಮೇಷುವಿಕಾರವಿಶಿಷ್ಟರಾಗಮಂ          ೧೧೬

ವರಶೃಂಗಾರಮಹಾರಸಪ್ರಭವದಿಂ ಪೆಚ್ಚಿರ್ದ ಸೌಭಾಗ್ಯಸಾ
ಗರದೊಳ್ ತೇಂಕುವ ವೀಚಿಮಾಲೆಯೆನೆ ಕಣ್ಗಿಂಬಾಯ್ತು ಚೆಲ್ವಾದ ಪೇ
ರುರದೊಳ್ ತೋರ್ಪ ಲತಾಂತಮಾಲೆ ಜಗದೊಳ್ ಪೇಳ್ವಂದದಿಂ ಪುಣ್ಯಮೆಂ
ಬುರುಚಂದ್ರೋದಯಮಂ ವಿವೇಕಯುತನಾರೀರೂಪಕಂದರ್ಪನಾ   ೧೧೭

ಆಗಳುದಾತ್ತಧರ್ಮಜಿನಪಂ ವನಮಾಲಿಯವೊಲ್ ಮನಕ್ಕಮಿಂ
ಬಾಗಿರೆ ಸೋಂಕಿ ಮೆಯ್ಯನೆಡವಲ್ಲಿ ಕುಮಾರಿಕೆ ಬನ್ನಿ ನಿಂದಿರ
ಲ್ಬೇಗದೆ ಲಕ್ಷ್ಮಿ ಬಂದು ಮಧುಸೂದನನಂತಿಕದಲ್ಲಿ ನಾಡೆಯುಂ
ರಾಗದೊಳೊಂದಿ ನಿಂದ ತೆಱದಿಂದೆ ಜನಂಗಳ ಕಣ್ಗೆ ತೋಱಿದಳ್    ೧೧೮

ವ : ಆಸಮಯದೊಳ್

ಜಯಜಯನಾದಮೆಯ್ದೆ ಪುದಿಯಲ್ ಬಿಡದೊರ್ಮೊದಲಲ್ಲಿ ದಿಗ್ಬಿಭಿ
ತ್ತಿಯನುರುಪಾಠಕಸ್ತವನಮುಂ ಶ್ರವಣಂಗಳಿಗಾಗೆ ಭೂಷಣಂ
ಪ್ರಿಯದೊಳೆ ವಂಶವೃದ್ಧವನಿತಾತತಿ ಮುತ್ತಿನ ಮಂಗಳಾಕ್ಷತೋ
ಚ್ಚಯಮುಮನಿಕ್ಕಿದರ್ ಪರಕೆಯ ಧ್ವನಿ ಪೆರ್ಚಿಯದುಣ್ಮಿ ಪೊಣ್ಮಲುಂ       ೧೧೯

ಮೊಳಗುವ ಮಂಗಳವಾದ್ಯಂ
ಗಳ ವಿವಿಧಧ್ವನಿವಿಶೇಷಮೆಲ್ಲಂ ದಶದಿ
ಕ್ಕುಳ ಕೋಣಾಂತರವಿವರಂ
ಗಳೊಳಂ ತುಂಬಿರ್ದುದುತ್ಸವಂ ಮಿಗುವನ್ನಂ   ೧೨೦