ಶ್ರೀರಮಣೀರಮಣೀಯತ
ರೋರುಸ್ಥಳನೆಯ್ದಿದಂ ಮಹಾನಂದಮನು
ದ್ಧಾರಿತಜಗತೀಜನಕಂ
ಚಾರುಗುಣಂ ಸರಸಚತುರವಿಕುಳೆತಿಳಕಂ           ೧

ವ : ತಂದನಂತರಮಾ ಧರ್ಮನಾಥಕುಮಾರಂ ಭಾವಿಸ್ವಯಂವರಕಲ್ಯಾಣ ಸಂಭ್ರಮ ಸಂದರ್ಶನೋತ್ಸುಕಚಿತ್ತನಾಗಿ ಮಱುದಿವಸಂ ಪ್ರಯಾಣಭೇರಿಯಂ ಪೊಯ್ಸಿ ನಿರ್ಯಾಣಸಮಯಕ್ಕನುರೂಪಮಾದ ವೇಷಮಂ ಧರಿಸಿ ಕಟಿತಟನಿಕಟನಿರ್ಯನ್ಮದ ಧಾರಾಪೂರಬಂಧುರಗಂದಕ್ಕೆಳಸಿ ಬಯಸಿ ಕಿವಿಯ ಪೊರೆಯೊಳ್ ಮೊರೆದು ಗುಮುಗುಮೆಂದು ಬಿಡದೆ ಜಿನುಂಗುವಳಿಕುಳಕ್ಕೆ ಕನಲ್ದು ಕೆಕ್ಕಳಿಸಿನೋಡುವ ಪಣ್ಣಿದ ಪಟ್ಟ ದಾನೆಯನೇಱಿಪಲವುಂ ತೆಱದ ಪಱೆಗಳೆಲ್ಲಮೊರ್ಮೊದಲೊಳ್ ಮೊಳಗಲಲ್ಲಿಂದಂ ತಳರ್ದು ನಡೆಗೊಂಬುದುಂ

ಚತುರಂಗಸೇನೆಯೆಲ್ಲಂ
ದ್ರುತಮಾಗಿಯೆ ನಾಲ್ಕುದೆಸೆಗಳಿಂದಂ ಬಂದಾ
ಚತರನ ಪಿಂದಂ ಪೋದುದು
ನುತಸುಭಟನ ಮುಂದೆ ಪೋಪ ಜಯಲಕ್ಷ್ಮಿಯವೊಲ್     ೨

ಎಮ್ಮೀದುರ್ಧರಪಾದವಿನ್ಯಸಭಾರಾರೋಷದಿಂ ತಗ್ಗಿ ಮ
ತ್ತಂ ಮಗ್ಗುತ್ತುಮಿದಿರ್ದುದೆಂದು ಮಹಿಗಂ ಕೈಗೊಟ್ಟು ಮೇಲೆತ್ತಿ ಸು
ಸ್ಥರ್ಮಾಡಲ್ಬಗೆದಂತೆ ಮುಟ್ಟೆ ನೆಲನಂ ಶುಂಡಾಲದಂಡಾಗ್ರದಿಂ
ದಂ ಮಾತಂಗಘಟಾದಿಕೋಟಿ ನಡೆವುತ್ತಿರ್ದತ್ತು ಪಿಂದಾತನಾ         ೩

ದಾಂಟಲ್ಬಾರದ ಕುಳಿಯಂ
ಗೆಂಟಱೊಳಂ ಕಂಡು ಪಿರಿದು ಪರಿತಂದು ಮುದಂ
ನಾಂಟಿರೆ ಲಂಘಿಸಿ ಪೋದವು
ಬಂಟಂಗಳೆನಿಪ್ಪ ಕುದುರೆಗಳ್ ಕೆಲವದಱೊಳ್  ೪

ಅತಿಜವದಿಂದೋಡುವ ಹಯ
ವಿತತಿಗಳುಂ ನೋಳ್ಪರಿಂಗೆ ಪುಟ್ಟಿಸಿದುವು ಸ
ನ್ನುತಪವನನ ಪುಲ್ಲೆಗಳೆಂ
ಬತಿಶಂಕೆಯನಾ ಕುಮಾರಕಂ ನಡೆವೆಡೆಯೊಳ್    ೫

ಚಟುಳತರಂಗಪುಂಗವಖುರಾಗ್ರವಿಘಟ್ಟನಜಾತಧೂಳಿಕಾ
ಪಟಳಿಕೆ ಸರ್ವದಿಗ್ವಿವರದಲ್ಲಿ ನಭಸ್ಥಳದಲ್ಲಿಯುಂ ಸಮು
ತ್ಕಟತರಮಾಗಿ ತೀವೆ ದೆಸೆಗಳ್ ಭಯದಿಂದಮೆ ಕೂಡಿದಂತೆ ಸಂ
ಘಟಿಸಿದುವಲ್ಲಿ ಬೆಚ್ಚಿ ರವಿ ಬಿಳ್ದವೊಲಾದನದೃಶ್ಯನಾಕ್ಷಣಂ        ೬

ಪಿರಿದಾದ ಧೂಳಿಯಿಂದಂ
ಪರಿಪೂರಿಸೆ ಪಳ್ಳ ಕೊಳ್ಳ ಕುಳಿಗಳವೆಲ್ಲಂ
ನೆರೆದಲ್ಲಿ ಪಿಂದೆಪೋಪಾ
ನರರ್ಗಾದುದು ಬಳಿಕೆ ಸುಗಮತರಮಾ ಮಾರ್ಗಂ            ೭

ಪಡೆಯಂ ಕಂಡುರುಭೀತಿಗೊಂಡು ಶಬರೀಸಂಘಾತಮೋಡುತ್ತುಮಿ
ರ್ಪೆಡೆಯೊಳ್ ಸುತ್ತಲುಮೆಯ್ದೆಚಲ್ಲಿದದಿಗುಂಜಾರಾಶಿಗಳ್ ಪುಂಜಿಸಿ
ರ್ದೊಡೆ ಕಾಳ್ಕಿಚ್ಚು ಕರಂ ಸಮಜ್ಜ್ವಳಿಸಿದತ್ತೆಂಬೊಂದು ಸಂದೇಹದಿಂ
ದೊಡೆಯಂ ಪೋಗುತುಮಿರ್ದೆರಳ್ಕೆಲನನತ್ಯಾಶ್ಚರ್ಯದಿಂ ನೋಡಿದಂ          ೮

ವ : ಇಂತಚ್ಚರಿಯಾಗಿ ಪೆರ್ಚಿದ ಪೇರಡವಿಯಂ ನೋಡಿನೋಡಿ ಮೆಚ್ಚುತುಂ ಬಳಿಯಮಾ ಕುಮಾರವರನದಂ ಕಳಿವುದುಂ

ಮಧುಪಕದಂಬಕಂ ತರುಗಳೆಂಬ ಗೃಹಂಗಳೊಳೆಯ್ದೆ ಕುಳ್ಳಿದಿ
ರ್ದದಿಮುದದಿಂದೆ ಪೂಗುಡಿಗಳೆಂಬ ಸುಪಾತ್ರೆಗಳಲ್ಲಿ ತೀವಿದು
ನ್ಮಧುವನೆ ಸೇವಿಸುತ್ತುಮಿರಲಂತದಱಿಂದಮೆ ತದ್ವನಾಂತರಂ
ಮಧುಪುರಮೆಂಬಿನಂ ಬಗೆಗೆ ಬಂದೊಡದಂ ನೆಱೆಬಿಟ್ಟುಪೋಪುದುಂ            ೯

ವ : ಅಂತಾ ಕಾಂತಾರದಪರತೀರಮಂ ಪಿರಿದುಂ ದೂರಮಾಗಿಯೆ ಬಿಟ್ಟು ನಡೆವೆಡೆಯೊಳ್

ಸ್ತ್ರೀರತ್ನರಲಾಭವಾಂಛಾ
ಪ್ರೇರಿತಚಿತ್ತಂ ಕುಮಾರಕಂ ಘನವನಮಂ
ಧೀರಂ ಮೀಱಿಯೆ ಪೋದಂ
ಚಾರುಂ ವ್ಯವಹಾರಿಯೆಂಬಿನಂ ಸತ್ವರದಿಂ        ೧೦

ವ : ಇಂತು ನೂರ್ಮಡಿಯಾದ ಪೆರ್ಮೆಯಿಂದಾ ಧರ್ಮನಾಥಕುಮಾರಂ ನರ್ಮದಾಪ್ರಭೃತಿಬಹುವಿಧನದೀನದಂಗಳಂ ದಾಂಟಿ ಪಲವುಂ ನಾಡುಗಳಂ ಪಿಂದು ಮಾಡಿ ಕಡುವೇಗದಿಂ ಪೋಗಿ ನಿರ್ಭರಲಕ್ಷ್ಮೀಶೋಭಾಸಂದರ್ಭಗರ್ಭಿತಮಾದ ವಿದರ್ಭವಿಷಯಮಂ ಪುಗುವುದುಮಲ್ಲಿ

ವನಮೆಲ್ಲಂ ಬಹುರಂಭಾ
ವಿನುತಂ ಸ್ಥಳಮೆಲ್ಲಮುರುತಿಳೋತ್ತಮಮಾ ಮೇ
ದಿನಿಯೆಲ್ಲಮಪ್ಸರೋಗಣ
ಮನಿತಂ ಸ್ವರ್ಗಾದಿಕಂ ದಲೆಂದೀಕ್ಷಿಸಿದಂ           ೧೧

ಕಳಮಸ್ಥಳಮೆಲ್ಲಂ ಘನ
ಫಳಮಂಜರಿರಂಜಿತಂ ದಲಾಗಿರ್ದು ಮನಂ
ಗೊಳಿಸುತ್ತಿರ್ಪುದು ಮತ್ತ
ಗ್ಗಳಗೀತಾಧ್ಯಾಯದಂತೆ ರಸಪರಿಪೂರ್ಣಂ       ೧೨

ಬದನೆಯ ಕಾಯ್ಗಳಿಂ ಪಿರಿದುಪಾಗಲಕಾಯ್ಗಳಿನೊಳ್ಪುವೆತ್ತು ತೋ
ರಿದವೆನಿಸಿರ್ದ ಕುಂಬಳದಕಾಯ್ಗಳಿನಾದಮೆ ತೊಂಗಲಾಗಿ ಪ
ರ್ವಿದ ಕಡುನೀಳ ಕೂಗುರಿಯಕಾಯ್ಗಳಿನೆಲ್ಲೆಡೆಯಲ್ಲಿ ಕೂಡೆತುಂ
ಬಿದ ಘನಶಾಕವಾದಿಗಳ ವೀಕ್ಷಣಮಂ ಸೆಱೆಗೆಯ್ದವಾಕ್ಷಣಂ           ೧೩

ವನಮೆಲ್ಲಂ ಪರಿಪಕ್ವಭೋಜ್ಯಸುಫಳಾಳೀಸಂಯುತಂ ಕೂಡೆ ಮೇ
ದಿನಿಯೆಲ್ಲಂ ಕಣಿಶಾಭಿರಾಮಬಹುಸಸ್ಯೌಘಂಗಳಿಂ ತುಂಬಿ ಪಾ
ವನಮಾಗಿರ್ದುದುಕಾರಣಂ ಪಥಪಥಸ್ಥಾನಂಗಳಲ್ಲೆಲ್ಲಿಯುಂ
ಘನಸೌಖ್ಯಂ ದೊರೆಕೊಂಡುದೆಂದು ಪರಿವಾರಕ್ಕೆಲ್ಲಮಲ್ಲಲ್ಲಿಗಂ೧೪

ಬೀಡಂ ಬಿಡುವೆಡೆಯೆಡೆಯೊಳ್
ಮಾಡುವನಲ್ಲಲ್ಲಿಗೈಳಬಿಳನುರುಪುರಮಂ
ನಾಡು ಬೆಸಕೆಯ್ವ ಸುಖದಿಂ
ಕೂಡದು ಕುವರಂಗೆ ಬಟ್ಟೆಯಾಯಾಸ ಲವಂ    ೧೫

ವ : ಇಂತು ಸಮಸ್ತ ಮನೀಷಿಪರಿಷದಭಿಲಕ್ಷಣೀಯ ವಿಶೇಷಿತಾಶೇಷ ವಿಪುಳತರ ನಾನಾವಿಧ ನವೀನಫಳಸಂಪತ್ತಿಯಿಂ ಪರಿಭೂಷಿತಮಾದ ಪೇಶಲತದ್ದೇಶದ ಶೋಭಾತಿ ಶಯಮನಾ ದೇಶಾಧೀಶ್ವರಂ ನೀಡುಂನೋಡಿ ನಾಡೆಯುಂ ಕೊಂಡಾಡುತ್ತುಂ ಕುಂಡಿನಪುರ ಮರೆಗಾವುದಂತರಮೆನಲ್ ಬಂದು ಮುಂದೆ ತನ್ನ ಗಮನವಾರ್ತಾ ನಿವೇದನನಿಮಿತ್ತಂ ಪ್ರತಾಪರಾಜನಂತಿಕಕ್ಕೆ ಚರರಂ ಕಳಿಪುವುದುಮವರ್ ಪೋಗಿ ಧರ್ಮಜಿನಾಧಿಪನ ಬರಮನರಸಂಗೆ ಬಿನ್ನ ಪಂಗೆಯ್ವುದುಮಾಗಳ್

ಪ್ರತಾಪರಾಜಂ ಪುರದಲ್ಲಿಯುತ್ಸವ
ಪ್ರತಾನಮಂ ಮಾಡಿಸಿ ಸರ್ವಸೈನ್ಯಸಂ
ಯುತಂ ಕುಮಾರಂಗಿದಿರಾಗಿಪೋದನಂ
ದು ತೋಷದಿಂ ಮಂಗಳವಾದ್ಯಮುಣ್ಮಲುಂ     ೧೬

ಮೊದಲಲ್ಲಿ ಸೈನ್ಯರಜದೊಂ
ದೊದವಂ ಕಂಡಂ ಬಳಿಕ್ಕೆ ಭೇರೀರವ ಸಂ
ಪದಮಂ ಕೇಳ್ದಂ ಮತ್ತಂ
ಪದೆದೀಕ್ಷಿಸಿದಂ ನೃಪಂ ಕುಮಾರನ ಬಲಮಂ     ೧೭

ವ : ಅಂತತೀವಪ್ರಮೋದಪ್ರಕರ್ಷಣಭಾಜನನಾಗಿ ಪ್ರತಾಪರಾಜಂ ತೊಟ್ಟನೆ ಸಮೀಪಕ್ಕೆವಂದು ಮುಟ್ಟಿದ ಭಕ್ತಿಯಿಂದಾ ಧರ್ಮನಾಥಕುಮಾರನ ಮೆಲ್ಲಡಿಗಳ್ಗೆಱಗಿ ಸಾಷ್ಟಾಂಗ ಪ್ರಣತನಾಗಿರ್ಪುದುಮಾತನಂ ಕುವರಂ ಸಾತಿಶಯಪ್ರೀತಿಯಿಂ ತೆಗೆದು ತರ್ಕೈಸಿಕೊಂಡು ಮುಂದೆ ನಿಂದಿರಿಸುವುದುಮೆನ್ನಮೇಲಗಣ್ಯಕಾರುಣ್ಯಮುಂಟೆಂದು ಬಗೆದರಸಂ ತದೀಯ ಮುಖಕಮಳಾವಳೋಕನಂಗೆಯ್ದು ಕೈಗಳಂ ಮುಗಿದು ಪ್ರಶ್ರಯ ಪರಿಮಿಶ್ರಿತಪ್ರಿಯ ಸಂಭಾಷಣದಿಂದಿಂತೆಂದಂ

ಒಡೆಯರ್ ಬಿಜಯಂಗೆಯ್ದಾ
ಗಡೆ ವಾಂಛಿತಕಾರ್ಯಸಿದ್ಧಿಕೈಗೂಡಿದುದೀ
ಗಡೆ ಕೃತಕೃತ್ಯುಮಾದೆಂ
ಪಡೆಮಾತೇನಿಂದು ಸಫಲಮಾದುದು ಜನ್ಮಂ    ೧೮

ವ : ಎಂದು ಪ್ರಿಯೋಚಿತವಚನಂಗಳಿಂದಂತರಂಗಸಂಗತಭಕ್ತಿಭಾರಮಂ ವ್ಯಕ್ತೀಕರಿಸುತ್ತುಮಿರ್ದ ಪ್ರತಾಪರಾಜಂಗೆ ಚಾರುಕರ್ಪೂರಪರಿಮಿಳಿತಮಾದ ವೀಳಯಮಂ ಕೊಟ್ಟು ತಣಿಪಿಸಿ ಮತ್ತಮಾ ಕುಮಾರನಿಂತೆಂದಂ

ಎಮ್ಮೀರಾಜ್ಯವಿಶೇಷಸಂಪದಮಿದಂ ಬೇಱೆಂಬ ಬುದ್ಧಿಪ್ರಭಾ
ವಂ ಮನ್ಮಾನಸದಲ್ಲಿ ತೋಱದಣುಮಾತ್ರಂ ಭೂತ್ರಯಾರಾಧ್ಯರಾ
ದೆಮ್ಮಂತಪ್ಪವರಂ ಸ್ವಯಂವರವಿವಾಹಚ್ಛದ್ಮದಿಂದಿಲ್ಲಿಗಂ
ಸಮ್ಮೋಹಂ ಮಿಗೆ ಕೊಂಡುಬಂದಿರದಱಿಂದಂ ನೀವೇ ಪುಣ್ಯಾತ್ಮರುಂ          ೧೯

ವ : ಇಂತೆಂಬ ಪ್ರಿಯಸಂಭಾಷಣದಿಂದಾತನಂ ಸಂತೋಷಂಬಡಿಸುತ್ತುಮಿರ ಲೀರ್ವರುಂದೊರ್ವಿದ ವಾರಣಸಮಾರೋಹಣಂಗೆಯ್ದು ಕೂಡಿ ಕಿಱಿದಂತರಂ ನಡೆಯುತ್ತುಮಿರೆ ಮುಂದೆ ಭೂಮಂಡಲಕುಂಡಲಾನುಕಾರಿ ಸುವರ್ಣಪ್ರಾಕಾರದಿಂ ಪರಿಮಂಡಿತಮಾದ ಕುಂಡಿನಪುರಮಂ ಕುವರಂ ಕಂಡು ಮನಂಗೊಂಡು ತನ್ನ ಸೇನಾಪತಿಯಪ್ಪ ಕುಬೇರನಂ ಕರೆದು

ಈ ಪುರದ ಕೆಲದೊಳೊಂದು ಸ
ಮೀಪಸ್ಥಾನದೊಳೆ ನಮಗೆ ವಿರಚಿಸು ಪುರಮಂ
ನೀಂ ಪೋಗು ಬೇಗಮೆನೆ ಸೇ
ನಾಪತಿ ಬೀಳ್ಕೊಂಡು ನಿಮಿಷದಿಂ ಪೋದನವಂ  ೨೦

ವ : ಅನಂತರಂ ವಿಮಳಕಳಿತವಿಶಾಲತರಯೋಗ್ಯಪ್ರದೇಶಸನ್ನಿವೇಶದೊಳ್

ಅಂಗಡಿ ರಾಜಬೀದಿ ಹಯಶಾಲೆ ಗಜಂಗಳಶಾಲೆ ಮಾಟಕೂ
ಟಂಗಳ ಪಂತಿಯುಪ್ಪರಿಗೆಯೊಪ್ಪಮಗುರ್ವಿಸಲಂತರಿಕ್ಷಮಂ
ಪೊಂಗಳಸಂಗಳಳ್ಳಿಱಿಯಲೆಯ್ದೆ ವಿಗುರ್ವಿಸಿದಂ ದಲಾಕ್ಷಣಂ
ಪಿಂಗದ ಚೆಲ್ವನಾಂತುದದು ಕೋಟೆಗಳಿಂ ಪರಿಖಾತಳಂಗಳಿಂ          ೨೧

ಏಳುಂ ನೆಲೆಮಾಡಂಗಳ
ಮೇಳವದಿಂ ಚೆಲ್ವನಾಂತ ರಾಜಾಲಯಮು
ಲ್ಲಾಲಿತಬಹುವಿಧರಚನಾ
ಶೀಲಂ ತತ್ಪುರದ ನಡುವೆ ಪಡೆದುದಗುರ್ವಂ    ೨೨

ವ : ಇಂತು ಸೇನಾಪತಿಯಪ್ಪ ರಾಜರಾಜಂ ಪಿರಿದಾದ ಸಿರಿಯಿಂ ನಿರ್ಜರ ರಾಜಧಾನಿಯಂ ಗೆಲ್ದ ನವೀನಶೋಭಾವಿರಾಜಮಾನ ರಾಜಧಾನಿಯಂ ವಿಗುರ್ವಿಸಲದಱ ಪೊಱವೊಳಲೆಂಬಂತಿರಾ ಕುಂಡಿನಪುರಂ ಕಣ್ಗೊಂಡು ಸಮುಜ್ಜ್ವಳಿಸುತ್ತುಮಿರೆ

ನಾನಾತೂರ್ಯಾರವಂ ಪೊಣ್ಮಿರೆ ಜಯಜಯನಿರ್ಘೋಷಣಂ ಪೆರ್ಚಲೆತ್ತಂ
ಪೀನಚ್ಛತ್ರಂಗಳಾಚ್ಛಾದಿಸೆ ಗಗನಮುಮಂ ಚಾಮರಂ ತಳ್ತು ಬೀಸಲ್
ದಾನಸ್ತಂಬೇರಮಾರೂಢನುಮುರುತರಸೈನ್ಯಾವೃತಂ ಧರ್ಮನಾಥಂ
ತಾನೆಳ್ತಂದಂದು ಪೊಕ್ಕಂ ನಿಜಪುರದೊಳಗತ್ಯಂತ ಸಂತೋಷದಿಂದಂ೨೩

ದ್ವಾರದ್ವಾರದೊಳುದ್ಯ
ತ್ತೋರಣಪಂತಿಗಳ ಶೋಭೆಯಂ ನೋಡುತ್ತಂ
ದೋರಣೆಗೊಂಡಿರ್ದಂಗಡಿ
ಗೇರಿಗಳ ಶ್ರೀಯನೀಕ್ಷಿಸುತ್ತುಂ ನಡೆದಂ೨೪

ವ : ಇಂತು ಗಾಡಿವಡೆದ ಬೀಡಿನೊಳನಾಡೆಱೆಯಂ ಬಿಜಯಂಗೆಯ್ವುತ್ತುಂ ಲೀಲೆಯಿಂದರ ಮನೆಯೊಳಗಂ ಪುಗುವುದುಂ

ಕರ್ಪೂರದ ವೀಳೆಯಮುಮ
ನರ್ಪಿಸಿ ಬಳಿಯಂ ಪ್ರತಾಪರಾಜನನಾಕ್ಷಣ
ವೊಪ್ಪುವ ಕುಂಡಿನಪುರಿಗಂ
ಕೂರ್ಪಿಂ ಬೀಳ್ಕೊಟ್ಟು ಕಳಿಪೆ ಪೋದಂ ಬೇಗಂ   ೨೫

ವ : ಮತ್ತಂ ತನ್ನೊಡನೆ ಬಂದ ಮಂಡಳಿಕ ಮಹಾಮಂಡಳಿಕ ಮಕುಟಬದ್ಧರ್ ಮುಂತಾದನೇಕ ರಾಜಕುಮಾರನಿಕರಂಗಳನವರವರ್ಗೆ ತಕ್ಕಂತಪ್ಪ ನಿವಾಸಂಗಳ್ಗೆ ಬೀಳ್ಕೊಟ್ಟು ಕಳಿಪುವುದುಮಾಗಳವರೆಲ್ಲರುಂ ನಿಜನಿಜಬಹಳತರಚತುರಂಗಬಲಂಬೆರಸು ತಂತಮಗೆ ಯೋಗ್ಯಂಗಳಾದಾವಾಸಮಂ ಪೊಕ್ಕು ಸುಖದಿನಿರ್ಪುದುಮಿತ್ತಲಾ ಕುಮಾರಂ ಯಾತ್ರಾ ವೇಷಕ್ಕುಪಯೋಗಮಾಗಿ ತೊಟ್ಟಂತಪ್ಪ ಭೂಷಣಕಳಾಪಮಂ ಕಳೆದು

ಬರ್ಪೆಡೆಯಲ್ಲಿ ಬಟ್ಟೆಯ ಪರಿಶ್ರಮಮುಂ ಬೆಮರುಂ ಸುಧೂಳಿಯುಂ
ನೇರ್ಪಡುತಿರ್ಪ ಚಾರುಚರಮಾಂಗಕನಾದುದಱಿಂದಮಾತನೊಂ
ದೊಪ್ಪುವ ದಿವ್ಯದೇಹದೊಳೆ ಪತ್ತದೊಡಂ ಸಲೆಲೌಕಿಕಾರ್ಥಮಂ
ತಪ್ಪದೆ ಮಾಡಿದಂ ತ್ರಿಜಗತೀಪತಿ ಮಜ್ಜನಭೋಜನಾದಿಯಂ        ೨೬

ವ : ಅಂತಾ ಧರ್ಮನಾಥಕುಮಾರಂ ಲೋಕವ್ಯವಹಾರನಿಮಿತ್ತಮಾಗಿ ಮಜ್ಜನ ಭೋಜನಾದಿ ಕ್ರಿಯಾವ್ಯಾಪಾರಮಂ ತೀರ್ಚಿ ನಾನಾವಿಧನವೀನಮಾಣಿಕ್ಯಮಯ ಶೃಂಗಾರ ಭಂಗಿಯ ನಂಗೀಕರಿಸಿ ತನ್ನಯ ಮೇಳದ ಕೆಳದಿಯರೊಡಗೂಡಿ ಲೀಲಾವಿನೋದದಿಂದಿರ್ಪುದುಂ

ಎಲೆಲೆ ಸಮಸ್ತರಾಜರಿರ ಕೈಗಳನೆತ್ತಿಯೆ ಸಾಱುತಿರ್ದೆವೆಂ
ದೊಲಿದಿದದೊಂದನಾಲಿಸಿ ಕುಮಾರಿಯ ವಾರ್ತೆಯ ವೃತ್ತಿಬೇಡವಿ
ನ್ಸಲೆ ನಿಮಗೀಗಳಿಲ್ಲಿಗೆ ಜಿನೇಶ್ವರನೆಯ್ದಿದನುದ್ಘಪುಣ್ಯದಿಂ
ಜ್ವಲಿತಸುಧಾಕರೋದಯದಿ ಮುಂದೆಸೆದಿರ್ಪುದೆ ತಾರಕಾಕುಳಂ      ೨೭

ಉಳಿದ ರಾಜಕುಮಾರರೆಲ್ಲರುಮಿನ್ನು ಕನ್ನೆಯ ಪಂಬಲಂ
ಕಳೆದುಪೋಪುದು ಬಂದಬಟ್ಟೆಯೊಳೀಗಳೀಗಳಲ್ಲಿಗೆ ಬಂದನ
ಗ್ಗಳದ ಧರ್ಮಜಿನೇಶನಾತನನೊಲ್ಲದನ್ಯರಿಗಿಕ್ಕಳೀ
ನಳಿನಲೋಚನೆ ಮಾಲೆಯಂ ದಿಟಮೆಂದರೆಲ್ಲಜನಂಗಳುಂ೨೮

ವ : ಇಂತು ವಿದರ್ಭಭೂವಲ್ಲಭನ ರಾಜಧಾನಿಯೊಳಂ ತನ್ನಯ ರಾಜಧಾನಿ ಯೊಳಮೆಡೆವಱಿಯದೆ ನಿಬಿಡಮಾಗಲಲ್ಲಿ ನೆರವಿಯಾಗಿ ನಿಂದು ತಂತಮ್ಮೊಳೋರೊರ್ವರ್ ನುಡಿಯುತ್ತುಮಿರ್ದು ಪೌರಜನಂಗಳ ಕನತ್ಕನಕದಂಡಮಂಡಿತ ಬಾಹುದಂಡಂಗಳಂ ಕರ್ಣಾಕರ್ಣಿಕೆಯಿಂ ಕೇಳಿಕೇಳಿ ಕುಮಾರಂ ತನ್ನಯ ಕಾರ್ಯಂ ಸಿದ್ಧಮಾದುದೆಂದು ಬಗೆದಂದು ದೃಢನಿಶ್ಚಯದಿಂ ತಣ್ಣನೆ ತಣಿವುತ್ತುಮಿರ್ಪುದುಂ

ಒಂದೆರಡು ಮೂಱು ನಾಲ್ಕೈ
ದೆಂದೆಣಿಸುತ್ತುಂ ಸ್ವಯಂವರೋತ್ಸವದಿವಮಂ
ಸೌಂದರಕುಮಾರಕಂ ಸುಖ
ದಿಂದಂ ಕೆಲವುಂದಿನಂಗಳಂ ಕಲೆಯಲೊಡಂ        ೨೯

ವ : ಮತ್ತಮೊಂದುದಿವಸಮಾ ಪ್ರತಾಪರಾಜಂ ತನ್ನಯ ಗೃಹಮಹತ್ತರನಂ ಕರೆದು ನೀಂ ಪೋಗಿ ಸ್ವಯಂವರಗೃಹಮಂ ಪೊಸಪೊಸತಾದ ಚಿತ್ರಗತಿಯ ವೇಷದೆಸಕದಿಂ ವಿಚಿತ್ರಮಪ್ಪಂತು ಸಮೆಯಿಸೆಂದು ಬೆಸಸುವುದುಮಾತನ ಮಾತನಾತಂ ಶಿರದೊಳಾಂತು ತತ್ಕುಂಡಿನಪುರದ ಮೂಡಣದೆಸೆಯ ಬಹಿರುದ್ಯಾನದ ಕೆಲದೊಳೊಂದು ವಿಶಾಲತರಮಾದ ಪೇಶಲಪ್ರದೇಶದೊಳ್

ಕಡೆಯಿಲ್ಲದ ಮಣಿಗಣದಿಂ
ಕಡೆಯಾಣಿಯ ಮಿಸುನಿಯಿಂ ಸ್ವಯಂವರಗೃಹಮಂ
ಪಡಿಯಿಲ್ಲೆನೆ ಮಾಡಿಸಿದಂ
ನಡೆನೋಳ್ಪವರಿಂಗಮಪ್ಪಿನಂ ಕಡುಚೋದ್ಯಂ   ೩೦

ಅದು ತೆಂಕಲ್ ಬಡಗಲ್ ನೀ
ಳ್ದುದು ಮೂಡಂ ಪಡುವಮಗಲಮಾದುದು ಸೋಪಾ
ನದ ಪಂತಿಗಳೊಡಗೂಡಿದ
ಸದಮಳಚತುರಶ್ರಹೇಮವೇದಿಕೆ ಮೆಱೆಗುಂ     ೩೧

ವ : ಅದಱಮೇಲೆ ದಕ್ಷಿಣೋತ್ತರಾಭಿಮುಖಂಗಳಾಗಿ ತೋರ್ಕೆವೆತ್ತು

ಕರ್ಕೇತನರತ್ನಂಗಳಿ
ನಕ್ಕುಮಿದೆನೆ ಮಾಡಿದೇಳುನೆಲೆಮಾಡಂಗಳ
ಮಿಕ್ಕೆಲದೊಳಿರ್ದು ಕಣ್ಣಂ
ಜಕ್ಕುಲಿಸುತ್ತಿರ್ಪವಾವಗಂ ನೋಳ್ಪವರಂ         ೩೨

ವ : ಆಗಳ್ ತಮ್ಮಯ ಕೊರಳೊಳಿಕ್ಕಿದ ಪೊಸಮುತ್ತಿನಕ್ಷತೆಯಂತಿರುಪಲಕ್ಷಿತ ಮಾದ ನಕ್ಷತ್ರಮಾಳೆಯೊಳ್ ಪುದಿದು ಪೊಱಪೊಣ್ಮುವ ಬಹಳತರಕಿರಣಗಣಮೆಂಬ ಕಿಸಲಯವಿಸರದಿಂದುಪಗತಮೆನಿಪ ಶಿಖಾಸಮರ್ಪಿತ ಮಂಗಳದರ್ಪಣಾಯಮಾನ ಸೂರ್ಯಮಂಡಳದಿಂದಸದಳಮೆಸೆದ ಮಣಿಕಳಶಕಳಾಪಂಗಳಂ ತಳೆದಾ ನೆಲೆಮಾಡಂಗಳ ಮುಂದೆ ಸುತ್ತಲುಂ ಬಿತ್ತರಂಬೆತ್ತು ಕಡೆದು ಕೆತ್ತಿಸಿದ ಶೋಣಮಾಣಿಕ್ಯಮಯ ಮತ್ತ ವಾರಣಶ್ರೇಣಿಗಳ ಬಳಸಿಂ ಥಳಥಳಿಪ ಪೊಱಗಳೊಳಗಣ ಪಳಿಕಿನ ಜಗಲಿಗಳನೊಳ ಕೊಂಡು ಪೊಳೆವ ವೈಡೂರ್ಯದ ಚೌಪಳಿಕೆಗಳೋಳಿ ಕಣ್ಗೊಳಿಸುತ್ತುಮಿರೆ

ಪವಳದ ಕಂಭಂಗಳಿನಭಿ
ನವನೀಲದ ಚಾರುಭಿತ್ತಿಗಳ ಬಳಸಿಂದೊ
ಪ್ಪುವ ಪದ್ಮರಾಗರತ್ನ
ಚ್ಛವಿಯಿಂ ಕಣ್ಗೊಳಿಪ ನೆಲೆಯ ಲೋವಿಗಳಿಂದಂ           ೩೩

ಮಿಂಚುವ ಹೊನ್ನಪುತ್ಥಳಿಯ ಸಂಚಯದಿಂದವಱಲ್ಲಿ ಕೂಡೆ ಮ
ತ್ತಂಚಿತಮಾಗಿ ಲಂಬಿಸುವ ಮುತ್ತಿನ ಮಾಲೆಗಳೋಳಿಯಿಂದೆ ಸ
ತ್ಕಾಂಚನದಂಡಮಂಡಿತ ಜಯಧ್ವಜರಾಜಿಗಳಿಂದಮಂದು ಕ
ಣ್ಗಂ ಚೆಲುವಾಗಿ ಕೌತುಕಮನಾಗಿಸುತಿರ್ದುದು ತತ್ಸ್ವಯಂವರಂ    ೩೪

ವ : ಅದಱ ಮುಂದೆ ಕ್ರೋಶಮಾತ್ರಾಂತರಾಳಪ್ರಮಾಣಪರಿವೇಷ್ಟಿತ ಚಂದ್ರಕಾಂತಕಾಂತ ಪರಿಸೂತ್ರಭಿತ್ತಿಭಾಗಾಗ್ರದಲ್ಲಿ

ವಿಳಸದುರುಪುಷ್ಯರಾಗಂ
ಗಳಿನಭಿವಿರಚಿಸದ ಚೆಲ್ವಂ ಬಾಗಿಲ್ವಾಡಂ
ಗಳವೇಳುನೆಲೆಗಳಿಂ ಮಂ
ಜುಳಮಾದುವು ಕುಳಿಶಕಳಶಪರಿಕಳಿತಂಗಳ್       ೩೫

ವ : ಅದಱ ಮುಂದಣಮಂದಸೌಂದರ್ಯದೊಳೊಂದಿ ಸಂದಣಿಸಿ ನಿಂದ ನಿರುಪಮ ಮರಕತಮಯಮಕರತೋರಣದೋರಣೆಗಳುಮತಿರಮಣೀಯಂಗಳಾಗಲಿಂತು ಸರ್ವತೋಭದ್ರಭದ್ರಶಾಲಾಪ್ರಾಸಾದಪ್ರಭೃತಿಗಳೆಂಬ ಮತಲ್ಲಿಕಾವಲ್ಲಿಕಾಪ್ರಸರದೆಸಕಂ ಸಮುತ್ತುಂಗಶೃಂಗಾರರಸದಿಂದಚ್ಚರಿಯಾಗಿ ಪೆರ್ಚುತ್ತುಮಿರ್ದುದೆಂಬಂತೆ ತನ್ನಯ ಸಮುದಗ್ರಶಿಖರಾಗರಕದಂಬಕದಿಂ ಚೌಚುಂಬ್ಯಮಾನಾಂಬರಮೆನಿಪ್ಪ ಸ್ವಯಂವರಮಂದಿರಮಂ ವಿರಚಿಸುವುದುಂ

ಮಿಗೆನೆಗೆವ ಕದಿರ ಪೊದಱಿಂ
ಗಗನಾಂಗಣದಲ್ಲಿ ತಳ್ತು ಪೊಳೆವೆಳನುಣ್ಮಿಂ
ಚುಗಳ ಸಂಚಯದ ಚೆಲ್ವಂ
ಮಿಗಿಲಾಗಿಯೆ ಪುಟ್ಟಿಸುತ್ತುಮಿಪ್ಪುದದೆಂದುಂ   ೩೬

ವ : ಮತ್ತಮಲ್ಲಿ

ಆಲಂಬಿತಮುಕ್ತಾಫಳ
ಮಾಲೆಗಳಂ ಕಂಡು ಭೃಂಗಮಾಳಿಕೆ ಮಲ್ಲೀ
ಮಾಲೆಗಳೆಂದಾಶಂಕಿಸಿ
ಲೀಲೆಯಿನಂದೆಱಗಿ ಮೊರೆದು ಮುಸುಱಿದುದಾದಂ         ೩೭

ಅರುಣಮಣಿಘಂಟಿಕಾಪರಿ
ಕರಮಂ ನಡೆನೋಡಿ ಪಣ್ಗಳಾವಳಿಯೆಂದಾ
ತುರದಿಂ ಕರ್ದುಂಕಿದುವು ಮ
ತ್ತರಗಿಳಿಗಳ್ ಪಕ್ಕವೊಯ್ದು ಗೋಣ್ಮುರಿದು ಕರಂ         ೩೮

ವ : ಅಂತುಮಲ್ಲದೆಯುಂ

ಪುರದ ಸ್ತ್ರೀಜನಮಾ ಸ್ವಯಂವರದ ಚೆಲ್ವಂ ನೋಡವೇಳ್ಕೆಂದು ಬಂ
ದಿರಲಾ ಬಾಗಿಲ ಮುಂದೆ ಪುತ್ಥಳಿಗಳಂ ನಿಂದಿರ್ದುವಂ ಕಂಡು ಸೌಂ
ದರಿಯರ್ ತಾವಿವರೆಂದು ಮತ್ತೆ ನುಡಿಸಲ್ ಮಾತಾಡದಂದಿರ್ನೊಡೆ
ಯ್ದರೆಲರ್ ನಕ್ಕಡೆ ನಾಣ್ಚಿಪೋಗಿ ಮಱಿಗೊಂಡತ್ತೊಂದು ಕೂಟಾಗ್ರಮಂ    ೩೯

ಮಿಗೆ ಮೇಲ್ಗಟ್ಟಿನ ಬಣ್ಣಂ
ಸೊಗಯಿಪ ಮಣಿಭೂಮಿಯಲ್ಲಿ ಬಿಂಬಿಸಿ ನಾನಾ
ಬಗೆಯಾಗಿ ತೋಱೆ ಮುಗ್ಧೆಯ
ರಗಲ್ದಲ್ಲಿಂದಂಜಿಪೋಗಿ ಸಾರ್ದರ್ ಕೆಲನಂ      ೪೦

ಚಂದನರಸಬಿಂದುಗಳಿಂ
ಸೌಂದರಹರಿನೀಳಕುಟ್ಟಿಮಾಂಗಣದೊಳ್ ಜಾ
ಣಿಂದಂ ಚಳೆಯಂಗೊಟ್ಟುದ
ದಂದಾಗಸದಲ್ಲಿ ಪೊಳೆವ ತಾರಗೆಗಳವೊಲ್     ೪೧

ವ : ಇಂತಭಿನವಶೋಭಾವಿಭವವಿಡಂಬನಸಮಾಲಂಬನದಿಂ ಕಣ್ಗೊಂಡು ಮೇದಿನೀ ಮಂಡಳದೊಳಖಂಡಕೌತೂಹಳಾಡಂಬರಮಾದ ಸ್ವಯಂಬರಮಂದಿರಮಂ ವಿರಚಿಸುವುದುಮಿತ್ತಲಾ ಪ್ರತಾಪರಾಜಂ ಹಿತಪುರೋಹಿತಜನಪರಿಶೋಧಿತಶುಭತರ ಪಂಚಾಂಗ ಪ್ರಪಂಚನ ಸಮಂಚಿತಮೆನಿಪ ಶುಭದಿನಾಗ್ರೇಸರವಾಸರದೊಳಶೇಷ ಪ್ರಧಾನಪುರುಷ ಪುರಸ್ಸರಮಾ ಸ್ವಯಂಬರವಿಹಾರವಿಧಾನಕ್ಕೆ ಸಮುತ್ಸುಕಚಿತ್ತನಾಗಿ ಪೋಗಿ ಸಕಳರುರ್ವರೀಪಾಳಕಕುಮಾರಕನಿಕರಸಮಾಹ್ವಾನನಿಮಿತ್ತಂ ದಂಡವಾಸಿಕರಂ ಕಳಿಪುವುದುಂ

ನಾನಾದೇವಾಂಗವಸ್ತ್ರಂಗಳನನುಯದಿಂದುಟ್ಟು ಮಾಣಿಕ್ಯಭಾಸ್ವ
ನ್ನಾನಾಶೃಂಗಾರಸಂಘಂಗಳನತಿಶಯದಿಂ ತೊಟ್ಟು ಕಾಶ್ಮೀರಸಮ್ಮಿ
ಶ್ರಾನೂನೋದ್ಗಂಧಮಂ ಲೇಪಿಸಿ ಕರಿಗಳನಂದಱಿ ಸಂತೋಷದಿಂದಂ
ನಾನಾದೇಶಂಗಳ ಕ್ಷೋಣಿಪರ ತನುಜರೇಕಕ್ಷಣಂ ಬಂದರೆಲ್ಲಂ        ೪೨

ವ : ಅಂತನೇಕ ರಾಜಕುಮಾರರೆಲ್ಲಂ ನೆರೆದು ತಂತಮ್ಮ ಚಾತುರ್ದಂತಬಲಂ ಬೆರಸು ಲೆಕ್ಕವಿಲ್ಲದ ಪಲ್ಲವಸತ್ತಿಗೆಗಳ ಮೊತ್ತಂಗಳ ತಣ್ಣೆಳಲಲ್ಲಿ ಬೀಸುವ ಹೇಮ ಚಾಮರಂಗಳ ಬಳಗಂಗಳಿಂ ದಳಂಕೃತರಾಗಿ ಸ್ವಯಂಬರಮಂಡಪಕ್ಕೆ ಬಂದು ನಿಜ ನಿಜೋಚಿತಸ್ಥಾನಂಗಳೊಳ್ ಕುಳ್ಳಿರ್ಪುದುಂ

ಹರಿವಂಶದುಗ್ರವಂಶದ
ಕುರುವಂಶದ ನಾಥನಂಶದಿಕ್ಷ್ವಾಕುಮಹೋ
ದ್ಧುರವಂಶದ ರವಿವಂಶದ
ನೆರೆದಿರ್ದರ್ ಸೋಮವಂಶದರಸುಗಳೆಲ್ಲಂ       ೪೩

ವ : ಆಗಳ್

ಕೊಳನಂಭೋಜಂಗಳಿಂದಂ ಕನಕಗಿರಿತಟಂ ಕಲ್ಪವೃಕ್ಷಂಗಳಿಂದಂ
ಜಳರಾಶಿಸ್ಥಾನಮತ್ಯುಜ್ವಳಮಣಿಸಮುದಾಯಂಗಳಿಂದೆಂತು ಚೆಲ್ವಂ
ತಳೆದೊಪ್ಪುತಿರ್ಪುದಂತಾ ಪರಿಣಯನಗೃಹಂ ರಾಜಪುತ್ರರ್ಕಳಿಂದ
ಗ್ಗಳಚೆಲ್ವಂ ತಾಳ್ದಿ ಕೌತೂಹಳದತಿಶಯದಿಂ ಪುಟ್ಟಿಸುತ್ತಿರ್ದುದಾದಂ         ೪೪

ವ : ಅನಂತರಂ ಸಗ್ಗದೊಳಗ್ಗಳಮಾದ ಪಲವುಂತೆಱದ ಬಣ್ಣವಣ್ಣಿಗೆಯ ಚೆನ್ನರನ್ನದಿಂ ಸಮೆದುತ್ತಂಸಾವತಂಸ ಗ್ರೈವೇಯಕಾಲಂಬನಾಂಗದ ಕೇಯೂರಹಾರ ಕಂಕಣಕಟಿ ಸೂತ್ರಂಗಳೆಂಬ ಚೆಲ್ವ ಮೆಯ್ದೊಡಿಗೆಗಳಂ ತೊಟ್ಟು ವಿಚಿತ್ರಚಿತ್ರಂಗಳಿಂ ಪರ ಭಾಗಂಬಡೆದ ಪರಿವಿಸ್ತೃತ ಪ್ರಶಸ್ತವಸ್ತ್ರಂಗಳನುಟ್ಟು ಬಹಳತರ ಪರಿಮಳ ಭರಮನುಗುಳ್ವ ಕುಂಕುಮಕರ್ಪೂರಪರಿಕಳಿತಹರಿಚಂದನಚರ್ಚೆಯನುದ್ವರ್ತನಂಗೆಯ್ದಿಂತು ಕೆಯ್ಗೆಯ್ವು ಮತ್ತಂ ಕೆಯ್ಮಿಕ್ಕ ಮದದ ಸೊಕ್ಕಿನಳುರ್ಕೆಯಿಂದುರ್ಕುತ್ತುಮಿರ್ದ ಪಣ್ಣಿದ ಪಟ್ಟದಾನೆಯ ನೇಱಿ

ಎತ್ತಿದ ಚೌಕದ ಪಲ್ಲವ
ಸತ್ತಿಗೆಗಳ ಕೆಳಗೆ ತಳ್ತು ಬೀಸುವ ಮಣಿದಂ
ಡೋತ್ತಮ ಚಾಮರತತಿಗಳ
ಬಿತ್ತರದಿಂದೆಸೆದು ಧರ್ಮನಾಥಂ ಬಂದಂ          ೪೫

ವ : ಇಂತು ಪೂರ್ವಸಂತಾನಪರಂಪರಾಸಮಾಯಾತ ಪರಾಕ್ರಮಕ್ರಮಪರಿ ಸೂಚನಾ ನಿರಂತರಿತವೈಜಯಂತೀಸಂತತಿಗಳ್ ನಭೋಂತಮನಾಲಿಂಗಿಸುತ್ತುಮಿರೆ ಮೊತ್ತಂಗೊಂಡೆಡೆವಱಿಯದೆ ನಿಬಿಡಮಾಗಿ ನಡೆವುತ್ತುಮಿರ್ದ ಪೆರ್ವಡೆಯ ನಟ್ಟನಡುವೆ ಜಯಜೀವನಂದವರ್ಧಸ್ವಮೆಂಬ ಪಟುಪಾಠಕರ ಮಂಗಳವಚನಂಗಳನಾಲಿಸುತ್ತುಮಾ ಧರ್ಮನಾಥಕುಮಾರಂ ಬಂದು ತತ್ಸ್ವಯಂವರಮಂಟಪದೊಳಗಂ ಪಲಕ್ಕು ತನ್ಮಧ್ಯ ಸಮುದ್ಯುಷಿತ ನವೀನಮಣಿಮಯಸಿಂಹಾಸನಸಮಾಸೀನನಾಗಿರ್ಪುದುಂ

ಅಂತರಿಕ್ಷದವೊಲೊಪ್ಪುವ
ಕಾಂತಸ್ಫಟಿಕಸ್ವಯಂವರಾಲದೊಳ್ ಭೂ
ಕಾಂತಸುತರ್ ತಾರೆಗಳೆಂ
ಬಂತಿರೆ ಚಂದ್ರನವೊಲೆಸೆದನಾ ಧರ್ಮಜಿನಂ       ೪೬

ವ : ಅನ್ನೆಗಮಿತ್ತಲನೇಕವಿಧಮಂಗಳವಾದ್ಯನಾದಂಗಳುಣ್ಮಿ ಪೊಣ್ಮುತ್ತಮಿರಲಾ ಶೃಂಗಾರವತೀ ದೇವಿಗೆ ಚಂದ್ರಕಾಂತಮಯರುಂದ್ರತರ ಮಂಗಳಕಳಶ ಪರಿವಿಗಳೆದತೀವ ಸಾಂದ್ರ ಕಿರಣಪರಂಪರಾರೂಪಧಾರೆಗಳಿಂ ದ್ವಿಗುಣಿಸಿದ ಮಳಯಜರಸಪರಿಷದುಪಕಲಿತ ಬಹಳಪರಿಮಳಮಿಳಿತ ಶೀತಳಜಳಧಾರಾಪೂರಂಗಳಿಂ ವಿವಾಹಕಲ್ಯಾಣಕ್ಕೆ ಮುಖ್ಯಮಾದ ಮಂಗಳಸವನೋತ್ಸವವಿಧಾನಮನೊಡರ್ಚುವುದುಂ

ತಿಂಗಳ ಕದಿರ್ದೊಂಗಲ್ಗಳ್
ಕಂಗೊಳಿಸುವ ನೆಯ್ದಲಿಂಗೆ ಬಂದೆಱಗುವವೊಲ್
ಮಂಗಳಜಳಧಾರೆಗಳು
ತ್ತುಂಗಸ್ತನೆಯಂಗದಲ್ಲಿ ಬಂದೆಱಗುವುದುಂ      ೪೭

ವ : ಆಸಮಯದೊಳ್

ಕ್ಷೀರೋದಲಹರಿ ಮುಸುಕಿದ
ಚಾರುಶ್ರೀದೇವಿಯೆಂಬಿನಂ ಕಣ್ಗೆಸೆದಳ್
ಭೂರಿತರಾಮೃತವಾರಾ
ಪೂರದೊಳಂ ಪೊಳೆವುತಿರ್ದತನುಲತೆಯಿಂದಂ    ೪೮

ವ : ಇಂತಾ ಮಂಗಳಸವನಸಮಯಾನಂತರಂ ಕೆಲದೊಳಿಕ್ಕಿದ ಹವಳದ ಹಾವುಗೆಯಂ ಮೆಟ್ಟಿ ನಿಲುವುದುಮಾಗಳಾ ರಾಜೀವಪತ್ರನೇತ್ರೆಗೆ ನೀರಾಜನಾಸಮಾಜ ವಿರಾಜಮಾನ ರಾಜತಭಾಜನಂಗಳ ರಾಜಿಗಳಂ ನಿವಾಳಿಸುವುದುಂ

ತೋರಮುತ್ತುಗಳ ಮೊತ್ತದಿ
ನಾ ರಮಣಿಯ ಚೆಲ್ವಮೆಯ್ಯನಾಕ್ಷಣದೊಳ್ ಶೃಂ
ಗಾರಿಸಿದಂತಿರಲೆಸೆವುದು
ವಾರಿಯ ಬಿಂದುಗಳ ಬಳಗವೆಲ್ಲೆಡೆಗಳೊಳಂ     ೪೯

ಆಕೆಯ ಮೆಯ್ಯೊಳ್ ತುಂಬಿದ
ವಾಃಕಣಚಯಮಂ ದುಕೂಲಚೇಲಾಂಚಲದಿಂ
ದೊಯ್ಕನೆ ತೊಡೆದರ್ ಮಣಿಯ ಶ
ಲಾಕೆಯನೆಯ್ದೊಪ್ಪವಿಡುವ ತೆಱದಿಂದಾಗಳ್    ೫೦