ವ : ಮತ್ತಂ ಕೆಲವಾನುದಿನಗಳಿಂ ಮೇಲೆ

ಜನನಿಯ ದೇವಕಾಮಿನಿಯ ಕೆಯ್ಯ ಬೆರಳ್ಗಳನಾಗಳೊಯ್ಯನೊ
ಯ್ಯನೆ ಪಿಡಿದೆಳ್ದು ನಿಂದು ಮಣಿಕುಟ್ಟಿಮಧಾರಿಣಿಯಲ್ಲಿ ಲೀಲೆಯಿಂ
ಜಿನಶಿಶುಕೂಡೆ ದಟ್ಟಡಿಯನಿಟ್ಟು ತಳರ್ನಡೆಗಲ್ತನೆಯ್ದೆ ಕೆಂ
ಪಿನ ಕಡುಚೆಲ್ವ ತಾವರೆಯರಳ್ಗಳನಲ್ಲಿರಿಸುತ್ತುಮಿರ್ಪವೊಲ್      ೫೧

ಪಿಡಿದು ಕರಾಗ್ರದಿಂದುದಯಮೇಖಳೆಯಂ ಜನನೀಸದಂಕದಿಂ
ಕಡುನಲಿದೆಳ್ದು ಭೂತಳದೊಳಂ ನಿಜಪಾದಮನಿಟ್ಟು ಬಾಳಕಂ
ನಡೆವುತಮಿರ್ದನಾ ಮೊದಲ ದಿಗ್ವಧುವಂಕದಿನೆಳ್ದ ಸೂರ್ಯನಂ
ತಡಸಿದ ರಾಗದಿಂದುಲಿಯೆ ಗೆಜ್ಜೆಗಳೆಂಬುರುಪಕ್ಷಿಗಳ್ ಕರಂ           ೫೨

ಮಣಿಮಯಮೇಖಳಾವಳಯಕೀಲಿತಪಾವನಕಿಂಕಿಣೀ ಕಣ
ಕ್ವಣನಮದುಣ್ಮಿಪೊಣ್ಮೆ ರಮಣೀಯವಿಚಿತ್ರಿತಚಿತ್ರಪತ್ರಕಂ
ಕಣರಣನಂ ವಿಶೇಷಿಸೆ ಮನೋಹರಭಾಸುರವಜ್ರಮುದ್ರಿಕಾ
ಗಣಕಿರಣಂ ವಿರಾಜಿಸೆ ಜಿನಂ ನಡಪಾಡುತಮಿರ್ದನರ್ಥಿಯಿಂ           ೫೩

ಮಿಗೆ ಭೂಷಣಾಂಗಸುರಕುಜ
ದಗೆಯೆಂಬಿನಮಿಂಬುವೆತ್ತ ಜಿನಶಿಶುವಂಗಂ
ಸೊಗಯಿಪ ಮರುತ್ಪ್ರಚಾರದ
ಬಗೆಯಿಂದಾಡುತ್ತುಮಿರ್ದುದತಿರಮಣೀಯಂ   ೫೪

ಗಡಣಂಗೊಂಡಾಡನಾಡಿಗಳ್ ಸುರಕುಮಾರರ್ ಧೂಳಿಕಾಕೇಳಿಯೊಳ್
ಕಡುರಾಗಂಬೆರಸಾ ಜಿನಾರ್ಭಕನ ಮೇಲೆಲ್ಲಂ ರಜೋಜಾಳಮಂ
ಕಡುಪಿದಂ ಕೆದಱುತ್ತುಮಿರ್ದೊಡಮವಂ ನೈರ್ಮಲ್ಯಮಂ ತಾಳ್ದ ಕ
ನ್ನಡಿಯೆಂಬಂತಿರೆ ಚೆಲ್ವನಾಗಿ ಪೊಳೆಯುತ್ತಿರ್ದಂ ವಿನೇತ್ರಪ್ರಿಯಂ    ೫೫

ಒಡನೊಡನೆ ತಾಯ ದಿಟ್ಟಿಗ
ಳೆಡೆವಿಡೆದೆ ಕುಮಾರನತ್ತ ಪರಿದಾಡುವಿನಂ
ಕಡುನೀಳ್ದ ತನ್ನ ಕಣ್ಗಳ್
ತಡೆಯದೆ ಪೊಳದಾಡೆ ಮುದದಿನಾಡುತ್ತಿರ್ದಂ   ೫೬

ಸುಳಿಸುಳಿದಾಡುತಿರ್ದ ರಮಣೀಯಕುಮಾರನ ತೆಳ್ಪುವೆತ್ತು ದ
ಳ್ಪೊಳೆವ ಕದಂಪಿನಲ್ಲಿರುವತಂಸವಿಶೋಣಮಣಿಪ್ರಭಾಳಿ ಮಾ
ರ್ಪೊಳೆದೆಸೆಯುತ್ತುಮಿರ್ದುದದು ಚುಂಬಿಸೆ ಬಂದು ವಿಮುಕ್ತಿಲಕ್ಷ್ಮಿತಂ
ಬುಲದೆಸರೊಕ್ಕುವಲ್ಲಿ ಬಿಡದೆಂಬಭಿಶಂಕೆಯನುಂಟುಮಾಡುಗುಂ   ೫೭

ವ : ಆಗಳ್

ಪರಮವಿಶೇಷಮೋಹರಸಸಾರವಿಶಾಲವಿಲೋಚನಂಗಳಿಂ
ಸುರುಚಿರರೂಪನಂ ಜಿನಕುಮಾರಕನಂ ನಡೆನೋಡಿ ಪೆತ್ತ ತಾ
ಯಿರದಮರ್ದಪ್ಪಿಕೊಂಡು ಬಿಡದಾರನಿದಾನವಿದಾರಮುದ್ದಿದಾ
ರರಸನಿದಾರಮಾಣಿಕವಿದೆಂದುಪಲಾಲಿಸುತ್ತಿರ್ದೆನರ್ಥಿಯಿಂ            ೫೮

ವ : ಮತ್ತಮಾ ಪೊತ್ತಿನೊಳ್

ಜನನಿಯ ಕಂಬುಕಂಠದೊಳಿಕ್ಕಿದ ಮುತ್ತಿನ ತಾರಹಾರಮಂ
ಜಿನಶಿಶು ತನ್ನ ಕೆಯ್ಯಬೆರಳಿಂ ಪಿಡಿದೊಂದೆರಡೆಂಟುನಾಲ್ಕುಮೂ
ಱೆನುತೆಣಿಸುತ್ತುಮೀ ತಡತಡಾದ ತೊದಳ್ನುಡಿಯಿಂದ ನಾಡೆಯುಂ
ಮನದೊಳನೂನರಾಗದೊದವಂ ಸಲೆಪುಟ್ಟಿಸುತ್ತಿರ್ದನಾಕ್ಷಣಂ       ೫೯

ವ : ಇಂತಾ ಬಾಲಕನ ಬಾಲಲೀಕಾವಿನೋದಂಗಳಿಂ ತನ್ನಯ ಜನನೀ ಜನಕರಿಂಗ ಮಂದಾನಂದಸಂದೋಹಮನಂದು ಜನಿಸುತ್ತುಮಿರಲ್ ಮತ್ತಂ

ಅನಿಮಿಷಪತಿಯನ್ನಪ್ರಾ
ಶನಚೌಲೋಪನಯನಾದಿ ಕರ್ಮಂಗಳುಮಂ
ಮನಮೊಲ್ದು ಮಾಡಿದಂ ತ್ರಿಭು
ವನದಲ್ಲಿ ವಿಚಿತ್ರಮಪ್ಪಿನಂ ಸಂಭ್ರಮದಿಂ        ೬೦

ತಡೆಯದೆ ಮೂಱುಸಂಜೆಯೊಳಮೊಪ್ಪುವ ರತ್ನವಿಭೂಷಣಂಗಳಂ
ಕೊಡುವುದು ಭೂಷಣಾಂಗಮದು ಕೊಟ್ಟವನೋಲಗಿಪಂ ಸುರಾಧಿಪಂ
ತೊಡಿಸುವರಂದವಂ ಶಿಶುಗೆ ದೇವವಿಳಾಸವತೀಜನಂಗಳೆಂ
ದೊಡಮದನೇನ ಬಣ್ಣಿಸುವೆನಾತನ ಪುಣ್ಯಮಹಾಪ್ರಭಾವಮಂ     ೬೧

ವ : ಇಂತು ನಿಳಿಂಪವಿಳಾಸಿನೀಸಂಕುಳಕರಣೀಯಬಾಲ್ಯಾಂಗ ಸಂಸ್ಕಾರಾದಿ ಕ್ರಿಯಾವಿಶೇಷಂಗಳನಂಗೀಕರಸಿ ಬಳಿಯಂ ಶೈಶವಾವಸ್ಥಾಸ್ಥಿತಿಯನತಿಕ್ರಮಿಸಿ ಪರಂಪರೆಯಿಂ ಪ್ರತಿಪತ್ಕಳಾಮಾಳಿಯಂತೆ ಪ್ರತಿದಿನಂ ಪ್ರವರ್ಧಮಾನಕಳಾಕಳಾಪವಿಳಾಸದೊಡನೊಡನೆ ಬಳೆವಳೆದಭಿವೃದ್ಧಿಯನಪ್ಪುಕೆಯ್ವುದುಂ

ಆ ಸುಕುಮಾರಕುಂಜರನ ಸರ್ವಮನೋಹರದಿವ್ಯರೂಪಮಂ
ಲೇಸೆಲೆ ಬಣ್ಣಿಸಲ್ ಬಗೆವೊಡೆನ್ನಳವಲ್ತು ಸಹಸ್ರಜಿಹ್ವಿಕಾ
ವಾಸುಕಿಗಗ್ಗಳಂ ಸುಕೃತಕಾರಣಮಾಗಿ ದಲೆನ್ನ ಬಲ್ಲವೋ
ಲೀಶನಮೂರ್ತಿಯಂ ಪೊಗಳ್ವೆನಲ್ಲದೊಡಂತದು ಮೊಗ್ಗೆ ವರ್ಣನಂ            ೬೨

ವ : ಅದೆಂತೆನೆ

ನಿರುಪಮಶಂಖಚಕ್ರಕುಳಿಶಂ ಮೊದಲಾದ ಸುಲಕ್ಷಣಂಗಳಂ
ಧರಿಸಿದ ತತ್ಕುಮಾರಪದಪದ್ಮಮನೊಪ್ಪುವ ಲಕ್ಷ್ಮಿ ಕಂಡು ತ
ನ್ನರಸನ ಚಿಹ್ನಮಿರ್ದುದಱಿನಾತನುಮಿಲ್ಲಿಗೆ ಬರ್ಪನಿಂತಿದೆ
ನ್ನರಮನೆಯೆಂಬ ಮೋಹವಶದಿಂ ಬಿಡದಲ್ಲಿರುತಿರ್ಪಳಾವಗಂ       ೬೩

ಚರಣಾಂಗುಷ್ಠನಖಂಗಳಿಂ ನಿಮಿರ್ವ ರೋಚಿಃಕಾಂಡಮೇ ನೇಣ ಮು
ಪ್ಪುರಿಯನ್ನಂ ನಡುವಿರ್ದು ಲಂಬಿಸೆ ಕುಮಾರೋಲ್ಲಾಸಿ ಜಂಘಾಯಗಂ
ಪರಿತಪ್ತೋತ್ತಮಕಾಂಚನಾಭಿರಚಿತಸ್ತಂಭದ್ದಯಾಕಾರಮಂ
ಧರಿಸಲ್ ತೋಱಿದುದಂದು ಲಕ್ಷ್ಮಿ ನಲಿಯುತ್ತಿರ್ಪುಯ್ಯಲೆಂಬಂದದಿಂ          ೬೪

ಸಕಳಜಗಜ್ಜನಂಗಳ ವಿಳೋಚನಮುಂ ಮನಮುಂ ದಲೆಂಬ ಶೌಂ
ಡಕಿತ ಮಹಾಗಜಂಗಳೆರಡಂ ನೆಱೆಕಟ್ಟುವುದಕ್ಕೆ ಮಾಡಿದ
ಪ್ರಕಟಿಸುವರ್ಣದಿಂ ಸಮೆದ ಚೆಲ್ವಮಳ್ಗಂಬಮಿಂದೆಂಬಿನಂ ಯುವಾ
ಧಿಕನವರೋರುಗಳ್ ಬಿಡದೆ ಮಾಳ್ಪವು ನೋಳ್ಪರ ಕಣ್ಗೆ ಹಬ್ಬಮಂ           ೬೫

ಅತಿಶಯರಾಜಸಿಂಹಮೆನೆ ತಜ್ಜಿನರಾಜಕುಮಾರಸಿಂಹನುಂ
ನುತಪರಿವೃತ್ತಪೀವರವಿಶಾಲಸುರಮ್ಯಕಟೀತಟಂಗಳಂ
ನುತತರಮಾಗಿ ತಾಳ್ದಿದನದಲ್ಲದೊಡೆಂತು ದುರಂತಕರ್ಮಮೆಂ
ಬತಿಬಳಕುಂಜರಂ ಕೆಡುವುದಾತನ ದರ್ಶನದಿಂದಮಾಕ್ಷಣಂ೬೬

ಕುವರನ ರೂಪಮೆಂಬ ರಸದಿಂದಮೆ ತುಂಬಿದ ನಾಭಿಕೂಪದೊಳ್
ತವಕದೆ ಬಂದು ಮುಳ್ಗಿದುದು ದಾನಸಮುದ್ಧುರ ಧರ್ಮಸಿಂಧುರಂ
ವಿವರಿಸಲಂತುಮಲ್ಲದೊಡೆ ತನ್ಮದಧಾರೆಯ ಪಜ್ಜೆ ತೀರದೊಳ್
ಪ್ರವಿತತ ರೋಮರಾಜಿಲತಿಕಾಚ್ಛಲದಿಂದಮದೆಂತು ಬಂದುದೋ   ೬೭

ಬಿಡದಂತಃಪುರಸಾರಸೌಂದರಿ ಲಸಲ್ಲಕ್ಷ್ಮೀಮಹಾದೇವಿ ಬಂ
ದೆಡೆಗೊಂಡಿರ್ದಪಳಿಲ್ಲ ಕಾಪಿನವರಾಗಿರ್ದೊಳ್ಗುಣೌಘಂಗಳಂ
ತೊಡರ್ದೊಂದಾಗಿಯೆ ಕೂಡಿಕೊಂಡು ಪಲವುಂಕಾಲಂ ದಲಿಂತೆಂದು ನೋ
ಳ್ಪಡೆ ವಕ್ಷಸ್ಥಳಮಂ ವಿಶಾಲತರಮಾಗಂಭೋಜಜಂ ಮಾಡಿದಂ      ೬೮

ವ : ಇಂತೆಂಬವೊಲಾ ಕುಮಾರನ ಪೇರುರಮಗಲಮಾಗಿ ಮಿಗೆ ಸೊಗಸನವ ಗಯಿಸುತ್ತುಮಿರೆ

ಸಾಸಿರ ನೆತ್ತಿಗಳ್ ಬಿರಿವಿನಂ ನೆಲನಂ ಸಲೆ ಪೊತ್ತುಕೊಂಡು ಸಂ
ಕ್ಲೇಶದಿನಿರ್ಪಹೀಂದ್ರನೆಮಗೇಂ ಸರಿಯಾದಪನೆಂಬ ಗರ್ವದಿಂ
ದಾ ಸುಕುಮಾರ ಬಾಹುಗಳವುನ್ನತಿವೆತ್ತಿರೆ ನಾಣ್ಚಿದಂತೆ ತ
ದ್ವಾಸುಕಿ ಪೋಗಿ ಪೊಕ್ಕುಱೆ ರಸಾತಳಮಂ ಬಿಡದಿರ್ಪನೀಗಳುಂ     ೬೯

ಕೆಂದಾವರೆಯಲರ್ಗಳಿವೆಂ
ಬಂದದೆ ಕುವರನ ಕರಂಗಳೊಪ್ಪಮನಾಳ್ದವ
ವಂದಂತುಮಲ್ಲದಿರ್ದೊಡೆ
ಸೌಂದರ ಕಂಕಣಧರಂಗಳೆಂತಾದಪುವೋ           ೭೦

ವ : ಮತ್ತಮಾ ಕುಮಾರಶಿರೋಮಣಿಯ

ವರರೇಖಾತ್ರಯದಿಂದೆ ಕೂಡಿ ನೆಱೆ ಬಟ್ಟಿತ್ತಾಗಿ ಚೆಲ್ವಾದ ನು
ಣ್ಗೊರಳಂ ಕಂಡು ವಿಳಾಸದಿಂದೆ ಸರಿಯಾಯ್ತಿಲ್ಲೆಂಬ ಲಜ್ಜಾಭರಾ
ತುರದಿಂದಂದೊಳಗೆಯ್ದಿ ಡಿಳ್ಳಿಸಿ ಜಲಂ ಪೊಕ್ಕಿರ್ದುದಂತಲ್ಲದಿಂ
ದಿರದಾ ಕಂಬು ಸಮುದ್ರದಲ್ಲಿ ನೆಲೆಗೊಂಡಿರ್ಪಂದಮಾವಂದಮೋ  ೭೧೧

ನಿರುಪಮಮಪ್ಪ ತಜ್ಜಿನಕುಮಾರನ ಸನ್ಮುಖಮಂಡಲಕ್ಕೆ ಪೀ
ವರತರಕಾಂತಿಯಿಂದೆ ಸರಿಯಾದಪೆನೆಂಬತಿಪಾಪದಿಂ ಸುಧಾ
ಕರನುಱೆ ಶುಕ್ಲಕುಷ್ಠಧರನಾದವೊಲೊಪ್ಪಿದನಂತುಮಲ್ಲದಂ
ದುರುಕನಕಾಂಶುವಾಗುದಯಿಸಿರ್ದು ದಲೇಂ ಬಿಳಿದಪ್ಪ ಕಾರಣಂ     ೭೨

ವ : ಇಂತಖಿಳಜಗಜ್ಜ ನಹೃದ್ಯನಿರವದ್ಯಸ್ಯಾದ್ವಾದವಿದ್ಯಾವಿಳಾಸಿನಿಯನರ್ತನ ವೃತ್ತಿಗೆ ಮಂಗಮಂಗಳರಂಗಸ್ಥಳಾಯಮಾನಮಾದ ನಿಜಮುಖಕಮಳದಿಂದಾಧರ್ಮನಾಥ ಕುಮಾರಂ ಪೊಸಪೊಸತಾದ ವಿಳಸನಮನಪ್ಪುಕೆಯ್ವುದುಂ

ಆತನ ಮಂಡೆಯಲ್ಲಿ ಮಿಗೆಪುಟ್ಟಿದ ಕುಂತಳಜಾಳಮೆಲ್ಲಮುಂ
ನೂತನಸಾರಸೌರಭಮನುಳ್ಳ ವಿಕಾಸಿತಮಾದ ಪಾವನೀ
ಭೂತಮುಖಾಂಜುಜಾತದೊಳಮೆಯ್ದೆ ಮುಸುಂಕಿತನಾದಮಿಲ್ಲದ
ಖ್ಯಾತಮಧುವ್ರತಪ್ರತತಿಯೆಂಬಿನಮಾಳ್ದುದು ಚೆಲ್ವನಾವಗಂ       ೭೩

ಪೊಳೆವಲರ್ಗಣ್ಗಳಂ ಕುವಳಯಂಗಳೆಸಳ್ಗಳಿನೊಳ್ಪುವೆತ್ತ ಪ
ಲ್ಗ ಳನವನೆಯ್ದೆ ಮೊಲ್ಲೆಯ ಮುಗುಳ್ಗಳಿನಂಘ್ರಿತಳಂಗಳಂ ಸುಕೋ
ಮಳತರಪಲ್ಲವಂಗಳಿನಜಂ ನೆಱೆಮಾಡಿದನೆಂದೊಡಾ ಕುಮಾ
ರಲಲಿತ ಸೌಕುಮಾರ್ಯಗುಣಮಂ ಪೊಗಳಲ್ಕಮಳುಂಬಮಾಗದೇ  ೭೪

ವ : ಇಂತು ನೆಗಳ್ತೆಗಂ ಪೊಗಳ್ತೆಗಮಾದ ನಿರತಿಶಯದಿವ್ಯರೂಪವಿಶೇಷದಿಂದಾ ಧರ್ಮನಾಥಕುಮಾರನತಿರಮಣೀಯಭಾವಮನಪ್ಪುಕೆಯ್ವುದುಂ

ಅದು ಶುಭಲಕ್ಷಣಾವಳಿಗಳಾಗರಮಂತದು ಹೊನ್ನ ಬಣ್ಣದಂ
ದದು ಕಡುಚೆಲ್ವಮೆಯ್ವಳಗಿನೇಳ್ಗೆಯ ಬಾಳ್ಮೊದಲುದ್ಘರೂಪಸಂ
ಪದದ ನಿವಾಸಮಾಗಿಮದು ಕೌತುಕಮಂ ಜಗತೀತ್ರಯಕ್ಕೆ ಮಾ
ಳ್ಪುದು ಬಿಡದಾವಗಂ ಚರಮದೇಹದ ಮೆಯ್ಸಿರಿ ಧರ್ಮನಾಥನಾ  ೭೫

ಮಳೆಗಂ ಸೋಲದ ಗಾಳಿಗಂ ಸಡಿಲದತ್ಯುಷ್ಣಕ್ಕೆ ಹೆಡ್ಡೈಸದ
ಚ್ಛಳಿಗಂ ಕೋಡದ ಶಸ್ತ್ರಕಂಟಕವಿಷಕ್ಕಂ ತಾನಭೇದ್ಯಂ ದಲಾ
ದಳವಂ ತಾಳ್ದಿದಮೊಪ್ಪುದೋಱದಿನಿತೊಂದಾಶ್ಚರ್ಯಸಾಮರ್ಥ್ಯಮಂ
ತಳೆದಿರ್ದಾ ಚರಮಾಂಗದುನ್ನತಿಯನಿನ್ನೇನೆಂದದಂ ಬಣ್ಣಿಪೆಂ        ೭೬

ಸಾರೂಪ್ಯಂ ಸೌರಭಂ ನಿರ್ಮಳತೆ ಶುಭಮಹಾಲಕ್ಷಣಂ ಸ್ವಾದನೀಯಾ
ಕಾರಂ ಸುಕ್ಷೀರಗೌರಾತಿಶಯಿತರುಧಿರತ್ವಂ ಗತಸ್ವೇದಭಾವಾ
ಧಾರತ್ವಂ ಸರ್ವಲೋಕಪ್ರಿಯತರಹಿತವಾದಿತ್ವಮತ್ಯಂತವೀರ್ಯಂ
ಸಾರೀಭೂತೋರುಶೋಭಂ ಚರಮತನುಸಹೋತ್ಪನ್ನಮೀ ಪತ್ತುಧರ್ಮಂ    ೭೭

ವ : ಅಂತುಮಲ್ಲದೆಯುಂ

ಅತಿಕುಶಲತ್ವದಿಂದೆಱಗಿಯುಂ ಕಡೆದುಂ ಕರುವಿಟ್ಟು ತಿಟ್ಟವಿ
ಟ್ಟಿತಿಶಯರೂಪಿನೇಳ್ಗೆಗೆ ಸಮಾನತೆಯಂ ಪಡೆಯಲ್ಕೆಬಾರದ
ಪ್ರತಿಮವಿಳಾಸಮಂ ತಳೆದು ಚಾರುಕುಮಾರನಕನಂ ನಿತಂಬಿನೀ
ಪ್ರತತಿ ನಿರೀಕ್ಷಿಸುತ್ತುಮೆಳಸಿರ್ದುದು ತೋಳ್ವೆರಗಂ ದಲಾತನ         ೭೮

ಭರವಸದಿಂ ಕುಮಾರನ ವಿಳಾಸಮೆ ತೋಳ್ವಲಮಾಗಿ ಮಾಡಿಕೊಂ
ಡರಲಸರಲ್ಗಳಿಂದೆ ಮದನಂ ಬಿಡದೆಚ್ಚಡೆ ತಾಗಿ ನಟ್ಟುವಾ
ತರುಣಿಯರಂ ಶಿರೀಷಕುಸುಮಾಂಗಿಯರಪ್ಪುದಱಿಂದೆ ಮತ್ತಮಾ
ಚರಮಶರೀರನಂ ನಡವು ವಜ್ರಮಯಾಂಗಕನಪ್ಪ ಕಾರಣಂ            ೭೯

ಕುವರನ ರೂಪಿನೊಂದು ಬಲದಿಂದಮೆ ಪೆಂಡಿರ ತಂಡಮಂ ಮನೋ
ಭವನರಲಂಬಿನಿಂದ ತಟವುಚ್ಚುವಿನಂ ಬಿಡದೆಚ್ಚನಾ ವಧೂ
ನಿವಹ ಸಹಾಯದಿಂದಮೆಸಲೊಲ್ಲದೆ ಮಾಣ್ದನವಂ ಕುಮಾರನಂ
ಜವದೊಳೆ ಸೋಲ್ವೆನೆಂಬ ಬಗೆಯಿಂದಮದೇಂ ಮದನಂ ವಿವೇಕಿಯೋ          ೮೦

ವ : ಮತ್ತಂ

ಸಾರ್ಧ ದ್ವಾದಶಲಕ್ಷವರ್ಷಪರಮಾಯುಃಸಂಖ್ಯೆಯಿಂದೆಯ್ದೆ ಸಂ
ಬದ್ಧಂ ಸದ್ಗುಣರಾಜಿರಾಜಿ ಸಲೆ ನಾಲ್ವತ್ತೈದು ಬಿಲ್ಲುದ್ದದಿಂ
ದಿದ್ಧಂ ಪಾವನಧರ್ಮನಾಥಸುಕುಮಾರೋದಾರಿಕಾಂಗಂ ಸಮಾ
ವಿಧ್ವಸ್ತಾಖಿಳರೋಗಕಂ ಜಗದೊಳಂ ತಾಳ್ದಿತ್ತದಾಶ್ಚರ್ಯಮಂ     ೮೧

ವ : ತದನಂತರಂ

ಕಲಿಸುವರಾರೊ ಜಾರುಗತಿಯಂ ಕಳಹಂಸೆಗೆ ರಮ್ಯನಾದಮಂ
ಕಲಿಸುವರಾರೊ ಕೋಗಿಲೆಗೆ ತಾಂಡವಡಂಬರಮಂ ನವಿಲ್ಗೆ ಮೇಣ್
ಕಲಿಸುವರಾರೊ ಮತ್ತೆ ಸಹಜಾಮಳಬೋಧಮಯಂಗೆ ಶಾಸ್ತ್ರಮಂ
ಕಲಿಸುವರಾರೊ ಲೋಕಗುರುವಿಂಗೆ ಕರಂ ಗುರುವಪ್ಪನಾವನೋ    ೮೨

ಜಗಮೆಲ್ಲಂ ಕೂಡೆಕೊಂಡಾಡುವಿಮಖಿಳಶಾಸ್ತ್ರಾಂಗವಿದ್ಯಾವಿಶೇಷ
ಪ್ರಗುಣಂ ತಾನಾಗಿ ಮತ್ತಂ ಸಕಳವಿವಿಧಶಸ್ತ್ರಾಂಗವಿದ್ಯಾವಿಶೇಷ
ದ್ವಿಗುಣಂ ತಾನಾಗಿ ಮತ್ತಂ ಗಜತುರಗಸಮಾರೋಹವಿದ್ಯಾವಿಶೇಷ
ತ್ರಿಗುಣಂ ತಾನಾಗಿ ಪೆಂಪಂ ತಳೆದನವನಿಯೊಳ್ ಸರ್ವವಿದ್ಯಾಸಮರ್ಥಂ          ೮೩

ಸುಚತುಷ್ಟಷ್ಟಿಕಳಾವಿಳಾಸಮಹಿಮಾಪತಿಪ್ರೌಢಿಮಾಢೌಕಿತೋ
ದ್ವಚನೋಚ್ಚಾರಣಚಾಮರೀಪರಮಸೀಮಾಭೂಮಿಯಪ್ಪಾ ಮಹಾ
ತಿಚಮತ್ಕಾರನ ಮುಂದೆ ಮತ್ತಿನಳಿವಿದ್ಯಾಗರ್ವಿತರ್ ಗರ್ವಮಂ
ಪ್ರಚುರಂ ಸ್ವೇದದ ರೂಪಿನೊಂದುನೆವದಿಂ ಬಿಟ್ಟಿರ್ದುರುದ್ದೈನ್ಯದಿಂ          ೮೪

ಅಱಿಯದ ವಿದ್ಯೆಗಳ್ ಜಗದೊಳಿಲ್ಲವಱೊ‌ಪ್ಪುವ ಗೋಷ್ಠಿಗಳ್ಗೆ ಮೇಣ್
ನೆಱೆಯವು ಪೊತ್ತುಗಳ್ ನಿಜಯಶೋವಿಸರಕ್ಕೆ ಸಮಸ್ತದಿಕ್ಕುಗಳ್
ನೆಱೆಯವು ಸದ್ಗುಣಸ್ತವನದೇಳ್ಗೆಗೆ ಶೇಷನಶೇಷಜಿಹ್ವೆಗಳ್
ನೆಱೆಯವು ತತ್ಕುಮಾರನ ನೆಗಳ್ತೆ ಪೊಗಳ್ತೆಗಳುಂಬಮಾಗದೇ         ೮೫

ತಾನೆ ಕಳಾವಿಶೇಷನಿಧಿ ತಾನೆ ವಿವೇಕದ ಚಾಗದಾಗರಂ
ತಾನೆ ಸಮಸ್ತಸೌಖ್ಯನಿಧಿ ತಾನೆ ವಿಶೇಷಿತಚಾರುಯೌವನಂ
ತಾನೆ ಜಗತ್ರಯೈಕಗುರು ತಾನೆ ಜಗತ್ರಿತಯಾಧಿನಾಯಕಂ
ಮಾನ್ಯನುಮೆಂದೊಡಾ ಜಿನಕುಮಾರನ ಪುಣ್ಯಮನೇನೊ ಬಣ್ಣಿಪೆಂ೮೬

ವ : ಇಂತಾ ಧರ್ಮನಾಥಕುಮಾರನಲ್ಲಿ ಸಹಜಮಾದ ಮತಿಶ್ರುತಾವಧಿ ಬೋಧಬೀಜದಿಂ ನಿರವಶೇಷಿತಕಳಾಂಕುರಸಂಕುಳಂ ಬಳೆದು ಸಫಳಮಾಗಿರ್ಪುದುಂ

ನಿಜಪಾದಾಕ್ರಾಂತಲೋಕಂ ಕುವಳಯಸುಖದಂ ಪಂಕಜಾತಪ್ರಶೋಷಂ
ತ್ರಿಜಗತ್ಸಂತಾಪನೋದಕ್ಷಮನಮೃತಕರಂ ನೂತನಕ್ಷತ್ರಕಾಂತಂ
ವಿಜಯಂ ಸನ್ಮಾರ್ಗವೃತ್ತಂ ವರಸಕಳಕಳಾಸ್ಫೂರ್ತಿಸಂಪೂರ್ಣಮಾಗಿ
ರ್ದು ಜನಸ್ತುತ್ಯಂ ಕುಮಾರಂ ಶಶಿಯಮೊಲೆಸೆದುಂ ಕಪ್ಪುಮಂ ತಾಳ್ದಿತಿಲ್ಲಂ  ೮೭

ವ : ಮತ್ತಮಾ ಧನ್ಯನ ತ್ರಿಜಗನ್ಮಾನ್ಯಮೆನಿಪ್ಪವದಾನ್ಯತಾಗುಣಮಂ ಪೊಗಳ್ವಡೆನ್ನಳವಲ್ತು

ಪಾತ್ರಾಪಾತ್ರವಿವೇಕದಿಂ ಜಿನಕುಮಾರಂ ಮಾಳ್ಪ ಸದ್ದಾನಮಂ
ಧಾತ್ರೀಸ್ತುತ್ಯಮನಂದು ಕೇಳ್ದು ಪಿರದುಂ ಸೋಲ್ತುಮ್ಮಳಂ ಪೆರ್ಚಿ ತ
ಚ್ಚೇತೋವೃತ್ತಿಯನೆಯ್ದೆ ಬಿಟ್ಟು ಮರನಾಯ್ತಾ ಕಲ್ಪವೃಕ್ಷಂ ಮಹಾ
ಚಿಂತಾರತ್ನಮದಾಯ್ತು ಕಲ್ಲು ಪಶುವಾಯ್ತಾ ಕಾಮಧೇನು ಧ್ರುವಂ          ೮೮

ವ : ಮತ್ತಮಾ ಕುಮಾರೋತ್ತಮಂ ನಿರವಧಿಚತುರುದಧಿವನ ನಿಷಣ್ಣಕಿನ್ನರೀ ಜನ ಸಂಗೀಯಮಾನ ಮಾನನೀಯ ವಿಶದತರ ನಿಜಯಶಸ್ತೋಮದಿಂ ಧವಳೀಕೃತನಿಖಿಳ ದಿಕ್ಪಾಳಕನಿಳಯನಪ್ಪುದುಂ

ಕುವರನ ಕೀರ್ತಿಯೆಂಬ ಸತಿ ತನ್ನ ಪತಿವ್ರತಮಂ ಜಗಕ್ಕೆ ತೋ
ಱುವ ಬಗೆಯಿಂದೆ ಮಿಂದು ಸುರಗಂಗೆಯೊಳಂ ಬಲವಂದು ದಿಕ್ಕುಮಾ
ರವರರನೇಳುವಾರಿನಿಧಿಮಂಡಳಮಂ ಕಳಿದೊಲ್ದು ಮುಟ್ಟಿದಳ್
ಜವದೊಳೆ ಕೂಡಿ ವಿಷ್ಣುಪದಮಂ ಧರಣೇಂದ್ರಫಣಾಗ್ರಭಾಗಮಂ   ೮೯

ವ : ಮತ್ತಮತ್ಯುಜ್ಜಳ ಪರಿಸ್ಫೂರ್ಜದುರ್ಜಯ ತೇಜೋವಿರಾಜಮಾನನ ಪ್ಪುದುಂ

ಜಿನನತ್ಯುಗ್ರಪ್ರತಾಪಂ ಪಸರಿಸಿ ಜಗದೊಳ್ ತುಂಬೆ ಶೀತಾಂಶುಬಿಂಬಂ
ದಿನಕೃದ್ಬಿಂಬಂಬೊಲಾಯ್ತಾಗಸಮುಮುದಯರಾಗಾಂಕಮೆಂಬಂತಿರಿರ್ದ
ತ್ತನುರಕ್ತಂಬೆತ್ತುದುರ್ವೀತಳಮನಳಕುಮಾರಂಬೊಲಿರ್ದರ್ ದಿನೇಶರ್
ಜನಮೆಲ್ಲಂ ರಾಗಮಂ ತಾಳ್ದಿದುದತಿಶಯದಿಂದುದ್ಯದಾದಿತ್ಯನನ್ನಂ          ೯೦

ಪರದುಸ್ಸಹ್ಯಪ್ರತಾಪಂ ಬುಧಗುರುಕವಿ ಸಂಸೇವ್ಯಮಾನಂ ವಿನೀಲಾಂ
ಬರರಮ್ಯಂ ಲೋಕಮಿತ್ರಂ ಬಹಳತರತಮೋನಾಶನಪ್ರೌಢಿದಕ್ಷಂ
ಕರದಿಗ್ವ್ಯಾಪ್ತಂ ಸಮುದ್ಯತ್ತರುಣತರಣಿಯೆಂಬಂದದಿಂ ಧರ್ಮನಾಥಂ
ವರಪದ್ಮಾನಂದಮಂ ದಲ್ ಭುವದೊಳನಿಶಂ ಪೆರ್ಚಿಸುತ್ತಿರ್ದನಾದಂ           ೯೧

ವ : ಇಂತತೀವಪ್ರತಾಪಪ್ರಭಾವದಿಂ ಪ್ರವಿಭಾಸನಮನಪ್ಪುಕೆಯ್ವುದುಂ

ಒಡನೊಡನಾ ಕುಮಾರಕನ ಬೆಂಬಳಿಯೊಳ್ ಮಿಗೆ ಪಿಂದುಗೊಂಡು ಸಂ
ಗಡದೊಳೆ ಕೂಡಿಬಂದರಧಿರಾಜಕುಮಾರಕರಂದನೇಕರುಂ
ತಡೆಯದೆ ತಾರಕಾವಿತತಿಗಳ್ ಧ್ರುವತಾರೆಯ ಪಿಂದೆ ಬರ್ಪವೊಲ್
ಬಿಡದೆ ವಿನಿರ್ಮಲಾಂಬರದೊಳೊಪ್ಪಿರೆ ತಮ್ಮಯ ಕಾಯಕಾಂತಿಗಳ್           ೯೨

ವ : ಮತ್ತಂ ಪರಿವಾರಿಕರಾದ ದಿವಿಜಕುಮಾರಕರತೀವವೈಕುರ್ವಣವಿಕ್ರಿ ಯಾವಿಭವದಿಂದುದಯಿಸಿದನೇಕವಿಧರೂಪ ಭಾಷಾವೇಷಾದಿ ವಿನೋದಂಗಳಿಂ ದಾಡಿಯುಂ ಪಾಡಿಯುಮೋದಿಯುಂ ಬಗೆದ ವಾಹನಂಗಳಾಗಿಯೊಡಂಬಡುವೆಡಗೆ ಕೊಂಡು ಪೋಗಿಯುಮಾ ಜಿನಕುಮಾರಕನಿಚ್ಚೆಯಱಿದು ಓಲೈಸಿ ಮೆಚ್ಚಿಸುತ್ತುಮಿರೆ

ಕೆಲರುರಿಲಿಂಗಮಾಗಿ ಕಡಲಂ ಕಡೆವಂತೆಯೊಲಾಗಿ ಕಾಳದೊಳ್
ಕಲಸಿದ ಜೊನ್ನವಾಗಿ ಪಗಲೊಳ್ ತಡವಾಗಿರುಳಾಗಿ ತೋಱಿದರ್
ಕೆಲರುಱೆಮಲ್ಲರಾಗಿ ಪೊಣರ್ದರ್ ಕೆಲರುಂ ತಗರಾಗಿ ಕಾದಿದರ್
ಕೆಲರಿಭರೂಪರಾಗಿ ಮೊಗವಿಕ್ಕಿದರಾತನ ಮುಂದೆ ಚೋದ್ಯದಿಂ       ೯೩

ಗಿಳಿಗಳ ರೂಪಂ ಕೈಗೊಂ
ಡೆಳಸುವಿನಂ ಕಾವ್ಯಭರತನಾಟಕಶಾಸ್ತ್ರಂ
ಗಣನೋದಿ ಕುವರನಂ ಬಗೆ
ಗೊಳಿಸಿದರಾ ಸುರಕುಮಾರರತಿಕೌತುಕದಿಂ        ೯೪

ವ : ಅಂತುಮಲ್ಲದೆಯುಂ

ಮಿಗುವ ವಿನೋದವಿದ್ಯೆಗಳಿನಾ ಸುಕುಮಾರನನೆಯ್ದೆ ಮೆಚ್ಚಿಸಲ್
ಬಗೆದು ಕೆಲಂಬರೋಲಗಿಪ ದೇವಕುಮಾರರಂದು ತೋಱಿ ತ
ಜ್ಜಗದೊಳಿತೀವವಿಸ್ಮಯಮನಾಗಿಪ ಚಾರುಮಹೇಂದ್ರಜಾಲಮುಂ
ನಗಿಸಿದರಾತನಂ ಕೆಲಬರೊಪ್ಪುವನೇಕವಿಕಾರವೇಷದಿಂ      ೯೫

ವ : ಇಂತು ಪಲವುತೆಱದ ಲೀಲಾವಿನೋದಂಗಳಿಂ ಪೊತ್ತಂ ಕಳಿವುತ್ತುಮಭಿ ನವಯೌವನಾವಸ್ಥೆಯನಪ್ಪುಕೆಯ್ವುದುಂ

ದಶವಿಧಬೋಗಂಗಳನಂ
ದೊಸೆದನುಭವಿಸುತ್ತುಮಿರ್ದನಾ ಸುಕುಮಾರಂ
ಪೊಸಪರಿಮಳಂಗಳಂ ಸಂ
ತಸದಿಂ ಮಱಿದುಂಬಿ ಬಿಡದೆ ಸೇವಿಪ ತೆಱದಿಂ   ೯೬

ಅತಿಚಿತ್ರಂಬೆತ್ತ ನಾನಾಪರಿಪರಿಯ ಸಮವಸ್ತ್ರಂಗಳಂ ನೂತ್ನರತ್ನ
ಪ್ರತತಿವ್ಯಾಕೀಲಿತಾಲಂಕರಣತತಿಗಳಂ ಪುಷ್ಪಮಾಲ್ಯಂಗಳಂ ವಿ
ಸ್ತೃತ ಸೌರಭ್ಯಾನುಲೇಪಂಗಳವನತಿಶಯದಿವ್ಯಾನ್ನಪಾನಂಗಳಂ ರಾ
ಜಿತಹಂಸೀತೂಳತಳ್ಪಂಗಳನಿವು ಮೊದಲಾಗಿರ್ದ ಸದ್ವಸ್ತುಗಳಿಂ      ೯೭

ಕೊಡುವುದು ಕಲ್ಪವೃಕ್ಷಮದು ಕೊಟ್ಟವನೋಲಗಿಪಂ ಪುರಂದರಂ
ತೊಡಿಸುವರಂದವಂ ಕುಶಲದೇವಿಯರೊಳ್ದೆಳಸುತ್ತುಮಿರ್ಪರಿಂ
ತೆಡೆವಿಡದಾವಗಂ ಪರಮಭೋಗವಿಭೂತಿಯನೆಯ್ದೆತಾಳ್ದಿದಂ
ತಡೆಯದೆ ಧರ್ಮನಾಥನನವದ್ಯಮನೋಹರವಾದಿವಸ್ತುವಿಂ         ೯೮

ವ : ಇಂತಾ ಧರ್ಮನಾಥಕುಮಾರಂ ಕುಮಾರಕಾಲದೊಳನೇಕಪ್ರಕಾರ ಮಜ್ಜನಭೋಜನಾದಿ ಭೋಗೋಪಭೋಗಾನುಭವವಿಭವಮನಪ್ಪುಕೆಯ್ದು ಸುಖದಿನಿರು ತ್ತುಮಿರೆ

ಪರಮಕುಮಾರನಂ ದಿವಿಜನಾಯಕನುತ್ತಮಭಕ್ತಿಯಿಂ ಸುರಾ
ಸುರ ನಿಕುರುಂಬಕಂ ಬೆರಸಿಬಂದಭಿಪೂಜಿಸುವಂ ತ್ರಿಕಾಲದೊಳ್
ಪಿರಿದುಮನರ್ಘ್ಯವಸ್ತು ದೊರೆಕೊಂಡೊಡದಂ ಘನಯತ್ನದಿಂದಮಾ
ದರಿಸಿ ವಿಚಕ್ಷಣಂ ಪ್ರತಿದಿನಂ ಪರಿರಕ್ಷಿಸದಿರ್ಪನಾವನೋ     ೯೯

ವ : ಮತ್ತಮಾ ಧರ್ಮನಾಥಕುಮಾರಂ ಮುನ್ನಮೆ ಲೋಕತ್ರಯೈಕ ಸ್ವಾಮಿಯಪ್ಪುದನಱಿ ದಿರ್ದೊಡಮಾ ಮಹಾಸೇನಮಹಾರಾಜಂ ನಿಜತನೂಜನೆಂಬೀ ಮಂದೆವಳದಿಂದೊಂದಿದ ಮೋಹನೀಯೋದ್ರೇಕ ಪರಿಪಾಕದಿಂ ಮೂಱುಂಲೋಕಕ್ಕತೀವ ಕೌತುಕಮಪ್ಪಂತಿರೆ ಯುವರಾಜಪಟ್ಟಬದ್ಧಮಂಗಳೋತ್ಸವಕರಣಮುಖದಿಂ ತನ್ನಯ ಸಂಪನ್ನತಾ ಪ್ರಭಾವಮನಿಮ್ಮಡಿಯಾಗಿ ಪ್ರಕಟೀಕರಿಸಲ್ವೇಡಿ ಮಹಾಮಹಿಮೆವೆತ್ತ ವಿಭೂತಿಯಿಂದಾ ಕುಮಾರವರಂಗೆ ಯುವರಾಜಪಟ್ಟಮಂ ಕಟ್ಟುವುದುಂ

ಮಂಗಳಗೀತಮಂ ಬಿಡದೆ ಪಾಡುವ ಮಂಗಳಗದ್ಯಪದ್ಯಮಂ
ಪಿಂಗದೆಯೋದುತಿರ್ಪ ಬಿಡುಮುತ್ತಿನ ಸೇಸೆಯನಿಕ್ಕುವೊಳಿಯಿಂ
ಮಂಗಳನಾಟ್ಯಮಂ ಮುದದಿನಾಡುವ ಮಂಗಳಹೃದ್ಯವಾದ್ಯಮಂ
ಸಂಗಡದಿಂದೆ ಬಾಜಿಸುವ ಸಂಭ್ರಮಮಾಕ್ಷಣಮುಣ್ಮಿತೆತ್ತಲುಂ        ೧೦೦

ಪರಸುವ ಕಾಣಿಕೆಯಿಕ್ಕುವ
ಭರದಿಂ ಪೊಡವಡುವ ಬಿನ್ನಹಂ ಮಾಡುವ ಬಂ
ಧುರಸಂಭ್ರಮಕೋಳಾಹಳ
ಮುರವಣಿಸುತ್ತಾ ನೃಪಾಳಮಣಿಮಂಡಪದೊಳ್           ೧೦೧

ಆಹಾರಾಭಯಶಾಸ್ತ್ರಭೇಷಜ ಮಹಾದಾನಂಗಳಂ ಮಾಳ್ಪ ಚೇ
ತೋಹಾರಿಸ್ತವನೀಯಭೂರಿಜಿನಪೂಜೋತ್ಸಾಹಮಂ ಮಾಳ್ಪ ಸ
ದ್ವ್ಯಾಹಾರಂಗಳಿನೆಲ್ಲರುಂ ಕುವರನಂ ಕೊಂಡಾಡುವುದ್ಯೋಗದಿಂ
ಗೇಹಂ ಪತ್ತನಮುಂ ಮಹಾಮಹಿಮೆಯಂ ತಾಳ್ದಿತ್ತದಾಶ್ಚರ್ಯಮಂ           ೧೦೨

ಯಾಚಕಕೋಟಿಗಳ್ ಬಿಡದೆ ಬೇಡಿದುದಂ ತಡವಿಲ್ಲದೀವ ಕಾ
ಲೋಚಿತದಲ್ಲಿ ಕಲ್ಪತರುವೆಂಬಭಿಶಂಕೆಯನುಂಟುಮಾಡಿದಂ
ಶ್ರೀಚರಿತಂ ತದೀಯಜನಕಂಗೆ ವಿಶೇಷಿತಚಿತ್ರಪತ್ರಕಂ
ಸೂಚಿತವಿಕ್ರಮಂ ಬಹಳಮೂಲಬಳಾನ್ವಿತನಾದಕಾರಣಂ  ೧೦೩

ವ : ಇಂತು ಯುವರಾಜರಾಜ್ಯಾಭಿಷೇಕಪುರಸ್ತರಂ ಪ್ರಾಜ್ಯಪ್ರಭಾವನಾ ವಿಶೇಷದಿಂದಾ ಧರ್ಮನಾಥಕುಮಾರಂಗೆ ತಂದೆಯಪ್ಪ ಮಹಾಸೇನಮಹಾರಾಜಂ ಯುವರಾಜ ಪಟ್ಟಮಂ ಕಟ್ಟಿ ನಿರಂತರಿತಸಂತೋಷದಂತಮನೆಯ್ದಿ ಸುಖದಿನಿರ್ಪುದುಂ

ಮತ್ತಮನಂಸಂತತಿವಿವರ್ಧನಕಾರಣಮಾಗಿ ತಂದೆತಾ
ಯ್ಗಳ್ತ್ವರಿತಂ ದಲಾ ಜಿನಕುಮಾರವರಂಗೆ ವಿವಾಹಕಾರ್ಯಮಂ
ಬಿತ್ತರದಿಂದೆ ಮಾಳ್ಪ ಬಗೆಯಂ ಬಗೆದಿರ್ದವರಂದು ಕೇಳಿದರ್
ತತ್ತನುಜಾತನಂ ಬಿಡದೊಡಂಬಡಿಸುತ್ತುಮನೂನಮೋಹದಿಂ        ೧೦೪

ವ : ಇಂತೆಂತಾನುಮೊಡಂಬಡಿಸಿ ವಿವಾಹಕಲ್ಯಾಣಮನಾತಂಗೆ ಮಾಳ್ಪು ಜ್ಜುಗದಿಂ ತದ್ಯೋಗ್ಯಕನ್ಯಾನ್ವೇಷಣಪರಾಯಣರಾದ ಮಹಾಸೇನಮಹಾರಾಜನುಂ ಸುವ್ರತಾ ಮಹಾದೇವಿಯಂ ಧರ್ಮನಾಥಕುಮಾರನಂ ನೋಡಿ ಪರಮಾನಂದಸಂದೋಹ ದೊಳೊಂದುತ್ತುಂ ತ್ಯಾಗಭೋಗಮನಪ್ಪುಕೆಯ್ದು ಸುಖದಿನಿರುತ್ತುಮಿರೆ

ಕುವರಂ ಧರ್ಮಪ್ರಭಾವಸ್ಥಿತಿಯನೆ ಜಗದೊಳ್ ಪೆರ್ಚಿಸುತ್ತಿರ್ದನಾದಂ
ಸುವಿಶೇಷಾಶೇಷವಿದ್ಯಾಜಯನಿಧಿ ವಿಧುಬಿಂಬಾಯಮಾನಂ ಸದಾನಂ
ಪ್ರವರಾಚಾರೋದ್ಧುರಂ ಬಾಹುಬಲಿಸುಕವಿರಾಜಂ ರವಿಸ್ಫಾರತೇಜಂ
ಭುವನಸ್ತುತ್ಯಂ ಪ್ರಸತ್ಯಂ ನತಬುಧನಿವಹಂ ಚಾತುರೀಜನ್ಮಗೇಹಂ  ೧೦೫

ಗದ್ಯ : ಇದು ಸಕಳಭುವನಜವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯ ಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಧರ್ಮತೀರ್ಥಂಕರನ ಬಾಲಕ್ರೀಡಾವಿನೋದಪರಿವ್ಯಾವರ್ಣನಂ ನವಮಾಶ್ವಾಸಂ