ಶ್ರೀಗೆ ನೆಲೆಯೆನಿಸಿ ವಿದ್ಯಾ
ಶ್ರೀಗಾಶ್ರಯಮೆನಿಸಿ ಸಕಳಜನನುತಕೀರ್ತಿ
ಶ್ರೀಗೆ ಗೃಹಮೆನಿಸಿ ನೆಗಳ್ದಂ
ಭೂಗಧಿಪಂ ಸರಸಚತುರಕವಿಕುಳತಿಳಕಂ           ೧

ವ : ಅಂತಾ ಧರ್ಮನಾಥಮಹಾರಾಜನಪಾರ ಚಾರು ಮುಖ್ಯಸಾರಸರ್ವಸ್ವ ಸಮಾಸ್ವಾದನ ಕರಣಪರಿಣತಾಂತಃಕರಣಂ ಕರುಣತ್ರಯಶುದ್ಧಿಸಮೃದ್ಧನಭಿವರ್ಧಿತಪ್ರಸಿದ್ಧ ಸದ್ಧರ್ಮ ಪ್ರಭಾವಂ ಪ್ರಭಾವಶಾವಗುಂಠಿತ ಕಂಠೀರವಪೀಠಸಮುಪಕಂಠಸೇವಾಸ ಮುತ್ಕಂಠಾಕುಂಠಿತ ನಿಖಿಳವಿಷ್ಟಪಪ್ರತಿಪಾಳಕ ಪಾಪಠ್ಯಮಾನ ಮಹಿಮಾಸಮುಪ ಲಕ್ಷತವದಕ್ಷೂಣ ಪ್ರಾಜ್ಯಸಾಮ್ರಾಜ್ಯರಾಜ್ಯಲಕ್ಷ್ಮೀಪ್ರಮದೆಗೆ ಮೊಗಮಿತ್ತು ಭೋಗೋಪ ಭೋಗಾನುಭವನ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತುಮಿರ್ಪಲ್ಲಿ

ಆತನ ಪಜ್ಜಳಿಪ್ಪ ಜಸದೇಳ್ಗೆಯೆ ಪಾಲ್ಗಡಲೆಂಬಿನಂ ದಿಶಾ
ಬ್ರಾತಕಮಂ ಮುಸುಂಕಲದಱಲ್ಲಿ ಪವಳ್ಗುಡಿ ಬಳ್ಳಿಗೊಂಡವೊಲ್
ನೂತನತೇಜಮೊಪ್ಪಿದುದು ಮೂಜಗಮಂ ಘನಫೇನಪಿಂಡದಂ
ತಾತತಶೋಭೆವೆತ್ತುದುರುಪುಷ್ಕರದಂತೆಸೆದತ್ತು ಪುಷ್ಕರಂ            ೨

ವ : ಅಂತಾ ನೃಪಾಳತಿಳಕನಪೂರ್ವಸಾರ್ವಭೌಮಲಕ್ಷ್ಮೀಸಪ್ತಾಂಗಸ ಮಾಲಿಂಗನ ಸಂಗತಿ ಯನಂಗೀಕರಿಸಿರ್ಪುದುಂ

ಪರಮಶ್ರೀಧರ್ಮನಾಥಂಗಿಳೆಗಭಿನವ ಸತ್ಕಾಮದೇವಾವತಾರಂ
ಗುರು ನಾನಾಕೇಳಿಕೌತೂಹಳದೊಳಧಿಸಹಾಯಂ ನೃಪಂ ತಾನೆ ಬಪ್ಪಂ
ತಿರೆ ಬಂದತ್ತಂದು ಪುಷ್ಪಸ್ತಬಕಚಮರವಾಂತ ದ್ವಿರೇಪೋದ್ಭಟಾಂತಂ
ಪರಪುಷ್ಟಾತೋದ್ಯತಾಂತಂ ಕಿಸಲಯಿತತರುಚ್ಛತ್ರಕಾಂತಂ ವಸಂತಂ            ೩

ಅದು ಕಲಿಕಾಲದಂತೆಸೆದುದಾಱಡಿಗೇಳ್ಗೆಯನಾಗಿಸುತ್ತುಮಂ
ತದು ವಿರಹಾರ್ಥನಂತೆಸೆದುದುತ್ಕಳಿಕಾಳಿಯನುಂಟುಮಾಡುತುಂ
ಮದನವಿಕಾರಮಂ ಬಿಡದೆ ಪೆರ್ಚಿಸುತುಂ ಪರಿಪೂರ್ಣಚಂದ್ರನಂ
ತದು ಮೆಱೆದತ್ತು ಚೈತ್ರಸಮಯಾಗಮನಂ ಜಗದೊಳ್ ವಿಚಿತ್ರಕಂ  ೪

ವ : ಅಂತು ಬಂದ ವಸಂತಕಾಲದೊಳ್

ಹಿಮಸಾರಂ ಮಂದಚಾರಂ ಧೃತಪರಿಮಳಪೂರಂ ಶ್ಲಥೀಭೂತ ನೀವೀ
ಕ್ರಮಚಾರಂ ಚಾಲಿತೋರಃಸ್ಥಳಮಣಿಮಯಹಾರಂ ಮಹಾನಂದಕಾರಂ
ಸಮುಪಾತ್ತಸ್ತ್ರೀವಿಕಾರಂ ರತಿಸುಖಸಹಕಾರಂ ಯಮಾಶಾವಿಹಾರಂ
ಶ್ರಮಜಸ್ವೇದಾಪಹಾರಂ ಮಿಗೆ ಸುಳಿದುದು ಧೀರಂ ಗಭೀರಂ ಸಮೀರಂ        ೫

ಮಳಯಾದ್ರಿಸ್ಥಳದಲ್ಲಿ ಪುಟ್ಟಿದ ಮಹಾಶ್ರೀಗಂಧವೃಕ್ಷಂಗಳಂ
ಬಳಸಿರ್ದಗ್ರಫಣಿಪ್ರತಾನಮೊಲವಿಂದಂ ಪೀರ್ದು ಪೀರ್ದಾರ್ತ ದೋ
ರ್ವಳದಿಂ ಮೆಯ್ಕಿಱಿದಾದ ತೆಂಕಣನಿಲಂ ತನ್ನಂದನಶ್ರೀಯ ಮಂ
ಗಳವನ್ನಂದನನಂತೆ ದಟ್ಟಡಿಯಿಡುತ್ತಿರ್ದತ್ತು ಕೆಂಗೊಂಬಿನೊಳ್     ೬

ವ : ಆಗಳ್

ಬಿಡದದಿರ್ಗುಂತೆಯಗ್ಗಳದ ಮೊಗ್ಗೆಗಳಾವಳಿಯೆಂಬ ತೋರ ಚೆ
ಲ್ವೊಡೆ ಮಣಿಗಟ್ಟಿ ಕೋಗಿಲೆಯ ನುಣ್ದನಿಯಿಂದಮೆ ಮುದ್ದುಮಾತುಮಂ
ನುಡಿದು ಮುಗುಳ್ತ ಮಲ್ಲಿಗೆಯ ಬಲ್ನನೆಯೆಂಬ ತೊಳಪ್ಪ ಪಲ್ಗಳಂ
ಪಡೆಯದೆ ತೋಱುತುಂ ನಗುವವೊಲ್ ಮೆಱೆದತ್ತು ಪಯೋಜವಕ್ತ್ರದಿಂ       ೭

ವ : ಇಂತು ಮನಂಗೊಳ್ವಿನಂ ಪಿಂಗದೆ ತೆಂಗಾಳಿ ಸಂಗಳಿಸಿ ಬೀಸುವುದುಂ

ಆಂ ಸಹಕಾರಿಯಾಗದೊಡಮೇಕೆನಗೀ ಸಹಕಾರನಾಮಮೆಂ
ದಾ ಸಹಕಾರಕಂ ಕೊನರ್ಗಳೋಳಿಯ ಕೂರ್ಮೊನೆದೋಱಲಾಗಳಂ
ತಾಶಯಸಂಭವಂ ಸಕಳದಿಗ್ವಿಜಯೋದ್ಯತನಾಗಿ ತೀಕ್ಷ್ಣ ಬಾ
ಣಾಸನದೊಳ್ ತೊಡರ್ಚಿ ಪೊಳೆವಂಬಿನ ಕೂರ್ಮೊನೆದೋಱೆ ಕೊರ್ವಿದಂ       ೮

ಒಸೆದೆನ್ನಲ್ಲಿಗೆ ಬಂದಪಂ ಸುರಭಿಕಾಲಂ ವಲ್ಲಭಂ ತಳ್ತ ಸಂ
ತಸದಿಂದುರ್ವಿ ತದಾಶಯಂಬಡೆವೆನೆಂಬೀ ತನ್ನ ಸಂಕಲ್ಪದಿಂ
ಪೊಸಕೆಂಬಟ್ಟೆಯನುಟ್ಟು ಮೌಕ್ತಿಕಮಯಾಲಂಕಾರಮಂ ತೊಟ್ಟವೋ
ಲೆಸೆವುತ್ತಿರ್ದುದು ಮಾಮರಂ ತಳಿರ್ಗಳಿಂದಂ ಪೂಗಳೊಂದೋಳಿಯಿಂ           ೯

ಎನಸುಂ ಕೆಂದಳಿರೆಂಬ ಚೆಲ್ವಪೊಸಧೋತ್ರಂ ರಂಜಿಸಲ್ ಕೋಕಿಳ
ಧ್ವನಿಯಿಂದಂ ಪ್ರಣವೋತ್ಥಿತ ಶ್ರುತಿಯನೆಯ್ದುಚ್ಚಾರಣಂಗೆಯ್ವುತುಂ
ನನೆಯೆಂಬಕ್ಷತಪುಂಜಮಂ ಪಿಡಿದ ಶಾಖಾಹಸ್ತಮಂ ನೀಳ್ದು ಕಾ
ಮನ ಸದ್ಬ್ರಾಹ್ಮಣನೆಂಬಿನಂ ಪಡೆದುದತ್ಯಾಶ್ಚರ್ಯಮಂ ಮಾಮರಂ           ೧೦

ಕೆಯ್ವಂದೀ ಮಾಕಂದಂ
ಕೆಯ್ವಾರಂ ಬಂದುದೆನಗೆ ತೀರದುದಿಲ್ಲಾಂ
ಕೆಯ್ವಾರಲಾಗದೆಂದುಱೆ
ಮುಯ್ವಂ ನೋಡುತ್ತು ಕರ್ಬುವಿಲ್ಲಂ ಬಲಿದಂ+೧೧

ವ : ಇಂತು ನಂದನವನದೊಳಂದಂಬಡೆದು ಸಾಲ್ಗೊಂಡು ನಿಂದ ಮಾಕಂದ ಸಂದೋಹದೊಳ್

ಕೂಡೆ ಮನೋಜನೊರ್ವನೆ ಜಗಂಗಳನಂಡಲೆವಂ ವಸಂತನೆ
ದ್ದಾಡುತುವೆಯ್ದಿಬಂದು ನೆರಮಾದೊಡೆ ದಂಡಿಸದಿರ್ಪನಲ್ಲ ನೀ
ವೋಡಿಯೆಪೋಗಿ ಪೋಗಿ ಪುಗದಿರ್ ಪುಗದಿರ್ ಬನಮಂ ದಲೆಂದು ಮಾ
ತಾಡಿ ವಿಯೋಗಿಗಳ್ಗುಸಿರ್ದವೋಲುಲಿದತ್ತು ಸಮಂತು ಕೋಕಿಳಂ   ೧೨

ಗಿಳಿಗಳ್ ಮಾವಿನ ತನಿವ
ಣ್ಗಳ ರಸಮಂ ಪೀರ್ದು ಪೀರ್ದು ಸವಿಯಾದೊಡೆ ಪೆ
ಣ್ಗೆಳಿಗಳ್ಗಿತ್ತೆನೆ ಮಱಿಗ
ಳ್ಗೊಲವಿಂ ಮುಕ್ಕುಳಿಸಿ ಬಾಯೊಳೆಱೆದವು ಮತ್ತಂ         ೧೩

ವ : ಅದಲ್ಲದೆಯುಂ ಪ್ರಫುಲ್ಲಮತಲ್ಲಿಕಾನೇಕ ಕುಸುಮವಲ್ಲರೀಸಮುಲ್ಲಸಿತ ಮಲ್ಲಿಕಾವಲ್ಲೀ ವನಪ್ರಸರದೊಳ್

ಘನಮಾದ ಕಂಪಿನುಜ್ಜೀ
ವನಕರಮೋಗರದ ಕಂಪಿನಾಗರಮೆತ್ತಂ
ತನಿಗಂಪಿನ ನೆಲೆಮನೆ ತಾ
ನೆನಿಸಿದುದಿರುವಂತಿಯಲರ್ದ ಕುಸುಮಪ್ರಸರಂ  ೧೪

ಮಲ್ಲಿಗೆ ಕಡುಗೆಳೆಯನ್ನಂ
ಮಲ್ಲಿಗೆ ಸಂಪಗೆ ಬಿಸುಟ್ಟುದಿನಿಸಂಪಗೆಯಂ
ಗೆಲ್ಲಮೆನಗಾದುದೆಂದು ಱೆ
ಸೊಲ್ಲುತ್ತುಂ ಮದನನುದಿತಮದಭರನಾದಂ   ೧೫

ನೆಲಸಿರ್ದಳ್ ಮಾಣದೇ ನೋಳ್ಪರ ಮತಮ ಮಹಾಲಕ್ಷ್ಮಿಯೆಂಬೀ ಮದವ್ಯಾ
ಕುಳಿತಂ ತಾನಾಗಿ ಸೊಕ್ಕಿಮ್ಮಡಿಸಿ ಮಧುಪಸಂದೋಹಮಂ ಕೂಡಿಕೊಂಡಿ
ರ್ದಲರ್ದು ಕೀಳ್ಮಾಡಿ ಭಾಸ್ವದ್ಗುಣಮನಿಳೆಯೊಳುದ್ದಂಡಮಾಯ್ತಬ್ಜಷಂಡಂ
ಖಳಲಕ್ಷ್ಮೀಸಂಗದಿಂದಾವನೊ ಸೊಕ್ಕಿಯುದ್ದಂಡನಾಗಂ   ೧೬

ಪಱಮೆಗಳ ಕಿಱಿಯ ಮಱಿಗಳ್
ನೆಱೆಮಡುಗೊಂಡಿರ್ದ ಬಂದಿನಿಡುಕುಱೊಳಂ ಬಂ
ದೆಱಗಿ ತಂತಮ್ಮೊಳುಱೆ ಪರಿ
ಮಱಿಯಾಡುತ್ತಿರ್ದು ನೆಱಪಿದವು ತಾಯ್ಗಣುಕಂ          ೧೭

ವಿರಹಿಜನಹೃದಯವಿದಳನ
ಸರದರುಣಜಳಾಭಿರಂಜಿತಂ ಕಾಮನ ಕೂ
ರ್ಕರವಾಳ್ಗಳೋಳಿಯೆಂಬಂ
ತಿರಲಸುಕೆಯೊಳೆಸೆದುದಲಘುಪಲ್ಲವ ನಿವಹಂ೧೮

ತರುಗಳ ತುದಿಕೊಂಬುಗಳೊಳ್
ಬೆರಸಿರ್ದೆಳಲತೆಗಳೊಂದನೊಂದಂ ತಾಗು
ತ್ತಿರೆ ಸುಳಿವೆಲರಿಂ ಪೋಲ್ತುದು
ತರದಿಂ ಕೋಲ್ಪೊಯ್ತು ಕುಣಿವ ಪೆಂಡಿರ ಚೆಲುವಂ         ೧೯

ಅಗೆವೊಯ್ದು ಪೊತ್ತಿಸಿದ ದೀ
ವಿಗೆಗಳ್ ಕಾಮಾಧಿರಾಜನರಮನೆಯೊಳ್ ಕೈ
ಮಿಗೆ ಪಜ್ಜಳಿಸುವವೊಲ್ ಮೊ
ಗ್ಗೆಗಳೆತ್ತಂ ತೊಳಗಿ ಬೆಳಗಿದವು ಸಂಪಗೆಯೊಳ್   ೨೦

ಸೊಗಯಿಪ ಗುಚ್ಛಮೆಂಬ ಮೊಲೆ ಮಿಳ್ಳಿಸೆ ತೆಂಬೆಲರೆಂಬ ಸುಯ್ಯೆಲರ್
ಮಿಗೆ ಪೊಸಗಂಪಿನೇಳ್ಗೆ ಪಸರಂಬಡೆದೊಪ್ಪಿರೆ ಕಂಟಕಂ ಸಮಂ
ತೊಗೆದಿರೆ ಪೂತಪಾದರಿಯೊಳಂ ನೆರೆದತ್ತು ಮಧುವ್ರತಂ ಮನಂ
ಬುಗುವ ವಿಟಂ ಕರಂ ನಲಿದು ಪಾದರಿಯೊಳ್ ನೆರೆವಂತೆ ನಾಡೆಯುಂ೨೧

ಕಳಪಿಕಹಸ್ತಿಯಂ ಬಹಳಕೀರತುರಂಗಮಮಂ ರಥಾಂಗಸಂ
ಕುಳರಥಮಂ ಮಧುವ್ರತಪದಾತಿಕೆಯಂ ನೆಱೆಕೂಡಿಯಾಳ್ಗಳಂ
ಕಲೆಯಿಳಿವಾಗಳೆಂದೆನೆ ವಸಂತಚಮೂಪತಿ ಕಾಮದೇವನೆಂ
ಬಿಳೆಗಧಿಪಂಗೆ ಸವ್ವರಣೆದೋಱಿಸಿದಂ ವನರಾಜಗೇಹದೊಳ್        ೨೨

ಎಲೆ ಸಹಕಾರ ನೀಂ ಸೊನೆಯ ಸೋನೆಗಳಂ ಕಱೆದಾಱಿಸೀಗಳ
ಗ್ಗಲಿಸಿದ ರುದ್ರನೊಳ್ ನೊಸಲ ಕಣ್ಣುರಿಯಂ ಕಡುಕೆಯ್ದಶೋಕ ನೀಂ
ಸಲೆ ತಳಿರೆಂಬ ಕೂರಲಗಿನಿಂ ಹರನಂ ಕೆಡೆ ಕುತ್ತಿ ನೂಂಕೆನು
ತ್ತಲಘುಪರಾಕ್ರಮಂ ಮದನನೀಕ್ಷಿಸಿದಂ ಮಿಗೆ ತನ್ನ ಸೈನ್ಯಮಂ       ೨೩

ವ : ಆಗಳ್

ಎನ್ನಯ ವೈರಿಯಪ್ಪ ಮದನಂಗೆ ಬಲಂ ನೆಱೆಕೂಡಿದತ್ತು ಮ
ತ್ತಿನ್ನೆನಗೇನಪಾಯಮನೊಡರ್ಚುವನೆಂದಱಿಯಲ್ಕೆ ಬಾರದೆಂ
ಬುನ್ನತಚಿಂತೆಯಿಂದೆ ಗಿರಿಶಂ ಮರುಳಾಗಿ ತೊಳಲ್ದು ಶೂಲಿಯಾ
ದಂ ನರನಾವನೋ ಪಗೆಯ ಪೆರ್ಚುಗೆಯಂ ನಡೆನೋಡಿ ಸೈರಿಪಂ     ೨೪

ವ : ಇಂತು ವಸಂತಸಮಯಂ ನಂದನವನದೊಳಾನಂದದಿಂ ವಿಹಾರಿಸಿ ವನಶಬ್ದಸಮಭಿದೇಯ ಮಪ್ಪುದಱಿಂ ಪಥಿಕಜನಮೃಗಮೃಗಯಾವಿನೋದಾರ್ಥಮೆನ್ನಲ್ಲಿಗೆ ಬಂದಪನೆಂದು ಕಾಂತಾರಕಾಂತೆ ಕಂಚನಾರದ ಚಂಪೆಯಮಂ ತಿಳಕದ ತಿವುರಿಯಂ ಸರಳದ ಚಾರಿಯಂ ಬಕುಳದ ಗುಡಿಯಂ ನಿರ್ಮಿಸಿದ ಪೊಸಸಿಬಿರಮೆಂಬಂತಿರಿಂಬು ವಡೆದ ಮಹಾವಿಪಿನ ಪ್ರದೇಶದೊಳ್

ಸೊಂಪೇಱಿತ್ತು ಕುಜಾತಿಗೆ
ಪೆಂಪೋಡಿತ್ತುಮಮ ಜಾತಿಗದವೆಯರೆರ್ದೆ ಗದ
ಗಂಪಂಗೊಂಡುದು ಮಧುಮಾ
ಸಂ ಪುಗೆ ದುರ್ನೀತನೃಪನ ರಾಜ್ಯದ ತೆಱದಿಂ     ೨೫

ವ : ಅದಱೊಳ್

ಸ್ಮರಚಕ್ರಾಧೀಶ್ವರಂ ದಿಗ್ವಿಜಯವಿರಚನಾಕಾರನಂ ಬಾಹ್ಯದೇಶಾಂ
ತರದೊಳ್ ಪೊಯ್ಸಿಟ್ಟ ಕೆಂಬಟ್ಟೆಯ ಪೊಸಗುಡಿಯೆಂಬಂತೆ ಮತ್ತಂ ವಿಯೋಗಾ
ತುರರೆಂಬೇಣಂಗಳಿಂದಂ ದವದಹನದ ಭಾಸ್ವನ್ಮಹೋಜ್ವಾಲಿಕಾ ಮಂ
ಜರಿಯೆಂಬಂತೆಯ್ದೆ ಪೂತಿರ್ದುದು ಬಹಲವಿಶಾಲೋತ್ಪಲಾಶಂ ಪಲಾಶಂ     ೨೬

ತುಂಬಿಗಳ ಬಳಗಮುಱೆ ಬಂ
ಡುಂಬೆಡೆಯೊಳ್ ತೋರಹೊನ್ನಹರಿಯಾಣಂಗಳ
ನಿಂಬಾಗಿರಿಸಿದ ತೆಱದಿಂ
ದಂ ಬಗೆಗೊಳಿಸಿದವು ಕೊಸಗಿನಲರ್ಗಳ್ ಪಿರಿದುಂ            ೨೭

ನನೆವೊತ್ತಿತ್ತದಿರ್ಗುಂತೆ ಪಲ್ಲವಿಸಿದತ್ಯದ್ಯತ್ತಮಾಳಂ ಕರಂ
ಕೊನರೇಱಿತ್ತುರು ಪಿಪ್ಪಳಂ ಮುಕುಳಮಂ ತಾಳ್ದಿತ್ತು ಪುನ್ನಾಗಮೆ
ಯ್ದೆ ನಯಂಬೆತ್ತುದು ಹೊನ್ನೆ ಪೂಗುಡಿಗಳಂ ಪೇಱಿತ್ತು ಸತ್ಕೇಸರಂ
ಘನತಾರಾಂಕುರಭಾರಮಂ ಕುರವಕಂ ಪೆತ್ತತ್ತು ಕಣ್ಗೊಪ್ಪದಿಂ       ೨೮

ವ : ಅಂತು ನಿರವಶೇಷ ವರನಾರೀಜನಂಗಳಿಂಗೆ ಸಮೀಹಿತಸುಖ ಮೆಂಬಮೃತದ ಪೂರಮಂ ನೆಱೆಕಱೆದು ತಣಿವನೀವುತ್ತುಮಿರ್ದ ಸುರಭಿಯೆಂಬಂತೆ ಬಂದ ನಿರತಿಶಯ ಸುರಭಿಸಮಯಶ್ರೀಯ ವಿಜೃಂಭಣಮೆಲ್ಲೆಡೆಯೊಳಂ ಪರಕಲಿಸಿ ನಿಬಿಡಮಾಗಿ ಪಸರಿಸುವುದುಂ

ಪೆರ್ಚೇ ಪೆರ್ಚಾಗಿ ಬಾಳ್ವೆಮ್ಮಯ ಕಮಳತನೂಜಂಗಮೀ ರಾಜನಿಂದಂ
ಪೆರ್ಚುತ್ತಿಕ್ಕಚ್ಚಿಗಂ ನೋಳ್ಪನಿತು ಸಮನಿಸಿತ್ತೆಂಬ ಸಂತಾಪಮುಂ ಮೆ
ಯ್ವೆಚ್ಚಲ್ ತಟ್ಟಾಱುತಿರ್ದತ್ತೆನೆ ಪ್ರಥುಳಸರಸ್ಸಂಕುಳಂ ಕಂಠದಘ್ನಂ
ಬಿಚ್ಚಿತ್ತಾ ನಾಭಿದಘ್ನಂ ತಡೆಯದೆ ಕಟಿದಘ್ನಂ ಕರಂ ಜಾನುದಘ್ನಂ೨೯

ವನಜಳಕೇಳಿಗೆಯ್ದೆ ತೆಱಪಂ ಕುಡಲೆಂಬಿನಮಾಕ್ಷಣಂ ಪಗಲ್
ಘನತರಮಾದಿದಂದಿನಿರುಳಂ ಕಿಱಿದಾದುದು ಪದ್ಮಿನೀವಿಕ
ರ್ತನನ ವಿಯೋಗದುಃಖಮನಡಂಗಿಸಲೆಂಬಿನಮುತ್ತರಾಯಣಂ
ದಿನಪತಿಗಾದುದಂದೊಲಿದುದೆಂಬಿನೆಗಂ ಮಳಯಾದ್ರಿವಾಯುವಿಂ   ೩೦

ಅವಿರಳಮಾದ ಬೆಳ್ಪನೊಳಕೊಂಡು ವಿಜೃಂಭಿಸಿದತ್ತು ಚಂದ್ರಿಕಾ
ನಿವಹಮಗಲ್ದ ನಲ್ಲಳನಪೇಕ್ಷಿಪ ಕಾಮುಕವಕ್ತ್ರದಂತೆ ತೀ
ವ್ರವನವಳಂಬಿಸಿರ್ದ ಬಿಸಿಲಪ್ರಸರಂ ಕಡುಗಾಯ್ಪುವೆತ್ತುದೀ
ಭುವನದೊಳಿಂದ್ರಿಯಂಗಳದಿದರ್ಪ ವಿಸರ್ಪಣದಂತೆ ಚೈತ್ರದೊಳ್   ೩೧

ಪೊಸಮಸೆಯೇಱಿ ಪುಷ್ಪಸರಮಾದುದು ಕೂರಿತು ಕರ್ವುವಿಲ್ಲುಮು
ಬ್ಬಸಮೆನಿಸಿರ್ದ ಬಲ್ಪನೊಳಕೊಂಡುದು ತುಂಬಿಯ ನಾರಿ ತೀಕ್ಷ್ಣದಿಂ
ದಸದಳಮಾಯ್ತು ಸರ್ವಬಲಸೇವಿತನಾಗಿ ಮನೋಜರಾಜನ
ರ್ವಿಸಿ ಬಿಡದೆರ್ಚು ಸೋಲಿಸಿ ಜಗತ್ರಯಮಂ ವಶಮಾಗಿ ಮಾಡಿದಂ  ೩೨

ವ : ಇಂತು ನಿರಂತರಿತ ಸಂತೋಷಸಂತಾನಮನೆಲ್ಲರ್ಗೆ ಸಂಪಾದಿಸುತ್ತುಂ ಬಂದ ವಸಂತಸಮಯದೊಳ್ ಪಿರಿಯ ಸಿರಿಗೆ ಕರುವೆನಿಪ ಕರುಮಾಡದ ಪಿಂದಣಭಾಗಕ್ಕೆ ಪರಭಾಗಮಾಗಿ ನಳನಳಿಸುವ ಶಿವಂಕರೋದ್ಯಾನದ ನಟ್ಟನಡುವಣ ದಿಶಾವಲೋಕನ ಪ್ರಾಸಾದಮಾದ ಸರ್ವತೋಭದ್ರಮೆಂಬೇಳನೆಯ ನೆಲೆಯ ಮಣಿಮಾಡದ ಮಧ್ಯ ವೇದಿಕೆಯ ಮೇಲಣ ಬಿತ್ತರಂಬೆತ್ತ ಮುತ್ತಿನ ಮಂಡಪದಲ್ಲಿ ಪರಿಹಾಸಕರ ನರ್ಮಸಚಿವರ ಕಬ್ಬಿಗರ ಕಳಾವತಿಯರ ಸುರಭಿಸಮಯ ಸಮುತ್ಕರ್ಷಸಮುಚಿತ ಚತುರವಚನರಚನಾ ಪ್ರಸಂಗಮೆಸೆವಪರಿಮಿತಮಾದ ವಿಳಾಸವತಿಯರೋಲಗದೊಳ್ ಶೃಂಗಾರವತೀದೇವಿ ಕುಳ್ಳಿರ್ದು ಪಟ್ಟಗದ್ದುಗೆಯರ್ಧದೊಳಾಕೆಯನೌಂಕಿ ಸೋಂಕಿ ಕುಳ್ಳಿರ್ದು ಧರ್ಮನಾಥ ಮಹಾರಾಜಂ ಕಡುನಿಮಿರ್ದ ನೀಳ್ದ ತನ್ನಯ ನಿಕಾಮಕೋಮಳವಾಮತರಬಾಹು ದಂಡಕಾಂಡಮನರಸಿಯೆಡದ ಪೆಗಲೊಳ್ ಮಡಂಗಿ ವಿಸ್ತೃತಹಸ್ತತಳದಿಂ ವೃತ್ತಸ್ತನ ಮಂಡಳದೆಡೆಯಂ ಕುಪ್ಪಳಿಸುತ್ತುಮಿರ್ಪ ಪೊತ್ತಿನೊಳ್

ಆದೇವಿ ನುಡಿದು ನೀಡುವ
ಮೇದುರತಾಂಬೂಳದಳಮೃಣಾಳಶಕ [ಲ]ಮಂ
ಕಾದಲನ ದಂತಹಂಸಮ
ದಾದರಿಸಿ ಕರ್ದುಂಕೆ ಕಬಳಿಸಿತ್ತಾಕ್ಷಣದೊಳ್       ೩೩

ವ : ಮತ್ತಮಾ ಪಟ್ಟಮಹಾದೇವಿಯ ಬಲದ ನೆಲೆಮೊಲೆಯ ಪರಸ್ಪರ್ಶಹರ್ಷ ಪುಳಕಿತಮಾದ ಕ್ಷತ್ರಿಯಕುಳತಿಳಕನ ವಕ್ಷಸ್ಥಳಂ ಕುಂಕುಮಕರ್ಪೂರಂ ಬೆರಸಿದ ಚಾರುಹರಿಚಂದನ ಚರ್ಚೆಯೊಳೊಂದಿ ತಣ್ಪಿನ ಪೊಂಪುಳಿಯ ಸುಖದ ಸುಗ್ಗಿಯ ಹರವರಿಯಾಗಿರ್ಪುದುಮಾಗಳ್

ಕಸ್ತೂರೀಸಾರದಿಂದಂ ಬರೆದ ಮಕರಿಕಾಪತ್ರಮೆಂಬಂಕದಿಂದಂ
ವಿಸ್ತಾರಂವೆತ್ತ ತದ್ದೇವಿಯ ನಗೆಮೊಗಮೆಂಬಿಂದುಬಿಂಬಂ ಪಳಚ್ಚಲ್
ವಿಸ್ತೀರ್ಣಾಪಾಂಗಮೆಂಬುರ್ವೊದವಿದಱ ಬೆಳ್ದಿಂಗಳಂ ಪೀರ್ದು ಪೀರ್ದುಂ
ಪ್ರಸ್ತುತ್ಯೋತೃಪ್ತಿಯಿಂದಾತನ ನಯನಚಕೋರಂಗಳೊಲ್ದಿರ್ದವಾದಂ         ೩೪

ವ : ಅಂತು ಚರಾಚರಜಗದ್ವಲ್ಲಭಂ ನಿಜಪ್ರಾಣವಲ್ಲಭೆಯ ಕೆಲದೊಳಿರ್ದು ದಿಶಾಶೋಭಾ ವಳೋಕನಂಗೆಯ್ವಾಗಳ್ ತನ್ನಯ ಕಣ್ಬೊಣರಿನಿಂಬುವಡೆದು ಸನ್ನಿದಮಾದ ನಂದನಶ್ರೀಯಂ ಮನ್ನಿಸುವಂತೆ ನೀಡುಂನೋಡುತ್ತುಮಿರ್ಪುದುಮಾ ಪೊತ್ತಿನೊಳೋಲಗದ ಮಾಲಾಕಾರಕರ ವನಪಾಲಕರ ಕುಮಾರಿಕಾನಿಕರಂ ಪೊಸಗಂಪನುಗುಳ್ವ ಕುಸುಮಮಾಲಾ ವಿಸರದ ಶೃಂಗಾರದ ಬೆಡಂಗನಂಗೀಕರಿಸಿ ವನಲಕ್ಷ್ಮಿ ಶಂಕೆಯನಂಕುರಿಸುತ್ತುಂ ಬಂದು ಸುರಭಿಪರಿಮಳವಿಳಾಸಮನೆಸಗುತ್ತುಮಿರ್ದ ಸುರಭಿಸಮಯದ ಪಲತೆಱದ ಪೂಮಾಲೆಗಳಂಳ ತಂದು ಕಾಣಿಕೆಗೊಟ್ಟು ಪೊಡವಟ್ಟು ಭೂಪಾಲಭ್ರೂಲತಿಕಾಚಾಲನದಿಂ ಸಂಕೇತಿತ ಸ್ಥಾನದೊಳ್ ಕುಳ್ಳಿರ್ದು ಬಳಿಯಮಾ ಕುಮಾರಿಕಾ ನಿಕರದೊಳಗೆ ಮುಖ್ಯರಪ್ಪ ವಸಂತಮಾಲೆಯಂ ಕಾಮಲತೆಯುಮೆಂಬ ಮೇಳದ ವಿಳಾಸಿನಿಯರ್ ತಜ್ಜಾತಿಯಾದ ಚತುಃಪದೀ ಭೂತಛಂದೋವೃತ್ತಪಠನಮುಖದಿಂ ವಸಂತಕಾಲದ ಬರವಂ ಜಾಣಶಿರೋಮಣಿಗಱಿಪಿ ಮನಂಬಡೆದ ಬಗೆಯಿಂದೆಳ್ದು ತತ್ಪಾದಪೀಠೋಪ ಕಂಠಮನೆಯ್ದಿ ಮಾವಿನ ತನಿವಣ್ಣಂತೆ ರಸಂಬಡೆದು ತಾವು ವಿರಚಿಸಿದ ವಸಂತವಿಹರಣಮೆಂಬ ನಾಟಕದೊಳಗೆ

ಕಿವಿಗಿಂಬಾಗೆ ವಸಂತರಾಗದೆಸೆವೊಂದಾಳಾಮುತ್ಪ್ರೇಕ್ಷೆಯು
ತ್ಸವಮಂ ಪುಟ್ಟಿಸೆ ಬಂದು ಮುಂದೆ ನಲವಿಂ ನಿಂದಿರ್ದು ಬೇಱೊಂದು ಸು
ಚ್ಛವಿಯಿಂದೋದಿದರಿರ್ಬರುಂ ಪುಳಕಮೆಲ್ಲರ್ಗೇಳ್ವಿನಂ ಮೆಯ್ಯೊಳು
ಕ್ತ ವಸಂತಾಗಮನಪ್ರವೇಶಪರಿಶೋಭಾಪದ್ಯಮಂ ಪದ್ಯಮಂ         ೩೫

ತಳಿರಿಂ ಕೆಂಪಾಗಿ ಪೂವಿಂದಮೆ ಕಡುಬಿಳಿದಾಗಿ ಭ್ರಮನ್ಮತ್ತಭೃಂಗೀ
ಕುಳದಿಂ ಕಪ್ಪಾಗಿ ಪತ್ರಾವಳಿಯಿನುಱೊ ಪಸುರಾಗಿ ಪ್ರಪಕ್ಷೋರುಹೃದ್ಯೋ
ತ್ಪಳದಿಂ ಹೊಂಬಣ್ಣಮಾಗಿರ್ದೆಸೆದುದಸದಳಂ ನಂದನಂ ಚೈತ್ರನೆಂಬ
ಗ್ಗಳಜಾಣಂ ಚಿತ್ರಿಕಂ ಚಿತ್ರಿಸಿದ ಮದನಚಕ್ರೇಶನಾಸ್ಥಾನದನ್ನಂ       ೩೬

ವ : ಇಂತುಬಂದ ಬಸಂತಕಾಲದೊಳ್ ಪರಮಾನಂದಮನಪ್ಪುಕೆಯ್ದು ಕೆಯ್ಗೆಯ್ವು ವನಲಕ್ಷ್ಮಿ ಯೆಂತಿರ್ದಳೆಂದೊಡೆ

ತಿಳಕಂ ಕಾಂತಾಕಟಾಕೇಕ್ಷಣಮನಸುಕೆ ನಾರೀಪದಾಘಾತಮಂ ಮಂ
ಜುಳಯೋಷಿದುಗ್ಧಗಂಡೂಷರಸಮನುರುಚಾಂಪೇಯಕಂ ಕಾಮಿನೀಮಂ
ಗಳವಕ್ಷೋಜಾತಲಿಂಗನಮನೆ ಕುರವಂ ಕಾಂಕ್ಷಿಸುತ್ತಿರ್ದುದೆಂದ
ಗ್ಗಳದುದ್ಯಾನಂ ಪಿಕೋದ್ಘೋಷಣದೆ ಕರೆವವೋಲ್ ಬಿ‌ನ್ನಪಂಗೆಯ್ದು ನಿಮ್ಮಂ        ೩೭

ವ : ಎಂದು ವನವಿಹರಣವಿನೋದಕಾರಣ ನಿಮ್ಮಡಿಗಳ್ ಬಿಜಯಂಗೆಯ್ಯಲ್ ಬೇಕೆಂದು ಕಿವಿಗೆ ಸವಿಯನೊದಯಿಸುವ ಮಧುಮಾಸವ್ಯಾವರ್ಣನಮಂ ಪೇಳ್ವ ನಿರವದ್ಯ ಪದ್ಯಮ ನೋದುವ ವ್ಯಂಗೋಕ್ತಿಯ ನೆವದಿಂ ವ್ಯಂಗ್ಯಂ ಭಂಗಿನಿಧಾನಂಗೆ ಬಿನ್ನಪಂಗೆಯ್ಯೆ ಕೌತುಕಾಯಮಾನಮಾನಸನಾಗಿ

ಪಿರಿದುಂ ರೀತಿ ವಿನೂತಮಾಯ್ತು ಸದಳಂಕಾರಂ ಮನಂಗೊಂಡುದು
ದ್ಧುರವಿಶ್ರಾಮದೊಳೆಯ್ದೆ ಠಾಯೆ ಸೊಗಸಿತ್ತೊಳ್ಮಾತು ಸೇರಿತ್ತು ಭಾ
ವರಸನ್ನೂತನಮಾದುದೆಂದು ತಲೆದೂಗುತ್ತುಂ ಪೊಗಳ್ದಿತ್ತನಾ
ದರದಿಂ ಮೆಚ್ಚಿ ಪಸಾಯಮಂ ತಣಿವವೋಲಿರ್ಬರ್ಗಮಾ ಪಾರ್ಥಿವಂ            ೩೮

ವ : ಬಳಿಯಮಾ ಸಭಾವಾಸಿಗಳೆಲ್ಲಂ ಕರಾಂಗುಳಿಚಾಳನಕ್ರಿಯಾವಿಳಾಸಂ ದೆಸೆವಡೆಯೆ ಲೇಸುಲೇಸೆಂದು ಕೊಂಡಾಡಿ ವನಕ್ರೀಡೆಗುನ್ಮುಖೀಕರಣವಚನಂಗಳಿಂದಭಿ ಮುಖಂಮಾಡಿದಗಳಾ ಸಭಾಮಾಣಿಕ್ಯದೀಪಾಂಕುರಂ ಕಡುನಲವಿಂದಾ ಲಲನಾಕುಲ ಲಲಾಮೆಯ ನಗೆಮೊಗಮಂ ನೋಡಿ ಮಿಸುಪ ಪೊಸಮಿಸುನಿಯಂ ಸಮೆದು ಮಸೃಣ ಮಣಿ ಕೇವಣದಿನಸದಳಮೆಸೆವ ಪವನಪರ್ಯಟನವಶದಿಂ ಪರಕಲಿಸಿಯೊಪ್ಪುವಾಕೆಯ ಸುಳಿಗುರುಳಂ ತನ್ನಯ ಸೆಳ್ಳುಗುರಿಂ ಲಲಾಟಪಟ್ಟದೊಳ್ ಮೆಯ್ವಳಿಯಿಂತಿರ್ದುತ್ತು ಮಿಂತೆಂದಂ

ಲಲಿತಚ್ಛಾಯೆಯೊಳೊಂದಿ ವಿಭ್ರಮದಗುರ್ವಂ ತಾಳ್ದಿ ಸತ್ಕಂಟಕಾ
ವಳಿಯಿಂದೊಪ್ಪಿ ಲಸತ್ಪ್ರವಾಳಚಯದಿಂ ಚೆಲ್ವಾಗಿ ನಿನ್ನಂತೆ ರೂ
ಪಳವಟ್ಟಾ ವನಲಕ್ಷ್ಮಿ ತನ್ನ ಸಿರಿಯಂ ನೋಡಲ್ಕೆಲೇದೇವಿ ಕೋ
ಕಿಳಸಂರಾವದಿನೊಪ್ಪುತಿರ್ದುದು ಕರಂ ನಿನ್ನಂ ಬರಲ್ವೇಳ್ವವೋಲ್೩೯

ನಿನ್ನ ಕಟಾಕ್ಷವೀಕ್ಷಣದ ನುಣ್ಬೆಳಗಿಂ ಕಿಡಿಸಂಧಕಾರದೊಂ
ದುನ್ನತಿಯಂ ಮರಂಗಳೆಡೆಯಲ್ಲಿ ಕರಂ ತೆಱಪಾದ ತಾಣಮಂ
ನಿನ್ನಯ ಪಾದಪಲ್ಲವದ ಕೆಂಬೆಳಗಿಂ ತಳಿರೇಳಿಸಿಂತುಂ ಸಂ
ಪನ್ನತೆ ನಂದನಕ್ಕೆ ಪರಿಪೂರ್ಣಮೆನಿಕ್ಕು ಬಳಿಕ್ಕಮೋಪಳೇ೪೦

ನುಡಿಯಿಂ ಮುಡಿಯಿಂ ನಡೆಯಿಂ
ತಡೆಯದೆ ಕೋಗಿಲೆಗೆ ತುಂಬಿಗಂಚೆಗೆ ಮದಮಂ
ಕಿಡಿಸಿ ಸಡಗರಮನೆನಗೆ
ಯ್ದೊಡರಿಸು ನಡೆ ನಂದನಕ್ಕೆ ಪಂಕಜವದನೇ     ೪೧

ವ : ಎಂದು ಶ್ರವಣರಮಣೀಯಮಪ್ಪ ನುಡಿಯಂ ಧರಣೀರಮಣಂ ನುಡಿಯ ಲೊಡಮಾ ರಮಣಿಯುಮುಪಚಿತ ಪರಿಹಾಸವಚನಲೀಲಾದ್ಯನುಭಾವಂಗಳಿಂದೊಡಂ ಬಟ್ಟುದಂ ನಿಟ್ಟೆಗೊಳಿಸಲಾಕೆ ತನ್ನಯ ಭಂಗುರಾಪಾಂಗರೋಚಿಃಕಳಿಕೆಯೆಂಬ ಸಮೀಚೀನ ಚೀನ ಚೇಳಮನಾ ಪ್ರಿಯಸಂಭಾಷಣಭೂಷಣಂಗಂಗಚಿತ್ತಮನೀಯಲೊಡಂ

ಪೊಸಗಂಪಂ ಕೆದಱುತ್ತುಮಿರ್ದ ವರಮಲ್ಲೀಮಾಲೆಯಿಂದಂವಿರಾ
ಜಿಸಿ ಮೂಲೋಕದೊಳತ್ಯಪೂರ್ವತಮರೂಪಂ ತಾಳ್ದಿ ಸದ್ಗಂಧದಿಂ
ದೆಸೆಯಲ್ ತಣ್ಪು ವಸಂತನುಂ ಮದನನುಂ ಶೀತಾಂಶುವುಂ ಕೂಡಿ ಸಂ
ತಸದಿಂದಂ ವನಕೇಳಿಗೇಳ್ವ ತೆಱದಿಂದೆಳ್ದಂ ಮಹೀಮಂಡನಂ          ೪೨

ವ : ಅಂತಾ ದೇವಿಯರೋಲಗದ ಮಂಡಪದಿನೆಳ್ದು ನೆಲೆಮಾಡದಿಂದಿಳಿದು ಪೋಗಿ ಲಕ್ಷ್ಮೀಮಂಡಪದ ಮುಂದಣ ಮೊಗಸಾಲೆಯೊಳ್ ನಿಂದು ವನವಿಹರಣಕೇಳೀ ವಿನೋದಯಾತ್ರಾನಿಮಿತ್ತಮಾನಂದಭೇರಿಯಂ ಪೊಯ್ಸಿದಾಗಳ್

ಎಸೆವಿಂ ಮನ್ಮಥಚಕ್ರವರ್ತಿ ಬನದೊಳ್ ಬಿಟ್ಟಿರ್ದನಾತಂಗಮಾ
ಳ್ವೆಸನಂಗೆಯ್ದು ಬರ್ದುಂಕಿ ಕಾಣ್ಬುದು ನಿಮಿತ್ತಂ ಪೋಗಿ ಮಾಣ್ದಿರ್ದೊಡು
ಬ್ಬಸಮಂ ಮಾಡದೆ ಮಾಣನೆಂದು ನಡೆತಂದೆಲ್ಲರ್ಗೆ ಪೇಳ್ವಂದದಿಂ
ಪಸರಂಬೆತ್ತುದು ಧರ್ಮನಾಥಗಮನಪ್ರಸ್ಥಾನಭೇರೀರವಂ            ೪೩

ವ : ಆ ಭೇರಿಯ ಭೂರಿವಿರಾವಂ ದಶದಿಶಾವಿವರಾಂತರಾಳಮನಾವರಿಸು ತ್ತುಮಿರಲಾಗಳಾ ರತ್ನಪುರದ ನಿರವಶೇಷಪುರುಷಪರಿಷದನಂತಸೀಮಂತಿನೀಸಂತತಿಗಳೆಲ್ಲ ಪರಿಪರಿಯ ಬಣ್ಣವಣ್ಣಿಗೆಯಿಂ ರಂಗಂಬಡೆದ ಕಡುಬೆಲೆಯಂ ತಿಣ್ಣಮಾದ ಸಣ್ಣಸೀರೆಗಳನ್ನುಟ್ಟು ನವವಿಧಮಣಿಕೇವಣದಿಂ ರಮಣೀಯಮಾಗಿ ಥಳಥಳಿಸಿ ಪೊಳೆವ ನವೀನಾಭರಣಂಗಳಂ ತೊಟ್ಟು ಕಂಪಿನ ಕರಂಡಕಮಾದ ರಾಗಾವಿಳವಿಳಸದಂಗರಾಗಾನು ಲೇಪನಂಗೆಯ್ದು ಪೊಸತಾಗಿ ಕೈಗೆಯ್ದು ಬಂದರಮನೆಯ ರಾಜಾಂಗಣದೊಳ್ ನಿಂದಿರ್ಪುದುಂ

ಪಣ್ಣಿದ ಪಟ್ಟವರ್ಧನಮದೇಭಮನೇಱಿ ನರೇಂದ್ರಕುಂಜರಂ
ಬಣ್ಣಿಸೆ ಪಿಂದೆ ಬಂದೊಡನೆ ಪಟ್ಟದರಾಣಿಯುಮಾಗಳೇಱಿದಳ್
ಪೆಣ್ಣುಗಳೆತ್ತಲುಂ ಪರಸೆ ರೋಹಿಣಿಚಂದ್ರನ ಪಿಂದೆ ಮೇಘಮಂ
ತಿಣ್ಣಮೆನಿಪ್ಪುದಂ ತಡೆಯದೇಱುವವೋಲೊಳಕೊಂಡು ರಾಗಮಂ  ೪೪

ವ : ಆಗಳ್

ಆನೆಯ ಮೇಲೆ ನಾಲ್ಕುಕೆಲದೊಳ್ ನೆಲಸಿರ್ದೊಲವಿಂದೆ ಬೀಸಿದರ್
ಮಾನಿನಿಯರ್ ಕನತ್ಕನಕದಂಡ ಚತುಸ್ಸಿತಚಾಮರಂಗಳಂ
ಪೀನತರಂಗಳಾದ ಪೊಸಮುತ್ತುಗಳಿಂ ಸಮೆದಿರ್ದ ಪಲ್ಲವೋ
ತ್ತಾನದ ಚೌಕಸತ್ತಿಗೆಗಳಂ ಪಿಡಿದಿರ್ದರಿನಂಗೆ ಲೀಲೆಯಿಂ    ೪೫

ವ : ಸಮನಂತರಂ

ರಾಜಕುಮಾರರಾನೆಗಳನೇಱಿ ರಥಂಗಳನೇಱಿ ಸೂಳೆಯರ್
ವಾಜಿಗಳಂ ಪ್ರಧಾನರಿರದೇಱಿ ಪುರಂಧ್ ರಿಯರೇಱಿ ಕೇಸರಿ
ವ್ರಾಜಮನುದ್ಘತಂ ಪಿಡಿಯ ಪಿಂಡುಗಳಂ ಪಿಡಿದೇಱಿ ರಾಣಿಯರ್
ಪೂಜಿತರಾಗಿ ನಿಂದರಧಿರಾಜನ ಸುತ್ತಲುಮುಣ್ಮೆ ಸಂಭ್ರಮಂ         ೪೬

ಮಂಗಳ ನಾನಾವಿಧ ತೂ
ರ್ಯಂಗಳ ರವಮುಣ್ಮಿ ಪೊಣ್ಮಿ ಪತ್ತುಂದೆಸೆಯಂ
ಪಿಂಗದೆ ದಿಂಕಿಡಿಸುತ್ತಿರೆ
ತುಂಗಮನಂ ಧರ್ಮನಾಥನಲ್ಲಿಂ ತಳರ್ದಂ       ೪೭

ಎಳೆವಱೆಯಂತಿರೆ ಚೆಲ್ವಂ
ತಳೆದುಜ್ವಳಿಸುತ್ತುಮಿರ್ದ ವಜ್ರಾಂಕುಶದಿಂ
ದಿಳೆಗಧಿಪನೊತ್ತಿ ನೂಂಕಿದ
ನಳಿಗಳ ಬಳಸಿಂದಮೆಸೆವ ಪಟ್ಟದ ಗಜಮಂ      ೪೮

ವ : ಅಂತು ತಳರ್ವುದುಂ ತಾವೇಱಿದ ವಾಹನಂಗಳಂ ತಿರಿಪಿ ರಾಜಾಂಗಣದೊಳ್ ಸಂದಣಿಸಿ ನಡೆವ ಮಹಾರಾಯರ ಮಕ್ಕಳ್ಗಳ ಸಿವಿಗೆಗಳ ಬಳಗಂಗಳುಂ ಪಡಿಯಱರ ಪರಿಹಾಸಕರ ಕಬ್ಬಿಗರ ಕಳಾವಲ್ಲಭರಂದಣಂಗಳ ಗೊಂದಣಂಗಳ್ ಮಂದೈಸಿ ನೆರೆದರ ಮನೆಯ ಬಾಗಿಲ್ವಾಡದೊಳ್ ತಿಂತಿಣಿಗೊಂಡು ಮೆಲ್ಲಮೆಲ್ಲನೊರಸೊರಸಿಂ ಪೊಱಮಟ್ಟಂ ಗಡಿಗೇರಿಯೊಳ್ ನಡೆವಾಗಳ್

ಪಿಂಗದೆ ಚೆಲ್ವ ಪೀಲಿದಳೆಯೊಡ್ಡುಗಳಿಂ ಪಸುರಾಗಿ ಪುಲ್ಲಿಯೊ
ಳ್ದೊಂಗಲ ಶೋಭೆಯಿಂದೆ ತಳಿರಾಗಿ ವಧೂಸದಪಾಂಗರೋಚಿಯಿಂ
ಮಂಗಳಮಾದ ಪೂಗುಡಿಗಳಾಗಿ ನೃಪಂ ನಡೆವಲ್ಲಿ ಕೂಡೆ ತ
ಳ್ತಂಗಡಿವೀಧಿ ಚೈತ್ರವನಮೆಂಬಿನಮಾಂತುದಗುರ್ವನಾಕ್ಷಣಂ          ೪೯

ವ : ಆ ನೃಪಾಳೋತ್ತಮಂ ಸುತ್ತಲುಮೊತ್ತುವ ತುಷಾರಸೀಕರಾಸಾರದ ಸಿಂಪಿಣಿಯ ಪೊಂಪುಳಿಯಂ ನಿಲ್ಲದೆಲ್ಲಿಯುಂ ಸುಳಿವ ಗರಗವಳ್ಳರ ಕೆಯ್ಯ ಪೀಲಿಗರಗಂಗಳ ಕಂಪಿನ ತಣ್ಪಿನಣ್ಪನೊಳಗೊಂಡ ಜಳಧಾರಾಮೋಚನವಿಜೃಂಭಣಮನೊಪ್ಪಂಬಡೆದುಪ್ಪರ ಗುಡಿಗಳ ವಿಸರ್ಪಣಮಂ ನೀಡುಂನೋಡಿ ನಗುತ್ತುಂ ಪೋದೆಡೆಯೊಳ್

ಪಿಂದೆ ಕುಳ್ಳಿರ್ದ ದೇವಿಯ
ನಂದು ನೃಪಾಳಂ ಮಲಂಗೆ ಕಳಶಕುಚಂಗಳ್
ಸಂಧಿಸೆ ಬೆನ್ನಂ ಸೋಂಕಲ್
ಕುಂದದ ಸುಖದಿಂದಮೊಂದಿ ತಣ್ಣನೆ ತಣಿದಂ    ೫೦