ಪೇರುರದಲ್ಲಿ ಪಜ್ಜಳಿಪ ಹಾರಮರೀಚಿಗಳುಂ ಕಪೋಳವಿ
ಸ್ತಾರದೊಳೆಯ್ದೆ ರಂಜಿಸುವ ಕುಂಡಳವಜ್ರಮಯೂಖಮಾಳೆಯುಂ
ಚಾರುಕಿರೀಟರತ್ನಘನಕಾಂತಿಗಳುಂ ಬೆರಸಿರ್ದು ಸುತ್ತಲುಂ
ಮಾರನ ಬಿಲ್ಗಳಂ ರಚಿಸಲಂಗಜನೆಂಬಿದನುಂಟುಮಾಡಿದಂ            ೫೧

ವ : ಮತ್ತಮವರವರ್ಗೆ ಪಿಡಿದ ಝಲ್ಲರಿಗಳ ಪಲ್ಲವಸತ್ತಿಗೆಗಳ ಬೆಳ್ಗೊಡೆಗಳ ತಳೆಗಳ ತಣ್ಣೆಳಲೊಳ್ ಬಪ್ಪಂತಃಪುರಕಾಂತೆಯರ ಸಕಳಕಳಾಸಂಪನ್ನೆಯರಪ್ಪ ಕನ್ನೆಯರ ಗಾಯಕವಾದಕ ನರ್ತಕಾದಿ ಕಳಾಕೋವಿದರ ನಟ್ಟನಡುವೆ ಬರುತ್ತುಮಿರ್ದ ಮರ್ತ್ಯ ಪತಿಯಂ ಮೊತ್ತೊಂಗೊಂಡು ಬಳಸಿ ಪಾದಮಾರ್ಗದಿಂದ ಮೋಹರಿಸಿ ಬರ್ಪ ಖಳ್ಗವ್ಯಗ್ರ ಹಸ್ತಾಗ್ರಭಟಪೇಟಕದ ಸಂದಣಿಯುಮೆಸೆಯೆ

ಬಿಡದಂದಂಬಡೆದೊಡ್ಡುಗೊಂಡವರ ಮೇಘಾಡಂಬರಚ್ಛತ್ರದಿಂ
ಗಡಣಂಗೊಂಡ ಮತಂಗಜಪ್ರಬಳದಾನಾಸಾರದಿಂ ಚಾಳನಂ
ಬಡದುದ್ಯಚ್ಚಮರೀಜವೀಜನ ಬಳಾಕಶ್ರೇಣಿಯಿಂ ಚೆಲ್ವು ಮುಂ
ದಿಡೆ ಕಾರ್ಗಾಲಮೆ ನಂದನಕ್ಕೆ ನಲವಿಂ ಬರ್ಪಂತೆ ಬಂದಂ ನೃಪಂ      ೫೨

ವ : ಇಂತಭಿನವಶೋಭಾವಿಭವಪರಿಭೂಷಿತನಾಗಿಯಾ ಮೂರ್ಧಾಭಿಷಿಕ್ತಂ ಮೇಳದಕಡುಚದುರೆಯರಪ್ಪ ಚಲ್ಲಗಾರ್ತಿಯರೊಡನೆ ವಸಂತಸಮಯದ ಪೊಸಸುಗ್ಗಿಯ ಪೆಂಪಂ ನುಡಿದು ಕೊಂಡಾಡುತ್ತುಂ ಪುರಗೋಪುರದ್ವಾರಮಂ ಪೊಱಮಟ್ಟು ಬಂದು ನಂದನವನೋಪಾಂತಂಬರಂ ನೀಡಿ ಮೆಟ್ಟಿ ಪಟ್ಟದಾನೆಯಂ ಹೋಯೆಂದಪ್ಪಳಿಸೆ ಮುಮದೆ ಪರಿವ ಕೊಲ್ಲಣಿಗೆಯ ಭಲ್ಲೆಯದ ಪಡವಳಗಟ್ಟಿಗೆಯ ಬಿರುದಿನ ಸಿಂದದ ಸಂದಣಿಯ ಕೋಳಾಹಳದ ರಭಸಮೆಸೆಯೆ ಕುಸುಮಾಕರೋದ್ಯಾನದ ಪರಿಸರಕ್ಕೆ ಬರ್ಪಾಗಳ್

ಚೆಲ್ಲಿಕೊಳುತ್ತುಂ ನೀರಂ
ಫುಲ್ಲಾಂಬುಜಧೂಳಿಯಿಂದಲೊಟ್ಟಿಕೊಳುತ್ತುಂ
ನಿಲ್ಲದೆ ಮಳಯಾಚಳದೊಳ್
ಮೆಲ್ಲನೆ ಬಂದತ್ತನಂಗಗಜದಂತನಿಳಂ೫೩

ಕೋಗಿಲೆ ಗಿಳಿ ತುಂಬಿ ಮನೋ
ರಾಗದಿನೆಳೆಮಾವಿನಲ್ಲಿ ಕೊನರಂ ಪಣ್ಣಂ
ಪೂಗುಡಿಯಂ ಸೇವಿಸಿ ಕಿವಿ
ಗಾಗಿಸಿದುರುತಾರಮಮದ್ರಮಧ್ಯಸ್ವರಮಂ     ೫೪

ಕಟ್ಟಿದಿಱೊಳಾ ವನಂ ನೆಱೆ
ದಿಟ್ಟಿಗೆ ಪೊಲನಾದುದಮಮ ಬಾಸಣಿಗೆಯುಮಂ
ತೊಟ್ಟನೋಸರಿಸಿ ಸಲೆಮುಂ
ದಿಟ್ಟುಱೆ ಪಚ್ಚೆಯ ಸುಚಿತ್ರಪಟಮೆಂಬಿನೆಗಂ   ೫೫

ವ : ಆ ವನಮಂ ಮುಟ್ಟೆವರ್ಪುದುಂ

ಅಂಕುಶದಿಂದಮೊತ್ತಿ ಗಜಮಂ ಪೆಱಗಿರ್ದಿನಿಯಳ್ಗೆ ಕೈಗೊಡು
ತ್ತುಂ ಕರಮೊಯ್ಯನೊಯ್ಯನಿಳಿಪಿ ಸ್ಫುಟಕುಂಭಮನಂಟುನೋಡಿ ನಿ
ಶ್ಶಂಕತೆಯಿಂದೆ ಮೆಟ್ಟಿ ರದನಾಗ್ರಮುಮಂ ಭರಿಕೈಯ ಸಂಧಿಯಿಂ
ಭೋಂಕೆನೆ ತಾಂ ಕೆಲಕ್ಕೆ ಪರಿಲಂಘಿಸಿದಂಗಜಶಿಕ್ಷಣೋತ್ತಮಂ          ೫೬

ವ : ಅಂತು ಸಿಂಧುರಸ್ಕಂಧದಿಂದಿಳಿದು ಕೂಡೆಬಂದ ಚಾತುರ್ದಂತಬಲಮೆಲ್ಲ ಮನಲ್ಲಿರಿಸಲ್ವೇಳ್ದು ವನಜಕೇಳಿಗುಪಯೋಗ್ಯ ಕತಿಪಯಾಪ್ತಪರಿವಾರಂಬೆರಸು ವನ ಪ್ರತೋಳಿಕಾ ಪ್ರದೇಶ ದವಸರದೊಳ್

ಮನವಿನೋದಕ್ಕೆ ತಕ್ಕವ
ರನಿಬರವೇಳಲ್ಕೆ ನೃಪತಿ ತಜ್ಜನಮೆಲ್ಲಂ
ಬಿನದಿಗರಾಗಿಯೆ ನುಡಿದರ್
ಘನವಿಭವದ ಮಹಿಮೆಯಮಮ ಪೊಗಳಲಳುಂಬಂ        ೫೭

ವ : ವೇತ್ರಧರಿಪರಿಶೋಧಿತ ವನದೊಳಗಂ ವನಮಹತ್ತರಪುರಸ್ಸರಂ ಪುಗುವುದುಂ

ಮುನ್ನಂ ಕತ್ತಲೆಯಿಂ ಸಂ
ಛನ್ನಂ ವನಮಾಯ್ತು ಪಡೆ ಮುಸುಂಕಲ್ ದೆಸೆಯಂ
ಸನ್ನುತಮಣಿಭೂಷಣಕಿರ
ಣೋನ್ನತಿಯಿಂ ತೋಱಿಸಿತ್ತು ಮತ್ತೆಳೆವಿಸಿಲಂ  ೫೮

ಎಲರಿಂದುದಿರ್ವಲರ್ದೆಲರಂ
ಸಲೆ ಕಾಣಿಕೆಗೊಟ್ಟು ನುಡಿದು ಹಿತಮಂ ಕೋಗಿಲೆ
ಯುಲಿಯಿಂ ಬಿದ್ದಿನನೆಂಬಂ
ತಿಳೆಗಿನನಂ ಮನ್ನಿಸಿತ್ತು ನಂದನಮೊಲವಿಂ         ೫೯

ವ : ಅದಲ್ಲದೆಯುಂ

ಪೊಂದೊಡವಿಂ ಬೆಡಂಗಮರ್ದ ರಾಣಿಯರುಂ ಪಿರಿಯಂದಣಂಗಳಿಂ
ದಂದಿಳಿದಿರ್ಪ ರಾಗಪರಿರಂಜಿತ ರಾಜಮರಾಳಿಗಳ್ ಮುದಂ
ಸಂದಿಸೆ ವಾರಿಜಾವಳಿಗಳಿಂದಿಳಿವಂತಿರೆ ಪಾದರಾಗದಿಂ
ದೊಂದಿ ತಳಿರ್ತವೋಲೆಸೆದುವಂದಣದೆಯ್ದೊಣಗಿರ್ದ ಕೊಂಬುಗಳ್೬೦

ಕುಂಭಸ್ಥಳಮಂ ನಿಜಕುಚ
ಕುಂಭದೆ ಗತಿಯಂ ತದಲಸಗತಿಯಿಂ ಗೆಲ್ಲಲ್
ರಂಭೋರುಪೆಂಡವಾಸಂ
ಕುಂಭಿಯನಿಳಿದುದು ದಲಿಕ್ಕಿ ಮೆಟ್ಟುವ ತೆಱದಿಂ೬೧

ಪಲತೆಱದ ವಾಹನಂಗಳಿ
ನಿಳಿದರ್ ಲಾವಣ್ಯವತಿಯರೆಳೆಮಾವಿನ ಗೊಂ
ದ[ಳಿ]ಸಿದ ಕೊಂಬುಗಳಿಂದಂ
ಗಿಳಿವಿಂಡುಗಳಿಳಿದು ಬರ್ಪ ತೆಱದಿಂದಾಗಳ್       ೬೨

ವ : ಅಂತಿಳಿವುದುಂ

ಅಡಸಿರ್ದ ಕೊಂಬುಗೋಲಂ
ಬುಗಳೆಡೆಯೊಳ್ಕೂಡೆ ನಿಲಿಸಿ ತೆತ್ತಿಸಿ ಸುತ್ತಂ
ಮಡಗಿಟ್ಟರ್ ಸತ್ತಿಗೆಗಳ
ಗಡಣಮನಗೆವೊಯ್ದ ಚಂದ್ರಮಂಡಳಿಗಳವೊಲ್           ೬೩

ಕೃತಕಾಚಳಮಂ ನೋಡುವ
ರತಿಯಿಂ ಬಂದಿರ್ದ ಬೆಟ್ಟುಗಳವೋಲ್ ಸುತ್ತಂ
ಕ್ಷಿತಿಜಂಗಳಲ್ಲಿ ಕಟ್ಟಿದ
ಮತಂಗಜಾವಳಿಗಳಿತ್ತವಕ್ಷಿಗಗುರ್ವಂ   ೬೪

ವ : ಮತ್ತಂ

ನಡೆ ನುಡಿ ತೋಳ್ಮೊಗಂ ತೊಡೆ ಕುಚಂ ಮುಡಿ ಕೊಂಡೆಯಮಂ ವಧೂಜನ
ಕ್ಕಡಿಗಡಿಗೂಳ್ದು ಮಚ್ಚರಮನಾಗಿಸೆ ಹಂಸ ಪಿಕೀಲತಾಬ್ಜಮಂ
ಕಡುಕದಳೀರಥಾಂಗಮಧುಪಾಳಿಯನೊಲ್ದೊಳೊಕೊಂಡ ಕಾರಣಂ
ತಡೆಯದೆ ಮುತ್ತುವಂತೆ ಬನಮಂ ನಡೆತಂದುದು ಸೌಂದರೀಜನಂ    ೬೫

ವ : ಅಂತು ಬಂದ ರಾಣಿವಾಸದ ಪೆಂಡವಾಸದ ವಾರನಾರಿಯರ ನರ್ಮಸಚಿವರ ನಟ್ಟನಡುವೆ ಮೋಹನವಿದ್ಯಾದೇವತೆಯರ್ ಬಳಸಿದ ಕರ್ಬುವಿಲ್ಲಿನಂತೆ ಜಗದ್ವಲ್ಲಭಂ ಮಹಾಪ್ರತೀಹಾರ ಕೋದ್ಘುಷ್ಯಮಾಣ ದೇವಾವಧಾನಧ್ವಾನಪೂರಿತ ದಿಗಂತರಾಳನುಂ ವಾಮಪಾಶ್ವಾರ್ಶನು ಗತಶೃಂಗಾರವತೀ ಪಟ್ಟಮಹಾದೇವಿ ಕೋಮಳಕರ ತಳಪಲ್ಲವ ಪರಿಷ್ವಂಗ ಭಂಗುರ ಸವ್ಯಪಾಣಿಪ್ರಕೋಷ್ಠಕಾಂಡನುಮಾಗಿ ನಿಂದಿರ್ಪುದುಂ ವನಪಾಳಕರ ವಿನಿರ್ದಿಷ್ಟ ನಾರಂಗ ಮಾತುಳಂಗ ಪೂಗ ಪುನ್ನಾಗ ಜಂಬೀರ ನಾಳಿಕೇರ ಮಾಳಿಕೆಗಳಂ ನೋಡುತ್ತುಂ ನಡೆತಪ್ಪೆಡೆಯೊಳ್

ಹಿಡಿಯೊಳಡಂಗಿ ತೋರ್ಪ ನಡು ವೃತ್ತಕುಚಂಗಳ ಭಾರದಿಂ ಕರಂ
ನಡುಗೆ ನಿತಂಬಭಾಗ ಘನಭಾರದೆ ಮೆಲ್ಲನೆ ಗುಜ್ಜುಮೆಟ್ಟುತುಂ
ನಡೆವಡಿಗಳ್ ಪರಿಸ್ಖಳಿಸಿ ಭೂತಳಪಾಲನ ಪಿಂದುಗೊಂಡು ಕೈ
ವಿಡಿದು ಪರಸ್ಪರಂ ನಡೆದು ಬಂದುದು ವಿಶ್ವವಿಳಾಸಿನೀಕುಳಂ        ೬೬

ಮಾಣಿಕದತುಳಾಕೋಟಿ
ಶ್ರೇಣಿಕೆಯ ವಿರಾವದೊಡನೆ ಕಳಕಾಂಚೀದಾ
ಮಾಣನಮದುಣ್ಮಿ ಪೊಣ್ಮಲ್
ಮಾಣಿಕ್ಯಂ ಬಳಸಿ ನಿಂದ ತದನಂತರದೊಳ್       ೬೭

ಇದು ನಾಗಕೇಸರದ ಸ
ಲಿದು ಜಂಬೂಕುಜದ ಪಂತಿಯಿಂದು ಚಂದನವೃ
ಕ್ಷದ ರಾಜಿಯಿದು ಲವಂಗದ
ಪೊದಱಿಂತೆಂದುಸಿರ್ದ ತೋಱಿದಂ ವನಪಾಳಂ೬೮

ವ : ಮತ್ತಮಾ ಪ್ರತೋಳಿಕೆಯ ಬಲದ ಕೆಲದೊಂದು ತಾಣದೊಳ್ ಪಾಸಿದ ಪಾಸಿನಂತೆ ದೆಸೆವಡೆದ ನುಣ್ಬೆಳಂತಿಗೆ ಮಣಲ ತಣ್ಪುಳಿಲ ಮುಂದೆ ನಿಂದ ಸೂಳೆತನದ ಗಾಡಿಯಿಂಬೆಡಂಗಮರ್ದು ಕೈವಂದ ಬಾಳಮಾಕಂದಲತೆಯಂ ಕಂಡು ರಸಿಕರತ್ನಾಕರ ನೆಂಬ ನಾಗರಕಂ ನರಪಾಲಶಿರೋಮಣಿಯ ಮೊಗಮಂ ನೋಡಿ ದೇವರಿತ್ತ ಚಿತ್ತೈಸುವುದೆಂದು ಸುಟ್ಟಿದೋಱಿಯುತ್ಪ್ರೇಕ್ಷಾವಚನದಿಂದಿಂತೆಂದಂ

ಶೃಂಗಾರಂಬೆತ್ತ ಭೂತೀಗಣಿಕೆ ವನಗೃಹದ್ವಾರದೊಳ್ ನಿಂದೊಡಾದಂ
ಪಾಂಗಿಂದಂ ನೋಡಿ ಚಿತ್ತಂಬರಿದು ಸುರಭಿಕಾಲಂ ವಿಟಂ ಪೂಗಳೆಂಬು
ತ್ತುಂಗಾತಿಸ್ಥೂಳಮುಕ್ತಾಫಳತತಿಗಳನೊಲ್ದೊತ್ತೆಗೊಟ್ಟು ಪ್ರಮೋದಾ
ಭಂಗಂ ಕೂಡಲ್ಕೆ ರೋಮಾಂಚದವೊಲೊಗೆದುದೆಯ್ದಂಕುರಶ್ರೇಣಿ ಸುತ್ತಂ    ೬೯

ವ : ಆ ನುಡಿಗೆ ಮುಗಳ್ನಗೆನಗುತ್ತಮಿರೆ ಮತ್ತೊಂದೆಡೆಯೊಳತಿಸೌರಭಂ ತನ್ನಯ ಲತಾಂತಪರಿಮಳಾಲೋಲಮಾಗಿ ಬಂದ ರೋಲಂಬಮಂ ಮನ್ನಿಸಿ ಕೋಕಿಲ ಲಲನಾಲಾಪನಮುಖದಿಂದಿಂತೆಂದದಕ್ಕುಸಿರ್ವಂತಿರ್ದುದೆಂದುತ್ಪ್ರೇಕ್ಷಿಸಿದಂ

ಎನಗೆ ಪುಟ್ಟಿರ್ದ ಸುಮನೋ
ಘನಮಂಜರಿ ನಿನಗೆ ನಲ್ಲಳಾದುದಱಿಂ ಮೇ
ದಿನಿಯೊಳನುಮಾನಿಸದನಾ
ವನೊ ಮಾವಂ ಮಾವನಳಿಯನಳಿಯಂ ದಿಟದಿಂ೭೦

ವ : ಇಂತೆಂಬಂತಿರ್ದುದೆಂಬ ವಚನದರ್ಥದೃಷ್ಟಿತ್ವಕ್ಕನುರೂಪಮಾದುದೆನುತ್ತುಂ ಬರ್ಪನ್ನೆಗಂ ಶಿಶಿರಸ್ಥಾನಮಾಗಿ ಸುರ್ವುಗೊಂಡ ಮಾವಿನ ಬಾಳ್ಜೊಂಪದೊಳ್

ಇನ್ನೆಗಮೆಮ್ಮ ನಾಲಗೆಗಳಂ ಸೆಱೆಗೆಯ್ದಭಿಮುದ್ರಿಸಿಟ್ಟನೀ
ತಂ ನೆರೆಯಂ ಖಳಂ ಶಿಶಿರನೆಲ್ಲಿದನೆಲ್ಲಿದನೀಗಳೆಂದು ಕೋ
ಪೋನ್ನತಿಯಿಂದೆ ಮೂದಲಿಸಿ ಪೋ ಪುಗಿಲೆಂಬತಿ ತರ್ಜನೋಕ್ತಿಯಿಂ
ದಂ ನೆಱೆಕೋಕಿಳಂ ಕದುಬುವಂತಲೆದತ್ತೆಳೆಗೊಂಬಿನಾಮ್ರದೊಳ್    ೭೧

ವ : ಅದಂ ವಿಸ್ಮಯಸ್ಮೇರಮುಖಾರವಿಂದನಾಗಿ ನೋಡುತ್ತುಂ ನಡೆಯೆ ಮುಂದೊಂದೆಡೆಯೊಳ್ ನೂತನಮಾಗಿ ಪೂತ ಮಲ್ಲಿಕಾವಲ್ಲರಿಯಂ ಕಂಡರಸಿ ವಿನೋದ ವಿಳಾಸಿನಿಯೆಂಬ ತನ್ನಯ ಪರಿಚಾರಕಿಯ ಕಿವಿಯಂ ಪಚ್ಚುವುದುಮಾಕೆ ದೇವಿಯೆಂದಳೆಂದಿಂತೆಂದಳ್

ಎಡೆವಿಡದೆಲ್ಲಿಯುಂ ನಿಬಿಡಮಾಗಿ ಕರಂ ತುಱುಗಿರ್ದ ಪೂಗಳಿಂ
ದಿಡಿದು ಪೊದಳ್ದ ಮಲ್ಲಿಗೆ ಮಹಾಸಹಕಾರಕುಮಾರನಂ ಸಮಂ
ತಡರ್ದಮರ್ದಪ್ಪಿ ನಿಂದು ಮೆಱೆದತ್ತು ದುಕೂಲಮನುಟ್ಟ ನಲ್ಲಳೋ
ಗಡಿಸದೆ ತನ್ನ ಕೇಳಿ ಸಹಕಾರ ಕುಮಾರನನಪ್ಪಿ ನಿಂದವೊಲ್          ೭೨

ವ : ಎಂಬುದುಮರಸನದಕ್ಕೆ ಮೆಚ್ಚಿ ಮೆಚ್ಚುಗೊಟ್ಟು ಮಂದಸ್ಮಿತಪ್ರಸಾದಮಂಹೇಳಾವಾಗ್ವಿಳಾಸದಿಂ ಪಡೆದು ನಡೆಯಲೊಂದೊಂದು ತಾಣದೊಳ್ ಪಳಿತ ಪನಸಮಂ ಫುಲ್ಲಿತ ಮಲ್ಲಿಕೆಯಂ ಪಲ್ಲವಿತ ಕಂಕೆಲ್ಲಮಂ ಕಂಡು ಭೂಪಾಳತಿಳಕನನಿಮಿಷದಾನತವದನೆ ಯಾದೋಪಳಿಂಗೆ ದರ್ಪಕನ ದರ್ಪಪ್ರಭಾವಕ್ಕಭಿವ್ಯಂಜಕಂಗಳಾಗಿರ್ದಪ್ಪುವೆಂದು ವಾಮಕೋಮಳ ಸೂಚೀಹಸ್ತದಿಂ ಸೂಚಿಸಿ ತೋಱಿ

ಕಡುನೀಳ್ದ ತೋರವಣ್ಗಳ್
ಪಡೆಯೆ ಸ್ಕಂಧಾವಳಂಬಮಾ ಪಲಸುಗಳಂ
ದೊಡರಿಸುತಿರ್ದುವು ಕಾಮನ
ಹಡಪಿಗರೆಂಬೊಂದು ಶಂಕೆಯಂ ನೋಳ್ಪರ್ಗಂ   ೭೩

ಬಳ್ಳಿಯ ಮಲ್ಲಿಗೆಯ ಮೊಗ್ಗೆಗಳ್
ಉಳ್ಳಲರಲ್ ಮೇಲೆ ತುಂಬಿ ದುಱುದುಂಬಿ ಕರಂ
ಕುಳ್ಳಿರ್ದು ಮೊರೆಯೆ ಶಂಖಮ
ನೊಳ್ಳಿತ್ತಾಗೂದುವವನವೊಲ್ ಕಣ್ಗೆಸೆಗುಂ     ೭೪

ಮಾರಂ ವಿರಹಿಜನಕ್ಕಂ
ಮಾರಣಹೋಮಮನೊಡರ್ಚುವೆಡೆಯೊಳ್ ಮಿಳ್ಳಿ [ಪ]
ಧಾರಾಗ್ನಿಜ್ವಾಲೆಗಳಂ
ತೋರಂತಸುಕೆಗಳೊಳೆಸೆದವಲರ್ಗಳ್ ಪಲವುಂ   ೭೫

ವ : ಎಂದು ವಾಗ್ಭಾಮಿನೀಭೂಷಣನುತ್ಪ್ರೇಕ್ಷಾಭಾಷಣಮಂ ನುಡಿದು ಮಾಣಲೊಡ ಮೊಡೆಯನನೊಸಯಿಸುವ ಬೆವಸೆಯಿಂ ಪರಿಹಾಸವಾಸವನೆಂಬ ನರ್ಮ ಸಚಿವನಿಂತೆಂದಂ

ಅಮಮ ಪಣೆಮುಟ್ಟಿ ಕೈವಂ
ದ ಮರಂ ಪೊಡವಡುವ ತೆಱದಿನಿರ್ದುದು ನಿಗಮಂ
ಸುಮನೋವೃತ್ತಿಯನಾಂತರ್
ಸುಮನೋವೃ‌ತ್ತಿಕರಪದ್ಧತಿಯನಱಿಯರೆ ಪೇಳ್          ೭೬

ವ : ಆಗಳಾ ಪೊಸಮಾತಿಂಗೆ ವಸುಧಾವಲ್ಲಭಂ ಮೆಚ್ಚಿ ಪಸಾಯದಾನಂಗೊಟ್ಟು ಮುಂದೆ ನಡೆಯೆ ನಡೆಯೆ

ಕಾಳಮರಾಳಿಗೊಳ್ಪುರುತಮಾಳಮನುರ್ಬಿದಮೈಂದವಾಳೆಯೊಂ
ದೋಳಿಯನೆಯ್ದೆಕಾಯ್ತು ಜಡಿವೀಳೆಯನಿಕ್ಕೆಲದಲ್ಲಿ ಚೆಲ್ವಪೊಂ
ಬಾಳೆಯನಾಂತು ಸಾಲ್ವಿಡಿದು ನಿಂದೆಳೆಗೌಂಗುಮನಳ್ತಿವಟ್ಟು ಭೂ
ಪಾಳಲಲಾಮನೀಕ್ಷಿಸಿದನಾ ವನಭೂರುಹಭೂರಿಶೋಭೆಯಂ          ೭೭

ವ : ಮತ್ತಂ ಮೆಲ್ಲಮೆಲ್ಲನಲ್ಲಿಂ ತಳರ್ದು ವನಶ್ರೀಯ ವಿಳಾಸಮಂ ಭಾವಿಸಿ ನೋಡಿ ಕೊಂಡಾಡುತ್ತುಂ ಪೋಗಿ ಮುಂದೊಂದೆಡೆಯ ವನದ ನಡುವಣ ತೆಱಪಿನೊಳ್

ಬಾಳದ ಬೇರ್ಗಳಿಂ ಸಮೆದ ಕೇರ್ಗಳಿನೊಳ್ಪಳವಟ್ಟುನಿಂದ ಪೊಂ
ಬಾಳೆಯ ಕಂಬದಿಂ ತಳಿರ್ಗಳೋವರಿಯೊಳ್ ಪೊಸಗಪ್ಪುರಂಗಳಿಂ
ಮೇಳಿಸಿ ತೋರ್ಪ ನುಣ್ಜಗಲಿಯಿಂ ನವಚಂಪಕಕುಟ್ಮಳಂಗಳೊಂ
ದೋಳಿಯ ಕೀಲ್ಗಳಿಂ ರಚಿಸಿ ಕಣ್ಗೊಳಿಸಿತ್ತು ವಸಂತಮಂಡಪಂ       ೭೮

ವ : ಮತ್ತಮೋರಂದಮಾದ ಕೆಂದಾವರೆ [ವೂ] ಗಳ ಸಂದೋಹಮನಲ್ಲಿಗಲ್ಲಿಗೆ ಬಂದಕ್ರಮದಿಂ ಸಂಧಿಸಿ ಬಣ್ಣವಿಟ್ಟು ತಿಣ್ಣಂ ಸಮೆದೆಳೆವಾಳೆಯ ಸುಳಿಯೆಲೆಯ ನಳನಳಿಪ ಮೇಲ್ಗಟ್ಟುಗಳಿಂದಂ ಸೇವಂತಿಗೆಯರಲ ವಂದನಮಾಲೆಗಳಸಿನೆಡೆಯೆಡೆಯೊಳ್ ತಡಂಗಲಿಸಿ ಬಿಟ್ಟ ಚಿಂಗಣಿಗಿಲೆಯ ಪೊಚ್ಚಪೊಸನನೆಯ ಸೂಸಕದ ತೋರತೊಂಗಲ ಸಮಾಲಂಬನದಿಂದಳುಂಬಮಾದ ರಚನಾವಿಶೇಷಂಗಳಿಂದಂ ಕೊಸಗಿನ ಕುಸುಮಂಗಳಂ ಪಿಣಿಲಿಱಿದು ಪೆಣದು ಪಸರಿಸಿ ಬಿಗಿದು ಮಾಧವೀಲತೆಯ ಮುಗುಳ ಮೊಳೆಗಳಂ ಸುತ್ತಲುಂ ತೆತ್ತಿಸಿ ಚೆಲ್ವುವಡೆದ ಜವಳಿವಡಿಗಳಿಂದಂ ಪನ್ನೀರಚಳಯದಿ ವಿಳಸನಮಂ ತಳೆದ ಸಮುತ್ತುಂಗರಂಗಸ್ಥಳದಾಳೋಕನಸಮಾಕಳಿತವಿಲೋಚನಚಯಕ್ಕಾಸುರಮಾದ ಭಾಸುರನಾಗಕೇಸರದ ಪರಾಗಪೂಗದಿಂದಿಕ್ಕಿದ ಮಂಗಳರಂಗಾವಳಿ ಭಂಗಿಯಿಂ ಬೆಡಂಗುವಡೆದುದಂತುಮಲ್ಲದೆಯುಂ

ಅತಿಶೈತ್ಯದ ನೃತ್ಯಗೃಹಂ
ನುತತರಶೃಂಗಾರದೊಂದು ಕಾರಾಗಾರಂ
ಕ್ಷಿತಿಪಂಗಚ್ಚರಿಯಂ ಮಾ
ಡುತುಮಿರ್ದುದು ಸುರಭಿಕುಸುಮಮಯಮಂಡಪಕಂ      ೭೯

ವ : ಅಂತು ಕಂತುವಿನ ರತಿಯ ಮದುವೆಗೆಂದು ಸಮೆದ ಪಸುರ್ವಂದಲೆಂಬಂ ತಿರಸದಳಮೆಸೆವ ವಸಂತಮಂಡಪಮನೆಯ್ದೆವಂದು ಕ್ರೀಡಾವಿನೋದಪ್ರಸಂಗಪ್ರಗಲ್ಭಕತಿಪ ಯಾಪ್ತಪರಿ ವಾರಪರೀತಂ ಭೂಕಾಂತಂ ಶೃಂಗಾರವತೀಮಹಾದೇವಿವೆರಸು ತನ್ಮಧುಮಂಡ ಪಕ್ಕೆ ಮಂಡನಮಾದ ನಿಪ್ಪೊಸತಪ್ಪ ಕಪ್ಪುರದ ಘಟ್ಟಿಯಿಂ ನೇರ್ಪಟ್ಟು ಕಟ್ಟಿದ ಜಗಲಿಯ ಮೇಲೆ ಪಾಸಿದ ಬಹಳತರ ಪರಿಮಳಭರಮಂ ಪರಕಲಿಸುತುಮಿರ್ದ ಕುಸುಮದೆಸಳ ಪಸೆಯನಳಂಕರಿಸಿರ್ಪುದುಂ

ಪದಪದದಲ್ಲಿ ಮಾಳ್ಪ ಪೊಸಠಾಯೆಯ ರಾಗದನೇಕಭೇದಮಿಂ
ಬೊದವಿದ ಕೈಯ ಬೀಣೆಯ ನಿನಾದದೊಳೋಯರಮಾಗೆ ತೋರ್ಪಿನಂ
ಹೃದಯದೊಳಂ ಚಮತ್ಕೃತಿ ನೃಪಾಳನ ಮುಂದೆ ವಸಂತರಾಗದಿಂ
ಪದುಳಿಸಿ ಪಾಡಿ ಮೆಚ್ಚಿಸಿದನೆಕ್ಕಲಗಾಣನದೊಂದು ಗೀತಮಂ        ೮೦

ವ : ಕೇಳುತ್ತುಮಿರ್ದನನ್ನೆಗಮಿತ್ತ ಸೌಗಂಧ್ಯಬಂಧುರಮಂದಗಂಧವಹನ ತೀಟದಿಂ ಪುಷ್ಪಾಪಚಯದ ಬಯಕೆ ಬಗೆಯೊಳೊಗೆಯಲಲ್ಲಿಂ ತಳರ್ವ ತರಳಲೋಚನೆಯರ ಚರಣತಳದರುಣಕಿರಣವಿಸರಪ್ರಸರಂ ತರುಲತಾಗುಲ್ಮಂಗಳ ಸಾಲ್ಗಳೆಡೆಯೆಡೆಯೊಳ್ ತಳಿರ್ದೊಂಗಲ ಚೆಲ್ವನೆಸಗುವಿನಂ ಕಂಕಣಕಿಂಕಿಣೀಝಣತ್ಕಾರದಿಂದಂಕಿತಮಾದ ಕರತಳಂ ಗಮನಾಗಮಸ್ಖಲನಕರನಿತಂಬಬಿಂಬದೊಡನೆ ಕಲಹಮನೊಡರ್ಚುವಿನಂ ಮಂಜುಳ ಮಂಜೀನಪುಂಜಶಿಂಜಾನರಂಜನೆ ಪೀವರಪಯೋಧರಭಾರದಿಂದುಡಿದಪುದು ಬಡನಡು ಮೆಲ್ಲನೆ ನಡಯಿಯೆಂದು ನುಡಿವಿನಂ ಬಂದು ಮಡದಿಯರ ಗಡಣಂ ಪಾಸುಂಪೊಕ್ಕಾಗಿ ಪರೆವುದುಂ

ತರುಣಿಯರೆಲ್ಲರುಂ ತಳರ್ದರುತ್ಕುಸುಮಾಪಚಯಾರ್ಥಿಯಿಂ ಮಹಾ
ಪರಿಮಳಭಾರವಾಂತ ಘನಕಾಂತ ಲತಾಂತ ಲತಾಪ್ರತಾನಮಂ
ನೆರೆದು ಮುಸುಂಕಿದರ್ ನಿಜಕಚಾಳಿಗೆ ಮಚ್ಚರಿಪ ದ್ವಿರೇಫಸಂ
ಕರಮನೆ ಕೂಡಿಕೊಂಡು ಪರಿರಕ್ಷಿಸುತಿರ್ದುದಿದೆಂಬ ಮಾಳ್ಕೆಯಿಂ      ೮೧

ವ : ಆಗಳ್ ಅಂತರಂಗಭವನ ಜಂಗಮಕಲ್ಪಲತಿಕಾವಿತಾನಂ ಕವಿವಂತಿರಂಗ ನಾಜನಂ ಮೊದಲ್ಪಿಡಿದಡರ್ದಲರ್ಗುಡಿ ಗಿಡುಗಳ ಗಡಣಮನಿವೆಮಗೆ ತಮಗೆಂಬ ಸಡಗರದ ಕಡುನುಡಿ ಬಿಡದುಣ್ಮಿ ಪೊಣ್ಮುತ್ತುಮಿರೆ ಕವಿತಪ್ಪುದುಂ

ಕೆಲರಸುಕೆಗೆ ಕೆಲರಾಮ್ರ
ಕ್ಕೊಲವಿಂ ಸಂಪಗೆಗೆ ಕೆಲಬರುಂ ಪರಿತಂದರ್
ತಳಿರ್ದುಡಿಯಂ ಪಣ್ಣೊನೆಯುಮ
ನಲರ್ಗೊಂಚಲನಾಗಳೆಯ್ದೆ ಕೊಯ್ವುಜ್ಜುಗದಿಂ            ೮೨

ಕೆಂದಳದಿಂದಂ ಭಂಗಂ
ಸಂಧಿಸಿತೆನಗೆಂದು ನಾಣ್ಚಿ ತಲೆಯೆಱಗಿದವೋ
ಲಂದು ಜೋಲ್ದಸುಕೆಯೊಳ್ದಳಿರ್
ಗೊಂದಣಮಂ ತಿಱಿವುತಿರ್ದಳಬಳೆಯದೊರ್ವಳ್           ೮೩

ಎಮ್ಮ ಕರುಳ್ಗಳೊಳ್ ಕೆಳೆಯನೆಯ್ದಿ ಸಮಾನತೆವೆತ್ತು ಬಾಳ್ವ ಪೆಂ
ಪಂ ಮಿಗೆತಾಳ್ದ ತುಂಬಿಗಳ ವೈರಿಗಳೆಂದೆಳೆವೆಂಡಿರಾಕ್ಷಣಂ
ಸಮ್ಮದದಿಂದೆ ಸಂಪಗೆಯ ಚೆಲ್ವಲರ್ಗೊಯ್ದುಂ ತುಱುಂಬುತಿರ್ದರಾ
ದಂ ಮಡಿಯಲ್ಲಿ ಮತ್ತಿರದಮಕ್ಕಮವಂ ಪಿಡಿದೊಪ್ಪಿಸೀವವೊಲ್೮೪

ವ : ಮತ್ತಮಾ ಸಂಪಗೆಯುದ್ದಗೊಂಬಿನೊಳಿರ್ದ ಗೊಂಚಲ ಪೂವಂ ಕೊಯ್ಯಲೆಂದು ಪತ್ತೆಸಾರ್ದು

ಉರದೊಳ್ ಪೆರ್ಮೊಲೆ ನಿಂದು ಮಿಳ್ಳಿಸೆ ಭುಜಾಮೂಲಂಗಳ ಸ್ಥಾನದೊಳ್
ಬೆರಸಲ್ ಪೆರ್ದೊಡೆ ನೀಳ್ದು ಕೂಡೆ ನಿಮಿರಲ್ ದೂಟಿಕ್ಕೆ ತಾಂ ನೀಳ್ಕಿ ಸೌಂ
ದರಿಯೊರ್ವಳ್ ಕಡುನೀಡಿ ಮೇಲೆ ನಳಿತೋಳಂ ಚಂಚಳಂಬೆತ್ತು ನು
ಣ್ಬೆರಳಿಂ ಪೂದಿಱಿವುತ್ತುಮಿರ್ದಳೊಲವಿಂದೊಂದುಚ್ಚಶಾಖಾಗ್ರದೊಳ್       ೮೫

ವ : ಆಪೊತ್ತಿನೊಳ್

ಕಡುಬಲ್ಪಿಂ ಸೆಳೆದಡ್ಡಮಾಗಿ ನಿಮಿರ್ದಿರ್ದೊಂದುಚ್ಛಶಾಖಾಗ್ರಮಂ
ಪಿಡಿಯಲ್ಕಾಕ್ಷಣಮೆತ್ತಿಕೊಂಡು ನೆಗೆಯಲ್ ನೇಲುತ್ತುಮಿರ್ದಾಕೆಯೊ
ಳ್ದೊಡೆಯಿಂದಂ ನಿಱಿ ಜೋಲ್ದುಬೀಳೆ ನಗಿಸುತ್ತುಂ ನೋಳ್ಪ ಮಿಂಡರ್ಕಳಂ
ಪಡೆದಳ್ ಕಾಮಿನಿ ಪೊನ್ನ ಪುತ್ಥಳಿಯ ಚೆಲ್ವಂ ನಗ್ನಮಾಗಿರ್ದುದಂ೮೬

ವ : ಆ ವಿಳಾಸವತಿಯಲ್ಲದೆ ಮತ್ತೊರ್ವಳೊಂದೆಡೆಯೊಳಲರ್ಗೊಯ್ವಲ್ಲಿ

ಮುಡಿಗಿಕ್ಕಿದೆನೆನ್ನಯ ಪೂ
ಗುಡಿಯೆಲ್ಲಮನೆಂದು ನಾಗಸಂಪಗೆಯ ಮರಂ
ಮುಡಿಗಿಕ್ಕುವವೋಲೆಳೆಗೊಂ
ಬುಡಿದುಱೆಬೀಳ್ದತ್ತು ಮುಂದೆ ಸತಿ ಸೆಳೆಯಲೊಡಂ       ೮೭

ವ : ಅದಲ್ಲದೆಯುಮೊಂದು ತಣ್ಪುಳಿಲೊಳ್ ಬಳ್ಬಳಂ ಬಳೆದ ಸುರಹೊನ್ನೆಯ ಮರದ ಮೇಲ್ಗೊಂಬಿನೊಳ್ ತೋರ್ಪ ಪೂಗಳಂ ಕೊಯ್ಯಲೆಂದೊರ್ವಳ್ ತರಳನೇತ್ರೆ

ಆಲರ್ಗೊಂಬಂ ಸೆಳೆದಾಯ್ದು ಕೊಯ್ದು ನನೆಯಂ ಮತ್ತಂ ಬಿಡಲ್ಮೇಲೆ ತ
ನ್ನಲರಂ ಮಾಣದೆ ಸೂಱೆಗೊಂಡುದಱಿನಾದುಬ್ಬೇಗದಿಂ ಸೊಪ್ಪನೆ
ತ್ತಿ ಲಸದ್ಭೃಂಗನಿನಾದದಿಂ ಮೊಱೆಯಿಡುತ್ತಿರ್ದಂತೆ ಕಣ್ಗಾಯ್ತು ಭೂ
ತಳದೊಳ್ ಕೇಡಡಸಿರ್ದಡಾವನೊ ಮಹಾದುಃಖಕ್ಕೆ ಪಕ್ಕಾಗದಂ     ೮೮

ವ : ಆ ಮ [ಹಾ] ಗೊಂಬಿಂ ಬಳ್ಚಿಬಂದ ತುಂಬಿ ದುಱುದುಂಬಿ ತಾಂ ಸೇವಿಸುವ ಕುಸುಮಮಂ ಕೊಂಡಳೆಂಬ ಕೋಪದಿನೆಂಬಂತಿರಾಕೆಯ ಮೇಲ್ವಾಯ್ದು

ನೆಱೆಗುರುಳ ಕಪ್ಪಿನೊಪ್ಪದ
ತೆಱನೆನ್ನಯದೆಂದು ಬಂದು ತಲೆವಿಡುವಂತೆಳೆ
ಪಱಮೆ ತಲೆವಿಡುವುತಿರ್ದುದು
ನಱುಗಂಪಿನ ಸೊಂಪನಾಳ್ದ ನಳಿನಾನನೆಯಾ      ೮೯

ಕೆಂದಾವರೆಯರಲೊಳ್ ಬಿಡ
ದಿಂದಿಂದಿರಮಿರ್ದವೊಲ್ ತಮಾಳದ ಕುಸುಮಂ
ಕೆಂದಳದೊಳ್ ಪತ್ತಿರ್ದು ದ
ಲಂದೆಸೆದುದು ಸೌಂದರಾಂಗಿ ಪೂಗೊಯ್ವೆಡೆಯೊಳ್       ೯೦

ಧವಳಕಟಾಕ್ಷವೀಕ್ಷಣದ ನುಣ್ಬೆಳಗಿಂ ಬಿಳಿದಾದಶೋಕಪ
ಲ್ಲವಕುಸುಮಂಗಳಂ ತರುಣಿಯರ್ ಕಡುಚೋಜಿಗಮೆಂದು ನೋಡುತಿ
ರ್ಪವಸರದಲ್ಲಿ ಮೆಯ್ಗರೆದು ಕೋಡಗಮವ್ವಳಿಸಲ್ಕೆ ಬೆರ್ಚಿ ತ
ಮ್ಮ ವಿಟರನಪ್ಪಿಕೊಂಡು ನಡುಗುತ್ತಮವರ್ ಬಿಡದಿರ್ದರಾಕ್ಷಣಂ  ೯೧

ಕತ್ತಲೆಯಂ ತಲೆವಿಡವದಿ
ರ್ಮುತ್ತೆಯ ಬಾಳ್ಜೊಂಪದಲ್ಲಿ ಕಣ್ಬೆಳಗದಱೊಳ್
ಬಿತ್ತರಿಸೆ ಕೆಳದಿಯರ್ ತೂ
ಗುತ್ತಿರಲಾಡುತ್ತುಮಿರ್ದಳುಯ್ಯಲನೊರ್ವಳ್   ೯೨

ವ : ಮತ್ತಮೊಂದೆಡೆಯೊಳ್ ಉತ್ತುಂಗಪೀನಪಯೋಧರೆಯೊರ್ವಳುತ್ಕಟ ಮಾಗಿ ಪಟಳಂ ಗೊಂಡ ವಿಕಟಕುಟ್ಮಳಕುಳಕ್ಕಮಗ್ಗಳಿಸಿದ ಮೊಗ್ಗೆಯ ಮೊಗ್ಗರಕಂ ಸುಗ್ಗಿಯಾದ ಮಲ್ಲಿಗೆ ಯರಳ್ಗಳನಾಯ್ವಲ್ಲಿ

ಪುದಿದಲರ್ಗೊಯ್ಯಲೆಂದಬಳೆ ಮಲ್ಲಿಗೆಯೊಳ್ ಸಲೆ ಕೈಯನಿಕ್ಕಲೊ
ರ್ಮೊದಲೊಳೆ ತನ್ನ ಕೆಂದಳದ ಕೆಂಪು ಸಮಾವರಿಸಲ್ಕೆ ಪೂಗಳುಮ
ಪದೆದರುಣಂಗಳಾಗಿ ನೆಱೆತೋಱಿರೆ ಮಲ್ಲಿಗೆಯಲ್ಲಿದೊಂದು ಮಾ
ಯದ ಗಿಡವೆಂದು ಪೂದಿಱಿಯಲೊಲ್ಲದೆ ಮುಗ್ಧೆ ಮರಳ್ದಳಾಕ್ಷಣಂ           ೯೩

ಮುತ್ತೆಲೆಯ ಮೇಲೆ ಪಸರಿಸಿ
ಸುತ್ತಂ ಕರತಳದ ಕೆಂಪು ರಂಜಿಸೆ ತಳಿರೆಂ
ದುತ್ತರಳನೇತ್ರೆ ಕೊಯ್ವಳ್
ಬಿತ್ತರಿಸಲ್ ನಗೆಯನಂದು ಕೆಳದಿಯರನಿತುಂ     ೯೪

ವ : ಆಗಳ್

ತರುಣಿಯರೀಕ್ಷಿಸಲ್ ತಿಲಕಮಂಕುರಿಸಿತ್ತೊದೆಯಲ್ಕಶೋಕಮುಂ
ಪರಕಲಿಸಿತ್ತು ಪಲ್ಲವಮನೊಲ್ದಮರ್ದಪ್ಪಿದೊಡಾಯ್ತು ಪುಷ್ಪಿತಂ
ಕುರವಕಮೆಯ್ದೆ ಮುಕ್ಕುಳಿಸಿ ಮೇಲುಗುಳಲ್ ಮಧುವಂ ಫಲಂಗಳಂ
ಧರಿಸಿ ವಿರಾಜಿಸಿತ್ತು ವಕುಳಂ ನಲವಾಯ್ತು ಮರಕ್ಕಮಾದೊಡಂ     ೯೫

ವ : ಇಂತು ಕಾಂತೆ ತಿಂತಿಣಿಗೊಂಡು ತಂತಮಗೆ ಕೊನರ್ತಳಿರ್ಪೂಗುಡಿಗಳ ಬಳಗಮ ನಾಯ್ದಾಯ್ದು ಕೊಯ್ದು ಪುಷ್ಪಾಪಚಯವಿನೋದಮಂ ತೀರ್ಚಲೊಡಂ

ಅಳಿಬಂಡುಂಬೊಡಮೊಂದುಮಿಲ್ಲ ಕುಸುಮಂ ಪಣ್ಗೊಂಚಲೊಂದಾದೊಡಂ
ಗಿಳಿ ಚಂಚೂಪುಟದಿಂ ಕರ್ದುಂಕುವೊಡಮಿಲ್ಲಂ ಕೋಕಿಳಂ ಕಚ್ಚಲೆಂ
ದೆಳಸಲ್ ನುಣ್ಗೊನರೊಂದುಮಿಲ್ಲ ನೊಸಲೊಳ್ ಬೊಟ್ಟಾಗಿಡಲ್ವೇಡಿ ಕೆಂ
ದಳಿರಂ ನೋಳ್ಪಡಮೊಂದುಮಿಲ್ಲ ಬಱಿದಾಗಿದ್ದತ್ತು ತನ್ನಂದನಂ೯೬

ವ : ಅನಂತರಂ

ಸೊಗಸಂ ಕಣ್ಗಿತ್ತೊಡಂ ಪೊಂದೊಡವುಗಳತಿಭಾರಂಗಳೊಳ್ಗೆಂಪಿನೊಂದೇ
ಳ್ಗೆಗೆ ಕಾರಾಗಾರಮೀ ಪೂದೊಡವಿನ ತೆಱದಿಂ ಕೂಡೆ ಪಂಚೇಂದ್ರಿಯಕ್ಕಂ
ಮಿಗಿಲಾದಾನಂದಮಂ ಮಾಳ್ಪುದೆ ಮೃದುತೆಯನಂಗಕ್ಕೆ ಮಾಧುರ್ಯದಿಂ ನಾ
ಲಗೆಗಂ ಮೂಗಿಂಗೆ ಕಂಪಿಂ ಕಿವಿಗಳಿರವದಿಂ ಲೋಚನಕ್ಕೆಯ್ದೆ ಚೆಲ್ವಿಂ            ೯೭

ವ : ಎಂದು ತರುಣಹರಿಣನೇತ್ರೆಯರ್ ತಂತಮ್ಮ ಕೋಮಳ ತನುಲತೆಗಳಂ ನವೀನಪುಷ್ಪ ಮಾಲಾಮಯಾಲಂಕಾರಸಾರದಿಂ ಯಥೋಚಿತಮಾಗಿಯಳಮಕರಿಪಲಂಪು ಬಗೆಯೊಳ್ ಪೊಂಪುಳಿಯೋಗುತ್ತುಮಿರಲಂಬಿಗಂ ಬಿಲ್ಗ ಮರಲ್ಗಳನೀಯಲೆಂದು ಬನದ ದೇವಿಯ ರಲರ್ವಿಲ್ಲಬಲ್ಲಹನನಱಸಿ ಪುಗುವಂತೆ ಸಂಪಗೆಯ ಪೊದಱ ಜೊಂಪಮಂ ಶ್ರೀಖಂಡ ಷಂಡದ ಮಂಡಪಮಂ ಮಾಧವೀಲತೆಯ ಮನೆಯುಮಂ ಪೊಳೆವೇಳಾ ಲತೆಯ ನೀಳಮಂ ರಂಜಿತದ್ರಾಕ್ಷಾಲತೆಯ ಕುಂಜಮಂ ಪೊಕ್ಕು

ಬಾಳೆಯ ನಾರಿಂ ಕಟ್ಟಿದ
ಳಾಳಿಸಿ ಮಲ್ಲಿಗೆಯ ತೋರಮೊಗ್ಗೆಗಳಂ ಕಂ
ಪೇಳಿಪ ಮುತ್ತಿನ ಸರಮೆಂ
ಬಾಳೋಚದೆ ಬಂದು ಮುಗ್ಧೆಯರ್ ನೋಡುವಿನಂ         ೯೮

ಇರುವಂತಿಯಲರ್ಗಳಂ ಸರ
ಸಿರುಹದ ನೂಲಿಂದೆ ಕಟ್ಟಿ ಪಂಚಶರಂಗೆ
ಯ್ದು ರಮಣಿ ಕೀಳ್ವಡಿಸಿದಳಂ
ದುರವಣಿಸುವ ಪಂಚಶರನ ಶರಪಂಚಕಮಂ      ೯೯

ಗೊಜ್ಜಗೆಯ ಚೆಲ್ವ ಮುಗುಳ್ಗಳ
ಗೆಜ್ಜೆಗಳಿಂದೆಸೆವ ಕಂಚನಾರದ ಕುಸುಮಾ
ತ್ಯುಜ್ವಳ ಕಾಂಚೀದಾಮಮ
ನುಜ್ಜೀವಿಸಿದಳ್ ಕುತೂಹಳಂ ತೋರ್ಪನ್ನಂ     ೧೦೦