ಬಂದುಗೆಯಲರ್ಗಳಿನೆಸಗಿದ
ಳಂದುಗೆಗಳನೆಸೆವ ನಂದಿವಟ್ಟದ ಪೊಸಪೂ
ವಿಂದೊಲ್ದು ಪಾಯವಟ್ಟಮ
ನಂದೊರ್ವಳ್ ಕಟ್ಟಿದಳ್ ಚಮತ್ಕೃತಿಯಿಂದಂ   ೧೦೧

ವ : ಮತ್ತಮದಿರ್ಮುತ್ತೆಯ ಕುತ್ತುಂಗಱಿಯುಮಂ ಸುರಹೊನ್ನೆಯ ಚೆಲ್ವ ಹೆಱೆಯುಮಂ ಕರ್ಣಿಕಾರದ ಕರ್ಣಾವತಂಸಮಂ ನಾಗಕೇಸರದ ಕೇಯೂರಮಂ ವಕುಳದ ಮಕುಟಮುಮಂ ಕುರವಕದ ಕರವಳಯಮುಮಂ ತಿಳಕದಷ್ಟದಳಮುಮಂ ಚಂಪಕದ ಚಳಿಕೆಗೆಯುಮಂ ತಮಾಳಪತ್ರದ ಕರ್ಣಪತ್ರಮುಮಂ ಮೆಲ್ಪಂ ಬಲ್ಪಮೆಸೆದು ಮನೋಹರಮೆನಿಸುವಿನಂ ಸಮೆದು ತಮತಮಗೆ ಪೊಸಪೊಸತಾದ ಕುಸುಮದ ಪಸದನಂಗೊಂಡು

ಪೂವಿನ ಪಿಂಡುಗಂಕಣಮುಮಂ ಪೊಸಪೂವಿನ ತೋಳಬಂದಿಯಂ
ಪೂವಿನ ತೋರಮುದ್ರಿಕೆಗಳಂ ಸಲೆಪೂವಿನ ಕಂಠಮಾಲೆಯಂ
ಪೂವಿನ ಜೋಳಿಯಂ ಪೊಳೆವ ಪೂವಿನ ಚೌಕಳಿಯಂ ವಧೂಜನಂ
ಪೂವಿನ ಚೆಲ್ವಪಟ್ಟಿಕೆಗಳೆಂಬಲರ್ವಚ್ಚಮನಾಂತುದರ್ಥಿಯಿಂ         ೧೦೨

ಅಚ್ಚರಿಯಂ ಪುಟ್ಟಿಸುವಲ
ರ್ವಚ್ಚಂಗಳನೆಯ್ದೆ ತೊಟ್ಟು ವಧುಗಳ್ ಪೋಲ್ತರ್
ಪೆರ್ಚಿದ ಶರಮಂ ಪೇಱಿದ
ನೆಚ್ಚಿನ ದೀವದ ಮೃಗಂಗಳಂ ಮನಸಿಜನಾ       ೧೦೩

ವ : ಇಂತು ಕೈಗೆಯ್ದು ತಂತಮ್ಮ ತಾಣದಿಂ ಪೊಱಮಟ್ಟು ಮರಳ್ದರಳ್ದ ಪೂಗುಡಿಗಳ ಬಳಂಗಳಿಂದುದಿರ್ವ ಧೂಳೀಜಾಳಮೇಳಾಪಕದಿಂ ಮೃದುಳಮಾದ ಸಮಸ್ಥಳದೊಳ್ ಗುಜ್ಜುಮೆಟ್ಟುವ ಪಜ್ಜೆಯ ಮಡಂಗಳಳ್ದುಬರೆ ಲೀಲಾಗಮನ ವಿನೋದಮಂ ಮೆಱೆವುತ್ತುಂ ನೃಪಾಳನೋಲಗದ ಮಂಡಪಮಂ ಮುಟ್ಟೆವರ್ಪುದುಂ

ಪಲತೆಱನಾದ ಪುಷ್ಪಫಳಕೋರಕಪಲ್ಲವ ಭೂಷಣಂಗಳಂ
ತಳೆದು ವಧೂಜನಂ ನಿಜವಿಳಾಸಸುಧಾರಸದಿಂದೆ ಪೆರ್ಚಿಯು
ಜ್ಜಳಲತಿಕಾಳಿ ಬಪ್ಪ ತೆಱದಿಂದಮೆ ಬಂದಿದಿರಾಗಿ ನಿಲ್ವುದುಂ
ನೆಲೆಸಿದವಲ್ಲಿ ಭೂಪತಿಯ ದೃಷ್ಟಿಗಳೆಂಬ ಮಧುವ್ರತಂಗಳುಂ       ೧೦೪

ಪೂವಿನ ಬಿಲ್ಗಳಂ ನನೆಯ ಬಾಣಗಣಂಗಳನಾಂತು ನಿಂದರಿಂ
ದೀವರನೇತ್ರೆಯರ್ ಕೆಲರರಲ್ಗಳ ಖೇಟಮುಮಂ ಕೃಪಾಣಮಂ
ಭಾವಕಿಯರ್ ಕೆಲರ್ ಪಿಡಿದು ನಿಂದರನಂಗಮಹೀಶಸೈನ್ಯಮಾ
ದಾವರಿಸಿರ್ದವೋಲ್ ಬಳಸಿ ನಿಂದುದು ಸುತ್ತಲುಮಂಗನಾಜನಂ     ೧೦೫

ವನಲಕ್ಷ್ಮೀನಿವಹಂ ಪ್ರಸೂನಶರಸಂಘಾತಂಗಳಂ ಕೊಂಡುಬಂ
ದಿನನಪ್ಪಂಗಭವಂಗಮಾದ ತೆಱದಿಂದಾ ವಾರನಾರೀಜನಂ
ಜನಪಂಗಿತ್ತುದು ಕಾಣ್ಕೆಯಾಗಿ ಸುಮನೋಮಾಲ್ಯಂಗಳಂ ಪುಷ್ಪವೀ
ಜನಮಂ ಬಾಣಮೃಣಾಳಹಾರಲತೆಯಂ ಪಣ್ಗೊಂಚಲಂ ಪ್ರೀತಿಯಿಂ           ೧೦೬

ವ : ಅನಂತರಮರಸಿವೆರಸರಸನುಮಲರ್ದೊಡವಂ ತೊಟ್ಟು ತುಂಬಿಯ ನಾರಿಯನಿಂಬುವಡೆದ ಕರ್ಬುವಿಲ್ಲುಮಂ ಕುಸುಮಸರಮುಮಂ ಪಿಡಿದು ಕಾಮನುಂ ರತಿಯುಮೆಂಬಂತೆ ಜಗನ್ಮೋಹನಮನೊಡರ್ಚುತ್ತುಂ ಹೂವಿನ ಹರಿಗೆಗಳ ನಡುವೆ ಸಡಗರದಿ ನಿಂದಿರ್ಪುದುಂ

ಘನಸುಮನೋವಿಭೂಷಣಭರಕ್ಕೆನಿತಳ್ಕಿ ಬಳಲ್ದರೆಲ್ಲರುಂ
ವನಿತೆಯರೀಗಳುದ್ಘಸುಕುಮಾರೆಯರೆಂದು ನೃಪಂಗೆ ಪೇಳ್ವವೊಲ್
ಜನಿಸಿದವೊಂದೆರಳ್ ಬೆಮರಬಿಂದುಗಳುತ್ಕುಚದೊತ್ತಿನೊಳ್ ಪ್ರಭಾ
ವಿನುತಕಪೋಳದೊಳ್ ತ್ರಿವಳಿಯೊಳ್ ನೊಸಲೊಳ್ ನಳಿತೋಳಮೂಳದೊಳ್            ೧೦೭

ವ : ಅಂತು ನಿಷ್ಪನ್ನ ಪುಷ್ಪಮಯಭೂಷಾವೇಷಮಂ ಘರ್ಮಜ[ಲ] ಬಿಂದುಗಳಿಮ್ಮಡಿಸಲದಂ ನೋಡಿ ದೇವರದೇವಂ ವನಕ್ರೀಡಾಪರಿಶ್ರಮಮಂ ಜಳಕ್ರೀಡಾನುಕ್ರಮದಿಂ ಕಳೆಯಲ್ವೇಡಿ ಬಗೆದಂದಲ್ಲಿಂದೆಳ್ದು ಪೂಗೊಳದಂತಿಕಕ್ಕೆ ಮೆಲ್ಲನೆ ತಳರ್ವುದುಮಾಗಳ್

ಮುನ್ನೆಱೆಕೊಯ್ದು ತೀರ್ಚಿದೊಡೆ ಬೀತವೊಲಿರ್ದ ಲತಾಳಿಗಳ್ಗೆ ಮ
ತ್ತಂ ನಳಿನಾಕ್ಷಿಯರ್ ನಿಟಕಟಾಕ್ಷನಿಪಾತದ ಮೂಱುಬಣ್ಣದಿಂ
ಚೆನ್ನಮೆನಿಪ್ಪ ಪೂಗುಡಿಯುಮಂ ತಳಿರ್ದೊಂಗಲನುನ್ನದಾಳಿಯಂ
ಕೆನ್ನಮೊಡರ್ಚುತುಂ ಮರಳೆ ಸೊಂಪವಱೊಳ್ ಮೆಱೆವಂತೆ ಪೋಪುದುಂ      ೧೦೮

ಮೀನಲೋಚನೆಯರರವಿಂ
ದಾನನೆಯರ್ ಚಕ್ರವಾಕಮಿಥುನಸ್ತನಿಯರ್
ಮಾನಿತಕಳಹಂಸವಧೂ
ಯಾನೆಯರಪ್ಕೇಳಿಗೆಳಸಿ ಪೋಪುದದುಚಿತಂ      ೧೦೯

ವಾರಿಧಿ ದಿಕ್ಷತಿಕಡಲಂ
ಕ್ಷಾರಮಿದೆಂದುಳಿದು ದೇವಿವೆರಸೆಳ್ತಪ್ಪಂ
ತಾ ರಾಜಂ ಸತಿವೆರಸು ಮ
ನೋರಾಗದಿನಂದು ಪೂಗೊಳಕ್ಕೆಳ್ತಂದಂ           ೧೧೦

ವ : ಅಂತೆಯ್ದೆವರ್ಪುದುಂ ಮುಂದೊಂದೆಡೆಯೊಳ್

ಸುಳಿಯ ಬಳಸಿಂದೆ ಚೆಲ್ವಂ
ತಳೆದು ಸುಗಂಭೀರಮಾಗಿ ವನಲಕ್ಷ್ಮಿಯ ಮಂ
ಗಳನಾಭಿಯೆಂಬಿನಂ ಕ
ಣ್ಗೊಳಿಸಿದುದು ಸರೋವರಂ ಧೃತೋಪರಿವಳಿಕಂ          ೧೧೧

ವ : ಮತ್ತಂ ನಳನಳಿಸಿ ಬೆಳೆದು ಮರಳ್ದರಳ್ದ ಚೆಂಗಣಿಗಿಲೆ ನೆಯ್ದಿಲ್ ಕನ್ನೆನೆಯ್ದಿಲ್ ತಾವರೆ ಕೆಂದಾವರೆ ಹೊಂದಾವರೆ ಮುಂತಾದ ಪಲತೆಱದ ನೀರ್ವೂಗಳ ಬಳಗ ದೊಳೋಲಾಡುತ್ತಿರ್ದ ಷಟ್ಚರಣಚರಣಸಮಾಘಾತದಿಂದೆಸಳ್ಗಳ ಪೊರೆ ಸಡಿಲ್ತು ಸುರಿವ ಮಂಜುಕಿಂಜಲ್ಕಮಂಜರಿ ಸುಳಿಗಾಳಿಯ ವಶದಿಂ ಮೇಗೆನೆಗೆದು ಪರಕಲಿಸಿ ಬೀಳ್ದು ಜಗದ್ವಲ್ಲಭನ ಜಳಕೇಳೀಸಮುತ್ಸವದೊಳ್ ಸೂಸಿದ ವಾಸಚೂರ್ಣ ಪರಿಪೂರ್ಣ ಮಾದುದೆಂಬಂತೆ ಕಣ್ಮಲೆವರ್ಗೊಲನೋಲಗಿಪ ಲೀಲಾಸರೋವರಂ ದೀರ್ಘಿಕಾ ವಾಪಿಕಾದಿಯಿಂ ಪೊಱಮಡುವ ಘಟೀಯಂತ್ರಪ್ರವಾಹಂಗಳಿಂ ತುಂಬುವ ಪವಣಿಂ ಮಿಗಿಲಾಗಿ ತುಂಬಿದ ನೀರಂ ತುಂಬುಗಳಿಂ ಕಳೆವ ಬೆಡಂಗಗುರ್ವನೊಡರಿಸೆ ಚರಣಹರಣ ವಿದ್ಯಾನಿಪುಣೀಭೂತಜಳದೇವತಾನಿವಹಸಮವಗಾಹನಸಂಭ್ರಮನದಿಂ ವಿಡಂಬನಂ ಬಡೆದುದೆಂಬಿನಂ ಕೌತುಕಮಾಗಿರ್ಪುದುಂ

ಅದಱಂ ನಾಲ್ದೆಸೆಯೊಳಂ ಚೆ
ಲ್ವೊದವಿದ ಪೊಸಚಂದ್ರಕಾಂತಮಣಿಮಯಸೋಪಾ
ನದ ಪಂತಿ ನೀಳ್ದು ನಿಮಿರ್ದುದು
ಸುದತಿ ಸುಖಾರೋಹಣಾವರೋಹಣಕರಣಂ    ೧೧೨

ವ : ಅದಕ್ಕೆ ತಲೆದೊಡಿಗೆಯೆನಿಸಿ ನಿಱಿಸಿ ಮೆಱೆವ ನವರತ್ನಖಚಿತವಿಕಟ ಹಾಟಕ ಪರಿಘಟಿತಮಹಾಕಟಾಹಪಟಳಿಕಾಕೋಟರದೊಳಂ ರಜತರಚಿತದ್ರೋಣಿಶ್ರೇಣಿ ಯೊಳಮಲ್ಲಲ್ಲಿ ಬೇಱೆವೇಱೆ ತೀವಿದ ಕಾಶ್ಮೀರಕರ್ಪೂರಕಸ್ತೂರಿಕಾಚಾರುಹರಿಚಂದನ ಪರಿರಕ್ಷೋದದಿಂ ಸಾರಮಾದ ನೀರಿಂದುಪಸರೋವರಂಗಳೆಂಬಂತಿರದಱ ಸುತ್ತಲುಂ ಪರಿವೇಷ್ಟಿಸಿ ವಿಸ್ಮಯಮಂ ಕೆದಱುತ್ತುಂ ಮುಂದೆ ಮೆಱೆದಿರ್ದವಂತುಮಲ್ಲದೆಯುಂ

ಬಳಸಿರ್ದ ತತ್ಕಟಾಹಂ
ಗಳ ನಡುವೆ ಸರೋವರಂ ಸಘೋಷಂ ಚೆಲ್ವಂ
ತಳೆದತ್ತು ಪೆತ್ತ ಮಱಿಗಳ
ನೊಲವಿಂದಂ ತಾಯಿ ಬಿಡದೆ ಮುದ್ದಾಡಿಪವೋಲ್        ೧೧೩

ವ : ಅದಂ ನೋಡುತ್ತುಂ ನಾಡೆಱೆಯಂ ಮುಟ್ಟೆವರ್ಪುದುಂ

ನೆಗೆವ ನೀರ್ವನಿಗಳೆಂಬ
ಕ್ಕಿಗಳಿಂ ತೆರೆಗೈಗಳಿಂದೆ ಸೇಸಿಕ್ಕಿ ಕೊಳಂ
ಮಿಗುವ ಪೊಣರ್ವಕ್ಕಿಯುಲಿಯಿಂ
ಜಗದೊಡೆಯನನಂದು ಪರಸುತಿರ್ದವೊಲೆಸೆಗುಂ            ೧೧೪

ವ : ಅಂತುಬಂದು ರಾಜಾಧಿರಾಜಂ ಕಂದರ್ಪನೆಂಬ ಕಲ್ಪವೃಕ್ಷದಭಿವೃದ್ಧಿ ನಿಮಿತ್ತಮುಪಕಲ್ಪಿತಾ ನಲ್ಪತರ ಪರಿವಿಳಸದಾಳವಾಳಮೆಂಬಂತೆ ಕಣ್ಗೊಳಿಪ ತೀವಿದ ತಿಳಿಗೊಳದ ತೀರದೊಳ್ ಸುತ್ತಲುಂ ಬಳಸಿ ಸೌಂದರೀಜನಂ ಸಂದಣಿಸಿರೆ ನಿಂದಿರ್ಪುದುಂ

ತಡಿಯೊಳ್ ಕಾಂತೆಯರೆಯ್ದೆ ನಿಂದೊಳಗಣಂಭಃಶೋಭೆಯಂ ನೋಡಲಾ
ಗಡೆ ತಮ್ಮ ಪ್ರತಿಬಿಂಬಮಲ್ಲಿ ಪೊಳೆದೆತ್ತಂ ತುಂಬಿ ಕಣ್ಗೊಪ್ಪಮಂ
ಪಡೆಯಲ್ ತಜ್ಜಳದೇವತೆ ಪ್ರಿಯದೆ ನಾನಾರೂಪಮಂ ತಾಳ್ದ ನಾ
ಡೊಡೆಯಂ ಬಂದೊಡೆ ನೋಡುತಿರ್ದ ತೆಱದಿಂದಂದಿತ್ತುದಾಶ್ಚರ್ಯಮಂ      ೧೧೫

ಕಡುತೋರಮಾಗಿ ಮೇಗ
ಣ್ಗಡರ್ದ ಸ್ತನಮಂಡಳಾಂತರಿತದಿಂ ಕಾಣ
ಲ್ಪಡೆಯದುದಂ ಬಾಸೆಯನಾ
ಗಡೆ ಕಂಡರ್ ತಮ್ಮ ರೂಪು ಮಾರ್ಪೊಳೆಯಲೊಡಂ        ೧೧೬

ವ : ಆಗಳ್

ಸ್ತ್ರೀರತ್ನರಾಶಿಯೆಂಬ ಮ
ಹಾರತ್ನಸಮೂಹಮೆಯ್ದೆ ತುಂಬಿರ್ದ ಮನೋ
ಹಾರಿ ನಿಧಾನದ ಕುಳಿಯಂ
ಮಾರಬ್ರಹ್ಮಂ ವಿನಿರ್ಮಿಸಿದವೋಲೆಸೆಗುಂ        ೧೧೭

ವ : ಬಳಿಯಮಿಳಾತಳಪಾಳಕನೈವರ್ಣದ ಚೆನ್ನರನ್ನದಿಂ ತಿಣ್ಣಂ ಬಣ್ಣಿಸಿ ಪಣ್ಣಿದ ಜೀರ್ಕೊಳವಿಯ ಕೊಂಬಿನ ಜಂತ್ರದ ಬಳಗಂಗಳೆಂಬೋಕುಳಿಯ ಘಳಿಯಂಗಳಂ ತರಿಸಿಕೊಡುವುದುಂ ತಮತಮಗೆ ತಳೆದುಕೊಂಡು

ಕುಸುಮಮನುಳ್ಳ ಬಾಹುಲತೆಗಳುಱೆ ಕೈವಶವಾಗಿ ಬಂದವೆಂ
ಬೆಸಕಮನಾಂತು ಹಂಸೆ ಗಿಳಿ ಕೋಗಿಲೆಯೆಂಬಿವಱಂತೆ ಮುತ್ತಿನಿಂ
ಪಸುರ್ವರಲಿಂ ವಿನೀಲಮಣಿಯಿಂದಮೆ ಮಾಡಿದ ವಾರಿಕೇಳಿಯಂ
ತ್ರಸಮಿತಿಯಂ ಲಸತ್ಕರತಳಂಗಳೊಳಂ ಪಿಡಿದಿರ್ದರೆಲ್ಲರುಂ          ೧೧೮

ವ : ಮತ್ತಮಾ ಭುವನತ್ರಯಾಗಣ್ಯನಗಣ್ಯಲಾವಣ್ಯರಸವಿಸರದಿಂದೊಕ್ಕೆ ಸುಕ್ಕುಂಗುರುಳ ಸುತ್ತಲುಂ ತಳಿದ ಕತ್ತುರಿಯ ಪರಿಮಳದ ಪಸರದಿಂ ತೆಕ್ಕನೆ ತೀವಿದ ಜಳಕ್ರೀಡಾ ಸನ್ನದ್ಧೆಯರಾದ ಚೆನ್ನೆಯರ ಕೈವೀಸಿವುದುಂ

ಪುರುಡಿಪವೆಮ್ಮೊಳೆಯ್ದೆ ನಡೆಯಿಂ ನುಡಿಯಿಂದಮಿವೆಂದು ಕಾಂತೆಯರ್
ಪರಿದೊಳಪೊಕ್ಕು ಜೀರ್ಕೊಳವಿಯಾದುಱೆ ಜಂತ್ರದ ಮುತ್ತಿನಂಚೆಯಂ
ಮರಕತದೊಂದು ಕೋಗಿಲೆಯುಮಂ ಪಿಡಿದೋವದೆ ನೀರೊಳದ್ದಿದರ್
ಬೆರಸಿದ ಕೋಪದಿಂ ಹುಡಿಕೆನೀರೊಳಗದ್ದುತುಮಿರ್ದರೆಂದೆಂಬಿನಂ   ೧೧೯

ಸಡಗರದಿಂದೆ ಜೀರ್ಕೊಳವಿಯಿಂ ಜಳಮಂ ತೆಗೆದೆತ್ತಿ ಕೈಯೊಳಂ
ಪಿಡಿದಿರದೊರ್ವರೊರ್ವರನಡುರ್ತು ದಲೊತ್ತುತುಮಿರ್ದೊಡೆಲ್ಲಿಯುಂ
ಗಡಣಿಸಿ ಕುಂಕುಮೋದಕದ ಸಿಂಪಿಣಿ ಪರ್ವಿರೆ ಕೆಮ್ಮುಗಿಲ್ಗಳೊಳ್
ಕಡುನಿಮಿರ್ದಿರ್ದ ಮಿಂಚುಗಳವೊಲ್ ವಧುಗಳ್ ಪೊಳೆದಾಡಿದರ್ ಕರಂ         ೧೨೦

ನೆಲೆಮೊಲೆ ಮೀಱಿ ಮುಯ್ವನಡರಲ್ ನಳಿತೋಳಮೊದಲ್ ಬೆಡಂಗಿನ
ಗ್ಗಳಿಸಿರೆ ಕೊಂಕಿ ಬಳ್ಕಿ ನಡು ಕೋಮಳೆ ಮಾಣಿಸಿ ಮೇಳದಾಳಿಯಂ
ತೊಲಗದೆ ಬೆನ್ನನೊಡ್ಡೆನುತೆ ಪೊಯ್ದು ಮರಳ್ವಳನೋರ್ವಳಡ್ಡಬಂ
ದಳವಡೆ ಪೊಯ್ದಳಪ್ಪಳಿಸುವಂತೊಡನಾಯುವರಂ ಮನೋಭವಂ೧೨೧

ಓಕುಳಿಯಾಟದೊಳ್ ತೆರಳೆ ಪೂಸಿದ ಚಂದನಕರ್ಮಮಂ ನಖ
ಪ್ರಾಕಟರೇಖೆ ತೋಱೆ ಕುಚಮಂಡಳದೊಳೆ ಕಡುನಾಣ್ಚಿರಲ್ಕೆ ಮ
ತ್ತಾಕೆಯ ಮೇಳದಂಗನೆಯರೊತ್ತಿದ ಕುಂಕುಮಪಂಕವಾರಿಧಾ
ರಾಕುಳಮಲ್ಲಿ ಕಂಚುಳಿಕೆಯಂತಿರೆ ರಾಗಿಸಿಯಾಡಿದಳ್ ಕರಂ           ೧೨೨

ಸೋಗೆನಿಱಿ ನಾಂದು ಸಡಿಲರ್
ಬೇಗದಿನೋಸರಿಸಿ ಪಿಡಿದು ಮುರಿದೆಡಗೈಯಿಂ
ಬೀಗಿ ಬಲಗೈಯನೊಡ್ಡಿಸಿ
ತಾಗುವ ನೀರ್ವೊಯ್ಲನಾಂತು ನಿಂದಳದೊರ್ವಳ್           ೧೨೩

ವ : ಇಂತಗುರ್ವುವಡೆದ ಜಳಕ್ರೀಡಾಪರ್ವಮನುರ್ವರಾಧಿಪತಿ ನಡೆನೋಡು ತ್ತುಮಿರ್ಪೆಡೆಯೊಳ್

ಮಳಯಜವಾರಿಸೇಚನದಿನೊರ್ಮೆ ಕರಂ ಬಿಳಿದಾಗಿ ಕುಂಕುಮಾ
ವಿಳಜಳದೊಂದು ಸಿಂಪಿಣಿಯನೊರ್ಮೆ ಸಮಾವರಿಸಿರ್ದು ಕೆಂಪುಮಂ
ತೊಳಗುವ ಚೆಲ್ವ ಕತ್ತುರಿಯ ನೀರ ಸುರಂಜನೆಯಿಂದಮೊರ್ಮೆ ಕ
ಪ್ಪಳವಡೆ ಮಾಯದಂಗನೆಯರೆಂಬಭಿಶಂಕೆಯನಿತ್ತರಾಕ್ಷಣಂ           ೧೨೪

ಶೃಂಗಾರವತೀದೇವಿಯ
ನಂಗಜನಿಭಧರ್ಮನಾಥನಭಿಷಿಂಚಿಸಿದಂ
ಗಂಗೆಯೊಳಿಭವಲ್ಲಭೆಯಂ
ಮಂಗಳಯೂಥಾಧಿನಾಥನಭಿಷಿಂಚಿಪವೊಲ್     ೧೨೫

ಮತ್ತೀತನೆತ್ತಿದಪ್ಪಂ
ಚಿತ್ತಭವಂ ಕಾಮಕಲ್ಪಲತೆಗೆನೆ ನರಪಂ
ಬಿತ್ತರಿಸಿದ ಜಳಯಂತ್ರದಿ
ನೊತ್ತಿದನಾ ಸತಿಯ ಮೇಲೆ ಕುಂಕುಮಜಳಮಂ  ೧೨೬

ಕುಂಕುಮಜಳಧಾರಾಪ್ರಸ
ರಂ ಕುಚದೆಡೆಯಿಂದೆ ಬಾಸೆವಿಡಿದಿಳಿದುದು ತ
ತ್ಪಂಕಜವದನೆಯ ಚಿತ್ತದೊ
ಳಂಕಿತಮದನಾನುರಾಗರಸಮಿಳಿವನ್ನಂ            ೧೨೭

ವ : ಮತ್ತಂ

ಕತ್ತುರಿಯ ರಸಮನವನಿಪ
ನೊತ್ತಿದೊಡಂದಸಿಯ ಧಾರೆಯಗ್ರದೊಳೆಸೆದಳ್
ಚಿತ್ತಭವನಸಿಯ ಧಾರೆಯ
ಮೊತ್ತದ ಮುಂದೆಸೆವ ವಿಜಯಲಕ್ಷ್ಮಿಯ ತೆಱದಿಂ            ೧೨೮

ಓಪಳಮೇಲೆ ಜೀರ್ಕೊಳವಿಯಿಂ ಪೊಸಗತ್ತುರಿನೀರನೊತ್ತೆ ತ
ದ್ಭೂಪತಿ ಧಾರೆಗಟ್ಟಿಳಿವ ಪೊತ್ತಿನೊಳಾಕೆಯ ವಕ್ತ್ರಪದ್ಮಮಂ
ವ್ಯಾಪಿಸಿದತ್ತು ಭೃಂಗಕುಳಮೆಂಬಿನಮೊಪ್ಪಿಡಿಯಾದ ಮಧ್ಯಮಂ
ಧೂಪಿಸಿದತ್ತು ಮನ್ಮಥನ ಚಾಪಲತಾಘನಮೌರ್ವಿಯೆಂಬಿನಂ        ೧೨೯

ವ : ತತ್ಸಮಯದೊಳ್

ಪರಮವಿಳಾಸಸಾರರದಿಂದಮದೊರ್ಮೆ ಬೆಡಂಗುವೆತ್ತ ಭಂ
ಗುರವದಪಾಂಗದೀಪ್ತಿರಸದಿಂದಮದೊರ್ಮೆ ಮನೋಗತೋರುಭಾ
ವರಸದಿನೊರ್ಮೆ ಕುಂಕುಮಕಳಂಕಿತಸದ್ರಸದಿಂದಮೊರ್ಮೆ ತ
ನ್ನರಸನ ಮೇಲೆ ಸಿಂಪಿಸಿದಳೊಪ್ಪುವ ಪಟ್ಟದರಾಣಿ ಲೀಲೆಯಿಂ      ೧೩೦

ಬೆಳಗುವ ಹೊನ್ನಜೀರ್ಕೊಳವಿಯಿಂ ಮಿಗೆ ನೀರ್ದೆಗೆದೆತ್ತಿ ದೇವಿ ಭೂ
ತಳಪನನೊಲ್ದು ಸಣ್ಣನಡುವಂ ಮುರಿದೊಯ್ಯನೆ ಕೈಯೊಳೊತ್ತಲು
ಚ್ಚಳಿಸುವ ಕಸ್ತುರೀಘುಸೃಣಚಂದನವಾರಿಯಧಾರೆ ಬೇಱೆವೇ
ಱಿಳಿದುದು ಕಪ್ಪು ಕೆಂಪು ಬಿಳಿದಾದಲರಂ ರತಿ ಚೆಲ್ಲುವಂದದಿಂ      ೧೩೧

ಕಡುನಿಮಿರ್ದ ಪೊಳೆವ ಕಣ್ಗಳ
ಕುಡಿವೆಳಗಂ ಗಂಧಸಾರಜಳಧಾರೆಯುಯುಮಂ
ಗಡ ನಿಟ್ಟಿಸಲರಿದೆನೆ ತ
ನ್ನೊಡೆಯನ ಮೇಲರಸಿಯೊತ್ತುತಿರ್ದಳ್ ನಲವಿಂ           ೧೩೨

ವ : ಮತ್ತಮಂತಃಪುರಪ್ರಧಾನಪುರಂಧ್ರೀನಿಕುರುಂಬಮುಂ ಶಂಬರರಿಪುಸೈನ್ಯ ಮೊರ್ಮೊದಲೊಳ್ ಕವಿವಂತೆ ಮೇಲ್ವಾಯ್ದು

ತಡೆಯದೆ ಕಾಮಕಲ್ಪಲತೆಗಳ್ ತಳಿರ್ದೊಂಗಲಿನರ್ಘ್ಯಪಾದ್ಯಮಂ
ಕುಡುವವೊಲಿಂದುಮಂಡಳಿಗೆ ರಾಣಿಯವಾಸದ ಪೆಂಡವಾಸದೊಳ್
ಮಡದಿಯರಾ ಮಹೀಪತಿಯ ಸನ್ಮುಖಬಿಂಬದಮೇಲೆ ಕೂಡಿ ಕೈ
ಮಡಗದೆ ತುಳ್ಕಿತುಳ್ಕಿ ಮಿಗೆಚೆಲ್ಲಿದರೊಪ್ಪುವ ಕೆಂದಳಂಗಳಿಂ        ೧೩೩

ಸೊಂಪಾದ ಕುಂಕುಮಾಂಬುವ
ಸಿಂಪಿಣಿರಮಣಿಯರನರಸನೆಯ್ದೆ ಮುಸುಂಕಲ್
ಕೆಂಪೇಱಿದ ಮುಗಿಲೊಳ್ ಚಂ
ದ್ರಂ ಪುರುತಾರೆಗಳ ನಡುವೆ ಪೊಳೆವವೊಲೆಸೆದಂ೧೩೪

ತೀವದೊಡಂ ಶಶಿಕಾಂತ
ಗ್ರಾವದ ಜೀರ್ಕೊಳವಿಯುಗುಳುತಿರ್ದುದು ಜಳಮಂ
ಭಾವಕಿಯರೊತ್ತೆ ಹಾಸ ವಿ
ಭಾವಿಸರದಿನೆಸೆವ ಮುಖ ಹಿಮಾಂಶೂದಯದೊಳ್        ೧೩೫

ತವಕಿಸಿ ಕೂಡೆ ಸಿಂಪಿಸುವ ಕುಂಕುಮವಾರಿಯ ಕೆಂಪು ಸೀರೆಯೊಳ್
ಕವಿದಭಿರಂಜಿಸಿತ್ತು ಮದದಾನೆಗಳೆನ್ನವಿವೆಂದು ಕಾಮನೆಂ
ಬವನಿಪನೊತ್ತಿದುಂಡಿಗೆಯವೋಲ್ ವಧುಗಳ್ ಮೆಱೆದರ್ ಪಯೋಜಧೂ
ಳಿವಸರವಾರಿಯೊಳ್ ಸಲಿಲದೇವಿಯರಾಡುತುಮಿರ್ದರೆಂಬಿನಂ       ೨೩೬

ವ : ಬಳಿಯಂ

ತರತರದಿಂದಿಳಿಪಿದ ಕೊ
ಪ್ಪರಿಗೆಗಳೊಳ್ ತೀವಿ ಪೊಯ್ದ ನೀರ್ ತೀವಿ ಬರು
ತ್ತಿರೆ ಮೊಗೆಯಲೆಯ್ದದಿರ್ದೊಡೆ
ಸರಸಿಯೊಳೊಳಪುಗುವ ಬಗೆಯನರಸಂ ಬಗೆದಂ೧೩೭

ಈ ತರುಣೀಜನಂಗಳ ವಿಲೋಚನದೊಳ್ ಕುಮುದಂ ಪಯೋಧರ
ಸ್ಫಾತಿಯೊಳಂ ರಥಾಂಗಯುಗಮಾಸ್ಯದೊಳಂ ಕಮಳಂ ಪ್ರಶೋಭೆಯಿಂ
ದಾತತಮಾಗಿ ಮಚ್ಚರಿಸುತಿರ್ದುವವಂ ಪಡಿಯಿಟ್ಟು ನೋಳ್ಪೆನೆಂ
ದಾ ತನುಮಧ್ಯೆಯರ್ವೆರಸು ಪೂಗೊಳದೊಳ್ ಪುಗುತಂದನಾ ನೃಪಂ           ೧೩೮

ವ : ಶ್ರುತಿಯೆಂತುಂ ಸರದೊಳ್ ಪೊಕ್ಕು ಪರಿವಡುವುದಂತಾ ರಾಜಹಂಸಮಂ ಸರೋವರದೊಳೊಳಪೊಕ್ಕಲ್ಲಿ

ಅರೆಬಿರಿದ ಕುತ್ತೆಸಳ್ಗಳ
ಪೊರೆಯೊಳ್ ಮೆಯ್ಗರೆದು ಮೊರೆವ ಮಱಿದುಂಬಿಯ ಮೆ
ಲ್ಸರದಿಂದರವಿಂದ ಸಿರಿ
ಧರಣಿಪನಂ ಪರಸುವಂತೆ ಪಡೆದುದು ಪದಪಂ   ೧೩೯

ವ : ತದನಂತರಮನಂತ ಸೀಮಂತಿನೀಸಂತಾನಮುಂ ತಿಂತಿಣಿಗೊಂಡು ಸರೋವರಾಂತ ರಾಳಮಂ ಪುಗುವಲ್ಲಿ

ಪಲಬರ್ ಬಂದೊಡೆ ತಾವರೆ
ಯೊಳಗಿರ್ದುರುಲಕ್ಷ್ಮಿ ತೆರೆಯನಿಕ್ಕಿಸಿದವೊಲ
ಗ್ಗಳಿಸಿ ಪರ್ವಿತ್ತು ರತ್ನೋ
ಜ್ಜ್ವಳಸೋಪಾನೋತ್ಥ ಬಹಳಕಾಂತಿವಿತಾನಂ  ೧೪೦

ಜಳದೇವತೆಯರ್ ತಮ್ಮ
ಗ್ಗಳಚೆಲ್ವಿನ ಗರ್ಭದಿಂದೆ ತಲೆಕೆಳಗಾಗಿ
ರ್ದೆಳೆಯೊಳ್ ನಡೆವಂತಿರೆ ಮಾ
ರ್ಪೊಳೆವಿಂದವನಿಕ್ಕಿ ಮೆಟ್ಟುವಂತಿರೆ ನಡೆದರ್   ೧೪೧

ಉಡೆಯುದ್ದಂ ಜಳಮೆಂದು ಬಲ್ಲೊಡಮವರ್ ಕೇಳೀನಿಮಿತ್ತಂ ತಳ
ರ್ನಡೆಯಿಂದೊಯ್ಯನೆ ಗುಜ್ಜುಮೆಟ್ಟಿ ಪುಗುವಾಗಳ್ ಘಾತಕಾಸಾರಮಂ
ತಡವಿಂದೋಸರಿಸುತ್ತೆ ಚೆನ್ನಿಱಿಗಳಂ ಪೊಕ್ಕಿರ್ದರಾ ಸ್ತ್ರೀಯರೀ
ಗಡೆ ಮುಂಪೋಗಿ ಸಪತ್ನಿಯರ್ಗೆ ಕೆಳಗಾಗಿರ್ಪಂದಮೇಕೆಂಬವೋಲ್  ೧೪೨

ಪಿಡಿಯುತ್ತುಂ ಕಡುತೋರಬಟ್ಟಮೊಲೆಯಂ ಕಲ್ಲೋಲಹಸ್ತಾಗ್ರದಿಂ
ಜಡಿಯುತ್ತುಂ ನಿಱಿಯಂ ನಿತಂಬದೆಡೆಯಂ ತಳ್ಪೊಯ್ದು ಮುಟ್ಟುತ್ತಮೊ
ಳ್ದೊಡೆಯಂ ನೀವಿ ತುಂಡುಂಕುತುಂ ಪುಳಕಮುಬ್ಬೇಳ್ವಂತೆ ಮೆಯ್ಸೋಂಕುತುಂ
ಮಡು ತಾಂ ಕಾಮುಕನೆಂಬಿನಂ ಸರಸವಾಡುತ್ತಿರ್ದುದಾ ಸ್ತ್ರೀಯರೊಳ್         ೧೪೩

ನಾರೀಲಾವಣ್ಯರಸಂ
ಸಾರಂ ತಿಳಿಗೊಳದೊಳೆಯ್ದೆ ತೆಕ್ಕನೆ ತೀವಲ್
ಭೋರೆನೆ ನೆಲೆವೆರ್ಚಿ ಸಮಂ
ತಾರಯಲಾ ಪಯಸಮಾಯ್ತು ನಾಭಿದ್ವಯಸಂ೧೪೪

ಓಲಾಡಿ ವಿಮಳಜಳದೊಳ್
ಮೇಲಾಡಿ ಸರೋರುಹಕ್ಕೆ ತಮ್ಮಯ ಮೊಗಮಂ
ಲೀಲಾವತಿಯರ್ ಜಳದೇ
ವೀ ಲಾಸಮನಾಂತು ಕಣ್ಗೆ ಪಡೆದರಗುರ್ವಂ      ೧೪೫

ಪೊನ್ನ ಜೀರ್ಕೊಳವಿಯೊತ್ತುವ
ಚೆನ್ನೆಯರಿಂದೆಸೆದು ಪೋಲ್ತುದದು ಪುತ್ತಳಿಯಂ
ಬಿನ್ನಣಿಸಿ ಕಡೆದು ಬಿಡಿಸು
ತ್ತಂ ನಿಲಿಸಿದ ಮದನಯಂತ್ರಧಾರಾಗೃಹಮಂ    ೧೪೬

ವ : ಅಲ್ಲಿ ಮತ್ತೊರ್ಬಂ

ತೊಲೆಯೆನೆ ಬಡನಡು ರೇಖಾ
ವಳಿಯೆನೆ ಪಳಿ ಮೊಲೆಯ ಜಘನದತಿಭಾರಮನ
ಗ್ಗಳಿಸದೆ ತೂಗುವನೆನೆ ಕರ
ತಳದಲೀಸಾಡಲಬಲೆಗಭ್ಯಾಸಿಸಿದಂ    ೧೪೭

ಸವತಿಯ ಮೇಲೆ ಜಂತ್ರದೆ ಮನಃಪ್ರಿಯನೊತ್ತಿದ ವಾರಿಧಾರೆಗಳ್
ಕವಿದುರದಲ್ಲಿ ಬೀಳ್ದರದ ಮುನ್ನಮೆ ಕೂರದ ಪೆಣ್ಣ ಕಣ್ಗಳಿಂ
ದವೆ ಕವಿತಂದವಶ್ರುಗಳ ಬಿಂದುಗಳಾಗಳಸೂಯೆಯಿಂದೆ ಸಂ
ಭವಿಸಿದ ಭೂರಿಕೋಪರಸದಿಂದವಳಾಡಿದಳಂಬುಕೇಳೀಯಂ           ೧೪೮

ಇನಿಯನನೊರ್ವಳ್ ಕಾಡುವ
ಮನದಿಂದಂ ಮುಳ್ಗಿಪೋಗಿ ನೀರೊಳಡಂಗಲ್
ತನುಗಂಧಕ್ಕೆಳಸುವ ಭೃಂ
ಗನಿಕರಮಾ ನೆಲೆಯನುಸಿರ್ವವೊಲ್ ಮೇಲೆಸೆಗುಂ           ೧೪೯

ಕೊರಳ್ಗವಧಿಯಾ ಮುಗ್ಗಿದ
ತರುಣಿಯ ಮೊಗಮಂಬುಜಂಗಳೆಡೆಯೊಳ್ ಬೆರಸಿ
ರ್ದರಿದೆನಿಸಿ ತೋಱೆ ಭೇದಿಸ
ಲರವರಿಸಿದನವಳನಲ್ಲಿ ಕಾಣದೆ ತರುಣಂ         ೧೫೦

ಮಸೆದಲರಂಬಂ ಕಾಮಂ
ಪೊಸಕುಂಕುಮರಸದಿನರ್ಚಿಸಿದನೆಂಬಿನಮಾ
ಬಿಸಜಾನನೆಯರ ಕಣ್ಗಳ್
ನಸುಗೆಂಪಂ ಪಡೆದವಾ ಜಳಕ್ರೀಡೆಯೊಳಂ         ೧೫೧

ಪೋದುದತಿರಾಗಮಧರ
ಕ್ಕಾದುದು ದೃಷ್ಟಿಗೆ ನಿರಂಜನತ್ವಂ ತಣ್ಪಿಂ
ಬಾದುದು ಮೆಯ್ಯೊಳ್ ನಿರ್ಮಳ
ರಾದವರೊಳ್ ಕ್ರೀಡಿಪರ್ಗೆ ಲೇಸಾಗದುದೇಂ      ೧೫೨

ಅವಚತ್ತವದರ ಕೈಗಳ್
ಕವಿತಂದುದು ನಡುಕಮವರ ಮೆಯ್ಯೊಳಗೆಲ್ಲಂ
ತವೆ ಪೋದುದು ಜಳಕೇಳಿಯ
ತವಕಂ ಮತ್ತವರ ಬಗೆಯೊಳದನಱಿದರಸಂ      ೧೫೩

ವ : ನಿವಾರಿತಝಳಕ್ರೀಡಾವಸರನಾಗಿ

ಕರಿಣೀವೃಂದಂ ಬೆರಸಿದ
ಕರಿಪತಿ ನೀರಾಟಮಾಡಿ ಪೊಱಮಡುವಂತಾ
ನರಪತಿ ಪೊಱಮಟ್ಟಂ ಸೌಂ
ದರಿಯರ್ ಬೆರಸಾಗಳಾ ಸರೋವರದಿಂದಂ       ೧೫೪

ವ : ಅಂತು ಪೊಱಮಡುವಾಗಳ್

ಅಂದುಗೆಯೊಳ್ ತೊಡಂಕಿ ಬರುತಿರ್ದ ಮೃಣಾಳಮನಂಚೆವಿಂಡು ಕಂ
ಡಂದು ಕರ್ದುಂಕೆ ಬಲ್ಸೆಳೆವುತಿರ್ದೊಡವಂ ಬೆದಱಟ್ಟಿ ಸೋವುತುಂ
ಸೌಂದರಿಯರ್ ಬರಲ್ಕೆ ನಿಮಗೆನ್ನನೆ ಬಿನ್ನನೆಮಾಡಿ ಪೋಪುದ
ಲ್ತೆಂದೊಲವಿಂಗೆ ಕಾಲ್ವಿಡುವವೊಲ್ ತೆರೆಪೊಯ್ವುತುಮಿರ್ದುದಾಕ್ಷಣಂ       ೧೫೫

ವ : ಬಂದು ತಡಿಯೊಳ್ ನಿಂದು ನೋಳ್ಪಾಗಳ್

ಓಕುಳಿಯನಾಡಿ ವನಿತಾ
ನೀಕಂ ಪೊಱಮಟ್ಟು ಪೋಪುದುಂ ಬಱಿದಾಗಿ
ರ್ದಾ ಕೊಳನಿಳಿದಾಯ್ತಕ್ಷಿಗೆ
ಬೇಕೆಂಬ ನಿಧಾನಮೆತ್ತಿದೊಡೆ ಕುಳಿಯನ್ನಂ       ೧೫೬

ವ : ಅದಲ್ಲದೆಯುಂ

ಸಲಿಲಕ್ರೀಡೆಯೊಳಂಗನಾಂಗ ಗಳಿತಂ ಕಸ್ತೂರಿಕಾಕರ್ದಮಂ
ವಿಳಸತ್ಕುಂಕುಮಕಲ್ಕಮುನ್ಮಳಯಜಕ್ಷೋದಂ ಸುಕರ್ಪೂರ ಮಂ
ಜುಳರೇಣುಬ್ರಜಮುಂ ತರಂಗವಶದಿಂ ಮೇಲೆಲ್ಲಿಯುಂ ತೇಂಕಲಾ
ಜಲದಲ್ಲಿಕ್ಕಿದ ರಂಗವಾಲಿಯೆನೆ ಕಣ್ಗಿಂಬಾದುದಾ ಪೂಗೊಳಂ      ೧೫೭

ವ : ಅನಂತರಂ

ವದನಂ ಘನಸೀತ್ಕಾರದ
ಸದನಂ ಕಾಯಂ ವಿಶೇಷಪುಳಕನಿಕಾಯಂ
ಸುದತಿಯರ ಜಲಕ್ರೀಡಾ
ಪದವಿರತಮದಾದುದುಷ್ಣಪೀಡಾವಿರತಂ        ೧೫೮

ಹಸ್ತಸ್ವಸ್ತಿಕಮೊಪ್ಪಿತೋಱೆ ಕುಚಕುಂಭದ್ವಂದ್ವದೊಳ್ ನಾಂದ ಸ
ದ್ವಸ್ತ್ರಂ ಪತ್ತಿರಲಾಸ್ಯದರ್ಪಣವಿಳಾಸಂ ಮೇಲೆ ಲೇಸಾಗಿ ವಿನ್ಯ
ಸ್ತಾಷ್ಠಚ್ಛವಿಚಾರಂ ಪಲ್ಲವಮದೆಯ್ದಿಂಬಾಗೆ ನಾರೀಜನಂ
ಶಸ್ತ್ರಂ ಮನ್ಮಥಮಂತ್ರದೇವಿಯರವೊಲ್ ತಾಳ್ದತ್ತು ಮಾಂಗಲ್ಯಮಂ          ೧೫೯

ಅಡಿಗಡಿಗೆತ್ತಿ ಸಾವಗಿಸಿದತ್ತು ಸಡಿಲ್ದುಡೆನೂಲನಂದು ನಾಂ
ದಡಸಿ ಸುರುಳ್ದುಬೀಳ್ವ ಪೊಸಮೇಲುದನುತ್ಕುಚಮಂಡಳಂಗಳಿ
ಟ್ಟೆಡೆಯೊಳೆ ಸಾರ್ಚಿದತ್ತು ಪೆಗಲೊಳ್ ಕೆದಱಿರ್ದುರುಕೇಶಪಾಶಮಂ
ಕೊಡಹಿ ಕಡಂಗಿ ನೂಂಕಿದುದು ಬೆನ್ನೊಳಮೆಯ್ದಣೆದಾ ವಧೂಜನಂ            ೧೬೦

ವ : ಆಪೊತ್ತಿನೊಳ್

ವನಿತೆಯರಂಗಸಂಗಸುಖಮಂ ಪಡೆದೊಪ್ಪಮನಾಳ್ದೆವಿನ್ನೆಗಂ
ಘನಸುಖದಿಂದಗಲ್ಚಿಸಿದರಿನ್ನಿವರೆಂದುಱೆನಾಂದ ಸೀರೆಗಳ್
ತನುವನೆ ಪತ್ತಿಕೊಂಡಗಲಲಾಱದೆ ದುಃಖದೆ ಕೂಡೆ ಕಣ್ಣನೀ
ರ್ವನಿಗಳನಿಕ್ಕುವಂತಿರುದಬಿಂದುಗಳಾವಳಿ ಬಿಳ್ದುದೆತ್ತಲುಂ           ೧೬೧

ವ : ಆಗಳ್ ಭಾಂಡಾಗಾರಾಧಿಕಾರನಿಯುಕ್ತರಪ್ಪ ಗೃಹಮಹತ್ತರಮುಖ್ಯರ್ ತಂದುಕೊಟ್ಟ ದೇವಾಂಗಯೋಗ್ಯ ದೇವಾಂಗಾದಿ ಪ್ರಶಸ್ತವಿಸ್ತೃತವಸ್ತ್ರಂಗಳನುಟ್ಟು ನವವಿಧಾಭಿನವ ಮಣಿಕೇವಣದಿನಂದಂಬಡೆದಾಭರಣಂಗಳಂ ತೊಟ್ಟು ತಾನುಂ ಶೃಂಗಾರವತೀ ಮಹಾದೇವಿಯುಂ ಪೊಸಶೃಂಗಾರಭಂಗಿಯನಂಗೀಕರಿಸಿ ಬಳಿಯಮಖಿಳ ವಿಳಾಸಿ ನೀಜನಕ್ಕಂ ಮುಂದಿಳಿಪಿದ ವಸನಕುಸುಮಾನುಲೇಪನ ಭೂಷಣಕಳಾಪಂಗಳನೀ ಯಲೊಡಮವರುಮೆಯ್ದೆ ಕೈಗೆಯ್ದು ಬಳಸಿನಿಂದಿರೆ

ವಾರಸ್ತ್ರೀಯರ ನಡುವೆ ಮ
ಹೀರಮಣಂ ದೇವಿವೆರಸು ಕಣ್ಗೆಸೆದಿರ್ದಂ
ತಾರೆಗಳ ನಡುವೆ ಚಂದ್ರಂ
ಶ್ರೀರೋಹಿಣಿವೆರಸಿ ತೋರ್ಕೆವೆತ್ತಿರ್ಪನ್ನಂ         ೧೬೨

ವ : ಮತ್ತಂ ವನಮಹತ್ತರನಂ ಬರಿಸಿ

ಇದು ಕೌಂಗಿಂಗಿದು ನಾಗವಲ್ಲಿಗಿದು ವಲ್ಲೀಮಲ್ಲಿಗಿಮ್ಮಾವಿಗಿಂ
ತಿದು ಮತ್ತೆಂದುಱೆ ಬೇಱೆವೇಱೆ ಪೆಸರ್ಗೊಂಡೊಳ್ ಸೀರೆಯಂ ವಸ್ತುವಂ
ಪದಮಂ ನಂದನವಂಗೆ ಕೊಟ್ಟನಧಿಪಂ ದಾರಿದ್ರಮೆಯ್ದೋಡುವಂ
ದದಿನಲ್ಲಿರ್ದ ಮರಕ್ಕಮಾದೊಡುಡಕೊಟ್ಟಂ ವಂದಿಗೇಂ ಪೇಳ್ವುದೋ       ೧೬೩

ವ : ಇಂತು ಸಫಳೀಕೃತಸಮಸ್ತಾರ್ಥಿಸಾರ್ಥಮನೋರಥನಾಗಿಯಾ ಧರ್ಮ ನಾಥಮಹಾರಾಜಂ ಕುಸುಮಂಕರೋದ್ಯಾನದಿಂ ಪೊಱಮಟ್ಟು ಪಟ್ಟದರಸಿವೆರಸು ಪಣ್ಣಿದ ಪಟ್ಟದಾನೆಯನೇ ಱಿ ಪರಿಕೃತಸಕಳಪರಿವಾರಪರಿವೃತನಲ್ಲಿಂ ತಳರ್ದು

ಮಂಡಳಿಗೊಂಡು ಬೆಳ್ಗೊಡೆಗಳಂಬರಮಂ ಪುದಿಯಲ್ ಸಮಂತು ಭೂ
ಮಂಡಳಮಂ ಮುಸುಂಕೆ ಘನವಾರಣವಾಜಿಪದಾತಿಸೈನ್ಯಕಂ
ಮಂಡನರತ್ನರಾಜಿಕಿರಣಪ್ರಸರಂ ದೆಸೆಯಂ ತುಡುಂಕಲಾ
ಖಂಡಳನೆಂಬಿನಂ ತಡೆಯದೆಯ್ದಿದನಾ ನಿಜರಾಜಧಾನಿಯಂ           ೧೬೪

ವ : ಆ ಪುರಗೋಪುರದ್ವಾರಮಂ ಪುಗುವಲ್ಲಿ

ವನವಾರಿ ಕ್ರೀಡೆಯಂ ನಿರ್ಮಿಸಿ ಜಗದಧಿಪಂ ಬಂದನೆಂದಾ ಪುರಸ್ತ್ರೀ
ಜನಮೆಲ್ಲಂ ನೋಳ್ಪ ವಾಂಛಾತುರತೆಯನಿರದೆಯ್ತಂದು ನಿಂದಿರ್ದು ಕಾಮಂ
ಗಿನಿತೊಂದಾಶ್ಚರ್ಯರೂಪಂ ಘಟಿಸದಿನಿತುಸಂಪತ್ತಿ ಶಕ್ರಂಗಮಿಲ್ಲೆಂ
ದೆನುತುಂ ನೋಡಲ್ಕೆ ಪೊಕ್ಕಂ ಪುರದೊಳಖಿಳ ದೃಕ್ಕೈರವಾನಂದಚಂದ್ರಂ      ೧೬೫

ವ : ಅಂತು ಪುರಮನರಮನೆಯಂ ಪೊಕ್ಕು ರಾಜಾಧಿರಾಜಂ ರಾಜಾಂಗಣದೊಳ್ ನಿಂದು ಗಂಧಗಜರಾಜನಿಂದಿಳಿವುದುಮಹಮಹಮಿಕಾಭಿವಾದಕ ಸಕಳ ಮೇದಿನೀ ಪಾಳಕರ್ ತಂತಮ್ಮ ಮಾಣಿಕ್ಯಮಯಕಿರೀಟಕೋಟಿಕಿರಣಮೇಳಾಪ ದೀಪಕಳಾಪದಿಂ ತದೀಯ ಚರಣಯುಗಳಕ್ಕಾರತಿಯನೆತ್ತುತ್ತುಮಿರೆ

ಕೆಲರಂ ಚಾಳಿತಮೌಳಿಯಿಂದೆ ಕೆಲರಂ ಹಸ್ತಾಂಗುಳೀ ಚಾಳದಿಂ
ಕೆಲರಂ ವೀಕ್ಷಣಭಂಗಿಯಿಂದೆ ಕೆಲರಂ ತಾಂಬೂಳದಾನಂಗಳಿಂ
ದೊಲವಿಂ ಬೀಳ್ಕೊಡೆ ಕೈಗಳಂ ಮುಗಿದು ಭಾಳಾಗ್ರಕ್ಕೆ ತಂದಿರ್ದದಂ
ಸಲೆಪೋದತ್ತು ಸಸೈನ್ಯಕಂ ನಿಜನಿಜಾವಾಸಕ್ಕೆ ರಾಜನ್ಯಕಂ೧೬೬

ವ : ಮತ್ತಮುತ್ತುಂಗಮಣಿಮಯಮಂಡಪಮಧ್ಯಸಮುದ್ವಿಷಿತ ಕನತ್ಕನಕ ಮಯ ಸಿಂಹಾಸನಸುಖಾಸೀನನಾಗಿರ್ಪುದುಮಾಘೂರ್ಣಿತ ಮಾಂಗಳಿಕಶಂಖಭೇರೀ ದುಂದುಭಿಸಂದೋಹಗಂಭೀರಧ್ವಾನಮೆಣ್ದೆಸೆಯಂ ಪಳಂಚಲೆಯಲಾಗಳಂಕಾರಕಳಿತ ಕಮನೀಯ ಕಾಮಿನೀನಿಕರಮನೇಕ ಕಳಧೌತ ಕಳಧೌತಭಾಜನ ಸಮಾಜವಿನಿಹಿತ ಸರೋಜರಾಗನೀರಾಜನರಾಜಿಗಳನೆತ್ತುವವಸರದೊಳ್ ಮಂಗಳಪಾಠಕರ್ ನೆರೆದು ಮಂಗಳವೃತ್ತಂಗಳನಿಂತೆಂದೋದಿಯರ್

ನಲವಿಂ ನಿಮ್ಮಯ ರಾಜ್ಯದಭ್ಯುದಯದೊಳ್ ಪೆರ್ಚಿರ್ದ ಲಕ್ಷ್ಮೀಸದೃ
ಕ್ಷಲಸತ್ಕಾಂತೆಯರೆತ್ತುವಾರತಿಯ ಮಾಂಗಲ್ಯಕ್ಕೆ ಮಾಂಗಲ್ಯಮಂ
ಸಲಿಸುತ್ತುಂ ಜಗತ್ಪ್ರಿತಯಾಧಿಪತಿ ನಿನ್ನೊಳ್ ದೇವದೇವಾರ್ಚಿತಾ
ನೆಲೆಗೊಂಡಾವಗಮಿಕ್ಕೆ ಕೂಡೆ ವಿಜಯಂ ಭದ್ರಂ ಶುಭಂ ಮಂಗಳಂ   ೧೬೭

ಜನತಾ ನೀಲೋತ್ಪಲಕ್ಕಾವಗಮೊಗೆಗೆ ಮಹಾನಂದನಂದದ್ವಿಕಾಸಂ
ಜನಿತೋದ್ಯತ್ತಾಪಮಾದಂ ಕೆಡುಗಮೃತಕಳಾವ್ಯಕ್ತಿಮಾಂಗಲ್ಯದಿಂದಂ
ಘನಮಿಥ್ಯಾತ್ವಾಂಧಕಾರಸ್ಥಿತಿಗೆಸುಗೆ ನಿರ್ನಾಶದೊಂದೇಳ್ಗೆ ನಿನ್ನಿಂ
ಜಿನಧರ್ಮಾಂಬೋಧಿ ಪೆರ್ಚಂ ತಳೆದು ಮಿಗುಗೆಲೇದೇವ ಭೂಚಕ್ರಚಂದ್ರಂ      ೧೬೮

ವ : ಎಂದೋದುವ ಮಂಗಳವೃತ್ತಂಗಳನಾಲಿಸುತ್ತಮವರ್ ತಳಿದ ಮಂಗಳಾಕ್ಷ ತಂಗಳಿನುತ್ತಮಾಂಗದೊಳಾಂತುಕೊಳುತ್ತುಮಿರಲಾ ಪ್ರಸ್ತಾವನಾನುಗತಸಮುಚಿತ ವಿಕಟನಾಟಕ ಪಟುನಟನಾವಿನೋದವಿಲೋಕನ ಸಮನಂತರಮವರಂ ಕಳಿಪಿ ಬಳಿಯಂ ಮಜ್ಜನ ಭೋಜನವ್ಯಾಪಾರಮಂ ತೀರ್ಚಿ ಸುಖದಿನಿರುತ್ತುಮಿರೆ

ಪಿರಿದುಂ ಸಂಸಾರಸೌಖ್ಯಾನುಭವವಿಭವಮಂ ತಾಳ್ದಿದಂ ಧರ್ಮನಾಥಂ
ಪರಮೋದ್ಯದ್ಧೀಸನಾಥಂ ಸುಜನವಿನುತಪುಣ್ಯಂ ಚರಿತ್ರಾಗ್ರಗಣ್ಯಂ
ಪರಿಣಸ್ಯದ್ಭಾವಜಂ ಬಾಹುಬಲಿಸುಕವಿರಾಜಂ ಗುಣಾಂಭೋಧಿರಾಜಂ
ಧರಣೀಪಾಲಾರ್ಚಿತ ಶ್ರೀಪದಸರಸಿರುಹಂ ಚಾತುರೀಜನ್ಮಗೇಹಂ    ೧೬೯

ಗದ್ಯ : ಇದು ಸಕಲಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮಜಿನ ಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿ ಪಂಡಿತದೇವಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ವಸಂತೋತ್ಸವ ವನ ಜಳಕೇಳೀವಿನೋದಪರಿವ್ಯಾವರ್ಣನಂ ಚತುರ್ದಶಾಶ್ವಾಸಂ.