ಪರಿವಾರದ ಕೆಯ್ಯಂ ಪಿಡಿ
ದಿರದಿತ್ತಂ ಮಂತ್ರಿಮಂಡಳಿಕ ಹಿತಸಾಮಂ
ತರನಪ್ಪೈಸಿದನಾಪ್ತನಿ
ಕರಮಂ ಬಂಧುಗಳನಂದು ಕೈಲಡೆಗೊಟ್ಟಂ      ೧೨೧

ಮಾಳವಭೂಪನಂ ಬಿಡದೆ ಮನ್ನಿಸು ಗುರ್ಜರರಾಜನಿಚ್ಛೆಯಂ
ಪಾಲಿಸು ಕುಂತಳಕ್ಷಿತಿಪನಂ ಮಿಗೆ ಸಂತಯಿಸಿಂದ್ರಭೂಪನಂ
ಲಾಲಿಸು ಚೋಳಭೂವರನನೇಳಿಸದಿರ್ ಸಲಹೆಂದು ನಾಮಮಂ
ಪೇಳಿಯೆ ಸುಟ್ಟಿತೋ ಠಿ ಕುವರಂಗುಸಿರ್ದಂ ಧರಣೀತಳಾಧಿಪಂ       ೧೨೨

ಮುಂದೆ ಕರಂಗಳಂ ಮುಗಿದು ನಿಂದವನೀತನವಂತಿವಲ್ಲಭಂ
ಪಿಂದೆ ಸಿತಾತಪತ್ರವನಿವಂ ಪಿಡಿದಂ ಮಗಧಾಧಿನಾಯಕಂ
ಸೌಂದರಚಾಮರಂಬಿಡಿದು ನಿಂದರಿವರ್ ಸಲೆ ಕೀರ ಕೇರಳರ್
ಬಂದವಧಾನಕಾಣಿಕೆಯನೆಂಬವನೀತನುದಾತ್ತನೈಷಧಂ    ೧೨೩

ಇವರಾದಿಯಾದ ನೆಱೆನಿ
ನ್ನವರಂ ಪೋಷಿಸುವುದೆಂಬ ತಂದೆಯ ನುಡಿ ಕಡು
ಸವಿಯಾದೊಡಮಾ ಕುವರನ
ಕಿವಿಗಿನಿಸುಂ ಸೊಗಸನಿತ್ತುದಿಲ್ಲಾಕ್ಷಣದೊಳ್    ೧೨೪

ವ : ಇಂತು ಸಮಸ್ತಮನೊಪ್ಪುಗೊಟ್ಟು ಬಳಿಯಂ ಮಹಾಸೇನಮಹಾರಾಜಂ ತತ್ಸಮಯಕ್ಕು ಚಿತಮಾದ ರಾಜನೀತಿಸಮಾಕಥನಾಭಿರುಚ್ಯಮಾನಮಾನಸನಾಗಿ ಮತ್ತಮಿಂತೆಂದಂ

ಎಲೆ ಧರ್ಮನಾಥ ನೀನು
ಜ್ಜ್ವಳಬೋಧತ್ರಯಮನಾಂತೊಡಂ ಮಗನೆಂಬ
ಗ್ಗಳಮಂ ದೇವಳದೊಳೊಂದಿ
ನಲವಿಂದಂ ರಾಜನೀತಿಯಂ ನಿನಗುಸಿರ್ವೆಂ        ೧೨೫

ದಿನಕರನ ಮುಂದೆ ದೀವಿಗೆ
ಯನೆ ತೋಱುವ ಮಾಳ್ಕೆಯಾದೊಡಂ ಕಿಱಿದಂ ಬ
ಲ್ಲನಿತಂ ಪೇಳ್ದಪೆನದು ಮ
ತ್ತೆನಸುಂ ಘನತೀಕ್ಷಣಕ್ಕೆ ಕಾರಣಮಲ್ತೇ           ೧೨೬

ವ : ಅದೆಂತೆನೆ

ಅರಿಷಡ್ವರ್ಗ ಜಿಗೀಷುವಪ್ಪುದು ಲಸತ್ಪಂಚಾಂಗಮಂತ್ರಾದಿ ತ
ತ್ಪರನಾಗಿರ್ಪುದು ಸರ್ವಸಾಧನವಿಶೇಷಾಭ್ಯಾಸಿಯಾಗಿರ್ಪುದು
ದ್ಧುರಶಕ್ತಿತ್ರಯಧಾರಿಯಪ್ಪುದು ಮಹಾಸೆಪ್ತಾಂಗಸಂವರ್ಧನ
ಸ್ಥಿತನಾಗಿರ್ಪುದು ಸತ್ರಿವರ್ಗಧರನಾಗಿಂತಿರ್ಪುದು ಕ್ಷತ್ರಿಯಂ            ೧೨೭

ಪದುಳಿದನಪ್ಪುದೋಜೆವೆರಸಿರ್ಪುದು ಸಾಮವಿಭೇದದಾನದಂ
ಡದೊಳತಿವಿಜ್ಞನಪ್ಪುದು ಸುಶಿಕ್ಷಿತನಪ್ಪುದು ರಾಜನೀತಿಗಾ
ಸ್ಪದನೆನಿಸಿರ್ಪುದುನ್ನತವಿಚಾರವಿವೇಕ ನಿಧಾನನಪ್ಪುದು
ನ್ಮದಹರನಪ್ಪುದುದ್ಘನಯವೇದಿಯೆನಿಪ್ಪುದು ರಾಜನಪ್ಪವಂ      ೧೨೮

ನುಡಿವುದು ಸತ್ಯಮಂ ಬಿಡದೆ ಬೇಡಿದರ್ಗೀವುದು ಭಾಗಮಂ ಮನಂ
ಗೆಡದಿಹುದೆಯ್ದೆ ಮುಟ್ಟಿದೆಡೆಯೊಳ್ ಮಱೆವೊಕ್ಕರನೊಲ್ದುಕಾಯ್ವುದಾಂ
ತೊಡೆ ಕದನಕ್ಕೊಡರ್ಚುವುದು ದಾನದ ಧರ್ಮದ ಶೀಲದೇಳ್ಗೆಯಂ
ನಡಸುವುದೊಳ್ಗುಣಂಗಳನೆ ತಾಳ್ದುವುದಿಂತಿದು ರಾಜಲಕ್ಷಣಂ       ೧೨೯

ವಿನಯಮನೆಯ್ದೆಮಾಳ್ಪುದಖಿಳಪ್ರಜೆಗಳ್ಗನುಯೋಗ್ಯಮಾಗಿಯಾ
ವಿನಯದಿನೆಲ್ಲರುಂ ಮಿಗೆ ಸುರಾಗಸಮಾಕುಳರಪ್ಪರಾ ಸುರಾ
ಗ ನಿಯತಿಯಿಂದಮಕ್ಕು ನಿನಗರ್ಥವಿಶೇಷದ ಲಾಭಮೆಂತು ವಾ
ರಿನಿಧಿಸುರಾಗಸಂಗತದಿನಿತ್ತುದು ಲಕ್ಷ್ಮಿಯನಶ್ವನಾಗಮಂ೧೩೦

ತನ್ನೊಳ್ ಸಾಮ್ರಾಜ್ಯಮಿರ್ದುಂ ಪರನ ನೆಲನನಾಕಾಂಕ್ಷಿಸುತ್ತಿರ್ಪ ಭೂಪಾ
ಲಂ ನಾಡೊಳ್ ನಾಡೆಯುಂ ಲಾಘವಮನೆ ಪಡೆಗುಂ ವಿಷ್ಣು ಮೂಲೋಕಮಂ ಸಂ
ಪನ್ನಂ ತಾಳ್ದಿರ್ದೊಡಂ ಕುಕ್ಷಿಯೊಳುಱೆ ಬಲಿಯಂ ಭೂಮಿಯಂ ಬೇಡುವಾಗಳ್
ಕೆನ್ನಂ ತಾನಾಗನೇ ವಾಮನ ಲಸದವತಾರಂ ಘನಾಕಾಂಕ್ಷೆ ಬೇಡೈ     ೧೩೧

ಪಿರಿದುಂ ಭಂಡಾರಮಂ ಸಂಗ್ರಹಿಸುವುದು ವಿಪತ್ಕಾಲದೊಳ್ ತನ್ನ ರಕ್ಷಾ
ಕರಣಾರ್ಥಂ ಕೋಶಮುಳ್ಳಂಬುಜವನಮನದೇನಾಕ್ರಮಂಗೆಯ್ಗುಮೇ ಷ
ಟ್ಚರಣಂ ನಿಷ್ಕೋಶಮಾಗಿದ್ದರಳಿದುದಮನಾಕ್ರಾಮಣಂಗೆಯ್ದವೊಲ್ ತ
ತ್ಪರಮಾರ್ಥಂ ಲೌಕಿಕಂ ಸಿದ್ಧ್ಯತಿ ನಧನ ಮೃತೇಯೆಂಬ ಸನ್ನೀತಿಯಿಂದಂ      ೧೩೨

ಗುಣಿಯೆನಿಪ ಯೋಗ್ಯನಂ ಮ
ತ್ತೆಣಿಸದೆ ದುಷ್ಕಾರ್ಯದಲ್ಲಿ ಯೋಜಿಸುವರಸಂ
ಮಣಿಯಂ ಕಬ್ಬುನದೊಳ್ ಕೇ
ವಣಿಸುವನಂ ಪೋಲ್ಕು ಯುಕ್ತಿಶೂನ್ಯನೆನಿಕ್ಕುಂ೧೩೩

ಪ್ರಜೆಯಂ ಪಾಲಿಸದಂ ಸ್ಬಬಂಧುಚಯಮಂ ತನ್ನಂದದಿಂ ಮಾಡದಂ
ನಿಜಭೃತ್ಯೌಘಮನೆಯ್ದೆಪೋಷಿಸದವಂ ಷಾಡ್ಗುಣ್ಯಸಂಪತ್ತಿಸಂ
ಭಜನಂಗೆಯ್ಯದವಂ ಕೃತಜ್ಞತೆಗನಾಧಾರಂ ದಲಾಗಿರ್ಪವಂ
ವಿಜಯಶ್ರೀಪ್ರಿಯನಲ್ಲದಂ ನರಪನೆಂಬೀ ನಾಮಕೆಂತೊಪ್ಪುವಂ      ೧೩೪

ಧರೆಯಂ ರಾಜರನೇಕರಾಳ್ದೊಡಮದಾರೊಂದಾಗಿಯುಂ ಪೋದುದಿ
ಲ್ಲೆರವಾಗಿರ್ದದುಕಾರಣಂ ನೆಲಸಿನಿಂದಿರ್ದಲ್ಲಿಯೆಲ್ಲರ್ಗೆ ಬಂ
ಧುರಸೌಖ್ಯೋನ್ನತಿಯೆಂಬ ತತ್ಫಲಮನಿತ್ತೆಂಟುಂ ದಿಶಾಭಾಗದೊಳ್
ಪರಿಪಂಥಿವ್ರಜನಿರ್ಜಯೋರ್ಜಿತ ಮಹಾಪ್ರಖ್ಯಾತಿಯಂ ಬಿತ್ತು ನೀಂ  ೧೩೫

ವ : ಇಂತೆಂದನಂತರಾಜನೀತಿಕಥನದ ಸಮನಂತರಮರಸಂ ನಿರಂತರಿತ ಸಂತೋಷ ದಿಂದಶೇಷಮನೊಪ್ಪುಗೊಡುವುದುಂ

ಪೊಱೆಯಂ ಪೊತ್ತಿರ್ದುದಂ ತಂದಿಳಿಪಿದ ತೆಱದಿಂ ತನ್ನ ಸಾಮ್ರಾಜ್ಯಮಂ ನಾ
ಡೆಱೆಯಂ ಮುಂಕೊಟ್ಟು ಸಂಸದ್ಗೃಹದೊಳಖಿಳಮಂ ಬಿಟ್ಟು ನಿಶ್ಚಿಂತಮಿರ್ದಂ
ನೆಱೆತೇಜಂಬೆತ್ತು ಪುತ್ರಂ ಘನಪರಿಕರಮಂ ಕೂಡಿಕೊಂಡಿರ್ದು ಪೆರ್ಚಂ
ಮೆಱೆದಂ ಪೂರ್ವಾಹ್ಣದೊಳ್ ಮೂಡುವ ದಿನಕರನುಂ ಚಂದ್ರನುಂ ಕೂಡಿದನ್ನಂ        ೧೩೬

ವ : ಮತ್ತಂ ಪಟ್ಟಬದ್ಧೋತ್ಸವದೊಳತೀವಮುಖ್ಯಮಂಗಳಮಾದ ಜಿನ ಪೂಜೋತ್ಸಾಹ ಮನಭಿಪ್ರಖ್ಯತರಮಾಗಿಸಲ್ವೇಡಿ ವಸುಧಾನಾಯಕಂ ಸಕಳಪರಿವಾರಂಬೆರಸಿ ವಿಪುಳಕಿರಣಾವಳಿತಮಣಿತೋರಣದೋರಳಿಗಳಿಂ ರಮಣೀಯತೆವೆತ್ತ ವಿಚಿತ್ರಚೈತ್ಯಾಲಯಕ್ಕೆ ಬಂದೊಳಗಂ ಪುಗುವುದುಮಲ್ಲಿ

ಪೊಳೆವತ್ಯುನ್ಮುಖವನ್ಮಯೂಖಶಿಬಿಕಾಲೇಖಾವಲಿಖ್ಯೋದ್ಘಮಂ
ಗಳ ಮಾಣಿಕ್ಯಮಯಪ್ರದೀಪತತಿಗಳ್ ಚೆಲ್ವಾದವಲ್ಲಲ್ಲಿಗಂ
ಕಳಕಳಾಗರು ಧೂಪಧೂಮಲತಿಕಾದಿ ಶ್ಯಾಮಳಸ್ಥೂಳಸ
ತ್ಕಳಧೌತೋಜ್ವಳ ಪೀನಧೂಪಘಟಿಕಾಪೇಟಂಗಳುಂ ರಂಜಿಕುಂ      ೧೩೭

ಸುರಭಿಮಳಯರುಹರಪಭೃತ
ಮರಕತಶುಕ್ತಿಗಳುಮಮಳಕಳಮಾಕ್ಷತಮಂ
ಹರಿನೀಲದ ಕರಡಗೆಗಳು
ಮುರುವರ ಮಂದಾರಮಾಲೆಗಳುಮಿರದೆಸೆಗುಂ೧೩೮

ವ : ಇಂತು ಮನಂಗೊಂಡ ಮಂಡಪದ ನಡುವೆ ಕುಳಸರಿದಮಳಸಲಿಲಸಮ್ಮಿ ಶ್ರೀಕೃತ ಕರ್ಪೂರದಳ ಬಹಳಕಾಂತಿದಂತುರಿತ ಚಂದ್ರಕಾಂತಕಾಂತಕಳಶಸಹಸ್ರಂಗಳ ವಿಳಾಸಮಂ ನೋಡುತ್ತುಂ ಹರ್ಷಪುಳಕಿತವರ್ಷನಾನಂದಬಾಷ್ಪಜಳವಿಲುಳಿತ ವಿಲೋಚನನಾಗಿ ದರ್ಶನಸ್ತವನಮಂ ವಿಸ್ತರಿಸಿ ವಿಸ್ತರಿಸಿ ಪಂಚಪರಮೇಷ್ಠಿಗಳ ಚರಣಕಮಳಂಗಳಿಂ ಗರ್ಘ್ಯಪಾದ್ಯಮನೆತ್ತಿ ಭೂರಿಕ್ಷೀರಸಂಭೃತಗಂಭೀರ ಶಾತಕುಂಭೀಯ ಶುಂಭದ್ಭೃಂಗಾರಮಂ ಪಿಡಿದು

ಸರ್ಕರೆಯಿಂದಮಿಕ್ಷುರಸದಿಂದೆಳನೀರ್ಗಳಿನೊಳ್ಪು ಕೂಡೆ ಕೈ
ಮಿಕ್ಕಭಿರಂಜಿಸಿರ್ಪ ಪೊಸತುಪ್ಪದಿನೊಪ್ಪುವ ಪಾಲಧಾರೆಯಿಂ
ದುಕ್ಕುವ ಚೆಲ್ವ ಘಟ್ಟಿಮೊಸರಿಂದಭಿಷೇಕಮನಂದುಮಾಡಿದಂ
ದಿಕ್ಕುಳದಲ್ಲಿ ಪಂಚವಿಧವಾದ್ಯರವಂ ಬಿಡದುಣ್ಮಿಪೊಣ್ಮಲುಂ      ೧೩೯

ವ : ಸಮನಂತರಂ

ಅಷ್ಟವಿಧದರ್ಚನೆಗಳಿಂ
ದಷ್ಟಮಹಾಪ್ರಾತಿಹಾರ್ಯಯುತನಂ ಹರ್ಷೋ
ತ್ಕೃಷ್ಟತೆಯಿಂದರ್ಚಿಸಿದಂ
ಶಿಷ್ಟಜನಂಬೆರಸಿ ಭವ್ಯಚೂಡಾರತ್ನಂ೧೪೦

ವ : ಇಂತು ಮಹಾಮಹಿಮೆಯಿಂ ಮಹೀತ್ರಯಮಹನೀಯ ಜಿನನಾಥಂಗಭಿಷೇಕ ಪೂಜೆಗಳಂ ಶಾಸ್ತ್ರಕ್ರಮಮನತಿಕ್ರಮಿಸದೆ ಮಾಡಿ ಪರಿಲಟಹನಿಟಿಳ ತಟಕುಟ್ಮಳಿ ತಾಂಜಳೀಪುಟಘಟನಾಪ್ರಕಟೀಕೃತವಿನಯವಿನಮಿತೋತ್ತಮಾಂಗಂ ಗಂಧೋದಕಸಿದ್ಧ ಶೇಷಾಕ್ಷತ ಸಮಲಕ್ಷಿತ ಧಮ್ಮಿಲ್ಲಭಾರಸಮುಲ್ಲಸಿತಂ ಜಿನವರಚರಣ ಯುಗಳಪರಿಕಳಿತ ಮಳಯರುಹತಿಳಕವಿಳಸಿತ ವಿಕಚಮುಖಕಮಳಂ ಕ್ಷಿತಿಪತಿತಿಳಕನಾ ಬಸದಿಯ ಮೊಗಸಾಲೆಯೊಳಿಕ್ಕಿದ ಮುತ್ತಿನ ಗದ್ದಿಗೆಯ ಮೇಲೆ ಕುವರಂಬೆರಸಿ ಕುಳ್ಳಿರ್ದು

ಲೋಕದೊಳಗುಳ್ಳ ಪಾತ್ರಾ
ನೀಕಂ ನೆಱೆಯದು ವಿಶಿಷ್ಟದಾನಕ್ಕೆನೆ ಭೂ
ಲೋಕಂ ಕೊಂಡಾಡುವಿನಂ
ಸಾಕೆಂಬನ್ನವರಮಿತ್ತನೆಲ್ಲರ್ಗರಸಂ    ೧೪೧

ವ : ಇಂತತಿಶಯಮಾಗಿಯೊಸಗೆಗೆ ಪೊಱಗಾದರಾರುಮಿಲ್ಲೆಂಬಿನಂ ತನ್ನಯ ಬಂಧು ಸಂದೋಹಕ್ಕೆ ಕಣ್ಮೊಗಂ ನೋಡದೆ ತೊಡಲುಮುಡಲುಮುಣಲುಂ ಕೊಟ್ಟು ಸರ್ವರ್ಗೆ ಸಂತುಷ್ಟಿಯಂ ಪುಟ್ಟಿಸದನಂತರಂ ಜಿನಾಯತನಮಂ ಪೊಱಮಟ್ಟು ನಿಜನಿವಾಸಕ್ಕೆ ಬಿಜಯಂಗೆಯ್ದು ಜಗದೊಡಗೂಡಿಯಮೃತಾಹಾರಮನಾರೋಗಿಸಿ ಕೈಘಟ್ಟಿಗೊಂಡು ಹಸ್ತಪ್ರಕ್ಷಾಲನಂಗೆಯ್ದು ಕರ್ಪೂರತಾಂಬೂಳಚರ್ವಣದಿಂದಂತರಂಗದೊಳೊಂದಿದರಾಗರಸಪೂರಮಂ ಪೊಱಸೂಸುವಂತಿರಧರ ಪ್ರದೇಶಮಂ ರಾಗರಂಜಿತಂ ಮಾಡುತ್ತುಂ ಪಳಿಕಿನ ನೆಲದೊಳ್ ಮೆಲ್ಲಮೆಲ್ಲನೆ ಲೀಲೆಯಿಂ ನಡಪಾಡಿ ಕಳಮರಾಳಿಕಾತೂಳಜಾಳಪರಿ ಕಳ್ಪಿತ ಸಪ್ತತಳ್ಪತಳದೊಳೊಪ್ಪದಿಂ ಮಲಂಗಿ ಸುಖದಿಂದಿರುತ್ತಿರೆ

ಸೆಱೆಯಾಗಿರ್ದರಿನೃಪರಂ
ನೆಱೆಬಿಡಿಸಿದನಂದು ಕುಂಜರಂಗಳೊಳಂ ಮ
ತ್ತುಱೆಸಿಕ್ಕಿದ ಪಕ್ಕಿಗಳಂ
ಪೊಱಮಡಿಸಿದನಾಕ್ಷಣಂ ಮಹೀಪತಿತಿಳಕಂ       ೧೪೨

ವ : ಆ ಪೊತ್ತಿನೊಳ್

ಬಾಜಿಸುವ ಬದ್ದವಣದಿಂ
ರಾಜಿಸಿ ಕಡುನಿಮಿರ್ವ ಕುಡಿಗಳಿಂ ಠಾಯೆಗಳಂ
ಯೋಜಿಸಿ ಪಾಡುವರಿಂ ವಿ
ಭ್ರಾಜಿಸುಗುಂ ನಾಟ್ಯರಚನೆಯಿಂದಾ ನಗರಂ      ೧೪೩

ವ : ಇಂತತ್ಯಂತಸಂಭ್ರಮಮನೊಳಕೊಂಡು ಮಂಗಳಮಯಸ್ವರೂಪಮಾದು ದೆಂಬಂತೆ ಕಣ್ಗೊಂಡ ರತ್ನಪುರದೊಳರಸನಿರ್ದು ಕತಿಪಯದಿನಂಗಳಂ ಕಳಿದೊಂದು ದಿವಸಂ ಸುತನನುಮತದಿಂ ತಪಶ್ಚರಣಗ್ರಹಣಕಾರಣಮ ತಪೋವನಕ್ಕೆ ಪೋಗಲುದ್ಯುಕ್ತನಾಗಿ ರ್ಪುದುಂ

ಒರ್ವಂ ವನಪಾಲಕನಂ
ದುರ್ವಿದ ಮನದಿಂದ ಪಿಡಿದು ಕೆಯ್ಯೊಳ್ ಕುಡಿಯುಮ
ನುರ್ವೀಶನ ಗೃಹಧಾರಾ
ಖರ್ವಸ್ಥಾನಕ್ಕೆ ಬೇಗದಿಂದಂ ಬಂದಂ   ೧೪೪

ವ : ಬರೆ ದೌವಾರಿಕಂ ಪೋಗಿ ನರವರಂಗೆ ಬಿನ್ನಪಂಗೆಯ್ಯೆ ಬರವೇಳೆನಲಾತನ ಮನೋರಥರಥಕ್ಕೆ ಸಾರಥಿಯಾಗಿ ಬರ್ಪಂತು ಬಂದು ವಿನಯವಿನಮಿತೋತ್ತಮಾಂಗನ ಕಾಲಸಂಜಾತಪುಷ್ಪಪಲ್ಲವಂಗಳಂ ಕಾಣಿಕೆಯಂ ಕೊಟ್ಟು ಬಿನ್ನಪಮೆಂದಿಂತೆಂದಂ

ಯಮಧರಭಟ್ಟಾರಕರು
ತ್ತಮಮುನಿಸಮುದಾಯಸಹಿತರೆಳ್ತಂದೀ ನ
ಮ್ಮಮಿತವನಮೆಂಬ ವನದೊಳ್
ಸಮಭಾವದಿನಿರ್ದರಾಗಕ್ರಮದಿಂದಂ   ೧೪೫

ವ : ಎಂದು ಬಿನ್ನೈಸಲೊಡಮಾಸನದಿನೆಳ್ದು ತದ್ದಿಶಾಮುಖಕ್ಕಭಿಮುಖನಾಗಿಯಾ ಭೂಮೀಶಂ ಮೂಮೆ ಪೊಡವಟ್ಟು ಬಂದವಂಗಂಗಚಿತ್ತಮನಿತ್ತು ತನ್ನ ಬಗೆಗನು ಕೂಲಮಪ್ಪ ಕಾರ್ಯಮಾದುದೆಂದು ಪರಮಾನಂದಪರಿಕಳಿತನಾಗಿ

ಸೆಱೆಯೊಳ್ ಬೇಸಱುತಿರ್ದ ಮತ್ತಗಜಮೆಂತಾಲಾನಮಂ ಕಿಳ್ತು ಮ
ತ್ತುಱೆ ಸುತ್ತಿರ್ದ ತೊಡರ್ಪುಮಂ ಪಱಿದು ಸೌಖ್ಯೇಚ್ಛಂಬನಕ್ಕಾಗಿ ತಾಮ
ತಱಿಸಂದೋವದೆ ಪೋಪವೊಲ್ ನರಪನುಂ ದುರ್ಮೋಹಪಾಶಂಗಳಂ
ಪಱಿದೀಡಾಡಿ ತಪೋವನಕ್ಕೆ ನಡೆದಂ ವೈರಾಗ್ಯಪಾರಾಯಣಂ       ೧೪೬

ವ : ಆ ಸಮಯದೊಳ್

ಮಾತಂಗಸ್ಪರ್ಶನಮ[ದ]
ಪೂತರ್ಗಮಯೋಗ್ಯಮೆಂದು ನರಪತಿ ಬಿಟ್ಟಂ
ನೂತಗಜಾರೋಹಣಮಂ
ಸಾತಿಶಯರ್ಗುಚಿತಮಲ್ತು ನೀಚಸ್ಪರ್ಶಂ          ೧೪೭

ಕೀಳಂ ಕೂಡಿದ ಕುದುರೆಯ
ಮೇಲೇಱುವುದುಚಿತಮಲ್ತು ಸತ್ಪುರುಷಂಗೆಂ
ದಾಳೋಚಿಸಿ ಸಕಳೋರ್ವೀ
ಪಾಳಂ ಬಿಟ್ಟಂ ತುರಂಗಮಾರೋಹಣಮಂ      ೧೪೮

ವ : ಇಂತೆಲ್ಲಾ ವಾಹನಂಗಳನೊಲ್ಲದೆ ಪಾದಮಾರ್ಗದಿಂ ನಡೆದುಪೋಗುತ್ತುಮಿರ್ದ ಜನಕನಂ ಭೂಮಂಡಳಾಖಂಡಳಂ ಕಂಡು

ತಂದೆಯಗಲ್ಕೆಯೆಂಬ ತಱೆಕೆಂಡದ ಪಿಂಡು ಕುಮಾರಚಿತ್ತದೊಳ್
ಸಂಧಿಸಿ ಕೂಡೆ ತಂದಿರಿಸಿದಂತೆ ಕರಂ ಕನಲುತ್ತಿರಲ್ ಮನಂ
ಬೆಂದವೊಲಾಗಿ ನೊಂದು ಮಱುಗುತ್ತುಮಿರಲ್ ಕಱೆದಂ ವಿವೇಕದೊಂ
ದಂದಮನೆಯ್ದೆ ತೋಱದಱಿವುಂ ಕಡುದುಃಖಿತನಾದನಾಕ್ಷಣಂ       ೧೪೯

ವ : ಇಂತು ಸಂತಾಪಂಬಡುತ್ತುಂ ತಂದೆಯ ಪಿಂದುಗೊಂಡು ಪೋಗುತ್ತು ಮಿರ್ದು ಧರ್ಮನಾಥಕುಮಾರನಂ ಸಾಂತವಚನದಿಂದಿಳಾಕಾಂತಂ ಸಂತಯಿಸಲೊಡಂ

ತುಂಬಿದ ಕಣ್ಣನೀರ್ಬಿಡಿದು ಪಾಯ್ವೆರ್ದೆ ಪೊಣ್ಮುವ ಗಗ್ಗರಿಕ್ಕೆ ಹಾ
ಯೆಂಬ ನಿನಾದಮಂದು ಮಿಗಲಿನ್ನೆಮಗಾರ್ ಶರಣೆಮ್ಮನಿತ್ತಬಾ
ಯೆಂಬವರಾರೊಯೆಂದು ಸಲೆಬಾಯ್ವಿಡುತುಂ ನಡೆತಂದರಾ ಗುಣಾ
ಲಂಬನ ಪಿಂದೆ ಸಂಗಡಿಸಿ ಪೆಂಡಿರ ಪಿಂಡುಗಳುಂ ಪ್ರಧಾನರುಂ         ೧೫೦

ನೆನೆನೆನೆದಾಳ್ದನ ಗುಣಮಂ
ಜನಮನಿತಂ ಮನದೊಳಳಲನೆಯ್ದುತ್ತಿರ್ದ
ತ್ತನಲನೊಳಗಳುರ್ವ ಹತ್ತಿಯ
ಘನರಾಶಿಯ ತೆಱದಿನಾ ನೃಪಂ ಪೋಪಾಂಗಳ್   ೧೫೫

ವ : ಇಂತು ಪಲುಂಬಿ ಪಂಬಲಿಸಿ ಬಿನ್ನನೆ ಬರುತ್ತುಮಿರ್ದ ಸಕಳಪರಿಜನ ಪುರಜನ ನಿಯೋಗಿಜನ ಬಂಧುಜನಂಗಳನುಪಲಾಲಿಸಿ ಲೋಕತ್ರಯೈಕಸ್ವಾಮಿಯಪ್ಪ ಧರ್ಮನಾಥಕುಮಾರಂ ನಿಮ್ಮಂ ಪಾಲನಂಗೆಯ್ದಪನದಕ್ಕುಮ್ಮಳಿಸಲ್ವೇಡೆಂದು ಪೇಳುತ್ತುಂ ನಿಲ್ಲಿ ನಿಲ್ಲಿಯೆಂದು ನಿಲಿಸಿದೊಡಂ ನಿಲ್ಲದೆ ಕಿಱಿದಂತರಂ ಪೋಗಿ ತಪೋವನಮಂ ಪೊಕ್ಕದಱೊಳತಿಪಾವನಮುಮಜಂತು ಕಮುಮಾದ ರಮಣೀಯಮಣಿಶಿಲಾಮಯ ಪ್ರದೇಶದೊಳ್

ಸಮತೆಯೊಳೊಂದಿದ ಜಿನಮುನಿ
ಸಮುದಾಯದ ನಟ್ಟನಡುವೆ ಭಟ್ಟಾರಕರಂ
ರಮಣೀಯಗುಣಾಕರರಂ
ಪ್ರಮಾಣಪುರುಷಂ ನಿರೀಕ್ಷಿಸಿದನತಿಮುದದಿಂ     ೧೫೬

ವ : ಆಕ್ಷಣಂ ಕೈಗಳಂ ಮುಗಿದು ಜಯಜಯಯೆಂದುಚ್ಚರಿಸುತ್ತುಂ ಮುಟ್ಟಿದ ಮೋಹದಿಂ ಮುಟ್ಟೆವಂದು

ವಿನಯದ ಭಾರದಿಂದೆಱಗುವಂತೆ ಮುನೀಶ್ವರಪಾದಪಂಕಜ
ಕ್ಕನುಪಮಭಕ್ತಿಯಿಂದೆಱಗಿದಂ ಧರಣೀಪತಿ ಪಂಚಮುಷ್ಟಿಯಿಂ
ದನವಧಿಧರ್ಮವೃದ್ಧಿರವಮುಣ್ಮಿ ಕರಂಣ ಪೊಱಪೊಣ್ಮಿದತ್ತು ಪಾ
ವನಕರುಣಾಂಬುರಾಶಿಯ ಗಭೀರಸುಘೋಷಣಮೆಂಬ ಮಾಳ್ಕೆಯಿಂ            ೧೫೭

ವ : ಮತ್ತಮಾ ನೃಪೋತ್ತಮಂ ಭಕ್ತಿಮಯಮೂರ್ತಿವೆತ್ತನೆಂಬಂತೆ ಬಿತ್ತರದಿಂ ಧರಿತ್ರಿಯೊಳ್ ಮುಂದೆ ಕುಳ್ಳಿರ್ದ ಮುಕುಳಿತಕರಸರೋಜನಾಗಿ ಬಿನ್ನಪಮೆಂದಿಂತೆಂದಂ

ಎತ್ತಾನುಮೊರ್ಮೆ ಪುಣ್ಯಾ
ಯತ್ತತೆಯಿಂದಾವನೊರ್ವನುಂ ನಿಮ್ಮನೆ ನೆನೆ
ವುತ್ತಿರ್ದಡಕ್ಕುಮಿಗೆ ಕೃತ
ಕೃತ್ಯಂ ಕಂಡೆಱಗಿ ಸೇವಿಪನನೇವೇಳ್ವೆಂ೧೫೮

ಕರುಣಿಗಳೆತ್ತುವರ್ ಕೆಳಗೆ ಬಿಳ್ದವರಂ ಮುನಿನಾಥ ನೀಂ ಕೃಪಾ
ಶರನಿಧಿಚಂದ್ರ ನಾಂ ಭವಸಮುದ್ರದ ಮಧ್ಯದೊಳೆಯ್ದೆ ಬಿಳ್ದು ಪೀ
ವರತರದುಃಖದಿಂ ನಮೆವುತಿರ್ದೆನಗಿತ್ತುಱಿ ಜೈನದೀಕ್ಷೆಯೆಂ
ಬುರು ಸುಬಹಿತ್ರಮಂ ಕಡೆಗೆ ದಾಂಟಿಸಿ ಸತ್ಸುಖನೆನ್ನನಾಗಿಸಾ        ೧೫೯

ಶುದ್ಧಜಿನದೀಕ್ಷೆಯಂ ಕೊ
ಟ್ಟುದ್ಧರಿಸುವುದೆನ್ನನೀ ಮಹಾಸಂಸೃತಿಯಿಂ
ವೃದ್ಧಕಾರುಣ್ಯಬುದ್ಧಿಯಿ
ನಿದ್ಧ ವಿಬೋಧಪ್ರಕಾಶ ಮುನಿಕುಳತಿಳಕಾ        ೧೬೦

ವ : ಎಂದು ನುಡಿವ ಧರಣೀರಮಣ ವಿನಯೋದೀರಣಮಂ ತಪೋರಮಣಂ ಕೇಳ್ದು ಕಡುನಲಿದು ಮತ್ತಮಿಂತೆಂದಂ

ಮದಮನೊದವಿಸುವ ಸಾಮ್ರಾ
ಜ್ಯದೊಳಿರ್ದೊಡಮೀ ವಿಶೇಷವಿನಯಂ ದೊರೆಕೊಂ
ಡುದುಮೀ ನೃಪಂಗೆ ಪುಣ್ಯಾ
ಸ್ಪದನಾಗಿರ್ದಂಗೆ ಕೂಡುಗುಂ ಕಡುವಿನಯಂ     ೧೬೧

ತಪದುಗ್ರಪರೀಷಹಮುಂ
ನೃಪವರಕೋಮಳಶರೀರಮುಂ ಸೈರಿಸಲಾ
ರ್ತಪುದೆ ಜಿನಧರ್ಮಮಂ ಪೆ
ರ್ಚಿಪುದುಂ ಜನತಾಪ್ರಪಾಲಮೆ ತಪಮಲ್ತೇ      ೧೬೨

ವ : ಅದುಕಾರಣಂ ತಪದ ಗೊಡವೆ ಬೇಡೆಂದು ಬಿಡೆ ಜಡಿದು ನುಡಿವ ಸಂಯಮಿಗಳೊಡೆಯನ ಮಾತಿಂಗೆಡೆಗುಡದೆ ನಾಡೊಡೆಯಂ ತಪಶ್ಚರಣಗ್ರಹಣಕಾರಣಂ ಕಟ್ಟಾಗ್ರಹಂಗೆಯ್ದು ಭಟ್ಟಾರಕರಂ ಪ್ರಾರ್ಥಿಸಿ

ಪಱಿದಿಕ್ಕಿದನಾಗಳ್ ನಾ
ಡೆಱೆಯಂ ಘನಕೇಶಪಾಶಮಂ ಮುನಿಪದದೊಳ್
ನೆಱೆಸಂಸಾರದ ಬೇರಂ
ಪಱಿದಿಕ್ಕುವ ಮಾಳ್ಕೆಯಿಂ ದೃಢೀಕೃತಚಿತ್ತಂ    ೧೬೩

ವ : ಇಂತು ಮಹಾಸೇನಮಹಾರಾಜಂ ಮಹಾಬ್ರತಧಾರಿಯಾಗಲೊಡಮೊಡನೆ ಬಂದ ಸುತಯುವತೀಜ್ಞಾತಿಪ್ರಕೃತಿಪ್ರಜಾಪ್ರಭೃತಿ ಸಮಸ್ತಜನಂಗಳ್ ಮಱುಗುತ್ತುಂ ಮಗುಳ್ದು ಪೋಪುದುಮಿತ್ತಲ್

ಅಂಬರಮಂ ಬಿಟ್ಟಂ ಸಂ
ಧ್ಯಾಂಬುಜಸಖನಂತೆ ಶಿಶಿರಋತುವಿನ ತೆಱದಿಂ
ದಿಂಬಿನೊಳೊಳಕೊಂಡಂ ತಪ
ಮಂ ಬಿರಯಿಯ ಮಾಳ್ಕೆಯಿಂದೆ ಮುಕ್ತಾಭರಣಂ           ೧೬೪

ಪರಮಾರ್ಥಮನಾದಂ ಸಾ
ವರಿಸುತ್ತುಂ ವಿಷಯಬಾಧೆಯಂ ಮಾಣಿಸುತುಂ
ನೆರೆದರಿಯಂ ಕೆಡಿಸುತ್ತುಂ
ಸರಿಯಾದಂ ನೃಪತಿಗಾ ಮುನೀಶಂ ತಪದೊಳ್  ೧೬೫

ಬಿಡದೀರಾಱುತಪಃಪ್ರಭಾವದೊದವಂ ತಾಳ್ದಂ ಷಡಾವಶ್ಯಕ
ಕ್ಕೆಡೆಗೊಟ್ಟಂ ದಶಧರ್ಮಮಂ ತಳೆದನೈದಾಚಾರಮಂ ತಾಳ್ದಿದಂ
ಪಡೆದಂ ಮೂಱರ ಗುಪ್ತಿಯಂ ಪಡೆದು ಮೂವತ್ತಾಱು ಭಾಸ್ವದ್ಗುಣ
ಕ್ಕೊಡೆಯಂ ಯೋಗಿವರಂ ನಿಮಿರ್ಚಿದನಿದಂ ಕರ್ಮಕ್ಷಯೋಪಾಯಮಂ          ೧೬೬

ವ : ಇಂತು ಸಕಳಗುಣಮಣಿಮಯಾಭರಣಕಿರಣರಮಣೀಯತನು ತನ್ಮುನೀಶ್ವರರ ಜಿನಮಾರ್ಗೋಕ್ತ ಪರಮತಪಃಪ್ರಭಾವಕ್ರಮಮನನುಕ್ರಮದಿಂದನುಷ್ಠಿಸಿ ಗರಿಷ್ಠ ಧರ್ಮಶುಕ್ಲಧ್ಯಾನನಿಷ್ಠಾಧಿಷ್ಠಿತನಾಗಿ ಕಡೆಯೊಳಖಿಳಕರ್ಮಮಳಮಂ ನಿರ್ಮೂಳನಂ ಗೆಯ್ದು ಮುಕ್ತ್ಯಂಗನಾಸಮಾಲಿಂಗನಭಂಗಿಯನಂಗೀಕರಿಸುವುದುಮಿತ್ತಲ್

ತಂದೆಯಗಲ್ಕೆಯಿಂದೊದವುತಿರ್ದ ಮನಃಪರಿತಾಪದಾಹಮಂ
ನಂದಿಸಿದಂ ಮಹೋಪಸಮಭಾವಲಸತ್ಪರಿಣಾಮವಾರಿಯಿಂ
ಬೆಂದ ಚತುರ್ಗತಿಪ್ರಕೃತಿಸಂಸ್ಥಿತಿವೇದಿಯೆನಿಪ್ಪ ಧರ್ಮನಾ
ಥಂ ದಲಪಾಸ್ತಮಾನಸಸಮುದ್ಘತಮೋವಿಕೃತಿಭ್ರಮಾಧಿಕಂ         ೧೬೭

ಭೇದಜ್ಞಾನನಿಧಾನಂ
ಬೋಧತ್ರಯಾಧಾರಿಯೆನಿಪ ಕುವರನ ಹೃದಯದೊ
ಳಾದಪುದೇ ಶೋಕಂ ಪರಿ
ಶೋಧಿತನಿರ್ಮಳಸುವಸ್ತುವೇಂ ಕದಡುಗುಮೇ  ೧೬೮

ಧರೆಯೆಂಬ ತರುಣಿ ನರಪನ
ವಿರಹದ ಸಂತಾಪದೇಳ್ಗೆಯಂ ಮಳ್ಗಿಸಿದಳ್
ಪಿರಿದಾದ ದಾನಧಾರಾ
ಪರಿಷೇಕ ನಿಷೇವೆಯಿಂ ಕುಮಾರಾಗ್ರಣಿಯಾ      ೧೬೯

ವ : ಬಳಿಯಮಾ ಧರ್ಮನಾಥಕುಮಾರಂ ದಿನಮುಖಸರೋಜಾಕರದಂತೆ ವಿಕಚಿತಾಶಯನಾಗಿ ದುಷ್ಟನಿಗ್ರಹಶಿಷ್ಟಪ್ರತಿಪಾಲನವಿಧಾನದಿಂ ರಾಜ್ಯಂಗೆಯ್ಯುತ್ತುಮಿರೆ

ಬಱನೆಂತುಂ ತೋಱದನ್ಯಾಯದ ನಡೆನುಡಿ ಮತ್ತಿಲ್ಲ ಕೇಡೆಂಬುದಂತಾಂ
ಕಿಱಿದಾನುಂ ಪೊರ್ದದಾರ್ತಂ ಪೊರೆಯದು ರುಜೆಯುಂ ಕಾಡದಾಪತ್ತಿದೂರಂ
ಸೆಱೆಕೊಳ್ ಬೆರ್ಚೆಂಬಿದಿಲ್ಲಂ ಪರನೃಪಬಲಸಂಘಟ್ಟದಿಂದಪ್ಪಪಾಯಂ
ಮಱೆದುಂ ಕೈಗೂಡದೆಂದುಂ ನಿಜಜನಪದಮಂ ಪಾಲಿಸಲ್ ಧರ್ಮನಾಥಂ     ೧೭೦

ಅನುರಾಗಂ ಪ್ರಜೆಗಳ್ಗೆ ಪುಟ್ಟಿದುದು ಸದ್ಧರ್ಮಕ್ಕೆ ಮತ್ತೆಳ್ತರಂ
ಘನಮಾಗಿರ್ದುದು ಸರ್ವದೇಶದೊಳಮೆಲ್ಲಾ ಧಾನ್ಯಸಂಪತ್ತಿವ
ರ್ಧನಮಾಯ್ತುತ್ಕಟಮಾಗಿ ಧರ್ಮಜಿನನಾಥಂ ಪ್ರೀತಿಯಿಂ ರಾಜ್ಯಪಾ
ಲನಮಂ ಮಾಡುವ ಪೊತ್ತಿನಲ್ಲಿ ಪಿರಿದೇನುತ್ಸಾಹಮಂ ಪೆರ್ಚದೋ           ೧೭೧

ನೀತಿಯುತಮಾಗಿಯುಂ ದಲ
ನೀತಿಸಮನ್ವಿತಮುಮಾಯ್ತು ಸುಖಭಾಜನಕಂ
ಭೂತಿಯುತಮಾಗಿಯುಂ ತದ
ಭೂತಿಸಮನ್ವಿತಮುಮಾಯ್ತು ಧರ್ಮನ ರಾಜ್ಯಂ           ೧೭೨

ಗುಣದಿಂ ಕಟ್ಟಿದನಾ ನೃಪಂ ನಿಜಭುಜಾಸ್ತಂಭಾಗ್ರದೊಳ್ ಸರ್ವಧಾ
ರಿಣಿಯಂ ಮಾಡಿ ಸುಲೀಲೆಯಿಂ ಕರಿಣಿಯಂ ಸಾರಕ್ಷಣಂಗೆಯ್ದನಂ
ದಣುಗಿಂದಲ್ಲದೊಡಂತು ಭೂವರರ ಮತ್ತೇಭಂಗಳೆಲ್ಲಾ ದಿಶಾಂ
ಗಣದಿಂ ಪಾಗುಡಮೆಂಬಿದೊಂದು ನೆವದಿಂದಿಂತೆಂದು ಬಂದಿರ್ದುವೋ           ೧೭೩

ಪಿಡಿದು ಕರವಾಳಮಂ ಮ
ತ್ತೊಡರಿಸದ ಪರಾಗಮಂ ವರೋರುಸ್ಥಳದೊಳ್
ಮಡಗಿ ಸುಕೋಮಳಕರಮಂ
ಮಡದಿಯವೊಲ್ ಭೂಮಿಯಂ ನೃಪಂ ಭೋಗಿಸಿದಂ      ೧೭೪

ವ : ಇಂತು ಜಗತ್ತ್ರಯಜನತಾಸಂಪೂಜ್ಯಮಾನ ಧರ್ಮಜಿನರಾಜಂ ಪ್ರಾಜ್ಯಮಾದ ಸಕಳಸಾಮ್ರಾಜ್ಯಮಂ ನಿಷ್ಕಂಟಕಮಾಗಿಯಾಳುತ್ತುಮಿರ್ಪ ಪೊತ್ತಿನೊಳ್

ಸುರಕಾಂತಾಜನಮಿಂದ್ರನೊಂದು ಬೆಸದಿಂದಂ ಬಂದು ಸಂಧ್ಯಾತ್ರಯಾಂ
ತರದೊಳ್ ಪಾಡಿಯುಮಾಡಿಯುಂ ಮಣಿಮಯಾಳಂಕಾರಸಂದೋಹದಿಂ
ಪಿರಿದುಂ ಭೂಷಿಸಿಯುಂ ವಿನೋದಿಪುದಱಿಂದಾನಂದಮಂ ತಾಳ್ದಿದಂ
ಪರಿರಾಜನ್ಮಣಿಕುಂಡಳಂ ವಿಶದಕೀರ್ತಿವ್ಯಾಪ್ತದಿಙ್ಮಂಡಳಂ            ೧೭೫

ವ : ಅಂತುಮಲ್ಲದೆಯುಂ

ತಣಿವುತ್ತಿರ್ದಂ ಸುಸೌಖ್ಯೋದಯದ ಮಹಿಮೆಯಿಂ ಸಂತತಂ ಧರ್ಮನಾಥಂ
ಗುಣಮಾಣಿಕ್ಯಾಕರಂ ಸತ್ಪುರುಷಪರಿಷದಾಸೇವ್ಯಮಾನಾಂಘ್ರಿಯುಗ್ಮಂ
ಪ್ರಣುತೋದ್ಯಧ್ವಾನಕಂ ಬಾಹುಬಲಿಸುಕವಿರಾಜಂ ಕಳಾವತ್ಸಮಾಜಾ
ಗ್ರಣಿ ಸಮ್ಯಕ್ತ್ವಪ್ರಭಾವಾನ್ವಿತಚರಿತವಹಂ ಚಾತುರೀಜನ್ಮಗೇಹಂ  ೧೭೬

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮಜಿನ ಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದಸಂಪಾದಪಾದ ನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ಧರ್ಮನಾಥಕುಮಾರ ಪಟ್ಟಬದ್ಧೋತ್ಸವ ಪರಿವ್ಯಾವರ್ಣನಂ ದ್ವಾದಶಾಶ್ವಾಸಂ.