ವ : ಅಂತಿಂದ್ರಚಾಪಮಂದಂಬಡೆದು ಥಳಥಳಿಸಿ ಪೊಳೆಯುತ್ತುಮಿರಲದಂ ಕಂಡು ನರೇಂದ್ರಕುಂಜರಂ ಮನಂಗೊಂಡು ಮತ್ತಮದಱ ಚೆಲ್ವಿಂಗೆ ಮೆಚ್ಚೆಮೆಚ್ಚೆಯ ವತಂಸಭಾರದಿನೋಸರಮಾದಂತೆ ತಲೆದೂಗುವ ವಿಳಾಸಂ ಮೆಱೆಯಲೆಮೆಗೊಡದೆ ಕಡುತವಕದಿಂದದಂ ನಡೆನೋಡುವಾಗಳ್

ಧನಮುಂ ಜವ್ವನಮುಂ ಸುಖಾನುಭವಮುಂ ಸಂಪತ್ತಿಯುಂ ಮೂರ್ತಿಯುಂ
ಮನುಜರ್ಗೆಯ್ದಿವು ನೋಡೆನೋಡೆ ಕಿಡುಗಿಂತಿಂತೆಂದು ತೋರ್ಪಂದದಿಂ
ಘನದೇವೇಂದ್ರಶರಾಸನಂ ನೃಪತಿ ನೋಡಲ್ ನೋಡಲಾ ವ್ಯೋಮದ
ಲ್ಲಿನಿತುಂ ನಿಲ್ಲದೆ ಪಾಱಿಪೋಗಿ ಬಯಲಾಗಿರ್ದತ್ತು ನಿಶ್ಶೋಭಕಂ೬೧

ಕರಗಿದುದೀಗಳೀಗಳೆ ಸುರೇಂದ್ರಶರಾಸನಮಯ್ಯೊ ಅಯ್ಯೋ ಮುಂ
ಬೆರಸಿದ ಚೆಲ್ವಿನೊಡ್ಡು ಬಯಲಾದುದು ರಾಜ್ಯವಿಭೂತಿಯೊಡ್ಡುಮೀ
ಪರಿಯೊಳೆ ನೋಡೆನೋಡೆ ಬಯಲಾಗದೆ ಮಾಣದಿದೆಂದು ನಾಡೆಯುಂ
ನರಪತಿ ಚಿತ್ತದೊಳ್ ನಿಱಿಸಿದಂ ನೆಲೆಗೊಂಡ ಮಹಾವಿರಕ್ತಿಯಂ     ೬೨

ವ : ಇಂತು ಸಂಸಾರಶರೀರಭೋಗನಿರ್ವಿಣ್ಣನಾ ರಾಜಾಧಿರಾಜಂ ಪರಮ ವೈರಾಗ್ಯಸೌಭಾಗ್ಯ ಸಮಾಕ್ರಾಂತಸ್ವಾಂತನಾಗಿ ತನ್ನಂತರಂಗದೊಳಿಂತೆಂದಂ

ಇನ್ನೆವರಂ ದುರಿಂದ್ರಿಯಸುಖಂಗಳ ಸೇವನೆಯಿಂದೆ ಸೊಕ್ಕಿ ಮ
ತ್ತೆನ್ನಯ ಲೇಸನಿಂತಱಿಯದಿರ್ದೆನುದಾತನೂಜನಪ್ಪದ
ತ್ಯುನ್ನತವಿಕ್ರಮೈಕನಿಳಯಂ ಖಳಸಂಸರಣಕ್ಕೆ ಪೇಸದಾ
ನಿನ್ನುಮಿರಲ್ಕಯೋಗ್ಯಮದಱಿಂ ತೊಱವೆಂ ವಿಷಯಾಭಿಲಾಷೆಯಂ            ೬೩

ತನುವೆನ್ನದು ಧನವೆನ್ನದು
ವನಿತಾಚಯವೆನ್ನದೆಂಬವಂ ಕಡುಮೂರ್ಖಂ
ತನುವೆನ್ನದು ಧನವೆನ್ನದು
ವನಿತಾಚಯವಲ್ಲದೆಂಬವಂ ಕಡುಜಾಣಂ        ೬೪

ಕೆಡುವೊಡಲಿಂಗಿದಕ್ಕೆ ಪದೆದೆನ್ನದಿದೆಂಬ ವಿಮೋಹಭಾವದಿಂ
ದುಡಿಸಿಯೂಮೂಡಿಯಂ ತೊಡಿಸಿಯುಂ ಪೊರೆದೋವುತುಮಿರ್ಪ ಮೂಢರೆ
ಯ್ದಡಿಸಿದ ದೋಷಕಾರಣದೆ ಶೂಲಮನೇಱುವವಂಗೆ ತುಯ್ಯಲಂ
ಬಡಿಸಿರದೂಡಿ ಮೋಹಿಸುವ ದುರ್ಮನುಜಂಗೆಣೆಯಾಗದಿರ್ಪನೇ     ೬೫

ಬಲದೊಳ್ ಕಿಚ್ಚೆಡದಲ್ಲಿ ರಕ್ಕಸನತಿಕ್ರೂರಾಂತಕಂ ಮಧ್ಯದೊಳ್
ನೆಲಸಿರ್ದುಗ್ರತೆ ಮತ್ತೆ ಮುಪ್ಪುರಿಯದಾಯ್ತೆಂಬಂದದಿಂದಂ ಜವಂ
ಕೊಲುತಿರ್ಪಂ ಜಗಮೆಲ್ಲಮಂ ದಲನಿಶಂ ಕೈಹೇಸದಿಂದಾವನೀ
ನೆಲದಲ್ಲಿಂ ನೆರೆಯರ್ ಕೊಲಲ್ಕೆ ಪಿರಿದುಂ ಹಿಂಸಾಪರಂ ಕೊಲ್ಲದಂ            ೬೬

ಎಂತುಂ ನೋಳ್ಪಡತೀವದುಃಖದೊದವಿಂ ಬಕ್ಕುಂ ಧನಂ ಬಂದೊಡಂ
ಸಂತಂ ನಿಲ್ಲದು ನಿಂದೊಡಂ ಮಡಗಿರಲ್ಕೊಂದಗ್ರಹಂ ಪೊರ್ದಿ ಮ
ತ್ತುಂತುಂ ತಾಂ ಕೊಡದಿರ್ಪುದಿರ್ದೊಡಮವಂಗಕ್ಕಾರ್ತಮೆಯ್ವಾರ್ತದಿಂ
ಸಂತಾಪಂ ದೊರೆಕೊಂಡು ದುರ್ಗತಿಯೊಳಾಳ್ಗಿಂತಾಗಿ ಕಷ್ಟಂ ಧನಂ  ೬೭

ಈ ಜಗಮೆಂಬ ಪೆರ್ಮಡುವಿನೊಳ್ ನೆಱೆತೀವಿದ ಧರ್ಮಮೆಂಬ ಭೂ
ಯೋಜಲದಲ್ಲಿ ಸಂತಸದಿನಾಡುತುಮಿರ್ದ ಶರೀರಮೀನಕ
ವ್ರಾಜಮನಂಗನಾನಿಕರಮೆಂಬುರುಜಾಲಮನೆಯ್ದೆಬೀಸಿ ಚೇ
ತೋಜಪುಳಿಂದಕಂ ತೆಗೆದು ತಾಂ ಸುಡುವಂ ರತಿಯೆಂಬ ಕಿಚ್ಚಿನೊಳ್೬೮

ಪರಿಕಿಸೆ ರಾಜ್ಯಲಕ್ಷ್ಮಿ ಕಡುಕಷ್ಟೆ ಸಹೋದರರಲ್ಲಿ ಮಿತ್ರರೊಳ್
ಬೆರಸಿದ ತಂದೆಮಕ್ಕಳೊಳಗಿಕ್ಕಿ ಪರಸ್ಪರವೈರಭಾವಮಂ
ನೆರಯಿಸಿಯುಂ ವಿನಾಶದೊಳಮೆಲ್ಲಿಯು ನಿಲ್ಲದೆ ಸುತ್ತುತಿರ್ಪಳಾ
ಮರುಳಿಗ ಕೂರ್ಪ ಭೂಮಿವರನೆಗ್ಗರೊಳಗ್ಗಳನಾಗದಿರ್ಪನೇ         ೬೯

ಸಿರಿ ಸುರಚಾಪದಂತೆ ಕರಿಗಳ್ ಮುಗಿಲೊಡ್ಡುಗಳಂತೆ ವಾಜಿಗಳ್
ನೆರವಿಯ ಮಂಜಿನಂತೆ ಮಿಗೆಪಾಱುವ ಪಕ್ಕಿಗಳಂತೆ ಬಂಟರುಂ
ಬೆರಸಿದ ನಂಟರುಂ ಮಯಿಮೆಯುಂ ಕಡುಗಾಳಿಯವೊಲ್ ವಿಚಾರಿಸ
ಲ್ಕುರುತರರಾಜ್ಯಸಂಪದಮಿದಭ್ರದವೊಲ್ ಬಯಲಾಗಿ ತೋಱುಗುಂ          ೭೦

ವ : ಇಂತಾ ಮೂರ್ಧಾಭಿಷಿಕ್ತಂ ಸಂಸಾರಸ್ವರೂಪಮಂ ನಿಜಸ್ವಾಂತದೊಳಭಿ ಚಿಂತಿಸಿ ಪ್ರಾಜ್ಯಸಾಮ್ರಾಜ್ಯಸುಖವಿರಕ್ತಿ ಸಮಾಸಕ್ತನುಂ ಪರಿಪೂಜ್ಯತಪೋರಾಜ್ಯ ಸುಖಾನುರಕ್ತಿ ಪ್ರವ್ಯಕ್ತನುಮಾಗಿ ಪರಿಚ್ಛೇದಿಸಿ ಸಭೆಯನಭಿವರ್ಜಿಸಿ ಸಿಂಹಾಸನದಿನೆಳ್ದು ಪೋಗಿ ಸಂಧ್ಯಾಸಮಯ ಸಮಾರಭ್ಯಮಾಣ ಬಂಧುಜಿನದೇವಾರ್ಚನಾ ಪ್ರಬಂಧಸಂಬಂಧ ವಿನಿತ್ಯನಿತ್ಯನಿಯಮಕ್ರಿಯಾವ್ಯಾಪಾರಮನೊಡರ್ಚಿ ಬಳಿಯಮನಲ್ಪತರ ಮರಾಳಿಕಾತೂಳ ಪರಿಕಲ್ಪಿತ ತಳ್ಪತಳದೊಳೊಯ್ಯನೆ ಮೆಯ್ಯನೀಡಾಡಲೊಡಂ

ಪರಮವೈರಾಗ್ಯಚಿಂತಾ
ತರುಣಿಯನಮರ್ದಪ್ಪಿಕೊಂಡು ಬಿಡದಿರ್ದೊಡೆ ಮ
ತ್ಸರದಿಂದೆಂಬಂತೆ ವಿಭಾ
ವರಿಯೊಳ್ ನಿದ್ರಾವಧೂಟಿ ಪೊರ್ದಳ್ ನೃಪನಂ೭೧

ಪೊಸಬೀಡಾರದೊಳಿರ್ದ ಬಟ್ಟೆಗನವೊಲ್ ಮೋಹಾಭಿವೇಶೋದಯಂ
ವಸುಧಾಧೀಶನ ಚಿತ್ತದಲ್ಲಿ ಕಿಱಿದುಂ ಮೆಯ್ದೋಱಿತಿಲ್ಲಾಗಿ ಪೋ
ಗಿಸಿದಂ ಸಾರದನಾಗದಂದಿನಿರುಳಂ ಪಾಸಿಂದಮೆಳ್ದಂ ದಲಾ
ಲಿಸುತುಂ ಮಂಗಳಪಾಠಕಪ್ರಕರಮೋದುತ್ತಿರ್ದ ಪದ್ಯಂಗಳಂ          ೭೨

ವ : ಮತ್ತಂ ನಿತ್ಯಂ ಪ್ರಾತಃಕಾಲದೊಳವಶ್ಯಂ ಕರಣೀಯಮಾದರ್ಹತ್ಪರಮೇಶ್ವರ ಪೂಜಾವಿಧಾನ ಗುರುಪಾದಾರ್ಚನಸ್ವಾಧ್ಯಾಯ ಸಂಯಮತಪಸ್ಸತ್ಪಾತ್ರ ದಾನಲಕ್ಷಣ ಷಟ್ಕರ್ಮಮಂ ನಿರ್ಮಿಸಿದನಂತರಮಾ ಪ್ರತಾಪರಾಜಂ ಮುನ್ನಮೆಂತು ಯುವರಾಜಂಗೆ ಶೃಂಗಾರವತೀದೇವಿಯ ಕರಗ್ರಹಣಮಂ ಮಾಡಿಸಿದನಂತೆ ತಾನುಮಾತಂಗೆ ಮೇದಿನಿಯ ಕರಗ್ರಹಣಂಗೆಯಿಸುವ ಕಜ್ಜದುಜ್ಜಗಂ ಮನದೊಳ್ವಟ್ಟುವೆರ್ಚಿ

ಇಟ್ಟ ತಿರೀಟಕೋಟಿಘಟಿತಸ್ಫುಟರತ್ನಮರೀಚಿ ಮೇಲೆ ನೇ
ರ್ಪಟ್ಟರುಣಾತಪತ್ರಕಮನೆತ್ತಿದವೋಲಭಿರಂಜಿಸುತ್ತಿರಲ್
ತೊಟ್ಟ ವಿಮೌಕ್ತಿಕಾಭರಣ ಪೀವರಕಾಂತಿ ಕವಲ್ತು ಸುತ್ತಲುಂ
ದಟ್ಟಮದಾಗಿ ತೋಱೆ ನೃಪನೋಲಗಸಾಲೆಗೆ ಬಂದನಾಕ್ಷಣಂ       ೭೩

ವ : ಅಂತಾ ಮಹಾಸೇನ ಮಹಾರಾಜಂ ಸರ್ವಾವಸರಸಮಯಮಾದಭಿನವ ಶೋಭಾವಿಭವ ಭಾಭಾಸ್ಯಮಾನ ಸಭಾಮಂಡಪಕ್ಕೆ ದಂಡವಾಸಿಕಪುರಸ್ಸರಂ ಬಂದೊಳಗಂ ಪೊಕ್ಕು ಗರಿಷ್ಠಪ್ರತಿಷ್ಠಾಧಿಷ್ಠಿತ ನಿಖಿಳವಿಷ್ಟಪಾಧೀಶ್ವರ ಪ್ರಸಿದ್ಧಾನೇಕಮಕುಟಬದ್ಧ ಮಹಾ ಮಕುಟವರ್ಧನಪ್ರಧಾನ ಪರಿಜನ ಬಂಧುಜನೇಷ್ಟಜನಪರಿವೇಷ್ಟಿತನುಮಮಳತರ ಮಣಿಗಣಸಮುಪಜುಷ್ಟಪ್ರಾಷ್ಟಾಪದಸಮಯ ವಿಶಿಷ್ಟಸಿಂಹವಿಷ್ಟನಿವಿಷ್ಟನಾಗಿ

ಎನ್ನ ಸಾಮ್ರಾಜ್ಯದುರು ಸೌ
ಖ್ಯೋನ್ನತಿಗಿದೆ ಸೀಮೆಯೆಂದು ತೋಱುವ ತೆಱದಿಂ
ಹೊನ್ನ ಸೀಗುರಿಗಳಿಂದಂ
ಚೆನ್ನಂಬಡೆದರಸು ಚೋದ್ಯಮಂ ಪುಟ್ಟಿಸಿದಂ    ೭೪

ವ : ಆ ಮಹಾರಾಜಂ ತನ್ನಯ ಮಗನಪ್ಪ ಧರ್ಮನಾಥಕುಮಾರನಂ ಬರವೇಳ್ದು ಕಟ್ಟಿಗೆಕಾಱರನಟ್ಟುವುದುಮವರ್ ಪೋಗಿ ಕರೆಯೆ

ಪಸರಂಬೆತ್ತಿರ್ದ ನುಣ್ಮೆಯ್ವೆಳಗು ಪೊದೆದ ದೇವಾಂಗವಸ್ತ್ರಂಗಳೊಳ್ ವ್ಯಾ
ಪಿಸಿ ಸುತ್ತಂ ತೀವೆ ರಂಗಂಬಡೆದು ಹಳದಿಯೆಂಬೊಂದು ಸಂದೇಹಮಂ ಪು
ಟ್ಟಿಸುತುಂ ಕೌತೂಹಳಕ್ಕಂದೆಡೆಯೆನಿಪವಱಿಂದೊಪ್ಪುತುಂ ಬಂದು ಪೊಕ್ಕಂ
ಪೊಸತಾದಾಸ್ಥಾನಮಂ ನೂತನಮಣಿಸದಳಂಕಾರಸಾರಂ ಕುಮಾರಂ            ೭೫

ವ : ಅಂತುಬಂದ ಧರ್ಮನಾಥಕುಮಾರಂಗೆ ಸಭೆಯೆಲ್ಲಮಿದಿರೆಳ್ದು ಕೆಯ್ಗಳಂ ಮುಗಿದು ವಿನಯವೃತ್ತಿಯಂ ಮೆಱೆವುದುಮಾತಂ ತನ್ಮಧ್ಯಸ್ಥಿತ ಸಿಂಹಾಸನಮನಳಂಕರಿಸಿ ರ್ಪುದುಮಾಗಳಾನಂದಜಳಲುಭಿತ ವಿಲೋಚನನಾಗಿ

ಧರಣೀಪಾಳಕನಾ ಕುಮಾರಕನ ವಕ್ತ್ರಲೋಕನಂಗೆಯ್ದು ಮೋ
ಹರಸಾರ್ದ್ರೀಕೃತವಾಕ್ಯದಿಂ ನುಡಿದನಂದಿಂತೆಂದೆಲೇದೇವ ಪೀ
ವರಭೂರಕ್ಷಣದಕ್ಷದಕ್ಷಿಣಭುಜಾದಂಡ ಪ್ರಚಂಡಪ್ರಭೋ
ದ್ಧುರ ನಿನ್ನನ್ನನಿರುತ್ತಿರಲ್ ಭವದೊಳಾಳ್ ತಾನಿರ್ದದೇಂ ತಕ್ಕುದೇ           ೭೬

ಪಡೆದೆಂ ನೊಸಲೊಳ್ ಕಣ್ಣಂ
ಪಡೆದಂತಿರೆ ನಿನ್ನನಖಿಳಜನಪೂಜಿತನಂ
ಕಡುಪಿಂದೆ ತಂದೆಯಿಚ್ಛೆಯ
ನೊಡರಿಸಿಯನುಕೂಲನಪ್ಪವಂ ಸತ್ಪುತ್ರಂ       ೭೭

ಪತನಮನಾಗಿಸದುನ್ನತ
ಗತಿಗೊಯ್ವುದಱಿಂದಪತ್ಯಮೆಂಬೀ ಪೆಸರಂ
ಮತಿವಂತರಿಟ್ಟರೀ ಸಂ
ಸೃತಿಯೊಳ್ ಪತಿಸುವುದಪತ್ಯ ನಿನಗುಚಿತಮೆ ಪೇಳ್        ೭೮

ನಿನ್ನಿಂದಾದೆಂ ಕೃತಾರ್ಥಂ ತ್ರಿಜಗದೊಳೆಸೆದತ್ತೆನ್ನ ಕೀರ್ತಿಪ್ರಭಾವಂ
ನಿನ್ನಿಂ ನಿನ್ನಿಂದಮೀಗಳ್ ಪಡೆದೆನಖಿಳಧರ್ಮಾರ್ಥಕಾಮಂಗಳಂ ಮ
ತ್ತಿನ್ನುಂ ಮನ್ಮಾರಸಂ ಮೋಕ್ಷದ ಸುಖಪದಮಂ ಕಾಂಕ್ಷಿಸುತ್ತಿರ್ದುದಾದಂ
ಸನ್ನುತ್ಯಾದೀಕ್ಷೆಯಿಂದಲ್ಲದೆ ಫಲಿಸದದಕ್ಕಾಗು ನೀಂ ಮತ್ಸಹಾಯಂ          ೭೯

ನೂತನರಾಜನೀತಿಗಳಮೆಲ್ಲಮನೋದುವುದೊಲ್ದು ಬಾಲ್ಯದೊಳ್
ಪ್ರೀತಿಯಿನೆಯ್ದೆ ಸೇವಿಸುವುದೊಪ್ಪುವ ಜವ್ವನದಲ್ಲಿ ರಾಜ್ಯಸೌ
ಖ್ಯಾತತಭೋಗಮಂ ನೆಱೆಯೆ ಮುಪ್ಪಿನೊಳಂ ತಱಿಸಂದು ಮಾಳ್ಪುದು
ಖ್ಯಾತಮೆನಿಪ್ಪ ಸತ್ತಪಮನಿಂತಿದು ವರ್ತನೆ ಭೂಪರಪ್ಪರಾ           ೮೦

ನಮ್ಮ ಕುಲಕ್ರಮಂಬಿಡಿದು ಬಂದ ಪುರಾತನ ಭೂಪರಪ್ಪರೀ
ಸಮ್ಮತದಲ್ಲಿ ವರ್ತಿಸಿದರಾನುಮದಂ ಸಲೆಮೀಱಿ ಬಂದೊಡೆಂ
ದುಂ ಮಹಿಯಲ್ಲಿ ಹಾಸ್ಯರಸಭಾಜನನಾಗದೆ ಮಾಣೆನೀ ನಿಮಿ
ತ್ತಂ ಮನಮೀಕ್ಷಣಂ ಬಿಡದಪೇಕ್ಷಿಸುತಿರ್ದುದು ಜೈನದೀಕ್ಷೆಯಂ       ೮೧

ಸಕಳಸಾಮ್ರಾಜ್ಯಭಾರ
ಪ್ರಕರ್ಷದಿಂದೆನ್ನ ಬಾಹುಪರಿಘಂ ಕಡುದುಃ
ಖಕಳಿತಮಾಗಿರ್ದಧಿಕಂ
ಪ್ರಕಟಿಸುತಿರ್ದಪುದುಮೀಗಳೆನ್ನೊಳ್ ನೋವಂ  ೮೨

ವಸುಧಾಭಾರಮನೊಪ್ಪುಗೊಂಡು ಘನದೋರ್ದಂಡಾಗ್ರದೊಳ್ ತಾಳ್ದಿ ಮಾ
ಣಿಸಿ ನೋವಂ ನಿಲಿಸೆನ್ನನುತ್ತಮತಪಸ್ಸಾಮ್ರಾಜ್ಯದೊಳ್ ಕೂಡೆ ಸಾ
ಧಿಸುವೀ ದಾರುಣಕರ್ಮಕಂಟಕರ ಬೇರಂ ಕಿಳ್ತು ಮತ್ತೆತ್ತಿ ಭೋ
ಗಿಸುತಿರ್ಪೆಂ ಮುಕ್ತಿಸುಖಮಂ ನಶ್ಯತ್ಪರಾಪೇಕ್ಷಮಂ        ೮೩

ಎನಗೆಂತೆನ್ನಯ ತಂದೆ ಮುನ್ನಮಖಿಳಕ್ಷೋಣೀಮಹಾಭಾರಮಂ
ಮನಮೊಲ್ದಿತ್ತು ತಪೋವನಕ್ಕೆ ನಡೆದಂ ಮತ್ತಂತೆ ನೀನೆನ್ನ ಮೇ
ದಿನಿಯತ್ಯುನ್ನತಭಾರಮಂ ಧರಿಸಿ ರುಂದ್ರಾನಂದದಿಂದಂ ತಪೋ
ವನಕೆನ್ನಂ ಕಳಿಪಿಂತು ಪಾಲಿಸು ಕುಲಾಯಾತಕ್ರಮಾಭಾರಮಂ        ೮೪

ವ : ಎಂದು ನುಡಿದು ತಪೋಲಕ್ಷ್ಮೀವಕ್ಷಸ್ಥಲಾಲಿಂಗನಸಮಾಕಾಂಕ್ಷಾಪರಿಲಕ್ಷಿತನ ರಾಜ್ಯಸುಖನಿಷ್ಕಾಂಕ್ಷವ್ಯಾಹಾರಚಾತುರ್ಯಮಂ ಕೇಳ್ದು ಕುಮಾರಂ ಕಾರ್ಮುಗಿಲ ಕಳಗರ್ಜನೆಯಂ ಕೇಳ್ದ ಮರಾಳದಂತೆ ಕಳವಳಿಯ ದರಹಾಸವಿಳಾಸಪರಿಸ್ಫುರಣಸ್ಮೇರ ಚಾರುವದನಾರವಿಂದನಾಗಿ ಭೂರಿವಿನಯದಿಂ ನಯಂಬಡೆದ ಮಧುರಗಭೀರ ವಿರಾವದಿಂದಿಂತೆಂದಂ

ಕೆಡದ ವಿಶೇಷಮುಕ್ತಿಸುಖಸೇವನೆಗಾಟಿಸಿ ಸತ್ತಪಂಗಳೊಳ್
ತೊಡರ್ವ ಮನೀಷೆಯಿಂ ತೃಣಸಮಾನಮಿದೆಂದು ಸಮಸ್ತರಾಜ್ಯಮಂ
ಕೆಡುವುದನೊಪ್ಪುಗೊಟ್ಟೆನಗೆ ಪೋದಪೆನೆಂಬುದು ಲೇಸು ಪುತ್ರರೊಳ್
ಕಿಡುವುದನಿತ್ತು ದುಃಖಮನೊಡರ್ಚುವುದುಂ ಪಿತೃಗಳ್ಗೆ ಯೋಗ್ಯಮೇ          ೮೫

ತಂದೆಗಳಂತೆ ಮಕ್ಕಳುಗಳಾಚರಿಸಲ್ ನೆಱೆವೇಳ್ಕುಮಾ ನಿಮಿ
ತ್ತಂ ದಮಯುಕ್ತ ನಿನ್ನೊಡನೆ ಸಾಧಿಪೆನಕ್ಷಯಮೋಕ್ಷಸೌಖ್ಯಮಂ
ಸೌಂದರಜೈನದೀಕ್ಷೆಯನದಲ್ಲದೆ ಬೇಱಳಿರಾಜ್ಯಭಾರದೊಳ್
ಸಂದು ಸಮಂತು ಸೇದೆವಡುತಿರ್ಪುದು ಕಜ್ಜಮದಲ್ತು ಭೂಪತೀ     ೮೬

ವ : ಇಂತು ನುಡಿದ ಕುಮಾರಶಿರೋಮಣಿಯ ನಿರೀಹಸಮುದೀರಣಮಂ ಕೇಳ್ದು ಧಾರಿಣೀರಮಣಂ ಮನಂದಣಿದು ಮತ್ತಮಿಂತೆಂದಂ

ಪೊರೆಯಂ ಪೊತ್ತು ಕೊರಲ್ ಕರಂ ಕುಸಿದು ಪೋಗುತ್ತಿರ್ದ ತನ್ನಿಷ್ಟನಂ
ಮಱುಗುತ್ತೀಕ್ಷಿಸಿ ನಂಟನಪ್ಪವನುದಾಸೀನತ್ವಮಂ ಮಾಡದಾ
ಪೊರೆಯಂ ತಾಳ್ದುವನೆಂತದಂತದು ಜನಕಂ ಪೊತ್ತಿರ್ದ ಭೂಭಾರಮಂ
ನೆಱೆದಾತ್ಮೋದ್ಭವನಾನದಿರ್ದೊಡಮವಂ ಸತ್ಪುತ್ರನೆಂತಪ್ಪನೋ            ೮೭

ವ : ಎನೆ ಕುಮಾರನದಕ್ಕಿಂತೆಂದಂ

ಎಲೆ ನರನಾಥ ನೀಂ ತಳೆದ ಭಾರಮನಾಂ ತಳೆಯಲ್ಕೆ ಶಕ್ತನೇ
ನೆಲನಿದನೆಲ್ಲಮಂ ಸಮದ ದಿಕ್ಕರಿ ಮಾಣದೆ ಪೊತ್ತು ನಿಲ್ವವೊಲ್
ಕಳಭಯಮೆತ್ತಿಪೊತ್ತು ನಿಲಲಾರ್ತಪುದೇ ಪಿರಿದಾದ ಲೀಲೆಯಿಂ
ನಲಿವವನಲ್ಲಿ ಭಾರಮುಮನರ್ಪಿಸೆ ದುಃಖಿತನಾಗದಿರ್ಪನೇ           ೮೮

ಇಳೆಗೀಶ ನಿನ್ನ ರಾಜ್ಯಮ
ನೊಳಕೊಳಲಾಂ ಬಾಳಕಂ ಸಮರ್ಥನೆ ಜಗದೊಳ್
ಕುಲನದಿಗಳ ಜಳಭರಮಂ
ಜಳನಿಧಿಯೊಳಕೊಳ್ವ ತೆಱದೆ ಕೊಳನಾಂತಪುದೇ೮೯

ವ : ಎನಲರಸನಾ ಯುವರಾಜಂಗಿಂತೆಂದನನಂತವೀರ್ಯನುಂ ಚರಮಾಂಗ ನುಮಪ್ಪ ನಿನಗೆ ಧಾರಿಣೀಧರಣಂ ಭಾರಮಲ್ತಿದು ನಿನ್ನ ವಿನಯವೃತ್ತಿಗುಚಿತಮಪ್ಪು ದಾದೊಡಂ

ಪಿರಿಯಂ ಕಿಱಿಯನುಮೆಂಬೀ
ಪರಿಭೇದಂ ಹೇತುದಲ್ತು ನೆಱೆರಾಜ್ಯೋ (?)
ದ್ಧರಣಕ್ಕೆ ನೀನೆ ಕಿಱಿದುಂ
ಪಿರಿದೆಂಬುದು ಯುಕ್ತಮಲ್ತು ಚಿಂತಾಮಣಿಯಂ            ೯೦

ಅನುರಾಗದೇಳ್ಗೆ ಸರಸಿಜ
ವನಕ್ಕೆ ದಿನಪತಿಯಿನಲ್ಲದಕ್ಕುಮೆ ಪೆಱರಿಂ
ಜನನಿಚಯಕ್ಕನುರಾಗಂ
ಜಿನಪತಿ ನಿನ್ನಿಂದಮಲ್ಲದಕ್ಕುಮೆ ಪೆಱರಿಂ       ೯೧

ವ : ಆವಾವಧೂಕಂ ನಯಸಂಪಾದಕವಾಕ್ಯಮಂ ನುಡಿದು ಮತ್ತಂ ತನ್ನಿಯಾಮಕವಚನ ದಿಂದಿಂತೆಂದಂ

ಮಕ್ಕಳ್ಗಿತ್ತು ಸಮಸ್ತರಾಜ್ಯಪದಮಂ ಕೊಳ್ವರ್ ತಪೋರಾಜ್ಯಮಂ
ತಕ್ಕಿಂ ಮುನ್ನಿನ ಭೂಮಿಪರ್ ಬಿಡದೆ ನಮ್ಮಿಕ್ಷ್ವಾಕುವಂಶೋದ್ಭವರ್
ಮಿಕ್ಕೀ ಪದ್ಧತಿಗಾಗಿ ನಿನ್ನ ನೆರೆಯಲ್ವೇಡಣ್ಣಯೆನ್ನಾಣೆ ಮ
ದ್ವಾಕ್ಯೋಲ್ಲಂಘನಮಲ್ತು ಯುಕ್ತಮದಱಿಂ ಕೈಕೊಳ್ ಧರಾಭಾರಮಂ      ೯೨

ವ : ಎಂದು ಮಱುವಾತಿಂಗೆಡೆಗುಡದಂತೆ ತಾನುಮೊಡಂಬಡಿಸಿ ಧರ್ಮನಾಥಕುಮಾರಂ ರಾಜ್ಯಪದಸ್ಥನಪ್ಪಂತುಮಾಡಿ ಹರ್ಷಪ್ರಕರ್ಷದೊಳ್ ಕೂಡಿ ಬಳಿಯಂ ಕನಕಕರ್ಪೂರಧಾರಾವರ್ಷಂ ತನ್ನಿಕ್ಕೆಲದೊಳ್ ಕುಳ್ಳಿರ್ದು ಪಾರ್ಥಿವಪುತ್ರರ ನಗೆಮೊಗಂಗಳಂ ನೋಡಿ ನಿಮಗೀತಂ ಜಗತ್ರಿತಯೈಕಮಿತ್ರನುಂ ಜ್ಞಾನತ್ರಯಪಾತ್ರನುಂ ಕೋಪ ಪ್ರಸಾದಸ್ವತಂತ್ರನುಂ ಪರಿರಂಜಿತನಿಜತಂತ್ರನುಮಪ್ಪದು ಕಾರಣಮೆನ್ನಿಂ ಮಿಗಿಲಾಗಿ ನೂರ್ಮಡಿ ವ್ಯಾಮೋಹಭೂಮಿಯುಂ ಕುಲಸ್ವಾಮಿಯಾಗಲ್ ತಕ್ಕಂ ನೀವೀತನನೋಲ ಯಿಸಿಯೈಹಿಕಾಮುತ್ರಿಕ ಸುಖಾನುಭೋಗಭಾಗಿಗಳಾಗಿಯೆಂದು ನುಡಿಯುತ್ತುಮಿರೆ

ವಿದಿತಜಿನಾಗನುಸ್ಥಿತಿಕರುನ್ನತ ಚಾರುಚರಿತ್ರಸಂಪದಾ
ಸ್ಪದರೆನಿಪನ್ವಯಾಗತಮಹಾಪುರುಷರ್ ನಡೆತಂದು ದೀಕ್ಷೆಗೊ
ಳ್ವಿದನೆಸಗಿರ್ದ ಕಾರಣದೆ ನೀವೆ ಕೃತಾರ್ಥರೆನುತ್ತುಮುದ್ಘಸ
ಮ್ಮದಕರವಾಕ್ಯದಿಂ ನೃಪನ ಚಿತ್ತವಿಕಾಸಮನುಂಟುಮಾಡಿದರ್     ೯೩

ಉತ್ತಮಜೈನದೀಕ್ಷೆ ದೊರೆಕೊಳ್ಗು ಕರಂ ಲಘುಕರ್ಮಿಯಾದ ರ
ತ್ನತ್ರಯಭೂಷಣಂಬಡೆದ ನಿಮ್ಮವೊಲಿರ್ದ ಸುಭವ್ಯರಿಂಗೆ ತ
ನ್ಮಾತ್ರಮೆನಿಪ್ಪರಿಂಗೆ ದೊರೆಕೊಳ್ಳದದೀ ಬಗೆಯಿಂದೆ ನೀವು ಲೋ
ಕತ್ರಯಪೂಜ್ಯರಾದಿರೆನುತುಂ ಸಲೆ ಸಂಸ್ತುತಿಗೆಯ್ದರಾಕ್ಷಣಂ          ೯೪

ವ : ಇಂತರಸನೊಡರ್ಚಿದ ತಪಶ್ಚರಣೋದ್ಯಕ್ಕಾನುಕೂಲ್ಯಮನಲರ್ಚುವ ನುಡಿಯಂ ಮನಮನುಲ್ಲಾಸಿಸುತ್ತುಮಿರ್ದ ಕುಲವೃದ್ಧರಂ ಕರ್ಪೂರತಾಂಬೂಲ ಸಮರ್ಪಣದಿಂ ತಣಿಪಿಸಿ ಬೀಳ್ಕೊಟ್ಟು ಕಳಿಪಿ ತದನಂತರಂ

ಅವನೀಚಕ್ರಾಧಿನಾಥಂ ಕರಸಿ ಬೆಸಸಿದಂ ತನ್ನ ಸೇನಾಧಿಪಂಗೊ
ಪ್ಪುವಿನಂ ಶ್ರೀಧರ್ಮನಾಥಸ್ಥಿರತರವರ ಸಾಮ್ರಾಜ್ಯಪಟ್ಟಾಭಿಷೇಕೋ
ತ್ಸವಮಂ ಮಾಡಲ್ಕೆ ನೀಂ ನಿರ್ಮಿಸು ನಿರತಿಶಯಸ್ಥೂಳಮಾಣಿಕ್ಯಜಾಳ
ಚ್ಛವಿಭಾಸ್ವನ್ಮಂಡಪಸ್ಥಾನಮನಭಿನವ ಕೌಶಲ್ಯಸಾಕಲ್ಯದಿಂದಂ    ೯೫

ವ : ಎಂದು ನಿರೂಪಂಗೆಯ್ವುದುಮದಂ ಪೋಗಿರಾಜಮಂದಿರದತೀವಾ ಮಧ್ಯ ಮಾದೊಂದು ಮಧ್ಯಪ್ರದೇಶದೊಳ್ ಕರುಮಾಡದ ಮುಂದೆ

ಪಿರಿದುಂ ಚಿತ್ರಿಸಿದಿಂದ್ರನೀಲಮಯ ನಾನಾಭಿತ್ತಿಯಿಂ ತೋರಣೋ
ತ್ಕರದಿಂದಂ ಕಳಶಂಗಳಿಂ ಜಯಪತಾಕಾನೀಕದಿಂ ರಂಜಿತಂ
ವರಮುಕ್ತಾಫಳಮಾಳಿಕಾಕೃತಮಹಾಲಂಭೂಷ ಸಂಭೂಷಿತಂ
ಕರಮೊಪ್ಪಿತ್ತು ಚಮೂವರಾಭಿರಚಿತಂ ಪಟ್ಟಾಭಿಷೇಕಸ್ಥಳಂ         ೯೬

ಕಳಶಂ ಕನ್ನಡಿ ಸುಪ್ರತಿಷ್ಠೆ ಗುಡಿ ಭೃಂಗಾರಂ ಮಹಾಚಾಮರಂ
ವಿಳಸದ್ವೀಜನಮೆಯ್ದೆ ಬೆಳ್ಗೊಡೆಯುಮೆಂಬೀ ಚೆಲ್ವನಾದಷ್ಟಮಂ
ಗಳಮಂ ತಾಳ್ದಿದ ವೇದಿಕಾವಳೆಯದಿಂ ಮಾಣಿಕ್ಯಸತ್ಕೇವಣೋ
ಜ್ಜ್ವಳ ನಾನಾವಿಧ ಶಸ್ತವಸ್ತುಚಯದಿಂ ಕಣ್ಗೊಂಡುದಾ ಮಂಡಪಂ            ೯೭

ಕನದುರುಮಣಿಮಯಮಂಡಪ
ಮನುಪಮಾಸಾಮ್ರಾಜ್ಯಲಕ್ಷ್ಮಿಯೊಳ್ ಮದುವೆಯ ಶೋ
ಭನಮಂಡಪಮೆಂಬಂತಿರೆ
ಜನಕ್ಕೆ ಮೋಹನಮನಿತ್ತುದಚ್ಚರಿಯಿಂದಂ       ೯೮

ವ : ಇಂತು ಗೀರ್ವಾಣವಿಗುರ್ವಿತಮೆಂಬಂತಿರಿಂಬುವೆತ್ತು ನಿರ್ಮಿಸಿದ ಸಾಮ್ರಾಜ್ಯ ಪಟ್ಟಾಭಿಷೇಕಮಂಡಪದ ನಟ್ಟನಡುವೆ ಪಟ್ಟಮಯಬಂಧಸಮಯಸಮುಚಿತ ಮಂಗಳೋಪಕರಣಂಗಳಿಂ ತುಂಬಿದ ಮಧುರಮಾದ ಗೋಮೇಧವೇದೀವಳೆಯದ ಮೇಲೆ

ಪಟ್ಟದ ಸಿಂಹಾಸನಮಳ
ವಟ್ಟುದು ಪರಿಪರಿಯ ಮಾಣಿಕದ ಪೊಳೆಪಿಂದಂ
ದಿಟ್ಟಿಗೆ ಕಡುಚೋಜಿಗಮಂ
ಪುಟ್ಟಿಸುತುಂ ಬಹಳಕಿರಣಜಾಳನಿಮಗ್ನಂ        ೯೯

ಅದಱ ನಾಲ್ದೆಸೆಯೊಳಂ ಚೆ
ಲ್ವೊದವಿದ ಪಲತೆಱದ ಪಲ್ಲವಂಗಳ ಬಳಸಿಂ
ಪುದಿದ ಘನಚ್ಛತ್ರಂಗಳ್
ಸದಮಳಮುಕ್ತಾಮಯಂಗಳೆಸೆದವು ನಾಲ್ಕುಂ   ೧೦೦

ನವಕುಳಿಶಕುಳವಿಕೀಲಿತ
ಸುವರ್ಣಮಯದಂಡಮಂಡಿತಸ್ಥೂಳಮಹಾ
ಧವಳತರ ಚಾರುಚಾಮರ
ನಿವಹಂ ಪೊಳೆಯುತ್ತುಮಿರ್ದುದದಱಿದ್ದೆಸೆಯೊಳ್        ೧೦೧

ಕೆಲದಲ್ಲಿ ಖಳ್ಗರತ್ನಂ
ನಿಲಿಸಿರ್ದುದು ಪೂಜೆವೆರಸು ಥಳಥಳಿಸುತ್ತುಂ
ಸಲೆವಿಜಯಲಕ್ಷ್ಮಿ ಕನ್ನೆ
ಯ್ದಲಮಾಲೆಯನಿರಿಸಿದಂತೆ ಕುವರಂಗೀಯಲ್೧೦೨

ವ : ಆ ಸಿಂಹವಿಷ್ಟರದ ಮುಂದಣ ಸನ್ನಿಕೃಷ್ಣದೆಡೆಯೊಳ್ ಮಂಜುಳಮಾಗಿ ಪುಂಜಿಸಿದ ಚಂಚತ್ಪಂಚರತ್ನಚಯೋಪರಿ ಪ್ರಪಂಚಿತ ಸ್ವಸ್ತಿಕವಿಸ್ತಾರಸಂಸ್ಥಾಪಿತ ಪಾಂಡುರಪಂಚತಂತುಪರಿವೇಷ್ಟನ ನಿಯಂತ್ರಿತ ಸರ್ವೌಷಧಿಸಾರಸಮ್ಮಿಶ್ರಿತ ಸರಿತ್ಸಲಿಲಸಂಪೂರ್ಣ ಮಣಿದರ್ಪಣಸಮರ್ಪಣ ಸುಮನೋಮಹೀರುಹ ಸುಮನೋಮಾಲಾಸಮಾಲಂಬನಾದಿ ನಾನಾವಿಧ ರಚನಾವಿಶೇಷಪರಿಭೂಷಿತ ಚತುಃಕೋಣಕಳಶವಿಳಾಸಪರಿಕಳಿತವರ್ಣಿಜನಾಭಿವರ್ಣ್ಯಮಾನ ಸೌವರ್ಣಪೂರ್ಣಕಳಶಂ ಮನಂಗೊಳಿಸುತ್ತುಮಿರೆ

ಬೆಳಗಿನ ಬಳಗಂ ಬಿಡದ
ಗ್ಗಳಿಸಿ ಕವಲ್ತಲ್ಲಿಗಲ್ಲಿಗಂ ಮಡುಗೊಂಡು
ಜ್ಜ್ವಳಿಸುತ್ತುಮಿರ್ದುದದಱೊಳ್
ಮಳಿನಜನಗೆವೊಯ್ದು ಬೆಳಗನಲ್ಲಿರಿಸುವವೊಲ್           ೧೦೩

ವ : ಇಂತು ವ್ಯವಧಾನಮಾಗಿ ಸಮಗಳಿಸಿದ ನವ್ಯಮಾದ ಸಮುತ್ತುಂಗ ಮಂಗಳ ವಿಧಾನಮನಂಗೀಕರಿಸಿದ ರಾಜ್ಯಾಭಿಷವಣಮಂಡಪಮಗುರ್ವುವಡೆಯೆ

ನೆರೆದಧಿರಾಜರುಂ ಮಕುಟಬದ್ಧರುಮಾಪ್ತಜನಂಗಳುಂ ಮಹ
ತ್ತರರುಮಶೇಷ ಮಂಡಳಿಕರಂ ನೃಪರುಂ ವರದಂಡನಾಥರುಂ
ಗುರುಗುಣರುಂ ಮಹಾಮಕುಟಬದ್ಧರುಮಾಶ್ರಿತರುಂ ಪ್ರಧಾನರುಂ
ವಿರಚಿಸಲೆಂದು ಬಂದರಿರದಾ ಕುವರಂಗುಗುಪಟ್ಟಬಂಧಮಂ         ೧೦೪

ವ : ಇಂತು ಬಾಹತ್ತರನಿಯೋನಿಯುಕ್ತರೆಲ್ಲಂ ಕೂಡಿ ಬಂದು ಮೊತ್ತಂ ಗೊಂಡಲ್ಲಿ ತಿಂತಿಣಿ ವೋಗುತ್ತುಮಿರ್ಪುದುಮದಂ ಕೇಳ್ದು ಮಹಾಸೇನ ಮಹಾರಾಜನಾಸ್ಥಾನ ಮಂಡಪದಿಂದೇಳಲೊಡಂ

ಒಡನೆ ತಡೆಯದೇಳ್ವ ಭಟರ ತೊಡರ ಕಡೆಯದುಲಿಗಳಿಂ
ಬಿಡದೆ ಜಡಿದು ನುಡಿದು ನಿಲಿಪ ಪಡಿಯಱರುದ್ಘೋಷದಿಂ
ದೊಡೆಯನಡರ್ದ ಸಿರಿಯ ಪೆಂಪನಡಿಗಡಿಗುಗ್ಘಡಿಸುವಂ
ದೆಡೆವಿಡದೊಳಕೊಂಡುದಾಗಳದು ಸಡಗರದೇಳ್ಗೆಯಂ     ೧೦೫

ವ : ಇಂತು ನೂರ್ಮಡಿಯಾಗಿ ಪೆರ್ಮೆವಡೆದು ನಾಡೆಱೆಯನೆಲ್ಲರಂ ಕೂಡಿಕೊಂಡು ನೀಱಂ ನಿಜಭುಜನಿವಾಸಿಯಾದ ವಿಜಯಲಕ್ಷ್ಮಿಯಂ ರಕ್ಷಿಸೆಂದು ಸಮರ್ಪಿಸುವಂತೆ ತನ್ನಯ ಬಲದ ಕೆಲದೊಳ್ ಬರುತ್ತುಮಿರ್ದ ಧರ್ಮನಾಥಕುಮಾರನ ಕೆಯ್ಯಂ ಪಿಡಿದು ಪೂವಲಿಯ ಮೇಲೆ ಕೆಂದಳಿರ ಗೊಂದಳಮಂ ಪಸರಿಸುವಂತೆ ಪಳಿಕಿನ ನೆಲದೊಳ್ ಕೇಸಡಿಗಳ ಕೆಂಪಿನ ಸೊಂಪಂ ಸಂಪಾದಿಸುತ್ತುಂ ನಡೆತಪ್ಪೆಡೆಯೊಳೆಡಬಲದಲ್ಲಿ ಪೊಸಪೊಸತಾದ ಮುತ್ತು ಮಾಣಿಕಂಗಳನೆಡೆಗೆಡೆಗೆ ತಡಂಗಲಿಸಿ ನಿಬಿಡಮಾಗಿ ಕೊಯಿದು ಬೆಡಂಗುವಡೆದ ತೊಡವುಗಳಂ ತೊಟ್ಟ ಮಡದಿಯರ್ ಕೆಲರನಂಗಜಜಂಗಮಲತೆಗಳಂತೆ ನವ್ಯರಚನಾ ಸಜ್ಜೀಕೃತಮಜ್ಜನೋಪಕರಣದ್ರವ್ಯಂಗಳಂ ತರಿಸಿ ಕೆಲಂಬರ್ ನಿತಂಬಿನಿಯರ್ ವನಲಕ್ಷ್ಮೀದೇವಿಯರೆಂಬಂತಿರಿಂಬುವೆತ್ತು ಜಂಬೀರ ಜಂಬೂ ನಾರಂಗ ನಾಳಿಕೇರ ಮಾತುಳಂಗ ಧವಳೇಕ್ಷುದಂಡ ಕ್ರಮುಕ ಮುಖ್ಯಫಳಕುಳಂಗಳಿಂ ತೋರ್ಕೆವೆತ್ತ ವಿಚಿತ್ರವಸ್ತ್ರಜಟಿಳೀಕೃತ ಪಟಳಿಕಾಪರಂಪರೆಗಳಂ ತಾಳ್ದಿ ಕೆಲಬರಬಲೆಯರ್ ಮಾಲ್ಯಾಂಗಮಂದಾರಶಾಖೆಗಳೆಂಬಿನಮನಲ್ಪತರ ಪುಷ್ಪಮಾಲಿಕಾಜಾಲಮನಪ್ಪುಕೆಯ್ದು ನೂಪುರಕಳಾಪಝಣಝಣಝಣತ್ಕಾರ ಸ್ವರೂಪಸಮಾಳಾಪಮೇಳಾಪದೊಡನೆ ನಿರೂಪಣಂಗೆಯ್ವಂತಿರ್ದ ಕಾಲ ಪಳಂಚಿನುಂಗುರಳಿಂಚರಂಗಳಿಂ ಭೂದೇವಿ ನಿಜಪತಿಯಪ್ಪ ಕುವರನ ಪುಣ್ಯದೇಳ್ಗೆಯಂ ಪೊಗಳುತ್ತುಮಿರ್ದಪಳೆಂಬಂತೆ ಬಗೆಗೊಳಿಸುತ್ತುಮಿರೆ ಗಡಣಿಸಿ ಮುಂದೆನಡೆಯಲಭಿನವ ವಿಭವದಿಂ ಮುತ್ತಿ ಚೌಕಸತ್ತಿಗೆಗಳ ತಣ್ಣೆಳಲೊಳನು ಚಳಿಸುವ ಹೊನ್ನಸೀಗುರಿಗಳ ಬಳಗಂಗಳಿಂದಳಂಕೃತನಾಗಿ ಬಂದು ತನ್ಮಂಡಪದೊಳಗೆ ಪೊಕ್ಕು

ವರಸಿಂಹಾಸನದಲ್ಲಿ ಕುಳ್ಳಿದನಧೀಶಂ ಮಂತ್ರಿಸಾಮಂತ ಮೌ
ಲಿ ರಮಾಧಾರಿಗಳೆಲ್ಲರುಂ ನೆಲಸಿದರ್ ಸುತ್ತಂ ಸುವರ್ಣಾದ್ರಿಯಂ
ಪಿರಿದುಂ ಸೇವಿಸಲೆಂದು ಬಂದ ಕುಲಶೈಲೌಘಂಗಲೆಂಬಂದದಿಂ
ಧರಿಸಿರ್ದತ್ತುರುಮಂಗಳೋಪಕರಣದ್ರವ್ಯಂಗಳಂ ಸ್ತ್ರೀಜನಂ           ೧೦೬

ವ : ಅಂತು ಚಂದ್ರಸೂರ್ಯರುಮೊಂದಾಗಿರ್ದಂದದಿಂದರಸನುಂ ಕುವರನು ಮೊಂದಾಗಿ ಕುಳ್ಳಿರ್ದ ಸಮಯದೊಳ್ ಮೌಹೂರ್ತಿಕನೊರ್ವಂ ಬಂದು ದೇವ ಶುಭ ಮುಹೂರ್ತಮಾಸನ್ನಮಾದುದೆಂದು ಬಿನ್ನಪಂಗೆಯ್ವುದುಂ ಸಾರ್ವಭೌಮನನುಜ್ಞೆಯಿಂ ಕುಮಾರಂ ಸ್ನಪನಸ್ಥಳಕ್ಕೆ ಬಿಜಯಂಗೆಯ್ದು ಪಳಿಕಿನ ಫಳಕಮನಳಂಕರಿಸಿದಾಗಳ್

ಗುರುಜನಮುಮಾಪ್ತಜನಮುಂ
ಬೆರಸಿ ಧರಾಧೀಶನಂದು ಬಂದೆತ್ತಿದನು
ದ್ಧುರಪೂರ್ಣಕಳಶಮಂ ಪೀ
ವರರಾಜ್ಯಶ್ರೀಗೆ ಕಳಶಮಿಡುವವೊಲಾದಂ        ೧೦೭

ಕೆಂದಳಿರ್ದೊಂಗಲೊಳ್ ಪುದಿದು ಕಣ್ಗೊಳಿಪೊಳ್ತನಿವಣ್ಣನಾಂತು ಚೆ
ಲ್ವೊಂದಿದ ಕಲ್ಪಭೂರುಹದೆರಳ್ತುದಿಕೊಂಬುಗಳೆಯ್ದೆ ಮುಟ್ಟಿ ನೀ
ಳ್ದಂದದಿ ಭೂಪಬಾಹುಲತಿಕಾಗ್ರದ ಕೆಂದಳದಲ್ಲಿ ತೋರ್ಪ ಭಾ
ಸೌಂದರಶಾತಕುಂಭಕಳಶಂ ರಮಣೀಯತೆವೆತ್ತುದಾಕ್ಷಣಂ  ೧೦೮

ವ : ಅಂತು ಪೊಂಗಳಶಮಂ ನೆಗಪಿ

ಪಲವುಂ ಛತ್ರಂಗಳಂ ತಾಳ್ದೊಸಗೆವಱೆಗಳುತ್ತಾಳನಿರ್ಘೋಷಣಂ ಮಾಂ
ಗಳಿಕಾಶೀರ್ವಾದನಾದೋದಯದೊಡನೆ ಪುದುಂಗೊಂಡು ತೀವುತ್ತಿರಲ್ ದಿ
ಕ್ಕುಳಮಂ ರಾಜ್ಯಾಭೀಷೇಕೋತ್ಸವಮನೆಸಗಿದಂ ಧರ್ಮನಾಥಂಗೆ ಗಂಧಾ
ವಿಳನೀರಸ್ಫಾರಧಾರಾವಿರಳಮಳಿನಾ ಪೂರಸಾರಂಗಳಿಂದಂ            ೧೦೯

ಪತ್ತುನಖಕಾಂತಿಗಳಿನೊಂ
ಭತ್ತುಮಹಾರತ್ನರುಚಿಗಳಿಂದುದಧಾರಾ
ವೃತ್ತಿಕಳಶಾಂಶುಬಿಂದಿ
ಪ್ಪತ್ತೊಂದನುರೂಪಮಾಗಿಯೆಱಗಿದುದಾಗಳ್೧೧೦

ಮೇರುಗಿರಿಶಿಖರಮಂ ಚಂ
ದ್ರೋರುಕಳಾಮಾಳೆ ಬಳಸಿದಂದದೆ ಘನವಾ
ರ್ಧಾರಾಪೂರಂ ಬಂದು ಕು
ಮಾರನ ಮೆಯ್ಯಂ ಸಮಂತು ಬಳಸಿದುದಾದಂ   ೧೧೧

ವ : ಬಳಿಯಂ ವಿಳಾಸಿನೀಕುಳಂ ಕುಚಕಳಶವಿಗಳಿತವಿಳಾಸರಸವಿಶೇಷ ದೊಡನೊಡನೆ ಸಂಗಳಿಸಿದ ಪೊಂಗಳಸಂಗಳಿಂದುಗುತಪ್ಪ ಪರಿಮಳಜಳಧಾರೆಗಳಿನಭಿ ಷವಣಮಂ ಮಾಳ್ಪವಸರದೊಳ್

ಕಡೆಗಣ್ಣ ಕಾಂತಿಯುಂ ಮೊಲೆ
ಯೆಡೆ ಚಳಿಸುವ ಮುತ್ತಿನೆಸೆವ ಹಾರಪ್ರಭೆಯುಂ
ಕಡುನೀರಧಾರೆಯಂ ನೂ
ರ್ಮಡಿಯಾಗಿಯೆ ತುಂಬಿದತ್ತು ಕುವರನ ಮೆಯ್ಯೊಳ್       ೧೧೨

ಮುನ್ನಂ ದೇವೇಂದ್ರನತ್ಯಾದರದೊಳೆಸಗಿದಾಶ್ಚರ್ಯ ಜನ್ಮಾಭಿಷೇಕಂ
ಕೆನ್ನಂ ಸಾಮ್ರಾಜ್ಯಪಟ್ಟಾಭಿಷವಮುಮದೆ ಮತ್ತಿನ್ನುಮೇಕೆಂದು ಶೋಭಾ
ಚ್ಛನ್ನಾಶಾಕಾಮಿನೀಸಂತತಿಯುಮುರುನಭಶ್ರೀಯುಮಂದಟ್ಟಹಾಸಾ
ಸನ್ನಾಸ್ಯಂಬೆತ್ತವೊಲೊಪ್ಪಿದುದು ಕುಸುಮದೃಷ್ಟಿಧ್ವನಿಚ್ಛದ್ಮದಿಂದಂ       ೧೧೩

ವ : ತದನಂತರಮಲ್ಲಿಂ ಪೊಱಮಟ್ಟು ಪವಳದ ಪಾವುಗೆಯಂ ಮೆಟ್ಟಿನಿಲ್ವುದು ಮಂಗದಟ್ಟಮನಿಕ್ಕಿ ನವ್ಯರಚನಾವಿಚಿತ್ರಿದಿವ್ಯವಸ್ತ್ರಂಗಳನುಡಿಸಿಯುಂ ಮೆಯ್ವಣ್ಣನ ಬೆರಕೆವೆಳಗಿಂ ತಿಣ್ಣಂ ಕಾಣಿಕೆವೆತ್ತ ಪೊಸಪೊಸಮಾಣಿಕಂಗಳ ಜಾಣೇಱಿದ ಕೇವಣದಿಂದು ಜ್ಜ್ವಳಿಸುತುಮಿರ್ದ ಷೋಡಶಾಭರಣಂಗಳಂ ತೊಡಿಸಿಯುಂ ಗಳಸ್ಥಾನವಿಲುಳಿತ ಮಂದಾರ ಮಾಲಾಸ ಮಾಲಂಬನದೊಳೊಂದಿಸಿಯುಮಿಂತತಿಶಯಮಾಗೆಯ್ದೆ ಕೆಯ್ಗೆಯ್ದು ಕುಮಾರನನೊಡಗೊಂಡು ಬಂದು ಮಂಗಳವೇದಿಕಾಮಧ್ಯಮನಳಂಕರಿಸಿರ್ದ ಪಟ್ಟದ ಸಿಂಹಾಸನದೊಳ್ ಕುಳ್ಳಿರಿಸಿ ಪರಿಪರಿಯ ನವರತ್ನಂಗಳಾರತಿಗಳಂ ನಿವಾಳಿಸಿ ಪಟಳಿ ಕಾಪಟಳಪರಿಪುಂಜಿತ ಮಾತುಳಂಗ ನಾಳಿಕೇರಾದಿ ನಾನಾವಿಧ ಫಳಾವತರಣಮಂ ನಿರ್ವರ್ತಿಸಿ

ಪೊಳೆವ ನವರತ್ನಪುಂಜಂ
ಗಳಿನೊಪ್ಪುವ ಮಾತುಳಂಗಫಳಮಂಜರಿಯಂ
ವಿಳಸತ್ಕುಮಾರರಚಿತಾಂ
ಜಳಿಪುಟದೊಳ್ ತುಂಬಿದಂ ಸುಮಂತ್ರೋಚ್ಚರಣಂ         ೧೧೪

ದೆಸೆಯಂ ದಿಂಕಿಡಿಸುತ್ತಿರಲ್ ಬಹುವಿಧಾತೋದ್ಯತ್ಪ್ರಣಾದಂ ವಿಘೂ
ರ್ಣಿಸೆ ವಿದ್ವಜ್ಜನಸಂಸ್ತವಧ್ವನಿಮಹಾಸಂಗೀತರಾವಂ ವಿರಾ
ಜಿಸೆ ಪೆರ್ಚುತ್ತಿರೆ ಪುಣ್ಯಪಾಠಕರವಂ ಪುತ್ರೋತ್ತಮಾಂಗಾಗ್ರದೊಳ್
ವಸುಧಾನಾಯಕನಿಕ್ಕಿದಂ ಮಕುಟಮಂ ದೇದೀಪ್ಯಮಾನಾಂಶುವಂ   ೧೧೫

ವ : ಆ ಮಣಿಮಕುಟ ಶೋಭೆಗೆ ನೆಲಗಟ್ಟಂ ಕಟ್ಟುವಂತೆ

ನೆಟ್ಟನೆ ರಾಜ್ಯಲಕ್ಷ್ಮಿಯ ವಶೀಕರಣಕ್ಕೊಲವಿಂದೆ ರಕ್ಷೆಯಂ
ಕಟ್ಟುವ ಮಾಳ್ಕೆಯಿಂ ವಿಭವಮೆಂಬಮೃತಂ ನೆಲಸಲ್ಕೆ ಕಟ್ಟೆಯಂ
ಕಟ್ಟುವ ಮಾಳ್ಕೆಯಿಂ ಕುವರನುನ್ನತಚಾರುಲಲಾಟಪಟ್ಟದೊಳ್
ಕಟ್ಟಿದನಾ ನೃಪಂ ಪರಸುತುಂ ಚರುರರ್ಣವರಾಜ್ಯಪಟ್ಟಮಂ        ೧೧೬

ವ : ಇಂತಾ ಮಹಾಸೇನಮಹಾರಾಜಂ ತನ್ನಯ ತನಯನಪ್ಪ ಧರ್ಮನಾಥ ಕುಮಾರಂಗೆ ಸಕಳಸಾಮ್ರಾಜ್ಯಪಟ್ಟಮಂ ಕಟ್ಟಿ

ಸ್ಥಿರಮಕ್ಕೀ ಪಟ್ಟಮೀ ನಿನ್ನಯ ನೊಸಲೊಳಮೀ ನಿನ್ನ ದೋರ್ದಂಡದೊಳ್ ಪೀ
ವರಧಾತ್ರೀಚಕ್ರಮೆಂದುಂ ನೆಲಸುಗೆ ಧವಳಚ್ಛತ್ರಮೀ ನಿನ್ನ ಮೌಳಿ
ಸ್ಫುರದುದ್ಯದ್ದೀಪ್ತಿಯಂ ಚಿತ್ರಿಸುಗೆ ತಡೆಯದಿಂತೆಂದು ಸತ್ಪುತ್ರನಂ ಬಂ
ಧುರತೇಜಃಪಾತ್ರನಂ ತಾನೊಸೆದು ಪರಸಿದಂ ಭೂಮಿಪಾಲತ್ರಿಣೇತ್ರಂ           ೧೧೭

ನೆಲಸಂ ತಾಳಲ್ಕೆ ನೀಂ ನಿನ್ನಯ ವಿಜಯಭುಜಾದಂಡದೊಳ್ ಧರ್ಮನಾಥಾ
ಪಲಕಾಲಂ ಪೊತ್ತಿಕೊಂಡಿರ್ದುರಗಪತಿಗೆ ಭಾರಂ ಕರಂ ಪಿಂಗಿಪೋಕುಂ
ಬಳಿಯಂ ಪದ್ಮಾವತೀಸಂಗತಸುಖಭರಮಂ ಪೆತ್ತು ನಿಶ್ಚಿಂತಮಿರ್ಕುಂ
ಸಲೆನಿದ್ರಾಮುದ್ರೆಯೊಳ್ಪಂಪಡೆದು ಕಮಠನಿರ್ಕುಂ ನಿರಾತಂಕದಿಂದಂ೧೧೮

ವ : ಇಂತೆಂದು ಪಲವಪ್ಪಾಶೀರ್ವಾದಂಗಳಿಂ ಪರಸಿ

ಪಟ್ಟದ ಕುದುರೆಯನೊಪ್ಪುವ
ಪಟ್ಟದ ಮದದಾನೆಯುಂ ಮಹಾಖಳ್ಗಮುಮಂ
ಪಟ್ಟದ ಗದ್ದಿಗೆಯಂ ನೆಱೆ
ಕೊಟ್ಟಂ ಧವಳಾತಪತ್ರಮಂ ಚಾಮರಮಂ       ೧೧೯

ನವರತ್ನದ ಭಂಡಾರಮ
ನವನೀಶ್ವರನಿತ್ತು ಮತ್ತೆ ಸದ್ಧರ್ಮಮನು
ತ್ಸವದಿಂ ಪ್ರತಿಪಾಲಿಸುತುಂ
ಭುವನಮನಾಳೆಂದು ತಮದೆ ಮೋಹದಿನುಸಿರ್ದಂ           ೧೨೦