ಬಾಹುಬಲಿ ಕವಿ – ಕಾಲ – ಕಾವ್ಯ

ಹದಿನಾಲ್ಕನೆಯ ಶತಮಾನದ ಮಧ್ಯಭಾಗದಲ್ಲಿ ತಲೆದೋರಿದ ಚಂಪೂಕವಿಗಳಲ್ಲಿ ಬಾಹುಬಲಿಪಂಡಿತ ಮುಖ್ಯನಷ್ಟೇ ಅಲ್ಲ, ಕೇಂದ್ರಬಿಂದವೂ ಎನಿಸಿದ್ದಾನೆ. ಈ ಶತಮಾನದಲ್ಲಿ ಬಂದ ಮಧುರ ಕವಿ ಇದೇ ವಿಷಯವನ್ನು ಕುರಿತು ಒಂದು ಚಂಪೂಕಾವ್ಯವನ್ನು ಬರೆದಿದ್ದಾನೆ. ಕ್ರಿ.ಶ. ೧೩೫೨. ಧರ್ಮನಾಥ ಪುರಾಣವನ್ನು :

ಸ್ವಸ್ತಿಶ್ರೀ ಶಕವತ್ಸರಂ ಸಲೆ ಚತುಸ್ಸಪ್ತದ್ವಯೈಕಾಂಕವಿ
ನ್ಯಸ್ತಂ ನಂದನವರ್ಷದಲ್ಲಿ ಮಧುಮಾಸ ಶ್ವೇತಪಕ್ಷಾಷ್ಟಮೀ
ವಿಸ್ತಾರೀಕೃತ ಸೋಮವಾರದೊಳಿದಂ ಸಂಪುರ್ಣಮಂ ಮಾಡಿದಂ
ಪ್ರಸ್ತುತ್ಯಂ ಪ್ರತಿಭಾಪರಂ ಭುಜಬಲಿ ಪ್ರಖ್ಯಾತಯೋಗೀಶ್ವರಂ       (೧೬ – ೪೩೨)

೧೨೭೪ ನಂದನ ಸಂವತ್ಸರ ಎಂದರೆ ಕ್ರಿ.ಶ. ೧೩೫೨ರಲ್ಲಿ ರಚಿಸಿದಂತೆ ಹೇಳಿಕೊಂಡಿದ್ದಾನೆ. ಈ ಬಾಹುಬಲಿಪಂಡಿತನನ್ನು ತರುವಾಯ ಬಂದ ಯಾವೊಬ್ಬ ಕವಿಯೂ ಸ್ಮರಿಸಿದಂತೆ ಕಂಡುಬರುವುದಿಲ್ಲ. ಇಷ್ಟೇಕೆ ಈತನ ಕಿರಿಯ ಸಮಕಾಲೀನನಾಗಿದ್ದಿರಬಹುದಾದ ಮಧುರನೂ ಈತನನ್ನು ಸ್ತುತಿಸದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿಯಾಗಿದೆ. ಕನ್ನಡಸಾಹಿತ್ಯದಲ್ಲಿ ಧರ್ಮನಾಥ ತೀರ್ಥಂಕರನ ಬಗೆಗೆ ಸ್ವತಂತ್ರ ಕೃತಿಗಳನ್ನು ರಚಿಸಿದವರಲ್ಲಿ ಬಾಹುಬಲಿ ಪಂಡಿತನೇ ಮೊದಲಿಗನೆನ್ನಬಹುದು. ಆತನ ಇತಿವೃತ್ತಗಳೇನೂ ನಮಗೆ ತಿಳಿದುಬಂದಿಲ್ಲ. ಆತನ ಕಾವ್ಯಗಳಲ್ಲಿಯೂ ಈ ಬಗೆಗೆ ಯಾವ ಮಾಹಿತಿಯೂ ದೊರಕುವುದಿಲ್ಲ.

ಬಾಹುಬಲಿಪಂಡಿತ ಧರ್ಮನಾಥಪುರಾಣವನ್ನು ಕನ್ನಡದಲ್ಲಿಯೂ ಗುಮ್ಮಟನಾಥ ಚರಿತೆಯನ್ನು ಸಂಸ್ಕೃತದಲ್ಲಿಯೂ ಬರೆದಿದ್ದಾನೆ. ಧರ್ಮನಾಥಪುರಾಣದ ಪ್ರತಿ ಆಶ್ವಾಸದ ಕೊನೆಯಲ್ಲಿಯೂ “ಇದು ಸಕಳಭುವನಜನ ವಿನೂಯಮಾನಾನೂನ ಮಹಿಮಾ ಮಾನನೀಯ ಪರಮಜಿನಸಮಯ ಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವ ಪ್ರಸಾದ ಸಂಪಾದಪಾದನಿಧಾನ ದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್” ಎಂಬ ಗದ್ಯಭಾಗವಿದೆ. ಅಲ್ಲದೆ ಪ್ರಥಮಾಶ್ವಾಸದಲ್ಲಿ ಬರುವ :

ಮೊದಲೊಳ್ ಸಂಸ್ಕೃತಭಾಷೆಯಿಂ ಬುಧಜನಂ ಕೊಂಡಾಡುತಿರ್ಪಂತೆ ಸಂ
ಮದದಿಂ ಗುಮ್ಮಟನಾಥ ಸಚ್ಚರಿತವೆಂಬೀ ಕಾವ್ಯಮಂ ಪೇಳ್ದು ಮಾ
ಣದೆ ಕರ್ಣಾಟಕದಿಂದೆ ಮತ್ತೆ ರಚಿಸಿ ಶ್ರೀಧರ್ಮನಾಥಪ್ರಬಂ
ಧದ ಪೆರ್ಚಂ ತಳೆದಂ ಸಮಂತುಭಯಭಾಷಾಕಾವ್ಯಕರ್ತೃತ್ವಮಂ     (೧ – ೪೮)

ಎಂಬ ಪದ್ಯದಿಂದಲೂ ಈತನು ಮೇಲಿನ ಎರಡೂ ಕೃತಿಗಳನ್ನು ಬರೆದಿರುವನೆಂಬುದು ಸ್ವಯಂ ವೇದ್ಯವಾಗುತ್ತದೆ. ಈತನಿಗೆ ‘ಉಭಯಭಾಷಾ ಕವಿಚಕ್ರವರ್ತಿ’ ಎಂಬ ಬಿರುದಿದ್ದಂತೆ ಮೇಲಿನ ಗದ್ಯಭಾಗದಿಂದಲೂ ಮುಂದಿನ :

ನಯವಿದರೆಲ್ಲರುಂ ಪೊಗಳೆ ಜಾಣ್ನುಡಿ ಮಿಕ್ಕಿರೆ ಕಾವ್ಯಮಂ ಗುಣೋ
ದಯವರಮಾಗೆ ಮಾಡಿ ನಯಕೀರ್ತಿಯತೀಶ್ವರರಗ್ರಶಿಷ್ಯನಿಂ
ತಯಯುತನಪ್ಪ ಬಾಹುಬಲಿಪಂಡಿತದೇವನಭಿಷ್ಟುತಂ ಮಹೋ
ಭಯಕವಿಚಕ್ರವರ್ತಿ ಪೆಸರಿಂದೆಸೆದಂ ಜಗದೊಳ್ ನಿರಂತರಂ            (೧ – ೪೯)

ಈ ಪದ್ಯದಿಂದಲೂ ತಿಳಿದುಬರುತ್ತದೆ.

ಧರ್ಮನಾಥಪುರಾಣ ಒಂದು ಚಂಪೂಕಾವ್ಯ. ಇದರಲ್ಲಿ ೧೬ ಆಶ್ವಾಸಗಳಿವೆ. ಹದಿನೈದನೆಯ ತೀರ್ಥಂಕರನಾದ ಧರ್ಮನಾಥನ ಚರಿತ್ರೆಯನ್ನು ಇದರಲ್ಲಿ ಹೇಳಿದೆ. ಪ್ರಥಮಾಶ್ವಾಸದಲ್ಲಿ ಕವಿ ಸಿದ್ಧರನ್ನೂ ಜೈನತತ್ತ್ವೋಪದೇಶಕರನ್ನೂ ಸರ್ವಸಾಧುಗಳನ್ನೂ ಶಾರದೆಯನ್ನೂ ವೃದ್ಧಾಜ್ಜಿಕೆಯರನ್ನೂ ಸ್ತುತಿಸಿದ್ದಾನೆ. ಅರಿಷ್ಟಸೇನ, ಗೌತಮ ಗಣಧರಯತಿ, ಪುಷ್ಟದಂತ, ಗೃದ್ಧೃಪಿಂಛಾಚಾರ್ಯ, ಸಮಂತಭದ್ರಮುನಿ, ಪೂಜ್ಯಪಾದಮುನಿ, ಅಕಳಂಕವ್ರತಿ, ಕೊಂಡಕುಂದಯತಿಪತಿ, ವಿಶಾಲ ಕೀರ್ತಿಮುನಿ, ಪಾರ್ಶ್ವದೇವ, ಜಿನ ಧರ್ಮೋದ್ಧಾರಕ, ಚಾರುಕೀರ್ತಿಪಂಡಿತ, ಧರ್ಮಭೂಷಣ ಭಟ್ಟಾರಕ, ಲಕ್ಷ್ಮೀಸೇನ ಭಟ್ಟಾರಕ, ಮೇಘಚಂದ್ರ, ನಯಕೀರ್ತಿದೇವ – ಇವರೇ ಮೊದಲಾದ ಆಚಾರ್ಯರನ್ನು ಭಕ್ತಿಪೂರ್ವಕವಾಗಿ ವಂದಿಸಿದ್ದಾನೆ. ಗಜಾಂಕುಶ, ನಾಗವರ್ಮ, ಹಂಪ, ನೇಮಿ, ಜನ್ನಿಗ ರನ್ನ, ಅಗ್ಗಳ – ಇವರೇ ಮೊದಲಾದವರನ್ನು ಸ್ಮರಿಸಿದ್ದಾನೆ. ಇದಾದಮೇಲೆ ದುರ್ಜನ ನಿಂದೆ, ಕೃತಿಪ್ರಶಂಸೆ, ಕೃತಿಪತಿಪ್ರಶಂಸೆಗಳನ್ನು ಮಾಡಿದ್ದಾನೆ; ಅಲ್ಲದೆ ಆತ್ಮಪ್ರಶಂಸೆಯನ್ನೂ ಮಾಡಿಕೊಂಡಿದ್ದಾನೆ. ಆ ಬಳಿಕ ಕಥೆಯನ್ನು ನೇರವಾಗಿ ಪ್ರಾರಂಭಿಸಿದ್ದಾನೆ.

ಜಂಬೂದ್ವೀಪದ ದಕ್ಷಿಣದಿಶಾಭಾಗದಲ್ಲಿ ಭರತಕ್ಷೇತ್ರವು ರಾರಾಜಿಸುತ್ತಿತ್ತು. ಅದರಲ್ಲಿ ಉತ್ತರ ಕೌಶಲದೇಶ ವಿರಾಜಮಾನವಾಗಿತ್ತು, ಸಕಲ ಸಂಪದ್ಭರಿತವಾಗಿತ್ತು. ಇಕ್ಷ್ವಾಕುವಂಶದ ಮಹಾಸೇನಮಹಾರಾಜ ಅದರ ರಾಜನಾಗಿದ್ದನು. ಮನುಜ ಮನೋಜವಾದ ಆ ಮಹಾಸೇನ ಮಹಾರಾಜನ ಮನೋವಲ್ಲಭೆ ಸುವ್ರತಾದೇವಿ. ಆ ರಾಜದಂಪತಿಗಳು ಸಮಸ್ತ ಭೋಗಭಾಗ್ಯಗಳನ್ನು ಅನುಭವಿಸುತ್ತಿದ್ದರೂ ಅವರಿಗೆ ಮಕ್ಕಳಿರಲಿಲ್ಲ. ಇದರಿಂದ ಚಿಂತಾಕ್ರಾಂತನಾದ ರಾಜ :

ಎನಿತೆನಿತುಂ ಸ್ವಬಾಂಧವ ಸಹಸ್ರಮದುಳ್ಳೊಡಮೇನು ಮತ್ತಮಂ
ತೆನಿತೆನಿತುಂ ಸ್ವಗೋತ್ರಜಜನಂಗಳುಮುಳ್ಳೊಡಮೇನು ಪುತ್ರಸಂ
ಜನಿ ತನಗಿಲ್ಲದಂದು ನರನಾವನೊ ದುಃಖಮನೆಯ್ದನಂಬರಂ
ವಿನುತಹಿಮಾಂಶುವಿಲ್ಲದೊಡೆ ತಾರೆಗಳುಳ್ಳೊಡಮೆಂತು ರಂಜಿಕುಂ            (೩ – ೫)

ಕುಲದೀಪನೆನಿಪ ತನಯಂ
ನಿಳಯದೊಳುಜ್ಜಳಿಸಿ ಬೆಳಗದಿರ್ದೊಡೆ ಧಾತ್ರೀ
ತಳದೊಳದು ಮೆಱೆಯದೆಂತೆನೆ
ವಿಳಸಿತ ತಮದಿಂದಂ ಪುದಿದ ಮನೆಯಂತೆ ವಲಂ(೩ – ೬)

ಈ ರೀತಿ ತರ್ಕಿಸುವನು. ಇದಕ್ಕೆ ಏನು ಮಾಡಬೇಕೆಂದು ಆಲೋಚಿಸಿ ‘ಧರ್ಮದೊದ ವಿಂಸಾಧ್ಯಂದಲೀಕಾರ್ಯಂ’ ಎಂದು ನಿಶ್ಚಯಿಸುವನು. ಆ ವೇಳೆಗೆ ಸರಿಯಾಗಿ ವನಪಾಲಕನು ಬಂದು ಪ್ರಚೇತರೆಂಬಾಚಾರ್ಯವರ್ಯರು ಐನೂರುಜನ ಚಾರಣ ಋಷಿಗಳೊಡನೆ ಪುರದ ಬಹಿರುದ್ಯಾನದಲ್ಲಿ ಬೀಡುಬಿಟ್ಟಿರುವ ಸಂಗತಿಯನ್ನು ತಿಳಿಸುವನು. ಅದನ್ನು ಕೇಳಿದ ರಾಜ ಸಂತುಷ್ಟಚಿತ್ತನಾಗಿ ಪತ್ನೀಸಮೇತ ಋಷಿಗಳ ದರ್ಶನಕ್ಕೆ ಹೊರಟನು. ಅವರನ್ನು ಕಂಡಕೂಡಲೆ ದಂಪತಿಗಳಿಬ್ಬರೂ ಭಕ್ತಿಯಿಂದ ಪ್ರಣಾಮವನ್ನು ಮಾಡಿದರು. ಆಮೇಲೆ ರಾಜನು ‘ಪಂಚಮುಷ್ಟಿ ಪರಿನಿಷ್ಠಿತಾಂಗಯುಷ್ಟಿಯಾಗಿ’ ವಂದನೆಯನ್ನು ಮಾಡಿ ದೀನನಾಗಿ ನೆಲದ ಮೇಲೆ ಮಲಗಿಕೊಂಡಳು. ರಾಜನನ್ನು ನೋಡಿದ ಋಷಿಗಳು ಆಶೀರ್ವದಿಸಿ ಆತನ ದುಗುಡಕ್ಕೆ ಕಾರಣವನ್ನು ಕೇಳಿದರು. ಅದಕ್ಕೆ ರಾಜ ‘ಎನ್ನೀ ಪ್ರಾಣಪ್ರೀತೆಯಪ್ಪ ಕುಲಸ್ತ್ರೀಗೆ ಕಾಲದೊಳಾದೊಡಂ ಪುತ್ರಲಾಭ ಮಾಗದಿರ್ದುದು ರಾಜ್ಯಭಾರಧಾರಣ ಧೌರೇಯನಪ್ಪ ಕುಮಾರನನೊರ್ವನನಾದೊಡಂ ಕಾಣದ ಕಾರಣ ಮೀಗಳೀ ಚತುಸ್ಸಮುದ್ರಾಂಕಿತಮಾದ ಮೇದಿನೀಮಂಡಳಮೆನ್ನಯ ಬಾಹುದಂಡಕ್ಕೆ ಕೇವಳಂ ಭಾರಮಾಗಿ ತೋಱುತ್ತುಮಿರ್ದಪುರದಱಿಂದಾನತಿಕ್ಲೇಶಮಂತಾಳ್ದಿದೆಂ’ ಎಂದು ವಿಜ್ಞಾಪಿಸಿಕೊಂಡನು. ಅದನ್ನು ಕೇಳಿದ ಆ ಋಷಿಗಳು :

ತ್ರಿಜಗದ್ಗುರುವೆನಿಸುವ ಧ
ರ್ಮಜಿನಾಧೀಶಂಗೆ ತಂದೆಯಾದಪೆಯೆಂದೊಡೆ
ನಿಜಪುಣ್ಯದೇಳ್ಗೆ ಲೋಕದೊ
ಳಜನಿಸಿದುದು ಪಿರಿದುಮದ್ಭುತತ್ವದ ಪೆಂಪಂ  (೩ – ೬೩)

ಎಂದು ಹೇಳಲು ಆ ದಂಪತಿಗಳು ಅಪರಿಮಿತ ಪರಮಾನುರಾಗ ರಸಪೂರಿತರಾಗಿ ಮುನಿಗಳಿಗೆ ನಮಸ್ಕರಿಸಿ ಆ ಜಿನನ ಪೂರ್ವವೃತಾಂತವನ್ನು ನಿರೂಪಿಸಬೇಕೆಂದು ಪ್ರಾರ್ಥಿಸಿಕೊಂಡರು. ತರುವಾಯ ಆ ಮುನಿಗಳು ‘ಜಿನನ ಚರಿತ್ರದೊಂದು ಕಥೆಯಂ ನೆಱೆಪೇಳ್ದಡೆ ಕೇಳ್ದೊಡಂ ದಲಾತನ ದುರಿತಂಗಳೆಯ್ದೆ ಪರಿದೋಡುಗುಂ’ ಎಂದು ಭವಾಂತರ ಪ್ರಪಂಚವನ್ನು ನಿರೂಪಿಸುವುದಕ್ಕೆ ತೊಡಗಿದರು.

ಧಾತಕೀಷಂಡದ ಜಂಬೂದ್ವೀಪದಲ್ಲಿ ಮೇರುಗಿರಿಯ ಪೂರ್ವಪ್ರದೇಶದಲ್ಲಿ ಚಾರುಜಿನ ಧರ್ಮಗೇಹ ವಿರಾಜಿಸುತ್ತಿತ್ತು. ಆ ಪೂರ್ವವಿದೇಹದ ಮಧ್ಯದಲ್ಲಿ ಸೀತಾನದಿ ಹರಿಯುತ್ತಿತ್ತು. ಆ ನದಿಯ ತೀರದಲ್ಲಿ ವತ್ಸವೆಂಬ ದೇಶವಿತ್ತು. ಆ ದೇಶವನ್ನು ಭಾನುರಾಜನು ಆಳುತ್ತಿದ್ದನು. ಆತನ ಚಿತ್ತವಲ್ಲಭೆ ಮನೋಹರಿ. ಭಾನುರಾಜ ಮತ್ತು ಮನೋಹರಿಯರು ಕಾಮರತಿಯರಂತೆ ಸುಖವನ್ನು ಅನುಭವಿಸುತ್ತಿದ್ದರು. ಹೀಗಿರುವಲ್ಲಿ ಮನೋಹರಿ ಗರ್ಭವತಿಯಾದಳು. ಕಾಲಕ್ರಮದಲ್ಲಿ ಗಂಡುಮಗುವನ್ನು ಹಡೆದಳು. ಆ ಮಗುವಿಗೆ ದಶರಥನೆಂಬ ಹೆಸರಿಟ್ಟರು. ಕ್ರಮೇಣ ಆ ಬಾಲಕ ಪಾಡ್ಯದ ಚಂದ್ರನಂತೆ ಬೆಳೆದು, ಸಮಸ್ತ ಶಸ್ತ್ರಶಾಸ್ತ್ರ ವಿದ್ಯಾವಿಶಾರದನಾದನು. ಆಗ ಭಾನುರಾಜ ರಾಜ್ಯಭಾರವನ್ನು ಆತನಿಗೆ ವಹಿಸಿ ಯಮಧರಭಟ್ಟಾರಕರ ಸಮಕ್ಷದಲ್ಲಿ ಜಿನದೀಕ್ಷಾಪ್ರಾಪ್ತನಾಗಿ ‘ನಿಸರ್ಗದುರ್ಗಮಪವರ್ಗಮಂ’ ಸಾಧಿಸಿದರು. ಇತ್ತ ದಶರಥಮಹಾರಾಜ ದುಷ್ಟಶಿಕ್ಷಣ ಶಿಷ್ಟಪರಿಪಾಲನದಿಂದ ರಾಜ್ಯಭಾರವನ್ನು ಮಾಡುತ್ತಿದ್ದನು. ಆತನ ಕೀರ್ತಿಯನ್ನು ಕವಿ ಈ ರೀತಿ ವರ್ಣಿಸಿದ್ದಾನೆ :

ಪಾಪಕ್ಕಂಜುವನಾತಂ
ಪಾಪಂ ತಾನಂಜಿಯಾತನಂ ಬಿಟ್ಟೋಡಿ
ತ್ತೀ ಪರಿಯಂ ದಶದಿಕ್ಕುಗ
ಳಾಪೊತ್ತುಂ ನಗುವುವವನ ಕೀರ್ತಿಯ ನೆವದಿಂ    (೪ – ೪೫)

ಈ ರೀತಿ ವರ್ಣಿಸಿದ್ದಾನೆ. ಆ ಮಹಾರಾಜನಿಗೆ ದಯಾವತಿದೇವಿ ಎಂಬ ಹೆಂಡತಿ ಇದ್ದಳು. ಆ ದಂಪತಿಗಳಿಗೆ ಅತಿರಥನೆಂಬ ಕುಮಾರನಾದನು. ಹೀಗಿರಲು ಒಮ್ಮೆ ದಶರಥನು ಒಡ್ಡೋಲಗದಲ್ಲಿದ್ದಾಗ ಚಾರಣಪರಮೇಷ್ಠಿಗಳು ಆಕಾಶಪ್ರದೇಶದಿಂದ ಇಳಾತಳಕ್ಕೆ ಅವತರಿಸುತ್ತಿದ್ದುದನ್ನು ಕಂಡನು. ಅರಮನೆಗೆ ಆ ಋಷಿಗಳು ಬಂದಕೂಡಲೆ ಅವರನ್ನು ಸಂತೋಷದಿಂದ ಇದಿರುಗೊಂಡು ನಮಸ್ಕರಿಸಿ ಪರಿಪರಿಯಾಗ ಉಪಚರಿ ಸಿದನು. ಆ ರಾಜನ ದಾನಧರ್ಮಬುದ್ಧಿಯಿಂದ ಸಂಪ್ರೀತನಾದ ಮುನಿ ‘ನಿತ್ಯಸುಖಭೋಗ ಭಾಗಿಯಾಗು’ ಎಂದು ಆಶೀರ್ವದಿಸಿ ಹೊರಟುಹೋದನು.

ದಶರಥ ಮಹಾರಾಜನು ಒಮ್ಮೆ ಅಮೃತಶಿಲಾನಿರ್ಮಿತವಾದ ಸೌಧಶಿಖರಾಗ್ರದಲ್ಲಿ ಓಲಗವನ್ನು ನಡೆಸುತ್ತಿದ್ದನು. ಎಲ್ಲೆಲ್ಲೂ ಹಾಲು ಚೆಲ್ಲಿದಂತೆ ಬೆಳುದಿಂಗಳಿತ್ತು. ಆ ಸಮಯದಲ್ಲಿ ಕಳಾಪರಿಪೂರ್ಣನಾಗಿದ್ದ ಚಂದ್ರಬಿಂಬವನ್ನು ರಾಹು ಹಿಡಿಯಿತು. ಜಗತ್ತನ್ನೆಲ್ಲ ಕತ್ತಲೆ ಆವರಿಸಿತು. ತನ್ನ ಕಣ್ಣೆದುರಿಗೇ ನಡೆದ ಈ ಪ್ರಸಂಗವನ್ನು ಕಂಡ ರಾಜ ಸಿರಿಯ ಅಸ್ಥಿರತೆಯನ್ನೂ ಸಂಸಾರದ ನಿಸ್ಸಾರತೆಯನ್ನೂ ಮನದಲ್ಲಿ ಬಗೆದು :

ಸ್ಥಿರಮಲ್ಲದ ಸಿರಿ ಸಾರ್ದೊಡೆ
ಪಿರಿದುಂ ದಾನವನೆ ಮಾಡುವಂ ಕಡುಜಾಣಂ
ನೆರಪಿ ಬೈತಿಟ್ಟು ಮೆಲ್ಲನೆ
ಪರಿಭೋಗಿಪೆನೆಂದು ಬಗೆವವಂ ಕಡುಮೂರ್ಖಂ(೫ – ೨೯)

ಈ ರೀತಿ ನಿರ್ಧರಿಸಿ ಸಾಂಸಾರಿಕ ಸುಖಕ್ಕೆ ಕೊಕ್ಕರಿಸುವನು. ದುಶ್ಚರಣ ತಪಶ್ಚರಣ ಪರಿಗ್ರಹವನ್ನು ಮಾಡುವುದಾಗಿ ನಿಶ್ಚಯಿಸುವನು. ಮಾರನೆಯ ದಿನ ಒಡ್ಡೋಲಗವನ್ನು ಸೇರಿಸಿ ತನ್ನ ಕುಮಾರನನ್ನು ಬರಮಾಡಿಕೊಂಡು ಜೈನದೀಕ್ಷೆಯನ್ನು ಕೈಕೊಂಡು ತಪಸ್ಸಿಗೆ ಹೊರಡುವ ತನ್ನ ನಿರ್ಧಾರವನ್ನು ತಿಳಿಸುವನು. ಮಂತ್ರಿಗಳೂ ರಾಜಕುಮಾರನೂ ದಶರಥನ ನಿರ್ಧಾರವನ್ನು ಬದಲಿಸುವಂತೆ ಬಗೆಬಗೆಯಾಗಿ ಪ್ರಾರ್ಥಿಸಿಕೊಂಡರು. ಆದರೆ ಅದಾವುದಕ್ಕೂ ಓಗೊಡದೆ ಮಹಾರಾಜನು ಮಗನಿಗೆ ಸಾಮ್ರಾಜ್ಯಪಟ್ಟವನ್ನು ಕಟ್ಟಿ :

ಕೈವಲ್ಯಕ್ಕೆಱಗುವ ಮನ
ವೋವದೆ ಸಂಸಾರ ಪದವಿಗೇನೆಱಗುವುದೇ
ಪೂವಿಂಗೆಱಗುವ ಮಧುಪಂ
ಭಾವಿಸೆ ದುರ್ದಮಿತ ಕರ್ದಮಕ್ಕೆಱಗುವುದೇ      (೫ – ೭೩)

ಎಂದು ನಿಶ್ಚಯಿಸಿ ಬಂದುಬಾಂಧವರನ್ನು ಸಂತೈಸಿ, ಪುತ್ರನನ್ನು ಒಡಂಬಡಿಸಿ ತಪಸ್ಸಿಗೆ ಹೊರಟುಹೋದನು. ದಾರಿಯಲ್ಲಿ ವಿಮಳವಾಹನ ಭಟ್ಟಾರಕರನ್ನು ಕಂಡು ಅವರ ಆಶೀರ್ವಾದವನ್ನು ಪಡೆದು ಮುಂದೆ ಹೋದನು. ಆತನು ನಿಷ್ಠೆಯಿಂದ ತ್ರಿಕಾಲವೂ ತಪಸ್ಸನ್ನು ಮಾಡಿ ಬಾಹ್ಯಾಭ್ಯಂತರ ಪರಿಗ್ರಹಗಳನ್ನು ತೊರೆದು ಸಂನ್ಯಸನ ವಿಧಾನದಿಂದ ಒಂದು ತಿಂಗಳು ಪರ್ಯಂತರವಿದ್ದನು. ಆಮೇಲೆ ಸಮಾಧಿವಿಧಿ ದೊರಕೊಂಡು ಸರ್ವಾರ್ಥಸಿದ್ಧಿ ವಿಮಾನವನ್ನು ಸೇರಿದನು. ಅಲ್ಲಿಂದ ಅಹಮಿಂದ್ರನೆಂಬ ದೇವನಾಗಿ ಹುಟ್ಟಿ ಅವಧಿಜ್ಞಾನವನ್ನು ಪಡೆದನು. ಸರ್ವಾವಧಿಬೋಧಸಂಪನ್ನನಾದ ಆತನು ಮೂವತ್ತುಮೂರು ಸಾಗರೋಪಮಕಾಲವಾದಮೇಲೆ ಚರಮದೇಹಧಾರಣೆಗಾಗಿ ಧರಣೀತಳಕ್ಕೆ ಅವತರಿಸುವನು. ಮಹಾಸೇನಮಹಾರಾಜ ಮತ್ತು ಸುವ್ರತಾಮಹಾ ದೇವಿಯರಿಗೆ ಹದಿನೈದನೆಯ ತೀರ್ಥಂಕರನಾಗಿ ಧರ್ಮನಾಥನು ಮಗನಾಗಿ ಹುಟ್ಟುವನು ಎಂದು ಆ ಪ್ರಚೇತರೆಂಬಾಚಾರ್ಯರು ಹೇಳಿದರು. ಧರ್ಮನಾಥನ ಪೂರ್ವಭಾವಾವಳಿ ಯನ್ನು ಅವರೆಲ್ಲರೂ ಕೇಳಿ ಮುನೀಶ್ವರನನ್ನು ಕೊಂಡಾಡಿದರು. ತರುವಾಯ ಮಹಾಸೇನಮಹಾರಾಜ ಮತ್ತು ಸುವ್ರತಾಮಹಾದೇವಿಯರು ಸಂತೋಷದಿಂದ ನಿಜರಾಜಧಾನಿಗೆ ಹಿಂತಿರುಗಿದರು. ದೇವೇಂದ್ರನು ಧರ್ಮನಾಥನ ಗರ್ಭಾವತರಣ ಕಲ್ಯಾಣನಿಮಿತ್ತವಾಗಿ ರತ್ನವೃಷ್ಟಿಯನ್ನು ಕರೆಯುವಂತೆ ಕುಬೇರನಿಗೆ ಆಜ್ಞೆ ಮಾಡಿದನು. ಅಲ್ಲದೆ ದೇವಸ್ತ್ರೀಯರನ್ನು ಕರೆಸಿ ‘ನೀವು ಹೋಗಿ ಆ ಜಿನಜನನಿಗೆ ಪರಿಚರ್ಯವನ್ನು ಮಾಡುತ್ತಿರಿ’ ಎಂದು ಕಳಿಸಿಕೊಟ್ಟನು. ಅದರಂತೆ ಆ ದೇವಸ್ತ್ರೀಯರು ಮಹಾಸೇನ ಮಹಾರಾಜನ ಅರಮನೆಗೆ ಬಂದು ಆತನನ್ನು ಆಶೀರ್ವದಿಸಿದರು. ಅವರನ್ನು ಕಂಡ ರಾಜನು ಅವರ ಇತಿವೃತ್ತವನ್ನು ಬೆಸಗೊಳ್ಳಲು ಆ ದೇವಸ್ತ್ರೀಯರಲ್ಲಿ ಮುಖ್ಯಳಾದವಳು :

ಭಾವಿ ಜಿನಜನನಿಯಪ್ಪಾ
ದೇವಿಗೆ ಶುಶ್ರೂಷೆಯಂ ಮಹಾದರದಿಂದಂ
ನೀವೆಯ್ದೆ ಮಾಡಿಯೆಂದಾ
ದೇವೇಂದ್ರಂ ಬೆಸಸೆ ಬಂದೆವಿಲ್ಲಿಗೆ ನೃಪತಿ        (೬ – ೩೯)

ಎಂದು ಹೇಳಿದಳು. ಅದನ್ನು ಕೇಳಿದ ಮಹಾರಾಜ ಸಂತೋಷಭರಿತನಾಗಿ ದೇವಸ್ತ್ರೀ ಯರೆನ್ನೆಲ್ಲ ಸತ್ಕರಿಸಿದನು. ಆ ದೇವಸ್ತ್ರೀಯರು ಜಿನಜನನಿಯಾದ ಸುವ್ರತಾಮಹಾ ದೇವಿಯನ್ನು ನಾನಾ ರೀತಿಯಲ್ಲಿ ಉಪಚರಿಸುತ್ತಿದ್ದನು. ಹೀಗಿರುವಲ್ಲಿ ಒಂದುದಿನ ರಾತ್ರಿ ಸುವ್ರತಾಮಹಾದೇವಿ ಮಂಗಳ ಕಾರಣಂಗಳಾದ ಷೋಡಶಭಾವನಾದಿ ಸ್ವಪ್ನಗಳನ್ನು ಕಂಡಳು. ಬೆಳಗಾದ ಮೇಲೆ ತಾನು ಕಂಡ ಸ್ವಪ್ನಗಳ ಸಂಗತಿಯನ್ನು ಪತಿಗೆ ಹೇಳಿದಳು. ಅದನ್ನು ಕೇಳಿದ ರಾಜ ಮುಂದಾಗಲಿರುವ ಪುತ್ರೋತ್ಸವ ಸಂಗತಿಯನ್ನು ಅರಿತು ಅಪರಿಮಿತ ಆನಂದವನ್ನು ಹೊಂದಿದನು. ಇತ್ತ ಸರ್ವಾರ್ಥಸಿದ್ಧಿ ಎಂಬ ವಿಮಾನದಲ್ಲಿ ಹುಟ್ಟಿದ್ದ ದಶರಥನ ಚರನಾದ ಅಹಮಿಂದ್ರನೆಂಬದೇವ ತನ್ನ ಅವಸಾನಕಾಲ ಪ್ರಾಪ್ತವಾದುದನ್ನು ಅರಿತು ದಿವ್ಯಶರೀರ ಭಾರವನ್ನು ಬಿಟ್ಟು ಸರ್ವಾರ್ಥಸಿದ್ಧಿಯಿಂದ ಹೊರಬಂದು ಸುವ್ರತಾ ಮಹಾದೇವಿಯ ಗರ್ಭದಲ್ಲಿ ನೆಲಸಿದನು. ಇದನ್ನು ತಿಳಿದ ದೇವೇಂದ್ರನೇ ಮೊದಲಾದ ದೇವತೆಗಳಿಗೆ ಆಸನಕಂಪವಾಯಿತು. ಆಗ ಚತುರ್ನಿಕಾಯ ದೇವತೆಗಳೆಲ್ಲ ಬಂದು ಪಂಚಾಶ್ಚರ್ಯ ಪುರಸ್ಸರವಾಗಿ ಗರ್ಭಾವತರಣಕಲ್ಯಾಣ ವಿಧಾನವನ್ನು ಮಾಡಿದರು.

ಗರ್ಭವತಿಯಾದ ಸುವ್ರತಾಮಹಾದೇವಿ ಅಪೂರ್ವವಾದ ಶೋಭೆಯಿಂದ ರಾರಾಜಿಸುತ್ತಿದ್ದಳು. ನವಮಾಸಗಳು ತುಂಬಲು ಒಂದು ಶುಭಮುಹೂರ್ತದಲ್ಲಿ ಆಕೆ ಪುತ್ರನನ್ನು ಹಡೆದಳು. ಆಗ ಪಂಚಾಶ್ಚರ್ಯಗಳಾದುವು; ದೇವತೆಗಳು ಪುಷ್ಪವೃಷ್ಟಿಯನ್ನು ಕರೆದರು. ಭುವನಾಮರ ಲೋಕದಿಂದ ವ್ಯಂತರಲೋಕದಿಂದ ಜ್ಯೋತಿರ್ಲೋಕದಿಂದ ಕಲ್ಪಾವಾಸಿ ದೇವರ್ಕಳೆಲ್ಲ ಜಿನನ ಜನ್ಮೋತ್ಸವದಲ್ಲಿ ಭಾಗಿಗಳಾಗಲು ಅಲ್ಲಿಗೆ ಬಂದರು. ಆಗ ದೇವೇಂದ್ರ ಶಚಿದೇವಿಗೆ ಧರ್ಮಜಿನೇಶವನ್ನು ಎತ್ತಿಕೊಂಡು ಬರುವಂತೆ ಹೇಳಿಕಳಿಸಿದನು. ಅದರಂತೆ ಆಕೆ ಅಲ್ಲಿಗೆ ಹೋಗಿ ಜಿನಜನನಿಗೆ ಪ್ರದಕ್ಷಿಣ ನಮಸ್ಕಾರವನ್ನು ಮಾಡಿ ಅಲ್ಲಿದ್ದ ವನಿತೆಯರಿಗೆಲ್ಲ ನಿದ್ರೆಯನ್ನು ಬರಿಸಿ ಮಾಯಾರ್ಭಕನನ್ನು ಅಲ್ಲಿರಿಸಿ ಜಿನಾರ್ಭಕನನ್ನು ಎತ್ತಿಕೊಂಡು ಹೋದಳು. ಆ ಶಿಶುವನ್ನು ದೇವೇಂದ್ರನ ಕೈಗೆ ಕೊಟ್ಟಳು. ದೇವೇಂದ್ರನು ಜಿನಜನ್ಮಾಭಿಷೇಕ ಕಲ್ಯಾಣ ಯಾತ್ರಾನಿಮಿತ್ತವಾಗಿ ಐರಾವತವನ್ನು ತರಿಸಿ ಅದರ ಮೇಲೆ ಜಿನಾರ್ಭಕನನ್ನು ಕುಳ್ಳಿರಿಸಿ ಮೇರುಪರ್ವತಕ್ಕೆ ಕೊಂಡೊಯ್ದನು. ಅಲ್ಲಿ ಪಾವನಮೋಕ್ಷಸ್ಥಾನವೆಂಬಂತೆ ವಿಶಾಲವಾಗಿದ್ದ ಪಾಂಡುಕಶಿಲೆಯ ನಡುವೆ ಜಿನನ ಅಭಿಷೇಕ ಮಂಟಪ ರಂಜಿಸುತ್ತಿತ್ತು. ಅಲ್ಲಿದ್ದ ದೇವತೆಗಳು ದೇವೇಂದ್ರನ ಆಣತಿಯಂತೆ ಸುವರ್ಣಘಟಗಳಿಂದ ಕ್ಷೀರಸಮುದ್ರದ ಜಲವನ್ನು ತಂದು ಜಿನನಿಗೆ ಅಭಿಷೇಕವನ್ನು ಮಾಡಿದರು. ಆಮೇಲೆ ಜಿನಶಿಶುವನ್ನು ರತ್ನಪುರಕ್ಕೆ ಕರೆತಂದು ಆತನ ಪುಣ್ಯಶಕ್ತಿಯನ್ನು ಹೊಗಳಿ :

ಈತಂ ಮಾಡಿದಪಂ ವಿನಿರ್ಮಳ ಮಹಾಧರ್ಮಪ್ರಭಾವಾಂಗಮಂ
ಧಾತ್ರೀಮಂಡಳದಲ್ಲಿ ಮೇಲೆನಿಪಿನಂ ಧರ್ಮಕ್ಕಮಿನ್ನುಂ ಸಮಂ
ತೀತಂ ತಾನಧಿನಾಥನೆಂದು ಶಿಶುಗಂ ಶ್ರೀಧರ್ಮನಾಥಂ ದಲೆಂ
ಬೀತಂ ನಾಮಮನಿಟ್ಟು ಘೋಷಿಸಿದನಾ ದೇವೇಂದ್ರನಾನಂದದಿಂ    (೯ – ೩೬)

ಧರ್ಮನಾಥನೆಂದು ನಾಮಕರಣಮಾಡಿದರು. ದೇವೇಂದ್ರನೇ ಮೊದಲಾದವರೆಲ್ಲ ಸ್ವಸ್ಥಾನಗಳಿಗೆ ಹಿಂತಿರುಗಿದರು. ಇತ್ತ ಧರ್ಮನಾಥನು ಬಾಲಲೀಲೆಗಳನ್ನು ಕಳೆದು ಯೌವನಕ್ಕೆ ಕಾಲಿಟ್ಟನು. ಪ್ರಾಪ್ತವಯಸ್ಕನಾದ ಧರ್ಮನಾಥನಿಗೆ ಮಹಾಸೇನಮಹಾರಾಜ ಯುವರಾಜ ಪಟ್ಟವನ್ನು ಕಟ್ಟಿದನು.

ಒಂದು ದಿನ ಧರ್ಮನಾಥ ಒಡ್ಡೋಲಗದಲ್ಲಿದ್ದಾಗ ಕುಂಡಿನಪುರದಿಂದ ಬಂದ ಒಬ್ಬದೂತನು ಆ ದೇಶದ ರಾಜಪುತ್ರಿಯಾದ ಶೃಂಗಾರವತೀದೇವಿಯ ಸ್ವಯಂವರದ ವಿಷಯವನ್ನು ತಿಳಿಸಿದನು. ಮಹಾಸೇನಮಹಾರಾಜ ಧರ್ಮನಾಥನನ್ನು ಆ ಸ್ವಯಂವರಕ್ಕೆ ಕಳಿಸಿಕೊಟ್ಟನು. ಸಪರಿವಾರ ಸಮೇತನಾಗಿ ಹೊರಟ ಧರ್ಮನಾಥ ಕುಂಡಿನಪುರವನ್ನು ಸಮೀಪಿಸುತ್ತಲೇ ಆ ದೇಶದ ರಾಜನಾದ ಪ್ರತಾಪರಾಜನಿಗೆ ತನ್ನ ಆಗಮನವನ್ನು ತಿಳಿಸಿದನು. ಪ್ರತಾಪರಾಜನು ಧರ್ಮನಾಥನಿಗೆ ವಿಶಿಷ್ಟವಾದ ಬಿಡಾರವನ್ನು ಏರ್ಪಡಿಸಿಕೊಟ್ಟನು. ಭವ್ಯವಾದ ಸ್ವಯಂವರ ಮಂಟಪದಲ್ಲಿ ರಾಜಾಧಿರಾಜರು ಮಂಡಿಸಿದ್ದರು. ಧರ್ಮನಾಥನು ಮಣಿಮಯಸಿಂಹಾಸನದಲ್ಲಿ ವಿರಾಜಮಾನನಾಗಿದ್ದನು. ಸ್ವಯಂವರಮಂಟಪದಲ್ಲಿ ನೆರೆದಿದ್ದ ರಾಜಕುಮಾರರೆಲ್ಲ ರಾಜಕುಮಾರಿಯನ್ನು ನೋಡಿ :

ಮನಸಿಜನ ಮಂತ್ರದೇವತೆ
ಯೆನೆ ಮದನನ ವೀರಲಕ್ಷ್ಮಿಯಂತಿರೆ ರತಿನಾ
ಥನ ಮೋಹನ ಶಕ್ತಿಯವೋಲ್
ಜನಮಂ ಮೋಹಿಸುತುಮಿರ್ದಳಚ್ಚರಿಯಿಂದಂ   (೧೧ – ೬೯)

ಎಯ್ದೆ ಮೂಲೋಕಮಂ ಕೆ
ಯ್ಗೆಯ್ದೀಕೆಯ ರೂಪಿದೊಂದೆ ಸಾಲದೆ ಗೆಲಲಿ
ನ್ನಯ್ದು ಬಾಣಂಗಳಂ ಪಿಡಿ
ದೆಯ್ದುವ ಸಂಕ್ಲೇಶಮೇವುದೆಂಬಂ ಮದನಂ    (೧೧ – ೭೦)

ಈ ರೀತಿ ಅಭಿಪ್ರಾಯಪಟ್ಟರು. ಪ್ರತಿಯೊಬ್ಬರೂ ಆಕೆಯನ್ನು ಗೆಲ್ಲಬೇಕೆಂದು :

ಒರ್ವಂ ವಶ್ಯದ ಚೂರ್ಣಮಂ ತಳಿದನೊರ್ವಂ ಧ್ಯಾನಿಸುತ್ತಿರ್ದನೊ
ಲ್ದೊರ್ವಂ ಮಂತ್ರಮನೋದಿವಂ ತಿಳಕಮಂ ಮತ್ತೊರ್ವನಿಟ್ಟಂ ಸಮಂ
ತುರ್ವಿಂದಾ ಸತಿಯಂ ವಶೀಕರಿಸಲೆಂದಿಂತಪ್ಪುಪಾಯಂಗಳಂ
ಸರ್ವರ್ ಮಾಡುತುಮಿರ್ದರುತ್ಸುಕತೆಯಿಂ ಗೆಲ್ವಂತಿರೊರ್ವೊರ್ವರಂ           (೧೧ – ೧೦೦)

ಈ ವಿಧಾನಗಳನ್ನು ಅನುಸರಿಸಿದರಂತೆ. ಸಭೆಯಲ್ಲಿದ್ದ ರಾಜಕುಮಾರರನ್ನೆಲ್ಲ ನೋಡಿ ಕೊಂಡು ಧರ್ಮನಾಥನಲ್ಲಿಗೆ ಬಂದಾಗ ರಾಜಕುಮಾರಿಯ ನೋಟ ಅಲ್ಲೇ ಕೀಲಿಸಿತು. ಕಾಲುಗಳು ಮುಂದಕ್ಕೆ ಚಲಿಸದಂತಾದುವು. ಸ್ವಯಂವರಮಾಲೆಯನ್ನು ಧರ್ಮನಾಥನ ಕೊರಳಿಗೆ ಹಾಕಿದಳು. ಪ್ರತಾಪರಾಜ ಧಾರಾಪೂರ್ವಕವಾಗಿ ತನ್ನ ಮಗಳನ್ನು ಧರ್ಮನಾಥನಿಗೆ ಪಾಣಿಗ್ರಹಣ ಮಾಡಿಕೊಟ್ಟನು.

ವಿವಾಹಮಹೋತ್ಸವದನಂತರ ಧರ್ಮನಾಥನೂ ಶೃಂಗಾರವತಿಮಹಾದೇವಿಯೂ ‘ನವಪ್ರಣಯಪ್ರಸ್ತುತ ವಿನೋದಕೇಳಿಗಳಿಂದ’ ಕಾಲವನ್ನು ಕಳೆಯುತ್ತಿರಲು ಒಂದುದಿನ ಮಹಾಸೇನಮಹಾರಾಜನಿಂದ ಕರೆ ಬಂದಿತು. ‘ಬರ್ಪುದು ತಡೆಯದೆ ಬೇಗಂ’ ಎಂದು ಬರೆದಿದ್ದ ಪತ್ರದ ಒಕ್ಕಣೆಯನ್ನು ಓದಿಕೊಂಡು ಪ್ರಯಾಣಕ್ಕೆ ಸಿದ್ಧನಾದನು. ಪ್ರತಾಪ ಮಹಾರಾಜ ಮಗಳು ಅಳಿಯನಿಗೆ ಬೇಕಾದ ಉಡುಗೊರೆಗಳನ್ನು ಕೊಟ್ಟು ಮಗಳಿಗೆ ತಕ್ಕ ಬುದ್ಧಿವಾದವನ್ನು ಹೇಳಿ ಕಳಿಸಿಕೊಟ್ಟನು. ರಾಜಧಾನಿಯನ್ನು ತಲಪುತ್ತಲೇ ಧರ್ಮನಾಥನ ತಂದೆ ತಾಯಿಗಳೂ ಪುರಜನರೂ ಅತ್ಯಂತಸಂಭ್ರಮದಿಂದ ನೂತನ ದಂಪತಿಗಳನ್ನು ಎದುರುಗೊಂಡರು. ಆ ದಂಪತಿಗಳು ಸಂತೋಷದಿಂದ ಕಾಲವನ್ನು ಕಳೆಯುತ್ತಿದ್ದರು.

ಹೀಗಿರಲು ಒಂದುದಿನ ಮಹಾಸೇನ ಮಹಾರಾಜನು ಸಭೆಯಲ್ಲಿದ್ದಾಗ ಕರಗುತ್ತಿದ್ದ ಕಾಮನಬಿಲ್ಲನ್ನು ಕಂಡನು. ಅದನ್ನು ನೋಡುತ್ತಿದ್ದಂತೆಯೇ ಆತನಿಗೆ ಸಂಸಾರದ ಅಸ್ಥಿರತೆ ಮನಸ್ಸಿನಲ್ಲಿ ಮೂಡಿತು. ವಿರಕ್ತಿಯನ್ನು ತಾಳಿದ ಆತನು ಧರ್ಮನಾಥನಿಗೆ ರಾಜ್ಯಪಟ್ಟವನ್ನು ಕಟ್ಟಿ ‘ನಿನ್ನಯ ನೊಸಲೊಳ್ ಸ್ಥಿರಮಕ್ಕೀ ಪಟಂ’ ಎಂದು ಆಶೀರ್ವದಿಸಿ ರಾಜನೀತಿಯನ್ನು ಬೋಧಿಸಿ ಬುದ್ಧಿವಾದವನ್ನು ಹೇಳಿದನು. ಆ ವೇಳೆಗೆ ಯಮಧರ ಭಟ್ಟಾರಕರು ಮುನಿಸಮುದಾಯವೆರಸಿ ಅಮಿತವನಕ್ಕೆ ಬಂದಿರುವ ಸಂಗತಿಯನ್ನು ಚರರಿಂದ ಕೇಳಿದ ಮಹಾರಾಜ ಅವರನ್ನು ಕಾಣಲು ಧಾವಿಸಿದನು. ಅವರನ್ನು ಕೂಡಲೇ ಪಾದಗಳ ಮೇಲೆ ಬಿದ್ದು :

ಕರುಣಿಗಳೆತ್ತುವರ್ ಕೆಳಗೆ ಬಿಳ್ದವರಂ ಮುನಿನಾಥ ನೀಂ ಕೃಪಾ
ಶರನಿಧಿಚಂದ್ರನಾಂ ಭವಸಮುದ್ರದ ಮಧ್ಯದೊಳೆಯ್ದೆಬಿಳ್ದು ಪೀ
ವರತರದುಃಖದಿಂ ನಮೆವುತ್ತಿರ್ದೆನಗಿತ್ತಱಿ ಜೈನದೀಕ್ಷೆಯೆಂ
ಬುರು ಸುಬಹಿತ್ರಮಂ ಕಡೆಗೆ ದಾಂಟಿಸಿ ಸತ್ಸುಖನೆನ್ನನಾಗಿಸಾ        (೧೨ – ೧೫೯)

ಎಂದು ಪ್ರಾರ್ಥಿಸಿಕೊಂಡನು. ಈರಾರು ತಪ, ಷಡಾವಶ್ಯಕ, ದಶಧರ್ಮ, ಐದಾಚಾರ, ಮೂರರಗುಪ್ತಿ ಮತ್ತು ಮೂವತ್ತಾರು ಭಾಸ್ವದ್ಗುಣಗಳಿಗೂ ಒಡೆಯನಾಗಿ ಕರ್ಮಕ್ಷಯದ ಉಪಾಯವನ್ನು ನಿಮಿರ್ಚಿದನು. ಇತ್ತ ಧರ್ಮನಾಥನು ಪ್ರಾಜ್ಯಮಾದ ಸಕಳ ಸಾಮ್ರಾಜ್ಯವನ್ನು ನಿಷ್ಕಂಟಕವಾಗಿ ಆಳುತ್ತಿದ್ದನು.

ಸ್ವಯಂವರದಲ್ಲಿ ಸೋತು ಅವಮಾನಿತರಾಗಿದ್ದ ರಾಜಸಮೂಹವೆಲ್ಲ ಒಂದೆಡೆ ಸೇರಿ ಮಂತ್ರಾಲೋಚನೆಯನ್ನು ಮಾಡಿ ಸ್ವಯಂವರದಲ್ಲಿ ಮನಸ್ಸಿಗೆ ಬಂದವರಿಗೆ ಮಾಲೆಯಿಕ್ಕುವಂತೆ ಸಾರಿದ ಶೃಂಗಾರವತಿ ದೇವಿಯನ್ನು ಧರ್ಮನಾಥನು ವರಿಸಿದ್ದು ಅನ್ಯಾಯ. ಇದು ನಮ್ಮೆಲ್ಲರಿಗೂ ಅವಮಾನವಾದಂತೆ ಎಂದು ಭಾವಿಸಿ ದೂತನೊಬ್ಬನನ್ನು ‘ಶೃಂಗಾರವತಿದೇವಿಯಂ ಬೇಡಿಯಟ್ಟಿದರ್’ ಎಂದು ಹೇಳಿಕಳಿಸಿದರು. ಅದನ್ನು ಕೇಳಿ ಕೋಪಗೊಂಡ ಸುಷೇಣನೆಂಬ ಸೇನಾಪತಿ ದಂಡೆತ್ತಿ ಹೋಗಿ ಆ ರಾಜರನ್ನೆಲ್ಲ ಸದೆಬಡಿದು ಅವರಿಂದ ಕಪ್ಪಕಾಣಿಕೆಗಳನ್ನು ಪಡೆದು ಧರ್ಮನಾಥನಿಗೆ ಒಪ್ಪಿಸಿದನು. ಧರ್ಮನಾಥ ಸುಷೇಣನ ಸಾಮರ್ಥ್ಯವನ್ನು ಕೊಂಡಾಡಿ ಆತನಿಗೆ ಬೇಕಾದುದನ್ನು ಕೊಟ್ಟು ಸನ್ಮಾನಿಸಿದನು. ಹೀಗಿರುವಲ್ಲಿ ವಸಂತಕಾಲ ಬಂದಿತು. ಧರ್ಮನಾಥ ಶೃಂಗಾರವತಿದೇವಿಗೆ :

ನುಡಿಯಿಂ ಮುಡಿಯಿಂ ನಡೆಯಿಂ
ತಡೆಯದೆ ಕೋಗಿಲೆಗೆ ತುಂಬಿಗಂಚೆಗೆ ಮದಮಂ
ಕಿಡಿಸಿ ಸಡಗರಮನೆನಗೆ
ಯ್ದೊಡರಿಸು ನಡೆ ನಂದನಕ್ಕೆ ಪಂಕಜವದನೇ     (೧೪ – ೪೧)

ಎಂದು ಹೇಳಿದನು. ಅದಕ್ಕೆ ಆಕೆ ಒಡಂಬಡಲು ‘ವನವಿಹರಣಕೇಳೀವಿನೋದ ಯಾತ್ರನಿಮಿತ್ತ’ವಾಗಿ ಆನಂದಭೇರಿಯನ್ನು ಹೊಡೆಸಿ ದಂಪತಿಗಳು ಪಟ್ಟದಾನೆಯನ್ನು ಏರಿ ಸಪರಿವಾರ ಸಮೇತರಾಗಿ ಪ್ರಯಾಣವನ್ನು ಮಾಡಿದರು. ವನದಲ್ಲಿ ಅಸಂಖ್ಯಾತ ಸ್ತ್ರೀಯರು ಜಲಕೇಳಿಯನ್ನಾಡುತ್ತಿದ್ದುದನ್ನು ಕಂಡ ಧರ್ಮನಾಥ ಮತ್ತು ಶೃಂಗಾರವತಿ ದೇವಿಯರು ಈ ವನಜಲಕೇಳೀ ವಿನೋದಗಳನ್ನು ಮುಗಿಸಿ ರಾಜಧಾನಿಗೆ ಹಿಂತಿರುಗಿದರು.

ಧರ್ಮನಾಥನು ರಾತ್ರಿವಿಹಾರಕೇಳಿಗೆ ನಾಲ್ಕುಜನ ಮುಖ್ಯ ನಾಯಕರನ್ನು ಕೂಡಿಕೊಂಡು ಹೋಗಿ ಸೂಳೆಗೇರಿಯಲ್ಲೆಲ್ಲ ಸುತ್ತಾಡಿಕೊಂಡು ಅರಮನೆಗೆ ಹಿಂತಿರುಗುವನು. ಆಮೇಲೆ ಧರ್ಮನಾಥ ಶೃಂಗಾರವತಿದೇವಿಯರು ಇಷ್ಟವಿಷಯ ಭೋಗೋಪಭೋಗಗಳನ್ನು ಅನುಭವಿಸುತ್ತ ಅನ್ಯೋನ್ಯಾಸಕ್ತಚಿತ್ತರಾಗಿ ಅನೇಕ ದಿನಗಳನ್ನು ನಿಮಿಷಮಾತ್ರಗಳಾಗಿ ಕಳೆಯುತ್ತಿದ್ದರು.

ಧರ್ಮನಾಥ ಮಹಾರಾಜನು ನ್ಯಾನದಿಂದಲೂ ಧರ್ಮದಿಂದಲೂ ‘ಅರವಿಂದಂ ಜಲದಲ್ಲಿ ಪುಟ್ಟಿ ಜಲಮಂ ತಾಂ ಮುಟ್ಟದಿರ್ಪಂದದಿಂ ರಾಜ್ಯರಕ್ಷಣಂಗೆಯ್ಯುತ್ತುಂ’ ಇದ್ದನು. ಹೀಗಿರುವಲ್ಲಿ ಒಮ್ಮೆ ಆತನು ಸಭೆಯಲ್ಲಿದ್ದಾಗ ಪ್ರಳಯಕಾಲದ ಮಹಾಗ್ನಿಯೋ ಎಂಬಂತೆ ಒಂದು ಉಲ್ಕಾಪಾತವಾಯಿತು. ಸಭಾಸದರು ಅದರ ಕಾರಣವನ್ನು ಕೇಳಿದರು. ಅದಕ್ಕೆ ಧರ್ಮನಾಥ :

ಒರ್ವಂ ಜ್ಯೋತಿಷ್ಕದೇವಂ ವಿಮಳಚರಿತನೆಂಬಂ ಸುರಾಧೀಶನಾಜ್ಞಾ
ಪೂರ್ವಂ ಬಂದಂಬರಸ್ಥಾನದೊಳಿರುತುಮದಂ ನೋಡಿ ಕಂಡಿಲ್ಲಿ ನಮ್ಮಂ
ಸರ್ವೇಶಂ ಬೇಸಱಂ ಸಂಸೃತಿ ವಿಷಯಸುಖಕ್ಕಿನ್ನುಮೆಂದೆಮ್ಮ ಚಿತ್ತ
ಕ್ಕುರ್ವೀವೈರಾಗ್ಯಮಂ ಪುಟ್ಟಿಸುವ ಬೆವಸೆಯಿಂದಿಂತುಟಂ ತೋಱೆಪೋದಂ  (೧೬ – ೩೨)

ಎಂದು ಹೇಳಿದನು. ಧರ್ಮನಾಥ ವೈರಾಗ್ಯಪರನಾದುದನ್ನು ಅರಿತ ಅಮರ್ತ್ಯ ಯೋಗಿಪತಿಗಳು ಬ್ರಹ್ಮಕಲ್ಪಾಗ್ರದಿಂದ ಬಂದು ನಾನಾರೀತಿಯಾಗಿ ಹೊಗಳಿದರು. ದೇವೇಂದ್ರನು ಚತುರ್ನಿಕಾಯ ದೇವರ್ಕಳೊಡನೆ ಬಂದು ಆ ಪರಮನನ್ನು ಪರಿನಿಷ್ಕ್ರ ಮಣಾಭಿಷೇಕ ಮಂಟಪಕ್ಕೆ ಕರೆತಂದು ಗಂಗಾಸಿಂಧುತೀರ್ಥಗಳಿಂದ ಅಭಿಷೇಕ ಮಾಡಿದನು. ಧರ್ಮನಾಥ ತನ್ನ ಮಗನಿಗೆ ಪಟ್ಟವನ್ನು ಕಟ್ಟಿ ಪುರಜನರನ್ನೂ ತಾಯಿಯನ್ನೂ ಸಂತೈಸಿ ಚಂದ್ರಪ್ರಭವೆಂಬ ಪಲ್ಲಕ್ಕಿಯನ್ನು ಏರಿ ದೀಕ್ಷಾಮಂಟಪಕ್ಕೆ ಬಂದನು. ಅಲ್ಲಿ ಇಂದುಕಾಂತ ಶಿಲಾಪಟ್ಟಕದ ಮೇಲೆ ಪೂರ್ವಾಭಿಮುಖನಾಗಿ ಕುಳಿತುಕೊಂಡನು. ತಾನು ಧರಿಸಿದ್ದ ಆಭರಣಗಳನ್ನೆಲ್ಲ ವಿಸರ್ಜಿಸಿ ಕುಂತಳವನ್ನು ಪರಿದು ಈಡಾಡಿದನು. ಹೀಗೆ ಬಾಹ್ಯಾಭ್ಯಂತರ ಪರಿಗ್ರಹಗಳನ್ನು ಕಳೆದು ಮೋಕ್ಷಗಾಮಿಯಾದ ಧರ್ಮನಾಥನನ್ನು ಸಕಲದಿವಿಜದನುಜ ಮನುಜರೆಲ್ಲ ಜಯಕಾರ ಮಾಡಿ ಸ್ತುತಿಸಿದರು. ಆಗ ಧರ್ಮನಾಥ :

ಶ್ರೀಯಂ ಪರಿಹರಿಸಿ ತಪಃ
ಶ್ರೀಯಂ ಮಾಘಾರ್ಜುನತ್ರದಯೋದಶಿಯಪರಾ
ಹ್ಣಾಯತ್ತ ಪುಷ್ಯತಾರೆಯೊ
ಳೋಯರದಿಂ ತಾಳ್ದನಖಿಳಜನವಿನುತಪದಂ     (೧೬ – ೭೦)

ಈ ರೀತಿ ಮೋಕ್ಷವನ್ನು ಪಡೆದನು. ಆಮೇಲೆ ಪಾರಣೆಯ ನಿಮಿತ್ತನಾಗಿ ಪಾಟಳೀಪುತ್ರಕ್ಕೆ ಬಂದನು. ಆ ಊರಿನ ರಾಜ ಆತನನ್ನು ನಾನಾ ರೀತಿ ಪೂಜಿಸಿ ಸತ್ಕರಿಸಿ ಬಗೆಬಗೆಯ ಭಕ್ಷ್ಯಭೋಜನಗಳಿಂದ ಪಾರಣೆಯನ್ನು ಮಾಡಿಸಿದನು. ಆಗ ಪಂಚಾಶ್ಚರ್ಯಗಳಾದುವು. ಆದಾದಮೇಲೆ ಧರ್ಮನಾಥ ಪುಣ್ಯಾರಣ್ಯವನ್ನು ಹೊಕ್ಕು ‘ನಿರ್ಮಳ ಪ್ರಾಶುಕ ಪ್ರದೇಶ ಪ್ರಸಿದ್ಧಶುದ್ಧಸ್ಫಟಿಕ ಶಿಲಾತಳಾಗ್ರದೊಳ್ ಯೋಗನಿರೋಧಂಗೆಯ್ದು ಕಾಯೋತ್ಸರ್ಗ ಪ್ರತಿಮಾನುಯೋಗ ಯೋಗ ನಿಯೋಗದೊಳ್’ ಇದ್ದನು. ಕ್ರಮೇಣ ತಪಸ್ಸಿನಿಂದ ದೇಹವನ್ನು ಕ್ಷೀಣಿಸಿದನು. ಬುದ್ಧಿರಿದ್ಧಿಕ್ರಿಯಾ ರಿದ್ಧಿ ವಿಕ್ರಿಯಾರ್ಧಿ ತಪೋರಿದ್ಧಿ ಬಲರಿದ್ಧಿ ರಸರಿದ್ಧಿಕ್ಷೀಣರಿದ್ಧಿಯನ್ನು ಅನುಭವಿಸಿದನು. ಚತುಃಕಷಾಯಗಳನ್ನು ದರ್ಶನಮೋಹನೀಯ ತ್ರಯಗಳನ್ನು ಹದಿನಾರು ಪ್ರಕೃತಿಗಳನ್ನು ಕಳೆದೊಡನೆಯೇ :

ಉದಯಿಸಿದುದು ಕೇವಳಬೋ
ಧದ ವಿಭವಂ ಮಾಘಮಾಸ ಪೌರ್ಣಮಿಯಪರಾ
ಹ್ಣದೊಳದುವೆ ಪುಣ್ಯನಕ್ಷ
ತ್ರದ ಸಿರಿ ಶುಭಲಗ್ನದಲ್ಲಿ ಗುರುವಾರದೊಳಂ  (೧೬ – ೧೩೮)

ಹೀಗೆ ಕೇವಳಜ್ಞಾನ ಉಂಟಾಯಿತು. ದೇವೇಂದ್ರನು ಕುಬೇರನನ್ನು ಕರೆಯಿಸಿ ಸಮವಸರಣ ಮಂಟಪವನ್ನು ವಿರಚಿಸಿದನು. ಧರ್ಮನಾಥನು ಸಮವಸರಣಮಂಟಪವನ್ನು ಅಲಂಕರಿಸಿದನು. ಆಗ ದೇವೇಂದ್ರನೇ ಮೊದಲಾದ ಅಸಂಖ್ಯಾತ ದೇವತೆಗಳು ಅಲ್ಲಿ ಸೇರಿ ಧರ್ಮನಾಥನನ್ನು ಪೂಜಿಸಿ ಸ್ತುತಿಸಿದರು. ಧರ್ಮನಾಥ ಅಲ್ಲಿ ನೆರೆದಿದ್ದವರಿಗೆಲ್ಲ ಆಸ್ರವತತ್ತ್ವದ ರೀತಿಯನ್ನು ಬೋಧಿಸಿದರು. ಆಮೇಲೆ ಸಮವಸರಣ ಮಂಟಪದಲ್ಲಿ ವಿಹರಿಸುತ್ತ ಆರ್ಯಾಖಂಡವನ್ನೆಲ್ಲ ಸಂಚರಿಸಿ ತನ್ನ ನಿರ್ವಾಣಸ್ಥಾನಕ್ಕೆ ಆಗಮಿಸಿದನು. ಅಲ್ಲಿ ಒಂದು ಶಿಲಾಪಟ್ಟಕದ ಮೇಲೆ ಮೂರ್ತಿಗೊಂಡನು. ದೇವಾದಿದೇವತೆಗಳೆಲ್ಲ ಆತನನ್ನು ಪೂಜಿಸಿ ಸ್ವಸ್ಥಾನಗಳಿಗೆ ಹಿಂದಿರುಗಿದರು. ಧರ್ಮನಾಥನ ಪುತ್ರ ಪರಿಜನ ಸಹಿತನಾಗಿ ಅಲ್ಲಿಗೆ ಬಂದು ನಾನಾಧರ್ಮಗಳನ್ನು ಮಾಡಿ, ಚೈತ್ಯಾಲಯದಲ್ಲಿದ್ದ ಚತುರ್ವಿಂಶತಿ ತೀರ್ಥಂಕರರ ಪ್ರತಿಮೆಗಳನ್ನು ಕಂಡು ಅತ್ಯಂತಭಕ್ತಿಯಿಂದ ಪೂಜಿಸಿ ನಿಜರಾಜಧಾನಿಗೆ ಹಿಂತಿರುಗಿದನು. ಆತನ ನಲವತ್ತೈದು ಬಿಲ್ಲುದ್ದದ ಧರ್ಮನಾಥನ ಪ್ರತಿಮೆಯನ್ನು ಚಿನ್ನದಲ್ಲಿ ಮಾಡಿಸಿ ಪ್ರತಿಷ್ಠಾಪಿಸಿದನು. ಬೇಡಿದವರಿಗೆ ಬೇಡಿದುದನ್ನೆಲ್ಲ ದಾನವಾಗಿ ಕೊಟ್ಟು ರಾಜ್ಯದಲ್ಲೆಲ್ಲ ಧರ್ಮಪ್ರಸಾರವನ್ನು ಮಾಡಿದನು. ಈ ವರಧರ್ಮಮಹಾರಾಜನು ದುಷ್ಟನಿಗ್ರಹ ಶಿಷ್ಟಪರಿಪಾಲನಾಪೂರ್ವಕವಾಗಿ ಸುಖಸಂಕಥಾ ವಿನೋದದಿಂದ ರಾಜ್ಯ ಭಾರವನ್ನು ಮಾಡುತ್ತಿದ್ದನು.

ಕೃತಿ ವಿಮರ್ಶೆ

ಹದಿನೈದನೆಯ ತೀರ್ಥಂಕರನಾದ ಧರ್ಮನಾಥನ ಕಥೆ ಗುಣಭದ್ರಾಚಾರ್ಯರ ಉತ್ತರಪುರಾಣದಲ್ಲಿ ಕೇವಲ ೧೩೦ ಶ್ಲೋಕಗಳಲ್ಲಿ ಮುಕ್ತಾಯವಾಗಿದೆ. ಚಾವುಂಡರಾಯನ ಚಾವುಂಡರಾಯಪುರಾಣದಲ್ಲಿ ಎರಡು ಮೂರು ಪುಟಗಳಲ್ಲಿ ಈತನ ಕಥೆ ಪರ್ಯವಸಾನವಾಗುತ್ತದೆ. ಈ ಪುಟ್ಟ ಕಥಾವಸ್ತುವನ್ನು ಆಧರಿಸಿ ಬಾಹುಬಲಿಪಂಡಿತ ಹದಿನಾರು ಆಶ್ವಾಸಗಳ ಚಂಪೂಕಾವ್ಯವನ್ನು ರಚಿಸಿದ್ದಾನೆ; ಪ್ರಾಚೀನ ಕವಿಗಳ ಸಂಪ್ರದಾಯವನ್ನು ಚಾಚೂತಪ್ಪದೆ ಅನುಸರಿಸಿದ್ದಾನೆ ; ಭವಾಂತರಗಳ ವಿಶೇಷ ಗೋಜಿಲ್ಲದ ಈ ಕಥೆಯನ್ನು ವರ್ಣನೆಗಳ ಮೂಲಕ ಹಿಗ್ಗಿಸಿ ಬೃಹದಾಕಾರವಾಗಿ ಮಾಡಿದ್ದಾನೆ. ತನ್ನ ಕಾವ್ಯ ಮಹಾಕಾವ್ಯವಾಗಬೇಕೆಂಬ ಹೆಬ್ಬಯಕೆಯಿಂದ ಅಷ್ಟಾದಶವರ್ಣನೆಗಳನ್ನು ವಿಶೇಷವಾಗಿ ಮಾಡಿದ್ದಾನೆ. ಬಾಹುಬಲಿಪಂಡಿತ ಸಮರ್ಥನಾದ ಕವಿ. ಯಾವ ಸನ್ನಿವೇಶವನ್ನಾಗಲಿ ಅದನ್ನು ಅದ್ಭಉತ ರಮ್ಯವನ್ನಾಗಿ ಮಾಡಬಲ್ಲ ಪ್ರತಿಭಾವಂತ. ಯುದ್ಧದ ವರ್ಣನೆಯನ್ನಾಗಲಿ, ಶರತ್ಕಾಲ ಗ್ರೀಷ್ಮ ಕಾಲ ನಿದಾಘಕಾಲಗಳ ವರ್ಣನೆಯನ್ನಾಗಲಿ, ಸ್ತ್ರೀಯರ ವರ್ಣನೆಯನ್ನಾಗಲಿ ಆಸ್ಥಾನದ ವರ್ಣನೆಯನ್ನಾಗಲಿ, ಕೊನೆಗೆ ವೈರಾಗ್ಯಪ್ರಕರಣದ ವರ್ಣನೆಯನ್ನಾಗಲಿ ಕವಿ ಲೀಲಾಜಾಲವಾಗಿ ಮಾಡಬಲ್ಲ ಸಾಮರ್ಥ್ಯವನ್ನು ಪಡೆದಿದ್ದಾನೆ.

ಕನ್ನಡ ಸಾಹಿತ್ಯದಲ್ಲಿ ಧರ್ಮತೀರ್ಥಂಕರರನ್ನು ಕುರಿತು ಸ್ವತಂತ್ರ ಕೃತಿರಚನೆ ಮಾಡಿದವರಲ್ಲಿ ಬಾಹುಬಲಿಪಂಡಿತನೇ ಮೊದಲಿಗನೆಂದು ಈ ಹಿಂದೆಯೇ ತಿಳಿಸಿದೆ. ಈತನ ತರುವಾಯ ಬಂದ ಕ್ರಿ.ಶ. ೧೩೮೫ರಲ್ಲಿ ಇದ್ದಿರಬಹುದಾದ ಮಧುರಕವಿ ಧರ್ಮನಾಥ ಪುರಾಣವನ್ನು ಬರೆದಿದ್ದಾನೆ. ಈತನೂ ತನ್ನ ಕಾವ್ಯಕ್ಕೆ ಮೂಲ ಯಾವುದೆಂಬುದನ್ನು ಹೇಳಿಕೊಂಡಿಲ್ಲ. ಆದರೆ ಮಧುರಕವಿಯ ಕಾವ್ಯವನ್ನು ಪರಿಶೀಲಿಸಿದವರಿಗೆ ಕಥಾಸರಣಿಯಲ್ಲಿ ವರ್ಣನಾಭಾಗಗಳಲ್ಲಿ ಬಾಹುಬಲಿಪಂಡಿತನಿಂದ ಪ್ರಭಾವಿತನಾಗಿರುವುದು ವ್ಯಕ್ತವಾಗುತ್ತದೆ.

ಇದೇ ರೀತಿ ಹಲವಾರು ವರ್ಣನಾಭಾಗಗಳಲ್ಲಿ ಈ ಇಬ್ಬರು ಕವಿಗಳಿಗಿರುವ ಸಾಮ್ಯವನ್ನು ಗುರುತಿಸಬಹುದಾಗಿದೆ. ದಶರಥಮಹಾರಾಜ ಜಿನದೀಕ್ಷೆಕೈಗೊಳ್ಳುವಾಗ ಮಾಡುವ ಜಿನಸ್ತುತಿ ಬಾಹುಬಲಿಪಂಡಿತನಲ್ಲಿ ಕೃತಿಯ ಕೊನೆಯ ಭಾಗದಲ್ಲಿ ವೃತ್ತಗಳಲ್ಲಿ ಬಂದಿದ್ದರೆ ಮಧುರನಲ್ಲಿ ಕಾವ್ಯದ ಮೊದಲಿಗೇ ಕಂದಪದ್ಯಗಳಲ್ಲಿ ಬಂದಿವೆ. ಬಾಹುಬಲಿ ಪಂಡಿತನಲ್ಲಿ ಬರುವ ಮೇರುಗಿರಿ ಭರತಕ್ಷೇತ್ರಗಳ ವರ್ಣನೆ ಮಧುರನಲ್ಲಿ ಕಂಡು ಬರುವುದಿಲ್ಲ. ಈ ಕೆಲವು ಸೂಕ್ಷ್ಮವ್ಯತ್ಯಾಸಗಳನ್ನು ಬಿಟ್ಟರೆ ವಿಷಯಾನುಕ್ರಮಣಿಕೆಯಲ್ಲಿ ವರ್ಣನಾಪ್ರಸಂಗಗಳಲ್ಲಿ ಇವರಿಬ್ಬರಲ್ಲಿಯೂ ಸಂಪೂರ್ಣ ಸಾಮ್ಯ ಕಂಡುಬರುತ್ತದೆ. ಒಟ್ಟಿನಲ್ಲಿ ಮಧುರ ಬಾಹುಬಲಿಪಂಡಿತನಿಂದ ಪ್ರಭಾವಿತನಾಗಿದ್ದಾನೆಂಬುದು ನಿರ್ವಿವಾದ.

ಧರ್ಮನಾಥಪುರಾಣ ಒಂದು ಧಾರ್ಮಿಕ ಗ್ರಂಥ, ಇದರಲ್ಲಿ ಜೈನಧರ್ಮದ ಪ್ರಕ್ರಿಯೆಗಳು ಸಾಕಷ್ಟು ಬಂದಿದ್ದರೂ ಕವಿ ತನ್ನ ಸಮಯೋಚಿತ ಪ್ರಜ್ಞೆಯಿಂದ ಅನುಪಮ ವರ್ಣನೆಗಳಿಂದ ಈ ಕಾವ್ಯವನ್ನು ಅತ್ಯಂತ ಸ್ವಾರಸ್ಯಕರವಾದುದನ್ನಾಗಿ ಮಾಡಿದ್ದಾನೆ. ಈತನು ಪ್ರಾಚೀನ ಸಂಪ್ರದಾಯದಲ್ಲೇ ಮುಂದುವರಿದಿದ್ದರೂ ಅಲ್ಲಲ್ಲಿ ಈ ಸಂಪ್ರದಾಯದ ಕಟ್ಟುಗಳನ್ನು ಕತ್ತರಿಸಿಕೊಂಡು ಸ್ವತಂತ್ರವಾಗಿ ವರ್ಣಿಸಿದ್ದಾನೆ. ಗಣಪ್ರಾಸ ನಿಯಮಗಳನ್ನು ದಿಟ್ಟತನದಿಂದ ಉಲ್ಲಂಘಿಸಿ ತನ್ನ ಕ್ರಾಂತಿಕಾರಕ ಪ್ರವೃತ್ತಿಯನ್ನು ಮೆರೆದಿದ್ದಾನೆ.

ಮಧುರ ಕವಿ – ಕಾಲ – ಕಾವ್ಯ

ಕನ್ನಡ ಸಾಹಿತ್ಯದ ಚಂಪೂ ಕವಿಗಳ ಶ್ರೇಣಿಯಲ್ಲಿ ಕೊನೆಯವನೆಂದು ಪರಿಗಣಿಸಲಾದ ಮಧುರಕವಿ “ಧರ್ಮನಾಥ ಪುರಾಣ”ವೆಂಬ ಚಂಪೂ ಕಾವ್ಯವನ್ನೂ “ಗುಮ್ಮಟ ಸ್ತುತಿ” ಎಂಬ ಅಷ್ಟಕವನ್ನೂ ಹಂಪೆಯ ಕೃಷ್ಣದೇವಸ್ಥಾನದ ಬಳಿ ಲಭ್ಯವಾಗಿರುವ ಒಂದು ಶಾಸನವನ್ನೂ ಬರೆದಿದ್ದಾನೆ. ಮೈಸೂರು ಪ್ರಾಚ್ಯ ವಿದ್ಯಾಸಂಶೋಧನಾಲಯದ ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚೀ; ದ್ವಿತೀಯ ಸಂಪುಟ; ಪುಟ ೨೦೦ರಲ್ಲಿ “೭೦೩ : ಧರ್ಮನಾಥ ಪುರಾಣ, ಮಧುರ; ಕೆ. ೧೭ : “೮. ೭x೨”; ೧ – ೭೬ ಪತ್ರ ೧೧ ಪಂಕ್ರಿ ೩೭ ಅಕ್ಷರ : ಆದಿ : ಶ್ರೀಭಾಸ್ವ…. ಯಿಸಿದಳ ಧರ್ಮಕ್ಕಡರ್ಪ್ಪಾದತೇಜೋ || ೧ || ಅಂತ್ಯ : ವ || ಅಂತು ಸಕಲ ಪರಿಗ್ರಹ ನಿವೃತ್ತನಾಗಿ ರಾಜತ್ವಮಂಬಿಟ್ಟ ಸನ್ಮಾರ್ಗವಲಂಬಮಂ ಬಿಡದೆ ಸರ್ವಜ್ಞ ಚೂಡಾಮಣಿಯೆನಿಸಿ ನೂರ್ವರುಯೀಶ್ವರರ್ವೆರಸು ವನಮಂ ಪೊಕ್ಕು ಅಚಲಿರ ದೀಕ್ಷಾ ಪ್ರದಾನವಿದಾನಂ ಉತ್ತರಾಭಿಮುಖನಾಗಿ ಪಂಚಪದಂಗಳಂ ಸ್ಮರಿಯಿಸಿ ಜಾತರೂಪಮನಂಗೀಕರಿಸಿದಾಗಳ್

ಕಂ || ಮುಂ ಪಂಚಗುರು ಪದಾಕ್ಷರ
ಚಂಪಕವಾಸನೆ ನಿಜಾಸ್ಯ….

ವಿಷಯ : ಹದಿನೈದನೆಯ ತೀರ್ಥಂಕರನಾದ ಧರ್ಮನಾಥನ ಕಥೆ

ವಿಶೇಷ : ಪ್ರತಿಯು ಅಸಮಗ್ರವಾಗಿದೆ ೧ನೆಯ ಪತ್ರ ಮುರಿದಿದೆ. ಶಕಟರೇಫ ಪ್ರಯೋಗ ಇದೆ.” ೧೯೬೨ರಲ್ಲಿ ಪ್ರಕಟವಾದ ವರ್ಣನಾತ್ಮಕ ಸೂಚಿಯಲ್ಲಿ ಈ ವಿವರಗಳಿವೆ.

“ಮಧುರ ಕವಿ ವಿರಚಿತ ಧರ್ಮನಾಥ ಪುರಾಣಂ :

ಸಂಪಾದಕರು : ವೇ || ಬ್ರಂ || ಶ್ರೀ || ಯಂ. ಸಿ ಪದ್ಮನಾಭಶರ್ಮ, ನ್ಯಾಯತೀರ್ಥ ಮತ್ತು ಶ್ರೀಮಾನ್ ಜಿ. ಬ್ರಹ್ಮಪ್ಪ, ಬಿ. ಎ. ಆನರ್ಸ್ : ಪ್ರಕಾಶಕರು ಶ್ರೀ || ಕೆ. ಸಿ. ಜಿನಚಂದ್ರಯ್ಯ, ಕಳತಂಗರೆ, ಅಂಜಗುನ್ನಂ, ವೈನಾಡ ೧೯೫೫.” ಇವರು ಪ್ರಕಟಿಸಿರುವ ಪ್ರಚಲಿತ ಧರ್ಮನಾಥ ಪುರಾಣದಲ್ಲಿ ನಾಲ್ಕು ಆಶ್ವಾಸಗಳೂ ಐದನೆಯ ಆಶ್ವಾಸದಲ್ಲಿ ೧೩೮ ಪದ್ಯಗಳೂ ಇವೆ. ಮೈಸೂರಿನ ಹಸ್ತಪ್ರತಿಯಲ್ಲಿ ಇರುವುದಕ್ಕಿಂತ ಇದರಲ್ಲಿ ಏಳು ಪದ್ಯಗಳು ಹೆಚ್ಚಾಗಿವೆ. ಈ ಸಂಬಂಧವಾಗಿ ಈ ಕೃತಿಯ ಸಂಪಾದಕರು “ಈ ಗ್ರಂಥವನ್ನು ಸಂಶೋಧಿಸಲು ಮದರಾಸಿನ ಶ್ರೀಮಾನ್ ಹೆಚ್. ಶೇಷ ಅಯ್ಯಂಗಾರ್‌ರವರ ಪ್ರತಿಯೊಂದು ಸಂಶೋಧನೆಗೆ ಸಹಾಯಕವಾಗಿ ದೊರೆತು ಆ ಪ್ರತಿಯನ್ನು ಶ್ರೀ ವಿದ್ಯಾಭೂಷಣ ಕೆ. ಭುಜಬಲಿಶಾಸ್ತ್ರಿಯವರು ದಯಪಾಲಿಸಿದ್ದರು. ಇದಕ್ಕಾಗಿ ಉಭಯ ವಿದ್ವಾಂಸರುಗಳನ್ನು ಅಭಿನಂದಿಸುತ್ತೇವೆ” ಎಂದಿದ್ದಾರೆ. ಈ ಹಸ್ತಪ್ರತಿಯ ವಿವರಗಳನ್ನು ಪರಿಶೀಲಿಸುವುದು ಅಗತ್ಯವಾಗಿದೆ.

ಮಧುರ ಜೈನಕವಿ. ವಾಜಿವಂಶಕ್ಕೆ ಸೇರಿದವನು. ಭಾರದ್ವಾಜ ಗೋತ್ರದವನು. ಈತನ ತಂದೆ ವಿಷ್ಣು ತಾಯಿ ನಾಗಲಾಂಬಿಕೆ. ಬುಕ್ಕರಾಜಸುತ ಹರಿಹರರಾಯನ ಪ್ರಧಾನನಾದ ಮುದ್ದುದಂಡೇಶ ಈತನ ಪೋಷಕನಾಗಿದ್ದನು. ಗುಮ್ಮಟಸ್ತುತಿಯಲ್ಲಿ “ಭೂನಾಥನಾಸ್ಥಾನದ ಚೂಡಾಮಣಿ” ಎಂದು ಹೇಳಿರುವುದರಿಂದ ಮಧುರ ಹರಿಹರನ ಆಸ್ಥಾನ ಕವಿಯಾಗಿದ್ದಿರಬೇಕು ಎಂದು ಕವಿಚರಿತಕಾರರು ಅಭಿಪ್ರಾಯಪಟ್ಟಿದ್ದಾರೆ. ಈತನಿಗೆ ಕಳಾವಿಳಾಸ, ಕವಿರಾಜ ವಿಳಾಸ, ಕವಿಮಾಧವ, ಕರ್ಣಾಟ ಕವಿತಾ ಕಲಾವಿಲಾಸವಿಧು, ಸರಸಕವಿ ರಸಾಲವಸಂತ, ಭಾರತೀ ಮಾನಸಕೇಳೀರಾಜಹಂಸ, ನಿರ್ಣೀತ ಕರ್ಣಾಟ ಲಕ್ಷಣ ಭಾಷಾಕವಿರಾಜ, ವಿಶ್ವವಿದ್ಯಾಸಮುದಯ ಸುಮನಸ್ಸಂಚರಚ್ಚಂಚರೀಕ ಮುಂತಾದ ಬಿರುದುಗಳಿದ್ದಂತೆ ತಿಳಿದುಬರುತ್ತದೆ.

ಧರ್ಮನಾಥ ಪುರಾಣದಲ್ಲಿ ಪೂರ್ವಕವಿಗಳಾದ ಪಂಪ, ಪೊನ್ನ, ರನ್ನ, ನಾಗಚಂದ್ರ, ನೇಮಿಚಂದ್ರ, ಜನ್ನ – ಇವರೇ ಮೊದಲಾದವರನ್ನು ಸ್ತುತಿಸಿದ್ದಾನೆ. ತನ್ನ ಕವಿತಾ ಚಾತುರ್ಯವನ್ನು ಹೇಳುವ ಪದ್ಯದಲ್ಲಿ ಶ್ಲೇಷೆಯಿಂದ ಜನ್ನ, ರನ್ನ, ಪುಷ್ಪದಂತ, ಗಜಾಂಕುಶ, ಮನಸಿಜ, ಶ್ರೀವಿಜಯ, ಸುಜನೋತ್ತಂಸ, ಯಶಶ್ಚಂದ್ರ, ನೇಮಿಚಂದ್ರ ಇವರ ಹೆಸರುಗಳನ್ನು ಹೇಳಿದ್ದಾನೆ (೧ – ೬೮) ಅಲ್ಲದೆ : ಸರ್ವಸಮ್ಮತಮೆನಗಿದು | ಗರ್ವದ ಮಾತಲ್ಲ ಶಾಸ್ತ್ರಲೌಕಿಕ ಕಳೆಯೊಳ್ ಬೇರ್ವರಿದನೇಮಿ ಜನ್ನಿಗ | ರಿರ್ವರೆ ಕರ್ಣಾಟ ಕೃತಿಗೆ ಸೀಮಾಪುರುಷರ್ (೧ – ೪೧) ಎಂದು ನೇಮಿಜನ್ನಿಗರನ್ನು ಕೊಂಡುಕೊನೆದಿದ್ದಾನೆ. ಮಧುರನನ್ನು ತರಯವಾಯದ ಕವಿಗಳಲ್ಲಿ ಮೂರನೆಯ ಮಂಗರಸ ಮೊದಲಾದ ಕವಿಗಳು ಸ್ತುತಿಸಿದ್ದಾರೆ.

ಕಾಲ ವಿಚಾರ :

ಮಧುರನ ಧರ್ಮನಾಥಪುರಾಣ ಸಮಗ್ರವಾಗಿ ಲಭ್ಯವಾಗಿಲ್ಲ. ಲಭ್ಯವಾಗಿರುವ ಭಾಗದಲ್ಲಿ ಆತನ ಕಾಲದಲ್ಲಿ ಸಂಬಂಧಿಸಿದ ಮಾಹಿತಿಗಳಿಲ್ಲ. ಅನುಪಲಬ್ಧವಾದ ಭಾಗದಲ್ಲಿ ಈ ಸಂಬಂಧವಾದ ಮಾಹಿತಿಗಳಿವೆಯೋ ಇಲ್ಲವೋ ಎಂಬುದು ತಿಳಿದುಬರುವಂತಿಲ್ಲ. ಆದರೆ ಮಧುರನೇ ಬರೆದಿರುವ ಹಂಪೆಯ ಶಾಸನದಲ್ಲಿ ಕಾಲವನ್ನು ದಾಖಲಿಸಲಾಗಿದೆ. ಈ ಶಾಸನ ೧೩೩೨ನೆಯ ಶಕ ಸಂವತ್ಸರದಲ್ಲಿ ರಚಿತವಾಗಿರುವುದರಿಂದ ಅದು ಕ್ರಿ.ಶ. ೧೪೧೦ ಎಂದಾಗುತ್ತದೆ. ಶಾಸನದ ಕಾಲಸೂಚೀ ಪದ್ಯದಂತೆ ಈ ಶಾಸನ ಕ್ರಿ.ಶ. ೨೦ – ೨ – ೧೪೧೦ ಗುರುವಿಂದ ರಚಿತವಾದುದು ಎಂದು ವಿದ್ವಾಂಸರು ನಿರ್ಧರಿಸಿದ್ದಾರೆ.[1]

ಕರ್ಣಾಟಕ ಕವಿಚರಿತೆಕಾರರ “ಬುಕ್ಕರಾಜನ ಮಗನಾದ ಹರಿಹರರಾಯನು ೧೩೭೭ರಿಂದ ೧೪೦೪ರ ವರೆಗೆ ಆಳಿದುದಾಗಿ ತಿಳಿವುದರಿಂದ ಆ ರಾಜನ ದಂಡಾಧಿಪನಲ್ಲಿ ಆಶ್ರಿತನಾಗಿದ್ದ ಈ ಕವಿ ಸುಮಾರು ೧೩೮೫ರಲ್ಲಿ ಇದ್ದಿರಬಹುದು” ಎಂದು ಹೇಳಿದ್ದಾರೆ.[2] ಧರ್ಮನಾಥಪುರಾಣದ :

ವಸುಧಾಚಕ್ರಪ್ರಸಿದ್ಧಂ ವಿಜಯನಗರಿಯೊಳ್ ಯಾದವೋರ್ವೀಶಭಾಗ್ಯಾ
ವಸಥ ಶ್ರೀ ಬುಕ್ಕಭೂಪಾತ್ಮದ ಹರಿಹರ ರಾಜಪ್ರಧಾನೋತ್ತಮಂ ನೀ
ತಿಸಮುದ್ರಂ ಮುದ್ದದಂಡೇಶ್ವರನೆ ಪೊರೆದ ಸೌಭಾಗ್ಯದಿಂ ಭಾರತೀ ಮಾ
ನಸ ಕೇಳೀರಾಜಹಂಸಂ ನೆಗಳ್ದನವನಿಯೋಳ್ ವಾಜಿವಂಶಾವತಂಸಂ(೧ – ೭೯)

ಈ ಪದ್ಯ ಕವಿಚರಿತಕಾರರ ಅಭಿಪ್ರಾಯವನ್ನು ಪುಷ್ಟೀಕರಿಸುತ್ತದೆ. ಈ ಎಲ್ಲ ಆಧಾರಗಳಿಂದ ಮಧುರ ಕವಿ ಕಾಲ ಕ್ರಿ.ಶ. ೧೩೮೫ ಎಂಬುದು ಸಮಂಜಸವಾದುದು ಎಂದು ಭಾವಿಸಬಹುದಾಗಿದೆ.

ಕೃತಿ ವಿಚಾರ :

ಮಧುರ ಧರ್ಮನಾಥಪುರಾಣ, ಗುಮ್ಮಟ ಸ್ತುತಿ, ಹಂಪೆಯ ಶಾಸನ ಇವುಗಳನ್ನು ರಚಿಸಿರುವುದು ಸರ್ವವಿದಿತವಾಗಿದೆ. ಪ್ರಸ್ತುತ ಧರ್ಮನಾಥ ಪುರಾಣದ ಬಗೆಗೆ ಮಾತ್ರ ವಿವೇಚನೆ ಮಾಡಲಾಗಿದೆ. ಈ ಧರ್ಮನಾಥ ಪುರಾಣದ ರಚನೆಯ ಹಿನ್ನೆಲೆಯನ್ನು ಮಧುರನೇ ಸ್ಪಷ್ಟಪಡಿಸಿದ್ದಾನೆ :

ಕೊಟ್ಟುಬಾಗೆ ನಗರದ ವಿಭು ಬೊಮ್ಮಿಸೆಟ್ಟಿ ಅತ್ಯಂತ ಉದಾರಿ; ಭವ್ಯೋತ್ತಮ. ಆತನ ಪತ್ನಿ ಚೆನ್ನಾಂಬಿಕೆ. ಈ ದಂಪತಿಗಳಿಗೆ ರತ್ನತ್ರಯರೋ ಎಂಬಂತೆ ಬ್ರಹ್ಮ, ನಾಗ ಮತ್ತು ಮಲ್ಲಿಕಾರ್ಜುನ ಎಂಬ ಮೂವರು ಮಕ್ಕಳಿದ್ದರು. ಇವರಲ್ಲಿ ಮಲ್ಲಿಕಾರ್ಜುನ ಮಹಾಉದಾರಿ, ಕೀರ್ತಿಶಾಲಿ. ಈತ ಕೊಂಡಕುಂದಾನ್ವಯ ಮೂಲಸಂಘ ದೇಶೀಯಗಣದ ಚಾರುಕೀರ್ತಿ ಪಂಡಿತದೇವರ ಪಟ್ಟದ ಪರಂಪರೆಯಲ್ಲಿ ಬಂದ ಅಭಿನವ ಚಾರುಕೀರ್ತಿ ದೇವರ ಶಿಷ್ಯ. ಈತ ಮಧುರನ ಬಳಿಗೆ ಬಂದು ಪ್ರೀತಿಯಿಂದ ನಾನಾ ವಸ್ತು ಪ್ರತಿಪತ್ತಿಯಂ ಸಲಿಸಿ ಭಟ್ಟಾರಕರಾಜರಾಯ ಗುರುವೆನಿಸಿದ ವರ್ಧಮಾನ ಮುನಿಯ ಸನ್ನಿಧಿಗೆ ಕರೆದೊಯ್ದು ಅವರಿಂದ ಹೇಳಿಸಲು ಮಧುರ ಧರ್ಮನಾಥ ಪುರಾಣವನ್ನು ರಚಿಸಿದನು.

ಧರ್ಮನಾಥ ಪುರಾಣದಲ್ಲಿ ಹದಿನೈದನೆಯ ತೀರ್ಥಕರನಾದ ಧರ್ಮನಾಥನ ಕಥೆಯನ್ನು ನಿರೂಪಿಸಲಾಗಿದೆ. ಪ್ರಸ್ತುತ ಈ ಕಾವ್ಯದ ನಾಲ್ಕು ಆಶ್ವಾಸಗಳೂ ಐದನೆಯ ಆಶ್ವಾಸದಲ್ಲಿ ೧೩೮ ಪದ್ಯಗಳೂ ಲಭ್ಯವಾಗಿವೆ. ಹೀಗಾಗಿ ಸಮಗ್ರವಾದ ಈ ಕಾವ್ಯದಲ್ಲಿ ಎಷ್ಟು ಆಶ್ವಾಸಗಳೂ ಪದ್ಯಗಳೂ ಇದ್ದಿರಬೇಕು ಎಂಬ ಮಾಹಿತಿ ತಿಳಿದುಬರುವುದಿಲ್ಲ. ಅಥವಾ ಈ ಕಾವ್ಯ ಅಸಮಗ್ರವಾಗಿಯೇ ರಚಿತವಾಗಿರಬಹುದೆ ಎಂಬ ಅಂಶವೂ ಸ್ಪಷ್ಟವಾಗುವುದಿಲ್ಲ.

ಮಧುರ ತನ್ನ ಕಾವ್ಯಕ್ಕೆ ಮೂಲ ಯಾವ ಕೃತಿ ಎಂಬುದನ್ನು ತಿಳಿಸಿಲ್ಲ. ಧರ್ಮನಾಥ ಪುರಾಣವನ್ನು ಬರೆದವರಲ್ಲಿ ಈತನು ಮೊದಲಿಗನೂ ಅಲ್ಲ. ಈತನಿಗಿಂತ ಹಿಂದೆ ಇದ್ದ ಗುಣಭದ್ರಾಚಾರ್ಯರ ಉತ್ತರಪುರಾಣ, ಹರಿಚಂದ್ರನ ಧರ್ಮಶರ್ಮಾಭ್ಯುದಯ, ಚಾವುಂಡರಾಯನ ಚಾವುಂಡರಾಯ ಪುರಾಣಗಳಲ್ಲಿ ಧರ್ಮನಾಥನ ಕಥೆ ನಿರೂಪಿತವಾಗಿದೆ. ಇವನ್ನು ಆಧರಿಸಿ ಕ್ರಿ.ಶ. ೧೩೫೨ರಲ್ಲಿದ್ದ ಬಾಹುಬಲಿ ಪಂಡಿತನೂ ಕ್ರಿ.ಶ. ೧೩೮೫ರಲ್ಲಿದ್ದ ಮಧುರನೂ ಧರ್ಮನಾಥ ಪುರಾಣಗಳನ್ನು ಬರೆದಿದ್ದಾರೆ. ಮಧುರ ತನಗಿಂತ ಕೆಲವು ವರ್ಷಗಳ ಹಿಂದೆ ಇದ್ದ ಬಾಹುಬಲಿ ಪಂಡಿತನ ಬಗೆಗಾಗಲಿ ಹಿರಿಯ ಕಿರಿಯ ಸಮಕಾಲೀನರಾಗಿದ್ದ ಈ ಇಬ್ಬರು ಕವಿಗಳು ಪರಸ್ಪರ ಉಲ್ಲೇಖ ಮಾಡದಿರುವುದು ಅತ್ಯಂತ ಸೋಜಿಗದ ಸಂಗತಿಯಾಗಿದೆ.

ಕಥಾಸಾರ :

ಜಂಬೂದ್ವೀಪದ ಭರತ ಕ್ಷೇತ್ರದ ಆರ್ಯಾವರ್ತ ಖಂಡಕ್ಕೆ ಸೇರಿದ ನಾಡು ಕೋಸಲ ದೇಶ. ರತ್ನಪುರ ಅದರ ರಾಜಧಾನಿ. ಆ ನಗರದ ರಾಜ ಮಹಾಸೇನ. ರೂಪವತಿಯೂ ಶೌರ್ಯಶಾಲಿಯೂ ಆದ ಸುವ್ರತೆ ಆತನ ಹೆಂಡತಿ. ಈ ದಂಪತಿಗಳು ಸುಖದಿಂದಿದ್ದರು. ಒಂದುದಿನ ಸುವ್ರತೆ ಸಖಿಯರೊಂದಿಗೂ ಸಹಚರಿಯರೊಂದಿಗೂ ರಾಣಿವಾಸದ ರತ್ನಮಂಟಪಕ್ಕೆ ಬಂದು ಮಣಿಮಯಾಸನದಲ್ಲಿ ಕುಳಿತುಕೊಂಡಳು. ಪರಿಚಾರಕಿಯರು ಆಕೆಯನ್ನು ಓಲೈಸುತ್ತಿದ್ದಾಗ ಅಲ್ಲಿಗೆ ಚಿತ್ರಪಟಗಳನ್ನು ಒಬ್ಬಾಕೆ ತಂದಳು. ಅವುಗಳಲ್ಲಿ ಕೆಲವನ್ನು ತೆಗೆದು ರಾಣಿಗೆ ತೋರಿಸುತ್ತಿದ್ದಳು. ಹೆಣ್ಣಾನೆಯೊಂದಿಗೆ ಚಲ್ಲಾಟವಾಡುತ್ತಿದ್ದ ಆನೆಯ ಮರಿಗಳಿದ್ದ ಒಂದು ಚಿತ್ರಪಟ ರಾಣಿಯ ಮನಸ್ಸನ್ನು ಬಹಳವಾಗಿ ಆಕರ್ಷಿಸಿತು. ಚಿತ್ರಪಟದಲ್ಲಿಯಾದರೂ ನಾನು ಪುತ್ರವತಿ ಎಂಬಂತೆ ಚಿತ್ರಸಲಿಲ್ಲವಲ್ಲ ಎಂದು ದುಃಖಿತಳಾದಳು. ಯಾರೊಂದಿಗೂ ಮಾತಾಡಲಿಲ್ಲ.

ಮಹಾಸೇನ ಮಹಾರಾಜ ಅದೇ ಸಮಯಕ್ಕೆ ರಾಣಿಯನ್ನು ನೋಡಲು ಅಲ್ಲಿಗೆ ಬಂದನು. ರಾಣಿಯ ಪರಿಸ್ಥಿತಿಯನ್ನು ಕಂಡು ಅವನು ಮರುಕಗೊಂಡನು. ರಾಣಿಯನ್ನು ಅನುನಯಿಸಿ ಆಕೆಯ ದುಃಖಕ್ಕೆ ಕಾರಣವೇನು ಎಂದು ಕೇಳಿದನು. ಆಕೆಯು ಮಾತಾಡಲಾರದೆ ಕಣ್ಣೀರು ಸುರಿಸಿದಳು. ರಾಜ ರಾಣಿಯ ಸಖಿಯರನ್ನು ಈ ಬಗೆಗೆ ವಿಚಾರಿಸಿದನು. ಅವರು ಚಿತ್ರಪಟಗಳ ವಿಷಯವನ್ನು ಹೇಳಿದರು. ರಾಜದಂಪತಿಗಳ ಭಾವಭಂಗಿಗಳಿದ್ದ ಚಿತ್ರಪಟಗಳನ್ನು ನೋಡಿ ಸಂತೋಷಿಸುತ್ತಿದ್ದ ರಾಣಿ ಆನೆಯ ಮರಿಗಳಿದ್ದ ಚಿತ್ರಪಟಗಳನ್ನು ನೋಡಿದ ಕೂಡಲೇ ಮೌನವನ್ನು ತಾಳಿದಳು ಎಂದು ಸಖಿಯರು ಹೇಳಿದರು. ಇದನ್ನು ಕೇಳಿದ ಮಹಾರಾಜನಿಗೆ ರಾಣಿಯ ಬಯಕೆ ಏನು ಎಂಬುದರ ಅರಿವಾಯಿತು. ಆಗ ತಾನು ಕಂಡ ಪುತ್ರೋತ್ಪತ್ತಿ ಕಾರಣವಾದ ಸ್ವಪ್ನಗಳನ್ನು ನೈಮಿತ್ತಕರು ಹೇಳಿದ ನಿಮಿತ್ತಗಳನ್ನು ಆಕೆಗೆ ನಿರೂಪಿಸಿ ಸಮಾಧಾನಪಡಿಸಿದನು. ಇಕ್ಷ್ವಾಕು ವಂಶಕ್ಕೆ ತಿಲಕಪ್ರಾಯನೆನಿಸುವವನು ತನಗೆ ಮಗನಾಗಿ ಹುಟ್ಟಿ ತನ್ನ ರಾಜ್ಯಭಾರವನ್ನು ಹೊರುತ್ತಾನೆ ಎಂಬ ಶುಭಸಮಯವನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದನು.

ಅದೇ ವೇಳೆಗೆ ಕಂಚುಕಿ ಬಂದು ಫಲಪುಷ್ಪ ಸಹಿತವಾಗಿ ಒಬ್ಬಾತನು ದರ್ಶನಕ್ಕೆ ಬಂದಿರುವ ವಿಷಯವನ್ನು ತಿಳಿಸಿದನು. ರಾಜನು ಆತನನ್ನು ಬರಮಾಡಿಕೊಂಡು ಕಾಣಿಕೆಯನ್ನು ಸ್ವೀಕರಿಸಿ ಬಂದ ಸಂಗತಿಯನ್ನು ಕೇಳಿದನು. ಪ್ರಚೇತರೆಂಬ ದಿಗಂಬರ ಮುನಿವರರು ಬಂದು ನಂದನವನದಲ್ಲಿ ತಂಗಿರುವ ಸಂಗತಿಯನ್ನು ತಿಳಿಸಿದನು. ರಾಜನು ಪತ್ನಿಗೆ ಈ ಶುಭಸಮಾಚಾರವನ್ನು ಹೇಳಿ ಮುನಿಗಳ ದರ್ಶನಕ್ಕೆ ಸಿದ್ಧನಾದನು.

ಪ್ರಚೇತ ಮುನಿಗಳ ದರ್ಶನಕ್ಕೆ ಮಹಾರಾಜನು ಪತ್ನೀ ಸಮೇತನಾಗಿ ಸಕಲ ಪರಿವಾರದೊಂದಿಗೆ ಹೊರಟನು. ಮುನಿಗಳು ತಂಗಿದ್ದ ನಂದನವನಕ್ಕೆ ಬಂದು ಅವರಿಗೆ ನಮಸ್ಕರಿಸಿದನು. ಮುನಿಗಳು ರಾಜನಿಗೆ ಧರ್ಮಸ್ವರೂಪವನ್ನು ಬೋಧನೆ ಮಾಡಿದನು. ಅದನ್ನು ಕೇಳಿದ ರಾಜ ಮುನಿಗಳ ಮಹಿಮೆಯನ್ನು ಕೊಂಡಾಡಿ ಆಮೇಲೆ ತಮಗೆ ಪುತ್ರ ಲಾಭವಾಗದಿರುವ ವಿಷಯವನ್ನು ನಿವೇದಿಸಿಕೊಳ್ಳುವನು. ಅದನ್ನು ಕೇಳಿದ ಮುನಿಗಳು ಪುಣ್ಯವಂತರಾದ ನಿಮಗೆ ಹದಿನೈದನೆಯ ತೀರ್ಥಂಕರನು ಮಗನಾಗಿ ಹುಟ್ಟುವನು ಎಂಬ ಶುಭಸಂಗತಿಯನ್ನು ತಿಳಿಸುವರು. ಇದರಿಂದ ಅತ್ಯಂತ ಸಂತೋಷಭರಿತನಾದ ಮಹಾಸೇನ ಮಹಾರಾಜನು ಆ ತೀರ್ಥಂಕರನ ಪೂರ್ವಭಾವವಳಿಯನ್ನು ತಿಳಿಸಬೇಕೆಂದು ಪ್ರಾರ್ಥಿಸಿಕೊಂಡನು. ಅದರಂತೆ ಮುನಿಗಳು ಆ ತೀರ್ಥಂಕರನ ಭವಾವಳಿಯನ್ನು ಈ ರೀತಿ ನಿರೂಪಿಸಿದರು.

ಧಾತಕೀ ಷಂಡದ ಪೂರ್ವಮಂದರದ ಪೂರ್ವವಿಭಾಗದ ೧೬ ನಾಡುಗಳಲ್ಲಿ ಪೂರ್ವವಿದೇಹವೆಂಬುದು ಒಂದು ಕ್ಷೇತ್ರ. ಅಲ್ಲಿಯ ಸೀತಾನದಿಯ ದಕ್ಷಿಣ ದಂಡೆಯ ಮೇಲೆ ವತ್ಸವಿಷಯವೆಂಬ ದೇಶವಿದೆ. ಈ ದೇಶದ ಸುಸೀಮಾ ನಗರದಲ್ಲಿ ದಶರಥ ಎಂಬ ಅರಸನು ರಾಜ್ಯವಾಳುತ್ತಿದ್ದನು. ಈತ ಸಕಲ ಭೋಗೋಪಭೋಗಗಳನ್ನು ಅನುಭವಿಸುತ್ತಾ ಸುಖಸಂತೋಷದಿಂದಿದ್ದನು. ಒಂದು ದಿನ ಸೂರ್ಯಾಸ್ತದ ಸಮಯದಲ್ಲಿ ಪಂಚಪರಮೇಷ್ಠಿಗಳಿಗೆ ಅರ್ಘ್ಯವಿತ್ತು ಪೂಜಾದ್ರವ್ಯಗಳೊಂದಿಗೆ ಜಿನಮಂದಿರಕ್ಕೆ ಬಂದನು. ಭಕ್ತಿಯಿಂದ ಜಿನನಾಥನನ್ನು ಸ್ತುತಿಸಿ ಗಂಧೋದಕ ಶೇಷಾಕ್ಷತಾಧಿಗಳನ್ನು ತಳಿದ ಮೇಲೆ ಅರಮನೆಗೆ ಹಿಂತಿರುಗಿದನು. ಚಂದ್ರಕಾಂತ ಶಿಲೆಯ ಮೊಗಸಾಲೆಯಲ್ಲಿ ಕುಳಿತು ಗಾಯಕಿಯರು ಹಾಡುತ್ತಿದ್ದ ಜೀನೇಂದ್ರಾಂಕಮಾಲೆಯನ್ನು ಕೇಳುತ್ತಿದ್ದನು. ಆ ಸಮಯದಲ್ಲಿ ಆಕಾಶದಲ್ಲಿ ಸೊಗಸಾಗಿ ಕಾಣುತ್ತಿದ್ದ ಪೂರ್ಣಚಂದ್ರನನ್ನು ರಾಹು ನುಂಗಿಬಿಟ್ಟನು. ಚಂದ್ರನಿಗೆ ಪ್ರಾಪ್ತವಾದ ಆ ಗತಿಯನ್ನು ನೋಡಿದ ದಶರಥನಿಗೆ ಮಾನವರ ಸುಖಭೋಗಗಳ ನಶ್ವರತೆಯ ಅರಿವಾಯಿತು. ವೈರಾಗ್ಯ ಆವರಿಸಿತು. ತಪ್ಪಸ್ಸಿನಿಂದ ಪರಮಾರ್ಥವೆಂಬ ನಿಧಾನವನ್ನು ಪಡೆಯಲು ನಿಶ್ಚಯಿಸಿದನು. ಬಂಧುಬಾಂಧವರಿಗೆಲ್ಲ ಈ ವಿಷಯವನ್ನು ತಿಳಿಸಿದನು. ಮಂತ್ರಿಮಹೋದಯರು ಈ ನಿರ್ಧಾರವನ್ನು ಬದಲಿಸುವಂತೆ ರಾಜನನ್ನು ಪ್ರಾರ್ಥಿಸಿಕೊಂಡರು. ರಾಜ ಇದಾವುದಕ್ಕೂ ಕಿವಿಗೊಡದೆ ಅತಿರಥಕುಮಾರನಿಗೆ ರಾಜ್ಯವನ್ನು ಒಪ್ಪಿಸಿ ನೂರುಮಂದಿ ರಾಜರೊಂದಿಗೆ ವನಕ್ಕೆ ಹೊರಟುಹೋದನು. ದಿಗಂಬರ ದೀಕ್ಷೆಯನ್ನು ಕೈಗೊಂಡನು. ಬಾಹ್ಯಭ್ಯಂತರ ತಪಸ್ಸುಗಳನ್ನು ಆಚರಿಸಿದನು. ಸಮಾಧಿವಿಧಿಯಿಂದ ಶರೀರತ್ಯಾಗ ಮಾಡಿದನು. ಸರ್ವಾರ್ಥಸಿದ್ಧಿ ವಿಮಾನದಲ್ಲಿ ಅಹಮಿಂದ್ರನಾಗಿ ಜನಿಸಿದನು.

ಕೃತಿ ಸಮೀಕ್ಷೆ :

ಹದಿನಾಲ್ಕನೆಯ ಶತಮಾನದ ಕನ್ನಡ ಕವಿಗಳಲ್ಲಿ ಧರ್ಮನಾಥ ಪುರಾಣವನ್ನು ಬರೆದ ಮಧುರ ಕವಿ ಅತ್ಯಂತ ಪ್ರಸಿದ್ಧನಾಗಿದ್ದಾನೆ. ಚಂಪು ಕಾವ್ಯಗಳ ಪರಂಪರೆಯಲ್ಲಿ ಬಹುಶಃ ಕೊನೆಯವನು ಎಂದು ಪರಿಗಣಿತನಾಗಿರುವ ಈತನ ಧರ್ಮನಾಥ ಪುರಾಣ ವಿಶಿಷ್ಟವಾಗಿದೆ; ಜೈನ ಸಾಹಿತ್ಯ ಪರಂಪರೆಯಲ್ಲಿ ಪ್ರಮುಖವಾಗಿದೆ. ಮಧುರ ಪ್ರತಿಭಾನ್ವಿತ ಕವಿ; ಉಭಯಭಾಷಾ ಪಂಡಿತ. ಈತನ ವಿಶಿಷ್ಟವಾದ ವೈವಿಧ್ಯಮಯವಾದ ವರ್ಣನೆಗಳು ಆಕರ್ಷಣೀಯವಾಗಿವೆ; ಅತ್ಯಂತ ಜನಪ್ರಿಯವಾಗಿವೆ. ಈತನ ಪ್ರತಿಭೆ ಪಾಂಡಿತ್ಯಗಳಿಗೆ ನಿಕಷವಿಟ್ಟಂತಿವೆ ಹಂಪೆಯ ಶಾಸನ. ಲಕ್ಷ್ಮೀಧರಾಮಾತ್ಯನನ್ನು ಕುರಿತು ಬರೆದಿರುವ ಪದ್ಯಗಳು ಲೋಕವಿಖ್ಯಾತವಾಗಿವೆ : ಜೈನಧರ್ಮದ ಅಪರಿಮಿತ ಭಕ್ತಿ, ನಿಷ್ಠೆಗಳಿಗೆ ಈತನು ಬರೆದಿರುವ ಗುಮ್ಮಟ ಸ್ತುತಿ ಎಂಬ ಅಷ್ಟಕ ನಿದರ್ಶನವಾಗಿದೆ. ಧರ್ಮನಾಥ ಪುರಾಣ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಮಧುರನ ತರುವಾಯದ ವಾದಿವಿದ್ಯಾನಂದ, ಭಟ್ಟಾಕಳಂಕ, ಕವಿಮಲ್ಲ ಇವರು ಧರ್ಮನಾಥ ಪುರಾಣದ ಅನೇಕ ಪದ್ಯಗಳನ್ನು ತಮ್ಮ ಸಂಕಲನಗಳಲ್ಲಿ, ಲಕ್ಷ್ಯಗ್ರಂಥಗಳಲ್ಲಿ ದೃಷ್ಟಾಂತವಾಗಿ ಉದ್ಧರಿಸಿರುವುದು ಈತನ ಕಾವ್ಯದ ಮಹತ್ವವನ್ನು ಪುಷ್ಟೀಕರಿಸುತ್ತದೆ.

ಪ್ರಸ್ತುತ ಧರ್ಮನಾಥ ಪುರಾಣದಲ್ಲೆಲ್ಲಾ ಚೆಲ್ಲಿಸೂಸಿರುವ ಈತನ ಪ್ರತಿಭೆಯ ಪಾಂಡಿತ್ಯದ ದ್ಯೋತಕವಾಗಿ ಕೆಲವು ಪ್ರಸಂಗಗಳನ್ನು ಸಮೀಕ್ಷಿಸೋಣ : ಮಧುರನಿಗೆ ಜೈನಮುನಿಗಳ ಬಗೆಗೆ, ಪ್ರಾಚೀನ ಕವಿಪುಂಗವರ ಬಗೆಗೆ ಅಪಾರ ಭಕ್ತಿ ಶ್ರದ್ಧೆ ಗೌರವಗಳಿದ್ದುದಕ್ಕೆ ಈ ಮುಂದಿನ ಪದ್ಯಗಳು ಸಾಕ್ಷೀಭೂತವಾಗಿವೆ : ಕುಂಡಕುಂದಾಚಾರ್ಯರನ್ನು ಕುರಿತದ್ದು :

ಮುಟ್ಟದೆ ನೆರೆ ನಾಲ್ವೆರಲಂ
ಬಿಟ್ಟಿಳೆಯಂ ನಡೆವ ಕುಂಡಕುಂದಾಚಾರ್ಯರ್
ನೆಟ್ಟನೆ ಹೃದಯದೊಳಿರಲೇಂ
ಪುಟ್ಟುಗುಮೆ ವಿನಯರೊಳ್ ಕುಮಾರ್ಗಾಚರಣಂ          (೧ – ೨೩)

ಧರ್ಮಭೂಷಣದೇವರನ್ನು ಕುರಿತದ್ದು :

ಪೋಷಿಸುಗೆಮ್ಮಂ ಸಲೆ ನಿ
ರ್ದೋಷಿ ಬಲಾತ್ಕಾರಗಣ ಗರಿಷ್ಠರ್ ಕರುಣಾ
ಭೂಷಣರಮಳಿನ ಜಿನಮತ
ಭೂಷರೆನೆ ನೆಗಳ್ದ ಧರ್ಮಭೂಷಣದೇವರ್      (೧ – ೨೫)

ಇವರಾದ ಮೇಲೆ ವರ್ಧಮಾನ ಮುನೀಂದ್ರ, ಮಹಾನಂದಿಯೋಗೀಂದ್ರ ಮೊದಲಾದ ಭಟ್ಟಾರಕರ ಸಂಸ್ಮರಣೆಯನ್ನು ಮಾಡಿ :

ಚತುರಂ ಧರ್ಮಜಿನೇಶ್ವರಂಗೆ ಪದೆಪಿಂ ಸರ್ವಾಂಗದೊಳ್ ಸಂದಲಂ
ಕೃತಿ ಚೆಲ್ವಾಗಿರೆ ನವ್ಯದಿವ್ಯರಸಧಾರಾಪೂರ್ವಮಾಗಿತ್ತ ಸ
ತ್ಕೃತಿ ಮುಕ್ತ್ಯಂಗನೆಗಳ್ತಿಯಿಂ ಸವತಿಯಪ್ಪುದ್ವಾಹದುತ್ಸಾಹಸಂ
ಗತಿಯೊಳ್ ಸೈತಮರ್ದಿಕ್ಕೆ ಸತ್ಕವಿಗಳಿಂ ಭದ್ರಂ ಶುಭಂ ಮಂಗಳಂ    (೧ – ೩೪)

ತನ್ನ ಕೃತಿಗೆ ಸೈತು ಉಂಟಾಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾನೆ. ಇಷ್ಟೇ ಅಲ್ಲದೆ ಪೂರ್ವಸೂರಿಗಳನ್ನು ಆಲಂಕಾರಿಕವಾಗಿ ಈ ಮುಂದಿನ ಪದ್ಯದಲ್ಲಿ ವಿಶೇಷವಾಗಿ ಸ್ಮರಿಸಿದ್ದಾನೆ.

ಪ್ರಾಚೀನ ಮುನಿವರ್ಯರನ್ನೂ ಕವಿಶ್ರೇಷ್ಠರನ್ನೂ ಅಪಾರ ಭಕ್ತಿ, ಶ್ರದ್ಧೆ, ಗೌರವ ಪೂರ್ವಕವಾಗಿ ಸ್ಮರಿಸಿರುವ ಮಧುರ ಕುಕವಿನಿಂದೆಯನ್ನು ಕಟುವಾಗಿ ವಿವರವಾಗಿ ವಿಶೇಷವಾಗಿ ಮಾಡಿದ್ದಾನೆ. ಆ ಪದ್ಯಗಳಲ್ಲಿ ಕೆಲವು ಇಂತಿವೆ :

ತಲೆಯಂ ತೂಗೆ ಬುಧರ್ ಖಳನಂ
ತಲೆವಾಗಿಸಿ ಸಭೆಯ ನಡುವೆ ನಿಲ್ಲದೆ ಪಾವಂ
ತಲೆಗಂಡ ಪಂದೆಯಂದದೆ
ತಲೆಬಾಲಂಗೆಟ್ಟು ಜಗುಳ್ವ ಕವಿಯುಂ ಕವಿಯೇ(೧ – ೫೦)

ಪಂಡಿತರುಂ ವಿವಿಧಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ಡುಂಡುಂಚಿಯ ಬೀದಿವರಿಯ ಬೀರನ ಕಥೆಯೇ  (೧ – ೫೭)

ನೆಲೆಯರಿಯ ಪೊಲೆಯರಿಯದ
ಬಿರುದುಗಳೇಕೆಮಗೆ ಕೃತಿಯನೀಕ್ಷಿಸಿ ಮಿಗೆ ಮ
ಚ್ಚರಿಸುವ ಕವಿಯೆರ್ದೆ ಬಿಕ್ಕನೆ
ಬಿರಿದಿರ್ದುವೆ ಬಿರಿದು ಮಿಕ್ಕ ಬಿರಿದದು ಬಿರಿದೇ  (೧ – ೫೮)

ಭೂನುತಕೃತಿಯಂ ಚತುರಕ
ಳಾನಿಳಯರ್ ನೋಡಿ ಮೆಚ್ಚಿ ತಲೆದೂಗೆ ಖಳಂ
ಮೋನಮಿರದೇಕೆ ಪಳಿವನೊ
ತಾನೇಡಿಸಿ ನೋಡುವಂತೆ ಮಣಿದರ್ಪಣಮಂ     (೧ – ೫೯)

ಅವರಿವರಂ ಕನಲ್ದು ಬಿರುಮಾತುಗಳಿಂ ಜರೆದಾನೆ ಲೋಕದೊಳ್
ಕವಿಯೆನುತುಂತೆ ಕಂತೆವೊರೆದಂತಳಿಗಬ್ಬಮನುರ್ಬಿ ಪೇಳ್ದು ಸಂ
ಭವರಸಭಾವಮಂ ಬರಿದೆ ಬಲ್ಲನೆ ಬೀಗಿ ಮಹಾಕವೀಂದ್ರ ಮಾ
ದವನೆಣೆಯಪ್ಪನೆಂಬ ಕೊಳೆಗಬ್ಬಿಗ ನಿನ್ನಯೆ ಗರ್ಬಮೆಂತುಟೋ    (೧ – ೬೬)

ಮಧುರ ಕವಿ ಮಾಡಿರುವ ದುರ್ಜನದೂಷಣ ಕುಕವಿವಿಡಂಬನೆಯ ಈ ಮೇಲಿನ ಕೆಲವು ಪದ್ಯಗಳನ್ನು ಅವಲೋಕಿಸಿದಾಗ ಸಹಜವಾಗಿಯೆ ಸಮಸ್ಯೆಗಳು ಉದ್ಭವಿಸಬಹುದು. ಕನ್ನಡ ಸಾಹಿತ್ಯದ ಪ್ರಾಚೀಣ ಕಾವ್ಯಗಳಲ್ಲಿ ಬಹುಮಟ್ಟಿಗೆ ಈ ಕುಕವಿನಿಂದೆ ಬಂದಿರುವುದನ್ನು ಎಲ್ಲರೂ ಬಲ್ಲರು. ಆದರೆ ಮಧುರ ಈ ಪ್ರಕರಣವನ್ನು ವಿಶೇಷವಾಗಿ ವಿಸ್ತಾರವಾಗಿ ಮಾಡಿರುವುದರ ಉದ್ದೇಶವೇನಿರಬಹುದು ? ಬಹುಶಃ ಆತನ ಕಾಲದ ಸಾಹಿತ್ಯಕ ಪರಿಸ್ಥಿತಿ ಕಾರಣವಾಗಿರಬಹುದೆ? ಇದು ಎಂತಾದರೂ ಇರಲಿ. ಮಧುರನ ಪ್ರತಿಭೆ ಪಾಂಡಿತ್ಯಗಳ ದ್ಯೋತಕವಾಗಿ ಈ ಕಾವ್ಯದ ಕೆಲವು ಸನ್ನಿವೇಶಗಳನ್ನು ಅನುಲಕ್ಷಿಸಬಹುದಾಗಿದೆ.

ಈವರೆಗಿನ ಸಮೀಕ್ಷೆಯಿಂದ ಮಧುರ ಧರ್ಮನಾಥ ಪುರಾಣದ ಉದ್ದಕ್ಕೂ ತನ್ನ ಪ್ರತಿಭಾಸಾಮರ್ಥ್ಯವನ್ನು ಹೇಗೆ ಪ್ರದರ್ಶಿಸಿದ್ದಾನೆ ಎಂಬುದರ ಒಂದು ಸ್ಥೂಲ ಪರಿಚಯವನ್ನು ಮಾಡಿಕೊಳ್ಳಲಾಯಿತು. ಮಧುರನ ಕವಿತಾಶಕ್ತಿ ಅಸದೃಶ್ಯವಾದುದು. ಜೈನಪ್ರಕ್ರಿಯೆಗಳಿಂದ ಮುಕ್ತವಾದ ಧರ್ಮನಾಥ ತೀರ್ಥಂಕರನ ಚರಿತ್ರೆಯನ್ನು ಅತ್ಯಂತ ಭಕ್ತಿಭಾವದಿಂದ ಮುಕ್ತಮನದಿಂದ ನಿರೂಪಿಸಿದ್ದಾನೆ. ಇಂತಹ ಉತ್ಕೃಷ್ಟವಾದ ಕಾವ್ಯ ಸಮಗ್ರವಾಗಿ ಲಭ್ಯವಾಗದಿರುವುದು ಸಾಹಿತ್ಯಲೋಕಕ್ಕೆ ಅಪಾರ ನಷ್ಟವಾಗಿದೆ. ಮಧುರ ಆತ್ಮಪ್ರಶಂಸೆ ಅತಿಯಾದುದು ಎಂದು ಕೆಲವರಿಗೆ ಭಾಸವಾಗಬಹುದು. ಅಂತೆಯೇ ಕುಕವಿನಿಂದೆಯೂ ಬಹಳವಾಯಿತು ಎಂಬ ಭಾವನೆಯೂ ಉಂಟಾಗ ಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ಕಾವ್ಯದುದ್ದಕ್ಕೂ ಹಾಸುಹೊಕ್ಕಾಗಿರುವ ಚೆಲ್ಲಿಸೂಸಿರುವ ವರ್ಣನೆಗಳು ಅತಿಯಾದುವು ಎಂಬ ಅಭಿಪ್ರಾಯವೂ ಮೂಡಬಹುದು.

ಮಧುರ ಪ್ರತಿಭೆಪಾಂಡಿತ್ಯವನ್ನು ಮೇಳವಿಸಿರುವ ಅತ್ಯಂತ ಮಹತ್ವದ ಕವಿ ಎಂಬುದು ನಿರ್ವಿವಾದುದು. ಅಷ್ಟೇ ಅಲ್ಲ ಮಧುರ ರಸಿಕ ಕವಿ. ಇದಕ್ಕೆ ಈತನು ಮಾಡಿರುವ ಅನುಪಮ ವರ್ಣನೆಗಳೇ ಜ್ವಲಂತ ನಿದರ್ಶನವಾಗಿವೆ. ಪಾಮರಿಯರ ವರ್ಣನೆಯಾಗಲಿ ಘಟ್ಟಿವಳ್ತಿಯರ ವರ್ಣನೆಯಾಗಲಿ ವಾರನಾರಿಯರ ವರ್ಣನೆಯಾಗಲಿ ಅಷ್ಟೇ ಏಕೆ ಮಹಾರಾಣಿಯರ ವರ್ಣನೆಯಾಗಲಿ ಯಾವ ಮುಚ್ಚುಮರೆಯಿಲ್ಲದೆ ಲೀಲಾಜಾಲವಾಗಿ ಮಾಡಿದ್ದಾನೆ. ಈ ಸಂದರ್ಭಗಳಲ್ಲಿ ಆತನು ತೋರಿರುವ ವರ್ಣನಾಸಾಮರ್ಥ್ಯ ಎಣೆತೊಣೆಯಿಲ್ಲದ್ದು. ಅತಿಯಾದ ವರ್ಣನೆಗಳಿಂದ ವಿಶೇಷವಾಗಿ ಸ್ತ್ರೀ ವರ್ಣನೆಗಳಿಂದ ಕಾವ್ಯ ಜಗ್ಗಿದೆ, ಬಗ್ಗಿವೆ, ಕುಗ್ಗಿದೆ ಎಂದು ಭಾವಿಸುವುದಕ್ಕೆ ಎಡೆಯಿಲ್ಲ. ಮಧುರನ ಧರ್ಮಶ್ರದ್ಧೆ, ಪೂರ್ವಕವಿಗಳಲ್ಲಿನ ಅಪಾರ ಗೌರವಗಳಿಂದ ಆತನ ಕಾವ್ಯಪ್ರವಾಹದಲ್ಲಿ ಆತನ ಬಗೆಗೆ ಎದ್ದಿರಬಹುದಾದ ಆಕ್ಷೇಪಗಳು ಕೊಚ್ಚಿಹೋಗುತ್ತವೆ. ಹದಿನಾಲ್ಕನೆಯ ಶತಮಾನದ ಚಂಪೂಕವಿಗಳ ಸೀಮಾಪುರುಷನಾಗಿದ್ದಾನೆ ಮಧುರ ಕವಿ. ಈತನ ಕಾವ್ಯ ಎಂದೆಂದಿಗೂ ಮಧುರವಾದುದು.

 

[1] ಕನ್ನಡ ಸಾಹಿತ್ಯ ಚರಿತ್ರೆ, ಐದನೆಯ ಸಂಪುಟ, ಭಾಗ ೧, ಪುಟ ೭೨೫, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ: ೧೯೮೧.

[2] ಕರ್ಣಾಟಕ ಕವಿಚರಿತೆ; ಪ್ರಥಮ ಸಂಪುಟ, ಪುಟ ೪೮೬.