ಶ್ರೀರಾಮಾರಮಣಂ ಧ
ರ್ಮಾರಾಮವಸಂತನೆಯ್ದಿದಂ ಸಂತಸಮಂ
ಕಾರುಣ್ಯದ ಕಣಿ ಜನಸುರ
ಭೂರುಹಕಂ ಸರಸಚತುರಕವಿಕುಳತಿಳಕಂ          ೧

ವ : ಮತ್ತಮೊಂದುದಿವಸಮಾ ಧರ್ಮನಾಥಮಹಾರಾಜಂ ಸಮಸ್ತ ಸೌವಸ್ತಿಕಪ್ರಸ್ತೂಯಮಾನ ಬಿರುದಾವಳೀಸಮನ್ವಿತನನ್ವಿತರಾಜನ್ಯಕಮಕುಟವರ್ಧನ ಪ್ರಧಾನಪುರುಷಪುರ ಸ್ಸರಮಾಸ್ಥಾನಮಂಡಪಕೆಳ್ತಂದದಱ ನಟ್ಟನಡುವೊಪ್ಪವಿಟ್ಟ ಮಾಣಿಕದ ಬೊಟ್ಟೆಂಬಂತೆ ನೇಸರ್ಪಟ್ಟು ಥಳಥಳಿಸಿ ಪೊಳೆವ ಮಣಿಮಯಸಿಂಹಾಸನಮನಳಂಕರಿಸಿ ನೋಳ್ಪರ ಕಣ್ಗಳಿಂಗೆಡ್ಡಮಾಗಿರ್ದೊಡ್ಡೋಲಗಂಗೊಟ್ಟು ಲೀಲೆಯಿಂದಿರ್ಪುದುಂ

ಅಸಮಸುಷೇಣಚಮೂಪನ
ಬೆಸದಿಂದಂ ಬಂದು ದೂತನೊರ್ವಂ ಬಾಗಿಲೊ
ಳೆಸೆದಿರ್ದಂ ಕುಡಿಯಂ ಪಿಡಿ
ದೆಸದಿರೆ ಮೊಗದಲ್ಲಿ ರಾಗರಸಮತಿಶಯದಿಂ     ೨

ವ : ಅನೇಕರಾಜನಿಕರಪ್ರವರ್ತಿತಸಂಗ್ರಾಮವಾರ್ತಾಕಥನಾತುರೀಭೂತನುಂ ಮಹಾಸಚಿವ ಸಮುಚಿತವೇಷವಿಶೇಷವಿನೂತನುಮಪ್ಪ ಪೂತಮತಿಮೆಂಬ ದೂತಮುಖ್ಯನ ಬರವಂ ದೌವಾರಿಕವಿಜ್ಞಾಪನಪರಿಜ್ಞಾತವೃತ್ತಾಂತಸ್ವರೂಪನಾದ ದೇವನವಸರಂಗೊಟ್ಟು ಬರಿಸಿ ಕಾಣಿಸಿಕೊಳಲೊಡಮಾತನತೀವಪ್ರಶ್ರಯಪರಿಮಿಶ್ರಿತನಿರ್ಭರಭಕ್ತಿಯಿಂ ಸಾಷ್ಟಾಂಗ ಪ್ರಣತನಾದಿಂಬಳಿಯಂ ಪ್ರತಿಹಸ್ತಂ ಸ್ವಹಸ್ತದೊಳ್ ಪಿಡಿದಿರ್ದ ಪಾಗುಡಂಗಳಂ ಕಾಣಿಕೆಯಂ ಕೊಟ್ಟು ಚಾರುಕರ್ಪೂರಪಾರಿಪರಿಕಳಿತತಾಂಬೂಳಮಂ ಕಳೆದುಕೊಂಡು ದೇವ ರಾಜವಲ್ಲಭಭ್ರೂವಲ್ಲರೀಸಮುಲ್ಲೋಲನಭೇದಸಂಜ್ಞಿತತದ್ಯೋಗ್ಯಸ್ಥಾನದೊಳ್ ಕುಳ್ಳಿರ್ದು ತಾಂ ತಂ ಬಿನ್ನವತ್ತಳೆಯಂ ಸಂಧಿವಿಗ್ರಹಿಯ ಕೈಗೆ ನೀಡಲವನದನೋದೆ ತತ್ಪತ್ರಲೇಖಾರ್ಥಮನತಿವ್ಯಕ್ತಮಾಗಱಿದು ಮತ್ತೆ ಕೆಲದ ಮಹತ್ತರನೊರ್ವಂ ಬಿತ್ತರಂಬೆತ್ತುಮುಖವಾರ್ತೆಯಂ ಪೇಳ್ದು ಸಭೆಯನಭಿರಂಜಿಸದೆನಲೊಡಮವಂ ತನ್ನ ಸೀರೆಯ ಸೆಱಂಗನಧರಪಲ್ಲವದಂತಿಕಕ್ಕೆ ಮೆಲ್ಲನೆ ತಂದ ಬಿನ್ನಪಮೆಂದಿಂತೆಂದಂ

ಒಡೆಯರುನುಜ್ಞೆಯಂ ಪಡೆದು ದೂತವರಂ ಕ್ರಮದಿಂದೆ ಪೇಳ್ದನೊ
ಳ್ನುಡಿಗಳನೆ‌ಯ್ದೆಕಾಳೆಗದ ಸಂಸ್ಥಿತಿಯಂ ಮೊದಲಿಂದೆ ನಾಡೆಯುಂ
ಕಡೆವರಮಂದು ಕೇಳ್ವ ಪರಿಷಜ್ಜನದಿಂದ್ರಿಯಮೆಲ್ಲಮಂ ಸಮಂ
ತೊಡರಿಸಿದತ್ತು ಕರ್ಣಮಯಮೊಂದೆ ದಲಿಂದ್ರಿಯಮೆಂಬ ಶಂಕೆಯಂ೩

ವೀರರಸಪ್ರಸರಂ ಪರಿ
ವಾರಶ್ರುತಿಪಥದೆ ಪೋಗಿ ಪೊಕ್ಕಾಶಯದೊಳ್
ಪೂರೈಸಿ ನಟ್ಟು ನಿಲುವಂ
ತೋರಂತಭಿವರ್ಣಿಸಲ್ಕುಪಕ್ರಮಿಸುವುದುಂ       ೪

ವ : ಆಗಳಾ ಸಭಾಜನಮೆಲ್ಲಂ ಸಂಗ್ರಾಮರಂಗಾಡಂಬರವಿಸ್ತರಣಶ್ರವಣದತ್ತಾ ವಧಾನಮಾಗಿ ಏಕಾಗ್ರನಿಷ್ಠೆಯಿಂದಿರುಮಿತ್ತುಮಿರೆ ಸಮೀಚೀನವಚನರಚನಾತಿಚತುರನೆನಿಪ ಚರವರನಿಂತೆಂದಂ

ಅವಧಾನ ದೇವ ಚಿತ್ತೈ
ಸುವುದೆನ್ನಯ ಬಿನ್ನಪಂಗಳಂ ಕೃಪೆಯಿಂದಂ
ಭವದೀಯಚಮೂನಾಥಂ
ತವಿಸಿದನಲ್ಲಿರ್ದು ಸಕಳಕಾರ್ಯಂಗಳುಮಂ      ೫

ವ : ಅಂತಖಿಳ ರಾಜಕಾರ್ಯಕಾರಣಕರಣಾನಂತರಮಾ ಸುಷೇಣನೆಂಬ ಸೇನಾಪತಿಮುಖ್ಯಂ ಪ್ರತಾಪರಾಜನಂತಿಕಕ್ಕೆ ಬಂದು ಪ್ರಯಾಣೋತ್ಸುಕ ವಚನಂಗಳಂ ನುಡಿಯಲೊಡ ಮಾತನಾತಂಗೆ ತೊಡಲುಮುಡಲುಂ ಪಿರಿದಾಗಿತ್ತು ಮನ್ನಿಸಿ ಬೀಳ್ಕೊಟ್ಟು ಕಳಿಪುವುದುಂ

ಮತ್ತೊಂದತಿಶಯದಿವಸದೊ
ಳುತ್ತಮಸುಮುಹೂರ್ತದೊಳ್ ಸುಷೇಣಚಮೂಪಂ
ಬಿತ್ತರದಿಂ ಪೊಱಮಟ್ಟಂ
ಸುತ್ತಿಬರಲ್ ತನ್ನನಖಿಳಚತುರಂಗಬಲಂ         ೬

ವ : ಪಿರಿದುಂ ಪೆರ್ಚಿದ ಪೆಂಪಿನ ಸಂಪದದಿಂ ಸೊಂಪುವಡೆದ ಸಮಸ್ತ ಸೈನ್ಯಂಬೆರಸು ಪುರುಹೂತನೆಂಬಂತಭಿನವವಿಭವದಿಂ ನಿಚ್ಚವಯಣಂಬಂದು ವಿದರ್ಭವಿಷಯದ ಗಡಿಯಂ ದಾಂಟಿ ಭೂರಿವಾರಿಪ್ರವಾಹದಿಂ ಸಾರಮಾದ ಸರಿತ್ತೀರದೊತ್ತುಗೊಂಡು ಬೀಡಂ ಬಿಟ್ಟಿರ್ಪುದುಮನ್ನೆಗಮಿತ್ತಲ್

ಮುಂದೆ ನಿಮ್ಮಡಿಗಳಿಲ್ಲಿಗೆ
ಬಂದಿರ್ದುದನಱಿಯದಾ ಸುಶೃಂಗಾರವತೀ
ಸೌಂದರಿಯ ಕೂಡೆ ನೀವಾ
ನಂದದಿನಲ್ಲಿರ್ದರೆಂದು ಬಗೆದಂದು ಕರಂ         ೭

ವ : ಅಲ್ಲಿರ್ದಖಿಳರಾಜಕುಮಾರಪ್ರಕರಮೆಲ್ಲಂ ನಿಧಾನಂಬಡೆಯ ಬಡವ್ಯಂತರ ಸಂತತಿಯಂತೆ ಕಡುಕನಲ್ದು ಪೋಪೆಡೆಯಲ್ಲಿ ತಳ್ತಿಱಿದು ಪಗೆವನ ಪಡೆಯಂ ಪಡಲ್ವಡಿಸಿ ಕನ್ಯಾರತ್ನಮಂ ಪಿಡಿದು ಬಲ್ಪಿಂ ತಪ್ಪುದನೆ ಬಗೆದು ಮಾಮಸಕಂಮಸಗಿ

ಆಗಳನೇಕ ರಾಜಸುಕುಮಾರರೊಳಂ ನೆರೆದೊಂದು ತಾನದೊಳ್
ಬೇಗದೆ ಕೂಡಿ ಕಾರ್ಯದ ವಿಚಾರನಿಮಿತ್ತಮೆ ಮಂತ್ರಶಾಲೆಯಂ
ರಾಗದೆ ಪೋಗಿ ಪೊಕ್ಕುದು ನಿರಸ್ತಗವಾಕ್ಷಕಮಂ ಪ್ರತಿಧ್ವನಿ
ತ್ಯಾಗಕಮಂತ್ಯಪೇತಶಿಶುಕೀರಕಮಂ ಪರಿಮುಕ್ತಕೋಣಮಂ           ೮

ವ : ಇಂತಪ್ಪ ಮಂತಣದ ಮನೆಯೊಳ್ ಕುಳ್ಳಿರ್ದು

ತನ್ನ ಮನಕ್ಕೆ ಬಂದ ಯುವರಾಜಕರಿಂಗೆ ಲತಾಂತಮಾಲೆಯಂ
ಕನ್ಯಕಿ ತತ್ಸ್ವಯಂಬರದೊಳಿಕ್ಕುವ ಬೇವಸದಿಂದೆ ಬಂದಳಂ
ದುರ್ನಯದಿಂದಮೊರ್ವನೆಳದುಯ್ವುದನೀಕ್ಷಿಸಿ ಸುಮ್ಮನಿರ್ದೊಡಂ
ಬನ್ನಮದಕ್ಕು ನಮ್ಮಯ ನೆಗಳ್ತೆಗೆ ಮೊಕ್ಕಳಮೆಂದರೆಲ್ಲರುಂ        ೯

ವ : ಮತ್ತಮವರೊಳೊರ್ಬಂ ರಾಜನೀತಿನಿಪುಣನಿಂತೆಂದಂ

ನಂಟಿಂ ಕಾರ್ಯಮನುಂಟುಮಾಳ್ಪುದದು ಸಾಮಂ ಬೇಳ್ಪ ಸದ್ವಸ್ತುವಂ
ಬಂಟರ್ಗಟ್ಟಿ ವಿಭೇದಿಸಿರ್ಪುದದು ಭೇದಂ ಕಪ್ಪಮಂ ಬಲ್ಲಿದರ್
ಗಂಟಂಟಿತ್ತೊಳಗಾಗಿ ಮಾಳ್ಪುದುದು ದಾನಂ ಮೂಱುಪಾಯಂಗಳುಂ
ಗೆಂಟಾಗಿರ್ದೆಡೆಯಲ್ಲಿದಿರ್ಚುವುದು ದಂಡಂ ನಾಲ್ಕನುಳ್ಳಂ ನೃಪಂ  ೧೦

ನಯದಿಂ ಬೇಡುವನಂತುಮೀಯದೊಡೆ ಬಲ್ಪಂ ಮಾಡುವಂ ಬಲ್ಪನೊ
ಟ್ಟಯಿಸುತ್ತಿರ್ದೊಡಿದಿರ್ಚಿ ಕಾದಿ ಮೊನೆಯೊಳ್ ಕೊಂದಿಕ್ಕಿ ಮಾಱಾಂತ ಸೇ
ನೆಯುಮಂ ಮತ್ತಿರದಾಕೆಯಂ ಪಿಡಿದು ತಪ್ಪಂತಂದು ನಂನಮ್ಮ ಬ
ಲ್ಮೆಯುಮಂ ಪೆರ್ಚಿಸಿ ಕೀರ್ತಿಯಂ ಪಡೆವವಿಂತೆಲ್ಲರ್ಗಿದೇಮಂತಣಂ೧೧

ತಡವಂ ಮಾಡದಿದಕ್ಕೆ ತಕ್ಕುದನೊಡರ್ಚಲ್ವೇಳ್ಕುಮಿಂತೀಕ್ಷಣಂ
ಗಡಿಯಂ ಪೋಗದ ಮುನ್ನಮೇ ಪೊಣರ್ದು ಕನ್ಯಾರತ್ನಮಂ ತಪ್ಪೆ ಪಿ
ನ್ನಡೆಯಿಂ ಕಾಲವಿಲಂಬನಕ್ಕವಸರಂ ತಾನಲ್ತು ಮತ್ತಿಂದು ನಾ
ಡೊಡೆಯಂ ನಿಶ್ಚಯಿಸಿರ್ದವರ್ ತಳರ್ದರಲ್ಲಿಂದಂ ಮನೋರಾಗದಿಂ           ೧೨

ಪಿಂಗದೆ ಮದಂ ಸುರಿವ ಮಂಗಳಕಪೋಳದ ಬೆ
ಡಂಗಿನೊಳಕೊಂಡುರುಮತಂಗಬಳದಿಂದಂ
ತುಂಗಶುಭಲಕ್ಷಣಸುಸಂಗತಸಮಸ್ತಹೃದ
ಯಂಗಕ ಸದಂಗಮ ತುರಂಗಬಳದಿಂದಂ           ೧೩

ಸಂಗಳಿಸಿ ವೀರಭಟಪುಂಗವಲಂಬೆರಸು
ವಂಗ ಮರು ಕುಂತಳ ಕಳಿಂಗ ವಿಳಸದ್ದೇ
ಶಂಗಳೊಡೆಯರ್ ನೆರೆದು ಪಿಂಗಿ ಪೊಱಮಟ್ಟರುಱೆ
ಸಂಗರಕೆ ವಾದ್ಯರುತಿ ನುಂಗೆ ದೆಸೆಯೆಂಟಂ         ೧೪

ವ : ಅಂತು ಪೊಱಮಟ್ಟು ಕಡುವೇಗದಿಂ ಪೋಗಿ ಸುಷೇಣಂ ಬಿಟ್ಟ ಬೀಡಿನೆಡೆಯಂ ಮುಟ್ಟೆವಂದು ಪೊಣರ್ವುದಕ್ಕೆ ಯೋಜನತ್ರಯಪರಿಯಂತಮಂತ ರಾಳಸ್ಥಳಮಂ ಬಿಟ್ಟು ದುರ್ವಹಮಾದಖರ್ವಸೈನ್ಯಮಂ ಪರ್ವತದರ್ವಾಕ್ತೀರದೊತ್ತು ಗೊಂಡು ಬಿಡಿಸಿ ಮಱುದೆವಸಮಪಾರ ರಾಜಕುಮಾರದೋರಣಿಗಳೆಲ್ಲಮೊಂದಾಗಿ ಕೂಡಿ ಕಾರ್ಯ ಪರ್ಯಾಳೊಚನಂಗೆಯ್ದು ತದ್ವೃತ್ತಾಂತಸೂಚನನಿಮಿತ್ತಂ ಸುಷೇಣನಂತಿಕಕ್ಕೆ ವಿತ್ತನಪ್ಪ ಮಹತ್ತರನೊರ್ವನಂ ಕಳಿಪಲವಂ ಮನೋವೇಗದಿಂ ಪೋಗಿಯರಮನೆಯ ಬಾಗಿಲೊಳ್ ನಿಂದು ತನ್ನಯ ಬರಮಂ ಪಡಿಯಱಂಗಱುಪುವುದುಮರಸನಾದೇಶ ದಿಂದವನನೊಡಗೊಂಡು ಪೋಗಿ ಕಾಣಿಸುವುದುಂ ಸಾಷ್ಟಾಂಗಪ್ರಣುತನಾಗಿ ಬಿನ್ನಪಕ್ಕವಸ ರಂಬಡೆದಿಂತೆಂದು ನುಡಿದಂ

ನೆರೆದೆಲ್ಲಾ ರಾಜತನೂ
ಜರ ಮೊತ್ತಂ ಬುದ್ಧಿಗಲಿಸಿ ನಿಮ್ಮ ಸಮೀಪ
ಕ್ಕುರುಮುದದಿಂದಟ್ಟಿದ
ಪರಿವಾರ್ತೆಯ ತೆರನನಱಿಪುವೆಂ ಕೇಳಿಯದಂ     ೧೫

ಪ್ರಿಯಂಬಡೆದು ಬಂದು ಕೂಡಿದ ಸುರಾಜಪುತ್ರರ್ಕಳೋ
ಳಿಯಂ ಬಿಸುಟು ಧರ್ಮನಾಥಸುಕುಮಾರಕಂಗಿಕ್ಕಿದಳ್
ಸ್ವಯಂಬರದೊಳಾ ಪ್ರತಾಪನೃಪಪುತ್ರಿ ಸತ್ಪುಷ್ಪಮಾ
ಲೆಯಂ ತರುಣಿಮುಗ್ಧೆಯಾಕ್ಷಣಮೆ ಪೋಗಿ ಮತ್ತೆಲ್ಲರುಂ            ೧೬

ಮಧ್ಯಸ್ಥವೃತ್ತಿಯಿಂ ಬಂ
ದಿರ್ದ ತನೂದರಿಯನೆಲ್ಲರುಂ ನೋಡುವಿನಂ
ಪ್ರೋದ್ಧತನೊರ್ವಂ ಪಿಡಿದೊ
ಯ್ದುದ್ಯೋಗಮನೆಂತು ನೋಡಿ ಸೈರಿಸಲಕ್ಕುಂ೧೭

ವ : ಎಂದು ಪ್ರಕ್ಷೋಭಿಸಿಯಾ ಶೃಂಗಾರವತೀದೇವಿಯಂ ಬೇಡಿಯಟ್ಟಿದರೆಂದು ಬಿನ್ನಪಂಗೆಯ್ದು ಮತ್ತಮಾ ದೂತಂ ಸಾಮಸಂಪಾದಕವಚನಮನಿಂತೆಂದಂ

ಲೇಸಂ ಮಾಳ್ಪುದು ಹಾನಿವೃದ್ಧಿಯೊಳಮೇಕಪ್ರಾಣನಾಗಿರ್ಪುದು
ದ್ಭಾಸಂಗೆಯ್ಯದೆ ಪೊಲ್ಲದಂ ನಡೆವುದಿಚ್ಛಾವಸ್ತುವಂ ಕೊಟ್ಟು ಮ
ತ್ತಾಶಾಪೂರ್ತಿಯನುಂಟುಮಾಳ್ಪುದು ಕರಂ ಬೇಳ್ಪರ್ಥಮಂ ಕೊಳ್ವುದಿಂ
ತೀ ಸಂಸಾರದೊಳಿಪ್ಪ ಸಜ್ಜನರ ಮಿತ್ರತ್ವಕ್ಕಿದೇ ಲಕ್ಷಣಂ  ೧೮

ವ : ಅಂತುಮಲ್ಲದೆಯುಂ

ಕೂಡಿದಿಱುಂಪೆಗಳ್ ಪಲವುಮಾದಮೆ ಕೊಂದ[ವು] ಪಾವನೊಂದನೆಂ
ದಾಡುವ ಗಾದೆಯುಂಟದು ನಿಮಿತ್ತಮೆ ಧೀವನ ಸೈನ್ಯನಾಥ ಕೇಳ್
ಬೇಡಂ ಪಲಂಬರೊಳ್ ಪಗೆತನಂ ನೃಪಪುತ್ರಿಯನೊಪ್ಪುಗೊಟ್ಟು ಪೆಂ
ಪೋಡದ ಸಂಪದಂಬೆರಸು ಪೋಪುದು ಲೇಸು ವಿವಾದದಿಂದವೇಂ   ೧೯

ವ : ಇಂತೆಂದ ದೂತನ ದುರ್ಭಾಷಣಮಂ ಕೇಳ್ದು ಸರ್ವಂಸಹಾಧಿನಾಥಂ ನಿರ್ಭರಿತ ರೋಷಮಂ ಗರ್ಭೀಕರಿಸಿ ತಲೆಯಂ ತೂಗುತ್ತುಮಿಂತೆಂದಂ

ಆ ಮಾತಂತಿಕ್ಕೆಯನ್ಯಾಯದ ನುಡಿಯನಿದಂ ಬೇಡ ಮಾತಾಡಲೆಮ್ಮು
ದ್ದಾಮೋದ್ಯತ್ಪುಣ್ಯದಿಂದಂ ನೃಪತಿತನುಜೆ ಕೈಸಾರ್ದಳೆಯ್ತಂದದಕ್ಕಂ
ನೀಮುಂ ನಿರ್ಭಾಗ್ಯರಾದರ್ ಮಱುಗಿ ಕುದಿದೊಡಂ ಬಕ್ಕುಮೇ ಲೋಕದೊಳ್ ಮ
ತ್ತೇಮಾತೋ ಪುಣ್ಯದೊಳ್ ಪೇಳ್ ಪರಿಕಿಸೆ ಪುರುಡುಂಟೇ ಕರಂ ಸೊಕ್ಕಬೇಡೈ            ೨೦

ಉರಿಯ ನಾಲಗೆಯ ತೆಱದಿಂ
ಪಿರಿದುಂ ಪಟುವೆನಿಪ ನಿನ್ನ ನಾಲಗೆ ನಿನ್ನಾ
ಳ್ದರ ಸಿರಿಯಂ ಸುಡದಿರ್ಪುದೆ
ಪರನಾರಿಯ ಬಯಕೆಯಿಂದೆ ಕೆಡನೆ ದಶಾಸ್ಯಂ    ೨೧

ವ : ಎಂದು ಮುಳಿಸಂ ಮುಕ್ಕುಳಿಸಿದ ತರ್ಜನೋಕ್ತಿಗಳಿಂ ಸಿಂಗದ ಗರ್ಜನೆ ಯಂತೆ ದಂಡಮನೆ ಗಂಡುಗೆದಱಿ ಮತ್ತಂ ತನ್ನಯ ದುರ್ಜಯಪ್ರತಾಪಲೇಪಮನೆ ತೋಱು‌ತ್ತುಮಿಂತೆಂದಂ

ಬಳಸಿರ್ದಾಳೋಕಿಸುತ್ತಿರ್ಪಖಿಳದಿವಿಜರಿಂಗಪ್ಪಿನಂ ಭೂರಿಕೌತೂ
ಹಳಮಂ ಮಾಱಾಂತ ನಿನ್ನಾಳ್ದರ ಪಡೆಯನಿತಂ ಕೊಂದು ಕೈಹೇಸದೀಗಳ್
ಕಳೆವೆಂ ಕೂರ್ವಾಳ ಬಾಯೊಳ್ ನೆಲಸಿದ ಬಱನಂ ಮತ್ತೆ ವೀರಾವತಾರೋ
ಜ್ಜ್ವಳಮತ್ಕೀರ್ತಿಪ್ರಭಾವಂ ಸಕಳಭುವನದೊಳ್ ತೀವುವಂತಾಗಿ ಮಾಳ್ಪೆಂ    ೨೨

ಕೆಡುಗಾಲಂ ಬಂದುದಕ್ಕುಂ ತ್ವದಧಿಪತಿಗಿಂತಪ್ಪ ದುರ್ನೀತಿಯಂ ಸಂ
ಗಡಿಸುತ್ತಿರ್ದೀನಿಮಿತ್ತಂ ನುಡಿಯಡಕಿಗದೇನುತ್ತಂಗೊಟ್ಟಪೆಂ ನಿ
ನ್ನೊಡೆಯರ್ ಕಾದಲ್ಕೆ ಬಲ್ಪಂ ಪಡೆದೊಡೆ ಬರವೇಳಿಲ್ಲದಿರ್ದಂದು ನಮ್ಮಂ
ಬಿಡದೋಲೈಸಾಳ್ವೆಸಂಗೆಯುತುಮೊಡನಿರವೇಳೆಂದು ಪೇಳ್ದಂ ಚಮೂಪಂ    ೨೩

ವ : ವಿನಾಶಕಾಲೇ ವಿಪರೀತಬುದ್ಧಿಯೆಂಬ ನಾಣ್ನುಡಿಯಂ ನನ್ನಿಮಾಡಿದಿರೆಂದು ಪ್ರಗಲ್ಭಂಗಳಪ್ಪುತ್ತರಂಗಳಿಂ ದೂತನ ಮುಖಕ್ಕೆ ಮುದ್ರೆಯನುದ್ಧರಿಸುವುದುಂ

ಕಟ್ಟಾಳಾಗಿಯೆ ಬರವೇಳ್
ನೆಟ್ಟನೆ ನೀ ಪೋಗು ನಾಳೆ ಕಾಳೆಗಮೆನುತುಂ
ಕೊಟ್ಟು ಬೇಳ್ಪರ್ಥಮಂ ಬೀ
ಳ್ಕೊಟ್ಟವನಂ ಕಳಿಪಿದಂ ಸುಷೇಣನುದಾರಂ      ೨೪

ವ : ಅನಂತರಂ

ಚರನಾಗಳ್ ಪೋಗಿ ಬೇಗಂ ತಡೆಯದೊಡೆಯರಂ ಕಂಡು ತಾಂ ಪೋಗಿ ಬಂದಾ
ಪರಿಯಂ ತದ್ವಾರ್ತೆಯಂ ಬಿನ್ನಯಿಸಿದನುಱೆ ತನ್ನಾಳ್ದರಿಂಗಂದು ತತ್ಸೌಂ
ದರಿಯಂ ತಾನೀಯನಿತ್ತಂ ಕದನಮನದಟಂ ನಾಳೆ ರುಪ್ಪೆತ್ತಿ ಬಪ್ಪಂ
ಭರದಿಂದಂ ಕಾಳಗಕ್ಕೆಂದಿರದುರ್ದೊಡೆ ಸನ್ನದ್ಧರಾಗಿದ್ದರೆಲ್ಲಂ     ೨೫

ವ : ಅನ್ನೆಗಮಿತ್ತಲಾ ಸುಷೇಣಚಮೂನಾಥನಾಕ್ಷಣಮೆ ಬಲಾಧ್ಯಕ್ಷನಂ ಕರಸಿ ನಾಳೆ ಕಾಳೆಗಮೆಂದು ನಮ್ಮೀ ವಿಜಯಶಿಬಿರದ ಪೆರ್ವಡೆಗೆಲ್ಲಂ ಡಂಗುರಂಬೊಯ್ದು ಸಾಱಿಸೆಂದು ಬೆಸಸುವುದುಮಾತನಾತನಾಜ್ಞೆಯಂ ನೆತ್ತಿಯೊಳ್ ಪೊತ್ತುಕೊಂಡು ಪೋಗಿಯಂತೆಗೆಯ್ವು ದುಮಾಗಳ್

ಉದಯಗಿರೀಂದ್ರದಿಂದೆ ಪೊಱಮಟ್ಟುಮನಂತಪಥಪ್ರಯಾಣದಿಂ
ದೊದವಿದ ಸೇದೆಯಂ ಜಲವಿಲೋಡನದಿಂ ತವಿಪೊಂದುಬುದ್ಧಿ ಚಿ
ತ್ತದೊಳಿರದುಣ್ಮಿ ಪೊಣ್ಮಿ ನಡೆತಪ್ಪವೊಲಂದು ದಿವಾಕರಂ ಸುಶೀ
ಘ್ರದಿ ನಡೆತಂದು ಪಶ್ಚಿಮಸಮುದ್ರದ ಮಧ್ಯದೊಳೆಯ್ದೆ ಮುಳ್ಗಿದಂ           ೨೬

ವ : ಅಂತು ನೇಸರ್ಪಡಲೊಡಂ

ರಣಸಂನ್ಯಾಸಮನಪ್ಪುಕೆಯ್ವ ಮಿಗೆ ವೀರಾಳಾಪಮಂ ಕೇಳ್ವ ವಾ
ರಣಮುಂ ವಾಜಿಯುಮಂ ಸಮರ್ಚಿಸುವ ನಾನಾಶಸ್ತ್ರಮಂ
ಪೂಣಿಪ್ಪ ಪ್ರವಿತೋದ್ಯೋಗದಿನಿದ್ದುಮಂದಿನಿರುಳಂ ಪೋಗಾಡಿದರ್ ವೀರರ
ಗ್ರಣಿಗಳ್ ತಾವೆರಡುಂಬಲಂಗಳ ವಿನೈತ್ಯೈಕಾಂಗಸೂರರ್ ಭಟರ್   ೨೭

ವ : ಬಳಿಯಂ ನೇಸಮೂರ್ಡುವುದುಮಾ ಸುಷೇಣನೆಂಬ ಸೇನಾಧಿಪತಿ ಪ್ರಭಾತಕಾಲದೊಳವಶ್ಯಂ ಪ್ರಭಾವನೀಯಮಾದ ಜಿನಪೂಜೋತ್ಸಾಹಮಂ ಮಹಾ ಪ್ರಭಾವನಾ ವಿಭವದಿಂ ಪ್ರಭಾವಿಸಿ ಮತ್ತಂ ಪ್ರತಿಪಕ್ಷ ಕ್ಷತ್ರಿಯಕುಮಾರ ಪಕ್ಷವಿಕ್ಷೇಪಣೋ ದ್ಯುಕ್ತಚಿತ್ತನಾಗಿ ಸಮರಸಮಾರಂಭಸಂರಂಭನಿಬಂಧನೀಭೂತ ನಿಜವಿಜಯಪ್ರಸ್ಥಾನ ಸೂಚಕಸನ್ನಾಹ ಭೇರಿಯಂ ಪೊಯಿಸಿದಾಗಳ್

ದೆಸೆಯೆಂಟುಂ ವಾರ್ಧಿಯೇಳುಂ ಕುಲಗಿರಿಗಳವಾಱುಂ ಸುವರ್ಣಾದ್ರಿಯೈದುಂ
ಶಶುಭಾಸ್ವದ್ಬಿಂಬನಾಲ್ಕುಂ ಭುವನವಳಯಿಮೂಱುಂ ಪರಿಕ್ಷೋಭದಿಂ ಮಾ
ಮಸಕಂಬೆತ್ತಿರ್ದ ಧಾತ್ರೀಗಗನಕಮೆರಡುಂ ತಮ್ಮೊಳೊಂದಾಗಿ ಮಾಂ ಮು
ದ್ರಿಸಿದತ್ತೆಂಬಿನಂ ತುಂಬಿದುದಭಿನವಸನ್ನಾಹಭೇರಿಪ್ರಣಾವಂ          ೨೮

ವ : ಎಂತು ಮಂತ್ರವಾದಿಯ ಸಮಾಕರ್ಷಣಮಂತ್ರೋಚ್ಚರಣಧ್ವನಿಯ ಶ್ರವಣದಿಂ ವ್ಯಂತರಸಂತತಿ ನೆರದು ಬರ್ಪುದಂತಿರಾ ತಂತ್ರಾಧಿನಾಥನ ಪೂರ್ಣಮಾನ ವಿಜಯ ಭೇರೀಧ್ವನಿಯ ಪರಿಪೂರ್ಣಸಮಾಕರ್ಣದಿಂದಶೇಷಪರಿವಾರಂ ಪೂರ್ಣಮಾಗಿ ನೆರೆದು ಬರಲೊಡಂ

ದೆಸೆಯುಂಟುಂ ವಾರ್ಧಿಯೇಳುಂ ಕುಲಗಿರಿಗಳವಾಱುಂ ಸುವರ್ಣಾದ್ರಿಯೈದುಂ
ಶಶಿಭಾಸ್ವದ್ಬಿಂಬನಾಲ್ಕುಂ ಭುವನವಳಯಿಮೂಱುಂ ಪರಿಕ್ಷೋಭದಿಂ ಮಾ
ಮಸಕಂಬೆತ್ತಿರ್ದ ಧಾತ್ರೀಗಗನಕಮೆರಡುಂ ತಮ್ಮೊಳೊಂದಾಗಿ ತಾಂ ಮು
ದ್ರಿಸಿದತ್ತೆಂಬಿನಂ ತುಂಬಿದುದಭಿನವಸನ್ನಾಹಭೇರಿಪ್ರಣಾದಂ          ೨೮

ವ : ಎಂತು ಮಂತ್ರವಾದಿಯ ಸಮಾಕರ್ಷಣಮಂತ್ರೋಚ್ಚರಣಧ್ವನಿಯ ಶ್ರವಣದಿಂ ವ್ಯಂತರಸಂತತಿ ನೆರದು ಬರ್ಪುದಂತಿರಾ ತಂತ್ರಾಧಿನಾಥನ ಪೂರ್ಣಮಾನ ವಿಜಯ ಭೇರೀಧ್ವನಿಯ ಪರಿಪೂರ್ಣಸಮಾಕರ್ಣದಿಂದಶೇಷಪರಿವಾರಂ ಪೂರ್ಣಮಾಗಿ ನೆರೆದು ಬರಲೊಡಂ

ಪೊಂಗವಚಂಗಳಂ ಕುಡೆ ಚಮೂಪತಿ ವೀರಭಟರ್ಗೆ ರಾಗದಿಂ
ಪಿಂಗದೆ ತೊಟ್ಟುಕೊಳ್ವ ಪದದಲ್ಲಿ ರಣೋತ್ಸವ ಲಾಭಮಾದುದೆಂ
ದಂಗಮತೀನ ಪುಷ್ಪತೆಯನಾಂತೊಡೆ ಸಲ್ಲದಿರಲ್ಕಮಲ್ಲಿಯು
ತ್ತುಂಗಮನರ್ ಭಟರ್ ಕಿಱಿಯವೆಂದವನರ್ಥಿಗೆ ಕೊಟ್ಟರಾಕ್ಷಣಂ    ೨೯

ವ : ಆಸಮಯದೊಳ್

ಕುದುರೆಯನೆಯ್ದೆ ಹಲ್ಲಣಿಪ ಹಕ್ಕರಿಯಿಕ್ಕುವ ಱಂಚೆಯಂ ಮಹಾ
ಮದಕರಿಗೊಲ್ದು ಪಣ್ಣುವ ರಥಾಗ್ರಿಮದಲ್ಲಿ ಶರಂಗಳಂ ಸಮಂ
ತೊದವಿಪ ಜೋಡುಮಂ ತೊಡುವ ಸೀಸಕಮ್ಮಿಕ್ಕುವ ಯೋಧಕೋಶಮಂ
ಪದುಳಿಸುವಂಗರಕ್ಷಕರನಾಗಿ ಸಸಂಭ್ರಮಮುಣ್ಮಿತೆತ್ತಲುಂ೩೦

ವ : ಅಂತುಮಲ್ಲದೆಯುಂ

ಇನಿತುಂ ಕಾಲಕ್ಕಾದ
ತ್ತನುವರಮಿಂದೆಮ್ಮ ಬಾಹುದಂಡದ ಕಂಡೂ
ಯನಮಂ ಕಳಲ್ಚುವೆಡೆಯಾ
ಯ್ತೆನುತುಂ ಕೊರ್ವುತ್ತುಮಿರ್ದುದಾ ಸುಭಟಜನಂ           ೩೧

ವ : ಸಮನಂತರಮಾ ಸುಷೇಣನೆಂಬ ಸೇನಾನಾಥಂ ಥಳಥಳಿಪ ಮಾಣಿಕ್ಯ ಯೂಥಸನಾಥನವೀನನೇಪಥ್ಯರಚನಾವಿಶೇಷ ಪೃಥುಳೀಕೃತ ಸಹಜಸೌಂದರ್ಯ ಸಮುಪಗೂಡನುಂ ರಣಕೇಳೀಕಳಾವಿಳಾಸಪ್ರೌಢನುಂ ಪ್ರವರ್ಧಮಾನಮದ ಪ್ರರೂಢಪಟ್ಟವರ್ಧನ ಗಂಧಸಿಂಧುರಬಂಧುರಸ್ಕಂಧಸಮಾರೂಢನುಮಾಗಿ ಸಂಭ್ರಮ ಪ್ರಾಪ್ತನಿಜಾಪ್ರಬಲಂಬೆರಸು ಹಿತಪುರೋಹಿತಸಮುಪದಿಷ್ಟ ವಿಶಿಷ್ಟಶುಭಮುಹೂರ್ತಂ ನಿಜವಿಜಯಶಿಬಿರಮಂ ಪೊಱಮಟ್ಟು ರಾಜಮಾರ್ಗದಿಂ ಸಂಗ್ರಾಮರಂಗಕ್ಕೆ ನಡೆವಾಗಳ್

ಸಲಹಿದುರುಮೂಲಬಲಮಂ
ಕೆಲದೊಳ್ ಬರವೇಳಿ ನಡುವೆ ಮಿತ್ರರ ಬಲಮಂ
ಸಲೆಯೋಜಿಸಿಯಾಟವಿಕರ
ಬಲಮಂ ಕಡೆಯೊಳ್ ನಿಯಾಮಿಸಿದನಾ ಭೂಪಂ೩೨

ಬಿರುದಿನ ತೋರ ಹೊನ್ನಕಡೆಯಂಗಳ ಬಾವುಲಿಯೋಳಿಯೋಳಿಯು
ದ್ಧುರುತರ ಝಂ ಝಣಂ ಝಣ ಝಣ ಝಂ ಝಣಮೆಂಬ ರಾವದಿಂ
ಹರಿದಧಿಪರ್ಗೆ ತನ್ನ ಜಯಮಂ ಸಲೆ ಸಾಱುತುಮಿರ್ದುದೆಂಬಿನಂ
ಪರಕಲಿಸೆತ್ತಲುಂ ನಡೆದುಬಂದುದು ಶೂರಪದಾತಿಸೈನ್ಯಕಂ           ೩೩

ಕೂಡೆ ತೊಟ್ಟಿರ್ದ ವಜ್ರದ
ಜೋಡುಗಳ ಕವಲ್ತು ಪೊಳೆವ ಬೆಳಗಿನ ಬಳಗಂ
ನಾಡೆಯವಿಮ್ಮಡಿಸಿತ್ತೊ
ಳ್ಪೊಡೆದ ಪಲತೆಱದ ಕೈದುಗಳ ಪೊಳೆಪಿಂದಂ   ೩೪

ವ : ಇಂತು ಸಕಳಚಾತುರ್ದಂತಬಲಂ ನೆರೆದು ಸಮರಸನ್ನದ್ಧಮಾಗಿ ದೆಸೆ ಬೆಸಲೆಯಾದಂತೆ ಸುತ್ತಲುಂ ಪಸರಿಸಿ ನಿಬಿಡಮಾಗಿ ಮೋಹರಿಸಿ ನಡೆವೆಡೆಯೊಳ್

ಪಿಂಗಲಿ ಶಾಂತದಲ್ಲಿ ಕಡುಬಿಂಕಮನಾಂತದು ನಿಂದು ಸುಸ್ವರಂ
ಸಂಗಳಿಸುತ್ತಿರಲ್ ಬಳಿದು ಬಾಯ್ಕೊಳುತಿರ್ದುದು ಕೃಷ್ಣಪಕ್ಷಿ ತ
ನ್ನಂಗನೆಯಂ ಪುರಸ್ಸರಿಸಿ ತಮ್ಮೆರಡುಂ ಬಲಚೇಷ್ಟೆಗೆಯ್ವುತುಂ
ಪಿಂಗದೆ ತಾಱನಿತ್ತು ಬೆಳೆಗೆಯ್ಯೊಳಗಿರ್ದುವು ತಮ್ಮೊಳೊಲ್ಮೆಯಿಂ    ೩೫

ವ : ಅದಂ ಕಂಡು ಸುಷೇಣನೆಂಬ ಸೇನಾಧಿರಾಜಂಗೆ ವಿಜಯಪರಿಪಿಶು ನಂಗಳಾದ ಮಂಗಳ ಶಕುನಂಗಳನಾಲಿಸುತ್ತುಮವಳೋಕಿಸುತ್ತುಮಿರ್ದ ಸೈನಿಕರೆಲ್ಲಂ ಜಯಜಯಯೆಂದು ದ್ಘೋಷಿಸಿ ಲೇಸುಲೇಸೆಂದು ಮಿಗೆಪೊಗಳ್ವುದನಿಳಾತಳಾಧಿಪಂ ಕೇಳ್ದು ವಿಪುಳಪುಳಕಕಳಿಕಾಜಾಳಪರಿಕಳಿತಕಳೇವರನಾಗಿ ಪರಮಾನಂದಮನಪ್ಪುಕೆಯ್ದಿಕ್ಕೆಲನಂ ನೋಡುತ್ತುಂ ಸಡಗರದಿಂ ನಡೆಯೆ

ಅತಿಚಿತ್ರಂಬೆತ್ತ ಸೊಕ್ಕಾನೆಗಳ ನೊಸಲ ಸಿಂಧೂರರಾಗಪ್ರಭಾ ಸಂ
ತತಿಯುಂ ಸನ್ನದ್ಧಘೋಟಪ್ರಕಟವಿಕಟಪರ್ಯಾಣ ನಾನಾಪ್ರಕಾರ
ದ್ಯುತಿಯುಂ ಕೆಂಧೂಳಿಯೊಳ್ ಸಂಗಳಿಸಿ ಪುದಿದು ಚೆಲ್ವಾಯ್ತು ಪೋಪಲ್ಲಿ ಸೇನಾ
ದ್ಭುತದೊಡ್ಡಿಂಗಂದು ಕೆಂಬಟ್ಟೆಯ ಪಸರಿಪ ಮೇಲ್ಗಟ್ಟುಮಂ ಕಟ್ಟಿದನ್ನಂ೩೬

ವ : ಅದಲ್ಲದೆಯುಂ

ಕೆಂಧೂಳಿ ಮಸಗಿ ಸೈನ್ಯಮಂ
ನಂದುಱೆ ಮೂವಳಸುವಳಸಿ ಸುತ್ತಲುಮೆಲ್ಲಂ
ಮಂದೈಸಿ ನಿಂದು ಕಱೆದುದು
ಕುಂದದ ನಡೆಗೋಟೆಯೆಂಬ ಶಂಕಾರಸಮಂ       ೩೭

ಬಟ್ಟೆಯೊಳಿರ್ದ ಭಾವಿ ಕೆಱೆ ಪಳ್ಳ ಕೊಳಂಗಳ ನೀರನೆಲ್ಲಮಂ
ತೊಟ್ಟನೆ ಪೀರಿ ಬತ್ತಿಸಿದುದಾಕ್ಷಣಮಾ ಘನಸೈನ್ಯಪಾದಂ
ಘಟ್ಟನದಿಂದೆ ಪುಟ್ಟಿದ ರಜೋಬ್ರಜಮಾಗಳೆ ದಾನವಾರಿಯಿಂ
ದಿಟ್ಟಳಮಾಗಿ ತುಂಬಿಸಿದುದಾನೆಗಳಾವಳಿ ಪಿಂದೆಪೋಗುತುಂ         ೩೮

ಆ ರಜದಿಂ ಪೆರ್ಚಿದ ತಮ
ಮೋರಂತಿರೆ ಕಿಡಿಸಿದತ್ತು ರಿಪುಸತ್ತ್ವಮನೇಂ
ಕ್ರೂರಮ ಪೆರ್ಚಿರ್ದೊಡೆ ಸಂ
ಹಾರಿಸನೆ ನಿಜಾಗ್ರಜಾತರಾದೊಡಮಾರಂ         ೩೯

ಮಿಕ್ಕು ಗಗನದೊಳೆ ಪಾಱುವ
ಪಕ್ಕಿಯುಮಾ ಸೇನೆಯಳವಿಯಂ ಕಾಣದೆ ತೇಂ
ಕಿಕ್ಕಿ ಪತಾಕಾಗ್ರದೊಳಂ
ದಿಕ್ಕೆಂದೊಡೆ ದಳದ ಪವಣನಱಿವವನಾವೊಂ    ೪೦

ತೋಱಿಕೆವೆತ್ತ ಭೂರಿತರ ಬಾಡವ ಸಂಸ್ಥಿತಿಯಿಂದಮೊಪ್ಪಿ ಕೂ
ರ್ಪೇಱಿದ ತೀರದಂಬಗಳನೆಯ್ದೊಳಕೊಂಡು ಗಭೀರಘೋಷಮಂ
ಬೀಱಿ ಮಹಾಬಲಂ ಪ್ರಳಯಕಾಲಸಮುದ್ರಮೆ ತನ್ನ ಮೇರೆಯಂ
ಮೀಱಿಬರುತ್ತುಮಿರ್ದ ತೆಱದಿಂದಮಗುರ್ವನದಿತ್ತುದಾಕ್ಷಣಂ        ೪೧

ಜವನ ವಿಜೃಂಭಣಮಂ ತೋ
ಱುವ ಮಹಿಮೆಯನಾಂತಕಾರಣಂ ತೆಂಕಣದಿ
ಗ್ವಿವರದ ತೆಱದಿಂದಿರ್ದುದು
ವಿವಿಧಾಳಂಕಾರಮಾನ್ಯಮಾ ಭಟಸೈನ್ಯಂ         ೪೨

ಘನತರವಾರಿಯಿಂ ಪಡೆದುದದ್ಭುತಮಂ ಮಳೆಗಾಲಮೆಂಬಿನಂ
ಕನದುರುಮಂಡಳಾಗ್ರರುಚಿ ಭಾಸಿತದಿಙ್ಮುಖಮಾಯ್ತು ತೀವ್ರತೇ
ಜನುದಯಮೆಂಬಿನಂ ಪ್ರಬಳವಾಹಿನಿಯೆಂಬಿನಮಾಯ್ತು ರಾಜಹಂ
ಸ ನವವಿಹಾರಕಂ ಬಹಳಸೇವೆಯದಾವರಿಸಿತ್ತು ಚೋದ್ಯಮಂ        ೪೩

ವ : ಇಂತುರ್ಬಿ ಕೊರ್ಬಿ ಬರುತ್ತುಮಿರ್ದ ಪೆರ್ವಡೆಯ ನಟ್ಟನಡುವೆ

ಪಣ್ಣಿದ ಱಂಚೆಯಿಂದೆಸೆವ ಮಿಕ್ಕುಱೆ ಸೊಕ್ಕಿದ ಪಟ್ಟದಾನೆಯಂ
ಬಣ್ಣಿಸಲೇಱಿ ಕೂರಿತೆನಿಪಾಯುಧಮಂ ಪಿಡಿದುದ್ಘವಜ್ರಸಂ
ಕೀರ್ಣಮೆನಿಪ್ಪ ಜೋಡನಿರದಿ‌ಕ್ಕಿಯನೇಕ ರಣಾನಕಸ್ವನಂ
ಘೂರ್ಣಿಸೆ ಬಂದನಂದು ರಣಭೂಮಿಗೆ ಶೂರಸುಷೇಣಸೈನ್ಯಪಂ     ೪೪

ಎತ್ತಿದ ಚೆಲ್ವ ಬೆಳ್ಗೊಡೆ ಸುಧಾಕರಬಿಂಬಮಿದೆಂಬ ಶಂಕೆಯಂ
ಬಿತ್ತರಿಸಲ್ ಸುವರ್ಣಮಯದಂಡವಿಮಂಡಿತಚಾರುಚಾಮರಂ
ಸುತ್ತಲುಮೆಲ್ಲಿಯುಂ ಪೊಳೆದು ಸಂಚಳಿಸುತ್ತುಮಿರಲ್ ಸುಷೇಣನೆಂ
ಬುತ್ತಮಸೈನ್ಯನಾಥನುಱದಾಹವಭೂಮಿಯೊಳೊಡ್ಡಿ ನಿಲ್ವುದುಂ೪೫

ರಕ್ಕಸರಂತೆ ಕಿಚ್ಚಿನುರಿಯಂತೆ ದಲುಗ್ರತೆವೆತ್ತ ವೀರರಂ
ದಿಕ್ಕೆಲದಲ್ಲಿ ಮತ್ತಮಿರದೊಡ್ಡಿದರೆಯ್ದೆ ವಿರೋಧಿವರ್ಗಮಂ
ತೆಕ್ಕದೆ ಕೊಂದು ಬಿರ್ದುಣಿಸನಿಕ್ಕುವ ಬೇವಸದಿಂ ಜವಂಗೆ ಕೈ
ಮಿಕ್ಕವರಾತ ನಿನ್ನೆರೆಯೊಳಿರ್ದವರಿಂಗೆಣೆಯಾದಕಾರಣಂ  ೪೬

ಮೊನೆಯಲ್ಲೆಮ್ಮೊಡನಾರೊ ತಳ್ತಿಱಿವ ಗಂಡರ್ ನಮ್ಮವೊಲ್ ಕಾದುವೊಂ
ದನುವಂ ಬಲ್ಲವರಾರೊ ಮೆಯ್ಗಲಿಗಳುಂ ನಾವಲ್ಲದಿನ್ನಾರೊ ಪೇ
ಳೆನುತುಂ ಮುಖ್ಯಸಮಸ್ತನಾಯಕರಸಂಖ್ಯಾತೋರುಸೈನ್ಯಾವೃತರ್
ಘನಬಾಹಾಬಳರೊಡ್ಡಿ ನಿಂದರುಱದಾ ಸಂಗ್ರಾಮಸಂರಂಭದೊಳ್  ೪೭

ವ : ಮತ್ತಂ ರಿಪುಬಲತಿಮಿರಸಂಹಾರಣಪ್ರವೀಣನೆನಿಪ ಸೂರ್ಯಪ್ರಭನುಂ ಪರಿಪಂಥಿಕರಿ ಘಟಾವಿಘಟನಪಟುವೆನಿಪ ಸಿಂಹರಥನುಂ ಪರತುರಗದಳವಿದಳನ ವಿಳಸಿತಕದನ ಕೇಳೀನಿಪುಣನೆನಿಪ ಕೃತಾಂತವಕ್ತ್ರನುಂ ವೈರಿವರೂಥಿನೀರಥಯೂಥ ನಿರ್ಮಥನಗ್ರಥಿತ ಮನೋರಥನೆನಿಪ ಮಹಾರಥನುಮಭಿಯಾತಿಪದಾತಿಯಾತನಾ ಸಮುಪಜಾತಿಸಾತಿಶಯ ನಿರತನೆನಿಪ ವಿಜಯರಥನುಂ ವಿಪಕ್ಷಪಕ್ಷಪರಿಕ್ಷೇಪಣದಕ್ಷನಪ್ಪ ದುಷ್ಪ್ರೇಕ್ಷಕನುಂ ವಿರೋಧಿ ಸಮುದ್ದಂಡದಂಡನಾಥಪ್ರಬಳಬಳಕುಳಕುಧರಪರಿಖಂಡನ ಪ್ರಚಂಡದಂಭೋಳಿದಂಡ ನಿಭಬಾಹುಯದಂಡಕಾಂಡಮಂಡಿತನೆನಿಪ ದಂಡಧರನುಮೆಂಬ ಪೆಸರಪೆಸರ ಮೊನೆಯ ನಾಯ್ಕರುಂ ರಣರಸಿಕರಪ್ಪಧಿರಾಜ ಮಹಾರಾಜಮಂಡಳಿಕ ಪ್ರಮುಖ ನಿಖಿಳರಾಜಕುಮಾರಕರುಂ ಶರಭನುಂ ಮಹಾಬಳನುಂ ಪ್ರಿಯವಿಗ್ರಹನುಂ ಮಹೇಂದ್ರನುಂ ಮೊದಲಾದ ಸಕಳಘೋಳಾಯಿಲರುಂ ತಂತಮ್ಮ ಚಾತುರ್ದಂತಬಲಂ ಬೆರಸು ಕರಿತುರಗರಥಾರೂಢರಾಗಿ ಸಂದಣಿಸಿ ಮುಂದೆನಿಂದ ಪಲವುಂ ಚಂದದ ಪೆಸರ ಪಳಯಿಗೆಗಳಂಬರಮನಳ್ಳಿಱಿದು ಮಿಳಿರ್ದು ಮಿಳ್ಳಿಸುತ್ತುಮಿರೆ ಚತುರಂಗಬಲದ ವಿದ್ಯಾಬಲದ ಭುಜಬಲದೆಸಕದಿಂ ಮಾಮಸಕಂಮಸಗಿ ಮುಳಿಸಂ ಮುಂದಿಟ್ಟು ಸಂಗ್ರಾಮ ಭೂಮಿಗೆ ಬಂದು ಸುಷೇಣನಿಯಮಿತಸ್ಥಾನದೊಳೊಡ್ಡಿ ನಿಲ್ವುದುಂ

ಒಂದೆಡೆಯಲ್ಲಿ ಭೀಮರಥನೊಡ್ಡಿದನೊಂದೆಡೆಯಲ್ಲಿ ಸಿಂಹಣಂ
ಬಂದಿರದೊಡ್ಡಿದಂ ಯಮಮುಖಂ ಬಿಡದೊಂದೆಡೆಯಲ್ಲಿಯೊಡ್ಡಿದಂ
ಮಂದರಧೀರನೊಡ್ಡಿದನದೊಂದೆಡೆಯಲ್ಲಿ ದಲಿಂತು ಕೂಡೆ ಸಾ
ರ್ತಂದಿರದೊಡ್ಡಿನಿಂದರಧಿನಾಯಕರಾಹವಭೂಮಿಯೊಳ್ ಕರಂ      ೪೮

ವ : ಅಂತೆಡ್ಡಮಾಗೊಡ್ಡಿನಿಂದ ಪೆರ್ವಡೆಯೆಂಬಿಂಗಡಲ ನಟ್ಟನಡುವೆ ಮದಸಮುದಿತ ಮತಂಗಜದ ಮೇಲೆ ಕುಳ್ಳಿರ್ದು

ಅರುಣಮಣಿಭೂಷಣಪ್ರಭೆ
ಪರಕಲಿಸಿರೆ ಸುತ್ತಲುಂ ಸುಷೇಣಚಮೂಪಂ
ಶರನಿಧಿಯ ನಡುವೆ ಕುಳ್ಳಿದ
ವರುಣನ ರೂಪೆಂಬ ಶಂಕೆಯಂ ಪುಟ್ಟಿಸಿದಂ      ೪೯

ವ : ಇಂತು ಸುಷೇಣಂ ಬಂದೊಡ್ಡಿನಿಂದುದನಾಗಳಖಿಳರಾಜಕುಮಾರಕರೆಲ್ಲಂ ಕೇಳ್ದು ಪರ್ಜನ್ಯದ ಗರ್ಜನಮಂ ಕೇಳ್ದ ಕಿಶೋರಕೇಸರಿಗಳಂತೆ ಕಿಸುಱಿ ತಾಮುಂ ಸಮರಸನ್ನದ್ಧರಾಗಿ ವಿಪುಳಕಳಕಳರವಂ ದಿಕ್ಕುಳಂ ಮುಕ್ಕಳಿಸುವಂತು ನಿಸ್ಸಾಳಮಂ ಸೂಳಯ್ಸಿ ತತ್ಸಮಯಕ್ಕುಚಿತ ಸಮುದಗ್ರಸಮಗ್ರಪ್ರಸಾದನ ಸಾಮಗ್ರೀಪ್ರಸಾದಿತಮುಮಾದ ತಂತಮ್ಮ ಚಾತುರ್ದಂತ ಬಲಮಂ ಕೂಡಿಕೊಂಡು ನಿಜಶಿಬಿರಮಂ ಪೊಱಮಟ್ಟದಿರದಿದಿರೆತ್ತಿ ಪೋಪಾಗಳ್

ಪ್ರತಿಕೂಲಾನಳನಿಂ ಮರಂ ಮುಱಿವುದಂ ದೇವಾಲಯಂ ಬೀಳ್ವುದುಂ
ನುತಘೋಟಂಗಳ ಕಣ್ಗಳಿಂ ಜಲಕಣಂ ಬೀಳ್ತಪ್ಪುದಂ ಕಂಡೊಡಂ
ಪ್ರತಿಪಕ್ಷಂ ಮುಱಿದಪ್ಪುದೆಂದುಱದವಂ ನಿಶ್ಶೇಷಭೂಪಾಲರು
ದ್ಧತಿಯಿಂ ದುರ್ನಯಮಂ ಕರಂ ಸುನಯಮೆಂದೂಳ್ದರ್ ಮಹಾಮೂರ್ಖರುಂ           ೫೦

ವ : ಮತ್ತಮರ್ಥೀದೋಷಂ ನಪಶ್ಯತಿಯೆಂಬೀ ನಾಣ್ಣಡಿಯಂ ವ್ಯಕ್ತೀಕರಿ ಸುತ್ತುಮವಶಕುನಂಗಳಂ ಬಗೆಯದೆ ವಿಗ್ರಹದಾಗ್ರಹಮನೆ ಮುಂದಿಟ್ಟು

ಮದಧಾರಾಪೂರದಿಂದಂ ಧರಣಿವಳಯಮುಂ ಕೂಡೆ ಜೋಗೇಳುವನ್ನಂ
ಮುದದೆತ್ತಿರ್ದಾತಪತ್ರಂಗಳ ಬಳಗದಿನಾಕಾಶಮಂ ತೀವುವನ್ನಂ
ಪದೆದುತ್ಖಳ್ಗಪ್ರಭಾಮಂಡಳದಿನಖಿಳದಿಗ್ಭಾಗಮುಂ ತುಂಬುವನ್ನಂ
ಪದುಳಂಬಂದತ್ತು ನಾನಾನೃಪತನಯಕದಂಬಂ ಪ್ರತಾಪಾವಳಂಬಂ  ೫೧

ವ : ಅಂತು ಮಹಾಮಹಿಮೆಯಿಂ ಸಮರಮಹೀವಳಯಕ್ಕವಿಳಂಬನದಿಂದೆಳ್ತರ ದಿಳೆಬೆಳೆದಂತಿರಾ ವ್ಯೂಹಕ್ಕೆ ಪ್ರತಿವ್ಯೂಹಮಾಗೊಡ್ಡಿನಿಲ್ವುದುಮಾಗಳೆರಡುಂ ದಳದೊಳ್

ರಣಭೇರೀಭೂರಿಭಾಂಕಾರರುತಿ ಬಹಳನಿಸ್ಸಾಳಢಾಂಕಾರಘೋರ
ಕ್ಷಣನಂ ಕೋದಂಟಂಕಾರವಿಪುಳನಿನದಂ ಕಾಹಳೋತ್ತಾಳಸಂಭೀ
ಷಣಪೂತ್ಕಾರಪ್ರಣಾದಂ ಬಱುದನಿ ಗಡ ಝಣ್ಕಾರನಿರ್ಘೋಷಣಂ ದಾ
ರುಣಹೇಷಾಸ್ಫಾರಿಸುತ್ತಂ ಪಸರಿಸೆ ಘನಕೋಳಾಹಳಂ ಪೊಣ್ಮಿತೆತ್ತಂ           ೫೨

ಎರಡುಂ ಸೇನೆಯ ಪಣ್ಣಿದಾನೆಗಳನಾ ಕಾಲಾಳ್ಗಳಂ ತೇರ್ಗಳಂ
ಪರಮಾಶ್ವಂಗಳ ಲೆಕ್ಕದೊಂದು ಪವಣಂ ಬಲ್ಲನ್ನನಾವಂ ದಲೀ
ಧರಣೀಮಂಡಳದಲ್ಲಿ ಮತ್ತೆ ಚತುರಾಸ್ಯಂಗಾದೊಡಂ ಸಂಖ್ಯೆಯೊಳ್
ದೊರೆಕೊಳ್ಗುಂ ಭ್ರಮಮೆಯ್ದಲೆಂದೊಡದನೇನೆಂಬೆ ಬಾಹಲ್ಯಮಂ೫೩

ವ : ಇಂತುಭಯಬಲಮುಂ ನೆಲನೆಡೆನೆಱೆಯದಂತು ಸಮರಸಮುಚಿತವ್ಯೂಹ ಪ್ರತಿವ್ಯೂಹಸ್ಥಾಪನೆಗಳಿಂ ಕ್ರಮಮನತಿಕ್ರಮಿಸದೆಯೊಡ್ಡಿನಿಲ್ವುದುಮಾಗಳಲ್ಲಿ

ನೆಲನೊಡೆವಂತಿರಂಬರತಳಂ ಮುಱಿವಂತಿರಲೆಂಟುದಿಕ್ಕುಮಂ
ತೊಲಗದೆ ನುಂಗುವಂತೆ ಕುಲಪರ್ವತಮುಂ ಚಳಿಪಂತೆ ಸೈನ್ಯಸಂ
ಕುಳದೊಳಗುಣ್ಮಿ ಪೊಣ್ಮುವ ಮಹಾಧ್ವನಿಯೊರ್ಮೊದಲಲ್ಲಿ ಭೋರೆನಲ್
ಕಲಿಭಟರುರ್ವಿದರ್ ಪಳೆಯಪುಣ್ಗಲೆಗಳ್ ಬಿರಿವನ್ನಮಾಕ್ಷಣಂ       ೫೪

ವ : ಅಂತು ಪ್ರಳಯಕಾಲಪ್ರಕ್ಷುಭಿತಜಳನಿಧಿಧ್ವಾನಮೆಂಬಂತಿರದ್ಭುತಂ ಬೆತ್ತೆರಡುಂ ಪಡೆಯ ರಣಾನಕಸ್ವನಂ ಕಿವಿ ಸದ್ದಂಗಿಡುವಿನಂ ಪರಿಘೂರ್ಣಿಸುತ್ತುಮಿರ ಲೆರಡುಂ ಬಲದ ದೊರೆಗಳ್ ಕಡುಕನಲ್ದೊನಲ್ತು ಕದನಕೇಳೀಕುತೂಹಳವಿಳೋಕನ ಸಮಾಕುಳಿತರಾಗಿ ಕಡೆಗಾಲದ ನಂಜಿನ ಪ್ರಭಂಜನಂ ಬೀಸುವಂತೆ ಕೈವೀಸುವುದುಂ

ಪಿರಿದುಂ ಕೈಮಿಕ್ಕ ಕೊರ್ಬಿಂ ಕುಬುಬುಬುಬುಬುವೆಂದಾಲುತುಂ ಬೊಬ್ಬೆಯೊಂದ
ಬ್ಬರಮುಬ್ಬೆದ್ದೆಯ್ದೆ ಪರ್ವಲ್ ಬಿಡದೆರಡುಬಲಂ ತಮ್ಮೊಳೊಂದಾಗಿಕೂಡಿ
ತ್ತೆರಡುಂ ತಾಳಂಗಳುಂ ಕೂಡುವವೊಲುಲಿಯುತುಂ ಮತ್ತಮಾ ಪೊತ್ತಿನಲ್ಲ
ಚ್ಚರಿಯಿಂ ಪೂರ್ವಾಬ್ಧಿಯುಂ ಪಶ್ಚಿಮಜಲನಿಧಿಯುಂ ಕೂಡುವಂತಾಯ್ತು ಚೋದ್ಯಂ೫೫

ವ : ಆಗಳ್

ಬಳಯುಗಳದಿಂದೆ ಪುಟ್ಟಿದ
ಖಳಧೂಳೀಜಾಳಕಂ ಮುಸುಂಕಲ್ ದೆಸೆಯಂ
ಕುಲಗಿರಿಗಳ್ ಗೆಲೆವಂದವು
ನೆಲದೊಳಗರೆಪೂಳ್ದ ಗುಂಡುಗಲ್ಗಳ ಚೆಲ್ವಂ    ೫೬

ವ : ಮತ್ತಂ

ಕುದುರೆಗಳೊಳ್ ಕುದುರೆಗಳು
ನ್ಮದದಾನೆಗಳೊಡನೆಯಾನೆಗಳ್ ತೇರ್ಗಳೊಳ
ಗ್ಗದ ತೇರ್ಗಳ್ ಕಾಲಾಳ್ಗಳೊ
ಳೊದವಿದ ಕಾಲಾಳ್ಗಳಮಮ ತಾಗಿದರಾಗಳ್    ೫೭

ವ : ಇಂತೆರಸು ಪಡೆಗಳುರವಣಿಸಿ ತಾಗಿ ತಳ್ತಿಱಿವ ಪೊತ್ತಿನೊಳ್

ಪಗಲಿರುಳಾಗಸಂ ನೆಲನಿದೆಂಬ ವಿಕಲ್ಪದನಲ್ಪಕಲ್ಪನಂ
ಬಗೆವೊಡದಾರಚಿತ್ತದೊಳಮಾಗದವೊಲ್ ಶರಪಂಜರಂಗಳಂ
ಮಿಗೆರಚಿಸುತ್ತುಮಚ್ಚರಿಯಿನೆಚ್ಚುಱೆ ಬಿಲ್ವಡೆ ಕಾದುತಿರ್ದದೀ
ಜಗಮುರುತೀಕ್ಷ್ಣ ಬಾಣಮಯಮೆಂಬಭಿಶಂಕೆಯನುಂಟುಮಾಡುತುಂ          ೫೮

ಪಱೆಗಳ ಘೋಷಣಂ ಮೊಳಗು ಕೈದುಗಳ ಪ್ರಭೆ ಮಿಂಚು ಜೋಡಿನೊಳ್
ಮೆಱೆವುರುಪಂಚರತ್ನಕಿರಣಪ್ರಸರಂ ದಿವಿಜೇಂದ್ರಚಾಪಮೆಂ
ತುಱುದೆರಡುಂಬಲಂ ಕಱೆವುತಿರ್ದುದದಂಬಿನ ನಟ್ಟ ಸೋನೆಯಂ
ನೆಱೆಮಳೆಗಾಲಮೆಂಬ ತೆಱದಿಂದಮೆ ಕತ್ತಲಿಸುತ್ತುಮೆತ್ತಲುಂ         ೫೯

ಅಂಬಂ ಹೂಡಿದರೀಗಳೀಗಳಿರದೆರ್ಚರ್ ಬಂದುದಿಂತೀಗಳೆಂ
ದೆಂಬೀ ಖೇದದ ನಿಟ್ಟೆ ಮತ್ತರಿದೆನಲ್ ಪುಂಖಾನುಪುಂಖಂ ಸಮಂ
ತಂಬಂಬಟ್ಟುವಿನಂ ದಲೆಚ್ಚು ಮೆಱೆದರ್ ಬಿಲ್ವಿದ್ಯೆಯಂ ಜೋದರಾ
ದಂ ಬಾಣಂ ತಟವುಚ್ಚಿಪೋಗಿ ತನುವಂ ಬೆನ್ನಲ್ಲಿ ತೋರ್ಪಂದದಿಂ  ೬೦

ಒಂದಂಬಾಗಿಯೆ ಬಂದು ತಾಗುವೆಡೆಯೊಳ್ ನೂಱಾಗಿ ತಟ್ಟುಚ್ಚಿ ಬೆ
ನ್ನಿಂದಂ ತಾಂ ಪೊಱಮಟ್ಟುಪೋಗಿ ಪೆಣನಂ ಸಾಲಿಟ್ಟು ಪೂರೈಸುವಾ
ರ್ಪಿಂದಂ ಮಾಯದ ಬಾಣಮಲ್ಲದಿದು ಮತ್ತೊಂದಲ್ತು ನಟ್ಟಾಕ್ಷಣಂ
ಕೊಂದೇ ತೋರ್ಪುದು ನಂಜಿನಂಬಿದು ದಿಟಂ ತಾನೆಂದು ಕೊಂಡಾಡಿದರ್        ೬೧

ಸಲೆ ಚತುರಂಗಸೈನ್ಯಪದಘಟ್ಟನದಿಂದೊಡೆದಿರ್ದ ಸಂಗರ
ಸ್ಥಳದೊಳೆ ರಕ್ತವೃಷ್ಟಿಸುರಿದೆಲ್ಲೆಡೆಯುಂ ಪದನಾಗೆ ಬಾಣಮೊ
ಕ್ಕಲಿಗನವೊಲ್ವೆಣಂಗಳನೆ ಸಾಲಿಡುತುಂ ಪರಿತರ್ಪ ಬೀಜಸಂ
ಕುಳಮನೆ ಬಿತ್ತಿದತ್ತು ರಿಪುಮರ್ಮಭಿಧಾಗ್ನಿಕಣಾಳಿ ದಂಭದಿಂ         ೬೨

ಸೊಗಯಿಪ ಧರ್ಮಗುಣಂಗಳ
ನಗಲಿದೊಡಾಕ್ಷಣದೊಳನ್ಯರಂ ಕೊಂದವವಂ
ಬುಗಳೆಂದಡೆ ವಿರಹಿತಧ
ರ್ಮಗುಣರ್ ಪೆಱರಂ ವಿಘಾತಿಸುವುದದ್ಭುತಮೇ           ೬೩

ಹೂಣಿಗರೆಲ್ಲರುಂ ನೆರೆದು ಹೂಣಿಸಿಯಾರ್ದೆಸಲಂಬುಗಳ್ ಪರ
ಶ್ರೇಣಿಯನೆಯ್ದೆ ತಾಗೆ ಕರುಳೊಕ್ಕುದು ಕಣ್ಕಳೆದತ್ತು ಪಣ್ಗಳಿಂ
ಶೋಣಿತಪೂರಮುಣ್ಮಿದುದು ಕಾಲ್ಕಡಿಖಂಡಮುಮಾಯ್ತು ಪಾಣಿಯುಂ
ಮಾಣದೆ ಖಂಡಿಸಿತ್ತು ಕಿವಿ ಕಿತ್ತುದು ಕತ್ತರಿಸಿತ್ತು ನಾಸಿಕಂ  ೬೪

ವ : ಅಂತಾಸುರಮಾಗಿ ನಿಂದು ಕಾದುವೆಡೆಯೊಳ್

ಬಿಲ್ಲಬಿತ್ತಿಗಳ ಮೆಯ್ಗಳೊ
ಳೆಲ್ಲಂ ಗಱಿತೋಱುವಂತೆ ಕೀಲಿಸಿನಿಲೆ ಕಡೆ
ಯಿಲ್ಲದ ಶರಂಗಳಾವಳಿ
ಸಲ್ಲಕಿಯಂಕುರಿಸಿದಂತಿರವರೆಸೆದಿರ್ದರ್          ೬೫

ವ : ಮತ್ತಂ

ಶರಜಾಳಂಗಳ್ ತೀರಲ್
ತಿರುಗಳ್ ಪಱಿಯಲ್ ಶರಾಸನಂಗಳ್ ಮುಱಿಯ
ಲ್ಕುರವಣೆಯಿಂ ಬಿಲ್ಲಾಳ್ಗಳ್
ಸುರಿಗೆಗಳುಂ ಕಿಳ್ತು ತಿವಿದು ಕಾದುತ್ತಿರ್ದರ್      ೬೬

ವ : ಬಳಿಯ ಮುಕ್ಕುಡಿಯ ಭೇಷಜವಶದಿಂದವುಂ ಚೆಕ್ಕನೆ ಮುಱಿಯೆ ಗೋಣ್ಮುರಿಗೆ ತಲೆವೊತ್ತು ಬಿತ್ತರಿಸಿ ಕಾದುತ್ತುಮಿರ್ಪಾಗಳ್

ಮುಷ್ಟಾಮುಷ್ಟಿ ಕಚಾಕಚಿ ಪ್ರಕಟದಂಡಾದಂಡಿ ದೀರ್ಘೀಭವ
ದ್ಯಷ್ಟಾಯಷ್ಟಿ ರಥಾರಥಿ ಪ್ರವರಪಾದಾಪಾದಿಯಾಗಿಂತು ಸಂ
ತುಷ್ಟರ್ ವೀರಭಟರ್ ಪರಸ್ಪರಮತೀವೋಗ್ರತ್ತ್ವದಿಂ ಕಾದಿದರ್
ಧಾರ್ಷ್ಟ್ಯಂ ಚಿತ್ತದೊಳುಣ್ಮಿಪೊಣ್ಮೆ ಕುತುಕಂ ನೋಳ್ಪರ್ಗೆ ತೋರ್ಪಂದದಿಂ   ೬೭

ವ : ಆ ಪೊತ್ತಿನೊಳ್

ತಿರಿಪುತ್ತಂ ಲೌಡಿಯಂ ಬಂದಡಸಿ ಬಱಸಿಡಿಲ್ ತಾಗಿ ಪೊಯ್ವಂದಮಂ ಬಿ
ತ್ತರಿಸುತ್ತುಂ ಪೊಯ್ಯಲಾಗಳ್ ನಡು ಮುಱಿದು ಕೊರಲ್ ಕುಗ್ಗಿ ಮೆಯ್ ತಗ್ಗಿ ಮತ್ತಂ
ಚರಣಂ ನುಗ್ಗಾಗಿ ಕೆಯ್ಯುಂ ಕಡಿದುಡಿದು ಬೆರಲ್ಕೂಡೆ ಬೆನ್ನೆತ್ತರೆತ್ತಂ
ಸುರಿವನ್ನಂ ಪೂಣ್ಕೆಯಿಂದೆಕ್ಕಟಿಗರ ಗಡಣಂ ಕಾದುತಿರ್ದತ್ತು ಚೋದ್ಯಂ       ೬೮

ವ : ಅದಲ್ಲದೆಯುಂ

ಗಡಣಿಸಿದೊಡ್ಡಿ ಹಡ್ಡಣದಗುರ್ವಿಸುವೊಡ್ಡಣಮೆಡ್ಡಮಾಗಿ ಸಂ
ಗಡಿಸಿದ ಕೂರಿದಾಯುಧದ ನುಣ್ಬೆಳಗಿಂ ಪೊಳಪೇಱಿ ಕೂರ್ಪ ಮುಂ
ದಿಡೆ ತೊಡೆಸಾಟೆಯಂ ಕೊಡುವ ಬಲ್ಲುಲಿಯಂ ಪರಿಘೂರ್ಣಿಸುತ್ತುಮಿ
ರ್ದೊಡನೆ ಪಣಂಚಿದತ್ತು ಪೊಸಕಾರ್ಮುಗಿಲೊಡ್ಡು ಪಳಂಚುವಂದದಿಂ         ೬೯

ಕಡಿತಲೆಯಂ ಜಡಿಯುತ್ತುಂ
ಕಡಿತಲೆಕಾಱರ್ ಕಡಂಗಿಬಂದುಱೆ ತಮ್ಮೊಳ್
ಕಡಿಖಂಡಮಪ್ಪಿನಂ ಕೈ
ಮಡಗದೆ ಪೊಯ್ದಾಡುತಿರ್ದರಚ್ಚರಿಯಿಂದಂ   ೭೦