ನೆತ್ತಿಯ ಚಿಪ್ಪೊಡೆದು ಸಿಡಿ
ಲ್ದತ್ತೆರ್ದೆಯುಂ ಜನ್ನಿವಾರ ಗಟ್ಟಾಗಿಯೆ ಸೀ
ಳ್ದತ್ತುಱೆ ಕುದುರೆಯ ಬೆನ್ನುಂ
ಕತ್ತರಿಸಿಯೆ ಪೋದುದೊಂದೆ ಘಾಯದ ವಶದಿಂ೭೧

ಕಡಿತಲೆಯಿಂದಂ ತಲೆಯಂ
ಪೊಡೆಯಲ್ ಪಱಿದುರುಳುತಿರ್ದುದಂ ಬಲ್ಪಿಂದಂ
ಪಿಡಿದೆತ್ತಿ ಮುಂಡದೊಳ್ ಮ
ತ್ತಡಸಿಟ್ಟಂ ಕಳಶಮಿಡುವವೊಲ್ ಬೀರಕ್ಕಂ      ೭೨

ಪಱಿದುಬಿದ್ದುರುಳ್ವ ತಲೆ ಬೊ
ಬ್ಬಿಱಿವುತ್ತುಂ ಮರಳೆ ಪಗೆಯನಿದಿರಟ್ಟಿಯೆ ಬಂ
ದುಱೆ ಮೇಲೆವಾಯ್ದು ಮೂಗಂ
ನೆಱೆಕಚ್ಚುತ್ತಿರ್ದು ಪಡೆದುದದ್ಭುತರಸಮಂ    ೭೩

ತಲೆ ಪಱಿದೊಡಮಾ ಮುಂಡಂ
ಕಲಿತನದಿಂ ಸುರಿಗೆಗಿಳ್ತು ತಳ್ತಿಱಿವುತ್ತುಂ ಕೆಲ
ಬಲದ ಸುಭಟರೆರ್ದೆಯೊಳ್
ನೆಲೆಗೊಳಿಸಿತ್ತಂದು ಬೀರಸಿರಿಯಚ್ಚರಿಯಂ       ೭೪

ಬಸಿಱಿಂದೊಕ್ಕ ಕರುಳ್
ಮಿಸುಪೆರಡುಂ ತೊಡೆಯ ನಡುವೆ ತೊಡದಿರ್ದವಲಂ
ಬಿಸುತಿರೆ ಮೆಱೆದಂ ಬೀರಂ
ಪೊಸವೀರಶ್ರೀಗೆ ತೋರಣಂಗಟ್ಟಿದವೊಲ್       ೭೫

ಕೆಂಬಲಗೆಗಳೊಡ್ಡುಗಳಾ
ಡಂಬರಮುಂ ಸಂಜೆಗೆಂಪು ಪಸರಿಸಿತೊಪ್ಪಂ
ತಿಂಬಾದುದದಱೊಳೆಸೆದುದು
ಕೆಂಬಿಸಿಲೆನೆ ರುಧಿರಮಿಶ್ರಖಳ್ಗಮಯೂಖಂ       ೭೬

ವ : ಮತ್ತಂ

ಇಮ್ಮೊನೆಗಾಣ್ಬ ಕಕ್ಕಡೆಗಮಿಕ್ಕಡಿಯಾಗಿಯೆ ಪೊಯ್ವ ಕತ್ತಿಗಂ
ಘರ್ಮನೆ ಜೀವಮಂ ಕೊಳ್ವ ಪಿಂಡಿವಳಕ್ಕಮನೇಕರಂ ತಗು
ಳ್ದೊರ್ಮೊದಲಲ್ಲಿ ಬೀಳಿಸುವ ಕುಂತಗಣಕ್ಕಮಡುರ್ತು ಪೊಯ್ವ ಬ
ಲ್ಬೆರ್ಮಟಿಕಾಚಯಕ್ಕೆ ಪವಣಿಲ್ಲದಱಿಂದತಿಭೀಷಣಂ ರಣಂ         ೭೭

ವ : ಇಂತಗುರ್ವುವಡೆದಿರ್ವಲದ ಪಾಯ್ದಳಮೆಲ್ಲಮಲಗಲಗಿನೊಳ್ ಪಳಂಚಿ ತಾಗಿ ಪಲವುಂ ತೆಱದಿನಿಱಿವ ಬಿನ್ನಣದೊಳ್ ಮೆಱೆದು ಕೃತಾಂತನ ಕೋಣಂಗಳೆಂಬಂತೆ ತಮ್ಮೊಳೊರ್ವೊರ್ವರ್ ಮಮ್ಮಳಿಯಾಗಿ ಪೋರುತ್ತು ಮೆಚ್ಚುಮಿಱಿದುಂ ಕುಱಿಗಳಂ ತಱಿವಂತೆ ತತ್ತಱಂದಱಿಯೆ ದೆಸೆದೆಸೆಗೆ ಮಸಗಿ ಪಾಱುವ ಪಣ್ದಲೆಗಳಿಂದಂ ಸುತ್ತಲುಂ ಸೂಸಿ ತೋಱುವ ಕಣ್ಣಾಲಿಗಳಿಂದಂ ಕಡಿಖಂಡಂಗಳಾದ ಮೆಯ್ಗಳಿಂದಂ ಪಿಂಡು ಗೊಂಡುಬಿಳ್ದು ಕೀಳ್ತುವ ತನಿಗಂಡಂಗಳಿಂದಂ ತಂಡುಮುಂಡಾಗಿ ಮುಱಿದುಬಿಳ್ದ ಮೂಳೆಗಳ ಬಳಗದಿಂದಂ ಕಡುರೌದ್ರಮಾಗಿ ಕಾದಿ ಸಕಳರಾಜಕುಮಾರಕರ ಪದಾತಿ ಬಲಮೆಲ್ಲಂ ಪಡಲ್ವಟ್ಟಿಂ ಬಳಿಯಂ ತೆಱಪುವಡೆದೀರೊಡ್ಡಿನ ತೇರೊಡ್ಡುಗಳ್ ಸಾರಥಿ ಪರಿಪ್ರೇರಣವಶದಿಂದೊಂದೊಂದಂ ಪತ್ತೆಸಾರ್ಚಿ ಪೆಟ್ಟುವೆರ್ಚಿದಿರ್ಚಿ ತಾಗಿದಾಗಳ್

ರಥಿಗಳೊಡನೆಯ್ದೆ ರಥಿಗಳ್
ಪೃಥುತರಸಾರಥಿಗಳೊಡನೆ ಸಾರಥಿಗಳ್ ಪರಿ
ಮಥನದೆ ಪಳಂಚಿದರ್ ನೆಱೆ
ಪೃಥುವೀಜನಮಂದು ಮೆಚ್ಚಿಕೊಂಡಾಡುವಿನಂ೭೮

ಅತಿರಥರುಂ ಮಹಾರಥ ಸಮಾನರಥಾರ್ಧರಥರ್ ಪರಸ್ಪರಂ
ಕುತುಕದೆ ತಾಗಿ ತಳ್ತೆಸೆ ರಥಾಂಗಮುರುಳ್ದುದು ಕೀಳ್ ಕಳಲ್ದುದು
ನ್ನತ ಜಯಕೇತುಗಳ್ ಮುಱಿದುವಚ್ಚು ಸಡಿಲ್ದುದು ವಾಜಿ ಬೀಳ್ದುದೆ
ಯ್ದತಿಶಯಚೋದಕಂ ಮಡಿದನಾಕ್ಷಣದೊಳ್ ಶರಜಾಳಘಾತದಿಂ   ೭೯

ಸಾರಥಿ ಸತ್ತೊಡಮೊರ್ವನ
ತೇರಂ ಚೋದಿಸುತುಮುರ್ಬಿ ಕಾದುತ್ತುಂ ರಥಿ
ಮಾರಣಮನೆಯ್ದಿಸಿದನಂ
ದಾರಯೆ ಪಗೆವನುಮನಶ್ವಮಂ ಸಾರಥಿಯಂ    ೮೦

ಎಚ್ಚಂಬಂ ಕಡುವೇಗದಿಂದೆ ಪೆಱಗೆಚ್ಚಂಬೆಯ್ದಿ ತಾಗುತ್ತಿರಲ್
ಪಚ್ಚಂತಾಗಿಯೆ ಪಿಳ್ಕಿನಿಂ ಮೊನೆವರಂ ಸೀಳ್ತಂದು ಸರ್ವಾಂಗಮಂ
ಚುಚ್ಚಿಂತಿಮ್ಮಡಿಯಾಗಿ ನಟ್ಟು ಕಡೆಗಣ್ಣಿಂದಿರ್ದುದಂ ಕೀಳ್ತು ಮ
ತ್ತೆಚ್ಚಂ ತನ್ನ ಸರಲ್ಗಳುಂ ತವೆ ಮಹಾವೀರಂ ರಥಾರೂಢಕಂ         ೮೧

ನೊಸಲಲ್ಲಿ ನಟ್ಟ ಶರಮಂ
ಮಿಸುಗದೆ ನಾಂ ಕೀಳೆ ಕೂಡೆ ರಕ್ತಪ್ರಸರಂ
ಮಸಗಿ ಕೆಂಪಾಗಿ ತೋಱಲ್
ನೊಸಲುರಿಗಣ್ದೆಗೆದ ಶಿವನವೊಲ್ ಭಟನಿರ್ದಂ  ೮೨

ವ : ಇಂತು ರೋಮಂ ರೋಮಂದಪ್ಪದೆ ಸರಳ್ಗಳ್ ನಾಂಟುವಂತೆಚ್ಚಾಡಿ ರಥಾರೂಢರೆಲ್ಲಂ ಪರಿಪೂರ್ಣಕಥನ ಮನೋರಥರಾಗೆ ರಾಜಕುಮಾರರ ತೇರೊಡ್ಡುಗಳ್ ಗಾಳಿಗೊಡ್ಡಿದ ಮುಗಿಲೊಡ್ಡುಗಳಂತೆ ತಾಱುಂತೀರಾಗಿ ಪರಿದುಪೋಗಲೊಡಂ

ರಣಕೇಳೀದೋಹಳಕ್ಕರ್ಥಿಗರೆನಿಸುವ ರಾವುತ್ತರೇಕೈಕವೀರಾ
ಗ್ರಣಿಗಳ್ ತಾವೇಱಿ ಪೊಂಬಕ್ಕರಿಗಳಿನೆಸೆವಶ್ವಂಗಳಂ ಬಿಟ್ಟೊಡಂದಾ
ಕ್ಷಣದೊಳ್ ಸಂಗ್ರಾಮವಾರಾಶಿಯ ತೆರೆಗಳಿವೆಂದೆಂಬಿನಂ ಬೇಗದಿಂದಂ
ಕುಣಿವುತ್ತುಂ ಕೂಡೆ ಸಂಚಾರಿಸಿಯೊಡನೊಡನೋಡುತ್ತುಮೆಯ್ದಿರ್ದುವೆತ್ತಂ  ೮೩

ವ : ರೌದ್ರರಸಮೆ ಮೇರೆದಪ್ಪಿ ಕವಿತಪ್ಪಂತುಭಯಬಲತುರಂಗಿಗಳ್ ಕವಿತಪ್ಪುದುಂ

ಶಿಕ್ಷಿತ ವೀರತುರಂಗಮ
ಲಕ್ಷಂ ಮೋಹರಿಸಿ ನಿಂದು ಪಸರಿಸಿ ಸಂಗ್ರಾ
ಮಕ್ಷಮೆಯೊಳ್ ಸಂಚಾರಿಸು
ವಾಕ್ಷಣಮಾ ಧರೆ ತುರಂಗಮಯವಾಯ್ತು ಕರಂ೮೪

ವ : ಇಂತೆರಡುಂ ಪಡೆಯ ದೊಡ್ಡಂಗಳಾದ ಕೂರಡ್ಡಣಂಗಳ ಪೊಳೆಪಿಂದೆಡ್ಡ ಮಾದವಡ್ಡರಾವುತ್ತರ ಮೊತ್ತಮೊಡ್ಡುಗೊಂಡು ಮಮ್ಮಳಿಯಾಗಿ ಕಾದುವ ಬೇವಸ ದೆಸಕದಿಂ ಮಾಮಸಕಂ ಮಸಗಿ ತಮ್ಮೊಳೊರ್ವೊರ್ವರ ದುರ್ವಹದೋರ್ವಲದಗುರ್ವಂ ಮೆಱೆವುದಕ್ಕರ್ಥಿವೆಟ್ಟು ಮೂದಲೆಯಂ ಮುಂದಿಟ್ಟು ಮರಳೆ ಮರಳೆ ಬಿಡಿತಮಂ ಬಿಟ್ಟು ಪೊಯ್ವಾಗಳ್

ಒರ್ವಂ ರಾವುತ್ತರಾಯಂ ಕುನಿದು ಕುದುರೆಯಂ ಬಿಟ್ಟು ಸಂಗ್ರಾಮಕೇಳೀ
ಗರ್ವಾವಷ್ಟಂಭಕಂ ಬೊಬ್ಬಿಱಿದು ರಭಸದಿಂ ಕೀಳ್ತ ಕೂರ್ವಾಳ ಬಾಯಿಂ
ದುರ್ವಿಂ ಮೇಲ್ವಾಯ್ದುಪೊಯ್ಯಲ್‌ತಲೆಯೊಡೆದುಮಿದುಳ್ ಚಲ್ಲಿ ವಕ್ಷಸ್ಥಲಂ ಸೀ
ಳ್ದಿರ್ಭಾಗಂಬೆತ್ತುದೆಯ್ದಿಕ್ಕಡಿವಡೆದೊಡನೇಕಕ್ಷಣಂ ಬಿಳ್ದುದಶ್ವಂ  ೮೫

ವ : ಇಂತು ಪಣಿದಂ ಪೊಯ್ವಂತೆ ಪೊಯ್ದಾಡುತ್ತುಮಿರ್ಪುದುಂ

ಕರವಾಳೊಳ್ ಕರವಾಳ್ ಪಣಂಚಿ ವಿಕರಾಳಂಬೆತ್ತು ಪೊಯ್ದಾಡಲಂ
ದೊರಸಿಂದಂ ಕಿಡಿಗಳ್ ತಗುಳ್ದು ಸುರಿಯಲ್ ಭೋರೆಂದು ಸಂಗ್ರಾಮದು
ರ್ವರೆಯೊಳ್ ಕೆಂಡದ ವೃಷ್ಟಿ ತಾಂ ಪ್ರಳಯದೊಳ್ ಪೊಯ್ವುತ್ತುಮಿರ್ದಂದದಿಂ
ಪಿರಿದೊಂದದ್ಭುತಮಾಯ್ತೆರಳ್ಪಡೆಯ ವಾಹವ್ಯೂಹದುಗ್ರಾಹವಂ೮೬

ವ : ಅಂತು ಖಳ್ಗಾಖಳ್ಗಿಯಾಗಿ ಖಳ್ಗಿಗಳದ್ಭುತಂಬೆತ್ತು ಕಾದುತ್ತುಮಿರ್ಪುದುಂ

ಪಾಯಿಸೆ ಪೊಯ್ದಡೊಳ್ಕುದುರೆ ಜಾಣತಮೋತ್ತಮತೀವಶಿಕ್ಷಣೋ
ಪಾಯವಿಶೇಷದಿಂದೆ ಮಸೆಮುಟ್ಟದವೊಲ್ ತನಗಂ ಸ್ವವಾಜಿಗಂ
ಘಾಯಮನೆಯ್ದೆಕಾಯ್ದು ಭಟರಟ್ಟೆಗಳಾವಳಿಯಾಡುತಿರ್ಪಿನಂ
ಭೀಯುಮನೀವ ಪಣ್ದಲೆಗಳುಂ ನೆಱೆಬಿಳ್ದವು ಯುದ್ಧಭೂಮಿಯೊಳ್        ೮೭

ಲೆಕ್ಕಮಣಮಿಲ್ಲ ತಾಗುವ
ಚಕ್ರಂಗಳ್ಗೆಯ್ದುವಮಮ ಸಬಳಂಗಳ್ಗಂ
ಮಿಕ್ಕು ಕೊಳ್ವಿಟ್ಟಿಗಳ್ಗಂ
ಕರ್ಕಶದಿಂ ಸುತ್ತಿಕೊಳ್ವ ಪಾಶಂಗಳ್ಗಂ  ೮೮

ವ : ಮತ್ತಂ

ಧರಣೀಶಾದೇಶದಿಂ ಬಂದಧಿಕರೆನಿಪ ರಾವುತ್ತರುಗ್ರತ್ತ್ವಮಂ ಪೆ
ತ್ತರರೇ ಕಾಯ್ ಕಾಯೆನುತ್ತುಂ ಮಿಗೆ ಕುದುರೆಗಳಂ ಬಿಟ್ಟು ಪೊಯ್ವಲ್ಲಿ ಶೌರ್ಯೋ
ದ್ಧುರನೊರ್ವಂ ಕಾಯ್ವುದೆಂಬೀ ಬಿರುದೆನಗೆ ನಿಜಂ ತಪ್ಪದೆಂದಾ ತುರುಷ್ಕೋ
ತ್ಕರ ಶೂರಾಶ್ವಂಗಳಂ ತಾಂ ಪಿಡಿದಿರದವರಂ ಬಿಟ್ಟು ಕೀರ್ತೀಶನಾದಂ          ೮೯

ವ : ಆ ತುರಂಗಮಸಂಗ್ರಾಮಸಮಯದೊಳರಸುಮಕ್ಕಳ ತುರಂಗಿಗಳೆಲ್ಲಂ ಭಂಗಂಬಡೆವಾರಣಾರೋಹಕರೆಲ್ಲಂದೋರಣೆಗೊಂಡೀರೊಡ್ಡಿನಾನೆಗಳಂ ಚೋದಿಸು ವುದುಂ

ಱಂಚೆಗಳಂ ಪಣ್ಣಿದ ಮದ
ಸಂಚಯದಿಂದೆಸೆವ ಬಿರುದಿನಾನೆಗಳದಱೊಳ್
ಸಂಚಾರಿಸುವೆಡೆಯೊಳ್ ಸಮು
ದಂಚಿತ ಗಜಮಯಮುಮಾಯ್ತು ಸಂಗರರಂಗಂ            ೯೦

ಸೊಗಯಿಪ ವಜ್ರದಂಕುಶದಿನೊತ್ತಿ ಕುಕಿಲ್ದಿದಿರಾಗಿ ನೂಂಕೆ ವಾ
ಯುಗೆ ಗಱಿಮೂಡಿದಂತೆ ಪರಿತಂದೆರಡುಂ ಪಡೆಯಾನೆಗಳ್ ಮದಂ
ಮಿಗುತಿರಲಟ್ಟಿ ಮುಟ್ಟಿ ಬಿಡದೊಂದಱೊಳೊಂದುಱೆ ಕೀಱಿ ತಾಗಿ ಕೆ
ಯ್ಮಿಗೆ ಮೊಗಮಿಕ್ಕಿ ನಿಂದು ತಲೆಮುಟ್ಟವು ತಮ್ಮೊಳತೀವರೌದ್ರದಿಂ            ೯೧

ವ : ಆಪೊತ್ತಿನೊಳ್ ನಿಷಾದಿಗಳೆಲ್ಲಂ ಸಮೀಪವಶದಿಂ ಬಿಲ್ಗಳ್ ಸಲ್ಲದೊಡೆ ತಕ್ಕಿನೆಕ್ಕತುಳದಿಂ ಕೀಳ್ತ ಕಟಾರ ಸುರಿಗೆ ಹಿಡಿಯಂಬುಗಳಿಂ ಕುತ್ತಿಯುಂ ಖಳ್ಗ ಮುದ್ಗರ ವಜ್ರ ಮುಷ್ಟಿ ಪರಶು ಪಾಶಾಂಕುಶಾದಿ ನಿಶಿತಸ್ತ್ರಂಗಳಿಂದಂ ಪೊಯಿದು ಭಯಂಕರಾ ಕಾರಮಾಗಿ ಕಾದುವಾಗಳ್

ಮಿಗೆ ಬೆಂಬತ್ತುವ ಕೂಡೆ ಮೆಯ್ದೆಗೆವ ಬಲ್ಪಂತೋರ್ಪ ಕಾಯಿದೊತ್ತು
ಬ್ಬೆಗಮಂ ಮಾಳ್ವಿರದಟ್ಟಿಯಪ್ಪಳಿಸುವ ವ್ಯಾಘಾತಮಂ ವಂಚಿಪು
ಜ್ವುಗದಿಂ ಮಾರ್ಮಲೆಯುತ್ತುಮಿರ್ಪ ತೆಱಪಂ ಕಂಡಾಂಪ ಜಾಣ್ ತಮ್ಮೊಳೆ
ಯ್ದೊಗೆಯಲ್ಕಿರ್ಬಲದಂಕದಾನೆಗಳ ಮೊತ್ತಂ ಕಾದಿದತ್ತದ್ಭುತಂ      ೯೨

ದಿಕ್ಕರಿಗಳ್ ದಿಕ್ಕರಿಗಳೊ
ಳೆಕ್ಕೆಕ್ಕೆಯಿ ಮೊಗಮನಿಕ್ಕಿ ಕಾದುವ ತೆಱದಿಂ
ಸೊಕ್ಕಾನೆಗಳಚ್ಚರಿಯಿಂ
ಸೊಕ್ಕಾನೆಗಳೊಳ್ ಪಣಂಚಿ ಕಾದುತ್ತಿರ್ದವ್     ೯೩

ಕೋಡುಗಳಗ್ರದಿಂದಿಱಿಯೆ ಮಸ್ತಕಪಿಂಡದ ಶೋಣಮೌಕ್ತಿಕಂ
ಗೂಡಿದ ಕೊಳ್ಮಿದುಳ್ ಕವಿದು ಸೂಸುತಿರಲ್ ಭರಿಕೆಯ್ಯ ಖಳ್ಗದಿಂ
ಕೋಡಿಡುವಂತು ಪೊಯ್ಯೆ ಕರಿಣೀಪರಿಶಂಕೆಯಿನಂದು ಕೋಪಮಂ
ಮಾಡದೆ ಲಾಲನಕ್ಕುವಸಂ ಬಿಡದಾದುದದೊಂದು ಸಿಂಧುರಂ        ೯೪

ಕುಡಿಮಿಂಚಂ ದಂತಕಾಂತಿಪ್ರಸರಮೆಸಗೆ ದುರ್ಗರ್ಜನಸ್ಫೂರ್ತಿಯಂ ಮುಂ
ದಿಡೆ ಭೂಯೋಬೃಂಹಿತಂ ಪೆರ್ಮಳೆಯನುರುರಥಾನ್ಯೋನ್ಯಸಂಘಟ್ಟದಿಂ ಬ
ಲ್ಕಿಡಿಗಳ್ ಬೀಳ್ತಪ್ಪುವಂದೆಯ್ದೊಡರಿಸೆ ಭಯಮಂ ರಾಜಹಂಸಾಶಯಂ ತ
ಳ್ತಡರಲ್ ಸೊಕ್ಕಾನೆಗಳ್ ತಾಗಿದುವು ವಿಳಯಕಾಲಾಂಬುವಾಹಂಗಳನ್ನಂ      ೯೫

ವ : ಅಂತು ದಂತಿಘಟೆ ದಂತಿಘಟೆಗಳೊಳಾಂತು ತಿಂತಿಣಿಗೊಂಡು ದಂತಾದಂತಿಯಾಗಿ ದುರಂತತಮಯುದ್ಧಂಗೆಯ್ವುತ್ತುಮಿರ್ಪುದುಮಾ ಸೊಕ್ಕಾನೆಗಳ ಮೇಲೆ ಕುಳ್ಳಿರ್ದು

ಮೊನೆಯಂಬಂ ದೊಣೆಯಿಂದಮುರ್ಚಿ ತಿರುವಾಯೊಳ್ ಬೇಗದಿಂ ಸಾರ್ಚಿ ತ
ನ್ಮನಮುಂ ದಿಟ್ಟಿಯುಮೊಂದುಗೂಡಿ ಗುಱಿಯೊಳ್ ಮೆಯ್ವೆರ್ಚಿರಲ್ ಜೋದರಂ
ದೆನಸುಂ ತಮ್ಮೊಳಗೊರ್ವರೊರ್ವರುಱದೆಯ್ದೆಚ್ಚಾಡಿದರ್ ಕೊಂಡು ತೊ
ಟ್ಟನೆ ಬೆನ್ನಿಂ ಪೊಱಮಟ್ಟು ಪೋಪ ಸರಲಿಂ ಮುಂಪೋಪಿನಂ ಜೀವನಂ        ೯೬

ವ : ಆಗಳ್

ಕವಲಂಬುಗಳಿಂದೆಚ್ಚಡೆ
ತವೆ ಪಱಿದುಱೆ ಸೀಸಕಂಗಳಿಕ್ಕಿದ ತಲೆಗಳ್
ಕವಿದವು ರಾಹುಸಮಾವೃತ
ರವಿಮಂಡಳಿಗ[ಳ]ವೊಲಿಳೆಗೆ ಗಗನಸ್ಥಳದಿಂ       ೯೭

ವ : ಮತ್ತಮಾಹವಕ್ಕೆ ರಕ್ಕಸರೆನಿಪಂಗರಕ್ಕರ ಪಡೆ ಕಡಿಕೆಯ್ದು ಕಟ್ಟಾಳ್ತನಂ ಕೈಮಿಕ್ಕು ಕೆಕ್ಕಟಗೆರಳಿ ತೆಕ್ಕದೆ ನಿಂದು ಕಾದುತ್ತುಮಿರೆ

ಕರಿಘಟೆಗಳ ಕಾಲ್ಗಾಪಿನ
ನರರಿಕ್ಕೆಲದಲ್ಲಿ ನಿಂದು ಕೂರ್ಕೈದುಗಳಂ
ತಿರಿಪುತ್ತುಂ ತಳ್ತಿಱಿದರ್
ಕುರುಳ ಪಿಣಿಲ್ ತೆಪ್ಪಮಾಗೆ ನೆತ್ತರ ತೊಱೆಯೊಳ್        ೯೮

ವ : ಆಸಮಯದೊಳ್

ಭರಿಕೈಗಳ್ ಪಱಿದುರುಳಲ್
ಪರಿರಂಜಿಸಿದವು ಮಹಾವರಾಹಂಗಳವೊಲ್
ಕರಿಣಿಗಳಂತಾದವು ಕೋ
ಡೆರಡುಂ ನೆಱೆಮುಱಿದು ಬೀಳೆ ಕೆಲವು ಗಜಂಗಳ್          ೯೯

ಕಡುಕೆಯ್ದು ಪಿಂದಣೆರಡುಂ
ತೊಡೆಗಳ್ ಕತ್ತರಿಸಿ ಕುಕ್ಕುಱಿಸಿ ಕುಲ್ಳಿರ್ದಾ
ಗಡೆ ಪಡೆದನೇಕದಂತನ
ಕಡುಚೆಲ್ವಮನಾನೆಗಾಳೆಗಂ ಚಿತ್ರತರಂ೧೦೦

ವ : ಇಂತನಂತಮಹೀಕಾಂತರ ಚಾತುರ್ದಂತಬಲಮೆಲ್ಲಮಂತಕಂಗಾಹಾರ ಮಪ್ಪಂತೆಚ್ಚು ಮಿಱಿದು ಮುನ್ನೆಂದುಮಿಂತಪ್ಪ ಕಾಳೆಗದ ಕೋಳಾಹಳಮಂ ವಿದ್ಯಾಧರ ದುರ್ದೈತ್ಯರೊಳಾದೊಡಂ ಕಂಡುದಿಲ್ಲೆಂಬಂತತೀವಕೌತೂಹಳಂ ಕೈಮಿಗೆ ಕಾದುವುದುಂ

ಜವದೇವಂ ತಣಿಯುಂಡು ರಣಮಂ ಮತ್ತಕ್ಕಿಸಲ್ಕಾಱದು
ರ್ಜವದಿಂ ಕಾಱಿದ ಮಾಳ್ಕೆಯಿಂದದು ಕರಂ ಭೀಭತ್ಸಮಂ ತಾಳ್ದಿ ನೋ
ಳ್ಪವರಿಂಗಂದತಿರೌದ್ರಮಾಯ್ತು ಶಾಕಿನೀಡಾಕಿನೀ
ನಿವಹಂ ಭೂತಪಿಶಾಚರಾಕ್ಷಸಗಣಂ ಸಂತೃಪ್ತಮಾಯ್ತಾಕ್ಷಣಂ        ೧೦೧

ವ : ಇಂತಗುರ್ವುವಡೆದ ಸಂಗ್ರಾಮದುರ್ವಿಯೊಳ್

ಒಂದೆಡೆಯಲ್ಲಿ ಪರ್ದುಗಳ ಪಿಂಡುಗಳಾಡುತುಮಿರ್ದವಲ್ಲಿ ಮ
ತ್ತೊಂದೆಡೆಯಲ್ಲಿ ವೀರಭಟರಟ್ಟೆಗಳಾಂತುರಗಂಗಳಟ್ಟೆಗಳ್
ಕುಂದದಿಭಂಗಳಟ್ಟೆವಾಡುತುಮಿರ್ದುವು ತಮ್ಮ ಲೀಲೆಯಿಂ
ದಂದು ಪೆಣಂಗಳಿಂದೆ ರಣಮಂಡಳಮಾದುದು ರೌದ್ರಮಂಡಳಂ      ೧೦೨

ವ : ತದನಂತರಮಖಿಳರಾಜಕುಮಾರಕರ ಪಡೆ ಪಡಲ್ವಟ್ಟು ಸೊಡರ್ಗುಡಿ ಯೊಳೆಱಗಿದ ಪತಂಗದಂತೆ ವಿನಾಶಮನೆಯ್ದೆ ಕುದುರೆಗಳ್ ಬಿಸಿಲ್ಗುದುರೆಗಳಂತೆ ಮಾಯವಾಗಿ ದ್ವಿರದಂಗಳ್ ನಿದಾಘಸಮಯದ ನೀರದಂಗಳಂತೆ ಪರೆದುಪೋಗಿ ಬೆದಱಿ ಬೆಂಗೊಟ್ಟು ಕೆಟ್ಟೋಡುವುದಂ ಕಂಡು ನಿಜಸೈನ್ಯಮೆಲ್ಲಂ ಶೂನ್ಯಮಾದುದಱಿಂ ಮನ್ಯುಮಿಕ್ಕು ಕಳಿಂಗದೇಶಾಧೀಶ್ವರಂ ಪ್ರತಿಜ್ಞಾರೂಢನುಂ ಮದಗಜಾರೂಢನುಮಾಗಿ ಕರಿಸಮಾರೂಢ ಸಕಳರಾಜಕುಮಾರಕರ್ ಬೆರಸಿ ಬರ್ಪುದುಂ ಸುಷೇಣನೆಂಬ ಸೇನಾಧಿಪತಿ ಕಂಡು ಬಿರುದಿನ ಪಾಳಿಕೇತನಂಗಳಿಂದಿವಂ ಕಳಿಂಗಭೂಪಾಳಕನೆಂದಱಿದು ಸುಟ್ಟಿಸಿತೋಱಿ ತಾನುಮಿನ್ನೆನ್ನಯ ಕೂರ್ಪನಿಲ್ಲಿ ತೋರ್ಪೆನೆಂದು ಮುಂದಣ ತಂತ್ರಮಂ ಕೆಲಕ್ಕೆ ತೊಲಗಿಸಿ ದರ್ಪದಿಂದಿದಿರಾಗಿ ವಾರಣಮನಣೆದುನೂಂಕಲೊಡಂ

ಕೆಲರೆಚ್ಚರ್ ಕೆಲರಿಱಿದರ್
ಕೆಲರಿಟ್ಟರ್ ಕೆಲಬರಮಮ ಮೇಲ್ವಾಯ್ದುದು ಱೆ ಮ
ಮ್ಮಳಿಯಾಗಿ ತಾಗಿ ಪೊಯ್ದರ್
ಬಲದೊಡೆಯನ ಪಡೆಯನಾ ಕುಮಾರಕರರೆಬರ್            ೧೦೩

ಘನಬಾಹಾಸಾಹಸಂಗುಂದದೆ ಭಟಸಟುಳಂ ಕೋಪದಾಟೋಪದಿಂದೊಂ
ದಿನಿಸುಂ ಮುಂಗಾಣದಾಲ್ದುಬ್ಬರಿಸಿಯೊಡನೆ ಮೇಲ್ವಾಯ್ತು ಕಾದುತ್ತುಮಿರ್ದ
ತ್ತನುವಾಗೆಂದೆಂದು ಮುಮ್ಮೂದಲಿಸಿ ನುಡಿಯುತುಂ ಮತ್ತಮಾತಂಗಯೂಥಂ
ಕುನಿದುರ್ವುತ್ತಿರ್ದ ಪಂಚಾಸ್ಯನ ವದನದ ಮೇಲ್ವಾಯ್ದು ತಾಂ ಕಾದುವನ್ನಂ೧೦೪

ಹೂಣ ಹೊಕ್ಕಿಱಿವುತಿರ್ದ
ಕ್ಷೋಣೀಶಕುಮಾರರೆಲ್ಲರುಂ ತಂತಮ್ಮ
ಕ್ಷೂಣ ಚತುರಂಗಸೈನ್ಯ
ಶ್ರೇಣಿಕೆವೆರಸಾ ಚಮೂಪಬಲದೊಡನದಟಿಂ     ೧೦೫

ವ : ಆಗಳಾ ಪತಾಕಿನೀಪತಿ ಪ್ರಕ್ಷೋಭಿಸಿ ಕಲ್ಪಾಂತಕಾಲಕೃತಾಂತನೆಂದು ಕರಾಳಲುಲಾಯಮ ನೇಱಿ ವಿಸಟಂಬರಿಯಿಸುವನಂತೆ ತಾನುಂ ನಿಜಾರೂಢವ್ಯಾಳ ಶುಂಡಾಳಮಂ ಕೂರಂಕುಶದಿಂದಣೆದೊತ್ತಿನೂಂಕಿ ಕೀಱಿ ಬಿಟ್ಟು ವಿಸಟಂಬರಿಯಿಸೆ ನೀಡಿಮೆಟ್ಟಿಯೆಂಟುಂ ದೆಸೆಯೊಳ್ ತನ್ನ ಮಯಮಾಗಿಯೆ ಪರಿದು

ಮೆಟ್ಟಿ ಕೆಲಂಬರಂ ಕೆಲಬರಂ ತುಳಿದಗ್ರನಖಂಗಳಿಂದೆ ಸೀ
ಳ್ದೊಟ್ಟಿ ಕೆಲಂಬರಂ ಕೆಲಬರಂ ಕರದಿಂ ಪಿಡಿದೆತ್ತಿ ಹಾಯ್ಕಿಯೆ
ಬ್ಬಟ್ಟಿ ಕೆಲಂಬರಂ ಕೆಲಬರಂ ಕಡೆವಾಯೊಳವುಂಕಿ ನಿಂದರಂ
ಘಟ್ಟಿಸಿ ಕೋಳ್ಗಳಿಂದಿಱಿದು ಕೊಂದುದು ಶೂರಸುಷೇಣವಾರಣಂ೧೦೬

ವ : ಮತ್ತಂ ಕಾಲನ ಕೆಯ್ಯ ಪ್ರಚಂಡಕಾಳದಂಡದಂತಿರುಗ್ರತೆವೆತ್ತ ಭರಿಕೆಯ್ಯ ಖಳ್ಗದಿಂ ಪೊಯ್ದು ತಟ್ಟುಂತಾಱುಂಗೆಡಪಿ ಪರಿಪಂಥಿಗಳ ಪೃಥುಳಪೃತನಾ ಪ್ರತಾನಮಂ ಕಲ್ಲಗಾಣನ ದೊಣೆ ಯೊಳಾಡುವ ಕಣೆಯ ಬಾಯ್ಗೆ ಸಂದ ಜೋಳದ ಕಳಿಕೆಯಂತೆ ನುಗ್ಗುನುಱಿಮಾಡುತ್ತು ಮಿರ್ಪೆಡೆಯೊಳ್

ಅರಿದೆನಿಪ ಪಲವು ಶಸ್ತ್ರೋ
ತ್ಕರವಿದ್ಯಾಪ್ರೌಢಿಯಂ ನಿಮಿರ್ಚುತ್ತಿರ್ದಂ
ನೆರೆದುನೋಡುವ ಸುರಾಸುರ
ರರೆಬರ್ ಬಾಪ್ಪೆಂದು ಮೆಚ್ಚಿ ಕೊಂಡಾಡುವಿನಂ೧೦೭

ಇಱಿದು ಕೆಲಂಬರಂ ತಡೆಯದೆಚ್ಚು ಕೆಲಂಬರನೆಯ್ದೆ ತತ್ತಱಂ
ದಱಿದು ಕೆಲಂಬರಂ ಜವದಿನಿಟ್ಟು ಕೆಲಂಬರನಂದು ಕೊಂದು ನಾ
ಡೆಱೆಯರ ಮಕ್ಕಳಂ ತವಿಸಿ ತನ್ನಯ ದೋರ್ವಲದೊಂದುಗರ್ವಮಂ
ಮೆಱೆದನದೇನುದಾತ್ತನೋ ಸುಷೇಣಚಮೂಪನವಾರ್ಯವೀರ್ಯಕಂ          ೧೦೮

ವ : ಆ ಸಮಯದೊಳ್

ಮಿಗೆ ಪೊಸಪುಣ್ಗಳಿಂದುಗುವ ನೆತ್ತರ ಪೂರಮದುರ್ವಿ ಭುರ್ಭುಗಿಲ್
ಭುಗಿಲೆನಲುಣ್ಮಿ ಪೊಣ್ಮಿ ಸಮರಾಂಗಣಭೂಮಿಯೊಳೆಯ್ದೆ ತೀವಿರಲ್
ಬಗೆಗೊಳಿಸಿತ್ತು ಕೆಂಗೆಱಿಯವೋಲದಱೊಳ್ ಮುಱಿದಾಯುಧಾಳಿ ಶೋ
ಭೆಗೆ ನೆಲೆಮಾಯ್ತು ಮೇಗೆಪೊಳೆದಾಡುವ ಮೀಂಗಳ ಪಿಂಡಿದೆಂಬಿನಂ೧೦೯

ವ : ಇಂತು ಕಟ್ಟಾಸುರಮಾಗಿ ಕಾದುವ ಕಳದೊಳ್ ಕಡಿಖಂಡವಾಗಿ ಪೊಯ್ದಾಡಿ ಬಸವಳಿದು ಕೋಡನೂಱಿ ಕೆಡೆದು ಸತ್ತ ಕೂರಾನೆಗಳಾವಳಿ ಕಾಳ್ಕಿಚ್ಚಿನ ದಳ್ಳುರಿ ಸುತ್ತಿಮುತ್ತಿ ಪತ್ತಿದ ಬೆಟ್ಟುಗಳಿಟ್ಟಳಮೆಂಬತಿರ್ದುದು ಸರ್ವಾಂಗದೊಳೆಡೆದೆಱ ಪಿಲ್ಲದೆ ಕೊಂಡು ತೋಱುವ ಬಲ್ಲೇಱಗಳ ನೆಱವಣೆಯಿಂ ತಾಱುಂತೀಱಾಗಿ ಬೀಳ್ದು ಸತ್ತ ಕುದುರೆಗಳ ಬಳಗಂ ವಹ್ನಿಜ್ವಾಲಾಕಲಾಪಂ ಬಳಸಿ ಸುಡುವ ಕೇಸಿಟ್ಟಗೆಯೊಟ್ಟಿಲೋಳಿಯೆಂಬಂ ತಿರ್ದುದು ಕೊಂಡ ನೆಲನಂ ಕೊಡೆನೆಂಬ ಚಲದಿಂ ಬಲಿದಿರ್ದ ತೊಡೆ ಸಂಕಲೆಯ ಬಿರುದಿಂದೆಸೆವ ತುಳಿಲಾಳ್ಗಳ್ ಮಮ್ಮಳಿಯಾಗಿ ಕಾದಿ ಪಲವುಬಲು ಘಾಯಂಗಳ ಮೇಳದಿಂದತ್ತಲು ಮಿತ್ತಲುಂ ತಾಳುಂತಟ್ಟಾಗಿ ಬಿಳ್ದುಸತ್ತ ಪಾಯದಳಮೆಲ್ಲಂ ಜೋಳದ ಬೆಳೆಯಂ ತಾಳಿಕ್ಕಿದಂತಿರ್ದುದೀ ತೆಱದಿಂದುಭಯಬಲದ ಬಲ್ಲಣಿಯ ನೆತ್ತರ ನೆಣದ ಬಣಬೆಗಲಸಿದ ಕರಿತುರಗನರಭಟಕೋಟಿಗಳ ಗಣನೆಯಿಲ್ಲದ ಪೆಣಂಗಳ ಗಣಂಗಳಿಂ ತಿಂತಿಣಿಗೊಂಡು ಪಡಲಿಟ್ಟ ರಣಾಂಗಣಂ ಧರಣಿಯೆಂಬ ರಕ್ಕಸಿ ತಿಂದು ಮಗುಳ್ದುಗುಳ್ದಳೆಂಬಂತೆ ಕಡುರೌದ್ರಮಪ್ಪಿನಂ ಕಡಿಕೆಯ್ದು ಕಾದುತುಮಿರೆ

ಸುಭಟ ಸುಷೇಣಸೈನ್ಯಪತಿ ಶಸ್ತ್ರಸಮಾಹತಿಗಳ್ಕಿಬಳ್ಕಿ ತಾ
ನಭಿನವಭಾವಮಂ ಪಡೆದು ಬಾಯನೆ ಬಿಟ್ಟು ಕುಮಾರಸಂಕುಳಂ
ಪ್ರಭಯದಿನೋಡಿದತ್ತು ಕಿಱಿದುಂ ಕಿಱಿದುಂ ಶರಣೆಂದು ಸಾರ್ದುದೆ
ಯ್ದಭಿನವದರ್ಪದಿಂ ಕಿಱಿದು ಸತ್ತುದು ಸಿ‌ಕ್ಕಿದುದಿತ್ತು ಸೂಱೆಯಂ            ೧೧೦

ವ : ಇಂತು ಸಕಳಕುಮಾರಕರ ಚತುರಂಗಬಲಮೆಲ್ಲಂ ಕಡೆಗಾಲದೊಳಡಸಿದ ಬಱಸಿಡಲ ಗಡಣದ ಕಡುಪಿನೊಳ್ ತೊಡರ್ದ ನಂಜಿನ ಗಾಳಿ ಸುಟ್ಟುರೆತ್ತಿ ಬೀಸಿ ಪೊಯ್ದಡೆ ಸಾಲಿಟ್ಟು ಸತ್ತುದೆಂಬಂತೆ ಪೆಣಮಯಮಾದುದಂ ಕಂಡು ಕಳಿಂಗಭೂಪಾಳಕಂ ಕಿಡಿ ಕಿಡಿವೋಗುತ್ತುಂ ತಾಂ ಪೊರೆದ ತನ್ನ ನಚ್ಚಿನ ಮೆಚ್ಚಿನ ಲಕ್ಕಲೆಕ್ಕದ ಮೊನೆಯನಾಯಕರ್ ಸುತ್ತಿರ್ದೊಡವರನೆಕ್ಕೆಕ್ಕೆಯಿಂ ಬೇಱೆವೇಱೆ ಪೆಸರ್ಗೊಂಡು ಮೂದಲಿಸಿ ಬೆಸಸಿ ಬಿಡಲವರುಂ ಪೋಗಿ ಪೊಣರ್ದು ಸುಷೇಣನ ಕೈಯ ಕೈದುಗಳ ಮೊನೆಯ ಕೋಳಿ ಗಳ್ಕೋಡಿ ಬಲ್ಪಡಂಗಿ ಸಮುದ್ದಂಡಗಂಡಭೇರುಂಡನ ಪೆಂಡಿನೊಳ್ ಕಡಂಗಿದಿರ್ಚಿದ ಶರಭದ ನೆರವಿಯಂತೆ ಪರೆದು ಬಿಗುರ್ತೋಡುವುದುಂ

ಗಂಡುಗಲಿ ಬೂದಿಪಾಱಿದ
ಕೆಂಡದ ತೆಱದಿಂದಮಿರ್ದು ಕಗ್ಗನೆಗನಿದಂ
ಚಂಡಮನಂ ಪಡೆಯಳಿವಂ
ಕಂಡುಂ ಕಡುಗಾಯ್ಪುಗುಂದಿ ತೋರ್ಪನೆ ಜಗದೊಳ್      ೧೧೧

ವ : ಅಂತತ್ಯುಗ್ರಮೂರ್ತಿಕನಾಗಿ ನಿಂದು ತನ್ನಂಗವಟ್ಟದೊಳ್ ತೊಟ್ಟು ಮೆಱೆವ ಬಿ‌ನ್ನಣದಿಂ ಸಮೆದ ಚೆನ್ನ ಹೊನ್ನ ರನ್ನದ ಪನ್ನಣದ ಬೆಳಗಿನೊಳ್ ಬೆರಸಿ ಪುದಿದಖಂಡವಾದ ಕೋದಂಡದ ಪ್ರಭಾಮಂಡಳದಿಂ ಥಳಥಳಿಸಿ ಪೊಳೆಯುತ್ತುಂ ಮಾರ್ತಂಡನಂತೆ ತೀವ್ರತೇಜಂಬಡೆದು ಸುಷೇಣನಂ ನೋಡಿ ತನ್ನೊಳಿಂತೆಂದಂ

ಕ್ಷುಲ್ಲಕಮೃಗಂಗಳಂ ತಳು
ವಿಲ್ಲದೆ ಗೆಲ್ದನಿತಱಿಂದೆ ಗೆಲಲಾರ್ತಪುದೇ
ಬಲ್ಲಿದ ಕೇಸರಿಯಂ ಗಜ
ಮೆಲ್ಲರನಾಂತನಿತಱಿಂದಮೆನಗಾಂತಪನೇ       ೧೧೨

ವ : ಎಂದು ಸಾಹಸಮಂ ಪೂಣ್ದು ಸಾವಂಗೆ ಸಂಗಡಮೇಕೆಂಬಂತೆ ಮಾಣ ದೊಂದೆಮೆಯ್ಯೊಳೆ ನಿಜಮತಂಗಜಮನಣೆದುನೂಂಕಿ ನಿಶ್ಶಂಕವೃತ್ತಿಯಿಂ ನಡೆದು ಸಾರೆಗೆಯ್ತಪ್ಪುದುಮಾಗಳವನಂ ಸುಷೇಣಂ ಕಂಡು ತಾನುಮೇಕಾಂಗದಿಂದವಂಗಿದಿರಾಗಿ ಮದಜಳದ ಕದಡುಕೆದಱುವ ಕಾಳಗತ್ತಲೆಯ ಮೊತ್ತಮನೊತ್ತರಿಸಿ ಬೆಳ್ದಿಂಗಳ ಬಿಸಿಲ ಪಸರಮಂ ಪತ್ತಿಸುವ ಮುತ್ತಿನ ಮಾಣಿಕದ ಜೋಡಿನ ಪೊಳೆಪಿಂದಸದಳಮೆಸೆವ ಮದಕಳಮನಣೆದು ನೂಂಕೆ ಮೆಟ್ಟುವ ಚರಣದುರವಣೆಗೆ ಧರಣೀವಳಯಮೊರ್ಗುಡಿಸಿ ಕಡುಸೆಡದಳ್ಳಾಡಿ ತಳ್ಳಂಕಗೊಳ್ವಿನಂ ಹಗೆವನ ಹರಣಮಂ ಕಬಳಂಗೊಳಲೆಂದು ಬರ್ಪ ಮಿಳ್ತುದೇವತೆಯೆಂಬಂತೆ ಬಂದು ಪ್ರಸಕ್ತವಾಶಮಾತ್ರದಳವಿಯೊಳಾಂತುನಿಂದ ಪಹಾಸವಚನದಿಂದಾ ಸುಷೇಣನಿಂತೆಂದಂ

ಭಂಡಾತನದಿಂದ ಲೋಗರ
ಪೆಂಡತಿಯಂ ಬೇಡಿ ದೂತನಿಂ ನುಡಿಯಿಸುವು
ದ್ದಂಡಿಕೆಯಲ್ಲಿದು ಖಳರಣ
ಮಂಡಳಮಿನ್ನಱಿಯಲಕ್ಕುಮೆನಗಂ ನಿನಗಂ      ೧೧೩

ವ : ಎಂದು ಮೂದಲಿಸಿ ಮಾರ್ಕೊಂಡರಾತಿಯನಾಂಕೆಗೊಂಡು

ಧರೆ ನಡುಗಿತ್ತು ಸಪ್ತಜಳರಾಶಿಗಳುಂ ಕದಡೆದ್ದವೆಂಟುದಿ
ಕ್ಕರಿಗಳ ಸೊಕ್ಕಡಂಗಿದುದು ದಿಕ್ಪತಿಗಳ್ ದೆಸೆಗೆಟ್ಟು ಭೀತಿಯಂ
ಧರಿಸಿದರಿರ್ವರುಂ ನೃಪತಿಗಳ್ ತಿರುವಂ ತಿರುವಾಯೊಳಿಟ್ಟು ಕೋ
ಪರಸದೆ ನೀವಿ ಜೇವೊಡೆದ ಚಾಪದ ಟಂಕೃತಿ ತೀವೆ ಲೋಕಮಂ      ೧೧೪

ವ : ಇಂತು ಸಮರಾವಷ್ಟಂಭದಾಡಂಬರಮನಪ್ಪುಕೆಯ್ದು

ಇವರೇಸಚ್ಚರಿ ನಿಟ್ಟಿಸಲ್ಕರಿದು ತೋಡುಬೀಡನಂತಾದೊಡಂ
ಜವದಿಂ ತಪ್ಪಿಸಿಕೊಳ್ವ ಬಿನ್ನಣಮನಾರಂ ಕಂಡರಿಲ್ಲೀ ಮಹೀ
ಭುವನಾಭ್ಯಂತರದಲ್ಲಿ ಮುನ್ನಮೆನುತುಂ ಕೊಂಡಾಡಿ ಭಾಪೆಂದು ಮ
ಚ್ಚುವಿನಂ ನೋಡುವ ಪಾಡಿಗಳ್ ವಿವಿಧಶಸ್ತ್ರಾಭ್ಯಾಸಮಂ ತೋಱಿದರ್      ೧೧೫

ವ : ಅದಲ್ಲದೆಯುಂ

ಪರವೆಣ್ಗಾಟಿಸಿ ನೋಡಿ ಬಾಯ್ವಿಡುವ ಬಾಯಂ ಸೀಳ್ವ ತಕ್ಕಿಮಗಮೀ
ಸರಮೆನ್ನೊಳ್ ಕದನಕ್ಕೊಡರ್ಚಿ ಜಯಮಂ ಕೈಕೊಂಬೆನೆಂಬೀ ಪರಿ
ಸ್ಮರಣಕ್ಕಾಶ್ರಯಮಾದ ನಿನ್ನೆರ್ದೆಯನಿರ್ಭಾಂಗಂಗೆಯಲ್ ತಕ್ಕುದೀ
ಸರಮಿನ್ನೇನೆಲೊ ಕೊಳ್ ಕೊಳೆಂದು ನೃಪನಂ ತೊಟ್ಟೆಚ್ಚನಾ ಸೈನ್ಯಪಂ       ೧೧೬

ವ : ಆಗಳ್ ಬರ್ಪ ಬಾಣಂಗಳಂ ಖಂಡಿಸುವ ತಾಗುವಂಬುಗಳ ನಿವಾರಿಸುವ ಪ್ರೌಢಿಯಂ ಮಸೆಮುಟ್ಟದೆಚ್ಚಾಡುತ್ತಂ ಬಂದು ಸನ್ನಿದಮಾದಕಾರಣಂ ಬಿಲ್ಗಾಳೆಗಮಂ ಬಿಟ್ಟು

ಮುಟ್ಟೆವಂದಿರ್ವರುಂ ಕಡು
ದಿಟ್ಟಿಸಿನೋಡುತ್ತು ಶಸ್ತ್ರವಿದ್ಯೆಯ ಜಾಣಂ
ಕಟ್ಟಿದಿರೊಳ್ ತೋಱಿಸಿದರ್
ಪುಟ್ಟುವಿನಂ ಕೈದು ಜಾಣರೋಳಿಗೆ ಚೋದ್ಯಂ  ೧೧೭

ವ : ಮತ್ತಂ

ಪರನಿಟ್ಟ ಕುಂತಮಂ ನಿಜ
ಕರತಳಕುಂತದೆ ನಿಶಾತತೋಮರಮಂ ತೋ
ಮರದಿಂದೆ ನುಗ್ಗುಗುಟ್ಟಿದ
ಮರದಿಂದೆ ನುಗ್ಗುಗುಟ್ಟಿದ
ನರವರಿಪರ ಮನದ ಸಂದೆಗಂ ಪೋಪಿನೆಗಂ        ೧೧೮

ವ : ಇಂತು ಪಗೆವನ ಕರಮುಕ್ತವಿವಿಧಾಯುಧಂಗಳಿಂ ತನ್ನಯ ಕರತಳ ದಿವ್ಯಾಯುಧಂಗಳಿಂ ಖಂಡಿಸಿ ತದನಂತರಂ ಖಳನಂ ಕೊಂಡಾಡಲೇಕೆಂದು

ಇನ್ನಾದೊಡಮೆಲೆ ಭೂಪತಿ
ಯೆನ್ನಂ ಶರಣೆಂದು ಪೊಕ್ಕು ಸಾಯದೆ ಪೋಗೈ
ನಿನ್ನಯ ಸತಿಯರ ಮೊಗ
ಮನ್ನೋಡು ಪ್ರಾಣದಾನಮಂ ನಿನಗೀವೆಂ        ೧೧೯

ಬೇಡಿಕೊಳ್ಳಭಯದಾನಮ
ನಾಡದಿರುದ್ಧಂಡವೃತ್ತಿಯಂ ದಾಸತ್ವಂ
ಗೂಡಿಯೋಲಯಿಸೆ ನಿನ್ನಯ
ನಾಡೊಳ್ ಸುಖಮಿರು ದಲೆಯ್ದು ಮೃತ್ಯುಂಜಯಮಂ   ೧೨೦

ವ : ಎನಲೊಡಂ ಕಡುಕನಲ್ದು ಕೆಡುವ ಸೊಡರ್ಗುಡಿಯಂತುದ್ದಮುರಿದು ಶಕ್ತಿಯಂ ಪಿಡಿದಿಡಲೊಡಮದಂ ವಂಚಿಸಿ

ಸಿಂಗದ ನಾದದಿಂ ಗಜಱಿ ಗರ್ಜಿಸಿ ವೀರಸುಷೇಣಸೈನ್ಯನಾ
ಥಂ ಗುರುಭಕ್ತಿಯಂ ಪಿಡಿದು ಹೂಣಿಸಿಡಲ್ಕೆ ಕಳಿಂಗಭೂಮಿಪಾ
ಳಾಂಗಮನುರ್ಚಿ ಪೋಗಲವನಾಕ್ಷಣದೊಳ್ ಗತಜೀವನಾಗಿ ಮಾ
ತಂಗದಮೇಲೆ ತಾಂ ಮಲಗಿದಂ ಪಗೆಗೀಯೆನು ಬೆನ್ನನೆಂಬಿನಂ         ೧೨೧

ವ : ಅಂತು ಸತ್ತೊಡಂ ಶತ್ರುವಿಂಗೆ ಬೆಂದೋಱೆನೆಂಬೀ ಪ್ರತಿಜ್ಞೆಯಂ ವ್ಯಕ್ತೀಕರಿಸುವಂತೆ ಕಳಿಂಗಭೂಪಾಳಕನ ಕುಣಪಂ ಮೆಲ್ಲನೆ ಮಲಂಗುವುದುಂ

ಆಸಮಯದೊಳೊಗೆದುದು ದೇ
ವಾಸುರರೆಲೆ ವೀರ ಭಾಪುಭಾಪುರೆ ಸರಿಯಿ
ಲ್ಲೀಶಬ್ದಂ ಸುರತರುಕುಸು
ಮಾಸಾರಂ ಸುರಿದುದೊಡನೆ ತತ್ಕರಮುಕ್ತಂ     ೧೨೨

ವ : ಅದಂ ಕಂಡು ವೀರರಸೋತ್ಸಾಹಪರಿವರ್ಧನದಿಂದುದ್ಧತನಾದ ಸುಷೇನಚಮೂಪಂ ಮನದೊಳ್ ಪೆಟ್ಟುವೆರ್ಚಿ ಬಳಿಯಮಭಯಘೋಷಣಮಂ ಮಾಡಲ್ವೇಳ್ದು ಸುತ್ತಂ ನೋಡುತ್ತುಮಿರ್ಪುದುಂ

ರಕ್ತಾಪಗಾಪ್ರವಾಹಸು
ಯುಕ್ತಂ ಘನಪುಷ್ಕರಾರ್ಧಪರಿರಂಜಿತಮ
ಭ್ಯುಕ್ತೇಷ್ಟಮಾನುಷೋತ್ಕರ
ಸಕ್ತಂ ನರಲೋಕದಂತಿರೆಸೆದುದು ಸಮರಂ        ೧೨೩

ವ : ಅಲ್ಲಿ

ಉದಯಾಚಳದಂತಿರ್ದುದು
ಮದಗಜಮಂದದಱ ಮೇಲೆ ಘನತರತೇಜಂ
ಪುದಿದಿರ್ದುದಯಿಪ ರವಿಯಂ
ದದಿನೊಪ್ಪಿದನಾ ಸುಷೇಣನುನ್ನತರಾಗಂ        ೧೨೪

ವ : ಆಗಳಿಷ್ಟಜನಮುಖಕಮಳವಿಳಾಸಮಂ ವಿದ್ವಿಷ್ಟಜನಲಪನಕುವಳಯ ಸಂಕೋಚಮಂ ಮಾಡುತ್ತುಂ ಸಂಗ್ರಾಮಭೂಮಿಯಂ ಪೊಱಮಟ್ಟು ತತ್ಸಮೀಪದೊಳೊಂದುನ್ನತ ಸ್ಥಾನದೊಳ್ ನಿಂದಿರ್ದು ಘಾಯಂಬಡೆದಾಳ್ಗಳಂ ಸನ್ಮಾನವಾಹನದಾನ ಪೂರ್ವಕಂ ಬೀಡಿಂಗೆ ಕಳಿಪಿ ಸ್ವೀಕೃತನಿಜಜೀವಿತ ಋಣನಿರ್ಣಯನಿಮಿತ್ತಂ ಸತ್ತ ತನ್ನಯ ಶರೀರಸಂಬಂಧಾದಿಗಳ ಬೇಕಾದ ಭೂಕಾಂತರ ಶರೀರದಹನಲೌಕಿಕಕ್ರಿಯೆವ್ಯಾಪಾರಮಂ ನಿರ್ವರ್ತಿಸಿ ಪಿಡಿದೆತ್ತಾನೆಕುದುರೆಗಳನವರವರ ವಶಕ್ಕೆ ಕೊಟ್ಟು

ಕಡುಚೆಲ್ವೆಳವೆಂಡಿರ್ಗಳ
ಗಡಣಮುಮಂ ಪಿಡಿದು ತಂದು ತನ್ನರಮನೆಯೊಳ್
ಮಡಗಿಟ್ಟಂ ಶರಣಂಬೊ
ಕ್ಕಡಮವರಂ ಕಾದು ತಮ್ಮ ಪದಮಂ ಕೊಟ್ಟಂ೧೨೫

ವ : ಸೂಱೆಸಿಕ್ಕಿದ ಮುತ್ತಿನ ಮಾಣಿಕ ಪಚ್ಚೆವರಲ ಪರಿಪರಿಯ ಬಿನ್ನಣವೆಸೆದ ಜೋಡುಹಕ್ಕರಿಕೆ ಪೊಂದೊಡವು ಮುಂತಾದ ಸುವಸ್ತುಗಳೆಲ್ಲಮನವರವರ್ಗೆ ಯೋಗ್ಯತಿಕೆಯನತಿಕ್ರಮಿಸದಿತ್ತು ರಣಮನೂಡಲ್ವೇಳ್ದು ಬಳಿಯಮಲ್ಲಿಂ ತಳರ್ದು

ವಿಜಯಪತಾಕೆಗಳ್ ನಭಮನಳ್ಳಿಱಿಯಲ್ ಜಯಪದ್ಯಪಾಠಕ
ವ್ರಜನಿನದಂ ಮಹಾವಿಜಯವಾದ್ಯನಿನಾದದೊಳೊಂದಿ ದಿಕ್ಕಿನೊಳ್
ಗಜಬಜಿಸುತ್ತಿರಲ್ ಬಹಳಸೈನ್ಯಸಮಾವೃತನಾಗಿ ಬೇಗದಿಂ
ನಿಜಶಿಬಿರಕ್ಕೆ ಪೋದನತಿಲೀಲೆಯಿನಂದು ಸುಷೇಣಸೈನ್ಯಪಂ          ೧೨೬

ವ : ಕಾಳೆಗಮಂ ಗೆಲ್ದು ವಿಜಯಲಕ್ಷ್ಮೀಭುಜಲತಾಸಮಾಲಿಂಗನಸಂಚಿತ ರೋಮಾಂಚನಾಗಿ ದೇವೇಂದ್ರವಿಭವದಿಂದಂ ಬರುತ್ತುಮಿರ್ದ ಸುಷೇಣನೆಂಬ ಸೇನಾಧಿಪತಿಯ ನಿದಿರ್ಗೊಳಲ್ ಪೊಱಮಡುವ ಕಳಶಕನ್ನಡಿಯ ಪುಣ್ಯವನಿತಾಜನದ ಮಂಗಳಾಚಾರದ ಸಂಗೀತನರ್ತನದ ತಿಂತಿಣಿ ಮುಂತಾದ ವಿಜಯೋತ್ಸಾಹ ಸಂಭ್ರಮಮಾಡಂ ಬರದಿಂ ವಿಡಂಬಿತಮಾದ ತನ್ನಯ ಬೀಡಂ ಪೊಕ್ಕು ತುಱುಗಿ ತಳ್ತು ಮಿಳಿರ್ದು ಮಿಳ್ಳಿಸುವ ಪರಿಪರಿಯ ಗುಡಿಗಳ ಗಡಣದಿಂ ಕೇರಿಗೇರಿಯೊಳ್ ಬಿತ್ತರಂಬೆತ್ತಿತ್ತರದೊಳಿಕ್ಕಿದ ಮುತ್ತಿನ ರಂಗಾವಲಿಗಳಾವಳಿಗಳಿಂದೆಲ್ಲೆಡೆಯೊಳಂ ನಿಲ್ಲದೆ ಬಾಜಿಸುವ ಬದ್ದವಣಂಗಳಿಂ ಚಂದ್ರೋದಯದೊಳಭಿವೃದ್ಧಿಯನೆಯ್ದಿದ ವಾರ್ಧಿಯಂತೆ ಬೆಡಂಗುವಡೆದು ಅಂಗಡಿ ಗೇರಿಗಳಂ ನೋಡುತ್ತುಮರಮೆನೆಗೆವಂದೊಳಗಂ ಪೊಕ್ಕು ತನ್ನೊಡನೆಬಂದ ರಾಜತನೂಜ ಸಮಾಜಮಂ ನಿಜನಿಜನಿವಾಸಕ್ಕೆ ಬೀಳ್ಕೊಟ್ಟು ಬೀಳ್ಕೊಟ್ಟು ಕಳಿಪಿ ತಾನುಂ ಮಜ್ಜನಭೋಜನವ್ಯಾಪಾರ ಪರನಾಗಿ ಮೇಳದ ಕೆಳದಿಯರೊಡನೆ ಸಂಜಾತಸಂಗ್ರಾಮ ಚರ್ಚಾಸಂಸ್ಥಿತಿಯಂ ನುಡಿಯುತ್ತುಮಂದಿನಿರುಳಂ ಕಳಿದು ಮಱುದಿನದೊಳ್

ಪಿಡಿವಡೆದಿರ್ದ ರಾಜಸುತರಂ ಕರಸಿನ್ನುಱೆ ನಾವು ಪೇಳ್ದುದಂ
ತಡೆಯದೆ ಮಾಡುತುಂ ಸುಖದೆ ನೀವಿರಿಯೆಂದು ನಿಯಾಮಿಸುತ್ತುಮಾ
ಗ[ಡೆ] ರಣದಲ್ಲಿ ಸಿಕ್ಕಿದ ತುರಂಗಮ ವಾರಣಸಂಚಯಂಗಳಂ
ಸಡಗರದಿಂದೆ ತಾಂ ತರಿಸಿ ನೋಡುತುಮಿರ್ದನುಪಾತ್ತಕೌತುಕಂ       ೧೨೭

ವ : ಮತ್ತಮನೇಕರಾಜಕುಮಾರಕರಂ ಘನಪ್ರತಿಷ್ಠಾಧಿಷ್ಠಿತರಂ ಮಾಡುತ್ತು ಮಾ ಸುಷೇಣನೆಂಬ ಸೇನಾಧಿಪತಿ ಕತಿಪಯದಿನಮಲ್ಲಿರ್ದು ಸಮಸ್ತ ಕಾಜಕಾರ್ಯಕಾರಣ ಕರಣಾನಂತರಂ ತನ್ನಯ ಸ್ವಾಮಿಯಪ್ಪ ಧರ್ಮನಾಥನ ಶ್ರೀಚರಣಸಮಾಳೋಕನದೊಳ್ ಕಡುತವಕ ಮನಪ್ಪುಕೆಯ್ದು ನಿಜಪುರಗಮನೇಚ್ಛೆಯಿಂ ಶುಭದಿವಸಾಗ್ರೇಸರಮಾದೊಂದು ವಾಸರದೊಳ್ ಬೀಡನೆತ್ತಿಸಿ ಸತ್ವರದಿಂ ನಿಚ್ಚವಯಣಂಬಂದು ರತ್ನಪುರಮರೆಗಾವು ದದರ್ಭಂತರಮೆನಲ್ ಬೀಡಂಬಿಟ್ಟಿರ್ಪುದುಮನ್ನೆಗಮಿತ್ತಲ್

ದೂತಂ ಸಂಗ್ರಾಮವೃತ್ತಾಂತದ ವಿವರಮದೆಂತಿರ್ದುದಂತೆಲ್ಲಮಂ ವಿ
ಖ್ಯಾತಂ ನೀತಂ ಸುಷೇಣಂ ಧುರದೊಳಹಿತರಂ ಕಾದಿ ಕೊಂದಂದಮಂ ಪೆ
ರ್ಮಾತಿಂದಿಂತೆಂದು ಪೇಳ್ದಂ ಸಭೆಯುಮರಸನುಂ ಮೆಯ್ವೆರ್ಚೆ ಕೇಳ್ದಂ
ದಾತಂಗೆಯ್ದಿತ್ತು ಬೇಳ್ಪರ್ಥಮನುಱೆತಲೆಯಂ ತೂಗಿ ಕೊಂಡಾಡುವನ್ನಂ    ೧೨೮

ವ : ಇಂತಾ ದೂತಂ ಧರ್ಮನಾಥನ ಮುಂದೆ ಕಾಳೆಗದ ವಾರ್ತೆಯಂ ಸವಿಸ್ತರಂ ಪೇಳೆ ಕೇಳ್ದೆಲ್ಲರುಂ ಕೊಂಡಾಡುವೆಡೆಯೊಳಾಗಳೊರ್ವನಾ ಸುಷೇಣಪ್ರೇರಿತ ವಾರ್ತಾಹರಂ ಬಂದು ದೇವ ಸುಷೇಣಚಮೂಪಂ ಬಂದನೆಂದು ಬಿ‌ನ್ನಪಂಗೆಯ್ಯೆ ಬರವೇಳೆಂಬುದುಂ

ದೆಸೆಯಂ ಭೂಷಾಂಶುಜಾಳಂ ಬೆಳಗೆ ಗಗನಮಂ ಪಲ್ಲವಚ್ಛತ್ರಮೆಯ್ದು
ರ್ವಿಸೆ ಚಂಚಚ್ಚಾಮರಂಗಳ್ ಪೊಳೆದು ಪವನನಂ ಪೆರ್ಚಿಸಲ್ ವಾದ್ಯಮುಂ ಘೂ
ರ್ಣಿಸೆ ನಾನಾಚಾತುರಂಗಂ ಬಳಸಿ ಬರುತಿರಲ್ ಸುತ್ತಲುಂ ಭಟ್ಟರುಂ ಕೀ
ರ್ತಿಸೆ ತನ್ನಂ ಬಂದುಪೊಕ್ಕಂ ನಿಜನಗರಮನಾನಂದದಿಂದಂ ಸುಷೇಣಂ           ೧೨೯

ಪಿರಿದಾದತಿಸಂಭ್ರಮದಿಂ
ಕರಮೊಪ್ಪಂಬಡೆದ ರತ್ನಪುರದೊಳಗಂ ಬಿಡ
ದರಸಂ ನೋಡುತ್ತುಂ ಬಂ
ದರಮನೆಯನ್ನೆಯ್ದೆ ಮೊದಲಬಾಗಿಲೊಳಿರ್ದಂ೧೩೦

ವ : ಮತ್ತಂ ಸೇವಾಲಕ್ಷಣವಿಷಕ್ಷಣನಪ್ಪಾ ಸುಷೇಣಂ ತನ್ನೊಡನೆ ಬಂದ ಸಮಸ್ತಚಾತು ರಂಗಬಲಮೆಲ್ಲಮನಲ್ಲಿರಿಸಿ ಸಭಾಪ್ರವೇಶಪ್ರಾಪ್ತ ಕತಿಪಯಾಪ್ತಜನಂಬೆರಸು ತನ್ನೆರಡುಂ ಕೈಗಳೊಳನರ್ಘ್ಯರತ್ನಂಗಳ ಕಾಣಿಕೆಯಂ ಪಿಡಿದು

ಸಕಳಸಭಾಜನಂಗಳ ವಿಲೋಲವಿಲೋಚನ ಕೈರವಂಗಳಂ
ವಿಕಚಿಸುತುಂ ವಿರಾಜದವತಂಸವಿಕೀಲಿತಪೀನಚಾರುಮೌ
ಕ್ತಿಕಕಿರಣಾಳಿ ಬಿತ್ತರಿಸೆ ನುಣ್ಬೆಳುದಿಂಗಳ ಚೆಲ್ವನಾ ಸಭಾ
ಧಿಕಗೃಹದಲ್ಲಿ ಪೊಕ್ಕನಿರದಂಬುದದೊಳ್ ಪುಗುವಿಂದುವೆಂಬಿನಂ   ೧೩೧

ವ : ಅಂತು ಪೊಕ್ಕು ತತ್ಸಭಾಮಂಡಳಮಧ್ಯಸ್ಥಮಣಿಮಯಸಿಂಹಾಸನ ಸಮಾಸೀನನಾದ ಧರ್ಮಜಿನನಾಥನ ಶ್ರೀಪಾದದಂತಿಕಕ್ಕೆವಂದು ಮುಟ್ಟಿದ ಭಕ್ತಿಯಿಂ ಕಾಣಿಕೆಯಂ ಕೊಟ್ಟು ಸಾಷ್ಟಾಂಗಪ್ರಣತನಾಗಿರ್ದೆಳೆನಲೊಡಮೆಳ್ದು ಕೈಗಳಂ ಮುಗಿದು ನೊಸಲ್ಗೆತಂದು ಜಯಜಯಯೆಂದು ನಿಜಪತಿ ಭ್ರೂಲತಾಚಾಲನಭೇದಪರಿಸಂಜ್ಞಿತ ಸ್ಥಾನದೊಳ್ ಕುಳ್ಳಿರ್ದು

ಚಾರುಕರ್ಪೂರಪಾರೀ
ಪೂರಂಬೆರಸಿರ್ದ ಚೆಲ್ವವೀಳೆಯಮಂ ಜಗ
ದಾರಾಧ್ಯಂ ಕುಡೆ ಕೊಂಡಂ
ಕಾರುಣ್ಯರಸೈಕಪಾತ್ರನಪ್ಪ ಸುಷೇಣಂ            ೧೩೨

ವ : ಮತ್ತಂ ತಾಂ ತಂದನರ್ಘ್ಯಂಗಳುಮಪೂರ್ವಂಗಳುಮಾದುಪಾಯನಂಗಳನಾ ಧರ್ಮನಾಥನ ಶ್ರೀಚರಣೋಪಾಂತದೊಳರ್ಚಿಸಿ ಬಳಿಯಂ ಕಾಳೆಗದ ಕೋಳಾಹಳಂ ಮೊದಲ್ಗೊಂಡು ಕಡೆವರಂ ಪೇಳ್ದು ಭವದೀಯ ಶ್ರೀಪಾದಪ್ರಸಾದದಿಂದಂ ವಿಜಯಿಯಾಗಿ ಬಂದೆನೆಂದು ಬಿನ್ನಪಂಗೆಯ್ವುದುಂ

ತನ್ನಯ ಸೈನ್ಯನಾಯಕನೆನಿಪ್ಪ ಸುಷೇಣಚಮೂಪನಂ ಕರಂ
ಮನ್ನಿಸಿ ಮೆಚ್ಚಿಮೆಚ್ಚಿ ಪೊಗಳ್ದಾತನ ಬುದ್ಧಿಸಮೃದ್ಧಶೌರ್ಯಮಂ
ಸನ್ನುತಮಾದ ಧರ್ಮಜಿನನಾಥನವಂಗಿರದಿತ್ತನರ್ಥಿಯಿಂ
ಪೊನ್ನನನರ್ಘ್ಯರತ್ನಮಯಭೂಷಣವಸ್ತ್ರಸುವಾಹನಂಗಳಂ          ೧೩೩

ವ : ಇಂತು ತಣಿವೆ ಮೇರೆಯಾಗಿ ಸುಷೇಣಂಗೆ ಬೇಳ್ಪರ್ಥಮನಿತ್ತು ಮತ್ತಂ ಕರ್ಪೂರ ತಾಂಬೂಳಸಮರ್ಪಣಾನಂತರಂ ನಿಜನಿವಾಸಕ್ಕೆ ಪೋಗೆಂದು ಬೀಳ್ಕೊಟ್ಟು ಕಳಿಪಲೊಡಂ

ಒಡೆಯನರಮನೆಯ ಬಾಗಿಲೊ
ಳಡಸಿರ್ದ ಸಮಸ್ತಸೇನೆವೆರಸು ಸುಷೇಣಂ
ಕಡುಚೆಲ್ವ ತನ್ನ ಮನೆಯಂ
ಸಡಗರದಿಂ ಪೋಗಿ ಪೊಕ್ಕು ಸುಖದಿಂದಿರ್ದಂ     ೧೩೪

ವ : ತದನಂತರಂ ಕೈಮಿಕ್ಕು ಪೆರ್ಮೆಗೆ ಪೆರ್ಮನೆಯಾದ ಧರ್ಮಜಿನನಾಥ ನೋಲಗದ ಸಾಲೆಯೊಳ್

ಪಲವುಂ ದೀಪಗಳಿಂ ಬಂದತಿಶಯಘನವಸ್ತ್ರಂಗಳಂ ಚೆಲ್ವರತ್ನಂ
ಗಳನುನ್ಮತ್ತೇಭವೃಂದಂಗಳನುರುತರಘೋಟಂಗಳಂ ತತ್ಪ್ರಧಾನರ್
ನಲವಿಂ ತೋಱುತ್ತುಮಿರ್ದರ್ ಪೆಸರನುಸುರ್ದೆಲೆ ಸ್ವಾಮಿ ಕೊಟ್ಟಟ್ಟಿದಂ ಕುಂ
ತಳರಾಜಂ ಗೂರ್ಜರೇಶಂ ಕಳಿಪಿದನಿರದಿತ್ತಂ ಮಹಾಮಾಳವೇಂದ್ರಂ೧೩೫

ಓಲೈಸಿದನಂಧ್ರಮಹೀ
ಪಾಲಂ ಚಿತ್ತೈಸು ಪಾಗುಡಂಗೊಟ್ಟನಿವಂ
ಚೋಳನರಾಧೀಶ್ವರನಭಿ
ಮೇಳಿಸಿದಂ ದಲವಧಾನ ಸಿಂಹಣಭೂಪಂ         ೧೩೬

ವ : ಇಂತೆಂದು ತಂದ ತಂತಮ್ಮ ಕಪ್ಪಂಗಳಂ ಬೇಱೆವೇಱೆವೇಳ್ದು ಕುಡೆ ತತ್ತನ್ನಿಯೋಗ ದೊಳಧಿಕೃತರಪ್ಪರನೊಪ್ಪುಗೊಳಲ್ವೇಳ್ದಪ್ಪಯಿಸಿ ಬಳಿಯಮವರವರನುಚಿತ ಸನ್ಮಾನದಾನಂ ಗಳಿಂ ಮನ್ನಿಸಿ ಬೀಡಿಂಗೆ ಕಳಿಪಿದನಂತರಮಪೂರ್ವಸಾರ್ವಭೌಮ ಶ್ರೀಯೊಳ್ ನೆರೆದಾ ಧರ್ಮನಾಥಮಹಾರಾಜನಪರಿಮಿತಪರಮಾನಂದ ಪರಂಪರೆಯ ನಪ್ಪುಕೆಯ್ದು ನಿಜಸಭೆಯಂ ವಿಸರ್ಜಿಸಿ ಸಿಂಹಾಸನದಿಂದೆಳ್ದುಪೋಗಿ ಮಜ್ಜನಭೋಜನಮಂ ಮಾಡಿ ಸುಖದಿಂದಿರ್ದಂ

ಕ್ಷಿತಿಯಂ ರಾಜಂ ರಾಜ
ನ್ವತಿಯಾಗಿಯೆ ಮಾಡಿ ನಾಡೆಯುಂ ರಕ್ಷಿಸಿದಂ
ಸತತಂ ಕಮಳಿನಿಯಂ ಶ್ರೀ
ಮತಿಯಾಗಿಯೆ ಮಾಡಿ ರಕ್ಷಿಪಂತೆ ದಿನೇಶಂ        ೧೩೭

ವ : ಅಂತುಮಲ್ಲದೆಯುಂ ಸಪ್ತಜನಶರ್ಮಕರನಪ್ಪಾ ಧರ್ಮನಾಥನೆಂಬ ಮಹಾಪೃಥ್ವೀನಾಥಂ

ಕೆಲರಂ ರಾಜಕುಮಾರರಂ ಮರಳೆ ತಂತಮ್ಮಾಳ್ವ ರಾಜ್ಯಂಗಳೊಳ್
ನಿಲಿಸುತ್ತುಂ ನೃಪರಂ ಬಳಿಕ್ಕೆ ಕೆಲರಂ ತನ್ನಂ ದಲೋಲೈಸುವ
ಗ್ಗಳದುದ್ಯೋಗದೊಳಂ ನಿಯಾಮಿಸಿರಿಸುತ್ತುಂ ಪೇಳ್ದುದಂ ಮಾಳ್ಪವೊಲ್
ಕೆಲರಂ ಯೋಜಿಸುತುಂ ಕರಂ ಸಲಹಿದಂ ನಿಶ್ಶೇಷಭೂಪಾಳಕಂ        ೧೩೮

ವ : ಮತ್ತಂ

ನೂತನಕ್ಷತ್ರಪರೀವೃತ
ನಾತತಕುಮುದಾಳಿಪೋಷಕಂ ಚಂದ್ರನವೊಲ್
ಪೂತಕಳೆಯೊಡನೆ ಕೂಡಿ
ಪ್ರೀತಂ ಸುಖದಲ್ಲಿ ನೃಪತಿ ತಣ್ಣನೆ ತಣಿದಂ     ೧೩೯

ವ : ಇಂತಖಿಳಭೂತಳಾಂತರ್ವರ್ತಿ ಚಕ್ರವರ್ತಿಪರಿಸ್ಫೂರ್ತಿ ಮತ್ಕಿರೀಟ ಕೋಟಿಕೀಲಿತ ಹರಿನೀಲಮಾಣಿಕ್ಯಮಾಲಿಕಾ ಸಮುನ್ಮೀಲದುಲ್ಲೋಲಮರೀಚಿ ಕಾಲೋಲಂಬ ಲೇಖಾ ಲೇಲಿಹ್ಯಮಾನ ಲಾಲನೀಯ ಚಲನಕಮಲಯುಗಲ ಸನಾಥನಪ್ಪಾ ಧರ್ಮನಾಥನೆಂಬ ಮಹಾಪೃಥಿವೀತಳಾಧಿನಾಥನುಂ ಸಕಳಾಂಗನಾಕುಲಮಂಗಲ ತಿಲಕಾಯಮಾನ ಶೃಂಗಾರ ವತೀದೇವಿಯುಮೊಂದಾಗಿ ಸಂಭೋಗಸುಖೋನ್ಮುಖರಾಗಿ ಪರಮಪ್ರಮೋದ ಪರಂಪರೆಯನಪ್ಪುಕೆಯ್ದು ಪ್ರಾಜ್ಯರಾಜ್ಯಾಭಿರಕ್ಷಣಂಗೆಯ್ವುತ್ತುಮಿರೆ

ಸತತಂ ಧರ್ಮಪ್ರಭಾವಂ ಜಗದೊಳೆಸೆವಿನಂ ಮಾಡಿದಂ ಧರ್ಮನಾಥಂ
ಕೃತಕೃತ್ಯಂ ತರ್ಕತಂತ್ರಾತ್ರಿಶಯಿತ ಕುಶಲ ಸ್ತುತ್ಯನುದ್ದಾಮಸತ್ಯಂ
ನುತಚಾರಿತ್ರವ್ರಜಂ ಬಾಹುಬಲಿಸುಕವಿರಾಜಂ ದಯಾಂಬೋಧಿಚಂದ್ರಂ
ಕೃತಸಮ್ಯಗ್ದೃಷ್ಟಿಮೋಹಂ ಘನಸುಕೃತವಹಂ ಚಾತುರೀಜನ್ಮಗೇಹಂ         ೧೪೦

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮಜಿನ ಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವ ಪ್ರಸಾದಸಂಪಾದ ಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ಸಂಗ್ರಾಮಾಡಂಬರ ಪರಿವ್ಯಾವರ್ಣನಂ ತ್ರಯೋದಶಾಶ್ವಾಸಂ.