ಶ್ರೀಲಲನಾ ಕುಚಕಳಶಸ
ಮಾಲಿಂಗನ ಭಂಗಿವೆತ್ತ ಪೇರುರದೊಳ್ ಪರಿ
ಲಾಲಿಸಿ ಕಿಣಾಂಕಮೆಸೆದಂ
ಲೀಲಾಪತಿಸರಸಚತುರಕವಿಕುಳತಿಳಕಂ೧

ವ : ಅಂತು ಸುಖದಿನಿರ್ಪುದುಮನ್ನೆಗಂ

ಘನವೇಳಾವನಮಧ್ಯದೊಳ್ ಪಡುವಣಂಭೋರಾಸಿ ನೀರಂ ಕರಂ
ದಿನಪಂಗೀಯಲಗುರ್ವನಂರಗತಿಶ್ರಾಂತಂಗೆ ಕಂಡಿಲ್ಲ ದೇ
ವನವೊಲಾಂ ಜಳಕೇಳಿಯಂ ರಚಿಸುವೆಂ ದುಸ್ಸಹ್ಯತೇಜಪ್ರಭಾ
ವನೆಯಿಂದಂ ಸಮನೆಂದು ಮಚ್ಚರಿಸಿದಂತುಗ್ರಾಂಶು ಬಂದೆಯ್ದಿದಂ೨

ವ : ಆಗಳ್

ತೆರೆತೆರೆಗೊಂಡು ಬಾಸರಬಿಸಿಲ್ ಕೆಲದೊಳ್ ತಿವರಲ್ಲಿ ಬೆಟ್ಟದೊಳ್
ಪರಕಲಿಸುತ್ತುಮಿರ್ದು ಪರಿರಂಜಿಸಿದತ್ತು ದಿವಾಕರಪ್ರಭಾ
ಪರಿಕರದುಷ್ಣಪೀಡನನಿವಾರಣಕಾರಣಮಾಗಿ ಧಾರಿಣೀ
ತರುಣಿ ಸಮಂತು ಬಾಸರದ ಸೀರೆಯನೆಯ್ದೆಮುಸುಂಕಿದದಂದದಿಂ  ೩

ವ : ಆ ಪ್ರಸ್ಥಾವದೊಳ್

ಪೊಸಕೆಂಬಟ್ಟೆಯನುಟ್ಟು ಮಿಂಚಡರ್ದು ಕೆಂಪಿಂ ಕೂಡೆ ಚೆಲ್ವಾಗಿ ರಂ
ಜಿಸುವೊಂದಡ್ಡಣಮಂ ದಲೊಡ್ಡಿಸಿ ವಿಸರ್ಪನ್ಮಂಡಳಾಗ್ಗರಾಂಶುವಿಂ
ದೆಸೆದಂದಟ್ಟಿಬರುತ್ತುಮಿರ್ಪ ತಮಮಂ ಮಾಱಾಂತು ಪೊಯ್ಯಲ್ಕೆ ಲೋ
ಪಿಸಿ ನಿಂದಿರ್ದವೊಲೊಪ್ಪಿದಂ ದಿನಕರಂ ಪ್ರೋದ್ರಿಕ್ತ ರಕ್ತಾಕರಂ        ೪

ವಾರುಣಿಯಂ ಸೇವಿಸುವಾ ಮ
ನೋರಥದಿಂ ಬಿಟ್ಟು ಪೂರ್ವಗೋತ್ರಸ್ಥಿತಿಯಿಂ
ಸೂರಂ ನಡದೊಡೆ ನಭಮಪ
ಸಾರಸಿತುದ್ವೃತ್ತಿಗಾವನೋ ಸೈರಿಸುವಂ          ೫

ಕತ್ತಲೆ ಸುತ್ತಲೆ ಸುತ್ತಲುಂ ಪರೆದು ಭಾಸ್ಕರನಂ ಬೆದಱಟ್ಟಿ ಮುಟ್ಟಿ ಬೆಂ
ಬತ್ತಿ ಬರುತ್ತಿರಲ್ಕಗಿದುಬಿಟ್ಟು ನಿಜಾಂಬರಮಂ ಸ್ವಪಾದಮಂ
ಮತ್ತುಱೆನೀಳ್ದು ಮುಂದೆ ನಿಡುಮೆಟ್ಟಿ ಕರಂ ಪರಿದೋಡಿ ಪೋಗಿ ತಾಂ
ಪತ್ತಿದನಸ್ತಭೂಧರಮನೆಂಬವೊಲೊಪ್ಪಿದುರ್ದಕಮಂಡಳಂ           ೬

ವ : ತದಸ್ತಾಚಳಮಸ್ತಕದಲ್ಲಿ ಚೂಡಾಮಣಿಯೆಂಬಂತೆ ಕಡುರಮಣೀಯಮಾಗೆ

ಬಳಸಿಬರುತ್ತುಮಿರ್ದ ಪವಮಾನನ ತೀವ್ರತರಾಭಿಘಾತದಿಂ
ಚಳಿಸಿ ಕಳಲ್ಚೆ ತೊಟ್ಟು ಹರಿದುನ್ನತಪತ್ರದೊಳೊಂದಿ ನಾಡೆಯುಂ
ವಿಳಸಿತಮೂಳಮಂ ಶತವಿಶಾಖೆಯನಾಂತನಭೋಮಹೀಜದಿಂ
ಕಳಿವದನಾದ ಪಣ್ಣೆನಿಸಿ ತೊಪ್ಪನೆ ಬಿಳ್ದುದು ಸೂರ್ಯಮಂಡಳಂ   ೭

ಪಿಂಬಗಲೆಂಬ ಹೇಮಕರನರ್ಯಮಮಂಡಳಮೆಂಬ ಘಟ್ಟಿ ಚೆ
ಲ್ವಂಬಡೆದೆಯ್ದೆ ಕಾಯ್ದು ಪೊಳಪೇಱಲುದಗ್ರಕರಾಗ್ರದಿಕ್ಕುಳಿಂ
ದಂ ಬಿಡದೊತ್ತಿ ಸಾರ್ಚಿಯಪರಾಬ್ಧಿಯ ನೀರೊಳಗಳ್ದಿದಂ ದಲೆಂ
ದೆಂಬವೊಲರ್ಕಬಿಂಬಮುಱಿಮುಳ್ಗಿದುದುಣ್ಮುವ ರಾಗರಂಜಿತಂ    ೮

ವ : ಆ ಪೊತ್ತಿನೊಳ್

ಕಹಳಾಭೇರೀಮೃದಂಗಪ್ರತತಿವಿರುತಿವೇಳಾಪಕಂ ಕೂಡೆ ಭೋರೆಂ
ದು ಹಟಜ್ಜೈನೇಂದ್ರಗೇಹಂಗಳೊಳೆಸೆದುದು ಸಂಗೀತವಾದ್ಯಪ್ರನೃತ್ಯೋ
ದ್ಬಹಳಾನಂದಪ್ರಭಾವಕ್ಕನುಗತಮೆನೆ ದೇದೀಪ್ಯಮಾನಪ್ರದೀಪೋ
ನ್ಮಹಿಮಂ ಮೆಯ್ವೆರ್ಚಿ ಚೆಲ್ವಂ ತಳೆದುದಪರಸಂಧ್ಯಾನುವೇಳಾವಿಳಾಸಂ       ೯

ನಾನಾಜಾತೀಯ ಪೂಜಾತಿಶಯದ ರಚನಾಕೌತುಕಂ ಸರ್ವದೇವ
ಸ್ಥಾನವ್ರಾತಂಗಳೊಳ್ ಕಣ್ಗೊಡರಿಸೆ ಸುಖಮಂ ಧೂಪದುದ್ದಾಮ ಧೂಮೋ
ತ್ತಾನಂ ಪ್ರಾಸಾದಪಾರಾವತವಿತತಿಗೆ ತುಚ್ಛೇತರಚ್ಛಾಯಿಕಾ ಸಂ
ತಾನಶ್ರೀಯಂ ನಿಮಿರ್ಚಲ್ ಮೆಱೆದುದಪರಸಂಧ್ಯಾದಿಕಾಲಾನುಬಂಧಂ         ೧೦

ವ : ಅಪರಾಹ್ಣಕಾಲದೊಡವಶ್ಯಂ ಕರಣೀಯನಿತ್ಯದೇವತಾರ್ಚನಾ ಕ್ರಿಯಾನಿಯಾಮಮನಾ ದೇವಾಧಿದೇವಂ ಜಿನದೇವಾಗಾರದೊಳ್ ತೀರ್ಚಿ ತೀರ್ಥನಾಥಂಗೆ ಪುಷ್ಪಾಂಜಳಿಯನಿತ್ತು ಮುಕುಳಿತಪಾಣಪುಟರಾಗಾಭೋಗದಿಂ ನಿಜಲಲಾಟತಟವಲ್ಲಿಯ ಪಲ್ಲವಿತಂ ಮಾಡಿ

ಅಸ್ತಮನೊರ್ಮೆಯ್ದಿದ ತೇ
ಜಸ್ಥಿತಿಯಿಂದೊರ್ಮೆಯುಗಗ್ರನಾಗದ ಮತ್ತಂ
ನಿಸ್ತೇಜನಾಗದೊರ್ಮೆ ಸ
ಮಸ್ತಜಗನ್ಮಿತ್ರನಾದೆ ನೀನೆ ಜಿನೇಶಾ   ೧೧

ಶಶಿರವಿಕೋಟಿದೀಧಿತಿಯೊಳೊಂದಿದ ನಿನ್ನಯ ದಿವ್ಯದೇಹದೊಳ್
ಪಸರಿಪ ಚೆಲ್ವನುಣ್ಬೆಳಗು ಚಿತ್ತದ ಕತ್ತಲೆಯಂ ಬಹಿಸ್ತಮೋ
ವಿಸರಮನೊರ್ಮೊದಲ್ ಕಿಡಿಸಿದತ್ತು ದಲೀದೃಶತೇಜದೇಳ್ಗೆ ಭಾ
ವಿಸುವಡೆ ದೇವರೆಂಬ ಪೆಸರ್ವೊತ್ತವರ್ಗುಂಟೆ ಜಗತ್ಪ್ರಯಾರ್ಚಿತಾ    ೧೨

ವ : ಇಂತೆಂದು ತತ್ಸಮಯಸಮುಚಿತ ಜಿನಸಮಯಾಭಿರೂಪರೂಪ ಗುಣವಸ್ತುಸ್ತವನ ವಿಶೇಷದಿಂ ವೀತರಾಗಸರ್ವಜ್ಞಂ ಸ್ತುತಿಗೆಯ್ದು ಗಂಧೋದಕಬಿಂದುವಂ ತಳಿದ ಸಿದ್ಧಶೇಷಾಕ್ಷತಪ್ರಸರದಿಂದಳಕಲತಾಜಾಳಕಮಂ ಕುಸುಮಿತಂ ಮಾಡಿ ಚಂದನ ತಿಳಕಮಂ ಭಾಳತಳದೊಳಂಗೀಕರಿಸಿ ಬಸದಿಯಿಂ ಪೊಱಮಟ್ಟು ಬಂದು ಸಭಾಭವನಭದ್ರ ವೇದೀಮಧ್ಯದೊಳಪರಿಮಿತ ಪರಿಜನಂಬೆರಸು ಕುಳ್ಳಿರ್ದು ಗಾಣಿಕ್ಯನೀರಾಜಿತಮಾಣಿಕ್ಯ ದೀಪನುಂ ಕವಿಜನಕೃತ್ರಶಂಸಾಳಾಪನುಂ ಕಾರ್ಯಾವಿಜ್ಞಾನೋತ್ಸುಕಕೃತಭೂಪನುಂ ಕೀರ್ತಿಸ್ಫೂರ್ತಿಪರಿಕೀರ್ತನಸಮರ್ಥಿತ ವನೀಪನುಂ ಸೇವಾವಿನೋದವಿಭಕ್ಷಿಣೀಭೂತ ವಿಳಾಸಕಳಾಪನುಂ ಯುಕ್ತಾಯುಕ್ತ ವಿಚಾರವಿವೇಕನಿಯುಕ್ತ ನಿಖಿಳವಾದಿವಿವಾದ ಕೋಳಾಹಳಮೇಳಾಪನುಮಾಗಿ ಸುಖದಿನಿರ್ಪುದುಂ

ಪಿರಿದುಂ ಸುತ್ತಿರ್ದ ಕೈದೀವಿಗೆಗಳ ಬಳಗಂ ತಳ್ತು ತಾರಾಳಿಯೆಂಬಂ
ತಿರೆ ವಿಸ್ಫಾರೇಂದ್ರನೀಳಸ್ಥಳಿ ಗಗನಮಿದೆಂಬಂತೆ ಚೆಲ್ವಾಗೆ ದೇವಂ
ನರನಾರೀಲೋಚನೇಂದೀವರವನ ಪರಮಾನಂದಸಂಪಾದಕಂ ಭಾಸ
ಸುರತಾರಾನಾಥನೆಂಬಂತಿರೆ ಸೊಗಯಿಸಿದಂ ಸತ್ಕಳಾಲಾಲನೀಯಂ   ೧೩

ವ : ತದನಂತರಂ

ರವಿಯೆನ್ನಾಸೆಗೆ ಬಂದನೆಂದು ವರುಣಂ ಮಿತ್ರಂಗಿದಿರ್ವೋಗಿಯು
ತ್ಸವದಿಂ ಮಾಣಿಕದರ್ಘ್ಯಮಿತ್ತೊಡೆ ತದೀಯೋದ್ಯತ್ಪ್ರಭಾಮಾಳಿಕಾ
ಪ್ಲವಮಾ ತಾಣದೊಳೆಲ್ಲಮೆಯ್ದೆ ಪಸರಂಬೆತ್ತಿರ್ದುದೆಂಬಂತೆ ಪ
ರ್ಬುವ ನಲ್ಸಂಜೆಯ ಕೆಂಪು ಸೊಂಪುವಡೆದೆತ್ತಂ ರಂಜಿಸಿತ್ತಾ ಕ್ಷಣಂ   ೧೪

ನಳನಳಿಸುತ್ತುಮಿರ್ಪ ಪೊಸಮಾಲೆಯ ಚೆಲ್ವ ಕದಂಬುಗಂಪನ
ಗ್ಗಳಿಸಿ ಕವಲ್ತೆಗೊಂಡು ತುಱುಗಿರ್ದ ಗೃಹಾಳಿಗಳಲ್ಲಿ ಪೊಕ್ಕು ಬೆಂ
ಬಳಿಯೊಳೆ ಬಟ್ಟೆಗಾಣದೆ ಕರಂ ಸುಳಿದಾಡೆ ನುಸುಳ್ದ ಬೀದಿಯೊಳ್
ಮಳಯಸಮೀರಣಂ ಬಿಡದೆ ಬೀಸಿದುದೊಯ್ಯನೆ ಶೈತ್ಯಧಾರಣಂ    ೧೫

ವ : ಇಂತು ಸಾಯಂತನಸಮಯಸಮೀರಣಂ ಸುಖದ ಸೊಕ್ಕನುಜ್ಜೀವಿಸುತ್ತುಂ ಬೀಸಿದಾಗಳ್

ಬಿಡದಮರ್ದಪ್ಪಿಕೊಂಡು ಕಡಬೇಗದೆ ಚುಂಬಿಸಿ ಮುದ್ದುಗೆಯ್ದು ಕೈ
ಮಡಗದೆ ಕೂಡಿ ತೋಡುಮನಗಲ್ಚಿ[ಸಿ] ಪಿಂ[ಬ]ಗಳಿಂಗೆ ಕಾಯ್ದು ಕಣ್
ಕಿಡಿಕಿಡಿದೋಱುತುಂ ತಡಿಗಳಂ ಕಡೆದಾರ್ದುಱೆ ಬೇಱೆವೇಱೆ ತಾಂ
ಮಿಡುಕುವ ಜಕ್ಕವಕ್ಕಿಗಳ ದಂಪತಿಗಳ್ ಮೊಱೆಯಿಟ್ಟವಾಕ್ಷಣಂ     ೧೬

ತಾವರೆಯಲರೆಸಳಾಸಿನೊ
ಳಾ ವಧುವಂ ಸೋಂಕಿ ಕುಳ್ಳಿದಿರ್ದಳಿಗೀತಾ
ರಾವಮನಾಲಿಸುತಿರ್ಪನು
ಭಾವಮುಮಂ ನೆನೆದು ನೊಂದುದು ಚಕ್ರಂ        ೧೭

ಬರಸೆಳೆದೆಯ್ದೆ ಸಣ್ಣಮಳಲಂ ಪಸೆಯಾಗಿ ಕಳಲ್ದು ಬೀಳ್ದ ತಾ
ವರೆಗಳೆಸಳ್ಗಳಿಂ ಸಮೆದ ಪಾಸುಮನರ್ಪಿಸಿ ಶೀಕರಂಗಳಂ
ತರಳತರಂಗಮಾಳಿಕೆ ರಥಾಂಗವಧೂಟಿಗೆ ಶೀತಳಕ್ರಿಯಾ
ಪರಿಕರಭಾರಮಂ ಕೆಳದಿಯಂತಿರೆ ನಿರ್ಮಿಸಿದತ್ತು ಮೋಹದಿಂ          ೧೮

ವ : ಇಂತು ವರಾಕಚಕ್ರವಾಕನಿಕಾಯಂ ವಿಯೋಗವಿಕಾರಾತಿರೇಕಪರಿಪಾಕ ದಿಂದಸ್ತೋಕ ಶೋಕವ್ಯಾಕುಳಮಾಗಿರ್ಪುದುಂ

ಅಸ್ತಗಿರೀಂದ್ರಮಸ್ತಕದ ಗಹ್ವರದೊಳ್ ಸಲೆಬಿಳ್ದುಪೋದನೋ
ವಿಸ್ತೃತಸಿಂಹ ತದ್ವನದ ಕುತ್ತುಱೊಳೀಗಳಡಂಗಿಪೋದನೋ
ದುಸ್ತರಮಾದ ಪಶ್ಚಿಮಸಮುದ್ರದ ಮಧ್ಯದೊಳಳ್ದುಪೋದನೋ
ಶಸ್ತಮದೀಶನೆಂದುಱೆ ಪಲುಂಬಿದಳಬ್ಜಿನಿ ಕಾಣದರ್ಕನಂ  ೧೯

ಇವನೆನ್ನಂ ಬಿಟ್ಟುಪೋದಂ ಗಣಿಯಿಸದದನಾನಿರ್ದೊಡಂ ರಾಜತಃಪೀ
ಡನಮಕ್ಕಿಂತೆಂದು ಪದ್ಮಾಲಯೆಯೆಸಳ್ಗದವಂ ಗಾಢಮಾಗಿಕ್ಕಿದಳ್ ತಾ
ನೆನೆ ಸಂಕೋಚಂ ದಲಾಯ್ತಂಬುರುಹಮದಱ ಮೇಗಿರ್ದು ಪೆಣ್ದುಂಬಿ ತದ್ಬಂ
ಧನಮಂ ಪುಯ್ಯಲ್ಚಿ ಪೇಳ್ವಂತಮಮ ಮೊರೆವುತಿರ್ದತ್ತು ಗುಂಗುಮ್ಮೆನುತ್ತುಂ           ೨೦

ಅಪರಾಶಾವಶನಾಗೀ
ತಪನಂ ಮುನ್ನೆನ್ನಮೇಲೆ ನೀಡಿದ ಕರಮುಮ
ನಪಸಾರಿಸಿದಂ ಚೀಯೆಂ
ದುಪತಾಪಿಸಿದಂತೆ ಮುಗಿದುದಂಭೋಜವನಂ   ೨೧

ಪತಿ ಪೋದನೆಂದು ಮಧುಪಂ
ನುತಪದ್ಮಿನಿಯಾಸ್ಯಬಿಂಬಮಂ ಚುಂಬಿಸಲಾ
ಯ್ತತಿಸಂಕುಚಿತಂ ಸದ್ಗುಣ
ವತಿಯರ್ ಮಲಿನಾತ್ಮರೊಲ್ದಡೀಯರ್ ಮೊಗಮಂ       ೨೨

ವರಪದ್ಮಕೋಶದಗ್ರದೊ
ಳುರುಮಧುಕರಮೆಱಗಿ ಕುಳ್ಳಿದಿರ್ದೆಸೆದತ್ತು
ಸ್ಮರನೃಪನ ಪದ್ಮಕೋಶದೊ
ಳರಗಿನ ಪೊಸಮುದ್ರೆಯಂ ದಲಿಕ್ಕಿದ ತೆಱದಿಂ     ೨೩

ಸಿರಿಯಂ ತಾಳ್ದೊಡಮೊಳ್ಗುಣಂಬಡೆದೊಡಂ ಬ್ರಹ್ಮಂ ಮಗಂ ಬಾಳ್ವೊಡಂ
ಖರತೇಜಂ ಸಖನಾದೊಡಂ ಕಮಳಷಂಡಂ ಕೂಡೆ ಸಂಕೋಚಮಂ
ಧರಿಸುತ್ತಿರ್ದುದು ರಾತ್ರಿ ಕಾಲವಶದಿಂ ಸಾಮರ್ಥ್ಯಮುಂಟಾದೊಡಂ
ಧರೆಯೊಳ್ ಪ್ರಾಪ್ತಿಯನಾವನೋ ತೊಲಗಿಪಂ ಕಾಲಕ್ಕೆ ಬಂದಿರ್ದುದಂ         ೨೪

ಮಿಗಿಲೆನೆ ರಾಜಬಾಧೆಗೊಳಗಾಗಿ ಸರೋಜಿನಿ ನೊಂದು ರೂಪಮಂ
ಮುಗಿಯಲದಂ ಕುಮುದ್ವತಿ ನಿರೀಕ್ಷಿಸಿ ತಾಂ ನಗುವಂತರಳ್ದಿರಲ್
ಬಗೆವುಗೆ ಪೇಳ್ದು ಬಂಧನಮುಮಂ ಬಿಡಿಸಲ್ ನಳಿತೋಳ್ಗಳಿಂ ನಂಟರಂ
ತೊಗೆದಳಿಗಳ್ ಕುಮುದ್ವತಿಗೆ ಬಂದೆಱಗಿರ್ದವು ನುಣ್ಜಿನುಂಗುತುಂ  ೨೫

ಎಮಗಂ ರಾಜಪ್ರಸಾದಂ ಪಿರಿದದಕನುಕೂಲಂ ತ್ರಿಯಾಮಾಬಲಂ ಮ
ತ್ತಮಿದುಂ ತಾರಾಬಲಂ ಕೂಡಿದಿದು ನೆಲಸಿದಳ್ ಪದ್ಮದ ಶ್ರೀಯುಮೆಮ್ಮೊಳ್
ನಮಗೀ ಸಂಪತ್ತಿ ಕೈಗೂಡಿದುದಣಮಿಲ್ಲೆಂಬ ಸಂತೋಷದಿಂದಾ
ದಮೆ ಮೆಯ್ಕೊರ್ವುತ್ತುಮಿರ್ದತ್ತೆನೆ ಕುಮುದಕುಳಂ ತತ್ತರಳ್ದತ್ತದೆತ್ತಂ          ೨೬

ಮೂಡಣಭಾಗದಲ್ಲಿ ತಿಮಿರಪ್ರಸರಂ ತಲೆದೋಱೆ ಪರ್ವಿ ಪೆಂ
ಪೋಡದ ಸಂಜೆಗೆಂಪು ಪಡುವಲ್ ಪರಿರಂಜಿಸಿ ತೋರ್ಕೆವೆತ್ತಿರಲ್
ನಾಡೆಯುಮರ್ಧನಾರಿಯ ವಿಚಿತ್ರದ ತಪ್ಪರಮಂ ಸ್ವಮೂರ್ಧದೊಳ್
ಗಾಡಿಯಿನಿಕ್ಕಿದಂತಿರಪರಾಹಭಟಂ ಪಡೆದತ್ತು ಚೋದ್ಯಮಂ         ೨೭

ಇನನನಗಲ್ದಿರಲಾಱದೆ
ತನು ಕಂದಿಯಡಂಗಿಪೋದಳೆನೆ ಸಂಧ್ಯಾಕಾ
ಮಿನಿ ನೋಡೆನೋಡೆ ಕರಗಿದ
ಡನುರಕ್ತೆ ಪ್ರಿಯನ ವಿರಹಮಂ ಸೈರಿಪಳೇ         ೨೮

ಇನನಸ್ತಂಗತನಾಗಿ ಪೋದನುರುರಾಕಾಚಂದ್ರಮಂ ಪೂರ್ವದಿ
ಗ್ವನಿತಾಸನ್ನಿಧಿಗೆಯ್ದಿಬಂದಪನದಕ್ಕಂ ಮುನ್ನಮೇ ಪೋಗಿಯಾ
ತನೊಳಂ ಕೂಡುವೆನೆಂದು ಜಾರೆ ಗಗನಶ್ರೀಹಾರಕ್ಕಂದು ಪೋ
ಪನುವಿಂ ನೀಲಿಯ ಸೀರೆಯಂ ಪೊದೆದವೋಲ್ ಪರ್ವಿತ್ತು ತೀವ್ರಂ ತಮಂ      ೨೯

ಪೂರ್ವಾಶಾಗಿರಿಕೂಟದಿಂದಡರ್ದು ತಳ್ತಾಕಾಶಮಂ ಪರ್ವಿ ಮೆಯ್
ಕೊರ್ವಿಂದಾನೆಗಳೊಡ್ಡುಗೊಂಡು ಪರೆದೆಯ್ತಪ್ಪಂದದಿಂ ಕೂಡೆ ಮೇಣ್
ಗೀರ್ವಾಣಾಪಗೆಯೊಳ್ ಪ್ರವೃದ್ಧಜಲನೀಲೀಜಾಲಸಂಚಾರದಿಂ
ತುರ್ವೇಳ್ದೆಲ್ಲೆಡೆಯಲ್ಲಿಯುಂ ಪಸರಿಸಿತ್ತಂದಂಧಕಾರಂ ಕರಂ        ೩೦

ಬಿದಿ ಕಡೆದಿಂದ್ರನೀಲಶಿಲೆಯಂ ನೆಲನಾಗಸಮೆಂಟುದಿಕ್ಕುಮಂ
ಪದುಳಿಸಿ ಮಾಡಿ ರಂಜಿತಮಹಾಂಜನದಿಂ ಬಿಡದೊಪ್ಪವಿಟ್ಟನೆಂ
ಬಿದನೆಸಗುತ್ತುಮುದ್ಘತಮಸಂ ತಮಸಂ ಕಡುಗೊರ್ವಿ ಪರ್ವಿದ
ತ್ತಿದು ಕುಡಿಬೆಟ್ಟಮೆಂಬ ಪರಿಭೇದದ ಕಲ್ಪನೆ ಪುಟ್ಟದಂದದಿಂ       ೩೧

ನೆಲೆವೆರ್ಚಿದ ಕತ್ತಲೆ[ಯ]ಬ
ಯಲೊಡಮಾದೊಡಮಿತ್ತುದೆಡೆಯನಿತ್ವರಿಕಾಸಂ
ಕುಳ ಸುರತಕ್ರೀಡೆಗೆ ಮಿಗೆ
ಮಳಿನಾತ್ಮರ್ ಖಳರನಲ್ಲದಿಂ ತಣಿಪುವರೇ      ೩೨

ಕರಿ ಕರಿದಾ ಕರಿಗಂ ಮಧು
ಕರಿ ಕರಿದಾ ಕರಿ ಮಧುಕರಿಗಮನ್ಯಭೃತಮುಂ
ಕರಿದಾ ಕರಿಗಂ ಮಧುಕರಿ
ಗಿರಿದನ್ಯಭೃತಕ್ಕೆ ಕರಿದು ತಿಮಿರಪ್ರಸರಂ           ೩೩

ಇಡುಕುಱೊಳೊತ್ತಿನೊಳ್ ಮುರಿದ ಭಿತ್ತಿಯ ಸಂಧಿಯೊಳೆಯ್ದೆ ಕೇಳಿವಿ
ಟ್ಟೆಡೆಯೊಳೆ ಪಿತ್ತಿಲೊಳ್ ಪ್ರಕಟಮಿದ್ದೆಡೆಯೊಳ್ ಮಱೆಗೊಂಡು ಪಾಣ್ಬರುಂ
ಮಿಡುಕದೆ ಪಾಣ್ಬೆಯರ್ ನಲಿದು ಬಂದಪರೆಂದಡರ್ಗಿದರೆಲ್ಲಿಯುಂ
ತಡೆಯದೆಯುರ್ವಿ ಕೊರ್ವಿ ಕಡುಪರ್ವಿ ಮುಸುಂಕೆ ದಿಗಂತಮಂ ತಮಂ           ೩೪

ತಮಸಂ ಕಲಕೋಕಿಳಕುಳ
ಸಮಮಂ ಕಜ್ಜಳವಿಶೇಷಮಾರಿಚ್ಛಾಯೋ
ಪಮಮಂ ಮಧುಕರರುಚಿವಿ
ಭ್ರಮಮನದೇವೊಗಳ್ವೆನಾತ್ತಕುಲಟಾಭ್ರಮಮುಂ          ೩೫

ನಿರುಪಮರೂಪವದ್ಗಗನಮಂಡಳಲಕ್ಷ್ಮಿ ಮನಃಪ್ರಿಯಂ ಕಳಾ
ಧರವರನೆನ್ನಸನ್ನಿಧಿಗೆ ಬಂದಪನೆಂಬ ವಿಶೇಷಹರ್ಷದಿಂ
ದುರುತರ ಮೌಕ್ತಿಕಾಭರಣಮಾಳಿಕೆಯಂ ನೆಱೆತೊಟ್ಟಳೆಂಬಿನಂ
ಸುರುಚಿರ ತಾರಕಾವಳಿಗಳಾಗಸದೊಳ್ ಪೊಳೆದಿರ್ದವೆತ್ತಲುಂ         ೩೬

ಮೊದಲ ದಿಗಂಗನೆಯಂ ತ
ಣ್ಗದಿರಂ ಹಾದರಿಗನೊಲ್ದು ತಂಬುಲದಿಂದಂ
ದುದಯಾದ್ರಿಭಿತ್ತಿಯಂ ಮಾ
ಣದೆ ಮಱೆಗೊಂಡಿಟ್ಟ ತೆಱದೆ ತೋಱಿತ್ತರುಣಂ           ೩೭

ರಾಜಂ ಬಂದಪನೀಗಳಭ್ಯುದಯಮಂ ಪೆತ್ತು ಪ್ರಭಾಚಕ್ರವಿ
ಭ್ರಾಜಂ ನಮ್ಮೆಡೆಗಾತನಂ ನಿವಳಿಸಲ್ವೇಡಿಂದ್ರದಿಕ್ಕಾಮಿನೀ
ವ್ರಾಜಂ ಮಾಣಿಕದೊಪ್ಪುವಾರತಿಗಳಂ ಮಾಡಿದ್ದೊಡಾ ಭೂರಿಭಾ
ರಾಜಿವ್ಯಾಪ್ತಿಯಿದೆಂಬವೋಲರುಣಿಮಂ ಪರ್ವಿತ್ತು ದಿಕ್ಪ್ರಾಂತಮಂ  ೩೮

ಚಂದ್ರಮನಿಂದೆನ್ನಾಸೆಗೆ
ಬಂದಪನೆಂದಿಂದ್ರದಿಕ್ಕುಮಾರಿಕೆ ತೊಟ್ಟತಿ
ಸೌಂದರಮಣಿಭೂಷಣರುಚಿ
ಯಂದದೆ ಕಡುಗೆಂಪು ಪೆಂಪುವಡೆದುದು ಸುತ್ತಂ  ೩೯

ವ : ಆಗಳಭಿನವ ಸುಧಾಕರೋದಯ ಸಮಯಮುಖದೊಳಖಿಳನಿಳಿಂಪ ವಿಲಾಸಿನೀ ಸಂಕುಳದೊಳೋಕುಳಿಯಾಟದೊಳೊಗುವ ಜೀರ್ಕೊಳವಿಗಳನೊತ್ತರಿಸಿ ನೂಂಕಿ ಮೇಗೆಮೇಗೆ ನೆಗೆವ ಕುಂಕುಮಪಂಕಪರಿಕಳಿತ ಹರಿಚಂದನರಸಧಾರಾಪೂರ ಪರಂಪರೆ ತಳ್ತೆಂಬಂತೆ ನಿರಂತರಿತ ಮುಖರಮಯೂಖಶಿಲಾಲೇಖೆಗಳುನ್ಮುಖತೆ ಯನಪ್ಪುಕೆಯ್ವುದುಂ

ಕತ್ತಲೆಯೆಂಬಾನೆಯ ಮೇ
ಲೊತ್ತಮಿಸಿಯೆ ಪಾಯಲೆಂದು ಶಶಿಕೇಸರಿ ಮೇ
ಲ್ಗೆತ್ತಿದ ಪದದುಗುರ್ಗಳವೋಲ್
ಬಿತ್ತರಿಸಿದವೆಯ್ದೆ ನಿಮಿರ್ದ ಕಿರಣಾಗ್ರಂಗಳ್      ೪೦

ನಲಿದು ಚಕೋರಿಯಾಡೆ ಕಮಳಂ ಮಿಗೆಬಾಡೆ ಮದಾಳಿ ಕೂಡೆ ಕ
ತ್ತಲೆ ಕೆರಳ್ದೋಡೆ ನೆಯ್ದಲೆಸಳಾವಳಿ ನೋಡೆ ರತೀಹೆ ತೀಡೆಯ
ಗ್ಗಳಿಸಿದ ಕಂತು ಕಾಡೆ ಬೆಳಗಂ ಜಗತೀತಳದಲ್ಲಿ ಮಾಡೆ ಕೋ
ಟಲೆಯನಯೋಗಿ ಮೂಡೆ ಸಲೆಮೂಡಿದುದೊಯ್ಯನೆ ಚಂದ್ರಮಂಡಲಂ        ೪೧

ಉದಯಿಸಿದರ್ಧಬಿಂಬದೊಳಗೊಪ್ಪುವ ನುಣ್ಗಱೆ ಕಜ್ಜಳಂಬೊಲಿಂ
ಬೊದವಿರೆ ಮೇಲಣರ್ಧಮದು ಸುಸ್ಫಟಿಕೋಮಳರಾಜನಾರ್ಧದಿಂ
ಪದುಳಿಸಿ ರಾತ್ರಿಯೆಂಬಬಲೆ ಕಾಡಿಗೆಯಂ ಪಿಡಿಯಲ್ ಕಳಾಪ್ರದೀ
ಪದ ತುದಿಯಂ ಮುಸುಂಕಿದವೊಲಿರ್ದುದು ಖಂಡಹಿಮಾಂಶುಮಂಡಳಂ       ೪೨

ಘನತರಕಾಂತಿಯಿಂದೆ ಪೊಳಪೇಱಿ ಸುವೃತ್ತತೆಯಿಂದಮೊಪ್ಪಿ ಮ
ತ್ತನುಪಮಮಾಗಿ ಕೋವಿದರ ಲಾಲನೆಯಂ ಬಿಡದಪ್ಪುಕೆಯ್ದು ಭೂ
ಜನತೆಯ ಕಣ್ಗಗುರ್ವನಿರದತ್ತು ವಿಜೃಂಭಿಸಿದತ್ತು ಪೂರ್ವದಿ
ಗ್ವನಿತೆಯ ಕರ್ಣದೇಕಮಣಿಕುಂಡಳದಂತಿರೆ ಚಂದ್ರಮಂಡಳಂ          ೪೩

ಉದಯಗಿರೀಂದ್ರಗೈರಿಕರಜಂ ಪುದಿದಂತಿರೆ ರಕ್ತಮಾಗಿ ಪೂ
ರ್ವದ ದೆಸೆವೆಣ್ಣ ತೋಳರಿಸಿನಂ ಪೊರೆದಂತಿರೆ ಪೀತಮಾಗಿ ನಾ
ಕದ ನದಿಯೊಳ್ ಮುಳುಂಕಿ ತೊಳೆದಂತೆ ಪಳಚ್ಚನೆ ಶುಭ್ರಮಾಗಿ ಕ
ಣ್ಗೊ[ದವಿ]ಸಿದತ್ತಗುರ್ವನುರುದೀಧಿತಿಮಂಡಲಮಿಂದುಮಂಡಲಂ  ೪೪

ಪದೆದಿಂದ್ರನೀಲಮಾಣಿ
ಕ್ಯದ ಹಾರಮನಿಕ್ಕಲುರದೊಳೊಪ್ಪಂಬೆತ್ತಿ
ರ್ದುದು ತೋರ್ಕೆವೆತ್ತುದೆಂಬಂ
[ತದು] ಪೊಳೆದುದು ಚಂದ್ರಬಿಂಬದಲ್ಲಿ ಕಳಂಕಂ೪೫

ಪೊಳೆವ ಕಳಂಕಮೆಂಬ ಶಬರಂ ಶಶಿಮಂಡಳಮೆಂಬ ತೆಪ್ಪದೊಳ್
ನೆಲಸಿ ನಭಸ್ತಟಾಕದೊಳಗುಣ್ಮುವ ಕರ್ಕಟಮೀನರಾಸಿಗಂ
ದೆಳವೆಳುದಿಂಗಳೆಂಬ ಬಲೆಯಂ ನೆಱೆವೀಸಿದನೆಂಬ ಮಾಳ್ಕೆಯಿಂ
ಬಳಸಿದುದೆತ್ತಲುಂ ನಿಮಿರ್ದು ನೀಳ್ದು ಸುಧಾಕರಕಾಂತಿಸಂಕುಳಂ     ೪೬

ನಸುನಸುಮಬ್ಬಿನೊಳ್ ನುಸುಳ್ವ ತಿಂಗಳ ನುಣ್ಗದಿರೆಳ್ಳುಮಕ್ಕಿಯುಂ
ಪಸರಿಸಿತೋರ್ಪವೊಲ್ ನಿಮಿರ್ದ ನೀಳ್ದಡರಲ್ ಗಗನಾಂತರಾಳದೊಳ್
ಪಸಿದ ಚಕೋರಿಕಾಶಿಶುಗಳೀಕ್ಷಿಸಿ ಬಂದೊಳಪೊಕ್ಕು ಪೀರ್ದು ಪೀ
ರ್ದೊಸೆದು ಕರ್ದುಂಕುತಿರ್ದುವು ಮನಂ ದಣಿವನ್ನೆವರಂ ದಲಾಕ್ಷಣಂ೪೭

ರಾಜಂ ಬಂದು ಕರಾಗ್ರದಿಂ ರಜನಿಯಂ ತರ್ಕೈಸಲಾಗಳ್ ತಮೋ
ರಾಜಿವ್ಯಾಪೃತಿಯೆಂಬ ನೀಲಮಯವಸ್ತ್ರಂ ಪಿಂಗಿಪೋದತ್ತು ಸ
ದ್ರಾಜೀವಾಯತಲೋಚನಂ ಮುಗಿದುದುದ್ಯಚ್ಚಂದ್ರಕಾಂತೋಪಳ
ವ್ಯಾಜೋತ್ಸಾಹದಿನಾಕ್ಷಣಂ ದ್ರವಿಸಿದತ್ತೇಂ ಚೋದ್ಯಮೋ ಮೋಹನಂ        ೪೮

ಸ್ಮರಚಕ್ರಾಧೀಶ್ವರಂಗೆತ್ತಿದ ಪೊಸಧವಳಚ್ಛತ್ರಮೆಂಬಂತೆ ಚೆಲ್ವಂ
ಧರಿಸಿತ್ತಂತಲ್ಲದಿರ್ದಂದದಱಿನಧಿಕಕಾಮಾಸ್ಪದಸ್ತ್ರೀಮುಖಾಭ್ಯಂ
ತರದೊಳ್ ಛಾಯಾವಿಶೇಷಂ ಸ್ಥಿತಿಯುದಯಮದೆಂತಕ್ಕುಮೋ ಗರ್ವಮೆಂಬು
ದ್ಧುರತಾಪಂ ಕೇಡನೆಂತೆಯ್ದುವುದೊ ಬಗೆವೊಡಿಂತೊಪ್ಪಿದತ್ತಿಂದುಬಿಂಬಂ   ೪೯

ವರಪೀಯೂಷಾದಿಪಾತ್ರಂ ಯುವತಿವಿಕೃತಿಮಿತ್ರಂ ಸುತಾರಾಕಳತ್ರಂ
ಸರಸೀಜಾಸ್ಯಾತ್ತಮುದ್ರಂ ಕೃತಕುಮುದವಿನಿದ್ರಂ ಪ್ರಪುಷ್ಯತ್ಸಮುದ್ರಂ
ಪಿರಿದುಂ ಪೇಳಲ್ಕಳುಂಬಂ ಮದನಮುಕುರಬಿಂಬಂ ತಮಶ್ಶೈಲಶಂಬಂ
ಪರಿಶೋಭಾಭಾರರುಂದ್ರಂ ಬಹಳಕಿರಣಸಾಂದ್ರಂ ಮಹಾಪೂರ್ಣಚಂದ್ರಂ       ೫೦

ವ : ಇಂತು ಸುಧಾಸೂತಿಮಂಡಳಮತಿಪ್ರೌಢಮಾಗೆ

ನವಚಂದ್ರೋಪಳದೊಂದು ಚೆಲ್ವನಯನಂ ತಾನೆಂಬಿನಂ ಪದ್ಮಸಂ
ಭವನುಂ ಪತ್ತುದಿಶಾಭಿಭಿತ್ತಿಗಳೊಳಿಟ್ಟೊಳ್ಶಂಖಮೆಂದೆಂಬಿನಂ
ದಿವಮೆಂಬಿಂದಿರೆಯುಟ್ಟುತೋರ್ಪ ದುಗುಲಂ ತಾವೆಂಬಿನಂ ಲೋಕಮೆ
ಲ್ಲಮನಾಚ್ಛಾದಿಸಿದತ್ತು ಬಣ್ಣಮದುಮೊಂದಾದಂತೆ ಚಂದ್ರಾತಪಂ           ೫೧

ವ : ಮತ್ತಂ ಜಗದ್ವಳಯಮನದಟಲೆದು ನುಲಿದು ಕೋಟಲೆಗೊಳಿಸುವ ನನೆವಿಲ್ಲಬಲ್ಲಹನ ದಿಗ್ವಿಜಯಕ್ಕಾಗಿ ವಸಂತವನಪಾಲಕನಲರ್ಗಣೆಗಳ ಬಳಗಂಗಳನಗೆ ವೊಯ್ದನೆಂಬಂತೆ ಥಳಥಳಿಸಿ ತೊಳಗಿ ಬೆಳಗುವಚ್ಚಬೆಳ್ದಿಂಗಳ್ ಪಿರಿದುಂಪೆರ್ಚಿ ಬಿಚ್ಚದೆ ನಿಬಿಡಮಾಗಿ ಬಿಡದಡರ್ಮ ಕೆದಱಿ ನಾಂದು ಪೊದಱುಗಟ್ಟಿ ಪರಕಲಿಸಿ ಪಸರಿಸುತ್ತುಮಿರೆ

ನೆತ್ತಿಯೊಳೊತ್ತಿ ಪೊತ್ತು ಪದದಿಂದೊಡೆದೊಯ್ಯನೆ ನೂಂಕಿ ಪಕ್ಕದಿಂ
ಮತ್ತಮರ್ದಪ್ಪಿಕೊಂಡು ನಿಜಚಂಚುಪುಟಾಗ್ರದೆ ಚಲ್ಲೆವೊಯ್ದು ಮೆ
ಯ್ವೆತ್ತು ನಖಂಗಳಿಂದೆ ಬಿಡದೋಡಿ ಕರಂ ನಲಿದಾಡುತಿರ್ದುದ
ತ್ಯುತ್ತಮಕೌಮುದೀತತಿಯನೊಲ್ದು ಚಕೋರಕುಳಂ ನಿರಾಕುಳಂ    ೫೨

ತಿಱಿಗದಿರನಿತ್ತು ತನ್ನಯ
ಮಱಿಗಂ ತನಿಗದಿರನಿತ್ತು ತನ್ನಿನಿಯಂಗಂ
ತುಱುಗಿದ ನುಣ್ಗದಿರಂ ಬೇ
ಸಱದೀಂಟುತ್ತಿರ್ದುದಂದದೊಂದು ಚಕೋರಂ   ೫೩

ವ : ಅದಲ್ಲದೆಯುಮೆಲ್ಲಾ ತಾಣದೊಳ್ ಬೆಳ್ಳಂಗೆಡೆದು ಬಳ್ಳಿವರಿದಚ್ಚವೆಳ್ದಿಂಗಳು ತ್ತುಂಗಗಂಗಾಪ್ರವಾಹಮುದ್ರಿಕೆ ಸೆಜ್ಜೆಡೆಯಿಂದಿಳಿದು ಬಿಳ್ದು ಪರಕಲಿಸಿತೆಂಬಭಿಶಂಕೆಯಿಂ ಕೆದಱಿದ ಜೆಡೆಯೊಳ್ ಮಗುಳೆ ಮುದ್ರಿಸಿ ಸೈತೆಮಾಡುವುಜ್ಜುಗಮನುಮಾ ವಲ್ಲಭಂಗೊಗೆಯಿಸುತುಂ ಚಂದ್ರೋದಯದೊಳಚ್ಚರಿಯಾಗಿ ಪೆರ್ಚುವಡೆದ ಕ್ಷೀರೋದ ಭೂರಿಪೂರದ ಧೋರಣೆ ಮೇರೆಯಂ ಮೀಱಿ ನಿಖಿಳಧಾರಿಣೀತಳಮನೊರ್ಮೊದಲೊಳ್ ಮುಸುಂಕಿ ದಿಕ್ಕುಹರವಿವರಮಂ ತಳ್ಪೊಯ್ವುತ್ತುಂ ತನ್ಮಯಮಾಗಿ ಪರಿಣಮಿಸಿ ತೆಂಬಂತಗುರ್ವನುರ್ವಿಸೆ ಪಾಲ್ಗಡಲ ನಡುವಿದಿಲ್ಲಿ ಜಲಶಯನಮನೆಸಲ್ವೇಳ್ಕುಮೆಂಬ ಬಗೆಯಂ ಹರಿಗೆ ಪುಟ್ಟಿಸುತುಂ ಕಟಾಕ್ಷಕಾಂತಿಯಿಂ ದ್ವಿಗುಣಿಸಿದ ಸಮುಜ್ವಳಮಾದ ಸರಸ್ವತಿಯ ಮೆಯ್ವೆಳಗಿನ ಬಳಗದ ಪಸರದೆಸಕಮಿದೆಂದು ತರ್ಕೈಸುವ ಮೋಹನಮಂ ವಸುಗರ್ಭನಾಶಯದೊಳಿಕ್ಕಿಸುತುಂ ನಂದನವನದ ಮರಂಗಳ್ಗೆ ಬಹಳಮಾದಮೃತರಸದಿಂ ತುಂಬಿದ ಪೃಥುಳತ ರಾಳವಾಳವಳಯಂಗಳ ಮಧ್ಯವರ್ತಿ ಪಾರಿಜಾತಂಗಳ ಲೀಲೆ ಯನೋಲೈಸುತುಂ ಕಲ್ಗಳೆಲ್ಲಕ್ಕಂ ಚಂದ್ರಕಾಂತದ ರೂಪಿನ ಚೆಲ್ವಂ ನೆಲೆಗೊಳಿಸುತುಂ ಜಗಮನುಗೆ ಮಿಗಿಲಾವರಿಸಿ ತುಂಬಿ ತುಳುಂಕಾಡಿ

ಧವಳಿಸಿದಂ ವಿರಿಂಚಿ ಜಗಮಂ ಪೊಸಪಾಲ್ಸೊದೆಯಿಂದಮೆಂಬಿನಂ
ನವತರಮಾಗಿ ಕಂಡರಿಸಿದಂ ನೆಱೆಕರ್ಪುರದಿಂದಮೆಂಬವೋ
ಲವಿರಳಚಂದನದ್ರವದ ಕಲ್ಕದೆ ಪೂಸಿದನೆಂಬಿನಂ ಮಹೀ
ಭುವನದೊಳೆಯ್ದೆತೀವಿದುದು ತಿಂಗಳ ನುಣ್ಬೆಳುದಿಂಗಳಗ್ಗಳಂ      ೫೪

ಇದು ಪುಷ್ಪೋದ್ಗಮರಾಶಿಯಿಂ ಸಮೆದುದಲ್ತಾಮೋದಯುಕ್ತಂ ಸಮಂ
ತದು ಮತ್ತಂ ವರಮೌಕ್ತಿಕೌಘಘಟಿತಂ ತಾನಲ್ತಿದಸ್ಪರ್ಶನಾ
ಸ್ಪದಮಾಗಿರ್ದುದದೆಯ್ದೆ ಪೆರ್ಚಿದಿದನಾನೇನೆಂದು ಪೇಳ್ ಬಣ್ಣಿಪೆಂ
ಪದೆಪಂ ಪೆತ್ತುದು ಕೌಮುದೀಮಯಯುಮಾಯ್ತೀ ಲೋಕಮೆಂದೆಂಬಿನಂ     ೫೫

ವ : ಇಂತಮಂದಚಂದ್ರಿಕಾಸಂದೋಹವಿವರಣಮಖಿಳ ಜಗದಾನಂದಕರಣ ನಿಪುಣೀಭಾವ ಮನಪ್ಪುಕೆಯ್ದಿರ್ಪುದುಮಾಗಳಾ ಸಭಾಮಧ್ಯದಲ್ಲಿ ಸುಕರವಿಳಾಸನೆಂಬ ಪರಿಹಾಸಕಂ ಕೌಮುದೀವರ್ಣನವಿನೋದರೂಪರಸವಚನಂಗಳಿಂ ಸಭೆಯನಭಿರಂಜಿಸಿ ದೇವರ ದೇವಂ ಮೆಚ್ಚಿ ತಲೆದೂಗಿವಿನಂ ಮನಂಗೊಳಿಸಿ ಬಳಿಯಮಿಂತೆಂದನಿಂದಿನ ತುಚ್ಛೇತರ ಕೃತ್ಸ್ನಜ್ಯೋತ್ಸ್ನಾಮಹೋತ್ಸವದೊಳ್ ಪುರದ ಸಿರಿಯಂ ನೋಡುವ ಬಯಕೆ ಬಗೆಯೊಳೊಗೆಯ ದೇವ ನಿಮ್ಮಡಿಗಳಂ ಕರೆಯಲಮ್ಮದೆನ್ನೊಡದೆ ನಾಗರಕಂ ಬೆರಲ ಕೊಂಕಿಂ ಸನ್ನೆಗೆಯ್ದಂ ವಿಟಂ ಶಿರಃಕಂಪನದಿಂ ದಿಟಂಮಾಡಿದಂ ವಿದೂಷಕಂ ಬಂದೆನ್ನ ಕವಿಯಂ ಪಚ್ಚಿದಂ ಪೀಠಮರ್ದಕಂ ಕಣ್ಸನ್ನೆಯಿಂ ನನ್ನಿಗೆಯ್ದನೆಂದು ಪ್ರಹಸನಮುಖದಿಂ ಬಿನ್ನಪಂಗೆಯ್ದು

ಅವರಂತಿಕ್ಕೆ ಭವತ್ಪದಾಂಬುರುಹಸೇವಾಸಕ್ತನಪ್ಪೆನ್ನ ಮು
ದ್ದುವಚೋವೃತ್ತಿಯನೊಲ್ದು ಮನ್ನಿಪುದಿದಂ ಚಿತ್ತೈಸೆಲೇ ದೇವ ಮಾ
ನವಪೂಜ್ಯಾಭಿನದಂಗಳಿಂದೆ ಬಿಜಯಂಗೆಯ್ದೀ ಪುರಶ್ರೀವಿಳಾ
ಸಮನೀಗಳ್ ನಡೆನೋಡಿ ಕಣ್ಗೆ ತಣಿವಂ ಪೆತ್ತೆಯ್ದು ಸಂತೋಷಮಂ            ೫೬

ವ : ಅಂತುಮಲ್ಲದೆಯುಂ

ವಾತಾಯನ ವಿವರ ಸಮಾ
ಪಾತಿತಕರದಿಂದೆ ಪಿಡಿದು ನಿಮ್ಮಂಘ್ರಿಗಳಂ
ಸಾತಿಶಯ ಪ್ರೀತಿಯುತಂ
ಶೀತಕರಂ ಕಱೆವ ತೆಱದೆ ಪೊಱಗೆಸೆದಿರ್ದಂ        ೫೭

ಎಂದು ಬಿನ್ನೈಸೆ ದೇವನ
ಮಂದಸ್ಮಿತವಚನಶೋಭೆ ಮನದನುಮತಿಯಂ
ಸಂಧಿಸಿ ಪೇಳಲ್ ಪೊಡೆವಡು
ವಂದದಿನವಧಾನಮೆಂದು ಕೈಗೊಡುತೆಳ್ದಂ      ೫೮

ವ : ಇಂತು ಪರಿಹಾಸಕಂ ದೇವನಂ ರಾತ್ರಿವಿಹರಣಕ್ಕಭಿಮುಖಂಮಾಡ ಲೊಡಮಾ ತ್ರಿಲೋಕೀಭೂಷಣಂ ತತ್ಕಾಲೋಚಿತಭೂಷಣದಿಂದಭಿಭೂಷಿತನಾಗೆ

ಕಪ್ಪುರದಿಂದೆ ಕಂಡರಿಸಿ ಮಾಡಿದ ಕರ್ಣದ ಭೂಷಣಂ ಕಟಾ
ಕ್ಷಪ್ರಭೆ ಪಿಂಡುಗೊಂಡು ನೆಲಸಿರ್ದವೊಲುಟ್ಟು ದುಕೂಲಚೇಲಮುಂ
ನೇರ್ಪಡೆ ತೊಟ್ಟ ಮುತ್ತುಗಳ ನುಣ್ದೊಡವುಂ ಹರಿಚಂದನಾನುಲೇ
ಪಾರ್ಪಣಮಂ ಮನಂಗೊಳಿಸಿದತ್ತುರುಚಂದ್ರಿಕೆಯಪ್ಪಿದಂದದಿಂ      ೫೯

ಅಮೃತದ ಪೂರದಿಂ ತೊಳೆದವೊಲ್ ಪೊಳಪೇಱಿ ಪಳಚ್ಚನಾಗಲಾ
ದಮೆ ಪೊಳಲೆಲ್ಲಮಾಗಳವನೀಪತಿ ಪಾಲ್ಸೊದೆಯಿಟ್ಟ ಸೌಧಯ
ತ್ತಮಶಿಖರಾಗ್ರದಿಂದಮಿಳಿತಂದನುದಗ್ರವಿಮಾನದಿಂದೆ ಚಂ
ದ್ರಮನಿಳಿತಪ್ಪವೋಲ್ ಕುಸುಮಬಾಣವಸಂತಸಹಾಯಸೇವಿತಂ    ೬೦

ಅರಮನೆಯಿಂದಂ ತಳರ್ದಾ
ನರನಾಥಂ ಮುದದೆ ನಡೆದು ಪೋಗುತ್ತಿರ್ದಂ
ಸ್ಮರಚಕ್ರವರ್ತಿ ತನ್ನಯ
ಪರಿಕರದೊಡಗೂಡಿ ನಡೆದು ಪೋಪಂತೆವೊಲಂ  ೬೧

ವ : ಆಗಳಾ ಮನುಜಮನೋಜನ ರಜನೀವಿಹಾರಕೇಳಿಗುದ್ದೀಪಕರಪ್ಪ ಮೇಳದ ಕೆಳೆಯರ್ ನಾಲ್ವರನುನಾಯಕರಂ ನಾಲ್ವರ್ ಮುಖ್ಯನಾಯಕರಂ ಕೂಡಿಕೊಂಡು

ಪುರವೃತ್ತಾಂತವಿದಂ ನಾ
ಗರಕಂ ಪರಿಹಾಸಕಂ ವಿದೂಷಕನೆನಿಪಂ
ಸುರತಪ್ರೌಢಂ ವಿಟನೊ
ಲ್ದರಸನ ಪರಿಪೀಠಮರ್ದಕನುಮೀ ನಾಲ್ವರ್   ೬೨

ಅನುನಾಯಕರೆಂದೆನಿಸುವ
ರನುಕೂಲಂ ದಕ್ಷಿಣಂ ಶಠಂ ಧೃಷ್ಟನುಮೆಂ
ಬಿನಿಬರ್ ನಾಯಕಮುಖ್ಯರ್
ಬಿನದಿಗರಿಂತೆಣ್ಬರುಂ ವಿನೋದಸಹಾಯರ್     ೬೩

ವ : ಇಂತಿವರೊಡಗೂಡಿ ಮಹಾರಾಜಂ ರಾಜಮಾರ್ಗಂಬಿಡಿದು ನಡೆತಂದು ಮಂಗಳಮಾದಂಗಡಿಗೇರಿಯಿಕ್ಕೆಲಂಗಳೊಳ್‌ಕಿಕ್ಕಿಱೀಗಿಱಿದು ಸಂಗಡಿಸಿ ನಿಂದು ಮಾಲ್ಯಾಂಗ ಲೇಪನಾಂಗಂಗಳೆಂಬ ಜಂಗಮ ಕಾಮಕಲ್ಪತೆಗಳ್ ಕೈವಂದುದೆಂಬಂತೆ ಮನಂಗೊಳಿಸಿ ನೀಱದ ಮನಮಂ ಬೆಲೆಗೊಂಡು ಪೂಮಾಲೆಯಂ ಗಂಧದುರುಳಿಯಂ ಮಾಱುಚ ಮಾಲೆಗಾತಿಯರ ಘಟ್ಟಿವಳ್ತಿಯರ ಶರೀರಸೌರಭಸಂಕುಳದಿಂ ದಳವೇಱಿ ಕಿಱುಮ ಡುಗೊಂಡು ಸುತ್ತಲುಂ ಪಸರಿಸಿ ಪರಿವೋಗರದ ಪರಿಮಳಭರ ತರಂಗಿಣಿಯ ಸುಳಿಯೊಳೀ ಸಾಡುವಂತೆ ವಿಳಾಸದಿಂ ನುಸುಳ್ದು ನುಸುಳ್ದು ಬರ್ಪಾಗಳ್

ಅಸದುರುಮೌಕ್ತಿಕಾಭರಣದಿಂ ನಗೆಗಣ್ಗನುರಾಗದೇಳ್ಗೆಯಂ
ಪಸರಿಪ ಚೆಲ್ವ ಪೊಚ್ಚಪೊಸಜವ್ವನ ಮುಂದಿದಿರಂ ಬರುತ್ತಿರಲ್
ವಸುಮತಿಗೀಶನಾ ಮನುಜಮನ್ಮಥನಾಕೆಯನೊಲ್ದುನೋಡಿದಂ
ರಸೆಯೊಳೆ ಮೂರ್ತಿವೆತ್ತ ಬೆಳುದಿಂಗಳ ಪುತ್ತಳಿಯೆಂಬ ಶಂಕೆಯಂ      ೬೪

ವ : ಅವಳಂ ಕಂಡು ಮನಂಗೊಂಡು ನಾಗರಕನೆಂದನೀಕೆಯ ರೂಪಕಳಾ ಕೌಮುದೀಸ ಮಾಸ್ವಾದನದಿನೆಮ್ಮಯ ಲೋಚನಚಕೋರಿಕಳಭಂಗಳ್ ತಣಿದು ನಲಿದವು ನಡಯಿಯೆನೆ ಮುಂದೊಂದೆಡೆಯೊಳ್ ಪುರೋಹಿತನಿಕೇತನವೀಧಿಕಾಪ್ರದೇಶಮನೆಯ್ದೆವರ್ಪುದುಮಲ್ಲಿ

ತವಕಿಸಿ ಮಿಂಡನಂ ವಿಧವೆ ಕಂಡಭಿಸೂಚಿತಶಾಲೆಗೊಯ್ದು ಕೂ
ಡುವ ಪದದಲ್ಲಿ ಕೂಗಿಡುತುಮಿಕ್ಕೆಲೊಯಿಕ್ಕೆಲೊಯಿಕ್ಕುಯಿಕ್ಕು ನೀಂ
ಶಿವಶಿವ ಲಿಂಗಲಿಂಗ ಹರ ಶಂಕರ ಶಂಕರ ಶಂಕರ ಕಾಮಸೌಖ್ಯದು
ತ್ಸವಮನೆ ನಿಚ್ಚಲುಂ ಕರುಣಿಸೀ ಪರಿಯಿಂದೆನುತಿರ್ದಳಾಕ್ಷಣಂ       ೬೫

ವ : ಇಂತಪ್ಪ ವಿಕಾರವಿಜೃಂಭಣಮಂ ನೋಡುತ್ತು ಕೇಳುತ್ತುಮಿರ್ದ ಪೆಂಡಿರ್ ಮಾಡದುದೇನೆಂದು ತಮ್ಮೊಳ್ ಮಾತಾಡುತ್ತುಂ ವಿಳಾಸಿನೀನಿವಾಸದಂತಿಕಕ್ಕೆವರೆ

ಕೇಶವಭಟ್ಟರೆಮ್ಮಯ ಪೆಸರ್ ನಿನಗೇನಱಿಯಲ್ಕೆಬಾರದೇ
ಬಾಸುಳಡರ್ವವೋಲುರಮನೇಕೆಗ ಪೊಯ್ದಪೆ ಬೇಡಬೇಡ ನಾ
ಲ್ಕಾಸುರಮಾದ ಸೆಳ್ಳುಗರನೊತ್ತಿದುಡುಃಯೆನುತೆಳ್ದು ಱಂಡೆ ಸಂ
ಕ್ಲೇಶಮನಿತ್ತಳೈ ಹರಿಹರೀಯೆನುತಂ ದ್ವಿಜಮುಗ್ಧನೋಡಿದಂ      ೬೬

ವ : ಇದು ಮೊದಲಾದನೇಕವಿನೋದಂಗಳಂ ಕಂಡು ಮಹೀಮಂಡನಂ ಪ್ರಹಸನ ಪರಿಸ್ಫುರಿತಗಂಡಮಂಡಲನಾಗಿ ವಿದೂಷಾದಿಗಳ್ಗೆ ತೋಱುತ್ತುಂ ಮುಂದೆ ನಡೆವೆಡೆಯೊಳ್

ವಿರಹಾಸಕ್ತವಿಟೀವಿಟಾನನಭವನ್ನಿಶ್ವಾಸದೊಂದುಷ್ಣದಿಂ
ಪೊರೆದಿರ್ದಾಕುಳಮಂದಗಂಧವಹನಂದೆಯ್ತಪ್ಪ ಭೂಮಂಡಳೇ
ಶ್ವರದೇಹಸ್ಥಿತ ನವ್ಯಶೈತ್ಯಭರಮಂ ಸೌಗಂಧ್ಯಮಂ ಕೀರಸು
ಸ್ವರದಿಂ ಯಾಚಿಸಲೆಂದು ಬರ್ಪ ತೆಱದಿಂ ಬಂದತ್ತು ವೇಶ್ಮಾನಿಳಂ   ೬೭

ವ : ಅಂತು ಸೂಳೆಗೇರಿಯ ಗಾಳಿ ತೀಡಲೊಡಂ ಮೆಯ್ಪುಳಕಂಗಳೋಲಗಕ್ಕ ವಸರಂಗುಡೆಯನುಕೂಲನಾಯಕಂ ಲೋಕದೊಳಾವಾದ ಬಿನದಂಗಳುಂಟವೆಲ್ಲವ ನಿಲ್ಲಿಕಾಣಲಕ್ಕು ದೇವರಿತ್ತ ಬಿಜಯಂಗೆಯ್ವುದೆಂದು ಬಿನ್ನವಿಸುವುದುಮಾ ಮನುಜೇಂದ್ರ ಚಂದ್ರಮಂ ತಾರಾಂತಃಪುರನಿವಾಸವೀಧಿಯಂ ಪುಗುವ ಚಂದ್ರಮನೆಂಬಂತೆ ಸೂಳೆಗೇರಿ ಯಂ ಪುಗುತಪ್ಪಾಗಳೊಂದು ಪಳುಕಿನ ಸೆಜ್ಜೆವನೆಯ ಕನಕವೇದಿಯ ಮುಂದಣ ಧವಳಪ್ರತೋಳಿಕಾಭ್ಯಂತರಾಳಮಣಿಕುಟ್ಟಿಮರಾಜಾಂಗಣಸ್ಥಳದೊಳಗೆ ಮಳಯರುಹ ತರುಗಳಂ ಕಂಡರಿಸಿಯಂತರಾಂತರಪ್ರದೇಶಮುಚಿತಮಾಗಿ ಕೀಲಿಸಿದ ನವರತ್ನಂಗಳ ವರ್ಣಕ್ರಮವಿನ್ಯಾಸದಿಂ ವಿಚಿತ್ರಂಬೆತ್ತು ವಿರಚಿಸಿದಮಳ್ಗಂಬಗಳಿಂದಂ ಪವಳದ ಮೇಲ್ವಲಗೆಯಿಂದಂ ಮುತ್ತಿನ ಮಿಳಿಯಿಂದಂ ಬಿತ್ತರಂಬಡೆದು ಪಚ್ಚವಡಿಸಿದ ಮರಕತದ ಮಣಿಯಿಂದಂ ಮೇಲೆ ತೆತ್ತಿಸಿದ ಕನಕಕಳಶ ಮಣಿದರ್ಪಣಂಗಳಿಂದಂ ಥಳಥಳಿಸಿ ಪೊಳೆದು ತೋರ್ಕೆವೆತ್ತು ಸಮಾಲಂಬಮಾನಪುಷ್ಪಮಾಲಾಜಾಲಂಗಳಿಂದಚ್ಚಿಯಾಗಿ ಮದನಮಂಗ ಳಾಗಾರದ್ವಾರ ತುಂಗತೋರಣದಂತೆ ರಯ್ಯಮಾದ ನವಿಲುಯ್ಯಲಂತಿಕಕ್ಕೆ ದಂತಾವಲ ಗಮನೆ ನಡೆತಂದು ನಿಂದು ತನ್ನೊಡನಾಡಿಗಳಪ್ಪ ಮೇಳದ ಕೆಳದಿಯರ್ಗೆ ಕರ್ಪುರದ ವೀಳೆಯಮಂ ಪೂವಿನ ಮಾಲೆಯಂ ಕತ್ತುರಿಯ ತಿಳಿಕಮನಿತ್ತು ಬಾಯಿನ ಬೀಯಂ ಬೆಡಂಗಂ ಬೀಱೆ ಮಂಗಳಗೇಯಂ ಸಂಗಳಿಸಿ ಪೊಣ್ಮುತ್ತುಮಿರೆ

ಬಡನಡು ಕೊಂಕೆ ತೋರಮೊಲೆಯೊಡ್ಡು ವಿಜೃಂಭಿಸಿ ಮುಂದೆನೂಂಕೆ ನು
ಣ್ಪಡಸಿದ ರಜ್ಜುವಂ ಪಿಡಿದ ಕೆಂದಳಮಚ್ಚರಿಯಂ ತೊಡಂಕೆ ಚೆ
ಲ್ವೊಡರಿಸೆ ದಕ್ವಿಣಾಂಘ್ರಿತಳದಿಂ ಮಣೆಯಂ ಬಿಡದೌಂಕಿ ಮೆಟ್ಟಿ ಜಾ
ಣಿಡೆ ನವಿಲುಯ್ಯಲಂ ಲಲನೆಯೇಱಿದಳಂಗಜನೇಱೆ ಗರ್ಭಮಂ      ೬೮

ವ : ಮತ್ತಂ ಚಿತ್ತವಲ್ಲಭಂ ಮಣೆಯ ಕಡೆಯಂ ಪಿಡಿದು ಮೆಲ್ಲಮೆಲ್ಲನೊಲೆ ದೊತ್ತಿನೂಂಕಿ ತೊಗಲೊಡಂ

ಬಿಡದಳ್ಳಾಡೆ ಸಡಿಲ್ದ ಮೇಲುದಿನ ವಸ್ತ್ರಂ ಬೇಟದಚ್ಚಾಡೆ ಬೆಂ
ಬಿಡದೊಳ್ದುಂಬಿಯ ಬಂಬಲಂಬರದೊಳಂ ಮೇಲ್ಸುಯ್ಯಕಂಪಿಂಗೆ ತ
ನ್ನೊಡನೆಳ್ದಾಡೆ ತಳಿರ್ತು ಪೀಲಿದಳೆಯೆಂಬಂತಿಂದುಬಿಂಬಕ್ಕೆ ಧಾ
ಳಿಡುವಂತುಯ್ಯಲನಾಡಿದಳ್ ತರುಣಿ ತನ್ನಂ ನೋಳ್ಪರಂ ಕಾಡಿದಳ್           ೬೯

ಮದದಿಂದಂ ಚಂದ್ರ ನೀನೆನ್ನಯ ವದನಸದೃಶಂ ದಲೆಂದೊಂದು ತಪ್ಪಿಂ
ಗಿದು ನೀನೆನ್ನಂ ವಿಯೋಗಕ್ಷಣದೊಳುರಿಯಿಸುತ್ತಿರ್ಪೆನೆಂಬೊಂದು ತಪ್ಪಿಂ
ಗಿದು ನೀನೆನ್ನೊಳ್ ಕಳಾಶೋಭೆಯಿನುಪಗತಮಾಶ್ಚರ್ಯನಾದೊಂದು ತಪ್ಪಿಂ
ಗಿದು ಮತ್ತೆಂದಿಂದುವಂ ಮೂದಲಿಸಿಯೊದೆವವೋಲುಯ್ಯಲಾಡುತ್ತಮಿರ್ದಳ್           ೭೦

ವ : ಆ ವಿಳಾಸವತಿಯ ಖೇಳನವಿಳಾಸಶ್ರೀಯಂ ನೋಡನೋಡಿ ಮೆಚ್ಚುತ್ತುಂ ಪೋಗೆ ಮುಂದೆ ಮತ್ತೊಂದುತಾಣದಲ್ಲಿ ಮಲ್ಲಿಗೆಯರಲಮಾಲೆಗಳಿಂ ಹೊಂದಾವರೆಯ ಹೊಂಗಳಸದಿಂ ಕೊಸಗಿನ ಕುಸುಮದ ಕನ್ನಡಿಯಿಂ ಚೆನ್ನಂಬಡೆದಸುಕೆಯ ಕೆಂದಳಿರಯ್ಯಲ ನೊರ್ವಗಪೂರ್ವಯವ್ವನೋನ್ಮತ್ತೆ ಬಸನಿಗನನೋಲೈಸುವ ಬೇವಸೆಯಿಂದವನ ಮನವ ನೇಱುವಂತೇಱಿ

ಕಾಮಿನಿ ತನ್ನ ಬಟ್ಟದೊಡೆಯಂ ರಮಣಂಗೆಡೆಗೊಟ್ಟು ಕುಳ್ಳಿರ
ಲ್ಕಾ ಮಣೆಯಂ ಸಖರ್ ಪಿಡಿದು ತೂಗುತುಮಿರ್ದೆಡೆಯಲ್ಲಿ ಜೋಲ್ದುದಂ
ಪೂಮುಡಿಯಂ ಪದಗೊಳಿಸುತುಂ ಪೊಳೆಯಲ್ ತನುದೀಪ್ತಿಯಾಡಿದಳ್
ಪ್ರೇಮದೆ ರಾಗಸಾಗರದೊಳೀಸಿ ಮರಳ್ದಿರದೀಸುವಂದದಿಂ            ೭೧

ಇನಿಯನೊಡಗೂಡಿಯಾಡುವ
ವನಿತೆ ಮಹಾರಾಗಭೇದಮಂ ತೋಱಿಸುತುಂ
ಮನಮೊಲ್ದು ಪಾಡುತಿರ್ದಳ್
ಘನಚಂದ್ರಮುಖಕ್ಕೆ ಗೋರಿಯಂ ಪಾಡುವವೋಲ್        ೭೨

ವ : ಇಂತಾಡುವುಯ್ಯಲ ತೂಕಮಾ ರಾಜಮನೋಜಂಗೆ ಕೂಡೆಗೂಡೆ ತಲೆದೂಕಮನೊಡರ್ಚೆ ಮೆಚ್ಚಿಮೆಚ್ಚಿ ನೋಡುತ್ತುಮಿರ್ಪೆಡೆಯೊಳ್ ವಿಟನಾಯಕಂ ದಕ್ಷಿಣ ನಾಯಕಂಗಿಂತೆಂದ ನಿವಳ್ದಿರ್ ನೋಟಕರನನಂಗಪೀಡಾವಸ್ಥೆಗುಯ್ಯಲಾಡುವಂದ ಮಲ್ಲದುಯ್ಯಲಾಡು ವಂದಮಲ್ತು ಬಱುಮೆಚ್ಚಿನೊಳೇನೀ ನೀಱೆಯರ್ ತೊಡೆಯನೇಱೆಯಾಡಿದೊಡೆ ಸುಖದೊಳೋಲಾಡಲಕ್ಕುಮೆಂದು ನುಡಿದು ನಗಿಸುತ್ತುಂ ನಡೆಯೆ ಮುಂದೊಂದು ದ್ರಾಕ್ಷಾಮಂಡಪದ ನಡುವೆ ಬೆಳುದಿಂಗಳ ಬಳಗಮಂ ರಾಸಿ ಪುಂಜಿಸಿದಂತೆ ರಂಜಿಸುವ ಚಂದ್ರಕಾಂತದ ಜಗುಲಿಯೊಳೊತ್ತೆಗೊಳಲೆಂದು

ಪಿರಿದುಂ ಚೆಲ್ವಾದ ಹೊಂಗೇದಗೆಯ ಗಱಿಗಳಂ ತೀಡುವ ವ್ಯಾಜದಿಂ ನು
ಣ್ಬೆರಳಾಂತೊಂದೊಪ್ಪಮಂ ತೋಱಿಸುತುಮೆಸೆವ ತನ್ನಾಸ್ಯದಚ್ಛಾಯೆಯಂ ಬಿ
ತ್ತರಿಸುತ್ತುಂ ಸುತ್ತಲುಂ ಕಾಮನ ವಿಜಯಮಹಾಲಕ್ಷ್ಮಿ ಬಂದಿರ್ದಳೆಂಬಂ
ತಿರೆ ಚೋದ್ಯಂಬೆತ್ತು ಕುಳ್ಳಿರ್ದಸಿಯಳನರಸಂ ನಿಂದು ನೋಡುತ್ತುಮಿರ್ದಂ    ೭೩

ವ : ಆಗಳನುಕೂಲನಾಯಕಂ ದೇವನ ಮೊಗಮಂ ನೋಡಿ ಗಾಡಿವಡೆದಿವಳ ಶೃಂಗಾರಂ ನೋಳ್ಪ ಜನದ ಹೃದಯಾಂಗಾರಮಾಗಿರ್ದುದಿವಳನ್ನಳಪ್ಪ ಚೆಲ್ವೆಯನೆಲ್ಲಿಯುಂ ಕಾಣೆನದಕಾರಣಮೆನ್ನ ಮನಂ ಬೇವುತ್ತುಮಿರ್ದುದೆಂದು ಮುಗುಳ್ನಗೆಯನೊಗೆಯಿಸುತ್ತುಂ ಪೋಗೆ ಮುಂದೊಂದು ಮತ್ತವಾರಣದ ಕೆಲದೊಳ್

ಕೆನ್ನೆಯ ಚೊಲ್ಲೆಯಂ ಪೊಳೆವ ಮುತ್ತಿನ ಮೂಕುತಿ ನೀಲದೋಲೆ ಚೆ
ಲ್ವಂ ನೆಱೆದುಟ್ಟ ಪಟ್ಟಣಿಗೆಯೊಳ್ನಿಱಿಯೊಳ್ ನಸುದೋರ್ಪ ನುಣ್ದೊಡೆ
ಪ್ರೋನ್ನತಿವೆತ್ತ ಲೋಚನದ ಕಾಡಿಗೆ ಸಾದಿನ ಬೊಟ್ಟು ದೋರೆವ
ಲ್ಚೆನ್ನಮದಾಗಿ ತೋಱುತಿರಲೊತ್ತೆಗೆ ನಿಂದಳದೊರ್ವಳೊಪ್ಪದಿಂ   ೭೪

ವ : ನಾಗರಕಂ ಪೊಸದೇಸೆವೆತ್ತು ನಿಂದವಳ ಗಾಡಿಗೆಯಂ ನೋಡುತ್ತುಮಿರ್ಪೆಡೆಯೊಳೊಂದು ನೆವದಿಂದಾಕೆಯ ಮೇಲುದೋಸರಿಸಿ ಪೋಗಲೊಡಂ

ಮೊಗವಡಮಂ ಕಳಲ್ಚಿದ ಮನೋಭವನಂಕದ ಬಿಂಕದಾನೆಯ
ದ್ವಿಗುಣಿತಶೋಭಕುಂಭಯುಗದಂತಿರೆ ಮೇಲುದು ಜೋಲ್ದುಬೀಳೆ ಮೇ
ಲ್ನೆಗೆದ ಕುಚಂಗಳಿಟ್ಟಳಿಸಿ ಮಮ್ಮಳಿಯಾಗಿರೆ ಕಂಡು ಕೌತುಕಂ
ಮಿಗೆ ತಲೆದೂಗಿದಂ ನಡುವೆ ಕೀಲಿತದೃಷ್ಟಿಯನಂದು ಕೇಳ್ವವೋಲ್‌            ೭೫

ವ : ಆಗಳನಿವಳಂತರಂಗಶೃಂಗಾರಭಂಗಿಯಂ ಪರೀಕ್ಷಿಸಿನೋಳ್ಪೆನೆಂದು ಪೋಗಿನುಡಿಸಿ ಬಂದು ಧೃಷ್ಟನಾಯಕಂಗಿಂತೆಂದ

ನುಡಿದೊಡೆ ಕಾಮಮಿಮ್ಮಡಿಸಿದಪ್ಪುದು ಸಾರೆಗೆ ಪೋಗಿ ಸೋಂಕಿದಾ
ಗಡೆ ಬಿಡದೆಯ್ದೆ ಮೂರ್ಮಡಿಸಿದಪ್ಪುದವಳ್ಗೆ ಮನೋಭವಂಗೆ ಸಂ
ಗಡಿಸಿದನಂಟಿದಾವ ತೆಱನೆಂದಱಿಯೆಂ ಸಲೆಗಾಡಿಕಾರ್ತಿಯೋ
ಗಡಿಸದೆ ಕೊಂದಪಳ್ ತವದ ಕಾಮದ ಕೋಟಲೆಯಿಂದೆ ಲೋಕಮಂ೭೬

ವ : ಎಂದು ನುಡಿದು ನಗಿಸುತ್ತುಂ ಮತ್ತೊಂದೆಡೆಯೊಳೊರ್ವಳ್ ಮುನಿದಿ ನಿಯನಂ ತಿಳಿಪಲ್ ಕಳೆದಿಯಂ ಕಳಿಪಿದೊಡವಳ್ ತಡೆದುಬಂದುದಕ್ಕೆ ಕಡುಕನಲ್ದು ಸೈರಿಸಲಾಱದೆ ವ್ಯಂಗ್ಯದಿಂದಿಂತೆಂದಳ್

ಮೊಲೆಗಳ ಕುಂಕುಮಂ ತೆರಳಿಪೋದುದು ಕಣ್ಗೊಣಗಿದ್ದ ಕಜ್ಜಳಂ
ತೊಲಗಿದುದೆಯ್ದೆ ಬೆಳ್ಪನೊಳಕೊಂಡುದು ಕೆಂಪಧರಂ ಪೊದಳ್ದು ತ
ತ್ಪುಳಕಮಿದಾತನೊಳ್ ನೆರೆದಳೆಂದಭಿಶಂಕಿಸಿ ಮಿಂದುಬಂದೆಯೋ
ಕೆಳದಿ ಮದೀಶನಂ ಕರೆದುಬಂದೆಯೊ ಪೇಳೆನೆ ನಾಣ್ಚಿ ಬಾಗಿದಳ್      ೭೭

ವ : ಅದಂ ಕಂಡಿಕೇ ತನ್ನ ಮರುಳಂ ಮುಚ್ಚಿ ಪೆಱರ ಮರುಳನಾಲೆಂಬ ನಾಣ್ಣುಡಿಯಂ ನನ್ನಿಮಾಡಿಮಱಸಿನುಡಿದೊಡಾಕೆಯಪರಾಧಮಱಿಯಲಾದು ದೆಂದರಸನನುಕೂಲಾದಿಗಳೊಡನೆ ನುಡಿಯುತ್ತುಂ ನಡೆಯೆ ಮುಂದೊಂದೆಡೆಯೊಳೊರ್ವನೆಂದುಮಿಲ್ಲದ ತಪ್ಪನಂದೆಮಾಡಿ ಪುರುಡಿಸಿ ಸೂಱುಳ್ತೊಡಲ್ಲದೊಲ್ಲೆನೆಂದು ರೋಷದಿಂ ಘಾಸಿಮಾಳ್ಪುದುಂ ನೊಂದ ಮನದ ಕಂದಂ ಕಳೆಯಲೆಂದು

ಬಿಡುಬಿಡು ನಲ್ಲ ಕೋಪದೊದವಂ ನಿನಗಲ್ಲದೆಯನ್ನರಿಂಗೆ ಕೂ
ರ್ತಡೆ ರತಿಯಾಣೆಯೆಂದು ತಿಳಿಪಲ್ ವಧು ಕುಂಟಿಣಿ ಕೇಳ್ದು ಪೇಳ್ದಪಳ್
ಸುಡುವುದೆ ಬಾಯನಾಣೆ ಬಳಿನೀರ್ ಪೊಱಪೊಯ್ದುಱೆ ಪೊಟ್ಟೆಯಂ ಸಮಂ
ತೊಡವುದೆ ವಾರವಲ್ಲಭೆಯ ಸೂಱುಳಿದಂ ದಿಟಮೆನ್ನದಿರ್ ಗಡಾ  ೭೮

ವ : ಸೂಳೆಯೊಲ್ದು ಬಿಡಲಾಱದಿನಿಯನನೊಸೆಯಿಸುವ ಬೇವಸೆಯಿಂ ಸೂಱೊಳ್ತೊಡದಂ ವಿಫಳಂಮಾಡಿ ಧನಹೀನನಿವನಿಂದೇನಾದಪುದೆಂದು ಮನಂ ಬಿಡಿಸುವ ಬಗೆಯಿಂ ನುಡಿದ ಮುದುಗುಂಟಣಿಯ ವಕ್ರೋಕ್ತಿಯಂ ಕೇಳ್ದವರಿರ್ವರ ಮೋಹಕ್ಕ ಪೋಹಮ ನೊಡರ್ಚಿದಳೆಂದು ದಕ್ಷಿಣನೊಡನನುಕೂಲಂ ನುಡಿದು ನಗುತ್ತುಂ ನಡೆವುದುಂ ಮುಂದೆ ಮತ್ತೊಂದು ಸೂಳೆವನೆಯೊಳಿರ್ವರುಂ ಬೇಟದ ಕಾಟದಿಂ ಕೋಟಲೆ ಗೊಂಡೊಡನೊಡನೆ ಮಸೆದು ತೋಟಿ ಮಸಗಿ

ಏಕೆದೆಗೊಯ್ಕಿ ಸೊಕ್ಕಿದಪೆ ಪೋ ಫಡ ಬೀಳೆದೆಗೊಯ್ಕಿ ನೀನೆ ನಾ
ಯೇಕೆಗ ಬಾಲಮಂ ಬಡಿದುಕೊಂಡಪೆ ಹೇಕುಳಿಗೊಂಡನಾಯಿ ನೀ
ನೇಕೆಲೆ ಹಂಚೆ ಬಾಯ್ಬಡಿಯದಿರ್ ಕೊಳೆದೆಂಜಲ ಹಂಚು ನೀನೆಯೆಂ
ದೊಯ್ಕನೆ ಬಂದು ಮಚ್ಚರಿಸಿ ಬನ್ನಮನೆತ್ತಿದರಂದು ಸೂಳೆಯರ್  ೭೯

ವ : ಅದಂ ಕಂಡು ಕುಟಿಳವಿಟನರಸನ ಮುಂದಿವಳ್ದಿರ್ ಕಾಮದೇವನಂಕದ ಸೊರ್ಕಾನೆಗಳುರ್ಕಿ ಹೋರಟೆಗೊಂಡಪುವೆಂದು ಕೈಮುಗಿದು ನುಡಿದು ನಗಿಸುತ್ತುಂನಡೆಯೆ ಮುಂದೊಂದೆಡೆಯೊಳ್

ಎಂದುಂ ನಲ್ಲರ ಕೂಟಮಿಲ್ಲರದ ವಿದಗ್ಧಸ್ತ್ರೀಯ ಕೈಯಂ ಮಹಾ
ನಂದಂ ಪೊಣ್ಮಿರೆ ಕಾದಲಂ ಪಿಡಿಯೆ ಕಂಪಂಬೆತ್ತಳೊಳ್ಮಾತನಾ
ರ್ಪಿಂದೆಯ್ದಾಡಿಸಿ ಮೆಲ್ಲನೊಮ್ಮೆ ನುಡಿದಳ್ ಬಲ್ಪಿಂದವಂ ಚುಂಬಿಸ
ಲ್ಕಂದೂಹೂಹು ವುಹೂ ಹು ವೂಹುಯೆನುತುಂ ಜಾವಂಬರಂ ಕಾಡಿದಳ್     ೮೦