ಶ್ರೀಪತಿಜಸಮಂ ಸಕಳಾ
ಶಾಪದದೊಳನೇಕ ಧನಮನದಿ ದಾನದೊಳಂ
ರೂಪುಗುಣಂ ಶೀಲದೊಳಾ
ರೋಪಿಸಿದಂ ಸರಸಚತುರಕವಿಕುಳತಿಳಕಂ          ೧

ವ : ಇಂತು ಚತುಸ್ಸಮುದ್ರಮುದ್ರಿತಮಾದ ನಿರವಶೇಷಧರಣೀವಳಯಮ ನವನೀಪಾಳ ಶಿರೋಮಣಿ ದುಷ್ಟನಿಗ್ರಹಶಿಷ್ಟಪ್ರತಿಪಾಳನಾಪೂರ್ವಕಮಾಗಿ ಪರಮ ಪ್ರಮೋದದಿಂ ಪರಿರಕ್ಷಣಂಗೆಯ್ವುತ್ತುಮಿರ್ಪಲ್ಲಿ

ಒಡೆಯಂ ಸಾಮ್ರಾಜ್ಯರಾಜ್ಯಕ್ಕೊಡೆಯನೆಡರಣಂ ಪೊರ್ದಿದೆಂದುರ್ಬಿದತ್ತಾ
ಪಡೆ ಪೆಂಡಿರ್ ನಮ್ಮ ಗಂಡಂ ವಿಮಳಗುಣಕರಂಡಂ ದಲೆಂದಾಂತರೊಳ್ಪಂ
ಬಿಡದಾದಂ ಭೂತ್ರಯೀಬಾಂಧವನೆಮಗೆ ಕರಂ ಬಂಧುವೆಂದೆಯ್ದೆ ಹರ್ಷಂ
ಬಡೆದಿರ್ದರ್ ಬಾಂಧವರ್ ಪಾಳಿಸುವೆಡೆಯೊಳಿಳಾಲೋಕಮಂ ಧರ್ಮನಾಥಂ  ೨

ಪೃಥುಳಗುಣನರಸುಗೆಯ್ಯಲ್
ಪೃಥಿವೀಜನಮೆಲ್ಲಮಾದುದತಿಶಯದಿಂ ಸ
ತ್ಪಥವರ್ತಿ ಯಥಾರಾಜಾ
ತಥಾಪ್ರಜಾಯೆಂಬ ನೀತಿಯಂ ಮೀಱದವೋಲ್೩

ಆತನ ತೇಜದೇಳ್ಗೆ ದೆಸೆವೆಂಡಿರ ತಂಡದ ಸತ್ಕುಚಾಗ್ರದೊಳ್
ನೂತನಕುಂಕುಮಂಬೊಲೆಸೆದತ್ತು ದಲಾತನ ಕಾಂತಕೀರ್ತಿ ವಿ
ಸ್ಫಾತಿಯುಮೆಯ್ದೆ ದಿಕ್ಫತಿಗಳಿಕ್ಕಿದ ಮುತ್ತಿನ ಹಾರಮೆಂಬಿನಂ
ಸಾತಿಶಯಪ್ರವರ್ತನಮುಮಾದುದು ಧರ್ಮನ ಪೆರ್ಮೆಯಗ್ಗಳಂ     ೪

ನೆಲನೆಲ್ಲಂ ತೆಱಪಿಲ್ಲದಾಯ್ತು ನರಪಾಳಂ ಮಾಡಿಸುತ್ತಿರ್ದ ಮಂ
ಗಳಚೈತ್ಯಾಲಯಸಂಚಯಕ್ಕೆ ಘನಾಪಾತ್ರವ್ರಾತಮೆಲ್ಲಂ ಮಹೀ
ತಳದೊಳ್ ನೋಳ್ಪಡಮೆಯ್ದದಾಯ್ತು ನಲವಿಂದಂ ಮಾಳ್ಪ ದಾನಕ್ಕೆ ದಿ
ಕ್ಕುಲಮೆಲ್ಲಂ ಪವಣಿಲ್ಲದಾಯ್ತು ಬಹುಲಾಸ್ಫೂರ್ತಿಯೊಂದೇಳ್ಗೆಗಂ        ೫

ವ : ಇಂತು ಕನತ್ಕರ್ಪೂರಧಾರಾವರ್ಷಂ ಹರ್ಷೋತ್ಕರ್ಷತೆಗಾಲಂಬನ ಮಾದಭಿನವವಿ ಭವಪ್ರಭಾವದೊಳೊಂದಿ

ಅರವಿಂದಂ ಜಲದಲ್ಲಿ ಪುಟ್ಟಿ ಜಲಮಂ ತಾಂ ಮುಟ್ಟದಿರ್ಪಂದದಿಂ
ದರಸಂ ರಾಜ್ಯಸುಖಾನುಭೋಗಪರನಾಗಿರ್ದುಂ ಮನಂಮುಟ್ಟಿದಾ
ದರಮಂ ಮಾಡದೆ ಧರ್ಮಮುದ್ಭವಿಸುವನ್ನಂ ನ್ಯಾಯದಿಂದಾ ಮಹೀ
ವರನಾಳ್ದಂ ಬಿಡದಯ್ದುಲಕ್ಕೆ ಬರಿಸಂ ಪ್ರಾಜ್ಯಾದಿಸಾಮ್ರಾಜ್ಯಮಂ            ೬

ದಶವಿಧಭೋಗಂಗಳನಂ
ದೊಸೆದನುಭವಿಸುತ್ತುಮಿರ್ದನಾ ನರನಾಥಂ
ಪೊಸತೆನೆ ಸಾಮ್ರಾಜ್ಯದೊಳಂ
ವಿಸರುಹದೊತ್ತಣಿದು ನಲಿವ ಕಳಹಂಸದ ವೋಲ್          ೭

ವ : ಅಂತು ಸದ್ಧರ್ಮನಾಥಮಹಾರಾಜಂ ರಾಜ್ಯರಕ್ಷಣಂ ಗೆಯ್ವುತ್ತು ಮಿರ್ದೊಂದುದಿವಸಂ ಥಳಥಳಿಪ ಕುಳಿಶದಳಕುಳಕೇವಣಿತಪ್ರವಾಳಕಪರಿ ಮಂಡಿತವರ್ಯ ವೈಡೂರ್ಯಸ್ತಂಭಸಂಭೃತಸಮುತ್ತುಂಗರಂಗಮಂಡಪರಮಣೀಯಮುಂ ನವೀನ ನಾನಾ ವಿನೋದವಿಚಿತ್ರಿತಭಾವರಸಪ್ರಪಂಚಪಾಂಚಾಳಿಕಾಸಂಚಯಸಮಂಚಿತ ಕಾಂಚನಭಿತ್ತಿ ವಿಸ್ತೃತಮುಂ ವಿಶಾಳವಳಭಿವಳಯಕೀಲಿತ ನೀಲಮಣಿಮಯವಂದನಮಾಳಿ ಜಾತಸಂಭಿನ್ನ ನಿರ್ಮುಕ್ತಮುಕ್ತಾಫಳಲಂ [ಬು] ಷಭೂಷಣವಿಶೇಷ್ಯಮಾಣಮಂಗಳಸ್ಥಾನ ವಿಳಸಿತಕಳಮಾಕ್ಷತ ಪುಂಜರಂಜನಾಯಮಾನ ನಕ್ಷತ್ರಮಾಳಿಕಾಸಂಭೂಷ್ಯಮಾಣ ಪುಷ್ಯ ರಾಗಮಾಣಿಕ್ಯ ಕಳಶಕಳಾಪಚೂಳಿಕಾಭಾಗಚೋಚುಂಬ್ಯಮಾನ ಭಾನುಬಿಂಬಾನನವಿಳಾಸ ಮುಮಾದ ಸರ್ವಾವಸರಸಮಯಮೆನಿಸುವ ಸಭಾಲಕ್ಷ್ಮೀಪ್ರಾಸಾದಭವನಮನೆಯ್ದಿವಂ ದೊಳಗಂ ಪೊಕ್ಕು

ಸ್ಥಿತನಾನಾಮಾನ್ಯರಾಜನ್ಯಕ ಮಕುಟತಟೀರತ್ನರೋಚೀಪ್ರವೀಚೀ
ಸ್ತುತವತ್ತದ್ಗೇಹ ರತ್ನಾಕರದ ನಡುವೆ ಕಣ್ಗೊಂಡ ಪೋತಂ ದಲೆಂಬಂ
ತತಿಶೋಭಾಭಾರಮಂ ತಾಳ್ದಿದ ಮಿಸುನಿಯ ಸಿಂಹಾಸನಾಸೀನನಾದಂ
ಕೃತಕೃತ್ಯಂ ಧರ್ಮನಾಥಂ ಸಕಳಮಣಿಲಸದ್ದಿವ್ಯಭಾಷಾಸನಾಥಂ    ೮

ಇದೆ ಪರಮಸೀಮೆಯೆನ್ನೊದ
ವಿದ ಮೆಯ್ದೊಡವಿಂಗಮೆಂದು ಸೂಚಿಪ ತೆಱದಿಂ
ಪದೆದುಟ್ಟು ತೊಟ್ಟು ಮಾನವ
ಮದನಂ ನೋಳ್ಪರ್ಗೆ ಪುಟ್ಟಿಸಿದನಚ್ಚರಿಯಂ    ೯

ವ : ಅಂತು ಜಾಣೊಡನೆ ಜವ್ವನವೇಱಿದ ರೂಪು ರೂಪಿಸಲರಿದೆನಿಸಿ ಮೆಱಿಯೆ ಕಡುನೀಱ ನೊಡ್ಡೋಲಗಂಗೊಟ್ಟು ಕುಳ್ಳಿರ್ದಾಗಳ್

ಇಕ್ಕೆಲದಲ್ಲಿ ಚಾಮರವನಿಕ್ಕುವ ವಾರವಿಳಾಸಿನೀಜನಂ
ಮಿಕ್ಕಭಿರಂಜಿಸಿತ್ತು ಪೊಸಕೆಂದಳಿರ್ದೊಂಗಲೊಳಿರ್ದು ಹಂಸೆಗಳ್
ಸೊಕ್ಕಿ ವಿನೋದದಿಂ ಚಳಿಸಲೊಪ್ಪುವ ಕಾಮನ ಕಲ್ಪವಲ್ಲಿಯಿಂ
ತಕ್ಕುಮಿದೆಂಬಿನಂ ಕುಸುಮಮಂಜರಿ ರಂಜಿತಮಾತ್ತವಿಭ್ರಮಂ        ೧೦

ವ : ಮತ್ತಮುಕ್ಕುವ ಜವ್ವನದ ಸೊ‌ಕ್ಕಿಂ ನೋಳ್ಪ ಜಾಣರ ಮನಮಂ ಜಕ್ಕುಲಿಸುತ್ತು ಮಿರ್ದೋಲಗದ ಸೂಳೆಯರಾತನಂ ಬಳಸಿ ಕುಳ್ಳಿರ್ದು

ತೊಡಿಗೆಯ ತೋರ ಕೆಂಬರಲ ನುಣ್ಗದಿರಂ ಬಿಸಿಲಂ ಪೊದಳ್ದ ಸೋ
ರ್ಮುಡಿಗಳ ಕಪ್ಪಿನಿಂ ನಿಮಿರ್ವ ಕಳ್ತಲೆಯಂ ಕಡೆಗಣ್ಣ ಕಾಂತಿಯಿಂ
ಕುಡಿವೆಳುದಿಂಗಳಂ ವಿರಚಿಸುತ್ತುಮನಂಗಮಹೇಂದ್ರಜಾಲಮಂ
ಪಡೆದು ಕರಂ ಮರುಳ್ಗೊಳಿಸಿದತ್ತು ನಿರೀಕ್ಷಿಪರಂ ವಧೂಜನಂ        ೧೧

ವ : ಅನಂತರಂ

ಬಗೆದೆರಡುಂ ಕೆಲಂಬಿಡಿದನುಕ್ರಮದಿಂದಮೆ ಮಾಲೆಗೊಂಡು ಗ
ದ್ದಿಗೆಗಳೊಳಿರ್ದುದಗ್ಗಳದ ರಾಯರನೇಕಕುಮಾರಸಂಕುಳಂ
ಸೊಗಯಿಪ ತತ್ಸಭಾಸದನಲಕ್ಷ್ಮಿಯ ರನ್ನದ ಹಾರದಂದದಿಂ
ಜಗದೊಡೆಯಂ ವಿರಾಜಿಸಿದನೊಪ್ಪುವ ನಾಯಕರತ್ನಮೆಂಬಿನಂ      ೧೨

ವ : ಇಂತಾ ಭುವನತ್ರಯಪ್ರಭುವಿನುಭಯಪಾರ್ಶ್ವದೊಳ್ ಪ್ರತಾಪರಾಜನುಂ ವರಧರ್ಮ ಕುಮಾರನುಂ ಮೊದಲಾಗಿ ಮೂರ್ಧಾಭಿಷಿಕ್ತಮಕುಟವರ್ಧನ ಮಹಾಸಾಮಂತ ಮಂತ್ರಿಮಹತ್ತರಾದಿಗಳ್ ಯಥೋಚಿತಾಸನಂಗಳೊಳಿರೆ

ಮಿಗುವ ಪಂಚಾಂಗಮಂತ್ರಮೆ
ಸೊಗಯಿಪ ತನುವಡೆದು ಮಾನ್ಯತೆಯನಾಂತವೊಲಾ
ಜಗದೊಡೆಯನ ಮುಂದಿರ್ದ
ತ್ತಗಣಿತಮತಿಯನ್ವಿತಪ್ರಧಾನರ ಮೊತ್ತಂ        ೧೩

ಒಂದೇ ಕಂಟದ ಮೊನೆಯೊಳ್
ಸಂದುದು ನಿಂದುದುಮನಾಯಮಂ ಬೀಯಮುಮಂ
ಕುಂದದೆ ನಿರ್ಣಯಿಸುವ ಬ
ಲ್ಪಿಂದೆಸೆದರ್ ನೃಪನ ಬಳಸಿ ಕರಣಾಗ್ರಣಿಗಳ್   ೧೪

ಕವಿ ಗಮಕಿ ವಾದಿ ವಾಗ್ಮಿಗ
ಳವನಿಪನಂ ಬಳಸಿ ಸುತ್ತಲುಂ ಕುಳ್ಳಿರ್ದರ್
ವಿವಿಧನಿರವದ್ಯವಿದ್ಯಾ
ನಿವಹಂ ನರಮೂರ್ತಿವೆತ್ತುದೆಂಬಂತೆವೊಲಂ      ೧೫

ಬೀಣೆಯನೆಯ್ದೆ ಮೇಳವಿಸಿ ತಂತಿಯನೊಯ್ಯನೆ ನೀವಿ ನಾದಮಂ
ಕಾಣಿಸಿ ಪೊಯ್ದುನೋಡಿ ಪದೆದಂಡಿಗೆಯಂ ತಿರುವಿಟ್ಟು ತುಂಬಿಯಂ
ಮಾಣದೆ ಠಾಯೆಗಳ್ ಪದದೊಳೋಯರಮಾಗಿರೆ ಕೂಡಿಪಾಡುತುಂ
ಗಾಣರ ಮೊತ್ತಮಿರ್ದುದು ನೃಪಾಳಕನೋಲಗದಲ್ಲಿ ಸುತ್ತಲುಂ     ೧೬

ವ : ಮತ್ತಮೇಕೈಕಪ್ರದೇಶದೊಳ್

ನಗೆಕಾಱರಾಟಕಾಱರ್
ಬಗೆಕಾಱರ್ ವಾಸಕಾಱರೊಳ್ನುಡಿಕಾಱರ್
ಮಿಗುವಸಿಕಾಱರ್ ಪತಿಯೋ
ಲಗದೊಳ್ ಕುಳ್ಳಿರ್ದು ಕಣ್ಗೆ ಪಡೆದರ್ ಸೊಗಸಂ           ೧೭

ವ : ಮತ್ತಂ ಮೂವತ್ತೆರಡಾಯುಧದಭ್ಯಾಸದಿಂ ಬೀಸರಂಬೋಗದೆ ಕಂಡುದೆ ಕಳನಾಗಿ ತೆಗೆದಿಱಿವ ಜೋಳಿಗೊಂಡಂಕಮಾ ಪ್ರಸ್ತಾವದೊಳ್

ಕಲಿತನದಿಂದೆ ಕಂಡರಿಸಿದಂತೆ ವಿಶೇಷಿತ ಗಂಡಗರ್ವದಿಂ
ಸಲೆ ಕಡೆದಂತೆ ಕೂರ್ಪೆಸೆದು ಮಾಡಿಸುತುಂ ಬಿರಿದಾಳಿ [ಯಂ] ಮನಂ
ಗೊಳೆ ನಡೆತಂದು ಮಾಸವಳದಂಕಮದಾಸುರಮಾಗಿ ಭಾಷೆಯಂ
ಗಳಹುತುಮಿರ್ದುದಾ ನರಪನೋಲಗದಲ್ಲಿ ವಿಭೂಷಣಾಂಚಿತಂ    ೧೮

ವ : ಅದಲ್ಲದೆಯುಂ ಪೊಸಪೊಸತಾದ ಮಲ್ಲಶ್ರಮದಿನುಲ್ಲಾಸಂಬಡೆದು ಸೊಲ್ಲಿಸದೆ ಮಲ್ಲನಂ ನಿಲ್ಲದೆ ಕೊಂದು ಗೆಲ್ಲಂಗೊಳ್ವೆನೆಂಬ ಪೂಣ್ಕೆಯಂ ಮನದೊಳ್ ತೊಡಂಕೆಗೊಳಿಸಿ ಬಲ್ಪಿನ ಬಾಳ್ಕೆಯಿಂ ಬಣ್ಣವಿಟ್ಟಂತೆ ತಿಣ್ಣಮಾದೊಡ್ಡುಂಗಾಡಿಯು ಮೆಡ್ಡಮಾಗೆ ಚಲ್ಲಣಂ ಬಿಗಿದುಟ್ಟು ಕುಂಕುಮದ ಪಂಕಮಂ ಮುಯ್ವಿನೊಳಂಕೆಗೆಯ್ದು ಭೂರಿಸಿದ ಗಂಧಸಾರದಿನಂದಂಬಡೆದ ಭೂರಿಭುಜಾದಂಡಂ ಸೌಂದರಸಿಂಧೂರರಾಗ ಪರಿರಂಜಿತ ಕುಂಭಸ್ಥಳದೊಳೊಂದಿದೈ ರಾವತದ ಶುಂಡಾಳದಂಡದೊಡನೆ ಪುರುಡಿಸು ವಂತೆ ಕಡುಪನೊಳಗೊಂಡು ಬೆಡಂಗುವಡೆಯೆ ಜೆಟ್ಟಿಗಳೆಲ್ಲಂ ನೆರೆದುಬಂದು

ಬಿಸಿನೆತ್ತರ್ ಪೊಱಸೂಸುವಂತೊಡನೆ ಮೂಗುಂ ಬಾಯುಮಂ ಮುಚ್ಚೆ ಪ
ಟ್ಟಿಸದಿಂದಂ ಪ್ರತಿಮಲ್ಲನಂ ಕೆಡಹುವೆಂ ಸಂಸ್ಥಾನದೊಳ್ ಬಲ್ಪುದೋ
ಱಿಸಲಾನಾಳ್ದುದೆ ಕತ್ತರಂ ಕರವಡಂ ಸೀವಟ್ಟಣಂ ಢೊಕ್ಕರಂ
ಪಸರಂ ಸಂದಣುವಟ್ಟಿ ಪೊಟ್ಟು ಮುಹಡಂ ಚೌವಟ್ಟಿ ಪಿಟ್ಟಾಳಸಂ            ೧೯

ವ : ಎಂದು ಮಲ್ಲವಾತುಮಂ ನುಡಿದು ಪೊಡವಟ್ಟು ಕುಳ್ಳಿರ್ಪುದುಮನಂತರ ಮಯ್ವಣ್ಣದ ರನ್ನದಿಂ ಚೆನ್ನಂಬಡೆದ ಹೊನ್ನ ಹೊರಜೆಯಂ ಹತ್ತಿಸಿ ಬಿಗಿಯಲದಱ ಬೆರಕೆವೆಳಗಿಂ ಥಳಥಳಿಸಿ ಪೊಳೆವಂಕದಾನೆ ಸುರಧನುವಿನ ಬಳಸುವೆರಸಿದ ಕಾರ್ಮುಗಿಲೊಡ್ಡು ಕಾಲೂಱಿ ನಿಂದಿರ್ದುದೆಂಬಂತೆ ಬಿಂಕಂಬೆತ್ತು ಚೆಂದುರದ ರಂಚೆಯಿನಂದಮಾದ ಕುಂಭಸ್ಥಳದೊಳ್ ಮಲಂಗಿದ ಕೂರಂಕುಸಂ ನೆಮ್ಮಿರ್ದ ಕೆಮ್ಮುಗಿಲ ಮೇಲೆ ಮೂಡಿದೆಳವೆಱೆಯಂತೆ ಚೆಲ್ವೇಱಿ ತೋಱಿ ಮುಂದೆ ಬಾಜಿಸು ವಾನೆವಱೆಯ ದನಿಯಂ ಪಿಂದೆ ಝಣಝಣೆಂಬ ಬಿರುದಿನ ತೊಡರ ನಿಗಡದೊಳ್ ತೊಡಂಕೆ ಬಿಡದೆಳಲ್ವ ಬಾವುಲಿಗಳ ಬಲ್ಲುಲಿಯುಮನಾಲಿಸುತ್ತುಮುಬ್ಬರಿಸುವ ಸೊಕ್ಕಿನಳುರ್ಕೆಯಿನಿಕ್ಕೆಲಕ್ಕಮವ್ವಳಿಸೆ ನೂಂಕುವಾನೆಕಾಱರ ಬಡಿವ ಕೊಡತಿಕಾಱರ ಮೊತ್ತಮನೊತ್ತಮಿಸುತ್ತುಂ ಬಂದು ತವಂಗಮನಳ್ಳಾಡುವಿನಂ ನಿಂದು ಮೇಲಿದ್ದ ಮಾವಂತಿಗನಾನೆವಾತಿನ ಸನ್ನೆಯಿಂದೊಡೆ ಯಂಗೆ ಪೊಡೆವಟ್ಟು

ಬೀರದೊಳಾನೆ ಬಲ್ಪುವಡೆದು ಪ್ರತಿದಂತಿಯ ದಂತಮೂಲಮಂ
ಬೇರೊಡಗೀಳ್ವ ಸಾಹಸದೊಳಾನೆ ಕದರ್ಥಿತವೈರಿಸೈನ್ಯಸಂ
ಹಾರದೊಳಾನೆ ಮತ್ತೆನಗೆ ಮಾರ್ಮಲೆವಾನೆಗಳಿಲ್ಲಮೆಂದು ಸಂ
ಚಾರಿಸುವಂತಿರಾನೆ ಭರಿಕೆಯ್ಯನೆ ತೂಗುತುಮಿರ್ದುದಾಕ್ಷಣಂ          ೨೦

ವ : ಅಲ್ಲಿಂಬಳಿಯಂ ಪಲ್ಲಣಿಸಿ ಬಂದ ವಾನಾಯುಜ ಪಾರಸಿಕ ಕಾಂಭೋಜ ಬಾಹ್ಲೀಕಮೆಂಬ ನಾಲ್ಕುಜಾತಿಯೊಳ್ ಪುಟ್ಟಿದ ಸಮಾಸ್ಕಂದಿತ ರೇಚಿತ ಧೌರಿತ ವಲ್ಗಿತ ಪ್ಲುತಮೆಂಬೈದುಂತೆ ಱದ ನಡೆಯಿಂ ಬೆಡಂಗುವಡೆದ ಪಟ್ಟದ ವಾರುವವರ್ಗಂ ರಥದಂತೆ ಮದಕಳವಡುವ ಕೂಡಿದ ಕಡುನಲ್ಲಳಂತೆ ತೊಡೆಸೋಂಕಿಂಗೊಡಂಬಡುವ ಕೋಗಿಲೆಯಂತೆ ಸ್ವರಭೇದ ದೊಳ್ ಸುಸರಮೆನಿಪ ಜೋಡೆವೆಂಡತಿಯಂತೆ ಕೈಸನ್ನೆಯಱಿವ ರಾಜಹಂಸನಂತೆ ಮಾನಸ ವಱಿದು ವರ್ತಿಸುವ ಶೀಲದಿನುಲ್ಲಾಸಂಬಡೆದು ಪರಿಪರಿಯ ಭ್ಯಾಸದ ಬಿನ್ನಣಂ ಚೆನ್ನಂ ಮೆಱೆವಿನಂನೀಡುಮೆಟ್ಟಿ ಭೂರಿಚಮತ್ಕಾರದಿನೋಡಿಯೋಡಿ ತಮ್ಮಯ ಸುಶಿಕ್ಷಣ ಮನಿರ್ಮಡಿಯಾಗಿ ಪ್ರಕಟೀಕರಿಸುತ್ತುಮಿಪ್ಪೆಡೆಯೊಳ್ ಚತುರತುರಗ ವಾಹಕರೆಲ್ಲಂ ಕೈಯ ಬೆರಳ್ಗಳನುದ್ದಮೆತ್ತಿ ಸಂಚಳಿಸುತ್ತುಂ ಲೇಸುಲೇಸೆಂಬ ಕೊಂಡಾಟದೊಳಾಸಕ್ತರ್ ಮೆಚ್ಚಿಮೆಚ್ಚಿ ತಲೆದೂಕಮನೊಡರ್ಚುವಿನಮೇಱಿ ತೋಱಿಸುವ ರಾಯರಾವುತ್ತರನು ಮಾನಕ್ಕನುಕೂಲ ಮಾಗಿ ಬಂದು ಲಳಿಲುಳಿಯ ಮೇಲೆ ಹೋಹೋಯೆಂದು ಮೆಲ್ಲಮೆಲ್ಲನೆ ನಿಲಿಸಿ

ಓಜೆಯ ಕೇಣಮುಂ ಮನದ ಸಾಹಸಮುಂ ತೊಲೆಯಲ್ಲಿ ತೂಗಿ ಸಂ
ಯೋಜಿಸಿದಂತೆ ಸಕ್ಕಸಮನಾಗಿರೆ ಗಾಳಿಗೆ ಪಕ್ಕಮೂಡಿದಂ
ತೀ ಜಗದಲ್ಲಿಯೋಡುವ ತುರಂಗಮಪುಂಗವದೊಂದು ಚೆಲ್ವುಮಂ
ರಾಜಮನೋಜ ನೋಡೆನುತೆ ವಾಹಕರಾವಳಿ ತಾಳ್ದುದೊಪ್ಪಮಂ  ೨೧

ವ : ಇಂತು ಸಕಳಸಾಮ್ರಾಜ್ಯಲೀಲಾವಿಭವಕ್ಕಿದುವೆ ಪರಮಸೀಮೆಯೆಂಬಂತಿ ರೊಡ್ಡೋಲ ಗವಡ್ಡಪರಪೆಡ್ಡಮಾಗಿರ್ದುದಾ ಪ್ರಸ್ತಾವದೊಳಲ್ಲಲ್ಲಿನಿಂದುಘೇಯುಘೇ ಚಾಗಬೊಲ್ಲಾ ಯೆಂದು ಗೋಸನೆಯನೆಸಗುತ್ತುಂ ಪುಷ್ಪಾಂಜಳಿಯಂ ಕೊಡುವ ಗೋಸನೆಕಾಱರ
ಬಿನ್ನಪಂಗೆಯ್ವರಸುಗಳ ಬೇಡುವ ವಂದಿಗಳ ಪೊಗಳ್ವ ಭಟ್ಟರ ಗೊಟ್ಟಿಯ ಕೋಳಾಹಳಮಂ ಕಟ್ಟಿಗೆಕಾಱರ್ ಚಪ್ಪರಿಸಿ ನಿಲಿಸುತ್ತುಮಿರ್ಪೆಡೆಯೊಳ್

ಪೊಸತನಿಗಂಪು ಪೊಂಪುಳಿಸಿ ಪೊಂಪಿನ ಸಂಪದಮುಬ್ಬಿಕೊಬ್ಬಿ ಪೆಂ
ಪಸದಳಮಾಗೆಯೋಲಗಮದಾಯ್ತು ವಸಂತವನಂ ದಲೆಂಬಿನಂ
ಪಸರಿಸಿದತ್ತು ಕೋಕಿಳನಿನಾದವೋಲುಠಬೈಸ ಜಾವುರೇ
ಖುಸುರುಗಲಾಸೆ ಹೋ ಹಳು ಹಳೆಂಬ ಮಹಾಪ್ರತಿಹಾರಕಸ್ವನಂ    ೨೨

ವ : ಆ ಸಮಯದೊಳ್

ಅಭಿನವತತ್ಸಭಾವಿಭವಶೋಭೆಯ ಸಂಭ್ರಮಮಂ ನಿರೀಕ್ಷಿಸಲ್
ಪ್ರಭುಕರುಣಾವಲೋಕನಸುಚಂದ್ರಿಕೆ ರಂಜಿಸಲೆತ್ತಲತ್ತ ಭೂ
ವಿಭುಗಳ ಕಂಕಣಾಂಕಿತ ಕರಾಂಬುರುಹಂ ಮುಗಿದತ್ತು ಕೂಡೆ ಮ
ತ್ತಭವನೆ ಭಾಪು ಭಾಪು ಮಝ ಭಾಪುರೆ ಭಾಪೆನುತಿರ್ದರೆಲ್ಲರುಂ   ೨೩

ಪೊಳೆವ ಚರಮಾಂಗನಂಗೋ
ಜ್ವಳಕಾಂತಿಯೊಳೆಯ್ದೆ ನೋಟಕರ ನಗೆಗಣ್ಗಳ್
ಸ್ಥಳಪದ್ಮಂಗಳ ಬಳಗಂ
ಬಳಸಿದ ಹೇಮಾದ್ರಿಯಂತೆ ಚೆಲ್ವಂ ತಳೆದಂ       ೨೪

ವ : ಇಂತು ದೇವಾಧಿದೇವಂ ಬಹಳಗೊಂದಳಾಸ್ಥಾನದೊಳೋಲಗಂಗೊಟ್ಟು ಲೀಲೆಯಿಂ ನಾಲ್ದೆಸೆಯಂ ನೋಡುತ್ತುಮಿರ್ಪನ್ನೆಗಂ

ಪಲವುಂಕಾಲದ ಗಗನ
ಸ್ಥಳಿ ಕಡುಹಳದಾಗಿ ಜೀರ್ಣತೆಯನೆಯ್ದಿ ಮಹಾ
ಬಿಲನಾಗಿ ಸೀಳ್ದ ತೆಱದಿಂ
ದೊಳಕೊಂಡುದಗುರ್ವನಾಗಸದ ನಡುಭಾಗಂ    ೨೫

ವ : ಆ ಪೊತ್ತಿನೊಳ್

ಪೊಸಕೆಂದಾವರೆಪೂಗಳಿಂದಲರ್ದವೊಲ್ ಚೆ‌ಲ್ವೇಱುತಿರ್ದಪ್ಪುದಾ
ಗಸಮೆಲ್ಲಂ ಪವಳಂಗಳೊಳ್ಬೆಳಗಿನಿಂ ಸುತ್ತಂ ತಳಿರ್ತಂತಿರೆ
ಣ್ದೆಸೆಯುಂ ರಂಜಿಸಿದಪ್ಪುದೇನೊ ತನಿಗೆಂಪಾಗುತ್ತುಮಿರ್ದತ್ತಿದಾ
ವೆಸಕಂ ಮೂಡಿದುದೆಂದು ನೋಡಿದುದು ಸಭ್ಯಾನೀಕಮುತ್ಕಂಠದಿಂ೨೬

ಪಗೆಯೆನಿಸಿರ್ದ ಕಾಮನ ಸಖಂ ವಿಧುವೆಂದವನಂ ಸುಡಲ್ಕೆ ತಾಂ
ಬಗೆದು ನಭಸ್ವರೂಪ ಗಿರಿಶಂ ತೆಱೆಯಲ್ ನೊಸಲಗ್ನಿದೃಷ್ಟಿಯಿಂ
ಮಿಗೆ ಪೊಱಪಾಯ್ದು ಮಿಳ್ಳಿಸುವ ದಳ್ಳುರಿಯೋಳಿಯ ಸುರ್ವುಗೊಂಡ ಪ
ರ್ವುಗೆಯೊ ದಲಾತನೊಂದು ಪೊಱಪೇಱಿದ ಕೆಂಜೆಡೆಯ ಪ್ರಲಂಬಮೋ         ೨೭

ಚೆನ್ನಮಹೇಶ್ವರಂ ತ್ರಿಪುರಮಂ ಸುಡಲೆಂದನುಗೆಯ್ದು ಕಾಸಿ ಮ
ತ್ತಂ ನಲಿದೆಚ್ಚೊಡುಜ್ಜ್ವಳಿಸುತುಂ ಬರುತಿರ್ಪ ನಿಶಾತಬಾಣಮೋ
ತನ್ನಯನಂತನಾಮಮನಿದುಂ ತಳೆದಿರ್ದಪುದೆಂಬ ಮೋಹದಿಂ
ಸನ್ನಿಧಿಗೆಯ್ದಿಬಂದ ಧರಣೀಂದ್ರಫಣಾಮಣಿಯೊಂದು ಕಾಂತಿಯೊಳ್           ೨೮

ವ : ಇಂತು ಪರಕಲಿಸಿದರುಣಿಮಾಲೋಕನದಿಂ ಸಭಾಲೋಕದ ಚಿತ್ತಂ ನಿರಂತರಿತ ಶಂಕಾ ಕಳಂಕದಿಂ ವ್ಯಾಕುಳಿತಮಾಗಿ ಕಡುಚೋಜಿಗಮಿದಾವುದೆಂದು ಕೊರಳಂ ನೆಗಪಿ ನೋಡು ವೆಡೆಯೊಳ್

ಆಗಸಮೆಂಬ ದೈತ್ಯನಗಿದೀ ಜಗಮಂ ನೆಱೆತಿಂದು ನುಂಗುವು
ದ್ಯೋಗದೆ ತೋರತಾರಗೆಗಳೆಂಬುಱುದಾಡೆಗಳಂ ನಿಮಿರ್ಚಿ ಮುಂ
ಬೇಗದೆ ಬಾಯನೆಯ್ದೆ ತೆಱೆಯಲ್ ಪೊಱಪೊಣ್ಮುವ ಜಿಹ್ವೆಯಂತೆ ಚೆ
ಲ್ವಾಗಿರೆ ನೀಳ್ದು ಬಿಳ್ಪಳುಕು ಪುಟ್ಟಿಸಿದತ್ತಖಿಳರ್ಗೆಭೀತಿಯಂ        ೨೯

ಘುಳುಘುಳು ಭುರ್ಭುಗಿಲ್ ಭುಗಿಲು ತಚ್ಛಟಿಲುಚ್ಛಟಿಲುಚ್ಛಟಚ್ಛಟ
ಚ್ಛಳಿತಳಿಯೆಂಬ ರೌದ್ರತರಭೀಷಣಘೋಷಣಮುಣ್ಮಿಪೊಣ್ಮಿ ಸಂ
ಗಳಿಸಿರಲುಗ್ರಿಮಂ ಪ್ರಳಯಕಾಲಹಾಗ್ನಿಯಿದೆಂಬ ಮಾಳ್ಕೆಯಿಂ
ದುಳುಕುನಿಮಿಳ್ದು ಬಿಳ್ದುದು ಮರೀಚಿ ಮುಸುಂಕೆ ದಿಗಂತರಾಳಮಂ            ೩೦

ವ : ಅಂತು ಭಯಂಕರಾಕಾರದಿಂ ಸಾತಿಶಯಮಾದ ನೂತನತದುಳ್ಕಾಪಾತಂ ಸಭೆಯೆಲ್ಲಂ ಬೆಳ್ಕುಳಿಸುವಂತೆ ವಿಯತ್ತಳದಿಂ ಬೀಳ್ತಂದು ಸಂಕ್ರಂದನ ವಂದ್ಯಮಾನ ಪದದ್ವಂದನ ಮುಂದೆ ದೂರದೊಳ್ ನಿಂದು ತನ್ನಯ ಚಂಚದುದಂಚದಭಿಜ್ಯೋತಿರ್ಜಾಲ ದಿಂದಾರತಿಯನೆತ್ತುವ ಮಾಳ್ಕೆಯಿಂ ಬಳಸಿ ಪೊಳೆಯುತ್ತುಮಿರ್ಪುದುಂ

ಮೋಹಮೆಂಬಂಧಕಾರಸ
ಮೂಹಂ ವ್ಯಾಪಿಸಿದ ಮೋಕ್ಷಪಥಮಂ ಬೆಳಗಿ ಪು
ರೋಹಿತಮಂ ತೋಱಿ ಸಕರ
ವಾಹಿತದೀಪಂ ದಲೆಂಬಿನಂ ಸೊಗಯಿಸುಗುಂ     ೩೧

ವ : ಅನಂತರಂ ನೋಡನೋಡಲದೃಶ್ಯಮಾಗಿ ಪರೆದುಪೋಪುದುಂ ಸಭೆಯೆಲ್ಲಂ ಬೆಕ್ಕಸಂಬೆಱಗಾಗಿ ಜಗದೊಡೆಯನ ಮೊಗಮಂ ನೋಡಿ ಕೌತುಕಮಿದೇನದಱಂದಮಂ ಬೆಸಸಲ್ವೇಳ್ಕು ಮೆಂದು ಕರಕಮಳಂಗಳಂ ಮುಗಿದು ಬಿ‌ನ್ನಪಂಗೆಯ್ವುದುಮಾಗಳ್ ಜ್ಞಾನ ತ್ರಯನಿಧಾನಂ ಮುಗುಳ್ನಗೆವೆರಸಿದ ನುಡಿಯಿಂದಿಂತೆಂದಂ

ಒರ್ವಂ ಜ್ಯೋತಿಷ್ಕದೇವಂ ವಿಮಳಚರಿತನೆಂಬಂ ಸುರಾಧೀಶನಾಜ್ಞಾ
ಪೂರ್ವಂ ಬಂದಂಬರಸ್ಥಾನದೊಳಿರುತುಮದಂನೋಡಿ ಕಂಡಿಲ್ಲಿ ನಮ್ಮಂ
ಸರ್ವೇಶಂ ಬೇಸಱಂ ಸಂಸೃತಿ ವಿಷಯಸುಖಕ್ಕಿನ್ನುಮೆಂದೆಮ್ಮ ಚಿತ್ತ
ಕ್ಕುರ್ವೀವೈರಾಗ್ಯಮಂ ಪುಟ್ಟಿಸುವ ಬೆವಸೆಯಿಂದಿಂತುಟಂ ತೋಱಿಪೋದಂ  ೩೨

ವ : ತೇಜೋಮಯಮಾದೊಡಮೆನ್ನಾಕಾರಮೆಂತಿಂತಪ್ಪ ತೋಱಿ ಪಾಱು ವವಸ್ಥೆಯನೆಯ್ದಿತ್ತಂತೆ ಸಂಪತ್ತಿಶರೀರಭೋಗಂಗಳುಮಸ್ಥಿರಂಗಳವಂ ತೊಱೆಯದೆ ನಿಮ್ಮ ವಂದಿಗರ್ ಮಱೆದಿರ್ಪುದನುಚಿತಮೆಂದು ಬಿಳ್ದ ಕೈದನೆತ್ತಿಕೊಟ್ಟು ಕಲಿಯಂ ಮೂದಲಿಸುವಂತೆ ಸಂಸಾರದ ಧ್ರುವತೆಯಂ ತೋಱಿಸಿ ವಿರಕ್ತಿಭಾವಮನೆಮಗೆಚ್ಚಱಿಸಿಕೊಟ್ಟು ಪೋದನೆಂದ ಪ್ರತಾಪರಾಜಂಗಂ ವರಧರ್ಮಕುಮಾರಂಗಮನಿತ್ಯತಾಪ್ರತಿಪಾದನ ಮುಖದಿಂ ದೇವ ನಿಂತೆಂದಂ

ಘನಸಂಕ್ಲೇಶವಿಭಾವಮೆಂಬ ತೆರೆಯಿಂದಂ ಕೂಡಿ ರೋಗಪ್ರವ
ರ್ಧನಮೆಂಬುನ್ನತ ಫೇನದಿಂ ಪುದಿದು ಚಿಂತಾವರ್ತದಿಂದೊಂದು ಕು
ತ್ಸನಸಂಸಾರಸಮುದ್ರದಲ್ಲಿ ಜವನೆಂಬೌರ್ವಾನಳಂ ಪೀರ್ವ ಜೀ
ವನಮಾದತ್ತು ಶರೀರಜೀವನಮಿದಕ್ಕೇಕಯ್ಯ ಮುಯ್ವಾಂತಪರ್   ೩೩

ಪಾಲುಂ ನೀರಂತಿರೈಕ್ಯಂಬಡೆದು ಸುಖಮನೀವುತ್ತುಮಿರ್ಪಾತ್ಮನಾಯು
ರ್ಮೂಲಂ ತೀರಲ್ಕೆ ಮೆಯ್ವಿಟ್ಟಪರಗತಿಗೆ ಪೋಪಾಗಳೀ ದೇಹಮಂ ಮ
ತ್ಪಾಲಂ ಮಿತ್ರಂ ದಲೀತಂ ಬಳಿಗಳಿಹಿ ಬರಲ್ವೇಳ್ಕುಮೆಂದೆಳ್ದುದಿಲ್ಲಂ
ಖೇಳರ್ ಪೆಂಡಿರ್ ತನೂಜರ್ ಬಹಿನುತರರರೇನನ್ಯರೆಂಬಲ್ಲಿ ಚೋದ್ಯಂ       ೩೪

ಒಡೆಯನಿವಂ ಬಡವನಿವಂ
ಕಡುಜಾಣನಿವಂ ಜಡಂ ದಲಿವನೆಂದೆನ್ನಂ
ತಡೆಯದೆ ಸರ್ವಗ್ರಾಸಮ
ನೊಡರಿಸುವಂ ಕಿಚ್ಚಿನಂದದಿಂ ಕ್ರೂರ ಯಮಂ   ೩೫

ಕರೆಯ ಮರದಂತೆ ಬೀಳ್ವುದು
ಶರೀರಮಿದು ಮಂಜಿನಂತೆ ಪರೆವುದು ಭೋಗಂ
ಸುರಚಾಪದಂತೆ ಕಿಡುವುದು
ಸಿರಿ ಚಿರಮಾಗಿರ್ಪುದಾವುದೋ ಮನುಜರ್ಗಂ     ೩೬

ಪುದಿದ ಮಧುಮಕ್ಷಿಕಾದಂ
ಶದ ನೋವಂ ಬಗೆಯನೆಂತು ಮಧುಪರಂ (?)
ಪದೆಪಿಂ ಸಂಸೃತಿದುಃಖದ
ಮದನೋವಂ ಬಗೆಯನಂತೆ ಸುಖಬಿಂದುಕರಂ   ೩೭

ಮನಸಿಜನೆಂಬ ಬಲ್ಗ್ರಹಮದೊತ್ತಿ ನಿಪೀಡಿಸೆ ಹುಚ್ಚುಗೊಂಡು ಪೊ
ಲ್ಲೆನಿಸುವ ವಸ್ತುವಂ ಪಿರಿದುಮೊಳ್ಳಿತದೆಂಬರದೆಂತು ಮೂತ್ರ ರ
ಕ್ತನಿಳಯಮಾಗಿ ಕೊಕ್ಕರಿಕೆಯಂ ನೆಱೆಪುಟ್ಟಿಸುತಿರ್ಪ ಕಾಮಿನೀ
ಘನಜಘನಂ ಮನೋಹರಕಮೆಂಬರನಂಗನ ಸೊಕ್ಕು ಮೊಕ್ಕಳಂ       ೩೮

ನೆರಪಿದ ಪುಣ್ಯಪಾಪಪರಿಪಾಕದೆ ಪುಟ್ಟುವ ಪೊಂದುತಿರ್ಪ ದು
ರ್ಧರತರದುಃಖದಿಂ ನಮೆದು ಕಷ್ಟಚತುರ್ಗತಿಯಲ್ಲಿ ಕೂಡಿ ಮಾ
ಣ್ದಿರದೆ ಸಮಂತು ಱಾಟಣದ ಗುಂಡಿಗೆಯಂತಿರನೇಕಕಾಲಮುಂ
ತಿರುತರುತಿರ್ದು ಸೇದೆವಡುತಿರ್ಪುದು ನೋಡಿರೆ ಜೀವರಾಶಿಗಳ್     ೩೯

ಜೀವಂ ಕೋಟಲೆಗೊಳ್ಗು ಕರ್ಮವಶದಿಂದಾ ಕರ್ಮಮುಂ ಸತ್ತಪ
ಸ್ಸೇವಾಯೋಗದೆ ಕೆಟ್ಟುಪೋಕದಱ ಕೇಡಿಂದಕ್ಕು ನಿತ್ಯತ್ವದು
ದ್ಭಾವಂ ಪೆರ್ಚಿದ ಮೋಕ್ಷಮಲ್ಲಿ ಸುಖರೂಪಂ ಸಾರ್ಗುಮೆಂದಾ ಮಹಾ
ದೇವಂ ಚಿತ್ತದೊಳಂ ದೃಢೀಕರಿಸಿದಂ ದೀಕ್ಷಾಗ್ರಹಾಕಾಂಕ್ಷೆಯಿಂ        ೪೦

ಕೆಡುವುದದೆಲ್ಲಂ ಕೆಟ್ಟೊಡೆ
ತಡೆಯದೆ ಕೆಡದಿರ್ಪುದೆಯ್ದೆ ಬರ್ಪಡೆ ಮತ್ತಂ
ಕಡುಲಾಭಮಾವುದಿದಱಿಂ
ದೊಡನೆರಡನೊಡರ್ಚುವುದ್ಘತಪಮಂ ಮಾಳ್ಪೆಂ           ೪೧

ವ : ಎಂದು ತಱಿಸಂದು ಮೋಕ್ಷಲಕ್ಷ್ಮೀಸಮಾಶ್ಲೇಷಾಭಿಲಾಷನಾಗಿಯಾ ಧರ್ಮನಾಥ ಮಹಾರಾಜಂ ತಪೋಗ್ರಹಣಪರಿಣಾಮಪರಿಸೂಚನ ನಿರತ ನಿರತಿಶಯವಚನ ದಿಂದಖಿಳಸಭಾಜನಕ್ಕೆ ಶರೀರಾದಿಪರದ್ರವ್ಯದಧ್ರುವತೆಯನಿಂತು ಬೆಸಸುವುದುಮಲ್ಲಿ ಸಂಸಾರಭೀರುಗಳಪ್ಪರಸುಮಕ್ಕಳೆಲ್ಲಂ ಮೆಚ್ಚಿ ಮತ್ತಮೆಮಗೆ ದೇವರಲೋಕಮೇ ಲೋಕಮೆಮ್ಮೊಡನೆ ಬಪ್ಪುದೆಂದನುಜ್ಞೆಯಂ ದಯೆಗೆಯ್ಯಲ್ವೇಳ್ಕುಮೆಂದಿಂತೆಂದರ್

ಪರುಷದ ಕೂಟದಿಂದಮಮ ಕಬ್ಬುನಮೆಂತು ಸುವರ್ಣಮಪ್ಪುದಂ
ತಿರೆ ಧರಣೀತಳಾಧಿಪತಿ ನಿನ್ನಯ ಬೆಂಬಳಿಸಂದು ದೀಕ್ಷೆಯಂ
ಧರಿಸುವೆವೆಂದು ಪೂಣ್ದರಧಿರಾಜರುಮಾಗಳೆ ಮೀಱರುತ್ತಮರ್
ಗುರುಜನಶೀಲಮಾಚರತಿ ಶಿಷ್ಯಕದಂಬಕಮೆಂಬ ನೀತಿಯಂ            ೪೨

ಮಿಗುವ ವಿರಕ್ತಿಯೊಳೊಂದಿದ
ಸೊಗಯಿಪ ಸಾಸಿರ್ವರರಸುಮಕ್ಕಳ ಬಳಗಂ
ತೆಗೆಯಾಳನಾಯ್ದು ತೆಗೆದಂ
ತೊಗೆದುದು ಕೊಳಲೆಂದು ಮೋಕ್ಷದುರ್ಗಮನದಱೊಳ್  ೪೩

ವ : ಅನಂತರಂ ಜಗತ್ಪ್ರಯಜ್ಯಾಯನಭಿಪ್ರಾಯಮನವಧಿಬೋಧದಿಂದಱಿದು

ವರವೈರಾಗ್ಯರಸಪ್ರವಾಹಭರದೊಳ್ ತೇಂಕುತ್ತಿರಲ್ ಧರ್ಮನಾ
ಥರಸಾಧೀಶ್ವರನಾಕ್ಷಣಂ ಪ್ರಮದದಿಂ ಸಾರಸ್ವತಾದಿತ್ಯವ
ಹ್ನ್ಯರುಣಪೋತ್ತಮ ಗರ್ದತೋಯತುಷಿತಾವ್ಯಾಬಾಧಕಾರಿಷ್ಟರೆ
ಣ್ಬರುಮೆಳ್ತಂದರಮರ್ತ್ಯಯೋಗಿಪತಿಗಳ್ ಬ್ರಹಾಖ್ಯಕಳ್ಪಾಗ್ರದಿಂ   ೪೪

ವ : ಬಂದು ಮುಂದೆ ನಿಂದು ಜಯಜಯನಿನಾದಸಮುತ್ತುಂಗರುಂ ವಿನಯ ಭರಾನತೋತ್ತ ಮಾಂಗರುಂ ಸಂತೋಷರಸತರಂಗಿತಾಂತರಂಗರುಂ ಪುಳಕಕಳಿತ ಸಕಳಾಂ ಗರುಮಾಗಿ ಪರಮನ ಚರಣದ್ವಂದದೊಳ್ ನಮೇರುಮಂದಾರಪಾರಿಜಾತ ಕುಸುಮಾಸಾರಮಂ ಸುರಿದು

ಎಲೆ ವಿಜ್ಞಾನನಿಧಾನ ನೀಂ ಬಗೆದ ಕಾರ್ಯಂ ಲೇಸುಲೇಸೆಂತು ವಿ
ಹ್ವಳಸಂಸಾರಸಮುದ್ರದಿಂ ತೊಲಗಿ ಮೋಕ್ಷಸ್ಥಾನದೊಳ್ ಸಂತತಂ
ನೆಲೆಗೊಂಡಿರ್ದಪೆನೆಂಬ ಬುದ್ಧಿಕರಣಂ ಸ್ಥೇಯಸ್ಸುಖೋಪಾರ್ಜನಂ
ಬಳಸಂಸಾರವಿವರ್ಜನಂ ಸಹಜಮಾರ್ಹಂತ್ಯೇಕರಪ್ಪರ್ಗೆ ತಾಂ         ೪೫

ನಿನಗೆ ಜಗತ್ಪ್ರಯೀಪತಿಗಳಾಳ್ವೆಸಮಂ ನೆಱೆಮಾಳ್ಪ ಭೂರಿಪಾ
ವನಮಹಿಮಾವಿಶೇಷಿತವಿಭೂತಿ ಜರತ್ತೃಣಮಾತ್ರಮೆಂದೊಡೀ
ತನವಧಿ ವಾರ್ಧಿಯಂ ಕುಡಿದ ಕುಂಭಭವಂಗರಿದೇ ಘಟೋದಕಂ
ವನಧಿವೃತೋರ್ವಿಯಂ ಬಿಸುಟೆಯೆಂಬುದು ವಿಸ್ಮಯಕಾರಿಯಲ್ತದೇಂ         ೪೬

ನೆಟ್ಟನನಂತನಾಥನಪವರ್ಗಮನೆಯ್ದಿದನಂತರಂ ಕರಂ
ಕೆಟ್ಟುದು ಧರ್ಮವರ್ತನೆಯದಂ ಪೊಸತಾಗಿ ವಿಶೇಷಮಪ್ಪಿನಂ
ಪುಟ್ಟಿಸಿ ಮತ್ತಮೀಗಳಧಿಕೇವಳಬೋಧಮನೆಯ್ದುವಾರ್ಪು ನೇ
ರ್ಪಟ್ಟುದು ನಿನ್ನೊಳಲ್ಲದುಳಿದರ್ಗಿದು ಕೂಡುಗುಮೇ ಸುರಾರ್ಚಿತಾ          ೪೭

ಚರಮಶರೀರ ನಿನ್ನ ಪರಿನಿಷ್ಕ್ರಮಣೋದ್ಯಮಮಂ ನಿರೀಕ್ಷಿಸಿ
ತ್ವರಿತದಿನೆಮ್ಮ ಜನ್ಮ ಕೃತಕೃತ್ಯಮಿದಾಗಲೆವೇಳ್ಕುಮೆಂಬಧಿ
ಸ್ಫುರಣದೆ ಬಂದೆವಲ್ಲದೆ ನಿಜಾಶಯಮಂ ಪ್ರತಿಬೋಧಿಸಲ್ಕೆ ಶ
ಕ್ತರೆ ದಿನನಾಥನಂ ಬೆಳಗಲಾರ್ಪುದೇ ತುಚ್ಛಪತಂಗಪಾತಕಂ            ೪೮

ವ : ಇಂತು ಸಾರಸ್ವತಾದಿ ಲೋಕಾಂತಿಕದೇವರುಷಿವೃಷಭರಾ ಪುರುಷೋತ್ತಮನ ಸಂಸ್ತವನಮುಖದಿಂ ಪ್ರತಿಬೋಧನಮನುಜ್ಜೀವಿಸಿ ನಿಜನಿವಾಸಕ್ಕೆ ಪೋಗಲೊಡಂ

ಪರಮನ ಪರಿನಿಷ್ಕ್ರಮಣೋ
ದ್ಧುರಕಲ್ಯಾಣಪ್ರಭಾವಮಂ ದೇವೇಂದ್ರಂ
ಪರಮಾವಧಿಬೋಧದಿನಱಿ
ದಿರದೆಯ್ದಿದನಂದು ಹರ್ಷದುತ್ಕರ್ಷತೆಯಂ     ೪೯

ದೆಸೆಯೊಳ್ ನಾನಾವಿಮಾನಂ ಕೆದಱೆ ಸುರಧನುಶ್ರೀಯನೆಲ್ಲಾತಪತ್ರ
ಪ್ರಸರಂ ವ್ಯೋಮಾಗ್ರದೊಳ್ ಸಂದಣಿಸಿ ಪುದಿಯೆ ಸಂಗೀತವಾದ್ಯಪ್ರಘೋಷಂ
ರಸೆಯೊಳ್ ಮೆಯ್ವೆರ್ಚಿ ಚೋದ್ಯಂಬಡೆದಿರೆ ಭವನಾಭ್ಯಂತರಜ್ಯೋತಿರುತ್ಕ
ಲ್ಪಸುರರ್ ಮುಂತಾದ ಸರ್ವಾಮರಬಲಸಹಿತಂ ಬೇಗದಿಂ ಬಂದನಿಂದ್ರಂ       ೫೦

ವ : ಅಂತು ಚತುರ್ನಿಕಾಯದೇವರ್ಕಳೆಲ್ಲಂ ನೆರೆದು ರತ್ನಪುರಕ್ಕೆವಂದರ ಮನೆಯಂ ಪೊಕ್ಕು ಸಭಾಭವನಮನಳಂಕರಿಸಿರ್ದ ಭುವನಭೂಷಣನ ಚರಣಪೀಠದೊಳ್

ಪಲತೆಱದಿಂ ಪೊಗಳ್ದು ಪರಿನಿಷ್ಕ್ರಮಣೋತ್ಸವಮಂ ನಮೇರು ಮಂ
ಜುಳಕುಸುಮೋಪಹಾರಚಯಮಂ ಮಿಗೆಸೂಸುವ ಪೊತ್ತಿನೊಳ್ ಸಮು
ಜ್ಜ್ವಳಿತಕಿರೀಟಕೋಟಿ ಹರಿನೀಲಮಣಿಪ್ರಭೆ ತುಂಬಿವಿಂಡು ಮಂ
ಡಳಿಸಿದ ಮಾಳ್ಕೆಯಿಂದೊಡರಿಸಿತ್ತದು ನೋಳ್ಪರ ಕಣ್ಗೆ ಸೌಖ್ಯಮಂ            ೫೧

ವ : ತನ್ನಯ ಬೆಸದಿಂ ಮುನ್ನಮೆ ಪೋಗಿ ಕಿನ್ನರೇಶ್ವರಂ ಸಮೆದ ತಪೋಲಕ್ಷ್ಮೀವಿವಾಹಮಂಡಪ ಮೆಂಬಿನಂ ಕಣ್ಗೊಂಡಭಿಷೇಕಮಂಡಪಕ್ಕೆ ಭೂಮಂಡಳೀಮಂಡನನಾ ಖಂಡಳಂ ತಾನೆ ಕೈಗೊಟ್ಟು ಬಿಜಯಂಗೆಯ್ಸಿ ದಿವ್ಯವಸ್ತ್ರಭೂಷಣಾದಿ ನವ್ಯಮಂಗಳದ್ರವ್ಯ ಧಾರಿಕರ ಸರಸಿರುಹೆಯರಪ್ಪ ಹರಿತ್ಕುಮಾರಿಕಾದಿ ಪರಿಕರಮಂ ಮಜ್ಜನಪೀಠದಿಕ್ಕೆಲದೊಳ್ ನಿಱಿಸಿ ಸಂಭೂರಿಗಂಭೀರಮಂಗಳಾಚಾರಚಾರಂ ವಿರಾವಬಹಳಕೋಳಾಹಳಂ ವಿಯತ್ತಳಮಂ ಮೂವಳಸು ಬಳಸೆ

ಇದು ಜನ್ಮಾಭಿಷವಕ್ಕೆ ಸಕ್ಕಸಮನೆಂಬಂತಾಗೆ ಹೇಮಾದ್ರಿಯಂ
ಪದೆಪಿಂದೇಱಿಳಿಯುತ್ತುಮಿರ್ಪ ಪದದೊಳ್ ತೋರ್ಪಾ ದುರಾಯಾಸಮಿ
ಲ್ಲದೆ ಚಿತ್ತಂ ಮಿಗೆಮಾಡಿದಂ ಪತಿಗೆ ಗಂಗಾಸಿಂಧುತೀರ್ಥಪ್ರತೋ
ಯದಿನಾಖಂಡಳನಂದು ಪಾವನತಪೋರಾಜ್ಯಾಭಿಷೇಕಾಂಗಮಂ      ೫೨

ಇಂದೇ ದೇವನ ದೇಹಸಂಗಮೆಮಗಿನ್ನೆಲ್ಲೆಂಬಿದಂ ತೋರ್ಪವೋ
ಲಿಂದ್ರಂ ಭೂಷಿಸಿದುದ್ಘರತ್ನಮಯ ನಾನಾಭೂಷಣಂ ಗಂಧಸಾ
ರಂ ದೇವಾಂಗದ ವಸ್ತ್ರಮದಂತಿಶಯಂಬೆತ್ತಿರ್ದುದಾ ಪೊತ್ತಿನೊಳ್
ಬಂದೆತ್ತಿತ್ತು ಸುರಾಂಗನಾಸಮುದಯಂ ನೀರಾಜನಾವೃಂದಮಂ     ೫೩

ವ : ಮತ್ತಂ

ವರಧರ್ಮಕುಮಾರಕನಂ
ಕರೆಯಿಸಿ ರಾಜ್ಯಾಭಿಷೇಚನಂಗೆಯ್ದು ಜಗ
ದ್ಗುರು ಕಟ್ಟಿ ರತ್ನಪಟ್ಟಮ
ನಿರದಿತ್ತಂ ತನ್ನ ಸಕಳರಾಜ್ಯಶ್ರೀಯಂ  ೫೪

ಬಿಸುಟೆಮ್ಮಂ ಪಿತೃ ಪೋದಪಂ ತಪಕೆ ಮತ್ತೇಗೆಯ್ವೆನಾನೆಂಬ ಬೇ
ವಸದಿಂದುಮ್ಮಳಿಸಲ್ಕೆವೇಡ ಸಹಜಂ ಮೋಕ್ಷಾರ್ಥಿಗಳ್ಗೆಂದು ಬೋ
ಧಿಸಿ ಸಂತೈಸಿ ಸಮಸ್ತರಂ ಪೊಳಲೊಳತ್ಯುತ್ಸಾಹಮಂ ಕೂಡೆಮಾ
ಡಿಸಿ ನೀವೆಂದೆನೆ ಡಂಗುರಂಬೊಡೆಸಿದರ್ ಸರ್ವೋರ್ವರಾಪಾಳರುಂ   ೫೫

ವ : ಆ ಡಂಗುರದ ಬಲ್ಲುಲಿಯಗ್ಗಳಮಾಗಿ ಗಗ್ಗಲಿಸುತ್ತುಮಿರೆ

ಮೊಳಗುವ ಬದ್ದವಣಂಗಳ
ಥಳಥಳಿಸುವ ಪಲವುತೋರಣಂಗಳ ಬಳಗಂ
ರಾಗಾವಳಿಯಿಂ ತೊಳಗುವ
ಬೀದಿಗಳೊಳ್ ಭೋರೆನುತ್ತೆ ಮೇಳಯಿಸುವುದುಂ (?)     ೫೬

ವ : ಆಗಳಾಡುವ ವೈತಾಳಿಕರ ಪಾಡುವ ಗಾಯಕರ ಬೇಡುವ ಯಾಚಕರ ನೋಡುವ ನೋಟಕರ ಸಂದಣಿಯಿನಂದಮಾದ ಪುರದ ಸಂಭ್ರಮಂ ಪರಮನ ಪರಿನಿಷ್ಕ್ರಮಣ ಕಲ್ಯಾಣದುಪಕ್ರಮಕ್ಕಂ ವರವರ್ಮಕುಮಾರನ ಪಟ್ಟಬದ್ಧಕಲ್ಯಾಣದನು ಕ್ರಮಕ್ಕಂ ಸಕ್ಕಸಮನಾಗಿ ತೆಕ್ಕನೆ ತೀವೆ

ಮಗನಂ ಮೋಹದೆ ನೋಡಿನೋಡಿ ಪುಳಕಂ ಸಾಲೊತ್ತೆ ತಳ್ಕೈಸಿಯ
ಶ್ರುಗಳುಣ್ಮುತ್ತಿರೆ ನಿಂದ ತಾಯನನುಕಂಪಾಲೋಕನಾಭಂಗಿ ಕೈ
ಮಿಗಲಾಲಿಂಗಿಸಿ ಬುದ್ಧಿವೇಳ್ದು ಪುರಮಂ ಬೀಳ್ಕೊಂಡು ಬಂದೇಱಿದಂ
ಮಿಗೆ ಚಂದ್ರಪ್ರಭನಾಮಮಂ ಸಿವಿಗೆಯಂ ಮುಕ್ತಾಫಳವ್ಯಕ್ತಮಂ      ೫೭

ವ : ಅಂತು ಮೋಕ್ಷಲಕ್ಷ್ಮೀಪ್ರಾಸಾದ ಪ್ರಥಮಸೋಪಾನಮನೇಱುವಂತೇ ಱಲೊಡಂ

ದಂಡಿಗೆಯನೆತ್ತಿ ಪೊತ್ತುರು
ಮಂಡಳಿಕರ ಮಕುಟಘಟಿತಮಣಿಗಳ ಕಿರಣಂ
ಮಂಡಳಿಸಿ ನಭದೊಳದು ಕ
ಣ್ಗೊಂಡುದು ಕೆಂಬಟ್ಟೆಯೊಂದು ಮೇಲ್ಗಟ್ಟಿನವೋಲ್  ೫೮

ನೊರೆಗಳ ಪಿಂಡು ಮಂಡಳಿಸಿದಂತೆ ಸಹಸ್ರನೃಪಾಳಯಾನಮಾ
ವರಿಸಿರೆ ಪೂಜಿಪಾರತಿಯನೆತ್ತುವ ನೋಳ್ಪ ಪುರೀಜನಂಗಳು
ದ್ಧುರನಯನಾಂಶುಗಳ್ ಬಳಸೆ ಭೂಪರ ಸೂಳ್ ಪೆಗಲಲ್ಲಿ ಪೋದುದಾ
ಗುರವರನೇಱಿದಳ್ಸಿವಿಗೆ ದುಗ್ಧಪಯೋಧಿಯ ನಾವೆಯಂದದಿಂ     ೫೯

ತೊಡವಂ ತಾಳ್ದ ನೃಪಾಳಜಾಳಮೊಲವಿಂ ಮುಂಪೊತ್ತುಕೊಂಡೊಯ್ದುದೇ
ಳಡಿಯಂ ಖೇಚರರಾಜರಪ್ರಮತಿಮತಂ ಪೊತ್ತುಯ್ದು ಕೊಂಡೊಯ್ದುದೇ
ಳಡಿಯಂ ದಾನವರೋಳಿಯತ್ತಲದಱಿಂದಂ ಪೊತ್ತುಕೊಂಡೊಯ್ದುದೇ
ಳಡಿಯಂ ಪೊತ್ತುದು ಶಕ್ರರಾಳಿ ಬಳಿಯಂ ದೀಕ್ಷಾವನಾಂತಂಬರಂ      ೬೦