ಪಾಡುವ ಕಿನ್ನರೀಜನದ ಗೀತರಸಕ್ಕನುಕೂಲಮಾಗಿ ಕೈ
ಗೂಡುವ ಖೇಚರೀವಿತತಿ
ಕೂಡೆ ಬೆಡಂಗನಿತ್ತುದದು ಯಾತ್ರೆಯೊಳಂದು ತಪೋವನಂಬರಂ     ೬೧

ವ : ಆ ವಿಶಾಳಮಾದ ಸಾಳಮೆಂಬ ನಂದನವನದ ಮಧ್ಯಪ್ರದೇಶದೊಳ್

ಕೆಂಬರಲಿಂದೆ ಪಚ್ಚೆವರಲಿಂದೆ ವಿಮೌಕ್ತಿಕದಿಂ ಕುಬೇರನಂ
ದಂಬಡೆದೆಯ್ದೆ ನಿರ್ಮಿಸಿದ ದೀಕ್ಷೆಯ ಮಂಡಪಮಂ ಪಿಕಂ ಶುಕಂ
ತುಂಬಿ ನಿರೀಕ್ಷೆಗೆಯ್ದು ತಳಿರ್ಗಾಯಲರಿಂದೊಲೆದಾಡಿದತ್ತು ಮ
ತ್ತಿಂಬಿನೊಳಂ ಕರ್ದುಂಕಿದುದು ಬಂದೆಱಗಿತ್ತು ವಿಶೇಷಹರ್ಷದಿಂ      ೬೨

ವ : ಆ ಮಂಡಪಮನೆಯ್ದೆಬಂದು ಮಕರತೋರಣದ್ವಾರ ಪುರೋಭಾಗದೊಳ್ ನಿಂದು ಸೌಧಮೇಂದ್ರಂ ದೇವಾವಧಾನಮೆಂದು ಕೈಗುಡೆ ಸಿವಿಗೆಯಿಂದಿಳಿದು ದಾನವ ಮಾನವ ವ್ಯಂತರಾನಂತಕೋಟಿ ಪಟುಪಟಹಸಮುತ್ಕಟರಟನಂ ದಿಕ್ತಟಕೋಟರದೊಳ್ ಪ್ರಕಟಮಾಗಿ ನಟನಂಗೆಯ್ವುತ್ತುಮಿರೆ ಬಂದೊಳಗಂ ಪೊಕ್ಕು ನವರತ್ನಪೂರ್ಣಪರಿಪೂರ್ಣ ಕರ್ಪೂಚೂರ್ಣಮಯ ರಂಗಾವಲಿಯಿಂ ಭಂಗುರಮಾದ ರಂಗದ ನಟ್ಟನಡುವಣಿಂದು ಕಾಂತ ಶಿಲಾಪಟ್ಟಕದ ಮೇಲೆ ದೇವಂ ಪೂರ್ವಾಭಿಮುಖನಾಗಿ ಕುಳ್ಳಿರ್ದು

ತೊಟ್ಟ ತಿರೀಟಮಂ ತೆಗೆದುಕೊಟು ಸುರೇಶ್ವರನಾಂತ ಹಸ್ತದೊಳ್
ತೊಟ್ಟೆನೆ ಬಿಟ್ಟ ಕೇಶಭರಮಂ ನೆಱೆ ಬಿರ್ಚಿದೊಡೊಕ್ಕುದಲ್ಲಿ ಬೈ
ತಿಟ್ಟ ನಮೇರುಪುಷ್ಪನಿವಹಂ ಚರಮಾಂಗದ ಸಂಗಸೌಖ್ಯಮಿಂ
ಕೆಟ್ಟಪುದೆಂದದುಮ್ಮಳಿಸಿ ಸೂಸುವವೋಲ್ ಬಿಡದಶ್ರುಬಿಂದುವಂ   ೬೩

ಕಳೆದು ವರವಸ್ತ್ರಭೂಷಣ
ಕುಳಮಂ ದೇವಾಧಿದೇವನೊಪ್ಪಿದನಾಗಳ್
ಬಳಸಿದ ಮುಗಿಲಾವರಣಂ
ತೊಲಗಿದ ಹೇಮಾದ್ರಿಶಿಖರಮೆಂದೆಂಬಿನೆಗಂ      ೬೪

ಮಾಣಿಕದಾರತಿಗಳ ಹರಿ
ಯಾಣಂಗಳೆತ್ತಿಪಿಡಿದು ನಿಂದರ್ ಕೆಲರಿಂ
ದ್ರಾಣಿಯರಿಕ್ಕೆಲದೊಳ್ ಸುರ
ಗಾಣಿಕ್ಯಂ ಪಿಡಿದುದಷ್ಟಮಂಗಳಭರಮಂ         ೬೫

ವ : ಆಗಳಾ ಮಂಡಪದುಭಯಪಾರ್ಶ್ವದೊಳ್ ಪೊಂಗಟ್ಟಿಗೆವಿಡಿದು ಸೌಧಮೇಂದ್ರನು ಮೀಶಾನೇಂದ್ರನುಂ ನಿಂದು ಪೊಱಗಳೊಳಗಣ ಕಳಕಳಂಗಳಂ ಮಾಣಿಸು ತ್ತುಮಿರೆ

ಸಮತೆಯನಪ್ಪುಕೆಯ್ದು ಕಮಳಾಸನಸಂಸ್ಥಿತಿ ಚೆಲ್ವನಾಗೆ ಪಂ
ಚಮಗತಿಗೆಯ್ದಿಸಲ್ ನೆಱೆವ ಪಂಚಪದಾಂಚಿತಪಂಚಮುಷ್ಟಿಯಿಂ
ದಮೆ ಪಱೆದಿಕ್ಕಿದಂ ಕುಟಿಳಕುಂತಳಜಾಳಕಭಾರಮಂ ಕುದುಃ
ಖಮನಿರದೀವ ಪಂಚಕರಣಂಗಳ ಮೂಲಮನೆಯ್ದೆಕೀಳ್ವವೋಲ್   ೬೬

ಪರಮನಮಸ್ಸಿದ್ಧೇಭ್ಯ
ಸ್ವರಮಾನದಿಂದಮೊಗೆಯೆ ಕಿತ್ತೊಳ್ಗುರುಳಂ
ಸುರಪಂ ಕನಕದ ಪಾತ್ರೆಯೊ
ಳಿರಿಸಿಯದಂ ಬಿಟ್ಟನೊಯಿದು ಪಾಲಿಂಗಡಲೊಳ್          ೬೭

ಸುಳಿಸುಳಿದು ಸುತ್ತುತಿರ್ಪ
ಗ್ಗಳ ಬೆಳ್ಸುಳಿಯೆಂಬ ಚಂದ್ರಮಂಡಳದೊಳ್ ಕ
ಣ್ಗೊಳಿಪ ಕಱೆಯಂತೆ ತೋಱಿದು
ದಳಿಕುಂತಳಭಾರಮಾ ತ್ರಿಳೋಕೇಶ್ವರನಾ         ೬೮

ವ : ಇಂತು ಬಾಹ್ಯಾಭ್ಯಂತರಪರಿಗ್ರಹಮೆಂಬ ಕೆಸಱಂ ಕಳೆದು ತಪಸ್ತರುಣಿಯ ಪರಿಣಯನ ಕಲ್ಯಾಣಮನಾಂತ ಧರ್ಮನಾಥನಂ ಪೂಜಿಸುವ ಪೊಡವಡುವ ಪೊಗಳ್ವ ನೀವಳಿಸುವ ಸಕಳದಿವಿಜದನುಜಮನುಜರಾಜರಾಜಿ ಜಯ ಜಯನಿನಾದಮನೇಕಾನಕ ಧ್ವಾನದೊಡನೊಡನೆ ಬಾನಮನಾವರಿಸುತ್ತುಮಿರೆ

ಪಡೆವವರಾರೊ ಬೀಳುಡೆಯನೆಂದೆನುತುಂ ಸುರರಾಜರೆಲ್ಲರಾ
ಗಡೆ ಜಿನನುಟ್ಟು ತೊಟ್ಟು ತೆಗೆದಿಟ್ಟ ಸುವಸ್ತ್ರವಿಭೂಷಣಂಗಳಂ
ಸಡಗರದಿಂದೆ ತಂತಮಗೆ ಕೊಂಡು ಕರಂ ಬಿಗಿತೊಟ್ಟು ಕೊಟ್ಟು ನೇ
ರ್ಪಡೆ ತಣಿದಾಡುತಿರ್ದರಿರದಾರೊ ವಿಮೋಹಿಸರಿಷ್ಟಯೋಗದಿಂ    ೬೯

ಶ್ರೀಯಂ ಪರಿಹರಿಸಿ ತಪಃ
ಶ್ರೀಯಂ ಮಾಘಾರ್ಜುನತ್ರಯೋದಶಿಯಪರಾ
ಹ್ಣಾಯತ್ತ ಪುಷ್ಯತಾರೆಯೊ
ಳೋಯರದಿಂ ತಾಳ್ದನಖಿಳಜನವಿನುತಪದಂ     ೭೦

ರಾಜಕುಮಾರ ಸಹಸ್ರಂ
ಯೋಜಿಸಿ ಧೀರತೆಯನೊಡೆಯನೊಡನಾಂತುದದು
ಶ್ರೀಜೈನದೀಕ್ಷೆಯಂ ಗುಣ
ಭಾಜನರೊಡಸಲ್ವರಲ್ತೆ ತಮ್ಮಯ ಪತಿಯಾ    ೭೧

ಜಿನಪಂ ತ್ರಿಸಾಕ್ಷಿಕಂ ತಾಸ
ನೆನಿಸಿ ತಪಂಗೊಂಡ ಪದದೊಳಾಕ್ಷಣಮೊಗೆದ
ತ್ತನುಪಮಮನಃಪರ್ಯಯಂ
ಘನಕೇವಳಬೋಧದುದಯದಿಂದಂ ಮುನ್ನಂ    ೭೨

ವ : ಬಳಿಯಮಾ ತ್ರಿಳೋಕೀತಿಳಕನ ಚರಣಕಮಳಯುಗಳಮಂ ನಿಳಿಂಪ ಸಂಕುಳಂಬೆರಸು ಪೌಳೋಮೀಪತಿ ಮೂಮೆ ಬಲವಂದು ದಿವ್ಯವಸ್ತುಗಳಿಂದರ್ಚಿಸಿ ನಿರ್ಭರ ಭಕ್ತಿಯಂ ಪದಕ್ಕೆಱಗಿ ನರ್ತಿಸಿ ಕೀರ್ತಿಸಿ ಮಗುಳ್ದು ಪೊಗಳ್ದು ಸಂತುಷ್ಟಾಂತ ರಂಗನಾಗಿ ತೃತೀಯ ಕಲ್ಯಾಣಾರ್ಹಣಾವಿಧಾನಮಂ ವಿಸ್ತರಿಸಿ ತಾನುಂ ಶಚೀಮಹಾ ದೇವಿಯುಂ ಪತಿ ವಿರಹಪರಿತಪ್ತಾಂಗಿಯಪ್ಪ ಶೃಂಗಾರವತೀದೇವಿಯುಂ ಸುವ್ರತಾಮಹಾ ದೇವಿಯುಮಂ ವರಧರ್ಮಕುಮಾರನುಮಂ ಸಂತೈಸಿ ರತ್ನಪುರಕ್ಕೆ ಕಳಿಪಿ ತದನಂತರಂ

ಮಡದಿ ಶೃಂಗಾರವತಿ ತ
ನ್ನೊಡೆಯನನಡಿಗಡಿಗೆ ನೆನೆದು ಶರಣೆನಗಾರೆಂ
ದೊಡಲುರಿದು ಪಲುಂಬಿದಳಿ
ತ್ತಡಿಯೊಳ್ ಬೇಱಾದ ಜಕ್ಕವಕ್ಕಿಯ ತೆಱದಿಂ    ೭೩

ವ : ಆಗಳ್

ಸುರರಾಜರ್ ನಿಚ್ಚಲಾರಾಧಿಸುವರೊಸೆದು ಗರ್ಭಾವತಾರಂ ಮೊದಲ್ಗೊಂ
ಡರೆಬಲ್ ಲೋಕತ್ರಯಾಧೀಶ್ವರಪದವಿಗೆ ಸಂದಪ್ಪ ನೀನೆನ್ನ ಪುತ್ರಂ
ಪರಿಚಿಂತಾಭಾರಮೇಕೆಂದುಸಿರ್ದು ಕುವರನಂ ಪೆಂಡಿರಂ ನಂಟರಂ ಭೂ
ವರರಂ ಸಂತೈಸಿದಳ್ ತಜ್ಜನನಿ ಕೆಳದ ಲೇಸಪ್ಪಡೇಕಯ್ಯ ದುಃಖಂ  ೭೪

ವ : ಎಂದಾ ಸುವ್ರತಮಹಾದೇವಿ ನುಡಿದು ವಿಯೋಗವಿಕಳತೆಯನಾಱಿಸು ತ್ತುಮಿರ್ದಳನ್ನೆಗ ಮಿತ್ತಲ್

ಗುರುಪಾದದ್ವಂದ್ವಮಂ ವಂದಿಸಿ ವಿನಯದೆ ಬೀಳ್ಕೊಂಡು ಸಾಹಸ್ರಯೋಗೀ
ಶ್ವರರಿಂಗಾನಮ್ರನಾಗಿ ತ್ರಿದಶಪರಿವೃಢಂ ವ್ಯೋಮಭಾಗಾಗ್ರದೊಳ್ ಪೀ
ವರ ನಾನಾದೇವಸೈನ್ಯಂ ಬಳಸಿ ಬರುತಿರಲ್ ಪೋಗಿ ಪೊಕ್ಕಂ ಲಸನ್ಮಂ
ದಿರಮಂ ಮತ್ತೆಲ್ಲರಂ ಬೀಳ್ಕೊಡೆ ನಿಜನಿಜವಾಸಕ್ಕವರ್ ಪೋದರಾಗಳ್       ೭೫

ವ : ಅನಂತರಮಿತ್ತಲಾ ದುರ್ಧರತಪೋನಿಧಾನಸಾಧಕಂ ದುರಿತಗ್ರಹೋಚ್ಚಾಟ ನಪಟಿಷ್ಠಪಂಚ ಪದಮಂತ್ರಮನುಚ್ಚಾರಣಂಗೆಯ್ವು‌ತ್ತುಮಿರ್ದು

ಅಮೃತಸೇವನೆಯ ಬಗೆ ಸಂ
ದಮರ್ದಿರೆ ಕೈಯಿಕ್ಕುವಂತೆ ಕೈಯಿಕ್ಕಿದನಂ
ದಮಮ ಕೈಯೆತ್ತಿದಂ ಮ
ತ್ತಮರಗಣಂ ಕೈಯನೆತ್ತಿ ಪೊಡವಡುವನ್ನಂ     ೭೬

ಮತ್ತಮನಂತತೀರ್ಥಕರ ಕಾಲದಿನಿತ್ತನಶೇಷಕರ್ಮ ಭೂ
ವರ್ತನದಲ್ಲಿ ಧರ್ಮದ ನೆಗಳ್ತೆಯದಿಲ್ಲದೆ ಪೋದುದಿನ್ನದಂ
ಬಿತ್ತರಿಸುತ್ತುಮಿರ್ದು ಸಮಯಾಭರಣಸ್ಥಿತಿಯ ಪ್ರಭಾವನಾ
ವೃತ್ತಿಯನೆಯ್ದೆತೋಱಿಸುವ ಬೇವಸದಿಂ ತಳರ್ದಂ ಮುನೀಶ್ವರಂ೭೭

ಷಷ್ಠೋಪವಾಸಮಂ ಸಮ
ನುಷ್ಠಿಸಿ ನಾಲ್ಕನೆಯ ದಿನದೊಳತಿಶಯಿತತಪೋ
ನಿಷ್ಠನೀರ್ಯಾಪಥಸ್ಥಿತಿ
ಸೌಷ್ಠವಮಂ ಪಡೆಯಲಿಂದುಗತಿಯಿಂ ನಡೆದಂ  ೭೮

ವ : ಇಂತು ಸಾಳವನದಿಂ ಪೊಱಮಟ್ಟು ಪಾರಣೆಯ ನೆವದಿಂ ದಾನಮಾರ್ಗ ವ್ಯಕ್ತೀಕರಣ ನಿಮಿತ್ತಂ ವೀರಭಾವರಿಯ ಕ್ರಮಮಂ ಮೀಱದೆ ಪಾಟಳೀಪುತ್ರಪುರಕ್ಕಭಿಮುಖನಾಗಿ ನಡೆದುಬರ್ಪಲ್ಲಿ

ನೋಡುತ್ತುಂ ನೊಗನೊಂದನಿಕ್ಕುವನಿತಂ ಮುಂಬಟ್ಟೆಯಂ ಭೂಮಿಯೊಳ್
ನೋಡುತ್ತುಂ ಸ್ಥಳಪದ್ಮಮಂ ನಿಜಪದನ್ಯಾಸಂಗಳಿಂ ತೋಳ್ಗಳೊಳ್
ಕೂಡುತ್ತುಂ ನೆಱೆನಿಶ್ಚಳತ್ವದೊದವಂ ಮಾರ್ಗಕ್ರಮಂ ತಳ್ತು ಕೈ
ಗೂಡುತ್ತುಂ ನಡೆತಂದುದಂದು ಸಮುದಾಯಂ ಪಿಂದೆ ಯೋಗೀಂದ್ರನಾ        ೭೯

ವ : ಆಗಳ್

ಫಳಮಂಜರಿಯಂತೆ ಕಮಂ
ಡಲು ಪೂಗೊನೆಯಂತೆ ಕುಂಚಮೊಳ್ದಳಿರೆನೆ ಕೆಂ
ದಳಮೊಪ್ಪಿರೆ ಸಮುದಾಯಂ
ಜ್ವಳಿಸಿತ್ತಿದು ನಡೆವ ದಿವಿಜಕುಜವನದನ್ನಂ      ೮೦

ವ : ಅಂತು ಬಂದಾ ಪುರಮಂ ಪೊಕ್ಕು ತದೀಯ ವೀಧಿಕಾಭಾಗದೊಳಗೆ

ಪರಿದಗ್ಧಾಂಗವಿಹೀನಸೂತಕ ವಧುದುಷ್ಕರ್ಮಕಾನಾದ ಗೀ

ತರಸೋಜ್ಜೀವಕ ದೀನಯಾಚಕರ ಗೇಹದ್ವಾರಮಂ ಬಿಟ್ಟು ಭ
ವ್ಯರ ಭಾಗ್ಯೋದಯದಿಂದೆ ಬಂದನಧಿನಾಥಂ ವೀರಚರ್ಯಾರ್ಥಮಾ
ಗಿರದಂದುತ್ತಮ ಮಧ್ಯಮಾಧಮ ನಿವಾಸಂಗಳ್ಗೆ ಮಾನಾಪಹಂ      ೮೧

ವ : ಆ ಪೊತ್ತಿನೊಳ್

ಅರಮನೆಯ ಮೊದಲ ಬಾಗಿಲೊ
ಳಿರಿಸಿದನರಸ ತಿಥಿಸಂವಿಭಾಗಾರ್ಪಣನೀಯ (?)
ಮರತನನಗಾರವೇಳೆಯೊ
ಳುರುಮುದದಿಂ ವಿಮಳನೆಂಬ ಮುನಿವೇದಕನಂ  ೮೨

ವ : ಆತಂ ಸನ್ನಿಧಿಯೊಳ್ ಕಂಡು ಮುನ್ನಮೆ ಪರಿದುಪೋಗಿ ಸತ್ಪಾತ್ರ ಸಮಾಗಮನಸಮಯಮಂ ಪಾರುತ್ತುಮಿರ್ದ ಧನ್ಯಸೇನಮಹಾರಾಜಂಗೆ ಬಿನ್ನೈಸುವುದುಂ

ಅಷ್ಟವಿಧಾರ್ಚನೋಚಿತ ನವೀನ ಸುವಸ್ತುಗಳಿಂದೆ ತುಂಬಿದು
ತ್ಕೃಷ್ಟ ಸುವರ್ಣಪಾತ್ರೆಗಳನುತ್ಕಳಶಾಂಚಿತ ದರ್ಪಣಂಗಳಂ
ಶಿಷ್ಟವಧೂಜನಂ ಪಿಡಿದು ಮುಂದೆ ಬರಲ್ಕಿದಿರ್ವಂದನಾ ನೃಪಂ
ಹೃಷ್ಟನನೇಕಭೂಪರವಧಾನಮೆನುತ್ತವೆ ಸುತ್ತಿ ಬರ್ಪಿನಂ೮೩

ವ : ಆಗಳೋದುವ ಪಾಠಕರ ಊದುವ ಶಂಖಂಗಳ ನರ್ತಿಸುವ ನಟ್ಟುವರ ಕೀರ್ತಿಸುವ ಭಟ್ಟರ ಸೂಳೈಸುವ ನಿಸ್ಸಾಳಂಗಳ ಸೂಳ್ವಡೆದ ಕಹಳೆಗಳ ಮೇಳಾಪಕದ ಕೋಳಾಹಳಂ ಬಹಳಮಾಗೆ ಕುಳಿರ್ವ ಕುಡಿಗಳಿಂ ಮಿಳಿರ್ವ ತೋರಣಂಗಳಿನಳಂಕಾರಂ ಬಡೆದ ರಾಜವೀಧಿಯೊಳತೀವ ಪ್ರಭಾವನಾವಿಭವದಿಂ ಧನ್ಯಸೇನಮಹಾರಾಜಂ ತನ್ನಯ ಮನಮುಂ ಕಣ್ಗಳುಂ ಮುಂದೆ ಮಚ್ಚರಿಸಿ ಪರಿಯಲಾ ಪರಮಮುನೀಶ್ವರಂಗಿದಿರ್ವಂದು ವಂದಿಸಿ ಜಯಜಯಮೆನುತ್ತುಂ ಮೂಮೆ ಬಲವಂದು ಭಕ್ತಿಪೂರ್ವಕಮರ್ಚನಾ ದ್ರವ್ಯಂಗಳಿಂದರ್ಚಿಸಿ ತಚ್ಚರಣರೇಣುವಿಂ ನಿರ್ವಾಣರಮಣೀವಶ್ಯತಿಳಕಮೆಂಬಂತೆ ಪೊಳೆವ ತಿಳಕಮಂ ನೊಸಲೊಳ್ ತಳೆವುದುಂ ಪುಣ್ಯಪುಂಜಮೆ ನಿಲುವಂತೆ ನಿಂದು ಪರಸಿದ ಯತಿಕುಳತಿಳಕನಂ ನೋಡಿ

ಎನ್ನಯ ಜನ್ಮಮಿಂದು ಸಫಳತ್ವಮನೆಯ್ದಿದುದೆನ್ನ ವಂಶಮ
ತ್ಯುನ್ನತಮಾದುದಿಂದು ಬಿಡದೆನ್ನ ಗೃಹಸ್ಥತೆ ಪೂಜ್ಯಮಾದುದಿಂ
ದೆನ್ನವೊಲಾವನೋ ನೆಱೆಯೆ ನೋಂಪಿಯ ನೋಂತು ಕೃತಾರ್ಥನಾದನಿಂ
ದೆನ್ನಗೃಹಕ್ಕೆ ತೀರ್ಥಕರದೇವನೆ ಬರ್ಪವೊಲಾಯ್ತು ಪುಣ್ಯದಿಂ       ೮೪

ಈ ಮನೆ ಪಾವನಮಾಗಿ ಮ
ಹಾಮಹಿಮೆಯನಾಂತುದಿಂದು ನಿಮ್ಮಡಿಗಳ ಪದ
ತಾಮರಸಪಾಂಸುಯೋಗದೆ
ವಾಮಗುಡಂ ಕೂಡೆ ಪಿಟ್ಟು ಸವಿಯಪ್ಪನ್ನಂ    ೮೫

ವ : ಎಂದು ಯಥಾಸ್ತೋತ್ರಂಗೆಯ್ದನಂತರಂ ದೇವಾವಧಾನ ಬಿಜಯಂಗೆ ಯ್ಯಿಮೆಂದು ತಲೆಸುತ್ತಂ ತೆಗೆದುತ್ತರಾಸಮಿಟ್ಟು ಸ್ಥಾನತ್ರಯದೊಳರ್ಚನಾಪೂರ್ವಕಂ ನಮೋಸ್ತುಗೆಯಿದುದ ಕಶುದ್ಧಿವಿಲೋಕನಪುರಸ್ಸರಂ ನಿಜರಾಜಮಂದಿರದೊಳಗಂ ಪುಗಿಸಿ ಮಣಿಖಚಿತ ಚಂದ್ರಕಾಂತಪಟ್ಟಕಮಂ ತಂದಿಟ್ಟದಱಮೇಲೆ ಕುಳ್ಳಿರಿಸಿ

ಚರಣತಳಂಗಳನರಸಂ
ತೊಳೆದಾ ತೀರ್ಥೋದಬಿಂದುವಂ ಮಸ್ತಕದೊಳ್
ತಳಿದಮಳಮೌಕ್ತಿಕಂಗಳ
ತಲೆದೊಡವಂ ತೊಟ್ಟನೆಂಬಿನಂ ಕಣ್ಗೆಸೆದಂ       ೮೬

ಜಳಗಂಧಾಕ್ಷತ ಪುಷ್ಪಾ
ವಳಿ ಚರು ಮಣಿದೀಪಧೂಪಫಳದಿಂದಂ ಮಂ
ಗಳನಂಘ್ರಿಗಳಂ ಪೂಜಿಸಿ
ಪುಳಕಾಂಕಂ ಪಂಚಮುಷ್ಟಿಯಿಂ ಪೊಡೆವಟ್ಟಂ   ೮೭

ವ : ಮತ್ತಂ ಪ್ರತಿಗ್ರಹಾದಿ ನವವಿಧಪುಣ್ಯವರೇಣ್ಯನಾಗಿ ವಿಶಾಳಪ್ರಕಾಶ ಪೇಶಲಮಾದ ಶುಚಿತಮಾವಕಾಶದೇಶದೊಲ್ ನಿಱಿಸಿ

ಏಳುಗುಣಂಗಳಂ ತಳೆದು ಭವ್ಯಶಿರೋಮಣಿ ಸಿದ್ಧಭಕ್ತಿಯಂ
ಪೇಳೆ ಮುನೀಶ್ವರಂ ನೆನೆದು ಮಂತ್ರಮನಾಂತುರುಪಾಣಿಪಾತ್ರೆಯೊಳ್
ಮೇಳಿಸಿ ತುಪ್ಪದಿಂದೆ ಪರಮಾನ್ನದ ಪಾನೆಯನಿಕ್ಕಿದಂ ಮಹೀ
ಪಾಳಕನೆಯ್ದೆ ತಾಳ್ದಿ ಕರಣತ್ರಯಶುದ್ಧಿಸಮೃದ್ಧಭಾವಮಂ        ೮೮

ವ : ಅಷ್ಟಚತ್ವಾರಿಂಶದ್ದೋಷದೂರಮಾದ ದಿವ್ಯಾಹಾರಮಂ ತ್ರಿವಾರಂ ಕೈಯಲಿಕ್ಕುವುದುಂ

ಸಮುದಾಯಂಗೂಡಿ ಚರ್ಯಾಕ್ರಮಮನೆಸಗೆ ಮತ್ತಕ್ಷಯಂ ದಾನವಸ್ತೂ
ತ್ತಮವಾಕ್ಯಂ ಪೊಣ್ಮೆ ಕೈಯೆತ್ತಿರದೆ ಪರಸಿಯಾನಮ್ರಭೂಪಾಳನಂ ನಿ
ರ್ಗಮನಕ್ಕುದ್ಯುಕ್ತರಾಗುತ್ತಿರೆ ದಿವಿಜರಹೋದಾತೃಪಾತ್ರಪ್ರಸಾಮ
ರ್ಥ್ಯಮಳುಂಬಂ ಬಣ್ಣಿಸಲ್ಕೆಂಬ ರುತಿ ಗಗನದೊಳ್ ತುಂಬಿತುಳ್ಕಾಡಿತೆತ್ತಂ    ೮೯

ಸುರದುಂದುಭಿ ಮಂದಾನಿಳ
ನಲರ್ವಳೆ ಪೊಮ್ಮಳೆ ಸಮಸ್ತದಿವಿಜಸಮಾಜೋ
ಚ್ಚರಿತಾಹೋದಾನಸ್ವರ
ಮರಮನೆಯಂಗಣದೊಳಾಯ್ತು ಪಂಚಾಶ್ಚರ್ಯಂ         ೯೦

ಬಳಿಕಾ ಮುನಿವರನಲ್ಲಿಂ
ತಳರಲೊಡಂ ಕೂಡೆಪೋಗಿ ಬಿಡಲಾಱದೆ ಬೆಂ
ಬಳಿಸಂದನಾ ನೃಪಂ ಕರಿ
ಕಳಭಂ ಯೂಥಾಧಿಪತಿಯ ಬಳಿಸಲುವನ್ನಂ      ೯೧

ವ : ಅಂತು ತಪೋವನಪರ್ಯಂತಂ ಕಳಿಪಿ ತದುನುಜ್ಞೆಯಿಂ ಮೀಱಲಮ್ಮದೆ ಬೀಳ್ಕೊಂಡು ಬರುತ್ತುಮಲ್ಲಲ್ಲಿ ನಿಂದು ಮರಳೆ ನೋಡುತ್ತುಮೆತ್ತಾನುಂ ಮುಗುಳ್ದುಬಂದು ನಿಜನಿವಾಸಮಂ ಪೊಕ್ಕು

ಕಱೆದ ಸುವರ್ಣವೃಷ್ಟಿಯನಭೀಕ್ಷಿಸಿ ದಾನದಿನಾದ ವಸ್ತುವಂ
ನೆಱೆ ಪುರಭವ್ಯರಿಂಗೆ ಕೊಡುವನ್ನೆಗಮಲ್ತುಪಯೋಗಮೆಂದು ನಾ
ಡೆಱೆಯನದಂ ಮನಂದಣಿವಿನಂ ನಿಖಿಳರ್ಗುಱೆ ಪಚ್ಚುಗೊಟ್ಟು ತಾಂ
ಮೆಱೆದನುದಾರವೃತ್ತಿಯನಿಳಾತಳದೊಳ್ ಜನಮೊಪ್ಪಿ ತೋರ್ಪಿನಂ           ೯೨

ವ : ಅನ್ನೆಗಮಿತ್ತಲಾ ಧರ್ಮನಾಥಮುನಿನಾಥಂ ಪುಣ್ಯಾರಣ್ಯಮಂ ಪೊಕ್ಕತ್ಯಂತ ನಿರ್ಮಳ ಪ್ರಾಶುಕಪ್ರದೇಶಪ್ರಸಿದ್ಧಶುದ್ಧಸ್ಫಟಿಕಶಿಲಾತಳಾಗ್ರದೊಳ್ ಯೋಗನಿರೋಧಂಗೆಯ್ದು ಕಾಯೋತ್ಸರ್ಗಪ್ರತಿಮಾನುಯೋಗಯೋಗನಿಯೋಗದೊಳಿರ್ಪಲ್ಲಿ

ನೆಲನನವುಂಕಿ ಮೆಟ್ಟದೆ ಸಮಾನತೆವೆತ್ತ ಪದಂಗಳಿಂದೆ ನಿಂ
ದಲಘುಭುಜಂಗಳಂ ನಿಮಿರ್ದು ಲಂಬಿಸಿ ಜಾನುವನಂಟುತೋಱೆ ಕೆಂ
ದಳಮೆರಡುಂ ವಿಕಾರಮಣಮಿಲ್ಲದೆ ಯೋಗದೊಳಿರ್ದನಂದು ಮೆ
ಯ್ಗಲಿ ಕೆಳಗಣ್ಗೆ ಬೀಳ್ವವರನುದ್ಧರಿಪುಜ್ಜುಗದಿಂದಮಿರ್ದವೋಲ್            ೯೩

ವರಯೋಗಮೆಂಬ ದೀಪಾಂ
ಕುರದಿಂ ಪೊಱಮಟ್ಟುಪೋಪ ಕಜ್ಜಳಮೆಂಬಂ
ತಿರೆ ಯತಿಯ ಕುಂತಳಂ ಬಂ
ಧುರಮಾದುದು ಮಂದಗಂಧವಹ ಸಂಚಳಿತಂ   ೯೪

ಪಿರಿದಾದ ಶಾಂತರಸದಿಂ
ದೊರೆಕೊಳಿಸಿ ಕ್ರೋಧಮಾನಮಾಯಾಲೋಭೋ
ತ್ಕರಮೆಂಬಗ್ನಿಗೆ ಕೇಡಂ
ವರುಗುಣಿ ತನ್ನಲ್ಲಿ ತಾನೆ ತಣ್ಣನೆ ತಣಿದಂ      ೯೫

ಕಡುತಪದಿಂ ಮೆಯ್ ಬಡವಾ
ದೊಡಮರ್ಬಿಸಿದತ್ತು ಸತ್ತಪಸ್ತೇಜಂ ಪಾ
ಣಿಡೆ ಸಣ್ಣವಾದ ಮಣಿ ನೋ
ಳ್ಪಡೆ ತೇಜಂ ಬಂದು ಮತ್ತೆ ಪೊಳಪೇಱುವವೋಲ್        ೯೬

ಪಸರಂಬೆತ್ತುರುಮೋಹಮೆಂಬ ಬಲೆಯಂ ಸಂಕೋಚಿಸುತ್ತುಂ ಸ್ವಮಾ
ನಸದಿಂದಂ ತೆಗೆವಲ್ಲಿ ಸಿಕ್ಕಿದಪುದೀ ಮೀನೆನ್ನದೊಂದೆಂಬ ಬೇ
ವಸದಿಂ ಮುನ್ನಮೆ ಮೀನಕೇತನನವಂ ತನ್ನೊಂದು ಮೀಂಗೊಂಡು
ಬೀಸರದಿಂದೋಡಿದನೆಂಬಿನಂ ಮನಸಿಜಂ ಪೋದಂ ಮುನಿ ಸ್ವಾಂತದಿಂ          ೯೭

ತನುವಿಂ ಬೇಱಾಗಿ ತೋರ್ಪಾತ್ಮನನವಗಮದಿಂ ಕಂಡು ಮೆಯ್ಯೆನ್ನ ದಲ್ಲೆಂ
ದನವದ್ಯಂ ಬಿಟ್ಟುದಾಸೀನತೆವಡೆದ ನಿಮಿತ್ತಂ ಬಿಸಿಲ್ ತಣ್ಣೆಳಲ್ ಕಾ
ಠಿನಮಾದಂ ಕೋಮಳಂ ಖೇದದ ಪರಿ ಬಗೆಯೊಳ್ ಪುಟ್ಟದು ಧ್ಯಾನ ನಿಃಕಂ
ಪನನಂ ಪೆರ್ವಾವುಗಳ್ದೊಲ್ದಿರಲೆಸೆದನಗಂ ಬೀಳಲಂ ತಾಳ್ದಿದನ್ನಂ  ೯೮

ಪುಲಿಗಳ್ ಪುಲ್ಲೆಗಳೊಂದುಗೂಡಿ ಕರಿಗಳ್ ಸಿಂಹಂಗಳೊಂದಾಗಿ ಮುಂ
ಗುರಿಗಳ್ ಪಾವುಗಳುಂ ಕರಂ ಬೆರಸಿ ಕೋಣಂಗಳ್ ತುರಂಗಂಗಳಾ
ವಳಿಗಳ್ ಸಂಗತಿವೆತ್ತು ಜಾತಿಜನಿತ ಪ್ರದ್ವೇಷಮಂ ಬಿಟ್ಟು ತ
ಮ್ಮೊಲವಿಂದಿರ್ದವು ತತ್ತಪಸ್ವಿಯ ಸಮೀಪಸ್ಥಾನದೊಳ್ ಸುತ್ತಲುಂ          ೯೯

ಎಳೆನಾಗರ ಮಱಿಗಳ್ ಮಿಗೆ
ಪೊಳೆದಾಡುತ್ತಿರ್ದವಲ್ಲಿ ಮಱಿಸೋಗೆನವಿ
ಲ್ಗಳ ಕಣ್ಣಪೀಲಿಗಳ ತ
ಣ್ಣೆಳಲೊಳ್ ತಮ್ಮಿಚ್ಛೆ ತಳ್ತು ಕೈಗೂಡುವಿನಂ೧೦೦

ಎರಲೇಕೇಂದ್ರಿಯಮಾದೊಡಂ ಸಮನುಕೂಲಂಬೆತ್ತು ಬೀಸುತ್ತುಮಿ
ರ್ದಲರಂ ಬೀಳ್ವವನಂದು ತಂದು ಮುನಿಪಾಂಘ್ರಿದ್ವಂದ್ವಮಂ ಪೂಜಿಸಿ
ತ್ತೊಲವಿಂದೆಂದೊಡೆ ಸಿಂಹಮುಖ್ಯಮೆನಿಪಾ ಪಂಚೇಂದ್ರಿಯ ಪ್ರಾಣಿಸಂ
ಕುಲಮಂ ಮತ್ತನುಕೂಲಮಪ್ಪುದರಿದೇ ಸತ್ಸೇವೆ ಸಾಮಾನ್ಯಮೇ   ೧೦೧

ವ : ಇದು ಮೊದಲಾದನೇಕವಿಧದತಿಶಯಮನೊಡರ್ಚುತ್ತುಮೇಕಮಾಸ ಪ್ರಕಲ್ಪಿತಪ್ರತಿಮಾ ಯೋಗಮನಲ್ಲಿ ನಿರ್ವರ್ತಿಸಿ ಬಳಿಯಂ ತಳರ್ದು ಯೋಗಯೋಗ್ಯಸ್ಥಳಂಗ ಳೊಳನುಷ್ಠಿತ ಧ್ಯಾನನಾಗು‌ತ್ತುಮೇಕವಿಹಾರಿಯಾಗಿ

ಗ್ರಾಮದೊಳಗೊಂದುದಿನಮಭಿ
ರಾಮಪುರೀ ಖೇಡ ಖರ್ವಡ ಮಡಂಬ ದ್ರೋ
ಣಾಮುಖದೊಳೈದುದಿವಸಂ
ಭೀಮಾಟವಿಯಲ್ಲಿ ದಶದಿನಂಬರಮಿರ್ದಂ       ೧೦೨

ವ : ಇಂತು ಸಕಳಸತ್ವಗುಣಾಧಿಕ ಕೃಶ್ಯಮಾನಾವಿನೇಯಜನಂಗಳಲ್ಲಿ ಮೈತ್ರೀ ಪ್ರಮೋದಕಾರುಣ್ಯ ಮಧ್ಯಸ್ಥವೃತ್ತಿಗಳನವಲಂಬಿಸುತ್ತುಂ ವಿಹಾರಿಸುವಲ್ಲಿ

ಪಗೆ ಕೆಳೆಯೊಳ್ ತೃಣಮಣಿಯೊಳ್
ಮಿಗುವ ಸ್ತುತಿನಿಂದೆಯಾಳ್ದನಂ ಧನದೊಳ್ ಕೈ
ಮಿಗೆ ಸುಖದುಃಖದೊಳಂ ಸರಿ
ಬಗೆಯಂ ಮಾಡುತ್ತುಮಿರ್ದನಧಿಕಾಪೇಕ್ಷಂ        ೧೦೩

ದೋಷಂಗಳಲ್ಲಿ ಬಹಳ
ದ್ವೇಷಮನಧಿಮೋಕ್ಷದಲ್ಲಿಯನುರಾಗಮನೆ ವಿ
ಶೇಷಿಸಿಯುಮಿಲ್ಲ ರಾಗ
ದ್ವೇಷಂ ಮುನಿಗೆಂಬ ಮಾತು ಚಿತ್ರಮಿದಲ್ತೇ     ೧೦೪

ಮಿಗೆ ಮುನಿದು ಘಾತಿಕರ್ಮಾ
ದಿಗಳಂ ಕೆಡಿಸುತ್ತುಮಿರ್ದ ಮುನಿಮುಖ್ಯಂ ಕೈ
ಮಿಗಲುತ್ತಮಕ್ಷಮಾಶೋ
ಭೆಗೆ ಭಾಜನನಾದನೆಂಬಿದತ್ಯಾಶ್ಚರ್ಯಂ           ೧೦೫

ಅಯ್ದಾಚಾರಂಗಳಂ ಪನ್ನೆರಡುತಪಮನೀರಯ್ದುಧರ್ಮಂಗಳಂ ಮ
ತ್ತಯ್ದಾವಶ್ಯಂಗಳಾಱಂ ವಿಮಳಸಮಿತಿಯೈದಂ ವ್ರತಾಂಗಂಗಳೈದಂ
ಕಾಯ್ದಂ ಯೋಗೇಂದ್ರಚಂದ್ರಂ ಚರಿತದಪದ ಮೂಱಕ್ಕೆ ಗುಪ್ತಿತ್ರಯಕ್ಕೇ
ಗೆಯ್ದುಂ ಸಂದಂ ಮಹಾಮೂಲಗುಣದೊಳಧಿಕಂ ಸರ್ವಶೀಲಾಭಿರಮ್ಯಂ      ೧೦೬

ಶಿಷ್ಟ ತಪಸ್ತರುಣೀಪತಿ
ಗಷ್ಟಮಹಾರುದ್ಧಿಗಳ್ ಕ್ರಮಂಗೊಂಡೊಗೆದಭಿ
ಚೇಷ್ಟಿಸಿದವು ಮಚ್ಚರಿಪಂ
ತಷ್ಟಮಹಾಪ್ರಾತಿಹಾರ್ಯ ವಿಭವೋದಯದೊಳ್         ೧೦೭

ವ : ಅವಾವುವೆಂದೊಡೆ

ನರನಾವನಾವ ತತ್ತ್ವದ
ಪರಿಯಂ ಬೆಸಗೊಂಡಡಾಕ್ಷಣಂ ಪೇಳ್ವ ಸುವಿ
ಸ್ತರಕೋಷ್ಠಬುದ್ಧಿಯೆಂಬು
ದ್ಧುರರಿದ್ಧಿಯನೆಯ್ದಿದಂ ತಪೋಧನತಿಳಕಂ    ೧೦೮

ಪರಮಾಣುಮಾತ್ರರೂಪಂ
ಧರಿಸೀರ್ಯಾಶುದ್ಧಿಕಾರಣಂ ಮುನಿವರನಂ
ಬರಮಾರ್ಗದಲ್ಲಿ ನಡೆದಂ
ನಿರತಿಯಶ್ರೇಣಿ ಚಾರಣತ್ವದ ಬಲದಿಂ೧೦೯

ಮುಂದಿರೆ ವಜ್ರದ ಬೆಟ್ಟಂ
ಸಂಧಿಸಿ ತನ್ನಂಗಮಂದೊಡಾಕ್ಷಣಮೊದೆವಾ
ರ್ಪೊಂದಿತ್ತು ಯೋಗಿನಾಥಂ
ಗಂದು ಪ್ರತಿಘಾತಮೆಂಬ ರಿದ್ಧಿಯ ಗುಣದಿಂ     ೧೧೦

ಅತಿದುರ್ಧರ ತಪದಿಂದಂ
ಸ್ವತನುಕರಂಸ ತಪ್ತಮಾದೊಡಂ ಕಂದದೆ ಮ
ತ್ತತಿಶಯಕಾಂತಿಯನಾಂತುದು
ನುತತಪ್ತತಪಂ ದಲೆಂಬ ರಿದ್ಧಿಯ ಬಲ್ಪಿಂ        ೧೧೧

ಸಿದ್ಧಾಂತಮೆಲ್ಲಮಂ ಸಂ
ಶುದ್ಧಮನಂತರ್ಮುಹೂರ್ತಕಾಲದೊಳಾನಂ
ದೋದ್ಧಾರಕನುಚ್ಚರಿಸುವ
ನಿದ್ಧ ವಚೋಬಳ ಸಮೃದ್ಧರಿದ್ಧಿಯ ಪೆಂಪಿಂ  ೧೧೨

ಎಲ್ಲರ ರೋಗಮುಮಂ ತ
ಳ್ವಿಲ್ಲದೆ ಮಾಣಿಸುದಮಮ ತನ್ನಯ ತನುವಿನ
ಜಲ್ಲಮಲಮೆಂದೊಡಾ ಮುನಿ
ವಲ್ಲಭನಂ ತೋಷದರ್ಧಿಯಂ ತಳೆದವರಾರ್   ೧೧೩

ನೀರಸವಸ್ತುವನಿಕ್ಕಲ್
ಸಾರಾಮೃತಮಯಮೆನಿಪ್ಪ ರಸರಿದ್ಧಿಯನಾ
ಸೂರಿವರಂ ತಳೆದಂ ಕೈ
ಸಾರದು ನೋಳ್ಪರ್ಗೆ ಮತ್ತೆ ಪಸಿವುಂ ತೃಷೆಯುಂ           ೧೧೪

ಪಾನೆಯೋಗರಮನೆಲ್ಲಾ
ಸೇನಾಜನಮುಂಡೊಡಾ ದಿನಂಬರಮಿಕ್ಕುಂ
ತೇನುಂಗುಂದದೆನಿಪ್ಪು
ನ್ಮಾನವದಕ್ಷೀಣರಿದ್ಧಿಯಂ ಯತಿ ತಾಳ್ದಂ        ೧೧೫

ವ : ಇವು ಮೊದಲಾಗಿ ಸಮನಿಸಿದ ಹದಿನೆಂಟು ತೆಱನಪ್ಪ ಬುದ್ಧಿರಿದ್ಧಿಯೊಳಂ ದ್ವಿಪ್ರಕಾರಮಪ್ಪ ಕ್ರಿಯಾರಿದ್ಧಿಯೊಳಂ ಬಹುಭಂಗಿಸಂಗತಮಾದ ವಿಕ್ರಿಯರ್ಥಿಯೊಳಂ ಸಪ್ತವಿಧಮಪ್ಪ ತಪೋರಿದ್ಧಿಯೊಳಂ ಮೂದಱನಾವ ಬಲರಿದ್ಧಿಯೊಳಂ ನಾಲ್ಕು ತೆಱನಾದ ಸರ್ವೌಷಧಿಯೊಳಂ ಮೂಱುತೆಱನಾದ ರಸರಸರಿದ್ಧಿಯೊಳಂ ದ್ವಿವಿಧಮಪ್ಪ ಕ್ಷೀಣರು ದ್ಧಿಯೊಳಂ ನೆಱೆದು

ಎಲ್ಲಾ ಪ್ರಾಣಿಗಣಂಗಳಂ ಕರುಣದಿಂ ತನ್ನಂತೆ ಕೊಂಡೋವುವಂ
ಸೊಲ್ಲಂ ಲೌಕಿಕವಾರ್ತೆಯಂ ಸ್ವಸಮಯಾಚಾರಕ್ರಮಂಗುಂದನೆ
ಯ್ದೊಲ್ಲಂ ರಾಗನಿಬಂಧವಸ್ತುಚಯ ಸಂಯೋಗಂಗಳಂ ಮೋಹದೊಳ್
ನಿಲ್ಲಂ ಮೋಕ್ಷಸುಖಪ್ರಸಾದಕ ತಪಂ ಮೆಯ್ವೆತ್ತುದಾ ಧರ್ಮನೊಳ್            ೧೧೬

ವ : ಮತ್ತಂ

ಕೊನರಿಂ ತಳಿರಿಂ ನನೆಯಿಂ
ಘನಫಳದಿಂ ಕಲ್ಪವೃಕ್ಷಮೆಂತೊಪ್ಪುವುದಂ
ತನುಪಮಮತಿಶ್ರುತಾವಧಿ
ಮನಃಪರ್ಯಯಬೋಧದಿಂದಮೊಪ್ಪಿದನಮಳಂ           ೧೧೭

ವ : ಅವಗ್ರಹಮುಮೀಹೆಯುಮವಾಯುಮುಂ ದಾರಣಮುಮೆಂಬೀ ದಾರಣಮುಮೆಂಬೀ ನಾಲ್ಕುಂ ಪಲತೆಱದಿಂ ಕವಲ್ವರಿದು ಮೂನೂಱಮೂವತ್ತಾಱು ಭೇದಮಾದ ಮತಿಜ್ಞಾನಮುಂ ತನ್ಮತಿಪೂರ್ವಕಮಾಗಿ ಪುಟ್ಟಿ ಲಿಂಗಜಮುಂ ಶಬ್ದಮುಮೆಂಬ ದ್ವಿಪ್ರಕಾರಮನಾಂತು ಬಹುವಿಧಕಲ್ಪದಿಂದ ನೇಕಭೇದಮಾದ ಶ್ರುತಜ್ಞಾನಮುಂ ಭವತ್ಪ್ರತ್ಯಯಮುಂ ಗುಣಪ್ರತ್ಯಯಮುಮೆಂದು ದ್ವೈವಿದ್ಯಮುಂ ತಾಳ್ದಿ ಪಲವುಂತೆಱನಾಗಿ ಬಹುಭೇದಮಾದವಧಿಜ್ಞಾನಮುಂ ಋಜುಮತಿಯುಂ ವಿಪುಳಮತಿಯುಮೆಂಬೆರಡು ಭೇದಮಾದ ಮನಃಪ್ರರ್ಯಯ ಜ್ಞಾನಮುಮೆಂಬ ಚತುರ್ವಿಧಬೋಧಮನೊಳಕೊಂಡು ತ್ರಿಳೋಕಮಾಣಿಕ್ಯಂ ಮಾಣಿಕ್ಯ ನಿಕರಮನೊಳಕೊಂಡ ಮಾಣಿ‌ಕ್ಯಾಕರದಂತೆ ಸಮುತ್ತುಂಗ ಪ್ರಕಾಶಮಯಾಂತರಂಗನಾಗಿ

ಚಳನಾತ್ಯುಜ್ಜಿತಯೋಗಯೋಗ್ಯಮೆನಿಪಾದಂ ವೃಕ್ಷಸಮ್ಮೂಲದೊಳ್
ಪುಳಿನಸ್ಥಾನದೊಳುಚ್ಚಪರ್ವತನಿತಂಬೋಚ್ಚೂಳಿಕಾಭಾಗದೊಳ್
ವಿಳಸದ್ಧ್ಯಾನದ ಪೆಂಪನೊಲ್ದು ರಚಿಸುತ್ತುಂ ಘಾತಿದುಷ್ಕರ್ಮಸಂ
ಕುಳಮಂ ನಿರ್ಜರಿಸುತ್ತುಮಿರ್ದನಧಿಮೋಕ್ಷಪ್ರಾಪ್ತಿಬದ್ಧೋದ್ಯಮಂ೧೧೮

ವ : ಇಂತು ಧರ್ಮಮಾರ್ಗಪ್ರಭಾವನಾರ್ಥಂ ಛದ್ಮಸ್ಥಾವಸ್ಥೆಯಿಂದೊಂದು ವರ್ಷಪರ್ಯಂತಂ ವಿಹಾರಿಸುತ್ತುಮಿರ್ದು

ಎಲ್ಲಿ ತಪಂಗೊಡಂ ಮ
ತ್ತಲ್ಲಿಗೆ ಬಂದಂ ವಿಬೋಧಲಾಭಾರ್ಥಂ ಮುನಿ
ವಲ್ಲಭನಧಿಕಫಲಾರ್ಥಂ
ನಿಲ್ಲದೆ ಬರ್ಪಂತೆ ಬಿತ್ತಿದಲ್ಲಿಗೆ ವನಪಂ          ೧೧೯

ವ : ಇಂತು ಶ್ರುತಾವಧಿಮನಃಪರ್ಯಯಂಗಳೆಂಬ ವಿಶೇಷಬೋಧ ಚತುಷ್ಟಯಂಗಳಿಂದ ಳಂಕೃತನಪ್ಪ ಧರ್ಮನಾಥಂ ಸಕಳವಿಮಳಕೇವಳಜ್ಞಾನಾದಾನ ಪರಮ ಪಂಚಮಜ್ಞಾನ ಸಂಜನಕಾರಣಾತ್ಯಂತಶುದ್ಧಶುಕ್ಲಧ್ಯಾನ ಸಮುದ್ಯಾತನಸಕ್ತಚಿತ್ತನಾಗಿ ಮುನ್ನಂ ದೀಕ್ಷಾಗ್ರಹಣ ಮಾದ ಸಾಳವನಕ್ಕೆ ಬಂದೊಂದು ಸಪ್ತಪರ್ಣವೃಕ್ಷಮೂಳದೊಳ ಕ್ಷೂಣಚ್ಛಾಯಾಚ್ಛನ್ನಮೆನಿಸಿ ನಿಜನಿಕಟವರ್ತಿರಕ್ತಾಶೋಕಪಲ್ಲವಪ್ರತಿಬಿಂಬದಿಂ ಶೋಣ ಮಾಣಿಕ್ಯಮಯಮೆಂಬಂತೆ ಕಾಣ್ಕೆವಡೆದ ಚಂದ್ರಕಾಂತಶಿಳಾತಳದೊಳೀರ್ಯಾಪಥಶುದ್ಧಿ ಕರಣಾನಂತರಂ ಪೂರ್ವಾಭಿ ಮುಖನಾಗಿ

ಕೃತಕಾಯೋತ್ಸರ್ಗರೂಪಂ ಕೆಡಿಸಿ ಪೊಱಗಣೈದಿಂದ್ರಿಯಾಕ್ಷೇಪಮಂ ಸಂ
ಹೃತಿಗೆಯ್ವುದ್ಯೋಗದಿಂ ಘಾತಿಗಳನಿರದೆ ಕೆಯ್ಯಿಕ್ಕುವಂತಿಕ್ಕಿ ಕೆಯ್ಯಂ
ನತವದ್ಭ್ರೂ ಮಧ್ಯದೊಳ್ ಸೈತಿರಿಸಿ ಮನಮನೇಕಾಗ್ರನಿಷ್ಠಾಪ್ರತಿಷ್ಠಂ
ನುತಶುಕ್ಲಧ್ಯಾನಮುದ್ರಾವಿಭವನಭವಂ ಭಾವಿಸುತ್ತಿರ್ದನಾದಂ     ೧೨೦

ವ : ಆಗಳ್

ಉಲಿಯದ ಪಕ್ಷಗಳೋಳಿಗ
ಮೆಲೆಮಿಡುಕದ ತರುಗಳಿಂಗೆ ನೆಲೆಯಾಗಿ ವನಂ
ಸಲೆ ಚಿತ್ರಿಸಿದಂತಿರ್ದುದು
ಕಲಿಲಘ್ನ ಧ್ಯಾನವಿಘ್ನ ಶಂಕಾರಸದಿಂ೧೨೧

ವ : ಅಂತು ಬಹಿಸ್ಸಾಮಗ್ರಿಯನಪ್ಪುಕೆಯ್ದು ಲೋಕಾಗ್ರಮನೆಯ್ದುವಾಗ್ರಹದಿಂದ ವ್ಯಗ್ರನಾಗಿ ಕ್ಷಾಯಿಕಸಮ್ಯಕ್ತ್ವಮನಂತಜ್ಞಾನಮನಂತದರ್ಶನಮನಂತವೀರ್ಯಮವಗಾಹನತ್ವ ಮಗುರುಲಘುತ್ವಮವ್ಯಾಭಾಧತ್ವಂ ಸೂಕ್ಷ್ಮತ್ವಮೆಂಬ ತದೀಯಸ್ಥಾನ ನಿಷ್ಠಿತರಪ್ಪ ಸಿದ್ಧಪರಮೇಷ್ಠಿಗಳಷ್ಟಗುಣಂಗಳಂ ಮನದೊಳ್ ನೆನೆದು

ವರನವಪದಾರ್ಥದರ್ಥೋ
ತ್ಕರಮಂ ಪರಿಭಾವಿಸುತ್ತುಮಿರ್ದಾ ಮುನಿಪಂ
ಸ್ಥಿರಮಾದ ತನ್ನ ಚಿತ್ತದೊ
ಳಿರದಾಜ್ಞಾವಿಚಯಮೆಂಬ ಯೋಗಮನಾಂತಂ    ೧೨೨

ಕಡುಬಲ್ಪಿಂದಘಕುಳಮಂ
ಕೆಡಿಸುವುದಂ ಲಸದಪಾಯವಿಚಯಮನಾ ಮುನಿ
ಸಡಗರದಿಂ ವ್ಯಾಪಿಸಿದಂ
ತೊಡರ್ದತಿಶಯಮಾದ ಶುದ್ಧಲೇಶ್ಯಾತ್ರಯದೊಳ್       ೧೨೩

ಪರಮಯತಿ ಪುಣ್ಯಪಾಪ
ಸ್ವರೂಪಮಂ ತತ್ಫಲಂಗಳಂ ಧ್ಯಾನಿಸುತುಂ
ಧರಿಯಿಸಿದಂ ತನ್ನಭ್ಯಂ
ತರದಲ್ಲಿ ವಿಪಾಕವಿಚಯಮಂ ನಿಶ್ವಳದಿಂ        ೧೨೪

ಪರಿವಡಿಯಿಂ ಚಿಂತಿಸಿ ಪ
ನ್ನೆರಡುಮನುಪ್ರೇಕ್ಷೆಗಳ ಸುಸಂಸ್ಥಾನಮನಾ
ದರದಿಂ ತಾಳ್ದಂ ಮುನಿಪತಿ
ಸುರುಚಿರಸಂಸ್ಥಾನವಿಚಯಮಂ ಮುಕ್ತಿರತಂ    ೧೨೫

ವ : ಇಂತು ಚತುರ್ವಿಧಮಾದ ಧರ್ಮಧ್ಯಾನಮಂ ಧ್ಯಾನಿಸುತುಮಪ್ರಮತ್ತ ಗುಣಸ್ಥಾನದೊಳ್ ನಿಂದು ಮುನ್ನಮಪ್ರವೃತ್ತಮಪೂರ್ವನಿವೃತ್ತಮೆಂಬ ಕರಣತ್ರಯದಿಂದೊರ್ಮೊದ ಲೊಳನಂತಾನುಬಂಧಿ ಕ್ರೋಧಮಾನಮಾಯಾಲೋಭಂಗಳೆಂಬ ಚತುಃ ಕಷಾಯಮಂ ಲಯಕ್ಕೆ ಸಲಿಸಿ

ಉಳಿದೀರಾಱಱೊಳಾಗಳೆ
ಖಳದುರಿತತಮೋರುಣಂ ವಿಸಂಯೋಜಿಸಿದಂ
ಬಳಿಯಂ ವಿಶ್ರಮಿಸಿದ ನರ
ನೊಳಕೊಂಡೆಚ್ಚಱುಮನೇಳ್ವ ಪೊತ್ತನಿತಱೊಳಂ           ೧೨೬

ವ : ಮತ್ತಂ ಪೂರ್ವೋಕ್ತಕರಣತ್ರಯಮನೊಳಕೆಯ್ದನುಕ್ರಮದಿಂ ಪ್ರಥಮ ದ್ವಿತೀಯ ಚರಮಸಮಯದೊಳ್ ಮಿಥ್ಯಾತ್ವ ಸಮ್ಯಙ್ಮಿಥ್ಯಾತ್ವ ಸಮ್ಯಕ್ತ್ವ ಪ್ರಕೃತಿಗಳೆಂಬ ದರ್ಶನ ಮೋಹನೀಯತ್ರಯಮಂ ಕೆಡಿಸೆ

ತ್ರಿಕರಣಶುದ್ಧಂ ಸಪ್ತ
ಪ್ರಕೃತಿಗಳಂ ಕ್ರಮದೆ ಕೆಡಿಸಿ ಸತ್ಕ್ರಿಯದಿಂ ಕ್ಷಾ
ಯಿಕ ಸಮ್ಯಗ್ದೃಷ್ಟಿತ್ವಮ
ನಕುಟಿಳಮನನೆಯ್ದೆ ಶುದ್ಧದರ್ಶನನಾದಂ        ೧೨೭

ವ : ಸಮನಂತರಂ ಚಾರಿತ್ರಮೋಹೋದಯಮುಂ ಜ್ಞಾನವೈರಾಗ್ಯ ಸಂಪತ್ತಿಯುಮೊಂದನೊಂದನುಕ್ರಮಿಸುತ್ತುಮಿರೆ ಮತ್ತಾ ಪ್ರಮತ್ತ ಪರಾವರ್ತನ ಸಹಸ್ರಂಗಳ ನಂತರ್ಮುಹೂರ್ತದೊಳ್ ನಿರ್ವರ್ತಿಸಿ ಶುದ್ಧೋಪಯೋಗ ಸಮುದ್ಧತೆಯಿಂ ನಿಶ್ರೇಯಸ ಪ್ರಾಸಾದಸಮಾರೋಹಣನಿಶ್ರೇಣೀಭೂತಕ್ಷಪಕ್ರಶ್ರೇಣಿಯನೇಱಲೆಂದಧಃಪ್ರವೃತ್ತಾಧಿಕರಣ ಪರಿಣತಿಯನೊಳಕೊಂಡು

ಒಮದಾಯುಃಕರ್ಮಮಂ ಬಳಿ
ಸಂದಿರಲುಳಿದೇಳುಕರ್ಮದನುಭಾಗಸ್ಥಿತಿ
ಬಂದ ಪ್ರದೇಶಗುಣಮಂ
ಕುಂದಿಸಿದಂ ನಿರ್ಜರಾವಿಧಾನಕ್ರಮದಿಂ೧೨೮

ವ : ಅನಂತರಮನಂತಗುಣಪ್ರಭಾವದೊಳೊಂದಿದೋರೊಂದೇ ಪರಿಣಾಮದಿಂ ಪೂರ್ವ ಕರಣ ಗುಣಸ್ಥಾನದಿನಗಲ್ದ ನಿವೃತ್ತಕರಣ ಕ್ಷಪಕಗುಣಸ್ಥಾನಮಂ ಪೊರ್ದಿದಂತ ರ್ಮುಹೂರ್ತದೊಳ್ ನಿದ್ರಾನಿದ್ರಾ ನಿದ್ರಾಪ್ರಚಲಾ ಪ್ರಚಲಾಪ್ರಚಲಾ ಸ್ಥಾನಗೃದ್ಧಿನರಕ ತಿರ್ಯಗ್ಗತಿ ತತ್ತತ್ಪ್ರಯೋಗ್ಯಾನುಪೂರ್ವೇಂದ್ರಿಯ ವಿಕಳೇಂದ್ರಿಯಜ್ಯಾತಾತಪೋದ್ಯೋತ ಸ್ಥಾವರ ಸಾಧಾರಣಸೂಕ್ಷ್ಮಂಗಳೆಂಬ ಪದಿನಾಱುಂ ಪ್ರಕೃತಿಗಳಂ ನಿರ್ಮೂಲಂ ಪಡಲ್ವಡಿಸಿ ಬಳಿಯಮಂತರ್ಮುಹೂರ್ತದೊಳ್

ಅಪ್ರತ್ಯಾಖ್ಯಾನ ಕಷಾ
ಯಪ್ರತ್ಯಾಖ್ಯಾನ ದುಷ್ಕಷಾಯಾಷ್ಟಕಮಂ
ಕ್ಷಿಪ್ರಂ ಕೆಡಿಸಿದನಾ ಧೀ
ರಪ್ರಭು ಕೈವಲ್ಯಸೌಖ್ಯಲಾಭನಿಮಿತ್ತಂ            ೧೨೯

ವ : ಮತ್ತಮುತ್ತರಕ್ಷಣದೊಳ್ ನಪುಂಸಕವೇದಂ ಸ್ತ್ರೀವೇಮೆಂಬೆರಡಂ ಕೆಡಿಸಿ ಬಳಿಯಂಹಾಸ್ಯರತ್ಯರತಿಶೋಕಭಯಜುಗುಪ್ಸೆಗಳೆಂಬಾಱಱೊಡನೆ ಪುಂವೇದಮಂ ಬೆಂಕೊಂಡು ಪರಿವಿಡಿಯಿಂ ಸಂಜ್ವಳನ ಕ್ರೋಧಮಾನಮಾಯಾಲೋಭಂಗಳಂ ಪರಿಹರಿಸಿ

ಅತಿಸೂಕ್ಷ್ಮ ಸಾಂಪರಾಯ
ಸ್ಥಿತಂ ಪರಾಭವಿಸಿ ಸೂಕ್ಷ್ಮಲೋಭಕಷಾಯ
ಪ್ರತಿಪಕ್ಷಮನಷ್ಟಾವಿಂ
ಶತಿಭೇದಗ ಮೋಹನೀಯಬಲಮಂ ಗೆಲ್ದಂ      ೧೩೦