ವ : ದಿವಿಜಸಮಾಜಪ್ರಭೃತಿಪರಿಪೂಜ್ಯಮಾನ ದ್ವಿತೀಯಪೀಠದ ಮೇಲೆ ಪಂಚಶತಚಾಪ ವಿಸ್ತಾರದಿಂದಂಚಿತಮಾಗಿ ಚತುಶ್ಚಾಪದು‌ನ್ನತಿಯಿಂ ಚೆನ್ನಂಬಡೆದು

ಮೂಱನೆಯ ರತ್ನಪೀಠಂ
ತೋಱಿಕೆವೆತ್ತಿರ್ದ ಪಂಚವಿಧಮಣಿಖಚಿತಂ
ಮೀಱದ ನುಣ್ಬೆಳಗಿಂ ಪೊಳ
ಪೇಱಿಸಲಾ ಶ್ರೀಯ ಮಕುಟಮಿರ್ಪಂತಿರ್ಕುಂ     ೧೯೧

ಪೊಳೆವಷ್ಟಮಂಗಳಂಗಳ
ಬಳಗಂ ನವನಿಧಿ ವಿತಾನಮುಪನಿಧಿನಿಚಯಂ
ಜ್ವಳಿಸುವ ತೃತೀಯಪೀಠದ
ಕೆಲದೊಳ್ ನಿಲಿಸಿರ್ದು ಕಣ್ಗೆ ಪಡೆದವಗುರ್ವಂ   ೧೯೨

ಮುತ್ತಿನ ನೀಲದ ಪಚ್ಚೆಯ
ಮೊತ್ತದ ಮಾಣಿಕದ ಪವಳದುರುರಾಶಿಗಳಿಂ
ಬಿತ್ತರಿಸಿದ ಪುಂಜಂಗಳ್
ಸುತ್ತಂ ಥಳಥಳಿಸುತಿರ್ದವಚ್ಚರಿಯಿಂದಂ         ೧೯೩

ಮಗಮಗಿಸುವ ಕಡುಗಂಪಿಂ
ಮಿಗಿಲಾದ ನಮೇರು ಪಾರಿಜಾತದ ಕುಸುಮಾ
ಳಿಗಳೆತ್ತಂ ಚೆಲ್ಲಿರ್ದವು
ಸೊಗಸಂ ಸರ್ವರ್ಗೆ ಪುಟ್ಟಿಸುತುಮತಿಶಯದಿಂ   ೧೯೪

ವ : ಇಂತಮೂಲ್ಯರತ್ನೋಚಿರ್ವೀಚೀನೂತ್ನ ಸಮವಸರಣರತ್ನಾಕರಮಧ್ಯ ವರ್ತಿಬಹಿತ್ರ ಬಿಂಬಾಡಂಬರವಿಡಂಬಿ ಸಮುದಗ್ರಪೀಠತ್ರಯಾಗ್ರದೊಳ್ ಪಲವಂದದ ಬಂಧಮನನುಕರಿಸಿ ತೋರ್ಪಂತೆ ವಿಚಿತ್ರಮಾಗಿ ಕೇವಣಿಸಿದನಂತಾನಂತ ಚಿಂತಾಮಣಿ ಸಂತಾನ ಪಂತಿಗಳಿಂ ನಿರಂತರಿತಮಾದ ಪರುಸದ ಪಸುರ್ವರಲ ಪೊಸವೆಸದಿನಸದಳ ಮೆಸೆವ ಮಹಾರ್ಹ ಸಿಂಹಾಸನಮಂ ಮುಟ್ಟದೆ ನಾಲ್ವೆರಳಿಂ ಮೇಲೆ

ಪದೆಪಿಂ ಪೊಂಬಣ್ಣಮಂ ಕೀಳ್ಪಡಿಸಿ ಪೊಳೆವ ಮೆಯ್ವಣ್ಣದಿಂ ಚೆಲ್ವನಾಂತು
ರ್ವಿದ ನಾಲ್ವತ್ತೈದು ಬಿಲ್ಲುದ್ದದಿನೆಸೆದುವರಾಶ್ಚರ್ಯ ಸೌಂದರ್ಯದಿಂದಂ
ಪುದಿದು ಶ್ರೀಧರ್ಮನಾಥಂ ಮುದದೆ ನೆಲಸಿನಿಂದಂ ಮಹಾರಾಗಮಂ ಪಾ
ದದ ಕೆಂಪಿಂದಿಕ್ಕಿ ಮೆಟ್ಟಿರ್ದುರುಮಹಿಮೆಯನೀ ಲೋಕದೊಳ್ ತೋಱುವನ್ನಂ          ೧೯೫

ಜಿನಪದ ಪಿಂದಶೋಕತರು ರಂಜಿಸುತಿರ್ದುದು ಪುಷ್ಪಮಂಜರೀ
ಘನತರಮಾಗಿಯುಲ್ಲಸಿತಪಲ್ಲವವಲ್ಲರಿಯಿಂದಮೊಪ್ಪಿ ಪಾ
ವನಬಹುಶೋಭೆಯಿಂದಡರಿ ತಣ್ಣೆಳಲಿಂದಮೆ ತಿಣ್ಣಮಾಗಿ ದೇ
ವನ ನಿಕಟತ್ವದಿಂದೆ ಮರನಾದೊಡಮೆಯ್ದಿತಶೋಕಭಾವಮಂ      ೧೯೬

ನಳನಳಿಪೈದುಮಾಣಿಕದ ಗೊಂಡೆಯದಿಂದೆ ವಿಚಿತ್ರಮಾಗಿಯ
ಗ್ಗಳಿಸಿದ ತೋರಮುತ್ತುಗಳ ಮಾಲೆಯ ಲಂಬನದಿಂದೆ ಸುತ್ತಲು
ಜ್ವಳಿಸಿ ಸುಪದ್ಮರಾಗಮಣಿದಂಡದಿನೊಪ್ಪಮನಾಳ್ದು ಶೋಭೆಯಂ
ತಳೆದುದು ಚಂದ್ರಕಾಂತಮಯಮಾಗಿಯೆ ಮುಕ್ಕೊಡೆ ಭೂತ್ರಯೀಶನಾ         ೧೯೭

ಕನಕಮಣಿದಂಡಮಂ ಪಿಡಿ
ದನಿಮಿಷರಱುವತ್ತುನಾಲ್ಕುಚಮರರುಹಂಗಳ
ನನುನಯದಿಂದಿಕ್ಕಿದರಾ
ಜಿನಪನ ನಾಲ್ದೆಸೆಯೊಳಿರ್ದು ವಿಭವಾಧಿಕನಾ     ೧೯೮

ಸುರಿದುದು ಪುಷ್ಪವೃಷ್ಟಿ ನಭದಿಂದೆ ಜಿನಂಗೆ ಮನೋಜನಂಜಿ ಮೆಯ್
ಗರೆದುಮನಂಗನಾಗಿ ನಭದೊಳ್ ನೆಲಸಲ್ ನಡುಗುತ್ತುಮಿರ್ದ ತ
ತ್ಕರತಳದಿಂದೆ ಬೀಳ್ವರಲಬಿಲ್ಗಳುಮಂಬುಗಳೆಂಬ ಮಾಳ್ಕೆಯಿಂ
ಪರಿಕಿಸೆ ಪುಷ್ಪಸಂಸ್ಥಿತಿಯಕಾರಣಮೆತ್ತಣದಂತರಿಕ್ಷದೊಳ್            ೧೯೯

ಸುರದುಂದುಭಿಗಳ ಬಳಗಂ
ಪಿರಿದುಂ ಮೊಳಗುತ್ತುಮಿರ್ದುದೊರ್ಮೊದಲೊಳ್ ತ
ದ್ವಿರುತಿಯ ಭರದಿಂದಂದಿಂ
ಬರವಾರಿಧಿ ಘೂರ್ಮಿಸುತ್ತುಮಿರ್ದುದು ಗಾಢಂ೨೦೦

ದಿವ್ಯಧ್ವನಿ ಪುಟ್ಟಿದುದುರು
ಭವ್ಯಜನಾರ್ಚಿತಪದಂಗೆ ನಾನಾಜೀವ
ದ್ರವ್ಯಕ್ಕೆ ನಿಜನುಜೋಚೆ
ಶ್ರವ್ಯಂ ವಸ್ತುಸ್ವಭಾವನಿರ್ಣಯನಿಪುಣಂ         ೨೦೧

ಪರಮೌದಾರಿಕದೇಹೋ
ದ್ಧುರಭಾಮಂಡಳಮಶೇಷಮಂ ವ್ಯಾಪಿಸೆ ಮಂ
ದರರೂಪಮೆಂಬ ಶಂಕಾ
ಕರಮಾದುದು ಸಮವಸರಣದೇಶಮದೆಲ್ಲಂ    ೨೦೨

ವ : ಅಂತು ವಿಶಿಷ್ಟಪರಮೈಶ್ವರ್ಯವಿಭವಪರಿಜುಷ್ಟತೋಷ್ಟಕಾಯಮಾನ ವಿಲಸದಷ್ಟ ಮಹಾಪ್ರಾತಿಹಾರ್ಯಪ್ರಕೃಷ್ಟನಾಗಿ ಶ್ರೀಧರ್ಮನಾಥತೀರ್ಥನಾಥಂ ಸಕಳ ಜನಂಗಳ ಕಣ್ಗಳಿಂಗೆ ಕೌತುಕಮಂ ಪಿಂಗದೆ ನೆಲೆಗೊಳಿಸುತ್ತುಮಿರ್ಪುದುಂ

ಕರದಿಂ ಮಾಳ್ಪುದದೇನುಮಿಲ್ಲ ನಡೆಯಿಂದಂ ಪ್ರಾಪ್ಯಮಿಲ್ಲಿಂತು ತಾ
ನಿರದಾಲಂಬಿತಹಸ್ತಕಂ ಸಮಪದದ್ವಂದ್ವಂ ದಲಾಗಿರ್ದು ಮೂ
ಧರೆಯೊಳ್ ತನ್ನ ಕೃತಾರ್ಥತಾಮಹಿಮೆಯಂ ಸಂಸೂಚಿಸುತ್ತಿರ್ದನಾ
ಪರಮೇಶಂ ನೆಱೆನಿರ್ವಿಕಾರತನುವಿಂ ಹೃಚ್ಛಾಂತಿಯಂ ತೋಱಿದಂ೨೦೩

ತ್ರಿಭುವನ ಭೂಷಣಂಗೆ ವರವಸ್ತ್ರಮಂ ಕರೆಂ
ಪ್ರಭವಿಸಿದಂ ಸ್ವಭಾವಜವಿಳಾಸವಿಶೇಷಮನಾಂತ ರೂಪದಿಂ          ೨೦೪

ರತ್ನಂಗಳನೊಳಕೊಂಡಧಿ
ರತ್ನಾಕರಮೊಪ್ಪುವಂತೆ ಧರ್ಮಜಿನೇಶಂ
ರತ್ನತ್ರಯಂಗಳಂ ಘನ
ಯತ್ನದಿನೊಳಕೊಂಡು ತೊಳಗಿ ಬೆಳಗುತ್ತಿರ್ದಂ೨೦೫

ವ : ಅಂತೆನಿಸಿ ನಿಖಿಳಗಜದಳಂಕರಣಮುಂ ಭವ್ಯಗಣಶರಣಮುಮಾಗಿ ಸಮಸ್ತ ವಾಸ್ತುವಿದ್ಯಾಶ್ರಯಣನಪ್ಪ ವೈಶ್ರವಣಂ ಮಣಿಮಯ ಸಮವಸರಣಮಂಡಳಮನಾ ಖಂಡಳನಾಜ್ಞೆಯಿಂ ವಿಗುರ್ಬಿಸುವುದುಂ

ಮಿಗೆ ಮೋಕ್ಷಪುರಕೆ ಪೋಪು
ಜ್ಜುಗದಿಂ ಶ್ರೀಧರ್ಮನಾಥಪತಿ ಬಿಡಿಸಿದ ಶೋ
ಭೆಗೆ ನೆಲೆ ಪೊಱಗೆಯ್ದಿದನೆನೆ
ಸೊಗಯಿಸಿದುದು ಸಮವಸರಣ ಧರಣೀವಳಯಂ          ೨೦೬

ಜಿನತನುವಿಂ ದ್ವಿಷ್ಟದ್ಗುಣ
ಮೆನಿಕುಂ ವರಚೈತ್ಯವೃಕ್ಷಮಂಡಪಗೋಪುರ
ಘನಹರ್ಮ್ಯವಸತಿಕಾ ಸ್ತೂ
ಪನಿಚಯದುನ್ನತಿಕೆಯಾಗಮಜ್ಞರ ಮತದಿಂ      ೨೦೭

ಸುತ್ತಂ ಬಳಸಿದ ಕೋಟೆಗ
ಳುತ್ತಮವೇದಿಗಳ ಬಳಗದುನ್ನತಿ ಬಿಡದ
ರ್ಹತ್ತನುವಿಂ ನಾಲ್ಮಡಿ ಭಾ
ಸ್ವತ್ತೋರಣಮುಮದಱಿನಿನಿತಕ್ಕಧಿಕಂ           ೨೦೮

ಅಂತರ್ಮುಹೂರ್ತದೊಳಗನಿ
ತುಂ ತೆಱಪಿನ ಸಮವಸರಣಮಂ ಪೊಕ್ಕು ತೊಳ
ಲ್ದಂತಾಗಳೆ ಪೊಱಮಡುವರ್
ಸಂತಸದಿಂದೆಲ್ಲರೆಯ್ದೆ ಜಿನನತಿಶಯದಿಂ         ೨೦೯

ಪುಗೆ ಪಸಿವುಂ ನೀರಳ್ಕೆಯು
ಮಗಲ್ವುದು ಚಿತ್ತಾನುರಾಗಮುಪ್ಪುದು ಸದ್ದೃ
ಷ್ಟಿಗಳಿಂಗೆ ಮತ್ತಭವ್ಯಾ
ಳಿಗಳಿಂ ನವಗೋಚರಂ ಮಹಾಸಭೆ ಜಿನನಾ        ೨೧೦

ವಾರಿಧಿಯಂತಿರೆ ಪರಿಖಾ
ನೀರಂ ವರವಜ್ರವೇದಿಯಂತಿರೆ ತತ್ಪ್ರಾ
ಕಾರಂ ಜಿನಪತಿ ಮೆಱೆದಂ
ಮೇರುವೆನಲ್ ಜಂಬು[ದೀ]ಪದಂತೆಸೆದುದಮಂ೨೧೧

ವ : ಇಂತು ಕುಬೇರ ವಿರಚಿತ ಸಮವಸರಣಮತಿರಮಣೀಯಮಾಗಿರ್ಪುದು ಮನ್ನೆಗಮಿತ್ತಲಾ ಧರ್ಮನಾಥನ ಕೇವಲಜ್ಞಾನೋತ್ಪತ್ತಿಲಕ್ಷಣ ಚತುರ್ಥಕಲ್ಯಾಣ ಪರಿಸೂಚನಾಕಾರಣಮಾಗಿ

ಆನಕದ ಶಂಖದುರುಪಂ
ಚಾನನದ ಸುವರ್ಣಘಂಟೆಯ ಸ್ವನಮಕೃತಂ
ವಾನವ್ಯಂತರಕ ಜ್ಯೋ
ತಿರ್ನಾಂಕದೊಳೊಗೆಯಲಱಿದರವರೊರ್ಮೊದಲೊಳ್     ೨೧೨

ಧರಣೀಂದ್ರಂ ಮುಖ್ಯಮಾಗಿರ್ದಹಿಗಳ ಗಡಣಂ ವ್ಯಂತರೇಂದ್ರಂ ದಲಗ್ರೇ
ಸರಮಾದ ವ್ಯಂತರಾಳಿದ್ಯುಮಣಿ ಹಿಮಗು ಮುಂತಾದವರ್ ಜ್ಯೋತಿಗಳ್ ನಿ
ರ್ಜರರೀಶಾನೇಂದ್ರವರ್ಯರ್ ನಿಜನಿಜನಿಳಯಂ ಪಾಳದೆಂಬಂತೆ ಬಂದರ್
ನೆರೆದಾ ಸೌಧರ್ಮದೇವೇಂದ್ರನ ಮಣಿನಿಳಯಕ್ಕುತ್ಸುಕ್ಯದಿಂದಂ      ೨೧೩

ವ : ಬಳಿಯಮನೇಕಚ್ಛಂದನ ಪೊಂದೊಡವುಗಳಿನಂದಂಬಡೆದಿಂದ್ರಾಣಿ ಯೊಳೊಂದಿ ಪುರಂದರಂ ಪೊಱಮಟ್ಟು

ಗಗನಂ ಚಂಚದ್ವಿಮಾನಾವಳಿಗಳ ಬೆಳಗಿಂ ತುಂಬುಂವಂತೆಂಟುದಿಕ್ಕೋ
ಣೆಗಳುಂ ದಿಂಕಿಟ್ಟು ತೋರ್ಪಂತನಿಮಿಷವನಿತಾಗೀತದಿಂ ಭೂಮಿಯೆಲ್ಲಂ
ಮಿಗೆ ಚಲ್ಲುತ್ತಿರ್ಪ ಮಂದಾರದ ಕುಸುಮಸಮೂಹಂಗಳಿಂ ಮುಚ್ಚುವಂತೆ
ದ್ವಿಗುಣಾನಂದಂ ಸುರೇಂದ್ರಂ ಸುರಬಲಸಹಿತಂ ಬಂದನೈರಾವತಸ್ಥಂ          ೨೧೪

ವ : ಆ ಸಮಯದೊಳ್

ನೇಸಱ ತೇರಗಾಗಲಿ ನಡೆಯಲ್ ಪಥಮಿಲ್ಲೆನೆ ಕೂಡೆ ತುಂಬಿಕೊಂ
ಡಾಸುರಮಾದ ಸತ್ತಿಗೆಗಳೋಳಿಗಳಂ ಬಿಡದಲ್ಲಿಗಲ್ಲಿಗಂ
ಬೀಸುವ ಚಾಮರಂಗಳನತೀವಕೂತೂಹಳಮಾಗಿ ಬಂದುದಾ
ವಾಸವಮುಖ್ಯಮಾದ ಚತುರಂಗದ ದೇವನಿಕಾಯಸೈನಿಕಂ            ೨೧೫

ನಳನಳಿಸಿ ಪೊಳೆದು ಮಿಳಿರ್ವಂ
ತೆಳೆಮಿಂಚುಗಳೋಳಿ ಗಗನತಳರಂಗದೊಳು
ಜ್ವಳಿಸುವ ಸುರನರ್ತಕಿಯರ
ಬಳಗಂ ಸುಳಿದಾಡಿದತ್ತು ಗೀತಾನುಗತಂ           ೨೧೬

ಪದೆಪಿಂಗಾಶ್ರಯಮಾದ ಶೋಣಮಣಿದೀಪಶ್ರೇಣಿಯಂ ತಳ್ತು ತಾ
ಳ್ದಿದ ಮಂದಾರದಳಪ್ರಸೂನಘನಮಾಳಾಜಾಳಮಂ ಕೂಡೆ ತಾ
ಳ್ದಿದ ಗೀರ್ವಾಣನಿವಾಸಿನೀಸಮುದಯಂ ಕಣ್ಗೊಂಡುದು ಜ್ಯೋತಿರಂ
ಗದ ಮಾಲ್ಯಾಂಗದ ಕಲ್ಪವೃಕ್ಷದ ಸಮೂಹಂ ತಾಂ ಬರುತ್ತಿರ್ಪಿನಂ  ೨೧೭

ಗಗನಕ್ಕವಗಾಹನಮೆಂ
ಬ ಗುಣಂ ದಿಟಮಲ್ಲದಿರ್ದೊಡೆಯ್ದೆಬರುತ್ತಿ
ರ್ಪಗಣಿತ ಸಮಸ್ತಸುರಸೇ
ನೆಗೆ ತೆಱಪಂ ಕೊಡುವ ಶಕ್ತಿಯೆಂತಾದಪುದೋ   ೨೧೮

ವ : ಮತ್ತಂ ಶತಕ್ರತು ಮುಂತಾದ ಸಕಳಚತುರ್ನಿಕಾಯದೇವರ್ಕಳೆಲ್ಲಂ ನೆರೆದು ಧರ್ಮನಾಥನೆಂಬರ್ಹತ್ಪರಮೇಶ್ವರಂಗೆ ವಿಮಳಕೇವಲಜ್ಞಾನೋದಯಮೆಂಬ ಚತುರ್ಥಕಲ್ಯಾಣಪೂಜಾಸಮುತ್ಸವಂ ನಿರ್ವರ್ತಿಸಲೆಂದು ಬರುತ್ತುಮಿರ್ಪ ಪೊತ್ತಿನೊಳ್ ತುಮುಳಕೊಳಾಹಳಂಗೊಂಡು ಕಡುಸಂಭ್ರಮದಿಂ ನಿಳಿಂಪರಾವಳಿ ಸುಳಿದು ಸೂಸುವ ವಾಸಚೂರ್ಣದ ಸುತ್ತಲುಂ ಸುರಿವರಲ ಬಲ್ಸರಿಯ ಮೊಳಗುವಡೆದ ತೂರ್ಯದ ರವದ ತೊಳಗುವ ಕನ್ನಡಿಯ ಕಳಶದ ಪಾಡುವ ಗಂಧರ್ವದೇವರ ಕೂಡುವ ತಾಳಲಯಭೇದದ ಕುಣಿದಾಡಿ ನಗಿಸುವ ವೈತಾಳಿಕವೇಷದ ವೈಮಾನಿಕದೇವ ವೈನಟ್ಯದ ವೈಕುರ್ವಣದಗುರ್ವು ಕೊರ್ವುವಡೆದು ವಿಚಿತ್ರಮಾಗಿ ಪ್ರಭವಿಸಲಭಿನವ ಚತುರ್ಥಕಲ್ಯಾಣ ಸಮರ್ಪಣಾಕರಣ ರಣರಣಪರಿಣತವದಂತಃಕರಣ ನಿರವಶೇಷದೇವದೇವೀಯಾತ್ರಾ ಪ್ರಭಾವನಾ ವೈಭವಮಹಾನುಭಾವಂ ವಿಸ್ಮಯಮನಜನಿಸುತ್ತುಮಿರೆ

ಅತಿಚಿತ್ರಂಬೆತ್ತ ನಾನಾನವಮಣಿಮಯವಿಸ್ಫಾರನೈಜಪ್ರಭಾಳೀ
ಷ್ಠುತರತ್ನಾಮತ್ರಗೋತ್ರಂಗಳೋಳತಿಶಯದಿಂ ತುಂಬಿಕೊಂಡಿರ್ದ ಗಂಧಾ
ಕ್ಷತನೈವೇದ್ಯ ಪ್ರದೀಪೋತ್ಪಳಕುಳಮುಕುರಾದ್ಯರ್ಚನಾಯೋಗ್ಯ ನವ್ಯ
ಸ್ತುತ ದಿವ್ಯದ್ರವ್ಯಮಂ ತಾಳ್ದಿದ ಸುರವನಿತಾಕೋಟಿ ಬಂದತ್ತು ಸುತ್ತಂ        ೨೧೯

ರುಚಿರಾಳಂಕಾರ ಸಾರೋಜ್ವಳಮಣಿಕಿರಣಾಪೂರದೊಳ್ ಕೂಡಿದಂಗ
ಪ್ರಚುರಚ್ಛಾಯಾವಿಶೇಷಂ ಪುದಿದು ಗಗನದೊಳ್ ತೀವಿ ತುಳ್ಕಾಡಲಾಗಳ್
ವಿಚಳನ್ನಾನಾಪತಾಕಾಪಟಪಟಳತರಂಗತ್ತರಂಗಂ ತುರಂಗ
ಪ್ರಚಯೋದ್ಯನ್ನಕ್ರಚಕ್ರಂ ನಡೆದುದಮರಸೇನಾಸಮುದ್ರಂ ಸುಭದ್ರಂ            ೨೨೦

ವ : ರುತುಮಾನದ ದ್ವಾರಕುಟ್ಯಂ ಮೊದಲ್ಗೊಂಡು ಧೂಳಿಸಾಳಂಬರ ಮಂತರಾಳ ಚಕ್ರವಾಳಸ್ಥಳದೊಳೆಲ್ಲಂ ಕಿಕ್ಕಿಱಿಗಿಱಿದಿಕ್ಕೆಲಂಬಿಡಿದೆರಡೆರಡಾಗಿ ಮಾಲೆ ಗೊಂಡು ಪರಿಪರಿಯ ಪಂತಿರೂಪದಿಂ ನೀಳ್ದು ನಿಮಿರ್ದು ವಿಯತ್ತಳದೊಳ್ ತುಂಬಿ ಬರುತ್ತುಮಿರ್ದ ನೂತ್ನರತ್ನಮಯ ನಾನಾವಿಧವಿನೂಯವಿಮಾನವಿತಾನ ಜೌಜಾಯ ಮಾಯ ನಿರತಿಶಯ ಕಿರಣಜಾಳಮೇಳಾಪರಂ ಗಗನಲಕ್ಷ್ಮೀದೇವೇಂದ್ರಸಮಾ ಗಮನ ಸಂತೋಷದಿಂದೆತ್ತಿಸಿದ ಮಕರತೋರಣದೋರಣಿ ವಿಳಾಸಮನನುಕರಿಸುತ್ತುಮಿರ್ಪುದುಂ

ಜಯಜಯ ಘಾತಿಕರ್ಮ ತರುಮೂಲವಿಶೋಷಣ ನಂದನಂದ ಭೂ
ತ್ರಯಜನವಂದ್ಯ ಕೇವಳವಿಬೋಧವಿಭೂಷಣಯೆಂಬ ಘೋಷಣಂ
ನಯದಿನಶೇಷದಿಕ್ತಟಕುಟೀರಕೋಟರದಲ್ಲಿ ದೇವಕೋ
ಟಿಯ ಪಟಹಸ್ವನಂಬೆರಸು ತುಂಬಿ ತುಳುಂಕುತುಮಿರ್ದುದಾಕ್ಷಣಂ  ೨೨೧

ವ : ಇಂತನಣುತರ ಪ್ರಭಾವದಿಂ ಶಚೀರಮಣನಾ ಸಮವಸರಣ ಪರಿಸರಣ ಪ್ರದೇಶಕ್ಕವ ತರಿಸುವುದುಂ ತೊಟ್ಟನೆ ಕಟ್ಟಿದಿರೊಳ್

ಪಿರಿದಾದೈವಣ್ಣದಿಂ ಚಿತ್ರಿಸುತುಮಖಿಳದಿಗ್ಭಿತ್ತಿಯ ರಾಜನಂ ಭಾ
ಸುರಮಧ್ಯಸ್ಥಾನದೊಳ್ ತಾಳ್ದುತುಮುರುದುರಿತಾರಾಶಿನಿರ್ನಾಶಮಂ ಮೂ
ಧರೆಗಂ ಸಾಱುತ್ತುಮಿರ್ದಾ ಸಮವಸರಣಮಂ ಕಂಡು ಸಂತೋಷಿಸುತ್ತುಂ
ಪರಿವೇಷಂಬೆತ್ತ ಶೀತದ್ಯುತಿ ರುಚಿಮಹಾಬಿಂಬದಂತಿರ್ದುದೆಂದಂ    ೨೨೨

ವ : ಎಂದಿಕ್ಕೆಲದ ದೇವರ್ಕಳೊಡನೆ ನುಡಿಯುತ್ತುಂ ಬಂದು ರಮಣೀಯ ಸಮವಸರಣಲಕ್ಷ್ಮಿಗೆ ದೃಷ್ಟಿದೋಷಪರಿಹರಣಕಾರಣಮಾಗಿ ವಿಚಿತ್ರವರ್ಣ ಸಂಕೀರ್ಣ ಮಂಜಿಷ್ಠಿಕಾ ಕಾಂಡಪಟವನವಟಯಿಸಿದಂತೆ ಸುತ್ತಲುಂ ವಿಮಾನಪಂತಿಗಳಂ ನೆಲೆಗೊಳಿಸಲ್ವೇಳ್ದು ತನ್ನಯ ಸಂಚಳತ್ಪಾಣಿಪಲ್ಲವ ಸಮುಲ್ಲಸನದಿಂ ಪಂಚಮಹಾಶಬ್ದ ಪರಿಘೂರ್ಣನ ಕೋಳಾಹಳಮಂ ನಿಲಿಸಿ

ಬಳಿಯಂ ಛತ್ರಧ್ವಜಂ ಚಾಮರಮಿವು ಮೊದಲಾಗಿರ್ದುವಂ ರಾಜಚಿಹ್ನಂ
ಗಳನಾ ಸಂಕ್ರಂದನಂ ದೂರದೊಳಿರಿಸಿ ಜಿನಾಸ್ಥಾನಮಂ ನೋಳ್ಪಲಂಪ
ಗ್ಗಳಮಾಗಲ್ ದೇವದೇವೀತತಿವೆರಸಿ ಕರಂ ನೋಡುತುಂ ಬಣ್ಣಸುತ್ತುಂ
ಜ್ವಳನಾನಾಚಿತ್ರಶೋಭಾಸಮವಸರಣಮಂ ಪ್ರೀತಿಯಿಂದಂದು ಪೊಕ್ಕಂ        ೨೨೩

ಮೂಡಣ ದಿಕ್ಕಿನ ಬಾಗಿ
ಲ್ಮಾಡದ ಮುಂದಣ ವಿಯತ್ತಳಾಂಗಣದೊಳ್ ಪೆಂ
ಪೋಡದಸಿತಕುಂಜರದೊಡ
ಗೂಡಿರಿಸಿದನೆಯ್ದೆ ತನ್ನ ಪರಿಕರಮನಿತಂ         ೨೨೪

ಇಂದ್ರಾಣಿಯೊಳೊಂದಿದ ದೇ
ವೇಂದ್ರಂ ನಿಖಿಳಾಮರಾಮರೀಜನಸಹಿತಂ
ಗಂಧಕುಟೀ ಶಿಬಿಗೆಱಗುತು
ಮೈಂದ್ರೀದಿಗ್ವೀಥಿವಿಡಿದು ನಡೆತಪ್ಪಾಗಳ್      ೨೨೫

ವ : ಅಂತು ನಡೆವ ಸಹಸ್ರಾಕ್ಷನ ಸಹಸ್ರಲೋಚನ ಮರೀಚೀನಿಚಯಂಗಳೊಡೆ ನೊಡನನೇಕ ನಾಕೀನಾಯಕನಿಕಾಯ ಕೇಕರಮಯೂಖ ಮಾಳಿಕೆಗಳುಮಖಿಳನಿಳಿಂಪ ವಿಳಾಸಿನೀಸಂಕುಳಸಮುತ್ತರಳತರನಯನ ಕರನಿಕರಂಗಳೆಳಸಿ ಬಳಸಿ ತವಕಿಸಿ ತಳ್ಪೊಯ್ದು ಗೋಪುರವೇದಿಕಾಪ್ರಾಕಾರದಾಕಾರಮನೇಕವರ್ಣಮಾಗಿ ಧವಳಿಸೆಯುಂ ಮಾನಸ್ತಂಭಂ ಗಳಂ ನಿಮಿರ್ದುನೀಳ್ದ ಪೂಮಾಲೆಗಳಾಲಂಬನದಿನಂದಂಬಡೆದಂತಿರಳಂಕರಿಸೆಯುಂ ಪ್ರಾಸಾದ ಚೈತ್ಯನಿಳಯಂಗಳ ಬಳಗಮನೊಳಕೊಂಡ ಚಕ್ರವಾಳಭೂಮಿಯಂ ಮೂವಳ ಸುವಳಸಿಯುಮ ಜಳಖಾತಿಕಾಕಳಹಂಸೀಕುಳದ ಬಳಿಸಂದು ಪೊಳೆದಾಡೆಯುಂ ವಲ್ಲೀವ ನಾವನಿಯ ಮಱಿದುಂಬಿಯ ಬಂಬಲೊಡನೆ ಪಱಿಮಱಿಯಾಡಿಯುಮುಪವನ ಮಹಿಯನಪರಿಮಿತ ಹಿಮಾನೀಪರಿ ಪಿಹಿತಮೆಂಬಂತೆ ಮಾಡಿಯುಂ ಧ್ವಜಭೂಮಿಯ ಬಳಯಿಗೆಗಳೊಡನೊಡನೆ ಬಳೆದು ಬಳಸೆಯುಂ ದಶಾಂಗಕಲ್ಪವೃಕ್ಷನಂದನವನಮಂ ಮಾಲ್ಯಾಂಗಮಯಮೆಂಬ ಸಂದೆಗದೊಳೊಂದಿಸೆಯುಂ ಸಮುತ್ತುಂಗಮಂಗಳಸ್ತೂಪಂಗಳಂ ಧವಳಕಮಳದಳಾಳಂಕೃತಂಗಳೆಂಬ ಸಂಕೆಯನನುಕರಿಸೆಯುಂ ಸಂಗೀತಹರ್ಮ್ಯಂಗ ಳೋಳಿಯಂ ಪೊಸತಾಗಿ ಸೊದೆವಳಿದಂತೆ ಕಣ್ಗೊಳಿಸೆಯುಂ ದ್ವಾದಶಕೋಷ್ಠಂಗಳ ಗೋಪುರಾಗ್ರಮಣಿಕಳಶಪ್ರಭಾಪ್ರಭಾವ ಪಲ್ಲವದೊಡನೆ ಚಲ್ಲವಾಡಿಯುಂ ಗಂಧಕುಟಿ ಯನಸಮಯಾಮಂದಚಂದ್ರಿಕಾಸಂದೋಹ ಪ್ರವಾಹದೊಳವಗಾಹ ಮಿರಿಸೆಯುಂ ಪರಮೇಶ್ವರನ ಪರಮೌದಾರಿಕ ಶರೀರಮನಪಾರ ಸಾರಭೂತಿ ಕ್ಷೀರೋದಧಾರಾಪೂರ ದಿನಭಿಷೇಕದಾಡಂಬರನೊಡರ್ಚಿದಂತೆ ರಂಜಿಸೆಯುಂ ಕಣ್ತಣಿವಿನಂ ವಿನೋದ ವಿಕಸಿತ ಮುಖಕಮಳನಾಗಿಯಾ ಪುಳೋಮಜಾಮನೋರಮಣಂ ತನ್ನಯ ಬೆಸದಿಂ ಮುನ್ನಮೆ ಕಿನ್ನರನುನ್ನತಭಕ್ತಿಯಿಂ ಸಮೆದ ಸಮವಸವರಣಮಂ ನೀಡುಂ ನೋಡಿ

ಇದಱ ವಿಳಾಸಮಂ ಪೊಗಳ್ವಡೆನ್ನಳಮಲ್ತು ವಿಚಿತ್ರಚಿತ್ರಸಂ
ಪದದಳವಿಂತುಟಿಂತುಟು ಸುವಿದ್ಧರ ಪದ್ಧತಿಯಿಂತುಟಿಂತುಟೆಂ
ಬಿದನುರಗೇಂದ್ರನುಂ ಕಮಳಸಂಭವನುಂ ಪೊಗಳಲ್ಕಮಾಱರಿ
ನ್ನಿದಱತಿಶೋಭೆಯಿಂದೆ ಮಿಗಿಲಾದಭಿಶೋಭೆಯದುಂಟೆ ಲೋಕದೊಳ್        ೨೨೬

ವ : ಎನುತ್ತಂ

ರೋಮಾಂಚಂ ಮೆಯ್ಯೊಳೇಳಲ್ ಬಗೆಯೊಳೊಗೆಯೆ ಕೌತೂಹಳಂ ನೋಡಿ ನೋಡಲ್
ಪ್ರೇಮಂ ಕೈಮಿಕ್ಕು ಕಣ್ಸಾಸಿರಮುಮನಿರದೋಲಾಡಿಸುತ್ತಿರ್ದನಾ ಸು
ತ್ರಾಮಂ ಸಂತೋಷಪೀಯೂಷರಸದೊಳಧಿಕಂ ತೂಗುತುಂ ರತ್ನರೋಚೀ
ಸ್ತೋಮೋದ್ಯನ್ಮೌಲಿಯಂ ಮೆಚ್ಚಿನ ಭರವಸದಿಂದೋಸರಂದೋಱಿದನ್ನಂ   ೨೨೭

ಕೆದಱಿದ ಚೆಲ್ವ ಪೂವಲಿಯನಾಗಿಸೆ ಪಾದನಖಾಂಶು ತೊಟ್ಟ ರ
ನ್ನದ ಬೆಳಗಲ್ಲಿ ಪೊತ್ತಿಸಿದ ದೀವಿಗೆಯಂದದಿನೊಪ್ಪಿ ಮಾಳ್ಪವೊಲ್
ಪದೆದು ಗೃಹಾರ್ಚನಾ ರಚನೆಯಂ ಸುನಾಯಕನೊಲ್ದು ಮೂಱುಸೂಳ್
ತ್ರಿದಶದೊಳೊಂದಿ ಗಂಧಕುಟಿಯಂ ಬಲಗೊಂಡನತೀವ ಭಕ್ತಿಯಿಂ    ೨೨೮

ವ : ಅಂತು ತ್ರಿಪ್ರದಕ್ಷಿಣಂಗೆಯ್ದು

ಸಾಸಿರ ಕಣ್ಗಳ ಪಂತಿಕೆ
ಲೇಸಾದುದು ಬರೆದ ಲಿಪಿಗಳೋಳಿಯ ತೆಱದಿಂ
ವಾಸವನಿರ್ದಂ ಮಣಿಮಯ
ಶಾಸನಮಂ ನಿಲಿಸಿದಂತೆ ಬಾಗಿಲ ಕೆಲದೊಳ್      ೨೨೯

ವ : ಅಂತು ನಿಂದು

ಜಳಮಂ ಪೊಂಗುಂಬದೊಳ್ ಸಂಗಳಿಸು ಮಳಯಜಕ್ಷೋದಮಂ ತೀವು ಮಂತ್ರಂ
ಗಳೊಳಂ ಮತ್ತಕ್ಷತಕ್ಷಾಳನಮನೆಸಗು ಮಾಲ್ಯಂಗಳಂ ಸೈತೆಮಾಡು
ಜ್ವಳಮಾಣಿಕ್ಯಪ್ರದೀಪಂಗಳನಳವಿಸುದ್ಧೂಪಮಂ ಕೂಡು ನಾನಾ
ಫಳಮಂ ತುಂಬೆಂದು ಪೇಳ್ದಂ ಸುರಪರಿವೃಢನಿಂದ್ರಾಣಿಗಾನಂದದಿಂದಂ        ೨೩೦

ವ : ಇಂತು ಪೇಳ್ದು ನಮೇರು ಮಂದಾರ ಪಾರಿಜಾತದರಲ್ಗಳಂ ತನ್ನಯ ಕರತಳಪುಟದೊಳ್ ತೆಕ್ಕನೆ ತೀವಿಕೊಂಡು

ಕಡುಢಾಳಂಬೆತ್ತು ತೋರ್ಪಾರತಿಗಳ ಹರಿಯಾಣಂಗಳಂ ದೇವಿಯರ್ ಸಂ
ಗಡದಿಂದಂ ತಾಳ್ದಿ ಸುತ್ತಂಬರೆ ಪಲತೆಱದರ್ಚನಾದ್ರವ್ಯಮಂ ನೇ
ರ್ಪಡೆ ಹಸ್ತಾಗ್ರಂಗಳಿಂದಂ ಪಿಡಿದೊಡವರೆ ದೇವರ್ಕಳೆಲ್ಲಂ ಸುರೇಂದ್ರಂ
ನುಡಿಯುತ್ತುಂ ನಿಷದ್ಯುಕ್ತಿಯನೊಳಗೆ ಮಹೋತ್ಸಾಹದಿಂ ಬಂದು ಪೊಕ್ಕಂ  ೨೩೧

ವ : ಅಂತು ಬಂದೊಳಗಂ ಪೊಕ್ಕು ತನ್ಮಧ್ಯಸಮುದ್ಯುಷಿತಸಿಂಹಾಸನಮನಳಂ ಕರಿಸಿರ್ದ ಲೋಕತ್ರಯೈಕಸ್ವಾಮಿಯ ಶ್ರೀಪಾದಪೀಠೋಪಕಂಠದೊಳ್ ಪುಷ್ಪಾಂಜಳಿ ಕ್ಷೇಪದೊಡನೆ ಸರ್ವಾಂಗಪ್ರಣಮನಮನೊಡರ್ಚಿ ಹರ್ಷೋತ್ಕರ್ಷಪುಳಕಸಂಕುಳಂ ಮುನ್ನಮೇಳೆ ಬಳಿಯಂ ತಾನೆಳ್ದು ಸಮುಚಿತಪ್ರದೇಶದೊಳ್ ನಿಂದು ಕಿಂಚಿನ್ನಮಿತಮಣಿ ಮಕುಟನುಮಾ ಮುಕುಳಿತಕರಸರೋಜಪುಟನುಮನುವಿಕಸಿತಾಧರೋಷ್ಠತಟನುಮಾಗಿ ಧರ್ಮನಾಥನ ಸಮ್ಮುಖದೊಳ್ ನಿಂದು ಅಷ್ಟಕಂಗಳ ಹೇಳಿಹನು

ಶ್ರೀಯಂ ಶ್ರೇಯಮನಾಯುಮಂ ವಿಭವಮಂ ಸತ್ಕೀರ್ತಿಯಂ ಮೂರ್ತಿಯಂ
ದೀಯಂ ಬೀಯದ ಪೆಂಪನೀವಧಿಕಸತ್ವಂ ನಿನ್ನೊಳುಂಟೆಂಬಭಿ
ಪ್ರಾಯಂ ನೋಯದೆ ಪುಟ್ಟೆ ಮನ್ಮನದೊಳಂ ನಿನ್ನಂಘ್ರಿಯಂ ಪೊರ್ದಿದೆಂ
ಹೇಯಾದೇವಿವಿವೇಕಮಾದೆನಗೆ ನೀಂ ಶ್ರೀಧರ್ಮತೀರ್ಥೇಶ್ವರಾ      ೨೩೨

ಪರಮಧ್ಯಾನದಿವಾಕರಂ ಸಮುದಯಂಗೆಯ್ದಾಕ್ಷಣಂ ಪುಟ್ಟಿದಂ
ತಿರೆ ನಿರ್ನಶಮದಾಯ್ತು ಘಾತಿತಿಮರಂ ಮೂಲೋಕಮಂ ವ್ಯಕ್ತಮಾ
ಗಿರೆ ಮಾಳ್ಪೊಂದಧಿಕಪ್ರಕಾಶಮೊಗೆದೊಪ್ಪುತ್ತಿರ್ದುದೀ ಶಕ್ತಿಯ
ನ್ಯರೊಳೇಂ ತೋರ್ಪುದೆ ನಿನ್ನೊಳಲ್ಲದೆ ದಿಟಂ ಶ್ರೀಧರ್ಮತೀರ್ಥೇಶ್ವರಾ      ೨೩೩

ವಿಳಸತ್ಕೇವಳಬೋಧಲಕ್ಷ್ಮಿಯೊಡಸಂದಿರ್ದೈಕ್ಯಮಂ ತಾಳ್ದಿದ
ಗ್ಗಳಮಾಗೊಪ್ಪುವ ನಿನ್ನ ರೂಪುಮನಿದಂ ಸ್ತ್ರೀರೂಪಮೆಂದೆಂಬೆನೋ
ಜ್ವಳರೋಚಿಃಪುರಷಸ್ವರೂಪಮಿದು ಮತ್ತಿಂತೆಂಬೆನೋ ಭೇದಮಂ
ತಿಳಿಯಲ್ಬಾರದಗಮ್ಯರೂಪನದಱಿಂ ಶ್ರೀಧರ್ಮತೀರ್ಥೇಶ್ವರಾ     ೨೩೪

ಜಗಮೆಲ್ಲಂ ನೆಲಸಿತ್ತು ನಿನ್ನಯ ಮಹಾಕೈವಲ್ಯವಿಜ್ಞಾನದೊಳ್
ಮಿಗುವಾ ಜ್ಞಾನಮುಮೆಯ್ದೆ ನಿನ್ನೊಳಗೆ ಬಂದಿರ್ದತ್ತು ನೀನುಂ ಸುಭ
ಕ್ತಿಗೆ ಸಂದೆನ್ನಯ ಚಿತ್ತದಲ್ಲಿ ನೆಲೆಗೊಂಡಿರ್ದಪ್ಪೆ ತತ್ಕಾರಣಂ
ಜಗದೊಳ್ ಮತ್ತೆನಗಾವುದೇನರಿದು ಪೇಳ್ ಶ್ರೀಧರ್ಮತೀರ್ಥೇಶ್ವರಾ           ೨೩೫

ಅಱಿವುತ್ತಿರ್ದಪೆ ಮೂಜಗಂಗಳನಿವಂ ನಿನ್ನಿನ್ನನಾರುಂ ಸಮಂ
ತಱಿಯರ್ ಮತ್ತಮವೆಲ್ಲಮಂ ಬಿಡದೆ ನೀಂ ಕಾಣುತ್ತಮಿರ್ದಪ್ಪೆ ಕಂ
ಡಱಿಯರ್ ನಿನ್ನನದಾರುಮೆಲ್ಲರೆದೆಯೊಳ್ ನೀನಿರ್ದೆ ನಿನ್ನಲ್ಲಿ ಮೇಣ್
ತಱಿಸಂದಿರ್ದವರಾರುಮಿಲ್ಲ ಕುತುಕಂ ಶ್ರೀಧರ್ಮತೀರ್ಥೇಶ್ವರಾ    ೨೩೬

ಪಡೆವೆಂ ತಪ್ಪದೆ ಮೋಕ್ಷಸೌಖ್ಯಪದಮಂ ತ್ವದ್ಭಕ್ತಿಯಿಂದಂತದಾ
ದೊಡಮೀ ನಿನ್ನಯ ಪಾದಸೇವೆ ಬಳಿಕಂ ಕೈಸಾರದೆಂದುಬ್ಬೆಗಂ
ಬಡುತಿರ್ದಪ್ಪುದು ಮನ್ಮನಂ ದಲದಱಿಂ ತ್ವತ್ಸೇವನಾಸೌಖ್ಯಮೀ
ಗಡೆ ಮಚ್ಚಿತ್ತದೊಳುಂಟುಮಾಳ್ಕೆ ತಣಿವಂ ಶ್ರೀಧರ್ಮತೀರ್ಥೇಶ್ವರಾ           ೨೩೭

ಕೆನ್ನಂ ನುಣ್ಬೆಳಗೆಂಬ ಸಾರಜಳದಿಂದಂ ತುಂಬಿತುಳ್ಕಾಡುತುಂ
ಚೆನ್ನಂಬೆತ್ತ ಸಭಾಸರೋವರದ ಮಧ್ಯಸ್ಥಾನದಲ್ಲೊಪ್ಪುವೀ
ನಿನ್ನ ಶ್ರೀಪದಪದ್ಮದಲ್ಲಿ ನೆಲೆಗೊಂಡಿರ್ಕಾವಗಂ ಪ್ರೀತಿಯಿಂ
ದೆನ್ನೀ ಮಾನಸಮೆಂಬ ಹಂಸೆ ಪರಮಶ್ರೀಧರ್ಮತೀರ್ಥೇಶ್ವರಾ       ೨೩೮

ಕೊಡುವೈ ನಿನ್ನನೆ ಪೂಜಿಪರ್ಗೆ ಸುಖಮಂ ಮತ್ತನ್ಯರಿಂಗಂತದಂ
ಕುಡೆ ನೀನೆಂದೊಡೆ ವೀತರಾಗನೆನಿಪೀ ಕೊಂಡಾಟಮೆಂತೊಪ್ಪಮಂ
ಪಡೆಗುಂ ನೋಳ್ಪಡುಪೇಕ್ಷೆಯಂ ಧರಿಸಿಕೊಂಡಿರ್ದಪ್ಪೆ ಸರ್ವರ್ಗೆ ಕ
ನ್ನಡಿಯಂತೆಯ್ದೆ ಸಮಾನಮಾಗಿ ಪೊಳೆಗುಂ ಶ್ರೀಧರ್ಮತೀರ್ಥೇಶ್ವರಾ          ೨೩೯

ವ : ಎಂದನೇಕಪ್ರಕಾರ ಪವಿತ್ರಶತಸಹಸ್ರಂಗಳಿಂ ಸುತ್ತಿಗೆಯ್ದು ಬಳಿಯಂ ನಿರ್ಜರರಾಜಂ ನಿರ್ಜಿತಮನೋಜ ಜಿನರಾಜನ ಪೂಜೆಗುಜ್ಜುಗಿಸಿ ಪೂಳೋಮಜೆಯ ಮೊಗಮಂ ನೋಡುವುದುಮಾಕೆ ಗಂಗಾಜಳಸಂಗತ ಗಾಂಗೇಯಮಯ ಸಮುತ್ತುಂಗ ಮಂಗಳ ಭೃಂಗಾರಸಂಘಾತಂಗಳಂ ಕುಂಕುಮಪಂಕಸಂಕಳಿತ ಮೇದುರಾಮೋದಪರಿಹ್ಲಾದನೀಯ ಹರಿಚಂದನರಸಕ್ಷೋದಪೂರಿತಮಾದ ಹಾರೀತಕಶುಕ್ತಿಕಾಸಾರಂಗಳಂ ಪ್ರಕ್ಷಾಳಿತವದಕ್ಷತ ಸ್ವರೂಪಕಳಮಾಕ್ಷತ ರಾಶಿಭಾಸುರ ಕರ್ಕೇತನವರ್ತುಳಸಾರ್ಥಂಗಳಂ ನಮೇರುಮಂದಾರ ಮಾಳಾಮೇಳಾಪಮಿಳಿತನದಿಂದ್ರನೀಲಪಟಳಕಪಟಳಂಗಳನು ಪರಿಪರಿನಿಹಿತ ಸುಧಾರಸಮಯ ವಿವಿಧಭಕ್ಷ್ಯೋಪಲಕ್ಷಿತ ಪರಮಾನ್ನಸಾನ್ನಾಯ್ಯ ಪರಿಪೂರ್ಣ ಸೌವರ್ಣಸ್ಥೂಳ ಸ್ಥಾಲೀಜಾಳಂಗಳಂ ಪೃಥುಳಕಿರಣಶ್ರೇಣಿರಮಣಿತಾಪರಿಣಾಯ ಮಾನಶೋಣಮಾಣಿಕ್ಯ ನೀರಾಜನಾವ್ಯಾಜವಿಭಾಜಿತ ಮಹಾರಜತರಜತಭಾಜನ ಸಮಾಜಂಗಳಂ ಧೂಪಿತಹರಿದ್ವಳ ಯಾಂತರಾಳಪರಿಸ್ಫುರದಗರುಧೂಪಸಮುದ್ದಾಮ ಧೂಮಸ್ತೋಮ ಸಮಾವೃತಧೂಪ ಕುಂಡಿಕಾಮಂಡಳಿಗಳಂ ಚೌಚನೋಚಬೀಜಪೂರಾದಿ ನಾನಾನವೀನ ಕೋಮಳ ಪಕ್ವಫಳಂಗಳಿಂ ತುಂಬಿದ ಡೆಳ್ಳೆಗಳ ಬಳಗಂಗಳಂ ತಂದವಟಯಿಸಿ ನೀಡುವುದುಮವಂ ಕಳೆದುಕೊಂಡು

ಸುರುಚಿರವಾರಿಯಿಂ ಸುರಭಿಚಂದನಗಂಧದಿನಕ್ಷತಾಕ್ಷತೋ
ದ್ಧುರುತರಪುಂಜದಿಂ ಪರಿಮಳೋನ್ನತಚಾರುಲತಾಂತ ಮಾಲೆಯಿಂ
ನಿರತಿಶಯಾಮೃತಾನ್ನಚರುವಿಂದೆ ಸಮುಜ್ವಳರತ್ನದೀಪದಿಂ
ನಿರುಪಮಧೂಪಧೂಮಲತೆಯಿಂ ಬಹುಪೀವರಸತ್ಫಲಂಗಳಿಂ        ೨೪೦

ಮಣಿಮಯದಂಡ ಚಾರುಚಮರಂಗಳಿನಾತಪವಾರಣಂಗಳಿಂ
ಘೃಣಿಕುಳಮಗ್ನಚಿತ್ರರಚನಾಭರಣಂಗಳಿನಾತ್ತಶೋಭ ದ
ರ್ಪಣಕಳಶಂಗಳಿಂ ಪರಮಧರ್ಮಜಿನೇಶ್ವರಪಾದಪದ್ಮಮಂ
ತಣಿವಿನಮೊಲ್ದು ಪೂಜಿಸಿದನಿಂದ್ರನತೀಂದ್ರನುಪಾಸ್ತಿರುಂದ್ರನಂ      ೨೪೧

ವ : ಅದಲ್ಲದೆಯುಂ

ಚರುವಿಡುತಿಪ್ಪ ರತ್ನಮಯಭಾಜನದೋಳಿಗೆ ಪುಣ್ಯತೀರ್ಥವಾ
ರ್ಭರಿತಸುಧಾಂಶುಕಾಂತಕಳಶಕ್ಕೆ ನಿವಾಳಿಸುತಿರ್ಪ ಪಂತಿಗೊಂ
ಡಿರಿಸಿದ ಚೆಲ್ವಮಾಣಿಕದ ಪಜ್ವಳಿಪಾರತಿಗಳ್ಗೆ ಪುಷ್ಪಮಂ
ಜರಿಕೆಗೆ ಲೆಕ್ಕಮಿಲ್ಲೆನಿಸಿ ಪೂಜಿಸಿದಂ ಜಿನನಂ ಸುರೇಶ್ವರಂ೨೪೨

ವ : ಅಂತನೇಕ ಪ್ರವೇಕದಿವ್ಯಾರ್ಚನಾದ್ರವ್ಯಂಗಳಿನರ್ಥಿವೆರಸರ್ಚಿಸುತ್ತುಮಿರ್ಪಲ್ಲಿ

ಪರಮಹರಿನ್ಮಣಿಕಳಶೋ
ತ್ಕರಕಿರಣಂ ಪೀಠದಲ್ಲಿ ನಿಮಿರ್ದುದು ದೂರ್ವಾಂ
ಕುರದರ್ಚನೆಯೆನೆ ಮೌಕ್ತಿಕ
ವಿರಚಿತ ಕಳಶಂ ಸುಶಾಂತಿಧಾರಾಂಬುವವೋಲ್೨೪೩

ಮಱಿದುಂಬಿಗಳಾವಳಿ ಬಂ
ದೆಱಗಿರ್ದುದು ಧೂಪಧೂಪಮಲತಿಕಾಶೋಭೆಯೊ
ಳುಱುವೆಳಗಾಯ್ಗಳ ಬಳಗಂ
ತುಱುಗಿದುದೆಂಬೊಂದು ಶಂಕೆಯಂ ಪುಟ್ಟಿಸುತುಂ          ೨೪೪

ವ : ಅಂತನಂತಮಂತಪ್ರಮುಖ ಮಹಾಪೂಜಾವಿಧಾನದಿಂ ವಾಕ್ಪೂಜಾ ವಿಶೇಷದಿ ನಿಖಿಳಾರಾಧ್ಯಾನ ಚರಣಸರೋಜಸಮಾರಾಧನಂಗೆಯ್ದು

ಮನಮಂ ಯೋಜಿಸಿ ಭಕ್ತಿಯೊಳ್ ನಿಲಿಸಿ ವಾಗ್ವ್ಯಾಪಾರಮಂ ಸ್ತೋತ್ರದೊಳ್
ತನುವಂ ಸೇವೆಯೊಳಂ ನಿಯಾಮಿಸಿ ಸಹಸ್ರಾಕ್ಷಂಗಳಂ ದಿವ್ಯರೂ
ಪನಿರೀಕ್ಷಾಪ್ರವಿಧಾನದಲ್ಲಿರಿಸಿ ಹಸ್ತದ್ವಂದ್ವಮಂ ಪಾದಪೂ
ಜನದುದ್ಯೋಗದ ವೃತ್ತಿಯೊಳ್ ಸಲಿಸಿ ತಾಳ್ದಂ ಜನ್ಮಸಾಫಲ್ಯಮಂ            ೨೪೫

ಎಂತಮರೇಂದ್ರನರ್ಚಿಸಿದನಷ್ಟವಿಧಾರ್ಚನೆಯಿಂ ಜಿನೇಂದ್ರನಂ
ಸಂತೊಷದಿಂದಮಾ ತೆಱದೆ ಬಾಹುಬಲಿವ್ರತಿನಾಯಕಂ ಜಗ
ತ್ಕಾಂತಮೆನಿಪ್ಪ ತನ್ನಯ ವಚೋಮಯ ಮಂಗಳ ಶಸ್ತ್ರವಸ್ತುವಿಂ
ದಂ ತಣಿವಂತು ಪೂಜಿಸಿದನಷ್ಟವಿಧಾರ್ಚನೆಪೂರ್ವಮಾಕ್ಷಣಂ         ೨೪೬

ವಿಳಸಿತವಾಙ್ಮಯಂ ಭುಜಬಳೀಯಕಮುತ್ತಮವಾರಿಯಾಯ್ತು ಸ
ನ್ಮಳಯಜಮಾಯ್ತು ಧೌತಕಳಮಾಕ್ಷತಮಾಯ್ತು ಸುಪುಷ್ಪಮಾಯ್ತು ಮಂ
ಜುಳಚರುವಾಯ್ತು ದೀಪಮಣಿಮಾಯ್ತು ಧೂಪಮುಮಾಯ್ತು ಸ
ತ್ಫಳಕುಳಮಾಯ್ತು ಧರ್ಮಜಿನರಾಜನ ಪಾದಪಯೋಜಪೂಜೆಯೊಳ್          ೨೪೭

ವ : ಇಂತು ನಿರ್ಭರಭಕ್ತಿಯಿಂ ಬಾಹುಬಲಿಪಂಡಿತದೇವರುಂ ರೂಪಸ್ಥಮೆಂಬ ಧ್ಯಾನದಿಂ ಮನದೊಳನುಷ್ಠಿತ ತತ್ಸ್ವರೂಪರಾಗಿ ವಾಕ್ಪೂಜೆಯನೊಡರ್ಚಿ ಕೃತಕೃತ್ಯತೆಯ ನೆಯ್ದುವುದುಂ

ನವರತ್ನರಾಶಿಗಳಿನೊ
ಪ್ಪುವ ದೇವಾಂಗಾದಿವಸ್ತ್ರತತಿಯಿಂದೆ ಮಹಾ
ನವನಿಧಿಗಳನುರ್ಚಿಸಿದಂ
ದಿವಿಜೇಂದ್ರಂ ಧರ್ಮನಾಥನ ಶ್ರೀಪದಮಂ        ೨೪೮

ವ : ಅನಂತರಂ

ಆಳಾಪಂಗೆಯ್ವ ರಾಗಚ್ಛವಿಗನುವಶಮಪ್ಪಂತೆ ಸೌವರ್ಣ ನಾನಾ
ಲೀಲಾ ವಾದ್ಯಂಗಳಂ ಬಾಜಿಸುವ ಗತಿಗೊಡಂಬಟ್ಟು ಸನ್ಯಾಸದಿಂದಂ
ತ್ರೈಲೋಕ್ಯಾಧೀಶ್ವರಾಭ್ಯರ್ಚಿದತ ಚರಣನ ಮುಂದಾಡಿ ತನ್ನೊಂದು ಸೇವಾ
ಕೇಳೀ ಸಾಮರ್ಥ್ಯಮಂ ಬೀಱಿದನಮರವರಂ ಭಕ್ತಿಸಕ್ತಿಪ್ರಯುಕ್ತಂ    ೨೪೯

ವ : ಆಗಳಖಿಳದೇವತಾಚಕ್ರವರ್ತಿಯ ಬಹಳಾಶ್ಚರ್ಯಕಾರಿಯಪ್ಪಪರಮೈಶ್ವರ್ಯ ವಿಭವ ಸಮತ್ಕರ್ಷಮಂ ಮೂಜಗಕ್ಕೆ ಸಾಱಿತೋಱಿಸುವಂತಿರೊರ್ಮೊದಲೊಳ್ ಭೋರ್ಗರೆದು ಘೂರ್ಮಿಸುವ ಸುರಕುಮಾರಕರ ಪರೀತಾಢ್ಯಮಾನಸಾರ್ಧ ದ್ವಾದಶಕೋಟಿ ಮಹಾದೇವದುಂದುಭಿ ಸಂದೋಹದ ಸೂಳ್ವಡೆದು ದೇವರ್ಕಳೂದುವ ಸಪ್ತಕೋಟಿ ಶಂಖವಾಸ ಕಹಳಾಕಳಾಪನಿನದ ಕೋಳಾಹಳದ ವಿಶಂತಿಕೋಟಿ ದೇವಗಾಯಕರ ಕರತಳ ಕಳಿತವೀಣಾತಾಳಕರ ವಿರಾಮಮೇಳದೊಳಗೂಡಿದ ಪರಿಪರಿಯ ಠಾಯೆಗ ತಾರ ಮಂದ್ರ ಮಧ್ಯಮದೆಂಬ ಭೇದತ್ರಯದಿಂ ಮೇದುರಮಾದ ಗಂಭೀರ ಶುಂಭಧ್ವಾನಕ್ಕೆ ತಕ್ಕಂದದಿಂದಾನಂದನಾಟ್ಯಮನದ್ಭುತಮೆನಲೊಡ್ಡಯಿಸಿದಿಂ ಬಳಿಯಂ

ಪಿಡಿದಿರ್ಪಂ ತಾನೆ ಮೂಱುಂ ನೆಲೆಯ ಮಣಿಮಯಚ್ಛತ್ರಮಂ ಪೂಜೆಯಂ ನೇ
ರ್ಪಡೆ ಮಾಳ್ಪಂ ತಾನೆ ನಾನಾಸ್ತುತಿಯನೆಸಗುವಂ ತಾನೆ ದೇವರ್ಕಳಂ ಸೈ
ತಿಡುವಂ ತಂತಾನೆ ಭಾಸ್ವಚ್ಚಮರರುಹಮುಮಂ ಬೀಸುವಂ ತಾನೆ ಮತ್ತೆ
ನ್ನೆಡೆಯೊಳ್ ಬೇಱಾವನೋ ಸೇವಕನೆನೆ ಸುರಪಂ ಸೇವೆಯಂ ಮಾಡುತಿರ್ದಂ   ೨೫೦