ವ : ಅದಂ ನೋಡಿ ಮುಂದಱಿಯದ ಮುಗ್ಧೆಯಂದಕ್ಕೆ ನಸುನಗುತ್ತುಂ ಪೀಠಮರ್ದಕಂ
ಹಠವೃತ್ತಿಯ ಬೇಳನಮಂ ಶಠನೊಡನೆ ನುಡಿದು ನಡೆತಪ್ಪುದುಂ ಮುಂದಣೆಡೆಯೊಳೊಲುವ ಭುಜಂಗನುಳಿದೊಡೆ ಮನಂಮಱುಗಿ ಕಂದಿಕುಂದಿ ಚಿಂತಿಸುತ್ತುಮೊತ್ತಗೆ ಬೇಸತ್ತು ಪೊತ್ತಂಕಳೆವುತ್ತುಮಿರ್ದ ಮಗಳ್ಗೆ ಟೆಂಟಣಿಸಿ ಕುಂಟಣಿಯೊರ್ವಳಿಂತೆಂದಳ್

ಪಣಮುಂಟಾದ ವಿಟಂಗೆ ಕೂರಿಸಿ ಕಳಾಪ್ರೌಢತ್ವಮಂ ತೋಱುತುಂ
ಪಣಮಂ ಕೊಂಬುದು ಕಜ್ಜಮಿಲ್ಲದವನ ಸ್ನೇಹಾಭಿಸಂಬಂಧದಿಂ
ದಣುಮಾತ್ರಂ ಫಲಮಿಲ್ಲಮಾವನೊಳಮೋಹೋದ್ರೇಕದಿಂ ಸೂಳೆಯ
ರ್ಗುಣಿಸೇನಪ್ಪುದೆ ಸೀರೆಯಪ್ಪುದೆ ತೊಡಲ್ ಭಂಗಾರಮೇನಪ್ಪುದೇ            ೮೧

ಸೊಡರ್ಗುಡಿಗೆಣ್ಣೆಯನೆಱೆವಂ
ತೊಡವೆಯನಡಿಗಡಿಗೆ ಕೊಡುವನಂ ಮೋಹಿಸುತುಂ
ನಡೆವುದವನಿಚ್ಛೆಯೊಳ್ ಮಿಗೆ
ಕೊಡದವನಂ ಕಾಣ್ಬುದಕ್ಕೆ ಕೊಡದವನನ್ನಂ     ೮೨

ವ : ಎಂದು ಪಡಪಾಳಿತನಮನೆ ಮುಂದಿಟ್ಟು ಮಗಳ್ಗೆ ಬುದ್ಧಿಗಲಿಸುವ ಹಡಹು ಕಾರ್ತಿಯ ನುಡಿಯನಾಲಿಸಿ ಬೆಲೆವೆಣ್ಣ ಬೇಟಮೆಂಬುದಾನೆಯ ಮೊಗದಂತೆ ಕೋಡಿಂದಲ್ಲದೆ ಮೆಱೆಯದೆಂದು ನಾಡೊಡೆಯಂ ನಾಗರಕಾದಿಗಳೊಡನುಸಿರ್ದ ದರಹಾಸವಿ ಭಾಸಿತಾಸ್ಯಬಿಂಬನಾಗಿ ಬರುತ್ತುಮಿರೆ ಮುಂದೊಂದು ಕೆಂದಳಿರ ಪಂದ ರೊಳಗಣ ಬಾಳದ ಬೇರ್ಗಳೆ ಕೇರ್ಗಟ್ಟಿನೋವರಿಯೊಳಗೆ ಚಿತ್ತವಲ್ಲಭನುಳಿದ ವಿರಹ ಪರಿತಾಪದಿಂ ಬಾಡಿ ಗಾಡಿಕಾರ್ತಿಯೊರ್ವಳ್ ಪಾಡಿದಳ್

ಬಿದಿಯಂ ಬೈದು ವಿಲೋಚನಾಂಬುಕಣದಿಂದಂ ಸೀರೆಯಂ ತೊಯ್ದು ಮಾ
ಣದೆ ಶೀತಾಂಶುಗೆ ಕಾಯ್ದು ಕೆಯ್ಯತಳಮಂ ಗಂಡಸ್ಥಳಕ್ಕೊಯ್ದು ತಾಂ
ಪದಪೆಚ್ಚಂ ಬಿಡದಪ್ಪುಕೆಯ್ದು ನೀಡುಸುಯ್ಲಿಂ ಸುಯ್ದು ದುಶ್ಚಿಂತೆಯಂ
ಪದಪಿಂದಂದೊಳಕೆಯ್ದು ಪಂಬಲಿಸಿದಳ್ ತನ್ವಂಗಿ ಚಿತ್ತೇಶನಂ      ೮೩

ವ : ಆಗಳಾ ಕುಸುಮಕೋಮಳೆಯಂ ಶೀತಳರಸದಿನೆಚ್ಚಱಿಸಲೆಂದು ಕೆಳದಿಯೊರ್ವಳೆಯ್ದಿ ಬಂದು ಶಿಶಿರೋಪಚಾರಂಗಳಿಂ ಸಂತೈಸಲೊಡಂ ಸಂತಾಪವಿಮ್ಮಡಿಸುತ್ತುಮಿರೆ ಬಸವಳಿದು

ವಿರಹಿಣಿ ವಕ್ಷದಲ್ಲಿ ಹರಿಚಂದನಕಲ್ಕಮನೊಟ್ಟಿಕೊಂಡಿರು
ತ್ತಿರಲುರಿಯಿಂದ ಮುಂದಣಗೆ ಕುಳ್ಳಿದ ತುಂಬಿ ಪದಂಗಳಳ್ದುವಂ
ತ್ವರಿತದೆ ಕೇಳಲಾಱದದು ಪಕ್ಕಮನೆತ್ತಲನಂಗನಂಬುಗಳ್
ಪರಿದೆನನಟ್ಟಿರಲ್ ಪೊಱಗೆ ತೋಱುವ ನುಣ್ಗಱಿಯಂತಿರೊಪ್ಪುಗುಂ          ೮೪

ವ : ಅದಂ ಕಂಡು ನೀ ಮಾಳ್ಪ ಶಿಶಿರಕ್ರಿಯೆ ಎನಗವಕ್ರಿಯೆಯಾದುದಿದಕ್ಕೆ ಮನದೊಳಿರ್ದ ಕಡುನಲ್ಲದ ಕೂಟಮೆ ಮರ್ದುಮದಱಿಂದಲ್ಲದೀ ವಿರಹಜ್ವರಮುಪಶಮಿಸದೆಂದು ಕೆಳದಿಗಿಂತೆಂದಳ್

ಇನಿಯನ ಕೂಟಮೊಂದೆ ವಿರಹೋಷ್ಣಮನಾಱಿಪುದೆಂತಿರಂತೆ ಪಾ
ವನಶಿಶಿರೋಪಚಾರದಭಿಕೂಟಮಿದಾಱಿಸಲಾಱದಕ್ಕ ಚಂ
ದನರಸದಣ್ಪು ಚಂದ್ರಕೆಯ ಸೊಂಪು ಸಮಂತೊಡನೊತ್ತುತಿರ್ದ ಕಂ
ಪಿನ ಪೊಸನೀರಪೊಟ್ಟಣದ ತಂಪು ಸರೋಜದಲಂಪು ನಾಡೆಯುಂ   ೮೫

ವ : ಅಂತಾದೊಡಮಿದೊಂದು ವಿಪರೀತಮಂ ಕೇಳೆಂದು ಮತ್ತಮಿಂತೆಂದಳ್

ಎನ್ನಯ ಕೈಯೊಳೋದಿದ ಶುಕಂ ನಡೆಗಲ್ತೆಳೆಹಂಸೆ ನುಣ್ಚರಂ
ಎನ್ನಮದಾಗಲಭ್ಯಸಿಸಿದುತ್ಕಳಕೋಕಿಳಮೆಂಬಿವೆಲ್ಲಮೆ
ಯ್ದೆನ್ನಯ ಶಿಷ್ಯಸಂತತಿಗಳಾಗಿಯುಮೇಕೆನಗಕ್ಕ ದುಃಖಮಂ
ಕೆನ್ನಮೊಡರ್ಚುತಿರ್ದಪುವನಂಗನ ಕೂಡೆ ನಿರೀಕ್ಷಿಸಿಂತುಟಂ೮೬

ವ : ಆ ವಿರಹವಿಕಳತಾ ವ್ಯಾಕುಳಿತೆಯ ಮುಗ್ಧವಿಳಸನಕ್ಕೆ ಮೇಳದಾಳಿ ನಸುನಗುತ್ತು ಮಿರ್ಪುದುಮದಕ್ಕೆ ಕನಲ್ದು ಪೆಱರ ಪೀಡೆಯನಱಿಯದ ಬೋಡಿ ನೀಂ ಪೋಗೆಂದು ತನ್ನ ಕಾಮವ್ಯಸನಮನುಸಿರ್ದ ನೆವದಿಂತೆಂದಳ್

ಕಡುನಲ್ಲನ ಬಾಯೆಲರಿಂ
ತೊಡಲುರಿ ಕೆಡುವಂತಿರಕ್ಕ ಕೆಡದೀಯೆಲರಿಂ
ಬಿಡು ಪೀಲಿಯ ಬಿಜ್ಜಣಿಗೆಯ
ನಡಿಗಡಿಗಂ ಬೀಸುತಿರ್ಪ ಕೋಟಲೆಯೇಕೌ        ೮೭

ವ : ಎಂದು ನೆಟ್ಟನೆ ಮುಟ್ಟಿದೆಡೆಯೊಳೆಂತಾದೊಡಮವನಂ ತಂದು ಕೂಡಿದೊಡೆ ಬರ್ದುಂಕುವೆನಲ್ಲದೊಡೆ ಸಾವೆನೆಂದು ಪರಿಚ್ಛೇದಿಸಿದ ನುಡಿಯಂ ಕೇಳ್ದೀಗಳೆ ತಂದೀವೆನೆಂದು ತತ್ಕಾಂತನಂತಿಕಕ್ಕೆ ಬೇಗದಿಂ ಪೋಗಿಯಾಕೆಯವಸ್ಥಾಭೇದದ ಸಂಸ್ಥೆಯಂ ತೋಱಿ ಚತುರಚಾಟುವಚನಂಗಳಿಂದಿಂತೆಂದಳ್

ಮನದೊಳ್ ನಿನ್ನಯ ರೂಪಮಂ ನೆನೆದು ಸಚ್ಚೈತ್ಯಕ್ರಿಯಾದಂಭದಿಂ
ವನಜಾತಂಗಳನರ್ಚಿಸಿ ಪ್ರಣಮನಂಗೆಯ್ದುದ್ಘನಾಮಪ್ರಭಾ
ವನೆಯಂ ಮಂತ್ರಮದಾಗಿಮಾಡಿ ಜಪಿಸುತ್ತುಂ ಸಾಧಿಸುತ್ತಿರ್ದಪಳ್
ತನುಸಂತಾಪವಿಮುಕ್ತಿಯಂ ಪಡೆಯಿಸಾ ನೀಂ ಪೋಗಿ ಸತ್ಸೌಖ್ಯಮಂ            ೮೮

ವ : ಎಂದವಳ್ಗೆ ನಿನ್ನ ಮೇಲೆ ಕೈಮೀಱಿದ ಬೇಟವುಂಟೆಂಬಿದಂ ತೋಱಿ ಬಳಿಯಮೆಲೆ ಕರುಣಮಿಲ್ಲದ ಪಾಪಿಯಿನ್ನೆಗಮೇನಕ್ಕುಮೆಂದಱಿಯೆಂ ನೀಂ ಬಂದಾ ಬಿಂಬಾಧರೆಗೆ ಸಂತೋಷದುತ್ಕರ್ಷಮನೊಡರ್ಚೆಂದು ಕೆಯ್ಯಂ ಪಿಡಿದೆತ್ತುಲೆ‌ಳ್ದು ಲೇಸಾಗಿ ಪೂಸಿದನು ಲೇಪನದಿಂ ವಾಸನೆವಡೆದು ಮಣಿಮಯಾಭರಣಕಿರಣದಿಂ ಮೆಯ್ವೆಳಗಂ ದಳವೇಱಿ ಸುತ್ತುಂ ಬಲದ ಕಾಲೊಳಿಕ್ಕಿದ ತೊಡರ ಹೊನ್ನಕಡೆಯದ ಕಡಾರವದೊಡನೆ ತಡಂಗಲಿಸಿ ನೆಗಳ್ವ ಬಿರುದಾವಳಿಯಂ ಪೊಗಳ್ವ ಭಟ್ಟರ ನುಡಿಯನಾಲಿಸುತ್ತುಂ ಸೇವಕ ರಾಜಕುಮಾರನೊರ್ವನೆಯ್ದಿ ಬಂದು ಬಾಗಿಲೊಳ್ ನಿಂದು ಕೂಡೆ ಬಂದವರನಲ್ಲಿರಿಸಿ ಮನೆಯೊಳಗಂ ಪೊಗುವುದುಂ

ಇನಿಯಂ ಬಂದುದನಂದು ಕಂಡರಲ ಪಾಸಿಂದಂ ಪೊರಳ್ದೆಳ್ದು ಕಾ
ಮಿನಿ ಜೋಲ್ದುಳ್ಳುಡೆಯಂ ಮರಳ್ದೆಡದ ಕೆಯ್ಯಿಂ ಸಯ್ತೆಮಾಡುತ್ತುಂ ಭೋಂ
ಕೆನೆ ತಾಂ ಬಂದಮರ್ದಪ್ಪಿಕೊಂಡು ಪುಳಕಂ ಸಾಲೇಳ್ವಿನಂ ಕೂಡೆ ಚುಂ
ಬನಮಂ ಮಾಡಿ ಚಟೂಕ್ತಿಯಿಂದೆ ಪಿರಿದುಂ ಬೊಲ್ಲೈಸಿದಳ್ ಕಾಂತನಂ         ೮೯

ವ : ಇಂತು ನೂರ್ಮಡಿಯಾದ ಕೂರ್ಮೆಯ ಪೆರ್ಮೆಯ ಮೆಱೆದು ಪೂವಿನ ಪಾಸಿನಮೇಲೆ ಕಾದಲನ ಮೆಯ್ಸೋಂಕಿಂ ಕುಳ್ಳಿರ್ಪುದುಂ

ಱಿತ್ತೆಕ್ಕೆಕ್ಕೆಯಿಂ ಕಾಮಿನಿಗೆ ವಿರಹದಲ್ಲೊಂದೆರಳ್ಮೂಱು ನಾಲ್ಕೈ
ದಾಱೇಳೆಂಟೊಂಬತುಂ ಪತ್ತೆನಿಪಧಿಕದಶಾವಸ್ಥೆ ಕುಂದಿಕ್ಕು ತನ್ನಾ
ನೀಱಂ ಬಂದಿಂಬಳಿಕ್ಕಂ ಘನಪುಳಕಮನಾಳ್ದಳ್ಗೆ ಪತ್ತೊಂಬಡೆಂಟೇ
ಳಾಱೈದುಮ ನಾಲ್ಕುಮೂರುಂ ತಡೆಯದೆರಡುಮೊಂದು ದಲಿಲ್ಲಾಗಿ ಮತ್ತಂ           ೯೦

ವ : ಇಂತಪ್ಪ ವ್ಯಾಮೋಹಮುದ್ದಾಮತೆಯಿಂದಾದ ಕಾಮಡಾಮರದೊಳ್ ತೊಡಂಕಿ ಮಿಡುಂಕುವುದುಂ ಕಂಡು ಬೆಗಡುಗೊಂಡು ವಿದೂಷಕಂ ತನ್ನೊಡನಾಡಿಗಳ್ಗಿಂತೆಂದಂ

ನಲ್ಲನಗಲ್ಕೆಯಿಂದಳಲನೆಯ್ದಿ ಬರ್ದುಂಕುವುದೊಳ್ಳಿತಲ್ತು ಕೀ
ಳಲ್ಲದೆ ಬಳ್ದೊಡಂ ನೆಱೆಯೆ ಕೂರ್ಪುದದಾರೊಳಮೊಳ್ಳಿತಲ್ತು ಮೇಣ್
ನಿಲ್ಲದೆ ಕೂರ್ತೊಡಂ ಮುನಿದಗಲ್ವುದು ಭಾವಿಪೊಡೊಳ್ಳಿತಲ್ತು ತ
ಳ್ಪಿಲ್ಲದಗಲ್ದು ಜೀವಿಪುದಿದಿಲ್ಲಿಯೆ ನಾರಕದುಃಖಮಲ್ಲದೇ       ೯೧

ವ : ಎನೆ ವಿದೂಷಕನಿದು ಬರ್ದುಂಕುವನ್ನೆವರಂ ಪೋಗದ ರೋಗಮೆಂದು ನುಡಿದು ನಗಿಸುತ್ತುಂ ಪೋಗೆ ಮತ್ತಂ ಮುಂದೊಂದು ಚಂದ್ರಕಾಂತಮಯಮುಂ ಮಂಡ ಪಕ್ಕಳಂಕಾರ ಮಾದುಪರಿಮ ಸೌಧತಳದ ಸುರತಾಗಾರದೊಳಗೆ

ಮಂಚದ ಶಕುನಿಯ ಪಾರಿವ
ದಂಚೆಯ ಮೆಲ್ಲುಲಿಯುಮೆಯ್ದೆ ಕೂಡುವರುಲಿಯುಂ
ಸಂಚಿಸಿ ಕಿವಿಗಳನೆಯ್ದೆ ಪ
ಳಂಚಲೆದುದು ಮದನದುಂದುಭಿಧ್ವನಿಯನ್ನಂ  ೯೨

ವ : ಇಂತು ವಿಚಿತ್ರಸಂಭೋಗಸಂದರ್ಭಸಮಾವಿರ್ಭಾವನಿರ್ಭರಪ್ರಣಯ ಪರವಶತೆಯಿಂ ನೆರೆವ ಕಾದಲರ ಕಾಮಕೇಳೀಕಳಕೂಜನಕೋಳಾಹಳಂ ನಾಗರದಕ್ಷಿಣಾದಿಗಳ ಕಿವಿಗೆ ಸವಿಯನವಟೈಸುವುದುಂ

ಕರದಿಂ ಮೋದಿಕೊಳುತ್ತುಮಳ್ಳೆರ್ದೆಯನಾ ದೇವಂಗಿದಿರ್ವಂದೆಲೇ
ಶರಣಾಯಾತನೃವಜ್ರಪಂಜರಕ ನೀಂ ಪೆಣ್ಬುಯ್ಯಲಂ ಕೇಳ್ದು ಭೂ
ವರನಾರಯ್ಯದೆ ನೋಡದಿರ್ದೊಡಮುಪೇಕ್ಷಾದೋಷಮಕ್ಕುಂ ದಲೀ
ಧರೆಯೊಳ್ ಗಂಡುತನಕ್ಕೆ ಬಕ್ಕು ಪಳಿ ಚಿತ್ತೈಸಿತ್ತಲೆಂದಂ ವಿಟಂ       ೯೩

ವ : ಬಳಿಯಮನುಕೂಲಾದಿಗಳ್ವೆರಸಿ ನರಪತಿಶಿರೋಮಣಿ ಪೋಗಿ ಗವಾಕ್ಷ ವಿವರ ಪರಿನಿಕ್ಷಿಪ್ತನಿರೀಕ್ಷಣರಾಗಿ ನಿಂದು ನೋಡುತ್ತುಮಿರ್ಪನ್ನೆಗಂ

ಪುಳಕಂಗಳ್ ಕೀಳ್ಗಳೆಂಬಂತೊಳನೊಳಪುಗೆ ತರ್ಕೈಸಿಕೊಂಡಿರ್ದ ಮೆಯ್ ಮೆ
ಯ್ಯೊಳೆ ಕಾಮಂ ಕಾಸಿ ಬೆಚ್ಚಂ ಮಿಥುನದ ತನುವಂ ನೋಳ್ಪಡೆಂಬಂದದಿಂದಂ
ತೊಳಗುತ್ತಿರ್ದಾ ಸ್ವರೂಪಂ ಬಗೆಯೊಳಗೆಯಿಸಿತ್ತರ್ಧನಾರೀಶ್ವರಾತ್ಯು
ಜ್ವಳಮೂರ್ತಿಭ್ರಾಂತಿಯಂ ಕೂಟದ ಕಡುತವಕಂ ಚಿತ್ತದೊಳ್ ಕೊರ್ವಿಪರ್ವಲ್           ೯೪

ಗಂಡಸ್ಥಳ ಚಿಬುಕಾಧರ
ಮಂಡಳ ಚೂಚುಕವಿಲೋಚನ ಭ್ರೂಸ್ಥಾನಂ
ಗೊಂಡು ಪರಿಚುಂಬಿಸಿದನು
ದ್ದಂಡಂ ಪೀರ್ವಂದದಿಂ ಸುಖಾಮೃತರಸಮಂ   ೯೫

ನಿಱಿವಿಡಿದುಟ್ಟ ಸೀರೆಯೊಳಗೆಂಬ ಧರಾತಳದಲ್ಲಿ ನಾಡೆಯುಂ
ಮಱಸಿದ ಕಾಮಿನೀಘನಮೆಂಬ ನಿಧಾನಮನೊಲ್ದು ಕಾಯ್ದುಕೊಂ
ಡುಱೆ ಬಳಸಿರ್ದ ಮೇಖಳೆಯುಮೆಂಬಹಿಯಂ ವಿಟನೆಂಬ ಮಾಂತ್ರಿಕಂ
ನೆಱೆಗಳ ರಾವಮಂತ್ರದುಲಿಯಿಂ ಪೆಱಪಿಂಗಿಸಿಕೊಂಡನಂತದಂ        ೯೬

ವ : ಆ ಪೊತ್ತಿನೊಳ್

ಇರ್ಬರ ನಿತಂಬಮಂಡಳ
ಮುರ್ಬೆಳ್ದು ವಿಚಿತ್ರಮಾಗಿ ಕುಣಿದಾಡುವುದಂ
ನಿರ್ವಹಿಸಿ ತೋರ್ಪ ತೆಱನದ
ಗುರ್ವಿಸಿದುದುಮೊಳ್ಪುಗಂಡೊಡಾವನೊ ನಲಿಯಂ        ೯೭

ಭಂಡಿಸಿ ಬೈದ ಬೈಗುಳನೆ ಲಾಲಿಸಿ ಬೇಡುವ ಪೊಯ್ವ ಪೊಲ್ಗೆಯು
ದ್ದಂಡಿಸಿ ಮೆಯ್ಯನೊಡ್ಡುವ ನಖಕ್ಷತಿಗಾಯತಮಪ್ಪ ಸೊಕ್ಕು ಮೆ
ಯ್ಗೊಂಡುಱೆ ನಿಲ್ವ ಕೂಡೆ ಕಡುಗೂಡುವ ಸಂಭ್ರಮಮುಣ್ಮಿ ಪೊಣ್ಮಿಕ
ಣ್ಗೊಂಡಿರೆ ಕೂಡುತಿರ್ದುದು ವಿದಗ್ಧವಿಟೀವಿಟಪೇಟಮುತ್ಕಟಂ    ೯೮

ಸೂಳ್ವಡೆದ ಕೂಟದೊಳ್ ನಾ
ಣ್ಕೇಳ್ವನುವಿಂ ಬೇಟದಿಚ್ಛೆಯುಬ್ಬುವ ಜಾಣ್ಣುಡಿ
ಗೇಳ್ವರವರಿಂದೆ ಸುಖದಿಂ
ಬಾಳ್ವಿನಿಯರ್ ನೆರೆದರತನುಜಂತ್ರದ ತೆಱದಿಂ    ೯೯

ಕೊರಲಸರದೊಡನೆ ಕುಟ್ಟುವ
ಬೆರಲುಲಿಯನುಕೂಲಮಾಗಿ ಕೂಡಿ ಶ್ರುತಿವೆ
ತ್ತಿರೆ ರತಿ ಬಾಜಿಪ ಬೀಣೆಯ
ಪರಿಯಂ ಪೋಲ್ತೊಪ್ಪಿದತ್ತು ಕೂಡುವ ಮಿಥುನಂ         ೧೦೦

ವ : ಇಂತು ಪೆಟ್ಟುವೆರ್ಚಿ ತಮ್ಮಿಚ್ಛೆಯಿಂ ನೆರೆವಾಗಳ್

ಉರಮಂ ಕುಟ್ಟಿದೊಡಂ ನಖಾಗ್ರಮುಖದಿಂ ದೋರ್ಮೂಲನಂ ಸೀಳ್ದೊಡಂ
ವರಕಾಠಿಣ್ಯಮನಾಂತ ಪೆರ್ಮೊಲೆಗಳಿಂದಂ ತಾಡನಂಗೆಯ್ದೊಡಂ
ಕೊರಲಂ ಕರ್ಚಿದೊಡಂ ವಿಟೀವಿಟಜನಕ್ಕಾಯ್ತಿಲ್ಲ ನೋವೇನುಮಾ
ದರದಿಂದಂದಧರಾಮೃತಪ್ಲವದೆ ಸೇವಾಸೌಖ್ಯಮೇಂಕಾರಣಂ       ೧೦೧

ವ : ಮತ್ತಂ ನಿರ್ವರ್ತಿತವಿಚಿತ್ರನವೀನನಾನಾವಿಧಕರಣಪರಿವರ್ತನದಿಂ ಪುರುಷಾಯಿತ ಸುರತಸುಖದೊಳ್

ಇನಿಯನುರದಲ್ಲಿ ಬಿಳ್ದುದು
ವನಿತೆಯ ನೆಲೆಮೊಲೆಗಳಿಂ ಬೆಮರ್ವನಿಗಳ ಪಾ
ವನಧಾರೆಯುಪರಿಸುರತದೊ
ಳನುವಿಂ ಕಾಮಾಗ್ನಿಗಾಹ್ಯಗಾಹುತಿಯನ್ನಂ      ೧೦೭

ವ : ಅನವರತಮನುಸ್ಯೂತ ಸ್ತ್ರೀಸೇವಾಸಂಬಂಧಮುಖದಿಂ ಪೂರ್ವಮಾದೊಡ ಮಭಿನವ ಮಣಿತಾದಿ ಕ್ರಿಯಾವಿಶೇಷವಶದಿಂದಪೂರ್ವಮಾಗಿ ಸಂಭವಿಸಿದ ನಿಮೀಲಿತನ ಯುಗಳಸಮಭಿನಂದದಾನಂದಸಂದೋಹಸಮಾಸ್ವಾದನರೂಪಸಂಭೋಗಸುಖಾನುಭವದ ರಸಾನುಸಮಯದೊಳ್

ಬೆಮರಿಳಿದೊಯ್ಯನಾಱೆ ಬೆಳರ್ವಾಯ್ ಮಿಸುಪೇಱೆ ಬಳಲ್ದು ನೀಳ್ದ ಸುಯ್
ಸಮನಿಸೆ ಕಣ್ಣ ಕೆಂಪು ಪರಿರಂಜಿಸೆ ವಾಸನೆ ಬೇಱದೊಂದು ದೇ
ಹಮನಡರ್ದೊಪ್ಪೆ ಬಲ್ಪು ನೆಱೆತಪ್ಪೆ ಗವಾಕ್ಷದ ಗಾಳಿಗಾಸೆಗೆ
ಯ್ದುಮಿರೆ ರತಾಂತ್ಯದೊಳ್ ವಿಟವಿಟೀಜನಮಾಂತುದಪೂರ್ವಶೋಭೆಯಂ   ೧೦೩

ಮಿಱುಗುವ ಕೆಂಪಧರದ ನು
ಣ್ಗಱೆ ತೋಱಿಕೆವೆತ್ತುದಮೃತರಸಸೇವನೆಯಂ
ನೆಱೆಮಾಡಿಯುಳಿದುದಕ್ಕಂ
ಕುಱುಪಿನ ಪೊಸಮುದ್ರೆಯಿಟ್ಟನಿನನೆಂಬಿನೆಗಂ    ೧೦೪

ಮೊದಲಿಂ ತುದಿವರೆಗಂ ಕೆಂ
ಪೊದವಿದ ನಖರೇಖೆ ಸುತ್ತಲುಂ ನೀಳ್ದಿರೆ ಪೆ
ರ್ಚಿದ ಮೊಲೆಯ ಮೇಲೆಯದು ಪೋ
ಲ್ತುದು ಮದನಸುವರ್ಣಕಳಶಮುದ್ರಾಕ್ಷರಮಂ  ೧೦೫

ವ : ಇಂತು ಕಾಮುಕಕಾಮುಕೀನಿಕಾಯಂ ಮಾಳ್ಪ ಕಾಮವಿಕಾರದ ವಿನೋದಕೌತುಕಮಂ ಕಂಡು ಚತುರಚಕ್ರವರ್ತಿ ಮೆಚ್ಚುತ್ತುಮಲ್ಲಿಂ ಪೋಗಲನು ಗೆಯ್ವಾಗಳೊರ್ವಳೊಡರ್ಚಿದ ಸುರತಮಂ ಪೆರ್ಚಿದ ಕಡುಮೋಹದಿಂದಿನಿಯನಂ ಬಿಡಲಾಱದಾಲಿಂಗನಂಗೆಯ್ದು ಕಾರ್ಯಾಂತರಾತುರತೆಯಿಂದೊಳಗಂ ಪೊಱಮಟ್ಟಿದಿರಂ ಬರ್ಪಳಂ ನಾಗರಕಂ ನಡೆನೋಡಿ

ಮಿಗೆ ಗುಜ್ಜುಗೊಂಡ ಪೆರ್ಮೊಲೆ
ಬಿಗಿದಪ್ಪಿದ ಸವಿಯನೆನಗೆ ಪಿಸುಣಾಡುವವೊಲ್
ಬಗೆಗೆ ಬಂದತ್ತು ಚೋದ್ಯಂ
ಮಿಗುವೀಕೆಯ ನಾಟುಗೊಂಡ ಬೇಟದ ಕಾಟಂ   ೧೦೬

ವ : ಎಂದು ನುಡಿದ ನಾಗರಕನ ಮಾತಿಂಗೆ ನೀತಿರತ್ನಾಕರಂ ಮನಂಗೊಂಡು ನಗುತ್ತುಂ ಬರ್ಪನ್ನೆಗಂ ಪಿರಿದೊಂದು ಸಂಭೋಗಭವನದ ಮುಂದಣಪ್ರದೇಶದೊಳು ಗೊಟ್ಟಿಯಾಗಿ ನೆರೆದಿರ್ದ ಚಟುಪಟುವಿಪಟಳಮಂ ಕಂಡಿಲ್ಲಿ ಕಾಮತತ್ತ್ವ ಮೀಮಾಂಸಾ ರಹಸ್ಯಮನೇನಾನುಮನೊಂದಂ ಕೇಳಲಕ್ಕುಮೆಂದು ಪೋಗಿ ನಟ್ಟನಡುವೆ ನಿಂದು ಕೇಳುತ್ತುಮಿಪ್ಪಿನಮೋಗರವೇಂಟದ ಭೋಗಿವಿಟನೊರ್ವಂ ಸುರತದೆಡೆಯೊಳ್ ತನ್ನೋಪಳ ಮಾಟಮಂ ನೆನೆನೆನೆದು ಮನಮುರ್ಬಿ ಸೈರಿಸಲಾಱದೆ ಕೆಳೆಯಂಗಿಂತೆಂದಂ

ಇಂದಿರುಳೆನ್ನಕೂಡೆ ನೆರವಾಕ್ಷಣಮೋಪಳದೊಂದು ಕೆಯ್ತಮಂ
ಸಂಧಿಸಿ ಬಯ್ತ ಬಯ್ಕೆಯೆನಲೆನ್ನಯ ಚಿತ್ತದೊಳಿರ್ದುದೀಗಳಾ
ಸೌಂದರಿಯಂದದಿಂ ಸುರತದೊಳ್ ಕಡುಜಾಣೆಯನಂತುಕಾಣೆನಾ
ನೆಂದು ಮುಧೂಡೆಯೊಳ್ ಕುಲಟೆಯೊಳ್ ಬೆಲೆವಣ್ಣೊಳಮಾರೊಳಾದೊಡಂ೧೦೭

ವ : ಮತ್ತಂ

ಪದನಱಿದೊಲ್ದುಚುಂಬಿಸುವ ಸೋಂಕಿದೊಡಂ ಬಿಗಿದಪ್ಪಿಕೊಳ್ವ ಮಾ
ಣದೆಯಧರೋಷ್ಠಮಂ ಸವಿವ ಕಣ್ಮಲರಂ ನಸುಮುಚ್ಚಲೆಚ್ಚಱಂ
ಪದುಳಿಸಿ ಮಾಳ್ಪ ರಾಗರಸದಿಂದಮೆ ನೋಳ್ಪಿನಿಯಳ್ಗೆ ಬೇಡಿತಂ
ಪಡೆದಿರದೀವುದೊಲ್ವುದಿಳಿಕೆಯ್ವುದು ಹೊಳ್ಳಿಸಿ ತಿಂಬ ಢಾಳೆಯಂ೧೦೮

ವ : ಇಂತೆಂಬೆಳವೆಂಡಿರ ತಂಡದ ನುಡಿಯಂ ಮೆಯ್ಗರೆದಾಲಿಸಿ ಭೂಮಂಡಳಾಧೀಶ್ವರಂ ಸಡಗರಂಗೊಂಡು ಮೆಚ್ಚುತ್ತುಂ ನಡೆತಪ್ಪಾಗಳ್ ಮುಂದೊಂದು ಸಮುತ್ತುಂಗ ಶೃಂಗಾರಾಗಾರದ ಪುರೋಭಾಗದೊಳ್ ನಿಂದು ನಾಲ್ದೆಸೆಯಂ ನೋಡುತ್ತುಮಿಪ್ಪಾಗಳ್ ಪಡುವಗಡೆಗಿಳಿದು ಕಂದಿಕೊಂಡಿರ್ದ ಚಂದ್ರನಂ ಕಂಡು ವಿದೂಷಕನರಸನ ಮೊಗಮಂ ನೋಡಿ ದೇವರಿತ್ತಲವಧರಿಸಿಯೆಂದು ಸುಟ್ಟಿತೋಱಿ ಪ್ರಹಸನಮುಖದಿಂದಿಂತೆಂದಂ

ನೀವೆಲ್ಲಂ ನೋಡಿ ರಾಗಂಬಡೆದನುದಯದೊಳ್ವೆರ್ಚಿ ಬಾಳ್ವಾಕ್ಷಣಂ ಸ
ದ್ಭಾವಂ ಕೈಮಿಕ್ಕು ತಾಳ್ದಂ ಘನಶುಚಿತೆಯನೀಗಳ್ ಕರಂ ಕೊರ್ಬಿ ಶುಕ್ಲಂ
ದೇವಂ ವಾರಾಂಗನಾಂಗಳನುಱೆ ಕರದಿಂ ಮುಟ್ಟಿರಲ್ ಕಂದಿ ಚಂದ್ರಂ
ಮೂವಣ್ಣಂ ಬಂದನಾನಿನ್ನಱಿಯೆನಿವಗೆ ಮುಂದಪ್ಪುದಂ ಕೆಟ್ಟೆನಯ್ಯೋ      ೧೦೯

ವ : ಅಂತುಮಲ್ಲದೆಯುಂ

ಕಡುಸೊಂಪಂ ಪಡೆದಿರ್ದ ಚಂದ್ರನಿರುಳೆಂಬೀ ಸೂಳೆಯೊಳ್ ಕೂಡಿ ಸಂ
ಗಡಿಸಿಂ ತೀರ್ದೊಡೆ ತೀರ್ದುದಾತನ ಸುವರ್ಣಂ ವಾರನಾರೀಚ್ಛೆಯೊಳ್
ತೊಡದಿರ್ದಂ ಕೆಡದಿರ್ಪನಾವನೊ ಧರತ್ರೀಚಕ್ರದಲ್ಲಿನ್ನುಮಿ
ರ್ದೊಡಮಕ್ಕುಂ ತದವಸ್ಥೆ ಮತ್ತೆ ನಮಗಂ ಚಿತ್ತೈಸಿಕೊಳ್ಳಿಂತುಟಂ  ೧೧೦

ವ : ಇಂತೆಂಬವನುಕ್ತಿಯ ವಕ್ರಿಮಕ್ಕೆ ಸಾರ್ವಭೌಮಸರ್ವಜ್ಞಂ ಮನದೊಳ್ ಮೆಚ್ಚೆ ಬಳಿಯ ಮಾಪಣವಧೂಸಂಗದಿನೀ ಪಣಭಂಗಮಕ್ಕುಮಿನ್ನಿಲ್ಲಿರ್ಪುದನುಚಿತಮೆಂದು ಭೂಮಿನೀ ವಿರಾಮಸಮಯಮನುಪಲಕ್ಷಿಸುತ್ತುಮಿರ್ಪುದುಂ

ನವಕಾಮಕ್ರೀಡೆಯೊಳ್ ಮಾಡುವ ಸರಸವಿನೋದಂಗಳಾಲೋಕದಿಂ ರಾ
ತ್ರಿವಿಹಾರಂ ಮತ್ತೆ ಯಾಮತ್ರಿತಯದ ಕಡೆಯಂ ಕಾಣಿಸಿತ್ತೆಯ್ದೆನಲ್ಪೋ
ತ್ಸವದಿಂದಾ ಧರ್ಮನಾಥಂಗರೆಘಳಿಗೆಯಿಂದೆಂದೆಂಬಿನಂ ಯಾಮಭೇರೀ
ನಿವಹಂ ಭೋರೆಂದುದಾಗಳ್ ಕರೆವವೊಲವರಂ ಕೇಳ್ವದಂ ಧೃಷ್ಟನೆಂದಂ      ೧೧೧

ವ : ತಡೆಯದೆ ಬಿಜಯಂಗೆಯ್ವುದಲ್ಲದೊಡೆ ನಮ್ಮ ಮನಮಿಲ್ಲಿಯ ಸೂಳೆಯರಂ ಕಂಡೊಡೆ ಸೈತೆ ನಿಲ್ಲದೆಂದು ಬಿನ್ನಪಂಗೆಯ್ದು ರಾಜಭವನಕ್ಕಭಿಮುಖನಂ ಮಾಡೆ

ನಗರ ಸ್ತ್ರೀಪುರುಷರ ದೃ
ಷ್ಟಿಗಳ ವಿಷಂ ಸೋಂಕೆ ಬಾಡೆ ಸೊಪ್ಪಾದುಱೆ ಮೈ
ಲಗೆವೆಳ್ದಿಂಗಳ ಸೋಂಕಂ
ಮಿಗೆ ಸೈರಿಸಲಾಱೆನೆಂಬಿನಂ ಪತಿ ಪೋದಂ       ೧೧೨

ವ : ಅಂತು ಬೇಗದಿಂ ಪೋಗಿ ರಾಜಾಲಯದ ಬಾಗಿಲೊಳ್ ನಿಂದು ಕೂಡೆ ಬಂದವರಂ ವಿಸರ್ಜಿಸಿ ಕಾಮೋದ್ದೀಪಕೋಪಕರಣಸಜ್ಜಿತಮಾದ ಸೆಜ್ಜೆವನೆಗೆ ಬರ್ಪುದುಂ ಮುನ್ನಮೆ ಸೂಳ್ಗೆವಂದು ಬರವಂ ಪಾರುತ್ತಂ ತಳ್ಪತಳದೊಳಿರ್ದ ಶೃಂಗಾರವತೀದೇವಿಯಿದಿ ರೇಳ್ವುದು ಮಾಗಳ್

ಮುಟ್ಟಿದೊಡೆ ಸುಖದ ಸೊಕ್ಕಂ
ಪುಟ್ಟಿಸುವತಿಮೃದುವೆನಿಪ್ಪವಾವೃತಿಯಿಂ ನೇ
ರ್ಪಟ್ಟ ಗುಣದಿಂದೆ ಪೆಣ್ಣೆನೆ
ನೆಟ್ಟನೆ ಚೆಲ್ವಾದ ಹಾಸನರಸಂ ಸಾರ್ದಂ          ೧೧೩

ವ : ಮತ್ತಂ ಕಾಮಂ ರತಿಯ ಕೆಯ್ಯಂ ಪಿಡಿದು ತೆಗೆವಂತಿರಾತನಾಕೆಯ ಕರಮಂ ಪಿಡಿದು ಬಲ್ಪಿಂದಲ್ಲಿ ಕುಳ್ಳಿರಿಸುವುದುಂ

ತಡೆದಾ ಭೂಪತಿ ಬಂದುದಕ್ಕೆ ಮುನಿದೀರ್ಷ್ಯಾಕೋಪದಿಂ ನೋಡಲಾ
ಗಡೆ ಚಾಟೂಕ್ತಿಯ ಲಲ್ಲೆಯಿಂದ ಸತಿಯಂ ಸಂತೈಸಿ ಚಿತ್ತಕ್ಕೊಡಂ
ಬಡುವಾಲಿಂಗನ ಚುಂಬನಾದ್ಯುಚಿತ ತದ್ವ್ಯಾಪಾರದಿಂದರ್ಥಿ ಮುಂ
ದಿಡೆ ಸಂಭೋಗಸುಖಂಗಳಿಂ ತಣಿಪಿದಂ ಕಾಮಾಂಗಮಭ್ಯಾಸಿತಂ      ೧೧೪

ವ : ತದನಂತರಂ

ಸತಿ ಸುರತಾಂತ್ಯದೊಳ್ ನಿಜಮನಃಪ್ರಿಯನಂ ಬಿಗಿದಪ್ಪಿಕೊಂಡು ಮೋ
ಹಿತೆ ಬಿಡಲಾಱದಚ್ಚಳಿಯದಿರ್ದೊಡೆ ನಿದ್ರೆಯ ಭಾರದಿಂದೆ ಮು
ದ್ರಿತಘನನೇತ್ರರಾಗೆಯೊಡಗೂಡಿದ ಬಾಯ್ ಪುದಿದಿರ್ದ ಪುರ್ವು ಮ
ತ್ತತಿಶಯಮಾದುದಿಬ್ಬರಿಗಮೊಂದೆಶರೀರಮಿದೆಂಬ ಮಾಳ್ಕೆಯಿಂ    ೧೧೫

ವ : ಅಂತಡಿಕಿಲ್ಗೊಂಡಿರ್ದೇಳುಂಪಾಸಿನಮೇಲೆ ವಧೂವರರಿರ್ಬರುಂ ನಿಧುವನ ಪರಿಶ್ರಮದಿಂ ಸುಷುಪ್ತಿ ಸುಖಾಭಿಮುಖರಾಗಿರುತ್ತುಮಿರಲೊಂದು ಮುಹೂರ್ತ ಮಾತ್ರಮುಳಿದ ಮನೋಹರಿಯೆಂಬ ಬೆಳಗಪ್ಪ ಜಾವದ ಕಡೆಯೊಳ್

ಉದಿರ್ದಲ್ಲೊಕ್ಕ ನಭೋಭೂ
ಜದ ಪೂಗಳ ಬಳಗಮೆಂಬಿನಂ ತೊಳಗುವ ನು
ಣ್ಗದಿರೊಳ್ಪು ಮಸುಳಿಸುತ್ತಿರೆ
ಪದೆಪಿಂ ನೀರೋಡಿ ಬಾಡಿದವು ತಾರಗೆಗಳ್       ೧೧೬

ಮಿಗೆ ದೋಷಾಕರನಾಗಿಯುತ್ಪಳಮಧುಪ್ರೀತಂ ದಲಾಗಿರ್ದು ದಂ
ದುಗದಿಂ ತೇಜಮಡಂಗಿಪೋಗಿ ಪಿರಿದುಂ ಮೆಯ್ ಕಂದಿ ಕಪ್ಪಾಗಿ ಕೈ
ಮಿಗೆ ಸೊಕ್ಕುರ್ಬಿ ಕಡಂಗಿ ಸಾರ್ದನಪರಾಶಾ[ದ್ರೀ]ದ್ರಮಂ ಚಂದ್ರಮಂ
ಜಗದೊಳ್ ನಾಶಮನೆಯ್ದನಾವನೊ ಮಹಾದುರ್ವೃತ್ತಿಮತ್ತಾತ್ಮಕಂ          ೧೧೭

ವ : ಆಗಳ್ ಪೂರ್ವಾಶಾಪ್ರದೇಶದಲ್ಲಿ

ಬಳಸಿ ಪೊಳೆಯುದಯರಾಗಂ
ಥಳಥಳಿಸಿತ್ತಿಂದ್ರದಿಕ್ಕುಮಾರಿಕೆ ನೀನು
ಜ್ಜ್ವಳದುದಯರಾಗಮೆಂಬ
ಗ್ಗಳಪಟ್ಟಾವಳಿಯನೊಲ್ದು ಕೊಟ್ಟಟ್ಟಿದವೋಲ್        ೧೧೮

ಪದೆಪಿಂ ಮೆಯ್ ಮುರಿದೆಳ್ದು ನೀಡಿ ಕೊರಳಂ ಪಕ್ಕಂಗಳಂ ಬಿರ್ಚಿ ಮಾ
ಣದೆ ಕುಕ್ಕೂಯೆನುತೊಲ್ದು ಕೂಗಿದುದು ಜಾವಂಗೋಳಿ ತತ್ಸುಪ್ರಭಾ
ತದೊಳಂ ಪಕ್ಕಿಗಳೆಯ್ದೆ ತಮ್ಮ ನೆಲೆಯೊಳ್ ಚೀಚೀಪುಚೀಚೀಪುಚೀ
ಪೊದವಲ್ ಚಿಂಚಿಲಿ ಚಿಂಚಿಲೆಂದು ದನಿಗೆಯ್ವುತ್ತಿರ್ದವಾ ಪೊತ್ತಿನೊಳ್        ೧೧೯

ಅರೆಬಿರಿವುತ್ತುಮಿರ್ದ ಕಮಳಂಗಳೆಸಳ್ಗಳನೆಯ್ದೆಬಿರ್ಚಿ ಬಂ
ಧುರಮಕರಂದದೊಳ್ ಪೊರೆದು ಶೈತ್ಯಸುಸೌರಭಮಾದ್ಯಮೆಂಬ ತ
ನ್ನುರುಗುಣಸಂಪದಂಬೆರಸು ಮಂದಸಮೀರಣಮಾ ಪ್ರಭಾತದೊಳ್ ಸುರುಚಿರಮಾಗಿ ಬೀಸಿದುದು ಸರ್ವಜನಕ್ಕೆ ಸುಖಪ್ರದಾಯಕಂ      ೧೨೦

ವ : ಮತ್ತಂ

ತಿಮಿರಂ ಜಾಱೆ ಸರೋಜಷಂಡಮಲರ್ದ ವ್ಯಾನಂದಮಂ ಬೀಱೆ ಯೋ
ಗಿಮನಂ ಧ್ಯಾನಮನೇಱೆ ಕೋಕಮಿಥುನಂ ಸಂತೋಷಮಂ ಪೇಱೆ ಸಂ
ಭ್ರಮಮುಂ ಸರ್ವಜನಕ್ಕೆ ತೋಱೆ ದೆಸೆಗಳ್ ಕೆಂಪಾಗಿ ಪೂರ್ವಾದ್ರಿಯಂ
ಕ್ರಮದಿಂ ಬಂದಿರದೇಱಿದಂ ಭುವನದೊಳ್ ತೇಜಸ್ಕರಂ ಭಾಸ್ಕರಂ  ೧೨೧

ಕಿರಣಂ ನಾಲ್ದೆಸೆಯಲ್ಲಿ ಲಂಬಿಸುವ ನೇಣೆಂದೆಂಬಿನಂ ತೋಱಲಂ
ಬರಮುಂ ತಾಂಗತುಳಾದಿದಂಡಮೆನೆ ಚೆಲ್ವಂ ತಾಳ್ದೆ ಪೂರ್ವಾಸ್ತಭೂ
ಧರಮುಂ ತ್ರಾಸಿನೆರಳ್ಕೊಡಂಬೊಲೆಸೆಯಲ್ ಚಂದ್ರಾರ್ಕಬಿಂಬಂಗಳೆಂ
ಬುರುರತ್ನಂಗಳನಿಕ್ಕಿ ತೂಗುವವೊಲಾ ಬ್ರಹ್ಮಂ ಬೆಡಂಗಾದುದೋ  ೧೨೨

ಮೂಡಲ್ ಸೂರ್ಯನ ಕಿರಣಂ
ಮೂಡಲ್ ಪಡುವಲ್ ಸುಧಾಂಶುಬಿಂಬದ ಕಿರಣಂ
ಕೂಡಿರೆ ನಡುವಣ ಕತ್ತಲೆ
ಪಾಡಳಿದುದು ಕರ್ತರೀಶಿರೋರುಹದನ್ನಂ        ೧೨೩

ನೋಡಲ್ಕಾಂ ದೇಶದೊಳ್ಪಂ ಪಡುವಗಡೆಗಿರುಳ್ ಪೋಗಿರಲ್ ನಾಲ್ಕುಜಾವಂ
ಕೂಡಿರ್ದಳ್ ಚಂದ್ರನೊಳ್ ಪಾದರಿಗಿ ಗಗನದುಷ್ಕಾಂತೆಯೆಂದೀರ್ಷ್ಯೆಯೊಳ್ ತೇಂ
ಕಾಡುತ್ತುಂ ಬಂದು ಹಸ್ತಶ್ರವಣಮನಿರದೆ ಛೇದನಂಗೆಯ್ದನಂ ಶು
ಕ್ರೋಡೋದ್ಯನ್ಮಂಡಲಾಗ್ರಸ್ಫುರಣದಿನಿನನೆಂಬಂತಿರಾಯ್ತಸ್ತಶೋಭಂ         ೧೨೪

ಸುರದಿಕ್ಕಾಮಿನಿ ಪೊಯ್ದಡೆ
ಭರದಿಂ ಮೇಲೊಗೆವ ಶೋಣಕಂದುಕಮೆಂಬಂ
ತಿರೆ ತರುಣತರಣಿಬಿಂಬಂ
ಪಿರಿದು ಪುಟಂನೆಗೆದು ತೋರ್ಕೆವೆತ್ತುದು ನಭದೊಳ         ೧೨೫

ವ : ಆ ಪ್ರಸ್ತಾವದೊಳ್

ಪೊರೆಪೊರೆಗೊಂಡೆಸಳ್ಮಸಗಿಯುಳ್ಳಲರ್ವಾಗಳನೂನಕಂಟಕೋ
ತ್ಕರಮೊಗೆತಂದು ಮೆಯ್ಯೊಳಗೆ ತಳ್ತೆಸೆಯಲ್ಕನುರಾಗದೇಳ್ಗೆಯು
ಬ್ಬರಿಸಿ ಕರಾಗ್ರದಿಂ ಪಿಡಿದು ಪದ್ಮಿನಿಯೊಳ್ ನೆರೆದು ಪ್ರಭಾಕರಂ
ನಿರುಪಮಸೌಖ್ಯಮಂ ಪಡೆದನಾವನೋ ತೋಷಿಸನಿಷ್ಟಯೋಗದಿಂ೧೨೬

ಪಿರಿದುವಿಕಾಸಲಕ್ಷ್ಮಿ ಕುಮುದಾಲಯದೊಳ್ ನೆಲಸಿರ್ದ ಚಂದ್ರನೊಳ್
ನೆರೆದಳಿರುಳ್ ಪಗಲ್ ಕಮಳಗೇಹದ ಮುದ್ರೆಯನಂಜದಾಶಯೋ
ದ್ಧುರತರಧೈರ್ಯದಿಂದೊಡೆದು ತಾನದಱೊಳ್ ನೆಲಸಿರ್ದು ಸೂರ್ಯನೊಳ್
ನೆರೆದಳದಾರು ಬಲ್ಲರಬಳಾಜನಕೈತವದೊಂದುವೃತ್ತಿಯಂ          ೧೨೭

ಘನಕೋಶಪಾನಮಂ ಕುಮು
ದಿನಿಯೊಳಿರುಳ್ ಮಾಡಿ ಪಗಲೊಳಂ ಬೆರಸಿದುದ
ಬ್ಜಿನಿಯೊಳದಱಿಂದಮಾಱಡಿ
ಯೆನಿಸಿದುದಳಿದೂಷ್ಯಮಾಗದಾವುದು ಸತ್ಯಂ   ೧೨೮

ಹಿಮಕರನಪ್ಪೊಡೆ ಪೋದಂ
ಸಮನಿಸಿದುದು ತೆಱಪಿದೆಂದು ರವಿಕರಮೆ ದಲಂ
ದಮರ್ದಿನಕರಮಲ್ತೆಂದಾ
ಕುಮುದಿನಿ ಮೊಗಮೀಯದಂತೆ ಮುಗಿದುದು ಪಿರಿದುಂ    ೧೨೯

ಸುರಿಯುತ್ತುಂ ಪ್ರಮದಾಶ್ರುವಂ ಪರಿದುಬಂದೊಲ್ದಪ್ಪಿ ಪಕ್ಕಂಗಳಿಂ
ವರಚಂಚೂಪುಟದಿಂದೆ ಮುಂದಲೆಯ ನೀಳ್ದೊಳ್ತಪ್ಪುಳಂ ಕಚ್ಚಿ ತಾ
ವೆರಡುಂ ಚಲ್ಲಮನಾಡಿ ಬಾಕುಳಿಕೆಯಿಂ ಬಾಯ್ಗೂಡಿ ಚೆಲ್ವಾದ ತಾ
ವರೆವೋಕುತ್ತೆಸಳ್ವಾಸಿನೊಳ್ ನೆರೆದುದಾಗಳ್ ಚಕ್ರವಾಕದ್ವಯ      ೧೩೦

ವ : ಅದಱಿಂಬಳಿಯಂ

ಬಸದಿಗಳ ಮುಂದೆ ಬಾಜಿಪ
ಪೊಸತೆನಿಸುವ ಪಲವುತೆಱದ ವಾದ್ಯಂಗಳ ರವ
ವಿಸರಂ ಪಸರಿಸಿದುದುಮಾ
ಗಸದೊಳಮದು ತೀವಿ ತೀವಿ ದಳವೇಱುವಿನಂ   ೧೩೧

ವ : ಇಂತು ಮೆಲ್ಲಮೆಲ್ಲನೆ ಪ್ರಭೂತಮಾದ ಪ್ರಭಾತಕಾಲದ ಪ್ರಭಾವಂ ಪರೆದು ಪೋಗಲೊಡಂ

ಪಿಡಿದು ಕರಾಗ್ರದಿಂದಮೆ ತೊಡಂಕಿದ ನೇಣ್ತುದಿಯಂ ವಿಳಾಸಮಂ
ಪಡೆದುಱೆ ನೀಡಿದೊಂಗುವೆಡೆಯೊಳ್ ಮಣಿಕಂಕಣರಾವದಿಂದಮಿ
ಮ್ಮಡಿಸಿರೆ ಮಂತು ಸಂಚಳಿಸುವ ಧ್ವನಿ ಮುತ್ತಿನ ಕರ್ಣಪತ್ರಮುಂ
ಪೊಡೆಯೆ ಕದಂಪನೆಯ್ದೆಮೊಸರಂ ಪೊಸೆದಳ್ ತರಳಾಕ್ಷಿಯಾಕ್ಷಣಂ   ೧೩೨

ಖರತೇಜನ ಕರಪೀಡನ
ಭರದಿಂದಂ ತೊಡೆದ ಚಂದ್ರಮಂಡಳದಿಂದಂ
ಸುರಿತಂದಮೃತಂ ಘಟದೊಳ್
ಪಿರಿದುಂ ತುಂಬಿರ್ದ ತೆಱದಿನೆಸೆದುದು ತಕ್ರಂ      ೧೩೩

ವ : ಮತ್ತಮಾ ಸಮಯದೊಳ್ ಚಿತ್ತಪ್ರಿಯದ ಸೆಜ್ಜಾಗೃಹದ ಗವಾಕ್ಷವಿವರಾಂತರಾಳದೊಳ್ ಪೊಕ್ಕು

ಉದಯದ ಗಾಳಿ ಬಂದು ಶಯನಸ್ಥವಧೂವರ ಕೋಮಳಾಂಗಮಂ
ಪದುಳಿಸಿ ಮುಟ್ಟಿದತ್ತು ಸುರತಕ್ರಿಯೆಯೊಳ್ ಪಿರಿದಾದ ಘಾಸಿಯಂ ಪ
ಡೆದು ಸಮಂತು ಸೈರಿಸಿದಿರೆಂದಳಿನೀರವದಿಂದೆ ಪೇಳ್ದು ಸಂ
ಮದದೊಳೆ ಬೆನ್ನನೆಯ್ದೆತೊಡೆದಾದರಿಪ ಪ್ರಿಯಮಿತ್ರನೆಂಬಿನಂ      ೧೩೪

ಕಾದಲರ ಸುರತಕೇಳೀವಿ
ನೋದದ ಚೋದ್ಯಕ್ಕೆ ಮೆಚ್ಚಿ ತಲೆದೂಗುವವೊಲ್
ಮೇದುರ ಪವನಾಹತಿಯಿಂ
ದಾದಮೆ ಸೊಡರ್ಗುಡಿಗಳೋಳಿ ಚಳಿಸಿದವಾಗಳ್            ೧೩೫

ವ : ಆ ಪೊತ್ತಿನೊಳ್ ಸೇವಾಸಮಯಮಱಿದೋಲೈಸಲೆಂದು ಬಂದ ಪುಣ್ಯ ಪಾಠಕಪ್ರಧಾನ ಸಂದೋಹಂ ಬಾಗಿಲೊಳ್ ನಿಂದು ಭುವನತ್ರಯಕ್ಕಭಿನವಭಾನುವೆನಿಸಿದ ಧರ್ಮನಾಥಂಗೆ ಪ್ರಬೋಧಜನನಿಮಿತ್ತಂ ಭಾನೂದಯವಿಭವಮನಿಂತೆಂದು ಗಂಭೀರ ಮಂದ್ರಧ್ವನಿಯಿಂ ಸಮುದ್ಘೋಷಣಂಗೆಯ್ವುತ್ತಿರ್ಪುದುಂ

ಎಲೆ ಜಿನರಾಜ ನಿನ್ನ ಪದಪದ್ಮದ ಸೇವನೆಗಾಗಿ ಬಂದು ಬಾ
ಗಿಲೊಳೆಸೆದಿರ್ದು ನಿನ್ನ ಬರವಂ ಸಲೆಪಾರ್ದಪರಂಧ್ರಚೋಳ ಕುಂ
ತಳ ಮರುಮಾಳವಪ್ರಮುಖದೇಶದಧೀಶ್ವರರೆಂದು ಸರ್ವಮಂ
ಗಳಿಕಜನಂಗಳಂದುಸಿರ್ದರಾತನ ಸೆಜ್ಜೆಯ ರಾಜಗೇಹದೊಳ್         ೧೩೬

ಆಗಸಮೆಂಬ ನೀಲಮಣಿಭಾಜನದಲ್ಲಿ ದಿನೇಶನೆಂಬ ಚೆ
ಲ್ವಾಗಿ ಸಮುಜ್ವ್ವಳಂಬಡೆದ ಮಾಣಿಕದಾರತಿಯಂ ನಿವಾಳಿಪು
ದ್ಯೋಗದೊಳಿರ್ದಳಿಂದ್ರನ ದಿಗಂಗನೆ ಭೂತ್ರಿತಯಾಧಿನಾಥ ನೀ
ನೀಗಳೆ ಬೇಗಮುಪ್ಪವಡಿಸೆಂದುಸಿರ್ದರ್ ಮಿಗೆ ಪುಣ್ಯಪಾಠಕರ್      ೧೩೭

ವ : ಮತ್ತಂ

ಜಗದೀಶ ನಿನ್ನ ತೇಜಂ
ಮಿಗಿಲಾಗೆ ಸಮಸ್ತಲೋಕದೊಳ್ ಗಿರಿದುರ್ಗಮ
ನಗಿದೇಱಿದಂತೆ ಸೂರ್ಯಂ
ಸೊಗಯಿಸಿದಂ ಪೂರ್ವಪರ್ವತಾಧಿತ್ಯಕದೊಳ್   ೧೩೮

ವ : ಅಂತುಮಲ್ಲದೆಯುಂ

ಅವಧಾನ ದೇವ ಪೊಱಮಡು
ಜವದೊಳ್ ಸೆಜ್ಜಾನಿವಾಸದಿಂದಂ ನೀಂ ಬ
ರ್ಪವಸರದೊಳುಚಿತಮಾದು
ತ್ಸವಮಂಗಳಮಂ ವಿನಿರ್ಮಿಸುವ ಬಗೆಯಿಂದಂ  ೧೩೯

ಉದಯಧರಮೆಂಬ ಕಳಶಾ
ಗ್ರದೊಳಿರಿಸಿದ ಪೊಳೆವ ರತ್ನದರ್ಪಣಮೆಂಬಂ
ದದಿನಿರೆ ರವಿಬಿಂಬಮದಂ
ಪದುಳಿಸಿ ಪಿರಿದಿಂದ್ರದಿಕ್ಕುಮಾರಿಕೆಯಿರ್ದಳ್     ೧೪೦

ವ : ಇಂತು

ನೆರೆದು ಸಮಸ್ತಪಾಠಕಜನಂ ಬಿಡದೋದುವ ಸುಪ್ರಭಾತ ಬಂ
ಧುರತೆಯನೆಯ್ದೆ ಸೂಚಿಸುವ ಮಂಗಳಪಾವನಪದ್ಯಗದ್ಯಮೇ
ದುರನಿನದಂಗಳಿಂ ಸಕಳಮಂಗಳಗಾಯಕರೊಲ್ದುಪಾಡುವು
ದ್ಧುರತರಗೀತರಾವಮುಮನಾಲಿಸಿಯೆಚ್ಚರನೆಯ್ದಿದರ್ ಕರಂ       ೧೪೧

ಪುಳಕದ ಕೀಳ್ ಸಡಿಲ್ದು ಬಿಗಿದಪ್ಪಿದ ಬಲ್ಪನಡಂಗಿಸಲ್ ತಡಂ
ಗಳಿಸಿದ ಮುಯ್ಪು ತೋಳ್ ತೊಡೆಗಳೆಚ್ಚಱುತುಂ ಶಿಥಿಲಂಗಳಾಗೆ ಮಂ
ಗಳಮನರಾಗಿ ಕಣ್ದೆಱೆದು ಮೆಯ್ಮುರಿದೆಳ್ದರನೂನರತ್ನಮಂ
ಜುಳತರ ಮಂಚತಳ್ಪತಳದಿಂದೆ ವಧೂವರರಾ ಪ್ರಭಾತದೊಳ್       ೧೪೨

ನರಪಂ ಕೆಯ್ಯೂಱೆ ಶೃಂಗಾರವತಿಯ ಪೆಗಲೊಳ್ ಬಲ್ಪುಗೆಯ್ದರ್ಧಮೆಳ್ದಾ
ದರದಿಂ ಕಂಠಾಗ್ರಮಂ ತನ್ನೆರಡುರುಭುಜದಿಂದಪ್ಪಿಕೊಂಡೆತ್ತಿ ವಕ್ತ್ರಾಂ
ತರಮಂ ತಾಂ ಚುಂಬಿಸುತ್ತುಂ ಕೆಳಗೆ ಚರಣವಿನ್ಯಾಸಮಂ ಮಾಡಿ ನಿಂದಂ
ವರಚಂದ್ರಂ ಕ್ಷೀರವಾರಾಶಿಯ ಲಹರಿಕೆಯಿಂದೆಳ್ದುನಿಲ್ವಂದದಿಂದಂ೧೪೩

ವ : ತದನಂತರಂ ಬೆಳ್ಮುಗಿಲ ಕೂಟದೊಳಗಿಂ ಪೊಱಮಡುವ ಕಳಾಧರನೆಂಬಂತೆ ಧರ್ಮನಾಥಮಹಾರಾಜಂ ಸೆಜ್ಜಾಗೃಹದೊಳಗಿಂ ಪೊಱಮಟ್ಟು ಸಕಳಜನಂಗಳ ಕರಕಮಳಂಗಳಂ ಮುಕುಳೀಕರಿಸುತ್ತುಂ ಬಂದು ದಂತಧಾವನ ಸ್ನಾನವಿಧಾನದಿ ವೈಭಾತಿಕ ಕ್ರಿಯಾವ್ಯಾಪಾರಮಂ ತೀರ್ಚಿ ದೇವತಾರ್ಚನಾಯೋಗ್ಯನವ್ಯ ದ್ರವ್ಯಸಂಸೇವ್ಯಂಗಳಪ್ಪ ರಜತ ಮಹಾರಜತಾದಿ ವಿರಚಿತ ಪವಿತ್ರಪಾತ್ರಂಗಳಂ ಪಿಡಿದು ಭವ್ಯಜನಂಗಳಿಕ್ಕೆಲದೊಳಂ ಬರೆ ವಿಚಿತ್ರಚೈತ್ಯಾವಾಸಮಂ ವಾಸವನಕೃತ್ರಿಮಚೈತ್ಯಾ ಲಯಮಂ ಪುಗುವಂತೆ ಪೊಕ್ಕೀರ್ಯಾ ಪಥಶುದ್ಧಿಯಿಂ ಮಾಡಿ ಗರಿಷ್ಠನಿಷ್ಠಾಧಿಷ್ಠಿತಂ ಪಂಚಪರಮೇಷ್ಠಿಸ್ವರೂಪಮನಂತ ರಂಗದೊಳ್ ಪ್ರತಿಷ್ಠೆಗೆಯ್ದು ಕ್ರಿಯಾಪೂರ್ವ ಕಮಭಿವಂದಿಸಿ

ಜಳಗಂಧಾಕ್ಷತೆ ಪುಷ್ಪಾ
ವಳಿ ಚರುದೀಪ ಪ್ರಧೂಪಫಳದಿಂದಾ ಭೂ
ತಳಪತಿ ಪೂಜಿಸಿದಂ ಮಂ
ಗಳಕಾರಣಮಾಗಿ ಭಕ್ತಿಯಿಂ ಜಿನಪತಿಯಂ         ೧೪೪

ವ : ಅಂತನುಷ್ಠಾನವೇಳಾಕರಣೀಯಮಾದಷ್ಟವಿಧಾರ್ಚನೆಯಂ ಯಥಾಕ್ರಮದಿ ನರ್ಹದ್ದೇವ ಶ್ರೀಪದದೊಳನುಷ್ಠಿಸಿ ವಿಶಿಷ್ಟಸ್ತೋತ್ರಮುಖರಮುಖನಾಗಿ

ಜಯಜಯ ದೇವದೇವ ಕರುಣಾಂಬುಧಿವರ್ಧನ [ಚಾರು]ಚಂದ್ರ ದು
ರ್ನಯಹರ ನಿನ್ನಸೇವೆಯನೆ ಮಾಳ್ಪುದು ಮೋಕ್ಷಸುಖಾನುಭೂತಿಯಂ
ಬಯಸುವವಂ ಕುದೈವಮನೆ ಪೊರ್ದುವುದಲ್ತುಚಿತಂ ಬುಭುಕ್ಷಿತಂ
ಪ್ರಿಯಮೆನಿಪನ್ನಮಂ ಸವಿವುವಲ್ಲದೆ ಪೇಳ್ ವಿಷಭಕ್ಷಿಯಪ್ಪುದೇ   ೧೪೫

ವ : ಎಂದನೇಕಸ್ತವನದಿಂದವನತನಾಗಿ ಕೌತೂಹಳಜಾತಿಗೀತಾತೋದ್ಯನೃತ್ಯ ಮಂಗಳಸಂಗತ ಸಂಗೀತಕ ಪ್ರಚುರದರ್ಶಿತಪ್ರಭಾವಂ ಪ್ರಭಾವಭಾಸುರ ಭಕ್ತಿಪ್ರಪಂಚ ಸಂಚಿತವ ದಾಶ್ಚರ್ಯಸಪರ್ಯಾಸಮೈಶ್ವರ್ಯಂ ನಿತ್ಯನಿರ್ವರ್ತ್ಯಮಾನಚತುರ್ವಿಧದಾನಮಂ ಜಿನಶಾಶನಪ್ರಕಾಶಕರಪ್ಪ ಸಮ್ಯಗ್ದೃಷ್ಟಿಗಳ್ಗಿತ್ತು ಧರ್ಮಕಥಾಪ್ರಸಂಗದಿಂ ಕಿಱಿದುಂ ಪೊತ್ತಂ ಕಳೆದರಮನೆಗೆ ಬಂದು

ಸಗ್ಗದೊಳಗ್ಗಳಂಬಡೆದು ಚಿತ್ರವಿಚಿತ್ರತರಂಗಭಂಗಿಯಿಂ
ದೊಗ್ಗಿ ವಿಲೋಚನಕ್ಕೆ ಸೊಗಸಂ ಬಿಡದೀವತಿದಿವ್ಯವಸ್ತ್ರಸ
ದ್ವರ್ಗಮನುಟ್ಟು ಮೂಜಗದೊಳಚ್ಚರಿಯಪ್ಪಿನಮಾಂತು ಚೆಲ್ವನಾ
ಮಾರ್ಗಸುವರ್ತಿ ಪಾರ್ಥಿವನೊಡರ್ಚಿದನೆಲ್ಲರ ಕಣ್ಗೆ ಹಬ್ಬಮಂ     ೧೪೬

ಮಕುಟಂ ಕುಂಡಳಮುದ್ಘಹಾರಮುರುಕೇಯೂರಂ ಕಟೀಸೂತ್ರಕಂ
ಸುಕನತ್ಕಂಕಣಮುಚ್ಚಬಾಹುವಳಯಂ ಮಾಣಿಕ್ಯವನ್ಮುದ್ರಿಕಾ
ನಿಕರಂ ಚೆಲ್ವಿವು ಮುಖ್ಯಮಾದ ಸಕಳಾಳಂಕಾರಸಾರಂಗಳಿಂ
ದೆ ಕರಂ ಭೂಷಿತನಾಗಿ ಕಣ್ಗೆ ಸುಖಮಿತ್ತಂ ಧರ್ಮನಾಥಂ ನೃಪಂ     ೧೪೭

ವ : ಇಂತು ದಿವ್ಯದೇವಾಂಗವಸ್ತ್ರಮನುಟ್ಟು ರಮಣೀಯ ಮಣಿಮಯ ಭೂಷಣಕಳಾಪಮಂ ತೊಟ್ಟು ಧರ್ಮನಾಥಮಹಾರಾಜನುಂ ಶೃಂಗಾರವತೀ ಮಹಾದೇವಿಯುಮಿಷ್ಟವಿಷಯ ಭೋಗೋಪಭೋಗಂಗಳನನುಭವಿಸುತ್ತುಮನ್ಯೋನ್ಯಾಸಕ್ತ ಚಿತ್ತರಾಗಿ ಲೀಲಾವಿನೋದಂ ಗಳಿಂದನೇಕದಿನಂಗಳಂ ನಿಮಿಷಮಾತ್ರಂಗಳಾಗಿ ಕಳಿಯುತ್ತು ಮಿರೆಯಿರೆ

ಸೊಗಯಿಪ ರೂಪುರೇಖೆ ಗುಣಮೆಂಬಿವು ತನ್ನೊಳಮಚ್ಚನೊತ್ತಿದಂ
ತಗಲದೆ ತೋಱಲಾ ನೃಪತಿಗಂ ಸತಿಗಂ ವರವರ್ಮನೆಂಬ ಪೆ
ರ್ಮಗನೊಗೆದಂ ಸಮಸ್ತಧರಣೀತಳರಕ್ಷಣದಕ್ಷಣಪ್ಪವಂ
ಮಿಗುವ ಹಿಮಾಂಶುಗಂ ಕಳೆಗಮಂದಮೃತಂ ಸಲೆಪುಟ್ಟುವಂದದಿಂ  ೧೪೮

ಕಳೆಗಳನೆಯ್ದೆಕಲ್ತು ಯುವರಾಜಪದಸ್ಥಿತನಪ್ಪ ಪುತ್ರನುಂ
ನಳಿನದಳಾಕ್ಷಿಯಪ್ಪ ಸತಿಯುಂ ಬೆರಸಂದಧಿರಾಜನೊಪ್ಪಮಂ
ತಳೆದು ನಿಮಿರ್ಚಿದಂ ವಿಭವಮಂ ಸಿರಿ ಮುಪ್ಪುರಿಗೊಂಡುದೆಂಬಿನಂ
ಸಲೆನೆಲೆಯಾಗಿ ತೋಱೆ ಮೆಱೆದಂ ಜಗದೊಳ್ ಜಗದೇಕಬಾಂಧವಂ            ೧೪೯

ಪರನರಪರಭಿಪ್ರಾಯಮ
ನುರುಚರರಿಲ್ಲದೊಡಮಱಿದು ನೆಗಳ್ವುದಮಾತಂ
ಗಿರದೆ ಬಿನ್ನೈಸಿದೊಡಮಾ
ಪರಿವಾರದ ಮನಮನಱಿದು ಕೊಡುವುದು ಸಹಜಂ        ೧೫೦

ವ : ಆಗಳ್

ಪರಮಕಲ್ಯಾಣನಿಧಿಯೆನಿ
ಪರುಹಂ ರಾಜ್ಯಾರ್ಹನಾದನೆಂದವನಿತಳಂ
ಪಿರಿದಾದ ಬೆಳೆಯ ಚೆಲ್ವಂ
ಧರಿಸಿ ನಿಮಿರ್ಚಿತ್ತು ತನ್ನ ವಿಭವದ ಪೆಂಪಂ       ೧೫೧

ಜಗಮೆಲ್ಲಂ ಕೂಡೆ ಕೊಂಡಾಡುವಿನಮೊಸೆದು ಸಜ್ಜೈನಧರ್ಮಪ್ರಭಾವಂ
ಮಿಗಿಲಾಗಲ್ ಮಾಡಿದಂ ಭಾಸುರಚರಿತನಿಧಾನಂ ವಿಪಶ್ಚಿತ್ಪ್ರಧಾನಂ
ದ್ವಿಗುಣೀಭೂತಪ್ರಭಂ ಬಾಹುಬಲಿಸುಕವಿರಾಜಂ ಜಗತ್ಕಲ್ಪಭೂಜಂ
ಸ್ಥಗಿತೈಕಾಂತಂ ಪ್ರವಾದ್ಯಾವನಸರಸಿರುಹಂ ಚಾತುರೀಜನ್ಮಗೇಹಂ೧೫೨

ಗದ್ಯ : ಇದು ಸಕಳಭುವನಜನವಿನೂಯಮಾನ ಮಹಿಮಾಮಾನನೀಯ ಪರಮಜಿನ ಸಮಯ ಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವಪ್ರಸಾದ ಸಂಪಾದಪಾದನಿಧಾನ ದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಚಂದ್ರಿಕಾವಿಹರಣಪರಿವ್ಯಾವರ್ಣನಂ ಪಂಚದಶಾಶ್ವಾಸಂ.