ಕೆಡೆ ರಾಗದ್ವೇಷಂಗಳ್
ಪಡೆದು ಯಥಾಖ್ಯಾತ ಪರಮಚಾರಿತ್ರಮನಾ
ಗಡೆ ಪೆರ್ಮುಗಿಲಾವರಣಮ
ದುಡುಗಿ ರವಿಬಿಂಬದಂತೆ ಚೆಲ್ವಂ ತಳೆದಂ         ೧೩೧

ವ : ಮತ್ತಂ ಪೃಥಕ್ತ್ವ ವಿತರ್ಕವಿಚಾರಮೆಂಬ ಪ್ರಥಮಶುಲ್ಕಧ್ಯಾನಮಂ ಧ್ಯಾನಿಸಿ ಕ್ಷೀಣಕಷಾಯವೀತರಾಗಚ್ಛದ್ಮಸ್ಥಗುಣಸ್ಥಾನಮಂ ಪೊರ್ದಿ ಕರಣಲಬ್ಧಿಯ ಪರಮ ಪ್ರಕರ್ಷಮನೆಯ್ದಿ ಬಳಿಯಮೇಕತ್ವವಿತರ್ಕವಿಚಾರಮೆಂಬೆರಡನೆಯ ಶುಕ್ಲಧ್ಯಾನದಿಂ ಬಹುಳಪ್ರದೇಶ ನಿರ್ಜರೆಗಳನಾಗಿಸಿ ಚರಮಸಮಯದೊಳೊರ್ಮೊದಲೊಳ್

ತವಿಸಿದನಂದು ಮತಿಶ್ರುತ
ಮನಃಪರ್ಯಯಂ ಮಹಾಕೇವಳಮೆಂ
ಬಿವಱಾವರಣಮನಯ್ದಂ
ನವಕೇವಳಲಬ್ಧಿಯೋಗ್ಯನೆನಿಪಾ ಮುನಿಪಂ      ೧೩೨

ಪರಿಹರಿಸಿದನಾ ಮುನಿಪಂ
ಖರಚಕ್ಷುರ ಚಕ್ಷುರವಧಿಕೇವಳಮೆಂಬೀ
ಪರಿಯಾದ ನಾಲ್ಕು ಭೇದಂ
ಬೆರಸಿದ ಸಲೆಕಷ್ಟದರ್ಶನಾವರಣಮುಮಂ        ೧೩೩

ಪ್ರಭುದಾನ ಲಾಭ ಭೋಗೋ
ಪಭೋಗ ವೀರ್ಯಂಗಳಂತರಾಯಮಿವೈದುಮ
ನಭಿಭವಿಸಿ ಕೆಡಿಸಿದಂ ಜಗ
ದಭಿವಂದ್ಯಂ ಕೆಡಿಸುವಂತೆ ರವಿ ಕತ್ತಲೆಯಂ       ೧೩೪

ವ : ಇಂತು ಜ್ಞಾನಾವರಣೀಯ ದರ್ಶನಾವರಣೀಯ ಮೋಹನೀಯಾಂತ ರಾಯಂಗಳೆಂಬ ಘಾತಿಕರ್ಮಚತುಷ್ಟಯಂಗಳಂ ನಿರವಶೇಷಂ ವಿನಷ್ಟಂಗೆಯ್ಯಲೊಡಂ

ಪ್ರಕಟಂ ಪೆಂಪೋದುದಂ ವರ್ತಿಸುವುದನುಱೆ ಮುಂಬಪ್ಪುದಂ ದ್ರವ್ಯಸಂಸ್ಥಾ
ನಕಮಂ ಮೂಲೋಕದಾಕಾರಮನಱಿವ ಮಹಾಶಕ್ತಿವೆತ್ತಾ ನಿಮಿತ್ತಂ
ಸಕಳಪ್ರತ್ಯಕ್ಷಮಾದುತ್ತಮವಿಮಳಸತ್ಕೇವಳಜ್ಞಾನಮಾಗಳ್
ಸುಕೃತಾವಾಸಂಗೆ ಪುಟ್ಟಿತ್ತುಮಿತಮಹಿಮವದ್ಧರ್ಮನಾಥಂಗೆ ಬೇಗಂ          ೧೩೫

ಬೆಳಗನಪೇಕ್ಷೆಗೆಯ್ಯದೆ ವಿಲೋಚನಗೋಚರಭಾವಮಂ ಸಮಂ
ತೆಳಿಸದೆ ದೂರಮಂ ತ್ವರಿತಮೆನ್ನದದೊರ್ಮೊದಲಲ್ಲಿ ವಸ್ತುಸಂ
ಕುಳಮನೆಲ್ಲಮಂ ವಿಶದಮಾಗಿ ಕರಸ್ಥಿತರೇಖೆಯಂತಿರೊಂ
ದುಳಿಯದೆ ಕಾಣ್ಬ ಕೇವಳವಿಬೋಧಮದುಜ್ಜ್ವಳಿಸಿತ್ತು ದೇವನೊಳ್          ೧೩೬

ರಮಣೀಯಮತಿಶ್ರುತಮನ
ದಿ ಮನಃಪರ್ಯಯಮಡಂಗಿ ಪುದಿದುಸಿರದಿರೆ
ಕ್ರಮಕರಣವ್ಯವಧಾನಂ
ಸಮನಿಸದೆ ವಿಜೃಂಭಿಸಿತ್ತು ಕೇವಳಬೋಧಂ      ೧೩೭

ಉದಯಿಸಿದುದು ಕೇವಳಬೋ
ಧದ ವಿಭವಂ ಮಾಘಮಾಸ ಪೌರ್ಣಮಿಯಪರಾ
ಹ್ಣದೊಳದುವೆ ಪುಣ್ಯನಕ್ಷ
ತ್ರದ ಸಿರಿ ಶುಭಲಗ್ನದಲ್ಲಿ ಗುರುವಾರದೊಳಂ  ೧೩೮

ಅತ್ಯುಗ್ರತೇಜದಿಂದಾ
ದಿತ್ಯಂ ಚೆಲ್ವೇಱಿ ತೋರ್ಪ ತೆಱದಿಂದಾ ಕೃತ
ಕೃತ್ಯಂ ಚೆಲ್ವಂ ತಾಳ್ದಂ
ನಿತ್ಯಂ ಕೇವಳವಿಬೋಧಮಹಿಮೋದಯದಿಂ     ೧೩೯

ವ : ಮತ್ತಮಾ ಪೊತ್ತಿನಲ್ಲಿ ಮುನ್ನ ಪಲಬದ್ಧಕ್ಷಾಯಿಕಸಮ್ಯಕ್ತ್ವಂ ನವಕೇವಳ ಲಬ್ಧಿಯ ಪ್ರಭಾವಮನವಗೈಸುವುದುಂ

ಚಂದ್ರಾರ್ಕಕೋಟಿದೀಧಿತಿ
ವೃಂದಮನೊಳಕೊಂಡು ಪೊಳೆವ ಮೆಯ್ವೆಳಗಿಂದೆ
ಯ್ದಂದಂಬಡೆದುದು ಜಿನತನು
ಕುಂದದೆ ಪೊಱವಳಿಸಿದಂತೆ ಶುಕ್ಲಧ್ಯಾನಂ        ೧೪೦

ಜರೆರಾಗದ್ವೇಷರೊಗಂ ಪಸಿವು ತೃಷೆ ಭಯಂ ಚಿಂತೆ ನಿದ್ರಾವಿಷಾದಂ
ಮರಣಂ ಸ್ವೇದಂ ವಿಮೋಹಂ ಮದರತಿಜನನಂ ವಿಸ್ಮಯಂ ಕ್ಲೇಶಮೆಂಬೀ
ಪರಭೇದಂಗೂಡಿದಷ್ಟಾದಶವಿಧಖಳದೋಷಂಗಳಂ ಗೆಲ್ದು ತಾಳ್ದಂ
ಪರಮಾರ್ಹಂತ್ಯಾದಿಲಕ್ಷ್ಮೀನಿರತಿಶಯಪರೀರಂಭಮಂ ಧರ್ಮನಾಥಂ            ೧೪೧

ವ : ಆ ಸಮಯದೊಳ್

ಪರಮೌದಾರಿಕ ದೇಹಂ
ಧರಣೀತಳದಿಂದಮೈದುಸಾವಿರಬಿಲ್ಲಂ
ತರಮನುಱೆ ಬಿಟ್ಟು ಗಗನೋ
ದರಕ್ಕೆ ನಗೆಗದತ್ತುದಕ್ಷಿಗಮೃತಾಂಜನಮಂ       ೧೪೨

ವ : ಇಂತು ಭೋಂಕನೆ ನಭಕ್ಕೆ ನೆಗೆಯಲೊಡಮಮೇಯ ಕಾಂತಿನಿಕಾಯದಿಂದ ಖಿಳವಿಯತ್ತಳ ದಂತರಾಳಮೆಳೆಮಿಂಚುಗಳ ಬಳಗಮನೊಳಕೊಂಡುದೆಂಬಂತೆ ಥಳಥಳಿಸಿ ಪೊಳೆಯುತ್ತು ಮಿರ್ಪುದುಮಾಗಳ್

ಕೇವಳಬೋಧೋದಯ ಸಂ
ಸ್ಥಾವಿಭವಂ ಧರ್ಮನಾಥಜಿನಪಂಗಾಯೆಂ
ಬೀ ವಿಧಮಂ ತಿಳಿದಂ ಪರ
ಮಾವಧಿಯಿಂ ದಿವಿಜರಾಜನವನತಮಕುಟಂ     ೧೪೩

ವ : ಮತ್ತಂ

ಕರಸಿ ಕುಬೇರನನುಸಿರ್ದಂ
ವಿರಚಿಸು ನೀಂ ಮುಂದೆ ಪೋಗಿ ಧರ್ಮಜಿನೇಶಂ
ಗುರುಸಮವಸರಣಮಣಿಮಂ
ದಿರಮಂ ನಾನಾನವೀನಘನಕೌಶಲಮಂ            ೧೪೪

ವ : ಎಂದು ಬೆಸಸುವುದುಮಾತನಾತನ ಮಾತಂ ಶಿರದೊಳಾಂತು ಮಹಾ ಪ್ರಸಾದಮೆಂದು ಕೈಕೊಂಡು ಶಿಲ್ಪಿಕ ಕಳಾಕೌಶಲ್ಯಸಂಕಲ್ಪನ ನೈಪುಣ್ಯಪಣ್ಯಜನಂಬೆರಸು ಧರ್ಮನಾಥ ತೀರ್ಥಂಕರನಿರ್ದೆಡೆಗೆವಂದು ವಂದಿಸಿ ತದನಂತರಮಂತರಿಕ್ಷದಲ್ಲಿ ಕಂತು ಕೈವಾರಂ ಬೀಸಿದಂತೆ ಸಮವೃತ್ತಮಾಗಿ ಪಂಚಯೋಜನವಿಸ್ತಾರದಿಂ ಪ್ರಶಸ್ತಮಾದ ನಿಸ್ತೂಳ ಹರಿನೀಳಮಾಣಿಕ್ಯಮಯ ಧರಣೀವಳಯಮಂ ಕಣ್ಗಗುರ್ವಾಗಿ ವಿಗುರ್ವಿಸಿ

ಕೊತ್ತಳಗಳಿಂದೆ ಚೆಲ್ವಂ
ಬೆತ್ತು ಮಹಾಟ್ಟಾಳಜಾಳದಿಂ ಪೊಳೆಯುತ್ತುಂ
ಸುತ್ತಿರ್ದುದದಱ ಮೇಲೆ ಸ
ಮುತ್ತುಂಗ ಸುವಜ್ರರತ್ನಧೂಳೀಜಾಳಂ           ೧೪೫

ರಸೆಯಿಂ ಪಂಚಸಹಸ್ರಚಾಪನಿಯತೋತ್ಸೇಧಂಬರಂ ನೀಳ್ದು ರಂ
ಜಿಸುವಿಪ್ಪತ್ತುಸಹಸ್ರಸುಸ್ಫಟಿಕ ಸೋಪಾನಂಗಳ ಶ್ರೇಣಿ ನಾ
ಲ್ದೆಸೆಯೊಳ್ ಪರ್ಬಿದುದಿಂದ್ರನೀಲಮಹಿಯಂ ಮುಟ್ಟಿರ್ಪಿನಂ ಪಾದಲಿ
ಪ್ತ ಸಮಗ್ರೌಷಧಿಯಿಂದಮೊರ್ಮೊದಲೆ ಮೇಲೇಱಿರ್ಪರಾನಂದದಿಂ  ೧೪೬

ವ : ಆ ಸೋಪಾನಂಗಳಗ್ರಭಾಗದೊಳ್

ರಾಗಂಬೆತ್ತಿರ್ದ ನಾನಾನವಮಣಿಖಚಿತೋತ್ತೋರಣಶ್ರೇಣಿ ಮುಂದೊಂ
ದಾಗಿಂಬಂ ಮಾಡೆ ಮಾಣಿಕ್ಯಮಯಕಳಶಸಂದೋಹಮಾಕಾಶಮಂ ಪೊ
ತ್ತೇಗೆಯ್ದೆತ್ತಲ್ಕೆ ಪತ್ತುಂ ನೆಲೆಗಳನೊಳಕೊಂಡಿರ್ದ ಚೆಂಬೊನ್ನ ನಾಲ್ಕುಂ
ಬಾಗಿಲ್ವಾಡಂಗಳೊಪ್ಪಂಬಡೆದವು ದೆಸೆಯಂ ಪೊಂಗದಿರ್ ನುಂಗುವನ್ನಂ      ೧೪೭

ಅವಱೊಳಗಣ ಪೊಱಗಣ ಪೊಸ
ಪವಳದ ಜಗಲಿಗಳ ಮೇಲೆ ಬಾಗಿಲ್ಗಾಪಿನ
ನೆವದಿಂ ಜ್ಯೋತಿಷ್ಕಾಮರ
ನಿವಹಂ ಪಿಡಿದಿರ್ದುದೆಸೆವ ಪೊಂಗಟ್ಟಿಗೆಯಂ    ೧೪೮

ಪದಿನಾಲ್ಕುಂ ರತ್ನಂಗಳ್
ಪದೆಪಿಂ ನವನಿಧಿಗಳಷ್ಟಮಂಗಳಮುಂ ಕನ
ಕದ ಮುರಜೋದ್ಯುಪಕರಣಮು
ಮೊದವಿರ್ದುವು ಬೇಱೆವೇಱೆ ನೂಱೆಂಟವಱೊಳ್       ೧೪೯

ವ : ಆ ನಾಲ್ಕು ಬಾಗಿಲ್ವಾಡಂಗಳ್ ಮೊದಲ್ಗೊಂಡು ಜಿನಪತಿಯ ಮೊದಲ ಪೀಠಂಬರಂ ನೀಳ್ದು ಪರ್ವಿದ ನಾಲ್ಕು ಪೆರ್ಬೀದಿಗಳುಭಯಪಾರ್ಶ್ವದೊಳಳವಟ್ಟ ಪಳಿಕಿನ ಕೇರ್ಗಟ್ಟಿನ ನಡುವೆ ನಡುವೆ ಮಕರತೋರಣಂಗಳಿಂದಳಂಕೃತಮಾದೊಂದು ಗವ್ಯೂತಿ ಮಾತ್ರಾಂತರ ದೊಳ್

ಮಾನಸ್ತಂಭಂಗಳ್ ನಾ
ಲ್ಕೇನೆಸೆದುವೊ ನಾಲ್ಕುದೆಸೆಯೊಳಂ ಮಣಿಮಯ ಘಂ
ಟಾನಿಚಿತಂಗಳ್ ಮಿಥ್ಯಾ
ಜ್ಞಾನಾಹಂಕೃತಿಯನೊರಸುವವು ಕಾಣಲೊಡಂ  ೧೫೦

ವ : ಮತ್ತಂ ನಾಲ್ದೆಸೆಯ ಗೋಮೇಧವೇಧೀಗಳ ಮೇಲೆ ಕನತ್ಕನಕಮಯ ಜಿನಬಿಂಬಂಗಳ್ ನಾಲ್ಕು ಪೊಳೆಯುತ್ತುಮಿರ್ಪುವವಂ ಬಳಸಿ ಪ್ರತ್ಯೇಕಂ ಚತುರ್ಗೋಪುರಂಗಳಿಂದ ಳಂಕಾರಂಬಡೆದ ಮೂಱುಪ್ರಾಕಾರಂಗಳಿಂ ನಾಲ್ಕುಕೊಂಡಂಗಳಿಂ ಕಣ್ಗೊಂಡು ಬೇಱೆವೇಱೊಂದೊಂದಿಂತು ವಿಳಾಸಮನೊಳಕೊಂಡ ನಾಲ್ದೆಸೆಯನಾಲ್ಕು ಮಾನಸ್ತಂಭಂ ಗಳಡೆಡಯೆಡೆಯೊಳರ್ಧಯೋಜನದಗಲವನವಗಯಿಸಿದ ಪ್ರಾಸಾದಂಗಳೈದು ಜಿನಚೈತ್ಯಾವಾಸಮೊಂದೀ ಕ್ರಮದಿಂ ವಿನ್ಯಾಸಂಬಡೆದು ಪಂಚರತ್ನಂಗಳ ನಡುವೆ ಚಿಂತಾಮಣಿಯನಿರಿಸಿ ಬಣ್ಣಸರಂಗೊಯಿದಂತೆ ತಿಣ್ಣಂ ರಂಜಿಸುವ ಪ್ರಾಸಾದಚೈತ್ಯ ನಿಳಯದಿಳಾವಳಯದಿಂದೊಳಗೆ

ಪೊಸಬೆಳ್ಳಿಯ ಕೋಟೆ ವಿರಾ
ಜಿಸುಗುಂ ಥಳಥಳಿಪ ನಾಲ್ಕುಗೋಪುರದಿಂದೊ
ಳ್ಮಿಸುನಿಯ ವೇದಿಕೆಯೊಳ್ ಮು
ನ್ನುಸಿರ್ದವೊಲಿರೆ ಮಂಗಳಂಗಳುಂ ರಕ್ಷಕರುಂ     ೧೫೧

ಪರಿಖಾವಳಯಂ ಚೆಲ್ವಂ
ಧರಿಸಿತ್ತಲ್ಲಿಂದಮೊಳಗೆ ಸಿದ್ಧರಸಂ ಕಾ
ಳ್ಪುರಮಾದುದೆನೆ ಪರಾಗೋ
ತ್ಕರರಂಜಿತ ಸಲಿಲಮುದ್ಘಮಣಿಸೋಪಾನಂ    ೧೫೨

ಇರುಳುಂ ಪಗಲುಂ ಬಿಡದಂ
ಬುರುಹವನಂ ಕುಮುದವನಮುಮಲರ್ದಿಂದೊಂದೇ
ಪರಿಯಾಗಿ ಚಿತ್ರದಿಂ ಬಿ
ತ್ತರಿಸಿದವೊಲ್ ತೋರ್ಕೆವೆತ್ತುದಾ ಖಾತಿಕೆಯೊಳ್ಟ          ೧೫೩

ಜಳಕೇಳಿಗೆ ಬರ್ಪಮರೀ
ಕಳಕಾಂಚೀದಾಮ ನೂಪುರಂಗಳ ರವದಿಂ
ಪಲವು ನೀರ್ವಕ್ಕಿಯುಲಿಯುಂ
ಜಳಖಾತಿಕೆ ಮುಖರಮಾಯ್ತು ಪೆರ್ದೆರೆಯುಲಿಯಿಂ        ೧೫೪

ವ : ಆ ನೀರ್ಗಾದಿಗೆಯುಮರ್ಧಯೋಜನಮಕ್ಕುಮಲ್ಲಿಂದೊಳಗೆಯಾ ಪರಿಯ ಚತುರ್ಗೋಪುರ ವೇದಿಕಾ ದೌವಾರಿಕನಿಧಿಮಂಗಳಂಗಳ ಸ್ವೀಕಾರದಿನಾಕಾರಂಬೆತ್ತ ರಾಜತಪ್ರಾಕಾರ ಮಿಕ್ಕುಮವಱಂತರ್ಭಾಗದೊಳ್

ಪಿರಿದುಂ ಪೂತಿರುವಂತಿ ಬಲ್ಮುಗುಳನಾಂತೊಳ್ಮೊಲ್ಲೆ ಪೂದೊಂಗಲಂ
ಭರದಿಂ ತಾಳ್ದಿದಿರ್ಮುತ್ತೆ ಕನ್ನಲರಿನಿಂ ಸೊಂಪಾದ ಸೇವಂತಿ ಬಿ
ತ್ತರದಿಂ ಮೊಗ್ಗೆಗಳುಳ್ಳ ಮಲ್ಲಿಗೆಗಳಿಂ ಚೆಲ್ವಾದ ವಲ್ಲೀವನಂ
ಕರಮೊಪ್ಪಿತ್ತು ಸಮಸ್ತಪುಷ್ಪವಸರಂ ನಿತ್ಯತ್ವಮಂ ಪೆತ್ತವೋಲ್    ೧೫೫

ಜಿನಪನ ಸೀಮೆಯೆಂದು ಪುಗಲಮ್ಮದೆ ದೂರದೊಳಿರ್ದು ಮನ್ಮಥಂ
ಘನಮೆನೆ ಗಾಳಿ ತಂದು ಪೊಱಸೂಸಿದ ಮುತ್ತಲರಿಂದೆ ಮಾಡಿ ಮೋ
ಹನಸರಮಂ ಜಗದ್ವಿಜಯಿಯಾದನದಂ ನಸುಸೋಂಕಿ ಬೀಸಲಾ
ಯ್ತನುಪಮಮಾದ ಗಂಧವಹಮೆಂಬಭಿಧಾನದ ರೂಢಿ ಗಾಳಿಗಂ     ೧೫೬

ಅಳಿ ತುಂಬಿಯೆಂಬ ಪೆಸರಂ
ತಳೆದುದು ತದ್ವನದ ಪೂಗಳೆಸಳ್ಗಳನಿನಿಸುಂ
ಬಳಲಿಸದೆ ಬಹಳತರ ಪರಿ
ಮಳಭರಮಂ ತುಂಬಿಕೊಂಡ ಕಾರಣದಿಂದಂ      ೧೫೭

ವ : ಇಂತೊಂದುಯೋಜನ ಸಮುಲ್ಲಸಿತಮಾದ ಸಂಫುಲ್ಲವಲ್ಲೀವನದಿಂದೊಳಗೆ

ಪೊಂಬೆಸದ ಪರಿಧಿ ನಯನ
ಕ್ಕಿಂಬಾದುದು ನಾಲ್ಕುರಜತಗೋಪುರದಿಂದಂ
ಕೆಂಬರಲ ಜಗಲಿಯಲ್ಲಿ ವಿ
ಡಂಬಿಸುವ ದ್ವಾರಪಾಲ ಯಕ್ಷಾಮರರುಂ         ೧೫೮

ವ : ಒಂದೊಂದು ಗೋಪುರದಿಕ್ಕೆಲಂಬಿಡಿದೆರಡೆರಡಾಗಿ ಮೂಱುನೆಲೆಯ ಮಣಿಮಯ ನಾಟಕಶಾಲೆಗಳ್ ಪದಿನಾಱಕ್ಕುಮವಱೊಂದೊಂದು ನೆಲೆಯೊಳ್

ಲಯದೊಡನೆ ಗೀತವಾದ್ಯನಿ
ಚಯ ಮೃದುರವದಿಂದೆ ವಲಭಿ ಮಾರ್ದನಿಗುಡೆ ದೇ
ವಿಯರುಂ ಮುವತ್ತಿರ್ವರ್
ನಯದಿಂ ನರ್ತಿಸುವರೆಸೆವಿನಂ ರಸಭಾವಂ         ೧೫೯

ಒಂದೊಂದು ನಾಟ್ಯಶಾಲೆಯ
ಮುಂದೊಂದೊಂದೆನಿಸಿಯಗರುಧೂಪಘಟಂಗಳ್
ಕುಂದದೆ ಪದಿನಾಱಕ್ಕುಂ
ಸಂದಡರಲ್ ದೀವಮನಮಿತಧೂಮಸ್ತೋಮಂ೧೬೦

ವ : ಮತ್ತಮಲ್ಲಿ

ಕೆಂದಳಿರ್ದೊಂಗಲಿಂದೆಸೆವಶೋಕವನಂ ಪೊಸಗಂಪನಾಂತಿರಲ್
ಕುಂದದ ಚಾರುಚಂಪಕವನಂ ತನಿವಣ್ಗೊನೆಯಿಂದೆ ಜೋಲ್ದು ಚೆ
ಲ್ವೊಂದಿದ ಸಪ್ತಪರ್ಣವನಮೆಲ್ಲೆಡೆಯೊಳ್ ಕಡುತೋರಗಾಯ್ಗಳಿಂ
ದಂದಮನಾಳ್ದ ಚೂತವನಮೀ ಕ್ರಮದಿಂದಮೆ ನಾಲ್ಕುಮೊಪ್ಪುಗುಂ            ೧೬೧

ಆ ನಾಲ್ಕುಂ ಬನದಲ್ಲಿ ಮೂಱು ಕನಕಪ್ರಾಕಾರದಿಂ ಸುತ್ತಿ ಮ
ತ್ತಾ ನಾಲ್ಕುಂ ಜಿನಬಿಂಬಮಿಕ್ಕು ಮಣಿಭಾಸ್ವತ್ಸಿಂಹಪೀಠತ್ರಯಾ
ಸೀನಂ ಕಾಂಚನಕೂಟದಲ್ಲಿ ಪರಮಾಷ್ಟಪ್ರಾತಿಹಾರ್ಯಪ್ರಭಾ
ವಾನೂನಂ ಜಿನನಾಯಕಂಗಭಿಮುಖಂ ಪರ್ಯಂಕಶೋಭಾಸನಂ       ೧೬೨

ವ : ಇಂತಪ್ಪತಿಶಯ ವಿಡಂಬಿತಾರ್ಹದ್ಬಿಂಬಸಂಭೃತಮಾಗಿ ವಿಶಾಳಮೂಳ ಪ್ರದೇಶದ ನಾಲ್ದೆಸೆಯೊಳಿರ್ದು ಪೇಶಳಮಾದ ಜಾಂಬೂನದಮಯ ಚತುರ್ವೇದಿಕಾ ವಳಯಮನೊಳ ಕೊಂಡು ಪೊಳೆಯುತ್ತುಂ

ಒಂದೊಂದು ಬನದ ನಡುವತಿ
ಸೌಂದರತರ ಚೈತ್ಯವೃಕ್ಷಮೊಂದೊಂದೆಸೆಗುಂ
ಬಂದು ಚತುರ್ವಿಧ ದಿವಿಜರ
ವೃಂದಂ ಪೂಜಿಸುವ ಸಂಭ್ರಮಂ ಪೆರ್ಚುವಿನಂ    ೧೬೩

ನಾನಾಫಲತರುಗಳ ಸಂ
ತಾನಂ ಪುದಿದಿರ್ದುದೊಂದುಯೋಜನ ಮಿತಭೂ
ಸ್ಥಾನಂಬರೆಗಂ ಮಧುರ
ಧ್ವಾನಂ ಸೊಗಸಿತ್ತು ಕೀರಕೋಕಿಳಕುಳದಾ        ೧೬೪

ವ : ಇಂತನೂನಶೋಭಾವಳಂಬನಮಾದುಪವನದವನಿಯಿಂದೊಳಗೆ

ಪೊಸಪೊನ್ನಕೋಟೆ ನಾಲ್ಕುಂ
ದೆಸೆಗಳೊಳೊಳ್ಬೆಳ್ಳಿವೆಸದ ಬಾಗಿಲ್ವಾಡಂ
ಪಸುರ್ವರಲ ಜಗಲಿಯೊಳ್ ಶೋ
ಭಿಸುಗುಂ ನಿಧಿ ಯಕ್ಷರಕ್ಷಕರ್ಮಂಗಳಮುಂ         ೧೬೫

ವ : ಅಂತದಱ ಪ್ರದೇಶದೊಳ್

ನಭಮಂ ಮುಂಡಾಡುವತ್ಯುಜ್ವ್ವಳಕನಕಮಯಸ್ತಂಭಚೂಡಾಗ್ರದೊಳ್ ಚೆ
ಲ್ವಿಭವಂಭೋಜಂ ಮಯೂರಂ ವೃಷಭಪತಿ ಮರಾಳಂ ಸ್ರಜಂ ಚಕ್ರವಾಕಂ
ಶುಭಪಂಚಾಸ್ಯಂ ಗರುತ್ಮಂ ಥಳಥಳಿಸುವ ತಳ್ತಂಬರಂ ಪತ್ತುಜಾತಿ
ಪ್ರಭವ ಚಿಹ್ನಂಗಳಿಂ ರಂಜಿಸುವವು ವಿಜಯಂಬೆತ್ತು ಪತ್ತುಂ ಧ್ವಜಂಗಳ್       ೧೬೬

ವಚನ : ಇಂತು ಪತ್ತಂತೆಱದ ಮಹಾಧ್ವಜಗಳೊಂದಂದಕ್ಕೆ ಬೇಱೆವೇಱೆ ನೂಱೆಂಟು ನೂಱೆಂಟಾಗಿ ನಾಲ್ದೆಸೆಯೊಳಿರ್ದವೆಲ್ಲಂ ನಾಲ್ಸಾಸಿರದ ಮೂನೂಱಿಪ್ಪತ್ತು ಮುಖ್ಯಧ್ವಜಂಗಳಕ್ಕು ಮತ್ತಮದೊಂದೊಂದಕ್ಕಷ್ಟೋತ್ತರಶತಮಾಗಿ

ಬಿತ್ತರಿಸೆ ನಾಲ್ಕುಲಕ್ಕಂ
ಮತ್ತಱುವತ್ತಾಱುಸಾಸಿರಂ ಪಂಚಶತಂ
ಬೆತ್ತಱುವತ್ತಾಗಿಕ್ಕುಂ
ಮೊತ್ತಂಗೊಂಡಿರ್ದುಪಧ್ವಜಂಗಳ್ ಸುತ್ತಂ       ೧೬೭

ಪರಕಲಿಸಿದ ಬಿಳಿಯ ಮುಗಿ
ಲ್ದೆರೆಯೆನೆ ತಧ್ವಜವಿಲಗ್ನಲೋಲ ದುಕೂಲಾಂ
ಬರಜಾಳಂ ಮಿಳ್ಳಿಸಿದ
ತ್ತೆರಲ್ವೋಲಿಂದುದಿರ್ವ ತೆಱದಿನುಪವನದರಲ್ಗಳ್        ೧೬೮

ವ : ಆ ಧ್ವಜಾವನೀವಳಯಮೊಂದು ಯೋಜನಮಕ್ಕುಮಲ್ಲಿಂದೊಳಗೆ

ಅರ್ಜುನವರ್ಣದ ಸಾಲಂ
ಸಜ್ಜಿತರಜತಪ್ರತೋಳಿಕಾದಿ ಚತುಷ್ಕಂ
ದುರ್ಜಯನಾಗಕುಮಾರ ಸ
ಮುಜ್ಜೃಂಭಿತರಕ್ಷಣಂ ಸಮಂಗಳಮೆಸೆಗುಂ       ೧೬೯

ವ : ಅಲ್ಲಿ ಮುನ್ನಿನಂತೆ ಪದಿನಾಱುಂ ನಾಟಕಶಾಲೆಗಳುಮನನಿತೆ ಧೂಪ ಪಟಂಗಳು ಮನೊಳಕೊಂಡು ಸಾಲತ್ರಯಪರಿವೃತ ತೃತೀಯ ವಿಷ್ಟರಾಗ್ರ ಕಾಯೋತ್ಸರ್ಗ ಸ್ಥಿತ ಶುದ್ಧಸ್ಫಟಿಕಮಯಸಿದ್ಧ ಪ್ರತಿಮಾಪ್ರತಿನಿಬದ್ಧಮೂಲಶಾಲಿಗಳುಂ ಪ್ರತೀತಿವಿಟಪಿ ಘಂಟಾಜಾಳಮುಕ್ತಾದಾಮಚಾಮರೋದ್ದಾಮಂಗಳಪ್ಪ ನಮೇರು ಮಂದಾರ ಪಾರಿಜಾತ ಸಂತಾನಕಮೆಂಬ ಸಿದ್ಧಾರ್ಥಕವೃಕ್ಷಂಗಳಿಂದೀಕ್ಷಣಮಂ ಸೆಱೆಗೆಯ್ವೇಕಯೋಜನ ಪ್ರಕಲ್ಪಿತ ಮಾದನಲ್ಪತರ ಕಲ್ಪವೃಕ್ಷವನಕ್ಷೋಣೀಮಂಡಳಮಿಕ್ಕುಮಲ್ಲಿ

ಮಾಲ್ಯಾಂಗಂ ಭೋಜನಾಂಗಂ ಪೊಸತೆನಿಸುವ ವಸ್ತ್ರಾಂಗಮುಜ್ಯೋತಿರಂಗಂ
ಸಲ್ಲೇಪಾಂಗಾಂಗಂ ಬಹುವಿಧವರ ತೂರ್ಯಾಂಗಮುದ್ಭೂಷಣಾಂಗಂ (?)
ಲಾಲ್ಯೋದ್ದೀಪಾಂಗಮತ್ಯುಜ್ವಳಿತ ಕನಕಪಾತ್ರಾಂಗಮೆಂದಿಂತು ಬೇಳ್ಪ
ರ್ಗೆಲ್ಲರ್ಗೊಲ್ದೀವ ಪತ್ತುಂತೆಱದತಿಶಯವತ್ಕಲ್ಪವೃಕ್ಷಂಗಳಿರ್ಕುಂ  ೧೭೦

ವ : ಇಂತಕ್ಷೂಣಶೋಭಾಸಮುಪಕ್ಷಿತಮಾದ ಕಲ್ಪವೃಕ್ಷನಂದನವನದಿಂದೊಳಗೆ

ಬಳಸಿತ್ತು ಕನಕವೇದಿ
ವಳಯಂ ಧರಣೇಂದ್ರರೆಂಬ ದೌವಾರಿಕರು
ಜ್ವಳಿಸುವ ಬೆಳ್ಳಿಯ ನಾಲ್ಕ
ಗ್ಗಳಬಾಗಿಲ್ವಾಡದಿಂದೆ ಕೆಣ್ಗೆಸೆಯುತ್ತುಂ        ೧೭೧

ವ : ಅಲ್ಲಿಂದೊಳಗೆ

ಎಡೆಯೆಡೆಯೊಳ್ ಮಣಿತೋರಣ
ಮೆಡೆಗಿಱಿದಿರೆ ಜಿನರ ಸಿದ್ಧರ ಪ್ರತಿಮೆಗಳುಂ
ತೊಡರ್ದಿರೆ ನಾಲ್ಕುಂ ವೀಥಿಯ
ನಡುವಿರ್ಪವು ಬೇಱೆ ನವನವಸ್ತೂಪಂಗಳ್       ೧೭೨

ವ : ಅವಱ ಕೆಲಂಬಿಡಿದು ಸುತ್ತಿ

ಒಲಿದಾಡುತ್ತಿರ್ಪ ವಾದ್ಯಂಗಳನತಿಶಯದಿಂ ಬಾಜಿಸುತ್ತಿರ್ಪ ಸನ್ಮಂ
ಗಳಮಂ ಪಾಡುತ್ತಮಿರ್ಪಚ್ಚರಿಯಿನೆಸೆವ ಮಾಣಿಕ್ಯಸಂಗೀತಹರ್ಮ್ಯಾ
ವಳಿ ಚಿತ್ರಂಬೆತ್ತುಂ ಸಂಗೀತಮನ್ಪ್ರಯದವರ್ಗಾದೊಡಂ ಪೊಕ್ಕೊಡಂದಾ
ಗಳೆ ಪಾಡುತ್ತಾಡುತಿರ್ಪಿಚ್ಛೆಯನೊಡರಿಸುಗುಂ ತುಂಬಿ ದೇವರ್ಕಳಿಂದಂ        ೧೭೩

ಸಂಗೀತತ್ರಯವಿಭವಂ
ಪಿಂಗದ ನವರತ್ನರಚಿತ ನಾನಾವಳಭೀ
ತುಂಗಭವನಂಗಳಿಂದಂ
ಮಂಗಳಮಾಯ್ತರ್ಧಯೋಜನಕ್ಷಿತಿಚಕ್ರಂ          ೧೭೪

ವ : ಇಂತು ನಿಳಿಂಪದಂಪತಿಗಳಭಿನವಕ್ರೀಡಾಸಂಭ್ರಮಸಂಪದದಲಂಪಿಂ ಪೊಂಪುಳಿವೋಪ ಸಂಗೀತಶಾಲಾಮಾಲಿಕಾವಳಯಿತ ಮಹೀತಳದಿಂದೊಳಗೆ

ಪಳಿಕಿನ ಕೋಟೆಗೊಪ್ಪಿದವು ನಾಲ್ಕುವಿನೀಲದ ಗೋಪುರಂಗಳು
ಜ್ವಳಿಸುವವಿಕ್ಕೆಲಂಬಿಡಿದು ರತ್ನದ ವೇದಿಕೆಗಳ್ ತದಗ್ರದೊಳ್
ಬಳಸಿದ ಕಲ್ಪಜಾಮರಕುಮಾರಮಹಾಪ್ರತಿಹಾರಕರ್ ಮನಂ
ಗೊಳಿಸಿದರಾಂತು ಪೊಂಬೆಳೆಗಳಂ ಮಣಿಭೂಷಣದಿಂದಮೊಪ್ಪುತುಂ೧೭೫

ವ : ಆ ವಿಕಟಸ್ಫಾಟಿಕಕೋಟಾವಳಯಲಕ್ಷ್ಮಿಯ ಚತುರ್ಮುಖಮಂಡಳದಂತೆಸೆವ ಹರಿನ್ಮಣಿಮಯಚತುರ್ಗೋಪುರದ್ವಾರದಭ್ಯಂತರಾಳದೆರಳ್ದೆಸೆಯೊಳಿರ್ದ ವಿತರ್ದಿಕಾಸ್ಥಳೀಮಧ್ಯದೊಳಶ್ವರತ್ನಮುಂ ಗಜರತ್ನಮುಂ ಸೇನಾಪತಿರತ್ನಮುಂ ಗೃಹಪತಿರತ್ನಮುಂ ಪುರೋಹಿತರತ್ನಮುಂ ಸ್ತ್ರೀರತ್ನಮುಂ ವಿಶ್ವಕರ್ಮರತ್ನಮುಮೆಂದಿಂತು ಸಪ್ತಜೀವರತ್ನಂಗಳುಂ ಚಕ್ರರತ್ನಮುಂ ದಂಡರತ್ನಮುಂ ಖಳ್ಗರತ್ನಮುಂ ಛತ್ರರತ್ನಮುಂ ಚರ್ಮರತ್ನಮುಂ ಮಣಿರತ್ನಮುಂ ಕಾಕಿಣೀರತ್ನಮುಮೆಂದಿಂತೇಳುಮಜೀವರತ್ನಂಗಳುಮೀ ಪ್ರಕಾರದಿಂ ಚತುರ್ದಶರತ್ನಂಗಳುಂ ಬಳಿಯಂ ಕಾಳಮುಂ ಮಹಾಕಾಳಮುಂ ಮಾಣವಕಮುಂ ಪಿಂಗಳಮುಂ ಪದ್ಮಮುಂ ಪಾಂಡುಕಮುಂ ನೈಸರ್ಪಣಮುಂ ಶಂಖಮುಂ ಸರ್ವರತ್ನಮುಮೆಂಬ ನವನಿಧಿಭಂಡಾರಂಗಳುಂ ಮತ್ತಂ ಪ್ರತ್ಯೇಕಮಷ್ಟೋತ್ತರಶತಂಗಳಾಗಿ ತೋರ್ಕೆವೆತ್ತ ಮಂಜುಳಕಳಶಮುಂ ಮಣಿದರ್ಪಣಮುಂ ಸಮುತ್ತುಂಗಭೃಂಗಾರಮುಂ ವಿಮಳ ಚಾಮುರಮುಂ ಧವಳಾತಪವಾರಣಮುಂ ವಿಜಯಧ್ವಜಮುಂ ಯಜನವ್ಯ ಜನಮುಂ ಗರಿಷ್ಠ ಸುಪ್ರತಿಷ್ಟಕಮುಮೆಂಬಷ್ಟ ಮಹಾಮಂಗಳಂಗಳುಂ ನಾರಂಗ ನಾಳಿಕೇರ ಮಾಕಂದ ಮಾತುಳಂಗಾದಿ ಸಕಳರ್ತುಕ ಫಳಕುಳಕಳಿತ ವಿಪುಳ ಪರಿಮಳಭರವಿರಸನ ಮಿಳಿತ ಮಾಳತೀ ಲತಾಂತಾನಂತಮಾಳಾದಿ ಮಾಳಿಕೆಗಳುಂ ಥಳಿಥಳಿಸಿ ಪೊಳೆವ ಸ್ಥೂಳಸುವರ್ಣರೂಪ್ಯಮಯ ವಿಶಾಳಸ್ಥಳಾದಿ ನಾನಾವಿಧ ಭಾಜನಸಮಾಜಂಗಳುಂ ನಿರತಿಶಯಕಿರಳಗಣಮನುಗುಳ್ವ ಪಲತೆಱದ ಪರಿಪರಿಯ ವಿಳಸದಭಿನವಮಣಿ ವಿಳಾಸವಿಶೇಷಿತ ಮಕುಟಕುಂಡಳ ಕೇಯೂರಹಾರಾಂಗದಾದಿ ಬಹುವಿಧಭೂಷಣ ಕಳಾಪಂಗಳುಂ ಪ್ರಶಸ್ತನಿಧಾನಾದಿ ಸಮಸ್ತ ವಸ್ತುಗಳುಂ ನಿರಂತರಂ ನೆಲೆಗೊಂಡು ನಯನಾ ನಂದಮನಜನಿಸುತ್ತುಮಿರೆ

ಅದಱಂತರ್ಭಾಗದಲ್ಲಿ ಸ್ಫಟಿಕಘಟಿತ ಕೌಶಲ್ಯಸಾಕಲ್ಯಶೋಭಾ
ಸ್ಪದಲಕ್ಷ್ಮೀಮಂಡಪಂ ವಿಸ್ಮಯಮನೊಡರಿಸುತ್ತಿರ್ದುದೆಲ್ಲರ್ಗೆ ನೈರ್ಮ
ಲ್ಯದಿನಾಕಾಶಸ್ವಭಾವಂ ಪೊಳೆವವೊಳದಱ ಸ್ಫೀತಕಾಂತಿಪ್ರಭಾವಂ
ಪುದಿಯಲ್ ಕ್ಷೀರೋದನೀರಿಂದಭಿಷವಣಮನಾಂತಂತೆ ತೀರ್ಥೇಶನಿರ್ದಂ        ೧೭೬

ಆ ಲಕ್ಷ್ಮೀಮಂಡಪದ ವಿ
ಶಾಲಂ ಯೋಜನಮದೊಂದಱನಿತಕ್ಕದಱೊಳ್
ಸಾಲದ ಮೂಲಂಬಿಡಿದು ಗ
ಣಾಲಯ ಭೂವಳಯಮಿರ್ದುದೇಕಕ್ರೋಶಂ     ೧೭೭

ಆದಿಯ ನಾಲ್ಕುವೀಥಿಗಳೆರಲ್ಕೆಲದಲ್ಲೆರಡಾಗಿ ತಮ್ಮೊಳೆಂ
ಟಾದವು ಮತ್ತಮಂತವಱೆರಳ್ದೆಸೆಯಲ್ಲೆರಡಾಗಲಿಂತು ಸ
ಮ್ಮೇದುರಚಂದ್ರಕಾಂತಮಯಭಿತ್ತಿಗಳುಂ ಪದಿನಾಱೆನಿಕ್ಕುಮೀ
ದ್ವಾದಶಕೋಷ್ಠಮೊಪ್ಪಿದುದು ಪೂರ್ವದಿಗಾದಿಜಿನಪ್ರದಕ್ಷಿಣಂ      ೧೭೮

ವ : ಆ ಪೂರ್ವದಿಗ್ವೀಥೀಪ್ರದೇಶಂಬಿಡಿದು ದಕ್ಷಿಣದಿಗ್ವೀಥೀಪ್ರದೇಶಪರ್ಯಂತ ಮಂತರಾಳ ದೊಳನುಕ್ರಮಂಗೊಂಡು

ಮುನಿಜನಮುಂ ಕಲ್ಪಾಮರ
ವನಿತಾಜನಮುಂ ಮನುಷ್ಯನಾರೀವೃತ ಪಾ
ವನಗುಣವದಬ್ಜಿಕಾ ವಿಭು
ಜನಮುಂ ನೆಲಸಿತ್ತು ಮೊದಲ ಕೋಷ್ಠತ್ರಯದೊಳ್       ೧೭೯

ವ : ಆ ದಕ್ಷಿಣದಿಗ್ವೀಥಿಕಾಸ್ಥಾನಂ ಮೊದಲ್ಗೊಂಡು ಪಶ್ಚಿಮದಿಗ್ವೀಥಿಕಾವಧಿಯಾಗಿ ಮಧ್ಯದೊಳ್ ನಿಮಿರ್ದ

ಜ್ಯೋತಿಷ್ಕ ಕಾಮಿನೀತತಿ
ನೂತವ್ಯಂತರವಧೂಚಯಂ [ತಾಂ]ನೆಲಸಿ
ರ್ದೋತು ಭವನಾಮರಸ್ತ್ರೀ
ಜಾತಮುಮೆರಡನೆಯ ದೆಸೆಯ ಕೋಷ್ಠತ್ರಯದೊಳ್      ೧೮೦

ವ : ಆ ಪಶ್ಚಿಮದಿಗ್ವೀಥಿಯಿಂ ತೊಟ್ಟುತ್ತರದಿಗ್ವೀಥಿಯೆ ಸೀಮೆಯಾಗಿ ನಡುವೆ ನಿಬಿಡಮಾದ

ಭವನಾಮರರುಂ ವ್ಯಂತರ
ನಿವಹಂ ಜ್ಯೋತಿಷ್ಕದೇವರುಂ ಬಹಳತರೋ
ತ್ಸವದಿಂ ನೆಲಸಿರ್ದರ್ ಭ
ಕ್ತಿವಶರ್ ಮೂಱನೆಯ ದೆಸೆಯ ಕೋಷ್ಠತ್ರಯದೊಳ್     ೧೮೧

ವ : ತದುತ್ತರದಿಗ್ವೀಥಿ ತೊಡಗಿ ಪೂರ್ವದಿಗ್ವೀಥಿಯೇ ಮೇರೆಯಾಗಿ ಚಕ್ರವಾಕಸ್ಥಳದೊಳ್

ಕಲ್ಪಜದೇಹಸಮೂಹಮ
ನಲ್ಪಮಹಾಚಕ್ರವರ್ತಿನಿಕರಂ ನೆಲಸಿ
ತ್ತೊಳ್ಪಿಂ ತಿರ್ಯಗ್ಜಾತಿವಿ
ಕಲ್ಪಂ ನಾಲ್ಕನೆಯ ದೆಸೆಯ ಕೋಷ್ಠತ್ರಯದೊಳ್          ೧೮೨

ವ : ಮತ್ತಮರಿಷ್ಟಸೇನಾಚಾರ್ಯರ್ ಮೊದಲಾದ ನಾಲ್ವತ್ತಿರ್ವರ್ ಗಣಧರರು ಮೊಂಭೈನೂರ್ವರ್ ಪೂರ್ವಧರರುಂ ಸಾಸಿರದೇಳುನೂಱನಾಲ್ವತ್ತು ಶಿಕ್ಷಕರುಂ ಮೂಱು ಸಾಸಿರದಱುನೂರ್ವರವಧಿಜ್ಞಾನಿಗಳುಮಯಿನೂಱನಾಲ್ವತ್ತು ಮನಃಪರ್ಯಯಜ್ಞಾನಿಗಳುಮನಿತೆ ಕೇವಲಜ್ಞಾನಿಗಳುಮೇಳುಸಾಸಿರ್ವರ್ ವಿಕ್ರಿಯರ್ಧಿಪ್ರಾಪ್ತರುಮಿರ್ಚ್ಛಾಸಿರ ದೆಂಟುನೂರ್ವರ್ ವಾದಿಗಳುಂ ಮೂಱುಸಾಸಿರದ ನಾನೂರ್ವರಜ್ಜಿಯರುಮೆರಡುಲಕ್ಕೆ ಶ್ರಾವಕರುಂ ನಾಲ್ಕುಲಕ್ಕೆ ಶ್ರಾವಕಿಯರುಮಸಂಖ್ಯಾತ ದೇವಿಯರುಮಸಂಖ್ಯಾತ ತಿರ್ಯಗ್ಜಾತಿಜೀವಸಮಾಜಮುಂ ಪೂರ್ವೋಕ್ತಕ್ರಮದಿಂ ನಿಜನಿಜಕೋಷ್ಠಪ್ರದೇಶಂಗಳೊಳ್ ಪರಮೇಶ್ವರಪ್ರಭಾವದಿ ಸಂಕ್ಲಿಷ್ಟರೂಪಮಾಗಿರ್ಪುದುಂ

ದ್ವಾದಶವಿಧಕೋಷ್ಠಂಗಳ್
ಮೇದುರಸೌವರ್ಣಗಂಧಕುಟಿಯಂ ಬಳಸಿದ
ವಾದರಿಸೆ ಮೇರುಗಿರಿಯಂ
ದ್ವಾದಶರವಿಮಂಡಳಂಗಳುಂ ಬಳಸಿದವೋಲ್  ೧೮೩

ವ : ಅನಂತಚಾತುರ್ವರ್ಣಮಹಾಸಂಘದಿಂ ಸಂಪೂರ್ಣಮಾಗೆ ತುಂಬಿ ತಿಂತಿಣಿವೋಪ ಗಣಕ್ಷೋಣಿಯಿಂದೊಳಗೆ

ಥಳಥಳಿಪಿಂದ್ರನೀಲಮಣಿಯಿಂದವೆ ಮಾಡಿದ ನಾಲ್ಕುಗೋಪುರಂ
ಗಳ ಕೆಲದಲ್ಲಿ ವಿದ್ರುಮದ ವೇದಿಕೆಯೊಳ್ ನಿಧಿ ಮಂಗಳಂಗಳುಂ
ತೊಳಗುವ ಕಲ್ಪಜಾಮರ ಕುಮಾರಮಹಾಪ್ರತಿಹಾರಕಾಳಿ ಸಂ
ಗಳಿಸೆ ನಭೋನಿಭಸ್ಫಟಿಕವೇದಿಕೆ ಮಂಡಳಿಸಿತ್ತು ಸುತ್ತಲುಂ            ೧೮೪

ವ : ಮತ್ತದುಚಿತಸ್ಥಾನಕದೊಳತೀವ ನವೀನಬಂಧಪ್ರಬಂಧಬಂಧುರಮಾಗೆ ಕೀಲಿಸಿದ ನವರತ್ನಂಗಳ ಮೊತ್ತದಿಂ ಬಿತ್ತರಂಬೆತ್ತ ಮುತ್ತಿನ ದ್ವಾರಬಂಧದ ಮುಂದೆ ಗದಾದಂಡ ಚಕ್ರಪಾಶ ಫಳಕಂಗಳಂ ಪಿಡಿದು ನಿಂದ ವೃಂದಾರಕವರ್ಯನಂ ದೌವಾರಿಕ ಗೌರವಂ ವಿಜೃಂಭಿಸುತ್ತುಮಿರಲಲ್ಲಿಂದೊಳಗೆ

ನವಶತದಂಡದುನ್ನತಿಯಿನೊಪ್ಪಮನಾಂತಱುನೂಱದಂಡಮೇ
ಪವಣಗಲಕ್ಕೆ ನೀಳಕೆ ಕುಬೇರನೆ ಸೂತ್ರಿಸಿ ಚಿತ್ರಮಿಟ್ಟು ಸಂ
ಭವಿಸಿದ ಚೆಲ್ವಗಂಧಕುಟಿಯಂ ಪೊಗಳ್ವನ್ನನದಾವನೋ ತ್ರಿಭೂ
ಭುವನದೊಳಿನ್ನುಮಿಲ್ಲೆನಿಪ ರನ್ನದ ಮಾಟದೆ ತೋರ್ಕೆವೆತ್ತುದಂ  ೧೮೫

ಅದು ಪರಮಾರ್ಹಂತ್ಯಶ್ರೀ
ಸುದತಿಯ ಮದುವೆಯೊಳೊಡರ್ಚಿದುರುಮಂಡಪದಂ
ದದೆ ಚಿತ್ತದ ಗೊತ್ತಾದುದು
ಬಿದಿ ಪೊಗಳಲ್ಕಾಱನದಱ ಶೋಭೆಯ ಪೆಂಪಂ   ೧೮೬

ಪರಮೌದಾರಿಕ ದಿವ್ಯದೇಹಘನಗಂಧಂ ತುಂಬಿ ತುಳ್ಕಾಡೆ ಬಿ
ತ್ತರಿಸುತ್ತಿರ್ದುದು ಸಾರ್ಥಗಂಧಕುಟಿಯೆಂಬೀ ನಾಮಮಂ ಪಂಚರ
ತ್ನರುಚಿಪ್ರಾಂಚಿತಮಂಡಪಂ ಜಿನಪತಿಸ್ನಾನಂ ಕರಂ ನಾಣ್ಚಿದಂ
ತಿರೆ ಕಾಳಾಗರುಧೂಪಧೂಮಮಡರ್ದತ್ತಲ್ಲಿಂದಲರ್ವ‌ಟ್ಟೆಯಂ     ೧೮೭

ಆ ಗಂಧಕುಟಿಯ ಗಂಧ
ಕ್ಕೋಗಡಿಸದೆ ಸೋಲ್ತು ಬೆಳ್ಮೊಗಂ ಬಿರ್ದವೊಲಿಂ
ಬಾಗಿರ್ದುದು ಕರ್ಪೂರಂ
ಪೂಗಳ್ ಮಧುಬಿಂದು ವಿಷದೆ ನೀರೋಡುವವೊಲ್       ೧೮೮

ವ : ಇಂತು ನವೀನರಚನಾತಿಶಯದಿಂ ಬಂಧುರಮಾದ ಗಂಧಕುಟಿಯ ಮಧ್ಯಸ್ಥಳಕ್ಕ ಳಂಕಾರಮೆನಿಸಿಯೇಳುನೂಱಯ್ವತ್ತು ಬಿಲ್ಲಗಲಮನೆಂಟುಬಿಲ್ಲುದ್ದಮನಪ್ಪುಕೆಯ್ದು

ರಮಣೀಯಾಂಶುತರಂಗಿತಂ ಮೊದಲಪೀಠಂ ಚಾರುವೈಡೂರ್ಯರ
ತ್ನಮಯಂ ರಂಜಿಸಿದತ್ತು ಮತ್ತದಱ ನಾಲ್ಕುಂ ದಿಕ್ಕಿನೊಳ್ ಧರ್ಮಚ
ಕ್ರಮನುದ್ಯನ್ಮಕುಟಾಗ್ರದೊಳ್ ತಳೆದು ಯಕ್ಷಶ್ರೇಣಿ ನಿಂದಿರ್ದುದು
ತ್ತಮ ನಾನಾವಿಧಪೂಜನೋಪಕರಣಂಗಳ್ ಸಂದವಲ್ಲಲ್ಲಿಗಂ       ೧೮೯

ವ : ಚಕ್ರವರ್ತಿ ಖಚರೇಂದ್ರಾದಿ ಸಮಭ್ಯರ್ಚಿತ ಪ್ರಥಮಪೀಠದ ಮೇಲೇಳು ನೂಱು ಧನುಃಪ್ರಮಿತವಿಶಾಲಮಂ ಚತುಶ್ಚಾಪೋತ್ಸೇಧಮನೊಳಕೊಂಡು

ಎರಡನೆಯ ಹೇಮಮಯವಿ
ಷ್ಟರಮಷ್ಟವಿಧಧ್ವಜಂಗಳಿಂ ಬಳಸಿ ಮನೋ
ಹರಮಾದುದಮಳಮೌಕ್ತಿಕ
ಪುರುರಾಶಿಯ ಪುಂಜರಾಜಿ ಪೊಳೆಯಲ್ ಸುತ್ತಂ೧೯೦