ವ : ಸಮನಂತರ ಸಮಾನಸಮಾಧಿಸಮೇತ ಕೇವಳಿಗಳ ಕಳೇವರಮಂ ಬೇಱೆವೇಱೆ ಪೂಜಿಸಿ ಪೊಡವಟ್ಟು ಮಗುಳ್ದು ಪೊಗಳ್ದುಂ ಕುಂದದ ಪರಮಾನಂದ ದಿನಂದಂಬಡೆದು ತೋಱುವ ವೃಂದಾರಕವೃಂದದೊಳೊಂದಿದ ಸೌಧಮೇಂದ್ರಂ ಸೌಂದರತರ ಚಂದನರಸ ಧಾರಾಪೂರಪರಂಪರಾಂದೋಹದಿಂದೋಕುಳಿಯನಾಡಿ

ಸುರಪಂ ನಿರ್ವಾಣಕಲ್ಯಾಣಮನೊಡರಿಸಿ ಪೂರೈಸಿದಂ ಧರ್ಮನಾಥಂ
ಗಿರಿದಿಂತೀ ಪಂಚಕಲ್ಯಾಣದ ವಿಭವಮನೆಯ್ದೆ ಕ್ರಮಂಗೊಂಡು ಯಾತ್ರೋ
ದ್ಧುರ ಶೋಭಾಸಂಪದಂ ಭೂತ್ರಯದೊಳೆಸೆವಿನಂ ಜೈನಮಾರ್ಗಪ್ರಭಾವ
ಸ್ಫುರಣಾಭಿವ್ಯಕ್ತಿಸಕ್ತಂ ಜಿನಪತಿಚರಣಾರಾಧನಾಭಕ್ತಿಯುಕ್ತಂ       ೩೭೧

ವ : ಬಳಿಯಮರಿಷ್ಟಸೇನಗಣಧರರ್ ಮುಖ್ಯರಾದ ಸಕಳಗಣಧರರ ಪಾದಾರವಿಂದಂಗಳನ ಭಿವಂದಿಸಿ ಬೀಳ್ಕೊಂಡು ತೀರ್ಥಭೂತಸಮ್ಮೇದಶೈಲಮಂ ತ್ರೀಪ್ರದಕ್ಷಿಣಂ ಗೆಯ್ದು

ಪಿರಿದಾದುತ್ಸಾಹದಿಂದೆತ್ತಿದ ಪರಿಪರಿಯ ಛತ್ರದಿಂದಂ ಚಳಚ್ಚಾ
ಮರಸಂದೋಹಂಗಳಿಂ ಪೆಂಪೊದವಿ ಗಗನದೊಳ್ ತುಂಬಿ ಮಂದೈಸೆ ಸೈನ್ಯಂ
ಪರಿವಾರಂಗೂಡಿ ರಾಗಂಬಡೆದು ನಿಜನಿವಾಸಕ್ಕೆ ಪೋದಂ ಮಹಾಬಂ
ಧುರತೂರ್ಯಾರಾವಮೆಂಟುದೆಸೆಯನಲೆವಿನಂ ಪುಣ್ಯಮಾ ನೃತ್ಯರಂಗಂ        ೩೭೨

ವ : ಅಂತತೀವ ಪ್ರಭಾವನಾ ವಿಭವದಿಂ ಧರ್ಮಜಿನನಾಥನ ನಿರ್ವಾಣ ರಮಣೀಯ ಪರಿಣಯನಲಕ್ಷಣ ಚರಮಕಲ್ಯಾಣದೊಸಗೆಯನೆಸಗಿ ಪುಳೋಮಜಾತಂ ನಿಜ ನಿಶಾಂತಕ್ಕೆ ಬೇಗದಿಂ ಪೋಗಿ ತನ್ನೊಡನೆ ಬಂದ ಚತುರ್ನಿಕಾಯದೇವರ್ಕಳೆಲ್ಲರಂ ತಂತಮ್ಮ ನೆಲೆಗೆ ಬೀಳ್ಕೊಟ್ಟು ಕಳಿಪಿ ಸುಖದಿನಿರ್ಪುದುಮನ್ನೆಗಮಿತ್ತಲ್

ಈ ಸಮ್ಮೇದಶೀಲೋಚ್ಚಯಾಗ್ರದೊಳಘಪ್ರಧ್ವಂಸನಂಗೆಯ್ದು ಮು
ಕ್ತೀಶತ್ವಂ ದೊರೆಕೊಂಡುದಾ ಪಿತೃಭರಶ್ರೀಧರ್ಮನಾಥಂಗಮೆಂ
ಬೀ ಸೂಕ್ತಂ ವರಧರ್ಮಭೂಪತಿಯ ಕರ್ಣಾಭ್ಯರ್ಣಮಂ ಸಾರ್ತರಲ್
ಸೂಸುತ್ತುಂ ಪ್ರಮದಾಶ್ರುವಂ ಪುಳಕಸಸ್ಯೌಘಕ್ಕಮೆಳ್ದಂ ನೃಪಂ      ೩೭೩

ವ : ಅಂತು ಸಿಂಹಾಸನದಿನೆಳ್ದಾ ದಿಕ್ಕಿಂಗೇಳಡಿಯ ನಡೆದು ಸಾಷ್ಟಾಂಗ ಪ್ರಣತನಾಗಿ ತದ್ವಾರ್ತೆಯಂ ಪೇಳ್ದವಂಗಂಗಚಿತ್ತಮನಿತ್ತು

ತಂದೆಯೆಂಬೊಂದು ಮೋಹಂ
ಸಂದಂ ಮೋಕ್ಷಕ್ಕೆ ಮತ್ತಮೆಂಬೀ ಮೋಹಂ
ಕುಂದದಿಮ್ಮಡಿಸೆ ವರಧ
ರ್ಮಂ ದಮಯುತನಾ ಸ್ಥಳಕ್ಕೆ ಪೋಗಲ್ ಬಗೆದಂ          ೩೭೪

ವ : ಬಳಿಯಾಮಾನಂದಭೇರಿಯಂ ಪೊಯಿಸಿ ನೆರೆದುಬಂದ ಪರಿಜನಂ ಪುರಜನಂಬೆರಸು ಮಹಾಮಹಿಮೆಯಿಂ ಪೋಗಿ ನವೀನಶೋಭಾಸ್ಥೂಳೀಕೃತ ನಿರ್ವಾಣ ಸ್ಥಳಮನೆಯ್ದಿ

ನಿರ್ವಾಣಶ್ರೀವಿವಾಹೋತ್ಸವದೊಳೆಸೆವ ನಾನಾಪ್ರಕಾರಪ್ರಶೋಭಾಶ
ಪೂರ್ವಂ ತಾನಾದ ವೇಳೀವಳಯದ ತೆಱದಿಂ ತೋರ್ಕೆವೆತ್ತಿರ್ದ ಭಾಸ್ವ
ನ್ನಿರ್ವಾಣಸ್ಥಾನಮಂ ನೋಡುವುದು ಜಯಜಯೋಚ್ಚಾರಣಂಗೆಯ್ವುತುಂ ಬಂ
ದುರ್ವೀಶಂ ಮೌಲಿಚೂಡಾಮಣಿಕಿರನದಿನಾ ಭೂಮಿಯಂ ಬಣ್ಣವಿಟ್ಟಂ        ೩೭೫

ವ : ಇಂತು ಸಾಷ್ಟಾಂಗಪ್ರಣತನಾದಿಂಬಳಿಯಮೆಳ್ದು ಕೈಗಳಂ ಮುಗಿದು ನೊಸಲ್ಗೆತಂದು

ನಿನ್ನಂತೆ ಪಂಚಕಲ್ಯಾ
ಣೋನ್ನತಿಯಂ ತಾಳ್ದುವಧಿಕಸಾಮರ್ಥ್ಯಮನಿ
ತ್ತೆನ್ನನುದ್ಧರಿಸು ದುಃಖಾ
ಪನ್ನನನೀ ಭವದಿನಿಂತು ಧರ್ಮಜಿನೇಂದ್ರಾ       ೩೭೬

ಧಾತ್ರೀಭೂತಜಗತ್ತ್ರಯಾಧಿಪತಿಕ ಶ್ರೀಧರ್ಮತೀರ್ಥೇಶ್ವರ
ಸೋತ್ರೈಕಾಲಯದೇವ ನೀನೆನಗೆ ಮಾಡತ್ಯಂತಕಾರುಣ್ಯದಿಂ
ಧಾತ್ರೀಸಂಸ್ತುತಿಪಾತ್ರಮಪ್ಪ ಘನಸಮ್ಯಗ್ದರ್ಶನಜ್ಞಾನ ಚಾ
ರಿತ್ರಶ್ರೀಯುಮನುತ್ತರೋತ್ತರ ಯಶಶ್ಶ್ರೀಯಂ ಸುಖಶ್ರೀಯುಮಂ೩೭೭

ವ : ಎಂದು ಕೀರ್ತಿಸಿಯುಮರ್ಥಿಸಿಯುಂ ಧರ್ಮನಾಥತೀರ್ಥನಾಥನ ಮೂರ್ತಿಧ್ಯಾನಮಂ ಭಾವಿಸಿ ನಾಮಸ್ಥಾಪನಂಗೆಯ್ದು

ಪರಿಮಳಜಳದಿಂದಂ ಕುಂಕುಮಾರಂಜನಾಬಂ
ಧುರಮಳಯಜದಿಂದಂ ತಂಡದೊಳ್ ಪುಂಜದಿಂದಂ
ಪರಿಪರಿಯಲರಿಂದಂ ಚಾರುನೈವೇದ್ಯದಿಂದಂ
ವರಮಣಿಮಯರಾಜದ್ದೀಪಿಕಾಶ್ರೇಣಿಯಿಂದಂ  ೩೭೮

ಸರಳತರಳಧೂಮಸ್ತೋಮವದ್ಧೂಪದಿಂದಂ
ಸುರುಚಿರಕದಳೀ ಜಂಬೀರನಾರಂಗಚೋಚಾ
ದ್ಯುರುತರಫಳದಿಂದಾರಾಧನಂಗೆಯ್ದನಾ ಭೂ
ವರತಿಳಕನುದಾತ್ತಸ್ಥಾನಮಂ ಭಕ್ತಿಯಿಂದಂ      ೩೭೯

ವ : ಇಂತು ವಿಶಿಷ್ಟಾಷ್ಟವಿಧಾರ್ಚನಾದ್ರವ್ಯದಿಂದಾ ಧರ್ಮನಾಥಸ್ವಾಮಿ ಕರ್ಮಕ್ಷಯಂಗೆಯ್ದು ತಾಣಮನರ್ಚಿಸಿ ಪೊಡವಟ್ಟು ಪೊಗಳ್ದು ನಿಖಿಳಕರ್ಮ ಬಾಧಾನಿರ್ಮೋಚನಕ್ಕಿದು ಲಕ್ಷ್ಮರಕ್ಷೆಯಿಂದುಳಿದ ರಕ್ಷೆಯನಂಟಂಟು ನೊಸಲೊಳ್ ಬೊಟ್ಟಿಟ್ಟು ಮೆಯ್ಯೊಳೆಲ್ಲಂ ಪೂಸಿಕೊಂಡು ಪಾಡಿಯಾಡಿ ವಿವಿಧಪ್ರಕಾರ ನೂತನಬ್ರತಾ ರೋಪಣಮಂ ನೆಗಳ್ದು

ಪಲವು ಜೈನಾಗ್ರಹಾರಂ
ಗಳನಾಗಳ್ ಕೊಟ್ಟನಲ್ಲಿ ರತ್ನತ್ರಯಮಂ
ಜುಳ ಜೈನೋಪಾಧ್ಯಾಯರ
ಬಳಗಕ್ಕೆ ಹಿರಣ್ಯಕಾದಿ ಧಾರಾಪೂರ್ವಂ            ೩೮೦

ವ : ಸುವರ್ಣ ವಸ್ತ್ರಪಿಲಾದ್ಯನೇಕವಿಧ ನೈಮಿತ್ತಿಕದಾನಮಂ ನೃಪಾಳೋತಮಂ ಕೈವಂದ ಕಲ್ಪವೃಕ್ಷಮೆಂಬಂತೆ ನಿರ್ವರ್ತಿಸಿ ಮತ್ತಂ ಬೀಳ್ಕೊಂಡು ಕಿಱಿದಂತರಂ ಪಾದ ಮಾರ್ಗದಿಂ ಪೋಪವಸರದೊಳ್

ಇವರಿಗಿದುತ್ಸೇಧಂ ಮ
ತ್ತಿವರಿಗಿದೀ ವರ್ನಮೆಂಬ ನಿಯಮಂ ಬಿಡದೊ
ಪ್ಪುವ ಜಿನಬಿಂಬಂಗಳನಭಿ
ನವರತ್ನಮಯಂಗಳಂ ನಿರೀಕ್ಷಿಸಿ ನರಪಂ           ೩೮೧

ವ : ಭರತ ಸಗರಾದಿ ಚಕ್ರವರ್ತಿಗಳವಸರ್ಪಣದೆ ಕಡೆಯಕಾಳದೊಳಪ್ಪ ಚತುರ್ವಿಂಶ ತೀತೀರ್ಥಂಕರರ ಸ್ವರೂಪವನೋತ್ಸೇಧಮಂ ಜ್ಞಾನರ್ಧಿಸಂಪನ್ನರಪ್ಪ ಗಣಧರ ದೇವರಿಂ ತಿಳಿದಾ ಪರಿಯೊಳ್ ಮುನ್ನಮೆ ತತ್ಪರ್ವತೋಪತ್ಯಕದೊತ್ತಿನೊಳ್ ಮಾಡಿಸಿದ ವಿಶಾಳಕಳಧೌತ ಕಳಧೌತಮಯ ಚೈತ್ಯಾಲಯದೊಳ್ ಪಂತಿಗೊಂಡು ಪೊಳೆವ ತಜ್ಜಿನ ಪ್ರತಿಮೆಗಳಂ ಕಂಡು ಮನಂಗೊಂಡಲ್ಲಿಗೆ ಪೋಗಿಯಪವರ್ಗಸುಖಸಮುಪಾರ್ಜನೋನ್ಮುಖಂ ವರಧರ್ಮಭೂಪನವಕ್ಕಭಿಮುಖತೆಯನೆಯ್ದಿ ನಿಂದು ಸಮಾರಾಧನಂಗೆ ಯ್ವುತ್ತುಂ ಮಂಗಳಸ್ತೋತ್ರಮುಖರಮುಖನಾಗಿ

ಆದಿಪರಮೇಶ್ವರಂ ಮೊದ
ಲಾದಾತಂ ವರ್ತಮಾನಜಿನರಿಂಗೀತನ
ನಾದಿಯೆನಿಸಿರ್ದೊಡಂ ತಾ
ನಾದರದಿಂ ಕೊಡುಗೆ ನಮಗೆ ಹಿತಮಂ ನುತಮಂ            ೩೮೨

ಬಿಡದದ್ವಿತೀಯವಿಭವ
ಕ್ಕೊಡೆಯಂ ತಾನಾಗಿಯುಂ ದ್ವಿತೀಯಕನೆಂಬೀ
ನುಡಿಯಂ ಪಡೆದಜಿತಜಿನಂ
ಸಡಗರಮಂ ಕಿಡದುದಂ ದಲೊಡರಿಸುಗೆಮಗಂ  ೩೮೩

ಸಂಭವಿಸುವುದಮೃತಸುಖಂ
ಸಂಭವಜಿನನಿಂ ತೃತೀಯನಿಂದೆಮಗೆ ಕರಂ
ಜಂಭಾರಿಮಕುಟತಟಗತ
ಶುಂಭನ್ಮಣಿಕಿರಣರಂಜಿತಾಂಘ್ರಿಕನಿಂದಂ           ೩೮೪

ವಂದಿಸುತಮಿರ್ಪೆನಾನಭಿ
ನಂದನ ಜಿನನಾಥನಂ ಸನಾತನ ಪರಮಾ
ನಂದಮಯರೂಪನಂ ನಲ
ವಿಂದಂ ನಾಲ್ಕನೆಯ ತೀರ್ಥಕರನಂ ವರನಂ        ೩೮೫

ಸುಮತಿಜಿನನಾಥನಂ ಪಂ
ಚಮತೀರ್ಥಂಕರನನನುದಿನಂ ಪೂಜಿಸುವೆಂ
ಕ್ರಮನತಜನತಾಕಲ್ಪ
ದ್ರುಮನಂ ಸನ್ಮತಕುಮುದ್ವತೀಚಂದ್ರಮನಂ    ೩೮೬

ಪದ್ಮಪ್ರಭಜಿನನಂ ಗುಣ
ಸದ್ಮನನಾಱನೆಯ ತೀರ್ಥನಾಥನನುಭಯೀ”ಪದ್ಮಾಲಿಂಗಿತ ತನುವಂ
ಪದ್ಮನನಾರಾಧಿಪೆಂ ಸುಪದ್ಮೇಕ್ಷಣನಂ            ೩೮೭

ನೆನೆವೆಂ ಸುಪಾರ್ಶ್ವಜಿನನಂ
ಮನಮೊಲ್ದೇಳನೆಯ ತೀರ್ಥಂನಾಯಕನಂ ನೂ
ತನಬೋಧಮಯಾತ್ಮಕನಂ
ಕನದುರುಮಣಿನಿಚಯಖಚಿತಹರಿವಿಷ್ಟರನಂ     ೩೮೮

ಚಂದ್ರಪ್ರಭಜಿನನಾಥನ
ನಿಂದ್ರಸ್ತುತನಂ ನಿರಂತರ ಧ್ಯಾನಿಸುವೆಂ
ಸಂದಷ್ಟಮತೀರ್ಥಂಕರ
ನಂ ದಿನಕರಕೋಟಿದೀಪ್ಯಮಾನಪ್ರಭನಂ           ೩೮೯

ನವಮಜಿನಾಧೀಶ್ವರನಂ
ನವಮಂದಾರಪ್ರಸೂನವರ್ಷಣಶೋಭಾ
ಪ್ರವರನನಭಿವರ್ಣಿಸುವೆಂ
ದಿವಿಜಸ್ತುತ ಪುಷ್ಪದಂತಪರಮೇಶ್ವರನಂ        ೩೯೦

ಪತ್ತನೆಯ ತೀರ್ಥನಾಥನ
ನುತ್ತಮಶೀತಳಜಿನೇಶನಂ ಚಿಂತಿಸುವೆಂ
ಸುತ್ತಿರ್ದ ದುಃಖತಾಪನಿ
ವೃತ್ತಿನಿಮಿತ್ತಂ ಕೃಪಾಬ್ಧಿವರ್ಧನವಿಧುವಂ       ೩೯೧

ಶ್ರೇಯಾಂಶ ಜಿನೇಶ್ವರನನ
ಮೇಯಗುಣಾಸ್ಪದನನರ್ಥಿಯಿಂ ಸ್ತುತಿಯಿಸುವೆಂ
ಸಾಯದ ಹುಟ್ಟದ ಸುಖದೊಂ
ದಾಯಪರಿಪ್ರಾಪ್ತಿಗಾಗಿಯೇಕಾದಶನಂ            ೩೯೨

ಶ್ರೀವಾಸುಪೂಜ್ಯಜಿನನಂ
ದೇವಂ ಮಹಿಮಾವಿಶೇಷಭಾಭಾಸುರನಂ
ಭಾವಿಸುವೆಂ ದ್ವಾದಶನಂ
ಕೇವಳಬೋಧಪ್ರಭಾವಲಾಭನಿಮಿತ್ತಂ೩೯೩

ಪದಿಮೂಱನೆಯ ಜಿನಂ ಸ
ಮ್ಮದಮಂ ನಮಗೀಗೆ ವಿಮಳತೀರ್ಥಾಧೀಶಂ
ವಿದಿತಜಗತ್ತ್ರಯಭಾವಾ
ಭ್ಯುದಯಸ್ಥಿತಿಕಂ ವಿಶಿಷ್ಟವಿಮಳವಿಬೋಧಂ   ೩೯೪

ಅನಂತಚುತಷ್ಟಯಯುತನ
ನನಂತಜಿನಾಧೀಶನಂ ಚತುರ್ದಶನಂ ಪ
ರಿಚಿಂತಿಸುವೆನೆನ್ನಮನದೊ (?)
ಳನಂತುಸುಖಾಸ್ಪದಲಾಭಮಂ ಬಯಸಿ ಕರಂ    ೩೯೫

ಧ್ಯಾನಿಸುವೆಂ ಧರ್ಮಜಿನಾ
ಧೀಶನನೀ ಪಂಚದಶಸುತೀರ್ಥಾಧಿಪನಂ
ಮಾನಿತಧರ್ಮಸ್ಥಿತಿಯನ
ನೂ [ನಂ ದಲ್] ಪ್ರಭವಿಸುತ್ತುಮಿರ್ದನನೊಲವಿಂ           ೩೯೬

ಶಾಂತಿಜಿನಾಧೀಶ್ವರನಂ
ಚಿಂತಿಸಿ ಮನದಲ್ಲಿ ನಿಲಿಸಿ ಲಾಲಿಸುತಿಪ್ಪೆಂ
ಕಂತುಮಾನಾದ್ರಿಕುಲಿಶನ
ನಂತಕವಿಧ್ವಂಸದಕ್ಷನಂ ಷೋಡಶನಂ   ೩೯೭

ವರಕುಂಥುನಾಥನಂ ಬಂ
ಧುರಮಹಿಮಸನಾಥನಂ ಪರಿಷ್ಕೃತಿಗೆಯ್ವೆಂ
ಪಿರಿದುಂ ಪದಿನೇಳನೆಯನ
ನುರುತರಕಾರುಣ್ಯಪುಣ್ಯಪಣ್ಯಾಪಣನಂ          ೩೯೮

ಅರಜಿನವರನಂ ಪರಿಹೃತ
ಧರನಂ ಹೃದಯದೊಳೆ ಧರಿಸಿಕೊಂಡಾಡುವೆನಾ
ದರದಿಂ ಪದಿನೆಂಟನೆಯನ
ನುರುಗುಣಗಣಮಣಿಪಯೋಧಿಯಂ ವೃಷನಿಧಿಯಂ       ೩೯೯

ಮಲ್ಲಿಜಿನಂ ಜಗತ್ತ್ರಿತಯನ
ವಲ್ಲಭನೇಕೋನವಿಂಶತೀಶಂ ಧೀಶಂ
ಫುಲ್ಲಶರಬಾಣಭಂಜನ
ನುಲ್ಲಾಲಿತಮುಕ್ತಿಸುಖಮನೀಗೆಮಗನಿಶಂ       ೪೦೦

ಮುನಿಸುವ್ರತನಂ ವಿಂಶತಿ
ಜಿನಪತಿಯಂ ಭಕ್ತಿಯಿಂದೆ ಭಾವಿಸುತ್ತಿರ್ಪೆಂ
ವಿನುತಾನೇಕಾಂತ ಶ್ರೀ
ಗಿನನಂ ಮುನಿಸುವ್ರತಾದಿವಂದಿತಪದನಂ          ೪೦೧

ನಮಿಜಿನರಾಜನನರ್ಚಿಪೆ
ನಮಳಗುಣಾಕರನನೇಕವಿಂಶತಿತಮನಂ
ಸಮವಸರಣಾದಿ ವಿಭವನ
ನಮಮ ಮಹಾದುರಿತತಿಮಿರಭಾಸ್ಕರಕರನಂ    ೪೦೨

ನೇಮಿನಾಥಂ ದಯಾರಥ
ನೇಮಿ ದ್ವಾವಿಂಶತೀರ್ಥಕರನಖಿಳಜಗ
ತ್ಸ್ವಾಮಿ ನಮಗೀಗೆ ಸುಖಮಂ
ಕಾಮಿತಮಂ ಕಾಮಿತಾಮರಸವನಸೋಮಂ      ೪೦೩

ವರ ವಿಜಯಪಾರ್ಶ್ಚಜಿನನಂ
ಪರಮನನಿಪ್ಪತ್ತಮೂಱನೆಯ ತೀರ್ಥಾಧೀ
ಶ್ವರನಂ ಪರಿಪೂಜಿಸುವೆಂ
ಶರಣಾಗತಸಕಳಭವ್ಯರಕ್ಷಾಮಣಿಯಂ  ೪೦೪

ಶ್ರೀವರ್ಧಮಾನಜಿನಪನ
ನಾವಗಮಿಪ್ಪತ್ತನಾಲ್ಕನೆಯ ಪರಮಾರ್ಹ
ದ್ದೇವನನಾರಾಧಿಸುವೆಂ
ಕೈವಲ್ಯಸುಖಪ್ರದಾಯಕನನತಿಮುದದಿಂ         ೪೦೫

ವರಕೈಳಾಸದೊಳಾದಿನಾಥಜಿನಪಂ ಚಂಪಾಪುರೀಸ್ಥಾನದೊಳ್
ಪರಮಶ್ರೀಯುತವಾಸುಪೂಜ್ಯಜಿನಪಂ ತಳ್ತೂರ್ಜಯಂತ್ರಾದಿಯೊಳ್
ಸುರರಾಜಾರ್ಚಿತ ನೇಮಿನಾಥಜಿನಪಂ ಪಾವಾಪುರೀಸ್ಥಾನದೊಳ್
ಕರುಣಾವಾರಿಧಿ ವರ್ಧಮಾನಜಿನಪಂ ಗೆಲ್ದಿಕ್ಕಿದರ್ ಕರ್ಮಮಂ       ೪೦೬

ಉಳಿದಿಪ್ಪುತ್ತುಜಿನೇಶ್ವರರ್ ತಡೆಯದೀ ಸಮ್ಮೇದಶೈಲಾಗ್ರದೊಳ್
ಖಳಕರ್ಮಕ್ಷಯಮಂ ವಿನಿರ್ಮಿಸಿ ಮಹಾಮೋಕ್ಷಕ್ಕೆ ಸಂದಿರ್ದವರ್
ನಲವಿಂದಂ ಸಲುತಿರ್ದವರ್ ಸಲೆ ಸಲಲ್ವೇಡಿರ್ದವರ್ ಕೂಡೆ ನಿ
ರ್ಮಳರೂಪರ್ ನಮಗೀಗೆ ಕೂರ್ತು ವಿಜಯಶ್ರೀಯಂ ನಿಜಶ್ರೀಯುಮಂ         ೪೦೭

ಭರದಿಂದೀ ಸ್ತವನಂಗಳಂ ಪೊಗಳ್ವ ವರ್ಗಕ್ಕೈಹಿಕಾಮುತ್ರಿಕೋ
ದ್ಧುರಸೌಖ್ಯಂ ಕ್ರಮದಿಂ ವಿರಾಜಿಸುವತುಮಿರ್ದಿಪ್ಪತ್ತನಾಲ್ವರ್ ಜಿನೇ
ಶ್ವರರಂ ಪೂಜಿಸಿ ಮೆಚ್ಚಿ ನುತಿಗೆಯ್ದು ಧ್ಯಾನಿಸುತ್ತಿರ್ಪ ಭವ್ಯ
ವರವರ್ಗಕ್ಕೆ ನಿರಂತರಂ ಸಮನಿಕುಂ ಭದ್ರಂ ಶುಭಂ ಮಂಗಳಂ          ೪೦೮

ವಚನ : ಇಂತತ್ಯಂತಭಕ್ತಿಯಿಂ ಭೂತಳಕಾಂತಂ ವರ್ತಮಾನಚತುರ್ವಿಂಶತಿ ತೀರ್ಥಂಕರರಂ ಸ್ತುತಿಗೆಯ್ದು ವಂದಿಸಿ ಬೀಳ್ಕೊಂಡು ಬಸದಿಯಂ ಪೊಱಮಟ್ಟು ಕಿಱಿದೆಡೆ ಯಂ ನಡೆದುಪೋಗಿ ಬಳಿಯಂ ಸಕಳಚಾತುರ್ದಂತಬಲಮೆಲ್ಲಮಂ ಕೂಡಿಕೊಂಡು

ಸೊಕ್ಕಿದ ಪಟ್ಟವರ್ಧನಗಜೇಂದ್ರಮನೇಱಿ ನರೇಂದ್ರನಂದು ನಾ
ಲ್ದಿಕ್ಕಿನೊಳಿರ್ದು ಚಾಮರಮನಿಕ್ಕಿದುದುದ್ಘವಿಳಾಸಿನೀಜನಂ
ಪಕ್ಕದ ವಂದಿಗಳ್ ಬಿಡದೆ ಬಣ್ಣಿಸಿ ಭಾಪುರೆ ಭಾಪು ಭಾಪೆನಲ್
ಮಿಕ್ಕ ವಿಭೂತಿಯಿಂ ತಳರ್ದು ತಾಂ ನಡೆಗೊಂಡನನೂನಸೈನ್ಯಕಂ     ೪೦೯

ವ : ಇಂತು ನೂರ್ಮಡಿ ಪೆರ್ಮೆವಡೆದ ವರಧರ್ಮಭೂಪಾಲನನ್ವಯರಾಜ ಧಾನಿಯಾದ ರತ್ನಪುರಕ್ಕಭಿಮುಖನಾಗಿ

ನಾನಾಳಂಕಾರಸಾರೋಜ್ವಳಮಣಿಘೃಣಿಯಿಂದಂ ತಳಿರ್ತಂತಿರಾದಾ
ಸ್ಥಾನಂ ಚೆಲ್ವಾಗಲಾಕಾಶದ ತೆಱಪುಱೆ ಪೂತಂತಿರೊಪ್ಪಲ್ ಸಿತಚ್ಛ
ತ್ರಾನೀಕೋಲ್ಲಾಸದಿಂದಂ ಧರಣಿ ತೆಱಪಿದಿಲ್ಲೆಂಬಿನಂ ತೋಱಲೆಲ್ಲಾ
ಸೇನಾಭಾರಕ್ಕೆ ಬಂದಂ ಪುದಿಯೆ ಸಕಳಮಂ ಮಂಗಳಾತೋದ್ಯನಾದಂ            ೪೧೦

ವ : ಅಂತಾ ಸೋಮಪುವಡೆದ ಸಂಪದಂಬೆರಸಿ ಬಂದು

ಥಳಥಳಿಸುತ್ತುಮಿರ್ಪ ಮಣಿತೋರಣದೋರಣೆಯಿಂದೆ ಶೋಭೆಯಂ
ತಳೆದು ಸಮಂತು ಬಾಜಿಸುವ ಬದ್ದವಣಂಗಳಿನೊಪ್ಪುವೆತ್ತು ಮಂ
ಜುಳಮೆನೆ ಕಟ್ಟಿದೊಳ್ಗುಡಿಗಳೋಳಿಗಳಿಂ ಪೊಳೆಯುತ್ತುಮಿರ್ಪ ಮಂ
ಗಳಮಯಮಾದ ರತ್ನಪುರಮಂ ಪುಗುತಂದನಿಳಾತಳಾಧಿಪಂ          ೪೧೧

ವ : ಇಂತು ನಿಜರಾಜಧಾನಿಯಂ ಪೊಕ್ಕು ವಿಜಯವೈಜಯಂತಿಗಳ ಸಂತತಿ ತಿಂತಿಣಿಗೊಂಡು ಸಂದಣಿಸಿ ಮುಂದೆ ನಡೆಯೆ ಸೂಳುಸೂಳುವಡೆದೂದುವ ಬಿರುದಿನ ಕಹಳೆಗಳ ಬಹಳಕೋಳಾಹಳಮೇಳಾಪಕದೊಡನೊಡನೆ ಪದನಱಿದು ಸೂಳೈಸುವ ಸಮುತ್ತಾಳ ನಿಸ್ಸಾಳ ನಿರ್ಘೋಷಣಂ ದಿಕ್ಕುಳಮಂ ಮೂವಳಸುವಳಸಲುತ್ತುಂಗ ಶೃಂಗಾರ ಭಂಗಿಯ ನಂಗೀಕರಿಸಿದಂಗಡಿಗೇರಿಯೊಳ್ ಬರುತ್ತುಮಿರ್ಪಾಗಳ್

ಇನಿತೊಂದಾಶ್ಚರ್ಯರೂಪಂ ಬಗೆವಡೆ ಮದನಂಗುಂಟೆ ಮೇಣ್ ದೇವರಾಜಂ
ಗಿನಿತೊಂದಾಶ್ಚರ್ಯ ಸಂಪದ್ವಿಭವಮಹಿಮೆ ಪೇಳುಂಟಿ ಮೇಣ್ ಸೂರ್ಯದೇವಂ
ಗಿನಿತೊಂದಾಶ್ಚರ್ಯಮಂ ತೇಜಃಪ್ರಸರದೆಸಕಮೇನುಂಟೆ ಪೇಳೆಂದು ತಮ್ಮೊಳ್
ಜನಮೆಲ್ಲಂ ಕೂಡೆ ಮಾತಾಡುತುಮವನಿಪನಂ ನೋಡುತಿರ್ದತ್ತದಾದಂ       ೪೧೨

ವ : ಎಂದು ನುಡಿವ ಪೌರರ ನುಡಿಯನಾಲಿಸುತ್ತು ಲೀಲಾವಿನೋದದಿಂ ದಿಕ್ಕೆಲನಂ ನೋಡುತ್ತುಂ ರಾಜಮಂದಿರಮಂ ಮುಟ್ಟೆವಂದು

ರಮಣೀಯಾಕಾರ ಕಾಂತಾತತಿ ಪಿಡಿದು ಬರಲ್ ಮುಂದೆ ಸತ್ಪಲ್ಲವೋಲ್ಲಾ
ಸಮನೆಯ್ದಾಂತಿರ್ದುದಂ ಕನ್ನಡಿಕಳಶಮನಾ ವೃದ್ಧರೆಲ್ಲಂ ನೃಪಾಳೋ
ತ್ತಮನಂ ಕಾಣ್ಬರ್ಥಿಯಿಂದಿಂದಿದಿರ್ವರಲವರಂ ನೋಡುತುಂ ನಾಡೆಯುಂ ಸಂ
ಭ್ರಮದಿಂ ಕೈಮಿಕ್ಕು ಚೆಲ್ವಂಪಡೆದರಮನೆಯಂ ಪೊಕ್ಕನುತ್ಸಾಹದಿಂದಂ       ೪೧೩

ವ : ಆ ಪಿರಿಯ ಸಿರಿಗೆ ಕರುವೆನಿಸಿ ಗರಗರಿಕೆವಡೆದರಮನೆಯನರಸಂ ಪೊಕ್ಕು ರಾಜಾಂಗಣದೊಳ್ ನಿಂದು ವಿಜಯಗಜದಿಂದಿಳಿದು ಮುಗಿವ ಕೈಯಂ ನೊಸಲ್ಗೆ ತಂದರಸುಮಕ್ಕಳಂ ತಂತಮ್ಮ ನಿಳಯಕ್ಕೆ ಬೀಳ್ಕೊಟ್ಟು ಕಳಿಪಿ ಮಜ್ಜನಭೋಜನ ವ್ಯಾಪಾರಮಂ ತೀರ್ಚಿ ಸುಖದಿನಿರ್ದು

ಪೊಂಗಳಸಂಗಳಿಂ ಗಗನಮಂ ಪರಿಚುಂಬಿಸುತಿರ್ದ ಕೋಟಿಕೂ
ಟಂಗಳಿನೊಪ್ಪಮಂ ಪಡೆದ ಬೆಳ್ಳಿಯ ಮಾಟದ ಚೈತ್ಯಗೇಹಮಂ
ತುಂಗಮೆನಿಪ್ಪುದಂ ನೆಱೆಯ ಮಾಡಿಸಿದಂ ವರಧರ್ಮಭೂಮಿಪಂ
ಪಿಂಗದೆ ಮಾಡೆ ನುಣ್ಬೆಡಗು ದಿಕ್ಕುಗಳಂ ಪೊಱೆಯಿಟ್ಟರೆಂಬಿನಂ    ೪೧೪

ಸಲೆ ನಾಲ್ವತ್ತೈದು ಚಾಪೋನ್ನತಿಮಿನಿಯತೋತ್ಸೇಧದಿಂ ನಾಡೆಯುಂ ಕ
ಣ್ಗೊಳಿಪನ್ನಂ ಧರ್ಮನಾಥಪ್ರತಿಮೆಯನತಿಶಾಯಿ ಪ್ರಭಾಭಾರದಿಂದಂ
ಪೊಳಪೇಱುತ್ತಿರ್ಪಿನಂ ಕಾಂಚನಮಯಮನದು ಪೂರ್ವದಾಕಾರದೊಂದ
ಗ್ಗಳಮೆಂತುಂಟಂತೆ ತಾಂ ಮಾಡಿಸಿದನೆಸೆಯಲೆಂಟುಂ ಮಹಾಪ್ರಾತಿಹಾರ್ಯಂ೪೧೫

ವ : ತದನಂತರಂ

ಕೂಡೆ ಜಗಕ್ಕೆ ಚೋಜಿಗಮನಾಗಿಸುತುಂ ಜನಮೆಲ್ಲಮೆಯ್ದೆ ಕೊಂ
ಡಾಡುವಿನಂ ಮಹಾವಿಭವದಿಂದಮೆ ಧರ್ಮಜಿನಪ್ರತಿಷ್ಠೆಯಂ
ಮಾಡಿಸಿ ಬೇಡಿದರ್ಗಿದೆ ಬೇಡಿತನಾಗಳೆಕೊಟ್ಟ ಧರ್ಮಮಂ
ನಾಡೊಳಗೆಲ್ಲಿಯುಂ ಪ್ರಭವಿಸುತ್ತೆಸೆದಂ ವರಧರ್ಮಭೂಭುಜಂ     ೪೧೬

ವ : ಅದಲ್ಲದೆಯುಂ

ಪಿರಿದುಂ ದಿಕ್ಕುಂಭಿ ಕುಂಭಸ್ಥಳದೊಳಧಿಕ ಸಿಂಧೂರರಾಗಪ್ರಭಾಮಂ
ಜರಿಯೆಂಬಂತೊಪ್ಪಿದತ್ತಾತನ ಪರಿವಿಲಸ್ತೇಜದೊಂದೇಳ್ಗೆಯಾ ದಿ
ಕ್ಕರಿ ಸರ್ವಾಂಗಂಗಳೊಳ್ ಪೂಸಿದ ಪೊಸತೆನಿಪೊಳ್ಶಂಖಮೆಂಬಂತೆ ಚೆಲ್ವಂ
ಧರಿಸುತ್ತಿರ್ದತ್ತು ಮತ್ತಾತನ ಸಕಳಜನಾನಂದ ಕೃತ್ಕೀರ್ತಿಪೂರಂ     ೪೧೭

ವ : ಆ ಕಾಲದೊಳ್

ಜನಮನಿತುಂ ನಿರಂತರ ಸಮಸ್ತಸುಖಾನುಭವಂಗಳಿಂದೆ ತ
ಣ್ಣನೆ ತಣಿದೆಯ್ದೆ ತೂಗಲೊಱಗಿ ಸ್ಥಿರಮಾಗಿಯೆ ಬಾಳ್ವಿನಂ ಮಹಾ
ವನಿತಳರಾಜ್ಯಮೆಲ್ಲಮನಿದಂ ಪ್ರತಿಪಾಳಿಸಿದಂ ಸುಧರ್ಮದಿಂ
ವಿನುತ ಕಳಾಧಿಪಂ ಸಕಳಜೀವಕೃಪಂ ವರಧರ್ಮಭೂಮಿಪಂ           ೪೧೮

ವ : ಇಂತಖಿಳರಾಜಕ ರಾಜನ್ಯಕ ಮಾನ್ಯನುಂ ವದಾನ್ಯತಾವಿಭವಸಂಪನ್ನುಂ ಧನ್ಯನುಂ ಧರ್ಮನಾಥಮಹಾರಾಜತನೂಜನುಮೆನಿಪ ವರಧರ್ಮನೆಂಬ ಮಹಾರಾಜ್ಯಂ ದುಷ್ಟನಿಗ್ರಹಶಿಷ್ಟಪ್ರತಿಪಾಲನಾಪೂರ್ವಕಮಾಗಿ ಸುಖಸಂಕಥಾವಿನೋದದಿಂ ಸಾಮ್ರಾಜ್ಯ್ರ ಮನಾಳುತ್ತುಮಿರ್ದಂ

ನವರಸನವ್ಯಮಂ ಸುಜನಸೇವ್ಯಮನಾಮುದಿತ ಪ್ರಭವ್ಯಮಂ
ಕವಿಜನಭಾವ್ಯಮಂ ಪರಮಧರ್ಮಜಿನೇಶ್ವರ ಚಾರುಕಾವ್ಯಮಂ
ತವೆಯದ ಭಕ್ತಿಯಿಂ ನೆಱೆಯೆ ಮಾಡಿ ಸಮುಜ್ವಳಕೀರ್ತಿಯಂ ಸಮಂ
ತವನಿಯೊಳೆಯ್ದೆ ಬಾಹುಬಲಿಪಂಡಿತದೇವನಿದಂ ನಿಮಿರ್ಚಿದಂ       ೪೧೯

ಈ ಕಲಿಕಾಲದಲ್ಲಿ ಬುಧಸಂತತಿ ಮೆಚ್ಚಿ ಪೊಗಳ್ವಿನಂ ರಸೋ
ದೇಕದೊಳೊಂದಿ ಧರ್ಮಜಿನನಾಥಪುರಾಣಮನೊಲ್ದು ಪೇಳ್ವ ಶ
ಕ್ತೈಕನಿವಾಸ ಬಾಹುಬಲಿಪಂಡಿತದೇವನವೊಲ್ ಸುವಿದ್ಯೆಗಂ
ಲೋಕದೊಳಾವನೋ ನೆಱೆಯೆ ನೋಂತವನುನ್ನತಪುಣ್ಯದೇಳ್ಗೆಗಂ೪೨೦

ವರರತ್ನತ್ರಯದಿಂ ವಿರಾಜಿಸುವ ಗಂಭೀರಂ ದಲಾಗಿರ್ದ ಪೀ
ವರಮಾದುತ್ತಮಧರ್ಮನಾಥ ಚರಿತಾಂಭೋರಾಶಿಯಂ ಭಕ್ತಿಭಾ
ಸುರಬುದ್ಧಿಸ್ಥಿತಿಯೆಂಬ ಚೆಲ್ವಹಡಗಿಂದಂ ದಾಂಟಿ ಪೋದಂ ಸಮು
ದ್ಧುರ ಸಾಯಾತ್ರಿಕನೆಂಬಿನಂ ಭುಜಬಳಿಪ್ರಖ್ಯಾತ ಯೋಗೀಶ್ವರಂ    ೪೨೧

ಪರಮಾರ್ಥಭಾವಮಂ ಪಡೆ
ದುರುಸುಖದಿಂದಿರ್ದನೆಲ್ಲರುಂ ಪೊಗಳ್ವನ್ನಂ
ಪಿರಿದುಂ ವಿವೇಕಿಯೆನಿಪಂ
ವರವಸ್ತುಪರೀಕ್ಷೆಯಲ್ಲಿ ಭಾವಕಮುಖ್ಯಂ        ೪೨೨

ಅಸಹಾಯನಾಗಿ ಮಾಡಿದ
ನಸದೃಶಮೆನಿಪೀ ಪ್ರಬಂಧಮಂ ಭುಜಬಳಿಮುನಿ
ಯಸಹಾಯನಾಗಿ ನಿಶ್ಶ್ರೇ
ಯಸಮಂ ಜಿನನೆಂತು ಮಾಡದಂ ನಿಜವಸಮಂ   ೪೨೩

ಈ ಕೃತಿಯೊಳ್ ಜಿನಾಗಮರಹಸ್ಯಮನೆಯ್ದುಸಿರ್ವಲ್ಲಿ ಕೇಳನ
ಸ್ತೋಕಸುಖಾಸ್ತ್ರವಿದ್ಗುರುಗಳಂ ಪರತತ್ತ್ವವಿಭೇದ ಸಂಸ್ಥಿತ
ಪ್ರಾಕಟದಲ್ಲಿ ಪ್ರಜ್ಞಜನಮಂ ಬೆಸಗೊಳ್ಳದೆ ಬಲ್ಪಿನೇಳ್ಗೆಗಿಂ
ತಾಕರಮಾಗಿ ಬಾಹುಬಲಿದೇವನದೇನಸಹಾಯನಲ್ಲನೇ  ೪೨೪

ವಿಕಸಿತಪಂಕಜಂ ಸುಳಿವ ತೆಂಕಣ ತೆಂಬಲರಿಂಬು ಪೂರ್ಣಚಂ
ದ್ರಕಳೆ ನಿತಂಬಿನೀವಿಕೃತಿಭಾವಮಲರ್ಚಿಸಲಾರ್ಪುದೇ ಮಹಾ
ಧಿಕ ಕವಿಚಕ್ರವರ್ತಿಯ ಚಮತ್ಕೃತಕಾವ್ಯರಸಂ ಸಮಸ್ತ ಭಾ
ವಕಜನದಂತರಂಗಮನಲರ್ಚಿಸಿ ರಾಗದೆ ರಂಜಿಪಂದದಿಂ    ೪೨೫

ಶ್ರವಣಾನಂದದ ಪದ್ಯಮಂ ಪ್ರಿಯನೆನಿಪ್ಪಾವಂಗೆ ಪೇಳ್ವಂ ಸಮಂ
ತವನತ್ಯುನ್ನತ ಸಂಪದಂಬೆರಸಿ ಬಾಳ್ಗುಂ ಖ್ಯಾತನಾಗಿರ್ಕುಮಿಂ
ತವನೀಚಕ್ರದೊಳೆಯ್ದೆ ರೂಢಿವಡೆದೊಪ್ಪುತ್ತಿರ್ದುದಾಶ್ಚರ್ಯದಿಂ
ದವೆ ರಾಜತ್ಕವಿಚಕ್ರಿಯೊಂದಮೃತವಾಣಿತ್ವಂತು ಲೋಕೋತ್ತರಂ   ೪೨೬

ವರ ಸಮ್ಯಕ್ತ್ವಪ್ರಭಾವಸ್ಫುರಣದೊಳಧಿಚೂಡಾಮಣಿ ಪ್ರೀತವಿದ್ವ
ತ್ಪರಿಷತ್ಸದ್ಗೋಷ್ಠಿಯೊಳ್ ಭಾಳತಳನಯನಕಂ ಲೇಸನೊಂದಲ್ಲದೇನಂ
ಪರರೊಳ್ ಮಾತಾಡದಿಪ್ಪುತ್ತಮಗುಣನಿಳಯಂ ಭಾಪು ಸಾಮರ್ಥ್ಯಮಂ ಪೀ
ವರಮಂ ತಾಳ್ದಿರ್ದು ವಿಖ್ಯಾತಿಯನುಱೆ ಪಡೆದಂ ಚಾತುರೀಜನ್ಮಗೇಹಂ      ೪೨೭

ಬಲ್ಲವರೆಲ್ಲರುಂ ನೆರೆದು ಮಾನಸವೆಂಬೊರೆಗಲ್ಲ ಮೇಲೆ ಕೀ
ಳಲ್ಲದ ಮಾಳ್ಕೆಯಿಂದೊರೆದುನೋಡಿ ಪರೀಕ್ಷಿಸಿ ತಿದ್ದಿಕೊಟ್ಟ ಕುಂ
ದಿಲ್ಲದ ಮೌಕ್ತಿಕಸ್ಥಿತಿಯಿನೊಪ್ಪುವ ಕಾವ್ಯಸುವರ್ಣಮಾವಗಂ
ಪ್ರೋಲ್ಲಸಿತಾತಿ ಚಿತ್ರರಚನಂ ಶ್ರವಣಕ್ಕೆರಡಕ್ಕೆ ಭೂಷಣಂ೪೨೮

ಪೊಳೆಯುತ್ತುಮಿರ್ದುದೆನ್ನೀ
ವಿಳಸತ್ಕೃತಿಯಲ್ಲಿ ಷೋಡಶಾಶ್ವಾಸಂಗಳ್
ತೊಳಗುವ ಷೋಡಶಭಾವನೆ
ಗಳವೆಂತೊಪ್ಪುತ್ತುಮಿರ್ದವಾ ಜಿನಪತಿಯೊಳ್   ೪೨೯

ವಿಪುಳಪ್ರೌಢಪದಂಗಳಿಂ ಮೆಱೆದು ಚಿತ್ರಾರ್ಥಂಗಳಿಂದೊಂದಿ ಮ
ತ್ತುಪಮಾತೀತ ನವೀನಭಾವರಸದಿಂ ಚೆಲ್ವಾಗಿ ವಿದ್ಯಾಪ್ರಭಾ
ವಪರಂ ಬಾಹುಬಲಿವ್ರತೀಶನೊಲವಿಂದಂ ಪೇಳ್ದ ಸದ್ಧರ್ಮನಾ
ಥಪುರಾಣಂ ನೆಲೆಗೊಂಡು ನಿಲ್ಕೆ ಜಗದೊಳ್ ಚಂದ್ರಾರ್ಕತಾರಂಬರಂ೪೩೦

ಮನಮೊಲ್ದೋದುವ ಪೇಳ್ವ ಕೇಳ್ವ ಪುಳಕಂ ಮೆಯ್ದೋರ್ಪಿನಂ ಮೆಚ್ಚಿ ಲಾ
ಲನಮಂ ಮಾಳ್ಪ ಸಮಸ್ತಭವ್ಯನಿವಹಕ್ಕಂ ಧರ್ಮನಾಥಹ್ವಯಂ
ಜಿನನೀ ಸತ್ಕೃತಿನಾಯಕಂ ಪರಮಮುಕ್ತಿಶ್ರೀಮನೋವಲ್ಲಭಂ
ಘನಕಾರುಣ್ಯದಿ ಮಾಳ್ಕೆ ಮಂಗಳಮಹಾಶ್ರೀಯಂ ಯಶಶ್ಶ್ರೀಯುಮಂ         ೪೩೧

ಸ್ವಸ್ತಶ್ರೀ ಶಕವತ್ಸರಂ ಸಲೆ ಚತುಸ್ಸಪ್ತದ್ವಯೈಕಾಂಕವಿ
ನ್ಯಸ್ತಂ ನಂದನವರ್ಷದಲ್ಲಿ ಮಧುಮಾಸ ಶ್ವೇತಪಕ್ಷಾಷ್ಟಮೀ
ವಿಸ್ತಾರೀಕೃತ ಸೋಮವಾರದೊಳಿದಂ ಸಂಪೂರ್ಣಮಂ ಮಾಡಿದಂ
ಪ್ರಸ್ತುತ್ಯಂ ಪ್ರತಿಭಾಪರಂ ಭುಜಬಲಿಪ್ರಖ್ಯಾತಯೋಗೀಶ್ವರಂ        ೪೩೨

ಪಿರಿದುಂ ಸಂತೋಷಮಂ ತಾಳ್ದಿದನತಿಶಯವತ್ಕಾವ್ಯಮಂ ಮಾಡಿ ತೇಜ
ಸ್ಫುರಣಂ ವಿದ್ಯಾಸಮುದ್ರಾಮೃತಮಯಕಿರಣಂ ವಂದಿಮಂದಾರರೂಪಂ
ಸ್ಮರರೂಪಂ ನೀರಜಂ ಬಾಹುಬಲಿಸುಕವಿರಾಜಂ ವಿಪಶ್ಚಿತ್ಸಹಾಯಂ
ಧರಣೀಶೋಲ್ಲಾಲನೀಯಂ ಘನಗುಣನಿಲಯಂ ಚಾತುರೀಜನ್ಮಗೇಹಂ        ೪೩೩

ಗದ್ಯ : ಇದು ಸಕಳಭುವನಜನವಿನೂಯಮಾನ ಮಹಿಮಾಮಾನನೀಯ ಪರಮಜಿನ ಸಮಯ ಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವಪ್ರಸಾದ ಸಂಪಾದಪಾದನಿಧಾನ ದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಧರ್ಮತೀರ್ಥಕರ ನಿರ್ವಾಣಗಮನ ಪರಿವ್ಯಾವರ್ಣನಂ ಷೋಡಶಾಶ್ವಾಸಂ.