ಸೂಸುತ್ತುಂ ಸೌರಭಮಂ
ಲೇಸಂ ಮೆಯ್ಗೊಡರಿಸುತ್ತುಮಾಡಿಸುತುಂ ಧ್ವಜ
ರಾಶಿಗಳನೊಯ್ಯನೊಯ್ಯನೆ
ಬೀಸಿದುದನುಕೂಲಮಾಗಿ ಮಂದಸಮೀರಂ      ೩೧೧

ಸುತ್ತಂ ಯೋಜನದಗಲದೊ
ಳೆತ್ತಂ ತೃಣಧೂಳಿಕೀಟಕಂಟಕಶಿಲೆಗಳ
ಮೊತ್ತಮದಿಲ್ಲದ ತೆಱದಿಂ
ಬಿತ್ತಿರಿಸಿದರಾ ಮರುತ್ಕುಮಾರರ್ ನೆಲನಂ       ೩೧೨

ಚಳೆಯಂಗೊಟ್ಟರ್ ತನ್ಮಹಿ
ತಳದೊಳ್ ಕರ್ಪೂರಸಾರಕುಂಕುಮವಿಳಯ
ನ್ಮಳಯಜರಸಮಿಶ್ರಿತದಿಂ
ಜಳದಿಂದಂ ಸ್ತನಿತರೆಂಬ ಕುವರರ್ ನಲವಿಂ       ೩೧೩

ಕನ್ನಡಿಯಂತಿರೆ ಥಳಥಳಿ
ಪುನ್ನತಿಯಂ ತಳೆದು ರತ್ನಮಯಭೂಮಿತಳಮ
ಚೆನ್ನನೆನಿಸಿತ್ತು ಸುತ್ತಂ
ಸನ್ನುತಪರಿಸೂತ್ರಮಾಗಿ ಪರಿರಮಣೀಯಂ      ೩೧೪

ಸರ್ವರ್ತುಪುಷ್ಪಫಳಮಂ
ನಿರ್ವಹಿಸಿ ದಶಾಭಿಕೋಪಶಾಖಾವಳಿಯಿನ
ಖರ್ವಘನವೃಕ್ಷತತಿಯಿನ
ಗುರ್ವಾದುದು ಪೊಱಗೆ ಬಳಸಿದುಪವನಷಂಡಂ  ೩೧೫

ತೋರಮಾಗಿರ್ದ ತೆನೆಗಳ
ಭಾರದಿನುಱೆಬಾಗಿ ಬೀಗಿ ಬೆಳೆದ ವ್ರೀಹಿ
ಸ್ಫಾರಸಸ್ಯಂಗಳಿಂದಂ
ಧಾರಿಣಿ ರೋಮಾಂಚಭರಮನಾಂತಂತೆಸೆಗುಂ    ೩೧೬

ಪರೆದಿರ್ದಖಿಳಸುರಾಸುರ
ಪರಿಕರಮಂ ಶ್ರೀವಿಹಾರದುತ್ಸವವಿಭವ
ಕ್ಕಿರದೆ ಕರೆಯುತ್ತುಮಿರ್ಪಮ
ರರ ಕಳಕಳನಿನದಸಂಭ್ರಮಂ ಕರಮೆಸೆಗುಂ         ೩೧೭

ನೆಱೆಪತ್ತುವಿಟ್ಟು ತಮ್ಮೊಳ್
ತಱಿಸಂದಭಿಜಾತಿವೈರಮಂ ಮಿತ್ರತ್ವ
ಕ್ಕೆಱೆವಟ್ಟೆನಿಸಿದುದಾಗಳ್
ತುಱುಗಿರ್ದು ಸಮಸ್ತತಿರ್ಯಗಾಧಿಕಜೀವಂ        ೩೧೮

ಪರೆದೋಡೆ ತಮಂ ಕಿಡೆ ರಜ
ಮುರುಪ್ರಸ್ನನಂ ದಲಾಗಿ ತೋಱಿಕೆವೆತ್ತುದ
ದಿರದೆ ಪತ್ತುಂ ದಿಗಂತಂ
ಪರಮಮುನೀಶ್ವರ ಮನಃಪ್ರಚಾರದ ತೆಱದಿಂ    ೩೧೯

ವ : ಮತ್ತಂ ಲೋಕತ್ರಯೈಕ ಚಕ್ರವರ್ತಿಯ ನಿತ್ಯತ್ತ್ವಂಬೆತ್ತ ಮಹಾಚಕ್ರವರ್ತಿಪದಮನಿಳಾಚಕ್ರಕ್ಕೆ ಕೈಮಿಕ್ಕು ಸೂಚಿಸುತ್ತುಂ

ಪರಿವೇಷಂಗೊಂಡ ಚಂಡಾಂಶುವ ಪೊಳೆವ ಮಹಾಮಂಡಳಂ ಸೇವೆಗಾಗಿ
ಸ್ಫುರಿಸುತ್ತುಂ ಬಂದು ಮುಂದಂ ನಡೆದಪುದೆನೆ ಕಾಲ್ಗಾಪಿನೊಳ್ ಬಪ್ಪ ಯಕ್ಷಾ
ಮರಸೇನಾಚಕ್ರಚೂಡಾಮಣಿಗಣಕಿರಣಂ ಸುತ್ತಲುಂ ರಂಜಿಸುತ್ತುಂ
ಬರೆ ಪೋಗುತ್ತಿರ್ದುದಾ ದೇವನ ಸಭೆಯ ಪುರೋಭಾಗದೊಳ್ ಧರ್ಮಚಕ್ರಂ   ೩೨೦

ಅದಱ ಮುಂದೊಪ್ಪದಿಂ ನಡೆ
ದುದು ಕನದುರುವಜ್ರಚಿಹ್ನದಿಂದಂಚಿತ್ರಂ
ಪುದಿದ ಮಹಾವಿಜಯಧ್ವಜ
ಮದು ನಾನಾಕ್ಷುಲ್ಲಕ ಧ್ವಜಾವೃತಮುಚ್ಚಂ    ೩೨೧

ವ : ಅದಱಿಂದಂ ಮುಂದೆ ಪಲವುಂತೆಱದ ಪಲ್ಲವಚ್ಛತ್ರಚಾಮರಾದಿ ಮಂಗಳ ಪರಿಕರಂ ಗಳಿಂದಳಂಕಾರಂಬಡೆದು

ಥಳಥಳಿಸುತ್ತುಮಿರ್ಪ ಪೊಸಪೊಂಗಳಸಂಗಳ ಮೇಲೆ ಕೂಡೆ ಮಂ
ಗಳಮಣಿದರ್ಪಣಾವಳಿಗಳೊಪ್ಪಲವಂ ಪಿಡಿದಿರ್ದ ದೇವಸಂ
ಕುಳಲಲನಾಜನಂ ನಡೆವುತಿರ್ದುದು ಜಂಗಮಕಲ್ಪವಲ್ಲಿ ಮಂ
ಜುಳಲತಿಕಾವಿತಾನದ ಬೆಡಂಗನೆ ಭಂಗಮನಂದು ಮಾಡುತುಂ        ೩೨೨

ಇಂತಷ್ಟಮಂಗಳಂಗಳ
ನಾಂತು ಬರಲ್ ಮುಂದೆ ದಿಗ್ವಧೂಜನಮಾಗಳ್
ಸಂತೊಸಮನೊದವಿಸಿದತ್ತ
ನಂತರದೊಳ್ ನೋಡೆ ಸಮವಸರಣವಿಹಾರಂ   ೩೨೩

ವ : ಈ ತೆಱದಿಂ ಚತುರ್ನಿಕಾಯದೇವರ್ಕಳಿಂದುಪಕಲ್ಪಿತಮಾದ ಚತುರ್ಥ ಸಾತಿಶಯದಿಂ ಮೆಱೆದು

ಕಣ್ಣೆಮೆಯಿಕ್ಕದಿರ್ಪಿರವು ನಾಲ್ಕು ಮುಖಂಗಳವಾಗಿ ತೋರ್ಪ ನೈ
ಪುಣ್ಯಮಶೇಷವಿದ್ಯೆಗಧಿನಾಥತೆ ಮೆಯ್ನೆಳಲಿಲ್ಲದಿರ್ದ ಲಾ
ವಣ್ಯವಿಶೇಷಮೆಯ್ದೆ ಸಮಕೇಶನಖಸ್ಥಿತಿ ಭುಕ್ತ್ಯಭಾವಮೀ
ತಿಣ್ಣಮೆನಿಪ್ಪ ಶಕ್ತಿ ಚರಮಾಂಗದೊಳಂದೊಗೆದತ್ತು ನಾಡೆಯುಂ    ೩೨೪

ದೆಸೆಗಿನ್ನೂಱವಿಯೋಜನಾಂತರದೊಳಂದಿಲ್ಲಾಯ್ತು ದುರ್ಭಿಕ್ಷದೊಂ
ದೆಸಕಂ ಪ್ರಾಣಿವಧಂ ದುರಿತಪರಪೀಡಾಚಾರಮುಂ ರೋಗದು
ಬ್ಬಸಮುಂ ತಳ್ತುಪಸಗ್ಗಮುಂ ಬಡತನಂ ಮುಂತಾದಿವೆಲ್ಲಂ ಮಹಾ
ತಿಶಯೋತ್ಕರ್ಷವಿಶೇಷಸಂಪದದಿನಾ ಲೋಕತ್ರಯಸ್ವಾಮಿಯಾ     ೩೨೫

ವ : ಇಂತು ಘಾತಿಕರ್ಮಕ್ಷಯಾನಂತರ ಜನಿತ ದಶಾತಿಶಯದಿಂ ಮೆಱೆದು

ಮುನ್ನೊಡವುಟ್ಟಿ ಪತ್ತತಿಶಯಂ ಮೆಱೆದತ್ತು ಬಳಿಕ್ಕೆ ಘಾತಿಕ
ರ್ಮ ನೆಱೆಪೋಗಿ ಪತ್ತತಿಶಯಂ ಬಿಡದಾದುದು ಮತ್ತೆ ಭಕ್ತಿಸಂ
ಪನ್ನಸುರಾಳಿ ಮಾಳ್ಪತಿಶಯ ಪದಿನಾಲ್ಕೊಗೆದಿರ್ದುದಿಂತು ಚೋ
ದ್ಯೋನ್ನತಿವೆತ್ತುದಂತತಿಶಯಂ ಸಲೆಮುವತನಾಲ್ಕು ಧರ್ಮನೊಳ್            ೩೨೬

ವ : ಅಂತನಂತಚತುಷ್ಟಯವಿಶಿಷ್ಟನಪ್ಪಾ ಧರ್ಮನಾಥಂಗೆ ವರ್ಯಾಷ್ಟ ಮಹಾಪ್ರಾತಿಹಾರ್ಯ ಪ್ರಭಾವಿತ ಚತುಸ್ತ್ರಿಂಶದತಿಶಯಶೋಭಾವಿಭವಮುಂ ತ್ರಿವಿಷ್ಟಪಾಧಿ ಪತ್ಯಮಂ ಸ್ಪಷ್ಟಂ ಮಾಡುತ್ತುಮಿರಲಾ ಪರಮಪಾವನಪ್ರಯಾಣ ಪ್ರಭಾವದೊಳ್

ಬಿಳಿಯ ಗಜಂ ತಗರ್ ಮಹಿಷಿಕಂ ಮಕರಂ ಮೃಗಂ ಸಮು
ಜ್ವಳಿತತುರಂಗಮಂ ವೃಷಭಮೆಂಬಿವನೇಱಿ ಸಮಸ್ತಸೈನಿಕರ್
ಬಳಸಿರಲಿಂದ್ರನಗ್ನಿ ಯಮ ನೈರುತಿ ಪಾಶಿ ಮರುತ್ಕುಬೇರ ಮಂ
ಜುಳಶಿತಿಕಂಠನೆಂಬಖಿಳದಿಕ್ಪತಿಗಳ್ ನಡೆದರ್ ನಿಜಾಶೆಯೊಳ್         ೩೨೭

ಭರದಿಂ ಕಟ್ಟಿದ ಗೆಜ್ಜೆಗಳ್ ಕುಣಿದು ಮೆಟ್ಟುತ್ತಿರ್ದ ಮೇಲ್ಪಜ್ಜೆಗಳ್
ದುರಿತಾಳಂಗುಡೆ ಕಾಲೆ ನಾಲಗೆಯವೊಲ್ ಬೀಱಲ್ ಗತಿಚ್ಛಾಯೆಯಂ
ಪರಮಸ್ವಾಮಿಯ ಮುಂದೆ ಗೊಂದಣಿಸಿ ಸಂಗೀತಕ್ಕೆ ತಕ್ಕಂದದಿಂ
ಸುರವೈತಾಳಿಕರಾಳಿ ಪೇರಣೆಯೊಳಂ ತೋಱಿತ್ತು ವೈಚಿತ್ಯ್ರಮಂ    ೩೨೮

ಬರವೇಳ್ ದಿಕ್ಪಾಳರಂ ಸಂಗಡಿಸಿ ನಡೆಯವೇಳಿಂದ್ರನಂ ಚಂದ್ರಸೂರ್ಯಾ
ಮರರಂ ಮುಂಪೋಗವೇಳೆಂದುಸಿರ್ವ ಚಮರವೈರೋಚನರ್ ಸರ್ವಂ ಚ
ಪ್ಪರಿಸುತ್ತುಂ ಚೆಲ್ವ ಪೋಂಗಟ್ಟಿಗೆವಿಡಿದು ಕರಂ ಯೋಜಿಸುತ್ತಿರ್ದರಾಗಳ್
ಪಿರಿದುಂ ಪುಷ್ಪಂಗಳಂ ಚೆಲ್ಲುವ ಪದದೊಳುಘೇಯೆಂಬಿದುಣ್ಮಿತ್ತು ಸುತ್ತಂ  ೩೨೯

ವ : ಇಂತು ಪೆಂಪಿನ ಸಂಪದಮೆ ರೂಪುಗೊಂಡುದೆಂಬಂತೆ ಪೊಂಪುಳಿಯೋಪ ಸೊಂಪನೊಳಕೊಂಡ ಸರ್ವಜ್ಞನ ಸಭಾಮಂಡಳಂ ಕುಂತಳಾವಂತಿ ಕುರುಜಾಂಗಣ ಲಾಳ ಮಾಳವ ಚೋಳ ಪಾಂಚಾಳ ಮಹಾರಾಷ್ಟ್ರ ರಾಷ್ಟ್ರ ಮರು ಮಳಯ ಮಗಧಾದಿ ನಿಖಿಳ ವಿಷಯಂಗಳೊಳ್ ಧರ್ಮತೀರ್ಥಪ್ರಭಾವನಿಮಿತ್ತಂ ವಿಹಾರಿಸುತ್ತುಮಿರ್ಪಲ್ಲಿ

ಮಿಗೆ ನಿಷ್ಕಲಾಭರಾದರ್
ಜಗದೊಳ್ ದುರ್ಜನರ ತೆಱದೆ ಸಜ್ಜನರೆಲ್ಲಂ
ದ್ವಿಗುಣಿಸಿ ನಿಷ್ಕಂಟಕಮಾ
ಯ್ತಗಣಿತಜನದಂತೆ ಸಕಳಭೂತಳಮನಿತುಂ      ೩೩೦

ಎಲ್ಲಿ ವಿಹಾರಿಸುವಂ ಜಿನ
ನಲ್ಲಿ ಮನೋದುಃಖಶೋಕಚಿಂತಾತಂಕಂ
ಪೊಲ್ಲಮೆ ಮೊದಲಾದವುಮಣ
ಮಿಲ್ಲದೆ ಜನಮೆಲ್ಲಮೆಯ್ದೆ ಸುಖಿಯಾಗಿಕ್ಕುಂ            ೩೩೧

ವ : ಮತ್ತಮಾ ಸಮವಸರಣಮಂಡಳಮೆಂತಿರ್ದುದೆಂದೊಡೆ

ಧರ್ಮಮೆಂಬಮೃತಪೂರದ
ಪೆರ್ಮಳೆಯಂ ಕಱೆದು ಭವ್ಯಜನಸಸ್ಯಂಗಳ
ನೊರ್ಮೆಯು ಮಾಣದೆ ಸಲಹುವ
ಪೆರ್ಮೆಯನೊಳಕೊಂಡ ಮೇಘಮಂಡಳಮೆನಿಕುಂ           ೩೩೨

ಕಿಡಿಸುತ್ತುಂ ದುರ್ಮತಧ್ವಾಂತಮನುಱೆ ನಿಜತೇಜಃಪರಿವ್ಯಾಪ್ತಿಯಿಂ ಧಿಂ
ಕಿಡಿಸುತ್ತುಂ ದಿಕ್ಕನೆಲ್ಲಾಮರರ ಜಯಜಯಾಧ್ವಾನದಿಂ ಭವ್ಯರಂ ನೂ
ರ್ಮಡಿ ಸದ್ರತ್ನತ್ರಯಾಳಂಖರಣಚರಿತರಂ ಮಾಡುತುಂ ನಿಷ್ಪೃಹತ್ವಂ
ಬಡೆದಾರ್ಯಾಖಂಡದೊಳ್ ಮಾಣದೆ ವಿಹರಿಸಿದಂ ಧರ್ಮಚಕ್ರಾಧಿನಾಥಂ      ೩೩೩

ಸುರತರು ಕುಸುಮಾಸಾರಂ
ಪುರುಹೂತಾನಂದಕಾರಮಿತಿವಿದೂರಂ
ಪರಮಧರ್ಮಾವತಾರಂ
ಕರಮೆಸೆದುದು ಸಮವಸರಣವಳಯವಿಹಾರಂ   ೩೩೪

ವ : ಮತ್ತಂ ದ್ಯಾವಾಪೃಥಿವೀವಿಭಾಗಮೆಲ್ಲಮತ್ಯಾಶ್ಚರ್ಯ ಮಂಗಳ ಪೂಜಾ ಕಾರ್ಯಕರಣ ಸಂಜಾತ ಕಾಳಾಗರು ಧೂಪಕಳಾಪಸಮುದ್ದಾಮಧೂಮಲತಾಸ್ತೋಮಾ ಮೋದ ಮಯಮುಂ ಸಮಸ್ತಪ್ರಸ್ತೂಯಮಾನವಿಸ್ತೀರ್ಣವದಸ್ತೋಕನಿಸ್ತೂಳಸ್ಥಿಮಿತ ಗಭಸ್ತಿಮಯಮಂ ಪೊಗಳ್ತೆವಡೆದ ಸದ್ಧರ್ಮಪೀಯೂಷರಸಸಮುತ್ಕರ್ಷವಿಶೇಷಿತಮಹಾ ಪ್ರವಾಹಸಮೂಹಮಯಮುಂ ನಿರಂತರಿತ ಪರಮಸುಖಮಯಮುಮಾಗೆ ನಿರವಶೇಷ ದಿವಿಜ ದನುಜ ಮನುಜ ತಿರ್ಯಕ್ಸಮಾಜಮಂ ಸುಕೃತಭಾಜನಮಂ ಮಾಡುತ್ತುಂ ವಿಹಾರಿಸುತ್ತುಂ ಬಂದು ಸಪ್ತಲಕ್ಷವರ್ಷಪ್ರಮಿತಮಪ್ಪ ಕೇವಳಿಕಾಲಂ ಮಾಸಾವಶೇಷ ಮಾದುದೆಂಬಂದಿಗೆ

ಹಡಿಗೆಂತಾಗಸಮೆಂಬಿಂ
ಗಡಲಂತ[ರ್ದೀ] ಪಮಂ ಕರಂಪೊರ್ದುವುದಂ
ತಡಸಿ ಪೊರ್ದಿತ್ತು ತತ್ಸಭೆ
ತಡೆಯದೆ ಸಮ್ಮೇದಗಿರಿಯ ಮಸ್ತಕದೆಡೆಯಂ    ೩೩೫

ಆಗಳರ್ಹತ್ಪ್ರಭಾವಮ
ದಾಗಿಸಿದುದಪೂರ್ವಶೋಭೆಯಂ ತತ್ಸಮ್ಮೇ
ದಾಗದೊಳೆಲ್ಲಾ ರುತುಗಳ್
ಬೇಗಂ ಬಂದಿರ್ದು ಪಡೆವವೆನೆ ಚೋಜಿಗಮಂ     ೩೩೬

ತೋರಿದವಾದ ಪಣ್ಗೊನೆಗಳೋಳಿಯ ಭಾರದೆ ಬಾಗುತಿರ್ದ ಭೂ
ಮೀರಹಸಂಕುಳಂ ಮೊರೆದು ಬಂಡುಣುತಿರ್ಪಳಿಮಾಲೆಯುಂ ಮನೋ
ಹಾರಿಗಳಾದ ಪೂಗಿಡುಗಳಾವಳಿ ತಳ್ತರಳುತ್ತುಮಿರ್ದ ಕ
ಲ್ಹಾರಮನುಳ್ಳ ಚೆಲ್ವ ತಿಳಿನೀರ ಕೊಳಂಗಳವಾಳ್ದವೊಪ್ಪಮಂ     ೩೩೭

ಪಲವುಂ ಬೆಟ್ಟುಗಳಿರ್ದೊಡಂ ಬಗೆಯದಿಂದೆನ್ನಲ್ಲಿಗೆಳ್ತಂದು ಮಂ
ಗಳಚೂಡಾಮಣಿಯಾದನಲ್ತೆ ಪರಮಶ್ರೀಧರ್ಮನಾಥಂ ದಲ
ಗ್ಗಳಿಸಿತ್ತೆನ್ನಯ ಜನ್ಮಮೆಂದು ಮುದಮಂ ತಾಳ್ದಂತೆ ಸಮ್ಮೇದಮೆ
ಯ್ದುಲಿಯುತ್ತಿರ್ದುದು ಸೋಗೆವಿಂಡುಗಳ ಕೇಕಾರಾವದುದ್ರೇಕದಿಂ೩೩೮

ಅಮಮ ದ್ವಿತೀಯಕಲ್ಯಾ
ಣಮನಾಂತಂ ಮೇರುಗಿರಿಯೊಳೀ ಜಿನಪತಿ ಪಂ
ಚಮಕಲ್ಯಾಣಮಿದೆನ್ನೊಳ್
ಸಮನಿಸಿದಪುದೆಂಬ ಮದದಿನೆನೆ ಸೊಂಪೆಸೆಗುಂ   ೩೩೯

ಮಾನಿತವಿಚಿತ್ರಕೂಟವಿ
ತಾನಂ ವಿಂಶತಿಜಿನೇಶಪರಿನಿರ್ವಾನ
ಸ್ಥಾನಂ ನಿರ್ಜರಲಹರೀ
ಪೀನಂ ಸಮ್ಮೇದಶೈಲಮಾಯ್ತುಪಮಾನಂ      ೩೪೦

ವ : ಅಂತತೀವರಮ್ಯಮಾದ ಸಮ್ಮೇದಮೆಂಬ ಶೈಲದ ಚೂಳಿಕಾಗ್ರಭಾಗದೊಳೊಂದು ಸೌಂದರತರ ಚಂದ್ರಕಾಂತಶಿಲಾಮಯ ಪಾವನಪ್ರದೇಶದೊಳ್ ನಿಜಪರ ಮೌದಾರಿಕ ಶರೀರಸ್ಥಿತಿಕಾಲಮೇಕಮಾಸಮೆನೆ ಯಜನವಿಹರಣಕ್ರಿಯಾವಿಭೂತಿಯಂ ವಿಸರ್ಜಿಸಿ
ನವೋತ್ತರಾಷ್ಟಶತಸಂಖ್ಯಾಗಣಧರಮುನಿವೃಷಭಪ್ರಭೃತಿಸಭಾಪರಿವೃತನಾಗಿ ಏಕಮಾಸ ಪರ್ಯಂತ ಕಾಯೋತ್ಸರ್ಗಸ್ಥಿತಮುತ್ತರಾಭಿಮುಖನುಮಾಗಿ

ಪಿರಿದುಂ ಸ್ವಾಘಾತಿಕರ್ಮಕ್ಷಯಮನೆಸಗುವುದ್ಯೋಗದೊಳ್ ನಿಂದನಂದಂ
ಬರದೊಳ್ ಮುಂಬಿಟ್ಟು ತನ್ನಾ ಸಮವಸರಣಮಂ ಲಂಬಮಾನೋರುಬಾಹು
ಸ್ಫುರಿತಂ ಜ್ಯೋತಿಸ್ವರೂಪಂ ಚರಮಸುಧವಳಧ್ಯಾನನಿಷ್ಠಾಪ್ರತಿಷ್ಠಂ
ಪರಮಶ್ರೀಧರ್ಮನಾಥಂ ಗುಣಭವನಮಣಿಸ್ತಂಭಮಿಪ್ಪಂತಿರಿರ್ದಂ  ೩೪೧

ವ : ಅಂತಿರ್ದು ಸಾಮಾನ್ಯಶುಲ್ಕಧ್ಯಾನಾಪೇಕ್ಷೆಯಿಂ ತೃತಿಯಮುಂ ಪರಮ ಶುಕ್ಲಧ್ಯಾನಾ ಪೇಕ್ಷೆಯಿಂ ಪ್ರಥಮಮುಮಪ್ಪ ಸೂಕ್ಷ್ಮ ಕ್ರಿಯಾಪ್ರತಿಘಾತಿಯೆಂಬ ಪರಮ ಶುಕ್ಲಧ್ಯಾನದೊಳ್ ನೆಲಸಿದಂತರ್ಮುಹೂರ್ತದಿಂ ಮೇಲೆ ಲಘುಕರ್ಮ ಪರಿವಾಚನ ಶಕ್ತಿ ಪ್ರಾಪ್ತಿನಿಮಿತ್ತಂ ಸೂಕ್ಷ್ಮಶರೀರದೊಳ್ ಕೂಡಿ ಚರಮಾಂಗತ್ರಿಗುಣಬಾಹುಲ್ಯದಿನೇಕ ಸಮಯದೊಳ್ ಚತುರ್ದಶರಜ್ಜೂತ್ಸೇಧಜೀವಪ್ರದೇಶವಿಸರ್ಪಣಮಪ್ಪ ದಂಡಸಮುದ್ಘಾ ತಮಂ ದ್ವಿತೀಯ ಸಮಯದೊಳ್ ಪೂರ್ವಪ್ರಣೀತ ಬಾಹಲ್ಯಾಯಾಮದಿಂ ಯಮಳ ಕವಾಟಾಕೃತಿಯಾಗಿ ಜೀವಪ್ರದೇಶಪ್ರಸರ್ಪಣಮಪ್ಪ ಕವಾಟಸಮುದ್ಭೂತಮಂ ತೃತೀಯ ಸಮಯದೊಳ್ ವಾಯುತ್ರಯಾವಶೇಷಲೋಕಾಕಾಶ ಜೀವಪ್ರದೇಶಪ್ರವರ್ತನಮುಮಪ್ಪ ಪ್ರತರ ಸಮುದ್ಘಾತಮುಮಂ ಚತುರ್ದಶಸಮಯದೊಳ್ ಸಕಳಲೋಕವ್ಯಾಪ್ತಿಜೀವಪ್ರದೇಶ ಪ್ರವರ್ತಮಪ್ಪ ಲೋಕಪೂರಣಸಮುದ್ಘಾತಮುಮಂ ನೆಱಪಿ ಇಂತು ದಂಡಕವಾಟ ಪ್ರವರ ಲೋಕಪೂರಣಮೆಂಬ ನಾಲ್ಕು ಸಮುದ್ಘಾತಂಗಳನನುಕ್ರಮದಿಂ ನಿರ್ವರ್ತಿಸಿ

ಈ ತೆಱದಿಂದಂ ನಾಲ್ಕುಮ
ಘಾತಿಸ್ಥಿತಿಕಾಲಮೆಲ್ಲಮಂ ಸರಿಮಾಡಿ ಬಳಿ
ಕ್ಕೋತು ನಿಜಮೂಲದೇಹದೊ
ಳಾತಂ ನೆಲಸಿರ್ದು ಕಿಡಿಸಲುದ್ಯತನಾದಂ           ೩೪೨

ವ : ಮತ್ತಮಂತರ್ಮುಹೂರ್ತದೊಳ್ ಬಾದರಮನೋವಚನೋಚ್ಛ್ವಾಸ ಕಾಯಯೋಗ ಸೂಕ್ಷ್ಮಮನೋವಚನೋ‌ಚ್ಛ್ವಾಸಂಗಳುಮನಡಂಗಿಸಿ ಸೂಕ್ಷ್ಮಕಾಯ ಯೋಗನಾಗಿ ಸಮನಂತರಂ ನಿರೋಧಂಗೆಯ್ದು ಯೋಗಕೇವಳಿಗುಣಸ್ಥಾನಮಂ ಪೊರ್ದಿ ಸಮುಚ್ಛಿನ್ನ ಪ್ರಾಣಾಪಾನಪ್ರಚಾರ ಸರ್ವಕಾಯವಾಗ್ಮನೋಯೋಗಪರಿಸ್ಯಂದಕ್ರಿಯಾ ವ್ಯಾಪಾರಮಪ್ಪ ಸಮುಚ್ಛಿನ್ನಕ್ರಿಯಾನಿವೃತ್ತಿಯೆಂಬ ಚತುರ್ಥ ಪರಮಶುಕ್ಲಧ್ಯಾನದೊಳ್ ನಿಂದು

ಪರಿಪೂರ್ಣಸಕಳಗುಣಕಂ
ಪರಮಯಥಾಖ್ಯಾತಚರಿತಕಂ ವರಶೀಲಾ
ಕರನಾಗಿ ಮೋಕ್ಷಲಕ್ಷ್ಮೀ
ಪರಿರಂಭಾರಂಭಕೇಳಿಗುತ್ಸುಕನಾದಂ   ೩೪೩

ವ : ಆಗಿ ತದುಪಾಂತ್ಯಸಮಯದೊಳನ್ಯತರಮೇದನೀಯ ದೇವಗತಿ ತತ್ಪ್ರತಿ ಯೋಗ್ಯಾನುಪೂರ್ವ ಶರೀರಬಂಧನಸಂಘಾತವರ್ಣರಸಪ್ರತ್ಯೇಕಪಂಚಕಂ ಸಂಹವನ ಸಂಸ್ಥಾನ ಷಟ್ಕಂಗಂದ ದ್ವಿತಯಂ ವಿಹಾಯೋಗತಿದ್ವಿತಯಂ ಸ್ಪರ್ಶಾಷ್ಟಕಮಗುರುಲಘು ಚುತಷ್ಕ ಶುಭಾಶುಭ ಸ್ಥಿರಾಸ್ಥಿರ ಸುಸ್ವರದುಸ್ವರ ಸುಭಗದುರ್ಭಗ ಪ್ರತ್ಯೇಕ ಶರೀರ ಯಶಸ್ಕೀರ್ತ್ಯನಾದೇಯ ನಿರ್ಮಾಣಪರ್ಯಾಪ್ತ ನೀಚೈರ್ಗೋತ್ರಂಗಳೆಂಬೆಪ್ಪತ್ತೆರಡುಂ ಪ್ರಕೃತಿಗಳಂ ನಿರವಶೇಷಂ ಕೆಡಿಸಿ ಚರಮಸಮಯದೊಳವಶಿಷ್ಟಾನ್ಯತರವೇದ್ಯ ಮನುಷ್ಯಾ ಯುರ್ಗತೀತಪ್ರಯೋಗ್ಯಾನುಪೂರ್ವ ಪಂಚೇಂದ್ರಿಯ ತ್ರಸನಾಮ ಸುಭಗಾದೇಯ ಪರ್ಯಾಪ್ತ ಬಾದರ ಯಶಸ್ಕೀರ್ತ್ಯುಚ್ಚೈ ರ್ಗೊತ್ರತೀರ್ಥಕರನಾಮಂಗಳೆಂಬ ಪದಿಮೂಱುಂ ಪ್ರಕೃತಿಗಳನು ನ್ಮೂಳನಂಗೆಯ್ದಿಂತು ವೇದನೀಯಾಯುಷ್ಯನಾಮಗೋತ್ರಂಗಳೆಂಬ ನಾಲ್ಕು ಮಘಾತಿಕರ್ಮಂಗಳನೊರ್ಮೊದಲೊಳ್ ನಿರ್ಮೂಳಂ ಮಾಡುವುದುಂ

ವರಶುಕ್ಲಧ್ಯಾನಮೆಂಬುಜ್ವಳತರಣಿಸಮುದ್ಯೋತನಾಶ್ಚರ್ಯದಿಂದಂ
ದುರಘಾತಿಧ್ವಾಂತಮೆಲ್ಲಂ ಕೆದಱಿ ಪರೆದುಪೋಗಲ್ಕೆ ಕೆಟ್ಟೋಡಿ ದೋಷಂ
ಪರೆಯಲ್ ಭೈಷಜ್ಯದಿಂ ಭಾಸುರಕನಕದವೋಲ್ ದೀಪ್ಯಮಾನಸ್ವರೂಪಂ
ಪರಿಶುದ್ಧಂ ಪೊರ್ದಿದಂ ಶಾಶ್ವತಸುಖಮಯಂ ಮೋಕ್ಷಮಂ ಧರ್ಮನಾಥಂ    ೩೪೪

ತನುವಾತವಾಯುಮಂಡಳಿ
ಘನಮಂಡಪಮಾಗಲಷ್ಟಮಂಗಳಮಾಗಲ್
ವಿನುತಾಷ್ಟಗುಣಂ ಮೋಕ್ಷಾಂ
ಗನೆಯೊಳ್ ನಲವಿಂದೆ ಮದುವೆನಿಂದಂ ಧರ್ಮಂ೩೪೫

ಸಕಳನೃಚಕ್ರವರ್ತಿಗಳ ಸೌಖ್ಯಮದೆಲ್ಲಮಮರ್ತ್ಯರೊಂದು ಸೌ
ಖ್ಯಕಣಸಮಾನಮಾಗದು ಸಮಸ್ತಸುರಾಳಿತದಿಂದ್ರಸೌಖ್ಯರಾ
ಶಿಕಮಹಮಿಂದ್ರರೊಂದೊಂದು ಸುಖಲೇಶಮಾನಮನೆಯ್ದದಾ ಸುಖ
ಪ್ರಕರಮುಮಿದ್ಧ ಸಿದ್ಧರನಿಮೇಷಸುಖಕ್ಕೆಣೆಯಾಗದಂತದಂ         ೩೪೬

ಉಪಮಾತೀತಮೆನಿಪ್ಪತಿ
ವಿಪುಳಮೆನಿಪ್ಪೀ ದ್ರುಗಧಿಕಶಾಶ್ವತಸುಖದಿಂ
ದೆ ಪರಮಧರ್ಮಜಿನೇಶಂ
ಸ್ವಪರಹಿತಂ ಮುಕ್ತಿಯಲ್ಲಿ ತಣ್ಣನೆ ತಣಿದಂ    ೩೪೭

ನಲವಿಂ ಕ್ಷಾಯಿಕಮೆಂಬ ಚಾರುತರಸಮ್ಯಕ್ತ್ವಂ ಮಹಾನಂತ ಬೋ
ಧಲಸದ್ದರ್ಶ ವೀರ್ಯಮುಂ ಸಮವಗಾಹಂ ಬಾಧಕಾಭಾವದ
ಗ್ಗಳಮುಂ ಗೌರವಲಾಘನಾಪಘನಮುಂ ಸೂಕ್ಷ್ಮತ್ವಮೆಂದಿಂತು ಮಂ
ಗಳಮಾದಷ್ಟಗುಣಂ ಕರಂ ನೆಲಸಿ ತನ್ನೊಳ್ ನಿಂದನಾ ನಿಶ್ಚಳಂ      ೩೪೮

ತಾಂ ತನ್ನಂ ತನ್ನಾಂತನ
ಗಂತುಂ ವಶವಾಗಿಮಾಡಿ ತನ್ನತ್ತಣಿನಾ
ದಂತಪ್ಪ ತನ್ನ ಗುಣಮೆಂ
ಟುಂ ತನ್ನೊಳ್ ನೆಱೆಯೆ ಮುಕ್ತಿಯೊಳ್ ನೆಲಸಿರ್ದಂ        ೩೪೯

ಪದಪಿಂದೆ ಚೈತ್ರಮಾಸವಿ
ಶದಪಕ್ಷ ಚತುರ್ಥಿ ತಿಥಿಯೊಳಪರಾಹ್ಣದ ಕಾ
ಲದೊಳಂ ಧರ್ಮಜಿನೇಶಂ
ಮುದದಿಂದಂ ಮೋಕ್ಷಲಕ್ಷ್ಮಿಗಧಿಪತಿಯಾದಂ     ೩೫೦

ವ : ಆ ಮೋಕ್ಷದ ಸ್ವರೂಪಮೆಂತುಟೆಂದೊಡೆ

ಮನುಜಕ್ಷೇತ್ರದವೊಲ್ ಪಾ
ವನಮೋಕ್ಷಮದೊಂದು ಲಕ್ಷಯೋಜನದಲಗಂ
ಘನಮಾದ ತೋರದಭಿಶೋ
ಭನಮುಂ ನಾಲ್ವತ್ತಮೈದುಯೋಜನಮಕ್ಕುಂ  ೩೫೧

ಸಮವೃತ್ತಮೆಂಟುಯೋಜನ
ಮಮಳತರಸ್ಫಟಿಕಮಯಮದತಿರಮಣೀಯಂ
ಸಮನಿಸಿದನಂತಸಿದ್ಧರ
ಸಮಿತಿಗೆ ಕಡುತೆಱಪನೀವುತಿಕ್ಕುಂ ಸತತಂ         ೩೫೨

ಆರಯ್ವಡಮೀಷತ್ಪ್ರಾ
ಗ್ಭಾರಶಿಳಾವಳಯಮಾಯ್ತು ಶೋಭಾನಿಳಯಂ
ಸಾರಜಗತ್ತ್ರಯಲಕ್ಷ್ಮಿಯ
ಚಾರುಸಿತಚ್ಛತ್ರದಂತಿರಾನಂದಕರಂ    ೩೫೩

ಅಕ್ಷಯಮಪುನರ್ಭವಮನಿ
ಪಕ್ಷಮತೀಂದ್ರಿಯಮನಿಂದ್ರಮನುಪ್ರದವಮನ
ಪೇಕ್ಷಮೆನಿಪ್ಪತಿಶಯಪರಿ
ಲಕ್ಷತಿಮಪ್ಪುದು ಪವಿತ್ರಸಿದ್ಧಕ್ಷೇತ್ರಂ  ೩೫೪

ವ : ಇಂತು ವಿಶಿಷ್ಟಶೋಭಾಸಮುಪಜುಷ್ಟುಮಾದಷ್ಟಮಭೂಮಿಯೆಣಿಸಿದ ತ್ರೈಳೋಕ್ಯಶಿಖರ ದೊಳತಿಪ್ರಸಿದ್ಧಮುಂ ಶುದ್ಧಮುಮಾಗಿರ್ದ ಸಮಿದ್ಧಸಿದ್ಧಶಿಲೆಯ ಮೇಲಣ ವಾಯುತ್ರಯ ಭಾಗದೊಳ್ ಕಿಂಚಿನ್ನ್ಯೂನ ಚರಮಶರೀರಮಾತ್ರ ಜೀವಘನಾಕಾರನುಂ ನಿರಾಕಾರನುಂ ಪರಿಧೃತಪರಮಾತ್ಮಸ್ವಭಾವನುಂ ಸಕಳವಿನುತಮಹಾನುಭಾವಂ ನಿರಾಮಯನುಂ ನಿಭಾಮಯನುಂ ನಿತ್ಯನುಂ ಸ್ತುತ್ಯನುಂ ನಿರವಯವನುಂ ನಿರುಪಮನುಂ ನಿರಂತರ ಘನಸುಖನುಂ ನಿರಂತರ ಚಿದಭಿಮುಖನುಂ ನಿರಂಜನನುಂ ನಿರಭಿರಂಜನನು ಮಾಗಿ ಧರ್ಮನಾಥಜಿನೇಶ್ವರಂ ಸಿದ್ಧಪದವಿಯೊಳ್ ನಿಂದನನ್ನೆಗಮಿತ್ತಲ್

ಅವಧಿವಿಬೋಧದಿನಱಿದಾ
ದಿವಿಜೇಂದ್ರಂ ಸಿಂಹವಿಷ್ಟರಾಗ್ರದಿನೆಳ್ದಂ
ದಿವಿಜಸಭೆವೆರಸು ತದ್ದಿ
ಗ್ವಿವರಕ್ಕೇಳಡಿಯನೆಸಗಿಯವನತನಾದಂ          ೩೫೫

ವ : ಆಗಳಾ ಪರಮೇಶ್ವರನ ಪರಿನಿರ್ವಾನ ಕಲ್ಯಾಣಸ್ಥಳಸಮಭ್ಯರ್ಚನ ವಂದನೋತ್ಸಾಹ ಸಮುತ್ಸುಕಚಿತ್ತನಾಗಿ

ಇಂದ್ರಾಣೀಯುಕ್ತನಿಂದ್ರಂ ಧವಳಗಜಸಮಾರೋಹಣಂಗೆಯ್ದು ದೇವೀ
ವೃಂದಂ ಮಂದಾರುವೃಂದಾರಾಕಸಮುದಯಮಂ ಯಾನವೈಮಾನನಾ
ಚ್ಛಂದಂಬೆತ್ತಿರ್ದ ಸದ್ವಾಹನನಿಚಯಮನಂದೇಱಿ ಸುತ್ತಂ ಬರಲ್ ಬ
ಲ್ಪಿಂದಂ ನಿರ್ವಾಣಕಲ್ಯಾಣಮನೆಸಗುವೆನೆಂಬುತ್ಸವಮಂ ಪೆರ್ಚಿ ಬಂದಂ        ೩೫೬

ವ : ಆ ಪೊತ್ತಿನೊಳ್

ಪರಿವಿಡಿಯಿಂ ಭವನಭ್ಯಂ
ತರಕ ಜ್ಯೋತಿಷ್ಕ ಕಲ್ಪವಾಸಿಕಲೋಕದೊ
ಳುರು ಶಂಖಾನಕ ಸಿಂಹೋ
ದ್ಧುರ ಘಂಟಾರವದಿನಱಿದರವರೊರ್ಮೊದಲೊಳ್        ೩೫೭

ಜ್ಯೋತಿಷ್ಕಾಮರಸಂಕುಳಂ ಭವನವಾಸಿವ್ಯೂಹಮುಂ ವ್ಯಂತರ
ಬ್ರಾತಂ ಕಲ್ಪಜನಿರ್ಜರಪ್ರತತಿಯುಂ ಸ್ವಸ್ವಾಂಗನಾವಾಹನೋ
ತ್ಕೇತುಶ್ರೇಣಿ ಸಮಸ್ತಸೈನಿಕಜನಂ ಮುಂತಾದುವಂ ಕೂಡಿಕೊಂ
ಡೈತಂದ್ರಿಂದ್ರನೊಳೊಂದಿ ಮೆಲ್ಲನೆ ಬರುತ್ತಿರ್ದತ್ತದಾನಂದದಿಂ      ೩೫೮

ವ : ಅಂತು ಕಂತುರಾಜನ ಮಂತ್ರದೇವತೆಯರಂತಿನಂತಸುಮನಸ್ಸೀಮಂತಿನೀ ಸಂತತಿಯಂತ ರಿಕ್ಷದಲ್ಲಿ ತಿಂತಿಣಿಗೊಂಡು ನಡೆತಪ್ಪಾಗಳದಱೊಳ್ ಕಡುಚೆನ್ನೆಯರ್ ಕೆಲಂಬರ್ ತಮ್ಮಯ ಬಟ್ಟಮೊಲೆಗಳ ಚೆಲುವಿಂಗೆ ಪಡಿಯಿಟ್ಟು ನೋಳ್ಪಂತೆ ಕನ್ನಡಿ ಕಳಸಂಗಳಂ ಪಿಡಿದು ನೆಗಪಿ ಕುಚಕಳಶಾಗ್ರದೊಳ್ ಪತ್ತೆಸಾರ್ಚಿ ನಡೆಯೆಯುಂ ಮತ್ತೆ ಕೆಲರ್ ಕಡು ನೀಱೆಯರ್ ತಮ್ಮಯ ಮಿಸುಪ ನೊಸಲ ವಿಳಾಸದೊಳಸೂಯೆಗೆಯ್ವುದಱಿಂ ಕೆಂಪೇಱೆ ಮೂಡುತ್ತುಮಿರ್ದೆಳೆವೆಱೆಯಂ ಪಿಡಿದು ತಮ್ಮಂಗೆಯ್ಯೊಳಗಿಕ್ಕಿ ತೋಱಿಸುವಂತೆ ಕುಂಕುಮರಸಕಲಂಕಿತಮಾದ ಮಳಯಜದ ಪಂಕಂ ತೀವಿಕೊಂಡಿರ್ದ ಚಂದ್ರಕಾಂತದ ಶುಕ್ತಿಕೆಗಳಂ ಕರತಳದೊಳ್ ಪಿಡಿದು ನೆಗಪಿ ಕುಚಕಳಶಾಗ್ರದೊಳ್ ಪತ್ತೆಸಾರ್ಚಿ ನಡೆಯೆಯುಂ ಮತ್ತೆ ಕೆಲರ್ ಕಡು ನೀಱೆಯರ್ ತಮ್ಮಯ ಮಿಸುಪ ನೊಸಲ ವಿಳಾಸದೊಳಸೂಯೆಗೆಯ್ವುದಱಿಂ ಕೆಂಪೇಱೆ ಮೂಡುತ್ತುಮಿರ್ದೆಳೆವೆಱೆಯಂ ಪಿಡಿದು ತಮ್ಮಂಗೆಯ್ಯೊಳಗಿಕ್ಕಿ ತೋಱಿಸುವಂತೆ ಕುಂಕುಮರಸಕಲಂಕಿತಮಾದ ಮಳಯಜದ ಪಂಕಂ ತೀವಿಕೊಂಡಿರ್ದ ಚಂದ್ರಕಾಂತದ ಶುಕ್ತಿಕೆಗಳಂ ಕರತಳದೊಳ್ ಪಿಡಿದು ನಡೆಯೆಯುಂ ಮತ್ತಂ ಕೆಲರ್ ದೇವಕನ್ನೆಯರ್ ಗಗನತಳದೊಳ್ ಬೀಳಲ್ವರಿದಂಗಜ ಜಂಗಮ ಕಲ್ಪವೃಕ್ಷಲತೆಗಳಂತೆ ಲಂಬಮಾನ ಪುಷ್ಪಮಾಲಾಜಾಲಂಗಳಂ ಪಿಡಿದು ನಡೆಯೆಯುಂ ಕೆಲಂಬರ್ ಕಡುಜಾಣೆಯರ್ ತಮ್ಮಯ ವದನಮೆಂಬವಿಂದುಬಿಂಬಮನೋಲೈಸಲೆಂದು ಸಾರಿಗೆ ಬಂದು ನೆರೆದ ತಾರೆಗಳ ಬಳಗದಂತೆ ಥಳಿಥಳಿಸಿ ಪೊಳೆವ ಮುಕ್ತಾಫಳಮಯಾಕ್ಷತ ಸಂಕುಳಂ ತುಂಬಿದ ವರ್ತುಳಂ ಗಳಂ ಪಿಡಿದು ನಡೆಯೆಯುಂ ಬಳಿಯಂ ಕೆಲಂಬರ ಮರನಿತಂಬಿನಿಯರ್ ಪರಮಾಮೃತರಸಮನೊಳಕೊಂಡ ಸೂರ್ಯಮಂಡಳಮಂ ಪಾಣಿತಳದೊಳ್ ತಳೆದು ಬರುತ್ತಿಮಿರ್ದಪ್ಪರೆಂಬಂತೆ ಪರಿಪರಿಯ ಸಮೂಷ್ಮಾಯ ಮಾಣಂಗಳಂ ಪಿಡಿದು ನಡೆಯೆಯುಂ ಮತ್ತಂ ಕೆಲರ್ ಸುಪರ್ವಪ್ರಮದೆಯರ್ ಪ್ರದ್ಯುಮ್ನ ಚಕ್ರವರ್ತಿಯ ಸರ್ವರತ್ನನಿಧಿಲಕ್ಷ್ಮಿದೇವೀಯರೆಂಬಂತೆ ತೊಳಗಿ ಬೆಳಗಿ ಪೊಳೆವುತ್ತು ಮಿರ್ಪ ಪದ್ಮರಾಗ ಮಾಣಿಕ್ಯದೀಪ ಪ್ರದೀಪಕಳಿಕಾಕಳಾಪಮಂ ಪಿಡಿದು ನಡೆಯೆಯುಂ ಕೆಲಂಬರ್ ವಿಬುಧವಧುಗಳ್ ಮಿಳಿರ್ದು ಮಿಳ್ಳಿಸುವ ತಮಾಳದೆಳೆಗದಿರ್ಗಳಾವಳಿ ಬಳಸಿದ ಶರದದ ಮುಗಿಲನಾಂತ ನಂದನ ಮಂಗಳದೇವತೆಯರೆಂಬಂತೆ ಮಗಮಗಿಸು ವಗರು ಧೂಪದ ಪೊಗೆಯ ಪೊದರ್ ಕವಲ್ವರಿದು ನೊಗದಿಂದೊಗೆದು ಸಮಾವರಿಸುವ ಧೂಪಘಟಂಗಳಂ ಕರಪಲ್ಲವದಿಂ ಪಿಡಿದು ನಡೆಯೆಯುಂ ಮತ್ತೆ ಕೆಲರಮರ ಕೋಮಳೆ ಯರಗಣ್ಯಪುಣ್ಯಕರು ಕೆಯ್ಯ ಮೇಲೆ ಸಫಲಮಾದುದೆಂಬಂತೆ ನವೀನನಾನಾವಿಧ ವಿಪುಳಫಳಕುಳ ಕಳಿತಂಗಳಾದ ಪಳಿಕಿನ ಪಟಳಿಕೆಗಳಂ ಪಿಡಿದು ಸೌಧಮೇಂದ್ರನ ಸುತ್ತಲುಂ ನಡೆದುಬರ್ಪಲ್ಲಿ

ಕುಸರಂಬೆತ್ತು ತೊಳಪ್ಪ ಪಂಚವಿಧರತ್ನಪ್ರೋತನಾನಾವಿಮಾ
ನಸಮೂಹಂಗಳಿನುಚ್ಚ ಕೇತನದಿನುದ್ಯುತ್ತೋರಣಶ್ರೇಣಿಯಿಂ
ದೆಸೆವುತ್ತುಂ ಪಲವಂದಮಾದ ಬೆಳಗಿಂದಂ ತುಂಬಿತುಳ್ಕಾಡುತುಂ
ಪೊಸಚಿತ್ರಂ ಬರೆದಂಬರಕ್ಕೆ ದೊರೆಯಾಗಿರ್ದೊಪ್ಪಿದತ್ತಂಬರಂ       ೩೫೯

ಪಲವಂದಂಬೆತ್ತ ತೂರ್ಯಧ್ವನಿಯ ರಭಸಮುಂ ಮಂಗಳಾಚಾರಸಂಪಾ
ದಲಸದ್ಗಂಭೀರಗೀತಧ್ವನಿಯ ರಭಸಮುಂ ದೇವದೇವಿಪ್ರಕೋಳಾ
ಹಳಮುಂ ದ್ಯಾವಾಪೃಥಿವ್ಯಂತರದ ತೆಱಪಿನೊಳ್ ತುಂಬಿತುಳ್ಕಾಡುತುಂ ದಿ
ಕ್ಕುಳಮಂ ತಳ್ಪೊಯ್ದುದತ್ಯದ್ಭುತಮೊ ಕಡೆಯ ಕಲ್ಯಾಣಪೂಜಾಪ್ರಯಾಣಂ           ೩೬೦

ವ : ಇಂತಗುರ್ವುವಡೆದ ದೇವರ್ಕಳ ಪೂರ್ವದೇವರ್ಕಳ ಪೆರ್ವಡೆ ನಿರ್ಭರ ವಿಭವದಿಂದಾ ಧರ್ಮನಾಥನ ನಿರ್ವಾಣಸ್ಥಳಮಂ ತೊಟ್ಟನೆ ಮುಟ್ಟೆವಂದು ಮುಟ್ಟಿದ ಭಕ್ತಿಯಿಂ ಪೊಡೆವಟ್ಟು

ಆ ಸಮ್ಮೇದಾದ್ರಿಚೂಡಾಗ್ರದ ತೆಱಪನಿತುಂ ಮಂಗಳದ್ರವ್ಯಧಾರಿ
ಸ್ತ್ರೀಸಂದೋಹಕ್ಕೆ ಸರ್ವಾಮರರ ಸಮುದಯಕ್ಕಂ ಸುನೀರಾಜನಾಸ್ಥಾ
ಳೀಸಂಘಾತಕ್ಕಮಿಂಬಿಲ್ಲದೆ ನೆಱೆತುಱುಗಿರ್ದತ್ತು ತಚ್ಛೃಂಗಮಂ ದೇ
ವೇಶಂ ಮುಂತಾದ ದೇವರ್ ತ್ರಿವಿಧಿ ಮಿಗೆ ಬಲಗೊಂಡರಾನಂದದಿಂದಂ         ೩೬೧

ವ : ಅಂತು ಧರ್ಮನಾಥನಾಲಿಂಗನಂಗೆಯ್ದು ಮೋಕ್ಷಲಕ್ಷ್ಮಿಯ ಸಿರಿಮಂಚದ ಕೆಳಗೆ ಪೊಳೆವ ಪಳಚ್ಚನಾದಚ್ಚವಳಿಕಿನ ಪಾವುಗೆಗಳಂತೆ ಥಳಥಳಿಪಚಂದ್ರಕಾಂತದ ಸಮಾಧಿ ಶಿಲಾಪಟ್ಟಕಮನಾಖಂಡಳಂ ಕಂಡು ತ್ರಿಃಪ್ರದಕ್ಷಿಣಂಗೆಯ್ದು ತನ್ನಯ ಕೋಟೀರ ಕೋಟಿ ಪರಿಘಟಿತ ಮಣಿಮರೀಚಿನಿಚಯದಿಂದದಕ್ಕೆ ವಾಸವಶರಾಸನದ ಬಾಸಣಿಗೆಯನಿಕ್ಕುವಂತೆ ಮೆಯ್ಯಿಕ್ಕಿ ಮುಂದೆ ಕುಳ್ಳಿರ್ದು

ತಣಿಯದು ತಂದುಕೊಟ್ಟು ಸುರಕೋಟಿ ಸುರದ್ರುಮಮಿತ್ತ ಪೂಗಳಂ
ತಣಿಯದು ಪೂಜೆಯಂ ಬಿಡದೆ ಮಾಡಿಯುಮಿಂದ್ರನ ಹಸ್ತಪಲ್ಲವಂ
ತಣಿಯದು ಮತ್ತಮಾತನ ಮೊಗಂ ಪೊಗಳ್ದುಂ ಗುಣಭಾರದೇಳ್ಗೆಯಂ
ಪ್ರಣುತಮೆನಿಪ್ಪ ಧರ್ಮಜಿನನಿರ್ವೃತಿಪೂಜೆಯದೇನುದಾತ್ತನೋ    ೩೬೨

ವಿಳಸಿತ ಪರಿನಿರ್ವಾಣ
ಸ್ಥಳಮಂ ಪೂಜಿಸಿದುದೊಸೆದು ಪೊಡವಟ್ಟುದು ಕ
ಣ್ಗೊಳಿಪಂತಖಿಳಸುರಾಸುರ
ಕುಳಮದಱೊಳ್ ಕ್ರೀಡಿಸುತ್ತುಮಿರ್ದುದು ಪಿರಿದುಂ       ೩೬೩

ಪಂಚಮಕಲ್ಯಾಣೋದ್ಘ ಸ
ಮಂಚನದುತ್ಸವಮನಿಂತು ಬಿತ್ತರಿಸಿದುದಾ
ದಂ ಚೆಲ್ವನಾಗಿ ಸುರ (?)
ಸಂಚಯಮಚ್ಚರಿ ಜಗತ್ತ್ರಯಕ್ಕಪ್ಪನಂ           ೩೬೪

ವ : ಇಂತು ಪುರಂದರಪುರಸ್ಸರಮಾದ ಸರ್ವಗೀರ್ವಾಣಗಣಮೆಲ್ಲಂ ಧರ್ಮನಾಥ ತೀರ್ಥಂಕರನ ಪರಿನಿರ್ವಾಣಕಲ್ಯಾಣಪ್ರದೇಶಮನೆ ಶಸ್ತಸಮಸ್ತ ಮಂಗಳ ವಸ್ತುಗಳಿಂ ಸವಿಸ್ತರಮಾರಾಧಿಸಿದನಂತರಂ

ನವರಸಮೊಪ್ಪಿತೋಱೆ ಗಮಕಂ ನೆಱೆಕೈಮಿಗೆ ಪಂಚಭಾವಮುಂ
ತವೆಯದ ಶೋಭೆಯಂ ತಳೆಯೆ ಕೋಮಳಹಸ್ತತಳಾಭಿಚಾಳನಂ
ಪ್ರವರಪದಾಗ್ರಚಾಳನದೊಳೊಂದಿ ಚಮತ್ಕೃತಿಯಾಗಿ ತೋರ್ಪಿನಂ
ಸವಿವಡೆದಿರ್ದ ನಾಟ್ಯಮನೊಡರ್ಚಿದನಾ ದಿವಿಜಾಧಿನಾಯಕಂ        ೩೬೫

ವ : ಇಂತು ಪುರುವಿಭೂತಿಯಿಂದಾ ಪುರುಹೂತಂ ವಿಷ್ಟಪತ್ರಯಕ್ಕೆ ವಿಸ್ಮಯಮಪ್ಪಂತು ನಿರ್ವಾಣನೃತ್ಯಮಂ ಬಿತ್ತರಿಸಿ ಮಾಡಿ ಮಮಗಳಸಂಗೀತಮಂ ಪಾಡಿ ತದೀಯ ಮಹಾಮಹಿಮೆಯಂ ಕೊಂಡಾಡಿ ಘನಾನುರಾಗದೊಳ್ ಕೂಡಿ ಪುಳಕಾಂಕುರಸಂಕುಳಂ ಮೂಡಿ ತತ್ತೀರ್ಥಂ ದಿವ್ಯಮೂರ್ತಿಯಂ ನೀಡುಂ ನೋಡುತ್ತುಮಿರ್ಪುದುಂ

ಮಂಜಿನ ಮಾಳ್ಕೆಯಿಂ ಪರೆದುಪೋಗಿ ಜಿನೇಶ್ವರದಿವ್ಯದೇಹಮಾ
ರಂಜಿತ ಕೇಶಮುಂ ನಖಮುಮೆಯ್ದುಳಿದಿರ್ದೊಡೆ ಗಂಧಸಾರದಿಂ
ಮಂಜರಿಗೊಂಡ ಕಪ್ಪುರದ ಘಟ್ಟಿಗಳಿಂದಮೆ ಮಾಡಿ ದಗ್ಧಮಂ
ಪುಂಜಿಸಿತೋರ್ಪ ಭಸ್ಮದಿನೊಡರ್ಚಿದುದಾ ಸಭೆ ಬೂದಿಯಾಟಮಂ೩೬೬

ವ : ಅಂದಿಂತೊಟ್ಟು ಬೂದಿಯಾಟಂ ಲೋಕದೊಳ್ ಪರೆದು ಪ್ರಸಿದ್ಧ ಮಾದುದು ಮತ್ತಮಾ ಕೃತಕೃತ್ಯನಾದ ಧರ್ಮನಾಥಸ್ವಾಮಿಯ ಮಹಾಮಹಿಮೆಯಂ ಮನದೊಳ್ ಮೆಚ್ಚಿ ಮೆಚ್ಚಿ ವಿಚಿತ್ರಂಬಡುತ್ತುಮಿದ್ದಾಖಂಡಳಂ ನಿಟಿಳತಟಘಟಿತರ ಕುಟ್ಮಳನುಂ ಜಯಜಯೋಚ್ಚಾರಿತ ಮುಖಮಂಡಳನುಮಾಗಿ

ಮೂಜಗಮೆಲ್ಲಮಂ ಕಿಡಿಸಿ ದುಃಖಮನೂಡುವ ಸರ್ವಕರ್ಮಕ
ವ್ರಾಜಮನೊರ್ಮೊದಲ್ ತವಿಸಿದುನ್ನತಿ ಕಾಲನನಿಕ್ಕಿಮೆಟ್ಟಿ ಸಂ
ಯೋಜಿಸಿದಾರ್ಪು ಸಂಸರಣವಾರ್ಧಿಯನೀಸಿದ ಶಕ್ತಿ ಶಾಶ್ವತ
ಶ್ರೀಜಸುಖಾನುಭೂತಿ ನಿನಗಲ್ಲದೆ ಕೂಡುಗುಮೇ ಜಿನೇಶ್ವರಾ       ೩೬೭

ಮುನ್ನಂ ಸಾಮ್ರಾಜ್ಯಮಂ ಬಿಟ್ಟಧಿಕತರತಪೋನಿಷ್ಠನಾದಿಂಬಳಿಕ್ಕಂ
ಕೆನ್ನಂ ತ್ರೈಲೋಕ್ಯವಂದ್ಯಾತಿಶಯಿತಪರಮಾರ್ಹಂತ್ಯಲಕ್ಷ್ಮೀಪ್ರಭಾಸಂ
ಪನ್ನಂ ನೀನಾಗಿ ಮತ್ತಂ ಕೆಡದಮೃತಪದಪ್ರಾಪ್ತನಾಗಿರ್ದೆ ನಿನ್ನಂ
ತೌನ್ನತ್ಯಂಬೆತ್ತನಾವಂ ತ್ರಿಭುವನನುತವತ್ಪಂಚಕಲ್ಯಾಣಯೋಗ್ಯಾ  ೩೬೮

ಎನಗಂ ನಿನ್ನಂತಿರೈದುಂತೆಱದ ಪರಮಕಲ್ಯಾಣಸಂಪತ್ತಿಯಂ ಪಾ
ವನಮಂ ನೀನಿತ್ತು ಧನ್ಯತ್ತ್ವಮನೊದವಿಪುದೆಂದಿಂದ್ರನಾನಂದದಿಂದಂ
ಘನವಿಜ್ಞಾನಾತ್ಮನುಂ ಧರ್ಮಜಿನಪನನತಿಪ್ರಾರ್ಥನಂಗೆಯ್ದು ಮಂದಾ
ರ ನಮೇರೂತ್ಫುಲ್ಲಪುಷ್ಪಾಂಜಳಿಯನೆಸಗಿದಂ ಮೋಕ್ಷಸೌಖ್ಯವ್ಯಪೇಕ್ಷಂ      ೩೬೯

ವಚನಂಗಳೆಂಬ ಪುಷ್ಪ
ಪ್ರಚಯಂಗಳಿಯ್ದೆಪೂಜಿಸಿದನಾ ಜಿನನಂ
ಶುಚಿ ಬಾಹುಬಲಿಮುನೀಶಂ
ಶಚಿಯೊಡೆಯನ ತೆಱದಿನೈದುಕಲ್ಯಾಣದೊಳಂ   ೩೭೦