ಶ್ರೀಗುರುವಚನ ವಿಶೇಷದೊ
ಳಾಗಿಸಿ ವಿಶ್ವಾಸಮಂ ಮಹಾನಂದಮನಾ
ಭೂಗಧಿನಾಥಂ ತಳೆದಂ
ಭೋಗಯುತಂ ಸರಸಚತುರವಿಕುಳತಿಳಕಂ        ೧

ವ : ಮತ್ತಮಾ ಮಹಾಸೇನ ಮಹಾರಾಜನಾ ಮುನಿಕುಂಜರಂ ಪೇಳ್ದ ದೇವ ಸ್ತ್ರೀನಿಕರಸಮಾಗಮನಸಂಭ್ರಮಪರಿಶೋಭಾಕೌತುಕಸಮಾಳೋಕನವ್ಯಾಕುಳಿತಚಿತ್ತನಾಗಿ ಮಱುದಿವಸಂ ಸರ್ವಾವಸರ ಸಮಯಮಾದ ಮಹಾಸ್ಥಾನಮಂಡಪಕ್ಕೆ ಮುನ್ನಮೆ ಸಮುಪಶೋಭನಾರ್ಥಂ ವೇತ್ರಧರರಂ ಕಳಿಪಿ ತತ್ಕೋಣಾಂತರ್ಭಾಗಶೋಧನಾನಂತರಂ ನಿರಂತರಿಸಂತೋಷದಿಂದಂ ಮೆಲ್ಲಮೆಲ್ಲನಲ್ಲಿಗೆ ಬಿಜಯಂಗೆಯ್ವಾಗಳ್ ಕಟ್ಟಿದಿರೊಳಾ ಸಭಾಮಂಡಪಮೆಂತಿರ್ದುದೆಂದೊಡೆ

ವಿಳಿಸಿತಮಪ್ಪ ಕೆಂಬರಲ ಪಂತಿಗಳಿಂದಮೆಯ್ದೆ ಕೋ
ಮಳಹರಿನೀಳಭಿತ್ತಿಗಳಿನೊಪ್ಪುವ ಮುತ್ತಿನ ಲಂಬಳಂಗಳಿಂ
ಪಳಿಕಿನ ಚೆಲ್ವ ಪುತ್ತಳಿಗಳಿಂದೆ ಮನೋಹರಮಾಗಿ ಸಂತತಂ
ಥಳಥಳಿಸುತ್ತುಮಿರ್ದುದು ವಿಶಾಳಸಭಾಸದನಂ ನೃಪಾಳನಾ          ೨

ವ : ಅದಱೊಳ್

ಪಿರಿದುಂ ಬಿಳ್ದಿರ್ದ ಕರ್ಪೂರದ ಪರಿಮಳಸಂಸಕ್ತಮತ್ತದ್ವಿರೇಫೋ
ತ್ಕರಮೆಲ್ಲಾ ತಾಣದೊಳ್ ಮಾರ್ಪೊಳೆಯ ನಿರುಪಮೇದೀವರೌಘೋಪಹಾರೋ
ದ್ಧುರಶೋಭಾಶಂಕೆಯಂ ನೋಳ್ಪರ ನಯನಚಯಕ್ಕೆಯ್ದೆಮಾಡುತ್ತಮಿರ್ದ
ತ್ತುರುಚಂಚಚ್ಚಂದ್ರಕಾಂತಪ್ರಘಟಿತಮಸಮಂ ತುಂಗಮಾಸ್ಥಾನರಂಗಂ        ೩

ವ : ಅಂತತಿರಮಣೀಯಂಗಳಪ್ಪ ತನ್ನ ಮಣಿಮಯಶಿಖರಂಗಳ ಬೆಳಗಿಂದಾ ಕಾಶಾಂತರಾಳದೊಳಾವಗಂ ಮಿಂಚುಗಳ ಸಂಚಯಮಂ ಪ್ರಪಂಚಿಸುತ್ತುಮಿರ್ದ ಸಭಾ ಸದನಮಂ ನೋಡುತ್ತುಮಾ ನಾಡೆಱೆಯಂ ನಿಜಚರಣವಿಳಸದರುಣಕಮಳವಿನ್ಯಾಸವಿಳಾಸದಿಂ ರತ್ನಕುಟ್ವಿಮ ಭೂಮಿಕಾಮಿನಿಗೆ ರಾಗರಸಪೂಗದಾಭೋಗಮನೀವುತ್ತುಂ ಬಂದು ತದಾಸ್ಥಾನರಂಗಮೆಂಬ ಲಕ್ಷ್ಮಿಯ ಕಿರೀಟಮೆಂಬಂತೆ ರಂಜಿಸುವ ಸಂತಪ್ತತಪನೀಯ ಕಾಂಚನಮಯಸಿಂಹಾಸನಸಮಾಸೀನನಾಗಿರ್ಪುದುಂ

ಕನಕಮಯಮಾದ ಸಿಂಹಾ
ಸನದ ಪ್ರಭೆ ಪಸರಿಸಲ್ಕೆ ಮನುಜಾಧೀಶಂ
ಘನಮಳೆವಿಸಿಲಾವರಿಸಿದ
ದಿನಕರನ ಶ್ರೀಯನಾಂತು ಕಣ್ಗೆಸೆದಿರ್ದಂ           ೪

ವ : ಮತ್ತಮಾತಂ

ಸಾದಿನ ರೂಪುಗೊಂಡು ತಿಮಿರಾವಳಿ ನಿನ್ನಯ ಕಕ್ಷಯುಗ್ಮದೊಳ್
ಮೇದುರಮಾಗಿ ಪೊರ್ದಿ ನಮಗಂಜದದಿರ್ದಪುದೆಂಬಿದಂ ನೃಪಂ
ಗಾದರದಿಂದೆ ಪೇಳ್ವ ಶಶಿಸೂರ್ಯರ ಮಂಡಳದಂತಿರಿರ್ದ ಚಿ
ತ್ರೋದಯನೂತ್ನರತ್ನಮಯಕುಂಡಲಮಂಡನದಿಂದಮೊಪ್ಪಿದಂ   ೫

ವ : ಇಂತನೇಕರಾಜನ್ಯಕಮಕುಟತಟಘಟಿತವಿಕಟ ಹರಿನೀಳಮಣಿ ಪೇಟಕ ಮಧುಕರ ನಿಕರಪರಿಜಟಿಳಿತನಿಜಚರಣನಳಿನಯುಗಳನಪ್ಪಾ ಮಹೀಪಾಳತಿಳಕನೊಡ್ಡೋ ಲಗಂಗೊಟ್ಟಿರ್ಪುದುಂ

ಬಂಧುಜನಂಗಳಿಂ ಪಿರಿದುಮಾಪ್ತಜನಂಗಳಿನಾಶ್ರಿತಾದಿಸಂ
ಬಂದಿಜನಂಗಳಿಂದೆ ಪರಿವಾರಜನಂಗಳಿನೆಯ್ದೆ ತುಂಬಿ ತಾಂ
ಬಂಧುರಮಾಗಿ ತಿಂತಿಣಿಯದಾಯ್ತು ವಿಕೀಲಿತರತ್ನಕಾಂತಿ ಚಿ
ತ್ರಂ ಧರಣೀಶನೋಲಗದ ಶಾಲೆಯ ನಿರ್ಮಿಸಿದತ್ತು ಲೀಲೆಯಂ       ೬

ವ : ಮತ್ತಂ

ನೆರೆದಧಿರಾಜ ಮಂಡಳಿಕ ಮಂತ್ರಿ ಪುರೋಹಿತ ದಂಡನಾಥವಿ
ಸ್ಫುರಿತಮಹಾಪ್ರಧಾನರ ಲಸನ್ಮಕುಟಂಗಳೊಳೆಯ್ದೆ ಕೀಲಿಸಿ
ರ್ದುರುತರರತ್ನಸಂತತಿಗಳಿಂ ನೆಱೆತುಂಬಿದ ಕಾರಣಂ ಸಭಾ
ಸುರುಚಿರಮಂದಿರಂ ಮೆಱೆವುತಿರ್ದುದು ರೋಹಣಶೈಳಮೆಂಬಿನಂ  ೭

ನಿರುಪಮಚಂದ್ರಕಾಂತಮಯರಂಗದ ಕಾಂತಿವಿತಾನಮೆತ್ತಲುಂ
ಪರಕಲಿಸಲ್ ಸಭಾಜನದ ಮೇಲೆ ಸುದುಗ್ಧಪಯೋಧಿಮಧ್ಯದೊಳ್
ಸುರರ ಸಮೂಹಮೋಕುಳಿಯನಾಡುತಮಿರ್ದಪುದೆಂಬ ಶಂಕೆಯಂ
ನೆರೆಯಿಸುತುಂ ವಿರಾಜಿಸಿದುದಾ ಸಭೆ ಷೋಡಶಭೂಷಣಾಂಚಿತಂ    ೮

ಓಲಗದ ಸೂಳೆಯರ್ ಭೂ
ಪಾಲನನಿಕ್ಕೆಲದೊಳೆಯ್ದೆ ಕುಳ್ಳಿರ್ದರ್ ಸ
ಲ್ಲೀಲೆಯಿನನಂಗಚಕ್ರಿಯ
ಲಾಲಿತ ಬಾಣಂಗಳಂತೆ ಕಣ್ಗೆಸೆವುತ್ತುಂ            ೯

ಮಾಳವಭೂಪನೊಂದೆಡೆಯೊಳೊಂದೆಡೆಯೊಳ್ ಮಗಧಾಧಿನಾಯಕಂ
ಚೋಳಮಹೀನಪನೊಂದೆಡೆಯೊಳೊಂದೆಡೆಯೊಳ್ ಸಲೆ ಗುರ್ಜರಾಧಿಪಂ
ಗೌಳನರೇಶನೊಂದೆಡೆಯೊಳೊಂದೆಡೆಯೊಳ್ ವರಕುಂತಳಾಧಿಪಂ
ಲೀಲೆಯಿನಿರ್ದರೋಲದೊಳಂದು ನರೇಂದ್ರ ಸುವಂದನೀಯನಾ      ೧೦

ವ : ಮತ್ತಮೊಂದೆಡೆಯೊಳ್

ರಸಮಂ ಭಾವಮನಪ್ಪುಕೆಯ್ದು ಪಿರಿದುಂ ಶಬ್ದಾರ್ಥವೈಚಿತ್ಯ್ರದಿಂ
ದೆಸೆಯುತ್ತಿರ್ದ ಸಮರ್ಥ ಸತ್ಕವಿವಿತಾನೋತ್ಪಾದ್ಯಮಂ ಪದ್ಯಮಂ
ವಸುಧಾಧೀಶ್ವರನೊಲ್ದು ಕೇಳ್ದು ತಲೆಯಂ ತೂಗುತ್ತುಮಿರ್ದಂ ದಲಾ
ರಸಮಂ ಚಿತ್ತದೊಳೆಯ್ದೆ ತುಂಬಿ ಮಿಗೆ ಮತ್ತಳ್ಕಾಡುತಿರ್ದಂದದಿಂ  ೧೧

ಚಾರ್ವಾಕ ಬೌದ್ಧ ಸಾಂಖ್ಯರ
ಖರ್ವಪ್ರಾಭಾಕರರ್ ಸುನೈಯಾಯಿಕರುಂ
ಸರ್ವಜಿಜ್ಜೈನವಾದಿಗ
ಳುರ್ವೀಶನ ಸಭೆಯೊಳಿರ್ದರತಿಮುದದಿಂದಂ      ೧೨

ಕಿವಿಗಳ್ಗೆ ಸಂತತಂ ಮಿಗೆ
ಸವಿಯಂ ಸಾಲಿಡುತುಮಿರ್ಪ ಸರಸೋಕ್ತಿಯೊಳಂ
ನವನಿಪುಣತ್ವಮನಾಂತೊ
ಪ್ಪುವ ಗಮಕಿಗಳುಂ ಸುವಾಗ್ಮಿಗಳುಮಿರೆ ನಲವಿಂ           ೧೩

ಮಲಹರಿ ಮೇಘರಂಜಿ ಘಳಮಂಜರಿ ತೊಂಡಿ ವಸಂತಮೆಂಬ ಮಂ
ಜುಳತರ ರಾಗರಂಜನದೆ ಚಿತ್ತಚಮತ್ಕೃತಿಯಂ ನಿಮಿರ್ಚುವು
ಜ್ವಳ ಮೃದುಗೀತಮಂ ಬಿಡದೆ ಪಾಡಿ ಮುದಂ ಮಿಗೆ ಮೆಚ್ಚಿಸುತ್ತುಮಂ
ದಿಳೆಗಧಿನಾಥನೋಲಗದೊಳಿರ್ದುದು ಗಾಯಕಗಾಯಕೀಜನಂ        ೧೪

ವ : ಮತ್ತಮಾತನ ಸಮೀಪದೊಳ್

ಮೊಲೆಗಳ್ ಬಿಣ್ಪಿಂದೆ ಬಳ್ಕುತ್ತಿರೆ ಮಣಿವಿಳಸತ್ಕಂಕಣಂಗಳ್ ಜಝಣ್ಮೆಂ
ದುಲಿಯಲ್ ಮಾಣಿಕ್ಯಹಾರಾಳಿಗಳಲುಗೆ ಕರಂ ಮೇಲುದಳ್ಳಾಡೆ೩ ನೇತ್ರಾಂ
ಚಳಮಂ ಚೆಲ್ಲುತ್ತುಮೆಲ್ಲಾ ಸಭೆಯೊಳಮಳಸಚ್ಚಾಮರೌಘಂಗಳಂ ಭೂ
ತಳನಾಥಂಗಿಕ್ಕಿದರ್ ಕಾಮಿನಿಯರನುಪಮಾಕಾರೆಯರ್ ಲೀಲೆಯಿಂದಂ         ೧೫

ವ : ಮತ್ತಮಾ ಕ್ಷತ್ರಿಯಚೂಡಾಮಣಿ ಪೊದೆದಿರ್ದ ಪಿರಿದುಂ ಸಪುರಮಾದ ಬೆಳುದಿಂಗಳ ಧಾವಲ್ಯಮನಿಳಿಕೆಯ್ವುತ್ತಿರ್ದ ಪ್ರಶಸ್ತವಸ್ತ್ರಾಂಚಳಂ ಬೀಸುವ ಚಾಮರಂಗಳ ಗಾಳಿಯಿಂದಳ್ಳಾಡುತ್ತುಮಿರಲಾ ನೃಪಾಳೊತ್ತಮನಿಂತು ಒಡ್ಡೋಲಗಂಗೊಟ್ಟಿರ್ಪುದುಮನ್ನೆಗ ಮಿತ್ತಲ್

ವಸುಮತಿಗವತರಿಸಿದಪಂ
ದಶರಥಚರನಪ್ಪ ತದಹಮಿಂದ್ರಂ ದಿವದಿಂ
ಮಿಸುಪ ಚರಮಾಂಗಮಂ ಕೊಳ
ಲೆಸಪಂದೆಂದಱಿದನಂದು ಸೌಧಮೇಂದ್ರಂ        ೧೬

ವ : ಇಂತು ನಿಜಪರಮಾವಧಿಬೋಧಪ್ರಯೋಗವಿಧಾನದಿಂ ಧರ್ಮನಾಥ ನಾಗವತರಿಸಿದಪನೆಂದಱಿದು ರಾಗಿಸಿ ಬಳಿಯಂ ತನ್ನಯ ಭಾಂಡಾಗಾರಾಧಿಕಾರನಯುಕ್ತ ನಪ್ಪ ಕುಬೇರನಂ ಕರಸಿ ನೀಂ ಪೋಗಿಯುತ್ತರಕೌಶಲದೇಶಾಧೀಶ್ವರನುಂ ರತ್ನಪುರಲಕ್ಷ್ಮೀ ಮಣಿಮಯಮುಕುರನುಮಿಕ್ಷ್ವಾ ಕುವಂಶವನಜವನದಿವಾಕರನುಮೆನಿಪ ಮಹಾಸೇನ ಮಹಾರಾಜನ ವಿರಾಜಮಾನ ರಾಜಧಾನಿಯೊಳ್ ಧರ್ಮತೀರ್ಥಕರ ಗರ್ಭಾವತರಣ ಕಲ್ಯಾಣನಿಮಿತ್ತಂ ರತ್ನವೃಷ್ಟಿಯಂ ಕಱೆಯೆಂದು ಬೆಸಸಲದಂ ಶಿರದೊಳಾಂತು ಮಹಾ ಪ್ರಸಾದಮೆಂದು ಕೈಕೊಂಡಂ ಮತ್ತಂ ನಿಜಪುರಪ್ರಧಾನೆಯರಪ್ಪ ಸುರಪುರಂಧ್ರಿಯರುಮಂ ಬರಿಸಿ ಪೋಗಿ ನೀವಾ ಜಿನನ ಜನನಿಗೆ ಪರಿಚರ್ಯಾಪರಿಕರಮನೊಡರ್ಚುತ್ತು ಮಿರಿಯೆಂದು ನಿಯಾಮಿಸಿ ಬೇಱೆವೇಱೆಯವರವರ್ಗೆ ತಕ್ಕಂತಪ್ಪ ಪರಿವಾರದೇವಿ ಯರುಮನಪ್ಪಯಿಸಿ ಬೀಳ್ಕೊಟ್ಟು ಕಳಿಪಲೊಡಮವರ್ ಬರುತ್ತುಮಾಕಾಶತಳಪ್ರದೇಶ ಮನೆಯ್ದಿದಾ ಪೊತ್ತಿನೊಳ್

ಆಗಸದೊಳೊಗೆದುದುಱೆ ಮಿಗಿ
ಲಾಗಿರೆ ಬೆಳಗುಗಳ ಬಳಗಮೆಲ್ಲಾ ತಾಣದೊ
ಳಾಗಳ್ ಸಭೆಯೆಲ್ಲಂ ಬೆಱ
ಗಾಗಿದಿದೇನೆಂದು ನೋಡಿದುದು ವಿಸ್ಮಯದಿಂ   ೧೭

ಮುಗಿಲೇನುಂ ಪೊರ್ದದಿಪ್ಪಾಗಸದೊಳಿರದು ವಿದ್ಯುಲ್ಲತಾಮಾಲೆ ಮತ್ತಂ
ಪಗಲುಂ ನಕ್ಷತ್ರಕಾಂತಿಪ್ರಸರಮದಿರದಿಂತೆಲ್ಲಿಯುಂ ಕೋಷ್ಠಚಾರಾ
ಳಿಗಳಿನ್ನುಂ ಸಾರದಿರ್ಪಾ ನೆಲೆಯೊಳುರಿಗಳುಂ ನೊಳ್ಪಡಿಲ್ಲಿಂತಿದೇನೊ
ಯ್ದೊಗೆದಿರ್ದೀ ದೀಪ್ತಿಯೆಂಬೀ ಬಹುವಿಧದ ವಿಕಲ್ಪಂಗಳಂ ಕಲ್ಪಿಸುತ್ತುಂ     ೧೮

ವ : ಕಡುಚೋಜಿಗಮಿದೇನೆಂದು ಸಭೆಯುಂ ಸಭಾಪತಿಯುಂ ಕೊರಲ್ಗಳಂ ನೆಗಪಿ ನೋಡುತ್ತುಮಿರಲ್ ಮತ್ತಂ

ಪೊಳೆವ ಕೊರಲ್ಗಳಂದವಧಿಯಾಗಿ ಮುಗಿಲ್ಗಳ ಮೊತ್ತಮಾ ಸಮು
ಜ್ವಳತರ ದೇಹಯಷ್ಟಿಗಳನಾವರಿಸಲ್ ಮಿಗೆ ಸೂರ್ಯಬಿಂಬಮಂ
ಘಳಿಲನೆ ಗೆಲ್ವುದೊಂದು ಬಗೆಯಿಂದೆ ಸಮುದ್ಯತಪೂರ್ಣಚಂದ್ರಮಂ
ಡಳ ಘನಸೈನ್ಯದಂತೆಸೆದುದಿಂದುಮುಖೀಜನವಕ್ತ್ರಮಂಡಳಂ         ೧೯

ವ : ಅದಱಿಂ ಬಳಿಯಂ

ಕೋಮಳಪಂಚರತ್ನಮಯಭೂಷಣಕಾಂತಿಗಳಿಂದೆ ಸುತ್ತಲುಂ
ವ್ಯೋಮದೊಳಾ ಸುರಾಧಿಪವಿಳಾಸವತೀನಿವಹಂಗಳಾಕ್ಷಣಂ
ಕಾಮನ ಬಿಲ್ಗಳಂ ಬಿಡದೆ ನಿರ್ಮಿಸಿ ತಾವವಱಲ್ಲಿ ಮತ್ತಮು
ದ್ದಾಮ ಸುವರ್ಣಬಾಣನಿಚಯಂಗಳಿವೆಂಬವೊಲೊಪ್ಪಿದರ್ ಕರಂ   ೨೦

ವ : ಮತ್ತಮಾಕಾಶಮೆಂಬ ಭಿತ್ತಿಯೊಳ್ ಬರೆದ ನವೀನಚಿತ್ರಂಗಳೆಂಬಂತೆ ಭಾವಿತಾ ಕಾರೆಯರಾಗಿ ತೋಱುತ್ತುಂ ವಿಯತ್ತಳದಿಂದಿಳಿದು ಮೆಲ್ಲಮೆಲ್ಲನೆ ಬರುತ್ತುಮಿರಲ್ ಮತ್ತಂ

ವರಪದ್ಮರಾಗಮಣಿನೂ
ಪುರರೂಪಂ ಕೊಂಡು ಸೂರ್ಯನವರಂಘ್ರಿಗಳಂ
ಸ್ಮರಿಪೀಡಿತನಾಗಿ ಮಹಾ
ದರದಿಂದಂ ಪಿಡಿದನೆಂಬ ತೆಱದಿಂ ಮೆಱಿದಂ      ೨೧

ವ : ಅಲ್ಲಿಂಬಳಿಯಂ

ವರವೃಂದಾರಕಸೌಂದರೀಸಮುದಯಂ ತೀರಾಗ್ರದೊಳ್ ಬಂದು ನಿಂ
ದಿರೆ ಮಂದಾಕಿನಿವಾರಿಬಿಂದುಮಯಶೃಂಗಾರಂಗಳಂ ಶ್ರೇಣಿಯಂ
ತಿರೆಗಳ್ ಕೈಗಳಿನಿತ್ತು ತಾಂ ನುಡಿಸುವಂತಿರ್ದತ್ತು ಘೋಷಂಗಳಿಂ
ಧರೆಯೊಳ್ ನಿರ್ಮಳರಿಂಗೆ ನಿರ್ಮಳರದೇಂ ಸಂಪ್ರೀತಿಯಂ ಮಾಡರೇ೨೨

ವ : ಆ ಸ್ವರ್ಣದಿಯಂ ಪರಿತೂರ್ಣದಿಂ ತರ್ಕ್ಕೈಸಿಕೊಳುತ್ತುಮಿರ್ದಪರೆಂಬಂ ತಿರೀಸಾಡುತ್ತುಂ ದಾಂಟಿಬರುತ್ತುಮಿರ್ಪಾಗಳ್

ಸುರುಚಿರಪಾರಿಜಾತಕುಸುಮಸ್ತಬಕಂಗಳ ಕರ್ಣಪೂರಸ
ತ್ಪರಿಮಳಲೋಭದಿಂತೊಡನೆ ತುಂಬಿಗಳುಂ ನಭದಲ್ಲಿ ಮಂಡಳೀ
ಕರಿಸಿ ನಿಳಿಂಪಕಾಂತೆಯರಿಗೆತ್ತಿನ ಹೀಲಿಯ ಚೆಲ್ವುವೆತ್ತ ಝ
ಲ್ಲರಿಗಳಿವೆಂಬಿನಂ ಬಿಡದೆ ಬಂದುವು ಲೀಲೆಯನಂದು ಮಾಡುತುಂ  ೨೩

ಗುರುಕುಚಮಂಡಳಸ್ಥಿತಿಯನೀಕ್ಷಿಸಿ ಮಧ್ಯಮಭಾಗದೊಂದುಸಂ
ಸ್ಥಿರತೆಯ ಬೋಧಮಂ ಸಭೆಗೆ ಪುಟ್ಟಿಸುತಿರ್ದ ವಿಶಿಷ್ಟರೂಪಮಂ
ಧರಿಸಿ ಸಮಸ್ತಲೋಕವನಿತಾನಿಕರಂಗಳನಾವಗಂ ಲಘೂ
ಕರಿಸುವ ದೇವಕಾಮಿನಿಯರೆಯ್ದಿದರಂದು ಸಭಾಸಮೀಪಮಂ        ೨೪

ವ : ಅಂತಾ ದೇವಕಾಂತೆಯರ್ ನಭೋಮಾರ್ಗದಿಂದಿಳಿದು ಬಂದು ತಮ್ಮಯ ಶರೀರ ಸಂಜಾತಸೌಗಂಧ್ಯಸಂಸ್ಪರ್ಶಸಂಬಂಧದಿಂದಾದ ಸಂಮದ ಮದಭರ ಮಂದರ ಪ್ರಯಾತನಪ್ಪ ಬಂಧುರಗಂಧವಹನಂ ಮುಂದಿಟ್ಟುಕೊಂಡು ವಿಚಿತ್ರರತ್ನಪರಿಮಂಡಿತಮಪ್ಪ ಸಭಾಮಂಡಪದೊಳಗಂಪೊಕ್ಕು ನೋಳ್ಪಾಗಳ್

ಹರಿವಿಷ್ಟರದೊಳ್ ಕುಳ್ಳಿ
ರ್ದರಸನನಾ ದಿವಿಜಕಾಂತೆಯರ್ ಕಂಡು ಮಹಾ
ದರದಿಂ ಚಿಂತಿಸಿದರ್ ತ
ಮ್ಮು ರುಚಿತ್ತದೊಳೆಯ್ದೆ ಮಾಡುತಂ ಸಂದೆಗಮಂ         ೨೫

ವ : ಅದೆಂತೆನೆ

ಉದಯಗಿರೀಂದ್ರದೊಳ್ ನೆಲಸಿದುದ್ಘಕಳಾಪರಿಪೂರ್ಣಚಂದ್ರನೋ
ಮದಭರಮತ್ತಮಾನಸೆಯರಪ್ಪ ದಲೆಮ್ಮುಮನೆಯ್ದೆ ಸೋಲಿಸಲ್
ಮದನನೆ ಬಂದು ಕುಳ್ಳಿದನೊ ಮಾನವಲೋಕದರಿದ್ರಮಂ ಸಮಂ
ತೊದೆದುಱೆ ನೂಂಕಲೆಂದಿರದೆ ಬಂದ ಕುಬೇರನೊ ಭಾವಿಸಲ್ ನೃಪಂ           ೨೬

ಎಮ್ಮಂ ಬಂದರೊ ಬಾರರೊ
ಸಮ್ಮುದದಿಂ ನೋಳ್ಪೆನೆಂದು ಸೌಧಮೇಂದ್ರಂ
ಪೆರ್ಮೆಯೊಳೆ ಮುಂದೆ ಬಂದಂ
ತಿಮ್ಮಡಿಸಿರಿಯಲ್ಲಿ ಕೂಡಿ ಕುಳ್ಳಿರ್ದನೋ ಪೇಳ್           ೨೭

ವ : ಎಂದಿಂತು ನಾನಾವಿಕಲ್ಪಂಗಳಂ ಕಲ್ಪಿಸುತ್ತುಮರಸನ ಸಮೀಪಕ್ಕೆವರ್

ಆಗಳ್ ಭೂಪನ ತತ್ಸಭಾಜನದ ಚೇತೋವೃತ್ತಿಯುಂ ಕಣ್ಗಳುಂ
ಬೇಗಂ ಪೋಗಿ ಸುರೇಂದ್ರಕಾಮಿನಿಯರಂ ಮುಮ್ಮಟ್ಟೆ ಕೌತೂಹಳಂ
ತಾಗಲ್ಕಾಕ್ಷಣಮೆಲ್ಲರುಂ ಮೆಱೆದರನ್ಯವ್ಯಾಪ್ತಿಯಂ ಸಂಭ್ರಮಾ
ಭೋಗಂ ಕೈಮಿಗೆ ನೋಡುತಿರ್ದರವರೊಂದಾಶ್ಚರ್ಯಸೌಂದರ್ಯಮಂ         ೨೮

ವ : ತದನಂತರಂ

ನ್ಯಾಯದಿನೆಯ್ದೆರಕ್ಷಿಸು ಸಮಸ್ತಧರಾತಳಮಂ ಲಸತ್ಸುಖೋ
ಪಾಯ ಜಿನೇಶಧರ್ಮಮುಮನುದ್ಧರಿಸೆಂದು ಮಹೀತಳಾಧಿಪ
ಜ್ಯಾಯನನಂದು ತಾಂ ಪರಸಿದರ್ ನಲವಿಂದುಱೆ ದೇವಕಾಂತೆಯರ್
ಕಾಯವಿಭೂಷಣಪ್ರಭೆಗಳಾವರಿಸಲ್ ಸಭೆಯಂ ವಿಶೇಷದಿಂ           ೨೯

ವ : ಅನಂತರಮಾ ದೇವಕಾಂತೆಯರ್ಗೆ ಭೂಕಾಂತಂ ಸ್ವಕೀಯಸೇವಾಪರರಪ್ಪ ಕಿಂಕರರ ಕೈಗಳಿಂದಂ ಯಥೋಚಿತಂಗಳಪ್ಪಾಸನಂಗಳಂ ಕೊಡಿಸಿ ಕುಳ್ಳಿರಲೊಡಂ

ದ್ಯುಮಣಿಮಯೂಖಾವಳಿಗಳ್
ಕಮಳಂಗಳ ನಡುವೆ ಪೊಳೆವುತಿರ್ದಪುವೆಂಬಂ
ತಮರಕುಮಾರಿಯರತ್ಯು
ತ್ತಮಪೀಠಂಗಳೊಳಮಂದು ಪೊಳೆಯುತ್ತಿರ್ದರ್            ೩೦

ಪಿರಿದುಂ ನಿರ್ಮಳಶೋಭಿತಾಂಬರದೊಳಂ ಭಾಭಾಸಮಾನಪ್ರಭೋ
ದ್ಧುರೆಯರ್ ಕೋಮಳಹ್ತಸುಶ್ರವಣಭೂಷಾಯುಕ್ತಿಯದ್ದಿವ್ಯಸೌಂ
ದರಿಯರ್ ತಾರೆಗಳಂತೆ ಚಂದ್ರಮನವೊಲ್ ತೋರ್ಪಾ ಮಹೀಪಾಳನಂ
ಭರದಿಂದಂ ಪರಿವೇಷ್ಟಿಸಿರ್ದು ತಳೆದರ್ ಭೂರಿಪ್ರಸನ್ನತ್ವಮಂ       ೩೧

ಕ್ಷಿತಿನಾಥಂ ಪ್ರೇಮದಿಂ ದೇವಿಯರ ನಿರುಪಮಾಕಾರಮಂ ನಾಡೆಯುಂ ನೋ
ಡುತುಮಿಪ್ಪಾ ಪೊತ್ತಿನೊಳ್ ಪುಟ್ಟಿದುವವರ ಶರೀರಂಗಳೊಳ್ ಕೂಡೆ ಚಾರೂ
ನ್ನತರೋಮಾಂಚಂಗಳಂದಂಗಜನ ನಿಶಿತಬಾಣಂಗಳುಚ್ಚಲ್ಕೆ ದೇಹ
ಸ್ಥಿತಿಯಿಂದಂ ಬಾಹ್ಯದೊಳ್ ತೋಱುವ ಗಱಿಗಳಿವೆಂಬಂತಿರೊಪ್ಪಿರ್ದುವೆತ್ತಂ           ೩೨

ವ : ಮತ್ತಮಾ ನರೇಂದ್ರಚಂದ್ರಮಂ ತನ್ನಯ ಪಲ್ಗಳ ಬೆಳಗೆಂಬ ಬೆಳುದಿಂಗಳ ಬಳಗದಿಂದಾ ನಿಳಿಂಪ ವಿಳಾಸಿನಿಯರ ನೇತ್ರಂಗಳೆಂಬ ಕೈರವಂಗಳಂ ವಿಕಾಸಿಸುತ್ತುಮತಿಥಿ ಯೋಗ್ಯಸನ್ಮಾನದಾನಪ್ರತಿಪತ್ತಿಯಿಂ ವಿತತೀಕೃತಪರಿಶ್ರಮೆಯರಪ್ಪ ದೇವಿಯರ ಪ್ರಸನ್ನ ಮುಖಂಗಳಂ ನೀಡುಂನೋಡಿ ಗಂಭೀರಧ್ವನಿಯಿಂದಿಂತೆಂದಂ

ಮೂಜಗದಲ್ಲಿಯುಂ ದಿವಿಜಲೋಕಮದುತ್ತಮಭೂರಿಸೌಖ್ಯಸ
ದ್ಭಾಜನಮಗ್ರಗಣ್ಯಪದಮಂ ಪಡೆದೊಪ್ಪಮನಾಳ್ದುದೀ ಮಹಾ
ಪೂಜ್ಯರೆನಿಪ್ಪ ಕಾಮಿನಿಯರಿರ್ದುದು ಕಾರಣಮುದ್ಘರತ್ನಸಂ
ಯೋಜನಮುಳ್ಳ ತಾಣಮದು ರೂಢಿಯನಾಂತೆಸೆದಿರ್ಪ ಮಾಳ್ಕೆಯಿಂ           ೩೩

ಇಂತಪ್ಪ ಪುಣ್ಯಮೂರ್ತಿಗ
ಳೆಂತಾದೊಡಮೆಮ್ಮವಂದಿಗರ್ ಮನುಜರಿಳಾ
ಕಾಂತರೆನಿಸಿರ್ದೊಡಂ ಕಾ
ರ್ಯಾಂತರದಿಂ ಪೊರ್ದರೆಮ್ಮ ಮನೆಗಳನೆಂದುಂ೩೪

ಅಂತಾದೊಡಮಭ್ಯಾಗತ
ಸಂತತಿಗಳ್ಗೆಯ್ದೆ ಮಾಳ್ಪ ವಿನಯನಿಮಿತ್ತಂ
ಸಂತೊಷದಿಂದಿಲ್ಲಿಗೆ ಬಂ
ದಂತಹ ಕಾರಣಮಿದೇನೆನುತ್ತಂ ಕೇಳ್ದಂ           ೩೫

ನೀವಾರ್ ನಿಮ್ಮಯ ಪೆಸರೇಂ
ನೀವೆಲ್ಲಿಂ ಬಂದಿರಿಲ್ಲಿಗೆಮ್ಮಿಂದಂ ಸಂ
ಭಾವಿಸುವ ಕಾರ್ಯಮೇನೆಂ
ದಾ ವಿಭು ಬೆಸಗೊಂಡನವರನತಿಮುದದಿಂದಂ   ೩೬

ಆಗಳ್ ದೇವಿಯರೆಲ್ಲಂ
ವಾಗತಿ ಚತುರತ್ವದೊದವನಾಂತೆಸೆದಿರ್ಪಾ
ಶ್ರೀಗೆ ನುಡಿಯೆಂದು ಪೇಳಲ್
ಭೂಗಧಿಪಂಗುಸುರ್ದಳಾಕೆ ವಿಸ್ತರದಿಂದಂ         ೩೭

ವ : ಅದೆಂತೆಂದೊಡನಂತತೀರ್ಥಂಕರಂ ಕೈವಲ್ಯಕಲ್ಯಾಣಪ್ರಾಪ್ತನಾದಿಂ ಬಳಿಯ ಮರ್ಧಪಲ್ಯಮುಳಿಯಲ್ ನಾಲ್ಕುಸಾಗರೋಪಮಕಾಲಪರ್ಯಂತಂ ಧರ್ಮಂ ಪೆರ್ಚಿ ಪರಿವರ್ತಿಸುತ್ತುಮಿರ್ದತ್ತು ಕಡೆಯಲುಳಿದಿರ್ದ ಪಲ್ಯಪ್ರಮಿತಕಕಾಲದೊಳ್ ಧರ್ಮ ಪ್ರಭಾವನಾಪ್ರಕಾಶಮೆಲ್ಲಂ ವಿಚ್ಛಿತ್ತಿಯನೆಯ್ದಿ ಮಿಥ್ಯಾತ್ವಮೆಂಬ ಕತ್ತಲೆಯ ಮೊತ್ತಮೆತ್ತಲುಂ ಪ್ರಬಲಮಾಗೆ

ರಮ್ಯಮೆನಿಸಿರ್ದು ತೋಱುವ
ಸಮ್ಯಗ್ದರ್ಶನ ಸುರತ್ನಮಂ ತನ್ನದುವಂ
ಪೆರ್ಮೆಯೊಳೊಂದಿದ ಜಿನಪತಿ
ಧರ್ಮಂ ತನ್ನೊಡನೆ ಕೊಂಡುಪೋದತ್ತಾಗಳ್    ೩೮

ವ : ಅಂತಱುದಿಂಗಳುಳಿಯೆ ಮಿಕ್ಕಿರ್ದ ಪಲ್ಯಪ್ರಮಾಣಕಾಲಮೆಲ್ಲಂ ಭರತ ಕ್ಷೇತ್ರದೊಳಧರ್ಮದೋಷದೂಷಿತಮಾಗಲೊಡಮೊರ್ಮೆ ಸೌಧಮೇಂದ್ರಂ ಜಿನಧರ್ಮ ಮಾರ್ಗಪ್ರಭಾವನಾ ನಾಯಕನಪ್ಪ ಜಿನನಾಯಕನುದಯಮಂ ನೋಡು ವಂತವಧಿಜ್ಞಾನಮೆಂಬ ವಿಲೋಲಚನ ವಿಕಾಸಮನೊಡರ್ಚಿಯಱುದಿಂಗಳಿಂ ಮೇಲೆ ಪದಿನಯ್ದನೆಯ ತೀರ್ಥಕರನಪ್ಪ ಧರ್ಮಜಿನನಾಥಂ ನಿನ್ನಯ ಪಟ್ಟದರಸಿಯಪ್ಪ ಸುವ್ರತಾಮಹಾದೇವಿಯ ಗರ್ಭದೊಳುದ್ಭವಿಸಿದಪನೆಂದಱಿದು ಕಡುನಲಿದು ಬಳಿಯಮೆಮ್ಮಂ ಕರೆದು

ಭಾವಿಜಿನಜನನಿಯಪ್ಪಾ
ದೇವಿಗೆ ಶುಶ್ರೂಷೆಯಂ ಮಹಾದರದಿಂದಂ
ನೀವೆಯ್ದೆ ಮಾಡಿಯೆಂದಾ
ದೇವೇಂದ್ರಂ ಬೆಸಸೆ ಬಂದೆವಿಲ್ಲಿಗೆ ನೃಪತೀ       ೩೯

ಮತ್ತೊಂದುಕಾರ್ಯಮೇನುಂ
ಬಿತ್ತರಿಪೊಡಮಿಲ್ಲ ನಿನ್ನ ವಲ್ಲಭೆಗೆ ಕರಂ
ತೊತ್ತಿಯರಾಗಿಯೆ ಬೆಸನಂ
ನೆತ್ತಿಯೊಳಾಂತೆಯ್ದೆ ಮಾಳ್ಪುದಲ್ಲದೆ ನಮಗಂ            ೪೦

ದಾಸೀಪುತ್ರನ ತೆಱದಿಂ
ವಾಸವನುಂ ಬಂದು ಸೇವೆಯಂ ಮಾಡಿದಪಂ
ಲೇಸಾಗಿ ಮತ್ತೆ ಕತಿಪಯ
ವಾಸರದಿಂ ಮೇಲೆ ಸಕಳ ಭೂಪತಿತಿಳಕಾ           ೪೧

ಇನ್ನು ಜಗತ್ಪ್ರಯಗುರುವಿಂ
ಗುನ್ನತ ನೀಂ ತಂದೆಯಪ್ಪ ಕಾರಣದಿಂದಂ
ಪನ್ನಗಸುರನರರೊಳ್ ಮಿಗೆ
ನಿನ್ನವೊಲುತ್ಕೃಷ್ಟಪುಣ್ಯಭಾಜನನಾವಂ         ೪೨

ವ : ಮತ್ತಂ ನಾಕಲೋಕದೊಳಗ್ಗಳಮಪ್ಪ ದೇವಸ್ತ್ರೀಯರುಂ ಕುಳಕುಧರ ನಿವಾಸಿಗಳಾದ ಶ್ರೀ ಹ್ರೀ ಧೃತಿ ಕೀರ್ತಿ ಬುದ್ಧಿ ಲಕ್ಷ್ಮಿ ಜಯೆ ವಿಜಯೆ ಅಜಿತೆ ಅಪರಾಜಿತೆ ಯರೆಂಬ ಮುಖ್ಯರಪ್ಪ ದೇವಿಯರುಂ ಬಂದು ನಿಮ್ಮಯ ಸೇವೆಯಂ ಮಾಳ್ಪನಿತು ಪುಣ್ಯದೊದವುಂ ನಿನಗಲ್ಲದೆ ಮತ್ತಾರ್ಗಂ ಕೈಸಾರಿತ್ತಿಲ್ಲಮಂತುಮಲ್ಲದೆಯುಂ

ಸುರನಾಥನಾಜ್ಞೆಯಿಂದೀ
ಪುರದೊಳಗೆ ಸುವರ್ಣವೃಸ್ಟಿಯಂ ಕಱೆಯಲ್ಕೆಂ
ದಿರದೆ ಬಂದಿರ್ದನೀತಂ
ನಿರುಪಮಮಹಿಮಂ ಕುಬೇರನೆಂಬಂ ಪೆಸರಿಂ     ೪೩

ವ : ಎಂದು ಸುಟ್ಟುಂಬೆಯಂ ತೋಱಿನುಡಿಯುತ್ತುಮಿರ್ದ ಶ್ರೀದೇವಿಯ ಮಾತಂ ಕೇಳ್ದು

ಯತಿಪತಿ ಪೇಳ್ದುದಂ ಮುಕುಳಿತಾರ್ಧವಿಲೋಚನನಾಗಿ ತನ್ಮಹೀ
ಪತಿ ಮನದಲ್ಲಿ ಭಾವಿಸಿ ಕರಂಗಳನಂದು ನೊಸಲ್ಗೆತಂದು ಮ
ತ್ತತಿಶಯದಿಂದೆ ಮೆಚ್ಚಿ ತಲೆಯಂ ನೆಱೆತೂಗಿದನುದ್ಘಮೌಲಿಕೀ
ಲಿತಮಣಿಗಳ್ ಕರಂ ಕೆದಱೆ ಕಾಮನ ಬಿಲ್ಗಳ ಭೂರಿಶೋಭೆಯಂ     ೪೪

ವ : ಅನಂತರಂ ನೂರ್ಮಡಿಯಾದ ತುಚ್ಛೇತರೋತ್ಸಾಹದಿಂ ದುರ್ಲಲಿತ ಗಾತ್ರನಾ ಧಾತ್ರೀವಲ್ಲಭಂ ನಿಜರಾಜಭವನದೊಳಂ ರಾಜಧಆನಿಯೊಳಮೆಡೆವಱಿಯದೆ ಕುಡಿಗಳಂ ಕಟ್ಟಿಸಿ ಬದ್ದವಣಂಗಳಂ ಬಾಜಿಸಿ ಪಿರಿದುಮೊಸಗೆಯಂ ಮಾಡಿಸುತ್ತುಂ ಬಳಿಯಂ ಕುಬೇರನ ಮೊಗಮಂ ನೋಡಿ ನೀಂ ಮಾಡಲ್ವೇಡಿಬಂದ ಕಾರ್ಯಮಂ ಮಾಡೆಂಬುದುಂ

ಪರಿಭಾಸ್ವದ್ಭೂಷಣಾಂಶುಪ್ರಕರಮುರುತಟಿನ್ಮಾಳಿಕಾಶೋಭೆಯಂ ಬಿ
ತ್ತರಿಸಲ್ ಚಂದ್ರಾರ್ಕಬಿಂಬಂಗಳ ಕಿರಣಮನಾಚ್ಛಾದನಂಗೆಯ್ದು ಮತ್ತಂ
ವರಮೇಘಾಡಂಬರಾಕಾರಮನನುಕರಿಸುತ್ತುಂ ಪುರಾಸನ್ನದೊಳ್ ತಾಂ
ಪಿರಿದೊಂದಾಶ್ಚರ್ಯದಿಂದಂ ಗಗನತಳದೊಳಂದೊಡ್ಡಿನಿಂದಂ ಕುಬೇರಂ       ೪೫

ಸೊಗಯಿಪ ಕುಬೇರನೆಂಬಾ
ಮುಗಿಲಿಂದಂ ಸುರಿದುದಂದು ಪೊಮ್ಮಳೆ ಭರದಿಂ
ನಗರಿಯೊಳೆಲ್ಲಾ ತಾಣದೊ
ಳಗಣಿತಮೆನೆ ಕೂಡೆ ಮಾಡುತುಂ ವಿಸ್ಮಯಮಂ೪೬

ವಸುಮತಿಯೆಂಬೀ ಪೆಸರಿಂ
ದೆಸೆದುದು ಭೂಭಾಗಮಂದು ಮೊದಲಾಗಿ ಕರಂ
ವಸುವೃಷ್ಟಿಯಿಂದೆ ಪೆರ್ಚಿದ
ಪೊಸತೆನಿಸುವ ವಸುವನುಳ್ಳಕಾರಣದಿಂದಂ      ೪೭

ವ : ಮತ್ತಂ

ಸುರಿದುದು ಕೂಡೆ ಮೂಱುವರೆಕೋಟಿಯೊಳೊಂದಿದ ರತ್ನವೃಷ್ಟಿಯುಂ
ನರಪತಿಗೇಹದೊಳ್ ಪ್ರತಿದಿನಂ ದಶದಿಕ್ತಟಭಿತ್ತಿಭಾಗಮಂ
ಭರವಶದಿಂದೆ ಚಿತ್ರಿಸುತುಮಿರ್ದಪುದೆಂಬಿನಮರ್ಯಮಪ್ರಭಾ
ಪರಿಕರಮೆಲ್ಲಮುಂ ಮಸುಳ್ವವೊಲ್ ಪರಿನಿರ್ಮಿಸುತುಂ ವಿಶೇಷದಿಂ           ೪೮

ವ : ಇಂತು ಗರ್ಭಾವತರಣಕಲ್ಯಾಣಂ ಮುಂದಱುದಿಂಗಳೆನಲಂದುಮೊದಲಾಗಿ ಪದಿನೆಂಟುತಿಂಗಳ್ ಪರ್ಯಂತಂ ಪುರದೊಳರಮನೆಯೊಳಂ ಸುವರ್ಣವೃಷ್ಟಿಯಂ ರತ್ನವೃಷ್ಟಿಯುಮಂ ಕಱೆವ ಬೆಸನಂ ಕೈಕೊಂಡು ಬಂದೊಂದು ಪಿರಿದೊಂದಾಶ್ಚರ್ಯದಿಂ ಪ್ರಾರಂಭಗೆಯ್ದು ಕುಬೇರಂ ನಿಜನಿವಾಸಕ್ಕೆ ಪೋಪುದುಮಿತ್ತಲ್

ಬಯಸುತ್ತುಮಿರ್ದುದೆಮ್ಮಾ
ಶಯಮೀಗಳ್ ಸುವ್ರತಾಮಹಾದೇವಿಯುಮಂ
ನಯವಿದೆಯಂ ನೋಡಲ್ಕೆಂ
ದಯಯುತನಂ ಕೇಳ್ದರಂದು ದೇವಿಯರೆಲ್ಲಂ  ೪೯

ವ : ಬಳಿಯಂ ಮಹೀಪಾಳಂ ವೃದ್ಧ ಕಂಚುಕಿಯಂ ಕರಸಿ ನೀನೊಡಗೊಂಡು ಪೋಗಿ ಸುವ್ರತಾಮಹಾದೇವಿಯನಿವರ್ಗೆ ತೋಱೆಂದಪ್ಪಯಿಸಲೊಡಂ

ಮಣಿಮಯಮೇಖಳಾಕಳಿತ ಕಿಂಕಿಣಿಝಣ್ಕೃತಿಯುಂ ವಿಶಿಷ್ಟ ಕಂ
ಕಣಘನನಾದಮುಂ ಬಿಡದೆ ತಮ್ಮೊಳಮೆಯ್ದೆ ವಿವಾದಿಸುತ್ತಿರಲ್
ಪ್ರಣುತಕಪೋಳದೊಂದು ಪೊಳೆಪುಂ ನಯನಾಂಚಳಕಾತಿಯೊಳ್ ಕರಂ
ಕುಣಿಯೆ ನೃಪಾಂಗನಾಲಯಕೆ ಬಂದುದು ದೇವವಿಳಾಸಿನೀಜನಂ      ೫೦

ವ : ಅಂತುಬಂದು

ಚಂದ್ರನ ಕಳೆಗಳ್ ಕೈರವ
ವೃಂದದೊಳಂ ಪೊಳೆವ ಮಾಳ್ಕೆಯಿಂದಂ ಪೊಕ್ಕರ್
ಕುಂದದ ಸಿರಿಯೊಳ್ ಕೂಡಿದ
ಸೌಂದರಿಯ ನಿವಾಸದಲ್ಲಿ ಸುರನಾರಿಯರುಂ    ೫೧

ವ : ಅಂತು ಪೊಕ್ಕನಂತರಂ ಮುಂದೊಂದು ರತ್ನಕುಟ್ಟಿಮಭೂಮಿಕೆಯೊಳನೇಕ ಭೂಪಾಳ ಕರರಸಿಯರ ನಿಕರಮುಂ ಕ್ಷತ್ರಿಯಕುಮಾರಿಯರ ಮೊತ್ತಮುಂ ಸೇವಾವಿನೋದ ನಿಮಿತ್ತಂ ಬಂದು ಸುತ್ತಲುಂ ಕಿಕ್ಕಿಱಿಗಿಱಿದು ಕುಳ್ಳಿರಲಾ ಸ್ತ್ರೀಯರ ಒಡ್ಡೋಲಗದ ನಟ್ಟನಡುವೆ

ಹರಿವಿಷ್ಟರದೊಳ್ ಕುಳ್ಳಿ
ರ್ದರಸಿ ಮಹಾಲಕ್ಷ್ಮಿಯಂತಿರೊಪ್ಪಮನಾಳ್ದರ್
ನರರೆಲ್ಲರ ಬಡತನಮಂ
ಪರಿಹರಿಸಿ ಸಮರ್ಥರಾಗಿ ಮಾಳ್ಪುದಱಿಂದಂ    ೫೨

ಗುಣದ ಕಣಿ ದಾನಚಿಂತಾ
ಮಣಿ ಜಿನಮತಗಗನತಳವಿಭಾಸಿ ವಿಹಾಯೋ
ಮಣಿಯೆನಿಪ ದೇವಿ ಲಲನಾ
ಗ್ರಣಿಗಳ ಸಭೆಯಲ್ಲಿ ರತ್ನಮಿರ್ಪಂತಿರ್ದಳ್      ೫೩

ಪೊಸತೆನಿಸಿರ್ಪ ಜವ್ವನದ ಸುಗ್ಗಿ ವಿವೇಕದ ಜನ್ಮಭೂಮಿ ಮ
ತ್ತಸದೃಶಮಾದ ಚೆಲ್ವಿನ ಬರ್ದುಂಕು ವಿಶೇಷಿತಕಾಂತಿಯಾಗರಂ
ಕುಸುಮಶರಾಧಿದೇವತೆಯವೊಲ್ ಪರಿರಂಜಿಪ ರೂಪಮೀಕೆಯಾ
ಗೆಸೆವುತುಮಿರ್ದಳಂದು ಮಿಗೆ ಪಟ್ಟದ ರಾಣಿ ವಿಶಿಷ್ಟಲೀಲೆಯಿಂ     ೫೪

ಕಡಗಣ್ಗಳ ಕುಡಿವೆಳಗಿಂ
ಮಡದಿಯರ ಸಭಾನಿವಾಸಮಂ ಧವಳಿಸುತಿ
ರ್ದೊಡೆಯುಂ ಮಾಡುತ್ತಿರ್ಪಳ್
ಪಡಿರಾಣಿಯರಾಸ್ಯದಲ್ಲಿ ಕೃಷ್ಣತ್ವಮುಮಂ   ೫೫

ವ : ಅಂತು ಶೋಭಿಸುತ್ತುಮಿರ್ಪ ಭಾಮಾಸಭಾಮಧ್ಯದಲ್ಲಿ ಮಂಗಳಮಣಿ ದರ್ಪಣದಂತಿರೊಪ್ಪಮನಾಂತು ತೋರ್ಪ ತತ್ಸುವ್ರತಾಮಹಾದೇವಿಯಂ ದೇವಕಾಂತೆಯರ್ ಕಂಡು ನಾಡೆಯುಂ ಮನದೆಗೊಂಡು

ಪಲಕಾಲದಿಂದೆ ಸಂಚಿಸಿ
ದಲಘುವೆನಿಪ್ಪೊಂದು ತಮ್ಮ ರೂಪಿನ ಮದಮಂ
ಸಲೆಬಿಟ್ಟರ್ ದೇವಿಯರಾ
ಲಲನೆಯ ರೂಪಂ ನಿರೀಕ್ಷಣಂಗೆಯ್ವಾಗಳ್       ೫೬

ವ : ಅಂತಾಕೆಯ ಗಾಡಿಯಂ ನೀಡುಂನೋಡುತ್ತುಂ ಸಮೀಪಕ್ಕೆ ನಡೆದು ಬಂದು ಕಡುನಲವಿಂ ತಮ್ಮಯ ಸಮುಲ್ಲಸದಳಕವಲ್ಲಿಗೆ ಮಣಿಕಲುಟ್ಟಿಮಧಾರಿಣಿಯನಾ ಧಾರಮಾಗಿಮಾಡಲೊಡಂ

ಆಕೆಯ ಚರಣಗಂಳನಾ
ನಾಕಸ್ತ್ರೀಕುಂತಳಂಗಳಂದಾವರಿಸರಲ್
ಕೋಕನದೊಳ್ ಮುಸುಱಿದ ಭೃಂ
ಗೀಕುಳಮಂ ಪೋಲ್ತು ಸೊಗಯಿಸಿತ್ತಾಕ್ಷಣದೊಳ್          ೫೭

ವ : ಅನಂತರಮಾ ದೇವಕಾಂತೆಯರೆಲ್ಲಂ ನಿಂದು ಕೈಗಳಂ ಮುಗಿದುಕೊಂಡಿ ರ್ಪುದುಮಾ ಭೂಕಾಂತಕಾಮಿನಿಯರವರವರ್ಗೆ ತಕ್ಕಂತಪ್ಪ ಸುವರ್ಣಮಯಂಗಳಾದಾ ಸನಂಗಳಂ ಕೊಡಿಸಿ ಕುಳ್ಳಿರಿಸಿ ಬಳಿಯಂ ಯಥಾಯೋಗ್ಯಸನ್ಮಾನಪ್ರತಿಪತ್ತಿಪೊರ್ವಕಂ ಮನ್ನಿಸಿ ಪರಮಸ್ನೇಹದಿಂದಾ ದೇವಿಯರ ಮೊಗಂಗಳಂ ನೋಳ್ಪಾಗಳ್

ಭೂಗಧಿನಾಥವಲ್ಲಭೆಯ ರೂಪು ಸಮಸ್ತನಿಳಿಂಪಕಾಮಿನೀ
ಪೂಗದ ಚೆಲ್ವ ಮೂಕುತಿಗಳಲ್ಲಿಯ ಮುತ್ತುಗಳಲ್ಲಿ ಬಿಂಬಿಸ
ಲ್ಕಾಗಳದೆಲ್ಲರಂ ಮಿಗುವ ಪಾತ್ರಮುಮನಾಡುತುಮಿರ್ದವೊಲೊಪ್ಪಿದಳ್ ಕಾರಣಂ
ಮೂಗಿನ ಮೇಲೆ ಪಾತ್ರಮುಮನಾಡುತುಮಿರ್ದವೊಲೊಪ್ಪಿದಳ್ ಕರಂ         ೫೮

ವ : ಬಳಿಯಂ ಪ್ರಿಯಸಂಭಾಷಣಕ್ಕೆ ನೆವನಪ್ಪ ಕಾರಣಮಾಗೆ ನೀವಿಲ್ಲಿಗಾವ ಪ್ರಯೋಜನನಿಮಿತ್ತಂ ಬಂದಿರೆಂದು ಕೇಳ್ವುದುಂ

ಜಿನಪತಿ ಪುಟ್ಟುವನ್ನೆವರಮಾತನ ತಾಯ್ಗೆ ಸಮಸ್ತಸೇವೆಯಂ
ಘನಮೆನೆ ಮಾಡಿಯೆಂದು ಸುಮನಃಪತಿ ಪೇಳ್ದೊಡೆ ಬಂದೆವಿಲ್ಲಿಗಂ
ಮನದೊಲವಿಂದೆ ನಿಮ್ಮನುಱೆ ಸೇವಿಪುದಲ್ಲದೆ ಬೇಱೆ ಸತ್ಪ್ರಯೋ
ಜನಮೆಮಗಿಲ್ಲಮೆಂದು ನುಡಿದರ್ ಕಡುನೀಱೆಯ ಮುಂದೆ ದೇವಿಯರ್      ೫೯

ಎಂತು ನೃಪಂಗೆ ಮುನ್ನಮತಿವಿಸ್ತರದಿಂದಮೆ ಪೇಳ್ದರಂತೆ ತ
ತ್ಕಾಂತೆಗಮಾ ಸುರಾಧಿಪ ವಿಳಾಸಿನಿಯರ್ ಸಲೆ ತಮ್ಮ ಬಂದ ವೃ
ತ್ತಾಂತಮನೆಯ್ದೆ ಪೇಳ್ದೊಡದನಾಲಿಸಿ ಮತ್ತೆ ನಿಜಾಂತರಂಗದೊಳ್
ಸಂತಸಮಂ ಕರಂ ತಳೆದಳಾಕ್ಷಣದೊಳ್ ಮಗನಾದನೆಂಬಿದಂ           ೬೦

ವ : ಅಂತು ಪದಿನಯ್ದನೆಯ ತೀರ್ಥಂಕರನಪ್ಪ ಧರ್ಮಜಿನನಾಥನಿನ್ನಱುದಿಂಗಳಿಂ ಮೇಲೆ ಸರ್ವಾರ್ಥಸಿದ್ಧಿಯಿಂದಂ ಬಂದು ನಿಮ್ಮಯ ಗರ್ಭದೊಳುದ್ಭವಿಸಿದಪನೆಂದು ದೇವೇಂದ್ರನಱಿದೆಮ್ಮಂ ಕರೆದು ಧರ್ಮತೀರ್ಥಂಕರ ಗರ್ಭಾವತರಣಕಲ್ಯಾಣ ನಿಮಿತ್ತಂ ಪೋಗಿ ನೀವಾ ಜಿನಜನನಿಯ ಗರ್ಭಶೋಧನೆಯಂ ಮಾಡಿಯಾಕೆಗಿಷ್ಟಮಾದ ಪರಿಯಷ್ಟಿಯಂ ಮಾಡುತ್ತುಮಿರಿಯೆಂದು ಬೆಸಸಿ ಕಳಿಪಿದೊಡೆ ಬಂದೆವೆಂಬುದುಮಾ ಸುವ್ರತಾ ಮಹಾದೇವಿ ತತ್ಪ್ರಚೇತಾರ್ಯರ್ ಮುಂಪೇಳ್ದ ವಚನಾವಿಸಂವಾದಮಂನೆನೆನೆನೆನೆದು ಪರಮಾನಂದದಿಂದಂ ಬಹಳ ಪುಳಕಾಂಕುರಕಳಿತೆಯಾಗಿ ತದೀಯಚರಣಾರವಿಂದದ್ವಂದ್ವಮಂ ಮನದೊಳಭಿವಂದಿಸಿ ತನ್ಮುನೀಂದ್ರರ ಮಾಹಾತ್ಮ್ಯಾಮನಾ ದೇವಸ್ತ್ರೀಯರೊಡನೆ ನುಡಿಯುತ್ತುಮಿರಲ್ ಮತ್ತಮವರಿಂತೆಂದರ್

ನರಯುವತಿಯಾಗಿಯುಂ ನಿ
ರ್ಜರಯುವತಿಯರೊಲ್ದು ಸೇವಿಸುವ ಪುಣ್ಯಂ ಮ
ತ್ತರಿಸಿ ನಿನಗಾದುದಲ್ಲದೆ
ಧರಣಿಯೊಳುಳಿದನ್ಯಮನುಜಸತಿಯರ್ಗುಂಟೇ   ೬೧

ಮೂಜಗದೊಡೆಯಂಗಂ ಗುಣ
ಭಾಜನೆ ನೀಂ ಜನನಿಯಪ್ಪ ಕಾರಣದಿಂ ಸಂ
ಯೋಜಿಸಿದುದಲ್ಲದಿರ್ದೊಡೆ
ರಾಜಿತ ಸುರರ್ಗಂ ನರರ್ಗಮಂತರಮೇಂ ಪೇಳ್   ೬೨

ವ : ಅಂತುಮಲ್ಲದೆಯುಂ

ಓಲಯಿಸಿಕೊಂಬುದೆಮ್ಮಂ
ಪಾಲಿಪುದುಱೆ ಮಾಳ್ಪಂ ಕಾರ್ಯಮೇನುಳ್ಳೊಡದಂ
ಬಾಲಕಿ ಮಾಡಿಸಿಕೊಂಬುದು
ಲೀಲೆಯಿನೆಂದಮರಕಾಂತೆಯರ್ ಪೇಳಲೊಡಂ   ೬೩

ವ : ಅನಂತರಂ

ಸೊಗಸುವ ಬೋನಮಂ ಸಮೆವ ಕಾರ್ಯದೊಳಂ ಕೆಲರಂ ಸುಮಜ್ಜನಂ
ಬೊಗಿಸುವ ಕಜ್ಜದಲ್ಲಿ ಕೆಲರಂ ಹರಿಚಂದನಮಂ ಸಮಂತು ಸ
ಣ್ಣಿಗೆಯೊಳೆ ಸಣ್ಣಿಪುಜ್ಜುಗದೊಳಂ ಕೆಲರಂ ಜಿನದೇವಕಾರ್ಯಪೂ
ಜೆಗಳನೆ ಮಾಳ್ಪುದೊಂದುರು ನಿಯೋಗದೊಳಂ ಕೆಲರಂ ಪ್ರಮೋದದಿಂ         ೬೪

ಕೆಲರಂ ಕಂಪಿನ ಪೂಗಳಂ ಕೆದಱಿ ಹಾಸಂ ಹಾಸುವುದ್ಯೋಗದೊಳ್
ಕೆಲರಂ ಪಾವುಗೆ ನೀಡುವಲ್ಲಿ ಕೆಲರಂ ಬಾಣಡ್ಡಣಂಗೊಂಡು ಸು
ತ್ತಲುಮೋಲೈಸುವ ಪೆರ್ಮೆಯಲ್ಲಿ ಕೆಲರಂ ದೌವಾರಿಕಸ್ಥಾನದೊಳ್
ಕೆಲರಂ ಜಾಣ್ನುಡಿಯೊಳ್ ಮಹತ್ತರಿಯರಂ ಮಾದೇವಿಯಪ್ಪೈಸಿದಳ್         ೬೫

ವ : ಇಂತಾ ಸುವ್ರತಾಮಹಾದೇವಿ ತನ್ನಯ ಸೇವಾರ್ಥಂ ಬಂದ ತತ್ತತ್ಕರ್ಮ ಕೌಶಲಮರ್ಥೆಯರಾದ ದೇವಸ್ತ್ರೀಯರಂ ನಾನಾಪ್ರಕಾರ ನಿಯೋಗದೊಳ್ ನಿಯೋಜಿಸುತ್ತುಮಿರಲ್ ಮತ್ತಮಾ ದೇವಿಯರೊರ್ವೊರ್ವರ್ ಬೇಱೆವೇಱೆ ತಮ್ಮಯ ಕಳಾಕುಶಲತ್ವಮಂ ನಿಮಿರ್ಚಿಯಚ್ಚರಸಿಯರಿಚ್ಚೆಯಱಿದೋಲಯಿಸಿ ಮೆಚ್ಚಿಸಲೆಂದು

ಸೊಗಯಿಪ ಚಿತ್ರಪತ್ರಚಯದಿಂದೆ ವಿಚಿತ್ರತರಂಗಳಾದುವಂ
ಮಿಗೆ ಸಪುರಂಗಳಾದ ಸುರಲೋಕದೊಳಗ್ಗಳಮಾದ ಬಣ್ಣವ
ಣ್ಣಿಗೆಗಳಿನೆಯ್ದೆ ನುಣ್ಪುವಡೆದೊಪ್ಪುವ ಸೀರೆಗಳಂ ಮಹೀಪನಾ
ರಿಗೆ ಕಡುಚೆಲ್ವನಾಗುಡಿಸಿದಳ್ ಸುರಕಾಮಿನಿಯೊರ್ವಳರ್ಥಿಯಿಂ      ೬೬

ತೊಳಗುವ ಕೆಂದಾವರೆಗಳ
ನೆಳವಿಸಿಲಾವರಿಸಿದಂತಿರಾಕೆಯ ಚರಣಂ
ಗಳ ತಳಮನೂಡಿದಳ್ ಕೋ
ಮಳಲಾಕ್ಷಾರಸದಿನಮರಕಾಮಿನಿಯೊರ್ವಳ್       ೬೭

ವರಪಂಚರತ್ನಮಯ ನೂ
ಪುರಂಗಳಂ ತೊಡಿಸೆ ಸತಿಯ ಪಾದಂಗಳೊಳಂ
ಪರಮನಖಚಂದ್ರಮಂಡಳಿ
ಪರಿವೇಷಂಬಡೆದುದೆಂಬಿನಂ ಕಣ್ಗೆಸೆಗುಂ          ೬೮

ಚಂಚನ್ಮಣಿಕಿಂಕಿಣಿಗಳಿ
ನಂಚಿತಮಾಡಿರ್ದ ವಿವಿಧರಚನಾಯುತಸ
ತ್ಕಾಂಚನಕಾಂಚೀವಳಯಮು
ಮಂ ಚೆಲ್ವನಿತಂಬದಲ್ಲಿ ಸಾರ್ಚಿದಳೊಲವಿಂ     ೬೯

ಪೊಳೆವ ಮೃಣಾಳನಾಳಚಯಮಂ ಪೊಣರ್ವಕ್ಕಿಯಮೇಲೆ ಸಾರ್ಚುವಂ
ತಿಳೆಗಧಿನಾಥವಲ್ಲಭೆಯ ಪೀನಕುಚಂಗಳಮೇಲೆ ಸಾರ್ಚಿದಳ್
ತೊಳಗುವ ಚಾರುಮೌಕ್ತಿಕಸಮುಜ್ವಳಹಾರಲತಾವಿತಾನಮಂ
ವಿಳಸಿತ ಚಾರುತೀಯುತಸುರಾಂಗನೆಯೊರ್ವಳತೀವಲೀಲೆಯಿಂ       ೭೦