ಶ್ರೀಭಾಸ್ವದ್ಬಿಂಬಮೆಂಬಂತುದಯಿಸಿ ದಶಧರ್ಮಕ್ಕಡರ್ಪಾದ ತೇಜೋ
ಭಾಭಾಸ್ಸದ್ಧರ್ಮಚಕ್ರಂ ಸಮನಿಸೆ ಸುಮನೋಧರ್ಮನಂ ಧರ್ಮನಂ ಧಾ
ತ್ರೀಭಾಗಂ ಚಾಗೆನಲ್ ಚಾಳಿಸಿ ಚತುರತೆಯಿಂ ಗೆಲ್ದ ಕೈವಲ್ಯಲಕ್ಷ್ಮೀ
ಲಾಭಾಯತ್ತಾತ್ಮಧರ್ಮಂ ಸಲಹುಗೆ ಸಲೆ ಸದ್ಧರ್ಮಮಂ ಧರ್ಮನಾಥಂ       ೧

ಕಲುಷಂಗಳ್ ಪಿಂಗಿರಲ್ ಕಾಳಿಕೆಗಳೆದ ಸವರ್ಣಬೊಲಿಂಬಾದ ನಿತ್ಯೋ
ಜ್ಜ್ವಲಚೈತನ್ಯಂ ನಿಜಾಕಾರದಿನೆಸೆವ ನಿರಾಕಾರಮಾತ್ಯಂತಿಕ ಶ್ರೀ
ಲಲನಾಲೀಲಾವತಂಸಂ ಸಮುಪಕಲಿತ ಕೈವಲ್ಯಮಾಂಗಲ್ಯಮೆಮ್ಮೊಳ್
ನೆಲೆಗೊಳ್ಗೋರಂದದಿಂ ತೀರದ ಶಿವಸುಖಮಂ ಸಾರ್ದ ಸಿದ್ಧಸ್ವರೂಪರ್     ೨

ಸೂಚೀನಿರ್ಭೇದ್ಯಮಾಗಿರ್ದಗಣಿತ ಭವಮಿಥ್ಯಾತ್ವಮಂ ತೂಳ್ದಿ ಸಂದೈ
ದಾಚಾರಂ ಸದ್ಗುಣಂಗಳ್ ತಮಗಮರ್ದಿರೆ ಭವ್ಯಾಳಿಗವ್ಯಾಜದಿಂ ಶಿ
ಕ್ಷಾಚಾತುರ್ಯೋಕ್ತಿಯಂ ಕೆಯ್ಕೊಳಿಸಿ ಜಿನಮತಸ್ಫೂರ್ತಿಯೊಳ್ ಕೀರ್ತಿವೆತ್ತಿ
ರ್ದಾಚಾರ್ಯರ್ ಸಮ್ಯಗಾಚಾರಮನೊದವಿಸುಗೆಮ್ಮೊಳ್ ಮನಃಪ್ರೀತಿಯಿಂದಂ           ೩

ಮಧ್ಯಸ್ಥೀಭಾವದಿಂ ಮಚ್ಚರಮನುಳಿದು ಕೇಳ್ವಂದದಿಂ ಸರ್ವಲೋಕಾ
ರಾಧ್ಯಂ ಸಿದ್ಧಂ ವಿಶುದ್ಧಂ ಜಿನಮತಮೆನಿಪೊಂದಂದದಿಂ ಕೂರ್ಮೆಯಿಂ ಧ
ರ್ಮಧ್ಯಾನಂ ಸಲ್ವವೋಲ್ ಚೆಲ್ವಳವಡೆ ನಿಜಶಿಷ್ಯರ್ಗೆ ಮುಂ ಪೇಳ್ದ ಜೈನೋ
ಪಾಧ್ಯಾಯರ್ ಪ್ರೌಢಿಯಿಂ ಚೋದಿಸುಗೆಮಗನವದ್ಯಶ್ರುತಶ್ರೀಯ ಕೂರ್ಪಂ   ೪

ನೆಗಳ್ದುದ್ದಂಡದ ಪುಷ್ಪಕಾಂಡನಲರಂಬಂ ನೆರ್ಗಿ ಕೋದಂಡಮಂ
ತೆಗೆದಾರ್ಪಿಂ ಮುಱಿದಿಕ್ಕಿ ಗಾಢ ಗುಣದಿಂದಂ ತೋಳ್ಗಳಂ ಕಟ್ಟಿ ರ
ಚ್ಚೆಗೆ ತಂದುಬ್ಬಟೆಯಿಂದೆ ದೂಱುವಡೆದಿರ್ದುಂ ಮತ್ತಿನರ್ ಸರ್ವಸಾ
ಧುಗಳೆಂತಾದರೆನಿಪ್ಪವರ್ ಕಿಡಿಸುಗೆಮ್ಮನೋವಿತಾನಂಗಳಂ          ೫

ಗುರುಪದಮೆಮಗರ್ಹತ್ಪದ
ಮುರುಸಿದ್ಧಪದಂ ಪ್ರಸಿದ್ಧದಾಚಾರ್ಯಪದಂ
ಪರಮೋಪಾಧ್ಯಾಯಪದಂ
ವರಸಾಧುಪದಂ ಪದಂಗಳೊಳ್ ಮಂಗಳದಂ     ೬

ಗುಜ್ಜುಗು ಱುಕಿಲ್ಲದೆನಸುಂ
ಪಜ್ಜಳಿಸಿರೆ ದಿಟ್ಟಿ ನಿಟ್ಟೆಯಿಂ ಮುಕ್ತಿಪದ
ಕ್ಕುಜ್ಜುಗಿಸಿ ಪಂಚಗುರುಗಳ
ಪಜ್ಜೆಗಳಂ ಪಿಡಿದು ನಡೆದವಂಗರಿದುಂಟೇ        ೭

ಮಿಸುನಿಯ ಬಣ್ಣಮಂ ಮಿಗುವ ಮೆಯ್ವೆಳಗಿಂದುಚಿತಾಯುಧಂ ವಿಜೃಂ
ಭಿಸಲೆಸೆವೆಂಟು ತೋಳ್ತೊಳಪ ಯಕ್ಷಿ ಮನೋಮುದದಿಂ ಮದೀಯ ಮಾ
ನಸ ಬಿಸಜಾತದೊಳ್ ನೆಲಸಿ ತಾನಸಿತಾಂಬುಜಾಕ್ಷಿ ಕೂ
ರಿಸುಗೆ ಕುತರ್ಕನೋದೆ ಕುಲಿಶಾನನೆ ಶಾಸನಮಂ ಜಿನೇಂದ್ರನಾ         ೮

ಮಸಕಂಬೆತ್ತ ಮತಿಪ್ರಕಾಶಮನಲಂಪಿಂದಿತ್ತು ಮತ್ತಾವ ದು
ರ್ವ್ಯಸನಂಗಳ್ ಪುಗದಂತೆ ಪೂಣ್ದು ಪುದುವಂದೇಕಾಂಗದಿಂ ತಾನೆ ಮಾ
ನಸದೊಳ್ ನಿಂದು ಜಿತಾರಿಪಕ್ಷನದಟಿಂ ಯಕ್ಷೋತ್ತಮಂ ಕೂರ್ತು ರ
ಕ್ಷಿಸುಗೋರಂತೆ ಜಿನೇಂದ್ರಶಾಸನವಚಸ್ಸಂಪನ್ನರಂ ಕಿನ್ನರಂ           ೯

ಪರಮ ದಯಾರಸಂ ಪೊರೆಯೆ ಪೊಂಗಿ ಮಡಲ್ತೆಸೆವಂಗಯಷ್ಟಿ ಸುಂ
ದರಮೆನೆ ಸಂದನೇಕ ನಯಶಾಖೆ ಮನಂಗೊಳೆ ಸಪ್ತಭಂಗಿ ಭಾ
ಸುರಕುಸುಮಂ ಜಸಂಬಡೆಯೆ ಜೈನಮುಖಾವನಿಜಂ ಸರಸ್ವತೀ
ಸುರಲತೆ ಮಾಡುಗಿಷ್ಟಫಲಮಂ ನಿರಪಾಯಮೆನಲ್ ವಿನೇಯರಾ   ೧೦

ಮಿಗೆ ಮುಕ್ತಾಮಯಮಾಗಿಯುಂ ಜಡಧಿಯೊಳ್ ಮೆಯ್ದೋಱದಚ್ಛಿದ್ರಮಾ
ಗಿ ಗುಣಂಗಳ್ಗಡೆಗೊಟ್ಟು ತನ್ನನೆರ್ದೆಯೊಳ್ ಚೆನ್ನಾಗೆ ತಾಳ್ದಿರ್ದ ಸಾ
ಧುಗಳಂ ನಾಡೆ ವಿರೂಪರೆಂದೆನಿಸಿ ಮತ್ತಂ ಮುಕ್ತಿ ಕೂರ್ಪಂತೆ ಮಾ
ಡುಗುಮೆಂದೆಂದೆ ಮಹತ್ವಮೇಂ ಬಹಳಮೋ ರತ್ನತ್ರಯಾಕಲ್ಪದಾ            ೧೧

ಪರಮಬ್ರಹ್ಮಸಮುದ್ಭವಂ ವಿಗತದಂಡಂ ವೀತರಾಗಾತ್ಮಕಂ
ವಿರಜಸ್ಕಂ ದ್ವಿಜರಾಜಪೂಜ್ಯನಮಲಂ ನಿಷ್ಕಂಟಕಂ ತಾನೆನಲ್
ಪಿರಿದುಂ ಧಾತ್ರಿಗೆ ಚಿತ್ರಮಾದ ಪದಪಿಂ ಮೆಯ್ವೆತ್ತ ಜೈನಾಗಮಾಂ
ಬುರುಹಂ ಮಾಳ್ಕೆ ಮನೋನುರಾಗದೊದವಂ ಭವ್ಯಾಳಿಗವ್ಯಾಕುಳಂ           ೧೨

ರುತುವಾಱುಂ ಬೇಱೆ ಮೆಯ್ದೋಱಿರಲೆಸೆವ ವಸಂತಾಗಮಕ್ಕಲ್ಲದುತ್ಕಂ
ಠತೆಯಿಂದಂ ರಾಗಮಂ ಕೋಗಿಲೆ ರಚಿಯಿಸದೆಂತಂತೆ ಷಡ್ದರ್ಶನಂ ಸಂ
ತತಮೊಪ್ಪಂಬೆತ್ತು ತಾಮಿರ್ದೊಡಮಮಲಿನ ಜೈನಾಗಮಕ್ಕಲ್ಲದೆಂದುಂ
ಮತಿದಾರಂ ಭವ್ಯನವ್ಯಾಕುಳಮವೆನೆನಲೇನಾರ್ಮಮೋ ಜೈನಧರ್ಮಂ          ೧೩

ಮಾಣಿನ್ನಾವುದುಮೇವುದುದ್ಭವಕರಂ ಗರ್ಭಾವತಾರಾದಿ ನಿ
ರ್ವಾಣಾಂತಂ ತವದೇಳ್ಗೆವೆತ್ತ ಮಹಿಮಾಲೋಕಂ ತ್ರಿಲೋಕೀಜನ
ಶ್ರೇಣೀ ನಿರ್ಮಿತ ನಿತ್ಯ ವೈಭವ ವಿಲಾಸೋದಂಚಿತಂ ಪಂಚಕ
ಲ್ಯಾಣಂ ಮಾಳ್ಕೆ ಕಳಾವಿಳಾಸ ವಿಳಸತ್ಕಾವ್ಯಕ್ಕೆ ಕಲ್ಯಾಣಮಂ        ೧೪

ಶ್ರೀ ಜಿನಪತಿಯ ಜಗತ್ರಯ
ಪೂಜಿತಮೆನಲೊಪ್ಪುವಾತಪತ್ರತ್ರಯಮಂ
ಪೂಜಿಸಿ ನೆಗಳ್ದ ಮಹಾಕವಿ
ರಾಜಂಗರಿದಾಯ್ತೆ ಧರೆಯೊಳೇಕಚ್ಛತ್ರಂ

ತೊಳಗುವನುಬದ್ಧಕೇವಲಿ
ಗಳೆನಿಪ ಗೌತಮ ಸುಧರ್ಮ ಜಂಬೂಗಣಭೃ
ತ್ತಿಳಕರ ಚಳನನಖದ್ಯುತಿ
ತಿಳಕಿಸುಗೋರಂತೆ ಭವ್ಯಭಾಳಸ್ಥಳಮಂ          ೧೬

ಕೇವಳಿಗಳಿವರಿವರ್ ಶ್ರುತ
ಕೇವಳಿಗಳೆನಿಪ್ಪ ಭೇದಮಿಲ್ಲೆನೆ ನೆಗಳ್ದರ್
ಭಾವಿಸೆ ನಂದ್ಯಪರಾಜಿತ
ಗೋವರ್ಧನ ಭದ್ರಬಾಹು ವಿಷ್ಣುಪ್ರಮುಖರ್  ೧೭

ಪತ್ತುಂ ಪೂರ್ವಮನುನ್ನತಿ
ವೆತ್ತೆಸೆವೇಕಾದಶಾಂಗಮಂ ಧರಿಯಿಸೆ ಲೋ
ಕೋತ್ತಮರೆನಿಸಿದ ಸೂರಿಗ
ಳಿತ್ತೆಮಗೊದವಿಸುಗೆ ವಿಶ್ರುತಶ್ರುತದಱಿವಂ      ೧೮

ಭೂತಬಲಿ ಪುಷ್ಪದಂತರ್
ಮಾತೇಂ ಪರಮಪ್ರಸಾದರುಚಿಯಿಂ ತ್ರಿಜಗ
ತ್ಪ್ರೀತಿಯನಾಶಾಂಬರ ವಿ
ಖ್ಯಾತಿಯನಾಗಿಪುದು ಪೊಸತೆ ವಸುಧಾತಳದೊಳ್          ೧೯

ಜಿನಸೇನ ವೀರಸೇನರ
ನನುಕೂಲರ್ಮಾಡಿ ನಡೆವವಂಗತಿಭಯದಿಂ
ಮನವಗಿದರಿವಾದಿ ಬಲಂ
ಮೊನೆಯೊಳ್ ಜಗುಳ್ದೊಡದಿದಿರೊಳೇಂ ನಿಂದಪುದೇ       ೨೦

ಭಜಿಯಿಪೆನೆನ್ನ ಸತ್ಕೃತಿಗೆ ಸತ್ಕೃತಿ ಸಾಧನಮೆಂದು ನಾಂದಿಯೊಳ್
ನಿಜಕವಿತಾನುಕೂಲ ಗುಣಭದ್ರನನೆಮ್ಮ ಸಮಂತಭದ್ರನಂ
ವಿಜಿತ ವಿರೋಧಿ ವಾದಿಕುಲದೇವನನೊಲ್ದಕಳಂಕದೇವನಂ
ಸುಜನಮನಃಪ್ರಸಾದಕರಪಾದನನಗ್ಗದಪೂಜ್ಯಪಾದನಂ   ೨೧

ಮಲಮೊಗೆಯದು ಮದ ಮಧುಕರ
ಕುಲಪರಿಚಯಮೊಂದದಾದ ಕಂಟಕಮಿಲ್ಲೆಂ
ದಲಸದೆ ಮನ್ಮತಿ ಗೋಮಿನಿ
ನೆಲಸುಗೆ ಗುಣಭದ್ರಪದಪಯೋಜಾಸನದೊಳ್  ೨೨

ಮುಟ್ಟದ ನೆಱೆ ನಾಲ್ವೆರಲಂ
ಬಿಟ್ಟಿಳೆಯಂ ನಡೆವ ಕುಂಡಕುಂದಾಚಾರ್ಯರ್
ನೆಟ್ಟನೆ ಹೃದಯದೊಳಿರಲೇಂ
ಪುಟ್ಟುಗುಮೆ ವಿನಯರೊಳ್ ಕುಮಾರ್ಗಾಚರಣಂ          ೨೩

ಭುವನನುತಶ್ರುತದೇವಿಯ
ನವಯವದಿಂದೊಲಿಸಿ ಮತ್ತೆ ಮೊಱೆಗಿಡರಿವರೆಂ
ಬ ವಿಶುದ್ಧಕೀರ್ತಿ ಬವರಿಪ
ಕವಿಪರಮೇಷ್ಠಿಗಳ ಕರುಣಮೆಮಗಾಭರಣಂ     ೨೪

ಪೋಷಿಸುಗೆಮ್ಮಂ ಸಲೆ ನಿ
ರ್ದೋಷಿ ಬಲಾತ್ಕಾರಗಣ ಗರಿಷ್ಠರ್ ಕರುಣಾ
ಭಾಷಣರಮಳಿನ ಜಿನಮತ
ಭೂಷಣರೆನೆ ನೆಗೆಳ್ದ ಧರ್ಮಭೂಷಣದೇವರ್   ೨೫

ಗುಣಗಣಮುಗ್ರಸಂಯಮ ವಿಭೂಷಣ ಮುಕ್ತಿ ವಿದಗ್ಧ ಕರ್ಣಭೂ
ಷಣಮುರುಕೀರ್ತಿ ದಿಗ್ವಿವರಭೂಷಣಮಾತ್ಮನುತಂ ದಯಾವಿಭೂ
ಷಣಮಮಲಾಂಘ್ರಿ ಭವ್ಯಜನ ಬಾಳವಿಭೂಷಣಮಾದ ಧರ್ಮಭೂ
ಷಣಯತಿ ಚಕ್ರವರ್ತಿಯ ಚರಿತ್ರಮೆ ಭೂಭುವನೈಕಭೂಷಣಂ         ೨೬

ಆ ಸಕಲಾವನಿಪತಿ ಚೂ
ಡಾಸೇವಿತ ಚರಣ ಧರ್ಮಭೂಷಣಗುರು ಸಿಂ
ಹಾಸನಮನೆಸಗಿದಂ ಜಿನ
ಶಾಸನವರ್ಧನ ದೇವ ವರ್ಧಮಾನಮುನೀಂದ್ರಂ  ೨೭

ಜಿನಧರ್ಮಂ ವರ್ಧಮಾನಂ ಗುಣಗಣಮನಿತುಂ ವರ್ಧಮಾನಂ ತಪಸ್ಸಾ
ಧನ ಧೈರ್ಯಂ ವರ್ಧಮಾನಂ ನಿಯಮವಿಧಿ ಸದಾ ವರ್ಧಮಾನಂ ಸುವಿದ್ಯಾ
ಧನಮೆಂದುಂ ವರ್ಧಮಾನಂ ತ್ರಿಜಗದೊಳದಱಿಂ ವರ್ಧಮಾನಾಭಿಧಾನಂ
ತನಗೇಕಚ್ಛತ್ರಮಾದುನ್ನತಿಯೊಳೆ ನೆಗಳ್ದಾ ವರ್ಧಮಾನವ್ರತೀಂದ್ರಂ            ೨೮

ಸುಮನೋಮಾರ್ಗಣನೆಂದು ಮನ್ನಿಸದೆ ಮುನ್ನಂ ತನ್ನ ಮೆಯ್ಗುಂದಿದ
ಕ್ಷಮನೆಂದೀಕ್ಷಿಸಿದಂಗಜನ್ಮನಿವನೆಂದಾರಯ್ಯದಾ ಕಾಮನಂ
ಸಮಸಂದುಗ್ರತಪೋಗ್ನಿಯಂ ಮರಳಿ ಪುಟ್ಟಿಲ್ಲೆಂಬಿನಂ ಸುಟ್ಟು ಸಂ
ಯಮಿಭಟ್ಟಾರಕ ವರ್ಧಮಾನಮುನಿಚಂದ್ರಂ ಶಾಂತನೆಂತಾದನೋ  ೨೯

ಮಾಸಕ್ಕೋರೊರ್ಮೆ ಪಾಲೊರ್ಕುಡಿತೆಯನೊಲವಿಂ ಕೊಂಡು ಸಮ್ಯಕ್ತಪಃಪ್ರಾ
ಯಾಸಕ್ಕೋರಂದದಿಂದೊಪ್ಪಿಸಿ ನಿಜತನುವಂ ಶೀತವಾತಾತಪಾದಿ
ವ್ಯಾಸಂಗಳ್ಕಳ್ಕದಱಿರ್ತನುಪಮ ಘನನಿಶ್ರೇಯಸಶ್ರೀಗೆ ನಿತ್ಯಾ
ವಾಸಂ ತಾನಾಗಿ ಭೂಭಾಗದೊಳಮಮ ಮಹಾನಂದಿಯೋಗೀಂದ್ರನಿರ್ದಂ      ೩೦

ತನತನಗವರಿವರೆನ್ನದೆ
ಜಿನಪತಿಕೃತಿಯೊಸಗೆಗಖಿಳ ಜಿನಮುನಿಗಳ್ ಬಂ
ದನುಸರಿಸಿ ನಿಲ್ಕೆ ನಿಯಮದಿ
ನನುಕೂಲರೆನಲ್ ಮದೀಯ ಹೃದಯಾಂಗಣದೊಳ್      ೩೧

ಪರಮನಗಲ್ಚುವಿಂದಿಹದೊಳೆಗ್ಗನೊಡರ್ಚುವ ಜಾರಚೋರವೀ
ರರ ಕಥೆವೇಳದಿಂಪಮರ್ದ ಕರ್ವಿನ ಕೋಲೆನೆ ಕೆಯ್ಯೊಳಿರ್ದೊಡಂ
ಕರಮನುರಾಗದಿಂ ಸವಿದೊಡಂ ಸುಖಮಂ ತನಗೀವ ದೇವತಾ
ಪರಮನೆ ಸಂದ ಸತ್ಕೃತಿಗಳಂ ಸಮೆದಂಗರಿದುಂಟೆ ಧಾತ್ರಿಯೊಳ್     ೩೨

ಜೋಡಿಸೆ ಪುಣ್ಯದಿಂ ಕವಿತೆ ನೀಂ ಪೆಱರಂ ಪೊಗಳ್ದುಂತೆ ಸೈಪನೀ
ಡಾಡದಿರಿಂದ್ರವಂದಿತನೆ ಭಾಜನನೇನಿದು ಹುಸಿ ಹುಂಡನೆಂ
ದಾಡಿದ ಮಾತೆ ನಿರ್ವೃಜಿನನಪ್ಪ ಜಿನೇಂದ್ರನನೊರ್ಮೆ ಕೂರ್ತು ಕೊಂ
ಡಾಡಿದೊಡಣ್ಣ ಮುಕ್ತಿ ಮನೆದೊಳ್ತೆನೆ ಮಚ್ಚಿ ಮಱಲ್ದುಬಾರಳೇ  ೩೩

ಚತುರಂ ಧರ್ಮಜಿನೇಶ್ವರಂಗೆ ಪದಪಿಂ ಸರ್ವಾಂಗದೊಳ್ ಸಂದಲಂ
ಕೃತಿ ಚೆಲ್ವಾಗಿದೆ ನವ್ಯದಿವ್ಯರಸಧಾರಾಪೂರ್ವಮಾಗಿತ್ತ ಸ
ತ್ಕೃತಿ ಮುಕ್ತ್ಯಂಗನೆಗಳ್ತಿಯಿಂ ಸವತಿಯಪ್ಪುದ್ವಾಹದುತ್ಸಾಹಸಂ
ಗತಿಯೊಳ್ ಸೈತಮರ್ದಿಕ್ಕೆ ಸತ್ಕವಿಗಳಿಂ ಭದ್ರಂ ಶುಭಂ ಮಂಗಳಂ    ೩೪

ತೊಳತೊಳಗೆ ದಿಗಂಬರಮಂ
ಬೆಳಗುವ ರುಚಿಯಿರ್ದುಮೇನೊ ಸಕಲ ಜನಾಂತ
ಸ್ಥಳತಮಮಂ ತಮ್ಮುದಯದೊ
ಳಳಱಿಸಿದರೆ ರವಿಗಳೆಮಗೆ ಕವಿಗಳೆ ವಂದ್ಯರ್    ೩೫

ಆದಿಕವಿ ಪಂಪನೆಂದನು
ವಾದಿಸಿ ವಾದಿಸಿ ವಿರೋಧಿ ವಿಪರೀತತೆಯಿಂ
ದೋದೆ ವಿಲೋಮದೆ ಪೆಸರಂ
ಮೇದಿನಿಯೊಳಗವನ ಪೆಸರೆ ಪೆಸರ್ವಡೆದೆಸೆಗುಂ  ೩೬

ಬಿನ್ನಣದ ಕುಸುರಿ ಪಸರಿಸು
ವನ್ನಂ ಗುಣಜಾತಿಬಂಧಮಳವಡೆ ನೆಗಳ್ದಾ
ಪೊನ್ನಂ ರನ್ನಂ ಕೂಡಿದೊ
ಡೆನ್ನೀ ವಾಗ್ವಧುಗೆ ಭೂಷಣಂ ಪೆಱತುಂಟೇ     ೩೭

ಘಳಿಲನೆ ವಿಬುಧರ್ ತುಷ್ಟಿಯ
ನೊಳಕೆಯ್ದು ಮನಃಪ್ರಸಾದಮಂ ಪಡೆವುದಱಿಂ
ಕಳೆಯಿಂ ಚಂದ್ರಂ ಕವಿತಾ
ಕಳೆಯಂ ಕವಿ ನಾಗಚಂದ್ರನಾಂತುದೆ ಸಫಲಂ      ೩೮

ಏಮಾತೊ ನವ್ಯಕಾವ್ಯಕ
ಲಾಮಹಿಯೊಳ್ ಬಿಡದೆ ಬಿದಿವರಿವೊಡೆ ಮೊದಲೊಳ್
ನೇಮಿಯ ನೆಮ್ಮುಗೆಯಿಲ್ಲದೊ
ಡೀ ಮತ್ತಿನ ಕವಿಮನೋರಥಂ ನಡೆದಪುದೇ      ೩೯

ತನ್ನ ತಱುವಾಯ ಸತ್ಕೃತಿವೇ
ಳ್ವನ್ನಂ ನೀನಲ್ಲದಿಲ್ಲವೆಂದತಿಮುದದಿಂ
ಮನ್ನಿಸಿ ಸಲಹುಗೆ ಸತ್ಕವಿ
ಜನ್ನಂ ಜಾಣೆಸೆಯಲಿತ್ತು ನುಡಿಗಳನೆನ್ನಂ         ೪೦

ಸರ್ವರ ಸಮ್ಮತಮೆನಗಿದು
ಗರ್ವದ ಮಾತಲ್ಲ ಶಾಸ್ತ್ರಲೌಕಿಕ ಕಳೆಯೊಳ್
ಬೇರ್ವರಿದ ನೇಮಿ ಜನ್ನಿಗ
ರಿರ್ವರೆ ಕರ್ಣಾಟಕೃತಿಗೆ ಸೀಮಾಪುರುಷರ್        ೪೧

ಚಂದದ ಬಂಧದೊಳ್ನಡಿಯ ದೇಸಿಯ ಮೆಯ್ಸಿರಿಯೊಳ್ ಪೊದಳ್ದ ಸೈ
ಪೊಂದೆ ಕರಂ ರಸಂಬಡೆದು ರಂಜಿಪ ಸತ್ಕವಿತಾ ವಿಲಾಸದೊಳ್
ಸಂದೊಡೆ ಸಾಲ್ವುದಿಂದಿನವರಂದಿನವರ್ ಕೆಲರೆಂದು ಪಿರ್ಕುವೀ
ದಂದುಗದಿಂದಮೇ ನಮಗನಿಂದ್ಯ ಕವೀಂದ್ರರೆ ವಂದ್ಯರಾವಗಂ        ೪೨

ತಿರ್ದಿದೊಡಂ ಸಮಂತೊಸೆದು ತಿರ್ದಿದೊಡಂ ನಯದಿಂದೆ ನೇರ್ಪುವ
ಟ್ಟಿರ್ದ ಮದೀಯ ಸತ್ಕೃತಿಯ ಬಿಂಕದ ಕೊಂಕಿನ ಮಾತನೋತು ಕೈ
ಸಾರ್ದನುಭಾವದೊಳ್ ಸರಸರಾದ ಕವೀಶ್ವರರೆಯ್ದೆ ನೇಹದಿಂ
ತಿರ್ದುಗೆ ತಿರ್ದುವಂತೆ ಸುರತಾಂತದ ಕಾಂತೆಯ ನುಣ್ಗುರುಳ್ಗಳಂ    ೪೩

ತನಗೆ ಕವಿತ್ವದೊಳ್ನುಡಿಗಳೊಳ್ನುಡಿಯಾದ ರಸಂಗಳಿಂಪುವೆ
ತ್ತನುವಶಮಾದ ಭಾವಮತಿಬಂಧುರಮಾದ ಪೊದಳ್ದ ರೀತಿ ನೆ
ಟ್ಟನೆ ನೆಲೆಯಾದ ದೇಸಿ ಕಡುಮಾಸರಮಾದ ಗಣಂಗಳೋಳಿಗೊಂ
ಡನುಗುಣಮಾದ ನಂಬುಗೆ ಮನಂಬುಗೆ ಪೇಳ್ವುದು ನವ್ಯಕಾವ್ಯಮಂ           ೪೪

ಚತುರ ಕವಿಯಾದವಂ ಸ
ತ್ಕೃತಿವೇಳ್ವುದು ತನಗಮಿತರ ಜನಕಂ ಸುಮನಃ
ಸ್ಥಿತಿವಾಸನೆಬಡೆದಿರೆ ಸ
ನ್ನುತ ಮಾಲೆಯನೆತ್ತುವಂತೆ ಮಾಲಾಕಾರಂ      ೪೫

ಕೊರ್ವಿ ಪೊಱಪೊಣ್ಮೆ ತನಿರಸ
ಮುರ್ವೆ ಕರಂ ಕೊಂಕು ಕಿವಿವರಂ ನವ್ಯಗುಣಂ
ಪರ್ವೆ ತೆಗೆದೆಸುವ ಕಾವನ
ಕರ್ವಿನ ಬಿಲ್ಲಂತೆ ಕಾವ್ಯಮೇಂ ಮೋಹಿಸದೇ      ೪೬

ಅಂಗದ ಪೊಲಬಿನಿಸಿಲ್ಲದ
ನಂಗಂ ಮೋಹಿಗುಮೆಂದೊಡೊಪ್ಪುವ ಪದಿನೆಂ
ಟಂಗದ ಕೃತಿಸತಿ ಚತುರಜ
ನಂಗಳನೆರ್ದೆಗೊಳಿಪುದರಿದೆ ಸರಸೋಕ್ತಿಗಳಿಂ      ೪೭

ತಿಂಗಳ ಬೆಳಕಿಗೆ ಬೆಳಗಿನೊ
ಳಿಂಗಡಲೆಸೆವಂತೆ ಬಹುಕಳಾಪರಿಣತರೊ
ಲ್ದಂಗೀಕರಿಸಿದ ಕೃತಿ ಭುವ
ನಂಗಳೊಳೋರಂತೆ ಮೆಱೆವುದೊಂದಚ್ಚರಿಯೇ ೪೮

ತಲೆಯಂ ತೂಗಿ ಬೆರಲ್ಗಳಂ ಮಿಡಿದು ಸದ್ವಿದ್ಯರ್ ಸಭಾಮಧ್ಯದೊಳ್
ಪಲಬರ್ ಸತ್ಕವಿಗಿತ್ತ ತಕ್ಕಿನ ಪೆಸರ್ ಸಲ್ವಂತೆ ನೀಚಂಗೆ ವಾ
ಗ್ಬಲದಿಂ ಬಂಟಿನ ನಂಟಿನಗ್ಗಳಿಕೆಯಿಂದೆರ್ಗೆನ್ನ ದೂರ್ವೆಳ್ದು ಗಾ
ವಿಲನೊರ್ವಂ ಕುಡೆ ಕೊಂಡ ತೊಂಡುವೆಸರಿಂದೇಂ ಸಲ್ವುದೇ ನಿಲ್ವುದೇ        ೪೯

ತಲೆದೂಗೆ ಬುಧರ್ ಖಳನಂ
ತಲೆವಾಗಿಸಿ ಸಭೆಯ ನಡುವೆ ನಿಲ್ಲದೆ ಪಾವಂ
ತಲೆಗಂಡ ಪಂದೆಯಂದದೆ
ತಲೆಬಾಲಂಗೆಟ್ಟು ಜಗುಳ್ವ ಕವಿಯುಂ ಕವಿಯೇ ೫೦

ತಳ್ತಳವಟ್ಟಿರಲವಯವ
ದೊಳ್ತೊಳಗದ ಕೃತಿಯೊಳಿಟ್ಟಲಂಕಾರಮದೇ
ವಾಳ್ತೆ ನಡೆನೋಡೆ ಬಡವರ
ತೊಳ್ತಿನ ಶೃಂಗಾರದಂತಿರೆರವಾಗಿರದೇ            ೫೧

ಕತ್ತುರಿಯನೆರೆಯ ಮಣ್ಗೆ ರ
ಸೋತ್ತರ ಕವಿಕೃತಿಯನಧರ್ಮಕೃತಿಗೆಣೆಯೆಂಬಂ
ಗೆತ್ತಣ ಮಾತೊ ವಿದಗ್ಧರ್
ಚಿತ್ತೈಸಿದೊಡಿಳೆಯೊಳುಂಟೆ ಮೂಗುಂ ಕಿವಿಯುಂ           ೫೨

ಕುಟಿಳಾಳಾಪದೆ ಪಿಂದೆ ಕಾಳ್ಗೆಡೆದು ಮುಂದಾ ಸತ್ಕವೀಂದ್ರರ್ಕಳು
ಬ್ಬಟಿಯಂ ಕಂಡು ಕನಲ್ದು ಕೇದಗೆಯ ತೂಱಲ್ಗೊಂಬನೇಱಿರ್ದ ಮ
ರ್ಕಟನೆಂತಂತೆ ಕುನುಂಗಿ ಪಲ್ಗಿರಿದು ಬಾಯಂಬಿಟ್ಟು ಬೆಂಬೀಳ್ವನ
ಕ್ಕಟ ಧಾತ್ರೀತಳದಲ್ಲಿ ದುಷ್ಕವಿಯದೇಂ ಹಾಸ್ಯಕ್ಕೆ ಪಕ್ಕಾದನೋ  ೫೩

ಉತ್ತಮರುತ್ಪಾದಕನೆನಿ
ಪುತ್ತಮಕವಿಗಗಿಯದುಂತೆ ತಲೆಯೆತ್ತಿದೊಡೇ
ನುತ್ತಮನೆ ಕುಕವಿ ನಿಡುಗೊರ
ಲೆತ್ತಲ್ ಶರಭಕ್ಕೆ ಕರಭನೆಣೆಯೆನಿಸುಗುಮೇ      ೫೪

ಸಲೆ ನಿಲೆ ಸುಕವಿ ಸುವರ್ಣದ
ನೆಲೆಯಱಿದೊರೆದೊರೆದು ನೋಡಿ ಬಗೆಯೊರೆಗಲ್ಲೊಳ್
ತಲೆದೂಗದಂತೆ ಸಭೆಯೊಳ್
ತಲೆದೂಗುವವಂ ಪರೀಕ್ಷಿಸಲ್ ಬಲ್ಲವನೇ       ೫೫

ನವರಸರಸಿಕಂ ಸುಮನ
ಸ್ತವನೀಯವೆನಿಪ್ಪ ಕಾವ್ಯದತಿಶಯಮಂ ದುಃ
ಕವಿಯಱಿಯನೆಂದು ಜಱೆಯೆ
ಪ್ಲವಗಕ್ಕೇವಾಳ್ತೆ ಪಾರಿಜಾತಸ್ತಬಕಂ  ೫೬

ಪಂಡಿತರುಮ ವಿವಿಧಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ಡುಂಡುಚಿಯೆ ಬೀದಿವರಿಯ ಬೀರನ ಕಥೆಯೇ    ೫೭

ನೆರೆಯಱಿಯದ ಪೊರೆಯಱಿಯದ
ಬಿರುದಗಳೇಕೆಮಗೆ ಕೃತಿಯನೀಕ್ಷಿಸಿ ಮಿಗೆ ಮ
ಚ್ಚರಿಸುವ ಕವಿಯೆರ್ದೆ ಬಿಕ್ಕನೆ
ಬಿರಿದಿರ್ದುದೆ ಬಿರಿದು ಮಿಕ್ಕ ಬಿರಿದದು ಬಿರಿದೇ  ೫೮

ಭೂನುತ ಕೃತಿಯಂ ಚತುರಕ
ಳಾನಿಳಯರ್ ನೋಡಿ ಮೆಚ್ಚಿ ತಲೆದೂಗೆ ಖಳಂ
ಮೋನಮಿರದೇಕೆ ಪಳಿವನೊ
ತಾನೇಡಿಸಿ ನೋಡುವಂತೆ ಮಣಿದರ್ಪಣಮಂ     ೫೯

ತಪ್ಪಿನಿಸುಮಿಲ್ಲದೆಲ್ಲರು
ಮೊಪ್ಪಿದ ಕೃತಿಯಂ ಕುತರ್ಕೆ ಪಳಿದೊಡೆ ತನಗೇ
ನುಪ್ಪಾದುದೆ ಸೊಪ್ಪಾದುದೆ
ಮುಪ್ಪುರಿಗೊಂಡೇಕೆ ಬಱಿದೆ ಬಾಯಳಿದೂಳ್ವಂ            ೬೦