ಚಂದನದೊಳ್ ಪಾವಿನ ಭಯ
ಮಿಂದುವಿನೊಳ್ ರಾಹುಬಾಧೆ ಸತ್ಕೃತಿಯೊಳ್ ತ
ಳ್ತೊಂದಿದ ದುರ್ಜನದೂಷಣ
ವಿಂದಾದುದೆ ತಾನನಾದಿಯುಗ ಸಂಸಿದ್ಧಂ        ೬೧

ಮಾಡಿದನೇಕೆಯೊ ಮೇಲಂ
ನೋಡದೆ ಬಿದಿ ವಿಷಮಫಣಿಗಣಲ್ಗಳ ಪಲ್ಲಂ
ರೂಡಿಸಿದ ತೇಳ್ಗೆ ಮುಳ್ಳಂ
ನಾಡಱಿಕೆಯ ದುರ್ಜನಂಗೆ ನಿಡುನಾಲಗೆಯಂ    ೬೨

ಪಳಿಯೆಂದೊಡಂಜುಗುಂ ಪೇ
ಕುಳಿನಾಯೊಳಗಾಗಿ ಖಳನದೇಂ ಕಷ್ಟನೊ ಚಿಃಸ
ಪಳಿಯೆಂದೊಡಗಿದು ಸಜ್ಜನ
ಕುಳಮಂ ಕಂಡಾಗಳುದ್ದಮೂಳಂ ಬಾಳಂ         ೬೩

ನ್ಯಾಯಮಿದು ಧರೆಗೆ ದುರಭಿ
ಪ್ರಾಯದ ದುರ್ಜನನ ಮೋರೆಯಂ ಕಂಡೊಡೆ ಥೂ
ಚೀಯೆಂಬುದುಱೆ ಬಗುಳ್ವನ
ಬಾಯೊಳಗುಗುಳೆಂಬ ನಾಡಗಾದೆಯ ಬಲದಿಂ   ೬೪

ಪದುಳದ ಪೊಳ್ತುವೋಗದೊಡೆ ರಾಗದಿನಲ್ಲಿ ಸರಸ್ವತೀಮುಖಾ
ಬ್ಜದ ಮಧುಸೇವೆಯಿಂ ಕಳಿವುದಂತದರೋಚಕಮಾದೊಡಿಲ್ಲ ಬಂ
ದೊದವಿ ಕಳಾವಿಳಾಸ ಕವಿತಾಮೃತಮಂ ಮನವಾರೆ ಪೀರ್ದುದ
ಲ್ಲದೆ ಬಱಿದೇಕೆ ಮಾಡುಗುಮೊ ದುಷ್ಟರನೋವೋ ಸರೋಜವಿಷ್ಟರಂ      ೬೫

ಅವರಿವರಂ ಕನಲ್ದು ಬಿಱುವಾತುಗಳಿಂ ಜಱೆದಾನೆ ಲೋಕದೊಳ್
ಕವಿಯೆನುತುಂತೆ ಕಂತೆವೊರೆದಂತಳಿಗಬ್ಬಮನುಬ್ಬಿ ಪೇಳ್ದ ಸಂ
ಭವರಸಭಾವಮಂ ಬಱಿದೆ ಬಿಱ್ದನೆ ಬೀಗಿ ಮಹಾಕವೀಂದ್ರ ಮಾ
ಧವನೆಣೆಯಪ್ಪೆನೆಂಬ ಕೊಳೆಗಬ್ಬಿಗ ನಿನ್ನಯ ಗರ್ಬಮೆಂತುಟೋ    ೬೬

ಪೆಸರೆಸಕದ ಪಾಲಯ್ಯಂ
ಪೊಸತೇನೆಱೆದುಂಬುದಂಬಿಲಂ ಗಡಮೆಂಬೀ
ಗಸಣಿಯೊಳೊಂದದೆ ನೆಗಳ್ದೊ
ಳ್ವೆಸರುಂ ಮಧುರಂ ದಲವನ ಮಾತುಂ ಮಧುರಂ          ೬೭

ಸುಧೆ ಸುರಭಿ ಸಗ್ಗಕಗ್ಗದ
ಮಧು ಮಧುರಕವೀಂದ್ರ ಕವಿತೆ ವಸುಧಾತಲಕೆಂ
ತಧರತೆ ತನಗಾಗದವೊಲ್
ವಿಧಿ ವಿಬುಧರ್ ಮೆಚ್ಚೆ ಪೆಚ್ಚೆ ಪವಣಿಸಿ ಪಡೆದಂ           ೬೮

ಗಣಿದಂಗೊಳ್ವೊಡೆ ಮಿಕ್ಕಿನಕ್ಕರದ ಮಾತಂತಿರ್ಕೆ ತನ್ನಾಣೆಗೋ
ಸಣೆ ಸಲ್ಗುಂ ಸುಕವೀಂದ್ರವೃಂದ ಸಭೆಯೊಳ್ ತಾನೆಂದೊಡಮ್ಮಮ್ಮ ಧಾ
ರಿಣಿಯೊಳ್ ಕೇಳ್ದಱಿಯಾ ಜಡಾ ಮಧುರನಂ ನಿರ್ಣೀತ ಕರ್ಣಾಟಲ
ಕ್ಷಣಭಾಷಾಕವಿರಾಜನಂ ಪ್ರವಿಲಸದ್ವಾಣೀಮುಖಾಂಭೋಜನಂ      ೬೯

ಬಣ್ಣಣೆಯ ಕುಸುರಿವಾತುಗ
ಳಣ್ಣಂದಿರ ತೆಱದೆ ನನ್ನದಿನ್ನದೆನುತ್ತಾಂ
ಬಣ್ಣಿಸಲಱಿಯೆಂ ಕವಿತೆಗೆ
ಕಣ್ಣೆಲೆಯಾದುದು ಕಳಾವಿಳಾಸನ ಕಾವ್ಯಂ       ೭೦

ಚದುರ ನೆಗಳ್ತೆ ತೆಂಬೆಲರ ಸೋಂಕು ಸುಧಾರಸದಿಂಪು ಬಂದ ಚೂ
ತದ ಕೊನರಂಚೆಯಾಟವಳಿನೀರುತಿ ತಿಂಗಳ ಸೊಂಪು ಪುಷ್ಪಬಾ
ಣದ ಪೊದೆ ರಾಗದಾಗರಮನಂಗನ ಕೈಪಿಡಿ ನಲ್ಲಳೊಲ್ಮೆಯೆ
ನ್ನದೆ ಪೆಱತೆಂಬುದೇ ಮಧುರ ಮಾಧವ ನಿನ್ನಯ ವಾಗ್ವಿಲಾಸಮಂ ೭೧

ಮದನನ ಬಿಲ್ಲ ಬಲ್ಮೆ ಬಲಿದತ್ತು ವಸಂತದ ಮೋಹನಂ ಪೊದ
ಳ್ದುದು ಕಡುಗಾಡಿವೆತ್ತಲೆವ ತೆಂಕಣಗಾಳಿಯ ಸೋಂಕು ಸೊರ್ಕುವೆ
ತ್ತುದು ಪುದುವಂದುದೆಂದು ನೆಲೆವೆರ್ಚಿರೆ ಭಾವರಸಂ ರಸಜ್ಞೆಯೊಳ್
ಮೃದುಪದವಿಟ್ಟಳಕ್ಕುಮೆನೆ ಭಾರತಿ ಬಂದು ಕಳಾವಿಳಾಸನಾ         ೭೨

ಆವ ರಸಾತಿರೇಕಮೊ ಕರಾಗ್ರದೊಳೋದುವ ರಾಜಕೀರ ಲೀ
ಲಾವಚನಂಗಳೋಗಡಿಸಲುಕ್ಕೆವದಿಂ ಕುಡುಕೆಂದು ತಂದು ಚಂ
ಚೂವಿವರಕ್ಕೆ ಮಾಣಿಕದ ಮುದ್ರಿಕೆಯಂ ಪಡಿಗೆತ್ತು ಭಾರತೀ
ದೇವಿ ನಿರಂತರಂ ಸವಿವಳಾತನ ನವ್ಯವಚೋವಿಳಾಸಮಂ  ೭೩

ಕವಿ ಮಧುರನ ಮಾತುಗಳೇಂ
ಸವಿಯೊ ಮದಪ್ಲವಕೆ ಮೊರೆವ ಮಱದುಂಬಿಗಳಂ
ತವೆ ತೊಲಗಿಸಿ ತನ್ನಯ ಮೊಱ
ಗಿವಿಯಂ ಮೊಗೆ ಮೊಗೆದು ಸುಮುಖನಾಸ್ವಾದಿಸುವಂ     ೭೪

ನೆಲೆವಡೆದೆಮ್ಮ ಪೆರ್ಮೊಲೆಯ ಹಾರಮೆ ಚಾರುನಿತಂಬಬಿಂಬದು
ಜ್ವಲಿಪುಡೆನೂಲೆ ಸೋರ್ಮುಡಿಯ ಮಲ್ಲಿಗೆಯೇ ನೊಸಲಕ್ಕೆಬೊಟ್ಟೆ ಬೈ
ತಲೆಯೆಳೆಮುತ್ತೆ ಬಾ ಕೊರಲ ದೇವರ ಹೊನ್ನೆಯೆನುತ್ತೆ ಕೂರ್ತು ಕೋ
ಮಲೆಯರಲಂಪಿನಿಂದೆ ತೆಗೆದಪ್ಪುವರೊಲ್ದು ಕಳಾವಿಳಾಸನಾ         ೭೫

ಬಂಧಕದಂಬದುಲಮೆ ಚುಂಬನವಿತ್ತ ತುಱುಂಬಿನೊಂದೆ ಪೂ
ಮುಂದಲೆಯೊಳ್ಗುರುಳ್ವಿಡಿತವಟ್ಟಿದ ಬೀಳುಡೆ ತೋಳ ಸೋಂಕು ಪೋ
ಗೆಂದಿವನಾವಗಂ ಬಯಸಿ ಬಾತಪರೋತೆಳೆವೆಂಡಿರೆಂದೊಡೇ
ನೆಂದಪೆನೊಂದು ಸಂದ ಸೊಬಗಂ ಕವಿರಾಜವಿಳಾಸನಾ      ೭೬

ರೂಢಿಸಿದ ಸೊಬಗದೆಂತುಟು
ಗಾಡಿಯ ಗರುವೆಯರ ಬಯಸಿ ಬಾಯೋಱದೊಲವಿಂ
ನೋಡುವಿನಂ ಸರಸತಿ ಬಾ
ಯ್ಗೂಡುವಳೋರಂತೆ ಮಧುರಕವಿ ಮಾಧವನಾ           ೭೭

ಕವಿತಾಶ್ರೀಗೆ ಜನಾರ್ದನಂ ಪುರುಷರತ್ನಂ ಪುಷ್ಪದಂತಂ ರಿಪು
ಪ್ರವರೋತ್ತುಂಗ ಗಜಾಂಕುಶಂ ಮನಸಿಜಾಕಾರಂ ಸಭಾಮಧ್ಯಲ
ಬ್ಧವರ ಶ್ರೀವಿಜಯಂ ಸಮಸ್ತ ಸುಜನೋತ್ತಂಸಂ ಯಶಶ್ಚಂದ್ರನು
ತ್ಸವಲೀಲಾರಥ ನೇಮಿಯೆಂದು ಮಧುರಂ ಪೆತ್ತಂ ಮಹಾಖ್ಯಾತಿಯಂ          ೭೮

ವಸುಧಾಚಕ್ರಪ್ರಸಿದ್ಧಂ ವಿಜಯನಗರಿಯೊಳ್ ಯಾದವೋರ್ವೀಶಭಾಗ್ಯಾ
ವಸಥ ಶ್ರೀಬುಕ್ಕಭೂಪಾತ್ಮಜ ಹರಿಹರರಾಜಪ್ರಧಾನೋತ್ತಮಂ ನೀ
ತಿಸಮುದ್ರಂ ಮುದ್ದದಂಡೇಶ್ವರನೆ ಪೊರೆದ ಸೌಭಾಗ್ಯದಿಂ ಭಾರತೀ ಮಾ
ನಸಕೇಳೀ ರಾಜಹಂಸಂ ನೆಗಳ್ದನವನಿಯೊಳ್ ವಾಜಿವಂಶಾವತಂಸಂ  ೭೯

ನಾಗಾಂಬಿಕೆ ತಾಯೆನೆ ನಿಜ
ಭೋಗಂ ವಿಷ್ಣು ತಾನೆ ತಂದೆಗಡೆನೆ ಭೂ
ಭಾಗಮನೆಱಗಿಪ ರೂಪ ವಿ
ಭಾಗಂ ಸತ್ಕವಿ ಕಳಾವಿಳಾಸಂಗೆರವೇ    ೮೦

ಭಾರದ್ವಾಜ ವಿಶಾಲ ಗೋತ್ರಮನುದಂಚದ್ಭಾರತಕ್ಷೇತ್ರಮಂ
ನಾರೀ ನಿರ್ಮಳನೇತ್ರಮಂ ನೆಗಳ್ದಲಂಪಿಂ ಭಾರತೀ ಶ್ರೋತ್ರಮಂ
ಸಾರಂಬೆತ್ತಸೆವಂತಲಂಕರಿಸಿತೆಂಬಾಗಳ್ ತಗುಳ್ದೆಂಬರಿ
ನ್ನಾರಂತಿಂತು ಕಳಾವಿಳಾಸ ನಿಜ ಶೀಲೋದಾರ ಚಾರಿತ್ರಮಂ          ೮೧

ಎಂದೋರಂತೆ ಕಳಾವಿದರ್ ಸುಕವಿತಾ ಸಾಮ್ರಾಜ್ಯದೊಳ್ ನೋಡೆ ನಿ
ನ್ನಂದಂಬೆತ್ತ ಮಹಾಕವೀಂದ್ರರಿಳೆಗಿನ್ನುಂ ಮು‌ನ್ನಮೇಗೆಯ್ದುಮಿ
ಲ್ಲೆಂದುತ್ಸಾಹರಸೋಕ್ತಿಯಿಂ ಪೊಗಳಲೆನ್ನಂ ಮಲ್ಲಿನಾಥಂ ಮನಂ
ಬಂದೆನ್ನೀ ಮಧುರೋಕ್ತಿಯಂ ಬಯಸಿದಂ ಸನ್ಮಾನಿ ಜನ್ಮಾಲಯಂ ೮೨

ಆವನಾರೆಂದೆನಲೀ ಚತುರ್ಜಲಧಿಮುದ್ರಾಮುದ್ರಿತೋರ್ವೀತಳ
ಕ್ಕವತಂಸಂ ಸಲೆ ಕೊಟ್ಟುಬಾಗೆವೊಳಲಂತಾ ಪಟ್ಟಣಕ್ಕಿಟ್ಟು ಬೊ
ಟ್ಟವನೆಂಬುತ್ತಮಕೀರ್ತಿವೆತ್ತು ನೆಗಳ್ದಂ ಭವ್ಯೋತ್ತಮಂ ಬೊಮ್ಮಿಸೆ
ಟ್ಟಿ ವಿದಗ್ಧರ್ಕಳ ಪೊನ್ನಘಟ್ಟಿಯೆನೆ ತನ್ನೊಂದೀವ ಕಾವೊಳ್ಗುಣಂ            ೮೩

ಆ ಚತುರ ಬೊಮ್ಮಿಸೆಟ್ಟಿಗೆ
ಖೇಚರಸಮದಾನಿಗಮಲ ಶೀಲೆ ಸಮಸ್ತೋ
ರ್ವೀ ಚಿಂತಾಮಣಿ ಸುಚರಿತೆ
ಬೈಚಾಂಬಿಕೆಯೆಂಬ ಸುದತಿ ವಲ್ಲಭೆಯಾದಳ್  ೮೪

ಆಕೆಯ ಬಸಿಱೊಳಮರ್ತ್ಯಾ
ನೋಕಹ ಮಣಿಧೇನುಗಳ್ ಮನುಷ್ಯಾಕೃತಿಯಂ
ಸ್ವೀಕರಿಸಿ ಬಂದುವೆನಲ
ಪ್ರಾಕೃತ ಗುಣಿ ಬೊಮ್ಮಿಸೆಟ್ಟಿಗಾದರ್ ತನಯರ್          ೮೫

ವಿನುತಾಶೇಷ ಕಳಾವಿಳಾಸ ರಚನಾವಿಸ್ತಾರದಿಂ ಬ್ರಹ್ಮನೆಂ
ಬ ನಿಜೋದ್ಯಜ್ಜಿಧರ್ಮಧಾರಣಧುರೀಣೋದ್ಯೋಗದಿಂ ನಾಗನೆಂ
ಬನವದ್ಯೋರ್ಜಿತ ಮಲ್ಲಿಕಾರ್ಜುನ ಯಶಸ್ಸಂಪತ್ತಿಯಿಂ ಮಲ್ಲಿಕಾ
ರ್ಜುನನೆಂಬುತ್ತಮ ನಾಮಮಂ ಪಡೆದರಾ ಮೂವರ್ ಧರಾಭಾಗದೊಳ್       ೮೬

ಧಾತ್ರಿ ನಿರಂತರಂ ಪೊಗಳೆ ಸದ್ರುಚಿವೆತ್ತೆಸೆವೊಳ್ಗುಣಂಗಳಿಂ
ಸೂತ್ರಿಸಿ ತಾವೆ ಭವ್ಯಹೃದಯಸ್ಥದೊಳ್ ನೆಲೆಗೊಂಡ ಮೈಮೆ ಲೋ
ಕತ್ರಯದೊಳ್ ವಿಜೃಂಭಿಸೆ ನಿರಸ್ತತಮಂ ನಿಜದಿಂದೆ ಬಂದು ರ
ತ್ನತ್ರಿತಯಂ ನರಾಕೃತಿಯನಾಂತುದೆನಿಪ್ಪ ಬೆಡಂಗಿನೊಪ್ಪದೇ        ೮೭

ಮೂವರೊಳಾ ಮಲ್ಲಪನೆ ಕ
ಲಾವಲ್ಲಭ ವಿದಿತನುದಿತ ಜಿನಪತಿಮತ ಪಾ
ರಾವಾರವಿಧು ಸುಕೀರ್ತಿ ಲ
ತಾವಲ್ಲೀಭೂತ ದಾನಧಾರಾಸಲಿಲಂ ೮೮

ತೊದಳಲ್ಲಲ್ಲೆಲೆ ಕೊಟ್ಟುಬಾಗೆಯ ವಿಭು ಶ್ರೀಮಲ್ಲಿನಾಥಾಂಕನಂ
ದದೆ ನಾನಾ ಭಯಬಂಧಬಾಧಿತ ಧರಾದೀನಾರ್ತರಂ ತನ್ನ ಕ
ಣ್ಣಿದಿರೊಳ್ ಕಂಡೊಡೆ ನೊಂದು ತಿಂದೆಡೆಗೆ ಕೈಬರ್ಪಂದದಿಂ ಬಂದು ಕಾ
ಯದವಂಗಸ್ಮದ ಬಂದಿ ಸೋಧನವನೆಂಬೀ ಕೀರ್ತಿ ಕೈಸೂಱೆಯೇ    ೮೯

ಪ್ರಿಯವಚನಂಗಳಿಂ ಕರೆದು ಕೆಯ್ಮುಗಿದೀ ಮಹಿಗೆಮ್ಮ ಧರ್ಮಕೀ
ರ್ತಿಯ ತವರಿನ್ನದಾರೆಮಗೆ ನೀಮಿರೆ ಬಂಧುಗಳೆಂದು ಬಂದ ವಂ
ದಿಯ ಬಗೆ ಮೆಚ್ಚಿದಿಚ್ಚೆಯಱಿದಾವಗಮೀವೊಡೆ ಭಾಪ್ಪು ಕೊಟ್ಟುಬಾ
ಗೆಯ ವಿಭು ಮಲ್ಲನಲ್ಲದಳಿವಾರಸರೇನೊಸೆದೀಯ ಬಲ್ಲರೇ      ೯೦

ಧರೆಯೊಳ್ ಪೂಮಳೆಸೂಸಿದಂತೆ ನಭದೊಳ್ ಛತ್ರತ್ರಯಾಚ್ಛ ಪ್ರಭಾ
ಪರಿರಂಭಂ ನೆಗಳ್ದಂತೆ ದಿಕ್ಕಿನೊಳುದಂಚಚ್ಚಾಮರಂ ಚಿಮ್ಮಿದಂ
ತುರು ಹೇಮಾಚಲದೊಳ್ ಜಿನಸ್ನಪನದುಗ್ಧಂ ತೀವಿದಂತಿರ್ಪುದೊ
ಪ್ಪಿರೆ ಕೀರ್ತಿಪ್ರಭೆ ಕೊಟ್ಟುಬಾಗೆಯ ವಿಭು ಶ್ರೀಮಲ್ಲಿನಾಥಾಂಕನಾ ೯೧

ಎಲೆ ಮಲ್ಲಿನಾಥನಿದಿರೊಳ್
ಚಲದಿಂ ಕೆಲರಿತ್ತರಿತ್ತರೆಂಬೀ ಮುನ್ನಂ
ಬಲಿ ಮಣ್ಣನಿತ್ತನಕಟಕ
ಟೆಲೆ ಶಿಬಿಯೆರೆದರ್ಗೆ ತನ್ನ ಖಂಡವನಿತ್ತಂ         ೯೨

ಶೋಭಾಕರಮೆನಿಪಾಹಾ
ರಾಭಯ ಭೈಷಜ್ಯ ಶಾಸ್ತ್ರದಾನಾದಿಗಳಂ
ಭೂಭುವನ ಮಱೆಯೆ ನೆಗಳ್ವೀ
ಸೌಭಾಗ್ಯಂ ಮಲ್ಲಿಕಾರ್ಜುನಂಗೆ ನಿಸರ್ಗಂ         ೯೩

ಕಿಡೆ ನುಡಿಯ ನೆರಪಿ ಮಣ್ಣೊಳ್
ಮಡಗುವ ಗುಣಪಣಮನೋತು ಪಡೆಯದೆ ಜಸಮಂ
ಪಡೆವೊಡೆ ಮಲ್ಲಪನಂತಿರೆ
ಪಡೆವುದು ಮಾನವರುದಾರ ಗುಣಮಂ ಪಣಮಂ           ೯೪

ಸದಮಳ ಭದ್ರಲಕ್ಷಣನನುನ್ನತನಂ ಕವಿರಾಜ ಪೂಜ್ಯನಂ
ಪುದಿದ ಗುಣಂಗಳಿಂ ಮಧುರನಂ ಮನವಾರೆ ತೊಡರ್ಚಿ ಪೆರ್ಚಿದ
ಭ್ಯುದಯಮ ಕೊಟ್ಟುಬಾಗೆಯ ಮಹಾಪ್ರಭು ಮಲ್ಲನೀಗಳಾನೆಗ
ಟ್ಟಿದನರಸೆಂಬ ನಾಡ ನುಡಿಯಂ ನೆಲದೊಳ್ ನೆಱೆ ನನ್ನಿಮಾಡಿದಂ ೯೫

ಮತಿಗೊಳ್ವಂತಿರೆ ಕೊಟ್ಟುಬಾಗೆಯ ವಿಭು ಶ್ರೀಮಲ್ಲಿನಾಥಂಗೆ ಮಾ
ನಿತ ಜೈನಾಗಮ ಮಾರ್ಗಮಂ ತಿಳಿವ ಸಮ್ಯಗ್ದರ್ಶನಾವಾಪ್ತಿ ಶಾ
ಶ್ವತಮಪ್ಪಂತಿರೆ ಸುವ್ರತಾಚರಣಮಂ ಕಾರುಣ್ಯದಿಂ ಕೊಟ್ಟ ಪಂ
ಡಿತ ದೇವಪ್ರಥಿತಾನ್ವಯಂ ಪೊಗಳ್ವೊಡಿನ್ನೇನನ್ಯಸಾಮಾನ್ಯಮೇ  ೯೬

ಆ ಗುರುಪಙ್ತಗಾದಿಯೆನೆ ಸಂದ ಪೊಗಳ್ತೆಯ ಕುಂಡಕುಂದ ವಂ
ಶಾಗತ ಮೂಲಸಂಘದೊಳಲಂಘ್ಯ ಯಶಃಪ್ರಸರಾವಕಾಶ ದೇ
ಶೀಗಣದೊಳ್ ಪ್ರಸಿದ್ಧಿವಡೆದಂ ವಿಹಿತಕ್ರಮದಿಂ ಸಮಸ್ತ ವಿ
ದ್ಯಾಗುರು ಚಾರುಕೀರ್ತಿಮುನಿಪಂಡಿತ ದೇವನವಾರ್ಯವೈಭವಂ    ೯೭

ಕೃಪೆಮೂಲಂ ಜೈನಧರ್ಮಕ್ಕೆನಿಪ ವಚನಮಂ ನಂಬಿ ಬಂದಳ್ತಿಯಿಂ ಮೀ
ನಪತಾಕಂ ತನ್ನ ರೂಪಂ ಮಱೆಗೊಳಲು ದೋರಂತಿರುಗ್ರೋಗ್ರ ನಾನಾ
ತಪದಿಂದೆಬ್ಬಟ್ಟಿ ಮತ್ತುತ್ತಮ ಗತಿರತಿಯೊಳ್ ಕೂಡಿ ಶೌಚವ್ರತೀಶಾ
ಧಿಪನಾದಂ ಚಾರುಕೀರ್ತಿವ್ರತಿಪತಿ ಚದುರಿಂ ಚಾರುಕೀರ್ತಿಪ್ರಭಾವಂ  ೯೮

ಉತ್ಸಾಹ || ಪೇಳಲೇನೊ ಸಂದಿಗೊಂದಿಯಲ್ಲಿ ಪರೆದ ಬಿರುದೆ ಬ
ಲ್ಲಾಳರಾಯ ಜೀವರಕ್ಷಪಾಲನೆಂಬ ಮೈಮೆ ಕೆಯ್
ತಾಳಮಾಗೆ ಕೂಡೆ ಲೋಕಮೆಯ್ದೆ ಪಾಡುತಿರ್ಪಿದಂ
ಕೇಳ ಚಾರುಕೀರ್ತಿಪಂಡಿತ ವ್ರತೀಂದ್ರ ಕೀರ್ತಿಯಂ ೯೯

ಆ ಪಟ್ಟವನಾಂತಖಿಳ ಧ
ರಾಪಾಲ ಕಿರೀಟಕೋಟಿ ತಾಟಿತ ವಿಮಳ
ಶ್ರೀಪಾದರೆನಿಸಿ ನೆಗಳ್ದರ್
ಭಾಪಭಿನವ ಚಾರುಕೀರ್ತಿಪಂಡಿತ ದೇವರ್        ೧೦೦

ವಿಭವದ ಮಾತಿದಲ್ಲ ಹಱೆಹೊಯ್ದು ನೆಗಳ್ತೆಯ ಕೀರ್ತಿ ರೂಢಿವೆ
ತ್ತುಭಯ ನಯ ಪ್ರಮಾಣಮತದಿಂ ಜಿನಮಾರ್ಗಮೆ ಮಾರ್ಗಮೆಂದು ತ
ತ್ಸಭೆಯೊಳೆ ಪೂಣ್ಕೆಯಂ ನಿಲಿಸಿದರ್ ನಲವಿಂದೆನಲೇನನೆಂಬೆನಾ
ನಭಿನವ ಚಾರುಕೀರ್ತಿಮುನಿಪಂಡಿತದೇವ ಮಹಾಪ್ರಭಾವಮಂ       ೧೦೧

ಚತುರಂಭೋನಿಧಿಮುದ್ರಿತಾವನಿತಳಂ ಕೊಂಡಾಡೆ ಲೋಕತ್ರಯೀ
ಪತಿಗಾಶಾಂಬರ ಭೂಷಣಂಗೆ ಮುದದಿಂ ಶ್ರೀಗೋಮಟೇಶಂಗೆ ವಿ
ಶ್ರುತಮಪ್ಪಂತಿರೆ ಮಸ್ತಕಾಭಿಷವಮಂ ಮುಂ ಮಾಡಿದೀ ಸೈಪು ಪಂ
ಡಿತದೇವವ್ರತಿ ಚಕ್ರವರ್ತಿಗೆ ಸಮಂತಕ್ಕುಂ ಪೆಱಂಗಕ್ಕುಮೇ ೧೦೨

ಒಂದೆರಡು ಮೂಱು ಸೂಳ್ವರ
ಮೆಂದೊಡೆ ಪುಸಿ ಪಲವುಸೂಳ್ ಚತುಸ್ಸಂಘಮುಘೇ
ಯೆಂದೆನೆ ಪಂಡಿತಮುನಿ ಮುದ
ದಿಂದೆಸಗಿದನೊಸೆದು ಭುವನವಿಭುಗಭಿಷವಮಂ ೧೦೩

ಆ ಪಂಡಿತ ದೇವಗುರು
ಶ್ರೀಪಾದನಖೇಂದು ರುಚಿಯಿನೊದವಿದ ಹೃದಯಾ
ಕೂಪಾರದೊಡನೆ ವಿಮಲದ
ಯಾಪಗೆ ನೆಲೆವೆರ್ಚಿ ಮಲ್ಲಿನಾಥಂ ನೆಗಳ್ದಂ      ೧೦೪

ಪುಸಿಯೆಂದುಂ ನುಡಿಗಿಲ್ಲ ಲೋಭದೊದವಾರ್ಪಿಂಗಿಲ್ಲವನ್ಯಾಂಗನಾ
ವ್ಯಸನಂ ಭಾವನೆಗಿಲ್ಲ ದುಸ್ಥಿತಿ ಚರಿತ್ರಕ್ಕಿಲ್ಲ ಪ್ರಖ್ಯಾತಿ ಬ
ಪ್ಪೆಸಕಂ ಬಾಳುವೆಗಿಲ್ಲವೆಂದು ಪಿರಿಯರ್ ಕೊಂಡಾಡುಗುಂ ಸದ್ಯಶಃ
ಕುಸುಮಾಲಂಕೃತ ಸರ್ವ ದಿಗ್ವರವಧೂಧಮ್ಮಿಲ್ಲನಂ ಮಲ್ಲನಂ   ೧೦೫

ಪ್ರಾಣಿಹಿತ ಧರ್ಮಗಿರಿ ನಿ
ಶ್ರೇಣಿಗಳೆನಿಸಿದ ಯಶೋಧರ ಶ್ರೇಯಾಂಸ
ಶ್ರೇಣಿಕರ ಮುಖ್ಯವಿನಯ
ಶ್ರೇಣಿಯೊಳೆಣಿಸುವುದು ಮಲ್ಲನಂ ಮಹಿಯೆಲ್ಲಂ         ೧೦೬

ಆ ವಿಶ್ವಸ್ತುತ ಮಲ್ಲಿನಾಥನಿಹದೊಳ್ ಸತ್ಕೀರ್ತಿಯಪ್ಪಂತು ಸೌ
ಖ್ಯಾವಾಸಂ ಪರದೊಳ್ ಪ್ರಸಿದ್ಧಗತಿ ಸಲ್ವಂತೊಂದು ಪುಣ್ಯೋದಯಂ
ಭಾವಾಂತರ್ಗತಮಾಗೆ ಬಂದೆನಗೆ ಚಿತ್ತಪ್ರೀತಿ ಕೆಯ್ಗೂಡೆ ನಾ
ನಾ ವಸ್ತುಪ್ರತಿಪತ್ತಿಯಂ ಸಲಿಸಿ ಮತ್ತಂ ಪ್ರಾರ್ಥನಾಪೂರ್ವಕಂ        ೧೦೭

ಸಾರತರೋಕ್ತಿಯಿಂದುಚಿತ ವೃತ್ತಿಯ ನೀಂ ಬಱಿದೆನ್ನ ಚಿತ್ತಮಂ
ಪ್ರೇರಿಸಿ ವರ್ಧಮಾನಮುನಿಸನ್ನಿಧಿಗೊಯ್ದವನೆನ್ನ ವಾಂಛೆಯಂ
ಪೂರಿಸುವಂತೆ ನಿಮ್ಮಡಿಗೆ ರೂಪಿಪುದೆಂಬುದುಮಾ ಪ್ರಸಿದ್ಧ ಭ
ಟ್ಟಾರಕರಾಜ ರಾಯಗುರುವೆನ್ನನರಲ್ಚಿಂ ಕೃಪಾಕಟಾಕ್ಷದಿಂ          ೧೦೮

ಇಂತೊದವೆ ದಿವ್ಯಕೃತಿಯಂ
ನೀಂ ಪೇಳೆನೆ ಪೊಂಗಿ ರೋಗಿ ಬಯಸಿದುದುಂ ವೈ
ದ್ಯಂ ಪೇಳ್ದುದು ಪಾಲೆಂಬವೊ
ಲಾಂ ಪಡೆದುಂ ಧರ್ಮನಾಥಚರಿತಾಮೃತಮಂ   ೧೦೯

ಮುನ್ನೊಗೆದ ಕೃತಿಗಳಿರೆ ಬಳಿ
ಕಿನ್ನೇವುದೊ ಕಾವ್ಯಮೆನ್ನದಿರ್ ಕನ್ನೆಗೆ ಮು
ನ್ನಂ ನಗೆಗಣ್ ನೆಗಳಲ್ ಬಳಿ
ಯಂ ನೆಲೆಮೊಲೆ ಮೂಡಿ ಮಾಡವೇ ಮೋಹನಮಂ         ೧೧೦

ಪಡೆದುಚಿತಾರ್ಥಮಂ ಸುಕೃತಿ ಪಣ್ಣಿದ ಪುಣ್ಯನಿಬಂಧನಾರ್ಥಮಿ
ತ್ತೊಡೆ ಕಿಡದೇಕೆ ಲೋಕದೊಳನೇಕ ನವಪ್ರಸವಾದ್ಯಗಂಧಮಂ
ಪಡೆದನುರಾಗದಿಂದಮೊಡನಾಡುವ ಪಾಡುವ ನೀ ಱದುಂಬಿಗಿ
ತ್ತೊಡೆ ಕಡುದಣ್ಬುವೆತ್ತಲೆವ ತೆಂಕಣಗಾಳಿಯ ಕಂಪು ತೀರ್ವುದೇ     ೧೧೧

ಸಲೆ ನೆಲಸಿದ ಸತ್ಕಾರಮೆ ಬೆಲೆ
ಬೆಲೆ ಬೇಱುಂಟೆ ಕೃತಿಗೆ ಕೃತಿವೇಳಿಸಿದಂ
ಬೆಲೆಗುಡುವುದೆಂಬುದುಚಿತಮೆ
ಬೆಲೆವೆಣ್ಣಳಿಗೂರ್ಮೆ ಪೆರ್ಮೆಯಂ ಮಾಡುಗುಮೇ          ೧೧೨

ಬೆಲೆಯಿಂದಾದುವೆ ಕೂಳ ಕೇಳ ಕೃತಿಗಳ್ ಮುಂಭಾಗ್ಯದಿಂದಾದುವೇಂ
ಬೆಲೆಯಿಂ ಪೆತ್ತುವೆ ತುಂಬಿ ಪುಷ್ಪರಸಮಂ ಚಂಚಚ್ಚಕೋರೀಚಯಂ
ಬೆಲೆಯಿಂ ಪೆತ್ತುವೆ ಚಾರುಚಂದ್ರಕಳೆಯಂ ಕೀರಾಳಿ ಪಾರತ್ತ ನೀಂ
ಬೆಲೆಯಿಂ ಪೆತ್ತುವೆ ನವ್ಯಚೂತರಸಧಾರಾಸಾರಮಂ ಧಾತ್ರಿಯೊಳ್   ೧೧೩

ಉಱು ವನುಚಿತೋಕ್ತಿಗಳಿಂ
ಕಿಱಿದುಪಚಾರಂಗಳಿಂದೆ ಮನ್ನಿಸಲವನೆ
ತ್ತೆಱಗಿ ಕೃತಿವೇಳೆ ಕಱುಬರ್
ಜಱೆವರದೇಕಣ್ಣ ಪಾಲ್ಗೆ ಮುರವೇಂ ಬೆಲೆಯೇ            ೧೧೪

ಆಲಿಸೆ ಜಿನಪತಿಚರಿತಂ
ಮೂಲೋಕದೊಳಧಿಕ ಮಧುರಮದು ಮಧುರಕವಿ
ಶ್ರೀಲಲಿತಕವಿತೆ ಬೆರಸಲ್
ಪಾಲೊಳ್ ಸಕ್ಕರೆಯನಿಕ್ಕಿದಂದಮೆ ಪೆಱತೇಂ     ೧೧೫

ಸ್ವಸಮಯ ಪರಸಮಯಮಿದೆಂ
ದಸಹ್ಯಮಂ ಮಾಡದೆನ್ನ ಕಾವ್ಯದ ನಾನಾ
ರಸಭಾವಮನಱಿವವರಾ
ಲಿಸುವುದು ಮುದ್ದಿಂಗೆ ಮುನಿವರೇ ಬಾಲಕರಾ  ೧೧೬

ಏಮಾತೊ ಕೇಳಲಾಕ್ಷಣ
ಮಾಮಯ ಹರಮಖಿಲ ಸುಖದಮಜರಾಮರಮೆಂ
ಬೀ ಮಹಿಮೆವೆತ್ತ ಧರ್ಮಕ
ಥಾಮೃತಮಂ ಕುಡಿಯರಾರೊ ಕಿವಿಗುಡಿತೆಗಳಿಂ ೧೧೭

ಆದಿಪುರಾಣಂಗಳ್ ಪಳ
ವಾದುವೆನಲ್ ಮತ್ತೆ ಮಧುರ ಕವಿತಾಮೃತಮು
ತ್ಪಾದಿಸೆ ಚೋದ್ಯಮಿದಭಿನವ
ಮಾದುಮ ಧಾರಿಣಿಗೆ ಧರ್ಮನಾಥಪುರಾಣಂ     ೧೧೮

ನಿರ್ವಹಿಸಿ ಪೇಳ್ವನುಜ್ಝಿತ
ಗರ್ವಂ ಸತ್ಕವಿ ಕಳಾವಿಳಾಸಂ ಕೇಳ್ವಂ
ಸರ್ವಜ್ಞನೆನೆ ನಿಬಂಧಮ
ನುರ್ವರೆಯೊಳಗಂ ತದಿಂತದೆಂಬವನಾವಂ         ೧೧೯

ಸಕಲಜ್ಞಗೊಂದೆ ಶಾಂತಂ ರಸಮದಱೊಳಗಾತ್ಮಾನುರಾಗಪ್ರದಂ ಲೌ
ಕಿಕಮಪ್ಪೆಂಟು ರಸಂಗಳ್ ಬೆರಸೆ ವಿರಸಮೆಂದೆನ್ನದಿರ್ಗಾಂಪ ನೀಂ ಪೋ
ಗು ಕರಂ ನಿಷ್ಪನ್ನ ಶಾಂತಿಪ್ರದ ಸಮರಸೃತಿ ಕ್ಷೇತ್ರದೊಳ್ಪ್ರಾತಿಹಾರ್ಯಾ
ಷ್ಟಕಮಾದಂ ಕೂಡಿಯುಂ ಮಾಡದೆ ಮಱೆದುದೆ ಕೈವಲ್ಯಮಾಂಗಲ್ಯದೊಳ್ಪಂ          ೧೨೦

ಮಟ್ಟರಗಳೆ ||

ಶ್ರೀ ಪರಮಪುರುವರ್ಧಮಾನ ಜಿನಸಭೆಯೊಳಗೆ
ಭೂಪಾಲ ಭರತ ಮಗಧ ತ್ರಿಪೀಠದ ಕೆಳಗೆ
ಪುಷ್ಪಾಂಜಲಿಯ ಪೂಜೆಯ ಮಾಡಿ ಮನವಾರೆ
ನಿಷ್ಪನ್ನ ಭಕ್ತಿಭಾವನೆ ಬೆರಸಿ ಬಗೆಗೂಡೆ
ವರವೃಷಭಸೇನ ಗೌತಮರ ಮೊಗಮಂ ನೋಡಿ
ನಿರವದ್ಯ ಧರ್ಮಕಥನಪ್ರಶ್ನಮಂ ಮಾಡಿ
ಕೈಮುಗಿಯಲಾ ಗಣಾಧೀಶ್ವರರ್ ಮುಂ ಪೇಳ್ದ
ಮೈಮೆಗೆಡದುತ್ತಮ ವಚೋವೃತ್ತಿಯಂ ತಾಳ್ದ
ಪೂರ್ವಾನುಯೋಗದಿಂ ಪುಟ್ಟಿ ಪುಣ್ಯಂದಳೆದ
ಸರ್ವಜನದಂತರಂಗದ ಕಲುಷಮಂ ಕಳೆದ
ನಿರ್ಮಲ ದಯಾಮೂಲಮೆನೆ ಧರೆಗೆ ದೊರೆವಡೆದ
ಕರ್ಮಖಳಬಲದಣಿಯ ಪಣೆಯಕ್ಕರಂದೊಡೆದ
ಮೂಱುಮೂಢಂಗಳತ್ತೆಱಗಿಸದೆ ತೊಲಗಿಸುವ
ಮೀಱುವ ಕಷಾಯಭಟರಂ ಕಳಲೆನಲಗಿಸುವ
ಮದದ ಮಸಕಮನೇಳದಂತಿರಡಿಗರ್ದಿಸುವ
ಸದಮಳ ಶ್ರೀ ಶೀಲಮಂ ಪೊರೆದು ಪೊರ್ದಿಸುವ
ಸುವ್ರತಾಚರಣಂಗಳಂದಮಂ ತೋಱಿಸುವ
ತೀವ್ರ ಭವಸಂತಾಪಮಂ ತಣ್ಣನಾಱಿಸುವ
ತನುವನೆಡೆಗೊಂಡ ದುರ್ಗುಣಶಲ್ಯಮಂ ಕಳೆವ
ಮನದ ಮೈಲಗೆಗೆಸಱನಾಗಳಂತಿರೆ ತೊಳೆವ
ವಸ್ತುಸ್ವಭಾವಮಿಂತೆಂದು ಕಣ್ದೆಱಿಯಿಸುವ
ನಾಸ್ತಿಕಾದಿ ಪ್ರತಿಭೆಯಂ ಪಾಱಿ ಜಱೆಯಿಸುವ
ಧರ್ಮಜಿನನಾಥಕಥೆಯಂ ಕೇಳ್ದು ಬಳಿಸಂದು
ಧರ್ಮಾರ್ಥಕಾಮಮೋಕ್ಷಕ್ಕೆ ಕಾರಣಮೆಂದು

ಕಿವಿಗಿಂಪಂ ಬೀಱುವನ್ನಂ ನವರಸಮೆರ್ದೆಯೊಳ್ ಭಾವಮಚ್ಚೊತ್ತುವನ್ನಂ
ಭುವನಂ ಕೊಂಡಾಡುವನ್ನಂ ಸುವಿದಿತ ಕವಿತಾಧರ್ಮದಿಂ ಧರ್ಮನಾಥ
ಸ್ತವ ಪುಣ್ಯಶ್ಲೋಕಮಂ ತಾಳ್ದಿದನುದಿತ ಕೃಪಾಲೋಕನನಸ್ತಾರ್ತಶೋಕಂ
ಸವಿವೇಕಂ ವಿಶ್ವವಿದ್ಯಾಸಮುದಯ ಸುಮನಸ್ಸಂಚರಂ ಚಂಚರೀಕಂ            ೧೨೧

ಇದು ಸಕಲ ಸುಕವಿಜನಮನಃಸುಧಾಕರಕಾಂತ ಸಂತತ ದ್ರವೀಕರಣ ಕಾರಣ ಕರ್ಣಾಟಕವಿತಾಕಳಾವಿಳಾಸವಿದು ಮಧುರಕವೀಂದ್ರನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಪೀಠಿಕಾಪ್ರಕರಣಂ ಪ್ರಥಮಾಶ್ವಾಸಂ.