ನೋಡಿದೊಡೀಕೆ ಪೊಚ್ಚಪೊಸನೆಯ್ದಿಲ ಮಾಲೆಗಳಾದುವೋತು ಮಾ
ತಾಡಿದೊಡೋವೊ ಬಂದುಗೆಯ ಮಾಲೆಗಳಾದುವು ಮಂದಹಾಸಮಂ
ಮಾಡಿದೊಡಚ್ಚಮಲ್ಲಿಗೆಯ ಮಾಲೆಗಳಾದುವಿದೊಂದು ಚೋದ್ಯಮಂ
ನೋಡಿರೆ ಮಾಲೆಗಾರ್ತಿಯೊ ದಿಟಕ್ಕಿವಳಗ್ಗದ ಮಾಯಕಾರ್ತಿಯೋ  ೮೧

ವ : ಎಂದು ಬೆಗಡುಗೊಂಡು ನೋಡುವ ನಾಗರಿಕರ ನಯನಾಳಿಯಂ ಕವಿವ ಮದಾಳಿಯಿಂ ಮೆಯ್ಯ ಸೊಂಪಿಂ ಸುಯ್ಯ ಕಂಪಿಂ ಪೊಂಪುಳಿಯೋಗಿಸುತ್ತೆ

ಪೂವಿನೆಸಳೊತ್ತೆ ಕೆಂದಳ
ಮಾವಗಮೊಡನೊಡನೆ ಕಂದಿ ಕುಂದುವ ಸುಕುಮಾ
ರಾವಯವೆಯರೀಕ್ಷಣದಿನ
ದೇವೊಗಳ್ವುದೊ ನಾಡೆ ಬಾಡಿಪರ್ ನೋಡಿದರಂ          ೮೨

ಕುಂದದೆ ಪುಷ್ಪಬಾವಿಗೆಯರೆತ್ತಿದ ದೇಸೆಯ ಬಾಸಿಗಂಗಳಿಂ
ದಂದೊಱದುಣ್ಮಿಪಾಯ್ವ ಕುಸುಮಾಸವಮಂ ಸವಿದುರ್ಕಿ ಸೊಕ್ಕಿ ದ
ಕ್ಕುಂದಲೆವಾಯ್ವವಾಗಳರೆದಣ್ಕೆಯ ಕುಂಕುಮಮಂ ಬಳಲ್ದು ಕೆ
ಯ್ಗುಂದಿದ ಘಟ್ಟಿವಳ್ತಿಯರ ಸೂಸುಗುರುಳ್ಗಳೊಳುನ್ಮದಾಳಿಗಳ್ ೮೩

ಪೃಥ್ವಿ ||

ನಿಮಿರ್ಕೆವಡೆದೋಳಿಯಿಂದೊಲೆಯೆ ಕುಂತಳಂ ಮೇಲುದಂ
ತೆಮಳ್ಚಿ ಕುಚಮಂಡಳಂ ಕುಣಿಯೆ ಗಂಡದೊಳ್ ಕುಂಡಳಂ
ಕ್ರಮಂಬಿಡದೆ ಕಂಕಣಕ್ವಣಿತಮುಣ್ಮೆ ಕಾಶ್ಮೀರಮಂ
ಸಮಂತೆಸೆವ ಘಟ್ಟಿವಳ್ತಿಯರದೇಂ ಮನಂಗೊಂಡರೋ    ೮೪

ನೆಲೆಮೊಲೆ ಮೇಲುದಿಂದಿನಿಸು ಪಾಯ್ತರೆ ತಮ್ಮನೆ ಪಾಯುವೆಂದು ಕೋ
ಟಲೆಗೊಳುತಿರ್ಪ ನೋಟಕರನೋವಮರ್ದಳ್ಳೆರ್ದೆಗಳ್ ತೆಮರ್ದುದಂ
ದಲಸದೆ ಕೂರ್ಮೆವೆತ್ತ ಕೃಪೆಯಿಂದರವಂತರೇದರ್ ವರಾಂಗಿಯರ್
ಮಲಯಜಮಂ ಮರಲ್ದು ತನು ಪುಣ್ಣಿಡೆ ಪೂಣ್ದಿಸೆ ಮತ್ತೆ ಮನ್ಮಥಂ         ೮೫

ಚಳದಳಿಲೋಲಕುಂತಳೆ ಮನಂಗೊಳೆ ನುಣ್ಗಱಿಯೊಳ್ ತಗುಳ್ದ ತಿಂ
ಗಳ ತಿರುಳಂದದೊಳ್ವೆರಕೆಗತ್ತುರಿಗಪ್ಪುರಮಂ ಪೊದಳ್ವ ಸು
ಯ್ಗಳ ನಱುಗಂಪಿನಿಂ ಪೊರೆದು ಸಣ್ಗಿಗೆಗೊಂಡರೆಯಲ್ ತಗುಳ್ಚಿದಾ
ಗಳೆ ತನಿವೇಟವಿಟ್ಟರೆಯೆ ಬಣ್ಣಿಸುಗುಂ ಬಗೆ ಕೇಳ ಕೇಳ್ವರಾ          ೮೬

ಹರಿಯುರದಲ್ಲಿ ಪೆರ್ಮೊಲೆಯ ಲಚ್ಚಣಮಿಟ್ಟ ಜನಾನನಂಗಳೊಳ್
ಚರಣದಲಕ್ತಕ ದ್ರವದಿನುಂಡಿಗೆಯೊತ್ತಿನ ರೂಢಿವೆತ್ತ ಶಂ
ಕರನೊಡಲರ್ಧಮಂ ಕವರ್ದುಕೊಂಡೆಳೆವೆಂಡಿರ ಗಾಡಿಯಂ ನಿರಾ
ಕರಿಪೆಸಕಂ ಜಸಂಬಡೆಯಲೊಪ್ಪುಗುಮಾ ಪೊಳಲಂಗನಾಜನಂ        ೮೭

ವ : ಅಂತಖಿಳವಿಷಯ ಸುಖಾನುಭವಸಾಧನ ಭೋಗೋಪಭೋಗ ವಸ್ತು ವಿಸ್ತರ ಪ್ರಫಣಂಗಳಾದಾಪಣಂಗಳೊಳ್ ವಿಹರಿಸುವ ಮಹಿಮೆಯ ಮಹಾ ಜನಂಗಳ ಪುರಾಕೃತ ಪುಣ್ಯಂಗಳ್ ತಣ್ಣನೆ ಪಣ್ಣನಿರ್ಪ ಸದ್ಧರ್ಮ ಹರ್ಮ್ಯಾರಂಭಕ್ಕೆ ಮೂಲಸ್ತಂಭಂಗಳಾಗಿ

ನಗರಾಂತರ್ಭಾಗದೊಳ್ ಭಾಸುರ ಮಣಿಖಚಿತಾಘಾತ ಕೂಟಂಗಳಂ ತೊ
ಟ್ಟಿಗೆ ಬಂದೆಕ್ಕೆಕ್ಕೆಯಿಂ ಪಾಯ್ವುಱೆ ಪಱಿದ ಮುಗಿಲ್ಮುತ್ತುಗಳ್ ಭೋರೆನುತ್ತಾ
ವಗಮಾತ್ಮಾವಾಸಮಂ ಬಾಸಣಿಸಿರೆ ಜಿನಜನ್ಮಾಭಿಷೇಕಾಮೃತಾಘ
ಸ್ಥಗಿತ ಶ್ರೀಮಂದರಕ್ಕೋರಗೆಯೆನಿಸಿದುವುತ್ತುಂಗ ಚೈತ್ಯಾಲಯಂಗಳ್        ೮೮

ಪದೆದೆಮ್ಮಂ ಭಕ್ತಿಯಿಂ ಬಂದಿಸಿ ನಲಿದು ಬಲಂಗೊಂಡು ಶಕ್ರಾದಿಗಳ್ ಸ
ಗ್ಗದ ಸೌಧರ್ಮಾದಿ ಕಲ್ಪಂಗಳೊಳೊಡೆತನಮಂಬೆತ್ತುದಂ ನೋಡಿಮೆಂದೆ
ತ್ತಿದ ಕೆಯ್ಯಂ ತೋಱುವಂತೇನೆಸೆದುವೋ ಜಿನಹೇಹಂಗಳುತ್ತಾಳಚೂಳಾ
ಗ್ರದೊಳೆತ್ತಂ ತಳ್ತು ಪೆಂಪಂ ತಳೆದುವಿಳೆಗೆ ನಾನಾ ಪತಾಕಪ್ರತಾನಂ   ೮೯

ವಿದಿತ ದಯಾಮೂಲಂ ಧ
ರ್ಮದ ಪೊಲನೆಂದಱಿದು ಹಿಂಸೆಯಂ ಬಿಟ್ಟಱೆ ಲೆ
ಪ್ಪದ ನೆವದಿನಿಲ್ಲಿ ನಿಂದಂ
ದದಿನೊಪ್ಪಿದುವವಱ ಶಿಖರದೊಳ್ ಸಿಂಹಂಗಳ್           ೯೦

ದಿನಮಣಿ ನಡುವಗಲಡ
ರ್ದನುದಿನಮಲ್ಲಿಯ ಕಳಶಮಂ ದಿಗಂಬರ ಲಕ್ಷೀ
ವನಿತೆ ನಿಜನೊಸಗೆಗೆತ್ತಿದ
ಕನಕದ ಕನ್ನಡಿಯ ನನ್ನಿಯಂ ನೆನೆಯಿಸುಗುಂ     ೯೧

ಕಂಟಳಿತ ಪ್ರಸೂನಬಲಿಯೊಳ್ ನಡೆವಲ್ಲಿ ಮುನೀಂದ್ರರೆಂಬಿನಂ
ಗೆಂಟಱೊಳೊಪ್ಪಿತೋರ್ಪ ಮಣಕುಟ್ಟಿಮದೊಳ್ ಪೊಳೆಯಲ್ ತೊಡಂಬೆಗಳ್
ಗಂಟೊಡೆದುಣ್ಮಿ ಪೊಣ್ಮುವ ನವಪ್ರಸವಾಳಿ ಮಡಲ್ತ ಮಾಧವೀ
ಮಂಟಪಮೇಂ ಮನಂಗೊಳಿಸಿತೋ ಜಿನಮಂದಿರದಗ್ರಭಾಗದೊಳ್  ೯೨

ಸೊಗಯಿಸುವ ಪಾಣಿವಟ್ಟದಿ
ನುಗುವ ಮಲಿನ ಕುಸುಮಸುರಭಿಗಂಧೋದಕದೊಳ್
ಮೊಗಸಿದಳಿ ಸಗ್ಗಕಾಗಳೆ
ನೆಗೆವಂತಿರೆ ನೆಗೆವುವಗರುಧೂಮಾಳಿಗಳ್          ೯೩

ತೆರಳುವ ಕುಕ್ಕುಟಾಸನ ದ ಗಂಡವಿಮುಕ್ತಿಯ ತಳ್ತ ವೀರ ಬಾ
ವರಿಯ ದಿನಾಂತರಂಗಳುಪವಾಸದ ಬೇಸಱದೇಕಪಾರ್ಶ್ವದು
ಬ್ಬರದ ನಿರೋಧಮಂ ತಳೆದು ತೀವ್ರತಪಂ ತನುವೊತ್ತುಂ ಬಂದುದೆಂ
ಬರ ನುಡಿಗಿಂಬುಗೊಟ್ಟ ಮುನಿಗಳ್ ಮೊಗಸಾಲೆಯೊಳಿರ್ಪರಲ್ಲಿಯಾ          ೯೪

ಸಾವದ್ಯಮನಾಗಿಸುವವ
ಱಾವರಿಸಿದ ಪಚ್ಚೆದೋರಣಂ ರನ್ನದ ಕ
ಣ್ದೀವಿಗೆ ತೀವಿದ ಮುತ್ತಿನ
ಪೂವಲಿ ಕಪ್ಪುರದ ಕಡೆ ಸುವರ್ಣದ ಕುಸುಮಂ   ೯೫

ರಂಜಿಪ ಪಳವಿಗೆ ನವಫಲ
ಮಂಜರಿ ಪೊಂಗಳಸಮೋಜೆಗೊಳಿಸಿದ ಮುಕ್ತಾ
ಪುಂಜಿಕೆ ಚಾಗದ ಪಡಲಿಗೆ
ಮಂಜುಳಮೆನಿಕುಂ ಮಹಂಗಳೊಳ್ ಜಿನಪತಿಯಾ           ೯೬

ಆ ರಾಜದ್ರಚನಾವಗಾಹ ಜಿನಗೇಹ ಶ್ರೀಯನಂತಿಂತೆನು
ತ್ತಾರೇನಾದೊಡಮೆಂಗೆ ಮಂಗಳಮಹಾಶ್ರೀ ಬರ್ಪ ಪುಣ್ಯಾಶ್ರವ
ದ್ವಾರಂ ದ್ವಾರಮನಂತ ವೈಭವದ ಕೂಟಂ ಕೂಟಮಾರ್ಹಂತ್ಯಂ ಧ
ರ್ಮಾರಂಭಾದಿ ದಯಾರಸೋಜ್ವಲ ತರಂಗಂ ರಂಗಮೇನೆಂದಪೆಂ    ೯೭

ವ : ಅಂತನಂತ ವೈಭವಾನುಬಂಧ ಗಂಧಕುಟಿಗಳಂತೆ ವಿವಿಧ ವಿಬುಧಜಿನಾರ್ಚನ ಯಂಗಳಾದ ಚೈತ್ಯಾಲಯಂಗಳೊಳ್

ನವಪುಷ್ಪಾಸಾರ ದಿವ್ಯಧ್ವನಿ ಸುರಪಟಹಾದೀಶ್ವರಂಗೇಂ ಮನಂಗೊಂ
ಡುವೋ ವಜ್ರಪ್ರಾಜ್ಯ ಸಿಂಹಾಸನಮರುಣಮಣಿ ಶ್ರೀಪ್ರಭಾಮಂಡಲಂ ಸಂ
ಸ್ತವನಾಧಾರಪ್ರವಾಳ ಪ್ರಸರಲಸದಲೋಕಂ ಹರಿದ್ರತ್ನದಂಡೋ
ಚ್ಛವ ಲೀಲಾಚಾಮರಂ ಕೋಮಲರುಚಿಮಚಿರೋತ್ತಾನಮುಕ್ತಾತಪತ್ರಂ      ೯೮

ಆ ಕಮನೀಯ ಜಿನೇಂದ್ರ
ಪ್ರಾಕಾರ ಪ್ರಾಂತದಲ್ಲಿ ನಿಂದಲೊಳೆಂದುಂ
ಶೋಕಂ ಪುಗದೆಂಬಂತಿರ
ಶೋಕಾದಿ ವನಂಗಳೇಂ ಮನಂಗೊಳಿಸಿದುವೋ   ೯೯

ಗಳಗಳನೆ ಪೊಯ್ವ ಪೊಸಪಾ
ಲ್ಗಳ ತಿಳಿ ನಱುನೆಯ್ಯ ಸುರಭಿ ಸಲಿಲದ ಕಂಪಂ
ಸೆಳೆದು ತಳೆದಲ್ಲಿ ಮೆಲ್ಲನೆ
ಸುಳಿವುದು ಜಿನಸವನ ಸಮಯ ಪಾವನಪವನಂ  ೧೦೦

ವಿತತಾನಕರವಮಂ ಕೇ
ಳ್ದತಿಮುದದಿಂ ಬಂದು ಸೋಗೆ ಸೋಗೆಯ ತುದಿಯಿಂ
ಪ್ರತಿದಿವಸಮಲ್ಲಿ ಪದಪಿಂ
ಪ್ರತಿಲೇಖಿಪುವಾ ಜಿನೇಂದ್ರಭವನಾಂಗಣಮಂ    ೧೦೧

ಯುಗದಳವಿಯನೀಕ್ಷಿಸುತೊ
ಯ್ಯಗೆ ನಡೆವ ಮುನೀಂದ್ರರೊಡನೆ ನಡೆದಲ್ಲಿಯ ಹಂ
ಸಿಗೆ ಸುಗತಿಯಾದುದಲ್ಲದೆ
ಮಿಗೆ ಪಾಱುವ ಪೊಕ್ಕಿಗೆಲ್ಲಿದುವೋ ಮೆಲ್ನಡೆಗಳ್         ೧೦೨

ಪರಮಾಗಮಂಗಳಂ ಸೈ
ತಿರೆ ಕೇಳ್ದೋದುವರದೊಂದು ವಾಸನೆ ನೇರ್ಪ
ಟ್ಟಿರೆ ಮೆಱೆದುಂ ಪೂರ್ವಾಪರ
ನಿರೋಧಮಂ ನುಡಿಯುವಲ್ಲಿ ಗಳಪುವ ಗಿಳಿಗಳ್           ೧೦೩

ಬಾಡುವಿನಮೆಱಗವವಱೊಳ್
ಮೂಡಿದ ಜೀವಗಳಳಿಗುಮೆಂದೊಯ್ಯನೆ ಬಂ
ದಾಡುವುವಳಿಯೆನೆ ಪೂವಿನ
ಬಾಡಂ ಸವಿವರ ನಿನ್ನದೇನೆಂದಪುದೋ            ೧೦೪

ಶ್ರುತಪೂಜಾಭಕ್ತಿಯಂ ಮಾಡುವ ವಿವಿಧ ಪುರಾಣಂಗಳಂ ಕೇಳ್ವ ನಿತ್ಯ
ವ್ರತಮಂ ಕೈಕೊಳ್ವ ದಾನವ್ಯಸನಮೊನೊಸೆದಾಲೋಕನಂಗೆಯ್ವ ನಿಚ್ಚಂ
ಯತಿಚರ್ಯಾಕಾಲಮಂ ಪಾಲಿಸಿ ನಿಯಮದೆ ಪೊರ್ದಿಪ್ಪ ಪುಣ್ಯಪ್ರಭಾವಂ
ಮತಿಯೊಳ್ ಮೆಯ್ವೆತ್ತ ಭವ್ಯಪ್ರತತಿಯ ಪುದುವಿಂ ಸೇವ್ಯಮಾಯ್ತಾ ಪ್ರದೇಶಂ          ೧೦೫

ಸವಣರ್ ಸಾಧುಗಳೆಂದು ಪೋದೊಡುಡಿದೆನ್ನೀ ಬಿಲ್ಲನೊಳ್ಗಂಬಿಯಂ
ಸವೆದೆನ್ನಗ್ಗದ ನಾರಿಯಂ ಪಱಿದು ದಾರಂಮಾಡಿ ತಮ್ಮಾರ್ಪು ಪೊ
ಣ್ಮುವಿನಂ ಪುಸ್ತಕದೊಳ್ ತೊಡರ್ಚಿ ರತಿಯಂ ನಿರ್ಧಾಟಿಪರ್ ಯೋಗಿಪುಂ
ಗವರೆಂದಾ ಜಿನಮಂದಿರಕ್ಕೆ ಮಱೆದುಂ ಪೋಗಂ ಪ್ರಸೂನಾಯುಧಂ            ೧೦೬

ವ : ಅಂತನನ್ಯ ಸಾಮಾನ್ಯ ಪ್ರಭಾವಂಗಳಾದನನ್ಯಜಾರಾತಿ ನಿಕೇತನಂಗಳಿಂ ನಿಜವಿಜಯಕೇತನಂ ಭಂಗಮಾದ ಮಱುಕದಿಂದಳವರಿಯೆ

ಆ ಕಂದರ್ಪಂಗೆ ದೋರ್ದರ್ಪಮನೊದವಿಪೆ ನಿನ್ನಿತ್ತ ಬಾಯೆಂಬವೋಲ್ ನೀ
ಳ್ದಾಕಾಶಕ್ಕೆತ್ತಿದುಚ್ಛಧ್ವಜಕರವಿಲಸರ್ ಸಂಜ್ಞೆ ಸೌಭಾಗ್ಯಘಂಟಾ
ನೀಕಪ್ರಧ್ವಾನ ಕೋಳಾಹಳಮೊದಮೆ ಮುದಂಬೆತ್ತು ಕಣ್ಗಾವಗಂ ನಾ
ನಾ ಕೇಳೀ ಜನ್ಮವಾಸಂ ನೆಗಳ್ದುದು ಗಣಿಕಾವಾಸವೀಥೀವಿಳಾಸಂ    ೧೦೭

ಚದುರ ಕವರ್ತೆದಾಣಮಲರಂಬನ ನಚ್ಚಿನಮರ್ದು ಮಾಯ್ದ ಮಾ
ಯದ ನೆಲೆಯೋರೆ ಜೂರುಳತವರ್ವವದುಕ್ಕೆವದಿರ್ಕ್ಕೆ ಟಕ್ಕುವೇ
ಟದ ಬೆಳೆಗೆಯ್ ತಗುಳ್ದಳಿಪಿನಂಗಡಿ ಗನ್ನದ ಗೊತ್ತು ತಥ್ಯಮೆ
ನ್ನದೆ ಪೆಱತೆಂಬುದೇತಕದೇರಿಯನಲ್ಲಿಯ ಸೂಳೆಗೇರಿಯಂ           ೧೦೮

ವ : ಮತ್ತಮದಱೊಳಂಗಭವನ ಭಂಡಿಯ ಬಳಿಯೆಕ್ಕತುಳದೊಕ್ಕಲೆಂಬ ಲಚ್ಚಣಮನ ಚ್ಚೊತ್ತಿದಂತೆ ಮನೆಮನೆಗೆ ನೆಗಪಿದ ಮಕರ ತೋರಣದ ಮೀನಕೇತನದ ನವಿಲುಯ್ಯಲನೇಱಿದ ಸೌಭಾಗ್ಯದ ಘಂಟೆಯ ಪಚ್ಚೆವಂಜರದೊಳೆಡೆವಿಡದೆ ಪಡಪಿನ ಬಿಂಕಮಂ ಬೀಱೆ ಬಂಡಳಿಸಿ ತೊಂಡುಗೆಡೆವರಗಿಳಿಯ ಪುರುಡಿಸುವ ಪುರುಳಿಯ ಮಣಿತರಣಿ ತಮಂದಾರಿದೆಗೆವ ಪಾರಿವದ ಪಟ್ಟಶಾಲೆಯ ಭಿತ್ತಿಯೊಳ್ ಮೆಱೆವ ವಿವಿಧ ಕರಣಬಂಧುರ ಭಾವರಸಚಿತ್ರದ ಮೊಗಸಾಲೆಯೊಳ್ ಬಿತ್ತರಿಸಿದ ಮುತ್ತಿನ ಗದ್ದುಗೆಯ ಕಾಂಚನದ ಕೌಳುಡೆಯ ರನ್ನದ ಕನ್ನಡಿಯ ಪೊನ್ನ ಪಡಿಗದ ಪವಳದ ಡವಕೆಯ ಕೆಲದೊಳಿಟ್ಟ ನೀಲದೆಲೆವಟ್ಟೆಯ ವಿವಿಧ ವೀಣೆಯ ನೆತ್ತವಲಗೆಯ ಚದುರಂಗದ ಚದುರೆಯರ್ ಪದನಱಿದರೆವ ಸಿರಿಗಂಪಿನ ಕುರುಳ್ಗೆ ಪುಡಿಗತ್ತುರಿಗೆಯ್ವ ನಿಗರಗತ್ತುರಿಯ ಕಾಲ್ಗಳಿವ ಕಪ್ಪುರದ ತೊಳೆವ ಜವಾದಿಯ ಮೇದಿಸುವ ಸಾದಿನ ಪೊಗೆಗೊಳಿಸುವಗರುವಿನ ಪೊರೆವರಲ ಪೊಟ್ಟೆಳದ ಪೆಂಪಿಟ್ಟಳಮಾದ ತಂತಮ್ಮ ಮನೆಗಳೊಳ್ ಮೇಳದಾಳಿಯರೊಳ್ ಸೂಳೆವಿನ್ನಣದ ಪಡೆಮಾತಿನೋಳಿಯಿಂ ವೇಳೆಗಳೆವುತ್ತ ಬಾಲೆಯರ್ ಲೀಲೆಯಿಂದಿರೆ

ಮುನಿವಧುಗಾತ್ಮವಲ್ಲಭನನಿತ್ತ ಪುಲೋಮಜೆ ಗೊಲ್ಲವೆಣ್ಗೆ ನ
ಲ್ಲನನೆಡೆಗೊಟ್ಟ ಲಕ್ಷ್ಮೀಪತಿಯಂ ಸುರಸಿಂಧುಗೆ ಪಚ್ಚುಗೆಯ್ದುಮಾ
ವನಿತೆಯಿವಳ್ದಿರೊ ದೊರೆ ಗಡೆಂಬಿನಮುಣ್ಮುಗುಮಲ್ಲಿ ಮೀನಕೇ
ತನನ ಕರಾಗ್ರದೊಳ್ ನಿಮಿರ್ದ ಕರ್ವಿನ ಬಿಲ್ದನಿಯೆಂಬ ಡಂಗುರಂ    ೧೦೯

ಆ ಸತಿಯರ ಸೋರ್ಮುಡಿಯಿಂ
ಸೂಸಿದ ಕೆಲವರೆ ತನಗೇ ಸರಲೆನಲಾಯ್ದಾ
ಯ್ದೋಸರಿಸಿದ ತನು ವಿವಿಧ ವಿ
ಲಾಸಿಗಳೆರ್ದೆವಿರಿಯಲೆಸುವನೇಂ ನಿರ್ದಯನೋ ೧೧೦

ಮನಮೊಲ್ದೊಡ್ಡೋಲಗಂಗೊಟ್ಟಱಿಕೆಯ ಗಣಿಕಾವಾಟದೊಳ್ ಪೊಕ್ಕು ಮುಕ್ಕ
ಣ್ಣನ ಕಣ್ಗಿಚ್ಚೆಂಬ ಕೆಯ್ದೀವಿಗೆಯ ಬೆಳಗುಗೊಂಡೋದೆ ಕೀರಾಳಿ ವೈಕುಂ
ಠನ ವಕ್ಷೋಭಾಗದೊಳ್ ವಾಗ್ವರನ ವದನದೊಳ್ ವಜ್ರಿಯಂಗಂಗಳೊಳ್ ಮು
ನ್ನಿನ ತಾಣಂ ತಪ್ಪದೇಂ ನೋಡುವನೋ ಕಲೆಯನಾಟೋಪದಿಂದಿಕ್ಷುಚಾಪಂ ೧೧೧

ಪೂವಲಿಗೆಯ್ದ ಕುಂಕುಮದ ಕೇಸರಮಂತುಳಿದಂಗಣಂಗಳೊಳ್
ತೀವಿ ಜಿಗಿಲ್ತ ಕತ್ತುರಿಯ ಸಿಂಪಿಣಿಯೊದ್ದೆಯೊಳರ್ದುಬೀದಿಗೊಂ
ಡೋವದೆ ಪಿಟ್ಟುಗೆಯ್ದು ಕಡೆಯಿಕ್ಕಿದ ಕಪ್ಪುರದೊಳ್ ಪೊರಳ್ದು ಬಂ
ದಾವಗಮಪ್ಪುಗುಂ ಪಣವಧೂಮಣಿಮಂದಿರ ಮಂದಮಾರುತಂ    ೧೧೨

ವ : ಆ ಮಂದಗಂಧವಹನೆಂಬ ಕಂದರ್ಪ ಮದಾಂಧಸಿಂಧುರದ ವಿಸಟಂಬರಿಗಿಂಬಾದ ಬೀದಿಯೊಳಲ್ಲಲ್ಲಿ ಚಾಗದ ಬೀಯದ ಬಿಂಕಮಂ ಬಾಯಿಗೆ ವಂದಂದದಿನೂಳ್ವ ಮಾತಾಳಿ ಬೂತುಗರ್ ನೆರೆದು ಮುಂದುಲಿಯೆ ಮುಂಜೆಱಂಗು ನೆಲದೊಳಲೆವಿನಂ ದೇಸೆಮೆಱೆಯ ಲುಟ್ಟ ಪಟ್ಟಣಿಗೆಯ ಕಾಲಮುರಿಗೆವೆಂಡೆಯದ ಮುಂಗೈಗಿಳಿವಲುಳಿಯ ಸರದ ಸರಪಣಿಯ ತಾತಿಯ ತೋಳರಕ್ಕೆವಣಿಯ ಮುಡುಪಿ ನೊಳಂತಂ ತೆಱೆಯಲಣ್ಕೆಗೆಯ್ದ ಕುಂಕುಮದ ಕೊರಲೊಳಳವಟ್ಟ ಪೊಂಗಿಱುಗವಡೆಯ ಕಿವಿಯೊಳಿಕ್ಕಿದ ಕೇದಗೆಯ ನುಣ್ಗಱಿಯ ಮಱೆಯೊಳೊಱೆವ ಜವಾದಿಯ ನೊಸಲೊಳಿಟ್ಟ ಕತ್ತುರಿಯಮಳ್ವೊಟ್ಟನ ಕೆನ್ನೆವರಮೆಱಗಿ ದುಱುಗುದು ಱುಂಬಿನ ಚೆಲ್ವು ಪಲ್ಲವಿಸಿತುಱುಗೆ ತುಱುಗಿ ತುಱುಂಟದ ಕದಂಬದಲರ ಕಂಪಿಂಗೆ ಕೌವರೆಗೊಂಡು ಕವಿವ ದುಱುದುಂಬಿಗಳ ಡೊಂಬಿಂಗೆ ಕೆಲದ ತಂಬುಲದ ತರುವಲಿಯ ಕೈಯ ಕಠಾರದ ಕೋಲಂ ಕೊಂಡು ಚಾರಿಸುತ್ತೆ ಬಂದೊಡ್ಡಿ ಪಿಡಿವ ಕವಡಿಕೆಯ ಪೊಯ್ವ ಕರ್ವಿನ ಪಣಿದದ ಪಾಯ್ವ ತಗರ ಕೊಳ್ವ ಕೋಳಿಯ ಕಾಳೆಗದ ನೆವದ ಕಾಲ್ಮೆಟ್ಟಿನೊಳಾದ ಜಗಳಕ್ಕೆ ನಿಗಳಮನಿಕ್ಕುವೆಕ್ಕತುಳದ ಕೊಯ್ಯೆವಿಂಡರಂ ಬಗೆದು ಬಾಳ್ತೆಗೆಯ್ಯದೆ ತೊಱೆವಾಯ್ವನಂತೆ ನೆಲೆಯಱಿಯ ಕಡಲಂ ತೊಳಗುದೋಱದೆ ಸಾಮುದ್ರಿಕನಂತರ್ಥರೇಖೆಯಂ ನೋಡಿ ನೆಳಲಂತೆ ಮೆಯ್ವಳಿಗೊಂಡು ಬದೆಗನಂತೆ ಪದನಱಿದು ರಸವಾದಿಯಂತೆ ಕಣ್ಗಿಡೆ ಕರಗಿಸಿ ಗುಹೆಯಂತೆಂದುದನೆಂದು ಅಲತೆಗೆಯಂತೆ ಕಾಲ್ವಿಡಿದನುರಾಗವನೊಡರ್ಚಿ ಉಮ್ಮತದಂತುಪಭೋಗದೊಳ್ ಮರುಳ್ಮಾಡಿ

ಪುಸಿಯಳಿಪಂ ನಿಮಿರ್ಚಿ ತಮಗಿಲ್ಲದ ಬೇಂಟಮನುಂಟುಮಾಡಿ ಕೂ
ರಿಸಿ ಕಡುಕೂರ್ತರಂತೆ ಪುರುಡಂ ಪೊಸದೇವಮನೆತ್ತಿ ಲಲ್ಲೆಯಂ
ಪಸರಿಸಿ ಬಯ್ದು ಪೊಯ್ದಳಲನಗ್ಗಿಸಿ ಮುಟ್ಟದಮುನ್ನಮೆನ್ನರಂ
ದೆಸವಲಿಗೆಯ್ದರೋವೊ ಕಡುಢಾಳೆಯರೊಂದಿರುಳಲ್ಲಿ ಸೂಳೆಯರ್           ೧೧೩

ಸಮಸಂದಲ್ಲಿಯ ಸಿಂಬಿಗೇಂ ಸರಿಯೆ ಪೇಳಾ ರಂಭೆ ನೋಡಲ್ ತಿಲೋಸ
ತ್ತಮೆಗಿಂತುತ್ತಮರೂಪಮಾವೆಡೆ ವಿಲಾಸಂಬೆತ್ತ ತನ್ನೊಂದು ಬಿಂಸ
ಮಕನಾಳ್ದೂರ್ವಶಿಗೀ ವಶೀಕರಣಮೆಲ್ಲಿರ್ದಪ್ಪುದೆಂಬೊಂದು ವಿಸ
ಭ್ರಮದಿಂ ದಿಗ್ಭ್ರಮೆಯಂ ವಿಟರ್ಗೆ ಪಡೆಗುಂ ತದ್ವಾರನಾರೀಜನಂ    ೧೧೪

ಇನ್ನುಳಿದಾದರೇದೊರೆ ದೃಗಂಚಲದಂಜನದಿಂದೆ ಸಿದ್ಧರಂ
ಸನ್ನುತಮಾದ ಚೆಲ್ವಧರಪಲ್ಲವದಿಂದಮೃತಾಶನರ್ಕಳಂ
ಪನ್ನ ಗರಂ ಬಳಲ್ಮುಡಿಗಳಿಂ ಕಳಕಂಠ ಸುಕಂಠನಾದದಿಂ
ಕಿನ್ನರರಂ ಮರುಳ್ಗೊಳಿಪುವಲ್ಲಿಯ ವಾರವಿಲಾಸಿನೀಜನಂ           ೧೧೫

ಗಣನಾತೀತಪ್ರಸೂನ ಪ್ರಸರದೊಳು ದೆಕ್ಕೆಕ್ಕೆಯಿಂ ಪಾಯ್ವ ಗಂಧಾ
ಪಣದೊಳ್ ಭೋರೆಂದು ಬೆಂಬತ್ತುವ ಮದಗಜದಾನಪ್ಲವಾಪೂರ್ಣರಾಜಾಂ
ಗಣದೊಳ್ ಮೇಲ್ವಾಳ್ವ ಭೃಂಗಾವಳಿಯ ಭಯದಿನುಳ್ಕಕ್ಕಿ ತದ್ವಾರನಾರೀಸ
ಗಣಮಾಟಂದಾವಗಂ ಸಂಪಗೆದಳೆಯ ನೆಳಲ್ದಂಪಿನೊಳ್ ಪೋಪುದೆತ್ತಂ        ೧೧೬

ಮಲ್ಲಿಕಾಮಾಲೆ ||

ಆ ಮನೋಹರಮಪ್ಪ ಪಟ್ಟಣ ಮಧ್ಯಭಾಗದೊಳುದ್ಗತ
ವ್ಯೋಮಗಾಮಿನಿಜಧ್ವಜಾನಿಲಧೂತಮೇಘಮುದಗ್ರ ನಾ
ನಾ ಮಣಿಪ್ರಭೆಯಿಂ ನಭೋಮಣಿಯಂ ವಿಡಂಬಿಸುತಿರ್ಪುದು
ದ್ದಾಮಮುದ್ಘ ಜಯಾಂಗನಾ ಶ್ರುತಿಕುಂಡಳಂ ರಣಮಂಡಳಂ       ೧೧೭

ರಣಮಂಡಳವೆಂಬ ಮಹಾ
ಫಣಿ ಗಳಗಳನುಗಳ್ದ ವಿಷದ ಮಡುವೆನೆ ಮದವಾ
ರಣ ಕಟವಿಗಳಿತ ದಾನೋ
ಲ್ಬಣಾಂಬು ಮೇಚಕಿತಮಾದಗಳ್ ಸೊಗಯಿಸುಗುಂ       ೧೧೮

ವ : ಅದಱೊಳ್

ಜಳಪಾನಮುಕ್ತಮದಕರಿ
ಗಳರ್ದಿಕೊಳೆ ಕಟತಟಂಗಳಿಂದೆರ್ದಳಿಗಳ್
ತಳೆವುವರಿ ವಿಕ್ರಮಾನಳ
ನಳಿವನ್ನಂ ಮುಳುಗೆ ನೆಗೆದ ಪೊಗೆಯ ಬೆಡಂಗಂ  ೧೧೯

ಆ ಪೆಂಗಳೆಂಬ ಮಹಾ
ಪಾಪದ ನಡುವಖಿಳ ಪೌರಜನದನುರಾಗಂ
ರೂಪೊಗೆದು ಬೆಳೆದು ತೆನೆವೋ
ದೀ ಪೆರ್ಮೆಗೆ ನೋಂತ ಪೆರ್ಮಗಿಲ್ ಸೊಗಯಿಸುಗುಂ       ೧೨೦

ಪೆರ್ವಾಗಿಲ ನೆಲೆವಾಡದ
ಗುರ್ವನದೇನೆಂಬೆನದಱ ಪಳಯಿಗೆದುಱುಗಳ್
ಗೀರ್ವಾಣನದಿಯ ತೀರದ
ನೀರ್ವಕ್ಕಿಯನಲ್ಲಿ ಸೋವಿ ಮೂವಿಧಿಗೊಳಿಕುಂ ೧೨೧

ವ : ಅಲ್ಲಿ

ಪಸರಂಬೆತ್ತೊಪ್ಪುಗುಂ ಮಂಡಳಿಕಮಣಿಮಹಾಮಂದಿರಂ ದಂಡನಾಥಾ
ವಸಥಂ ಸಾಮಂತ ಸೌಧಾವಳಿ ಪರಿಣತ ಪಂಚಪ್ರಧಾನಾಲಯಂ ವಾ
ಜಿಸಮಾಜ ಪ್ರಸ್ಫರನ್ಮಂದುರಮಿಭಶುಭಶಾಲಾಳಿ ಶಸ್ತ್ರಾಸ್ತ್ರಸದ್ಮಂ
ವಸುವಸ್ತ್ರಾನರ್ಘ್ಯ ರತ್ನೋದವಸಥಮವರೋಧಾಂಗನಾ ರಮ್ಯಹರ್ಮ್ಯಂ    ೧೨೨

ಶ್ರೀರಾಜಾಲಯಮವಱೊಳ್
ರಾರಾಜಿಪುದುಚಿತರುಚಿರಮಣಿಖಚಿತ ನಿಜ
ದ್ವಾರಮುಖಕಾಂತಿ ದೆಸೆಯಂ
ಪೂರಿಸೆ ನಗುವಂತೆ ರಾಜರಾಜಾಲಯಮಂ        ೧೨೩

ವ : ಅಂತನೇಕ ಮಣಿಮಯ ನಿರ್ಮಾಣಕೌಶಲ ಕಮನೀಯಮಾದ ರಾಜಭವನದೊಳ್

ಸೊಗಯಿಪ ಗೃಹವನದೊಳ್ ಮ
ಲ್ಲಿಗೆದಿಱಿದಪೆವೆಂದು ಪೋಗಿ ಭೃಂಗಾವಳಿಗಳ್
ತಗುಳೆ ತರಹರಿಸಲಱಿಯದೆ
ಪೊಗುವರ್ ಸಂಪಗೆಯ ಜೊಂಪಮಂ ಬಾಲಕಿಯರ್        ೧೨೪

ವಿಕಚ ಸರೋಜಮಂದಮಕರಂದ ಕೋಳ್ಗೆಸಮೀದನರ್ಘ್ಯ ದೀ
ರ್ಘಿಕೆಗಳ ತೀರದತ್ತಿಳಿಯಲಣ್ಮದೆ ಘಮ್ಮನೆ ಪೋಗಿ ರಾಗದಿಂ
ಪ್ರಕಟಿಪರಿಂದುಕಾಂತಕೃತಕೋಪಲದಿಂದಿಳಿತರ್ಪ ನಿರ್ಮಳೋ
ದಕಪರಿಪೂರ್ಣಮಾದ ಕೊಳನೊಳ್ ಜಲಕೇಳಿಯನಿಂದುವಕ್ತ್ರೆಯರ್ ೧೨೫

ಚಿತ್ರಂ ಬರೆವಾಗಳ್ ಮೃಗ
ನೇತ್ರೆಯರುಱೆ ತಮ್ಮ ರೂಪು ಮಣಿಭಿತ್ತಿಗಳೊಳ್
ಚಿತ್ರಿಸಿದಂತಿರೆ ಕಂಡು ವಿ
ಚಿತ್ರಮೆಂದೆಂದಲ್ಲಿ ಚಿತ್ರಮಂ ಚಿತ್ರಿಸುವರ್       ೧೨೬

ನಸುನಗುವಂತೆ ಕೂರ್ತು ನುಡಿವಂತೆ ಮನಂಬಡೆದಪ್ಪುವಂತೆ ರಂ
ಜಿಸುವ ನವೀನ ಚಿತ್ರದ ಚಮತ್ಕೃತಿಯೊಳ್ ಚಲಲೋಚನಾಳಿ ಕೀ
ಲೀಸೆ ನಡೆನೋಡುವಗ್ಗಳದ ಜಾಣರ ಚಿತ್ತದ ಭಿತ್ತಿಯಲ್ಲಿ ಚಿ
ತ್ರಿಸುವುದು ಚಿತ್ರಶಾಲೆ ಶಚಿಯೋಪನ ರೂಪನೆವೆತ್ತ ಚಿತ್ರಮಂ         ೧೨೭

ಒಳಗಮರ್ದಿರ್ಪ ಭಂಗುರ ಮೃದಂಗಲಯಕ್ಕನುರೂಪಮಾದ ಕೋ
ಮಳೆಯರ ಲಾಸ್ಯಮಂ ಪ್ರಿಯದಿನಾಲಿಪ ನೋಟಕರಾಲಿನಾಟಕಂ
ಗಳನೊಡನಾಡೆ ರೂಢಿಸಿದ ನಾಟಕಶಾಲೆಗಳಗ್ರಭಾಗದೊಳ್
ಬಳಸುಗುಮಾವಗಂ ನೃಪತಿಕೇತನಜಾತಿಶಿಖಂಡಿ ತಾಂಡವಂ           ೧೨೮

ಬಾಂದೊಱೆಯ ಹಂಸೆ ಪುಳಿನದ
ಪೊಂದಾವರೆಯೆಸಳಿಗೆತ್ತು ತತ್ತಿಯನಿಟ್ಟಂ
ತಂದಂಬಡೆವುವು ಸೌಧದೊ
ಳೊಂದಿದ ಪೊಂಗಳಸದೆಸಳ್ಗಳೊಳ್ ತಾರಗೆಗಳ್ ೧೨೯

ಮರಕತ ಕೂಟ ಕೋಟಿ ತಟದಿಂದೊಗೆದರ್ವಿಸಿ ಪರ್ವೆ ಕಾಂತಿಮಂ
ಜರಿ ಹರಿದಶ್ವನಶ್ಚಚಯಮಂಬರದೊಳ್ ಗಿಳಿಯಂತೆ ಪಾಯಲ
ಚ್ಚರಿವಡೆವಂಬರೇಚರರ ಕಣ್ಗೆ ಮನಂಗೊಳೆ ಪಕ್ಕಿ ಸೋವ ಪಾ
ಮರಿಯರ ಲೀಲೆಯಂ ನೆರಪುಗುಂ ನೆಲೆಮಾಡದೊಳಂಗನಾಚಯಂ   ೧೩೦

ಬಿತ್ತರದ ಸೌಧಶಿಖರದೊ
ಳೊತ್ತಂಬದಿನಾಡುವಂದು ಕಂದುಕಮನುಗೆ
ಟ್ಟತ್ತಿತ್ತ ಪೋಗೆ ಪಾಯ್ವರ್
ಮುತ್ತಿನಸೆಂಡೆಂದು ಮುಗ್ಧೆಯರ್ ಮೃಗಧರನಂ            ೧೩೧

ಹರಿನೀಳದ ಕತ್ತಲೆ ಕೆಂ
ಬರಲೆಳವಿಸಿಲೆಂಬ ನೆವದಿನಿರುಳಂ ಪಗಲುಂ
ಬೆರಸಿರ್ಪುವೆಂದೊಡಾ ಪುರ
ದರಸನ ಪೆಸರೆನಿಸಿದಾಜ್ಞೆಯೇನಗ್ಗಳಮೋ         ೧೩೨

ವ : ಮತ್ತಮದಱೊಳೊಂದೊಂದೆಡೆಯೊಳ್ ತೊಂಡೆವಾಯ್ಗಳಂ ತುಡುಂಕುವ ತೊಂಡುಗಿಳಿಗೆ ಬೆದಱಿ ಬಿಡಾಳ ನಯನಭೀಷಣಂಗಳಪ್ಪ ವೈಡೂರ್ಯ ಭಿತ್ತಿಯನೊತ್ತುಂಗೊಂಬ ಬಿಂಭಾಧರೆಯರಿಂ ಒಂದೊಂದೆಡೆಯೊಳ್ ನೂಪುರದುಲಿಯ ಸನ್ನೆಗೆ ಬಿನ್ನನೆ ಬಂದು ಮೆಲ್ಲಡಿಗಳಂ ತಡಂಗಲ್ವೊಯ್ವರಸಂಚೆಗಂಜಿಸೆ ಮಿಂಚಿನಂತೆ ಮಿಱುಗುವೆಳವಳುಕಿನ ಧಾರಾಗೃಹದ ಮಣಿಗಂಭಮನಿಂಬುಗೊಳ್ವ ಮಂದಗಮನೆಯರಿನೊಂದೊಂದೆಡೆಯೊಳ್ ಸೋರ್ಮುಡಿಗೆ ಪಾಯ್ವ ಸೋಗೆಗೋಗಡಿಸೆ ಪುಳಿಂದ ನಿಳಯಂದತೋಳಿಗೊಂಡ ನೀಲದ ಸಾಲಭಂಜಿಕೆಗಳಿಂದೊಪ್ಪುವೋಲಗ ಶಾಲೆಯಂ ಪುಗುವ ಕಾಳೋರಗಕೇಶಪಾಶೆಯರಿಂ ಒಂದೊಂದೆಡೆಯೊಳ್ ಮೆಯ್ಗಂಪಿಂಗೆಱಗುವ ಪಱಮೆವಱಿಗುಱಿಪದ ಸಂಪಗೆಯ ಜೊಂಪದಂತೆ ತುಱುಗಿದ ಮರಕತ ವಿತರಣ ಮಂಟಪದ ಪೊನ್ನರಾಶಿಯಂ ಮಱೆಗೊಳ್ವ ಚಂದನಗಂಧಿಯರಿಂ ಒಂದೊಂದೆಡೆಯೊಳ್ ಮಂದಹಾಸಚಂದ್ರಿಕೆಗೆ ಮೊಗಸಿ ಮೊಗವಿಡುವ ಜೊನ್ನವಕ್ಕಿಗೆ ತಕ್ಕಳಿದು ಪಸುವಿಸಿಲಮಸಕಮನಾಣೆಯಿಡುವ ರಾಣಿವಾಸದ ಮಾಣಿಕದ ಮೊಗಸಾಲೆಗೆ ಸಯ್ವರಿವ ಶಶಿಮುಖಿಯರಿಂ ಒಂದೊಂದೆಡೆಯೊಳ್ ನೆಲೆಮೊಲೆಗೆ ಝೊಂಪಿಸುವ ಜಕ್ಕವಕ್ಕಿಗೆ ಜಗುಳ್ದ ಬೆಳ್ದಿಂಗಳಂತೆ ತಣ್ಗದಿರ್ಗಳಂ ಸೂಸುವ ದೇವತಾಗಾರದಿಂದು ಕಾಂತರಂಗಮಂಡಪದ ಮುತ್ತಿನ ಮತ್ತವಾರಣಮಂ ಮಲಂಗುವ ಮೃಣಾಳ ಕೋಮಳೆಯರಿಂ ಒಂದೊಂದೆಡೆಯೊಳ್ ಪೆಚ್ಚೆಯವಿಂಡುಗಂಕಣದ ಪಸುರ್ಪಿಂಗೆ ಪರಿವುತ ಪುಲ್ಲೆಗೆ ಮಲ್ಲಳಿಗೊಂಡು ಸೆಜ್ಜೆವನೆಯ ವಜ್ರದ ವಳಭಿಗಡರ್ದು ಪಣ್ಣಿದ ಕಣ್ಣಿವಲೆಯಂತೆ ಕವಲ್ತು ದಾಂಗುಡಿವೋದ ಮಾಧವೀಲತೆಯ ಕೆಲದೊಳಲರಂಬನಿಟ್ಟ ಬೇಗೆಯಂತೆ ಮಿಳಿರ್ವ ನಿಱಿದಳಿರ ತುಱುಗಲಿಂ ಕೆಂಕಮಾದ ಕಂಕೆಲ್ಲಿಯ ಕಾವಣದೊಳ್ ಮೆಯ್ಗರೆವ ನಿತಂಬಿನಿಯರಿಂ ಅಂಗಭವನ ತೋಹುದಾಣದಂತೆ ಮೋಹನಮನೊಳಕೆಯ್ವ ಮಣಿಗೇಹಂಗಳ ಮಧ್ಯದೊಳ್

ನಳಮಳವಟ್ಟ ಕುಟ್ಟಿಮಮೆ ನೀಲಮಯಂ ಮಿಱುಪೊಂದಿ ನೀಳ್ದ ಭಿ
ತ್ತಿಯ ದೊರೆವೆತ್ತ ಮೌಕ್ತಕಮಯಂ ತಳಗಂಭಮೆ ತಳ್ತ ವಜ್ರ ಸಂ
ಚಯಮಯಮಾಗಿ ರತ್ನಮಯಮಾದ ಬೆಡಂಗು ಮಯಂಗೆ ಚಿತ್ತ ವಿ
ಸ್ಮಯಮನೊಡರ್ಚಿ ಕಣ್ಗೆ ಕರುಮಾಡುಮದೇಂ ಕಡುಗಾಡಿವೆತ್ತುದೋ         ೧೩೩

ಅದು ಸಮುದಿತ ಘಂಟಾ ಸ
ಮ್ಮದಕರ ಶಾಖಾಪ್ರವಾಳ ಮೀನಪತಾಕಾ
ಸ್ಪದಮಾಗಿ ಪೋಗೆ ಪಳಿವುದು
ಮದಗಜ ಕಂದ ಮನ್ಮಥಾಡಂಬರಮಂ            ೧೩೪

ಮಂಜುಳಮಾದ ಮೌಕ್ತಿಕದ ಲಂಬಣಮಂ ಬಗೆಗೊಳ್ವ ಮಲ್ಲಿಕಾ
ಮಂಜರಿಯೆಂದು ಬಂದೆಱಗಿದುನ್ಮದ ಭೃಂಗಮನಂಗಕಾಂತೆ ಕ
ಣ್ಗೆಂಜಲದೋಷಮಂ ಕಳೆಯಲೆಂದು ಕರಾಂಗುಲಿಯಿಂದಮಿಟ್ಟ ರ
ಕ್ಷಾಂಜನಪುಂಜದಂದಮನದೇಂ ಪುದುಗೊಂಡುದೋ ರತ್ನಭಿತ್ತಿಯೊಳ್          ೧೩೫

ಆ ವಸುಧಾಧಿನಾಯಕ ನಿಕೇತನಕೇತನದಗ್ರದಲ್ಲಿ ಕೆ
ಯ್ದೀವಿಗೆಯಂತೆ ಕಂಗೊಳಿಪ ಪೊಂಗಳಸಂಗಳ ದೀಪ್ತಿ ಸುತ್ತಲುಂ
ತೀವಿರದಿರ್ದೊಡೆದ್ದಗರುಧೂಪದ ಕರ್ವೊಗೆಯೆಂಬಮರ್ವು ಬಂ
ದಾವರಿಸಿರ್ದ ಕೂಡದೊಳೆ ಮುಗ್ಗವೆ ಭಾನುಚರಿತ್ತುರಂಗಮಂ        ೧೩೬

ಮಂದರವೊಂದನೆ ತಂದೋ
ರಂದಿನೆಸೆವಂತೀರೇಳು ನೆಲೆವಡೆದಿನಿತೊಂ
ದಂದಕ್ಕೆ ತಂದ ತೀರಮೆ
ಕಂದರ್ಪಂಗಕ್ಕುಮಕ್ಕುಮೇ ಮಿಕ್ಕವಱೊಳ್     ೧೩೭

ಪೆಱತೇನಿಂತಂತದೆಂದಲ್ಲಿಯ ಕುಸುರಿಗಳಂ ಕೂಡೆ ಕೊಂಡಾಡಲಿಂ ನಾ
ನಱಿಯೆಂ ತದ್ರಾಜಗೇಹೋಪಚಿತರಚನೆಯಂ ಕಂಡು ನಿರ್ವೇಗದಿಂ ಕೆ
ಯ್ಮಱೆದಂ ವೈಚಿತ್ಯ್ರಶಿಲ್ಪಪ್ರಥಿತ ನಿಜಕಳಾಕರ್ಮದೊಳ್ ವಿಶ್ವಕರ್ಮಂ
ತೊಱೆದಂ ಚಾತುರ್ಯಧುರ್ಯ ಪ್ರಕಟಬಿರುದ ಸಂದರ್ಭಮಂ ಪದ್ಮಗರ್ಭಂ   ೧೩೮

ವ : ಅಂತನವದ್ಯ ಶೋಭಾಭಿರಾಮಮಾದ ರಾಜಾಲಯಲಕ್ಷ್ಮಿತೊಲಗದೆ ನೆಲೆಗೊಂಡು ರಾಜೀವಲಕ್ಷ್ಮಿಯಂ ಧರಿಸಿ

ನೆಟ್ಟನೆ ತನ್ನಗರದ ಪೆಂ
ಪಿಟ್ಟಳಮೆನೆ ಕಂಡು ಕಾಯ್ಪಿನಿಂ ಮುಗಿಲುದ್ದಂ
ಕಟ್ಟೊಗೆದು ಪಾಱಿ ಕಣ್ಣಂ
ಬಿಟ್ಟೊಡೆ ಸಗ್ಗಕ್ಕೆ ಬಕ್ಕುಮೇ ಸೌಭಾಗ್ಯಂ        ೧೩೯

ಹಯರತ್ನಂ ಗಜರತ್ನಮುತ್ತಮಗುಣಸ್ತ್ರೀರತ್ನಮುರ್ವೀಪತಿ
ಪ್ರಿಯರತ್ನಂ ದೊರೆವೆತ್ತ ಸತ್ಪುರುಷರತ್ನಂ ತಾನಿದರ್ಕಾವಗಂ
ನಿಯತಸ್ಥಾನಮೆನಿಪ್ಪುದೆಂದು ಪದೆದಿತ್ತಂ ಚಿತ್ತದೊಳ್ ಮಾಡಿ ನಿ
ಶ್ಚಯಮಂ ರತ್ನಪುರಂ ದಲೆಂದು ಚತುರಾಸ್ಯಂ ಪ್ರೇಮದಿಂ ನಾಮಮಂ        ೧೪೦

ಲೋಚನದ ಸುಕೃತದಾಕೃತಿ
ಸೂಚಿಪ ನಾಲಗೆಯ ಸುಧೆಯದೆನ್ನದೆ ಪೊಗಳಲ್
ಗೋಚರಮಲ್ತೆನೆ ನಿಖಿಳ ಪು
ರೀ ಚೂಡಾರತ್ನಮೆನಿಸದೇ ರತ್ನಪುರಂ            ೧೪೧

ಆಭಾಸ್ವನ್ನಗರಾಧಿನಾಥನಖಿಳೋರ್ವೀನಾಥ ಕೋಟೀರ ಕೋ
ಟೀ ಭೂಷಾಮಣಿ ಮಂಜರೀಮಹಿತ ಪಾದಂ ಸಾಧಿತಾರಾತಿ ಲ
ಕ್ಷ್ಮೀಭಾಳಾಕ್ಷರ ದರ್ಪ ನಿರ್ಜಿತ ಮಹಾಸೇನಂ ಮಹಾಸೇನನೆಂ
ದೀ ಭೂಮಂಡಳದೊಳ್ ನೆಗಳ್ತೆವಡೆದಂ ಸನ್ಮಾನಜನ್ಮಾಲಯಂ      ೧೪೨

ಸಿರಿವಕ್ಷೋರಂಗದಿಂ ಪಿಂಗದ ಸೊಬಗು ಜಯಶ್ರೀ ಮನಂಗೊಳ್ವಿನಂ ತೋ
ಳ್ವೆರಗುಂ ಪಾರ್ದಿರ್ಪ ದರ್ಪೋನ್ನತಿ ವಿತತ ಯಶೋಲಕ್ಷ್ಮಿ ಸಪ್ತಾರ್ಣವಂ ಸೈ
ತಿರೆ ಕೆಯ್ನೀರಾಗೆ ತನ್ನೊಳ್ ನೆರೆದ ಮಹಿಮೆ ಮೆಯ್ವೆತ್ತ ಪುಣ್ಯಪ್ರಭಾವ
ಕ್ಕರಸಾದಂ ವಿಶ್ವವಿದ್ಯಾಸಮುದಯ ಸುಮನಸ್ಸಂಚರಂ ಚಂಚರೀಕಂ           ೧೪೩

ಇದು ಸಕಲ ಕವಿಜನಮನಸ್ಸುಧಾಕರಕಾಂತ ಸಂತತ ದ್ರವೀಕರಣ ಕಾರಣ ಕರ್ನಾಟಕವಿತಾ ಕಳಾವಿಳಾಸವಿದು ಮಧುರಕವೀಂದ್ರ ನಿರ್ಮಿತಮಪ್ಪ ಧರ್ಮನಾಥಪುರಾಣದೊಳ್ ರತ್ನಪುರವರ್ಣನಂ ದ್ವಿತೀಯಾಶ್ವಾಸಂ.