ಶ್ರೀಧರ್ಮಚರಿತ ನವ ಸುಮ
ನೋಧರಣೀರುಹದೊಳುರು ಕಥಾಕೇಳಿಯನು
ದ್ಭೋಧಿಸಿದನೊಸೆದು ಸಕಳ ಸು
ಖಾಧಾರಂ ಸರಸಕವಿರಸಾಳವಸಂತಂ   ೧

ಪೃಥ್ವಿ ||

ಅದೆಂತೆನೆ ಪುರಾಣಸಂಗತಿಗೆ ಸಲ್ವುವೆಂಟಂಗದೊಳ್
ಮೊದಲ್ ಕಡೆಯ ವರ್ಣನೋಚಿತದ ಲೋಕದಾಕಾರಮಂ
ವಿದಗ್ಧರಱಿವಂತು ಪೇಳ್ದಪೆನಪಾರವಿಸ್ತಾರ ಸಂ
ಪದಂ ಪುದಿದು ಪುಷ್ಕರಂ ನೆಗಳ್ದುದಾ ಮಹಾವ್ಯೋಮದೊಳ್       ೨

ಮೊದಲಿಂದ್ರಕ್ಕೇಕರಜ್ಜುಪ್ರಮಿತಿ ನೆಗಳ್ದುದೀರೇಳೆನಲ್ಕೋಜೆಯಿಂ ಚೆ
ಲ್ವೊದವಲ್ ವೇತ್ರಾಸನಂ ಝಲ್ಲರೀಮುರಜಮನೊಂದೋಳಿಯಿಟ್ಟಂತಿರಿನ್ನಾ
ರಿದಱಂದಂಗಾಣ್ಬರೆಂಬಗ್ಗಳಿಕೆ ಬರಲೆರಳ್ಮೂಱಱಿಂ ಸುತ್ತಿ ಪೆಂಪಂ
ಪುದಿದಿರ್ಕುಂ ಲೋಕಮುಜೃಂಭಿತ ಜಿನಪತಿ ಬೋಧಾವಲೋಕೈಕಗಮ್ಯಂ      ೩

ಪೆಱರಳಿನ ಪೊರೆವ ಪೂಡುವ
ತೆಱಕ್ಕೆ ಪೊಱಿಗಾಗಿ ಮತ್ತೆ ತುದಿನಡುಮೊದಲೆಂ
ದುಱೆ ಪಸುಗೆವಡೆದು ನೇರ್ಪಿಂ
ನೆಱೆದುದು ಷಡ್ದ್ರವ್ಯನಿಯತ ಭವನಂ ಭುವನಂ            ೪

ಚತುರಸ್ರಂ ತ್ರಸನಾಳಮೊಂದೆ ನಿಜರಜ್ಜುಪ್ರಾಪ್ತಿಯಿಂದಾ ತ್ರಿಳೋ
ಕತಳಾಗ್ರಂಬರಮೆತ್ತಿ ನಿಂದ ಮಣಿಗಂಬಂಬೊಲ್ ಬೆಡಂಗಾದುದ
ಲ್ಲಿ ತಗುಳ್ದಿರ್ಪುವನಂತ ಜಂತುವುಳಿದಾಲೋಕಪ್ರದೇಶಂಗಳೊಳ್
ಸತತಂ ಸ್ಥಾವರಮಲ್ಲದುದ್ಭವಿಸವೆಂದುಂ ಜೀವಮಾವಶ್ಯಕಂ      ೫

ವ : ಆ ತ್ರಸನಾಳಮೆಂಬ ಸೂತ್ರದಿಂ ಸೂತ್ರಿಸಿದ ಜಗತ್ತ್ರಯನಟನ ಕಟಿಸೂತ್ರ ಮೆಂಬಂತೆ ಬೆಡಂಗುವಡೆದ ಮಧ್ಯಮಲೋಕದೊಳಗೆ

ದ್ವೀಪಾಕೂಪಾರಮಾದೀಕ್ರಮದಿನಗಣಿತಂ ಸುತ್ತಲುಂ ಸುತ್ತಿರಲ್ ಮೆ
ಯ್ಗಾಪಾಗಿನ್ನುಂ ಸ್ವಯಂಭೂರಮಣ ಜಲಧಿ ಪರ್ಯಂತಮೊಲ್ದೋಲಗಂಗೊ
ಟ್ಟೀ ಪೂರ್ಣಶ್ರೀಗೆ ಮೇರುಕ್ಷಿತಿಧರಮೆ ಜಯಸ್ತಂಭಮಾಗಿರ್ದ ಜಂಬೂ
ದ್ವೀಪಂ ಕಣ್ಗೇಂ ಬೆಡಂಗಾದುದೋ ಲವಣಸಮುದ್ರೈಕ ಮುದ್ರಾತಿಭದ್ರಂ     ೬

ವ : ಆ ಜಂಬೂದ್ವೀಪದ ನಟ್ಟನಡುವೆ

ಮಾಲಿನಿ || ಕುಳನದಿ ಪದಿನಾಲ್ಕುಂ ಗೋತ್ರಶೈಲಂಗಳಾಱುಂ
ಬಳಸಿದ ಭರತಾದಿ ಕ್ಷೇತ್ರಮೇಳುಂ ಬೆಡಂಗಂ
ತಳೆಯೆ ತೊಳಪ ಜಂಬೂದ್ವೀಪ ಸೌವರ್ಣಪಾತ್ರ
ಕ್ಕಳವಡೆ ಸೊಡರೆಂಬಂತಾಯ್ತು ಹೇಮಾಚಲೇಂದ್ರಂ        ೭

ಜಿನಜನ್ಮಸ್ನಾನಪೂಜಾವಿಧಿ ವಿಬುಧಗಣಾತಿಥ್ಯಕಂ ಮಿತ್ರಸದ್ವ
ರ್ತನಮೆಂದುಂ ಕುಂದದುದ್ಯೋತಿಪ ವಿಪುಳ ಸುವರ್ಣಪ್ರಭಾರಂ ತ್ರಿಳೋಕೀ
ಜನಮೆಲ್ಲಂ ಕೂಡೆ ಕೊಂಡಾಡುವ ಮಹಿಮೆಗಡರ್ಪಾದ ಮಧ್ಯಸ್ಥಭಾಗಂ
ತನಗೇಕಚ್ಛತ್ರಮಾಗಲ್ ನೆಗಳ್ದುದು ಮಹಿಭೃತ್ಸ್ವಾಮಿ ಹೇಮಾಚಲೇಂದ್ರಂ ೮

ಆ ಮಂದರದಿರ್ವಕ್ಕದ
ಭೂಮಿಗಳೊಳ್ ಕಡಲಕಡೆವರಂ ನಿಮಿರ್ದ ಮಹಾ
ಸೀಮೆಯ ಭರತೈರಾವತ
ನಾಮದ ವಿಷಯದ್ವಯಂ ಪೊದಳ್ದತ್ತದಱೊಳ್          ೯

ತಣಿವಂ ಕಣ್ಬರಿಗೀವುದುಚ್ಚಳಿತ ಗಂಗಾ ಸಿಂಧು ಸೌಗಂಧಿಕೋ
ಲ್ಬಣ ಗಂಧಂ ವಿಜಯಾರ್ಧರತ್ನಕಟಕಂ ಷಟ್ಖಂಡಭೂಮಂಡಳಂ
ಪ್ರಣುತೋದಾರ ಚರಿತ್ರಮಾದ ಭರತಕ್ಷೇತ್ರಂ ಮನಂಗೊಂಡು ದ
ಕ್ಷಿಣದೊಳ್ ದಕ್ಷಿಣಬಾಹುದಂಡಮೆನೆ ಜಂಬೂದ್ವೀಪಭುಪಾಲನಾ   ೧೦

ಆ ಭರತಕ್ಷೇತ್ರದೊಳೆ ಮ
ಹಾ ಭೋಗಮನಪ್ಪುಕೆಯ್ದು ವಿಷಮೊಂದದ ನಾ
ನಾ ಭೋಗಿಗಳೇ ತಾನೆ ಸ
ನಾಭಿ ಶ್ರೀಖಂಡಮೆನಿಪುದಾರ್ಯಾಖಂಡಂ         ೧೧

ವ : ಅಲ್ಲಿ

ದ್ರುತವಿಳಂಬಿತಂ || ಕರಮೆ ಕಣ್ಗೆಸೆದಿರ್ಪುದು ಪುಷ್ಪ ಸುಂ
ದರಮರಂದ ಪರಿಪ್ಲವಭೃಂಗಝಂ
ಕರಣ ಸೂಚಿತ ಮನ್ಮಥವಾಹಿನೀ
ಬಿರುದ ಪೇಶಲಮುತ್ತರ ಕೋಶಲಂ    ೧೨

ಅದು ಮದಕರಿ ವಿದಳಿತಮೃಗ
ಮದ ವಿದಿತ ಧುರೀಝರೀ ಸಮುದ್ಭೂತ ನದೀ
ನದ ಸಮುದಿತ ಕುಮುದ ಕುಟೀ
ವಿದಳನ ಪಟು ಜನನಪವನ ಸುರಭಿದಿಗಂತಂ      ೧೩

ಆ ವಿಷಯದೊಂದು ಪೆಂಪಂ
ಭಾವಿಸಿ ಬಗೆಗಿಡದೆ ಪೊಗಳ್ವನಂತರನಂತ
ರ್ಭೂವಳಯದೊಳುಳ್ಳೊಡೆ
ಶೋಭಾವಹಮೆನೆ ಪೊಗಳಲಳವದುಳಿದರ್ಗಳವೇ           ೧೪

ಪಳು ನಾನಾ ಫಲಭೂಜದಿಂ ನಗಕುಲಂ ನಾನಾ ಮಣಿಶ್ರೇಣಿಯಿಂ
ದೆಳೆ ನಾನಾವಿಧ ಸಸ್ಯದಿಂದುಪವನಂ ನಾನರ್ತು ಸಂಪತ್ತಿಯಿಂ
ಬೆಳೆ ನಾನಾಜನ ಹರ್ಷದಿಂ ಪರಿಜನಂ ನಾನಾವಿಧ ಶ್ರೀಯಿನ
ಗ್ಗಳಿಸಲ್ಕಗ್ಗಳಿಸಿರ್ಪುದಾ ಜನಪದಂ ನಾನಾಸುಖೈಕಾಸ್ಪದಂ          ೧೫

ಆ ವಿಷಯಾಂತರಾಳದಗಲಕ್ಕೆ ಬಯಲ್ವಿಡಿದುಳ್ಳರಲ್ದ ಬೆ
ಳ್ದಾವರೆವೂಗಳಿಂ ನೆಗಳ್ದ ಧೂಳಿಗಳುಬ್ಬರಮಾಗಿ ಮಾರ್ಗದೊಳ್
ತೀವಿರೆ ನಟ್ಟ ಬಟ್ಟೆಗರ ಪಜ್ಜೆಗಳಂ ಬಳಿಸಂದು ಪೋಪನಾ
ರ್ದಾವಗಮೋವದೇಱಿಸಿದ ಪೂವಿನ ಬಿಲ್ವೆರಸುದ್ಗಮಾಯುಧಂ    ೧೬

ಪೊಲನ ಪೊದಳ್ಕೆವೆತ್ತ ಸಿರಿಯಂ ಸಲೆಬಣ್ಣಿಪನಾವನಾವಗಂ
ನಲಿವರಿದಾಡೆ ಕತ್ತುರಿಮಿಗಂ ಕರಿದಾದೊಡೆ ಕುಂಕುಮಂ ಪೊದ
ಳ್ದಲರ್ದುಗೆ ಕೇಸರಂಬೊರೆದ ಕೆನ್ನೆಲನಲ್ಲದೆ ಬೇರೆ ಮತ್ತೆ ಕೆ
ನ್ನೆಲನೆರೆಯೆಂಬುದಿಲ್ಲ ಪರಿಭಾವಿಪೊಡಾ ವಿಷಯಾಂತರಾಳದೊಳ್            ೧೭

ಬಿತ್ತಿದೊಡೆ ಬೆಳೆವುದಗ್ಗದ
ಭತ್ತಮನದು ಪಿರಿದೆ ಪಿರಿದು ಮಾತೇನಾರುಂ
ಬಿತ್ತದೆ ಪೊನ್ನಂ ಬೆಳೆವುದು
ಮತ್ತಿನ ನೆಲನದಱ ಪೊಲನ ನೆಲದೋರಗೆಯೇ   ೧೮

ಎಳಿನೀರ ಚಂದ್ರಕಾಂತೋ
ಪಳದ ಪೊನಲ್ ಪೊರೆಯೆ ಸಂತತಂ ಪೆರ್ವೆಳಸಂ
ಮಳೆಯಂ ಪೊಳೆಯಂ ಪಾರದೆ
ಬೆಳೆವುದು ಪೊಲನಾವ ಮಾತೃಕಮದೆಂದಱಿಯೆಂ           ೧೯

ಬಿಲ್ಗೊನೆಯಾಱಿನಿಂದು ಮದನಂ ತಲೆದೂಗೆ ನೆಗಳ್ತೆವೆತ್ತ ನೆ
ಯ್ದಲ್ಗೊಳನಚ್ಚದಾವರೆಗೊಳಂ ತಿಳಿನೀರ್ಗೊಳನಿಂಪುವೀ ಱುವಾ
ಬಲ್ಗೊಳನಲ್ಲಿ ತನ್ನ ಬೆಳೆಸಂ ಪಸಮೋಡುವಿನ ಧರಿತ್ರಿ ನೋ
ಡಲ್ಗಡಿಗೆಟ್ಟ ಕಣ್ದೆಱೆದುದೆಂದೆನೆ ಸಂತತಮೊಪ್ಪಿ ತೋಱುಗುಂ     ೨೦

ಪಲ್ಲವಿಸೆ ಪರ್ವೆ ಪರ್ವದೊ
ಳೆಲ್ಲೊದವಿಸಿದಮೃತರಸಮನೆಱೆದಿಂದುವೆ ಪೂ
ಣ್ದಲ್ಲಿ ಮದನಂಗೆ ಪೊಸಪದ
ವಿಲ್ಲನೆ ಬೆಳೆದಂತೆ ಬಿಳಿಯ ಕರ್ವುಗಳೆಸೆಗುಂ       ೨೧

ಧವಳೇಕ್ಷುರಸದ ಕುಸುಮಾ
ಸವದ ಪೊನಲ್ ಪೊರೆಯೆ ಕಳಮೆಗಳ್ ಬೆಳದಪುವೆಂ
ಬವರ ನುಡಿಗೇಳಲೇಂ ಪೇ
ಳವೆ ತವಕದಿನವಱೊಳುಣ್ಮಿದಿಂಪುಂ ಕಂಪುಂ     ೨೨

ಮೊಳೆವ ಪದಂ ಮಡಲಿಱಿದುದೆ
ಬೆಳವ ಪದಂ ಪೊಡೆಗಳೊಡೆದು ಪಾಲ್ದೆನೆದುಱುಗ
ಲ್ದಳೆವ ಪದಂ ಗಿಳಿವಿಂಡುಗ
ಳಿಳಿವ ಪದಂ ಕೆಯ್ಗಳೊಳ್ ಪದಂಬಡೆದೆಸೆಗುಂ   ೨೩

ಕಿಱುವದದ ಕಳಮೆಯೊಳ್ ಪೂ
ತೊಱಗಿದ ಚೆನ್ನೆಯ್ದಿಲಲರ ರಜಮಮರ್ದಿರೆ ಪ
ಣ್ತುಱುವ ತೆನೆದು ಱುಗಲೆಂದಗಿ
ದೆಱಗುವ ಗಿಳಿವಿಂಡು ಬಂಜೆವಡಿಪುದು ಬಗೆಯಂ            ೨೪

ಆ ಕಾಲ್ಗರ್ದೆಯ ಮಡಿಯೊಳ
ನಾಕುಳಮುಳ್ಳಲರ್ದ ಕಮಲಕುವಲಯಕುಮುದಾ
ನೀಕಂ ಕಳಮಕ್ಷೇತ್ರ
ಶ್ರೀ ಕಣ್ದೆಱೆದಂತೆ ಕಣ್ಗೆ ಸೊಗಯಿಸಿ ತೋರ್ಕುಂ            ೨೫

ವ : ಮತ್ತಮೊಂದೆಡೆಯೊಳ್ ಪಚ್ಚೆವರಲ ಪಸುರ್ಗದಿರನಗೆವೊಯ್ದಂತೆ ನೆಗೆದ ಚಾಗದ ಜವ್ವನಕ್ಕೆ ಮೊಗಸಿ ಮೊಗಮಿಕ್ಕಲೆಂದು ಬಂದಾ   ೨೬

ವದನ ಸುಗಂಧಮಂ ಬಯಸಿ ಪಾಯ್ವಳಿಮಾಲೆಯೆ ಮೇಳಮಾದ ತಾ
ನದೊಳನುರಾಗಮಂ ಪಡೆದು ಪಾಮರಿ ಪಾಡುವ ಸೀಯನಪ್ಪ ಗೇ
ಯದ ಬಲೆಯೊಳ್ ತೊಡಂಕಿ ಬಿಡದಾಲಿಪ ಪುಲ್ಲೆಯನಲ್ಲಿ ಕಂಡು ಲೆ
ಪ್ಪದ ಮಿಗಮೆಂದೆ ಬಂದೆಳಸಿ ನೋಡುಗುಮಧ್ವಗಕಾಮಿನೀಜನಂ    ೨೭

ಪಾಱಿಸಲೆಂದು ಬಂದು ಬಳೆಗಳ್ ಘಳಿಲೆಂಬಿನಮಿಂಪುವೀಱಿ ಮೆ
ಯ್ದೋಱುವ ತಮ್ಮ ಕೆಯ್ಪಱೆಗೆ ಬೆರ್ಚಿ ಶುಕಂ ತೆನೆಗರ್ಚಿ ಬೇಗದಿಂ
ಪಾಱಿ ಮಡಲ್ತು ಮಂಡಳಿಸೆ ಗರ್ದೆಗಳೆರ್ದು ನಭಕ್ಕೆ ಮೊಕ್ಕಳಂ
ಪಾಱಿದುವೆಂದು ಪಾಮರಿಯರೀಕ್ಷಿಪರಾರ್ದು ನಭೋವಿಭಾಗಮಂ  ೨೮

ಪವಣಂ ನೋಡದೆ ನಾಡೆಯುಂ ಸೆಣಸಿ ಮುನ್ನೆಕ್ಕೆಕ್ಕೆಯಿಂ ಪಕ್ಕಿ ಸೋ
ವವರ ಸ್ತ್ರೀಯರ ಸೀಯನಪ್ಪ ನುಡಿಯಂ ಕೇಳ್ದಾಗಳಂತಾತ್ಮಗ
ರ್ವವನೀಡಾಡಿ ಬಿಗುರ್ತುತಂಬುಲಕೆ ಬಾಯಾಂಪಂದದಿಂ ಬಂದು ಪಾ
ಯ್ವುವು ಕೀರಾಳಿಗಳಲ್ಲಿ ಪಾಮರವಧೂಬಿಂಬಾಧರಕ್ಕಾವಗಂ       ೨೯

ವ : ಮತ್ತಮೊಂದೆಡೆಯೊಳ್ ತುಂಬಿಬೆಳೆದ ಪೊಂಬೆಳೆವದದ ಗದ್ದೆಗಳ ಮಡಿಯ ತಡಿವಿಡಿದು ಪರಿವ ಪರಿಕಾಲ್ಗಳ ಪಕ್ಕಂಬಿಡಿದು ಕಿಕ್ಕಿಱಿಗಿಱಿದು ಪೊಂಗೇದಗೆಯ ಬಾಳ್ವೇಲಿಗಳ ಕೆಲ್ಲೆಯೊಳಲ್ಲಲ್ಲಿ ಪಲ್ಲವಿಸಿದ ಸುರಹೊನ್ನೆಯ ತಣ್ಣೆಳಲ ಕೆಳಗೆ ಸಂಚಿಸಿದುಂಚಮಾದ ಮಂಚಿಕೆಗಳ ಮೇಲೆ

ಸಮುದಗ್ರಾಟೋಪದಿಂ ಗೋಪಿಯರರಗಿಳಿಯಂ ಬೆರ್ಚಿಸಲ್ಕೆಂದು ನಿಂದು
ದ್ಗಮಬಾಣಂ ಬಾಪುಬಾಪೆಂದೆನೆ ಪದಮಿಡಿವಿಲ್ಲಿಂ ತಗುಳ್ದೆಚ್ಚೊಡುಚ್ಚ
ಕ್ರಮದಿಂ ಪಾಯ್ವಿಂದ್ರನೀಲೋಪಲ ಘಟಿಕೆಗಳೆಂಬಂತಿರತ್ತಿತ್ತ ಮತ್ತ
ಭ್ರಮರಂಗಳ್ ಪಾಱೆ ಕಮ್ಮಂಗಳವೆಯ ಮಡಿಯೊಳ್ ಗಾಡಿವೆತ್ತಾಡುತಿರ್ಕುಂ ೩೦

ಅರಗಿಳಿವಿಂಡು ಪಾಯೆ ನಸುಸೋಕಿಂದೆಱಂಕೆಯ ಗಾಳಿಗೊಂದನೊಂ
ದೊರಸಿ ನಿರಂತರಂ ಸುರಿವ ನುಣ್ದೆನೆ ಕಾಲ್ಗಳ ಧಾರೆಗೊಡ್ಡಿ ಚಂ
ಚುರ ನಿಜಚಂಚುವಿಂ ಸವಿದು ಸಂತಸದಿಂದೆರಡಕ್ಕೆ ಪಿಗ್ಗಿ ಮಂ
ಧರಗತಿಯಿಂ ಮರಲ್ದು ಸುಳಿದಾಡುಗುಮಲ್ಲಿ ಮರಾಳಮಂಡಲಂ  ೩೧

ಕರ್ಚಿ ಸವಿನೋಡಿ ನಲ್ಲ
ಳಿಚ್ಚೆಯನಱಿದಱಿದು ನೀಡಿ ಪಾಲ್ದೆನೆ ಗುಟುಕಂ
ಬಿಚ್ಚತಮೀವರೆ ಗಿಳಿಗಳ್
ಬೆಚ್ಚನೆ ಬೆರ್ಚಿಸುವುವಲ್ಲಿ ಪಥಿಕರ ಮನಮಂ    ೩೨

ವ : ಮತ್ತಮಾ ನಾಡ ನಾಲ್ವಟ್ಟೆಯೊಳಲ್ಲಲ್ಲಿ ಫುಲ್ಲಶರಧರಾವಲ್ಲಭಂಗೆ ಶುಕಪಿಕ ಶಿಖಾವಳ ಮರಾಳಾದಿ ಚತುರಂಗಬಲಮಂ ತೋಱಲೆಂದು ಪಾಡಲೆಂದು ಪಾಡಿವಳನಾದ ವಸಂತಂ ಸವೆದ ತವಂಗದಂತೆ ತೆವರೊಳವಿರಳಮಾದರವಂಟಿಗೆ ದಾಣಂಗಳೊಳ್ ಸ್ತನಕಳಶಕ್ಕೆ ಪೊಂಗಳಸಮಂ ಪಡಿಯೆತ್ತುವ ತೋಳಧಾರೆ ತಾನೆನೆ ಕರವಾಳಧಾರೆಯೆನೆ ಧಾರೆಗೆ ಕೆಯ್ಗಳನೊಡ್ಡಿ ತಮ್ಮ ಜವ್ವನವನೆ ಕೂರ್ತು ಧಾರೆಯೆಱೆವಿಷ್ಟ ಫಲಂಗಳನಿತ್ತು ತನ್ಮಹಾ ಜನಪದದೊಳ್ ಪ್ರಪಾವನಿತೆಯರ್ ಪಡೆವರ್ ಪಥಿಕಪ್ರಮೋದಮಂ            ೩೩

ತವೆತೃಷೆ ಪಿಂಗೆ ಪೋಪನಿವನೆಂದುಮವಳ್ಕರವಾರಿ ತೀರೆ ಪಿಂ
ಗುವಳಿವಳೆಂದುಮಾ ಪಥಕನೊಯ್ಯನೆ ಕೂರ್ತೆಱಿವೀಂಟುವಿಚ್ಚೆಗಂ
ಡವಸರಮಿಂತಿದೆಂದಲರ ಮುಮ್ಮೊನೆ ಬೊಳೆಯನಾಯ್ದು ಕಾಯ್ದು ಕೊ
ಲ್ಸವಗಣೆಗಾಣಲಾರ್ದೆಸುವನಂಗಜನಿರ್ವರನೊಂದೆ ಬಾಣದಿಂ        ೩೪

ವ : ಮತ್ತಮಾ ಮಹಿಯೊಳ್ ಮನೋಜರಾಜನೆಂಬೊ ತನುಜನೋಜೆಯಿಂ ಪೂಗಣೆಯ ಗಳೆಯೊಳಳೆದು ಪವಣಿಸಿ ನವಿಲ್ಪಾರುವಳವಿಯೊಳಳವಡಿಸಿ ಕಟ್ಟಿದೂರೂರ್ಗಳ ಸೀಮೆಯೊಳ್ ತೀವಿದ ಜೀವಧನಧಾನ್ಯಸಮೃದ್ದಿಗಳನೀಕ್ಷಿಸು ವಿಕ್ಷುಚಾಪವಧೂಟಿಯ ಕಟಾಕ್ಷದಂತೆ ಕಮನೀಯಮಾದ ತಟಾಕಂಗಳಾಧಾರಮಾಗಿ ನಿಡುವುರ್ವಿನಂತೆ ಪರ್ವಿದ ಪಿರಿಯೇರಿಗಳ ಕೆಳಗೆ

ಕವಿದು ಕವಲ್ತು ತಳ್ತ ಮರದೊಂಗಲ ಕೀಳ್ಕೆಲದೊಳ್ ಪೊದಳ್ದು ಕೋ
ಡುವ ಪರಿಕಾಲ್ಗಳಿರ್ತಡಿಯ ತಣ್ಪುಳಿಲಿಂಬಿನೊಳಿಚ್ಚೆವೇಟಮಂ
ಸವಿಯದೆ ಪೋಪ ಬಟ್ಟೆಗರ ಪೊಳ್ಳೆರ್ದೆ ಪವ್ವನೆ ಪಾರೆ ಕೂಡೆ ಪಾ
ಡುವವೆಳದುಂಬಿ ಬೆಂಬಿಡದೆ ಕಾವನ ಕರ್ವಿನ ಬಿಲ್ಲ ಬಿಂಕಮಂ         ೩೫

ಬಳ್ವಳಬಳೆದೆಳಲತೆಗಳ್
ಬಾಳ್ವೇಲಿಯ ಕೆಲದೊಳಲೆದು ಬೇಟದ ಬಿಣ್ಪಿಂ
ಬೀಳ್ವೆಳವೆಂಡಿರ ಮನಮಂ
ಪೋಳ್ವರಗಿಳಿವುಲಿಗಳಸದಳಂ ಬನಬನದೊಳ್   ೩೬

ಪಲಸಿನ ಪಂಕ್ತಿ ಚಂದನದ ಸಂದಣಿ ಬಾಳೆಗಳೋಳಿ ಮಾವಿನ
ವಲಿ ನನೆಯೋದ ಪಾದರಿಯ ಬೀದಿ ಲವಂಗದ ಪೊಂಗು ನೀಳ್ದ ನೆ
ಯ್ದಿಲ ಪೊಲನಬ್ಜದಾಗರವಶೋಕದನೀಕಿನಿಯಾಱಿಯೋಳಿ ಕ
ತ್ತಳಿಪೆಲೆವಳ್ಳಿ ಮಲ್ಲಿಗೆಯ ವಲ್ಲರಿ ಚೆಲ್ವೆಸೆದಿರ್ಪುದೆತ್ತಲುಂ        ೩೭

ರೂಢಿಸಿದ ಪಲಸಿನೊಳ್ ಪ
ಣ್ಮೂಡಲ್ ಮದ್ದಳೆಯನೊತ್ತೆಗೊಂಡವೊಲಿದೆ ಕಂ
ಡೋಡಿಸಿ ನಗುವಂತೆಸೆವುವು
ದಾಡಿಮಗಳ್ ಬಿರಿದ ಬೀಡೆವಣ್ ಬನಬನದೊಳ್           ೩೮

ಮಿಸುಪ ಕೊಳಂ ಕೊಳಂಗಳೆಡೆಯೊಳ್ ಬಿರಿದಂಬುಜವಂಬುಜಂಗಳೊಳ್
ಮುಸುಱಿದ ತುಂಬಿ ತುಂಬಿಗಳನೋವದೆ ಸೋವೆಲದೊಳ್ಳೆಲರ್ಗೆ ಕಂ
ಪಿಸುವ ಲತಾಗೃಹಂ ನವಲತಾಗೃಹದೊಳ್ ಸೊಗಮಿರ್ಪ ಭೋಗಿವಾ
ನಸರೆಸೆದಿರ್ಪರಾ ವನದೊಳೇವೊಗಳ್ವೆಂ ತದಿಳಾವಿಳಾಸಮಂ           ೩೯

ಆ ವನಮಧ್ಯದೊಳ್ ಪಥಿಕದಂಪತಿಗಳ್ ತಲೆಯಂ ಪಳಂಚುವಿ
ಮ್ಮಾವಿನ ಪಣ್ಗಳಂ ಸವಿದು ಸಯ್ಪನೆ ಸೋರ್ವೆಳನೀರನೀಂಟಿ ನೀ
ರ್ವೂವಿನ ಗಾಳಿ ತಣ್ಪಲೆಯೆ ತಳ್ತ ತಮಾಳ ಲತಾವಿತಾನದೊಳ್
ತಾವಿರೆ ಕೂರ್ತು ಸಾರ್ಗುಮೆ ರತಶ್ರಮಮಲ್ಲದೆ ಪೇಳ್ ಪಥಶ್ರಮಂ ೪೦

ಬಗ್ಗಿಪ ಕಳಕಂಠಂ ಬರಿ
ಮೊಗ್ಗೆಯ ಬಂಡುಂಡು ನಲಿವ ಪೆಣ್ದುಂಬಿ ಸಮಂ
ತಗ್ಗಳಿಸಿ ಗಳಪುವರಗಿಳಿ
ಸುಗ್ಗಿಯ ಸಿರಿಯೊದವನಾವಗಂ ಬಿತ್ತರಿಕುಂ      ೪೧

ನೆರೆದ ಬನಂಗಳೊಳ್ ಪಿಕದ ಬಗ್ಗಳೆ ಪರ್ವಿದ ಪೂಗೊಳಂಗಳೊಳ್
ತಿರುಗುವ ತೊಂಡುದುಂಬಿಗಳ ಪಲ್ಮೊರಪಂ ಪೊಲಗೆಯ್ಗಳೊಳ್ ಪೊದ
ಳ್ದರಗಿಳಿಯಬ್ಬರಂ ತಗುಳೆ ಬಂದ ವಿಯೋಗಿಜನಕ್ಕೆ ನಾಡೆ ನಿಂ
ದಿರಲೆಡೆಯಲ್ಲದಿರ್ದುಮೆಲೆ ಸರ್ವಸುಖಕ್ಕೆಡೆಯಾದುದಾ ನೆಲಂ     ೪೨

ಪರಿಮಳದಿಂ ನಿಜಕುಂತಳ
ಭರಮಂ ಪೊರೆಯೆಂಬರಲ್ಲದೊರ್ವರನೊರ್ವರ್
ಪೊರೆಯೆಂಬವರಿಲ್ಲಲ್ಲಿಯ
ನರನಾರೀಜನದೊಳಿನ್ನದೆನ್ನದೋ ದೇಶಂ        ೪೩

ವನಮಿಲ್ಲದೂರ್ಗಳೆಳೆ ಜ
ವ್ವನಮಿಲ್ಲದ ಪೆಣ್ಗಳಾವಗಂ ತೀವಿದ ಗೋ
ಧನಮಿಲ್ಲದ ಪಟ್ಟಿ ಯಶೋ
ಧನಮಿಲ್ಲದ ಜನಸಮೂಹಮಿಲ್ಲಾ ನಾಡೊಳ್ ೪೪

ಶರಕಟಕಾವೃತ್ತಿಭೃತ ಮಧು
ಕರ ಮಾತಂಗಪ್ರವರ್ತನಂ ಸತ್ಪಥ ಭೀ
ಕರಕಂಟಕ ವಂಶೋನ್ನತಿ
ಪರಿಭಾವಿಪೊಡಿಲ್ಲ ನಗದೊಳಲ್ಲದೆ ನಾಡೊಳ್            ೪೫

ಪಿಡಿಕಟ್ಟಾಱಡಿ ತೊಂಡುಬಂಡು ಮೊಱೆಪೊಕ್ಕೇಱೂಯಿಲಂ ಚೌರ್ಯಮೆಂ
ಬೊಡವೆಂದುಂ ತಲೆದೋಱವೇಱೆವೆಳಗುಂ ಭೂಭೂಮಿಪರ್ ಧರ್ಮದಿಂ
ನಡೆವರ್ ನಚ್ಚಿನ ಜೈನಧರ್ಮಮೆ ವಲಂ ಧರ್ಮಂ ದಲೆಂದಾಗಳಿ
ನ್ನೆಡೆವಾತೇಂ ಕಡೆಗಾವ ನಾಡೊ ಪಡೆದತ್ತಾ ದೇಶದಾದೇಶಮಂ      ೪೬

ಆ ಕಡುಪೆಂಪನಾಂತು ನಿಜನಂದನ ಬಂಧುರ ಗಂಧಪುಷ್ಪಮಾ
ಲಾಕುಳ ಷಟ್ಟದಾಳಿ ಕುರುಳೋಳಿಗಳಂತೆ ಬೆಡಂಗನೀಯೆ ಶೋ
ಭಾಕರಮಾದ ತದ್ವಿಷಯ ವಲ್ಲಭೆಗಂಗಜರಾಜನಿತ್ತು ಚೂ
ಡಾಕಮನೀಯ ರತ್ನಮೆನೆ ರತ್ನಪುರಂ ಕರಮೊಪ್ಪಿ ತೋಱುಗುಂ     ೪೭

ತಳಿಯೊಳ್ ಪೋರ್ವ ಮದಾಂಧಸಿಂಧುರಚಯಂ ವಾಹ್ಯಾಳಿಗೈತರ್ಪ ಶೂ
ಕಳವಾಹಾವಳಿ ಕೆಯ್ದುವಿನ್ನಣದ ಕೂರ್ಪಂ ತೋರ್ಪ ಬಲ್ಲಾಳ್ಗಳಿ
ಕ್ಕುಳದಂಡಕ್ಖಡದೊಳ್ ಕಡಂಗಿ ಪಿಡಿದೌಂಕಲ್ ಬಲ್ಲ ಮಲ್ಲರ್ ಮನಂ
ಗೊಳಿಕುಂ ತನ್ನಗರೀಬಹಿಃಪುರವನಪ್ರಾಂತಪ್ರದೇಶಂಗಳೊಳ್          ೪೮

ವ : ಮತ್ತಮಲ್ಲಿ

ಪೂವಿನ ಬಂಡನುಂಡು ನಲಿದಾಡುವ ಪಾಡುವ ತುಂಬಿ ತಳ್ತ ಪೊಂ
ದಾವರೆಯಕ್ಕಿಯಂ ಬಯಸಿ ನೋಡುವ ಕೂಡುವ ಜಕ್ಕವಕ್ಕಿಯಿ
ಮ್ಮಾವಿನ ಬಿಂಕಮಂ ಬಿರಯಿಗಗ್ಗಿಪ ಬಗ್ಗಿಪ ಕೋಕಿಲಂ ತಗು
ಳ್ದಾವಗಮಿರ್ಪುವಾ ಪೊಳಲ ಪೆಂಪಿನ ಸೊಂಪಿನ ನಂದನಂಗಳೊಳ್   ೪೯

ಭಾವಜನ ಬೇಂಟೆಯಂ ಮಧು
ಭಾವಿಸಿ ಕಳಕಂಠಕಂಠ ಘಂಟಾನಿನದಂ
ತೀವಿರೆ ಬಳಿವಳಿಯೊಳ್ ಕೈ
ದೀವಿಗೆವಿಡಿದಂತೆ ಪೂತ ಚಂಪಕಮೆಸೆಗುಂ         ೫೦

ರಸಮುಂ ಕಂಪುಂ ಕನಕದೊ
ಳೆಸೆದಿವೆಂಬವರ ಮಾತನಲ್ಲಿಯ ಬನದೊಳ್
ಪುಸಿಮಾಡುವವೋಲಂತಿರೆ
ರಸಮಾದುಫಲಂಗಳಮರ್ದ ರಸಪರಿಮಳದಿಂ    ೫೧

ಎಣಿಪೆಂದೆಮ್ಮ ಯದೊಂದೆ ಕೋರಕಮೆ ನಿನ್ನೀ ಕೋಕಿಲಾನೀಕಮಂ
ಪೆಣೆದಿರ್ದೆಮ್ಮಯದೊಂದೆ ಪೂಗುಡಿಯೆ ನಿನ್ನೀ ತುಂಬಿವಿಂಡಂ ರಸೋ
ಲ್ಬಣಮಾದೆಮ್ಮಯದೊಂದೆ ಪಣ್ಣೆ ಗಡ ನಿನ್ನೀ ಕೀರಸಂದೋಹಮಂ
ತಣಿಪಲ್ ಸಾಲ್ಗುಮೆನುತ್ತೆ ಕಾಮನಿದಿರೊಳ್ ಕೈದೊರ್ಪುವಿಮ್ಮಾವುಗಳ್      ೫೨

ಈಳೆಯ ಬಾಳೆಯ ಬಕ್ಕೆಯ
ದಾಳಿಂಬದ ನಾಳಿಕೇರದಡಕೆಯ ಪೊಸಪೇ
ರೀಳೆಯ ನಿಂಬೆಯ ಜಂಬುವಿ
ನೋಳಿಗಳೋರಣದೊಳೋಲಗಂಗೊಟ್ಟೆಸೆಗುಂ ೫೩

ನಸುವಿರಿದಿರ್ದ ಪದ್ಮವನದೊಳ್ ನಲಿವಂಚೆಗಳಿಂ ಕಱಂಗಿ ಕ
ಣ್ಗೆಸೆವುದು ಕೈರವಾಕರದೊಳೊಂದಿದ ತುಂಬಿಗಳಿಂ ರಸಾಲದೊಳ್
ಪೊಸ ತನಿವಣ್ಗಳಂ ಸವಿದು ರಾಗಿಪ ರಾಜಶಂಕುಗಳಿಂ ನಿರೀ
ಕ್ಷಿಸೆ ಸೆಱೆಗೆಯ್ವುದೊರ್ಮೊದಲೊಳಾ ವನಮಾವನ ಲೋಚನಂಗಳಂ            ೫೪

ಸುರಿವ ಮಕರಂದ ರಜದೊಳ್
ಪೊರಳ್ವ ನಿಜವಧುವನಾತ್ಮವಧುವೆಂದೆ ಮರ
ಲ್ದುರವಣಿಪ ಜಕ್ಕವಕ್ಕಿಯ
ನರಸಂಚೆಗಳಟ್ಟಿ ಪುರುಡಿಕುಂ ಪೂಗೊಳದೊಳ್  ೫೫

ಸೀಪೊದವಿದ ನುಣ್ಗೊನೆಯಂ
ತೂಪ ರಸದ್ರಾಕ್ಷೆಗೆಸೆವಕುಸುಮದ ರಜದಿಂ
ಕಾಪುವರೆದೊಸರ್ವ ಸೊನೆಯಿಂ
ತೂಪಿಱಿವ ರಸಾಲಲತೆಗಳೇನೊಪ್ಪಿಪದುವೋ  ೫೬

ಭುವನದೊಳೆನ್ನನೇಳಿಪರ ಬೆಟ್ಟಿರ್ದೆ ಕಟ್ಟೊಡೆವಂತಿರೆಸಲಿ
ನ್ನವಸರಕಿಂದೆ ಬರ್ಪುದೆನುತಂಗಜನಟ್ಟಿದನೆಂದು ತುಂಬಿಗಳ್
ತವಕದಿನೂಱೆ ಸಾಱಿ ಪಸುರ್ಮಿಟ್ಟೆ ಪೊಟ್ಟೆಯನಲ್ಲಿ ಪೊತ್ತು ಬಂ
ದವೊಲೆಳೆಗೌಂಗು ಕಣ್ಗೊಳಿಸಿ ತೋರ್ಪುವು ಬಿಣ್ಗೊಲೆವೇಱಿಸಂತತಂ           ೫೭

ಕಳಕಂಠ ದುಂದುಭಿಧ್ವನಿ
ಬಳಸಿರೆ ವನರಾಜಿ ಪಟ್ಟದಭೀಷೇಕಕ್ಕೆಂ
ದಿಳೆ ಪಲವುಂ ಕೆಯ್ಯೊಳ್ ಪೊಂ
ಗಳಸಂಬಿಡಿದಂತೆ ತೆಂಗುಗಳ್ ಕಣ್ಗೊಳಿಕುಂ       ೫೮

ಮತ್ತಲ್ಲಿ ಪುರದ ವನಿತೆಯ
ರೊತ್ತಂಬದ ಸುಸಿಲ ಮಸಕದಿಂ ನೆರೆದೆಡೆಯೊಳ್
ಬಿತ್ತರದಿನುದಿರ್ದು ಪರೆದಿರೆ
ಮುತ್ತವವಳಿವಿಂಡು ಮುಡಿಯ ಪುಡಿಗತ್ತುರಿಯಿಂ           ೫೯

ಅಳವಿಗಳಿದಚ್ಚವೇಟದ
ಬೆಳವಿಗೆಯೊಡನೊಡನೆ ಪುರುಡು ಬಳೆದಿರೆ ಕಾಯ್ಪಿಂ
ದೊಳಗೊಳಗೆ ಬಯ್ದು ಬಗ್ಗಿಸಿ
ತಿಳಿಪುವುವರಗಿಳಿಗಳಲ್ಲಿ ನಲ್ಲರ ಮುಳಿಸಂ       ೬೦

ಮಿಱುಗುವ ತನ್ನ ಪೂಗಣೆಗಳೆಚ್ಚೆಡೆಯೊಳ್ ಪರಿವಲ್ಲಿ ಸಂದೆಗಂ
ಪಱಿಪಡುವಂತು ನುಣ್ಗಱಿಗಳಿಂ ಗಱಿಗಟ್ಟಿಸುವೆನ್ನನಂಗಜಂ
ನೆಱಿಪೊಱಗಿಕ್ಕಿದಂಬಿನದಿನೆಂದುಱೆ ಕಂದು ಕಱುಗಿದಂತೆ ಕಿ
ಕ್ಕಿಱಿಗಿಱಿದಿರ್ಪುವಾ ನವದ ಕೇದಗೆಗಳ್ ಸುಳಿಯೇಱಿ ಸುತ್ತಲುಂ    ೬೧

ವ : ಮತ್ತಮಲ್ಲಲ್ಲಿ ಪಲ್ಲವ ಪ್ರಸೂನಫಲಭರದಿನೆಱಗಿ ತುಱುಗಿದಶೋಕೆ ವಕುಳ ಕುರವಕ ಕದಳಿ ಖರ್ಜೂರ ಸರ್ಚಾರ್ಜುನ ಸರಳಕೇಸರ ಶಿರೀಷ ಪನಸ ಪಾಟಳ ಪಟೀರಾದಿ ಮೇದಿನೀರುಹಂಗಳ ತಳದಿನಗ್ರಂಬರಂ ನಿಮಿರ್ದು ಪರ್ವಿ ಪರಕಲಿಪ ಗಂಡುಗೊಂಡು ದಾಂಗುಡಿವಿಡಿದೇಲಾಮಾಲತೀಮಲ್ಲಿಕಾದಿ ನಾನಾ ಲತೆಯ ಕಾವಣಂಗಳೋವರಿ ಯೊಳಾವರಿಸಿದ ಕಪ್ಪುರದ ಪುಳಿನ ತಳದೊಳೇಳೆಲೆವಾಳೆ ಯೆಲೆವಾಸಿನೊಳೆರ್ದೆ ದಣಿಯೆ ಸವಿವ ಸುಸಿಲ ಮಸಕದಿನಸುಱೆಯಾದ ಸುರಮಿಥುನ ದೊಳೊದವಿದ ರತಭೇದಮನಾಱಿಸುವ ಮೆಲ್ಲೆಲರ ತೀಟದಿ ನೊಂದೊಂದನೊಂದೊರಸಿ ಸುರಿವೆಳನೀರ ಪಣ್ಣರಸದ ಪೂವಂಡಿನ ಸೊನೆಯಸೋನೆಗೆ ನಿಲಲಱೆಯದೆ ನೆಗೆದು ಕೃತಕಗಿರಿಯ ಮಣಿಕೂಟದೊಳ್ ಕುಣಿವ ನವಿಲ್ಗಳ ಬಾಂಬರಂ ನೆಗೆದನಟ್ಟೆಗೊಂಬಂ ಮೆಟ್ಟಿ ಕುಕಿಲ್ವ ಕೋಗಿಲೆಗಳ ಪಣ್ಗೊನೆಯ ಬಿಣ್ಪಿಂ ಬಳ್ಳಿಬಾಳ್ವೇಲಿಯ ಕೆಳಗಣ್ಣೆ ಪರಿದಳ್ಳೆ ಗೊಂಬನಿಂಬುಗೊಂಡು ಬಂಡಳಿಪರಗಿಳಿಗಳ ಕನಕ ಕದಳೀದಳದ ಕೆಳಗೆ ತೂಗಾಡುವ ಸೆಳ್ಳೆಗೊಂಬಿನ ತೂಱಲತುದಿಯೊಳಲರ್ದ ಕುಸುಮದೆಸಳ್ವಸೆಯೊಳೆಸೆದು ಪಾಡುವೆಳೆ ದುಂಬಿಗಳ ಪೊಂಗಾವಿನ ತಾವರೆಯ ಕೊಡೆಯೆಲೆಗಳೆಡೆಯೆಡೆಯೊಳೆಡೆ ಯಾಡುವರ ಸಂಚೆಗಳ ಮುದ್ದಿನ ಮುಱುಕೆದಾಡೊಂಬೊಲನಲರಂಬಿನ ನೆಲೆವೀಡು ಬಸಂತನ ಬಂಡಾರಂ ರತಿಯ ನಟನರಂಗಂ ತಂಗಾಳಿಯ ವಾಹ್ಯಾಳಿಯೆಂಬ ಬಿಂಕದಂಕಮಾಲೆಯಂ ಮಱಿದುಂಬಿ ಬಿರಿದೆತ್ತಿ ಪಾಡೆ

ಪೊಗಳಲ್ವೇಡದ ನಿನ್ನದೆನ್ನೊಳೆಣೆಯಾಗಲ್ ತಕ್ಕುದೇ ಚಿಃ ಸುರಾ
ಪಗೆಯೊತ್ತಿಂಗೊಳಗಾದುದೆಂದು ತಳಿರ್ಗೊಂಬೆಂಬಚ್ಚದೋರ್ದಂಡಮಂ
ನೆಗಪುದ್ಯದ್ಗತ ಕೋಕಿಲಾರವದಿ ನಾದಂಬೊಯ್ದರಲ್ದೊಂಗಲಿಂ
ನಗುವಂತಿರ್ಪುದು ನಾಕನಂದನವನಾ ಕೇಳೀವನಂ ಪಾವನಂ ೬೨

ವ : ಆ ಬಹಿರ್ವನದಿನಣಿಯರಮುರ್ವಿ ಪರಿದು ಕಾಳ್ಪುರಮಾಗಿ ತನ್ನೊಳ್ ಪೊಂಗುವ ಪುಷ್ಪರಸದ ತೊಱೆಗಳೊಳ್ ತೇಂಕಿಬಂದ ಮರಾಳ ಸಂಕುಳಮೆಂಬ ಸಂದೆಗದಿಂ ಬಿಂಕಂಬಡೆದು ತಡಿವಿಡಿದು ತುಱುಗಿದಸುಕೆಯ ಕೆಂದಳಿರ ನೆಳಲೆಂಬ ಪವಳವಳ್ಳಿಯಿಂ ಪಸರಂಬಡೆದು ದುಱುದುಂಬಿದುಂಬಿಗಳ ಕಾಲ್ದುಳಿಪದಿಂ ನೀರೊಳಲ್ಲಲ್ಲುಗುವ ಮಲ್ಲಿಗೆಯ ಮುಗುಳ್ಗಳೆಂಬ ಮುತ್ತುಗಳಿಂ ಬಿತ್ತರಂಬಡೆದು

ಕಡಲೆನ್ನನಂದಿನಂದದೆ
ಕಡೆಯದಿರಿನ್ನೆಂದು ಬಂದು ಮಂದರಮಂ ಕಾ
ಲ್ವಿಡಿದಂತೆ ಪೊನ್ನ ಕೋಂಟೆಯ
ನೆಡೆವಱಿಯದೆ ಬಳಸಿ ಪಿರಿಯಗಳ್ ಸೊಗಯಿಸುಗುಂ       ೬೩

ಮಿಳಿರ್ವುತ್ತುಂಗಧ್ವಜಂ ಮಾರ್ಪೊಳೆವ ಜಲಚರವ್ರಾತಮೆಂಬಂತೆ ಪೇರ
ಟ್ಟಳೆಗಳ್ ತಳ್ತೆಳ್ತಲುಂ ಬಿಂಬಿಸೆ ಬಹಳ ಬಹಿತ್ರಾಳಿಯೆಂಬಂತೆ ಕೋಟಾ
ವಳೆಯಪ್ರೋತಪ್ರದೀಪೋಜ್ವಳ ಮಣಿಯೆ ನೆಳಲ್ ಪರ್ವತೌರ್ವಾಗ್ನಿಯಂತಾ
ಗಳುಮಂಭೋರಾಶಿಗೆತ್ತಾರ್ದೆಱದರ್ಪುದದಭ್ರಾಭ್ರಮಭ್ರಾಧ್ವದಿಂದಂ            ೬೭

ವ : ಅಂತು ನಿಸರ್ಗ ದುರ್ಗಮಮಾದ ನೀರ್ಗಾದಿಗೆಯ ಬಳಸಿಂಗೊಳಗಾಗಿ

ಅಕಳಂಕೋಜ್ವಳವಜ್ರನಿರ್ಮಿತ ಕವಾಟಂ ನೀಲರತ್ನಪ್ರಭಾ
ವಿಕಟಾಟ್ಟಾಳಮುದಗ್ರ ಮೌಕ್ತಿಕಮಯೋದ್ಯದ್ಗೋಪುರಂ ಕಣ್ಗೆ ಮಾ
ಣಿಕದಂತೊಪ್ಪಮನಪ್ಪುಕೆಯ್ವ ಮಣಿಕೋಟಾಚಕ್ರಮೋರಂದದಿಂ
ಪ್ರಕಟಂಗೆಯ್ವುದು ತನ್ನ ರನ್ನವೊಳೊಲೆಂಬನ್ಯೂನ ವಿನ್ಯಾಸಮಂ  ೬೫

ತನ್ನಂ ಸಲೆ ಮೆಯ್ಗಾಣದ
ಮುನ್ನಂ ಧರೆಗಿಳಿದುದುರಗಲೋಕಂ ನಾಕಂ
ಬನ್ನದೆ ಬಯಲೊಳ್ ಪಾಱೆದು
ದಿನ್ನುಳಿದ ಪುರಂಗಳಾ ಪುರಕ್ಕೋರಗೆಯೇ        ೬೬

ಇಟ್ಟಳಿಸಿರೆ ಕೋಟೆಯ ಮುಗಿ
ಲಟ್ಟಳೆಗಳ್ ತೆನೆಯ ಸಂದಿಸಂದಿಯೊಳೊಂದೊಂ
ದಟ್ಟುವಳಿಗೊಂಡು ಪಾಯ್ದುವು
ತಟ್ಟದೆ ಮುಟ್ಟದೆ ವಿಮಾನಮಂಬರಚರರಾ     ೬೭

ಆ ಪೊಳಲ ಪೊಳೆವ ರನ್ನದ
ಗೋಪುರದಾದಲೆಯ ನೆಲೆಯೊಳೊಲೆವುಚ್ಚಪತಾ
ಕಾ ಪವನನಲ್ಲದಿರ್ದೊಡ
ದೇಪರಿಯಿಂ ಕಳೆವನರ್ಕನಧ್ವಶ್ರಮಮಂ           ೬೮

ಆ ಗೋಪುರ ದೆಸೆವಂತ
ರ್ಭಾಗದೊಳಿತ್ತರದಿನಮರ್ದು ನೆಲೆಮಾಡದ ಚೆ
ಲ್ವಾಗಸಮನಿಂಬುಗೊಳೆ ಸುಖ
ದಾಗರಮೆನೆ ವಿಪಣಿವೀಥಿ ಸೊಗಯಿಸಿ ತೋರ್ಕುಂ           ೬೯

ಮನೆಮನೆಗೆಯ್ದು ಚೆನ್ನೆಸೆವ ರನ್ನದ ಸೂಸಕಮಿಟ್ಟ ಚೀನಕೇ
ತನಮಳವಟ್ಟ ಪೊಂಗಳಸದೊಳೀ ಮನಂಗೊಳೆ ಬೀದಿಬೀದಿಯೊಳ್
ಕನಕದ ತೋರಣಂ ತಳಿದ ಕತ್ತುರಿನೀರ್ ದೊರೆವೆತ್ತ ತೋರಮು
ತ್ತಿನ ಕಡೆ ಪೂರ್ಣ ಪುಷ್ಪಬಲಿ ಪಿಂಗದೆ ಕಣ್ಗೊಳಿಸಿರ್ಪುದಾವಗಂ       ೭೦

ಬೇಟದ ಬೇಗೆಯಲ್ಲದಱಿಯರ್ ಬಿಸಿಲಿಂ ಮೃದು ತಾಲವೃಂತದೊಳ್
ತೀಟದ ಗಾಳಿಯಲ್ಲದಱಿಯರ್ ಬಿಱುಗಾಳಿಯನೆಂಬ ಪೆರ್ಮೆ ತಾ
ವಾಟದ ಡಂಗುರಂ ನರರ ನಾಲಗೆಯಾದ ನೆಗಳ್ತೆ ಧಾತ್ರಿಯೊಳ್
ನಾಟದುದೆಂದೊಡಾ ಪುರದ ಗೇರಿಯ ನಾರಿಯರೊಳ್ಪದೆಂತುಟೋ  ೭೧

ತ್ರಿಜಗದೊಳಿನ್ನರನ್ನರೆಣೆಯೆಂದಪೆನೆಂದು ವೃಥಾನಿರೋಧದಿಂ
ಗುಜುಗುಜುಗುಟ್ಟಲೇಂ ನೆಗಳ್ದ ತನ್ನವಲೋಕನ ಮಾತ್ರದಿಂ ವೃಷ
ಧ್ವಜನುರಿಗುಣ್ಣ ಕೊಂಡಮೊಳಕೊಂಡರಲಂಬನ ನೆತ್ತಿ ಮತ್ತೆ ಚಿ
ತ್ತಜನೆನಿಸಿಟ್ಟ ಪಾರ್ವತಿಯ ಪಾಟಿಯ ಪೆಂಡಿರೆ ಪೆಂಡಿರಲ್ಲಿಯಾ     ೭೨

ಬಿತ್ತರದ ಪೊದಕೆಗಳ ಬಿಡು
ಮುತ್ತುಗಳಂ ಮೊಗೆದು ಸುರಿದು ಪಾಮರಿಯರ ಪೆ
ರ್ಮುತ್ತಲ್ಲಿವು ವಿನಂಬಸೆ (?)
ಪತ್ತಿದ ಪಣ್ಗೊಳ್ವರಲ್ಲಿ ಪರದರ ಮಕ್ಕಳ್      ೭೩

ಮುತ್ತದಱ ಬೀದಿಯೊಳ್ ಪುಡಿ
ಗತ್ತುರಿಯಂ ಪರಪಿ ಬಾಲಕರ್ ಸುದ್ದಗೆಯಂ
ಬಿತ್ತರದಿಂ ಬರೆದೋದುವ
ರಿತ್ತರದಂಗಡಿಗಳೆಡೆಗಳೋದುವ ಮಠದೊಳ್    ೭೪

ತಾವರೆಯೆಂಬರಿರ್ದು ಮನೆಯಂ ವಿಬುಧರ್ ಕಡುಗೂರ್ತು ವಲ್ಲಭಂ
ಗೋವಳನೊಂದೆ ಪಾಸದುವೆ ಪಾವಿನ ಪುತ್ತದಱಿಂದಮಿನ್ನುಮ
ತ್ತಾವುದುಪಾಯಮೆಂದುಸಿರೆ ನಿಶ್ಚಯದಿಂದವನೆಯ್ದೆ ಬಿಟ್ಟುಬಂ
ದಾವಣಿಗಾಲಯಂಗಳೊಳಹರ್ನಿಶಮಿಪ್ಪಳದೇಂ ವಿದಗ್ಧೆಯೋ       ೭೫

ದೊರೆವಡೆದಿತ್ತರಂಬಿಡಿದ ಕತ್ತುರಿಗಪ್ಪುರದುದ್ದರಾಸಿಗಳ್
ಚರಿಸುವ ವಾರನಾರಿಯರ ಲೋಚನಚಂದ್ರಿಕೆಯಿಂದೊಸರ್ತು ಕಾ
ಳ್ಪುರವರಿವಿಂದುಕಾಂತಮಣಿಕುಟ್ಟಿಮದೊಳ್ ಜಱಿದೆಯ್ದಿ ಜಾಱೆ ಜಾ
ಣರ ಬಗೆಗೊಳ್ಗೆಸರ್ಮಸಗುತಿರ್ಪುದು ಸಂತತಮಾ ವಣಿಕ್ಪಥಂ        ೭೬

ಬಗೆಗೊಳುತಿರ್ಪುವಲ್ಲಿ ಸಿರಿಗಂಪಿನ ಬಲ್ದೊಱೆ ತೊಟ್ಟಿಲಿಟ್ಟು ಪಾ
ಯ್ದಗರುವಿನೇರಿ ಕುಂಕುಮದ ಕತ್ತುರಿ ರನ್ನದ ರಾಸಿ ಪೊನ್ನ ಪುಂ
ಜಿಗೆ ಪೊಸಕಂಚುಮುಟ್ಟುಗಳ ತಿಂತಿಣಿ ಮುಂತಮರ್ದಿರ್ಪ ಬಣ್ಣದ
ಣ್ಣಿಗೆಗೆಡೆಗೊಟ್ಟ ಪಟ್ಟಿಗಳ ದಿಂಡುಗಳಂಗಡಿ ಬೀದಿಬೀದಿಯೊಳ್    ೭೭

ಉಟ್ಟ ತೊವಲೇಕೆ ತೆಗೆ ಹರಿ
ಗಟ್ಟಿದ ಪೀತಾಂಬರಕ್ಕೆ ಪಡಿನೋಡಿ ಪೊಂ
ಬಟ್ಟೆಯನೆಂದೊಲವಿಂ ಮುಂ
ದಿಟ್ಟೀಶನನಲ್ಲಿ ದೂಸಿಗರ್ ಬೇಸಱಿಪರ್       ೭೮

ವ : ಅಂತನರ್ಘ್ಯಾನುಲೇಪನ ಮಣಿಭೂಷಣ ನವ್ಯ ದಿವ್ಯಾಂಬರಂಗಳಿಂದ ಕೆಯ್ಗೆಯ್ದು ಪುರಶ್ರೀಸೀಮಂತಿನಿಯ ಸುಳಿಗುರುಳ್ಗಳೆನೆ ಸುಳಿದಾಡುವ ಮದಾಳಿಗಳೆ ಕಂಪಿನ ಕಾಣ್ಕೆಯಂ ನೀಡುವಂತೆ ಗಾಡಿವಡೆದ ಪೂವಿನ ಸಂದಣಿಗಳೊಳ್

ನಯನಮರೀಚಿಗಳ್ ಪುದಿಯೆ ನೀಲದ ಮಾಲೆಗಳಂತೆ ಕೆಯ್ಯ ಕಾಂ
ತಿಯ ಪುದುವಿಂದೆ ಮಾಣಿಕದ ಮಾಲೆಗಳಂತಿರೆ ನಿಚ್ಚಮಚ್ಚ ಜಾ
ದಿಯ ಪೊಸಮಾಲೆಗಳ್ವಿಡಿದು ಮಾಱುವ ನೀಱೆಯನಲ್ಲಿ ಮಾಲೆಗಾ
ರ್ತಿಯೊ ಮಣಿಗಾರ್ತಿಯೋ ಎನುತೆ ನೋಳ್ಪುದು ವಿಸ್ಮಯಭಾಜನಂ ಜನಂ     ೭೯

ಕಡು ನಿಡುಗಂಗಳಂಗಜನ ಕೀರ್ತಿಪತಾಕೆಯನೆತ್ತೆ ನೆಟ್ಟನೊ
ಳ್ನಡು ನಿಡುವಾಸೆಯೊಳ್ ಪುದಿದ ಮೆಯ್ಸಿರಿಯಂ ಪಿಡಿದೆತ್ತಿ ಪೊಂಗಿ ಪೊಂ
ಗೊಡಮೊಲೆ ಮೇಲುದಂ ಭರದಿನೆತ್ತ ಮಾಲೆಯೆತ್ತಿ ಕೆ
ಯ್ಯೊಡನಗೆಯೆತ್ತುವರ್ ವಿಟರ ಬಿಂಕಮನಂಕದ ಮಾಲೆಗಾರ್ತಿಯರ್            ೮೦