ಸ್ವಾಗತಂ

ನಾರಿಕೇಳಮೆಸೆಗುಂ ಫಳಾಳಿಯಿಂ
ನಾರಿಕೇಳ ನೆಗಳ್ದೆಮ್ಮೊಳೊಪ್ಪುವಿ
ನ್ನೀರದಾವಸವಿ ನೋಡಿಮೆಂದಣಂ
ನೀರದಾವಳಿಗೆ ನೀಡುವಂದದಿಂ          ೫೭

ಪೊಂಬಣ್ಣಮನೇಳಿಪ ಪೊಸ
ಪೊಂಬಣ್ಣಮರಾಧ್ವಮಂ ಪುದುಂಗೊಳೆ ನೆಗಳ್ದೀ
ಜಂಬೀರಮನೆಯ್ದಿ ಮನೋ
ಜಂಬೀರಮನೆಯ್ದಿ ಪಾಡಿಪಂ ಪಱಮೆಗಳಿಂ       ೫೮

ಕೆಂಬರಲ್ಗೆಣೆಮಾಡುವರೇ
ಕೆಂಬ ರಸಂಬಡೆದು ರಂಜಿಪೊಳ್ವಿತ್ತಿನ ದಾ
ಳಿಂಬದ ಬನದ ಶುಕಾಳಿಗ
ಳಿಂ ಬದವಣ್ಗೆಱಗಿ ತುಱುಗಿದುವು ನೋಡಬಲೇ ೫೯

ಪಲಸಿನ ತನಿವಣ್ಗ ಳ ಕಂ
ಪಲಸಿಕೆಯಂ ಪಡೆಯೆ ಪರಿದು ಮಧುಪಾವಳಿಗಳ್
ಕೆಲದಿಮ್ಮಾವಿನ ಬನದೊಳ್
ಕೆಲದಿಂದೀಂಟಿದುವದೆಸುವ ಕುಸುಮಾಸವಮಂ  ೬೦

ಕಾವನೆ ಕಡುಪಿಂ ತಂಮಂ
ಕಾವನೆನಲ್ ಕೊರ್ವಿ ಕೊಂಬುಗೊಂಡು ಮಡಲ್ತಿ
ಮ್ಮಾವುಗಳಂ ವಿರಹಿಗಳ
ಮ್ಮಾವುಳೆಂದಲ್ಲಿ ಬೆಚ್ಚುವರ್ ಮೃಗನಯನೇ  ೬೧

ತರಲಂಬಿಂಗಿದಱವೊಲಿಂ
ತರಲಂ ಬಿಂಕದೊಳೆ ತಳೆದುದಾವುದೆನುತ್ತೈ
ಸರಲನತಿಪ್ರಿಯದಿಂ ಕೇ
ಸರ ಲಲಿತ ಸ್ತಬಕಮಂ ಮನಂಗೊಳೆ ನೋಳ್ವಂ   ೬೨

ಮಂಗಳಮೆನೆ ಬನದೊಳ್ ಕಾ
ಮಂಗಳವಂ ಕುಡುವ ತಿಲಕಮಲೆದಲರ್ಗುಡಿಯಿಂ
ತಿಂಗಳ ತನಿವೆಳಗಂ ಮ
ತ್ತಿಂಗಳದಂತೇಕೆ ಸುಡುವುದೋ ವಿರಹಿಗಳಂ      ೬೩

ಪಗೆಗೊಂಡು ಬಿಸುಟು ಪೊಸ ಸಂ
ಪಗೆಗಳನಾಱಡಿಯ ಪಾಱುದುಂಬಿಗಳೆಮ್ಮ
ಲ್ಲಿಗೆ ಬಂದುವೆಂದವಂ ಮ
ಲ್ಲಿಗೆ ನಗುವಂತಿರೆ ಲತಾಂಗಿ ಬಿರಿಮೊಗ್ಗೆಗಳಿಂ    ೬೪

ಕಾದಲರಂದದಿನಳಿಗಳ್
ಕಾದಲರಂ ಮುತ್ತಿ ಮುಸುಱಿಕೊಂಡಿರ್ದೊಡಮೀ
ಪಾದರಿಯ ಪಾಯ್ವ ಮೆಯ್ಗಂ
ಪಾದರಿಸಲ್ ತಕ್ಕುದಾಯ್ತು ನೋಡಬ್ಜಮುಖೀ            ೬೫

ತೀರದ ಚೆಲ್ವಾವರಿಸಲ್
ತೀರಿದಳಲ್ ಮಲ್ಲಿಕಾದಿ ವಲ್ಲರಿಯಿಂದೀ
ಸಾರಸವನಮೇನೆಸೆದುದೊ
ಸಾರಸ ಸರಸಾರವಾವೃತಾಶಾವಲಯಂ           ೬೬

ತಾಮರೆ ಪರಿಕಿಸೆ ಚೆಲ್ವಿಂ
ತಾಮರೆಯಾಗಿರ್ದುಮಿರುಳುಮಲರ್ವೀ ಮೊಗದೊಳ್
ಕಾಮಿನಿ ಸೆಣಸುವವಕಟಂ
ಕಾಮಿನಿ ತಕ್ಕಱಿಯವೇ ನಿಜಾಭ್ಯಂತರಮಂ       ೬೭

ನವನಳಿನಾನನೆ ಕೊಳಗಳ
ನವನಲಸದೆ ಬಳಸಿ ತಳೆದು ತುಂತುರ್ವನಿಯಿಂ
ಪವನನಿದೆ ಬಂದುದೀಗಳ್
ಪವನ ನವಪ್ರಸವ ಪರಿಮಳಾಮೋದಭರಂ        ೬೮

ಸರ್ವರ್ತುಕಮೆನುತೊಲವಿಂ
ಸರ್ವರ್ತುತಿಸಲ್ಕೆ ಪೊಕ್ಕು ಬನಮಂ ಸವಿವೇ
ಕರ್ವಿನಯದೆ ಜಿನಮುನಿಗಳ್
ಕರ್ವಿನಬಿಲ್ಲವನ ಬಿಂಕಮಂ ಮಾಣಿಸಿದರ್        ೬೯

ದೆಸೆದೆಸೆಯಂ ಪಳಂಚಲೆದು ಕಾಳ್ಪುರಮಾಗಿ ಕವಲ್ತು ಭೂಮಿ ಭೃ
ದ್ವಿಸರದನೇಕವಾಹಿನಿಗಳುಬ್ಬರದಿಂ ಪರಿಪೂರ್ಣಮಾಗಿ ಘೂ
ರ್ಣಿಸುತೆ ಮದೀಯ ಸೈನ್ಯಜಲರಾಸಿಯ ಪೆರ್ದೆರೆಯಂ ತೆರಳ್ದ ಪಾ
ವಸೆಯೆನಿಪೀ ವನಂ ಕರಮೆ ಪಾವನಮಾಯ್ತು ಮುನಿಪ್ರವೇಶದಿಂ     ೭೦

ಚನ್ನೆ ನಡೆನೋಡ ಬನಮಿದು
ಸನ್ನುತ ಸಮವಿಭವದಿಂ ಮನಂಗೊಂಡುದು ತ
ಳ್ತೆನ್ನನಿದಿರ್ಗೊಂಬವೋಲ್ ನಿಜ
ಪುನ್ನಾಗ ಸ್ಯಂದನೋಚ್ಚಲದ್ವಾಜಿಗಳಿಂ          ೭೧

ಎಳದಳಿರಭಿನಯಮಲರ್ಗಂ
ಗಳ ನೋಟಂ ದೆಸೆವೆತ್ತಿರಲ್ ತಾಳದ ಮೆ
ಯ್ವಳಿಯೊಳ್ ತೆಂಬೆಲರಾಡಿಸ
ಲಳವಟ್ಟುದು ನರ್ತನಂ ಲತಾತನ್ವಿಯರಾ        ೭೨

ಲತೆಗಳ್ ನರ್ತಿಸೆ ತುಂಬಿವಿಂಡುಗಳಲಂಪಿಂ ಪಾಡೆ ಕೀರಾಳಿ ಸ
ನ್ನುತಿಗೆಯಲ್ ಕಳಕಂಠ ಕಂಠರವದಿಂ ಮಾತಾಡಿಸುತ್ತತ್ತಲ
ಕ್ಷತಗಂಧ ಪ್ರಸವಂಗಳಿಂ ತಳೆದು ತಾನೆಯ್ತಂದುದೆಮ್ಮಿಂ ಸಮು
ನ್ನತಿಗಾನಂದದಿನಾರುತಂ ಮುನಿಪ ಸದ್ಗೋಪೀರುತಂ ಮಾರುತಂ   ೭೩

ಎನಸುಮಶೋಕನೆತ್ತಿದನರಲ್ಗುಡಿಯಂ ನಲವಿಂದೆ ಬಂದು ಸೈ
ಕನೆ ಸಹಕಾರನೆಳ್ದು ಸೊನೆನೀರ್ದಳಿದಂ ಪುಳಕಾಂಕುರಂ ಪೊದ
ಳ್ದನುವಿಸೆ ಮಾಧವಂ ನೆಗಳ್ದ ಮಾಧವಿ ಪೂವಲಿಗೆಯ್ದಳೆಯ್ದೆ ಚಂ
ದನ ತಿಲಕಂಗಳಂ ಪಿಡಿದು ಮಾಲತಿಮಲ್ಲಿಗೆ ಮುಂದೆ ನಿಲ್ವಿನಂ       ೭೪

ವ : ಎಂದರಸನರಸಿಗೆ ಶುಭಸೂಸಕಂಗಳಾದ ವಚನವಿಲಾಸಂಗಳಂ ತೋಱಿಸುತ್ತೆ ಬಂದು ಗಂಧಸಿಂಧುರಸ್ಕಂಧದಿಂದಿಳಿವಾ ಸಮುಚಿತ ಪರಿಜನಂ ಬೆರಸನವದ್ಯ ಯಾನನುದ್ಯಾನಮಂ ಪೊಕ್ಕಾಗಳ್

ಮೇಳಿಸಿ ಮುಂದೆ ಕೋಗಿಲೆಗಳಬ್ಬರಮುಬ್ಬರಮಾಗೆ ಬರ್ಪ ಭೂ
ಪಾಳ ಪುರಂದರಂಗಿದಿರೊಳೇಂ ಬಗೆಗೊಂಡುದೊ ರಾಜಲೀಲೆಯಂ
ಪಾಳಿಸಿಪಾಯ್ವ ಸೋಗೆಗಳ ಸೋಗೆಯ ಸೀಗುರಿಯೋಳಿವೆತ್ತ ಪೊಂ
ಬಾಳೆಯ ಚಾಮರಂತರದೆ ತಳ್ತ ತಮಾಳದ ಮೇಘಡಂಬರಂ           ೭೫

ವ : ಅಂತು ಗುರುಜನದರ್ಶನೋತ್ಸುಕತೆಯಿನುಚ್ಚಾರಿತ ಸಕಲರಾಜಚಿಹ್ನನಾಗಿ ಮಹಾಸೇನ ಮಹಾರಾಜಂ ವನರಾಜಚಿಹ್ನಮನಪ್ಪುಕೆಯ್ದು ಬರೆವರೆ

ಪಳುಕಿನ ನೀಳ್ದ ಪಾಸಱೆ ನಿಜಸ್ತಬಕಂಗಳ ಕಾಂತಿಗಳ್ ಪುದುಂ
ಗೊಳೆ ಪೊಳಪಿಟ್ಟ ಮಾಣಿಕದ ಪೀಠದವೋಲಿರಲಲ್ಲಿ ಬಂದು ಮಂ
ಡಳಿಸಿದ ಯೋಗಿಪುಂಗವರನಾಸನದಿಂ ಪೊಱಮಟ್ಟರಾಗದೊ
ಬ್ಬುಳಿಯೆನಲೊಂದಶೋಕತರು ಕಣ್ಗೊಳಿಸಿರ್ದುದು ಮುಂದಿಳೇಂದ್ರನಾ        ೭೬

ಆ ಕಂಕೆಲ್ಲಿಯ ಪಲ್ಲವಂ ಪಳಿಯೆ ಸಂಧ್ಯಾಕಾರಮಂ ತನ್ನ ದಿ
ವ್ಯಾಕಾರಂ ಶಶಿಯಂ ಪಳಂಚಲೆಯೆ ನಕ್ಷತ್ರಂಗಳಂ ನಾಣ್ಚಿಸಲ್
ನಾಕೇಂದ್ರಸ್ತುತರಾದ ಸಂಯಮಿಗಳಿರ್ದರ್ ಮಧ್ಯದೊಳ್ ಮುಕ್ತಿಲ
ಕ್ಷೀಕಾಂತಂ ಮುನಿಪೋತ್ತಮಂ ಮುಗಿವಿನಂ ಭೂಪಾಲಹಸ್ತಾಂಬುಜಂ           ೭೭

ತನಿಗೆಂಪು ತಳ್ತಶೋಕಾ
ವನರುಹಮೆಸೆದತ್ತು ಹಿಂಸೆ ಸೋಂಕದವೋಲ್ ತ
ನ್ಮುನಿಪತಿಯ ಜಾತರೂಪಮ
ನೆನಸುಂ ಪುಟವಿಡುವ ತಪದ ತಣ್ಗಿಚ್ಚಿನವೋಲ್           ೭೮

ಬಿಡದೊಡವುಟ್ಟಿದೆನೆನ್ನಂ
ಬಿಡಬೀಸಿದನೀ ಮುನೀಂದ್ರನೆಂದೇವದಿನಾ
ಗಡೆ ಕಳಿಗಳಿಗಂದಿದವೋಲ್
ಬೆಡಂಗುವಡೆದತ್ತು ಮೆಯ್‌ಮದಾಲೇಪನದಿಂ   ೭೯

ಜ್ಞಾನಾಂಭೋಧಿಯ ಪೆರ್ದೆರೆ
ತಾನಲಸದೆ ನೂಂಕೆ ಪಡೆದ ಪಾವಸೆಯೆಂದೆ
ಬೀ ನುಡಿಗೆಡೆಗುಡುತೊಡಲೊಳ
ದೇನೆಸೆದುದೋ ಮಲದಮಸಕವಾ ಮುನಿಪತಿಯಾ         ೮೦

ತನುವಂ ನಿಜಸುಮನೋವಾ
ಸನೆ ಪಾವನಚರಿತದಿಂ ಪುದುಂಗೊಳೆ ಬಂದೊ
ಯ್ಯನೆ ಬಳಸಿದಳಿಸಮೂಹಮಿ
ದೆನಿಸಿದುದು ಮಲಂ ಮಲಪ್ರಹಾರಿಯ ಮೆಯ್ಯೊಳ್        ೮೧

ಜನವಿನುತಮಾದ ನಿಜದ
ರ್ಶನ ಬೋಧಾಚರಣಮೊಂದಿದುತ್ತಮ ತೇಜಂ
ಮುನಿರಾಜಂ ರತ್ನತ್ರಯ
ವನೆರಗಿಸಿ ಪೊಯ್ದ ಕರುವಿನಂತೆಸೆದಿರ್ದಂ         ೮೨

ತನುವನಗಲ್ಚಿ ತಳ್ತ ಬಹಿರಿಂದ್ರಿಯದಿಚ್ಚೆಯನೆಯ್ದೆ ನೀಗಿ ಮೂ
ಗಿನ ತುದಿಯಂ ತಗುಳ್ದ ಬಗೆ ಕೆಯ್ಮಿಗೆ ಶಾಂತರಸಂ ಪೊದಳ್ದ ತ
ನ್ಮುನಿಪನ ಮಾನಸಂ ಮನಮನೀಳ್ಕುಳಿಗೊಂಡುದು ರಾಜಹಂಸನಾ  ೮೩

ಮಱದೂಟ ಮೀಹಮಂ ಮೆ
ಯ್ದೊಱೆದುಱೆ ತನ್ನೊಳಗೆ ತಾನೆ ಮನಮಿಕ್ಕುವದೊಂ
ದುಱುವ ನಿಜಭಾವಮೇಂ
ಧರೆಗಱಿಪದೆ ಮುನಿ ಮುಕ್ತಿಕಾಂತೆಯೊಳ್ ತೊಡರ್ದಳಿಪಂ ೮೪

ವ : ಅಂತು ಪಂಚಾಚಾರ ನಿಯಮಯೋಗದಿನಿರ್ದ ಯೋಗೀಂದ್ರನ ಸಮೀಪಕ್ಕೆ ಸಕಳ ಮಂಗಳದ್ರವ್ಯಗಳಂ ಧರಿಯಿಸಿ ದಿವ್ಯಕಾಂತೆಯರಂತೆ ಕಾಂತೆಯರ್ ಬಳಸಿಬರೆ ಭವ್ಯಲೋಕಂ ಬೆರಸು ಮಹಾಸೇನ ಮಂಡಳೇಶ್ವರಂ ಬಂದು

ಮಂದರಮಂ ಬಲಗೊಳ್ವ ಪು
ರಂದರನೆಂಬಂತೆ ಮೂಮೆ ಬಲಗೊಂಡೊಲವಿಂ
ವಂದಿಸಿ ಮನಿಪತಿಯಂ ಮುದ
ದಿಂದಾ ಮಾನವಪುರಂದರಂ ಪೂಜಸಿದಂ          ೮೫

ಎಱಗೆ ಮುನಿಮೂರ್ತಿಯೊಳ್ ಕ
ಣ್ಣೆಱಗೆ ಮನಂ ಭಕ್ತಿಯೊಳ್ ನೃಪೋತ್ತಮನೊಲವಿಂ
ದೆಱಗೆ ಪುರೆವಿಡಿದು ನಿಱಿಗುರು
ಳೆಱಗಿದವೆಱಪಂತೆ ಪಱಮೆವಱಿ ಪಂಕಜದೊಳ್  ೮೬

ವ : ಅಂತಾ ನೃಪಶ್ರೀಕಾಂತಂ ತಪಶ್ರೀಕಾಂತಂಗೆಱಿಗಿ ಪರಮಾಶೀರ್ವಾ ವಚನಂಗಳಂ ಕೆಯ್ಕೊಂಡು ತದೀಯ ಪಾದೋಪಾಂತದೊಳ್ ಪ್ರೀತಿಯಿಂ ಕುಳ್ಳಿರ್ದು ಧರ್ಮ ಸ್ವರೂಪಂಗಳಂ ಕೇಳ್ದು ತದನಂತರಂ

ಮುನಿನಾಥಾಂಘ್ರೀ ನಖೇಂದುಕಾಂತಿ ತನುವಂ ತಳ್ಪೊಯ್ದು ತಳ್ಕೈಸೆ ತೆ
ಕ್ಕನೆ ತೀವಿರ್ದ ಮನೋರಥಾಮೃತರಸಂ ಕೆಯ್ಮಿಕ್ಕು ತುಳ್ಕಾಡಿ ತ
ಣ್ಣನೆ ತನ್ನೊಳ್ ತೆರೆಗೊಂಡು ಮಂಡಳಿಪಿನಂ ತದ್ವೇಳೆಯಂ ಮೀಱದಿಂ
ಪಿನಲಂಪಿಂ ನುಡಿದಂ ಗಭೀರರವದಿಂ ರಾಜೇಂದ್ರರತ್ನಾಕರಂ           ೮೭

ವ : ಆಗಳ್

ರಸನಾರಂಗದೊಳುಱೆನ
ರ್ತಿಸುವ ಸರಸ್ವತಿ ಸಮಂತು ಸೂಸಿದ ದಿವ್ಯ
ಪ್ರಸವಾಂಜಲಿಯೆಂಬಿನಮೇ
ನೆಸೆದುದೋ ವಸುಧಾಧಿಪತಿಯ ದಶನಪ್ರಭೆಗಳ್            ೮೮

ತಾಪಸವರೇಣ್ಯ ಪಲವಾ
ಳಾಪದೊಳೇಂ ಮನದೊಳೊರ್ಮೆ ನೆನೆದವನಕ್ಷ ಸಂ
ತಾಪಮನಾ ಪಱಿನಿನ್ನೀ
ಶ್ರೀಪಾದಂ ಕಲ್ಪಪಾದಪಮನೇಳಿಸದೇ ೮೯

ಏತಕ್ಕಾರ್ದರ್ಶನಮವ
ನೀತಲದೊಳ್ ಪೊಗಳ್ವರದು ಭವದ್ದರ್ಶನದಂ
ತೀತೆಱದಿಂ ಪರಿಭಾವಿಸೆ
ಭೂತಭವದ್ಭಾವೀಜನ್ಮಮಂ ತೋಱಿದುದೇ   ೯೦

ಮಿತ್ರನೆನುತುಷ್ಣಕರನಂ
ಧಾತ್ರಿತಳಂ ಮೇಗೆ ಪಿಂಗದಂತಸ್ತಮಮಂ
ಚಿತ್ರಮೆನೆ ತವಿಸಿ ಕುವಲಯ
ಮಿತ್ರನೆನಲ್ ಸಂದೆ ನೀಂ ಜಗತ್ರಯಮಿತ್ರಾ        ೯೧

ಮೃಡನುತ್ತಮಾಂಗಮಂ ಸಾ
ರ್ದೊಡಮಱಿಕೆಯ ರಾಜನನಘ ನಿಮ್ಮಡಿಯಂ ಬ
ಲ್ವಿಡಿದೆನ್ನ ತೆಱದಿನಿಳೆಯೊಳ್
ಪಡೆದನೆ ನಿರ್ದೋಷಿಯಾಗಿ ಪರಿಪೂರ್ಣತೆಯಂ  ೯೨

ವಿಷಯಾತೀತ ತಪಶ್ರೀ
ವಿಷಯಮೆನಲ್ ಸಂದ ನಿನ್ನ ಮಹಿಮೆ ಮನೋವಾ
ಗ್ವಿಷಯಮೆ ನೋಡದ ಮುನ್ನನಿ
ಮಿಷಪದವಿಯನೇಂ ಕಣ್ಗೆ ಮಾಡಿದುದೀಗಳ್    ೯೩

ಪೆಱತೇಂ ಮುನಿನಾಯಕ ನಿ
ನ್ನಱಿಕೆಯ ಕರುಣಾವಲೋಕನಾಮೃತದಿಂ ತ
ಳ್ತುಱುವೆನ್ನ ಕೀರ್ತಿವಲ್ಲಿಗೆ
ನೆಱೆಯದು ಮೂಲೋಕವೆನಗೆ ನೆಱೆಯದುದುಂಟೇ       ೯೪

ಖೇಚರವಂದ್ಯ ಹಿಮಾಹಿಮ
ರೋಚಿಯ ಪಂಗಿಲ್ಲದಲರ್ದು ಮೂಱುಂ ಜಗದೊಳ್
ಗೋಚರಿಪ ನಿನ್ನ ಬೋಧ
ವಿಲೋಚನಕೊಳಗಾಗದುಳಿದ ವಸ್ತುಗಳೊಳವೇ ೯೫

ಅಂಗೆಯ್ಯ ನೆಲ್ಲಿಯಂತೆ ಜ
ಗಂಗಳ್ ನಿನ್ನಱಿವಿನೊಳಗೆ ಮಿಱುಗುವುವೆನೆ ಮಾ
ನಂಗೊಳ್ಳದುಸಿರಲೇಕೆ
ನ್ನಿಂಗಿತಮಂ ನಿನಗೆ ನಿಖಿಳಬೋಧನಿಧಾನಾ       ೯೬

ವ : ಎಂದು ಯಥಾರ್ಥವೃತ್ತಮಂ ಸಂಸ್ತುತಿಗೆಯ್ದು ಮತ್ತಂ

ನೀನಱಿಯದುದಿಲ್ಲಾದೊಡ
ಮಾನೆಂತಾತುರೆತೆಯಿಂದೆ ಬಿನ್ನವಿಸುವೆನೀ
ಮಾನಿನಿಗೆ ಸಮಯದೊಳ್ ಸಂ
ತಾನಂ ಸಮನಿಸದ ಚಿಂತೆ ಸಮನಿಪುದೆನ್ನಂ         ೯೭

ಅದರಿಸೆನ್ನ ಜಾಡ್ಯಮಿದು ನಿನ್ನಯ ಸನ್ನಿಧಿಯಿಂದಲಿನ್ನೆಗಂ
ಪೋದುದು ಮತ್ತೆ ಬಂದಲೆವ ಸಂಸೃತಿಯಂ ಮಱೆಗೊಂಡು ಮೊಕ್ಕಳಂ
ಮೂದಲಿಪಂತಿರಿಂತೆನಗೆ ತಂದುದು ದೇವ ನೆಗಳ್ತೆವೆತ್ತ ಶಾ
ತೋದರಿಯೊಳ್ ಮನಂಗೊಳೆ ತನೂಭವರಾಗರೆನಿಪ್ಪ ರಾಗಮಂ     ೯೮

ಈ ಮತ್ಪ್ರಾಣಸಮಾನೆಯಾದ ಸತಿಯೊಳ್ ಸಂತಾನಮಿಲ್ಲೆಂದಳ
ಲ್ದೇಮಾತೊರ್ವನೆ ಚಿಂತಿಸೆಂ ಸುಖದೆ ನಾನಿರ್ಪಂದಿಂದಾವನೀ
ಭೂಮೀಭಾರಮನಾಂಪನೆಂದಗಿದು ಶೇಷಾಹೀಶ್ವರಂ ದಿಗ್ಗಜ
ಸ್ತೋಮಂ ಕೂರ್ಮವರಂ ಕುಲಾಚಲಕುಲಂ ಚಿಂತಿಪ್ಪುವಿನ್ನಾವಗಂ   ೯೯

ಕಟ್ಟಾಣಿಯ ವಸ್ತುಗಳಳ
ವಟ್ಟಿರೆ ತನ್ನೊಳಗೆ ನೆಗಳ್ದ ಭೂಭರಮೀಗಳ್
ನೆಟ್ಟನೆ ವಶಮಾಗಿರ್ದುಂ
ಬಿಟ್ಟಿಯ ಪೊಱೆಯಂತೆ ಬನ್ನವಡಿಸುಗುಮೆನ್ನಂ           ೧೦೦

ಪ್ರಾಚಿಗೆ ಮಿತ್ರಂ ಮೃಗಶಿಶು
ಲೋಚನೆಗೆ ಪುತ್ರನುದಯಮಾಗದೊಡೆ ಧರಿ
ತ್ರೀಚಕ್ರದ ಬಹಿರಂತ
ರ್ಗೋಚರಮೆನಿಸಿರ್ದ ತಮಮನಾರ್ ತವಿಸುವರೋ        ೧೦೧

ಅದಱಿಂದೆನ್ನಯ ತೋಳ ತಿಣ್ಣವೊಱೆಯಂ ತಾಂ ಪಿಂಗಿಪಾಂಪನ್ಯಸೈ
ನ್ಯದ ಕೂರ್ಪಂ ಕುಡಿಯೊಳ್ ಮುರುಂಟಿಸುವ ನಾಂಟಲ್ಕೆಂಟು ದಿ‌ಕ್ಕೆಟ್ಟುದಂ
ದದೆ ಸತ್ಕೀರ್ತಿಯನಾಂತು ಬಿತ್ತುವದಟಂ ತಳ್ಕೈಸಿ ಮತ್ಕಾಂತಿಗೆಂ
ದುದಯಂಗೆಯ್ದಪನೋ ಮದನ್ವಯ ಮಹೀಶಾನಂದನಂ ನಂದನಂ            ೧೦೨

ಇನ್ನೆನಗೆಂದಪ್ಪನೊ ಪೇ
ಳೆನ್ನಯ ಬಲಗೆಯ್ಯ ಬಲ್ಪು ಕಾಮಿನಿಯರ ಕೈ
ಗನ್ನಡಿಯಱನಱವೆಟ್ಟೀ
ಚೆನ್ನೆಯ ಜವ್ವನದ ಜಸಮೆನಿಪ್ಪ ಕುಮಾರಂ    ೧೦೩

ಪಡೆದಳ್ ಕೀರ್ತಿ ಸಮಸ್ತದಿಗ್ವಲಯಮಂ ವಿಸ್ತೀರ್ಣಸದ್ವಸ್ತುವಂ
ಪಡೆದಳ್ ಧಾತ್ರಿ ಸಮಸ್ತವೈರಿಜಯಮಂ ಸಂಗ್ರಾಮರಂಗಾಗ್ರದೊಳ್
ಪಡೆದಳ್ ವಿಕ್ರಮಲಕ್ಷ್ಮಿ ನಿನ್ನ ಕೃಪೆಯಿಂದೆನ್ನೀ ಮಹಾದೇವಿ ತಾಂ
ಪಡೆದಳ್ ಭಾಗ್ಯಮನೇಕೆ ಪಡೆಯಳ್ ಸುಕ್ಷಾತ್ರನಂ ಪುತ್ರನಂ ೧೦೪

ವ : ಎಂದು ಸಂತಾನ ಕಾಮವ್ಯಾಮೋಹದಿಂ ನುಡಿವ ವಸುಧಾವಲ್ಲಭನನಾ ತಪೋನಿಧಾನ ನಾಲಿಸಿ ಕರುಣಾರಸಂ ಕಾಳ್ಪುರಮಾಗೆ

ತೆಱನಱಿದು ನುಡಿದನಾವಗ
ಮೊಱೆವ ಹೃದಂಬುಧಿಯಿನೊಗೆದು ಕರುಣಾಮೃತಮಂ
ಕಱೆವ ವಚನಾಂಬುಮುಖದೊಳ್
ಮಿಱುಗುವ ಮಿಂಚೆನಿಸೆ ತೊಳಪ ದಂತದ್ಯುತಿಗಳ್           ೧೦೫

ಎಲೆ ವಸ್ತು ತತ್ವಕೋವಿದ
ನಿಲಲಱಿಗುಮೆ ನಿನ್ನ ಮುಂದೆ ಸಂಸೃತಿಮೋಹಂ
ಪಲವೇಂ ಕಟ್ಟಿದಿರೊಳ್ ಕ
ತ್ತಲೆ ಮುಟ್ಟುಳಿಯಲಾರ್ಪುದೇ ದಿನಕರನಾ       ೧೦೬

ಈ ಚಿಂತಾಭಾಜನಮೆ ಸ
ದಾಚಾರವಿಶುದ್ಧ ನಿನ್ನ ನಿರ್ಮಲಮತಿ ಧಾ
ತ್ರೀಚಕ್ರಮಱಿವುಲೂಕ ವಿ
ಲೋಚನ ಗೋಚರಮೆ ತಿಗ್ಮರೋಚಿಯ ತೇಜಂ ೧೦೭

ನಿರ್ಜರ ನರೋರಗರೊಳಂ
ತರ್ಜ್ಜಡತೆಯನೆಯ್ದೆ ಪಾಯ್ದು ಪಾಪಾಸ್ರವಮಂ
ವರ್ಜಿಸಿ ನಿನ್ನವೊಲಲಸದು
ಪಾರ್ಜಿಸಿದವರುಂಟೆ ಪುಣ್ಯಮಂ ಪುರುಷನಿಧೀ   ೧೦೮

ಸಿರಿಯೊಲ್ವ ತಿಲಕವಮರ್ದು
ರ್ವರೆ ಮಚ್ಚುವಮರ್ದು ಕೀರ್ತಿ ಬಯಸುವವಶ್ಯಂ
ಸರಸತಿ ಸಾರ್ವ ಸುಮಂತ್ರಂ
ನಿರುತಂ ಸಚ್ಚರಿತ ನಿರತ ನಿನ್ನಯ ಚರಿತಂ        ೧೦೯

ಇಂಬಳಕೆಯ ಭೂಭುಜರಾ
ಡಂಬರಮಂತಿರ್ಕೆ ಸಿರಿಯ ಸಡಗರದಿಂ ಕ
ಣ್ಣಂ ಬಿಡುವ ಸಗ್ಗಿದರ್ ಬಾ
ಯಂ ಬಿಡುವಂತಾಯ್ತು ಬಯಸಿ ನಿನ್ನ ಯ ಚರಿತಂ         ೧೧೦

ಸುರನಾಥನಾವನೊರ್ವನ
ಚರಣಾಂಬುಜಮನಱಸ ಪಡೆಯಂ ಪಡೆದೈ
ನರನಾಥ ತತ್ತ್ರಿಲೋಕೀ
ಗುರುವಿನ ಗುರುವಪ್ಪುದೊಂದು ಪುಣ್ಯೋದಯಮಂ      ೧೧೧

ಚಿಂತೆ ಬಱಿದೇಕೆ ನಿನ್ನೀ
ಕಾಂತೆಯ ಬಸಿಱೊಳ್ ತ್ರಿಲೋಕಗುರು ತೀರ್ಥಕರಂ
ಮುಂತಱುದಿಂಗಳುದಯಿಸು
ವಂ ತೊದಳಲ್ಲರಸ ಸರಸಸೂಕ್ತಿ ನಿಧಾನಾ        ೧೧೨

ವ : ಎಂದು ನರೇಂದ್ರಾಭಿಮತಮಂ ನಿರೂಪಂಗೆಯ್ದು ಸುವ್ರತಿ ಸುವ್ರತಾದೇವಿಯಂ ನೋಡಿ

ಇದು ಭುವನತ್ರಯ ಭೂಷಣ
ಮಿದು ಪಾಪವಿಷಾಪಹಾರಿ ಕುಲದೀಪಕಮಿಂ
ತಿದು ಸುಕೃತ ನಿನಗೆ ಕೆಯ್ಸಾ
ರ್ದುದು ಸುವ್ರತೆವೆಸರೊಳೆಸೆವ ಕಾಂತಾರತ್ನಂ    ೧೧೩

ಜನ ವಿನುತನಾದ ಪದಿನೈ
ದನೆಯ ಮಹಾತೀರ್ಥನಾಥನಂ ಸಲೆಪಡೆವೊಂ
ದನುಪಮ ಸುಕೃತಂ ಸಾರ್ದುದು
ತನಗೆನೆ ಸೌಭಾಗ್ಯಮೆಂತುಟೋ ಸುವ್ರತೆಯಾ     ೧೧೪

ಜಿನನಂ ಪಡೆವೀಯನುವಶೆ
ಗಿನನಂ ಪಡೆವಿಂದ್ರದಿಶೆಗೆ ಪರಿಭಾವಿಸೆ ಮಿ
ಕ್ಕಿನ ವನಿತೆಯರುಂ ಜಡದಿ
ಗ್ವನಿತೆಯರುಂ ಪಡೆಯೆ ಪಾರ್ಥಿವಾನ್ವಯತಿಲಕಾ           ೧೧೫

ಪೆಱತೇನಾ ನಾಕದಿಂ ಬಂದವತರಿಸುವನೀ ಕಾಂತೆಯೊಳ್ ನಿನ್ನ ಭಾಗ್ಯಂ
ನೆಱೆವನ್ನಂ ನಿನ್ನ ಪೆಂಪಂ ಬಯಸಿ ಬಹುವಿಧಾಮರ್ತ್ಯರತ್ಯಾರ್ಥದಿಂ ಬಾ
ಯೊಱೆವನ್ನಂ ನಿನ್ನ ಲೋಕೋನ್ನತಮೆನೆ ನೆಗಳ್ದಿಕ್ಷ್ವಾಕುರಾಜಾನ್ವಯಂ ಕ
ಣ್ನೆಱೆವನ್ನಂ ತಾನೆ ನಿರ್ಮೂಲಿತನಖಿಳ ತಮೋಯೂಥನಾ ತೀರ್ಥನಾಥಂ      ೧೧೬

ವ : ಎಂದು ಸಂದೆಗಂ ಪಱಿಪಡೆ ನುಡಿದು ಮತ್ತಂ

ಈ ಮನುಜಜನ್ಮದೊಳ್ ನಾ
ನಾ ಮಯ ಮಯದೊಳ್ ಸಮಂತು ಜನಿಯಿಸಿ ದೊರೆವೆ
ತ್ತೀ ಮಹಿಮೆವಡೆದ ನೀನೇಂ
ಸಾಮಾನ್ಯನೆ ಸಕಲ ನೃಪಲಲಾಟ ಲಲಾಮಾ     ೧೧೭

ತೊದಳೇಂ ಶೇಷೊರಗಂ ಬಿಗಿದ ಬಿಸಲತೆ ತಾರಾಚಳೇಂದ್ರಂ ತಗುಳ್ದು
ಣ್ಮಿದ ಫೇನಂ ಚಂದ್ರಬಿಂಬಂ ಚರಿಸುವ ಕಳಹಂಸಸಂಬೊಲಿಂಬಾಗೆ ತನ್ನೊಳ್
ಪುದಿದೆತ್ತಂ ತಳ್ತು ಮೆಯ್ವೆತ್ತನುಮಿಷಕುಳಮಾಡಲ್ ತ್ರಿಲೋಕಂಗಳಂ ತೀ
ವಿದುದೀಗಳ್ ನಿನ್ನ ಕೀರ್ತಿ ತ್ರಿಪಥೆಗೆ ವಿಪುಳಾಭಾಗ ಭೋಗಾಮರೇಂದ್ರಾ       ೧೧೮

ಕಡುಪಿರಿದಾದೊಡಮೇಂ ಕ
ನ್ನಡಿಯೊಳ್ ಕರಿ ಸಿಲ್ಕುವಂತೆ ಶಕ್ರಾದಿಗಳು
ರ್ಕುಡುಗಿ ನೃಪ ನಿನ್ನ ತೇಜದೊ
ಳಡಂಗಿದರ್ ನೋಡ ಪುಣ್ಯದೊಳ್ ಪುರುಡುಂಟೇ           ೧೧೯

ಮಾತೇನವನೀಶ್ವರ ಧರ
ಣೀತಳದೊಳ್ ನೀನೆ ಧನ್ಯನೀ ಭವದೊಳ್ ಮು
ನ್ನೇತೆಱದಿ ನೋಂತೊಡಂ ನೆಗ
ಳ್ದೇ ತೆಱದ ಸುಪುತ್ರಲಾಭಮಾತಂಗಾಯ್ತೋ     ೧೨೦

ವ : ಎಂದು ಪೊಗಳ್ದು ಮುನೀಂದ್ರನವನೀಂದ್ರಂಗೆ ಸಮನಿಸಿದ ಸುತೋತ್ಪತ್ತಿ ವಾರ್ತಾವಿಲಾಸ ಸುಕೃತ ಪ್ರಪಂಚಮಂ ಪ್ರಕಟಿಸೆ

ಮುನಿವಾಕ್ಯಾಮೃತಸೇಕದಿಂ ನನೆದು ಚಿತ್ತಕ್ಷೇತ್ರದೊಳ್ ನಾಂಟಿ ನೆ
ಟ್ಟನೆ ಬೇರೂಱಿದ ನಂದನಾಭ್ಯುದಯ ಲಾಭೋರ್ವೀಜ ಬೀಜಾಂಕುರಂ
ಮೊನೆದೋರ್ಪಂತೆ ನಿಜಾಂಗದೊಳ್ ಪುಳಕಜಾಳಂ ಮೂಡೆ ಮೆಯ್ವೆಚ್ಚಿ ಮಾ
ನಿನಿಯಂ ನೋಡಿ ಮರಲ್ದದೇನೆಸೆದನೋ ಸನ್ಮಾನಜನ್ಮಾಲಯಂ    ೧೨೧

ಪ್ರಣಯಂ ಕೈಗಣ್ಮಿರಲ್ ಕಣ್ಮಲರೊಳಲಸದಾನಂದವಾರ್ಬಿಂದುಗಳ್ ಸಂ
ದಣಿಸಲ್ ಸೌರಂಭದಿಂ ವಂದಿಸಿ ಮುನಿಪತಿಯಂ ತತ್ತ್ರಿಲೋಕೈಕಚೂಡಾ
ಮಣಿ ತೀರ್ಥಾಧೀಶ ಪೂರ್ವಪ್ರಥಿತ ಜನನಮಂ ಕೇಳಲುದ್ಯುಕ್ತನಾದಂ
ಪ್ರಣುತಾತ್ಮಂ ವಿಶ್ವವಿದ್ಯಾ ಸಮುದಯ ಸುಮನಸ್ಸಂಚರಂ ಚಂಚರೀಕಂ      ೧೨೨

ಗದ್ಯ || ಇದು ಸಕಲ ಸುಕವಿಜನಮನಸ್ಸುಧಾಕರಕಾಂತ ಸಂತತ ದ್ರವೀಕರಣ ಕಾರಣ ಕರ್ಣಾಟ ಕವಿತಾಕಳಾವಿಳಾಸವಿಧು ಮಧುರ ಕವೀಂದ್ರ ನಿರ್ವಿತಮಪ್ಪ ಧರ್ಮನಾಥ ಪುರಾಣದೊಳ್ ಮುನಿದರ್ಶನ ವರ್ಣನಂ ಚತುರ್ಥಾಶ್ವಾಸಂ.