ವ : ಇಂತು ಸಮಸ್ತದೇವಸಮೂಹಂಬೆರಸು ಸೌಧಮೇಂದ್ರಂ ಸಾಸಿರ್ಮಡಿ ಯಾದ ಪೆರ್ಮೆಯಿಂ ಧರ್ಮನಾಥಜಿನೇಂದ್ರನಂ ಪೂಜಿಸಿ ಪೊಗಳ್ದಡಿಗಡಿಗಂ ಪೊಡವಟ್ಟು ಹರ್ಷಸಮುತ್ಕರ್ಷವರ್ಷಿತಬಾಷ್ಪಾವಾಃಪೂರಂ ತನ್ಮ ಹಾಮಹಿಮೆಯಂ ಮನಂದಣಿವಿನಂ ನೀಡುಂನೋಡಿ ಕೊಂಡಾಡುತ್ತುಂ ಬಂದು ಗಣಧರಕೋಷ್ಠದೊಳಶೇಷಗಣಧರ ವಿಶೇಷಕರಾಗಿರ್ದ ವಿಶಿಷ್ಟಗುಣಸಮಭಿಷ್ಟುತವದರಿಷ್ಟಸೇನರೆಂಬ ಮುಖ್ಯಗಣಧರರಂ ಪರಿವಂದಿಸಿ ಮುಂದೆ ಕುಳ್ಳಿರ್ದು ತತ್ಸ್ವರೂಪದ ತೆಱನಂ ಸರ್ವಜ್ಞನಂ ಕೇಳಿ ನೀವೆಂದು ಸೌಧಮೇಂದ್ರಂ ಪಾರ್ಥಿಸಿ ತಂತಮ್ಮ ಕೋಷ್ಠದೊಳ್ ಕುಳ್ಳಿರ್ಪುದುಮಿಂದ್ರಪ್ರೇರಿತನುಂ ಭವ್ಯಸಾರ್ಥ ಪ್ರಾರ್ಥಿತನುಮಾಗಿ

ಅತಿಶಯಬೋಧಚತುಷ್ಟಯ
ಯುತನಮಳನರಿಷ್ಟಸೇನಗಣಧರರಾ ಜಿನ
ಪತಿಯಂ ಬೆಸಗೊಡಂ ವಿರ
ಚಿತನತಿತತ್ತ್ವ ಸ್ವರೂಪಭೇದಸ್ಥಿತಿಯಂ          ೨೫೧

ವ : ಅಂತು ವಿನಯಭರವಿನಮಿತಮಸ್ತಕನುಂ ಮುಕುಳೀಕೃತಹಸ್ತನುಮಾಗಿ ಬೆಸಗೊಳಲೊಡಮಾ ಧರ್ಮನಾಥಜಿನವಲ್ಲಭನ ವದನಮಂಡಳಮೆಂಬ ಹಿಮವದ್ಗಿರಿ ಶಿಖರ ವಳಯದಿಂ ದಿವ್ಯಧ್ವನಿಯೆಂಬ ಸ್ವರ್ಧುನೀಪ್ರವಾಹಂ ಪೊಱಮಡುವುದುಂ

ರಮಣೀಯಂ ಮುಕ್ತತಾಲೋಷ್ಠಪುಟಚಳನಕಂ ದೂರಸಮೀಪದೊಳ್ ತಾಂ
ಸಮರೂಪಂ ಸರ್ವಭಾಷಾತ್ಮ ಕಮಖಿಳಹಿತಂ ತ್ಯಕ್ತವಾಯುಪ್ರಚಾರೋ
ದ್ಗಮಕಂ ಹಿಂಸಾದಿ ದೋಷೋಜ್ಜಿತಮಭಿವಿಸರದ್ಯೋಜನೈಕಪ್ರಮಾಣಂ
ಪ್ರಮದಂ ಪೆರ್ಚಲ್ಕೆ ದಿವ್ಯಧ್ವನಿ ಜಿನಮುಖದಿಂ ಪುಟ್ಟಿ ಪೊಣ್ಮಿತ್ತದೆತ್ತಂ       ೨೫೨

ವ : ಆ ದಿವ್ಯಧ್ವನಿಯರ್ಧಮಾಗಧೀಭಾಷೆಯೆಂಬ ಪೆಸರಿಂದೇಕರೂಪಮಾಗಿ ಪುಟ್ಟಿದೊಡಮನೇಕ ಭಾಷಾಮಯಮುಮಾಗಿ ಪರಿಣಮಿಸುವುದುದದೆಂತೆನೆ

ಮಳೆವನಿಯೊಂದೇಪರಿಯಿಂ
ದಿಳೆಯೊಳ್ ಬಿಳ್ತಂದು ಮತ್ತೆ ಭೂಮಿಯ ಗುಣದಿಂ
ಪಲವಂದಮಾಗಿ ತೋರ್ಪಂ
ತೊಳಕೊಂಡುದನೇಕಜಾತಿಭಾಷೆಯ ತೆಱನಂ      ೨೫೩

ವ : ಇಂತು ಸರ್ವಶ್ರವ್ಯಮಾದ ದಿವ್ಯಭಾಷೆಯಿಂ ಭುವನಭೂಷಣನಿಂತೆಂದು ಬೆಸಸಿದಂ ತತ್ತ್ವಮೆಂಬುದು ಜೀವಾಜೀವಕಶ್ರವಬಂಧ ಸಂವರನಿರ್ಜರಾಮೋಕ್ಷಭೇದದಿಂ ಸಪ್ತ ವಿಧಮಕ್ಕುಮಲ್ಲಿ ಬಂಧಾಂತರ್ಭಾವಿಗಳಪ್ಪ ಪುಣ್ಯಪಾಪಂಗಳೆರಡಂ ಕೂಡಿದೊಡೆ ನವಪದಾರ್ಥಮಕ್ಕು ಸಪ್ತತತ್ತ್ವಂಗಳೊಳ್ ಮುಖ್ಯಮಪ್ಪ ಜೀವತತ್ತ್ವಸ್ವರೂಪಮೆಂತೆನೆ

ದ್ರವ್ಯಪರ್ಯಾಯರೂಪನಿ
ಷೇವ್ಯಂ ಚೈತನ್ಯಲಕ್ಷಣಂ ತನುಮಾತ್ರ
ಸ್ವವ್ಯವಧಿಕರ್ತೃಭೋಕ್ತೃ
ದ್ರವ್ಯೋತ್ಪತ್ತಿವ್ಯಯಸ್ವಭಾವಂ ಜೀವಂ          ೨೫೪

ವ : ಅದು ಮುಕ್ತಿಜೀವಂ ಸಂಸಾರಿಜೀವನೆಂದಿತ್ತೆಱನಕ್ಕುಮಲ್ಲಿ ಮುಕ್ತಿಜೀವನ ನಂತಚತುಷ್ಟಯಮಯನಾಗಿಕ್ಕು ಮತ್ತೆ ಸಂಸಾರಿಜೀವಂ ನರಕತಿರ್ಯಙ್ಮನುಷ್ಯ ದೇವಗತಿ ಸಂಜನವಿಕಳ್ಪದಿಂ ನಾಲ್ಕುಪ್ರಕಾರಮಕ್ಕುಮಾ ನಾರಕಜೀವನಧೋಧಃಸಪ್ತಭೂಮಿಸಂಭಿನ್ನ ರತ್ನಶರ್ಕರಾವಾಳುಕಪಂಕಧೂಮತಮೋಮಹಾತಮ ಪ್ರಭಾಭಿಧಾನಸಪ್ಪ ಭೂಮಿ ಸಂಬಂಧದಿಂ ಸಪ್ತವಿಧಮಾಗಿಯಧಿಕಾಧಿಕ ಸಂಕ್ಲೇಶ ಪ್ರಮಾಣಾಯುಷ್ಯ ವಿಶೇಷ ದೊಳೊಂದಿ ನವೆಯುತ್ತುಮಿರ್ಕುಮಲ್ಲಿ

ಮೊದಲೊಳ್ ಮೂವತ್ತುಲಕ್ಕಂ ದ್ವಿತಯಮಹಿಯೊಳಿಪ್ಪತ್ತು ಮತ್ತೈದುಲಕ್ಕಂ
ಪದಿನೈದುಂ ಲಕ್ಷಮಾ ಮೂಱನೆಯ ನರಕದೊಳ್ ನಾಲ್ಕಱೊಳ್ ಪತ್ತುಲಕ್ಕಂ
ಪದೆಪಿಂ ಲಕ್ಷತ್ರಯಂ ಪಂಚಮನರಕದೊಳಂತೈದುಗುಂದೊಂದುಲಕ್ಕಂ
ಪುದಿರ್ದಿತ್ತಾಱಱೊಳ್ ಸಪ್ತಮನರಕದೊಳೈದೆ ಬಿಲಂಗಳ್ದವಿಕ್ಕುಂ  ೨೫೫

ವ : ಇಂತೇಳುಂ ನರಕಭೂಮಿಯೊಳಿರ್ದಿಂದ್ರಶ್ರೇಣೀಬದ್ಧಪ್ರಕೀರ್ಣಕರೂಪ ಮಾದಂಗಳಾದ ಬಿಲಂಗಳೆಲ್ಲಂ ಕೂಡಿಯೆಣ್ಬತ್ತನಾಲ್ಕುಲಕ್ಕಮಾಗಿರ್ಕುಂ

ಕಾಗೆಯ ನಾಯ ಕತ್ತೆಯ ಸೃಗಾಳದ ಗೂಗೆಯ ಬಾಯ್ಗಳಂದದಿಂ
ದಾಗರಮಾಗಿ ಪೇಸಿಕೆಗೆ ನಾಱುತುಮಿಪ್ಪೆಡೆಯಲ್ಲಿ ಪುಟ್ಟುವರ್
ಪೋಗಿ ಘನಾರ್ತರೌದ್ರಪರಿಣಾಮದೊಳೊಂದಿದ ಕೃಷ್ಣನೀಲಲೇ
ಶ್ಯಾಗತಪಾಪಿಗಳ್ ನರಕಕಷ್ಟಬಿಲಂಗಳ ತಾಣವೆಲ್ಲಿಯುಂ            ೨೫೬

ವ : ಪುಟ್ಟಿದಂತರ್ಮುಹೂರ್ತದೊಳಾಹಾರಿಕ ಶರೀರೇಂದ್ರಿಯೋಚ್ಛಾಸ ನಿಶ್ಶ್ವಾಸ ಭಾಷಾಮನಂಗಳೆಂಬ ಷಟ್ಪರ್ಯಾಪ್ತಿಗಳ್ ನೆಱೆದು ಪರಿದ ಪಾದರಸ ಬಿಂದುಗಳೆಂತೊಡಗೂಡುವಂತೆ ಶತಖಂಡಂಗಳಾದಂಗಂಗಳೆಲ್ಲಮೊಂದುಗೂಡಿ ಮುದ್ರಿಸಿದ ಮಸಿಯ ಪಾಪೆಯಂತೆ ಕಡುಕರಂಗಿ ಮೊಡೆನಾತಕ್ಕೆಡೆಯಾದ ಮೆಯ್ಯಂ ಪಡೆದು ಶಾರೀರಿ ಮಾನಸ ಕ್ಷೇತ್ರಜ ಪರಸ್ಪರೋದೀರಿತ ದನುಜೋದೀರಿತಂಗಳೆಂಬ ಪಂಚಪ್ರಕಾರದುಃಖಮೆ ಪಂಚಮಹಾಭೂತಮಾಗಿ ಮೂರ್ತಿವೆತ್ತುದೆಂಬಂತೆ ಕೋಟಲೆಯನವಗಯಿಸಿರ್ಕುಂ

ಆಱಂಗುಲಂ ತ್ರಿಹಸ್ತಂ
ಮೀಱದೆ ಕೂಡಿರ್ದ ಸಪ್ತಚಾಪೋತ್ಸೇಧಂ
ತೋಱುವುದು ಮೊದಲನರಕದೊ
ಳಾಱಡಿವೆತ್ತಿರ್ದ ನಾರಕರ ಮೆಯ್ಗಳೊಳಂ         ೨೫೭

ತದ್ವಿಗುಣ ದ್ವಿಗುಣಂಬಡೆ
ದುದ್ದಂ ಮತ್ತುಳಿದ ನರಕದವರ್ಗೆಲ್ಲಂ ಮೆ
ಯ್ವೊದ್ದಿದ ಪಂಚಧನುಃಶತ
ದುದ್ದಂ ತೋರ್ಪನ್ನೆವರಮದೆಯ್ದುಗು ಪೆರ್ಚಂ            ೨೫೮

ಒಂದು ಮೂಱೇಳು ಪತ್ತುಂ
ಕುಂದದೆ ಪದಿನೇಳುಮಿಪ್ಪತೆರಡುಂ ಮೂವ
ತ್ತೊಂದಿದ ಮೂಱರ ಸಾಗರ
ಮಂದಾಯುಃಪ್ರಮಿತಿಯೋಳಿಯಿಂದೇಳಱೊಳಂ            ೨೫೯

ಕರಗುಗು ಕಗ್ಗಲ್ಲಾದೋಡ
ಮಿರದಾಗಳೆನಿಪ್ಪ ತೀವ್ರತರಮುಷ್ಣಂ ನಾ
ಲ್ಕರೆಭೂಮಿಯೊಳಿಕ್ಕುಂ ಮ
ತ್ತೆರಡರೆಭೂಮಿಯೊಳತೀವಶೀತಂ ತೋರ್ಕುಂ    ೨೬೦

ವ : ಇಂತು ದುಃಖಾಕರಮಾದೇಳುಂ ನರಕದೊಳನುದಿನಮನವಧಿವೇದನೆ ಯನನುಭವಿಸುತ್ತಿರ್ಪ

ನಾರಕಜೀವನ ತೆಱನುಮ
ನೋರಂತಿರೆ ತಿಳಿಯೆ ಪೇಳ್ದು ಸರ್ವಜ್ಞಂ ಮ
ತ್ತಾರಯೆ ತಿರ್ಯಗ್ಜೀವನ
ಘೋರಾವಸ್ಥೆಯುಮನಿಂತು ಪೇಳುತ್ತಿರ್ದಂ     ೨೬೧

ವ : ಅದೆಂತೆಂದೊಡೆ ತಿರ್ಯಗ್ಜೀವಂ ತ್ರಸಮಂ ಸ್ಥಾವರಮುಮೆಂದಿತ್ತೆಱನದಱೊಳ್ ತ್ರಸಮೆಂಬುದು ಸರ್ವಸಾಧಾರಣಸ್ಪರ್ಶನೇಂದ್ರಿಯಮನುಳ್ಳ ಶರೀರಿಯಲ್ಲಿ ಕ್ರಮಂಗೊಂಡೊಂದೊಂದು ರಸನಂ ಘ್ರಾಣಂ ಚಕ್ಷು ಶ್ರೋತ್ರಮೆಂಬಿಂದ್ರಿಯಂಗಳ ಪೆರ್ಚುಗೆಯಿಂದಪ್ಪುದು ದ್ವೀಂದ್ರಿಯಾದಯಸ್ತ್ರಸಾಯೆಂದು ಜಿನಾಗಮಪ್ರತಿಪಾದಿಪಾದಿತಮಾದುದಱಿಂ ದ್ವೀಂದ್ರಿಯ ಪ್ರಾಣಿ ಮೊದಲ್ಗೊಂಡು ಪಂಚೇಂದ್ರಿಯಪ್ರಾಣಿಪರ್ಯಂತಂ ತ್ರಸಮೆನಿಕ್ಕು ಮಿಂತು

ದ್ವೀಂದ್ರಿಯಜೀವದ ತನುಮಾ
ನಂ ದ್ವಾದಶಯೋಜನಂ ಸಮುತ್ಕರ್ಷತೆಯಿಂ
ದಂ ದ್ವಾದಶವರ್ಷಮಿತಂ
ಸಂದಾಯುಷ್ಯದ ಪವಣ್ ಜಿನೋಕ್ತಕ್ರಮದಿಂ    ೨೬೨

ಒಂದೂನಮಾಗಿಯೈವ
ತ್ತುಂ ದಿನಮಕ್ಕುಂ ಸ್ಥಿತಿಪ್ರಮಾಣಂ ಮಾನಂ
ದ್ವೀಂದ್ರಿಯಜೀವದ ದೇಹದೊ
ಳೊಂದಿರ್ದುದು ಮುಖ್ಯವೃತ್ತಿಯಿಂ ತ್ರಿಕೋಶಂ  ೨೬೩

ಚತುರಿಂದ್ರಿಯಜೀವನದ
ಸ್ಥಿತಿ ಷಣ್ಮಾಸಪ್ರಮಾಣಮುತ್ಕೃಷ್ಟತೆಯಿಂ
ದೆ ತನುಂ ಸಮುನ್ನತಿಯೋಜನ
ಮಿತಮಿಂತೆಂದುಸಿರ್ದನಾ ಜಿನೇಶಂ ಸಭೆಗಂ        ೨೬೪

ಒಂದುಯೋಜನಸಹಸ್ರಂ
ಕುಂದದೆ ತೋರ್ಪುದು ಶರೀರದುದ್ದಂ ನಿಯತಂ
ಸಂದಮರ್ದುದು ತಿರ್ಯಕ್ಪಂ
ಚೇಂದ್ರಿಯಕಂ ಪೂರ್ವಕೋಟಿಪರಮಾಯುಷ್ಯಂ೨೬೫

ವ : ಮತ್ತಮೇಕೇಂದ್ರಿಯಮನುಳ್ಳ ಸ್ಥಾವರಜೀವಂ ಪೃಥಿವ್ಯಪ್ತೇಜೋವಾಯು ವನಸ್ಪತಿ ಕಾಯಿಕವಿಕಲ್ಪದಿಂ ಪಂಚಪ್ರಕಾರಮಕ್ಕುಮಲ್ಲಿ ಪರಮಾಯುಷ್ಯಂ ಪೃಥ್ವೀಕಾಯಿ ಕಕ್ಕಿಪ್ಪತ್ತೆರಡುಸಾಸಿರ ವರ್ಷಮಕ್ಕುಮಪ್ಕಾಯಿಕಕ್ಕೇಳುಸಾಸಿರ ವರ್ಷಮಕ್ಕುಂ ತೇಜಸ್ಥಾಯಿಕಕ್ಕೆ ಮೂಱುದಿನಮಕ್ಕುಂ ವಾಯುಕಾಯಿಕಕ್ಕೆ ಮೂಱುಸಾಸಿರವರ್ಷಮಕ್ಕುಂ ವನಸ್ಪತಿಕಾಯಿ ಕಕ್ಕೆಪ್ಪತ್ತುಸಾಸಿರವರ್ಷಮಕ್ಕುಮಿಂತು

ಶೀತದ ಪೀಡೆಯಿಂ ರುಜೆಯ ಪೀಡೆಯಿನುಷ್ಣದ ಪೀಡೆಯಿಂ ಮಹಾ
ವಾತದ ಪೀಡೆಯಿಂದೆ ಪೊಣರ್ದೊಂದನದೊಂದುಱೆಪೊಯ್ವ ಶೃಂಗನಿ
ರ್ಘಾತದ ಪೀಡೆಯಿಂ ಕ್ಷುಧೆಯ ಪೀಡೆಯಿನೆಯ್ದೆ ತೃಷಾದಿಪೀಡೆಯಿಂ
ದಾತತ ತಿರ್ಯಗಂಗನಿಚಯಂ ಕಡುದುಃಖದೊಳೊಂದಿ ಬಳ್ದುಗುಂ   ೨೬೬

ಆರ್ತಧ್ಯಾನಂ ಮನದೊಳ್
ಸಾರ್ತರಲುದ್ಭವಿಸಿ ಕಷ್ಟತಿರ್ಯಗ್ಗತಿಯೊಳ್
ವರ್ತಿತ ಪಾಪೋದಯದಿಂ
ದರ್ತಿಯೊಳೋಲಾಡುತಿರ್ಕು ತಿರ್ಯಗ್ಜೀವಂ     ೨೬೭

ಇಂತಖಿಳಜ್ಞಂ ತಿರ್ಯ
ಗ್ಜಂತು ಸಮೂಹಸ್ವರೂಪ ನಿರೂಪಣಾ ಸಮ
ನಂತರಮೆಲ್ಲರ್ಗುಸಿರ್ದಂ
ಸಂತಸದಿಂದಂ ಮನುಷ್ಯಜೀವನದ ತೆಱನಂ        ೨೬೮

ವ : ಅದೆಂತೆಂದೊಡೆ ಮನುಷ್ಯಜೀವಂ ಭೋಗಭೂಮಿ ಕರ್ಮಭೂಮಿ ಸಮುದ್ಭವಭೇದದಿಂ ದ್ವಿವಿಧಮಕ್ಕುಮಾ ಭೋಗಭೂಮಿಯುಂ ದೇವಕುರೂತ್ತರಕುರ್ವಾದಿ ಭೇದದಿಂ ಮೂವತ್ತು ತೆಱನಕ್ಕು ಮತ್ತಮದುತ್ತಮ ಮಧ್ಯಮ ಜಘನ್ಯಭೂಮಿ ಭೇದದಿಂ ಮೂದೆಱನಾಗಿ ತೋರ್ಕು ತದುತ್ತಮಭೋಗಭೂಮಿಜರ್ಗಾಱುಸಾಸಿರಬಿಲ್ಲುದ್ದಮುಂ ಮೂಱುಪಲ್ಯೋಪಮಂ ಜೀವನಮುಮಕ್ಕುಮಾ ಮಧ್ಯಮಭೋಗಭೂಮಿಜರ್ಗೆ ನಾಲ್ಕು ಸಾಸಿರಬಿಲ್ಲುತ್ಸೇಧಮುಂ ಎರಡುಪಲ್ಯೋಪಮುಮಾಯುಷ್ಯಮುಮಕ್ಕು ಜಘನ್ಯಭೋಗ ಭೂಮಿಜರ್ಗೆರಡುಸಾಸಿರ ಚಾಪೋನ್ನತಿಯುಮೊಂದು ಪಲ್ಯೋಪಮಯಾಯುಃಪ್ರಮಾಣ ಮುಮಕ್ಕುಮಲ್ಲಿ

ಪತ್ತುತೆಱನಾದ ಸುರತರು
ವಿತ್ತ ಮಹಾಭೋಗ ಸಮುಪಭೋಗಮನನುಭವಿ
ಸುತ್ತಿರ್ಪರ್ ದಂಪತಿಗಳ್
ಉತ್ತಮಪಾತ್ರಕ್ಕೆ ಕೊಟ್ಟ ದಾನದ ಫಲದಿಂ       ೨೬೯

ವ : ಮತ್ತಂ ಕರ್ಮಭೂಮಿಗಳ್ ಭರತಾದಿಭೇದದಿಂ ಪದಿನೈದು ಪರಿಯಕ್ಕುಂ ತದ್ಭೂವಿಭವರಾರ್ಯಮ್ಲೇಚ್ಛ ಚಾಪೋತ್ಸೇಧಮುಂ ಪೂರ್ವಕೋಟಿಪ್ರಮಾಣಾಯುಷ್ಯಮುಂ ವಿದೇ ಹಂಗಳೊಳ್ ನಿಯಮಿತಮಕ್ಕು ಭರತೈರಾವತಂಗಳುತ್ಸರ್ಪಿಣ್ಯವಸರ್ಪಿಣಿಗಳೆಂಬೆರಡು ಕಾಲವಶದಿಂ ವೃದ್ಧಿ ಹ್ರಾಸಮನೆಯ್ದುಗುಮವೊಂದೊಂದಕ್ಕೆ ಪತ್ತುಕೋಟಾಕೋಟಿ ಸಾಗರೋಪಮಕಾಲ ಪ್ರಮಾಣಮಕ್ಕು ಮತ್ತಮುತ್ಸರ್ಪಿಣೀಕಾಲಮುಂ ಸುಷುಮಸುಷ ಮೆಯುಂ ಸುಷಮೆಯುಂ ಸುಷಮದುಷ್ಷಮೆಯುಂ ದುಷ್ಷಮಸುಷುಮೆಯುಂದುಷ್ಷಮೆ ಯುಮತಿದುಷ್ಷಮೆಯುಮೆಂದು ಷಟ್ಪ್ರಕಾರಮಕ್ಕುಮೀ ಕ್ರಮದಿಂದವಸರ್ಪಿಣೀ ಕಾಲಮುಮಂತೆಯಕ್ಕುಮಲ್ಲಿ ಮೊದಲಕಾಲಕ್ಕೆ ನಾಲ್ಕು ಕೋಟಾಕೋಟಿಸಾಗರೋಪಮ ಮೆರಡನೆಯದಕ್ಕೆ ಮೂಱು ಕೋಟಾಕೋಟಿಸಗರೋಪಮಂ ಮೂಱನೆಯದಕ್ಕೆರಡು ಕೋಟಾಕೋಟಿ ಸಾಗರೋಪಮಂ ನಾಲ್ಕನೆಯದಕ್ಕೆ ನಾಲ್ವತ್ತೆರಡು ಸಾಸಿರವರುಷಗುಂದಿ ದೊಂದು ಕೋಟಾಕೋಟಿ ಸಾಗರೋಪಮಮೈದನೆಯದಕ್ಕಿಪ್ಪತ್ತೊಂದು ಸಹಸ್ರ ಸಂವತ್ಸರ ಮಾಱನೆಯದಕ್ಕನಿತೇ ಪ್ರಮಾಣಮುಮಕ್ಕುಮಿಂತು

ವ್ಯವಸಾಯಂ ಗಣಕತ್ವಂ
ವ್ಯವಹಾರಂ ವಿದ್ಯೆ ಶಿಲ್ಪಸೇವನಮುಂ ಸಂ
ಭವಿಸುವ ಷಟ್ಕರ್ಮಕದಿಂ
ದವೆ ಷಡ್ವಿಧಮಕ್ಕು ಪಾಪಹರದಾರ್ಯಜನಂ    ೨೭೦

ವ : ಮತ್ತಂ ಮಿಥ್ಯಾದೃಷ್ಟಿ ಸಾಸಾದಾನಸಮ್ಯಗ್ದೃಷ್ಟಿ ಸಮ್ಯಗ್ಮಿಥ್ಯಾದೃಷ್ಟಿ ಅಸಂಯತಸಮ್ಯಗ್ದೃಷ್ಟಿ ದೇಶವ್ರತಿ ಪ್ರಮತ್ತಸಂಯತನಪೂರ್ವಕರಣ ಕ್ಷಪಕೋಪಶಮಕ ಸಂಯತನನಿವೃತ್ತಿಕರಣ ಕ್ಷಪಕೋಪಶಮಕಸಂಯತ ಸೂಕ್ಷ್ಮಸಾಂಪರಾಯಕ್ಷಪ ಕೋಪಶಮಕ ಸಂಯತನು ಪಶಾಂತಕಷಾಯ ವೀತರಾಗಚ್ಛದ್ಮಸ್ಥಸಂಯತಕ್ಷೀಣಕಷಾಯ ವೀತರಾಗಚ್ಛದ್ಮಸ್ಥಸಂಯುತ ಸಯೋಗಕೇವಳಿ ಅಯೋಗಕೇವಳಿಯೆಂಬ ಪದಿನಾಲ್ಕು ಗುಣಸ್ಥಾನಭೇದದಿಂ ತದಾರ್ಯ ಜನಮುಂ ಪದಿನಾಲ್ಕುತೆಱನಾಗಿ ತೋಱುತ್ತುಮಿರ್ದು

ಧರ್ಮಕರಣಪ್ರವೀಣಂ
ನಿರ್ಮಳಚಾರಿತ್ರಶೀಲಮಂ ತಾಳ್ದಿರ್ಕುಂ
ಕರ್ಮಕ್ಷಯಮಂ ಮಾಡುವ
ಪೆರ್ಮೆಗೆ ಸಂಪ್ರಾಪ್ತಮಪ್ಪುದಖಿಳಾರ್ಯಜನಂ   ೨೭೧

ಮ್ಲೇಚ್ಛಖಂಡಂಗಳೈದು ಸ
ಮುತ್ಸವದಿಂದಲ್ಲಿ ಪುಟ್ಟಿ ನೆಲಸಿರ್ದು ಮಹಾ
ಮ್ಲೇಚ್ಛರುಮೆಯ್ದೆಱನಪ್ಪರ
ತುಚ್ಛಜಿನಾಗಮಪಯೋಧಿಪಾರಗಮತದಿಂ      ೨೭೨

ಪುಟ್ಟುವುದು ಮನುಜಜೀವಂ
ನೆಟ್ಟನೆ ಮಲಮೂತ್ರಜಂತು ದುರ್ಗಂಧಕ್ಕೆಡೆ
ಗೊಟ್ಟ ಸ್ತ್ರೀಗರ್ಭದೊಳಂ
ಪುಟ್ಟುವ ತೆಱದಿಂದಮಲ್ಲಿ ದುಷ್ಕ್ರಿಮಿನಿಕರಂ   ೨೭೩

ಈತೆಱದ ಮನುಜಗತಿವಿ
ಖ್ಯಾತಶರೀರಸ್ವರೂಪಮಂ ಪೇಳ್ದಿನ್ನುಂ
ಸಾತಿಶಯದೇವಗತಿಯ ವಿ
ಭೂತಿಯನಿಂತೆಂದು ಪೇಳುತಿರ್ದಂ ಜಿನಪಂ        ೨೭೪

ವ : ಅದೆಂತೆಂದೊಡೆ ಜೀವಜೀವಂ ಭವನ ವ್ಯಂತರ ಜ್ಯೋತಿಷ್ಕ ವೈಮಾನಿಕ ಭೇದದಿಂ ಚತುರ್ವಿಧಮಕ್ಕುಮಲ್ಲಿ ಭವನವಾಸಿಕರ ಸುರನಾಗವಿದ್ಯುತ್ಸುವರ್ಣಾಗ್ನಿ ವಾತಸ್ತನಿತೋದ ಧಿದ್ವೀಪ ದಿಕ್ಕುಮಾರವಿಕಲ್ಪದಿಂ ಪತ್ತುತೆಱನಪ್ಪವರೊಳಸುರಕುಮಾರಕರ್ಗಿಪ್ಪತ್ತೈದು ಬಿಲ್ಲುದ್ದಮುಳಿದವರ್ಗೆ ಪತ್ತುಬಿಲ್ಲುದ್ದ ಮುತ್ಕರ್ಷದಿಂದೊಂದು ಸಾಗರೋಪಮ ಮಾಯುಷ್ಯಂ ವ್ಯಂತರರ್ ಕಿನ್ನರ ಕಿಂಪುರುಷ ಗರುಡ ಗಂಧರ್ವ ಯಕ್ಷರಾಕ್ಷಸಭೂತ ಪಿಶಾಚ ಭೇದದಿಂದೆಂಟುತೆಱನಪ್ಪವರ್ಗೆ ಪತ್ತುಬಿಲ್ಲುತ್ಸೇಧಂ ಪಲ್ಯೋಪಮಂ ಪರಮಾಯು ಜ್ಯೋತಿಷ್ಕ ಚಂದ್ರಾದಿತ್ಯ ಗ್ರಹ ನಕ್ಷತ್ರಪ್ರಕೀರ್ಣಕ ತಾರಕಭೇದದಿಂದೈದುತೆಱನಪ್ಪರವರು ತ್ಸೇಧಮಂ ಸಪ್ತಚಾಪೋದಯಂ ಪರಮಾಯುಷ್ಯಮುಂ ವ್ಯಂತರರಂತಿರ್ಕುಂ

ಮತ್ತೆ ಜಘನ್ಯಾಯುಷ್ಯಂ
ಪತ್ತುಂ ಸಹಸ್ರಾಬ್ದಮಕ್ಕು ಭವನ ವ್ಯಂತರ
ರ್ಗೊತ್ತಮಿಕುಂ ಜ್ಯೋತಿಷ್ಕರ
ಮೊತ್ತಕ್ಕದಮಾಯುಪಲ್ಯದಷ್ಟಮಭಾಗಂ       ೨೭೫

ವ : ಅದಲ್ಲದೆಯುಂ ವೈಮಾನಿಕದೇವರ್ ಕಲ್ಪಜರೆಂದುಂ ಕಲ್ಪಾತೀತರೆಂದೆರಳ್ತೆಱನಪ್ಪರಾ ಕಲ್ಪಂಗಳುಂ ಸೌಧರ್ಮ ಈಶಾನ ಸನತ್ಕುಮಾರ ಮಾಹೇಂದ್ರ ಬ್ರಹ್ಮ ಬ್ರಹ್ಮೋತ್ತರಲಾಂತದ ಕಾಪಿಷ್ಠ ಶುಕ್ರ ಮಹಾಶುಕ್ರ ಶತಾರ ಸಹಸ್ರಾರ ಆನತ ಪ್ರಾಣತ ಆರಣ ಅಚ್ಯುತಂಗಳೆಂದು ಪದಿನಾಱಕ್ಕುಮಲ್ಲಿ ಸೌಧರ್ಮೀಶಾನಕಲ್ಪಜರ್ಗೆ ಶರೀರಮಾನ ಮೇಳುರತ್ನಿ ಪರಮಾಯುಷ್ಯಮೆರಡುಸಾಗರೋಪಮಂ ಸನತ್ಕುಮಾರ ಮಾಹೇಂದ್ರಕಲ್ಪ ಜರ್ಗೆ ಆಱುರತ್ನಿ ಸಪ್ತಸಾಗರೋಪಮಂ ಬ್ರಹ್ಮಬ್ರಹ್ಮೋತ್ತರಕಲ್ಪಜರ್ಗೆ ಪಂಚರತ್ನಿ ಪತ್ತು ಸಾಗರೋಪಮಂ ಲಾಂತವ ಕಾಪಿಷ್ಠ ಕಲ್ಪಜರ್ಗಂ ಪಂಚರತ್ನಿ ಪದಿನಾಲ್ಕು ಸಾಗರೋಪಮಂ ಶುಕ್ರಮಹಾಶುಕ್ರಕಲ್ಪಜರ್ಗೆ ನಾಲ್ಕುರತ್ನಿ ಪದಿನೆಂಟುಸಾಗರೋಪಮಂ ಆನತ ಪ್ರಾನತಕಲ್ಪ ಜರ್ಗೆ ಮೂಱುವರೆರತ್ನಿ ವಿಂಶತಿ ಸಾಗರೋಪಮಂ ಆರಣ ಅಚ್ಯುತ ಕಲ್ಪಜರ್ಗೆ ಮೂಱು ರತ್ನಿ ದ್ವಾವಿಂಶತಿಸಾಗರೋಪಮಮಕ್ಕುಂ ಮತ್ತಂ ಕಳ್ಪಾತೀತಂಗಳಪ್ಪಧೋಗ್ರೈವೇಯ ಕತ್ರಯದವರ್ಗೆರಡುವರೆ ಹಸ್ತಂ ಮಧ್ಯಮ ಗ್ರೈವೇಯಕತ್ರಯದವರ್ಗೆರಡು ಹಸ್ತಮೂರ್ಧ್ವಗ್ರೈವೇಯಕ ತ್ರಯದವರ್ಗೆ ಒಂದುವರೆಹಸ್ತಮಲ್ಲಿಂ ಮೇಲಣವರ್ಗೆಲ್ಲಂ ಹಸ್ತಪ್ರಮಾಣ ಮಕ್ಕುಮವರವರಾಯುಷ್ಯಮುಂ ಪ್ರತ್ಯೇಕಮೇಕೈಕವೃದ್ಧಿಯಿಂ ಕಡೆಯ ಸರ್ವಾರ್ಥ ಸಿದ್ಧಿಪರ್ಯಂತಂ ಮೂವತ್ತಮೂಱು ಸಾಗರೋಪಮಮಕ್ಕುನಿಂತು

ತಪಮಂ ಬಾಲ್ಯದೊಳಪ್ಪುಕೆಯ್ದನತಿಚಾರಂ ಮಾಡುತುಂ ನಾಡೆ ವ
ರ್ತಿಪರುಂ ಮಾಳ್ಪರಕಾಮನಿರ್ಜರೆಗಳಂ ಸಮ್ಯಕ್ತ್ವಸಂಧಾರಿಗಳ್
ಕೃಪೆಯೊಳ್ ಕೂಡಿ ಸಮಾಧಿಯಂ ಪಡೆದರುಂ ರತ್ನತ್ರಯಧಾರರುಂ
ವಿಪುಳಶ್ರೀಸರಲೋಕದೊಳ್ ಜನಿಸಿ ನಾನಾಸೌಖ್ಯಮಂ ಸೇವಿಪರ್    ೨೭೬

ನರಕಾದಿ ಚತುರ್ಗತಿಯೊಳ್
ಬೆರಸಿದ ಜೀವಸ್ವರೂಪಭೇದಮನಾ ಜಿನ
ವರನುಸಿರ್ದು ಮತ್ತಜೀವನ
ಸ್ವರೂಪಭೇದನಮನಿಂತು ಪೇಳುತ್ತಿರ್ದಂ         ೨೭೭

ವ : ಅಂತೆಂದೊಡೆ ಧರ್ಮಾಧರ್ಮಾಕಾಶ ಕಾಲ ಪುದ್ಗಲಭೇದದಿನಜೀವಂ ಪಂಚಪ್ರಕಾರ ಮಕ್ಕಮಲ್ಲಿ

ದೊರೆಕೊಂಡಡೆ ಜೀವಂ ಮ
ತ್ತಿರದೌಷಡ್ಡ್ರವ್ಯಮೆನಿತುಕಾಲದೊಂದಂ
ಬೆರಸದೆಯದಱೊಳ್ ಕಳೆದೊಡೆ
ಧರಿಸುಗು ಪಂಚಾಸ್ತಿಕಾಯಮೆಂಬೀ ಪೆಸರಿಂ      ೨೭೮

ವ : ಮತ್ತಂ ಲೋಕಾಕಾಶವ್ಯಾಪಾರಂಗಳಪ್ಪ ಧರ್ಮಾಧರ್ಮಂಗಳೆಂಬೆರಡುಂ ಜೀವಪುದ್ಗಲಗಳ ಗತಿಸ್ಥಿತಿಗೆ ಕಾರಣಂಗಳಕ್ಕು ಮತ್ಸ್ಯಂಗಳ್ಗೆ ಜಲದಂತಿರಶ್ವಂಗಳ್ಗೆ ನೆಲದಂತೆಯುಂ ಧರ್ಮಾಧರ್ಮಗಳೇಕಜೀವಮಯಂಗಳಸಂಖ್ಯಾತಪ್ರದೇಶಂಗಳಾಗಿ ತೋಱುತ್ತುಮಿರ್ಕುಮಾ ಕಾಶಮೆಂಬುದು ನಿತ್ಯಂ ವ್ಯಾಪಕಮುಮಾಗಿ ಲೋಕಾಕಾಶಮೆಂದು ಮಲೋಕಾಕಾಶಮೆಂದೆರ ಳ್ತೆಱನಕ್ಕುಂ

ಜೀವಾದಿದ್ರವ್ಯಂಗ
ಳ್ಗಾವಗಮವಗಾಹನೈಕಲಕ್ಷಣಗುಣಸ
ದ್ಭಾವಂ ಲೋಕಾಕಾಶಂ
ಕೇವಳಮದಱಿಂದೆ ಪೊಱಗಲೋಕಾಕಾಶಂ        ೨೭೯

ವ : ಮತ್ತಂ ಜೀವಾದಿದ್ರವ್ಯವರ್ತನಾಪರಿಣಾಮರೂಪೋಪಯೋಗ್ಯಮಪ್ಪುದು ಕಾಲ ದ್ರವ್ಯಮದುಂ ಮುಖ್ಯವ್ಯವಹಾರಭೇದದಿಂ ದ್ವಿವಿಧಮಕ್ಕುಂ

ವ್ಯವಹಾರಕಾಲಮೆಂದುಂ
ರವಿಶಶಿಯುದಯಾಸ್ತಮಾನಘಟಿಕಾಸಂಖ್ಯಂ
ತವೆಯದದು ಮುಖ್ಯಕಾಲಂ
ಭುವನದೊಳನುಮೇಯರೂಪಮೆನಿಕುಂ ನಿರುತಂ           ೨೮೦

ಪರಿಕಿಸೆ ಪುದ್ಗಲಮೆಂಬುದು
ಪಿರಿದೆನಿಪ ಸ್ಪರುಶಗಂಧವರ್ಣರಸಂಗಳ
ಬೆರಕೆಯನುಳ್ಳದದುಂ ಮ
ತ್ತೆರಡುತೆಱಂ ಸ್ಪಂದಮಣು ದಲೆಂದೀ ಕ್ರಮದಿಂ೨೮೧

ವ : ಅದಕ್ಕಂ ಸ್ಥೂಲಸೂಕ್ಷ್ಮಚ್ಛಾಯಾತಪಾದಿ ರೂಪವಿಕಲ್ಪದಿನನೇಕಭೇದ ಮಕ್ಕುಮಿಂತು

ಸುರಸಭೆಗಜೀವತತ್ತ್ವ
ಸ್ವರೂಪಮಂ ತಿಳಿಯೆಪೇಳ್ದು ಸಕಳಜ್ಞಂ ಬಂ
ಧುರಮಾದಾಸ್ರವತತ್ತ್ವದ
ಪರಿಯಂ ಪೇಳುತ್ತುಮಿರ್ದನಂದಾದರದಿಂ         ೨೮೨

ವ : ಅದೆಂತೆನೆ

ಪಿರಿದುಂ ಮಾಳ್ಪ ಶುಭಾಶುಭಾಧಿಕ ಮನೋವಾಕ್ಕಾಯಕರ್ಮಂಗಳಿಂ
ದೊರೆಕೊಳ್ಗುಂ ಸಲೆಪುಣ್ಯಪಾಪದ ಸಮಾಯಾನಂ ಸಮಂತೆಯ್ದೆ ಪೊ
ರ್ದಿರವೇಯಾಸ್ರವಮಕ್ಕು ಸಂಯಮಸರಾದಿ ಕ್ಷಾಂತಿಶೌಚಾದಿ ಸ
ತ್ಪರಿಣಾಮಂಗಳಿನಪ್ಪುದಂತದಶುಭಧ್ಯಾನಂಗಳಿಂ ನಿಂದೆಯಿಂ         ೨೮೩

ಸಲೆ ಬಹ್ವಾರಂಭದಿಂ ಪೊರ್ದುವುದು ನರಕದಾಯುಷ್ಯಮಾತ್ಮಪ್ರದೇಶಂ
ಗಳೊಳಲ್ಪಾರಂಭದಿಂ ಸಾರ್ವುದು ನರಗತಿಯಾಯುಷ್ಯಮುಂ ಮಾಯೆಯಿಂ ಸಂ
ಗಳಿಸಿರ್ಕುಂ ತಿರ್ಯಗಾಯುಸ್ಥಿತಿ ಸುರಗತಿಯಾಯುಷ್ಯಮಾಶ್ರೈಸುಗುಂ ಮಂ
ಜುಳರಾಗಂಗೂಡಿದೊಳ್ಸಂಯಮಗುಣವಿಮಳಾಚಾರಶೀಲಂಗಳಿಂದಂ           ೨೮೪

ಅಱಿಪಿದನಾಸ್ರವತ್ತ್ವದ
ತೆಱನಂ ಶ್ರೀಧರ್ಮನಾಥಜಿನಪತಿಸಭೆಗಂ
ಕಿಱಿದಾಗಿ ಬಂದ ತತ್ತ್ವದ
ತೆಱನುಮನಿಂತೆಂದು ಮತ್ತೆ ಪೇಳುತ್ತಿರ್ದಂ        ೨೮೫

ವ : ಅದೆಂತೆಂದೊಡೆ

ನೆಲಸಿದ ದುಷ್ಕಷಾಯವಶದಿಂದೆ ಶರೀರನಿಜಪ್ರದೇಶದೊಳ್
ತೊಲಗದೆ ಕರ್ಮರೂಪಕನುಯೋಗ್ಯಮೆನಿಪ್ಪುದು ಪುದ್ಗಲಂಗಳಂ
ಸಲೆಧರಿಸುತ್ತುಮಿರ್ದಿರದೆ ಬಂಧಮಿದಕ್ಕಮಿವೈದುಕಾರಣಂ
ದಲವಿರತಿ ಪ್ರಮಾದ ಖಳಯೋಗ ಕಷಾಯ ಕುಮೈಥ್ಯದರ್ಶನಂ      ೨೮೬

ಪ್ರಕೃತಿಸ್ಥಿತ್ಯನುಭಾಗಾ
ದಿಕಪ್ರದೇಶಂಗಳೆಂಬ ಭೇದದೆ ಬಂಧಂ
ಪ್ರಕಟಚತುರ್ವಿಧಮಕ್ಕುಂ
ಪ್ರಕೃತಿಯುಮೆಂಟುಪ್ರಕಾರಮೆನಿಸುವುದದಱೊಳ್         ೨೮೭

ವ : ಜ್ಞಾನಾವರಣೀಯಮುಂ ದರ್ಶನಾವರಣೀಯುಮುಂ ವೇದನೀಯುಮುಂ ಮೋಹನೀಯ ಮುಮಾಯುಷ್ಯಮುಂ ನಾಮಮುಂ ಗೋತ್ರಮುಮಂತರಾಯಮುಮೆಂ ದಿಂತನುಕ್ರಮದಿಂ

ಅಯ್ದುಮೊಂಭತ್ತುಮೆರಡುಮ
ದೆಯ್ದಿಪ್ಪತ್ತೆಂಟುನಾಲ್ಕು ನಾಲ್ವತ್ತೆರಡೆರ
ಡಯ್ದೆಂಬೀ ಪರಿಭೇದಮ
ನೆಯ್ದುವುದು ಜ್ಞಾನವೃತ್ತಿಮೊದಲ್ಗೊಂಡೆಂಟುಂ            ೨೮೮

ವ : ಮತ್ತಂ ಜ್ಞಾನಾವರಣೀಯ ದರ್ಶನಾವರಣೀಯ ವೇದನೀಯಾಂತ ರಾಯಂಗಳ ಸ್ಥಿತಿಪ್ರತ್ಯೇಕಮುತ್ಕೃಷ್ಟದಿಂ ಮೂವತ್ತುಕೋಟಾಕೋಟಿಸಾಗರೋಪಮಂ ಮೋಹನೀಯದ ಸ್ಥಿತಿಯೆಪ್ಪತ್ತುಕೋಟಾಕೋಟಿಸಾಗರೋಪಮ ನಾಮಗೋತ್ರಂಗಳ ಸ್ಥಿತಿ ಪ್ರತ್ಯೇಕಮಿಪ್ಪತ್ತು ಕೋಟಾಕೋಟಿಸಾಗರೋಪಮಮಾಯುಷ್ಯಕರ್ಮದ ಸ್ಥಿತಿ ಮೂವತ್ತ ಮೂಱು ಕೋಟಾಕೋಟಿ ಸಾಗರೋಪಮಮಕ್ಕು ಜಘನ್ಯಸ್ಥಿತಿ ವೇದನೀಯಕ್ಕೆ ದ್ವಾದಶ ಮುಹೂರ್ತಂ ನಾಮಗೋತ್ರಂಗಳ್ಗೆಂಟುಮುಹೂರ್ತಮುಳಿದವಕ್ಕಂತ ರ್ಮುಹೂರ್ತ ಮುಮಕ್ಕುಮಿಂತು

ಭಾವಕ್ಷೇತ್ರಾಪೇಕ್ಷಂ
ಜೀವನ ಕರ್ಮಸ್ವಭಾವ ಪರಿಪಾಕಮದೇ
ಭಾವಿಪೊಡನುಭಾಗಮಿದೆಂ
ಬೀ ವಿಧಮುಂ ಪ್ರಕಟಮಾದುದರ್ಹನ್ಮತದೊಳ್            ೨೮೯

ಸಲೆಬಂಧಭೇದದಿಂದ
ಗ್ಗಳಿಸಿದ ಸರ್ವಾತ್ಮಸುಪ್ರದೇಶಂಗಳೊಳಂ
ಕಲಿಲಪ್ರದೇಶಮೆಲ್ಲಂ
ನೆಲಸಿರ್ದುದೆ ತಾಂ ಪ್ರದೇಶಮೆಂಬುದದಕ್ಕುಂ    ೨೯೦

ಇಂತು ಚತುರ್ವಿಧಮಾಗಿ ಸ
ಮುಂತೊಪ್ಪುವ ಬಂಧತತ್ತ್ವಮಂ ವಿವರಿಸಿ ಜಿನ
ಪಂ ತಿಳಿಪುತ್ತಿರ್ದಂ ಮುನಿ
ಸಂತತಿಗಂ ಸಂವರಾದಿತತ್ತ್ವದ ತೆಱನಂ೨೯೧

ವ : ಅದು ಮತ್ತಮೆಂತೆನೆ

ಕರ್ಮಂಗಳಾಸ್ರವಂಗಳ
ನೊರ್ಮೊದಲೊಳ್ ನೆಱೆನಿರೋಧನಂಗೆಯ್ವ ದಿಟಂ
ಪೆರ್ಮೆಯೆ ಸಂವರಮೆನಿಕುಂ
ಧರ್ಮಂ ಸಮಿತಿ ತ್ರಿಗುಪ್ತಿಯಿಂ ಪುಟ್ಟುಗದುಂ    ೨೯೨

ಸಂಸಾರಮೂಲಮಾಶ್ರವ
ಕಂ ಸಂವರಮೆಯ್ದೆ ಮೋಕ್ಷಮೂಲಮೆನಿಕ್ಕುಂ
ಸಂಶಯಮಿಲ್ಲಿದುವೆ ರಹ
ಸ್ಯಂ ಶಾಸನದಲ್ಲಿ ನಿರತಿಶಯಜಿನಪತಿಯಾ       ೨೯೩

ಮಿಗೆ ಸಂವರತತ್ತ್ವಮನಾ
ಜಗದೀಶ್ವರನುಸಿರ್ದು ನಿರ್ಜರಾತತ್ತ್ವದ ದಂ
ದುಗದಂದಮನಿಂತೆಂದೊ
ಳ್ಪೊಗೆವನ್ನಂ ಬಗೆಗೆ ಮತ್ತೆ ಪೇಳುತ್ತಿರ್ದಂ       ೨೯೪

ತಳೆದು ಶುಭಾಶುಭಕರ್ಮಂ
ಗಳನಾತ್ಮಂ ಬಿಡದೆ ನಿರ್ಜರಿಸುತಿಪ್ಪುದಱಿಂ
ದಳವಟ್ಟುದಿದಕೆ ಸಾರ್ಥಮ
ನೊಳಕೊಂಡ ವಿನಿರ್ಜರಾಭಿಧಾನಂ ನಿಯತಂ      ೨೯೫

ವ : ಅದು ಮತ್ತೆ ಸಕಾಮನಿರ್ಜರೆಯೆಂದಕಾಮನಿರ್ಜರೆಯುಮೆಂದು ಮೆರಳ್ತೆಱ ನಕ್ಕುಮಲ್ಲಿ ಪ್ರತೋಪಕ್ರಮದಿಂ ಮಾಡಲ್ಪಟ್ಟುದು ಸಕಾಮನಿರ್ಜರೆಯೆಂಬುದು ಸ್ವವಿಪಾಕ ದಿಂದಿಪ್ಪುದಕಾಮನಿರ್ಜರೆಯೆಂಬುದಿಂತು

ಅಭಿವರ್ಣಿಸಿದಂ ದಿವಿಜರ
ಸಭೆಗೆ ಜಿನಸ್ವಾಮಿ ನಿರ್ಜರಾತತ್ತ್ವಮನಿಂ
ತು ಭವಹರಮೋಕ್ಷತತ್ತ್ವ
ಪ್ರಭಾವಮಂ ಬಳಿಕೆ ತಿಳಿಯಪೇಳುತ್ತಿರ್ದಂ        ೨೯೬

ಸಲೆ ಬಂಧ ಹೇತ್ವಭಾವದಿ
ನಲಘುವಿನಿರ್ಜರೆಯಿನಖಿಳಕರ್ಮಕ್ಷಯಮೇ
ವಿಳಸಿತಮೋಕ್ಷಮೆನಿಕ್ಕು
ಜ್ವಳರತ್ನತ್ರಯಮದಕ್ಕೆ ಕಾರಣಮಕ್ಕುಂ         ೨೯೭

ಬಪ್ಪಘಮಂ ನಿರೋಧಿಸುತುಮಿರ್ಪುದು ಬೋಧಮುಪಾರ್ಜಿತಾಘಮಂ
ತಪ್ಪದೆ ನಾಡೆಯುಂ ಕೆಡಿಸುತಿರ್ಪುದು ಚಾರುಚರಿತ್ರಮೆಯ್ದವ
ಕ್ಕೊಪ್ಪುವ ಪುಷ್ಟಿಯಂ ಪಡೆವುತಿರ್ಪುದು ದರ್ಶನಮೀ ತ್ರಯಕ್ಕೆ ಸ
ಮ್ಯತ್ಪದ ಯೋಜನಂ ಬೆರಸಲಿಂತಿವು ಮೋಕ್ಷಸುಖಕ್ಕೆ ಕಾರಣಮ     ೨೯೮

ತತ್ತ್ವಾವಗತಿಜ್ಞಾನಂ
ತತ್ತ್ವಶ್ರದ್ಧಾನಮೆಸೆವ ದರ್ಶನಮುರು ಚಾ
ರಿತ್ರಂ ಪಾಪಾರಂಭನಿ
ವರ್ತನಮಿದು ಲಕ್ಷಣಂ ಸುರತ್ನತ್ರಯದಾ         ೨೯೯

ವ : ಮತ್ತಮಾ ರತ್ನತ್ರಯಸಂಪತ್ತಿಯಿಂ ರಾಗದ್ವೇಷಾದಿಗಳ್ಗೆ ನಿರ್ನಾಶ ಮಕ್ಕುಮದಱ ನಾಶದಿಂ ಸಕಳಕರ್ಮಂಗಳುಂ ಕೆಟ್ಟುಪೋಕಿಂತು

ಕರ್ಮಕ್ಷಯದೊಳ್ಚರಮವ
ಘರ್ಮಾತ್ರಾಕಾರದಿಂದೆ ಲೋಕಾಗ್ರದೊಳಂ
ಪೆರ್ಮೆವಡೆದಿಪ್ಪನಾತ್ಮಂ
ನಿರ್ಮಳಮಪ್ಪಷ್ಟಗುಣಸುಪುಷ್ಟ ಹೃಷ್ಟಂ      ೩೦೦

ಅಳುರ್ವಗ್ನಿಶಿಖಾವೃಂದಂ
ಗಳ ತೆಱದಿಂದೂರ್ಧ್ವಗಾಮಿಯಾದೊಡಮದಱೊಳ್
ನೆಲಸಿರ್ದಂ ಪೋಗದೆಯ
ಗ್ಗಳಿಸಿದ ಧರ್ಮಾಸ್ತಿಕಾಯಮಿಲ್ಲಾದುದಱಿಂ   ೩೦೧

ವ : ಆ ಮೋಕ್ಷಪದದಲ್ಲಿ ನಿತ್ಯುಸ್ಥಿತಿವೆತ್ತ ಮುಕ್ತಿಜೀವಂ ಪ್ರಾಗ್ದೇಹದಿಂ ಕಿಂಚಿದೂನನಾಗಿ ನಿರಂತರ ಸುಖಮನವಲಂಬಿಸುತ್ತಿರ್ದು

ನಿರತಿಶಯಮಾಗಿ ಪೆರ್ಚಿದ
ಪರಿಭೋಧಾರಹಿತಮಾದ ಶಾಶ್ವತಸುಖದಿಂ
ಪಿರಿದುಂ ತಣಿವುತ್ತಿರ್ದಂ
ದೊರೆಕೊಂಡ ಜರಾಮರತ್ವಶುದ್ಧಂ ಸಿದ್ಧಂ     ೩೦೨

ವ : ಇಂತು ನಿರೂಪಿತಸ್ವರೂಪಂ ಪಂಚಾಸ್ತಿಕಾಯ ಷಡ್ದ್ರವ್ಯ ಸಪ್ತತತ್ತ್ವನವ ಪದಾರ್ಥಂಗಳ ನಾಮೂಳಚೂಳನೈರಂತರ್ಯದಿನೊಳಕೊಂಡು ಚತುರ್ದಶರಜ್ಜೊತ್ಸೇಧದಿ ನಂದಂಬಡೆದ ತ್ರಸನಾಳಾಂತರಾಳಮಧೋಲೋಕಂ ಮಧ್ಯಲೋಕಮೂರ್ಧ್ವಲೋಕಮೆಂಬ ಭೇದದಿಂ ಮೂದೆಱನಕ್ಕುಮಲ್ಲಿ ಸಪ್ತರಜ್ಜುಪ್ರಮಿತ ದಕ್ಷಿಣೋತ್ತರಾಯಾಮಮನುಳ್ಳದು ನರಕಮಲ್ಲಿಂ ಮೇಲೆ ಭವನಮೆಂಬ ನಾಗಲೋಕಮಿಕ್ಕುಮಲ್ಲಿಂದಂ ಮೇಲೇಕ ರಜ್ಜುವಿಸ್ತಾರಿತ ಮಧ್ಯ ಪ್ರದೇಶದೊಳೇಕದ್ವೀಪಾಕೂಪಾರವರುಷಧರಪರ್ವತ ಮಂದರ ಮಹೀಧರ ಪೂರ್ವಾಪರವಿದೇಹಭರತೈರಾವತ ಕರ್ಮಭೋಗಭೂಮಿಸಮಾಕೀರ್ಣ ಸ್ವಯಂಭೂರಮಣ ಸಮುದ್ರ ಮೇರೆಯಾಗಿರ್ಪುದು ಮನುಷ್ಯಲೋಕಮಲ್ಲಿಂಮೇಲೆ ಜ್ಯೋತಿರ್ಲೋಕಮಾದಿಯಾಗಿ ಪಂಚರಜ್ಜುಪ್ರಮಾಣವಿಶಾಳಮಾದ ಮೇಗಣಭಾಗದಲ್ಲಿ ಷೋಡಶಕಲ್ಪಂಗಳಿರ್ಪವಲ್ಲಿಂ ಮೇಲೋಂಭತ್ತುಗ್ರೈವೇಯಕಂಗಳಿಕ್ಕುಮಲ್ಲಿಂದಂ ಮೇಲೆ ನವಾಣುತ್ತರೆಗಳೆಸೆವವಲ್ಲಿಂ ಮೇಲೆ ಸರ್ವಾರ್ಥಸಿದ್ಧಿಮಧ್ಯವಪ್ಪ ಪಂಚಾಣುತ್ತರೆಗಳೆ ಸೀಮೆಯಾಗಿರ್ಪುದು ದೇವಲೋಕಮೀ ಮೂಱುಂಲೋಕಮುಂ ಘನೋದಧಿ ಘನೋ ನಿಳಯ ತನುವಾತಮೆಂಬ ಪೆಸೆರನುಳ್ಳ ವಾಯುತ್ರಯಮಾವೇಷ್ಟಿತಮಾಗಿರ್ದುದು ಮಿಂತುಪಲಕ್ಷಿತಮಾದ ತ್ರಿಳೋಕನಾಳಿಕಾಶಿಖರಶಿಖಾಶೇಖರಾಯಮಾಣ ಸಿದ್ಧಪರಮೇಷ್ಠಿ ಸಮಧಿಷ್ಠಿತಮಪ್ಪ ಕ್ಷಯಾನಂದಮೋಕ್ಷಮಿಕ್ಕುಮದಕ್ಕೆ ನಿರ್ಮಳಮಪ್ಪೇಕಾದಶನಿಳಯನಿಷ್ಠಿತ ಸಾಗಾರಧರ್ಮದೊಳಂ ಬಾಹ್ಯಾಭ್ಯಂತರಭೇದಭಿನ್ನ ದ್ವಾದಶವಿಧ ತಪೋಲಕ್ಷಣಮಪ್ಪನ ಗಾರಧರ್ಮದೊಳಂ ನೆಗಳ್ವಣುವ್ರತ ಮಹಾವ್ರತದೊಳ್ ಕೂಡಿದ ಸಮ್ಯಗ್ಧರ್ಶನ ಜ್ಞಾನ ಚಾರಿತ್ರಗಳೆಂಬ ರತ್ನತ್ರಯಸಾಕಲ್ಯಮೇಕಾರಣಮದೆ ಭವ್ಯಜನಪರೋಪಾದೇಯಮೆಂದು ಸರ್ವವಿಶ್ವೇಶ್ವರಂ ನಿರವದ್ಯ ಸ್ಯಾದ್ವಾದಪ್ರತಿಷ್ಠಾಮುಖದಿಂ ಸಪ್ತಭಂಗಿ ಸಮಾಲಿಂಗನ ಭಂಗುರಮಾದ ಸಪ್ತತತ್ತ್ವಸ್ವರೂಪಮಂ ಪ್ರತಿಪಾದಿಸುತ್ತುಮಿರ್ಪಲ್ಲಿ

ಪರಮಜಿನೇಂದ್ರಚಂದ್ರಮುಖಮಂಡಳದಿಂದಮೃತಪ್ರವಾಹಮುಂ
ಕರಮೊಸರುತ್ತುಮಿರ್ದಪುದಿದೆಂಬಿನೆಗಂ ಪೊಱಪೊಣ್ಮುತಿರ್ದ ದಿ
ವ್ಯರವಮಶೇಷಭವ್ಯಜನಮಾನಸಕೈರವಷಂಡಮಂಸಮಂ
ತಿರದೆ ವಿಕಾಸಿಸುತ್ತುಮುರುಹರುಷದೊಳೊಂದಿಸುತಿರ್ದುದಾಕ್ಷಣಂ  ೨೦೩

ವ : ಇಂತನಂತಚತುಷ್ಟಯ ಲಕ್ಷ್ಮೀಸಮಾಶ್ಲಿಷ್ಟನಪ್ಪಾ ಧರ್ಮನಾಥಂ ಸಕಳ ತತ್ತ್ವಸಮುಚ್ಚಯಮಂ ಸಂಕ್ಷೇಪದಿಂ ತಿಳಿವಂತು ಬೆಸಸುವುದುಮರಿಷ್ಟಸೇನಗಣಧರಾಗ್ರಗಣ್ಯಂ ಮಾಘಮಾಸದ ಕೃಷ್ಣಪಕ್ಷದ ಪಾಡಿವದ ಪೂರ್ವಾಹ್ಣದೊಳ್ ದ್ವಾದಶಾಂಗದರ್ಥಂಗಳು ಮನಪರಾಹ್ಣದೊಳ್ ಚತುರ್ದಶಪೂರ್ವಪದಂಗಳುಮನವಧಾರಿಸಿ ಪ್ರಥಮಾನುಯೋಗಂ ಚರಣಾನುಯೋಗಂ ಕರಣಾನುಯೋಗಂ ದ್ರವ್ಯಾನುಯೋಗಮೆಂಬ ನಾಲ್ಕು ವಿಕಲ್ಪಮಾಗಿ ಗ್ರಂಥರಚನೆಯಂ ಮಾಡಿ ಸಮಸ್ತಸಭಾಜನಹೃದಯಮಣಿಭಾಜನದಲ್ಲಿ ನಿಜವಚನ ರಸಾಯನಮನಿರಿಸುತ್ತು ಮಿರ್ಪುದುಂ

ಅವಧಿವಿಬೋಧದಿಂದಱಿದು ದೇವನ ಧರ್ಮವಿಹಾರ ಕಾಲಮಂ
ದಿವಿಜವರಂ ಕೃತಾಂಜಳಿಯನಿಟ್ಟು ಲಲಾಟದೊಳಂದು ಬಿನ್ನಪ
ಕ್ಕವಸರಮೆಂದು ಬಿನ್ನವಿಸಿದಂ ಜಿನರಾಜನ ಮುಂದೆ ನಿಂದಿದೇ
ಭುವನದೊಳಂ ವಿಹಾರಿಸುವ ಪೊತ್ತು ಜಗತ್ತ್ರಿತಯೈಕಪಾಲಕಾ       ೩೦೪

ಸಕಳಾರ್ಯಾಖಂಡದೊಳ್ ಪಾವನತರ ಭರತಕ್ಷೇತ್ರದೊಳ್ ಜೈನಧರ್ಮಾ
ಧಿಕಮಧ್ಯಾತ್ಮಪ್ರಭಾವಂ ಪ್ರಬಳಿಸಿ ಪಿರಿದುಂ ಪೆರ್ಚುವಂತಾಗಿ ಸತ್ಕೌ
ತುಕಮಪ್ಪ ಶ್ರೀವಿಹಾರಾಶ್ಚರ್ಯಮನೆಸಗಲ್ವೇಳ್ಕುಮೆಂದಾಗಳಾನಂ
ದಕರಪ್ರಸ್ಥಾನಶಂಸೀಪ್ರಪಟುಪಟಹಮಂ ಪೊಯ್ಸಿದಂ ದೇವರಾಜಂ            ೩೦೫

ದೆಸೆಗಳ್ ಮಾರ್ದನಿಯಿಂದೆ ಧಿಂಕಿಡುವಿನಂ ಗಂಭೀರಭೇರಿರವ
ಪ್ರಸರಂ ಮಂಗಳಗೀತತುಂಗನಿನದಂ ವೀಣಾಮಹಾಕ್ಷಾಣಮ
ರ್ವಿಸುವೆಲ್ಲಾಮರಮಂಡಳೀಜಯಜಯಪ್ರಧ್ವಾನಮುಂ ಕೂಡಿಯಾ
ಗಸಮಂ ಮೂವಳಸಾಗಿ ಮುತ್ತಿದುದು ಯಾತ್ರಾರಂಭಸಂದೋಹದೊಳ್       ೩೦೬

ಧರ್ಮಚಕ್ರಾಧಿಪತ್ಯು
ತ್ಕಾರ್ಮಂ ತಾನಾಗಿ ಸಕಳದಿಜ್ಜಯಯಾತ್ರಾ
ನರ್ಮಮೆನೆ ತಳರ್ದನಲ್ಲಿಂ
ಧರ್ಮಜಿನಂ ಬಳೆಯೆ ಜನದ ಕೋಳಾಹಳಮುಂ  ೩೦೭

ವ : ಇಂತಖಿಳಭವ್ಯಜನಂಗಳ ಪುಣ್ಯಪ್ರೇರಣದಿನನೇಕಾಡಂಬರವಿಡಂಬನದಿಂ ಕಣ್ಗೊಂಡ ಸಮವಸರಣಮಂಡಳಮನಾಖಂಡಳಂ ನಭಸ್ಥಳದೆಡೆಯೊಳ್ ನಡಯಿಪಲ್ಲಿ

ಮುಂದೇಳಂ ಪಿಂದೇಳಂ
ಕೆಂದಾವರೆವೂಗಳಂ ಜಿನೇಶಂ ಪದವಿಡು
ವಂದು ತಂದಿರಿಸಿದಂ ದಿವಿ
ಜೇಂದ್ರಂ ಹರಿಪೀಠಿಕಾತ್ರಯಾಗ್ರಸ್ಥಳದೊಳ್     ೩೦೮

ವ : ಅಂದಿಂತೊಟ್ಟು

ಶ್ರೀಪದಮಂ ಧರಿಸಿದೆನೆಂ
ಬೀ ಪದವಾಸಿಯೆನೆ ಮೆಱೆವ ಪದ್ಮದೊಳಿನ್ನುಂ
ಶ್ರೀಪದೆಪಿಂ ನೆಲಸಿರ್ದು
ವ್ಯಾಪಿಸಿದಳ್ ಪದ್ಮನಿಳಯೆಯೆಂಬೀ ಪೆಸರಂ     ೩೦೯

ಪರಮಾನುರಾಗದತಿಶಯ
ಮಿರದೊಗೆವುತ್ತಿರ್ದುದಖಿಳಜನಚಿತ್ತದೊಳಂ
ವರಸಮವರಣಮಂಡಳಿ
ಭರದಿಂದೆ ವಿಹಾರಿಸುತ್ತಾಮಿರ್ಪಾ ಪದದೊಳ್   ೩೧೦