ಶ್ರೀಪತಿ ಮುದಮೊದವೆ ತಪ
ಶ್ರೀಪತಿಯಂ ಕಾಣ್ಪ ನಿಯಮಮಂ ಪ್ರಿಯದಿಂ
ತನ್ನೋಪಳ್ಗೆ ನಲ್ಮೆ ನೆಗಳೆ ನಿ
ರೂಪಿಸಿದಂ ಸರಸಕವಿ ರಸಾಲವಸಂತಂ ೧

ಸುದತೀ ಸನ್ಮುನಿಪಾಗಮ ಶ್ರವಣಮೆಂಬೀಧಾತ್ರಿಯೊಳ್ ನಂದನಾ
ಭ್ಯುದಯ ವ್ಯಾಪ್ತಿಯನಿತ್ತುದೆಂದೊಡೆಮಗಿನೋರಂತೆ ಸಂತಾನ ಸ
ಮ್ಮದ ಲೀಲಾವಿಭವಂ ಪೊದಳ್ವುದರಿದೇ ತತ್ಪಾದ ಪೂಜಾಪ್ರಸಾ
ದದಿನೆಂದುತ್ಸಕಚಿತ್ತನಾಗಳೆಸೆದಂ ಸೌಭಾಗ್ಯಸಂಕ್ರಂದನಂ   ೨

ವ : ಅಂತು ಸಂತಸದಂತನೆಯ್ದಿ ಮೆಯ್ದೆಗೆಯದುತ್ಸಾಹಭೇರಿಯಂ ಪೊಯ್ಸಿದಾಗಳ್

ಮದಧಾರಾಸಾರದಿಂ ಸಿಂಪಿಸುಗೆ ಕರಿಧರಾಚಕ್ರಮಂ ವಾಜಿಗಳ್ ಸ
ಮ್ಮದ ಲಾಲಾಪೂರದಿಂ ಪೂವಲಿಗೆದಱುಗೆ ರಾಜನ್ಯಚಿಹ್ನಧ್ವಜಂ ಬೇ
ಗದೆ ಬಾನಿಂಬೆಯ್ದುದೆಂಬಂತೊಸಗೆ ಗುಡಿಗಳಂ ಬಂದು ಪೊತ್ತೆತ್ತುಗೆಂಬಂ
ದದಿನಾಯ್ತಾಗಳ್ ಮುನೀಂದ್ರಾಭ್ಯುಪಗಮನ ಸಮುದ್ಭೂತ ಭೇರೀನಿನಾದಂ ೩

ಆನಕಘನ ನಿನದಂ ಪರ
ಮಾನಂದಮನೀಯೆ ನಲಿದು ನರ್ತಿಸೆ ನಿಜ ಪೌ
ರಾನೀಕ ಕೇಕಿ ವೃಂದಮ
ದೇನೆಸೆದುದೋ ನೃಪಸುಚಿತ್ತಚಾತಕಚಕ್ರಂ

ವ : ಅಂತು ಘನಸಮಯದಂತೆ ಮುನಿಸಮಯಂ ಸಕಲ ಜನೋತ್ಸವಕಾರಿಯಾದ ಸಮಯ ದೊಳ್

ಕಾಂಚನ ಪತಾಕೆ ಮಿಱುಗುವ
ಮಿಂಚೆನೆ ಮಣಿದೋರಣಾಳಿ ಸುರಧನುವೆನೆ ಕಾ
ರಂಚೆಲ್ಲವಾಡಿದುದು ಕುಸು
ಮಂ ಚೆಲ್ಲಿದ್ ಕರಮೆನೆ ಕರಂ ರತ್ನಪುರಂ         ೫

ವ : ಮತ್ತಮಾ ಸಮಯದೊಳ್ ಶುಂಡಾವಿಕಾರಿಗಳಾಗಿಯುಂ ದಾನೋನ್ಮುಖಂಗಳಾಗಿ ಬರ್ಪ ಮದಕರಿಗಳಂ ಮಾರ್ಗೋಲ್ಲಂಘನಮನಂಗೀಕರಿಸಿಯುಂ ಪವ ನಾಚಾರದಿಂ ಪರಿದುಬರ್ಪ ತುರಗಂಗಳಂ ಪಳಿಗೊಳಗಾಗಿಯುಂ ಸ್ವಧರ್ಮ ಚಕ್ರಾನುವರ್ತನಮಂ ಬಿಡದೆ ನಡೆತರ್ಪ ವರೂಥಂಗಳಂ ಜೀವಾಕರ್ಷಣೋದ್ಯೋಗಾನು ರಾಗಿಗಳಾಗಿಯುಂ ಧರ್ಮಹಸ್ತ ಪ್ರಶಸ್ತರಾಗಿ ಬರ್ಪ ಕಾಲಾಲ್ಗಳಂ ಕಂಡು ಮನಂಗೊಂಡಾ ನಗರಲಕ್ಷ್ಮೀ ಸಂಯಮಿ ಸಾರ್ವಭೌಮ ನಾನಾಸಾಮರ್ಥ್ಯಮಂ ಸಾಱುವಂತೆ ದೆಸೆದೆಸೆಗೆ ಪಸರಿಸುವ ಸನ್ನೆವಱಿಯ ದನಿಯ ಕೇಳ್ದು ಹರ್ಷರಸದಿಂ ಪೊಂಗಿ ಪೊರೆಯೇಱಿದ ತನುಗೆ ತಂತಮ್ಮ ಮನೆಗಳ್ತೆಱಪೆಯ್ದವೆಂಬತೆ ಪೊಱಮಡುವ ಪುರಜನದ ಕಳಕಳಂಎ ಕರ್ಣಾಭರಣಮಾಗೆ

ಪರಿಮಳಲೋಲ ಮತ್ತಮಧುಪಾಳಿಯ ಕಾಲ್ದುಳಿಪಕ್ಕೆ ಮೆಲ್ಲನೋ
ಸರಿಸುವ ಪುಷ್ಪಮಂಜರಿಯನೊಯ್ಯನೆ ಕೂರ್ತನುಗೆಯ್ವ ಕಾಮಿನೀ
ಕರತಳರಾಗಮಾಗಳೊಸೆದಿರ್ಕುವ ಪಲ್ಲವ ಕರ್ಣಪೂರದಂ
ತಿರೆ ಹರಿಪೀಠತಳ್ಪತಳದಿಂದಿಳಿದಿರ್ದನಿಳಾಧಿನಾಯಕಂ

ವ : ಅಂತು ಸಿಂಹಾಸನಾವತರಣ ಸಮಯ ಸಂಚಲನ ಕಿಂಚಿದವಗಳಿತ ಮುನಿ ನಿವೇದಕೋಪನೀತ ನೂತನ ನವಕುಸುಮಮಂಜರೀ ಕರ್ಣಪೂರಂ ಬಿರುದ ಕಟಕ ಪಟುನಿನಾದ ದ್ವಿಗುಣಿತ ಕುಸುಮೋಪಹಾರಲೀನ ಮಧುಕರ ಝಂಕಾರಂ ಭೂಷಣ ಮಣಿಮರೀಚಿ ಮಂಜರೀಕ ಮಣಿಮಂಟಪ ಮರಕತಸ್ತಂಭಂ ಸ್ತಂಭೇರಮಗತಿಯಿ ನೊಯ್ಯನೊಯ್ಯನೆ ಮೆಯ್ವಳಿಯ ನೆಳಲಂತೆ ಬರ್ಪ ಕಾಂತೆಯ ಕರದೊಳ್ ಕರಮ ತಳ್ಕಿಕ್ಕಿ ಬಂದು ನಿಕೇತನದ್ವಾರ ದೇಶಮನಲಂಕರಿಸಿದಾಗಳ್  ೬

ತೊಲಗದೆ ತಮ್ಮತಮ್ಮ ಕೆಲಸಕ್ಕಿದಿರುಂ ಬಳಿವಾಯ್ದು ಬರ್ಪ ಕೋ
ಮಲೆಯರ ಹಾರದಿಂ ಸುರಿವ ಮುತ್ತಿನ ಸೋರ್ಮುಡಿಯಂತೆ ಸುಸುವೊ
ಳ್ಮಲರ ಕುರುಳ್ಗಳಿಂದುಗುವ ಕತ್ತುರಿಯುಬ್ಬರಮುರ್ವೆ ಪರ್ವಿ ಬ
ರ್ಪಲಘು ನಿತಂಬೆಯರ್ಗಯಸಮಂ ಪಡೆದತ್ತು ನರೇಂದ್ರಮಂದಿರಂ  ೭

ವ : ಅಂತು ಬಂಬಲಂ ತುಱುಗಲಂಗೊಂಡು ಬಂದು ನೆರೆದ ಪರಿಚಾರಿಕೆಯರೊಳಗೊರ್ವಳ್

ಇಂದುನಿಭಾನನೆ ಪೂಜಾ
ಚಂದನಮೆಲರಲೆಯೆ ನಾಡೆ ಪದನಾಱುಗುಮೆಂ
ದಂದಗಿದು ಮುಚ್ಚಿಪಿಡಿದೆ
ಯ್ತಂದಳ್ ಚಂದ್ರಕಾಂತಮಣಿಭಾಜನಮಂ        ೮

ವ : ಮತ್ತೊರ್ವಳ್

ತೊಲಗದೆ ಪೊಸಕುಸುಮದ ಮೀ
ಸಲ ಕಂಪಿಂಗಳಿಗಳಳಿಪಿ ಭೋರೆನೆ ಬಂದೆಂ
ಜಲಿಸುಗುಮೆಂದಾಂತಳ್ ಕೋ
ಮಲ ಚಂಪಕಗಂಧಮಾಲಿಕಾ ಪಟಲಿಕೆಯಂ       ೯

ವ : ಮತ್ತಮೊರ್ವಳ್

ಬಿಸ ಶಕಲ ಶಂಕೆಯಿಂದೀ
ಕ್ಷಿಸಲಂಚೆಗಳಕ್ಕಿಯಂ ಪಯೋಧರಭಾರಾ
ಲಸೆ ಮಿಸುಪಲರ್ಗಣ್ಮಿಂಚಿಂ
ಮುಸುಕಿದಳಕ್ಷತ ಬಳಕ್ಷಮಣಿಭಾಜನಮಂ         ೧೦

ಘಳಿಲನಿಳಿದೆಳಸಿ ಪಾಯ್ವರ
ಗಿಳಿಗಿಂದುಟಿ ತೊಂಡೆವಣ್ಣನಿತ್ತಮಳಫಳಾ
ವಳಿಯ ಪಡಲಿಗೆಯನೊರ್ವಳ್
ತಳೆದಳ್ ತಳೆದಂತೆ ಕಲ್ಪಲತೆ ಫಳಭರಮಂ        ೧೧

ಭಾವಿಸೆ ವರೋರುವೊರ್ವಳ್
ತೀವಿದ ಪೊಂಬಾಣೆವಣ್ಣ ಬಿಣ್ಗೊನೆಯಂ ತಾ
ಳ್ದೋವೋವೆಡೆಯಾಡುವವರಂ
ಭಾವಿಭವಮನಲ್ಲಿ ಪಡೆದಳೆಲ್ಲರ ಮನದೊಳ್ ೧೨

ಸನ್ನುತ ಪುಷ್ಪಮಾಲೆ ನವಚಂದನಮಕ್ಷತಮಕ್ಷತಂ ರಸೋ
ತ್ಪನ್ನಫಲಂ ಪ್ರಸನ್ನ ಮಣಿದೀಪಿಕೆ ಧೂಪಘಟಂ ಘಟಾಂಚಲ
ಚ್ಛನ್ನ ಪವಿತ್ರವಾರಿಕಳಶಂ ಕರದೊಳ್ ಕರಮೊಪ್ಪಿ ರೂಪಸಂ
ಪನ್ನೆಯರೇಂ ಮನಂಬಿಡಿದರೋ ಕಡುಚೆನ್ನೆಯರಾ ನರೇಂದ್ರನಾ     ೧೩

ವ : ಅಂತು ಸಮುಚಿತ ಸಪರ್ಯಾ ಪರ್ಯಾಪ್ತ ಪಾವನದ್ರವ್ಯಂಗಳಂ ಮನಂಗೊಳೆ ತಳೆದು ಬರ್ಪ ವಿಳಾಸಿನೀಜನದ ವಿಳಾಸಮಂ ಸುಚರಿತ ಪುರಂದರನಾನಂದದಿಂ ನೋಡುವಾಗಳ್

ಮದಧಾರಾಸಾರದಿಂ ಧಾರಿಣಿಯನಣಿಯರಂ ನಾಂದುತಂದಂತಧಾವ
ಲ್ಯದ ಮಿಂಚಿಂದೆಲ್ಲದಿಕ್ಕಂ ತೊಳಗೆ ಬೆಳಗುತುಂ ಬೇಗದಿಂ ಬೃಂಹಿತಾಧ್ವಾ
ನದೆ ಬರ್ಹಿವ್ರಾತಮಂ ಪ್ರೀತಿಯೊಳೆ ಕುಣಿಯಿಸುತ್ತುಂ ಕರಂ ಕಾರಕಾಳಾಂ
ಬುದಮೆಂಬೊಂದಂದದಿಂ ಬಂದುದು ಸಮುದಿತ ನೀಲಾಚಲಾಭಂ ಮದೇಭಂ  ೧೪

ಇದಿರ್ಗೊಳ್ಳೇಳೆಲೆ ಭೂಮಿಪಾಲಮುನಿಪಾಲ ಪ್ರಖ್ಯನಂ ಮುಖ್ಯಸಂ
ಪದದಿಂದೆಂದು ಹಿತಂ ಪುರೋಹಿತನಲಂಪಿಂ ಬಂದವೊಲ್ ಬಂದು ಕ
ಟ್ಟಿದಿರೊಳ್ ನಿಂದುದು ಭದ್ರಲಕ್ಷಣನುದಂಚತ್ಪೂರ್ಣ ಕುಂಭಂ ಮಹೋ
ನ್ಮದ ಗಂಧಾಕ್ಷತ ಹಸ್ತನುತ್ತಮಮಣಿ ಶ್ರೀಕಂದರಂ ಮಂದರಂ         ೧೫

ಚಟುಲಮಣಿ ಕಿಂಕಿಣೀಪರಿ
ಘಟಿತ ನಿಜಾಯೋಗಮಾಗಳೆಸೆದುದು ಮದ ಸಂ
ಕಟತಟಯುಗ ರಟದಳಿ
ಪಟಲಂ ಸಿಂಧುರಪೂರ ಜಟಿಲಿತ ನಿಟಿಲಂ          ೧೬

ವ : ಅಂತು ಪಣ್ಣಿ ಬಂದ ಪಟ್ಟದಾನೆಯಂ ನಿರೀಕ್ಷಿಸಿ ನರೇಂದ್ರಂ ಕೆಲದ ಕವೀಂದ್ರನ ಮೊಗಮಂ ನೋಡಲಾತಂ

ಚಿತ್ತೈಸೀ ಪುರವಾರ್ಧಿಯೊ
ಳುತ್ತಮ ಲಾವಣ್ಯರಸಮನಂಬುಧರಂ ಮೆ
ಯ್ವೆತ್ತಮರಪುರಿಗೆ ಭರದಿಂ
ಪೊತ್ತಡಕುವ ಕುಂಭಮೆನಿಪುದೀ ಗಜಕುಂಭಂ     ೧೭

ಪುರದೆಳೆವೆಂಡಿರೊಳ್ ಸೆಣಸದತ್ತಲೆ ಪಾಱಿಮೆನುತ್ತ ಮೀಱಿದ
ಚ್ಚರಸೆಯರಂ ಜಸಂಗಿಡೆ ವಿಡಂಬಿಸಿ ಬೃಂಹಿತನಾದದಿಂ ನಿರಾ
ಕರಿಸುತೆ ನೂಂಕುವಂಬರ ವಧೂಟಿಯ ಕೆಂದಳದಂತೆ ಸಿಂಧುರಂ
ಬೊರೆದುರು ಕರ್ಣತಾಳಮೆಸೆದತ್ತಭಂಜನ ಕುಂಜರೇಂದ್ರನಾ           ೧೮

ರನ್ನದ ಮೊಗರಂಬಂ ಪೆಡೆ
ಯನ್ನೆಟ್ಟೆನೆ ಪೋಲೆ ಚೆಲ್ವುಮಡಸಿದ ಭರಿಕೈ
ಪನ್ನಗಪತಿಯಿಂದಮನೇಂ
ಕನ್ನಡಿಸಿದುದೋ ಕರೀಂದ್ರಚೂಡಾಮಣಿಯಾ   ೧೯

ಮಂಡಳಿಸಿ ಮುಂದೆ ಮೊಳಗುವ
ಡಿಂಡಿಮರವಮೊಗೆಯಲಗಿದು ನೆಗಪಿದ ಶುಂಡಾ
ದಂಡಮಿದಾಖಂಡಲ ವೇ
ತಂಡಮನೆಳೆವಂತಿರೆಸೆದುದೀ ಗಜಪತಿಯಾ        ೨೦

ತೊಡರ್ದರಿಗಳುಳ್ಳ ರಸಮಂ
ಕುಡಿದವರಡಿಗೆಱಗಿ ಮತ್ತೆ ಕರುಣಿಸಿ ಬೇಗಂ
ಕಡೆವಾಯಿಂದುಗುಳ್ವಂತಿರೆ
ನಿಡುನಿಗ್ಗಮಮೆಸೆದುದಗ್ಗಳಂ ಮದಕರಿಯಾ    ೨೧

ನೀಮೆಂಟುಂ ತಳೆದವನಿಯ
ನೀ ಮಹೀಪತಿ ತಳೆಯೆ ತಳೆವೆನೀತನನೆಂದಾ
ಶಾಮದ ಕರಿಯಂ ನಗುವವೊ
ಲೇಮಾತುಜ್ಜಳಿಪುವಿದಱ ದಂತಪ್ರಭೆಗಳ್        ೨೨

ಪಿಂಗದೆ ಸೋರ್ವ ಕಪೋಳತ
ಳಂಗಳ ಮದಧಾರೆಗೆಱಗಿದಳಿಮಾಳಿಕೆ ಚೆ
ಲ್ವಿಂಗೆಡೆಯಾದುದು ಪೀಲಿಯ
ತೊಂಗಲ ನೆಳಲಿಕ್ಕಿದಂದದಿಂದಿಭಪತಿಯಾ        ೨೩

ಱುವ ಸುರೇಂದ್ರನಂದನದ ಪೂವನುದುರ್ಚಿತೊ ಮೇಣಡರ್ತು ಬಾಂ
ದೊಱೆಯ ತರಂಗಮಂ ತೆರಳೆ ತೂಳ್ದುದೋ ಸುಂಡಿಲನೆತ್ತಿ ತಾರೆಯಂ
ತಿಱಿದುದೋ ಪೇಳಿಮೆಂಬಿನೆಗಮುಣ್ಮುವ ಪುಷ್ಕರವಾತಘಾತದಿಂ
ಪಱಿವಱಿಯಾದ ಸೀವರಮಿಳಾವರ ತೀವಿದುದೀ ಮದೇಭದಾ      ೨೪

ಮಣಿಘಂಟಾರವದಿಂ ಸದಾಳಿಯನಲಂಪಿಂ ತನ್ನ ದಾನಕ್ಕೆ ತಿಂ
ತಿಣಿಯಪ್ಪಂತಿರೆ ಬರ್ಪುದೆಂದು ಕರೆವಂತುದ್ಯತ್ಕರಂ ಭದ್ರಲ
ಕ್ಷಣನುತ್ತಾಳ ಲಲಾಟಪಟ್ಟನಧಿಕ ಶ್ರೀಕಾರಣಂ ಪಟ್ಟವಾ
ರಣಮೇಂ ಪೋಲ್ತುದೊ ನಿನ್ನನುನ್ನತ ಧರಾಧೌರೇಯ ದಿಕ್ಕುಂಜರಾ           ೨೫

ವ : ಎಂದನವಸರ ಭೀತಿಯಿಂದಂ ತಾಂತುವೇಳ್ದ ಕವಿತಾಕಲಾವಿಳಾಸನ ನಶೇಷ ಮಣಿಭೂಷಣ ಕನಕ ಕರ್ಪೂರ ತಾಂಬೂಲಾದಿ ಸನ್ಮಾನದಿಂ ಮನ್ನಿಸಿ

ರದನದೊಳಿಟ್ಟ ಪೊಂಬಳೆ ತೊಂಡಕೆಯ ಚಾಮರಮೋದಮಾದ ರ
ನ್ನದ ಮೊಗರಂಬವಂಬರಮನಳ್ಳಿಱಿವಗ್ರಪತಾಕೆ ಪಲ್ಲವಂ
ಪುದಿದಮಳಾತಪತ್ರಮಳವಟ್ಟಿರೆ ನೆಟ್ಟನೆ ಪಣ್ಣಿ ಬಂದ ಪ
ಟ್ಟದ ಕರಿಯಂ ನರೇಂದ್ರನೊಸೆದೇಱಿದನೇಱೆ ಮುದಂ ಮುಖಾಬ್ಜಮಂ      ೨೬

ವ : ಅಂತು ಸಚಿವೆರಸು ಸಂಕ್ರಂದನನೈರಾವತಮನೇಱುವಂತೆ ಸುವ್ರತಾದೇವಿವೆರಸು ಮಹಾಸೇನ ಮಂಡಳೇಶ್ವರನಾನೆಯನೇಱಿದಾಗಳ್

ಉದಯಾದ್ರೀಂದ್ರವಿಭೇಂದ್ರಮಾ ವಸುಮತೀಂದ್ರಂ ವಾಸವೇಂದ್ರಂ ಸಮಂ
ತುದಿತೋದ್ಯತ್ಪ್ರಭೆ ಸುವ್ರತಾವನಿತೆಯೆಂದಂದೇನುಮಾಶ್ಚರ್ಯಮಾ
ಗದೆ ದಲ್ ದರ್ಶನಮಾತ್ರದಿಂ ಕುವಲಯಕ್ಕಾನಂದಮುರ್ವೇಳೆ ಪ
ರ್ವಿದ ಭೂಪಾಲಕರಾಂಬುಜಂ ಮುಗಿದುದಕ್ಕಾಶ್ಚರ್ಯಮಾಯ್ತಗ್ಗಳಂ        ೨೭

ಪಸರಿಸೆ ಮೆಯ್ಯೊಳ್ ಸುತ್ತಲ್
ಪ್ರಸಾದಮಂ ಪಾರ್ವ ನೃಪರ ಕಣ್ಗಳ್ ಕಣ್ಣೊ
ಳ್ವಸಿಯಳ್ ಶಚಿಯವೊಲಿರೆ ಪಾ
ಲಿಸಿದಂ ಮನುಜೇಂದ್ರನಿಂದ್ರಲೀಲಾಶ್ರೀಯಂ     ೨೮

ಇದು ಚಿತ್ರಂ ಕಾರಕರ್ಗಳ್ತಲೆ ದಿನಮಣಿಯಂ ಪೊತ್ತುದೆಂಬನ್ನೆಗಂ ತೀ
ವಿದ ವಜ್ರಾಕಲ್ಪಕಾಂತಪ್ರಭೆ ಪಸರಿಸೆ ರಾಜೇಂದ್ರನಾ ಸಿಂಧುಸ್ಕಂ
ಧದೊಳೊಪ್ಪಂಬೆತ್ತಿರಲ್ ಮತ್ತಮಮ ಸಮನಿಸಿತ್ತಿತ್ತ ಪೂರ್ಣೇಂದುವೆಂಬಂ
ದದೆ ಮೌಳಿಪ್ರಾಂತದೊಳ್ ಪಜ್ಜಳಿಸಿ ಪೊಳೆದುದೂರ್ಜಾಭ್ರಶುಭ್ರಾತಪತ್ರಂ    ೨೯

ತನಗಂ ತಳ್ತುದು ರಾಜನಾಮಮಮರ್ದೆಂಬೀ ಗರ್ವದಿಂ ಕೊರ್ವಿ ಕಾಂ
ಚನ ದಂಡಕ್ಕೊಳಗಾಗಿ ತನ್ನೆರ್ದೆಯ ಕಂದಂ ಬಿಟ್ಟು ಮತ್ತೀಗಳೊ
ಯ್ಯನೆ ಪೂರ್ಣೇಂದು ನೃಪೇಂದ್ರನಂ ಪ್ರತಿದಿನಂ ಪೋದತ್ತ ಪೋದತ್ತ ಬೆ
ನ್ನನೆ ಬಂದೋಲಗಿಪಂದಮಾಯ್ತು ಧವಳಚ್ಛಕ್ರಂ ಧರಾಕಾಂತನಾ   ೩೦

ಚೆಂಬೊಂಗಳಸದ ಬೆಳಗುಗ
ಳಂಬರದೊಳ್ ಮಿಱುಗೆ ಮಿಂಚಿನಂದದೆ ಮೇಘಾ
ಡಂಬರಮನಾಗಳಲ್ಲಿ ವಿ
ಡಂಬಿಸಿದುದು ಮೇಘಡಂಬರಂ ಭೂಭುಜನಾ    ೩೧

ವಳಯಾಳೀರವಮಿಂಚರಂಬೊಲೊಗೆಯಲ್ ತಳ್ತಂಚೆಗಳ್ ತೀರಸಂ
ಚಳವಲ್ಯಂಚಳದಿಂದಿಳೇಶ್ವರ ತಿರೀಟೋದ್ಯತ್ಪ್ರಭಾಪೂರನಿ
ರ್ಮಳ ಕಾಸಾರದೊಳಾಗಳಾಗಳೆ ಱಗುತ್ತಿರ್ದಪ್ಪವೆಂಬಂತೆ ಕ
ಣ್ಗೊಳಿಸುತ್ತಿರ್ದುವು ಚಾಮರಂ ಚತುರ ಕಾಂತಾಹಸ್ತ ಶಾಖಾಗ್ರದೊಳ್         ೩೨

ಇದು ಭೂಪಾಲ ವಿಲಾಸಮಲ್ತು ರತಿಯುಂ ಕದರ್ಪನುಂ ತಮ್ಮ ಸ
ಮ್ಮದದಿಂದಾನೆಯೆನೇಱಿ ಮೀಱಿ ವನಕೇಳೀಲೀಲೆಗೆಯ್ತಂದರಲ್ಲ
ಲ್ಲದೊಡೀ ಪುರ್ವಿನ ಕರ್ವುವಿಲ್ಗಳಲರ್ಗಣ್ಣಚ್ಚಂಬುಗಳ್ ತಮ್ಮ ನ
ಚ್ಚಿನ ಕೈಗೈದುಗಳಾದ ಪೆಣ್ಬಡೆಯ ಪಿಂಡಾವೆತ್ತಣಿಂ ಬಂದುದೋ  ೩೩

ಎಂಬ ಪೊಗಳ್ತೆಗೆ ಪಿರಿದುಮ
ಳುಂಬಮೆನಲ್ ಬಂದರಾಗಳಂತಃಪುರದಿಂ
ದಂಬುಜಮುಖಿಯರ್ ಕವಿವೆಳೆ
ದುಂಬಿಗಳೆರ್ದೆ ದಣಿಯೆ ತಮ್ಮ ತನುಪರಿಮಳದಿಂ           ೩೪

ಎಳೆಮಿಂಚಿಂ ಪೂಳ್ದಪುದಿದಂತೆ ಪೂಗಣೆಗಳಿಂ ಪೀಯೂಷದಿಂ
ತಳಿದಂತುತ್ಪಲಪತ್ರದಿಂ ಪೊದಸುವಂತಿಂದುಪ್ರಭಾಜಾಳದಿಂ
ದೊಳಕೆಯ್ವಂತಳಿಮಾಲೆಯಿಂ ಪ್ರಣಯದಿಂ ಪೊಯ್ವಂತೆ ತಂತಮ್ಮ ಕ
ಣ್ಬೆಳಗಿಂ ಬಾಸಣಿಸುತ್ತೆ ಬಂದುದಬಳಾನೀಕಂ ಮಹೀಕಾಂತನಾ        ೩೫

ಇದು ಮೂಲೋಕಕ್ಕೆಕಣ್ಮಾಯಮನೊದವಿಪ ಕಾಮೇಂದ್ರಜಾಲಂ ದಲೆಂಬಂ
ದದೆ ಭೂಷಾಮಂಡಲಂ ಪೊಂಬಿಸಿಲನಸದಳಂ ಕೂಡೆ ಬಂಬಲ್ಗುರುಳ್ ಪ
ರ್ವಿದ ಮರ್ವಂ ಪೂಡೆ ಕಣ್ತಿಂಗಳ ತನಿವೆಳಗಂ ತೀಡೆ ಸೌರಂಭದಿಂ ಬಂ
ದುದು ಸೌಭಾಗ್ಯಸ್ಮಯಂ ವಿಸ್ಮಯರಸ ವಿಸರಾಂಬಮಾ ಸ್ತ್ರೀಕದಂಬಂ         ೩೬

ವ : ಅಂತು ಬಂದ ಶುದ್ಧಾಂತಕಾಂತೆಯರ ಸಂದಣಿಸಿದಂದಳದ ಸುಖಾಸನ ದೋಜೆವಿಡಿಯ ಮುಂದೆ ಗೊಂದಣಿಸಿ ಜಡಿವ ಪಡಿಯಱರೊತ್ತೊತ್ತೆಗತ್ತತ್ತ ಸಾರ್ವ ಸಾಮಂತ ಮಂಡಳಿಕ ದಂಡನಾಥಯೂಥಮಂ ಸಸ್ಮಿತಾವಲೋಕನದಿನವಲೋಕಿಸು ತ್ತಮಪರಿಮಿತ ವಿಭವಾವಷ್ಟಾಂಭ ಪರಿತುಷ್ಟಂ ಪಾಠಕಪರಿಪಠಿತ ಬಿರಿದಂಕಮಾಲಾ ದ್ಯುತಿಯೆ ಮಣಿಮಂಡಲನಾಖಾಂಡಲ ವಿಲಾಸದಿಂ ರಣಮಂಡಲದ ಗೋಪುರಮಂ ಪೊಱಮಟ್ಟಾಗಳ್

ವಸುಧಾನಾಯಕನಗ್ರದೊಳ್ ವಿನುತ ತೇಜೋವಾರಣಂ ವಾರಣಂ
ವಿಸರದ್ವೀರರಸ ಪ್ರವಾಹ ಭರವಾಹಂ ವಾಹಮುದ್ಯೋಗಯೋ
ಗಸಹಾಯಾತ್ಮ ಮನೋರಥಂ ರಥಮುದಗ್ರೋತ್ಸಾಹ ಸಂಪತ್ತಿಪ
ತ್ತಿಸಮೆಂತೇನೆಸೆದಿರ್ದುದೋ ವಿಜಯಭೇರೀ ಭಾಂಕೃತಾಲಂಕೃತಂ    ೩೭

ಆ ಚತುರಂಗ ಬಲಾಂಬುಧಿ
ವೀಚೀರವದಂತೆಮೊ…………..
– ಚಿಸಿತೋ ಮಹಾಸೇನ ಮ
ಹಾಚಕ್ರೇಶ್ವರ …………. ಯಂ         ೩೮

ಬಳಮಂ ಬಾಯ್ಬಲ್ಮೆಯಿಂ ಬಣ್ಣಿಪೊಡಹಿಪತಿಗಂ ತೀರದೇನೆಂಬೆನಾಂ ದಿ
ಕ್ಕುಳಮುತ್ಯಾಹೋಚ್ಚಳಚ್ಚಾಪಳ ತುರಗರಜೋರಾಜಿ ಪೂರ್ಣ ನಭೋಮಂ
ಡಳಮುದ್ದಂಡ ಧ್ವಜಾಗ್ರಾಂಚಳ ಪವನಪರಿಸ್ಪಂದ ಪೂರ್ಣಂ ಧರಿತ್ರೀ
ವಳಯಂ ವೇತಂಡಗಂಡಸ್ಥಳ ತಟವಿಗಳದ್ದಾನಪಾನೀಯ ಪೂರ್ಣಂ ೩೯

ವ : ಅಂತು ನೆರೆದ ಚತುರಂಗಮಂ ನೋಡಿ ನಿಜಾಂತರಂಗಮನಾನಂದಲಕ್ಷ್ಮಿಗೆ ನೃತ್ಯರಂಗಮಂ ಮಾಡಿ ವಿಜಯಾಂಗನಾ ಭುಜಂಗನಂಗಡಿವೀದಿಯೊಳ್ ನಡೆವಾಗಳ್

ಕಿವಿಯೊಳ್ ಪ್ರಸ್ಥಾನಶಂಖಧ್ವನಿ ಪಸರಿಸೆ ಬಂದಾ ಧರಾಧೀಶನಂ ನೋ
ಡುವ ಪೊಳ್ತಂ ಪಾರ್ದು ಚಿತ್ತೋದ್ಭವನೊಡನೆ ನಿಜಜ್ಯಾರವಂ ಮಾಡೆ ಮಾನಂ
ತವಿಲಾಗಳ್ ಬೇಗದಿಂ ಮೆಯ್ಮಱಿದು ತೊಱೆದು ಕಜ್ಜಂಗಳಂ ಪಜ್ಜೆ ಲಜ್ಜಾ
ಪ್ಲವಪಂಕಂ ಪ್ರಾಂತದೊಳ್ ಕೀಲಿಸಿ ನಡೆಗೆಟ್ಟತ್ತು ಕಾಂತಾಕದಂಬಂ ೪೦

ವ : ಅಂತು ಮೆಯ್ಮಱೆಯದೆ ಮೇಱೆದಪ್ಪಿ ಬರ್ಪಲ್ಲಿ

ಚಾಪಲ ಲೋಚನೆಯರ ಪದ
ನೂಪುರದುಡೆನೊಲ ಕಿಂಕಿಣಿಯ ಮಣಿಮಯ ಘಂ
ಟಾಪಟಲದ ಪಟುರವಮಾ
ಶಾಪತಿಗಳನೆಯ್ದೆ ಕಿವುಡುವಡಿಸಿತ್ತಾಗಳ್         ೪೧

ಪಾಣಿತಳಂಗಳಿಂ ಪದತಳಂಗಳಿನುಣ್ಮುವ ಕೆಂಪು ಕೂಡೆ ನಿ
ಶ್ರೇಣಿಯನಾಗಳಲ್ಲಿ ತಳಿರೇಱಿಸಲೇಱಿದ ಜವ್ವನಂ ಜನ
ಶ್ರೇಣಿಯ ಕಣ್ಗೆ ಕೌತುಕಮನೇಱಿಸಲೊರ್ವಳಪೂರ್ವರೂಪೆ ಗೀ
ರ್ವಾಣವಧೂಟಿಯಂತೆ ಮಣಿಮಾಡಮನೇ ವರಲ್ದು ನೋಡಿದಳ್  ೪೨

ವ : ಮತ್ತೊಂದು ಮಣಿಮಂದಿರದಿಂ ನವಯೌವನಕ್ರಾಂತೆಗಾದಶರಾಯುಮಂ ಕಂಡು

ನೇವುರದಿಂಚರಕ್ಕೆ ಕವಿವಂಚೆಗೆ ಹಾರಮನಿತ್ತಳಾನನ
ಕ್ಕೋವದೆ ಪಾಯ್ವ ಪಾಱಳಿಗೆ ಸೂಡಿದ ಮಾಲೆಯನಿತ್ತಳಿನ್ನಿವಳ್
ಭಾವಿಸೆ ತಮ್ಮತಮ್ಮ ಭರದಿಂ ನಡೆಯಂ ತಡೆವೀ ನಿತಂಬ ಶೋ
ಭಾವಲಯಕ್ಕಮೀ ನೆಗಳ್ದ ಪೆರ್ಮೊಲೆಗಂ ಪದೆದೇನನೀವಳೋ        ೪೩

ವ : ಎಂದು ನುಡಿವ ಜಾಣರ ಜಾಣ್ಮೆಯಂ ಜಕ್ಕುಲಿಸುತ್ತೆ ಮತ್ತೊರ್ವಳ್

ಬಟ್ಟಮೊಲೆ ನೂಂಕೆ ಮೇಲುದ
ನುಟ್ಟುಡೆನೂಲ್ ಜಗುಳ್ದು ತೊಡರೆ ಕಾಲೊಳ್ ಕಡುಪಿಂ
ದಿಟ್ಟೆ ಪರಿತಂದಳರಸನ
ಕಟ್ಟಿದಿರ್ಗಂದಾನೆಗಾನೆ ಮೊಗಮಿಕ್ಕುವವೋಲ್  ೪೪

ವ : ಆ ಮದೋನ್ಮತ್ತೆಯೊಡನೆ ಮತ್ತೋರ್ವಳ್

ನಲಿವರಿಯೆ ಜಗುಳ್ದು ಮಣಿಮೇ
ಖಲೆ ಕಾಲಂ ತೊಡರೆ ನಡೆಯಲಱಿಯದೆ ನಿಡುಗ
ಣ್ಮಲರ್ವೆಳಗಿಂ ನೆಯ್ದಿಲ ಪೂ
ವಲಿಗೆದಱಿದಳಬಲೆ ನಾಡೆಯುಂ ನಾಲ್ದೆಸೆಯೊಳ್          ೪೫

ವ : ಆ ಪುಲ್ಲೆವಱಿಯಂತೆ ಬೆರ್ಚುವ ಪೊಚ್ಚಪೊಸಜವ್ವನೆಯಂಕಂಡು ಪೆಪ್ಪಳಿಸುತ್ತೆ

ಮದನಾಕಾರನನೀಕ್ಷಿಸಲ್ ಭರದಿನೊರ್ವಳ್ ಮುಗ್ಧೆ ಬರ್ಪಲ್ಲಿ ಮೇ
ಲುದನೀಡಾಡಿ ಪೊದಳ್ದ ಪೆರ್ಮೊಲೆಗಳಂ ಕಂಡಿತ್ತಬಾ ತನ್ವಿ ತೋ
ಱಿದಪೆಂ ಭೂಪನನೆಂದು ನಿಲ್ಕಿ ನಿಡುದೋಳಿಂದೆತ್ತಿ ಮತ್ತೆತ್ತಲಾ
ಱದವೋಲ್ ತನ್ನುರದೊಳ್ ತಗುಳ್ಚಿ ತಳೆದಂ ಸಮ್ಮೋಹದಿಂ ಕಾದಲಂ        ೪೬

ವ : ಮತ್ತೊಂದಲಂಕಾರಮಂಟಪದಿಂ ತಳರ್ದು

ಭುವನಾಧೀಶನನೀಕ್ಷಿಪೊಂದು ತವಕಂ ಕೆಯ್ಗಣ್ಮೆ ಕೆಯ್ಗೈವುತಾ
ರವನಿಕ್ಕಲ್ ಮಱೆದಂತದಂ ಪಿಡಿದು ಲಾವಣ್ಯಾಬ್ಧಿಯೊಳ್ ಕೂಡೆ ತೇಂ
ಕುವ ಲೋಕಂಗಳ ಕಣ್ಗಳೆಂಬ ಕುಡುಮೀನ್ಗಳ್ಗಾಗಳೆಯ್ತಂದು ಹಾ
ಸವನೋರಂತಿರೆ ಬೀಸುವಂತೆಸೆದಳೊರ್ವಳ್ ವಿಭ್ರಮಾವೇಗದಿಂ      ೪೭

ನೆಲೆಮಾಡಂಗಳೊಳೆತ್ತಿದುನ್ನತ ತವಂಗಶ್ರೇಣಿಯೊಳ್ ಸೌಧದಾ
ದಲೆಯೊಳ್ ಗೋಪುರದಗ್ರದೊಳ್ ಕೃತಕಭೂಭೃತ್ಕೂಟದೊಳ್ ದೇವತಾ
ನಿಲಯಾಗ್ರಸ್ಥಲದೊಳ್ ಸಮಗ್ರ ಗೃಹಲೀಲಾರಾಮದೊಳ್ ಪ್ರೇಮಮ
ಗ್ಗಲಿಸಲ್ ತಳ್ತೆಣೆವಿಚ್ಚದೀಕ್ಷಿಸಿದರೋಪರ್ ಭೂಪಕಂದರ್ಪನಾ      ೪೮

ವ : ಅಂತೆಲ್ಲೆಡೆಯೊಳ್ ತೆಲ್ಲಯಿಸಿ ತಳ್ತ ತಂತಮ್ಮ ನಲ್ಲರೆರ್ದೆ ತಲ್ಲಣಿಸಿ ಮಲ್ಲಳಿಗೊಳ್ವಿನಂ ಎಮೆಯಿಕ್ಕದೆ ನೋಡುವ ಗಾಡಿಕಾರ್ತಿಯರ ಚಿತ್ತಮಂ ಕವರ್ತೆಗೊಳುತ್ತುಂ ಬರ್ಪ ಮನುಜ ಮಕರಧ್ವಜನ ಗಂಡಗಾಡಿಗೆ ಕಣ್ಸೋಲ್ತು

ನೆಲೆಮೊಲೆ ಮೇಲುದಂ ತೊಲಗೆ ನೂಂಕೆ ಬಳಲ್ಮುಡಿ ಮುಯ್ಪನಪ್ಪೆ ಕಾ
ದಲನೆರ್ದೆಯೊಳ್ ತಗುಳ್ದ ನಳಿತೋಳ್ ಕದಪಂ ಕೆಳೆಗೊಂಡ ಕೆಂದಳಂ
ತಲೆವಿಡಿಯಲ್ ತಗುಳ್ದಳಿಪನೊಯ್ಯನೆ ಕೆಯ್ಯೊಳೆ ಕೆಯ್ಯನಿಟ್ಟು ಬಾ
ಯೆಲೆ ಬೆಳರ್ವಾಯೊಳಚ್ಚಿಱಿಯೆ ನೋಡಿದಳೊರ್ವಳಪೂರ್ವ ರೂಪನಂ         ೫೦

ವ : ಮತ್ತೊರ್ವಳೊಂದೆಡೆಯ ಸೌಧತಳದೊಳಿನಿಯನುಂ ತಾನುಂ ವಿಲಾಸದಿಂ ಕೂಡುತ್ತೆ ರಾಜಕಳಾವಿಳಾಸನ ವಿಳಾಸಮಂ ಕಂಡು ಕಣ್ಬೇಟದಿಂ ಪರವಶೆಯಾಗಿ

ತನು ಮರವಟ್ಟು ಜೋಲ್ದು ಕೆಲದೋಪನನೊಯ್ಯನೆ ನೆಮ್ಮಿಪೋಪ ಭೂ
ಪನನಿನಿಸೊಂದಿ ಬಂದಲೆವ ಕಮ್ಮೆಲರಿಂದಸು ತೀವಿ ಮತ್ತೆ ಕಂ
ಪನಮೊಡನುಣ್ಮೆ ಕೈತವದಿನಪ್ಪಿ ನಿಜಪ್ರಿಯನಂ ತಗುಳ್ಚಿ ಸೋಂ
ಕಿನ ನೆವನಂ ಲತಾಂಗಿ ಪುಸಿಯಂ ತಳೆದಳ್ ಪುಳಕಾಂಕುರಂಗಳಂ         ೫೧

ವ : ಅಂತು ಸೊಬಗಿನ ಬಗೆಯಿಂದಬಲೆಯರನಾರ್ಪುಗೆಡಿಸುವ ಪೂರ್ವ ಕಂದರ್ಪನ ಮೇಲೆ ಕರ್ವುವಿಲ್ಲಂ ಕಳುಪಿದ ಕೂರಾಳ್ಗಳಂತೆ ತೆರಳದೆ

ಕೂಡೆ ಕಡಂಗಿ ನೆಯ್ದಿಲೆಸಳಿಂ ತಿರಿಪಿಟ್ಟರೊ ಬಳ್ಳಿಮಿಂಚಿನಿಂ
ಕೂಡಿದರೋ ಪುದುಂಗೊಳಿಸಿ ಪೆರ್ವಲೆಯಿಂ ಸರಪಂಜರಂಗಳಂ
ಮಾಡಿದರೋ ಮಡಲ್ತ ನನೆಯಂಬಿನೊಳೆಂಬಿನಮಿರ್ಕೆಲಂಗಳೊಳ್
ನೋಡಿದರಾ ಪುರಾಂಗನೆಯರಳ್ಕದೆ ನಿಲ್ಕಿ ಮಹೀಮನೋಜನಂ      ೫೨

ವ : ಅಂತು ನೋಡುವಾಗಳ್

ದಂತಿಯ ಮೇಲೆ ಬೆಳ್ಗೊಡೆಯ ಮೇಲೆ ಪತಾಕೆಯ ಮೇಲೆ ಧಾರಿಣೀ
ಕಾಂತನಮೇಲೆ ಕೆಯ್ದಣಿವಿನಂ ಕಡೆಗಣ್ಮುವ ಹರ್ಷವಾರಿಯಿಂ
ದಂತವೆ ತೊಯ್ದು ತೊಯ್ದು ಪೊಸೆನೆಯ್ದಿಲೆಸಳ್ಗಳನೊಯ್ದು ಪೊಯ್ದರೆಂ
ಬಂತೆಸೆದಿರ್ದುವೀಕ್ಷಿಸುವ ಪೆಣ್ಗಳಪಾಂಗ ಮರೀಚಿಮಾಲೆಗಳ್        ೫೩

ಪುರದೆ ನೆಗಳ್ತೆವೆತ್ತ ನೆಲೆಮಾಡಮನೆಯ್ದೆಳೆವೆಂಡಿರಿ‌ಟ್ಟ ನೂ
ಪುರದುಲಿಯಿಂದೆ ನೂರ್ವಡಿಸುತುಂ ಕಡೆಗೋಂಟಿಗೆ ಬಂದು ದಾಂಟಿ ಗೋ
ಪುರಮನಲಂಪು ಪೊಂಪುಳಿಸೆ ಕಾಮಿನಿಯಂ ನಡೆನೋಡಿ ತದ್ಬಹಿಃ
ಪುರದ ವಿಳಾಸಮಂ ಪಡೆದು ತೋಱಿದನೊಲ್ದು ನರೇಂದ್ರನಾಯಕಂ            ೫೪

ಶಾಖಾನಗರೋಪವನಂ
ಶಾಖಾಯತ ಕರಮನೆತ್ತಿ ಮಾನಿನಿ ನೋಡೀ
ಲೇಖಾಪಗೆಯಂ ತೋರ್ಪುದ
ಲೇಖಾಗ್ರಮನೆಯ್ದೆ ಕೋಡಿಲಾಲಾಪರವಂ       ೫೫

ಕಳಮ ವನಂಗಳ ಶುಕ ಕಳ
ಕಳಮವನಿಯನೆಯ್ದೆ ತೀವೆ ತೀವಿದ ಬೆಳೆಯಂ
ಗಳಗಳನೆ ಪೊಗಳ್ವ ದೆಸೆವೆ
ಣ್ಗಳ ಗಳರವದಂತೆ ಬಗೆಗಿದೇಂ ಸೊಗಯಿಪುದೋ           ೫೬