ಶ್ರೀನಿಳಯಂ ವಿಶದಯಶ
ಶ್ಶ್ರೀನಿಳಯಂ ತಳೆದನಿಳೆಯನಿಕ್ಷ್ವಾಕುಕುಳ
ಶ್ರೀನಿಳಯನೆನಿಸಿದಖಿಳಕ
ಳಾನಿಳಯಂ ಸರಸಕವಿರಸಾಲವಸಂತಂ ೧

ಆ ಜನನಾಯಕನಸಿಧಾ
ರಾಜಳವಗಳಾಣೆ ಕೋಟೆ ತೋಳ್ವಲಮೆ ಬಲಂ
ನೈಜಮೆನಲಿಂತು ದೊರೆವಡೆ
ದೀ ಜಗತೀಭರಮನೊಂದೆ ಪುರಮೆನಲಾಳ್ವಂ    ೨

ಪರಿರಂಭಂಗೆಯ್ವೊಡೊಂದಲ್ಲದೆ ಕರಮೆರಡಿಲ್ಲೋವೋ ದಿಗ್ದಂತಿಗೊಲ್ದಾ
ದರದಿಂ ಬಾಯ್ಗೂಡಲಿಚ್ಚಿಪೊಡೆ ಸುಡು ಪಲವುಂ ನಂಜುವಾಯ್ ಪನ್ನಗೇಂದ್ರಂ
ಗೆರದಾನೋರಂತೆ ಬೆಂಬತ್ತೆಯುಮೆರ್ದೆಗೊಡದೆಗ್ಗಾದಿ ಕೂರ್ಮಂಗೆನುತ್ತು
ರ್ವರ ಬಿಟ್ಟಾ ಮೂವರಂ ಭೂವರನ ಭುಜದೊಳಿರ್ಪಳ್ ಮನೋರಾಗದಿಂದಂ            ೩

ಬಗೆಯೊಳ್ ಬೆರ್ಚದೆ ಬಂದು ತಾಗಿದರಿರಾಜೋರ್ವೀಶರಂ ಕಂಡು ನೆ
ಟ್ಟಗೆ ಕಣ್ಬೇಟದೊಳಾದ ಮಚ್ಚರದಲಂಪಿಂ ಪೋರ್ವ ದಿವ್ಯಾಂಗನಾ
ಳಿಗೆ ನಾಳ್ಪಿಂ ನಿನಗೀತನೀತನೆನುತುಂ ಕೆಯ್ಯಾರೆ ತಾನೊತ್ತುವುಂ
ಡಿಗೆಗೋಲೃಂತೆಸೆದಿರ್ದುದಾಂತಿಱಿವ ಕುಂತಂ ಧಾರಿಣೀಕಾಂತನಾ    ೪

ಪಿಡಿದಡಸಿ ಜಡಿಯಲಸಿವೆಣ್
ನಡುಗುವುದೇನರಿದೆ ಜಡಿವ ವಾರ್ತೆಗೆ ಪಿರಿದುಂ
ಕಡುಗಲಿಗಂಡರ್ ನಡ ನಡ
ನಡುಗುವರಳವೆಂತುಟೋ ನೃಪಾಲಾಗ್ರಣಿಯಾ ೫

ಪರಮ ಪ್ರತಾಪತಪನ
ಸ್ಫುರಣೆಯೊಳೆರ್ದೆಗಾಯ್ದು ಬಂದು ಸಂಗರಮುಖದೊಳ್
ಭರದಿಂದರಿನೃಪರಾ ಭೂ
ವರನಸಿಧಾರಾಜಲಕ್ಕೆ ಬಾಯ್ವಿಡುತಿರ್ಪರ್       ೬

ಪಿರಿದುಂ ಸಂಗರರಂಗದೊಳ್ ಕವಿದ ಧಾರಾಪಾತದಿಂ ಪಾರ್ವುದ
ಚ್ಚರಿಯಲ್ತುದ್ಗತರಾಜಹಂಸನಿವಹಂ ತದ್ವಾಹಿನೀ ಜೀವನಂ
ಪರಿಗೆಟ್ಟುಂ ಗಡ ಭಂಗಮಂ ತಳೆವುದೋರಂತೆಂದೊಡೇನಿಂದಿದ
ಚ್ಚರಿಯಂ ಪುಟ್ಟಿಸದೇ ನೃಪೇಂದ್ರಕರವಾಳಾಮೋಘಮೇಘಾಗಮಂ            ೭

ಸಮದ ವಿರೋಧಿ ವಿಕ್ರಮದವಾನಳನಾಱಗುಮಾಗಳಂತೆ ಸಂ
ಕ್ರಮಿಸಿದ ಧಾರೆಯಿಂ ನಿಜಭುಜೋಜ್ವಳ ವಿಕ್ರಮಪಾವಕಂ ವಿರು
ದ್ಧಮಿದೆನೆ ಬಿದ್ದಮುದ್ಧಮುರಿಗುಂ ಪರಿಭಾವಿಸೆ ಪಾರ್ಥಿವ ಪ್ರಭಾ
ವಮೋ ದೊರೆವೆತ್ತ ತನ್ನೃಪಕೃಪಾಣಮದುಂಡ ಜಲಸ್ವಭಾವಮೋ            ೮

ಖುರಟಂಕಾಘಾತದಿಂ ಭೂತಳಮೆನಿತನಿತುಂ ತೂಂತುವೋದಲ್ಲಿ ಭೋಗೀ
ಶ್ವರ ಚೂಡಾರತ್ನ ಸಂಘಪ್ರಭೆ ನೆಗೆದು ಮಹಾಸೇನಭೂಪಪ್ರತಾಪಾಂ
ಕುರಮಾದಂ ದಂತಿದಾನೋದಕದೊಳೆ ತಳಿರೇಱಿರ್ದುದೆಂಬಂದದಿಂ ತ
ಳ್ತಿರಲೆತ್ತಂ ಧಾತ್ರಿಯೊಳ್ ಸೈವರಿದು ನಿದಾಘೌಘದಾಘೀ ತುರಂಗಂ ೯

ಬಲಭಾರಕ್ಕಹಿನಾಥನಳ್ಕಿ ತಲೆದೊಂಗಲ್ ಪಿಂಗದಲ್ಲಾಡೆ ಭೂಸ
ವಲಯಂ ಬಾಲದಮೇಲೆ ಬಿರ್ದು ಕಡುನೋದೋರಂತೆ ಪಾತಾಳದೊಳ್
ತಲೆಬಾಲಂಗಿಡುವಂಗಡೆಂದೋಡಿದಿರೊಳ್ ಮಾಱಾಂತಸಿಕ್ಷೇಪದಿಂ
ತಲೆಬಾಲಂಗಿಡುವರ್ ವಿರೋಧಿಗಳವಂಗೆಂದೆಂಬುದಾಶ್ಚರ್ಯಮೇ  ೧೦

ಪಡೆಮಾತೇನೆಡೆಗೊಟ್ಟು ಪೇರಡವಿಯಂ ಪೊಕ್ಕಾಗಳಾಗಳ್ ಬಳ
ಲ್ಮುಡಿಯಂ ಕಂಡೆರೆವಾವುಪಾಱೆ ನಗೆಗಣ್ ಗಂಡೆಯ್ದುಗುಂ ವ್ಯಾಘ್ರನೊ
ಳ್ನಡುವಂ ಕಂಡು ಮದೇಭಮೋಡೆ ಮೊಲೆಗಂಡಾರ್ದಟ್ಟುಗುಂ ಸಿಂಹಮೊಂ
ದೆಡೆಯೊಳ್ ನಿಂದಿರಲೀಯದಂಗನೆಯರಂ ತದ್ವೈರಿಭೂಪಾಲರಾ    ೧೧

ಗಜಕುಂಭಂಗಳ ಮುತ್ತುಗಳ್ ಬಱನೆ ವಲ್ಕವ್ರಾತಮೇನಾದುವೀ
ಭುಜಗ ಷ್ರೌಢಫಣಾಮಣಿ ಪ್ರಚುರದೀಪಂ ಪೋದುವೇ ಪಣ್ ಫಲಂ
ಕುಜದೊಳ್ ಬೀತುವೆ ಭೀತಿವಟ್ಟೆರ್ದೆಗೆಡಲ್ವೇಡೆಂದು ತದ್ವೈರಿ ಭೂ
ಭುಜಂ ಮೆಯ್ವಿಡದಂತೆ ಸಂತಮಿಡುವರ್ ಕಾಂತಾರದೊಳ್ ಕಾಂತೆಯರ್       ೧೨

ಪಿರಿದುಮೊಡನಡಪಿದರಗಿಳಿ
ಸರಸ ಫಲಾವಳಿಯಾನಂಚೆ ಮೃದುಳ ಮೃಣಾಳಂ
ಕುರಮನುಡಿದಿತ್ತು ಸಲಹುವು
ವರಣ್ಯದೊಳಗಾ ನೃಪೇಂದ್ರರಿಪುಕಾಂತೆಯರಂ   ೧೩

ವಿದಿತ ಯಶಸ್ಫಾಟಿಕ ಮುಕು
ರದೊಳೊದವಿದ ಸಕಲ ಜನಮನೋರಾಗಂ ಪೋ
ಗದೆ ಬಿಂಬಿಸಿತೆಂಬಿನಮೆಸೆ
ದುದು ವಸುಧಾಧವನ ಭುವನ ಭುಂಭುಕ ತೇಜಂ           ೧೪

ಧರೆಗಾನಿರ್ದಂತೆ ತಾನುಂ ಸಕಲ ಧರಣಿ ಭೃನ್ನಾಥನೆಂಬೊಂದು ಬಿಂಕಂ
ಬೊರೆದಿರ್ದತ್ತೊಂದು ಕಾಯ್ದಿಂ ಕಳುಪೆ ವಿಪುಳ ಬಾಹಾಪ್ರತಾಪಾಗ್ನಿ ಬಂದಾ
ವರಿಸಲ್ ಸ್ವರ್ಣಾದ್ರಿ ಬೇಗಂ ಕರಗಿ ಪರಿದು ತೀವಿರ್ದುದೆಂಬಂದದಿಂ ಸಾಲ
ಗರಮೆಲ್ಲಂ ಕೆಂಕಮಾಗಲ್ ಪಸರಿಸಿತು ಮಹಾಸೇನತೇಜೋವಿತಾನಂ           ೧೫

ಧುರಜಲಧಿಯೊಳಾಡದೆ ಖೇ
ಚರಮೆನಿಸಿದುದನಿಮಿಷಾಳಿಯೆನೆ ಮತ್ತಿನ ಭೂ
ಚರಜಂತುಗಳಾಂತಳಿವುದೆ
ಪಿರಿದುಂ ವಿಕ್ರಮತಿಮಿಂಗಳಂಗಾ ನೃಪನಾ         ೧೬

ಮಱೆಮಾತೇಂ ಸಿಡಿಲಂತೆ ಕೂರಸಿ ಕಱುತ್ತಾಗ್ರಾಜಿಯೊಳ್ ವ್ಯಗ್ರದಿಂ
ದೆಱಪಲ್ಲಿಂದೊಳಗಲ್ಕೆ ಬಂದೆಱಪ ಭೂಭೃತ್ಕೋಟಿ ಕೋಟೀರದೊಳ್
ಮಿಱುಗುತ್ತಿರ್ಪುದನಾರತಂ ನೆಲಸಿದಾಜ್ಞಾ ದೇವತಾಪಾದಮ
ಚ್ಚಿಱಿದಂತರ್ಚಿತಮಾಗಿ ತೋರ್ಪ ಪದ್ಮಚ್ಛಾಯೆ ಭೂಪಾಲನಾ     ೧೭

ಮದವಳಿದೆಱಪರಿಬಾಹಾ
ಗ್ರದೊಳಾಜ್ಞಾದಂಡದವನಿಮಂಡಲಮೇನೊ
ಪ್ಪಿದುದೋ ಜಯಲಕ್ಷ್ಮಿ ತನ್ನೃಪ
ಪದಲಕ್ಷ್ಮಿಗೆ ತಂದ ಚಂದ್ರಕಚ್ಛತ್ರದ ವೋಲ್     ೧೮

ಖಳವದ್ಬಾಹುವನುರ್ವರಾವನಿತೆ ವಕ್ಷೋರಂಗಮಂ ಲಕ್ಷ್ಮಿನಿ
ರ್ಮಳ ವಕ್ತ್ರಾಂಬುಜಮಂ ಸರಸ್ವತಿ ಮನಂಗೊಂಡಪ್ಪಿ ತಂತಮ್ಮ ಮೆ
ಯ್ವಳಿಯಿಂದಿರ್ಪಿನಮೊಲ್ಮೆದೋರ್ಪ ಪುರುಡಿಂ ತಾನೆಯ್ದಿದೆನೆಂಬ ಬಾ
ಕುಳಿಯೋ ಲಕ್ಷ್ಮಣಲಕ್ಷ್ಮಿ ಸಾರ್ದು ಬಿಡಳುರ್ವೀನಾಥ ಸರ್ವಾಂಗಮಂ            ೧೯

ತಣ್ಗಾಳಿಗೆ ತಣ್ಗದಿರನ
ನುಣ್ಗದಿರ್ಗೆ ಪುಳಿಲ್ಗೆ ಪೂವಿನಂಬಿಂಗೆ ಕರಂ
ಕಣ್ಗಿಡೆ ಗುಱಿಮಾಡುವುದೆಳೆ
ವೆಣ್ಗಳನೆಡೆವಿಡದೆ ನೆಗಳ್ದ ಭೂಪನ ರೂಪಂ     ೨೦

ಭುವನಂ ಬಣ್ಣಿಪ ಭೂಭುಜಂಗನೆಳವೇಟಂ ನಾಂಟಿ ನಂಜಾಗಿ ಚಿ
ತ್ತವನುನ್ಮೋಹಿಪ ಗಾಹುಗಂಡು ನನೆವಿಲ್ಲಂ ಕೊಂಡು ಕೋಲ್‌ಕೋಲನು
ರ್ಚುವಿನಂ ಮನ್ಮಥನೆಚ್ಚ ಪೂವಿನ ಪುಳುಂಬಿಂ ನೊಂದು ಪುಲ್ಗೊಂಡು ದೂ
ಱುವ ಪೆಣ್ಬುಯ್ಯಲೆ ಪುಯ್ಯಲಲ್ಲದಱಿಯೆಂ ಮತ್ತಾವ ಬಲ್ಪುಯ್ಯಲಂ      ೨೧

ಅಳುಪಿಂ ರಾಜಮನೋಜನಂ ಬಯಸಿ ಬೇಗಂ ಲಂಚಮೀವಂದದಿಂ
ತಳಿರ್ವಾಸಿಂಗೊಡಲಂ ಪ್ರಸೂನಶರಪಾತಕ್ಕಾರ್ದ್ರ ಚಿತ್ತಂಗಳಂ
ಗಿಳಿವಿಂಡಿಂಗೆ ಕಳಲ್ವ ಬಾಯ್ದೆಱೆಗಳಂ ಭೃಂಗಾಳಿಗುರ್ವೆಳ್ದ ಸು
ಯ್ಗಳ ಕಂಪಂ ತೆಱೆದೆತ್ತುತೆತ್ತು ತವಿಲಕ್ಕುಂ ಕಾಮಿನೀಸಂಕುಳಂ      ೨೨

ಗೆಲವಿನ ಮಾತು ಬೀತು ನಳಿತೋಳ್ ಬಿಸವಲ್ಲಿಯ ಪಂಗುದಾಳ್ವ ಪೆ
ರ್ಮೊಲೆ ತಲೆಗೊಟ್ಟು ತಾವರೆಯ ಮೊಗ್ಗೆಗಳಂ ಮಱೆಗೊಳ್ವ ಕಣ್ಗಳು
ತ್ಪಲದಳಮಂ ಶರಣ್ಬಗುವ ಮೆಯ್ ಮಲಯೋದ್ಭವದಾಸೆಗೆತಯ್ವ ಕ
ಕ್ಕುಲಿತೆಯನುಂಟುಮಾಡಿದುದು ಪೆಣ್ಗಳೊಳಾವನಪಾಂಗ ವಿಭ್ರಮಂ           ೨೩

ಅರಸಂಗೆಯ್ವುದೆ ಪೇಳ ಪೆಣ್ಗೊಲೆಗೆನುತ್ತುಂ ತದ್ವಿಯೋಗಾರ್ತ ಸುಂ
ದರಿಯರ್ ಪೊಕ್ಕವನಂಗಳಂ ಪೊಱಿಸಿ ತಂದೀಡಾಡುವರ್ ನಾಡೆ ಬೆಂ
ದರೆವೊತ್ತಿರ್ದ ಮೃಣಾಳಮಂ ಪುರಿದ ಬಂಬಲ್ಪೂಗಳಂ ಸೀದು ಸೀ
ಕರಿವೋದೊಳ್ದಳಿರಂ ಸಮಂತು ವನಪಾಲರ್ ಮುಂದೆ ಭೂಪಾಲನಾ            ೨೪

ವಿಲಸದ್ರಾಜ ಕಲಾವಿಲಾಸ ನಿಜಸೌಂದರ್ಯಕ್ಕೆ ಬೇಳಾದ ಕೋ
ಮಲೆಯಂ ಬಾಳ್ವೆಣನಾಗಿ ಬೀಳೆ ಬಱಿದೆನ್ನಂ ದೂಱುಗುಂ ಲೋಕಮೀ
ಗಳೆನಿತ್ತೆಯ್ದಲರ್ವಿಲ್ಲನೈದುಸರಲಂ ಮುಂದಿಟ್ಟು ಮುಂಕೊಂಡು ಮೆ
ಯ್ವಳಿಯಿಂದೋಲಗಿಪಂ ಮನೋಭವನಜಸ್ರಂ ರೂಪಮಂ ಭೂಪನಾ          ೨೫

ಶುಚಿತೆಯನಱಿಯದೆ ಭೂಭುಜ
ನುಚಿತವಯೋರೂಪವಿಭವಮಂ ಕಂಡೊಲಿವಳ್
ಶಚಿಯೆನುತೆ ಸಹಸ್ರಾಂಬಕ
ನ ಚಂಚಲಾನಿಮಿಷ ದೃಷ್ಟಿಯಿಂದೀಕ್ಷಿಸುವಂ     ೨೬

ಪೆಱತೇಂ ರಾಜಕಲಾವಿಲಾಸನ ಕಲಾವಿನ್ಯಾಸದಿಂಬಾದ ಬಾ
ಯ್ದೆಱೆಯಂ ಮಚ್ಚಿಸೆ ಕೂರ್ಮೆಯಿಂ ಮಗುಳೆವಾರಳ್ ತಾನಿದೊಂದಲ್ಲದೊಂ
ದಱೊಳೆಂಬಿಂ ಮಡಗಿಟ್ಟು ಕಾವೆನೆನುತಂ ನಾಲ್ಕುಂ ಮೊಗಂಬೆತ್ತುಮೇಂ
ಬಱಿದಾದಂ ಬಿದಿ ಭಾರತೀವನಿತೆ ಮತ್ತಲ್ಲಿರ್ಪುದಂ ಮಾಣ್ದಳೇ     ೨೭

ಬಳಸಿನ ಮಾತೇನಾ ನೃಪ
ತಿಳಕನ ವಾಗ್ವೃಭವಕ್ಕೆ ಮೂಱುಂಜಗಮಂ
ತೊಳಸಿದೊಡೊರ್ವನೆ ಸಮನಾ
ಗುಳಿದುದುಱಿಂ ಶೇಷನೆನಿಪನಿನ್ನುಂ ಶೇಷಂ      ೨೮

ಕ್ರಮದಿಂ ವಿಕ್ರಮದಿಂ ಕಡಲ್ಗಡೆವರಂ ಪೆರ್ಚಿರ್ದ ದುಷ್ಟಾರಿವ
ರ್ಗಮಸಂಖ್ಯಾತಮನೆಯ್ದೆ ಗೆಲ್ದನೆನಲಿನ್ನಿರ್ದಲ್ಲಿ ಮೆಯ್ವೆರ್ಚಿದ
ಶ್ರಮದಿಂದಾತ್ಮವಶಕ್ಕೆ ಸಿಲ್ಕಿಕ್ಕಿದರಿಷಡ್ವರ್ಗಂಗಳಂ ನಾಡೆ ಗೆ
ಲ್ವ ಮಹಾಮಂತ್ರದ ಮೈಮೆ ಸದ್ಗುಣನಿಧಾನಂಗೇನದಾಶ್ಚರ್ಯಮೇ          ೨೯

ನಯಮಳವಟ್ಟಿರಲರಿಸಮು
ದಯಜಯಕೆ ಧಾರೆಮೇರೆಯಂ ಮೀಱಿದ ಬು
ದ್ಧಿಯೊಳೆ ವಶಂಮಾಡಿದನಿಂ
ದ್ರಿಯಾಶ್ವಮಂ ಧರೆಗೆ ಧಾರಕಂ ಪೆ ನಾವಂ        ೩೦

ಅಕ್ಷಯಧರ್ಮಾರ್ಥೋಭಯ
ಪಕ್ಷಂ ಬೆಳೆವಂತು ರಾಜಹಂಸನದೇಂ ಕಾ
ಮಕ್ಷೀರಮನನುಭವಿಪನೊ
ಲಕ್ಷಿಸಿ ಮೋಹಾಂಬುಪೂರದೊಳ್ ಬೆರಸಿದುದಂ ೩೧

ಜಗದೊಳ್ ಕಣ್ಬಡೆದಿರ್ದ ನೀತಿ ನಿಡುದೋಳಂ ತಾಳ್ದ ವಿಕ್ರಾಂತಿ ನಾ
ಲಗೆಯಂ ಪೆತ್ತ ಸಮಸ್ತ ವಿದ್ಯೆ ಸೊಬಗಂ ಕೆಯ್ಕೊಂಡ ಶೌಚಂ ಮನಂ
ಬುಗೆ ಚೆಲ್ವಂಗಮನಪ್ಪಿದಾರ್ಪು ನೆಱೆ ಜೀವಂಬೆತ್ತ ಸತ್ಕೀರ್ತಿಯೆಂ
ಬ ಗುಣಕ್ಕಾಗರಮಾದುದಾ ಕೃತಿ ವಿಶೇಷಂ ತನ್ನರಾಧೀಶನಾ         ೩೨

ಕಳೆಯಿಂದುವಿಂ ಚತುರ್ಗುಣ
ಮಳವಡೆ ತನಗಮಮ ಮಿಕ್ಕ ಬುಧಕಳೆಯಂ ಸೈ
ತಿಳಿಕೆಯ್ವೆಮ್ಮೊಡನೆಣಿಸದೆ
ಕಳೆಕಳೆಯೆನಿಪುದು ಕಳಾವಿಳಾಸನ ಕಳೆಗಳ್         ೩೩

ಅಯ್ದಮರಭೂರುಹಂಗಳ್
ಮೆಯ್ದೆಗೆಯದೆ ಕುಡುವ ನೃಪನ ವಿತರಣದಳವಿಂ
ಗೆಯ್ದದೆ ಜಗವಱಿಯಲ್ಕೀ
ರೆಯ್ದಾದುವು ದಲ್ ದಶಾಂಗಮೆಂಬೀ ನೆವದಿಂ  ೩೪

ಧರಣೀ ಭೃತ್ಪತ್ತಿ ಪದವಿಗೆ
ಸರಿಯಾದೊಡಮೇನೊ ಮಂದರಾಗಂ ಪ್ರಜೆಯೊಳ್
ಪರಮಾನುರಾಗಮಂ ಪಡೆ
ವರಸನ ಬಿಣ್ಪಿಂಗೆ ಸೆಣಸೆ ಸರಿಯಾದಪುದೇ       ೩೫

ಕಡುಗಣ್ಪಿಂ ಪೆಂಪಿಂದೆಣೆ
ವಡೆದೊಡಮೇನಕಟ ಕಂಡ ವಿಬುಧರ್ ಕೆಯ್ಯೊಳ್
ಕಡೆಯಿಸಿಕೊಂಡುದು ಗಡ ಪಾ
ಲ್ಗಡಲದನಿನ್ನಾ ನೃಪಾಲನಂ ಪೋಲಿಪೆನೇ       ೩೬

ಚಂದನಮಿನಿದಾದಂಬಖಿ
ಳೇಂದುಗೆ ಕಱೆ ಪೊರ್ದದಂದು ಸುಧೆ ವಸುಧೆಗೆ ಬಂ
ದಂದು ಪೊಸಮುತ್ತು ಮೃದುವಾ
ದಂದೆಣೆಯಕ್ಕುಂ ನರೇಂದ್ರನುತ್ತಮಗುಣದೊಳ್            ೩೭

ಪೆಱತೇನಾ ಭೂನಾಯಕ
ನಱಿಪ ಗುಣಂ ಪೂರ್ಣಚಂದ್ರನಂದದ ಕಳೆಯೊಳ್
ನೆಱೆದಿರ್ದುಂ ಭಾವಿಸದೆಳ
ವೆಱೆಯಂತೆ ಗಿಪುದ ಸಕಳ ಭೂಮಂಡಳಮಂ     ೩೮

ಅಮೃತ ವಿಷಂಗಳ ತೆಱದಿಂ
ಸಮಗ್ರಕೋಪಪ್ರಸಾದ ಗುಣಮೆರಡುಂ ಸಂ
ಕ್ರಮಿಸಿರೆ ವಸುಧಾರಮಣಂ
ಸಮುದ್ರವೆಂತಂತಿರೊಳಗುಮಾಡಿದನಿಳೆಯಂ     ೩೯

ಪಡೆವಾತೇಂ ತನ್ನಾಣೆಯ
ನಿಡೆ ತೊಟ್ಟನೆ ದುಷ್ಟಭೂಭುಜಂಗರ್ ಭಯದಿಂ
ಪಡೆಯುಡುಗುವರಾಕ್ಷಣಮೆಂ
ದೊಡದೇಂ ಸನ್ಮಂತ್ರತಂತ್ರಸಿದ್ಧನೋ ಭೂಪಂ  ೪೦

ಸ್ಥಿರೆಯಾದಳ್ ಶ್ರೀವಿಶ್ವಂ
ಭರೆಯಾದಳ್ ಕೀರ್ತಿಯಚಲೆಯಾದಳ್ ವಾಕ್ಸುಂ
ದರಿ ನೃಪನನೊಲಿಸಿ ನೆರೆದು
ರ್ಧರೆಯೊಳ್ವೆಸರೊಡನೆ ನಾಡೆ ಮಚ್ಚರಿಸುವವೋಲ್       ೪೧

ಕನ್ನೆಯರವನಂ ಕಾಣದ
ಮುನ್ನಮೆ ಕಂಟಕಿತ ತನುಗಳಕ್ಕುಮೆನಲ್ಕಾ
ಸನ್ನಕರ ಸ್ಪರ್ಶನಮಿ
ರ್ದುನ್ನಾಂಟವು ಕಂಟಕಂಗಳಿಳೆಯೊಳಿದೇನೋ    ೪೨

ಇನ್ನೇನೆಂದೆಂಬೆನಾ ಭೂಭುಜನ ನಿಜಯಶಃಪ್ರೌಢಿಯಂ ಮೀಱೆ ಮಾಱೂಂಸ
ಪನ್ನರ್ ಮತ್ತಾರುಮಿಲ್ಲಾದೊಡಮನುದಿನಮೆಕ್ಕೆಕ್ಕೆಯಿಂ ಮಿಕ್ಕು ತೋರ್ಕುಂ
ತನ್ನೇಕಚ್ಛತ್ರದಂಡಂ ವಿಬುಧ ವಿನುತ ಸನ್ಮಾನದಾನಂ ಸದರ್ಪಾ
ಸನ್ನಪ್ರೇಮಾನಭೇದಂ ವಿರಹವಿಧುರ ಸೀಮಂತಿನೀ ಪ್ರೇಮಸಾಮಂ  ೪೩

ಶುಚಿಧರ್ಮಂ ಪುಣ್ಯಜನ
ಪ್ರಚೇತನಹಿತ ಪ್ರಭಂಜನಂ ಧನದಂ ಸ
ದ್ರುಚಿ ರಾಜಮೌಳಿಯೆನಲೇ
ನುಚಿತಮೋ ಜಿಷ್ಣುಗೆ ಸಮಸ್ತ ದಿಗ್ವಿದಿತಯಶಂ            ೪೪

ಲಾವಣ್ಯಕ್ಕೆಣೆವಾರನಂಗಭವನಾರ್ಪಿಂಗೆಯ್ದುರರ್ಥಾರ್ತ್ಥಿಗಳ್
ಭೂಮಿಖ್ಯಾತಗುಣಕ್ಕೆ ಸಾಲವು ಮಹಾಕಾವ್ಯಂಗಳಾ ಪೂರ್ಣ ವಿ
ದ್ಯಾವಸ್ಟಂಭ ವಿಜೃಂಭಣಕ್ಕೆ ಮಱುಮಾತಂ ಕಾಣ್ಬತಿಪ್ರೌಢರಿ
ಲ್ಲೀ ವಿಶ್ವಕ್ಕೆನಿಪೊಂದು ಕೀರ್ತಿವಡೆದಂ ಭೂಮಂಡಲಾಖಂಡಲಂ    ೪೫

ಇಂತೆನಿಸಿದ ಸಕಲಕಲಾ
ಕಾಂತನೆ ನಿಜಕಾಂತನಾದ ಮಹಿಮೆಗೆ ಮುನ್ನಂ
ನೋಂತಗ್ರಮಹಿಷಿಯೆನಿಸಿದ
ಕಾಂತೆಗೆ ಸುವ್ರತೆಯೆನಿಪ್ಪ ಪೆಸರದು ಪುಸಿಯೇ   ೪೬

ಸತ್ಕುಲಮೋವೊ ಪೆಣ್ಬರಿಜನಾಳ್ದುದು ಶೀಲಮೆ ಬಾಲೆಯಾಯ್ತು ಸಂ
ದುತ್ಕಟ ಪುಣ್ಯಮಂಗನೆಯ ಭಂಗಿಯನೆಯ್ದಿದುದೆಯ್ದೆ ಸಚ್ಚರಿ
ತ್ರೋತ್ಕ ಪತಿವ್ರತಾಗುಣಮೆ ಮಾನಿನಿಯಾದುದೆನಿಪ್ಪ ಮೈಮೆ ವಿ
ದ್ಪತ್ಕವಿಸೇವ್ಯಮಾದುದೆನೆ ಸುವ್ರತೆ ಸುವ್ರತೆಯಪ್ಪುದೊಪ್ಪದೇ     ೪೭

ಆ ವ್ರತೆಯರಪ್ಪೊಡಂ ಸುಭ
ಗವ್ರತೆಯರ್ ತಾನೆನಿಪ್ಪೊಡಂ ಮಾನಿನಿಯರ್
ಸುವ್ರತೆಯನೊರ್ಮೆ ನೆನೆಯೆ ಪ
ತಿವ್ರತೆಯರೆನಿಪ್ಪರೆಂದೊಡೇವಣ್ಣಿಪದೋ       ೪೮

ಆ ನಿರ್ಮಳ ವೃತ್ತೆಯ ಸುಮ
ನೋನಯನಮನಿಂಬುಗೊಳ್ವ ಗುಣವತಿಯೆಂದೀ
ಭೂನುತೆಯಾಗದೊಡೆ ಮಹಾ
ಸೇನನ ಪೇರುರದ ಹಾರಲತೆಯೆನಿಸುವಳೇ        ೪೯

ಪತಿಗಾತ್ಮೀಯ ಕರಪ್ರವಳ ಸುಭಗಶ್ರೀಯಿಂ ಸುಗಂಧಾನನ
ಸ್ಮಿತ ಪುಷ್ಪಾವಳಿಯಿಂ ಸುಧಾಧರಫಲ ಪ್ರಾಚುರ್ಯದಿಂ ತಾನೆ ಸ
ನ್ನುತ ಸರ್ವರ್ತುಕಮಾದ ಸೌಖ್ಯದೊದವಂ ಸಂಪ್ರೀತಿಯಿಂದೀವ ಸು
ವ್ರತೆಯಂ ಕಾಮಿತಮೀವ ಕಲ್ಪಲತೆಯೆಂದಾರೆಂದೊಡಂ ತೀರದೇ     ೫೦

ಪೆಱತೇವುದಾಕೆ ಗುರುವೆಂ
ದೆಱ ಗದರಾರ್ ಕಂಡು ನೇಹದಿಂ ನೆಲೆಮೊಲೆಯಂ
ಪೊಱವಾಱನೋತು ಗುರುವೆಂ
ದೆಱಗುಗುಮಾ ಸತಿಯ ಪತಿಯ ಕಣ್ಣುಂ ಮನಮುಂ       ೫೧

ಕಡುಚೆಲ್ವ ಚಲ್ಲೆಗಣ್ಗಳ
ಪೊಡಕರಿಸುವ ಪುಲ್ಲೆಗಣ್ಗಳಂದಮನಾಂ ತೋ
ಳ್ನಿಡುಗಣ್ಗಳ ನೀಱೆಯನಾಂ
ಬಿಡುಗಣ್ಗಳ ದಿವಿಜವಧುಗಳಂ ಪೋಲಿಪೆನೋ  ೫೨

ಕಱೆಕಱಿಗಂದಿದಂ ಮೊಗದ ಮೈಸಿರಿಗಂಡಮೃತಾಂಶು ಲಜ್ಜೆಯಿಂ
ಕುಱುಕುಱುಗೊಂಡು ಕಾಲ್ವಿಡಿದುದೊಳ್ನಡೆಗಳ್ಕಿ ಮರಾಳನಾವಗಂ
ಪಱಿವಱಿಯಾಯ್ತ ಪಜ್ಜಳಿಪ ಮೆಯ್ವೆಳಗಿಂತೆಳಮಿಂಚೆನಲ್ಕದಾ
ರಱಿದಭಿವರ್ಣಿಪರ್ ಸತಿಯ ರೂಪಿನ ರೂಢಿಸಿದೊಂದು ಗಾಡಿಯಂ ೫೩

ಅದು ಕಂದಿಲ್ಲದ ಚಂದ್ರಬಿಂಬಮದು ಮೌರ್ವೀಬಂಧಮಂ ಪೂಣ್ದು ಕೊಂ
ಕಿದ ಕೃಷ್ಣೇಕ್ಷು ಧನುರ್ವಿಲಾಸಮದು ಝಂಕಾರಕ್ಕೆ ಪಕ್ಕಾಗದುಸ
ನ್ಮದ ಭೃಂಗಾಳಿಯದಾಗಳಂ ತಳಿಯದೊಪ್ಪಂದೋರ್ಪ ಮಿಂಚೆಂದು ಮಾ
ಣದೆ ಬೇಱೆಂಬುದೆ ಗಾಂಪು ನೀಱೆಯ ಮುಖಭ್ರೂಕುಂತಳಾಪಾಂಗಮಂ        ೫೪

ಎಳೆಮಿಂಚಂ ಕಱೆವುತ್ಪಲಂ ಪೆಱಗೆ ಪಾಯ್ಪೊಳ್ದುಂಬಿ ಬೆಳ್ದಿಂಗಳಂ
ಗೆಳೆಗೊಂಡಂಬುಜಮಿಂಬುವೆತ್ತಮೃತಮಂ ಬೈತಿಟ್ಟ ಬಂಧೂಕಮು
ಜ್ವಳ ವಜ್ರಾಂಶುವನಪ್ಪಿ ಮಾರ್ಪೊಳೆವ ಕುಂದಂ ಮಂದಯಾನಂ ಮನಂ
ಗೊಳೆ ತಮ್ಮೊಳ್ ಸಲೆಸಂದ ಕೆಂದಳಿರ್ಗಳಂದಂಬೆತ್ತುವಬ್ಜಾಕ್ಷಿಯಾ   ೫೫

ವ : ಅಂತು ಸೊಗಯಿಸುವ ಸುವ್ರತಾದೇವಿ

ಪೂವಿನ ಬಿಲ್ಗೆ ತುಂಬಿದಿರುವೀಶನ ಜೂಟಕೆ ಚಂದ್ರಲೇಖೆ ಲ
ಕ್ಷೀವರನೊಳ್ಳುರಕ್ಕೆ ವನಮಾಲೆ ಸುಧಾಬ್ಧಿಗೆ ರತ್ನ ವೇಲೆಗೈ
ರಾವನವಾರಣಕ್ಕೆ ಮದಧಾರೆ ಸಮಂತಮರ್ದಂತೆ ಪೆರ್ಮೆವೆ
ತ್ತಾ ವಸುಧಾಧಿಪಂಗಮರ್ದು ನಚ್ಚಿನ ವಲ್ಲಭೆಯಾದಳಾವಗಂ      ೫೬

ನಿರ್ಮಳ ಶೀಲೋಜ್ವಳ ಶುಭ
ಕರ್ಮ ಮಹಾಸೇನ ನೃಪತಿಗಾಸತಿ ಸುಮನೋ
ಧರ್ಮಾನುಕೂಲೆಯಾದೀ
ಪೆರ್ಮೆಗೆ ರತಿಯೆಂದು ಪೊಗಳದಿರ್ಕುಮೆ ಲೋಕಂ            ೫೭

ತತ್ಪತಿಯ ಕೂರ್ಮೆಯಿಂ ತ್ರಿಜ
ಗತ್ಪೂಜಿತೆಯಾದಳಾಕೆ ಸಲೆ ಗಿರಿಜಾಯೋ
ಕ್ಷಿತ್ಪತಿಯೊಲವಿಂ ಶಶಿಕಳೆ
ಸತ್ಪದವಿಗೆ ಬಂದು ವಂಧ್ಯಮಾದವೊಲಿಳೆಯೊಳ್           ೫೮

ಪದೆದಾಳೋಕಿಸೆ ಲೋಕಮಿಂದುವಿನೊಳೆಂದುಂ ಚಂದ್ರಿಕಾಲಕ್ಷಿಸಂ
ಮದದಿಂ ಕೇಳಿ ನವೀನಧಾತುವಿನೊಳೋತೊಳ್ಮಾತು ತಳ್ತೊಂದಿದಂ
ದದ ಕಣ್ಗಂ ಕವಿಗಳ್ಗಮುತ್ಸುಕತೆಯಂ ಮಾಡಿತ್ತಭೇದಪ್ರಸಾ
ದದೆ ತನ್ನೋಪನೊಳೊಂದಿದೊಂದು ಸುಭಗತ್ವಂ ಸುವ್ರತಾದೇವಿಯಾ         ೫೯

ವ : ಆ ಮಹಾಸತಿಯ ರೂಪಾತಿಶಯಮದೆಂತೆನೆ

ಮದಕಳಮರಾಳಗಮನೆಯ
ಪದಮಂ ಪಲ್ಲವದೆ ಪೋಲ್ವೆನೆಂಬನುರಾಗಂಸ
ಪುದಿದಿರ್ದಶೋಕವಲ್ಲರಿ
ಸುದತಿಯರೆಡಗಾಳೊದಸಿಕೊಂಡಪುದಿನ್ನುಂ      ೬೦

ನಡೆನೋಡಿ ನಾಣ್ಚಿ ಕೆಯ್ಕಾ
ಲೊಡಲಂ ಪುಗೆ ತಲೆಯನೆತ್ತಲಣ್ಮದೆ ಕೂರ್ಮಂ
ಮಡುವಂ ಬಿಳ್ದುದೆನಲ್ಕಾಸ
ಮಡದಿಯ ಮೇಗಲಾಪಾಂಗನದು ಪೋಲ್ತಪುದೇ           ೬೧

ಮದದಾನೆ ಸೋಲ್ವುದೆನ್ನಯ
ಮೃದುಗತಿಗೇವಾಳ್ತೆ ನೀನೆನುತ್ತುಂಚೆಗಳಂ
ಪದಲಕ್ಷ್ಮಿ ಜಱೆವ ತೆಱದಿಂ
ಸುದತಿಯ ನೂಪುರದ ನುಣ್ಚರಂ ಸೊಗಯಿಸುಗುಂ         ೬೨

ತತ್ತರುಣಿಯ ಮೆಲ್ಲಡಿಗಳ್
ಬಿತ್ತರಮಂ ನೋಡಿನೋಡಿ ತರಳಾಪಾಂಗಂ
ಪತ್ತುಮೊಗಮಾಗಿ ಮೆಲ್ಲಡಿ
ಮುತ್ತಂ ಮುಕ್ಕುಳಿಸಿದಂತೆ ಸೊಗಯಿಪುವುಗುರ್ಗಳ್         ೬೩

ಕಡುಪರಳಿದನಂಗನಂ ಬೆಂ
ಬಿಡದುಪಜೀವಿಸುವ ಕೊಱತೆಗಳ್ಕದೆ ತನ್ನೊಳ್
ತೊಡರ್ದೊಡೆ ಮಡದಿಯ ಕಿಱುದೊಡೆ
ತೊಡೆಯದೆ ಪೂಗಣೆಯ ದೊಣೆಯ ಪಣೆಯಕ್ಕರಮಂ     ೬೪

ಕಣ್ದುಣಿಯೆ ನೋಡಿ ಕಾಂತೆಯ
ನುಣ್ದೊಡೆಗಗ್ಗಳದ ಗೆಲವನಿತ್ತಂಗಭವಂ
ಪೂಣ್ಪುಡಿಸಿ ನಾರನಟ್ಟವೆ
ಮಾಣ್ದನೆ ಪೇಳ್ ವನಕೆ ಕನಕ ಕದಳಿಯನಿಳೆಯೊಳ್          ೬೫

ಅಚ್ಚರಿಯಿದು ಪೊಗಳ್ವರ ಬಗೆ
ಯಚ್ಚುಡಿದಿರಲೊಡನೆ ಬಿಡದೆ ನೋಳ್ಪರ ಕಣ್ಬಂ
ದಚ್ಚಿಱಿದ ಚಿತ್ತಜನ್ಮನ
ನಚ್ಚಿನ ರಥಚರಣಮೆನಿಪುವಾಕೆಯ ಜಘನಂ      ೬೬

ಬಿಟ್ಟು ಬಳಸಿದೊಡೆ ಬಾನೆಡೆ
ಗೆಟ್ಟಪುದೆಂದಡರಿ ನೋಡಿ ಜಘನಸ್ಥಳಮಂ
ನೆಟ್ಟನೆ ಬಿದಿ ಬಿಗಿದಂ ಪೊಂ
ಗಟ್ಟಿನೊಳೆನೆ ಕಾಂಚಿ ಕಣ್ಗೆವಂದುದು ಸತಿಯಾ  ೬೭

ತುಂಗ ಕುಚಭರೆಯ ನಡುವಂ
ಭಂಗುರ ಯೌವನವನೈಕಲತೆಯೆನ್ನದೆ ನೀಂ
ಸಿಂಗದ ನಡುವೆಂದೊಡೆ ಪೆಱ
ಪಿಂಗದೆ ಕರಿಕುಂಭಮೆಂತು ಮೇಲಿರ್ದಪುವೋ     ೬೮

ಎಲ್ಲರ್ ಕಂಡವೊಲಿದು ನನೆ
ವಿಲ್ಲೊಳ್ಪಡಿಗಾಳಿಗಲುವೆಳಲತೆಯಾದ
ಲ್ಲಲ್ಲಿ ಮಿಗೆ ಪೊಗಳ್ವದಾರ್ ಮಿಂ
ಚಲ್ಲದ ಸೆಳೆನಡುವನಱಿಯೆನಾ ಕೋಮಳೆಯಾ ೬೯

ಕಡು ಚೆಲ್ವವಯವಮಂ ಸ್ಮರ
ನಡರೆ ಕರಂ ಗುಣಿಸಿ ನೋಡಿ ನಡುವಿಲ್ಲೆಂದು
ಗ್ಗಡಿಸಿಟ್ಟು ಸೊನ್ನೆಯಂತೇ
ನೊಡರಿಸಿದುದೋ ಚೆಲ್ವನವಳ ನಾಭೀವಳಯಂ            ೭೦

ನೆಲೆಮೊಲೆಯೆರಡಱ ಸಂದಂ
ಸಲೆ ಭೇದಿಪೆನೆಂದು ಮದನನತಿಸಾಹಸದಿಂ
ಸಲಿಸಿದ ನೀಲದ ಸಲಿಗೆಯ
ನಿಲವೆನಿಪುದು ರೋಮರಾಜಿ ರಾಜಾಂಗನೆಯಾ  ೭೧

ಇನ್ನೆಲೆ ಬಡವಾದೊಡೆ ನಿನ
ಗೆನ್ನಾಣೆ ವಸಂತನಾಣೆ ರತಿಯಾಣೆಯೆನು
ತ್ತುಂ ನಡುವಿಂಗಂಗಜನಿ
ಟ್ಟಂ ನಿಯಮದ ಗೆರೆಯೆನಿ‌ಪ್ಪುವಾಕೆಯ ವಳಿಗಳ್           ೭೨

ನಿಡುದೋಳಿಂದಮರ್ದಪ್ಪುವ
ಕಡುನೇಹದ ಕಾಂತನೆರ್ದೆಯನೊದೆದಪ್ಪುಗೆಯಂ
ಬಿಡದೊಡನೆ ಬಳೆವ ನೆಲೆಮೊಲೆ
ಸಡಿಲ್ಚಿ ಬಳಯಿಸಿದುವಸಿಯಳೆಳೆಜವ್ವನದೊಳ್ ೭೩

ಮೃಗನಯನೆಯ ಮೊಲೆ ಪೊಣರ್ವ
ಕ್ಕಿಗಳ್ಗೆಣೆಯಾದಂದು ಜಗದೊಳಗಲದ ತಲೆಯಂ
ನೆಗಪಿ ನಗೆಜೊನ್ನವೆಳಗಿಂ
ಗಗಿಯದೆ ಮೊಗಸಸಿಯನಿಂತು ನಡೆನೋಡುಗುಮೇ         ೭೪

ಮದನೇಂದ್ರಜಾಲಿಗಂ ಲೋ
ಕದ ಬಗೆಸೆಂಡುಗಳನಗಲದಿಟ್ಟಳವಡೆ ಮು
ಚ್ಚಿದ ಮಿಸುನಿವೆಸದ ಕಣ್ಮಾ
ಯದ ಠೌಳಿಗಳೆನಿಪುವವಳ ವೃತ್ತಕುಚಂಗಳ್      ೭೫

ಅಣಿಯರದಿನತನು ತನುಲತೆ
ಗೆಣಿಸದೆ ಲಾವಣ್ಯರಸಮನೆತ್ತುವ ಪೊಸಱಾ
ಟಣಮಾಲೆಯಂತಿರೆಸೆದುದು
ಮಣಿಹಾರಂ ನಾಭಿಸರಸಿವರಮಂಗನೆಯಾ        ೭೬

ಬಾಳದು ಪೊಗರಿಂ ಸೆಣಸಲ್
ಬಾಳದು ತಾನಿದಱೊಳೆಂದು ಮೊದಲೀಕೆಯ ನು
ಣ್ದೋಳೆ ಮನೋಭವ ಭೂಪನ
ಬಾಳೆನೆ ಬಾಳೆಂದು ಪೊಗಳರಾರಱಿದೆನ್ನಂ        ೭೭

ಕೆಂದಾವರೆಯಲರ್ಗಳೊ ಪೊಸ
ಕೆಂದಳಿರ್ಗಳೊ ಮೇಣಿವೆಂದು ಬಗೆವರ ಮನದೊಳ್
ಸಂದೆಗಮಂ ಮಾಣಿಸಿದುದು
ಕೆಂದಳದಂಗುಲಿಗಳುಗುರ ಬೆಳಗಂಗನೆಯಾ        ೭೮

ಸೊಗಯಿಪ ಮೃಗನಯನೆಯ ಸೆ
ಳ್ಳುಗುರ್ಗಳ್ ಮೂವಳಸಿ ಮುತ್ತಿಮುಸುಕಿದ ಮುಳ್ಳಂ
ಬಗಿದೆಂತು ಪೊಕ್ಕ ಚದುರಿಂ
ತೆಗೆದುವೊ ಕೇದಗೆಯ ಮಿಱುಪ ಗಱಿಗಳ ಚೆಲ್ವಂ           ೭೯

ಪರಿಕಿಸೆ ಕಳಾವಿಳಾಸನ
ಪರಿರಂಭಕ್ಕಮರ್ದ ಚುಂಬನಕಿಂಬಾಗಿ
ರ್ದರಸಿಯ ಕೊರಲ್ಗಕಟ ಕ
ಣ್ಗುರುಡರ ಕಯ್ಪಾಯೆ ಬರ್ಪ ಶಂಖಂ ಸರಿಯೇ            ೮೦

ಮೃಗಶಿಶುನಯನೆಯ ನಚ್ಚಿನ
ಮೊಗಮಂ ಕಂಡು ಕಂಡು ಸೈರಿಸದೆ ಸಮಂ
ತೊಗೆದ ಕಳಂಕದ ನೆವದಿಂ
ಮೃಗಧರನೆರ್ದೆ ಪೊತ್ತಿ ಪೊಗೆವುತಿರ್ದಪುದಿನ್ನುಂ            ೮೧

ತೊಲಗದೆ ನೋಡುವ ಮನ್ಮಥ
ಲಲನೆಯ ಮಣಿಮುಕುರದಳವನದಟಲೆವಾ ಕೋ
ಮಳೆಯ ಕದಪಿಂಗೆ ತಂಬುಲ
ದೆಲೆ ಸೆಣಸುವವಾವ ಮೂಗನೊಳಕೊಂಡಿಳೆಯೊಳ್         ೮೨

ತೊಳಗುವ ನಗೆಗಣ್ಣೆಯ್ದಿ
ಲ್ಗಳ ಕಾವಮೃತಾಂಶುಬಿಂಬಮಂ ಬಿಗಿದವೊಲು
ಜ್ವಳಿಸಿದುವು ಕರ್ಣಪಾಲಿಕೆ
ಯೊಳಕೆಯ್ದೆಳೆಮುತ್ತಿನೋಲೆಯಿಂ ಬಾಲಕಿಯಾ ೮೩

ಪಿರಿದುಮನುರಾಗದಿಂ ಬೀ
ಗಿರೆ ಸೊಗಯಿಪ ಸೊಬಗುಗಂಡು ನಿಜಪರಿಮಳದಿಂ
ಪೊರೆದು ಮುಖಲಕ್ಷ್ಮಿ ಬಂದುಗೆ
ಯರಲಂ ಸೂಡಿದವೊಲಾಯ್ತು ಬಾಯ್ದೆಱೆ ಸತಿಯಾ     ೮೪

ಬಿಂಬಫಳಮಂ ಕಳಾಧರ
ಬಿಂಬದ ನಡುವಿರಿಸಿ ಮದನನಮೃತದ ರಸಮಂ
ತುಂಬಿದನೆನ್ನದೆ ಪೆಱತೇ
ನೆಂಬುದೊ ವಿಧುಮುಖಿಯ ವಿಳಸದರುಣಾಧರಮಂ       ೮೫

ಮಿಱುಗುವ ಮಿಂಚಿನ ಮೊಳೆಗಳ
ಮಱಿಗಳಿವೆನಿಪವಳ ಧವಳ ದಶನಾವಳಿಯೆ
ಚ್ಚಱಿಸಿದುದು ವದನ ಸದನದೊ
ಳುಱುವ ಸರಸ್ವತಿಯ ಕೊರಲ ಹೀರಾವಳಿಯಂ  ೮೬

ಮುಂಪಡೆದುದವಳ ನಾಸಿಕೆ
ಪೆಂಪಿನ ಕಣ್ಮೀನ್ಗಳೆಂಬಮಳ್ವಳವಿಗೆಯಂ
ತಾಂ ಪೊತ್ತು ನಿಂದ ಮದನನ
ಸಂಪಗೆಯೊಳ್ನನೆಯ ಕಿತ್ತ ದಂಡಶ್ರೀಯಂ          ೮೭

ಬಗೆಗೊಳಿಸಿದುದಚ್ಚರಿಯೆನೆ
ಸೊಗಯಿಪ ತಾವರೆಯ ನಡುವೆ ನಳನಳಿಸುವ ಸಂ
ಪಗೆಯ ನನೆಯಲ್ಲಿ ಪೊಸಮ
ಲ್ಲಿಗೆಯ ಮುಗುಳ್ ಮೂಡಿದಂತೆ ಮೂಕುತಿ ಸತಿಯಾ    ೮೮

ಲಾವಣ್ಯರಸದೆ ತೆಕ್ಕನೆ
ತೀವಿದ ಮುಖಸರಸಿಯೊಳಗಳೆಳಮೀನೆನಿಸಿ
ರ್ದಾವಗಮಲರ್ಗಣ್ಗಗ್ಗದ
ಧೀವರರಂ ಬೆಱಗಿದದುಱೆ ತೊಡರ್ಚುವುವವಳಾ            ೮೯

ಚೆಕ್ಕನೆ ಚಕೋರವಕ್ಕಿಗ
ಳೆಕ್ಕೆಕ್ಕೆಯಿನುಂಡು ತಣಿದು ತಿಂಗಳಬೆಳಗಂ
ಮುಕ್ಕುಳಿಸಿ ಮಗುಳೆ ಮಗುಳ್ವುಗು
ಳ್ವಕ್ಕಜಮಂ ಪಡೆದುದವಳ ಧವಳಾಪಾಂಗಂ     ೯೦