ಶ್ರೀದಯಿತಂ ಸಕಳಜನಾ
ಹ್ಲಾದಿ ವಿಬೋಧಪ್ರಯೋಗದಿಂ ರಾಗಿಸಿದಂ
ಮೇದಿನಿಪತಿ ಪರಿಪೂಜಿತ
ಪಾದಯುಗಂ ಸರಸಚತುರಕವಿಕುಳತಿಳಕಂ        ೧

ವ : ಆಗಳಾ ಮುನಿನಾಯಕಂ ನಿಜಪರಮಾವಧಿಬೋಧದಿಂದಾ ಜನಾಧಿ ನಾಯಕನ ಪಿಂದಣ ಜನ್ಮವೃತ್ತಿಯಂ ತನ್ನಂಗೈಯೊಳಗಣ ಸ್ಫಟಿಕಮಣಿಯಂತತಿವ್ಯಕ್ತ ಮಾಗಱಿದು ವೃತ್ತಾಂತದೊಳ್ ಸಾಕ್ಷೀಭೂತಪ್ರಮಾಣಪುರುಷನಂತೆ ಸಂತೋಷೋತ್ಪಾದಕ ಮಾದ ಮೃದುನಿನಾದದಿಂದಿಂತೆಂದಂ

ಜಿನನ ಚರಿತ್ರದೊಂದುಕಥೆಯಂ ನೆಱೆಪೇಳ್ದೊಡೆ ಕೇಳ್ದೊಡಂ ದಲಾ
ತನ ದುರಿತಂಗಳೆಯ್ದೆ ಪರಿದೋಡುಗುಮೀ ಹಿತವಸ್ತುಸಿದ್ಧಿಯುಂ
ಜನಿಯಿಕುಮಂತು ಕಾರಣಮೆ ನೀಂ ಬೆಸಗೊಂಡ ಭವಾಂತರಪ್ರಪಂ
ಚನಮನದೆಂತುಟಂತುಸುರ್ವೆ ನಾನಿದನೀಗಳೆ ಕೇಳ್ ನೃಪಾಗ್ರಣೀ     ೨

ವ : ಅದೆಂತೆಂದೊಡೆ ಮೇರುಗಿರಿಗಳಿಂ ದ್ವಿಗುಣಮಾದ ವಿಸ್ತಾರದಿಂ ಚತುರ್ಗುಣ ಮದಾಗಿರ್ದಂತೆ ತಾನೆನ್ನಯ ಪೆಸರಿಂದಂ ಮುಖ್ಯಮಪ್ಪ ಪೆಸರನಾಂತುದೆಂಬೀ ಕೋಪದಿಂದನೂನವಾಹಿನೀಸಹಿತಮಾಗಿ ಬಂದು ಸುತ್ತಿಮುತ್ತಿಕೊಂಡಿರ್ದುದೆಂಬಂತೆ ಧಾತಕೀಷಂಡದ್ವೀಪಂ ಲವಣಸಮುದ್ರಸಮೇತಮಾದ ಜಂಬೂದ್ವೀಪಂ ಬಳಸಿ ಕೊಂಡಿರ್ಕುಮಾ ಧಾತಕೀಷಂಡದ್ವೀಪದಲ್ಲಿ

ಬಹುವಿಧನೂತ್ನರತ್ನಚಯನಿರ್ಮಿತಚೈತ್ಯನಿಕೇತನಂಗಳಿಂ
ಸಹಿತಮನಲ್ಪ ಕಲ್ಪತರುನಂದನರಾಜಿವಿರಾಜಿತಂ ಮಹಾ
ಮಹಿಮಸಮನ್ವಿತಂ ರತಿಸಮುತ್ಸುಕಮಾನಸದೇವದಂಪತೀ
ಸ್ಪೃಹಿತವಿಶಾಲಕಂದರಮದೊಪ್ಪಮನಾಳ್ದುದು ಪೂರ್ವಮಂದರಂ            ೩

ಅಂಬರತಳಮೆಯ್ದೆ ನಿರಾ
ಲಂಬಂ ಮುಱಿದಿ ಧರಿತ್ರಿಯೊಳ್ ಬಿಳ್ದಪುದೆಂ
ದಂಬುಜಜಂ ನಟ್ಟಿರಿಸಿದ
ಹೊಂಬಣ್ಣದ ಕಂಭಮೆಂಬಿನಂ ರಂಜಿಸುಗುಂ     ೪

ವ : ಆ ಪೂರ್ವಮೇರುಗಿರಿಯ ಪೂರ್ವದಿಶಾಪ್ರದೇಶದಲ್ಲಿ

ಚಾರುಜಿನಧರ್ಮಗೇಹಂ
ಸಾರತರಾಗಣ್ಯಪುಣ್ಯಜನಸಂದೋಹಂ
ಭೂರಿಸೌಖ್ಯಾವಗಾಹಂ
ರಾರಾಜಿಸುತಿರ್ದುದಮದು ಪೂರ್ವವಿದೇಹಂ    ೫

ತಿಂಗಳ್ಗೆ ಮೂಱುಮಳೆಗಳ್
ಪಿಂಗದೆ ಪದನಾಗಿ ಕೊಳ್ವವಲ್ಲಿಯ ಬೆಳೆಯುಂ
ಕಂಗದ್ಭುತಮಂ ಪೆರ್ಚಿಪು
ದಂಗೀಕೃತಬಹಳಧ್ಯಾನಮಂಜರಿಕೆಗಳಿಂ           ೬

ಬಱನಿಲ್ಲಾಱಡಿಯಿಲ್ಲ ಕಳ್ಳರ ಭಯಂ ಮುನ್ನಿಲ್ಲ ಬೆರ್ಚಿಲ್ಲ ದಲ್
ಮೆಱೆಯೇ ಱಿಲ್ಲ ವಿಪತ್ತಿಯಿಲ್ಲ ರುಜೆಯಿಲ್ಲುತ್ಪಾತಮಿಲ್ಲಾವಗಂ
ಸೆಱೆಕೊಳ್ಳಿಲ್ಲ ನಿರೋಧಮಿಲ್ಲ ಪಿಡಿಕಟ್ಟಿಲ್ಲುದ್ಘಸಂಪತ್ತಿಯಿಂ
ಮೆಱೆವಾ ಪೂರ್ವವಿದೇಹದೊಳ್ ಕುಮತವಾರ್ತಾವೃತ್ತಿಯಿಲ್ಲೆಲ್ಲಿಯುಂ    ೭

ಜಿನಪತಿಯ ಸಮವಸರಣಂ
ಘನಮೊಪ್ಪುತ್ತಿರ್ಪುದಾವಕಾಲದೊಳಂ ತ
ನ್ಮನುಜರ್ ಪರಮಾಯುಷ್ಯರ್
ತನುಗಳವಯ್ನೂಱುಬಿಲ್ಗಳುತ್ಸೇಧಂಗಳ್       ೮

ವ : ಇಂತದ್ಭುತಾತಿಶಯವನುಳ್ಳ ಪೂರ್ವವಿದೇಹದ ಮಧ್ಯದೊಳ್

ವಿಚಲದತುಚ್ಛಮತ್ಸ್ಯಮಕರೋತ್ಕರಕರ್ಕಶಕರ್ಕಶಾವಳೀ
ನಿಚಿತೆ ತಟಾಂತರಾಳಕಳಯಜ್ಜಳಬುದ್ಬುದಜಾತೆ ನೂತನ
ಪ್ರಚುರಸಮುಚ್ಚಲತ್ಸಲಿಲಬಿಂದುವಿರಾಜಿತೆ ಫೇನಫೇನವೈ
ಕಚಯುತೆ ಸೀತೆಯೆಂಬ ತೊಱೆ ತೋಱಿಸುತಿರ್ದುದು ವಿಸ್ಮಯತ್ವಮಂ       ೯

ಸುಕನತ್ಕಂಕಣಯುಕ್ತೆ ಚಂಚಲಲಸನ್ಮೀನಾಕ್ಷಿಭಾಸ್ವತ್ಪ್ರವಾ
ಳಕೆ ಪದ್ಮಾನನೆ ನಿರ್ಮಲಾಕೃತಿ ಮಹಾರಾಮಾನ್ವಿತೆ ಸ್ಫೂರ್ತಿಮ
ತ್ಸುಕವಿಸ್ತುತ್ಯೆ ಕುಲೀನೆ ಸತ್ಕುವಳಯಪ್ರಖ್ಯಾತೆಯಾಗಿರ್ದು ಮಂ
ಜುಕೆ ಸೀತಾನದಿ ರಂಜಿಸಿತ್ತು ಮಿಗೆ ಸೀತಾದೇವಿಯೆಂಬಂದದಿಂ         ೧೦

ಪಿರಿದುಂ ತೀರಂಗಳೆಂಬ ಪ್ರವಿಲಸದಧರೋಷ್ಠಂಗಳಿಂ ರಮ್ಯಮಾಗಿ
ರ್ದುರುಮೀನವ್ರಾತಮೆಂಬ ಸ್ಫುರಿತತರ ರದಶ್ರೇಣಿಯಿಂದೊಪ್ಪಿ ವಾರಿ
ತ್ವರಮೆಂಬುತ್ಕೃಷ್ಟಜಿಹ್ವಾಗ್ರದಿನುಱೆ ಮೆಱೆದಂಭೋಜರೇಣುಪ್ರರಾಗಂ
ಧರೆಯೆಂಬೀ ಕಾಂತೆ ಬಾಯಂ ತೆಱೆದವೊಲೆಸೆವುತ್ತಿರ್ದುದಾ ಸಿಂಧುವೆತ್ತಂ       ೧೧

ವಿರಹಿಣಿಯಂತುತ್ಕಳಿಕಾ
ಭರಿತಂ ಗೋವಿಂದನಂತೆ ಕಮಲೋಪೇತಂ
ಸ್ಮರನಂತೆ ಮಕರಯುಕ್ತಂ
ಧರಣಿಯೊಳಾ ನದಿ ವಿಚಿತ್ರಮಾದುದು ಪಿರಿದುಂ೧೨

ವ : ಮತ್ತಮುಭಯಕೂಲವರ್ತಿ ನರನಾರೀಜನಂಗಳ್ ಜಳಕೇಳೀವಿನೋ ದಾರ್ಥಮಾಗಿ ಬಂದು ಚಂದ್ರಕಾಂತಶಿಲಾಮಯಂಗಳಾದ ಕೂಲಂಗಳ ಶೋಭಾವಿ ಲೋಕನ ಕೌತೂಹಳಸಮಾಕುಳಿತೆಯರ್ ತಮ್ಮಯ ಕಟಾಕ್ಷವಿಕ್ಷೇಪ ಪರಂಪರಾ ವ್ಯಾಪಾರಮನಲ್ಲಿ ಬಿತ್ತರಿಸಲೊಡಮೆಡೆವಱಿಯದೆ ಪಗಲೊಳೊಸರ್ವುದಱಿಂದಂ ಚಂದ್ರಮನ ಚಂದ್ರಿಕಾಪ್ರಸರದಿಂದಿರುಳೊಸರ್ವುದಱಿಂದಂ ಪುಟ್ಟಿದ ನೀರಸೀಕರಾ ಪೂರಂಗಳಿಂ ತುಂಬಿ ಪಗಲುಮಿರುಳುಮೆಲ್ಲಾ ಕಾಲದೊಳಮೆಡೆಯುಡುಗದೆ ನಿಬಿಡ ಮಾಗೆರಡುಂತಡಿಗಳ ನೊರಸುತ್ತುಂ ಪರಿವಸಾತಿಶಯಮಾದ ಸೀತಾನದಿಯ ತೆಂಕಣ ತೀರದಲ್ಲಿ

ಪಂಚೇಂದ್ರಿಯಸುಖವಿಷಯಂ
ಸಂಚಿತವಿತ್ತಪ್ರವಿತ್ತಜನತಾವಿಷಯಂ
ಪ್ರಾಂಚಿತದಾನಸುವಿಷಯಂ
ತಾಂ ಚೆಲ್ವಾಯ್ತೆಯ್ದೆ ವತ್ಸಮೆಂಬುದು ವಿಷಯಂ         ೧೩

ಸ್ತ್ರೀಜನಮೆಲ್ಲಂ ದಿವ್ಯ
ಸ್ತ್ರೀಜನಮೆ ಮನುಷ್ಯರೆಲ್ಲರುಂ ವಿಭುಧರೆ ಮ
ತ್ತಾ ಜನಪದಮುರುಲಕ್ಷ್ಮೀ
ಭಾಜನಕಂ ಸ್ವರ್ಗದಂತೆ ತಳೆದುದು ಪೆಂಪಂ       ೧೪

ಮಣಿಗಳ್ ಪುಟ್ಟದ ಬೆಟ್ಟಮಿಲ್ಲ ಕಮಲಂಗಳ್ ಪುಟ್ಟದುಚ್ಚೈಸ್ತರೋ
ಗಣಮುಂ ನೋಳ್ಪಡಮಿಲ್ಲ ಹೊನ್ನ ಕಣಿಗಳ್ ತಾಂ ಪುಟ್ಟದ ಕ್ಷೇತ್ರಮಿ
ಲ್ಲಣುಮಾತ್ರಂ ವರಮೌಕ್ತಿಕಂಗಳ ಸಮೂಹಂ ಪುಟ್ಟದುದ್ಯತ್ತರಂ
ಗಿಣಿ ಮತ್ತಿಲ್ಲಶೋಭೆಗೆಯ್ದೆ ನೆಲೆಯದಾ ದೇಶದಲ್ಲೆಲ್ಲಿಯುಂ     ೧೫

ಏರಿಗಳೆಂಬ ಪುರ್ವುಗಳಿನೊಪ್ಪಮನಾಳ್ದತಿಶೋಭೆಯಿಂ ಮನೋ
ಹಾರಿಗಳಪ್ಪ ಪೆರ್ಗೆಱೆಗಳೆಂಬ ವಿನಿಶ್ಚಲಲೋಚನಂಗಳಿಂ
ಭೂರಮೆ ದೇಶಸಂಪದಮನೀಕ್ಷಿಸಿ ತಾಂ ಕಳಮಾಂಕುರಂಗಳ
ಪ್ರೇರಣದಂಭದಿಂದೆ ಪುಳಕಾಂಕಿತೆಯಾದವೊಲೆಯ್ದೆ ರಂಜಿಕುಂ        ೧೬

ಪಿರಿದುಂ ಕುಲ್ಯಾವಿತಾನಂಗಳೊಳೊಗೆದ ವಿಕಾಸತ್ವಮಂ ತಾಳ್ದಿದಾ ಪಾಂ
ಡುರಪಂಕೇಜಂಗಳಿಂದಂ ಮೆಱೆವ ಬಹಳಸಸ್ಯಂಗಳಿಂ ತೀವಿಯೆಲ್ಲಂ
ಹರಿತಾಭಂ ಶಾಲಿವಪ್ರಸ್ಥಳಮತಿಶಯಿಸುತ್ತಿರ್ಪುದಾಕಾಶದೇಶಂ
ವರತಾರಾಕ್ರಾಂತಮಾಧಾರಕರಹಿತತೆಯಿಂ ಬಿಳ್ದುದೆಂಬಂದಿಂದಂ     ೧೭

ಅಲ್ಲಿಯ ಸಾರಮಪ್ಪ ಬೆಳಸಂ ಸಲೆ ಕೊಯ್ದುಱೆ ತೀರ್ಚಲಾಱರಂ
ತಲ್ಲದೆ ಕೊಯ್ದೊಡಂ ತವೆಯಲೊಕ್ಕಿ ಸುರಾಶಿಗಳಂ ವಿನಿರ್ಮಿಸಲ್
ಸಲ್ಲರುಮಂತುಮಾಡಿದೊಡೆ ಲೆಕ್ಕಮಿಡಲ್ಕಣಮಾಱರಂತು ಮ
ತ್ತೆಲ್ಲಮನೆಯ್ದೆ ಲೆಕ್ಕಿಸಿದೊಡಂ ಮನೆಗೆಯ್ದಿಸಲಾಱರಂತವಂ        ೧೮

ಧನಕನಕಧಾನ್ಯದಿಂದಂ
ಘನಪದಮಂ ಪಡೆದ ಸಕಳಸುಜನಜನಕ್ಕಂ
ವಿನುತಂ ಪದಮಾದುದಱಿಂ
ಜನಪದನಾಮಂ ಯಥಾರ್ಥಮಾದುದದಕ್ಕಂ     ೧೯

ರವಿಕಿರಣಂಗಳಿಂದೆ ನೆಱೆಬೆಂದೆ ತಟಸ್ಥಿತಸೂರ್ಯಕಾಂತಗೌ
ರವ ಶಿಲೆಯಲ್ಲಿ ಪೊನ್ ಕರಗಿ ತಾಂ ಪರಿಯುತ್ತದಲಿರ್ದುದೀಗಳೆಂ
ಬ ವಿಪುಳಶಂಕೆಯಂ ಬಿಡದೆ ಪುಟ್ಟಿಸುತುಂ ಪರಿಯುತ್ತುಮಿರ್ಪುವ
ಲ್ಲವಿರಳಪಸ್ಮರೇಣುವಿಸರಪ್ರವಿರಂಜಿತ ಸಿಂಧುಗಳ್ ಕರಂ            ೨೦

ವಿಪುಳಫಳಾವಳಿಸ್ತಬಕಭಾರದೆ ಬಾಗುತುಮಿರ್ಪ ಚೂತಪೂ
ಗ ಪರಮನಾಳಿಕೇರಕದಳೀಪನಸಾಫಳಮಾತುಳುಂಗಪಂ
ತಿ ಪುರವನಂಗಳಿಂದೆ ಪರಿರಂಜಿಸುತಿರ್ಪ ಸುದೇಶದಲ್ಲಿ ಸ
ರ್ವಪಥಿಕರೆಯ್ದೆ ಸಂಬಳಮನೊಲ್ಲದೆ ಪೋಗುತ್ತುಮಿರ್ಪರಾವಗಂ  ೨೧

ವಿಪರೀತತೆ ವನದೊಳ್ ಪರಿ
ಕಿಪೊಡಂ ತಾಂ ರಾಜಬಾಧೆ ತಾವರೆಗೊಳದೊಳ್
ಚಪಳತೆ ಲಲನಾನಯನ ಸ
ಮುಪಚಯದೊಳಮಲ್ಲದಂತದಿಲ್ಲಾ ನಾಡೊಳ್          ೨೨

ವರವತ್ಸದೇಶಮೆಂಬು
ದ್ಧುರವತ್ಸದ ನಿಬಿಡಮಾದ ಪೊರ್ದುಗೆಯಿಂದಂ
ಧರೆಯೆಂಬ ಸುರಭಿ ಸುಖಮೆಂ
ಬುರುಪರಮಾಮೃತಮನೆಯ್ದೆ ಕಱೆಯುತ್ತಿರ್ಕುಂ          ೨೩

ವ : ಇಂತು ಪಿರಿದಪ್ಪ ಸಿರಿಗಾಡುಂಬೊಲನಾಗಿ ಮಾಡಿದ ನೂರ್ಮಡಿ ಗಾಡಿಯೊಳ್ ಕೂಡಿದ ನಾಡಾಡಿಯಾಗಿರ್ದಾ ನಾಡಿನ ನಟ್ಟನಡುವೆ

ವರಮಾಣಿಕ್ಯಮಯಪ್ರಶಸ್ತಕಳಶವ್ರಾತಪ್ರಭಾಭಾರದಿಂ
ಪಿರಿದುಂ ವ್ಯೋಮದೊಳೆಯ್ದೆ ಮಿಂಚುಗಳ ಚೆಲ್ವಂ ಪುಟ್ಟಿಸುತ್ತಿರ್ಪ ಭಾ
ಸುರಸೌವರ್ಣವಿಚಿತ್ರಸೌಧಚಯದಿಂದೊಪ್ಪುತ್ತುಮಿರ್ಕುಂ ಕರಂ
ಪರಿರಾಜನ್ಮಣಿಗೋಪುರಂ ಸುಮಹಿಮಾಸೀಮಂ ಸುಸೀಮಾಪುರಂ   ೨೪

ವ : ಮತ್ತಮದಱ ಸುತ್ತಲುಂ

ಪಿರಿದುಂ ಪಣ್ಗಳ ಗೊಂಚಲಿಂದೆಸೆವ ರಂಭಾಚೂತನಾರಂಗ ಪೀ
ವರಜಂಭೀರಸುನಾಳಿಕೇರಪನಸಾದ್ಯತ್ಪೂಗಪೂರಂಗಳಿಂ
ವರಮಲ್ಲೀಘನನಾಗವಲ್ಲಿಲತಿಕಾವೃಂದಂಗಳಿಂ ಕೂಡಿ ತ
ತ್ಪುರಮಂ ಸುತ್ತಿ ವಿರಾಜಿಕುಂ ಬಹಳಶೋಭಾನಂದನಂ ನಂದನಂ    ೨೫

ವ : ಮತ್ತಮದಱಂತರ್ಭಾಗದೊಳ್

ಸ್ತ್ರೀರತ್ನಂಗಳ ಮೊತ್ತದಿಂ ಪುರುಷರತ್ನವ್ರಾತದಿಂ ತುಂಬಿಕೊಂ
ಡೋರಂತೊಪ್ಪುವ ಹೇಮಸತ್ಕಳಶಮೆಂಬಂತಿರ್ದ ಪೊಂಗೋಂಟೆಯಂ
ತೋರಿತ್ತಾದಗಳೆಯ್ದೆ ಸುತ್ತಿ ಮೆಱೆಗುಂ ಕೃಷ್ಣಾಹಿಯಂತಾವಗಂ
ಘೋರಂ ತಾನೆನಿಸಿರ್ಪ ಭೂರಿವಿಷಯದಿಂದಂ ತುಂಬಿದೀಕಾರಣಂ     ೨೬

ಪೊಸತೆನಿಸಿರ್ದ ತನ್ನ ಘನಕಾಂತಿಪರಂಪರೆಯಂ ದಶಾಶೆಯೊಳ್
ಪಸರಿಸುತುಂ ನಿರೀಕ್ಷಿಪರ್ಗೆ ಚೋದ್ಯಮನಾಗಿಸುತಿರ್ಪ ಕಾರಣಂ
ವಸುಮತಿಯೆಂಬ ಕಾಮಿನಿಯ ಚಾರುಸುವರ್ಣದ ಕುಂಡಲಂ ದಲೆಂ
ಬೆಸಕಮನೆಯ್ದೆ ಸಂಗಡಿಸುತಿರ್ಪುದುಮಲ್ಲಿಯ ಕೋಟೆ ಸುತ್ತಲುಂ  ೨೭

ವ : ಮತ್ತಮಲ್ಲಿಂದೊಳಗೆ

ನರರೆಲ್ಲರ್ ವಿಷಮಾಸ್ತ್ರರ್
ವರನಾರಿಯರೆಲ್ಲರುಂ ವಿದಗ್ಧೆಯರೆ ಮಹೋ
ದ್ಧುರ ಧನಿಕರೆಲ್ಲರುಂ ತ
ತ್ಪುರದೊಳ್ ನೆಱೆಜಾತರೂಪಯುಕ್ತರೆ ಚಿತ್ರಂ  ೨೮

ವ : ಅಂತುಮಲ್ಲದೆಯುಂ

ವಂದಿಜನಕ್ಕೆ ಬೇಡಿದುದನೆಯ್ದೆ ಮನಂ ದಣಿವನ್ನಮಿತ್ತೊಡಂ
ಕುಂದದೆ ಪೆರ್ಚುಗಾ ಪುರದ ದಾನಿಗಳರ್ಥಮದೆಂತು ಸಜ್ಜನರ್
ಬಂದ ಪರರ್ಗೆ ತಮ್ಮಯ ಸುವಿದ್ಯೆಯನಿತ್ತೊಡೆ ಮತ್ತೆಮತ್ತೆಯುಂ
ಸೌಂದರಮಾಗಿ ಪೆರ್ಚುಗೆಯನೆಯ್ದುವುದಂತದುವುಂ ನಿರಂತರಂ      ೨೯

ಬಸದಿಗಳೆಯ್ದೆ ತಮ್ಮ ಶಿಖರಂಗಳ ಚೂಳಿಕೆಯಲ್ಲಿ ನಾಡೆ ಶೋ
ಭಿಸುವುರುಪದ್ಮರಾಗಕಳಶಪ್ರಭೆಯಿಂ ಪಗಲಂ ಸಮಂತು ರಾ
ತ್ರಿಸಮಯದಲ್ಲಿಯುಂ ಬಿಡದೆ ಮಾಳ್ಪುದಱಿಂ ಜನಮೆಲ್ಲಮಲ್ಲಿ ಭೇ
ದಿಸಲಣಮಾಱದಿರ್ಪುದಿರುಳುಂಪಗಲೆಂಬ ವಿಶೇಷಭಾವಮಂ          ೩೦

ಒಸರ್ವ ಸುಧಾಂಶುಕಾಂತಗೃಹಮಂ ನೆಱೆಕಂಡಿರುಳೆಂಬಿದಂ ಸಮಂ
ತೆಸೆವುರುಸೂರ್ಯಕಾಂತಗೃಹದಿಂ ಕಿಡಿಗಳ್ ಬರುತಿರ್ಪುದಂ ನಿರೀ
ಕ್ಷಿಸಿ ಪಗಲೆಂಬಿದಂ ಪರಿಧಿರುದ್ಧಸುಧಾಂಶುದಿವಾಕರೋದಯೋ
ಲ್ಲಸದನುಮಾನದಿಂದಮಱಿಗುಂ ನಗರೀಜನಮಂತದೆಲ್ಲಮಂ      ೩೧

ವ : ಇಂತು ಸಕಳಜನಂಗಳ ದಿಟ್ಟಿಗೆ ತೊಟ್ಟನೆ ಮುಟ್ಟಿದ ಸಂತುಷ್ಟಿಯಂ ಪುಟ್ಟಿಸುತ್ತುಮಿರ್ಪಾ ಪಟ್ಟಣದ ನಟ್ಟನಡುವೆ

ಪಿರಿದುಂ ಬಿನ್ನಣದಿಂದೆ ನಿರ್ಮಿಸಿದ ನಾನಾಚಿತ್ರಸತ್ಪುತ್ರಿಕೋ
ತ್ಕರಮ ತೆತ್ತಿಸಿ ಸುತ್ತಲುಂ ನೆಲೆಗಳಿಂದೌನ್ನತ್ಯಮಂ ತಾಳ್ದಿ ಪೀ
ವರ ಭಾಸ್ವದ್ಧೃಜವೃಂದದಿಂ ಗಗನಮಂ ಮುಂಡಾಡುತಿರ್ದಾವಗಂ
ಧರಣೀನಾಥನ ಚೆನ್ನಹೊನ್ನಕರುಮಾಡಂ ಮಾಳ್ಪುದಾಶ್ಚರ್ಯಮಂ           ೩೨

ದಿನಕರಬಿಂಬಂ ಮಧ್ಯಂ
ದಿನದೊಳಮೊಂದುಕ್ಷಣಂ ನೃಪಾಲಯಚೂಡಾ
ಘನಕಳಶದ ಮುಂದಣ ಶೋ
ಭನದರ್ಪಣದಂತಿರೊಪ್ಪಮಂ ತಳೆದಿರ್ಕುಂ        ೩೩

ಹುಣ್ಣವೆಯಲ್ಲಿ ಚಂದ್ರಮುಖಿಯರ್ ನೆಲೆಮಾಡದ ಚೂಳಿಕಾಗ್ರದೊಳ್
ತಣ್ಣೆಲರಾಸೆಯಿಂದಿರೆ ನಿಶೀಥಿನಿಯೊಳ್ ಖಳರಾಹು ಬಂದು ಸಂ
ಪೂರ್ಣಸುಧಾಂಶುವಂ ಪಿಡಿಯಲೆಂದನುಗೆಯ್ಯೆ ತದಿಂದುವಂ ಪ್ರಭಾ
ವರ್ಣಿತ ತನ್ಮುಖೇಂದುಗಳನೀಕ್ಷಿಸಿ ಶಂಕೆಯನೆಯ್ದಿದಂ ಕ್ಷಣಂ          ೩೪

ವ : ಅಂತಾ ಪುರಮನಾಳ್ವಂ ಭಾನುರಾಜನೆಂಬ ಮಹಾರಾಜನನೂನಪ್ರತಾ ನಮಂ ತಾಳ್ದಿ ಯಥಾರ್ಥಮಪ್ಪ ಪೆಸರಿಂದೊಪ್ಪುತ್ತುಮಿರ್ದಂ

ತನ್ನಯ ಬಂಧುಸಂತತಿಗಳೆಂಬ ಸರೋಜವನಂಗಳಂ ಪ್ರಮೋ
ದೋನ್ನತೆಯಿಂದರಳ್ಚಿ ರಿಪುಭೂಪವಧೂಮುಖಚಂದ್ರಬಿಂಬ ಸಂ
ಪನ್ನತೆಯಂ ಸುರುಳ್ಚಿ ಸುನಯಾಂಶುಗಳಿಂ ಕುನಯಾಂಧಕಾರದೊಂ
ದುನ್ನತಿಯಂ ತಗುಳ್ಚಿ ಖರಭಾನುವಿನಂತೆಸೆದುಂ ನರೇಶ್ವರಂ         ೩೫

ಆತನ ಚಿತ್ತವಲ್ಲಭೆ ಮನೋಹರಿಯೆಂಬಳಪೂರ್ವರೂಪಿನಿಂ
ಭೂತಳದೊಳ್ ಮನೋಹರಿ ವಿಶೇಷಗುಣಂಗಳ ಶೀಲದೇಳ್ಗೆಯಿಂ
ನೂತನಮಪ್ಪ ದಾನಗುಣದಿಂದೆ ಮನೋಹರಿಯಾದಕಾರಣಂ
ಸಾತಿಶಯಾಭಿಧಾನಮದು ದೇವಿಗೆ ಸಾರ್ಥಕವಾಗಿ ತೋಱುಗುಂ      ೩೬

ವ : ಇಂತು ನೆಗಳ್ತೆವಡೆದಾ ಭಾನುರಾಜನುಂ ಮನೋಹರಿದೇವಿಯುಮನ್ಯೋ ನ್ಯಾಸಕ್ತಚಿತ್ತರಾಗಿ ಕಾಮನುಂ ರತಿಯುಮೆಂಬಂತೆ ಸುಖದಿಂ ರಾಜ್ಯಂಗೆಯ್ಯುತ್ತುಮಿರೆ ಮತ್ತಮಾ ದೇವಿಗೆ ಕೆಲವಾನುದಿನಂಗಳಿಂ ಮೇಲೆ ಗರ್ಭಚಿಹ್ನಂಗಳ್ ತೋಱೆಯಾ ಗರ್ಭದರ್ಭಕಂ ಜಿನಪದಭಕ್ತನುಂ ದಾನಗುಣಯುಕ್ತನುಮೆಂಬಿದಂ ಸೂಚಿಸಿದಂತಾ ದೇವಿಗೆ ಜಿನಪೂಜೊತ್ಸವಮಂ ಚಾತುರ್ವಣ್ಣಕ್ಕನೂನದಾನಮಂ ಮಾಳ್ಪ ಬಯಕೆ ಮನದೊಳ್ ಕಡುತಿಣ್ಣಮಾಗಿಯಂತೆಗೆಯುತ್ತುಮಿರೆ

ಘನಪುಣ್ಯನಿರ್ದ ತಾಣಂ
ಘನಮಾಗಲ್ವೇಳ್ಕುಮೆಂಬ ಬಗೆಯಿಂದೆಂಬಂ
ತಿನಿಯಳ ತನೂದರಂ ತಾಂ
ಘನಮಾಗಿಯೆ ಬಳೆದು ತೋರ್ಕೆಯಂ ತಳೆದಿರ್ಕುಂ            ೩೭

ಅಲಸಿಕೆಯಾಗಳುಂ ಕೆಳದಿಯಂತಿರೆ ಪೊರ್ದಿದುದಾಗುಳಿರ್ಕೆಯುಂ
ತೊಲಗದು ಕೂರ್ಪ ಮೇಳದವರಂತಿರೆ ಬೆಳ್ಪೆಸದೆಯ್ದೆ ತೋಱೆ ಸ
ಲ್ಲಲಿತಶರೀರದೊಳ್ ನಿಜಯಸ್ಥಿತಿಯಂತಿರೆ ತಾಳ್ದಳಂದು ಕೋ
ಮಳಲತಿಕಾಂಗಿ ಬೇಱೆಪೊಸರೂಪಮನಾ ಸಮಯಾಂತರದೊಳ್     ೩೮

ವ : ಬಳಿಯಮಾ ಬಿಂಬಾಧರೆಗೆ ನವಮಾಸಂ ತುಂಬಲೊಡಂ ಪಂಚಾಂಗಮುಂ ಶುಭಾಂಚಿತಮಾದ ದಿನದೊಳ್ ಪಂಚೇಕ್ಷುಸನ್ನಿಭನುಂ ಸಂಚಿತಪುಣ್ಯರೂಪನುಮಪ್ಪ ಕುಮಾರನಂ ಪಡೆವುದುಮಾಗಳಾ ಪುರದೊಳ್ ಗುಡಿಗಳಂ ಕಟ್ಟಿ ಬದ್ದವಣಂಗಳಂ ಬಾಜಿಸಿ ಪಿರಿದಾಗಿರ್ದೊಸಗೆಯಂ ಕೊಂಡಾಡುತ್ತಮಿರಲತ್ತಲರಸಂ ಬೇಡುವವರ್ಗೆ ಬೇಡಿದುದಂ ಬೇಡಿದಾಗಳೆ ಕೈಮಡಗದೆ ಕೊಟ್ಟು ಜಾತಕರ್ಮಮಂ ನಿರ್ಮಿಸಿ ಕೆಲವುದಿನಂಗಳ್ ಪೋಗುತ್ತುಮಿರೆ

ದಶರಥನೆಂಬೀ ಪೆಸರಂ
ಶಿಶುವಿಂಗಂದಿಟ್ಟು ಲಾಲನಂಗೆಯ್ಯುತ್ತುಂ
ವಸುಧಾಧಿನಾಯಕಂ ಸಂ
ತಸಮಂ ತಾಳ್ದಿರ್ದು ರಾಜ್ಯಮಂ ಪಾಳಿಸಿದಂ     ೩೯

ವ : ಅಂತಾ ಕುಮಾರಂ ಪಾಡಿವದ ಚಂದ್ರಮನೆಂತು ತನ್ನಯ ಸಕಳಕಳಾ ವಿಶೇಷದೊಡನೊಡನೆ ಬಳೆಗುಮಂತಂತೆ ತಾನುಂ ಚತುಃಷಷ್ಟಿಕಳಾವಿಳಾಸದೊಡನೊಡನೆ ಬಳೆದು ಸಮಸ್ತಶಸ್ತ್ರಶಾಸ್ತ್ರ ವಿದ್ಯಾವಿಶಾರದನಾಗುತ್ತಿರಲಾ ಭಾನುರಾಜಂ ಪ್ರಾಜ್ಯಮಪ್ಪ ಸಾಮ್ರಾಜ್ಯಮಂ ನಿಜಯುವ ರಾಜನ ಮೇಲೆ ನಿಯೋಜಿಸಿ ನಾನೂರ್ವರರಸುಮಕ್ಕಳ್ವೆರಸು ಯಮಧರ ಭಟ್ಟಾರಕರ ಸಮಕ್ಷದೊಳ್ ಜಿನದೀಕ್ಷಾಪ್ರಾಪ್ತನಾಗಿ ನಿಸರ್ಗದುರ್ಗಮಪ ವರ್ಗಮಂ ಸಾಧಿಸಿದನಿತ್ತಲ್

ಶಿಷ್ಟಜನಂಗಳಂ ಬಿಡದೆ ರಕ್ಷಿಸಿ ದುಷ್ಟರನಿಕ್ಕಿಮೆಟ್ಟಿ ಸ
ದ್ದೃಷ್ಟಿಗಳಪ್ಪರಂ ಮುದದೆ ಪೆರ್ಚಿಸಿ ಪಾವನಧರ್ಮಮಂ ಮಹೋ
ತ್ಕೃಷ್ಟಮೆನಲ್ಕೆಮಾಡಿ ಕುನಯಂಗಳ ಬೇರ್ಗಳನೆಯ್ದೆಕಿತ್ತು ಸಂ
ತುಷ್ಟಮನಂ ಸಮಂತು ಪರಿಪಾಳಿಸಿದಂ ಧರೆಯಂ ಧರಾಧಿಪಂ        ೪೦

ವೈರಿಗಳೆಲ್ಲರುಂ ದಶರಥಕ್ಷಿತಿಪಂಗಗಿದೋಡಿ ಪೋಗುತಂ
ವಾರಿಧಿಗೋತ್ರಮಂ ಬಿಡದೆ ಪೊರ್ದಿ ಬರ್ದುಂಕೆ ಸಮುದ್ರರಾಜಪು
ತ್ರೀರಮಣೀಯ ಲಕ್ಷ್ಮಿ ಸಲೆ ಸೋದರರೆಂದವರಲ್ಲಿ ಭೋಗಮಂ
ಪಾರದೆಬಿಟ್ಟು ತನ್ನೃಪತಿಯೊರ್ವನನೇ ಪತಿಯಾಗಿ ಮಾಡಿದಳ್     ೪೧

ಪಿರಿದುಂ ವಾಲಧರಂ ವೃಷೋತ್ತಮತರಂ ಕೋಡಿಂದೆ ರಾರಾಜಿಪಂ
ನರಪಂ ಗೋಪತಿಯಂತಿರೊಪ್ಪಿ ಪರರೆಂಬುಕ್ಷಂಗಳಂ ತೂಳ್ದಿ ಮ
ತ್ತುರುಗೋಮಂಡಳಮಂ ವಶೀಕರಿಸೆ ರಕ್ತಾಕ್ಷತ್ವಮಂ ತಾಳ್ದುಕೊಂ
ಡರಿಭೂಪರ್ ಮಹಿಷೀಗಣಂಗಳೊಡನಂದೆಯ್ತಂದರಾರಣ್ಯಮಂ     ೪೨

ಸಾಸಿಗರಪ್ಪ ವೈರಿಗಳ ಪೆಂಡಿರ ಗಲ್ಲದ ತಾಣದಲ್ಲಿ ತಾಂ
ಹಾಸವಿಶೇಷಮೆಂಬ ಕುಸುಮಾಳೆಯೊಳೊಂದಿದ ಪಾತ್ರವಲ್ಲಿ ಭಾ
ಭಾಸಿತಭೂಪ ಗೋಪಶಿಖಿಯಿಂದಮೆ ಬೆಂದವೊಲಿರ್ದುದಲ್ಲದಂ
ದಾಸ್ಯದ ಪಾಂಡುರತ್ವಮದು ಭಸ್ಮದ ಶಂಕೆಯನೆಂತು ಪುಟ್ಟಿಕುಂ   ೪೩

ಅತಿರತ್ನಂಗಳಿನೊಪ್ಪಿ ಭೂರಿತರಸತ್ತ್ವಸ್ಫಾತಿಯಂ ತಾಳ್ದಿ ವಿ
ಶ್ರುತನಾಗಿರ್ದು ಕುಲೀನತಾವಿಭವದಿಂ ಕೆಯ್ಮಿಕ್ಕು ನಂದತ್ಸರ
ಸ್ವತಿಯೊಳ್ ಕೂಡಿ ಸಮುದ್ರದಂತೆ ಪಿರಿದುಂ ಗಂಭೀರನಾಗಿರ್ದೊಡಂ
ಕ್ಷಿತಿನಾಥಂ ಕ್ಷಿತಿಚಕ್ರದಲ್ಲಿ ಜಡತಾಸಂಯುಕ್ತನಲ್ಲದ್ಭುತಂ            ೪೪

ಪಾಪಕ್ಕಂಜುವನಾತಂ
ಪಾಪಂ ತಾನಂಜಿಯಾತನಂ ಬಿಟ್ಟೋಡಿ
ತ್ತೀಪರಿಯಂ ದಶದಿಕ್ಕುಗ
ಳಾಪೊತ್ತುಂ ನಗುವವವನ ಕೀರ್ತಿಯ ನೆವದಿಂ    ೪೫

ಜಿನಪದಭಕ್ತ ದಾನಗುಣಯುಕ್ತ ದಯಾಮಯಧರ್ಮಸಕ್ತ ಸು
ತ್ಪನಿತಚರಿತ್ರ ಕಾಮಸಮಗಾತ್ರ ವಿಶೇಷಿತಪುಣ್ಯಪಾತ್ರನೀ
ವಿನಯನಿಧಾನ ಶತ್ರುಕೃತಮಾನ ಸುಶೀಲವಿರಾಜಮಾನನೆಂ
ದೆನಿಪನನಾದಪಂ ದಶರಥಕ್ಷಿತಿಪಂ ವಿಲಸತ್ಕಳಾಧಿಪಂ       ೪೬

ವ : ಮತ್ತಂ

ಅಯಯುತನಪ್ಪಾ ನೃಪತಿಗೆ
ದಯಾವತೀದೇವಿಯೆಂಬ ವಲ್ಲಭೆಯಾದಳ್
ನಯದಿಂದೆಲ್ಲರ್ಗಂ ತಾಂ
ದಯೆಯಂ ಮಾಳ್ಪುದಱೆನೆಯ್ದಿತ್ತನ್ವರ್ಥತೆಯಂ          ೪೭

ದಶರಥನಾಕೆಗಗ್ರಮಹಿಷೀಪದಮಂ ನೆಱೆಕೊಟ್ಟುಪಟ್ಟಮಂ
ವಸುಮತಿಯೆಯ್ದೆ ಬಪ್ಪೆನೆ ಜಸಂ ಮಿಗೆ ಕಟ್ಟೆ ಪರಸ್ಪರಂ ವಿಮೋ
ಹಿಸಿ ಘನಕಾಮಮಂ ತಳೆದರೆಂತು ಱೆಧರ್ಮಮುಮರ್ಥಮುಂ ಸಮಂ
ತೆಸೆದುದು ಪೆರ್ಚುಗಂತಿರೆ ಶಚೀಪತಿಯುಂ ಶಚಿಯುಂ ದಲೆಂಬವೊಲ್           ೪೮

ಬಾಳೆಯ ಸಸಿಯಂತಬಳೆಯ
ಲೋಲಾಕ್ಷಿಮುಖಂ ವಿಳಾಸಮಂ ತಳೆದಿರ್ಕುಂ
ಲಾಲಿತಮಣಿಕಳಶವೊಲ್
ಮೇಲೆನಿಸಿದುದದಱ ಕುಚಭರಂ ಕೋಮಳೆಯಾ  ೪೯

ಹಾವಭಾವವಿಳಾಸವಿಭ್ರಮವರ್ಧನಾತಿಶಯಂಗಳಿಂ
ದಾವಗಂ ಧರಣೀತಳಾಧಿಪಚಿತ್ತವೃತ್ತಿಯಮಂ ಲಸ
ದ್ಭಾವದಿಂದದಱೊಡನೆ ಪಾತ್ರವಿಶೇಷದಾನದ ವೃತ್ತಿಯಂ
ಪೀವರಸ್ತನೆ ಸೂಱೆಗೊಂಡು ನಿಮಿರ್ಚಿದಳ್ ನಿಜಕೀರ್ತಿಯಂ           ೫೦

ವ : ಇಂತತೀವ ಸಂಪತ್ಸನಾಥನುಂ ಪರಿಪೂರ್ಣಮನೋರಥನುಮೆನಿಪ ದಶರಥ ಮಹೀನಾಥನಂ ನಿಜಭುಜವಿಜಯಲಕ್ಷ್ಮಿಯಂತಿರ್ದ ದಯಾವತೀ ಮಹಾದೇವಿಯುಮತಿ ರಥನೆಂಬ ಕುಮಾರನಂ ಪಡೆದು ಸುಖದಿಂ ರಾಜ್ಯಂಗೆಯ್ಯುತ್ತುಮಿರೆ

ಪೊಂಗಳಶಂಗಳಿಂ ಗಗನಮಂಡಳಮಂ ನೆಱೆಮುಟ್ಟುತಿರ್ಪ ದಲ್
ತುಂಗಲಸತ್ಸುಧಾಧವಳಕೂಟವಿರಾಜಿತ ಜೈನಗೇಹವೃಂ
ದಂಗಳನೆಯ್ದೆ ಮಾಡಿಸಿದರಾ ಧರಣೀತಳನಾಥರತ್ನಮಂ
ಭೃಂಗವಿನೀಳಕುಂತಳಯೆನಿಪ್ಪ ದಯಾವತಿಯುಂ ಪ್ರಮೋದದಿಂ     ೫೧

ಜಿನಮುನಿಗಳ್ಗೆ ಭಕ್ತಿಭರದಿಂದೆ ಚತುರ್ವಿಧದಾನಮಂ ಸಮಂ
ವಿನಯವಿಶೇಷಮುಂ ಬ್ರತಮುಮಂ ತಳೆದರ್ ಸಲೆ ಭೂಮಿಕಾಂತನುಂ
ಜನಪತಿಕಾಂತೆಯುಂ ನಿಯತವೃತ್ತಿಯನಾಂತರಿದೇನುದಾತ್ತರೋ    ೫೨

ಅಳಿಯೆಂತಂಬುಜಷಂಡದಲ್ಲಿ ಹರಿಯೆಂತಾರಣ್ಯಮಿರ್ದಲ್ಲಿ ಕೋ
ಕಿಳಮೆಂತೆಯ್ದೆ ರಸಾಲಜಾರುಕಳಿಕಾಸಂದೋಹಮಿರ್ದಲ್ಲಿ ದಲ್
ಗಿಳಿಯೆಂತುತ್ಕಣಿಶಾಳಿಯಲ್ಲಿ ರತಿಯಂ ಮಾಡುತ್ತುಮಿರ್ಪಂತೆ ಭೂ
ತಳನಾಥಂ ವರದಾನದಲ್ಲಿ ರತಿಯಂ ಮಾಡುತ್ತುಮಿರ್ಪಂ ಕರಂ      ೫೩

ವ : ಆ ರತಿಗೆ ತಕ್ಕಂದದಿಂದಂತೆಗೆಯ್ವುತ್ತುಂ ಕೆಲವಾನುದಿನಂಗಳ್ ಪೋಗಲಾ ದಶರಥ ಮಹೀನಾಥನೊಂದುದಿವಸಂ ಮೇಲಣನೆಲೆಯ ಭದ್ರದ ಚೂಳಿಕಾಗ್ರದೊಳಶೇಷ ಪರಿವಾರಂಬೆರಸುವೊಡ್ಡೋಲಗಂಗೊಟ್ಟಿರ್ಪ ಸಮಯದೊಳ್ ತಪೋಭೂಷಣರುಮರಿಂದ ಮರುಮೆಂಬ ಚಾರಣಪರಮೇಷ್ಠಿಗಳ್ ದೀಪ್ತತಪೋಮಾಹಾತ್ಮ್ಯದಿಂ ಪುಟ್ಟಿದ ಬಹಳಮಪ್ಪ ಕಾಯಕಾಂತಿಯಿಂ ವಿಯತ್ತಳಮಂ ಬೆಳಗುತ್ತುಂ ಚಂದ್ರಮಂಡಳಯುಗಳಮೆ ಮುನಿರೂಪಂ ಕೈಕೊಂಡಾಶಪ್ರದೇಶದಿಂದಿಳಾತಳಕ್ಕವತರಿಸುತ್ತುಮಿರ್ದಪುದೆಂಬಂತೆ ಬರುತ್ತುಮಿರ್ಪ ಸಮಯದೊಳ್

ಚಾರಣಮುನಿರೂಪಂ ಕೊಂ
ಡೋರಂತಿರಲಾ ನೃಪಾಳಪುಣ್ಯಮೆ ಬರ್ಪಂ
ತಾ ರಾಜನಿವಾಸಕ್ಕಂ
ಭೋರನೆ ಬರುತಿಪ್ಪುದಂ ನಿರೀಕ್ಷಿಸಿ ನರಪಂ        ೫೪

ವ : ಅನಂತರಂ ಸಂತೊಸದಂತನೆಯ್ದಿ ಸಮುದಗ್ರಗ್ರೀವನಾಗಿರ್ದು ಸಮರ್ಚ ನಾಯೋಗ್ಯ ದ್ರವ್ಯದಿಂ ಪರಿಪೂರ್ಣಮಾದ ಜಳಕಳಶಮಿಳಿತನಕನಕಮಯ ಪವಿತ್ರಪಾತ್ರಮಂ ಮತ್ತೊರ್ವನ ಕೆಯ್ಯೊಳ್ ಪಿಡಿಸಿಕೊಂಡಿದಿರೆಳ್ದುಪೋಗಿ ವಿಶಿಷ್ಟಮಪ್ಪ ಶುಚಿಧವಳ ಶಿರೋವೇಷ್ಟನಮನುತ್ತರೀಯಮಂ ಮಾಡಿಟ್ಟುಕೊಂಡು ಮುಕುಳಿತಮಾದ ಪಾಣಿ ಸಂಪುಟಮಂ ನೊಸಲ್ಗೆತಂದಿಂದು ನಾನೀ ಕೃತಕೃತ್ಯನಾದೆಂ ಜಯ ಜಯ ಜಯಯೆಂದು ಚ್ಚಾರಣಂಗೆಯ್ವುತ್ತುಂ ನೋಡುತ್ತುಮಿರ್ಪಾಗಳ್ ಭೋಂಕನೆ ಬಂದು ಮುಂದೆ ನಿಂದಿರ್ಪುದುಂ

ಪ್ರಮದದಿನೊಗೆದಶ್ರುಸ್ರೋತದಿಂ ಚಾರುಗಾತ್ರೋ
ದ್ಗಮಿತಬಹಳರೋಮಾಂಚಂಗಳಂ ಸೇಕಿಸುತ್ತಿ
ರ್ದಮಿತಪರಮಪೂಜಾದ್ರವ್ಯದಿಂ ಪೂಜಿಸುತ್ತುಂ
ನಮಿಸಿದನವರಂಘ್ರಿದ್ವಂದ್ವಮಂ ಭಕ್ತಿಯಿಂದಂ  ೫೫

ವ : ಅಂತು ಬಿಜಯಂಗೆಯ್ಯಿಸಿ

ಖೇಚರತೆಯಿಂದ ಧೂಳಿಯ
ನಾಚರಿಸಿಕೊಂಡು ತದಂಘ್ರಿಕಮಳಂಗಳನಾ
ಭೂಚಕ್ರಪ್ರಭು ತೊಳೆದಂ
ನೀಚೈನೋರಜಮನೊರಸಿ ನೆಱೆತೊಳೆವನ್ನಂ    ೫೬

ಇದಿರ್ಗೊಂಡೊಯ್ದು ಸಮುನ್ನತಾಸನದೊಳಂ ಪ್ರಸ್ಥಾಪನಂಗೆಯ್ದು ಸ
ಮ್ಮದದಿಂ ಕಾಲ್ದೊಳೆದರ್ಚಿಸಿ ಪ್ರಣಮನಂಗೆಯ್ದಿಂಬಳಿಕ್ಕಂ ಸಮೃ
ದ್ಧದಯಾಂಬೋಧಿಯೆನಿಪ್ಪ ಯೋಗಿಗೆ ಮನೋವಾಕ್ಕಾಯಸಂಶುದ್ಧಿಯಿಂ
ಪದಪಿಂದಂ ನಮಗಿತ್ತವಂ ನವವಿಧೋದ್ಯತ್ಪುಣ್ಯಮಂ ತಾಳ್ದುವಂ೫೭

ವ : ಅಂತು ಪಾದಪ್ರಕ್ಷಾಳನಂಗೆಯ್ದು ತದನಂತರಂ ಪಾದಾರ್ಚನಾಪೂರ್ವಕಂ ವಂದನೆಯಂ ಮಾಡಿಯಪರಕಾಂತರ್ದೇಶದಲ್ಲಿಗೆ ಮೆಲ್ಲನೆ ಬಿಜಯಂಗೆಯ್ಸಿ ನಾಲ್ವತ್ತೆಂಟು ದೋಷದಿಂ ಪಿಂಗಿದ ಪರಮಾಮೃತದೊಡನೆ ಪುಡುಡಿಸುವ ನಿರವದ್ಯಮಾದ ಪಿರಿದುಂ ಸಾರಮಪ್ಪಾಹಾರಮನರ್ಥಿಯಿಂ ಕೈಯಲಿಕ್ಕುವ ಪೊತ್ತಿನೊಳ್

ತೀರ್ಥಕರಪರಮದೇವ ಸ
ಮರ್ಥಪದಪ್ರಾಪಣೈಕ ಕಾರಣಮಾದ
ತ್ಯರ್ಥಪರಿಣಾಮಮೊಗೆದುದು
ಪಾರ್ಥಿವಮಕುಟಾವಲೀಢಚರಣಂಗಾಗಳ್       ೫೮

ದಾನಪರಿಣಾಮದಿಂದಂ
ಮಾನಿತತೀರ್ಥಕರಪುಣ್ಯದನುಬಂಧಂ ತ
ದ್ಭೂನಾಥಂಗಾಯ್ತೆಂದೊಡ
ನೂನಪದಂ ದಾನದಿಂದಮಾಗದುದುಂಟೇ        ೫೯

ಶ್ರದ್ಧಾನಂ ಶಕ್ತಿಭಕ್ತಿಪ್ರಬಲಿತತರವಿಜ್ಞಾನಮುದ್ಯದ್ದಯಾಸಂ
ಬದ್ಧತ್ವಂ ಲೋಭವೃತ್ತಿತ್ಯಜನಮತುಳಿವಕ್ಷಾಂತಿಯೆಂಬೀ ದಲೇಳುಂ
ಶುದ್ಧಂಗಳ್ ಸದ್ಗುಣಂಗಳ್ ಬಿಡದಿರೆ ಪಿರಿದುಂ ದಾನಮಂ ಮಾಳ್ಪ ಭವ್ಯಂ
ಗಿದ್ಧಂಗೇಂ ದೂರಮೇ ಪೇಳ್ ನಿರುಪಮಪರಮಸ್ಥಾನಮಾರ್ಗಂಗಳೇಳುಂ     ೬೦

ಉತ್ತಮಭೂಮಿಯಲ್ಲಿ ವಟಬೀಜಮನೊಂದನೆ ಬಿತ್ತಲಂತದು
ದ್ಯತ್ತರಮಾಗಿ ಪೆರ್ಚುವವೊಲ್ತುತಪಾತ್ರವಿಶೇಷದಲ್ಲಿ ತಾ
ನಿತ್ತ ಸುದಾನಮೆಯ್ದೆ ಪಿರಿದಪ್ಪ ಫಲಂಗಳನೀವುದೆಂದೊಡೀ
ಭೂತ್ರಯದಲ್ಲಿ ದಾನಗುಣದಿಂದಮಸಾಧ್ಯಮದುಂಟೆ ನಿಶ್ಚಯಂ   ೬೧

ವ : ಆಗಳಾ ಮುನೀಶ್ವರರಿಷ್ಟಾನಿಷ್ಟವಸ್ತುಸ್ವೀಕಾರಪರಿಹಾರಪರಿಣಾಮಮಂ ತಮ್ಮಯ ಕರಾಂಗುಳಿಸಂಜ್ಞೆಯಿಂದಂ ವ್ಯಕ್ತೀಕರಿಸಿ ಶಾಸ್ತ್ರೋಕ್ತಮಂ ಮೀಱದೆ ಜ್ಞಾನ ತಪಸ್ಸಾಧನೋಪಯೋಗ ಶರೀರಸಂರಕ್ಷಣಾರ್ಥಮಾಗಿ ಭ್ರಮರಾಹಾರಗೋಚಾರ ರೂಪದಿಂ ಚರಿಗೆಯಂ ಮಾಡಿಯಕ್ಷಮಂ ಭವೇದ್ದಾನಮೆಂದು ಕೈಯನೆತ್ತಿಕೊಳೆ ಬಳಿಯಂ ವಂದನಾತತ್ಪರನಾದ ನರಪನಂ ನಿತ್ಯಸುಖಭೋಗಭಾಗಿಯಾಗೆಂದು ಪರಸಿ ಗಗನ ಮಾರ್ಗದಿಂ ಪೋದಿಂಬಳಿಕ್ಕಂ

ದಾತೃಪಾತ್ರ ವಿಶೇಷದಿಂದಮೆ ಚಾರುಪುಣ್ಯವಿಶೇಷಮುಂ
ಧಾತ್ರಿಯಂ ಪರಿಪಾಲಿಪಂಗಿರದಾಗಲಂತದಱಿಂ ಮಹಾ
ಚಿತ್ರಮಾಗಿರೆ ಹೇಮವೃಷ್ಟಿ ನೃಪಾಲಯಾಂಗಣದಲ್ಲಿ ತ
ನ್ಮಾತ್ರೆಯಿಂದಧಿಕಂ ದಲೆಂಬಿನಮಾದುದಂ ಪ್ರಭು ನೋಡಿದಂ         ೬೨

ವ : ಅದಂ ಕಂಡು ಕಡುಚೋಜಿಗಂಬಟ್ಟು ತನ್ಮುನೀಂದ್ರನ ತಪಃಪ್ರಭಾವಕ್ಕೆ ಮೆಚ್ಚಿ ಮೆಚ್ಚಿ ಮನದೊಳಚ್ಚರಿವಟ್ಟು ಪೊಗಳುತ್ತಮಾ ವಿತ್ತಮನಲ್ಲಿಯ ಭವ್ಯರ್ಗೆ ನೀವಿನ್ನುಂ ವಿಶೇಷಮಾಗಿ ದಾನಮಂ ಮಾಡಿಯೆಂದಿತ್ತು

ಅರಸಂ ನೂರ್ಮಡಿಯಾಗಿ ದಾನಭರಮಂ ಮಾಡುತ್ತುಮಿರ್ದಾ ಮಹಾ
ಧರಣೀಮಂಡಳಮಂ ಸುರಕ್ಷಿಸುತುಮಿರ್ದಂ ಸತ್ಯಸಂಭಾಷಣಂ
ಪಿರಿದುಂ ನಿರ್ಮಲಮಪ್ಪ ತನ್ನಯ ಯಶೋರಾಶಿಪ್ರಭಾಭಾರದಿಂ
ವರದಿಗ್ಭಿತ್ತಿಗಳಂ ವಿಲೇಪಿಸುತಮಿರ್ದಾ ಭೂಪನಂತೊಪ್ಪಿದಂ        ೬೩

ವ : ತದನಂತರಮಾ ಮನುಜಮನೋಜನ ಸಾಮ್ರಾಜ್ಯಲಕ್ಷ್ಮೀಸಂಭೋಗ ಕೇಳೀವಿನೋದಕ್ಕೆ ಸಮುದ್ದೀಪಕ ಸಹಾಯಮನೊಸೆದುಬರ್ಪಂತೆ

ಸಕಳಪ್ರಾಣಿಮನಃಪ್ರಮೋದಕರಣಾಲೋಲಂ ಸಮುಜ್ಜೃಂಭಿತಾ
ಧಿಕ ಚೇತೋಭವದುರ್ವಿಕಾರರಚನಾಶೀಲಂ ಸಮಸ್ತಪ್ರಕಾ
ಶಕಪೀಯೂಷ ಮಯೂಖಮಾಲಿ ಬಹಲಜ್ಯೋತ್ಸ್ಯಾನುಕೂಲಂ ವಿಯೋ
ಗಿಕುಲಧ್ವಂಸಕಮಾಗಿ ಬಂದುದು ಶರತ್ಕಾಲಂ ಸುಮಂದಾನಿಳಂ       ೬೪

ವ : ಅಂತು ಪ್ರಕಟಿತಾನೇಕಪ್ರಕಾರ ಪಾಂಡುರಮೇಘಾಡಂಬರಪರಿಮಂ ಡನವಿಡಂಬಿತ ರಾಜಮಂಡಳವಿಲೋಪಲಾಲನಂಬೆರಸು ಶರತ್ಕಾಲಮತಿಕ್ರಮಿಸಿ ಮೇಲೆತ್ತಿ ಬಂದು ಮೊಗಂದೋಱಿ ವರ್ಷಾಕಾಲಮಂ ಪಲಾಯನಮನೆಯ್ದಿಸುವುದುಂ

ಪಲ್ಲಟಿಸಿತ್ತು ಪೂಗುಡಿಗಳಂ ಗಿರಿಮಲ್ಲಿಗೆ ಬೀತು ಬಿನ್ನನಾ
ಯ್ತೊಳ್ಳಿಹ ಮೊಲ್ಲೆ ಸೋಗೆನವಿಲೊಲ್ಲದೆ ಮಾಣ್ದುದು ನವ್ಯನಾಟ್ಯಮಂ
ನಿಲ್ಲದೆ ಚಾತಕಂ ಜಲಕಣವ್ರತಮಂ ಪ್ರತಿಪಾಲಿಸಿತ್ತು ಚೆ
ಲ್ವಿಲ್ಲದುದಾಯ್ತು ನಾಡೆ ಕಡವಂ ಶರದಾಗಮನಪ್ರವೇಶದೊಳ್   ೬೫

ತವಕಿಸಿ ಹಂಸಮಂಡಳಿ ಮೃಣಾಳದ ಕೋಮಳದಂಡಕಾಂಡಮಂ
ಸವಿದುಱೆ ಸೊಕ್ಕಿದತ್ತು ವಿಕಚತ್ಕಮಳಂ ಮಕರಂದಭಾರಸಂ
ಭವಿ ಬಳಿಯಟ್ಟಿದತ್ತಳಿಗಣಕ್ಕೆ ಮಹೀಧರಮಚ್ಛನಿರ್ಝರಾಂ
ಬುವನೆಸಗಿತ್ತು ಹೊನ್ನೆನನೆಯಿಂದೆಸೆದತ್ತು ಶರತ್ಪ್ರವೇಶದೊಳ್      ೬೬

ವ : ಮತ್ತಂ ಗಗನಗಹ್ವರದೊಳ್ ಮಂಡಲಂಗೊಂಡ ಘನಕಾಳವಿಷಧರಂ ಭೂರಿ ಮಯೂರ ವಿರಾವಶ್ರವಣಭಯದಿಂ ಬೆದಱಿ ಯಥಾಯಥಮಾಗಿ ಪರೆದೋಡಿಪೋ ದುದಿನ್ನಂಜಲಿಲ್ಲೆಂದು ಬಗೆದಂದು ಶರತ್ಕಾಲದ ಪೊಸವೆಳ್ದಿಂಗಳಿರುಳ್ದೋಷಾಕರನೊಂದಾಗಿ ಪೋಗಲಾಗದೆಂದು ಪಿಂದುಳಿದು ಸುಖಸ್ಥಾನದೊಳಿರಲೊಡಂ ಪಗಲುಷ್ಣಕಿರಣಕಿರಣಪರಿ ತಾಪದಿಂ ಕಡುಗಾಯ್ದು ಕೆನೆಗಟ್ಟಿ ಘಟ್ಟಿಗೊಂಡುದೆಂಬಂತೆ ಪೊರೆಪೊರೆಯಾಗಿ ದಳವೇಱಿ ಬಹಳತರಧವಳತೆಯನಾಂತ ಮುಗಿಲಮೊತ್ತಮೆತ್ತಲುಂ ಬಿತ್ತರಂಬಡೆಯೆ

ದಿನಪಂ ಕನ್ನೆಯನೊಲ್ದು ಕೂಡಲೊಡಮಾ ದುರ್ನೀತಿಯಿಂ ಕೆಟ್ಟುದಾ
ತನ ತೇಜಂ ಕರಣೀಯಮಾವುದಿದಕೆಂದಾ ದೋಷಸಂಹಾರಬು
ದ್ಧಿನಿಮಿತ್ತಂ ತೊಲೆಯಂ ದಲೇಱಿ ಪಡೆದಂ ಮತ್ತುಗ್ರತೇಜಃಪ್ರಭಾ
ವನೆಯಂ ಲೋಕದೊಳಾವನೋ ಪ್ರಭವಿಸಂಶುದ್ಧೀಕೃತೋದ್ದೋಷಕಂ       ೬೭

ಸುಳಿದಾಡಿ ಕಳಾಳಾಪದಿ
ನೆಳೆಮುದ್ದಂ ತೋಱೆ ಮೊಲೆಯನುಣ್ಬಾತ್ಮಜರೆನೆ
ಗಿಳಿಗಳ ಪಿಂಡುಗಳುಂಡವು
ಕಳವೆಯ ಪಾಲ್ದೆನೆಯ ಘಟ್ಟಿಗೊಂಡೊಳ್ವಾಲಂ            ೬೮

ನೀರೆಂಬ ಸೀರೆಯಂ ಪೆಱ
ಸಾರಿಸುತುಂ ಪುಳಿನಮೆಂಬ ಜಘನಸ್ಥಳದಿಂ
ನಾರಿಯವೊಲ್ ನದಿ ಮೆಱೆಗುಂ
ಶಾರದಸಮಯಂ ದಲೆಂಬ ವಿಟಸನ್ನಿಧಿಯೊಳ್   ೬೯

ವ : ಇಂತು ಶರತ್ಸಮಯಸಮವಸರಣಾನಂತರಂ

ಹಿಮಮುದ್ರೇಕಿಸಿ ಬಂದು ಪತ್ತಿದೊಡೆ ಧೈರ್ಯಂಗೆಟ್ಟು ಬೆಂಬಿರ್ದು ಮ
ತ್ತಮದಂ ಸೈರಿಸದೋಡಿಪೋಗಿ ವಿರಹಾಗ್ನಿಜ್ವಾಲಿಕಾವರ್ಧನ
ಕ್ರಮಮಂ ತಾಳ್ದ ವಿಯೋಗಿಚಿತ್ತಗೃಹದೊಳ್ ಪೊಕ್ಕಿರ್ದನಾ ಕಾಮದೇ
ವಮಹೀವಲ್ಲಭನೆಂದೊಡೇವೊಗಳ್ವೆನಾ ಶೀತಾತಿರೇಕತ್ವಮಂ       ೭೦

ಅಂಜಿ ಪೂರ್ವಾಹ್ಣಹಿಮಕೆ ಧ
ನಂಜಯನುಂ ಪೋಗಿ ಪೊಕ್ಕು ಸರ್ವರ ಬಸಿ ಱೊಳ್
ಪುಂಜಿಸಿದನಲ್ಲದಿದ್ದೊಡೆ
ರಂಜಿಸುವುದೆ ಧೂಮಮುದಯದಲ್ಲಿ ಮುಖಸ್ಥಂ         ೭೧

ಕೆಳೆಗೊಂಡುದಗ್ನಿಯೊಡನ
ಗ್ಗಳಗಾಳಿ ಮಹೇಶನುರಿಯ ಕಣ್ಣಂ ನೊಸಲೊಳ್
ತಳೆದಂ ಸಮುದ್ರಮೌರ್ವ
ಜ್ಜಳನಂ ನಡುವಿರಿಸಿದತ್ತು ಶೀತದ ಭಯದಿಂ    ೭೨

ವಾನರಸಂಚಯಂ ನೆರೆದು ಸೈರಿಸಲಾಱದೆ ತೀವ್ರಶೀತಮಂ
ಕಾನನದಲ್ಲಿ ರಂಜಿಸುವ ಗುಂಜೆಯ ಪುಂಜಮನಗ್ನಿಯೆಂದು ಸ
ನ್ಮಾನಿಸಿ ಪತ್ತೆಸಾರ್ದಱ ಸುತ್ತಲುಮೊಯ್ಕನೆ ಕುಳ್ಳಿದಿರ್ದು ಮ
ತ್ತಾನಿಸಿ ಪೊಟ್ಟೆಯಂ ತುಱಿಸುತುಂ ಸಲೆಕಾಯ್ದುದು ಕಿಚ್ಚನಾಕ್ಷಣಂ            ೭೩

ವಿನುತವಿವೇಕಮಂ ತಳೆದ ತುಂಬಿದ ಚೆಲ್ವಿನೊಳೊಂದಿತೋರ್ಪ ಜ
ವ್ವನೆಯರ ತೋರಬಟ್ಟಮೊಲೆಯಿಟ್ಟೆಡೆಯೊತ್ತನೆ ಪತ್ತೆಸಾರ್ದು ಬೆ
ಚ್ಚನೆ ಬಿಗಿದಪ್ಪಿಕೊಂಡು ಬಿಡದಿರ್ದೊಡಮಾ ಮನುಜಂಗಿದೇವುದೋ
ನೆನೆವಡೆ ಸೀರೆಗೀರೆ ಸಲೆ ಕಂಬಳಿಗಿಂಬಳಿ ಕಂತೆಬೊಂತೆಯುಂ೭೪

ಕಡುನಿಮಿರ್ದ ತೋರಮೊಲೆಗಳ
ನಡುವೆಡೆಯೊಳ್ ಪೊಕ್ಕು ಪಚ್ಚಿಸಿದವೊಲ್ ತೊಡರ್ದಿ
ರ್ದೊಡಮೇನವಂಗೆ ನಡುಕಮ
ನೊಡರಿಸಲಾರ್ತಪುದೆ ನೋಡ ಹಿಮಮುಂ ಗಿಮಮುಂ     ೭೫

ವ : ಇಂತು ಹೇಮಂತಮುಂ ಶಿಶಿರತ್ವಮುಮೆಂಬ ಋತುದ್ವಯ ವಿರಮತ್ಯ ನಂತರಂ ವಸಂತಮಯಮುಂ ಪೆಱಪಿಂಗಿಪೋಗೆ

ವಾತೂಳೀಚಾಳನೋನ್ಮೀಳಿತಜಟಿಳತರಸ್ಥೂಳಧೂಳೀಪ್ರಜಾಳ
ಪ್ರೋತಕ್ಷೋಣಿತಳಂ ಪ್ರೋಚ್ಚಳಿತಘನಮರೀಚೀಚಯವ್ಯಾಪ್ತದಿಕ್ಕಂ
ಖ್ಯಾತಂ ಲೋಕಕ್ಕಗುರ್ವಂ ಪಡೆದು ಬಿಡದೆ ಬಂದತ್ತು ದುರ್ಗ್ರೀಷ್ಮಕಾಲಂ
ಸ್ಫೀತಪ್ರೋಷ್ಮಾನುಕೂಲಂ ವಿರಚಿತಗಗನಸ್ಥಾನಸಂಗ್ರೀಷ್ಮಕಾಲಂ   ೭೬

ವ : ಆ ನಿದಾಘಸಮಯಪ್ರತಾಪೋದಯಂ ದಶದಿಶಾವಿವರೋದರದೊಳ್ ಪರಿವರ್ತಿಸಿ ಬಿತ್ತರಂಬಡೆಯೆ

ಇಂದ್ರಂ ನೇತ್ರಾಳಿ ನೀಳೋತ್ಪಳದೊಳೆ ಪುದಿದಂ ವಾರ್ಧಿಯೊಳ್ ವಹ್ನಿ ಪೊಕ್ಕಂ
ಬಂದೊಂದಿರ್ದಂ ಯಮಂ ಛಾಯೆಯೊಳಿರುಳೊಳೆ ಸಂಚಾರಿಪಂ ನೈರುತಂ ಮ
ತ್ತಂದಾದಂಪಾಶಿ ವಾರಾಂಪತಿ ಹಿಮಗುಣಮಂ ತಾಳ್ದಿದಂ ವಾಯುಯಕ್ಷಂ
ಸಂದಿರ್ದುಂ ಮಂಜುವೆಟ್ಟಂಬಿಡಿದು ಸಲೆ ಶಿವಂ ಗಂಗೆಯಂ ಪೊತ್ತು ನಿಂದಂ    ೭೭

ವ : ಮತ್ತಂ

ಬೇಸಗೆಕಾಲಮೆಂಬಬಳೆ ಬೆಟ್ಟುಗಳೆಂಬೊಲೆಗಲ್ಗಳಲ್ಲಿ ಬೈ
ತೀ ಸಕಳೋರ್ವಿಯೆಂಬ ಪೊಸಗಾವಲಿಯಂ ರವಿವಹ್ನಿಯಿಂದೆ ತೋ
ಯಾಶಯಮೆಂಬ ಸಂಪಣಮನರ್ಪಿಸಿ ತಳ್ತುರಿಯಲ್ಕೆ ಕಾಷ್ಠೆಗಳ್
ದೋಸೆಯನಟ್ಟವೊಲ ಮಳಲರಾಶಿಗಳೊಪ್ಪಮನಾಳ್ದುವಾಕ್ಷಣಂ  ೭೮

ನೆಱೆನೆಱೆಚೂರ್ಣಮಾದ ಘನಧೂಳಿಗಳೇ ಮರಿಚಂಗಳಾಗಿ ಪೊ
ಯ್ದುಱೆ ಮಿಱುಗುತ್ತುಮಿರ್ಪ ಜಳಮೆಂಬುರುತೈಲದಿನೊಂದಿದುರ್ವಿಯೆಂ
ಬುಱುವ ವಿಶಾಳಭಾಜನದೊಳ್ಮುವ ಬೇಗೆಯ ಬೆಂಕಿಯಿಂ ಕರಂ
ಬಱಬಱನಾಗಿ ತಾಳಿಸಿದವೊಲ್ ಕರಿವೋದವು ಬೆಂದು ಬೆಟ್ಟುಗಳ್   ೭೯

ಕೆಱೆಗಳ ತೊಱೆಗಳ ಸರಸಿಗ
ಳಱುನೀರಂ ಪೀರ್ದು ಪೀರ್ದು ನೆಱೆಯದೆ ಧರೆ ಮ
ತ್ತಱಸಿ ಬಾಯ್ವಿಟ್ಟ ತೆಱದಿಂ
ನೆಱೆ ಪರ್ವಿದವಂದು ಬಿರಿದ ಪೆರ್ವಿಡೆಗಳುಂ       ೮೦

ಪರ್ವಿದ ಬೆಟ್ಟಬೇಸಗೆಯ ಪೆರ್ವಿಸಿಲರ್ವಿಸೆ ಮೆಯ್ಯನೊಡ್ಡಿ ತಾಂ
ನಿರ್ವಹಿಸಲ್ಕಮಾಱದೆ ಹಿಮಾಂಶುಕಳಾಳಿಯನೆತ್ತಿ ಪೊತ್ತನಾ
ಶರ್ವನುದಾರವಾರಿಶಯನಂ ಹರಿಯಾದನಜಂ ಸರೋಜದೊಳ್
ಕೊರ್ವಿದ ಮೋಹದಿಂ ನೆಲಸಿದಂ ಬಿಡದೇಗಳುಮುಷ್ಣಭೀತಿಯಿಂ     ೮೧

ವ : ಅಂತಾಸುರಮಾದ ಬೇಸಗೆಯ ಬಿಸಿಲ ಕಠೋರಪರಿತಾಪದೆಸಕಂ ರಸಾತಳದೊಳೆಲ್ಲಂ ಸೂಸಿ ಪರಿದು ಪಸರಿಸಿ ಸಮುಜ್ಜೃಂಭಿಸುತ್ತುಮಿರೆ

ಎಮ್ಮಯ ವಂಶದಿಕ್ಕರಿಗಳೆಂಟುಮಿಳಾತಳಭಾರಮಂ ಕೊರಳ್
ಕೊಮ್ಮಿಸಿ ಪೊತ್ತು ನಿತ್ತರಿಸುರ್ದೊಡಮೀ ನೆಲನೆಯ್ದೆಕಾಯ್ದು ಮ
ತ್ತೆಮ್ಮುಮನಟ್ಟಿ ಮುಟ್ಟಿ ಸುಡುತಿರ್ದಪುದೆಂದಿಡುವಂತೆ ಪುಯ್ಯಲಂ
ತಮ್ಮ ಕರಾಗ್ರದೊಳ್ ತೊವಲನಾಂತು ನೆಳಲ್ಗೆ ತೊಳಲ್ದವಾನೆಗಳ್೮೨

ಉಗ್ರನಿದಾಘತಾಪದೆಸಕಕ್ಕಗಿದುನ್ಮದದಾನೆಗಳ್ ನಿಜೋ
ದಗ್ರಕರಾಗ್ರಪುಷ್ಕರಮನೆತ್ತಿ ಕರಂ ಪರಿತಂದು ಗಾಹನ
ವ್ಯಗ್ರತೆಯಿಂ ಸರೋವರದ ತುಚ್ಛತರಾಂಬುವಿನಲ್ಲಿ ಪೊಕ್ಕು ಮು
ಳ್ಗಿ ಗ್ರಹಿಸುತ್ತುಮಿರ್ದುವತಿನಿಶ್ಚಳಭಾವಮನೊಂದುಜಾವಮುಂ    ೮೩

ಕಿಱಿದಾದ ಕೆಸರ್ನೀರಂ
ಮಱಿಯಾನೆಯದೊಂದು ಕಂಡು ಕುಡಿವಾತುರದಿಂ
ದೆಱಗಿ ಮೊಗಮಿಕ್ಕುವನಿತ
ಕ್ಕುಱೆ ಬತ್ತಿದುದುಷ್ಣಕಿರಣನುಗ್ರಾತಪದಿಂ      ೮೪

ವ : ಮತ್ತಮೊಂದೆಡೆಯೊಳ್

ಬಿಸಿಲ ಕಡುಗಾಯ್ದು ಭೋಂಕೆನೆ
ಪಸರಿಸೆ ಬಿದಿರೊಡೆದು ಸುರಿವ ಬಿಸಿಮುತ್ತುಗಳಂ
ಪೊಸನೀರ್ವನಿಗಳಿವೆಂದೆಂ
ದೊಸೆದೀಂಟಲ್ ಮಿಡುಕಿ ಸೋಗೆ ಪೊಸೆದುದು ಬಸಿಱಂ    ೮೫

ಬೇಸಗೆಯ ಬೆಂಕೆಯಿಂದಂ
ಕಾಸಿದವೊಲ್ ಕುದಿದು ಪರಿವ ನಿರ್ಝರಜಳಮಂ
ಕೂಸುಮೃಗಂ ಕುಡಿಯಲ್ ಮೊಗ
ಮಾಸುರದಿಂ ಬೇಱೆ ಮಱುಗಿ ಬಿದಿರ್ದುದು ತಲೆಯಂ      ೮೬

ಒಡವರಿವ ತನ್ನ ನೆಳಲಂ
ನಡೆನೋಡಿಯೆ ನೆಳಲಿದೆಂದು ಪೊರ್ದುವ ಬಗೆಯಿಂ
ದೆಡಕಂ ಬಲಕಂ ಪರಿದಾ
ಗಡೆ ಬಸವಳಿದತ್ತು ಬಿಸಿಲೊಳೆಳೆಯ ಕುರಂಗಂ    ೮೭

ಮಿಗೆ ತಂಪಪ್ಪೆಡೆಯಲ್ಲಿ ಪತ್ತಿದುದು ಕೂರ್ಮೌಘಂ ಬಿಲದ್ವಾರಸಂ
ದಿಗಳೊಳ್ ಪೊಕ್ಕುದು ಕರ್ಕಟಪ್ರತತಿ ನೀರಿಂಗಿರ್ದ ಪಂಕಾಗ್ರದೊಳ್
ನೆಗೆವುತ್ತುಂ ಪೊರಳುತ್ತುಮಿರ್ದುದು ಮಹಾಮೀನಪ್ರತಾನಂ ಸರೋ
ಜಗಣಂ ಮ್ಲಾನತೆವೆತ್ತುದೆಯ್ದೆ ಕೊಳದೊಳ್ ಗ್ರೀಷ್ಮೋಷ್ಣಮತ್ಯದ್ಭುತಂ  ೮೮

ವ : ಮತ್ತಮಾ ಪೊತ್ತಿನೊಳ್

ಉಗ್ರಗ್ರೀಷ್ಮಪ್ರಭಾವಂ ಪಸರಿಸೆ ಜಗದ ಸ್ತ್ರೀಯರುಂ ಮರ್ತ್ಯರುಂ ಪ್ರ
ತ್ಯಗ್ರೋಶೀರೋರುಧಾರಾಗೃಹ ಸುರಭಿಜಲೋಚ್ಛೀಕರಾಸಾರಮಂ ನಿ
ರ್ವ್ಯಗ್ರಂ ಪೊರ್ದಿರ್ದರಾಗಳ್ ಶಿಥಿಲವಸನದಾಚ್ಛಾದಮಂ ತಾಳ್ದರುಚ್ಚೈ
ತ್ಯಾಗ್ರೀಭೂತಾದಿ ಮುಕ್ತಾಭರಣವಿಸರದಿಂ ಚೆಲ್ವನಾಂತಿರ್ದರೆಲ್ಲಂ೮೯

ಪೂಸಿ ಮೆಯ್ಯಲ್ಲಿ ಚಂದನ
ಭಾಸುರಕರ್ದಮಮನಾಲವಟ್ಟಂಗಳುಮಂ
ಬೀಸಿಕೊಳುತ್ತುಂ ಕಳೆದರ್
ಬೇಸಗೆಯೊಳ್ ಪುಟ್ಟಿದಂಗದಾಹೋದಯದಿಂ   ೯೦

ವ : ಇಂತು ಪೆರ್ಮೆವಡೆದ ಘರ್ಮಸಮಯಮೊರ್ಮೊದಲೊಳ್ ಭೂವಳಯ ಮನಾವರಿಸುತ್ತುಮಿರಲಾ ಕ್ಷತ್ರಿಯಚೂಡಾಮಣಿ ತತ್ಸಮಯಕ್ಕುಚಿತಮಾದ ಭೋಗೋಪ ಭೋಗಂಗಳನನುಭವಿಸುತ್ತುಮತ್ಯುತ್ಸವದಿಂ ಕೆಲವುವತ್ಸರಂಗಳಂ ಕಳೆವುದುಂ

ಕೊಂಡಾಡುತ್ತುಂ ಮಹಾದಾನದ ವರಮಹಿಮಾಶಕ್ತಿಯಂ ಸೂಕ್ತಿಯಿಂದಂ
ಮುಂಡಾಡುತ್ತುಂ ಸುವಿದ್ಯಾಯುವತಿವದನಮಂ ಸಂತತಂ ಧರ್ಮಮಂ ಕೈ
ಕೊಂಡಾಡುತ್ತುಂ ಕರಂ ಬಾಹುಬಲಿ ಸುಕವಿರಾಜಂ ಚರಿತ್ರಪ್ರಕಾಂಡಂ
ಚಂಡೋದ್ದಂಡಪ್ರತಾಪಂ ಧರಣಿಯೊಳೆಸೆದಂ ಚಾತುರೀಜನ್ಮಗೇಹಂ           ೯೧

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯಕಮಳೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿ ಪಂಡಿತದೇವಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ದಶರಥಮಹೀನಾಥ ತೀರ್ಥಕರತ್ವ ಪುಣ್ಯಾನುಬಂಧನಿಬಂಧನೀ ಭೂತದಾನ ವಿಧಾನಾನುಮೋದವ್ಯಾವರ್ಣನಂ ಚತುರ್ಥಾಶ್ವಾಸಂ.