ಶ್ರೀವರನಿಕ್ಷ್ವಾಕುಕುಲೇಂ
ದೀವರಮಲರ್ವಂತು ನೆಗಳ್ದ ತೀರ್ಥೇಶ್ವರ ತಾ
ರಾವರನುದಯಮನೇಂ ಪರಿ
ಭಾವಿಸಿದನೋ ಸರಸಕವಿ ರಸಾಳವಸಂತಂ         ೧

ಅಂತು ಮನದೊಳಗೆ ಭಾವಿಸಿ
ಸಂತಸದಿಂ ನುಡಿದನರಸನಧರಚ್ಛವಿಗಳ್
ಮುಂತೊಗೆದು ಸೊಗಯಿಪುತ್ಸವ
ಸಂತಾನದ ತಳಿರಗಾಡಿಯಿಂ ನೀಡುವಿನಂ           ೨

ರದನಾಚ್ಛಪ್ರಭೆ ಕೌಮುದೀವಿಭವಮಂ ಕೈಗೆಯ್ಯೆ ವಸ್ತ್ರಕ್ಕೆ ಸ
ಮ್ಮದ ವಾಕ್ಯಾಮೃತಮುಣ್ಮೆ ತನ್ಮುನಿಪನಂ ನೀಂ ಪೇಳ್ದ ಪುಣ್ಯೋದಯಾ
ಸ್ಪದನಾನಂದಮಯಂ ವಿನೇಯನಿಧಿ ಮುನ್ನೆಲ್ಲಿರ್ದ ನಿನ್ನಾವ ಸ
ಗ್ಗದಿನೆಯ್ತಂದಪನೆಂದು ಕೂರ್ತು ಬೆಸಗೊಂಡಂ ಗೋಮಿನೀಮಂಡನಂ          ೩

ಆವನ ಜನ್ಮೋದಯದಂ
ದಾವಳ ಬಸಿಱಾವ ದೇಶಮಾವೆಡೆ ಪಿರಿದುಂ
ಪಾವನಮಾಯ್ತೆನಗಱಿಪು ದ
ಯಾವಾರಿಧಿಯೆಂದು ಭೂಭುಜಂ ಬೆಸಗೊಂಡಂ ೪

ವ : ಅಂತು ಬೆಸಗೊಂಡ ಧರಾಮಂಡನನ ಹೃದಯ ಸುಧಾಕರಕಾಂತಮೊಸರ್ದು ಘಳಿಲೆನೆ ಕುಳಿರ್ಕೋಡುವಿನಂ ವಿನಯನಿಕರ ಚಕೋರಂ ನಲಿದು ನರ್ತಿಸುವಿನಂ ಪರವಾದಿವದನ ಸರಸೀರುಹಂ ಕಂದಿ ಕಳಿಯೆ ಬಾಡುವಿನಂ ಧರ್ಮಾಮೃತಾಂಬುನಿಧಾನಂ ನೆಲೆವೆರ್ಚುವಿನಂ ದುರಹಾಂಧಕಾರಂ ತೊಟ್ಟನೆ ತೊಲಗುವಿನಂ ನಿಜಬೋಧಾವಧಿ ವಿಲೋಚನೋತ್ಪಲ ಮುನ್ಮೀಲಿಸುವಿನಂ ನೆಟ್ಟನುದಯಂಗೆಯ್ದು

ಮುಂದೆ ಪರಿತಂದು ಭೂಪನ
ಸಂದೇಹಧ್ವಾಂತ ಪಟಲಮಂ ಪಱಿಪಡೆ ತೂ
ಳ್ವಿಂದುಕಿರಣಂಗಳೆಂಬೊಂ
ದಂದದಿನಿರೆ ದಂತಕಾಂತಿ ಮುನಿಯಿಂತೆಂದಂ       ೫

ನಿನಗಂ ಪೇಳ್ವೆನಗಂ ದಲಲ್ತಖಿಳ ಲೋಕಕ್ಕೆಯ್ದೆ ಸಮ್ಮೋಹಮಂ
ಜನಿಯಿಕ್ಕುಂ ಜಿನಜನ್ಮನಿರ್ಮಳಕಥಾಪೀಯೂಷವೆಂತೆನ್ಸ ಪೂ
ವಿನ ಕಂಪೆತ್ತಿಪ ಭೋಗಿಗಂ ಸಮೆವ ಮಾಲಾಕಾರಿಗಂ ಸಾರ್ದು ಮೆ
ಲ್ಲನೆ ಮೇಲ್ವಾಯ್ವಳಿಮಾಲೆಗಂ ನೃಪಮನಸ್ಸಂಪ್ರೀತಿಯಂ ಮಾಡದೇ        ೬

ಎಂದಖಿಳ ಲೋಕಹೃದಯಾ
ನಂದಮನರ್ಹತ್ಪುರಾಣ ಭವಕಲ್ಪಲತಾ
ಕಂದಮನಗೆವೊಯ್ಯಲ್ ಬಗೆ
ದಂದಂ ಮುನಿಪತಿ ನೃಪಾಲಚಿತ್ತಾವನಿಯೊಳ್   ೭

ಆದೊಡೆ ಕೇಳಿಳಾಧಿಪ ಪಯೋಧರಮೊಯ್ಯನೆ ಸೋಂಕೆ ಫೇನಮಾ
ಲಾದರಮುಣ್ಮಿ ಪೊಣ್ಮಿ ತೆರೆದೋಳ್ಗಳಿನಪ್ಪಿ ನಿಜೋಪಕಂಠಮಂ
ಮೇದಿನಿಗಿಷ್ಟಮಂ ಸಲಿಸುತ್ತಿರ್ಪುದು ಕೂರ್ಪ ವಿಟಂಬೊಲೊಂದಿ ಕಾ
ಳೋದ ಸಮುದ್ರ ಮುದ್ರವಸುಭಾಷಣಮುತ್ತಮ ರತ್ನಭೂಷಣಂ   ೮

ಬುಧವಿದಿತಮಾದ ತದ್ವಾ
ರಿಧಿ ಬಳಸಿರೆ ಪೊಱಗನೊಳಗನಳವಡೆ ಲವಣಾಂ
ಬುಧಿ ಸುತ್ತೆ ನಡುವೆ ಚೆಲ್ವಾ
ಯ್ತು ಧಾತಕೀಷಮೆನಿಪಖಂಡದ್ವೀಪಂ            ೯

ತುಂಬಿ ತಗುಳ್ದ ತಾರಗೆ ತೊಡರ್ಚಿದ ಮುತ್ತುಗಳಂದಮಾದ ನೀ
ಲಾಂಬರಮೆಂಬ ರನ್ನದ ವಿತಾನಮೊಡಂಬಡೆ ದೇಸೆವೆತ್ತು ಕ
ಣ್ಗಿಂಬೆನೆ ಸಂದ ಭೂಭುವನ ಮಂದಿರಮಂ ಧರಿಸಿರ್ದ ಪೊನ್ನಮ
ಳ್ಗಂಬಮಿದೆಂಬಿನಂ ಸೊಗಯಿಕುಂ ನೆಗಳ್ದಲ್ಲಿಯ ಮಂದರದ್ವಯಂ ೧೦

ವ : ಅಂತಾ ಧಾತಕೀಷಂಡಮೆಂಬ ನೀಲಾಂಬರಮಂಬುಧಿಯೊಳಲದಾಱಿಸಲ್ ನೆಗಪಿದಪಾರ ಕಾಶ್ಮೀರ ಭೂಷಿತ ಬಾಹುಯುಗಮೆಂಬಂತಗುರ್ವುವಡೆದ ಪೂರ್ವಾಪರ ಮಂದರದ್ವಯದೊಳ್

ಮುಗಿಲಂ ಮುಟ್ಟುವ ಪೆರ್ಮೆ ಕೂಡೆ ದೆಸೆಯಿಂ ತಳ್ಪೊಯ್ವ ತೇಜಂ ಮನಂ
ಬುಗೆ ಬಂದುದ್ಗತ ರಾಜಹಂಸನೊಲವಿಂದಂ ವೇಳೆಗೊಂಡಿರ್ಪ ಮೈ
ಮೆಗೆ ತಾರಾವಳಿ ಸೇಸೆಯಾಗೆ ಮಹಿಭೃನ್ನಾಥಾದಿಪಟ್ಟಕ್ಕೆ ನೆ
ಟ್ಟಗೆ ಸಂದಗ್ಗದ ಪೂರ್ವಮಂದರಮದೇಂ ಕಣ್ಬೀಡಿಗಿಂಬಾದುದೋ            ೧೧

ತದಮಳಪೂರ್ವಮಂದರದ ಪೂರ್ವವಿಭಾಗದೊಳಿಂಪುದೋರ್ಪ ಸಂ
ಪದಮನನಾರತಂ ವಿಬುಧಸಂತತಿಗೀವ ನೆಗಳ್ತೆವೆತ್ತ ಬಿಂ
ಕದ ಪದಿನಾಱುನಾಡು ಕಳೆಯಂದಮನಾಳ್ದರೆ ತಾಳ್ದುದಿಂದುಬಿಂ
ಬದ ಸೊಬಗಂ ಮನಂಗೊಳಿಪ ಪೂರ್ವವಿದೇಹಮಪೂರ್ವಶೋಭೆಯಂ          ೧೨

ಜಿನಮತವೊಂದುಳಿದಿರೆ ಮಿ
ಕ್ಕಿನ ಕುಮತಂ ಪುಟ್ಟವೆಂಬಿದಲ್ಲದೆ ಮತ್ತಾ
ವ ನವೀನಮಾದ ಸದ್ವ
ಸ್ತು ನಿಕಾಯಂ ಪುಟ್ಟದಾ ಮಹೀಮಂಡಲದೊಳ್           ೧೩

ಅಱನೊಳ್ ಪೂಣ್ದ ಸರ್ವಜನದಾರ್ಪಿನ ಕೂರ್ಪನುದಗ್ರಕೀರ್ತಿವೆ
ತ್ತಱಿಕೆಯ ಚಕ್ರವರ್ತಿಗಳ ವಿಕ್ರಮಮಂ ಭುವನಪ್ರಸಿದ್ಧರಾ
ಗುಱುವ ಜಿನೇಂದ್ರರುತ್ಸವದ ಪೆರ್ಚುಗೆಯಂ ನೆಱೆ ನೋಡಿ ನೋಡಿ ಬಾ
ಯೊಱವರಮರ್ತ್ಯರೆಂದುಮೆನಲೇವಿರಿದೋ ಸೊಬಗಾ ವಿದೇಹದಾ  ೧೪

ಆ ಪೂರ್ವವಿದೇಹ ಶ್ರೀ
ರೂಪಳವಡೆ ತೊಟ್ಟನರ್ಘ್ಯ ಮುಕ್ತಾಲತೆಯಿಂ
ಬೀ ಪೆರ್ಮೆಯನಾಳ್ದುದು ಸೀ
ತಾಪಗೆ ಲಲಿತೋಪಕಂಠ ಕಮನೀಯತೆಯಿಂ      ೧೫

ಆ ನದಿಯೆರಡುಂ ತಡಿಯೊಳ್
ನಾನಾನೋಕಹ ಲತಾವಿತಾನ ವಿಚಿತ್ರ
ಸ್ಥಾನಂ ನಿಳಿಂಪ ದಂಪತಿ
ಗಾನಂದಮನಾವಗಂ ಮನಂಗೊಳೆ ಮಾಳ್ಕುಂ     ೧೬

ಜಳದೊಳನಿಮೇಷ ಕುಳಮಂ
ತಳೆದೆಸೆವುವು ಮಿಕ್ಕ ನದಿಗಳೀ ನದಿ ಪೆಂಪಿಂ
ವಿಳಸದನಿಮೇಷಕುಳಮಂ
ತಳೆದೆಸೆವುದು ತನ್ನ ನೀರೊಳಂ ತೀರದೊಳಂ      ೧೭

ಬೀಸುವ ಮೆಲ್ಲೆಲರಿಂ ಪೊಱ
ಸೂಸಿ ಕರಂ ಪಡೆದು ನಿಮಿರ್ದ ನೀರೇಜರಜಂ
ಬಾಸಣಿಸಿ ಹೇಮವೇದೀ ವಿ
ಳಾಸಮನನುಕರಿಪುವದಱ ಪುಳಿನತಳಂಗಳ್        ೧೮

ಜಲಮಮೃತಮಯಂ ಸೊಗಯಿಪ
ಜಲವಿಹಗಂ ಪರಮಹಂಸಮಯಮೆಂದುಂ ತ
ಜ್ಜಲಚರಮನಿಮಿಷಮಯಮೆನೆ
ಸಲೆ ಬಣ್ಣಿಪನಾವನದಱ ತೀರದ ಸಿರಿಯಂ        ೧೯

ವ : ಮತ್ತಮದು ಕಮಳ ಜನಕಮಂಡಲದೊಳಡಂಗಿದಲ್ಪತೆಯ ವಾಸವನ ಕಾಲ್ದೊಳೆದು ಬರ್ದ ಕಕ್ಕುಲಿತೆಯ ಜಹ್ನುವಿನ ತೊಡೆಯೆಡೆಯಿಂ ನುಸುಳ್ದ ಪರಾಭವದ ಮನುಜಂಗೆ ಮಕ್ಕಳಂ ಪಡೆದ ನಿಂದೆಯ ಮಂದಾಕಿನಿಯ ಮೈಮೆಯನೆನ್ನ ಮುಂದೆ ನುಡಿಯದಿರಿಮೆಂದು ನಗುವಂತೆ ಪಸರಿಸಿದ ಫೇನ ಪಿಂಡ ಪಾಂಡುರತೆಯಿಂ ಕಳಹಂಸ ಕಳಕಳದಿಂ ಬಳ್ವಳಿಕೆವಡೆದುದಂತುಮಲ್ಲದೆಯುಂ

ರಣದಾಲೋಲಾಲಿಮಾಲಾ ಕುಲಕುವಳಯ ಸೌಗಂಧಿತಾಂಭೋಜ ಗರ್ಭೋ
ಲ್ಬಣ ಗಂಧಂ ಬಂಧುರೋರ್ಮಿ ಪ್ರಸರ ವಿಸರದಾಂದೋಳ ಕೇಳೀ ಸಮಾರೋ
ಹಣ ಹಂಸೀ ಸ್ಪರ್ಶಹರ್ಷಂ ತಟನಿಕಟ ಪಟೀರಾಟವೀವಾಟ ಸಂಚಾ
ರಣಮೆಂದುಂ ಬಂದು ಬಂದೊಯ್ಯನೆ ಸುಳಿವುದು ಸೀತಾನದೀಮಾತರಿಶ್ವಂ    ೨೦

ವ : ಅಂತು ಸೊಗಯಿಸುವ ಸೀತಾನದಿಯ ದಕ್ಷಿಣತಟದೊಳ್

ದಳಿತಾಬ್ಜಾಂಬಕಮೊಪ್ಪಲುತ್ಪಲವನ ಶ್ಯಾಮಾಂಗಮಿಂಬಾಗೆ ಕ
ಣ್ಗೊಳಿಸುತ್ತಿರ್ಪ ವಿದೇಹ ವಿಷ್ಣುವಿನ ವಕ್ಷೋಭಾಗದೊಳ್ ಕೌಸ್ತುಭೋ
ಜ್ವಳ ರತ್ನಕ್ಕೆಡೆಯಾಗಿ ದಿವ್ಯವನಮಾಲಾಮಂಡನಶ್ರೀ ಮನಂ
ಗೊಳೆ ತನ್ನೊಳ್ ತಳೆದತ್ತು ವತ್ಸವಿಷಯಂ ಶ್ರೀವತ್ಸವಿಭ್ರಾಂತಿಯಂ            ೨೧

ಆ ವತ್ಸವಿಷಯಮೀಗುಂ
ಶ್ರೀವತ್ಸ ವಿಹಾರ ಭೂಮಿಯೆನೆ ಚೆಲ್ವಿಂ ಚೇ
ತೋವತ್ಸಲತೆಯನಖಿಳ ಕ
ಳಾವತ್ಪ್ರಭೆ ತನ್ನೊಳಾವಗಂ ತೀವುವಿನಂ           ೨೨

ತತ್ಸೇವ್ಯಮಾದ ವಿಷಯಂ
ವತ್ಸಂ ತಾನಾಗದಂದು ಸಮುದಂಚಿತ ಸ
ಸ್ಯೋತ್ಸವ ಗೋಮಂಡಲಮದು
ಸತ್ಸಭೆಗಭಿಮತಮನಾವಗಂ ಕಱೆದಪುದೇ        ೨೩

ಪಳುವೆಲ್ಲಂ ನಂದನಂ ಪರ್ವತಪರಿಕರಮೆಲ್ಲಂ ಮನಂಗೊಳ್ವ ಲೀಲಾ
ಚಳಮುಚ್ಚಸ್ಥಾನಮೆಲ್ಲಂ ಜಿನಮಣಿವನಶ್ರೇಣಿಯಂ ಮಮ್ಮನಿಮ್ನ
ಸ್ಥಳಮೆಲ್ಲಂ ಪೂಗೊಳಂ ನಿರ್ಜ್ಝರ ಪರಿಕರಮೆಲ್ಲಂ ಪೊದಳ್ದಾಪಗಾಸಂ
ಕುಳಮಂದಂದೇನನೇನಂ ಬಗೆದು ಪೊಗಳ್ವೆನಾ ರೂಢಿವೆತ್ತಿರ್ದ ನಾಡಂ           ೨೪

ನಳಿನೀಗರ್ಭ ವಿಚಿತ್ರ ಶಿಲ್ಪಗೃಹಮಪ್ಪಾ ದೇಶದೊಳ್ ಸಂತತಂ
ದಳಿತಾಂಭೋಜಕುಳಂ ಕೊಳಂ ಪರಿಮಿಳದ್ಭೃಂಗಾಳಿ ತಂಗಾಳಿ ನಿ
ರ್ಮಳ ರತ್ನಾವೃತಕಂದರಂ ಧರಮುದಂಚಚ್ಚಂದನಂ ನಂದನಂ
ವಿಳಸದ್ಭೂರಿಧನಂ ಪೃಥುಘಟಾಪೀನಾಕುಲಂ ಗೋಕುಲಂ            ೨೫

ಬಗ್ಗಿಪರಿಲ್ಲ ಕೋಗಿಲೆಗಳಲ್ಲದೆ ನಿಲ್ಲದೆ ಕೊಂಡು ಬಂಡಿನಿಂ
ಬಗ್ಗೆನೆ ಬಯ್ವರಿಲ್ಲ ಗಿಳಿಯಲ್ಲದೆ ಪಲ್ಮೊರೆವನ್ನರಿಲ್ಲ ಪಾ
ಯ್ವಗ್ಗಳ ದುಂಬಿಯಲ್ಲದೆನೆ ಮತ್ತಿನ ಸುತ್ತಿನ ಸುಳ್ಳುವಾತದೇಂ
ಸುಗ್ಗಿಯ ಸೂಱೆ ತೆಂಬೆಲರ ಮುಂಬರಿ ಕಾಮನಸೀಮೆಯಾ ನೆಲಂ   ೨೬

ವಿಹರದ್ಗಂಧ ಗಜೇಂದ್ರಗಂಡತಟಮಂ ತಳ್ಪೊಯ್ವ ಕರ್ಪೂರ ಭೂ
ರುಹ ಪತ್ರಾವಳಿಯಂ ಪಳಂಚಿ ಮೃಗನಾಭೀಮೂಲಮಂ ಮುಟ್ಟಿದು
ರ್ವಹ ಧೂಳಿಸ್ಥಳ ಪದ್ಮಿನೀಪಟಲಮಂ ಪೊಕ್ಕಾಡಿ ಕಾಲ್ಗುಂದಿ ತ
ನ್ಮಹಿಯೊಳ್ ಮೆಲ್ಲನೆ ಬರ್ಪುದುತ್ಪತಿತ ಭೃಂಗಾಳೀರುತಂ ಮಾರುತಂ         ೨೭

ಕಾಡದೆ ಗೋಕುಲಮೆಲ್ಲಿಯ
ಕಾಡದೆ ನೆಲೆವಟ್ಟಿಯಾಗೆ ಕಱೆವುವು ಬಱನಿಂದ
ಬಾಡದ ಸಸಿಗಳನೆಂದುಂ
ಬಾಡದ ಪೊರೆಯೊರೆಯ ಕೆಯ್ವೊಲಂ ಸೊಗಯಿಸುಗುಂ     ೨೮

ಉಱುವ ಜನಪದದ ಪಳ್ಳಿಯ
ಪೊಱಗಣ ಬನದೊಳಗೆ ನಡೆವ ಪಾಂಥರ್ ಮುಂತಾ
ಗಱಿಯರೆನೆ ಮನೆಗಳೊಳಗಿ
ರ್ದಱಿಗುಮೆ ತಜ್ಜನಮದುಗ್ರತರ ಬಾಧೆಗಳಂ   ೨೯

ಲಲಿತಮುಖಂ ದ್ರೋಣಾಮುಖ
ಮಲಘು ನಿತಂಬಂ ಮಡಂಬಮಿಂಬಿನ ಹಾರಂ
ಸುಲಭಾಗ್ರಹಾರಮೆನಲೇ
ನಲೆದುದೊ ಬಗೆಯಂ ನೆಗಳ್ತೆ ದೇಶಶ್ರೀಯಾ      ೩೦

ನೆಗಳ್ದಾ ದೇಶಕ್ಕಿದೊಂದಲ್ಲದೆ ಪೆಱತು ಭಯಂಗಾಣೆನೇನೆಂಬೆ ನಿನ್ನುಂ
ಬಗೆಗೊಳ್ವಾ ರೂಪ ಪೇರಾರವೆಗಳ ಬಳಿಯೊಳ್ ತಾಗಿ ಮೇಲ್ವಾಯ್ವ ಬಲ್ದ
ಟ್ಟಿಗರಂ ಪೆಣ್ಗ ಡಿದೆಂದಾರ್ದಗಿಯದುಗಿಪಱಂಗೊಳ್ವನಾವೇಗದಿಂದಾ
ವಗಮೆಯ್ತಂದೊಂದೆ ಬಿಲ್ಲಿಂ ತಡೆದು ಕಡುಪಿನಿಂ ಮಾರನೆಂಬುಗ್ರಚೋರಂ    ೩೧

ದೇಸದೊಳಂ ತನ್ಮಣಿಮಯ
ವಾಸದೊಳಂ ನೆಗಳ್ವುದನುದಿನಂ ನಂದನ ಲೀ
ಲಾಸುಭಗ ಹಂಸಗಮನ ವಿ
ಲಾಸಂ ನೆಲೆವೆತ್ತ ಪದ್ಮಿನೀ ನಿಕುರುಂಬಂ           ೩೨

ವಾರಿಜಲಕ್ಷ್ಮಿಯಂ ತಳೆದನಂತ ಸುಖಾಸ್ಪದಮಾಗಿ ಸಂತತಂ
ಕ್ಷೀರಸಮುದ್ರದಂತಿರೆ ಮನಂಗೊಳೆ ಪೆರ್ದೊಱೆಗಳ್ ಪೊದಳ್ದ ಕೀ
ಳ್ವೇರಿಗಳೊತ್ತುಗೊಂಡಡಸಿ ಭೋರನೆ ನೀರುಣಲೆಂದು ಬಂದ ಮುಂ
ಗಾರ ಮುಗಿಲ್ಗಳಂದದೆ ಕಱುಗಿದ ಕರ್ವಿನ ಕೆಯ್ಗಳೊಪ್ಪುಗುಂ         ೩೩

ಮಾಸರಮಾದವು ಬೆಳೆ ಸಿರಿ
ಯೋಸರಿಸದೆ ತಣಿಯೆ ಕುಣಿಯಲೆಂದಳವಡಲ
ಬ್ಜಾಸನ ನಡಸಿದ ಪಚ್ಚೆಯ
ಪಾಸಱೆಯೆನೆ ಪಸಲೆಗವಿದ ಕಳಮಕ್ಷೇತ್ರಂ         ೩೪

ಭಾರತಿಯರಗಿಳಿ ಗಿರಿಶ ಕುಸ
ಮಾರನ ನವಿಲಾ ವಿರಿಂಚಿಯಂಚೆ ಮನಂಗೊಂ
ಡೋರಂತೆ ಬರ್ಪುವೆನಲೇಂ
ಸಾರಮೊ ಬೆಳೆಗೈ ಪೊಲಂಗಳಾ ಜನಪದದಾ      ೩೫

ತಲೆವಿಲ್ಗೊಂಡುದ್ಗಮಾಸ್ತ್ರಂ ಕವಿದೆಸುತೆ ಕನಲ್ದಟ್ಟೆ ಕಣ್ಗೆಟ್ಟು ಬೆಂಗೊ
ಟ್ಟಲರ್ವಂಡಿಂದಾದ ಬಂಬಲ್ದೊಱೆಗಳನಳವಿಂ ಪಾಯ್ದು ಪೋಪನ್ನೆಗಂ ತ
ತ್ಕಲಮ ಕ್ಷೇತ್ರಂಗಳೊಳ್ ಪಾಮರಿಯರ ನವಲಾವಣ್ಯ ವಾರಾಶಿಯಡ್ಡಂ
ನಿಲೆ ನಿಲ್ಕುಂ ಸಿಲ್ಕಿ ಕಾಲ್ಕುಪ್ಪಳಿಸಿ ಚಳಿಸದಲ್ಲಿಂದೆ ಪಾಂಥಪ್ರತಾನಂ           ೩೬

ಬಿಡದುಗುವ ಸೊನೆಯ ಸೋನೆಯ
ಕಡುಗೆಸಱೊಳ್ ಸಿಲ್ಕಿ ಬಂದ ಮಾವಿನ ಕೆಯ್ಯಂ
ಪಿಡಿದಲ್ಲಿ ಮೆಲ್ಲ ಮೆಲ್ಲನೆ
ನಡೆವುದು ಕಣ್ಗುರುಡನಂತಿರುಪವನ ಪವನಂ    ೩೭

ಆಱಡಿಗೊಳಲೇಕಾಬನ
ದಾಱಡಿಯ ಪಕ್ಕೆ ಪಿಗ್ಗಿ ಬಿರಿಮೊಗ್ಗೆಗಳಿಂ
ಪಾಱಡಿಯೊಳೊಕ್ಕ ಕೆಸಱಡೆ
ಮಾಱಡಿಯಿಡಲಮ್ಮದಂಚೆ ಸಿಡಿಮಿಡಿಗೊಳ್ಗುಂ ೩೮

ಪಡೆಮಾತೇಂ ಮೃದುಕರಮುಂ
ಕಡುಚೆಲ್ವಪಕಂಠಮುಂ ಮನಂಗೊಳೆ ಚೆಲ್ವಿಂ
ಗೆಡೆಗೊಂಡು ಮಧ್ಯದೇಶಂ
ಬಡಮಾಗದೆ ರತ್ನಗರ್ಭೆಗೇನೊಪ್ಪಿದುದೊ       ೩೯

ನಗದೊಳಗೆಯ್ದೆ ಕತ್ತುರಿಯ ಕಂಪು ಪೊಲಂಗಳೊಳೆಯ್ದೆ ಗಂಧಶಾ
ಲಿಗಳಲರ್ದಚ್ಚಗಂಪು ಗಡಿಗೆಟ್ಟ ಬನಂಗಳೊಳೆಯ್ದ ಬಳ್ಳಿಮ
ಲ್ಲಗೆಗಳ ಕಂಪು ಪೆಂಪಿನ ಪೊಳಲ್ಗಳೊಳೆಯ್ದೆ ನಭಕ್ಕೆ ನೀಳ್ದು ಪಾ
ಯ್ವಗರುವ ಕಂಪು ಪೊಂಪುಳಿಸೆ ಕಂಪಿನ ತಾಯ್ವೊಲನಾದುದಾ ನೆಲಂ            ೪೦

ಸ್ಥಳನಳಿನ ಪಾಂಸು ಪಟಲಂ
ಗಳಂಗದೊಳ್ ಪೊಳೆಯೆ ಸುರಿಯೆ ಮದನಿರ್ಜ್ಝರ ಮಾ
ಪಳುವಳುದಪ್ಪದೆ ಮೆಲ್ಲನೆ
ಸುಳಿವುವು ಮಂದರದ ಮಱಿಗಳೆನೆ ಕಳಭಂಗಳ್  ೪೧

ತುಱುಗಿದ ದಾಡಿಮಬೀಜಂ
ಮಱಿಗಳೊಯ್ವಲ್ಲಿ ಚಂಚುವಿಂದುಗೆ ನೆಲದೊಳ್
ಮಿಱುಗುವ ಮಾಣಿಕವರಲಂ
ಕುಱುಪಱಿಯದೆ ಕರ್ಚಿ ಪೋಪುವಲ್ಲಿಯ ಗಿಳಿಗಳ್         ೪೨

ಆ ನೆಲದೊಳ್ ನೆಗಳ್ತೆವಡೆಗುಂ ಜಿನಧರ್ಮದ ಸೀಮೆ ದಾನ ಸ
ನ್ಮಾನದ ಸೀಂಎ ಸದ್ಗುಣದ ಸೀಮೆ ಸುಶೀಲದ ಸೀಮೆ ಸೌಖ್ಯ ಸಂ
ತಾನದ ಸೀಮೆ ಮಂಗಳದ ಸೀಮೆ ಮಹಂಗಳ ಸೀಮೆಯೆಂಬ ಪೆಂ
ಪಾನೆ ಸುಸೀಮೆಯೆಂಬ ಪೊಳಲಗ್ಗದ ಸಗ್ಗದ ಸೀಮೆಯೆಂಬಿನಂ       ೪೩

ನೋಡುವೊಡಿಂದ್ರನೊಳ್ ಸಮನಿಸಿರ್ದುವು ಸಾಸಿರಕಂಗಳಾರ್ತು ಕೊಂ
ಡಾಡುವೊಡಾದುವೆಯ್ದೆರಡು ಸಾಸಿರ ನಾಲಗೆ ನಾಗನಾಯಕಂ
ಗಾಡುವೆನೇನನಂಬುಜ ಭವಂಗಿಳೆಯೊಳ್ ಪಲವಾಗಿ ನೀಳ್ದ ಕೆಯ್
ಮೂಡದದೆಂತು ಮಾಡಿದನೊ ಗಾಡಿಯ ಸೀಮೆಯೆನಲ್ ಸುಸೀಮೆಯಂ        ೪೪

ಅಲ್ಲಿಯ ಸೊಗಯಿಪ ಸುದತಿಯ
ರೆಲ್ಲರೆಳೆಳ್ಳನಿತು ಚೆಲ್ವ ನೆರದಬ್ಜಭವಂ
ಮೆಲ್ಲನೆ ಮಾಡಿದನೊರ್ವಳ
ನಲ್ಲನೆ ಸಗ್ಗಕ್ಕೆ ಮುಂ ತಿಲೋತ್ತಮೆಯುಂಟೇ  ೪೫

ಕಡುಸಿರಿಯಿಂ ಪುರುಷರ್ ಪೊ
ಮಡಿಸಲ್ ಕೃಪೆಯಿಂದೆ ತಮ್ಮ ಮಧ್ಯದೊಳಿಡುವರ್
ಬಡತನಮನೆಂದೊಡಲ್ಲಿಯ
ಮಡದಿಯರ ಗುಣಕ್ಕೆ ಮಿಕ್ಕವರ್ ಪಾಸಟಿಯೇ  ೪೬

ಕಡು ನಿಡುಗಂಗಳೊಳ್ ನಿಱಿಸುಗುನ್ನತ ಪೀನ ಪಯೋಧರಂಗಳೊಳ್
ಮಡಗುಗೆ ಮೈಮೆವೆತ್ತುರು ನಿತಂಬದೊಳಿಂಬನೆ ಸಾರ್ಚುಗಬ್ಜಜಂ
ಪಿಡಿಗೊಳಗಾದ ತತ್ಪುರ ನವೋತ್ಪಲಗಂದಿಯ ಗಂಧಮೊಂದಿದಳ್
ನಡುವಿನೊಳೆಂತು ಸಂತಮಿರಿಸಿಟ್ಟನೊ ಲೋಕದ ಚೆಲ್ವನೆಲ್ಲಮಂ   ೪೭

ತ್ರೈಲೋಕ್ಯಮನಱಿವೆಮ್ಮಯ
ಲೀಲಾವಧಿ ಬೋಧಕುಚಿತಮಾಗಿರೆ ಪಲವುಂ
ನಾಲಗೆ ನೆಲಸಿರೆ ಪೇಳವೆ
ಭೂಲಲನಾನಾಥ ಪುರದ ಪರಮೋನ್ನತಿಯಂ    ೪೮

ತೀವಿರೆ ಪೆಂಪು ವತ್ಸವಿಷಯಾಚ್ಯುತ ಸಗ್ಗದ ನಾಭಿಯಂತೆ ಚೆ
ಲ್ವಾವರಿಸಿರ್ದ ಪೇರಗಳ ಪಾರಿಯ ಮಧ್ಯದೊಳುಳ್ಳಲರ್ದ ಬೆ
ಳ್ದಾವರೆಯಂತೆ ತತ್ಪುರಮದೊಪ್ಪಿರೆ ಕರ್ಣಿಕೆಯಿಂದಮಾದ ರಾ
ಜಾವಸಥಕ್ಕೆ ತಾನೆ ಚತುರಾನನನೆಂದೆನೆ ಸಂದು ಸಂತತಂ    ೪೯

ಅದನಾಳ್ವಂ ರಿಪುಭೂಮಿಭೃದ್ಭುಜ ಭುಜಂಗೋತ್ಖಾಡ ಖಡ್ಗಸ್ಫುರ
ದ್ರದನ ಸ್ತಂಭನ ಸಿದ್ಧಮಂತ್ರನುರುತಂತ್ರಂ ವಿಕ್ರಮಶ್ರೀ ಪದಾ
ಸ್ಪದ ದೋರ್ಮಂಡಲ ಮಂಡನ ಪ್ರಥಿತ ದಾನಾಸಾರ ಸಂಪೂರ್ಣ ಕೋ
ವಿದ ಲೋಕೈಕ ಮನೋರಥಿಂ ದಶರಥಂ ತಾನೆಂಬ ಭೂನಾಯಕಂ    ೫೦

ದಶದಿಗಧಿಪ ಸಭೆಯೊಳ್ ದ್ವಾ
ದಶ ರವಿಗಳನುಱದೆ ನಗುವ ವಿಕ್ರಮಲಕ್ಷ್ಮೀ
ದಶನದ್ಯುತಿಯೆನೆ ನೆಗಳ್ವುದು
ದಶರಥ ವಸುಧಾಧಿಪತಿಯ ಕೀರ್ತಿವಿತಾನಂ       ೫೧

ಕಡುಸಿರಿಯೊಳವನ ಜಸವೆ
ಣ್ಣಡಸಿಯು ಮಱೆಯೊಳ್ ಪೊದಳ್ದ ಪೊಂಬೆಟ್ಟಮನೆಂ
ದೊಡೆ ಮೀಱಿ ನಡೆವೊಡೆಡೆಯೊಳ್
ತಡೆಯಲ್ಕಾರ್ತಪುದೆ ಮಿತ್ರಭೂಭೃತ್ಪ್ರಕರಂ       ೫೨

ಬಂದಗಿದಾಸೆಯಂ ಕುಡುವ ದೊರೆಯರೊಳ್ನುಡಿ ಜೀವಮಾಗಿರಲ್
ನಂದನದೊಳ್ ಲತಾಭವನದೊಳ್ ಪುಳಿನಸ್ಥಳದೊಳ್ ನಿರಂತರಂ
ಮುಂದೆಲೆಗೊಯ್ದು ಸೀಳ್ದುರದ ಮುಯ್ಪಿನ ಪುಣ್ಗಳ ಪೆಣ್ಗಳೈದೆ ಮಾ
ನಂದೋಱೆದಿರ್ಪರೆಂದಱಿವೆ ನಾನಱಿಯೆಂ ಸೊಬಗಂ ನರೇಂದ್ರನಾ  ೫೩

ತೊಡರ್ದ ರಿಪುರಾಜ ಮಂಡಲ
ದೆಡೆದೋಱೆನಗೆಂದು ವಿಷಮ ವಿಷಧಾರೆಗಳಂ
ಬಿಡುದುಗಳ್ವ ಬಾಹುರಾಹುವ
ನಿಡುಗಾಲಿಗೆಯಂತಿರೆಸೆದುದಸಿ ದಶರಥನಾ       ೫೪

ಬಂದರಿಕರಿಕಟಮಂ ಭರ
ದಿಂದಾ ನೃಪನೆಱಗೆ ಪೊರೆದ ಮದಜಲಧಾರಾ
ಬಿಂದುಗಳಸಿಯೊಳ್ ಮಿಸುಗಿದು
ವಿಂದೀವರಮಾಲೆಗೆಱಗಿದಳಿಮಾಲೆಯವೋಲ್  ೫೫

ಖಳಕಾಂತಾಜನದೊಂದು ಕೈತವಮನಾವಂ ಬಲ್ಲನಾ ಭೂಭುಜಂ
ಗೊಳಗಾದಂತಸಿಕಾಂತೆ ಕೈವಿಡಿದು ಧಾರಾಪೂರ್ವಕಂ ಕೂರ್ಪದ
ಗ್ಗಳಿಸಲ್ ಕೋಶಮನಿಂಬುಗೊಂಡುಱದೆ ಮತ್ತೊಮ್ಮೊಮ್ಮೆ ಕೈಮೀಱೆ ತಾ
ಯ್ದಳವಿಂತಪ್ಪುರಳೆಯ್ದೆ ಪಾಯ್ದು ಕೊರಲಂ ತದ್ವೈರಿ ಭೂಪಾಲರಾ         ೫೬

ಪೊಸತೆನಲರಿ ಕರಿಬಿದುಗಳ
ಬೆಸುಗೆ ಬಿಡಲ್ ಸುರಿವ ಮುತ್ತು ಕುಸುಮಾಂಜಲಿಯಂ
ಪಸರಿಸೆ ಸಂಗರರಂಗದೊ
ಳೆಸೆದಪುದಸಿವೆಣ್ಣ ನರ್ತನಂ ಭೂಭುಜನಾ        ೫೭

ಪುರುಡೇ ಪುಣ್ಯಕ್ಕೆ ತದ್ಭೂಭುಜನ ವಿಪುಳದೋಃಖಡ್ಗನಿರ್ಘಾತದಿಂ ಸಿಂ
ಧುರ ಕುಂಭಂ ನುಚ್ಚುನೂಱಾಗೊಡೆಯೆ ಪಟುತುರಂಗಾಂಘ್ರಿ ಸಂಘಾತದಿಂ ಸಂ
ಗರ ಭೂಭಾಗಸ್ಥಳಿ ವೇದಿಕೆ ವಿದಳಿಸೆ ವಿದ್ವಿಷ್ಟ ವೀರಾಂಗನಾಕ್ರಂ
ದರವಂ ಕೈಗಣ್ಮ ಲೇನುಣ್ಮುಗುಮೊ ಜಯವಧೂಧ್ವಾಹ ಮಾಂಗಲ್ಯಕರ್ಮಂ            ೫೮

ಪೆಱತೇನವನವನೀತಳ
ವಱಿಯೆ ಜಗನ್ಮಿತ್ರಪದಮನೆಯ್ದಲ್ ಕಾಯ್ಪಿಂ
ಕಱುಬಿ ಗ್ರಹಗುಹೆಯೊಳೆಯ್ದಿದ
ರು ಱುವಹಿತ ಮಹೀಶರೆಯ್ದೆ ಕೌಶಿಕಪದಮಂ   ೫೯

ಸಿರಿವಕ್ಷಸ್ಥಳಸೀಮೆಯಂ ಧರಣಿಬಾಹಾ ಸೀಮೆಯಂ ಕೀರ್ತಿ ಸೈಸ
ತಿರೆ ಸಪ್ತಾರ್ಣವ ಸೀಮೆಯಂ ಸಮುದಿತಾಜ್ಞಾಲಕ್ಷ್ಮಿಸರ್ವೋರ್ವರೇ
ಶ್ವರ ಚೂಡಾಮಣಿ ಸೀಮೆಯಂ ಪ್ರಮುದದಿಂದಾಳ್ವನ್ನ ಮಾಳ್ವಂ ವಸುಂ
ಧರೆಯೊಳ್ ಸಂದ ಸುಸೀಮೆಯಂ ದಶರಥಂ ಸದ್ಧರ್ಮ ಕೇಳೀರತಂ   ೬೦

ವ : ಅಂತಖಂಡ ಭೂಜಾದಂಡಮಂಡಿತ ಮಂಡಲಾಗ್ರ ಸಹಾಯ ಸಫಲೀಕೃತ ನಿಜಮನೋರಥಂ ಮಹಾರಥಂ ದಶರಥಂ ರಥಾಂಗಪಾಣಿಯಂತೆ ಪುರುಷೋತ್ತಮನೆ ನಿಸಿ ಪುಣ್ಯಜನವಿರೋಧಮಂ ಪಡೆಯದೆ ಸಕಲ ಜನಾಭೀಷ್ಟ ಕಾಮೋತ್ಪತ್ತಿಗೆ ನೆಲೆಯಾಗಿ ಗೋಮಿನಿಯೊಳಂ ನಿಜ ಕಾಮಿನಿಯೊಳಂ ಸಕಲ ಭೋಗೋಪಭೋಗಮಂ ಸಲಿಸುತ್ತುಮಿರ್ಪಿನಂ ಒಂದು ದಿವಸಂ ದಿವಸಾವಸಾನಸಮಯದೊಳ್

ರವಿಯಸ್ತಂಗತನಾದನಾದುದಳಿವಾ ಲೋಕಕ್ಕೆ ಶೂನ್ಯಂಗಳು
ದ್ಭವಮಿನ್ನಾಗದವೋಲ್ ರಯಪ್ಪರರಾಗಿಂ ಬೇಗಮೆಂದೂಱಿ ಸಾ
ಱುವವೋಲ್ ಪೊಣ್ಮಿದುದೊರ್ಮೆ ದಲ್ ಸಮುದಿತೇನಸ್ತರ್ಜನಂ ಸಜ್ಜನ
ಶ್ರವಣಾಚ್ಛಾಮೃತ ಪಾವಕಂ ಜಿನಗೃಹಪ್ರಾರಬ್ಧ ಸಂಧ್ಯಾನಕಂ      ೬೧

ವ : ಅಂತಾ ಗಜಘಟಾ ಪಟಲಮನಳಱಲಂಜಿಸುವ ಕುಂಜರಾರಾತಿಯಾ ರಥದಂತೆ ರಂಜಿಸುವ ಸಂಜೆವಱೆಯಿಂಚರಂ ಕಿವಿಯಂ ಪಳಂಚಲೆಯೆ ಸಮುಚಿತ ಸಂಧ್ಯಾಸಮಯ ನಿಯಮನಿರತಂ ಕರಚರಣ ಪ್ರಕ್ಷಾಳನಂಗೆಯ್ದು ನಿಸರ್ಗಪವಿತ್ರ ಚಾರಿತ್ರಂ ಪಂಪಪರಮೇಷ್ಠಿಗಳ್ಗೆ ನಿಷ್ಠೆಯಿಂದರ್ಘ್ಯಮೆತ್ತಿ ಪರಮ ಪಾವನ ಪೂಜಾ ದ್ರವ್ಯಪರೀತಮಾಗಿ ಜಿನಮಂದಿರಕ್ಕೆ ವಂದು ಭಕ್ತಿಭರಾನತೋತ್ತಮಾಂಗಂ ರಂಗಮಂಟಪದೊಳ್ ನಿಂದು ನಿಟಿಲತಟಘಟಿತ ಕರಸಂಪುಟನಾಗಿ

ಶ್ರೀಪಾಂಡುಚ್ಛತ್ರರತ್ನಂ ಸಿತಸರಸಿಜಸಂಪತ್ತಿಯಂ ಚಾಮರಂ ಹಂ
ಸೀಪಾತಪ್ರೌಢಿಯಂ ಭಾವಲಯ ವಿಲುಳಿತಚ್ಛಾಯೆ ಕಲ್ಲೋಲವಲ್ಲೀ
ಳಾಪಾಥ ಪ್ರೀತಿಯಂ ಪುಟ್ಟಿಸುವಿನಮತಿದುರ್ವಾರ ಸಂಸಾರ ಸಂ
ತಾಪಾಪನ್ನರ್ ನಿನ್ನ ಸಾನ್ನಿಧ್ಯಮನೆಳಸುವುದಾಶ್ವರ್ಯಮೇ ಚಂದ್ರನಾಥಾ   ೬೨

ಇದಿರೊಳ್ ನಿಂದಿರ್ದೊಡಂಗಕ್ಕಡರೆ ತೊಡರ್ದ ಬಾವನ್ನದಂತಾವಗಂ ನೋ
ಡಿದ ಕಣ್ಗಳ್ಗಿಟ್ಟ ತೆಳ್ಗಪ್ಪುರದ ಸಲಗೆಯಂತಳ್ಕಱಿಂ ಕೂಡೆ ಕೊಂಡಾ
ಡಿದ ಬಾಯ್ಗೋರಂದದಿಂ ತೀವಿದ ತನಿಗೆನೆವಾಲಂತೆ ನೇರ್ಪಟ್ಟ ನಿನ್ನ
ಗ್ಗದ ದೇಹಚ್ಛಾಯೆಯಿಂ ತಣ್ಣನೆ ತಣಿಯದೆ ಲೋಕತ್ರಯಂ ಚಂದ್ರನಾಥಾ   ೬೩

ಬಹಮಾಲಾಲೇಪ ವಸ್ತ್ರಾಭರಣಮಳವಡಲ್ ಗಾಡಿಯಿಂ ರೂಢಿವೆತ್ತಿ
ರ್ದಹಿಮರ್ತ್ಯಾಮರ್ತ್ಯಲೋಕಾಧಿಪರ ಮಣಿಕಿರೀಟೋತ್ತಮಾಂಗಾಳಿ ನಿನ್ನೀ
ಸಹಜೋತ್ಪೂಜಾಂಘ್ರಿ ದಿವ್ಯನ್ನಖಕಿರಣದಿನೊಪ್ಪಿಪ್ಪುದೆಂಬಾಗಳಾ ಕಿಂ
ಬಹುನಾ ಬಣ್ಣಿಪ್ಪನಾವಂ ನಿರುಪಮ ನಿಜಸೌಂದರ್ಯಮಂ ಚಂದ್ರನಾಥಾ     ೬೪

ಪದೆದೆಂದುಂ ಬೀಸರಂಬೋಗದ ಮಲಯರುಹಂ ಬಾಡದೊಳ್ವಾಸಿಗಂ ಬಾ
ಡದ ತೆಳ್ಪೇಳ್ಪಟ್ಟೆ ಢಾಳಂಗಿಡದ ತೊಡವಿನೊಳ್ಮುತ್ತಿದೆಂಬಂತೆ ನಿನ್ನಂ
ಗದ ಕಾಂತಿಸ್ತೋಮಮಾದಂ ಕುಡೆ ತನಗೊಲವಂ ಸಂತತಂ ತಾನೆ ಕೂರ್ತ
ಪ್ಪಿದಳಾಟಂದಕ್ಷಯಶ್ರೀಯೆನೆ ಸೊಬಗರದಾರ್ ನಿನ್ನವೋಲ್ ಚಂದ್ರನಾಥಾ   ೬೫

ದಯೆಯಿಂ ನಿಶ್ಚಿಂತಮಪ್ಪಂತಿರೆ ಹೃದಯದೊಳೋರಂತಿರಿಂಬಿ‌ಟ್ಟು ನಾನಾ
ನಯದಿಂ ಸಮ್ಯಕ್ತಪೋಲಕ್ಷ್ಮಿಗೆ ತನುಮನಮಂ ತೆತ್ತು ತತ್ವಾರ್ಥ ಭಾಷಾ
ಪ್ರಿಯೆಯೊಳ್ ಮಾತಾಡಿ ಮತ್ತಕ್ಷಯರಮೊಯೊಡನುತ್ಸಾಹದಿಂ ಕ್ರೀಡಿಪೈ ಕಾ
ಮಿಯೋ ನೀಂ ನಿಷ್ಕಾಮಿಯೊ ಪೇಳೆನನುಪಮ ನಿನ್ನಂದಮಂ ಚಂದ್ರನಾಥಾ    ೬೬

ಮುನ್ನಂಗೋದ್ಭುತನಂಬಿಂಗಳವಳಿದರೆವೆಣ್ಣಾಗುರಂಬೊಟ್ಟು ವೆಟ್ಟಂ
ಮುನ್ನೀರಂ ಪೊಕ್ಕ ದೇವರ್ಕಳನಹಹ ಮಹಾದೇವರೆಂದೆಂಬವರ್ಗಾ
ನಿನ್ನೇನೆಂಬೆಂ ತಪಸ್ತೇಜದಿನರಲಸರಲ್ ಸೀಯೆ ಕಂದರ್ಪನಂ ಗೆ
ಲ್ದೆನ್ನಂ ಮಚ್ಚಿಪ್ಪ ನೀನಲ್ಲದೆ ಮಹಿಗೆ ಮಹಾದೇವರಾರ್ ಚಂದ್ರನಾಥಾ    ೬೭

ನಿನಗಂ ಸ್ವರ್ಣಾದ್ರಿ ಪೀಠಾಗ್ರದೊಳತಿಮುದದಿಂ ಮಜ್ಜನಂ ಮಾಡಿಪಂದೊ
ಯ್ಯನೆ ಮೆಯ್ಯಂ ನಿನ್ನಮೀವಾಲ್ವೊನಲ ಪನಿ ಪಗಿಲ್ತಂದದಿಂ ಪತ್ತಿರಲ್ ಮು
ತ್ತಿನ ಜೊಂಪಂದೊಟ್ಟ ನಿನ್ನಿಂ ಜನಿಸಿದೊಸಗೆಗೆಂಬಂತಿರಾನಂದದಿಂ ನ
ರ್ತನಮಂ ಮಾಳ್ವಿಂದ್ರನೆಂದುತ್ಸವವವನಿಗದೇಂ ವಂದ್ಯಮೋ ಚಂದ್ರನಾಥಾ   ೬೮

ಪ್ರಿಯಮಂ ಸಚ್ಚಕ್ರದೊಳ್ ಪುಟ್ಟಿಸುವ ಜನಮನೋಜಾತ ಸಂತಾಪಮಂ ನಿ
ಶ್ಚಯದಿಂದಂ ತೂಳ್ವ ನಾನಾ ಭವಜಲನಿಧಿಯಂ ಬತ್ತಿಪೋರಂತೆ ಪದ್ಮಾ
ಶ್ರಯಮಾಗಿರ್ಪಗ್ಗದಾಶಾವಶಮೆನಿಸದೆ ಲೋಕಾಗ್ರಮಂ ಪೊರ್ದುವೀ ನಿ
ನ್ನಯ ಪಾದಂ ಚಂದ್ರಪಾದಂಗಳಿನತಿಶಯಮೆಂದೊಂದಿಪೆಂ ಚಂದ್ರನಾಥಾ      ೬೯

ವ : ಎಂದು ದರ್ಶನಸ್ತವನಂಗೆಯ್ದುಂ

ಜಳಮಳಯಜ ಕಳಮಾಕ್ಷತ
ಕುಳಕುಸುಮ ಚರುಪ್ರದೀಪ ಧೂಪಾದ್ಯ ಫಲಾ
ವಳಿಯಿಂದರ್ಚಿಸಿದಂ ನಿ
ರ್ಮಳಚಿತ್ತಂ ಚಂದ್ರನಾಥನಂ ನರನಾಥಂ           ೭೦