ವ : ಅಂತಾ ತ್ರಿಲೋಕ ಚೂಡಾಮಣಿಯಂ ರಾಜಚೂಡಾಮಣಿ ಮನಂದಣಿ ಯಲರ್ಚಿಸಿ ಮಣಿಮಕುಟದೊಳ್ ತಳೆದ ಗಂಧೋದಕದ ಬಂಬಲ್ ಬಾಂದೊಱೆಯ ಬರಿವೊನಲಂತೆ ನೆನೆಯಿಸೆ ತಳಿವ ಶೇಷಾಕ್ಷತಂ ನಕ್ಷತ್ರಲಕ್ಷಿಯನಾಕ್ಷೇಪಂಗೆಯ್ಯೆ ಸುರನಗಮೆ ನಡೆದುಬರ್ಪಂತೆ ಬಂದೊಯ್ಯನೊಯ್ಯನೊಸರ್ವಿಂದುಕಾಂತದ ಮೊಗಸಾಲೆಯ ಸೂಸಕದ ನೇರ್ಪನಿಗಳಂಗಸೌರಭಕ್ಕೆಱಗುವ ಪಱಮೆವಱಿಗಳ ಗಱಿಯ ಗಾಳಿಯಿಂ ತಣ್ಣನೆ ತನುವಂ ನಂಕುಳಿರ್ಕೋಡಿಸ ಜಿನೇಂದ್ರನಂಕಮಾಲೆಯಂ ಪಾಡುವ ಜೈನಗಾಮಿನಿಯರ ರಸಗೇಯ ಮನಾಲಿಸುತ್ತುಂ ನೋಡುವಾಗಳ್

ಕಳಧೌತಾಯತಯಷ್ಟಿಗಳ್ ಪರಿವವೋಲ್ ಕೂರ್ಪಿಂ ಕರಶ್ರೇಣಿ ಪ
ಜ್ಜಳಿಸಲ್ ಕಜ್ಜಳದಂತೆ ಪಾಯ್ವ ತಮದೊಳ್ ತಳ್ಪೊಯ್ಯೆ ಬೆಳ್ಪಭ್ರಮಂ
ಡಳಮಂ ಕಣ್ಬರಿಗೊಂಡಲಂಕರಿಸಿದತ್ತಾ ಖಂಡಲಾಶಾಸ್ಯಮಂ
ಡಳಮಂ ಮೌಕ್ತಿಕಕುಂಡಲಂಬೊಲಿದಿರೊಳ್ ಪೀಯೂಷರುಙ್ಮಂಡಲಂ          ೭೧

ಕಣ್ಬರಿಗೆ ಬಾಂದೊಱೆಯ ಕಿಱು
ನುಣ್ಬುಳಿಲೆಳೆಗಱಿಯ ಸಿರಿಗಿರುಳ್ ಪಾಸಿದರ
ಲ್ನುಣ್ಬಸೆಯೊಸೆದು ಚಕೋರಿಗ
ಳುಣ್ಬಗಲೆನಲಿಂದುಬಿಂಬಮಾಯ್ತವಲಂಬಂ     ೭೨

ತರದೊಳ್ ತಾರಗೆವೆಂಡಿರೊಪ್ಪಿರೆ ಕಳಾಸಂರಂಭಮಿಂಬಾಗೆ ಸಂ
ದಿರೆ ಚಂದ್ರತಪಕೀರ್ತಿ ಸತ್ಕುವಲಯ ಶ್ರೀವಿಭ್ರಮಂ ಪೊಂಗೆ ಪಿಂ
ಗಿರೆ ವಿದ್ವಿಷ್ಟತಮಂ ಚಕೋರಪರಿವಾರಂ ಮೆಚ್ಚೆ ಮೈವೆಚ್ಚೆ ಕೂ
ರ್ತಿರೆ ಕಣ್ಗೊಂಡುದಖಂಡ ರಾಜವಿಭವಂ ರಾಕಾನಿಶಾಕಾಂತನಾ       ೭೩

ವ : ಅಂತು ಪರಿಪೂರ್ಣ ರಾಜವಿಭಮನಾ ರಾಜವಿಭವಮಂ ನೋಡಿ

ಚಂದನ ಕರ್ಪೂರಾದಿಗ
ಳಿಂದಮದೇಂ ಬಡವರೊಡೆಯರೆನ್ನದೆ ಸುಲಭಂ
ಸಂದೆಗಮೆ ಸಕಲಜನಾ
ನಂದಕರಂ ಚಂದ್ರನಲ್ಲದಿಂ ಪೆಱನಾವಂ            ೭೪

ಸುಮನೋಮಾರ್ಗಣನಂ ನಿಜಪ್ರಿಯನನಾರ್ಪಿಂ ಕಾಯ್ದು ಕಣ್ಗಿಚ್ಚಿನಿಂ
ದಮೆ ಸುಟ್ಟಗ್ರನನೆಯ್ದೆ ಮೂದಲಿಸುವಂತಾ ಕಾಮನಂ ಕಾದು ಮಾ
ರಮೆ ನಣ್ಪಂ ನಡೆನೋಡಿನೋಡೆ ಚಲದಿಂದಂ ನೆತ್ತಿಯೊಳ್ ತನ್ನ ಪಾ
ದಮನಿಟ್ಟಂಕದ ಬಿಂಕದಿಂದುಗಿದಿರಾಂ ಪೋಳ್ಗಂಡನಿನ್ನಾವನೋ    ೭೫

ವ : ಎಂದರಸಂ ಸರಸನಾಗಿ ಬಗೆಯೊಳ್ ಭಾವಿಸುತ್ತಿರ್ಪಾಗಳ್

ಅದನೇನೆಂದಪೆನೋವೋ ಭಾವಿಸೆ ವಿಚಿತ್ರಂ ದೈವಸೂತ್ರಂ ನಿಜಾ
ಭ್ಯುದಯಶ್ರೀ ಪರಿಪೂರ್ಣವೃತ್ತರುಚಿ ಸನ್ಮಾರ್ಗಾಶ್ರಯಂ ನಾಡೆ ತ
ನ್ನಿದಿರೊಳ್ ಬೂದಿಯ ಬೊಟ್ಟಿನಂತೆ ಬಯಲಾಗಲ್ ಭೋಂಕನಂದೌಂಕಿಕೊಂ
ಡುದು ಕಂಡಾ ಸಿತಭಾನುವಂ ಬಗೆಗಿಡಲ್ ಸ್ವರ್ಭಾನು ಬಂದಾಕ್ಷಣಂ ೭೬

ಒಯ್ಯನೆ ಬಂದಂಬರದೊಳ್
ಮೆಯ್ಯಂ ಮಱೆಮಾಡಿ ಕಲಸಿದಮೃತದ ತುತ್ತಂ
ಸುಯ್ಯದೆಳೆದುಂಬ ಕಾಲನ
ಕೆಯ್ಯೆನೆ ನಿಮಿರ್ದತ್ತು ರಾಹು ಸಸಿವಿಡಿದೆಡೆಯೊಳ್          ೭೭

ನುಂಗುವ ರಾಹುವ ವದನದ
ತಿಂಗಳ್ ನೆನೆಯಿಸಿದುದಾಗಳಂತಿರೆ ಕಳೆಗಳ್
ಪಿಂಗೆ ಮಸಮಸನೆ ಮಸುಳ್ಪರಿ
ವಿಂಗಳದೊಲೆವಾಯ್ಗೆ ಬೀಳ್ವ ಬೆಳ್ದಾವರೆಯೊಲ್          ೭೮

ಅದು ನೋಡಲ್ ನೋಡಲಡಂ
ಗಿದುದರಸನ ಮುಂದೆ ಕೊಳ್ವ ರಾಹುವಿನ ಮಹಾ
ವದನೋದ ಪಾತ್ರದೊಳ್ ಮುಳು
ಗಿದ ಘಳಿಗೆಯ ಬೆಳ್ಳಿವಟ್ಟಲೆನೆ ವಿಧುಬಿಂಬಂ     ೭೯

ಬಂದಿನಿಸಾನುಮೊಯ್ಯನೆಮೆಯಿಕ್ಕದ ಮುನ್ನಮೆ ನೆಟ್ಟನೀಗಳಿ
ರ್ದಿಂದುರ ಬಿಂಬಮಂಬುಧಿಯೊಳಳ್ದವೊಲಿಂತಿದೆ ಮಾಯವಾಗಿ ಪೋ
ಯ್ತೆಂದು ಕಿರೀಟರತ್ನ ಕಿರಣಾಳಿ ಸುಪರ್ವಧನುರ್ವಿಳಾಸಮಂ
ಮುಂದಿದೆ ಮೂಗುವಟ್ಟು ತಲೆದೂಗಿದನಾಗಳಿಳಾಧಿನಾಯಕಂ       ೮೦

ಆ ಪರಿಪೂರ್ಣೇಂದುಗೆ ನೆಗೆ
ಳ್ದೀಪರಿಭವವೆತ್ತಣಿಂದೆ ಬಂದುದೆನುತ್ತು
ರ್ವೀಪತಿ ಬಗೆಯೊಳ್ ಭಾವಿಸಿ
ಭಾಪುರೆ ವಿಧಿಯೆಂದು ನೊಂದು ಸೈವೆಱಗಾದಂ  ೮೧

ತಳ್ವದೆ ತವಕಿಪ ರಾಹುಗೆ
ಬಳ್ವಳ ಬಳಸಿರ್ದ ತಾರೆ ಮಸುಳಿಸೆ ಚಂದ್ರಂ
ಕೇಳ್ವೋದನೆಂದೊಡಿಳೆಯೊಳ್
ಕೇಳ್ವರ್ ಮರುಳಲ್ತೆ ಚಂದ್ರತಾರಾಬಲಮಂ      ೮೨

ಅಮೃತಾಂಭೋನಿಧಿ ತನ್ನ ಪುಟ್ಟುವನೆ ಗೋತ್ರಂ ನೋಳ್ಪೊಡಾತ್ರೇ
ಯಮೆಲ್ಲಮರರ್ ಬಂದೆರೆವರ್ತಿಗಳ್ ನಿಜಶರೀರಂ ಸತ್ಕಳಾಪೂರ್ಣಮು
ದ್ಗಮಬಾಣಂ ಪ್ರಿಯಬಂಧು ತನ್ನಯ ಬಲಂ ಲೋಕಕ್ಕೆ ಮೈಗಾಪೆನಿ
ಪ್ಪ ಮಹತ್ವಂ ನೆಱೆದಿಂದುಗಿಂದು ನೆಗಳ್ದೀ ಕೋಡೆತ್ತಣಿಂ ಮೂಡಿತೋ       ೮೩

ವ : ಎಂದು ವಿಚಿತ್ರ ರಸಾನುವಿದ್ಧಮಾದ ಚಿತ್ರಮೆ ವೈರಾಗ್ಯಚಿತ್ರಕ್ಕೆ ಭಿತ್ತಿಯಾಗೆ

ಕಿಱಿಯಂದು ಲೋಕಮೆಱಗುವ
ನೆಱದಡೆ ವಿಬುಧಾಳಿ ತುಷ್ಟಿವಡುವಮೃತಕರಂ
ಗಱಗೇಡಾದುದನಱಿದಱಿ
ದೆಱಗುವರೇಕಕಟ ರಾಜಪದವಿಗೆ ಮನುಜರ್     ೮೪

ಏಮಾತಮೃತಮನುಂಡಜ
ರಾಮರರೆನಿರ್ಪನಾವನಿಂ ದೇವರೆನಿ
ಪ್ಪಾ ಮಹಿಮೆಯ ವಿಧುಗಾಯ್ತುತ
ಮೋಮುಖದಿಂದಳಿವು ತಮದಿನಳಿಯದನಾವಂ  ೮೫

ಮುಂಚೆ ಚತುರ್ಭೂತಂಗಳ
ಸಂಚಯದೊಳ್ ನಾಡೆ ಕೂಡಿದಾಗಳ್ ಮನಮಂ
ವಂಚಿಸಲೇಕಿನ್ನಿಳೆಯೊಳ್
ಪಂಚತ್ವಮನಕಟ ಪಡೆಯದಿರ್ಪನೆ ಜೀವಂ        ೮೬

ನವರಂಧ್ರಮೆಂಬ ಕನ್ನಂ
ಸವೆದಿರಲೊಡಲೆಂಬ ಮನೆಯನೊಯ್ಯನೆ ಪೊಕ್ಕಾ
ಜವನೆಂಬಾ ಱಡಿಗಳ್ಳಂ
ತವಕದಿನಸುವೆಂಬ ವಸುವನೊಯ್ಯದೆ ಮಾಣಂಸ            ೮೭

ಸಾರೆಯ ಸಚಿವರ್ ಭಯಮಂ
ಬಾರಿಪ ಬಲ್ಬಂಟರಗಿದುಕೊಳ್ವಗ್ಗದ ಕಾ
ಳೋರಗನಂ ಬಾರಿಪರೆನೆ
ಬಾರಿಸಲಾರ್ತಪುವೆ ಬಯಲಮಂತ್ರಂ ತಂತ್ರಂ     ೮೮

ಮಿಸುಗುವೊಡಲ್ ಮಿಂಚಾರಯೆ
ಬಿಸಿಲರಿಸಿನಮಮರ್ದ ಜವ್ವನಂ ಜಾಣರ್ ಭಾ
ವಿಸಿ ಬಗೆದು ನೋಡೆ ನೆಲೆಗೆ
ಟ್ಟುಸಿರೆಂಬುದೆ ಗಾಳಿವಾತದಂ ನಂಬುವುದೇ     ೮೯

ಮಲಯಜಮನೊಟ್ಟಿ ಚಾಮರ
ದೆಲರಿಂದಂ ಬೀಸಿ ತಳ್ತ ಬೆಳ್ಗೊಡೆಯಂ ಕೆ
ಯ್ವಲದೆ ನೆಳಲ್ಮಾಡಿದ ಕ
ಕ್ಕುಲಿತೆಯೆ ನಿಂದಪುದು ನಿಲ್ಲದುಸಿರವನಿಪರಾ  ೯೦

ತೊಂಡು ತೊಳಸುಗರನವನಿಯೊ
ಳಂಡಲೆದಗಲಕ್ಕೆ ಪರಿದು ಕಡಯೊಳ್ ತನ್ನಂ
ಗಂಡುಗಿಡೆ ಪಿಡಿದು ಕಾಲಂ
ಕೊಂಡೊಯ್ವಂದರಸನಾಣೆ ಕೋಣೆಯೊಳಳಿಗುಂ            ೯೧

ಪೊಣ್ಮೆ ಭಯಂ ಭೂಮಿಯೊಳಿರ
ಲಣ್ಮದೆ ಪರಿದುದ್ದಮೇಱಿಕೊಂಡನವರತಂ
ಕಣ್ಮುಚ್ಚದಿರ್ಪ ಸುರರಂ
ಘಣ್ಮನೆ ಕೊಂಡೊಯ್ವ ಕಾಲನೊಯ್ಯನೆ ನರರಂ            ೯೨

ಸಾವನ್ನೆವರಂ ಸೈತಿರ
ದಾವನೊಳಂ ಶೈಶವಂ ಯುವತ್ವಂ ಮುಪ್ಪೆಂ
ಬೀ ವಿಧಿವಡೆದಿರ್ದಲ್ಲಿಯೆ
ಮೂವಣ್ಣಂಬರಿಪ ದೇಹದೊಳ್ ಮೋಹಿಪುದೇ ೯೩

ನರರೊಡಲಡವಿಗಳಿರ್ಪೋ
ಸರಿಸಲ್ ಕಡುಕೆಯ್ದು ಕಾಯ್ದು ಕಾಲನಿದಾಘಂ
ಬರೆ ನರೆಗಳ್ ಪೋಲವೆ ತರ
ತರದಿಂ ತಲೆವೊಲದೊಳಾಗಳೊಣಗಿದ ಪುಲ್ಲಂ  ೯೪

ಕೆಂಬಲ್ಲನೊಸೆದು ರಸದಾ
ಳಿಂಬದ ಬಿತ್ತೆಂದು ಪೊಗಳ್ವ ಕವಿಗಳ ಮಾತಂ
ನಂಬಿದೆನಲ್ಲದೊಡೇಂ ಗಡ
ತಿಂಬುದೆ ಕಳಿವದಱೊಳೆಱಿಗಿ ಖಳಕಾಲಶುಕಂ    ೯೫

ಬಱೆಯೆ ವಯಸ್ಸಲಿಲಮೊಡ
ಲ್ದೊಱೆದಡಿಯೊಳ್ ನಿಂದು ನಿಮಿರ್ದು ವಾರ್ಧಿಕಬಕನಾ
ಯ್ದಱಸಿ ಕುಱುಂಕುವ ಕಣ್ಣಂ
ಮಿಱುಗುವ ಮೀನೆನ್ನದಿನ್ನದೇನೆಂದಪುದೋ     ೯೬

ತರಕಾಱಂಬೊಲಡರ್ತು ಮುಪ್ಪಡಿಸಿ ಬೇಗಂ ಬಂದು ಕೈಕಾಲ್ಗಳಂ
ಸೆರೆಯೆಂಬಗ್ಗದ ಪಗ್ಗದಿಂ ಬಿಗಿದು ನಂಟರ್ನೋಡ ನೋಡಲ್ ಜವಂ
ಗಿರದೊಯ್ದಾಗಳೆ ಮಾಱಲೆಂದು ತಲೆಯೊಳ್ ಪುಲ್ಗಟ್ಟಿದಂತಿರ್ದ ಬೆ
ಳ್ನರೆಯಂ ಕಂಡಕಟೇಕೆಮಾಡುವನೊ ಮತ್ತಂ ಮಾನವಂ ಮಾನವಂ  ೯೭

ಓವೊ ನಿಜದೇಹ ಮೋಹಮ
ನೇವೇಳ್ವುದೊ ಕೆಲದೊಳಿರ್ದ ಕಿಸುಗುಳಮಂ ಕಂ
ಡೇವೈಸುವ ಜೀವಂ ಪರಿ
ಭಾವಿಸನೇಕೊಡಲನಕಟ ಶುದ್ಧನ ಮಡಲಂ      ೯೮

ಎಂದು ಮರೀಚಿಕಾಜಲಮನೀಸುವನಂಬರ ಪುಷ್ಪಮಾಲೆಯಂ
ಸಂದಿಸಿ ಕಟ್ಟುವಂ ದಿವಿಜಚಾಪದ ನಾರಿಯನೇಱಿಪಂ ದಿಟ
ಕ್ಕಂದವನೊಳ್ ಸ್ವಯಂವರವಿಳಾಸದಿನೋತಿಱಗಿರ್ಪಳಲ್ಲದೇ
ನೆಂದೊಡಮೊಲ್ವಳೇ ಚಪಳೆ ಗೋಮಿನಿ ಕಾಮಿನಿಗಾಳುಗಂಡರಂ      ೯೯

ಬಂದೆಲ್ಲಿಯಾನುಮೊರ್ವಂ
ಸಂದಿಸಿ ಪಗೆಗೊಲ್ಗುಮೆದೊಡೆಡೆವಿಡದೊಡಲೊಳ್
ನಿಂದುಱುವ ಱುವರ್ ಪಗೆಗಳ್
ಕೊಂದೀ… ಸಿರಿಯ ಮಱಪಿನೊಳ್ ಮಾನಸರಂ  ೧೦೦

ಪೃಥ್ವಿ || ಕುಲಂ ಕುಲಟೆಯರ್ಕಳಿಂದನಮಪಾಯದಿಂದೀ ವಯೋ
ವಿಲಾಸಗತಿಕಾಲದಿಂ ವಿವಿಧ ವಿದ್ಯೆ ಸಂವಾದದಿಂ
ಪೊಲಂಬಳಿದು ಪೋಪುದಂ ಕಳಿಯೆ ಕಂಡು ಕಂಡಕ್ಕಟಿಂ
ತಲಂಪು ಮಿಗೆ ಮಾಳ್ಪುದೇ ದುರಭಿಮಾನವಂ ಮಾನವಂ  ೧೦೧

ಮದದುದ್ರೇಕದಿನುರ್ಕಿ ಸೊರ್ಕಿ ಪಳಿಗಂ ಪಾಪಕ್ಕಮುಳ್ಳಳ್ಕಿದಾ
ಡದ ಗೊಡ್ಡಾಟಮನಾಡಿ ಕೂಡಿ ಬಯಲಾರ್ತಕ್ಕರ್ಥಮಂ ಸಿಲ್ಕಿ ಕಾ
ಲದ ಕೆಯ್ಯೊಳ್ ಕೆಡೆಪಟ್ಟ ದುರ್ನರಕದೊಳ್ ಬಿರ್ದಲ್ಲಿ ಪಾಳೂರ ಕೋ
ಳದ ಕಳ್ಳಂಗೆಣೆಯಾಗಿ ಜೀವನಕಟಾ ಮೋಕ್ಷಕ್ಕೆ ಗೆಂಟಾಗನೇ            ೧೦೨

ಕಟ್ಟೋಗರವಿಲ್ಲದೆ ಗಡ
ಬಟ್ಟಿ ಗರಡಿಯೆತ್ತರಡಸಿ ಕಡು ನಿಡುವಯಣಂ
ಮುಟ್ಟಿರೆ ಸಂಬಳದಱನಂ
ಕಟ್ಟದೆ ಮಱುಭವದ ಬಿಟ್ಟಿಪೋಪವನೆಗ್ಗಂ     ೧೦೩

ಮನಮೆರಡಂತೆ ಮುಂಬರೆಯದೊಳ್ ಪರಿದಾಯುವ ತೀರ್ಕೆಯಲ್ಲಿ ತೊ
ಟ್ಟನೆ ಬಗೆಬೆಚ್ಚಿತೆನ್ನ ತೆಱನಂ ಸವೆದೊಯ್ಯನೆ ಬಪ್ಪೆನೊಂದೆರ
ಳ್ದಿನದೊಳಗನ್ನೆಗಂ ಪದೆದು ಸೈರಿಪುದಾಂ ಬರಲೊಲ್ಲೆನೆಂದು ಮು
ಟ್ಟಿನ ನೆವದಿಂ ತಗುಳ್ದು ತಲೆದೂಗಿದೊಡಂತಕನೊಯ್ಯದಿರ್ಪನೇ    ೧೦೪

ವ : ಎಂದು ಸಂಸಾರ ಶರೀರ ಸಂಪದಾದಿಗಳಧ್ರುವಮಂ ಭಾವಿಸಿ

ಕಿಡುವೊಡಲ ಬಲ್ಪನಳಿಪಿಂ
ಕಿಡಿಸದೆ ತಪದಿಂದೆ ತವಿಸಿ ಸವೆಯದ ಸುಖಮಂ
ಪಡೆವುದೆ ಕಜ್ಜಂ ಸಜ್ಜನ
ರ್ಗೆಡೆವಾತಿನ್ನೇನೆನುತ್ತೆ ಮತ್ತಂ ಮನದೊಳ್      ೧೦೫

ಕರಣಂಗಳ್ ಪಟುಗಳ್ ಜಿನೇಂದ್ರಪದ ಮತ್ತಂ ಸಿದ್ಧಮಾಯ್ತಾಹ ಸೈ
ತಿರೆ ರತ್ನತ್ರಯಮೆಂಬ ರಕ್ಕೆವಣಿ ಸಾರ್ದತ್ತೇಕೆ ತಳ್ವಿಗೆನ್ನೆನುಸ
ತ್ತರಸಂ ಕಾಲಪಿಶಾಚನಂ ತಗುಳ ತೂಳ್ದಟ್ಟಿ ಕಟ್ಟೀವದೇಂ
ಪರಮಾರ್ಥೈಕ ನಿಧಾನಮಂ ಪಡೆವೆನೆಂಬುದ್ಯೋಗಮಂ ತಾಳ್ದಿದಂ  ೧೦೬

ವ : ಅಂತು ಪರಮವಿರಕ್ತಿ ರಮಾನುರಕ್ತಚಿತ್ತನಾನಕ್ತಾವಸಾನಮಂ ಪಾರ್ದುದಯದೊಳಾಪ್ತ ಬಾಂಧವ ಪ್ರಧಾನ ಪುರುಷರಂ ಕರಸಿ ನಿಜವೈರಾಗ್ಯ ವ್ಯವಸ್ಥೆಯನೆರಡಿಲ್ಲದ ಱಿಪಿ

ಪರಮ ವಿರಕ್ತಿಯಂ ಕೊಳತ ಪುಲ್ಗೆಣೆಗೊಂಡು ಸಮಸ್ತ ಧಾತ್ರಿಯಂ
ಧರಣಿದನಾಸೆಗೆಯ್ಯದಿರಲೊಯ್ಯನೆ ಕೈಮುಗಿದೆಂದನಂದನೊ
ತ್ತರಿಸಿ ಮುಖಾಬ್ಜದೊಳ್ ದಶನದೀಧಿತಿ ಮಂಜಿನ ಪುಂಜಮೆಂಬಿನಂ
ಪೊರೆಯೆ ಸುಮಂತ್ರನೆಂಬ ನಿಜಮಂತ್ರಿ ಸುಧಾಶನಮಂತ್ರಿ ಸನ್ನಿಭಂ   ೧೦೭

ದೇವ ಸಮಂತು ನೀ ನೆಗಳ್ದ ಕಜ್ಜಮೆ ಸಜ್ಜನಮಾಗದೀಗಳಾಂ
ಭಾವಿಸೆ ಜೀವಮೆಂಬ ಪುರುಳುಳ್ಳೊಡೆ ತತ್ಸುಖಹೇತುವಾದ ಲೋ
ಕಾವಳಿಯಿಕ್ಕೆಗಿಕ್ಕುವಮದಿಲ್ಲದೆ ತತ್ಪರಲೋಕಮಂಬರೇಂ
ದೀವರ ಗಂಧದೊಂದೊರೆಗೆ ಬಾರದೆ ಭಾವಿಸೆ ನೋಡೆ ಬಲ್ಲವಂ     ೧೦೮

ಮೊದಲೊಳ್ ಪುಟ್ಟುವ ಕಾಲದೊಳ್ ಪೊಱಗಣಿಂದೈತಂದುದಂ ಸಾಯ ಸೈ
ತಿದಿರೊಳ್ ನೆಟ್ಟನೆ ಪೊರ್ದುದಂ ಚಳಿಯದಂಗೋಪಾಂಗಮಂ ಚಲ್ಲಿ ಮಾ
ಡಿದೊಡಂ ತಳ್ತೊಳಗಿರ್ದೊಡಂ ಕಡೆಗದೆಂದುಂ ತದೇ
ಹದಿನಾತ್ಮಂ ಪೆಱನೆಂಬ ಬುದ್ಧಿ ನಿನಗೀಗಳ್ ಸಾರ್ದುದುರ್ವೀಶ್ವರಾ ೧೦೯

ವ : ಎಂದು ದೇಹಾತ್ಮವಾದುಮನೆ ಪಡಿಯಚ್ಚುವಿಡಿದು ಮತ್ತಂ

ತಡೆಯದೆ ಮದಶಕ್ತಿಯನಾ
ಗುಡಾನ್ನ ಪಿಷ್ಟಾಂಬು ಧಾತಕೀ ಸಂಯೋಗಂ
ಪಡೆವಂತೆ ಶಕ್ತಿಯಂ ಪಡೆ
ವೊಡಲೆ ಚತುರ್ಭೂತಯೋಗದಿಂ ಚರಿಯಿಸುಗುಂ           ೧೧೦

ನೆನೆದಿಲ್ಲದ ಪರಸುಖಮಂ
ಕನಸಿನ ಭತ್ತಕ್ಕೆ ಗೋಣಿವೊಯ್ವವೋಲಿಹದೊಳ್}
ತನಗತನುಸುಖಮನೀವೀ
ತನುವಂ ತಪಕೊಡ್ಡಿ ಗೊಡ್ಡುಮಾಡುವನೆಗ್ಗಂ ೧೧೧

ಎಳೆಮಿಂಚಂ ತೂಳ್ವ ತೆಳ್ಗೆಯ್ ತೊಳಗುವ ಸುಲಿಪರ್ ತೊಂಡೆವಾಯ್ ನೀಳ್ದಕಣ್ಗಳ್ ನಳಿತೋಳ್ ತೊಂಗಲ್ಗುರುಳ್ ಪೊಂಗಿದ ನೆಲೆಮೊಲೆ ಕಣ್ಗೊಳ್ವ ಪೆಣ್ಗಳ್ ಮನಂಗೊ ಳ್ವಳಿಪಿಂ ಕೂರ್ತಪ್ಪುವಾರ್ಪಿಂ ಮುಳೀವ ತಿಳಿವ ಸಂಸಾರಸೌಖ್ಯಂಗಳಂ ಮೈ ತಳೆವನ್ನಂ ರಾಗದಿಂ ಭೋಗಿಸದರಸ ತಪಕ್ಕಾಂಪನಿಂ ಗಾಂಪನಾವಂ       ೧೧೨

ಕಟ್ಟಿದಿರ ಸುಖಮನಿನಿತಂ
ಬಿಟ್ಟೀಗಳೆ ಬರ್ಪುದೆಂದು ಬರೆದಱಿಗುಱುಪಂ
ಕೊಟ್ಟು ಪರಲೋಕದೋಲೆಯ
ನಟ್ಟಿದರಾರಾರ ಪಿತೃಪಿತಾಮಹರರಸಾ          ೧೧೩

ಧರೆಯೊಳ್ ಮುನ್ನಱಿಯೆವಿದಂ
ಧರಣೀಶ್ವರ ನಿನ್ನ ಕಾಲದೊಳ್ ಕಡುಗೂರ್ಪಂ
ಕುರಿಸಿರ್ದ ಮೊದಲ ಕೋಡುಂ
ಪರಲೋಕದ ಬೀಡುಮೀಗಳೊಡವುಟ್ಟಿದುವೇ  ೧೧೪

ಎಲ್ಲಿತ್ತೊ ಸಗ್ಗಮಮಱಿವೊಡ
ದೆಲ್ಲಿತ್ತೋ ನರಕವಕಟ ಬಱಿದಱಿ ಮರುಳರ್
ಮೆಲ್ಲನೆ ಕಿವಿಯೊಳ್ ಪೇಳ್ದುದೆ
ಗೆಲ್ಲಂ ನಿನಗಾಗಿ ನೀಗದಿರ್ ನಿಜಸುಖಮಂ        ೧೧೫

ಮೊದಲೊಳ್ ಲಜ್ಜೆಯನೆಯ್ದೆ ಸುಟ್ಟು ಕುರುಳಂ ಕೊಟ್ಟುಟ್ಟುದಂ ಬಿಟ್ಟು ಲೋ
ಕದ ಹಾಸ್ಯಕ್ಕೊಳಗಪ್ಪ ಬೂತುಗಳ ಮಾತೇಂ ಸತ್ತು ಕಾಣ್ಬೊಂದು ಸ
ಗ್ಗದಿನಿರ್ದಲ್ಲಿಯೆ ನಾಡೆ ಕಾಣ್ಬ ನರಕಂ ಲೇಸೆಂದು ಮೈಸೋಲ್ವ ಲೋ
ಕದ ಬಾಯ್ಗಾದೆಯನೆಯ್ದೆ ಕೇಳ್ದುಮೆಲೆ ಧಾತ್ರೀನಾಥ ಬೇಳಪ್ಪುದೇ            ೧೧೬

ಈ ವಿಧದ ದೃಷ್ಟಸುಖಮಿರೆ
ಭಾವಿಸದೆಡೆಗೊಟ್ಟದೃಷ್ಟ ಫಲಮೊಲ್ವಂ ಪಾ
ಲ್ತೀವಿದ ಮೊಲೆಯಿರೆ ಮತಿಗೆ
ಟ್ಟಾವಿನ ತುದಿಗೋಡನೀಸಿ ಕಱೆಯದೆ ಮಾಣಂ            ೧೧೭

ವ : ಎಂದು ಸುಮಂತ್ರಂ ಸುರಮಂತ್ರಿಯ ಮಾತನೆ ಪ್ರತಿಷ್ಠಗೆಯ್ಯಲಕಳಂಕ ಚರಿತ್ರಂ ಸಕಲ ತತ್ವವೇದಿಯಪ್ಪುದಱಿನರಸನೀ ಮಾತು ಸುಮಂತ್ರನೆಂಬ ಪೆಸರು ನಿನ ಗುಚಿತ ಮಾಯ್ತೆಂದಾತ್ಮತತ್ವಮಂ ಸಮರ್ಥಿಸುವ ಬಗೆಯಿನಿಂತೆಂದಂ

ವಿಪುಳ ಸುಖದಂದದಿಂ ನಿಜ
ವಪುವಿನೊಳಾತ್ಮನೆ ವಲಂ ಸ್ವಸಂವೇದ್ಯಂ ತೋ
ರ್ಪುಪಚಿತ ಪರಾಂಗದೊಳ್ ಬು
ದ್ಧಪೂರ್ವಚರಿತಂಗಳಿಂ ಸಮಂತನುಮೇಯಂ    ೧೧೮

ಬಿಡೆ ಪೋದ ಜನ್ಮದೊಳ್ ನೇ
ರ್ಪಡೆ ವಾಸನೆವಡೆದು ಪುಟ್ಟಿದಾಗಳೆ ಶಿಶುವಿಂ
ಗೊಡನೆ ಮೊಲೆಯುಣ್ಬ ವಿವರಮ
ನೊಡಲಾಳಾಗಿರ್ದಾತ್ಮನಲ್ಲದಾರ್ ಕಲಿಸಿದರೋ           ೧೧೯

ಆಱಿವಿನೊಳೆ ಕಾಣ್ಬ ಮೂರ್ಖನ
ನಱಿಗುಮೆ ಜಡದೃಷ್ಟಿ ನಿಟ್ಟೆವಡೆದನುಗೆಯ್ದಾ
ರ್ದು ಱವ ಭಟನಾವನೊದೊಡ
ಮಿಱಿದೊಡೆ ನಡುಗುಮೆ ಕಡಂಗಿ ಕೂರಿಸಿ ನಭಮಂ         ೧೨೦

ಭೂತಚತುಷ್ಟಯ ಯೋಗದೆ
ಚೇತನನುದಯಿಸುಗುಮೆಂಬೊಡನಿಲ ಶಿಖಿಜ್ವಾ
ಲಾತಾಪಿತಾಂಬು ಕುಂಭದೊ
ಳೇತಕ್ಕೊಡವೆರಸಿ ಚೇಷ್ಟೆಯಂ ಪುಟ್ಟಿಸದೋ    ೧೨೧

ವಿನುತ ಗುಡಾದಿಯ ಸಮ್ಮೇ
ಳನದಿಂ ಮದಶಕ್ತಿ ತಿದಿಯೊಳುದಯಿಸೆ ದನಿ ದ
ರ್ಶನಮನುವಿಸಿ ನೋಡೆ ಸಚೇ
ತನ ಚೇತನನೊಡನೆ ಸಾರ್ದುವೇನಾದಪುದೋ    ೧೨೨

ಅದಱಿಂದಾತ್ಮಂ ಜಡದೇ
ಹದಿಂದ ಭಿನ್ನಂ ಸಚೇತನಂ ನಿತ್ಯಂ ತೋ
ಱಿದಮೂರ್ತಂ ಬೋಧ ಕಲಾ
ವಿದಿತಂ ನಿಜಕರ್ತೃಭೊಕ್ತೃವೆಂದಱಿಗಱಿವಂ      ೧೨೩

ಆ ಸಂತತೋರ್ಧ್ವಗತಿ ಮುಂ
ಬಾಸಣಿಸಿದ ಕರ್ಮದಿಂ ತೊಳಲ್ವಂತವೆ ನಾ
ನಾ ಸುರಗತಿಗಳೊಳೆಲರಿಂ
ಸೂಸುವವೋಲ್ ದೆಸೆಗೆ ಶಿಖಿಶಿಖಾಸಂದೋಹಂ ೧೨೪

ಪೆಱವಱೊಳೇನೊ ದೃಷ್ಟಮಿದೆ ಪುಟ್ಟಿದ ಮಾನವರಲ್ಲಿ ತಾನೆ ತ
ಳ್ತಱಿಕೆಯ ನಾಡನಾಳ್ವ ಬೆಸಕೈವ ರಸಾಳೆನಿಪೊಂದು ಭೇದಮೆ
ಚ್ಚಱಿಸದೆ ಜೀವಮುಂಟು ಭಯಮುಂಟು ನೆಗಳ್ಚುವ ಪುಣ್ಯಮುಂಟು ಬೇ
ಸಱಿಸುವ ಪಾಪಮುಂಟೆನಿಪುದಂ ಪರಿಭಾವಿಸು ನೀಂ ಮಹಾಮತೀ  ೧೨೫

ಅದಱಿಂ ಕರ್ಮಕಳಂಕಳಂಕದೊಳಗರ್ದಿರ್ದಾತ್ಮನೆಂಬೊಂದು ರ
ತ್ನದ ತೇಜಂ ಪೊಱಪೊಣ್ಮುವಂತೆ ತಪಮೆಂಬಚ್ಛಾಂಬುವಿಂ ಸ್ವಚ್ಛಚಿ
ತ್ತದೊಳಿಂದಂ ತೊಳೆದೊಳ್ಗುಣಂಗೊಳೊಲಂಪಿಂ ತೋದು ಮುಕ್ತ್ಯಾಂಗನಾ
ಹೃದಯಗ್ರಾಹಿಯೆನಲ್ ವಿಭೂಷಣಮನಾನುದ್ಘೋಷಣಂ ಮಾಡುವೆಂ       ೧೨೬

ವ : ಎಂದು ಸುಮಂತ್ರನ ದುರ್ಮಂತ್ರಧ್ವಾಂತಮಂ ವಿಧ್ವಂಸನಂಗೈವ ಸೂರ್ಯ ಕಿರಣಂ ಗಳೆಂಬಂತಿರ್ದ ಸುವ್ರತವಾಕ್ಯಂಗಳಿಂದೊಡಂಬಡೆ ನುಡಿದು

ವಿಶದಮತಿ ಪಾರಲೌಕಿಕ
ವಿಶಾರದಂ ಸಕಲ ರಾಜ್ಯಮಂ ಪ್ರಾಜ್ಯಯಶೋ
ವಶಮಾಗೆ ದಶದಿಗಂತಂ
ದಶರಥನತಿರಥಕುಮಾರನೊಳ್ ನಿರವಿಸಿದಂ      ೧೨೭

ಪಟುತಪದೊಳ್ ತಗುಳ್ದು ಕೃಪೆಯಿಂದಿಳೆಯಂ ಪಳಿಯಂತೆ ಪನ್ನಗ
ಸ್ಫಟಿನಳಿವಂದದಿಂದಿಳಿಪನಾತ್ಮ ಸುತಾಯತ ಬಾಹುಪೀಠದೊಳ್
ಸ್ಫುಟಮೆನಲಿಟ್ಟು ಕಪ್ಪುಱನ ಕಾಣ್ಕೆಗೆ ತಾಂ ಕಡೆಯಾಣಿಯಾದನಂ
ತುಟೆ ಪರಿಭಾವಿಸಲ್ ನಿಯಮದಿಂ ದಯೆಯಿಲ್ಲದ ಧರ್ಮಮೇವುದೋ        ೧೨೮

ಗರಳಾಹಿಸ್ಫುಟಿಯಂ ಕಠೋರ ಕುಲಭೂಭೃತ್ಕೂಟದಿಂ ಕೂರ್ಮ ನಿ
ಷ್ಠುರಪೃಷ್ಠಾಶ್ರಯದಿಂದಗಲ್ಚಿ ತಳೆದೆನ್ನಂ ತನ್ನ ವೈರಾಗ್ಯದೊಳ್
ಪಿರಿದುಂ ಮತ್ತಮಱೊಳ್ ತಗುಳ್ಚದೆ ನಿಜಾತ್ಮೋದ್ಭೂತ ದೋರ್ಮಂಡಲ
ಸ್ಥಿರ ಪೀಠಾಗ್ರನೊಳಿಟ್ಟಂದು ತಳೆದಳ್ ಭೂಕಾಂತೆ ಸಂತೋಷಮಂ  ೧೨೯

ಶಾಂತರಸಭರಿತ ವಿಮಳ
ಸ್ವಾಂತನ ವೈರಾಗ್ಯದೊಳ್ ಧರಾಧಿಸ್ತ್ರೀಯರ್
ಪಿಂತುಳಿದೊಡಮಮಲಯಶಃ
ಕಾಂತೆಬಿಡಳ್ ಬೆನ್ನ ನಿನ್ನೊಳಾಗಲ್ವೇಡಾ         ೧೩೦

ಪದುಳದಿನಾತ್ಮಕುಳಮಂ ಪ್ರಜೆಯಂ ಪರಿವಾರಮಂ ನಿಜಾ
ಭ್ಯುದಯ ಪರಪ್ರಧಾನರನೊಡಂಬಡೆರ ಮೆಚ್ಚಿಸಿ ಸಚ್ಚರಿತ್ರದೊಳ್
ಪುದಿಯೆ ನಿಜಾಗ್ರಹಂ ಬಹುಪರಿಗ್ರಹಮಂ ತೊಱೆದಂ ನರೇಂದ್ರನ
ಗ್ಗದ ಮದವಾರಣಕ್ಕಿದಿರೆ ಸುತ್ತಿಮಡಲ್ತ ಮೃಣಾಳಜಾಳಕಂ         ೧೩೧

ವ : ಅಂತು ಸಕಳ ಪರಿಗ್ರಹನಿವೃತ್ತನಾಗಿ ರಾಜತ್ವಮಂ ಬಿಟ್ಟು ಸನ್ಮಾರ್ಗಾವಲಂಬಮಂ ಬಿಡದೆ ಸರ್ವಜ್ಞ ಚೂಡಾಮಣಿಯೆನಿಸಿ ನೂರ್ವರುರ್ವೀಶ್ವರರ್ವೆರಸು ವನಮಂ ಪೊಕ್ಕು ಅಚಲಿತ ದೀಕ್ಷಾಪ್ರಧಾನವಿಧಾನಂ ಉತ್ತರಾಭಿಮುಖನಾಗಿ ಪಂಚಪದಂಗಳಂ ಸ್ಮರಿಯಿಸಿ ಜಾತರೂಪಮನಂಗಿಕರಿಸಿದಾಗಳ್

ಮುಂ ಪಂಚಗುರುಪದಾಕ್ಷರ
ಚಂಪಕವಾಸನೆ ನಿಜಾಸ್ಯದಿಂ ಪೊಱಮಡುವನ್ನ
ತ್ನಂ ಪಾಱುವ ಮೋಹಾಳಿಗ
ಳಂ ಪೋಲ್ತುವು ಪಱಿವ ನಿಱಿಗುರುಳ್ ಗುಣನಿಧಿಯಾ     ೧೩೨

ಕುಂತಳಮನಿತ್ತು ಮಂಚನೆ
ಯಂ ತಾಳ್ದದ ತನ್ನ ಜಾತರೂಪಕ್ಕೆ ತಪಃ
ಕಾಂತೆ ಕರಮೊಲ್ದಳರಸಂ
ಗಂತುಟೆ ದಲ್ ಪೊಂಗೆ ಪೆಣ್ಣಳೊಲೀವುದು ತಿರಿದೇ         ೧೩೩

ಸಂಚಿತ ಮೂಲೋತ್ತರಗುಣ
ಸಂಚಯಮಂ ಶೀಲಮಾಲೆ ನೆಲೆಗೊಳೆ ಪದುಳಂ
ಪಂಚಮಹಾವ್ರತದೋಜೆಗ
ರಂ ಚೆಲ್ವಡೆದತ್ತು ಚೋದಮೆನೆ ಗುಣನಿಧಿಯಾ ೧೩೪

ಬಾಹ್ಯಾಭ್ಯಂತರ ದೇಹ ಸ
ದೂಹ್ಯ ದ್ವಾದಶ ವಿಧೋಗ್ರತಪಮಂ ಸುಜನ
ಗ್ರಾಹ್ಯಮೆನೆ ಚರಿಸಿ ದುರಿತಾ
ಸಹ್ಯಂ ಸಯ್ಯೆಯಿಂ ದಾನನೆನಿಸಿದನಾಗಳ್         ೧೩೫

ಪೋಳಲ್ಗೊಂಡಮರ್ದಿರ್ದ ಪುತ್ತಿನೆಡೆಯಿಂ ವ್ಯಾಳಾಹಿಗಳ್ ಚಂದನ
ಸ್ಥೂಳಾನೇತಹಮೆಂದು ಶಾಂತರಸದಿಂದಂ ತಣ್ಣನಾದಂಗದೊಳ್
ತೋಳೊಳ್ ಕಂಧರದೊಳ್ ಜೋಲರ್ ಜಾತರೂಪಾತ್ತದಿಂ
ಬೀಳಲ್ವಿಟ್ಟ ಮಡಲ್ತ ಕಲ್ಪತರುವಂ ಪೋಲ್ತಂ ಮುನೀಂದ್ರೋತ್ತಮಂ         ೧೩೬

ವ : ಅಂತು ವಿಧಿವಿಹಿತ ದೀಕ್ಷೆಯಂ ಕೈಕೊಂಡು ವಿರುದ್ಧಮಾನಸ ವಿರುದ್ಧ ತಪಂಗಳಿಂ ಚರಿಯಿಸಿ ಸಕಲಸನ್ಯಸದ ಸಮಾನ್ವಿತ ನವನಧಿವಿಧಿಯಂ ಶರೀರಮನಗಲ್ಚಿ ನಿರ್ವಾಣಭೂಮಿ ಗೊರ್ವೆರಲೂನಮಾದ ಸರ್ವಾರ್ಥಸಿದ್ಧಿಯೊಳ್

ಸಮುದಿತ ಸರ್ವರ್ಲಕ್ಷಣದೊಡಂಬಡೆ ಪೂರ್ಣ ಸುಧಾಂಶು ಶೋಭೆಯಂ
ಸಮಱಿ ಶರೀರಕಾಂತಿ ಪೊರೆವೆತ್ತಮಳ್ವಾಸಿನ ಪಕ್ಕದಾಣದಿಂ
ಸಮನಿಸಿ ದಿವ್ಯರಾಮ ಮಣಿಭೂಷಣ ವಸ್ತ್ರಲೇಪನಾದಿ ತ
ಳ್ತಮರ್ದಹಮಿಂದ್ರಣದ….. ಪುಣ್ಯಮದೇನಗಣ್ಯಮೋ     ೧೩೭

ನೂತ್ನಾಮಳ ಚಳಮುಕ್ತಾ
ರತ್ನ ದುತಿಮಂಜರಿ ಮನೋಹರ ನಿಯತಾ
ರತ್ನಿಮಿತಾಕೃತಿ ವಿತ ತಾ
ಯತ್ನ ಸುಖಂ ನೆಗಳ್ದನೆಂತು ನೋಂತನೋ ದಿವಿಜಂ        ೧೩೮