ಭಾವಭವನವಳ ಚೆಲ್ವಂ
ಭಾವಿಸಿ ಕಾಲಕ್ಕೆ ಕಯ್ಪೆಯಾಗಿರೆ ಮತ್ತೊ
ಳ್ವೇವಿನೆಸಳಿಟ್ಟು ಗಾಳಿಯ
ನಾವರಿಸಿದುವೆಸೆವ ಪುರ್ವು ಬಿಸಜಾನನೆಯಾ      ೯೧

ಜನವಿನುತೆಯ ನೊಸಲೆಸೆದುದು
ನಿನಗೆಣೆಯಲ್ಲಖಿಳ ರಾಜಮಂಡಳವೆಂದಾ
ನನಕಧಿರಾಜತೆ ಸಲೆನಿಲೆ
ಮನಸಿಜನೆಳೆವೆಱೆಯ ಪಟ್ಟಮಂ ಕಟ್ಟಿದವೋಲ್          ೯೨

ಓರಣಂದಿನೆಸೆದುವಿಳೆಯಂ
ಹರಿಸಿ ಕಡೆಗಣ್ಣ ಮಿಂಚು ಮಿಱುಗುವಿನಂ ಶೃಂ
ಗಾರರಸಮಂ ನಿಮಿರ್ಚುವ
ಕಾರಮುಗಿಲ್ಮಾಲೆಯಂತೆ ಕುಂತಳಮವಳಾ        ೯೩

ಪರಿಮಳಕೆ ಪೊರೆಯೊಳಿರೆ ಮಧು
ಕರಮಾಲೆಯನೆಣೆಯೆನಲ್ಕೆವೇಡೆಣೆಯೆಂದಾ
ದರದಿಂ ಕುರುಳೇ ಪೊಸಕ
ತ್ತುರಿಯುರುಳಿಗೆ ಕಾಂತಿ ಪುಟ್ಟಿದಂತಂಗನೆಯಾ  ೯೪

ಪೋಲಿಸೆ ತಮ್ಮ ಕಣ್ದ
ಕ್ಕಾಲಿಗಳಾಗಿರ್ದು ಬರ್ದವಲ್ಲದೆ ದಿಟಮಾ
ಗಾಲಿಸಿ ಕಂಡೊಡೆ ನಾಣ್ಚದೆ
ಪೀಲಿಯ ಗಱಿಯವಳ ಜಡಿವ ಮುಡಿಯ ಬೆಡಂಗಂ         ೯೫

ನೋಡುವ ನೆಯ್ದಿಲೊಯ್ಯನುಸಿರಿಕ್ಕುವ ಸಂಪಗೆ ಮುದ್ದುವೀಱೆ ಮಾ
ತಾಡುವ ದರ್ಪಣಂ ನಡೆವ ತಾವರೆ ಪಾಡುವ ಕಂಬು ವೋತುಬಾ
ಯ್ಗೂಡುವ ವಿದ್ರುಮಂ ಪ್ರಿಯದಿನಪ್ಪುವ ಚಂಪಕಮಾಲೆ ಮಾಲೆಯಂ
ಸೂಡುವ ಸೋಗೆಯೆನ್ನದವಳಂಗದ ಚೆಲ್ವನದೇನನೆಂಬುದೋ       ೯೬

ಸುದತೀನಿರ್ಮಾಣದೊಳ್ ಜಾಣನೆ ಜಡಜಜನೇವಾಳ್ತೆಯೆಂದಂಗಜನ್ಮಂ
ಪದವಿಲ್ಲಂ ಪೂವಿನಂಬಂ ಬಿಡದೆ ಪಿಡಿದು ತತ್ಕಾರ್ಶ್ಯಮ ತಾಳ್ದಿ ಕೆಯ್ಗಳ್
ಪದನಲ್ಲೆಂದೊಲ್ಲದೇಕಾಂತದೊಳ್ ಮನಮೆ ಕೆಯ್ಯಾಗೆ ಕಣ್ಗೊಳ್ವಿನಂ ಮಾ
ಡಿದನೀ ಮಾದೇವಿಗಂತಲ್ಲದೊಡಿನಿತುವರಂ ಸಾರ್ಗುಮೇ ಸೌಕುಮಾರ್ಯಂ   ೯೭

ಕಾಂಚನದ ಬೊಂಬೆಗಳವಡೆ
ಮಿಂಚಿನ ಪೊಳಪಿಟ್ಟು ತಾನೆ ಜೀವಂಬೊಯ್ದಂ
ಪಂಚಶರನಕಟ ಪಳೆಯ ವಿ
ರಿಂಚನ ಕೈಚಳಕದಳವ ನಾವಱಿಯದುದೇ       ೯೮

ನಿಲ್ಲದೆ ಕಣ್ಗಳೊಳ್ ಪೊಳೆದು ಪೋಪಳಿಮಿಂಚನೊಱಲ್ದು ಸೋಂಕೆ ಮೆ
ಲ್ಪಿಲ್ಲದೆ ಬೆಂದ ಪೊನ್ನನೆಳೆಗಂಪಿನ ಗಾಳಿಗೆ ಬೆರ್ಚಿ ತುಂಬಿವಿಂ
ಡೊಲ್ಲದೆ ಬೀವ ಸಂಪಗೆಯನೇಂ ಪಗೆಯೆನ್ನದೆ ಪಾಚಿಯೆಂದಣಂ
ಸೊಲ್ಲಿಸಲಕ್ಕುಮೇ ಮಱೆದುಮಾಕೆಯ ಮೆಯ್ವಳಗಿಂಗೆ ಬಲ್ಲವಂ            ೯೯

ಅನುಲೇಪನಮೆನಿಪುವು ಚಂ
ದನಾದಿಗಳ್ ಮುನ್ನಮೀಗಳಾಕೆಯ ತನುಸೋಂ
ಕಿನೊಳುಱೆ ಸುಗಂಧಮೆನಿಸಿದು
ವೆನೆ ಸೊಗಯಿಪ ಸೊಬಗದೆಂತುಟೋ ಸುವ್ರತೆಯಾ         ೧೦೦

ಮದವತಿಯಾ ರೂಪುಗಂಡಳು
ಪಿ ದಿಟಂ ಪೆಱರಱಿಯದಂತು ನೆರೆದಪೆನೆಂದೋ
ವದೆ ಮನಸಿಜನೆನಿಸಿದನ
ಲ್ಲದೊಡಂಗಜನುಂತೆ ದೇಹಮಂ ತೊಱೆದಪನೋ        ೧೦೧

ಕಡೆಗಣ್ಗಳ್ ತನ್ನ ಚೈತ್ರಧ್ವಜಕೆ ಪೊಳಪನೊಲ್ದೀಯದಂದಾಸ್ಯಬಿಂಬಂ
ಬಿಡದಂಭೋಜಾರಿಗೋರಂತಮೃತಕಳೆಗಳಂ ಬೀಱದಂದುರ್ವಿ ಪುರ್ವಿಂ
ಮಡಿಚೆಲ್ವಂ ಕರ್ವುವಿಲ್ಗೋವದೆ ಕರುಣಿಸದಂದಾವಗಂ ಬಂದು ಚಿತ್ತಂ
ಬಿಡದೆತ್ತಂ ಪೋಗದಿಂ ತೊಲಗಿಪನೆ ತರುಣೀರೂಪಮಂ ಪುಷ್ಪಚಾಪಂ          ೧೦೨

ವ : ಅಂತಖಿಳ ಲಕ್ಷಣೋಪಲಕ್ಷಿತರೂಪಸಂಪನ್ನೆಯಾಗಿ ಪ್ರಸಿದ್ಧ ಗೋತ್ರಾಧಿ ರಾಜಕುಲದೊಳು ದಯಿಸಿದ ಸುವ್ರತಾ ಸರ್ವಮಂಗಳೆ ಮಹಾಸೇನ ರಾಜಚೂಡಾ ಮಣಿಗರ್ಧಾಂಗಿಯಾಗಿ

ಉರದೊಳ್ ಲಕ್ಷ್ಮಿಗೆ ಮೀಱಿ ತನ್ನ ಸೊಬಗಂ ಬೀಱುತ್ತೆ ಬಿಂಬೋಷ್ಠದೊಳ್
ಪಿರಿದುಂ ವಾಗ್ವಧುಗಾತ್ಮಕೌಶಲಮನಾರ್ಪಿಂ ತೋಱುತುಂ ತೋಳೊಳು
ರ್ವರೆಗಾಶ್ಲೇಷನುದಾರಮಂ ಕಲಿಸುತುಂ ಕಣ್ಗೊಳ್ವಲಂಪಿಂ ತಳೋ
ದರಿ ನಾನಾ ರತಲೀಲೆಯಂ ಸಲಿಸುವಳ್ ತತ್ಕಾಂತನೊಳ್ ಸಂತತಂ   ೧೦೩

ವ : ಅಂತನಂತ ಭೇದಾಭಿರಾಮ ಕಾಮಕೇಳಿವಿಳಾಸಮನಾತ್ಮಪತಿಯೊಳನು ಭವಿಸುತ್ತುಮ ಭೇದ ಪ್ರಣಯಪ್ರಸಾದಮನಪ್ಪುಕೆಯ್ದು ಮಹಾದೇವಿಯೊಂದುದಿವಸಂ ನಿಜಮಂದಿರ ಮಹನೀಯ ಮಣಿಮಂಟಪಕ್ಕೆ

ಉಗುರ್ಗಳ ನೀಳ್ದ ನುಣ್ಬೆಳಗು ಬಾಣಮೃಣಾಳಮನೀಯೆ ಮುತ್ತುವಂ
ಚೆಗೆ ಕಡುಚೆಲ್ವ ಮಲ್ಲಡಿಯ ಕೆಂಬೊಳಪೊಂದಿದ ತನ್ನ ಚೆನ್ನ ಪಾ
ವುಗೆ ಪಳುಕಲ್ತು ಮಾಣಿಕದವೆಂಬ ನೆಗಳ್ತೆಯನಿಟ್ಟು ಪಜ್ಜೆ ಪ
ಜ್ಜೆಗೆ ಮಣಿನೂಪುರಂ ಪೊಗಳೆ ಬಾಲಕಿಬಂದಳದೊಂದು ಲೀಲೆಯಿಂ ೧೦೪

ಕೆಳದಿಯ ಪೆಗಳೊಳ್ ಮೆಲ್ಲನೆ
ನಳಿತೋಳಂ ನೀಡಿ ಬಲದ ಕೆಯ್ಯೊಳ್ ಲೀಲಾ
ನಳಿನಮಿರೆ ಮದನಜಯ ಮಂ
ಗಳಲಕ್ಷ್ಮಿಯ ದೆಸೆಯಂ ವಿಳಾಸಿನಿ ತಳೆದಳ್        ೧೦೫

ವ : ಅಂತಾ ಮನೋಹರಿ ಮಂದಾಲಸಗಮನದಿಂ ಬಂದು ಮಣಿಮಯಾಸನ ಮನಲಂಕರಿಸಿ ದಾಗಳ್

ಮಂದಗತಿವಡೆಯಲೊಡನೆ
ಯ್ತಂದೋಲಗಿಸಿರ್ದ ಹಂಸಮಿಥುನವಿದೆನಲೇ
ನಂದೆಸೆದುದೊ ಮಣಿಪೀಠದ
ಮುಂದಾ ಸತಿ ಕಳೆದ ಪಳುಕಿನೆಳೆವಾವುಗೆಗಳ್      ೧೦೬

ಕಾಂಚನಪೀಠಕಾಂತಿ ಕಮನೀಯ ವಿಭೂಷಣಕಾಂತಿ ನೀಳ್ದನೇ
ತ್ರಾಂಚಲಕಾಂತಿ ತಳ್ತ ತನುಕಾಂತಿ ತೆಱಂಬೊಳೆದೊಂದನೊಂದು ಕೆ
ಯ್ಮುಂಚಿ ಪಳಂಚಿ ಪಜ್ಜಳಿಸೆ ಮಧ್ಯದೊಳಾ ತನುಮಧ್ಯೆ ಗೆಲ್ದಳೊ
ಳ್ಮಿಂಚಿನ ಜೊಂಪದೊಳ್ ಪ್ರಿಯದಿನೋಲಗಮಿತ್ತಮೃತಾಂಶುಲಕ್ಷ್ಮಿಯಂ      ೧೦೭

ವ : ಆಗಳ್

ಕೆಂದಳಿರೊಳ್ ಕೇದಗೆಯೆಸ
ಳಂದಂಬಡೆದಿರ್ದುವೇನಿದಚ್ಚರಿಯೆನೆ ಪಿಂ
ದೊಂದಿದಡಪದ ಲತಾಂಗಿಯ
ಕೆಂದಳದೊಳ್ ತುಱುಗಿ ಮಱುಗಿದುವು ಬೆಳ್ಳೆಲೆಗಳ್        ೧೦೮

ಮಿಂಚಿನ ಬೊಂಬೆಯ ಕೈವಶ
ಕಂಚೆಗಳನನಂಗನಭವನಮನೆಂಬಿನಮಂ
ದೇಂ ಚೆಲ್ವಂ ತಳೆದುವೊ ಪೊಳ
ಪಿಂ ಚಾಮರಮಿಕ್ಕುವಬಲೆಯರ್ ಕೋಮಳೆಯಾ           ೧೦೯

ನಂಬದೊಡೆ ನೋಡು ನೀಂ ಧವ
ಳಾಂಬಕಿ ನಿಜವದನಬಿಂಬವಿಂದಿವಿನಿಂ ಚೆ
ಲ್ವೆಂಬರ ನುಡಿಗಳನೆಂಬವೊ
ಲಂಬುಜಮುಖಿ ಪಿಡಿದಳೊರ್ವಳೊಳ್ಗನ್ನಡಿಯಂ           ೧೧೦

ಮಾತೇನೊ ನೋಡಿದವರ್ಗಳ
ನೋತು ಮರುಳ್ಮಾಡಲೊಂದೆ ಕನಕದ ಪೂವಂ
ಪೂತ ತನುಲತೆಯಿದೇನೆನಿಸಿದ
ಳಾ ತರುಣಿಯ ಕೆಲದ ಡವಕೆವಿಡಿದವಳೊರ್ವಳ್ ೧೧೧

ಅರಸಿಯ ಗುರುಪೀನಪಯೋ
ಧರದೊಪ್ಪಮನೊಯ್ಯನೆಂದು ಪೊಸಪೊಂಗಳಸಂ
ಪಿರಿದುಂ ಬಳಿನೀರ್ಗುಡಿದಂ
ತಿರಲೊರ್ವಳ ಕರದೊಳೊಪ್ಪಿದುದು ತಣ್ಗರಗಂ            ೧೧೨

ಗಾವರಿಸಲ್ ತೆಱಂದಿಱಿವ ತುಂಬಿ ತುಱುಂಬಿನ ಸೌರಭಕ್ಕೆ ಬಂ
ದೋವಿ ಸಖೀಜನಂ ಬಳಸಿಬಳ್ವಳಮಾಗಿರೆ ಚೆಲ್ವಳ್ವ ಸುತ್ತುಗೊಂ
ಡಾವರಿಸಿರ್ದ ಪೂಗಣೆಯ ಮಧ್ಯದೊಳರ್ಚಿಸಿದಿಕ್ಷುಚಾಪ ಲ
ಕ್ಷ್ಮೀವಿಭವಕ್ಕದೇಂ ದೊರೆಗೆವಂದುದೊ ಮೋಹನಮೂರ್ತಿ ಕಾಂತೆಯಾ         ೧೧೩

ವ : ಅಂತು ಲೀಲೆಯಿಂದೋಲಗಂಗೊಟ್ಟು ಮುಂದೆ ಪಾಡುವ ಗಾಯಿನಿಯರ ಸೀಯನಪ್ಪ ರಸಗೇಯಮನಾಲಿಸುತ್ತಾಕೆಗಳ ಕರಪಲ್ಲವದಿಂ ಪಲ್ಲವಿಸಿದಂತೆಸೆವ ವಲ್ಲಕಿಯ ಮೆಲ್ಲುಲಿಗಳನಲ್ಲಲ್ಲಿಗಲ್ಲವೆಂದು ತಪ್ಪುವಿಡಿವಂತೆ ಕೆಳದಿಯರೊಳೊಯ್ಯನೊಯ್ಯನಾಡುವ ಸವಿವಾತುಗಳ್ಗೆ ಬಾಯಂ ಪಱಿದುಕೊಳುತ್ತ ಬರ್ಪರಗಿಳಿಗೆ ಸರಸದಾಡಿಮಮೆಂದು ಕೆಂದಳದ ಕೆಂಪುಪೊರೆದ ಕಪ್ಪುರದ ವಳುಕುಗಳಂ ನೀಡುವೆಡೆಯೊಳ್ ಸೆಳ್ಳುಗುರ ಬಂಬಲ್ವೆಳಗಂ ಬಳಿವಾಲ ಧಾರೆಗಳ್ಗೆತ್ತು ಬಾಯ್ವಿಡುವ ಬಾಳಮರಾಳಂಗಳ್ಗೆ ಲೀಲಾರವಿಂದದ ಕಾವಂ ಸುಲಿಸುಲಿದು ನೀಡುತ್ತಮಿರ್ಪ ಸಮಯದೊಳ್

ಶ್ರೀರಮೆಯೋಲಗಕ್ಕೆ ನಿಜಶಿಲ್ಪಿವಿಕಲ್ಪಮನೊಯ್ದು ತೋಱಿಸಲ್
ಭಾರತಿ ಪುಸ್ತಕಂಬಿಡಿದು ಬಂದಪಳೆಂದೆನಿಪೊಂದು ಗಾಡಿಯಿಂ
ಚಾರಿಣಿ ಚಾರುಚಿತ್ರಪಟಧಾರಿಣಿ ಬಂದಳದೊಂದು ಲೀಲೆಯಿಂ        ೧೧೪

ವ : ಅಂತು ಬಂದು ಚಿತ್ರಿಕೆ ನಿಜಾಂಗುಳಿಯೊಳ್ ಪೊರೆದಿಂಗುಳಿಕಂ ಕೇಸರಿಯ ಕೆಂಬೊಗರಂ ದ್ವಿಗುಣಿಸೆ ಮೆಲ್ಲಮೆಲ್ಲನೆ ಶರಲಕ್ಷ್ಮಿ ಬೆಳ್ದಿಂಗಳ್ ಪೊರೆಯಿನಿಂದ್ರಚಾಪಮಂ ತೆಗೆದು ಪಸರಿಸುವಂತೆ ಸುತ್ತಿದ ದುಗುಲಮನಗಲೆ ನೂಂಕಿ ಚಿತ್ರಪಟಮಂ ಪದಪೀಠದ ಮುಂದೆ ಪಸರಿಸಲರಸಿ ಕೌತುಕರಸಂ ಕಣ್ಬಡೆದಂತೆ ನೀಡುಂಭಾವಿಸಿ ನೋಡುವಾಗಳ್ ಅನೇಕಭಂಗಿಭಂಗುರ ಭಾವರಸ ಚಿತ್ರದೊಂದೆಡೆಯೊಳ್ ಬರೆದ ಸರಸ ಸಲ್ಲಕೀಕಾನ ನದೊಳ್

ಮೊಲೆಗಳ ನುಣ್ಪ ಪೆಪ್ಪಳಿಸಿ ನೋಡುವ ತಾಯ್ವಿಡಿಮೆಲ್ಲೆ ಸಲ್ಲಕೀ
ದಲಮನಲಂಪಿನಿಂ ತೆಗೆದು ಸೂಸುವ ಸುಂಡಿಲನೆತ್ತಿ ಸುತ್ತನಾ
ಲ್ಗೆಲದೊಳಡುರ್ತು ಪಾಯ್ದು ಪರಿದಾಡುವನೇಕ ರಸಾನುಭಾವಮ
ಗ್ಗಲಿಸಲದೊಂದು ಪಲ್ಲಮಱಿ ಲಲ್ಲೆಯ ಚಲ್ಲಮನೇನೊಡರ್ಚಿತೋ        ೧೧೫

ವ : ಅಂತು ಜೀವಂಬಡೆದಿರ್ದುದೆಂಬಂತೆ ಮುದ್ದುವೀ ಱುವಾನೆವಱಿಯಾಟಮಾಟಂದು ಮಾನಸಮಂ ಕಲಂಕೆ ಕೌತುಕದಿಂ ನೋಡುವಾಗಳ್ ಅದಱ ಕೆಲದೊಳ್

ಉಡಿದು ಲವಂಗದೊಳ್ದಳಿರನೊಯ್ಯನೆ ಮೇಯಿಸಿ ನಿರ್ಝರಾಂಬುವಂ
ಕುಡಿಯಿಸಿ ಪದ್ಮಪಾಂಶುವಿನೊಳಾಡಿಸಿ ಪುಷ್ಕರದಿಂದೆ ಕೂಡೆ ಮೆ
ಯ್ದಡುವುತೆ ಸೋಂಕಿಲೊಳ್ ಮಡಗಿ ಮಾಡುವ ಮುದ್ದನೊಱಲ್ದು ನೋಡುತುಂ
ಪಿಡಿ ಪಿಡಿದಿರ್ದುದಲ್ಲಿ ಮಱಿಯಂ ಮಱೆದುಂಬಿಡದಾತ್ಮಮೋಹದಿಂ         ೧೧೬

ಮೆಲ್ಲನೆ ಕಿಱುಮೊನೆಗೊಡಿಂ
ಗಲ್ಲಮನಂತಂತೆ ತುಱಿಸುತಂ ಮಱಿಮಿಗೆ ಪೋ
ಪಲ್ಲಿಗೆ ಪೋಪಾಸೆಯ ಗಜ
ವಲ್ಲಭೆಯಂ ಕಂಡು ಕಳಿಯೆ ಮಾನಿನಿ ಮನದೊಳ್          ೧೧೭

ವ : ಚಿತ್ರದೊಳಾದೊಡಂ ಪುತ್ರವತಿಯೆಂಬ ಬರಪಕ್ಕೆ ಬಾರೆನೆಂದು ತನ್ನೊಳ್ ತಾನೆ ದೂನಿಸುತ್ತಂ ಸುಱ್ದನೆ ಸುಯ್ದು

ವಲ್ಲಭಜನಾನುರಾಗಂ
ಪಲ್ಲವಿಸಿದ ಫಲವಿಹೀನ ಕುಸುಮೋದಯದಿಂ
ದಿಲ್ಲಿನಿಸು ಭೇದಮಸುಕೆಯ
ವಲ್ಲರಿಗಂ ನೋಳ್ಪೆಡೆನ್ನ ತನುವಲ್ಲರಿಗಂ       ೧೧೮

ವ : ಎಂದೇವಯ್ಸಿ ದೇವಿ ಮನದೊಳಳಲ್ದು ಮತ್ತಂ

ಬಿತ್ತರಮಾಗಿ ತೂಪ ಮಣಿದೊಟ್ಟಿಲೊಳಂಜದೆ ನಿಂದು ಪೊನ್ನ ನೇ
ಣೊತ್ತೆ ಕರಾಬ್ಜಮಂ ಬೆದಱಿ ಬಾಲನಳುತ್ತಗದತ್ತಲಿತ್ತ ನೋ
ಡುತ್ತಿರಲಳ್ಕಱಿಂ ಪರಿದು ದಾದಿಯರಂ ಕದಲತ್ತುಮಾನೆ ಬಂ
ದೆತ್ತುವ ಸಯ್ಪದೊಂದೆನಗೆ ಮುನ್ನುಱೆನೋನದೆ ತಾನೆ ಸಾರ್ಗುಮೇ           ೧೧೯

ಅಂದುಗೆ ಕಿಱುಗೆಜ್ಜೆಗಳುಲಿ
ಸಂದಿಸಿ ಕಿವಿಗಿನಿದುಗಱೆಯೆ ಕೆಯ್ದಱೆಗೊಲವಿಂ
ಮುಂದೆ ಮಿಗೆ ಕುಣಿವ ಕಂದನ
ನೆಂದೆನ್ನಯ ದಿಟ್ಟಿ ತಣಿವಿನಂ ನಿಟ್ಟಿಪೆನೋ      ೧೨೦

ಕೆಯ್ಯಾರಲೆತ್ತಿಯಾನೀ
ಮೆಯ್ಯಾರ್ವಿನಮಪ್ಪಿಕೊಂಡು ಪಣೆಯಂ ಪಣೆಯಿಂ
ದೊಯ್ಯನಣೆದಣೆದು ತಣಿಯದೆ
ಚಯ್ಯಾಡುವ ತನಯನೆನಗದೆಂದಾಪನೋ        ೧೨೧

ಅಂಗಣಕಿದೆತ್ತಣಿಂ ಪೊಸ
ಸಿಂಗದ ಮಱಿ ಬಂದುದೆಂದು ಮುದ್ದಾಡಿಸುತಾ
ಲಿಂಗಿಪೆನೆನೆ ಪರಿಪರಿದಯ
ಸಂಗೊಳಿಸುವ ಮಗನನೆಂದು ನಡೆನೋಡುವೆನೋ           ೧೨೨

ಪಿಂದಣಿನೊಯ್ಯನೆ ನಲವಿಂ
ನಂದನನೆಯ್ತಂದು ಕೊರಲನಪ್ಪಲ್ ಭರದಿಂ
ಮುಂದೆಚ್ಚುವಾಯ್ವ ತನಿವಾ
ಲೆಂದೀ ನೆಲೆಮೊಲೆಯ ಮೇಲುದಂ ನಾಂದುಗುಮೋ        ೧೨೩

ಮೆಲ್ಲನೆ ಮಲಗಿರೆ ಕದಪಂ
ಮೆಲ್ಲನೆ ಜಕ್ಕುಲಿಸೆ ನಕ್ಕು ಮಗನಗಿದೊದೆಯಲ್
ಮೆಲ್ಲಡಿಗೆ ಸಿಲ್ಕಿ ಹಾರಂ
ಝಲ್ಲನೆ ಪಱಿದೊಕ್ಕೆ ಮುತ್ತನೆಂದಾಯ್ದಪೆನೋ          ೧೨೪

ಬಿನದದಿ ನೋಡುತಂದುಗೆಯ ಗೆಜ್ಜೆಯ ಮೆಲ್ಲುಲಿಯುಣ್ಮೆ ಪೊಣ್ಮೆ ಭೋಂ
ಕನೆ ಪರಿತಂದು ನುಣ್ದೊದಳ ಮಾತುಗಳಂ ಕಿಱಿದಾಡಲಾನದೇಡ
ನೆನೆ ಕಡುನಾಣ್ಚಿ ಪಾಯ್ದು ಕೊರಲಂ ಬಿಗಿಯಪ್ಪಿ ಮರಲ್ದುನೋಳ್ಪ ನಂ
ದನನೆಳೆಲೋಳೆವಾಯ ಸವಿಮುದ್ದಿನ ಸಮ್ಮದಮೆಂತು ಸಾರ್ಗುಮೋ           ೧೨೫

 || ಮಲ್ಲಿಕಾಮಾಲೆ ||

ನಾಡಮಾತಿನೊಳೇನೊ ಪುತ್ರನನಳ್ತಿಯಿಂ ತೆಗೆದೆತ್ತಿಕೊಂ
ಡಾಡದಾಕೆಯ ಕೆಯ್ ಮರುಳ್ಗಳ್ ಕೆಯ್ ಮನಂಬುಗುವಳ್ಳಱಿಂ
ನೋಡದಿರ್ದಳ ಕಣ್ ಕಳಲ್ಚಿದ ಪೀಲಿಗಣ್ಣುಱೆ ಜೋಗುಳಂ
ಬಾಡದಿರ್ಪೆಳೆವೆಣ್ಣ ಬಾಯದು ಪುಣ್ಣಬಾಯೆನಿಸಲ್ಲದೇ ೧೨೬

ವ : ಎಂದು ಮನದೊಳೆ ಬಗೆಯುತ್ತುಮಾರೊಳಂ ಮಾತನಾಡದಾ ತಳೋದರಿ ತನೂಭವಲಾಭ ಸಂಕ್ರಾಂತ ಚಿಂತೋದ್ರೇಕದಿಂ ಮೌನಮುದ್ರೆಯನೊಳಕೊಂಡಿರ್ಪ ಸಮಯದೊಳ್

ಪೂವಿನ ಬಿಲ್ಲನೈಸರಲನಾವೆಡೆಯೊಳ್ ಮಡಗಿಟ್ಟುಬಂದನೀ
ಭಾವಜನೆಂಬ ಕೌತುಕದಿನೋತು ಸಖೀಜನಮೆಳ್ದು ದೂರದಿಂ
ಭಾವಿಸೆ ಮಂದ ಸಂಚರಣ ಚಾಲಿತ ಕುಂಡಲನೆಯ್ದೆಬಂದನಾ
ದೇವಿಯರಿರ್ದ ತಾಣಕರಸಂ ಸರಸ ಪ್ರಣಯಾನುರಾಗದಿಂ  ೧೨೭

ವ : ಅಂತು ನಿರ್ಭರಪ್ರಣಯ ಪರವಶತೆಯಿನರಸನೇನುಮಂ ಭಾವಿಸದೆ ದೇವಿಯ ಕಾಣ್ಕೆಯೆ ಕಣ್ಣಾಗಿಬರ್ಪಾಗಳ್

ನೊಸಲೊಳಮರ್ಕೆವೆತ್ತಲೆವ ಸೂಸುಗುರುಳ್ ನಿಡುಸುಯ್ ಕಳಲ್ವ ಮೆಯ್
ಪೊಸದಲರಂತೆ ಬಾಡಿದ ಮೊಗಂ ಕರಪಲ್ಲವದಲ್ಲಿ ಕೀಱಿ ಕೀಸ
ಲಿಸಿದ ಕದಂಪು ಜಾಱಿದ ಜಗುಳ್ಮಡಿ ಬೇಱೆಬೆಡಂಗನೀಯೆ ಜಾ
ನಿಸುವಳ ಭಾವಮೇಂ ಬಗೆಯೊಳಚ್ಚಿಱಿದಿರ್ದುದೊ ತನ್ನರೇಂದ್ರನಾ            ೧೨೮

ವ : ಅಂತೆರ್ದೆಗೊಳ್ವ ಚಿಂತಾಭಾವಮನಾ ಜೀವಿತೇಶ್ವರಂ ಭಾವಿಸಿ

ಕೆಂದಾವರಿಯಂ ಕೆಳೆಗೊಂ
ಡಿಂದುವನನುಕರಿಸಿ ಕದಪು ನೊಸಲಂ ಕಳಿದೆ
ಯ್ತಂದಳಿ ಸಂಪಗೆಯೊಳ್ ಪಾ
ಯ್ವಂದಮನೊಳಕೊಂಡವೊಳ್ಗುರುಳ್ ಕೋಮಳೆಯಾ    ೧೨೯

ಪಗಲೆ ಚಕೋರಂ ಪೊಣರ್ವ
ಕ್ಕಿಗೆ ತಿಂಗಳ ಬಿತ್ತನೊಯ್ದು ಕುಡುಕಿಕ್ಕುವ ಭಂ
ಗಿಗೆ ನೆಲೆಯುಮವು ಮೇಲುದ
ನುಗುಳ್ವಬಲೆಯ ಮೊಲೆಯೊಳುಗುವ ಬಾಷ್ಪಕಣಂಗಳ್   ೧೩೦

ನಸುಬಿಸುಪಿಂಗೆ ಬೆರ್ಚಿ ಪೆಱಸಾರೆ ಮದಾಳಿಗಳೋಳಿಗೊಂಡ ನಿ
ಟ್ಟುಸಿರ್ಗಳ ದಾಳಿಯಿಂ ನಿಜಶರೀರಶಲಾಕೆಯನೀಕೆ ನಾಡೆ ಕಂ
ದಿಸಿ ನಱುಗಂಪು ನುಣ್ಪುಗಳ ಮೆಯ್ಸಿರಿಯಿಂ ಸಲೆಸೋಲ್ತು ಚಂಪಕ
ಪ್ರಸವದ ಪಾಡುಗುಂದಿದಳಿಗಾಡಿಯನೇಕೆಣೆಮಾಡಿಕೊಂಡಳೋ      ೧೩೧

ದೇವಿಯ ಸೊಗಯಿಪ ತನುಲತೆ
ಪೂವಿನ ಬಿಲ್ಲಂತೆ ಬಾಡಿ ಬಳ್ಕಿರುತಿರ್ದುಂ
ಭಾವಿಸಿ ನೋಡೆ ಮನಂಗೊ
ಳ್ವೀ ವಿಸ್ಮಯ ರಸಮನೆನ್ನೊಳೇಂ ಮಾಡಿದುದೋ         ೧೩೨

ವ : ಎಂದೆವೆಯಿಕ್ಕದೆ ನೋಡುತ್ತೆ ಮನದೊಳಿನಿಸಾನುಮುಮ್ಮಳಿಸಿ

ತನ್ನಾಣೆ ತನ್ನ ಗೋಸನೆ
ತನ್ನ ಪೆಸರ್ ತನ್ನ ಜಸಮೆ ಜಸಮೆನಲೆಸೆವೀ
ಮನ್ನಣೆಯ ಮನದ ಮಚ್ಚಿನ
ಚೆನ್ನೆಗೆ ಕಡುನೋವಿದಾರ ಕಡೆಯಿಂದಾಯ್ತೋ    ೧೩೩

ವ : ಎಂದು ಮನದೊಳನೇಕ ವಿಕಲ್ಪಮಂ ಭಾವಿಸುತ್ತೆ ಚಿತ್ತಪ್ರಿಯಂ ಕಟ್ಟಿದಿರೊಳ್ ಬಂದುನಿಂದುದನೊಂದಿನಿತುವರಮಱಿಯದೆ ಮೇಳದಾಳಿಯರ ಕಳಕಳದಿನಱಿದು

ಕೆಲದೊಳೆ ತೋರ್ಪ ಕೌಳುಡೆಯನೊಯ್ಯನೆ ಕೆಯ್ಯೊಳವುಂಕಿ ಕಂಕಣಂ
ಘಲಕೆನೆ ಕಣ್ಣನೀರ್ದೊಡೆದು ಪೊಣ್ಮಿ ಪೊದಳ್ದುಡೆನೂಲನುಣ್ಚರಂ
ನೆಲೆಮೊಲೆಯಿಂದಮೊಂದಿನಿಸು ಜಾಱುವ ಮೇಲುದನೇ ಱನೂಂಕಿ ತೆ
ಳ್ಪಲಘು ನಿತಂಬೆಯಂದಮೆರ್ದೆಗೊಂಡುದು ರಾಜಕಳಾವಿಳಾಸನಾ   ೧೩೪

ವ : ಅಂತು ಭೋಂಕನೇಳ್ವೆಳದಿಂಗಳ ತನಿವೆಳಗಂ ಪೊರೆಯೆತ್ತಿ ಚಕೋರಕ್ಕೆ ನೀಡುವರಾಕೆ ಯಂತಿರಾಕೆ ದುಗುಲದ ಸೆಱುಗನೊಯ್ದು ಮಗುಳೆ ಮಗುಳೆ ಪತ್ರ ಭಂಗಕ್ಕೆ ಭಂಗಮಂ ತರ್ಪ ಬಾಷ್ಪಕಳಿಕೆಗಳನಂತೊತ್ತುತ್ತ ಮತ್ತೆ

ಇಂದೀವರಮನಿದೇನೆಲೆ
ಕೆಂದಾವರೆ ಭರದಿನಪ್ಪಿ ಮೆಯ್ದಡವಿದುವೆಂ
ಬಂದದೆ ಕಣ್ಬನಿಗಳನರ
ವಿಂದಾನನೆ ತೊಡೆದಳಮರೆ ಕರಕಿಸಲಯದಿಂ      ೧೩೫

ವ : ಆಗಳ್

ಕೆಂದಳದ ಕಾಂತಿ ಪೊರೆದುದೊ
ಬಂದಿನಿಯನನೀಕ್ಷಿಸಲ್ಕೆ ಮನದನುರಾಗಂ
ಮುಂದಿರ್ದುದೊ ಪೇಳೆಂಬಿನ
ಮಂದಲರ್ಗಣ್ ಕೆಂಪನೇಂ ಪುದುಂಗೊಳಿಸಿದುವೋ          ೧೩೬

ವ : ಅಂತು ನಿಜಮನೋಗತ ಸುತದೋಹಳಚಿಂತಾಸಂತಾಪ ಪರಿಮ್ಲಾನಮಾದ ಮುಖಾರವಿಂದಕ್ಕೆ ಸುರಭಿರಜಂ ನಿಶ್ವಾಸ ಪವನನಿಗೊಸೆದು ಪುಗೆ ಕಲಂಕಿದಂತೆ ಕೆಂಪು ಪೊಂಪುಳಿಸುವ ವಿಲೋಚನದ ಸೊಂಪಂ ನೋಡುತ್ತೆ ಕೆಯ್ನೀಡಿ ತೆಗೆದುತ್ತುಂಗ ರತ್ನಪೀಠದೊಳ್ ಕುಳ್ಳಿರ್ದು ಭೂಮೀಶ್ವರನಾ ಮನೋಹರಿಯಂ ನಿಜಾಂಕಪೀಠದೊಳಿರಿಸಿ ಸೂಸುಗುರುಳ್ಗಳನುಗುರ್ನೊನೆಯಿನೊಯ್ಯನೊಯ್ಯನೇಯಾರಿಸುತ್ತುಂ

ದೇವಿ ಬಿಡು ಖೇದಮಂ ನಿನ
ಗಾವುದಱೊಳ್ ಕೊಱತೆ ಬಱಿದೆ ಜಳಕಳಿಕೆಗಳಂ
ತೀವಿ ನಿಜನಯಮೆಲೆ ಕೆಂ
ದಾವರೆಯೆಸಳೊಡನಿದೇಕೆ ಸರಿಯಾದುಪುವೋ  ೧೩೭

ಆನೊಳಗಾಗಿರೆ ಕೇಳೆಲೆ
ಮಾನಿನಿ ನೀನಿಕ್ಕಿದುಗುಳುಮಂ ದಾಂಟೆನೆನಿ
ಪ್ಪೀ ನುಡಿಗೇಳ್ದು ನಿಜಾಜ್ಞೆಯ
ನೇನಾನುಂ ಮೀಱಿಮಿಕ್ಕು ನಡೆವವರೊಳರೇ     ೧೩೮

ವ : ಎಂದು ನಲ್ಮೆದೋಱಿ ನುಡಿದು ಬಿಸುಸುಯ್ಗೆ ಬಾಡಿದಧರಕಿಸಲಯಮಂ ನೋಡಿ

ಬಂದು ನಱುಸುಯ್ಗೆ ನೆಱೆಮೆ
ಯ್ಗುಂದದ ಕೆಂಪಿಂಗೆ ಸೋಲ್ತು ಬಿಂಬಾಧರಮಂ
ಕಂದಿಸು ನೀನೆಂದಸುಕೆಯ
ಕೆಂದಳಿರೇಂ ಲಂಚಮಿತ್ತುದೇ ಲಲಿತಾಂಗೀ         ೧೩೯

ನಡೆಯೊಡನೇನೊ ಮಚ್ಚರಿಸಿದಂತೆ ನೆಗಳ್ತೆಯ ರಾಜಹಂಸದೊಳ್
ನುಡಿಗಳ ಜಾಣ್ಮೆಯಂ ಸೆಳೆದುದೇ ಗಿಳಿ ಸೋಲದೆ ಸೋಗೆ ಬೀಗಿ ಸೋ
ರ್ಮುಡಿಗೆಣೆಯಾದುದೇ ನುಡಿ ಮನೋಹರಿ ನಿನ್ನ ಮೊಗಂ ಕನಲ್ದು ನೀಂ
ನುಡಿಯದೆ ಮೌನಮಂ ಪಿಡಿಯೆ ತಾವರೆಯೊಳ್ ಸರಿಯಾಗಿ ಪೋಗದೇ          ೧೪೦

ವ : ಎಂದನುನಯಿಸುವಿನಿಯನನುರಾಗಕ್ಕೆ ಕೆಯ್ಗನ್ನಡಿಯಾದ ಜಾಣ್ಣುಡಿಗೆ ಮಱುಮಾತಂ ಕುಡಲಱಿಯದಂತೆ ಮೆಯ್ಯಿಕ್ಕಿರೆ ಚಕೋರಚಂದು ಸಂಚಾರದಿನಿಂದು ಬಿಂಬದಿನಲ್ಲು ಗುವಮೃತಬಿಂದುಗಳಂತೆ

ತಳ್ತಳಿಸಿ ಪೊಳೆಯೆ ಕಣ್ಬನಿ
ಗಳ್ತೊಟ್ಟನೆ ಸತಿಯ ತೋರಮೊಲೆಗಾರಮನಾ
ಗಳ್ತುಡಿಸಿ ನನ್ನಿಮಾಡಿದು
ವಳ್ತರೆ ಮುತ್ತೊಕ್ಕವೆಂಬರಣಕದ ನುಡಿಯಂ     ೧೪೧

ವ : ಅಂತಳವಿಗಳಿದು ಗಳಗಳನುಗುವ ಕಣ್ಬನಿಯಂ ಕರಾಂಬುಜದಿಂದ ತೊಡೆದು ತಲೆಯಂ ತಳ್ಕೈಸಿ ತೆಗೆದಗಲುರದೊಳೊತ್ತಿಕೊಂಡು ಗಲ್ಲಮಂ ಪಿಡಿದು ಲಲ್ಲೆವಾತಿಂ ನಲ್ಲಳಂ ಬೋಳೈಸುತ್ತಿಳೇಶ್ವರಂ ಕೆಲದ ಸಲುಗೆಯ ಸಹಚರಿಯದ ಮೊಗಮಂ ನೋಡಿ

ದೇವರೆ ಮಾಳ್ಪ ಮನ್ನಣೆಯೊಳೀಕೆಗೆ ತೀರದುದೇನುಮಿಲ್ಲಮಿಂ
ದೀವರನೇತ್ರೆ ಚಿತ್ರಪಟಮಂ ಪರಿಭಾವಿಸುತೀಗಳಿಂತು ನಾ
ನಾವಿಧಮಾದ ನಿಮ್ಮ ಪಡೆಮಾತುಗಳಂ ಪಡೆದಾಡುತಿರ್ದಳಿ
ನ್ನಾವುದೊ ಭೇದಮಾಳ್ದಳಿದೆ ಮಾಗಿಯಕೋಗಿಲೆಯಂತೆ ಮೌನಮಂ           ೧೪೨

ವ : ಎಂದು ನಿಷ್ಕಪಟೆಯಾ ಪಟಮಂ ಮುಂದಿಟ್ಟು ಮುಟ್ಟಿ ತೋಱುತ್ತು ಮಿರ್ಪಾಗಳ್

ಮುನಿಸಿಂದೊಯ್ಯನೆ ಬಂದು ಪೂತ ಲತೆಯಂ ನೆಮ್ಮಿರ್ಪುದುಂ ದೇವಿ ಬೆ
ನ್ನನೆ ಬಂದಾನಪರಾಧಿಯೆಂದು ಲತೆಯಂ ತಾನೆಂದೆ ನೀನಂದು ನೆ
ಟ್ಟನೆ ಪಾದಾನತನಾದುವಂ ಬರೆದ ಭಾವಂ ಭಾವ ಲೇಸೆಂದು ಕಾ
ಮಿನಿ ಕೊಂಡಾಡುವ ಕೆಯ್ತದಿಂದೆ ಮೆಱೆದಳ್ ತನ್ನೊಂದು ಸೌಂದರ್ಯಮಂ   ೧೪೩

ವ : ಮತ್ತಮೀಯೆಡೆಯೊಳ್

ಪೂವನೊಱಲ್ದು ತಾಂ ತಿಱಿದ ಸಂಭ್ರಮದಿಂ ಮುಡಿಬಿಟ್ಟೊಡಳ್ಕಱಿಂ
ದೇವರೆ ಪೋಗಿ ಸಾವಗಿಪೆವೆಂದು ಸಮೀಪದ ಸೋಗೆ ಪಾಯ್ದ ಲೀ
ಲಾವನದಲ್ಲಿಗೆಯ್ದೆ ಸಖಿಯರ್ ನಗೆನಾಣ್ಚಿದನಿಂತು ಭಾವಮಂ
ಭಾವಕಿ ಚೆಲ್ವೆನರ್ ಬರೆದಳೆಂದು ಮನಂ ಮಿಗೆ ಮೆಚ್ಚಿ ನೋಡಿದಳ್ ೧೪೪

ಸರಸಿರುಹಾಯತಾಕ್ಷಿ ಜಳಕೇಳಿಯೊಳೊರ್ಮೆ ವಿನೋದದಿಂದೆ ತಾ
ಮರೆಗೊಳದಲ್ಲಿ ಮೆಯ್ಗರೆಯೆ ಮೇಳಿಸಿ ನೀನೆಲೆದೇವ ಹೇಮತಾ
ಮರಸಮನಾನನಾಂಬುರುಹಮೆಂಬನುರಾಗದಿನಾಸೆಮಾಡುವಾ
ತುರತರಭಾವಮಂ ಬರೆದ ಭಾವಮನೀಕ್ಷಿಸಿ ನಕ್ಕಳಿನ್ನೆಗಂ   ೧೪೫

ಮಾನವಮೀನಕೇತನ ಮನಂಗೊಳೆ ನಿನ್ನೊಡನಾಡಿ ನೆತ್ತಮಂ
ತಾನುಱೆ ಸೋಲ್ತು ಮುದ್ದುಗಳನೀವೆಡೆಯೊಳ್ ಮಿಗಿಲಾಗಿ ಕೊಂಡೆಯೆಂ
ದಾ ನಳಿನಾಕ್ಷಿ ನೀಂ ಮಗುಳ್ದಿತ್ತಪೆನೆಂದು ತೊಂಡೆವಾ
ಯಾನನಮಂ ತಗುಳ್ಚಿದೆಡೆಯಂ ನಡೆನೋಡಿ ಮೃಗಾಕ್ಷಿ ನಾಣ್ಚಿದಳ್            ೧೪೬

ವ : ಮತ್ತಮೀ ಬರೆದ ಕೇಳೀನಿಳಯದೊಳ್

ಅದನೇನೆಂದಪೆನೀಕೆ ತನ್ನನೊಲವಿಂ ನೀನಪ್ಪಿದಂತಿರ್ದ ಭಾ
ವದ ಚಿತ್ರಾಕೃತಿಗಾಣುತಾವಳಿವಳೆಂದಕ್ಷಿದ್ವಯಂ ಕೆಂಪನಾ
ಳ್ದುದುಮಾಗಳ್ ಬಗೆಗಂಡು ದರ್ಪಣಮನೊಯ್ದಾಂ ತೋಱಲಂತಾಕ್ಷಣಂ
ವದನಾಂಭೋಜಮರಲ್ದು ಪೊಂಗಿ ಕಳೆದಳ್ ತನ್ವಂಗಿ ರೋಮಾಂಚಮಂ       ೧೪೭

ವ : ಆಗಳ್

ಮಡದೀಸೌಭಾಗ್ಯಸಂಪನ್ನೆಗೆ ನೆಗಳ್ದೆಸೆವೀ ಚೆನ್ನೆಗೇನೆಂದು ನೀಂ ಕ
ನ್ನಡಿಯಂ ಕಣ್ಗೊಳ್ವಿನಂ ತೋಱಿದೆ ಮದವತಿ ತನ್ನಂದಮಂ ಚೆಂದಮಂ ಕಂ
ಡೊಡೆ ಪೇಳೀ ಚಿತ್ರವಿದ್ಯಾಕಳೆ ಮಸುಳಿಸದೇ ರೂಢಿವೆತ್ತೆನ್ನ ಕೆಯ್ ಜಾ
ಣ್ಗಿಡದೇ ಪೂಣ್ದೀಕೆಯಾಕಾರಮನುಱೆ ಬರೆಯಲ್ ಬರ್ಕುಮೇ ಬಾರದಾರ್ಗಂ            ೧೪೮

ವ : ಎಂದು ವಕ್ರೋಕ್ತಿಯಿಂದೆನ್ನಂ ತೆಗಳ್ದ ತನ್ನಂ ಪೊಗಳ್ವ ಚಿತ್ರಿಕೆಯ ಚೇತಶ್ಚಕೋರಮಂ ದರಸ್ಮಿತ ಚಂದ್ರಿಕೆಯನಲರ್ಚಿ ಮತ್ತೀಯೆಡೆಯೊಳಚ್ಚಿಱಿದಂತಣ್ಕೆಗೆಯ್ದ ಪಚ್ಚುಗೂಂಟಮಂ ಕಂಡು

ನಲವಿಂ ನಾನಾವಿಧಕ್ರೀಡೆಯೊಳಖಿಳ ಕಳಾವಲ್ಲಭಂ ವಲ್ಲಭಂ ತ
ನ್ನೊಲವೆನ್ನೊಲ್ದಿಚ್ಚೆಯಿಂ ಪೆರ್ಚಿಸೆ ನೆರೆವೆಡೆಯೊಳ್ ತೊಟ್ಟನೋರೋರ್ಮೆ ಗೋತ್ರ
ಸ್ಖಲನಂ ಕೆಯ್ಗೆಣ್ಮ ಲಾನುತ್ಪಲದಲ ವಿಲಸನ್ಮಾಲಿಕಾಲೋಲ ನೇತ್ರಾಂ
ಚಲದಿಂದೇಕಾಂತದೊಳ್ ಪೊಯ್ದುದನಱಿದಿವಳೆಂತೆಂತೊ ಚಿತ್ರಕ್ಕೆ ತಂದಳ್   ೧೪೭

ವ : ಎಂದನುರಾಗಿಸುವ ತನ್ನ ಭಾವಮಂ ಕೆಳದಿಯರಱಿಯದಂತೆ ಮಱೆ ಮಾಡುತ್ತೆ ಮತ್ತೆ

ಭುವನಮನೆಯ್ದೆ ಮೋಹಿಸುವ ನಿನ್ನಯ ರೂಪನೊಱಲ್ದು ನೋಡಿ ಸಂ
ಭವಿಸೆ ಮುದಶ್ರುಗಳ್ ಮಗುಳೆ ಭಾವಿಸಿ ಭಾವಿಸಿ ಕರ್ಣಪೂರ ಕೈ
ರವದ ರಜಂ ತೆಱುದಿರದೆ ಮೆಲ್ಲಲರಿಂ ಪೊಱಸೂಸಿ ಪೊಕ್ಕುದೆಂ
ಬವಚಱೊಳೀಕೆ ಚಾಮರದ ಕಾಮಿನಿಯಂ ಕಿಸುಗಣ್ಚಿ ನೋಡಿದಳ್  ೧೫೦

ವ : ಮತ್ತಮೀಯೆಡೆಯೊಳ್ ಮನುಜಕಂಠೀರವ ನಿನ್ನ ಸುರತೋತ್ಕಂಠಭಾವಮಂ ಕಂಡು

ನುಡಿದಪೆನೆಂಬಿನಂ ಪ್ರಿಯದೆ ನಂಬಿಸಿ ಭೂಭುಜನೆನ್ನ ನೀವಿಯಂ
ಪಿಡಿದಪೆನೆಂಬಿನಂ ಮೊಗದೊಳುಣ್ಮುವ ನುಣ್ಬೆಮರಂ ಕರಾಬ್ಜದಿಂ
ತೊಡೆದಪೆನೆಂಬಿನಂ ನಯದಿನೀ ನಳಿದೋಳ್ಗಳ ನೀಳ್ದ ತೋಳ್ಗಳಿಂ
ತೊಡರ್ದಪೆನೆಂಬಿನಂ ಬರೆದಳೆಂಬನುರಾಗಮನೆಯ್ದಿದಳ್ ನೃಪಾ     ೧೫೧

ವ : ಅಂತತನುಭಾವಕ್ಕೆ ಬಂದ ಭಾವದ ತೆಱನಮಱಿಸಿ ನೋಡುವ ಬಗೆಯಱಿದುಱುವ ಕೆಳದಿಯರೊಳೊರ್ವ ಭಾವಕಿ

ಈ ನಲ್ಲನ ಪೆಱೆನೊಸಲೊಳ
ಗೇನಲತೆಗೆವಜ್ಜೆಯೆಂದು ಬೆಸಗೊಳೆ ಸತಿ ಲೀ
ಲಾ ನಿಜಹಾಸದೆ ಮುಸುಕಿದ
ಳಾನತಮುಖಿ ತನ್ನ ಚೆನ್ನ ಪದಪಲ್ಲವಮಂ     ೧೫೩

ವ : ಮತ್ತಮೊರ್ವಳೀಯೆಡೆಯ ಸುರತಾವಾಸನೋಪಚಾರಮಂ ವಿರಚಿಸುವ ದೇವರ ಪಡಿವರಿಜಂ ಕಂಡು

ತಾಱವ ಱಾದ ಸೂಸುಗುರುಳಂ ತವೆ ತಿರ್ದುವ ತೀರ್ಕೆಯೊಳ್ಪಮ
ಣ್ಮೀಱಿದ ಸುಯ್ಗೆ ಪಾಯ್ವ ಮಱಿದುಂಬಿಯನೋವದೆ ಸೋವ ಬೀಗಿ ಬೆ
ಳ್ಪೇಱಿದ ತೊಂಡೆವಾಯ್ಗೆ ನಱುದಂಬುಲಮಂ ಕುಡುಕಿಕ್ಕುವಂದಮಂ
ತೋಱೆ ಕಡಂಗಿ ತೋಱಿದುದು ಕಣ್ಗುಡಿಯೊಳ್ ನಸುಜರ್ವು ಕಾಂತೆಯಾ      ೧೫೩

ವ : ಆ ಪುಸಿಮುನಿಸನಱಿದೋರ್ವ ಪರಿಹಾಸ ಕುಶಲೆಯೀಯೆಡೆಯ ಸಂಭೋಗ ಸಂಭ್ರಮಂ ತೋಱಿ

ಭಂಗಿವಡೆದತ್ತು ಸುರತದೊ
ಳಂಗಂ ಕಳಕಂಠಕಂಠಿ ಪೇಳಿವಳಿನ್ನಿಂ
ನಿಂಗೊರಲದನಿಯನೆಂತು ಮ
ನಂಗೊಳೆ ಬರೆದಪ್ಪಳೆಂದು ನಗಿಸಿದಳೀಗಳ್       ೧೫೪

ವ : ಆಕೆಯೊಡನೆ ಮತ್ತೊರ್ವಳ್ ರಯ್ಯಮಾದೊಳ್ನುಡಿಯ ಕಡುಜಾಣೆ

ಬಂದೆಳೆಜವ್ವನಂ ಬಯಸುವಗ್ಗದ ರೂಪು ಪೊದಳ್ದ ನಲ್ಮೆ ತ
ಳ್ತೊಂದಿದ ಚೆಲ್ವ ದಂಪತಿಯಿದಾರೆನೆ ಕುಂದದರಸ್ಮಿತಾಸ್ಯೆ ಬಾ
ಯ್ಗುಂಗದೆ ಕಾಮನುಂ ರತಿಯುಮೆಂದೆನೆ ಕರ್ವಿನ ಬಿಲ್ಲದೆಲ್ಲಿ ಪೋ
ಯ್ತೆಂದೊಡೆ ನಾಣ್ಚಿ ಮಾಧವಿ ಮುಗುಳ್ತವೊಲೀಕೆಯದೇಂ ಬೆಮರ್ತಳೋ     ೧೫೫

ವ : ಎಂದಾ ಚತುರೆ ಚತುರಕಳಾವಿಳಾಸಂಗೆ ವಿನೋದದೊಳಮಾದೊಡಮೀಕೆ ನಿನ್ನ ನೇಹಮೆ ಪಾಡುಂಗೂಡುಮಾಗಿ ನೋಡುತ್ತುಮಿರ್ದೀಯೆಡೆಯೊಳ್ ಬರೆದ ಕರಿಕಳಭ ಕ್ರೀಡೆಗಳನಾಳೋಕಂಗೆಯ್ದಾಗಳ್ ತೊಟ್ಟುಮಾರೊಳಮುಸಿರದಿರ್ದಪಳೆನೆ ರಾಜ ಸರ್ವಜ್ಞನಾ ರಾಜ್ಞಿಯ ಮನದ ಬಯಕೆಯನಱಿದು ತಾಂ ಕಂಡ ಪುತ್ರೋತ್ಪತ್ತಿ ಕಾರಣಮಪ್ಪ ಸ್ವಪ್ನಂಗಳಂ ನೈಮಿತ್ತಕರ್ ಪೇಳ್ದ ನಿಮಿತ್ತಂಗಳಂ ನಿರೂಪಿಸಿ ಕಾಂತೆಯಂ ಸಂತಮಿಡುತ್ತೆ ಮನದೊಳ್ ಮಱುಗಿ

ಈ ಕುಲವತಿಗೀ ಗುಣವತಿ
ಗೀ ಕೂರ್ಮೆಯ ರೂಪವತಿಗೆ ನಂದನನೊಗೆದಿ
ಕ್ಷ್ವಾಕುಲತಿಲಕನೆನಿಸದೊ
ಡೇಕೆನ್ನಯ ಬಾಳ್ಕೆಯೆಂದು ಸುಱ್ಱನೆ ಸುಯ್ದಂ ೧೫೬

ವ : ಅಂತು ಮನದೊಳ್ ಮಱುಗಿ

ಘನಮಹಿಮಾಭಿರಾಮನೆನಿಪಾದಿವರಾಹನ ಕೋಡೊಳಿರ್ದನಂ
ತನ ಪೆಡೆಯೊಳ್ ಬೆಡಂಗುವಡೆದಂದದಿನೀನಳಿತೋಳೊಳೇಳ್ಗೆವೆ
ತ್ತನುದಿನಮೊಪ್ಪಿ ತೋರ್ಪಖಿಳಭೂಭರಮೆನ್ನ ಬಳಲ್ಕೆ ಪಿಂಗೆ ನಂ
ದನನ ಸಮಗ್ರಬಾಹು ಶಿಖರಾಗ್ರದೊಳೆಂದಳವಟ್ಟು ತೋರ್ಕುಮೊ               ೧೫೭

ಭುವನಕ್ಕಕ್ಕಜಮಾಗಲೀಕ್ಷಿಸೆ ಪೊದಳ್ದಿಕ್ಷ್ವಾಕು ಸಂತಾನದು
ದ್ಭವಮಿಂತೇಕೆಡೆಗೊಟ್ಟುದೆಂಬ ಪಿರಿದುಂ ಪೀಡಾತಮಂ ಪೊರ್ದೆ ಬಾ
ಡುವ ಸಾಮ್ರಾಜ್ಯರಮಾ ಮುಖಾಂಬುರುಹಮಿಂಬಿಂ ಪೊಂಗುವಂತಂದು ತೋ
ಱುವುದೋ ಮತ್ಕುಲಪೂರ್ವಶೈಲದೊಳಪತ್ಯಾದಿತ್ಯನಿತ್ಯೋದಯಂ           ೧೫೮

ವ : ಎಂದವನಿಕಾಂತಾ ಸಂತಾನ ಸಂಜೀವನಾಭಿಲೋಪಚಿಂತಾತುರನಾಗಿ ಬಾಯ್ವಿಡುವ ಸಮಯದೊಳಭ್ರ ಸಮಯಮಮರಚಾಪಂಬಿಡಿದು ಚಾತಕ ಚಕ್ರವರ್ತಿಯ ಚಾವಡಿಗೆ ಬರ್ಪಂತೆ ವಿಚಿತ್ರ ವೇತ್ರಲತೆವೆರಸುತ್ತೆ ಕೆಯ್ಮುಗಿವುತ್ತೆ ಬಂದು

ಕಂಚುಕಿ ಬಾಗಿಲೊಳೊರ್ವನು
ದಂಚಿತ ಪುಳಕಾಂಕುರಪ್ರಸೂನ ಫಲಾಮೋ
ದಾಂಚಿತ ಕರಶಾಖಂ ಬಂ
ದಂ ಚಿತ್ತೈಸರಸ ಸರಸ ಸಂತಾನದವೋಲ್        ೧೫೯

ವ : ಎಂದು ಬಿನ್ನವಿಸಿದ ಬಿನ್ನಪಮುಪಶ್ರುತಿಯಾಗೆ ಬಿಗಿ ಬರವೇಳೆಂದು ಬೆಸಸೆ ಮಹಾ ಪ್ರಸಾದಮೆಂದಾ ದ್ವಾರಪಾಲಂ ವನಪಾಲನಂ ಕಳುಪಲವಂ ಸರ್ವರ್ತುಕ ಪ್ರಸೂನ ಫಲಂಗಳಂ ಕಾಣ್ಕೆಗೊಟ್ಟು ಕಣ್ದಣಿಯೆ ಕಂಡವನೀಂದ್ರದರ್ಶನೋತ್ಕರ್ಷಮುನೀಂದ್ರ ದರ್ಶನೋತ್ಕರ್ಷ ಹರ್ಷದೊಳ್ ಬೆರಸೆ ಧರಿಸಲಾಱದೆ ಬಳ್ಕುವಂತೆ ಮೊಕ್ಕಳಮೆಱಗಿ ಕೆಯ್ಮುಗಿದು ನಿಂದು

ಪದತಳಕಾಂತಿಗಳ್ ಪೊರೆಯೆ ಪಲ್ಲವಿಸಿರ್ದುದೊ ಮೇಣ್ ನಖಾಂಶುವಿಂ
ಪುದಿದರೆ ಪೂತುದೋ ನಿಜದಯಾರಸ ಪೂರಮೆ ಪಾಯೆ ಪೆರ್ಚಿ ಪೊಂ
ಗಿದುದೊ ಲತಾವನೀರುಹಮೆನಲ್ಕೆಲೆ ದೇವರ ದೇವ ನಂದನಾ
ಭ್ಯುದಯದ ಕಾರಣಂ ಗಗನದಿಂದಿಳಿತಂದನದೊರ್ವ ಚಾರಣಂ        ೧೬೦

ವ : ಎಂದಾನಂದರಸ ವೀಚೀವಿಚಾರಿತ ಪ್ರಚೇತಂ ಪ್ರೀತಿಯಿಂ ಪ್ರಚೇತನೆಂಬ ದಿಂಗಬರ ಮುನೀಂದ್ರನ ಬರಮನಱಿಪೆ ನೃಪೇಂದ್ರಂ ನಂದನಾಭ್ಯುದಯ ವಾಕ್ಯ ಪದಾವಕರ್ಣನ ಪ್ರಸನ್ನ ಮುಖನಖಂಡ ಮಣಿಮಂಡನ ಮರೀಚಿ ವಿಚಿತ್ರಿತ ನಿಖಿಲ ದಿಗ್ಮುಖಂ ಸುಖಾಸೀನಂ ನಡೆದೇಳಡಿಯಂ ನಡೆದು ಮುನೀಂದ್ರನಿರ್ದ ದಿಗ್ಮುಖಾಭಿಮುಖನಾಗಿ ಕೆಯ್ಗಳಂ ಮುಗಿದು ಭಕ್ತಿಭರದಿಂ ಹರಿಸಿದಂತೆ ಮಗುಳೆ ಕುಳ್ಳಿರ್ದು

ಮನದೊಳ್ ನಂದನಲಾಭ ಚಿಂತೆಗನುಕೂಲಂ ತಾನೆನಲ್ ತಂದನಂ
ದನ ನಾನಾ ಫಲಪುಷ್ಪಮಂ ತಳೆದುಕೊಂಡುತ್ಸಾಹದೊಳ್ ತಾನೆ ಮಾ
ನಿನಿಗಾನಂದಮನಿತ್ತು ಕೂರ್ತು ಕರೆದಿತ್ತಂ ಚಿತ್ರಮಾರ್ವಂತು ನಂ
ದನ ಪಾಲಂಗಭಿವಾಂಛಿತಾರ್ಥ ಫಲಮಂ ಸನ್ಮಾನಜನ್ಮಾಲಯಂ     ೧೬೧

ಪುಳಕಾಂಕೂರಂಗಳಂ ಪೂರಿಸಿ ನವ ಸುಮನೋವೃದ್ಧಿಯಂ ಬೇಗದಿಂ ತ
ನ್ನೊಳಮುದ್ಯಾನಾವನೀಜಾತದೊಳಮೊದವಿರಲ್ ಮಾಡಿದಾತ್ಮಪ್ರಭಾವೋ
ಜ್ವಳಯೋಗೀಂದ್ರ ಕ್ರಮಾಂಭೋರುಹದೊಳೆಱಗುವಾಸಕ್ತಿಯಿಂದಾ
ದಲಂಪಂ ತಲೆದಿರ್ದಂ ವಿಶ್ವವಿದ್ಯಾಸಮುದಯ ಸುಮನಸ್ಸಂಚರಂ ಚಂಚರೀಕಂ          ೧೬೨

ಗದ್ಯ || ಇದು ಸಕಲ ಸುಕವಿಜನ ಮನಸ್ಸುಧಾಕರಕಾಂತ ದ್ರವೀ ಕರಣ ಕಾರಣ ಕರ್ಣಾಟಕಕವಿತಾ ಕಲಾವಿಲಾಸವಿಧುಮದು ಮಧುರ ಕವೀಂದ್ರ ನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಪುತ್ರದೋಹಳವರ್ಣನಂ ತೃತೀಯಾಶ್ವಾಸಂ.