ಪಿರಿದುಂ ಕಣ್ಗಳಿನೀಂಟಿ ರೂಪರಸಮಂ ಶ್ರೋತ್ರಂಗಳಿಂದೀಂಟಿ ಸೌಂ
ದರಭಾಷಾರಸಮಂ ಸುಶೈತ್ಯಜಳಮಂ ಜಿಹ್ವಾಗ್ರದಿಂದೀಂಟಿಯುಂ
ಭರದಿಂ ತೃಪ್ತಿಯನೆಯ್ದದಧ್ವಗಜನಂ ತತ್ಕಾಮಿನೀ ಭೂರಿಭಾ
ಸುರಲಾವಣ್ಯರಸಾತಿರೇಕದೊದವಿಂದೆಂಬಂತೆ ತತ್ಕಾಲದೊಳ್        ೯೧

ಇಲ್ಲ ಜನೌಘಮಿಲ್ಲದ ಮಹಾಸ್ಥಳಮಾ ಜನಮುಂ ಧನಾಳಿ ಮ
ತ್ತಿಲ್ಲದುದಿಲ್ಲ ತದ್ಧನಮುಮುನ್ನತದಾನವಿಹೀನಮಾದುದಂ
ತಿಲ್ಲದದುದ್ಘದಾನಮುಮಶಶೇಷ ವಿಶೇಷಿತಪಾತ್ರಸಂಕುಳ
ಕ್ಕಲ್ಲದುದಿಲ್ಲ ತದ್ವಿಷಯದಲ್ಲಿ ನಿರಂತರಮೆಲ್ಲಿ ನೋಳ್ಪಡಂ    ೯೨

ಭ್ರಮದಸ್ತೋಕೇಷುಯಂತ್ರಂಗಳ ಬಿದಿರಿತದಿಗ್ಭಾಗ ಚೀತ್ಕಾರನಾದೋ
ದ್ಗಮದಿಂದಂ ಪಾಡುವಂತಿರ್ದುದುಪವನ ವಿಲೋಲೋಪ್ತಸಸ್ಯಂಗಳಿಂ ನೃ
ತ್ಯಮನಾಗಳ್ ಮಾಳ್ಪವೊಲಿರ್ದುದು ಮಧುಕರಝೇಂಕಾರರಾವಂಗಳಿಂ ವಾ
ದ್ಯಮನಾದಂ ಬಾಜಿಪಂತಿರ್ದೆಸೆದುದು ವಿಷಯಶ್ರೀಸಮೃದ್ಧಿಪ್ರಮತ್ತಂ         ೯೩

ವ : ಮತ್ತಮಾ ದೇಶಮಾಕಾಶದಂತನಂತಮಹತ್ವಮಹನೀಯಮುಂ ಚಂದ್ರ ಬಿಂಬದಂತೆ ಗೋಕುಳಸಮಾಲಂಬನಕರಂಬಿತಮುಂ ಚಕ್ರವರ್ತಿಯಂತೆ ಮಹಿಷೀಸಮುಪ ಗತಮುಂ ಬ್ರಹ್ಮನಂತೆ ಸರಸ್ವತೀಸಮೇತಮುಂ ವಿಷ್ಣುವಿನಂತಕ್ಷೂಣಲಕ್ಷ್ಮೀ ವಿರಾಜಿತಮುಂ ಮಹೇಶ್ವರನಂತೆ ವಿಲಸದುಮಾಸಮಾಲಿಂಗಿತಮುಂ ಸ್ವರ್ಗದಂತೆ ವಿಬುಧಾವಳಿ ಸಮುದ್ಭೂಷಿತಮುಂ ಮೋಕ್ಷದಂತೆ ನಿತ್ಯಸೌಖ್ಯಲಕ್ಷಿತಮುಂ ಮಹಾಕವಿವಿರಚಿತ ಶ್ರವ್ಯಕಾವ್ಯದಂತೆ ಪರಾರ್ಥಸಾರ್ಥಸಮರ್ಥಮುಂ ಸಂವತ್ಸರದಂತೆ ಬಹುಧಾನ್ಯವಿಭವ ವಿಭ್ರಾಜಿತಮುಂ ದೇವೇಂದ್ರನಂತೆ ರುಂದ್ರಸುಧರ್ಮಾಭಿರಾಮಮುಂ ವಿದಗ್ಧಸ್ತ್ರೀಯಂತೆ ವರೋರುಶೋಭಾಪರಿಕಳಿತಮುಂ ಸಮುದ್ರದಂತೆ ವಿವಿಧವಿದ್ರುಮಸಮೃದ್ಧಿಸಹಿತಮುಂ ನಾಗಲೋಕದಂತೆ ಭೋಗೇಂದ್ರಾವಭಾಸಿತಮುಮೆನಿಪುದಂತುಮಲ್ಲದೆಯುಂ

ಕರಕರಪೀಡನಂ ಕುಚದೊಳುದ್ಘಮದಂ ಗಜದೊಳ್ ಗುಣೋಜ್ಝನಂ
ಶರದೊಳನೂನಚಿಂತೆ ಮುನಿಯೊಳ್ ದ್ವಿಜಬಾಧೆ ವಿದಗ್ಧಕಾಮಿನೀ
ಸುರತದೊಳುಗ್ರಕಂಟಕಭಯಂ ವರಕೇತಕಿಯೊಳ್ ನಿರೀಕ್ಷಿಸು
ತ್ತಿರೆ ದೊರೆಕೊಳ್ಗುಮಾ ವಿಷಯದೊಳ್ ದೊರೆಕೊಳ್ಳುದದಾವಕಾಲಮುಂ    ೯೪

ಪೊಡೆಯೆಂಬಿದು ಬೆಳೆಗೆಯ್ಯೊಳ್
ಪಿಡಿಯೆಂಬಿದು ಕರಿಣಿಯೊಳ್ ವಿಚಾರಿಪೊಡೆಂದುಂ
ಬಡತನಮೆಂಬಿದು ಪೆಂಡಿರ
ಗಡಣದ ನಡುವಿನೊಳಮಲ್ಲದಿಲ್ಲಾ ನಾಡೊಳ್           ೯೫

ನಿರುಪಮಮಪ್ಪಾ ದೇಶಂ
ಪರಿಕಿಪೊಡಂ ಪರಮನೀತಿ ಕಮನೀಯತರಂ
ಸುರುಚಿರಮಂಗಳ ಸಂಗರ
ನಿರಂತರಂ ಪರಮನೀತಿ ಕಮನೀಯತರಂ          ೯೬

ವ : ಅಂತತಿಪ್ರಸಿದ್ಧಿಪ್ರವರ್ಧಮಾನಮುಂ ನಿರವಧಿಸಂಪತ್ಸಮೃದ್ಧಿ ಸಮೃದ್ಧ ಮುಮೆನಿಪ ತದುತ್ತರಕೋಶಳದೇಶರಮಣೀರಮಣೀಯಮುಖಸರಸೀರುಹಮೆಂಬಂತೆ ಸಮಸ್ತ ಜನನಯನಮನೋಮಧುಕರನಿಕರಕ್ಕೆ ಪರಿತೋಷಪರಿಷದುತ್ಕರ್ಷಮಂ ಮಾಡುತ್ತುಂ

ಪಿರಿದುಂ ರತ್ನಪುರಂ ಪುರಂ ಸೊಗಯಿಕುಂ ಮುಕ್ತಾಮಯಾಂಗ ಪ್ರಜೋ
ತ್ಕರದಿಂದಂ ನವಪದ್ಮರಾಗ ಮಹಿತಸ್ತ್ರೀರತ್ನಸಂದೋಹದಿಂ
ಪರಿಪಂಥಿವ್ರಜಮೂರ್ಧ್ವವಜ್ರನೆನಿಪ ಕ್ಷ್ಮಾಪಾಲ ನಿಂದಾಪಣೋ
ದ್ಧುರಸಂಸ್ಥಾಪಿತ ರತ್ನರಾಶಿಚಯದಿಂ ತಾಳ್ದಿತ್ತದನ್ವರ್ಥಮಂ      ೯೭

ಹರಿಕಾಂತಾಸಮುಪಚಿತಂ
ಪರಿವಿಲಸಿತ ಭೋಗಭೂಮಿ ಮಣಿಕೂಟಯುತಂ
ಪುರುರತ್ನಾಕರಮಾದಂ
ಪುರಮೆಸೆಗುಂ ಜಂಬುದೀಪದಂತನವರತಂ        ೯೮

ಗೋತ್ರವಿಭೇದಿಗಾವಸಥಮಾದ ಸುರಾಲಯಮಾದ ಮತ್ತೆಯುಂ
ಧಾತ್ರಿಯನೊಲ್ಲದಿರ್ದಮರಪತ್ತನಮಂ ನಗುಗುಂ ದಲೀಪುರಂ
ಗೋತ್ರಸುಪೋಷಿಗಳ್ಗೆ ವರಧರ್ಮಪರರ್ಗೆ ನಿವಾಸಮಾದ ತ
ದ್ಧಾತ್ರಿಯೊಳೊಂದಿ ಬಾಳ್ವೆನಗೆ ಪಾಸಟಿಯಲ್ತಿದುಮೆಂದು ನಾಡೆಯುಂ         ೯೯

ಕವಿಸೇವ್ಯಂ ಕಾವ್ಯಪೀಡಂ ನಿರುಪಮಬಹುಧಾಮಾತಿರಮ್ಯಂ ಬುಧಶ್ರೀ
ಪ್ರವರಂ ಜ್ಯೇಷ್ಠಾಭಿಯೋಗಂ ಸಮುಪಗತಲಸನ್ಮಂಗಳಂ ಸದ್ಗುರೂಚ್ಚಂ
ನವಗಂಧರ್ವಾಭಿರಾಮಂ ಬಗೆವೊಡೆ ಪರರಿಂ ದುರ್ನಿರೀಕ್ಷ್ಯಂ ಪುರಂ ಭಾ
ನುವ ರಾಜದ್ಬಿಂಬಮೆಂಬಂದದೆ ವರಕಮಳಾನಂದಮಂ ಮಾಳ್ಕುಮೆಂದುಂ     ೧೦೦

ಅತ್ಯುಚ್ಚೈಸ್ತನಕೂಟರಮ್ಯಮತುಳಂ ಪ್ರಾಕಾರಸಂಶೋಭಿತಂ
ಪ್ರತ್ಯಗ್ರಪ್ರಮಾದಾಧಿರೂಢಮಸಕೃತ್ಸಂತೋಷ ಸಂಪಾದಕಂ
ಸ್ತುತ್ಯಂ ಭೂಷಿತರತ್ನ ಕಾಂತಿಚಯದಿಂ ಚಿತ್ರೀಯಮಾಣಾಂಬರಂ
ನಿತ್ಯಂ ಸ್ತ್ರೀಜನದಂತೆ ಕಣ್ಗೆ ಸೊಗಸಂ ಮಾಡುತ್ತುಮಿರ್ಕುಂ ಪುರಂ    ೧೦೧

ಕಳಹಂಸಾವಳಿ ಪುಷ್ಪಜಾತಿ ಸುಕನತ್ಪತ್ರಾಳಿ ರಾಜತ್ಪಳಾ
ಕಳಿತಾನೋಕಹಪಂಕ್ತಿ ಕೀರ ಪಿಕ ಪಕ್ಷಿಶ್ರೇಣಿ ಭಾಸ್ವಲ್ಲತಾ
ವಳಿಯಿಂ ಚಿತ್ರಿತಮಾದ ಪಚ್ಚೆಯ ಮನೋಹೃದ್ವಸ್ತ್ರಮಂ ತತ್ಪುರೀ
ವಿಳಸತ್ಕಾಮಿನಿಯುಟ್ಟಳೆಂಬ ತೆಱದಿಂ ತನ್ನಂದನಂ ರಾಜಿಕುಂ         ೧೦೨

ವ : ಅದಱ ಸುತ್ತಲುಂ

ವಿರಹಿಜನಂಗಳ ಚಿತ್ತೋ
ದ್ಧುರ ದಾರುವಿದಾರಣಾರ್ಥಮಾಗಿ ಮನೋಜಂ
ಕರಗಸದ ಕೋಶಮಂ ತಂ
ದಿರಿಸಿದವೊಲ್ ಕೇತಕೀವನಾವೃತೆ ಮೆಱೆಗುಂ    ೧೦೩

ವ : ಮತ್ತಮಲ್ಲಿಂದೊಳಗೆ

ಆನುದ್ದಂಡತ್ವದಿಂದಾಕ್ರಮಿಸಿದೊಡಮದಂ ಸೈರಿಸಿರ್ದುಂ ನಭಶ್ರೀ
ತಾನೀಗಳ್ ಕೊಟ್ಟಳಾದಂ ತೆಱಪುಮನೆವಗಿಂತೆಂದು ಮತ್ತೀ ವನಶ್ರೀ
ನಾನಾಜಾತೀಯಮಪ್ಪೀ ಸುಫಲತತಿಯನೀಯಲ್ಕೆ ಹಸ್ತಂಗಳಂ ತ
ನ್ನಾನಂದೋದ್ರೇಕದಿಂದೆತ್ತಿದವೊಲೆಸೆವುವಾ ನಾಳಿಕೇರಂಗಳೆಂದುಂ   ೧೦೪

ಪರಿಗಾಯುದ್ಭೃಂಗಮಾಲಂ ಹೃದಯಭವವಿಕಾರಾನುಕೂಲಂ ವಿಯೋಗಾ
ತುರಚೇತೋವೃತ್ತಿಶೂಲಂ ಫಲವಿತರಣಶೀಲಂ ಪಿಕವ್ರಾತಲೀಲಂ
ವರಶಾಖಾಲೀವಿಶಾಲಂ ಕವಿಕೃತನುತಿಲೋಲಂ ಪ್ರಿಯಗ್ರೀಷ್ಮ ಕಾಲಂ
ಧರಣೀವಿಕ್ಷಿಪ್ತಮೂಲಂ ಪಡೆದುದು ಸೊಗಸಂ ಮಾರಸಾಲಂ ರಸಾಲಂ          ೧೦೫

ಚೆನ್ನಪಣ್ಗೊನೆಯ ಭರದಿಂ
ಸನ್ನತಮಾಗಿರ್ದು ಬಾಳೆಸಸಿಯೊಳ್ ಮಿಳಿರ್ಗುಂ
ತನ್ನ ಶಿಶುವಿಂಗೆ ಮೊಲೆಯಂ
ಮನ್ನಿಸಿ ಬಾಗಿರ್ದು ಕೊಡುವ ಬಾಲೆಯ ತೆಱದಿಂ            ೧೦೬

ಬೇರಿಂದಂ ಕಾಯ್ಗಳಂ ಪೇಱಿದ ಪಲಸುಗಳೆಲ್ಲೆಲ್ಲಿಯುಂ ಸತ್ಫಳಾಳೀ
ಭಾರಕ್ಕಂ ಬಳ್ಕುವೀ ಕವುಂಗುಗಳನವರತಂ ಪಣ್ಗಳಿಂ ತುಂಬಿದೀ ಜಂ
ಬೀರಂಗಳ್ ಪಕ್ವಮಾಗಿರ್ದುಱೆಬಿರಿದ ಫಲವ್ಯಾಪ್ತವದ್ದಾಡಿಮಂಗಳ್
ನಾರಂಗಂಗಳ್ ಕರಂ ತತ್ಪುರದುಪವನದೊಳ್ ನೋಳ್ಪಡಂ ಕುಂದವೆಂದುಂ    ೧೦೭

ತುಱುಗಿದ ಕಾಯ್ಗಳ ಭರದಿಂ
ನೆಱೆತಗ್ಗಿ ವಿಲಂಬಿಸಿರ್ದ ಮಾದಲಮೊಪ್ಪಿ
ತ್ತುಱುವ ನೆಲನೆಂಬ ತಾಯೊಳ್
ತಱಿಸಂದು ವಿಮೋಹದಿಂದೆ ಮುಂಡಾಡುವವೊಲ್        ೧೦೮

ಒಳಗೆ ಕತ್ತಲೆಯ ಮೊತ್ತಮ
ನೊಳಕೊಂಡೆಲೆವಳ್ಳಿಗಳ್ ದಿವಾಕರಕರಸಂ
ಕುಳಮಂ ನೂಂಕಲ್ ನಿಜಕರ
ತಳಮಂ ಬಿಡದೆತ್ತಿದಂತೆ ತಳೆದುವು ಚೆಲ್ವಂ       ೧೦೯

ವ : ಮತ್ತಮಾ ನಂದನವನಂ ತಮ್ಮಯ ಸುಮನೋವಿಸರದೊಳೊರ್ಮೆಯು ಮಾಱಡಿಗಳಂ ಪೊರ್ದಲೀಯದುದಱಿಂ ಸಜ್ಜನರ ಪೆಂಪಿಂಗಿಂಪಾದ ಸಂಪಗೆಗಳಿಂ ಬಹಳ ಪರಿಮಳಭರಾಸ್ವಾದನಲಂಪಟಂಗಳಾಗಿ ತುಂಬಿನ ತಾಣದೊಳಿಂಬಿನಿಂ ಕುಳ್ಳಿರ್ದ ಮಱಿದುಂಬಿಗಳ ಝೇಂಕಾರದಿಂ ತುಂಬಿ ಸಾರಮಾದುದಱಿಂ ಮನೋಜರಾಜ ದಿಗ್ವಿಜಯ ಪ್ರಮಾಣದೊಳೂದುವ ಸನ್ನೆಗಾಳೆಗಳೆಂಬಂತಿರ್ದ ಪುಷ್ಪಂಗಳಂ ಮೇದುರ ಮಾದಾ ಪಾದರಿ ಯಪಾದಪಂಗಳಿಂ ಭೂರಿತರರಾಗಾವಿಳತ್ವದಿಂದಶೋಕಂಗಳಾಗಿಯುಂ ಪಾಂಥರ್ಗೆ ಕಂದರ್ಪ ಶೋಕೋದ್ರೇಕಮಂ ಮಾಳ್ಪ ವಿಚಿತ್ರಮಹಿಮಾವಳಂಬನಮಾದುದಱಿಂ ವಿಳಾಸವತಿಯರಂತೆ ರಂಜಿಸುವ ಪಲ್ಲವಸಮುಲ್ಲಸದಶೋಕಾನೋಕಹಂಗಳಿಂ ಪೊಂಪುಳಿಯಾದ ಕಂಪಂ ಕೊಳಲೆಂದು ಬಂದೊಂದಿರ್ದಿಂದಿಂದಿರಂಗಳ ಘಾಸಿಯಿಂ ಸ್ಯಂದಮಾನ ಮಕರಂದಬಿಂದು ಸಂದೋಹದ ತಂದಲಂ ಸುರಿವುದಱಿಂ ಕಾರ್ಗಾಲದ ಮೇಘಂಗಳೆಂಬ ಶಂಕೆಯನಂಕುರಿಸುತ್ತಿರ್ದ ಸುರಹೊನ್ನೆಯ ಮರಂಗಳಿಂ ಕಾಮನ ರತಿಯ ಮದುವೆಯೊಳ್ ಪರಿಲಂಬಮಾನ ಚಾಮೀಕರ ಚಾಮರಂಗಳಿಂದಳಂ ಕೃತಮಾಗಿ ಮಾಡಿದ ವಿವಾಹಮಂಡಪಂಗಳೆಂಬಂತೆ ಕಣ್ಗೊಂಡು ಮೆಱೆವ ತೋರಮಪ್ಪ ಪಣ್ಗೊಂಚ ಲಿಂದಂಚಿರಮಾದ ದ್ರಾಕ್ಷಾಮಂಡಪಂಗಳಿಂ ಕುಸುಮಶರಂ ತನ್ನ ಪುಷ್ಪಂಗಳೆಂಬ ಬಾಣಂಗಳಿಂ ತುಂಬಿದ ಪತ್ತಳಿಕೆಗಳನಲ್ಲಿ ತಂದಿರಿಸಿದನೆಂಬಂತೆ ಪಿರಿದಪ್ಪ ಪೂಗಳ ಬಳಗಮನೊಳಕೊಂಡಗುರ್ವುವಡೆದುರ್ವಿ ಕೊರ್ವಿ ಪರ್ವಿದ ಮತಲ್ಲಿಕಾವಲ್ಲೀವಲ್ಲರಿ ಗಳಿಂದತ್ಯಂತರಮಣೀಯಮಾಗಿರ್ದುದಂತುಮಲ್ಲದೆಯುಂ

ಪಕ್ವಫಲಂಗಳಿಂದೆ ರಸನೇಂದ್ರಿಯಮಂ ವರಪುಷ್ಪಗಂಧದಿಂ
ಮಿಕ್ಕಿರೆ ನಾಸಿಕೇಂದ್ರಿಯಮನುನ್ನತಶೋಭೆಯಿನೀಕ್ಷಣಂಗಳಂ
ಸೊಕ್ಕಿದ ಭೃಂಗಚಾರುರವದಿಂ ಶ್ರವಣೇಂದ್ರಿಯಮಂ ಪ್ರವಾಳಿಸ
ಚ್ಚಕ್ಕಣ ಶಯ್ಯೆಯಿಂದೆ ವಪುರಿಂದ್ರಿಯಮಂ ತಣಿಪುತ್ತುಮೊಪ್ಪುಗುಂ            ೧೧೦

ವ : ಅದಱೊಳೇಕಪ್ರದೇಶದೊಳ್

ಮಿಗೆ ವನಪಾಲಬಾಲಿಕೆಯರರ್ಥಿಯಿನುದ್ಘಪರಾಗದೊಳ್ ಕರಂ
ಜಗಲಿಗಳೋಳಿಯಂ ಸಮೆದು ಪೋಗಲೊಡಂ ಸಲೆ ದೀವದಂಚೆವಿಂ
ಡುಗಳದಱಲ್ಲಿ ಸುತ್ತಿ ಸುಳಿದಾಡುತಮಿರ್ದುವಗಾರಮಾದವೊ
ಳ್ಪಿಗೆ ಕಲಿವಂತೆ ತತ್ಪುರಪುರಂಧ್ರಿಯರೊಳ್ನಡೆಯೊಂದು ಜಾಣ್ಮೆಯಂ           ೧೧೧

ಮದನನ ಬಿರುದಾವಳಿಯಂ
ಪದೆದುಗ್ಘಡಿಸುತ್ತುಮಿರ್ದು ಭಟ್ಟರ ತೆಱದಿಂ
ಮದಕಳಕೋಕಿಳಕುಳಮೊ
ಲ್ದದಱೊಳ್ ಬಗ್ಗಿ ಸುತುಮಿರ್ದುದಗ್ಗಳದಿಂದಂ          ೧೧೨

ಸ್ಮರನೆಂಬ ಬೇಂಟೆಕಾಱಂ
ವರತದ್ವದೊತ್ತುಗೊಂಡು ವಿರಹಾರ್ತಮೃಗೋ
ತ್ಕರವಂ ಕೊಂದನವರತಂ
ಭರದಿಂ ಮೃಗಯಾವಿನೋದದೊಳ್ ಕ್ರೀಡಿಸುವಂ           ೧೧೩

ಆ ಪುರಲಕ್ಷ್ಮಿಯಂ ಸಮದಿಗಂಗನೆಯರ್ ನಡೆನೋಡಿದಂದು ಮ
ತ್ತೇಪಡಿಮಾತೊ ದೃಷ್ಟಿವಿಷಮಕ್ಕಿರದೆಂದು ವನಾಧಿದೇವಿ ಭೂ
ರೀಪ್ರಿಯದಿಂದೆ ತುಂಗತವಾಯುಸಮುತ್ಥಿತಪುಷ್ಪರೇಣುವೆಂ
ಬೀ ಪುರವಸ್ತ್ರದಿಂದಮದನೆಯ್ದೆ ಮುಸುಂಕುವಳಾವಕಾಲಮುಂ      ೧೧೪

ವ : ಅಂತಶೇಷಜನನಯನಮನಸ್ಸಮಾಕರ್ಷಣ ವಿದ್ಯಾದೇವತೆಯಂತೆ ಹೃದ್ಯಮಾದುದ್ಯಾನವನದಿಂದೊಳಗೆ

ಮುನ್ನಂ ಖ್ಯಾತಿಯನಾಂತಡಂ ಜಗದೊಳಾಂ ರತ್ನಾಕರಾಖ್ಯಾನದಿಂ
ದೆನ್ನಿಂದಗ್ಗಳಮಾಗಿ ರತ್ನಚಯಮಂ ತಾಳ್ದಿರ್ದುದೆಂದೀಕ್ಷಿಸಲ್
ಮುನ್ನೀರ್ ಬಂದೊಸೆದಿರ್ದುದೆಂಬ ತೆಱದಿಂದಾ ಪತ್ತನೋಪಾಂತದೊಳ್
ಮುನ್ನೂರ್ಮೀಚಯಖಾತಿಕಾವಳಯಮತ್ಯಾಶ್ಚರ್ಯಮಂ ಪುಟ್ಟಿಕುಂ          ೧೧೫

ಒಂದೆಡೆಯಲ್ಲಿ ಮಜ್ಜದಿಭದಾನದ ಕೂಟದಿನೆಯ್ದೆ ಕೃಷ್ಣಮಾ
ತ್ತೊಂದೆಡೆಯಲ್ಲಿ ತೇಂಕುವ ಲಸತ್ಕುಸುಮಾವಳಿಯಿಂದೆ ಶುಭ್ರಮಾ
ಯ್ತಂದ ಠಿ ಖಾತಿಕಾವಳಯಮೊಪ್ಪಿ ಮನೋಹರಮಾದುದೆತ್ತಲುಂ೧೧೬

ಜಲದೊಳ್ ಕ್ರೀಡಿಸುವಾ ಪುರ
ಲಲನಾಜನ ಗುರುಕುಚಾಗ್ರಕುಂಕುಮದಿಂದಾ
ಕಳಿತಂ ಪರಿಖಾತಂ ಮಂ
ಜುಳಮಾದುದು ರಾಗರಕ್ತಮೆಂಬಂತೆವೊಲಂ     ೧೧೭

ವ : ಮತ್ತಮಾ ಖಾತಿಕಾವಳಯದಿಂದೊಳಗೆ

ಥಳಥಳಿಪ ತನ್ನ ಕಾಂತಿಯ
ನಿಳೆಯೊಳ್ ಮಿಂಚುಗಳ ಶೋಭೆಯಂ ಬಿಡದೆಂದುಂ
ಬೆಳಯಿಸುತುಮಿರ್ಪ ಪೆಂಪಂ
ತಳೆದಾದಂ ಪೊನ್ನಕೋಂಟೆ ಕಣ್ಗೆಸೆದಿರ್ಕುಂ       ೧೧೮

ನಿರುಪಮಮಪ್ಪ ರತ್ನಶಿಖರಂಗಳಿನಾಗಸಮಂ ತುಡುಂಕುತಿ
ರ್ದುರು ಫಳದಾಯಿಯಾದ ವನದೋಳಿಯಿನೊಪ್ಪುವ ಪೊನ್ನಕೋಂಟೆಯಂ
ತರಣಿಹಯಂಗಳೀಕ್ಷಿಸಿ ಸುರಾದ್ರಿಯಿಂದೆಂದದುವಂ ಪ್ರದಕ್ಷಿಣೇ
ಕರಿಸುವ ಬುದ್ಧಿಯಿಂದೆಳವುತ್ತಲುಮಿತ್ತಲುಮಾ ರಥಾಂಗಮಂ       ೧೧೯

ಎನಗೆ ಸಮಾನಮಪ್ಪ ಪುರಮಿಲ್ಲ ಮಹೀತಳದೊಳ್ ಫಣೀಂದ್ರಪ
ತ್ತನಮಧರತ್ವಮಂ ತಳೆದುದಿಂದ್ರಪುರಂ ಮಿಗಿಲಾಗಿ ಮೇಗೆ ನಿಂ
ದನಣಸುಕೀರ್ತಿಯಂ ಪಡೆದುದೆಂದದನೀಗಳೆ ನೂಂಕಿದಪ್ಪೆನೆಂ
ದನುಪಮಾ ಸಾಲಹಸ್ತಮುಮನೆತ್ತಿದುದೆಂಬಿನಮೊಪ್ಪುಗುಂ ಪುರಂ  ೧೨೦

ಉತ್ತುಂಗಾಯತಮಪ್ಪ ಕೋಂಟೆಯುಭಯಶ್ರೇಣೀ ಸಮಾಲಂಬಿತಂ
ಪ್ರೋತ್ತಾಲಾಂಬುದಮಾಲೆಯೆಂಬ ವಿಲಸತ್ಪಕ್ಷಂಗಳಾಧಾರದಿಂ
ವೃತ್ತದ್ವೇಷಿಯ ಪಟ್ಟಣಕ್ಕೆ ಭರದಿಂ ದಾಳಿಟ್ಟು ತಂದಪ್ಪೆ ನಾಂ
ಮತ್ತೆನ್ನಲ್ಲಿಯ ಚೆಲ್ವನೆಂಬ ತೆಱದಿಂ ತತ್ಪತ್ತನಂ ರಾಜಿಕುಂ          ೧೨೧

ಮುನ್ನೆಂದುಂ ಬಲಯುಕ್ತರಪ್ಪ ಪಗೆಗಳ್ ದುರ್ಗರ್ವದಿಂದೆತ್ತಿಬಂ
ದೆನ್ನಂ ಮುತ್ತಿದರಾರುಮಿಲ್ಲ ದಿಟಮೆಂಬೀ ಖ್ಯಾತಿಯಂ ಸೂಱುಳಿಂ
ದಿನ್ನುಂ ಲೋಕಜನಕ್ಕೆ ಸೂಚಿಸುವವೊಲ್ ಪ್ರಾಕಾರಹಸ್ತಾಗ್ರದಿಂ
ದೌನ್ನತ್ಯಾಧಿಕಮಾದ ವಿಷ್ಣುಪದಮಂ ಮುಟ್ಟುತ್ತುಮಿರ್ಕುಂ ಪುರಂ           ೧೨೨

ಕನದಮರಿಶಿಖರಿಕೂಟದ
ಘನಗುಹೆಗಳಿನೆಂಬ ಶಂಕೆಯಿಂದಂ ತಾಂ ಬಂ
ದನಿಮಿಷಮಿಥುನಂ ಕೋಂಟೆಯ
ಕನಕಮಯಾಟ್ಟಾಳಜಾಲದೊಳ್ ಕ್ರೀಡಿಸುಗುಂ  ೧೨೩

ವ : ಆ ಮಹೋದಾರಪ್ರಾಕಾರಪರಿವೇಷ್ಟಿತಮಾದ ಪುರಲಕ್ಷ್ಮೀದಿತಾ ಶೋಭಾವ ಲೋಕನಾರ್ಥಂ ಕಣ್ದೆ ಠಿದಳೆಂಬಂತೆ ಸಮುದ್ಘಾಟಿತಕವಾಟಪಕ್ಷ್ಮಪಾಳಿಕಾ ಪುಟಂಗಳು ಮಾಕ್ರಾಂತತಾರಕಂಗಳಪ್ಪ ಗೋಪುರದ್ವಾರಕಂಗಳಿಂದೊಳಗೆ

ಜನತಾನಿರ್ಘೋಷದಿಂದಂ ಸುಳಿವ ಸುಗಣಿಕಾನೂಪುರೋದ್ದಾಮ ಝಣ್ ಝಣ್
ಧ್ವನಿಯಿಂದಂ ಗಾಯಿನೀಸಂತತಿ ಕರವಿಲಸದ್ವಲ್ಲಕೀನಾದದಿಂದಂ
ವನಪಾನಕ್ಕಾಗಿ ಮತ್ತಂ ಬಿಡದೆ ನಡೆವ ವಾಜಿವ್ರಜಧ್ವಾನದಿಂದಂ
ಘನಮೊಪ್ಪಂಬೆತ್ತು ವಾಚಾಳಿತಮೆನಿಪುದು ರಾಜತ್ಪುರೀ ರಾಜಮಾರ್ಗಂ       ೧೨೪

ವ : ಮತ್ತಮಾ ರಾಜಮಾರ್ಗದಿಕ್ಕೆಲಂಗಳೊಳ್

ಪಿರಿದಪ್ಪೊಳುವಂಡಂಗಳಿ
ನರೆಯಾಗಿರದೆಯ್ದೆ ತುಂಬಿ ತುಳ್ಕಾಡುವವಾ
ಪರದರಂಗಡಿಗಳೆತ್ತಂ
ತರತರದಿಂದಿರ್ದು ಕಣ್ಗೆ ಪಡೆದವಗುರ್ವಂ        ೧೨೫

ಥಳಥಳಿಪಾಯ್ದ ಮುತ್ತುಗಳ ರಾಶಿಗಳಿಂ ಮಣಿಗಾಱರಾಪಣಂ
ಗಳುಮೆಸೆದಿರ್ಪುವೊಂದೆಡೆಯೊಳೊಂದೆಡೆಯೊಳ್ ನವಚಾರುವಸ್ತ್ರಸಂ
ಕುಳನಿಭೃತಂಗಳಾಗಿ ಪಟವೈಶ್ಯಜರಂಗಡಿಗಳ್ ನಿರಂತರಂ
ತಳೆದವನೂನಸಂಪದಮನಿಂದ್ರನ ಭಾಂಡಗೃಹಂಗಳೆಂಬಿನಂ            ೧೨೬

ವ : ಮತ್ತಮೊಂದೆಡೆಯೊಳ್

ಸ್ಮರವಶ್ಯೌಷಧಸಾರಸಾರಘಂಟಿಕಾಪೇಟಂಗಳೆಂಬಂದದಿಂ
ವರಪೂಗೀಫಳರಾಶಿಗಳ್ ಸೊಗಸನೀವುತ್ತಿರ್ದುವಂತಲ್ಲದಿಂ
ದಿರೆಯೊಳ್ ಸೇವನಮಾತ್ರದಿಂ ಸ್ಮರಿವಿಕಾರೋದ್ದೀಪನಸ್ಫೂರ್ತಿಯಂ
ಪಿರಿದುಂ ಮಾಳ್ಪ ವಿಶೇಷಶಕ್ತಿದಲವತ್ಕಾವಂದದಿಂ ಬಂದುದೋ     ೧೨೭

ಕಡುಚಿಬ್ಬಂಬೊಯ್ದು ಬಣ್ಣಂಬಡೆದು ಮೊನೆಗಳುಂ ನೇರಿತಾಗಿರ್ದು ಮತ್ತಿ
ಮ್ಮಡಿ ಚೆಲ್ವಂ ಬೀಱುತುಂ ರಂಜಿಪ ಬಿಳಿಯೆಲೆಗಳ್ ಕಾಮದೇವಾಧಿರಾಜಂ
ಪಿಡಿದಾರ್ಪಂ ತೋರ್ಪ ಕೂರಂಬುಗಳ ತೆಱದೆ ಕಣ್ಗೊಂಡವಂತಲ್ಲವೆಂದೆಂ
ಬಡೆ ಕಾಮೋದ್ಬಾಧೆಯೆಂತುದ್ಭವಿಪುದು ಮನದೊಳ್ ಸೇವನಾಮಾತ್ರದಿಂದಂ            ೧೨೮

ಸೊಗಯಿಪ ತಮ್ಮ ಕೋಮಳಕರಾಂಗುಳಿಯಿಂ ಪಿಡಿದೆತ್ತಲಾಗಳಂ
ತುಗುರ್ಗಳ ಕಾಂತಿರೇಖೆಗಳನಿಮ್ಮಡಿಸುತ್ತಿರೆ ಮಾಲೆವೂಗಳಂ
ನೆಗಪಿದ ಮಾಲೆಗಾರ್ತಿಯರನಂಗನ ಹೂಡಿದ ಬಿಲ್ಗಳೆಂಬಿನಂ
ಮಿಗೆ ಜನಚಿತ್ತಮೆಂಬ ಗುಱಿಯಂ ಭರದಿಂದೆಸುತಿರ್ಪರಾವಗಂ        ೧೨೯

ಪಱಮೆಗಳ ಕಪ್ಪಿನಿಂದಂ
ಮಿಱುಗುವ ಕೆಂದಳದ ಕೆಂಪಿನಿಂದಾವಿಳಮಾ
ಗುಱೆ ಚಿತ್ರಿಸಿದಂತಾದಂ
ಮೆಱೆಗುಂ ಪಿರಿದಪ್ಪ ಪುಷ್ಪಮಾಲಾನಿವಹಂ    ೧೩೦

ಮುತ್ತಿನಹಾರಮುದ್ಘಕುಚಮಂಡಳದೊಳ್ ಕುಣಿದಾಡೆ ಕರ್ಣದೊಳ್
ಬಿತ್ತರಿಸಿರ್ದ ರತ್ನಮಯಭೂಷಣಕಾಂತಿ ಕಪೋಳದೊಳ್ ಕರಂ
ನರ್ತಿಸೆ ಕೈಯ ಕಂಕಣ ಝಣತ್ಕೃತಿಯೊಪ್ಪಿರೆ ಚಿತ್ತದೊಳ್ ಮುದಂ
ಬೆತ್ತರೆಯುತ್ತಮಿರ್ಪುದು ವಿಳಾಸವತೀಜನಮೆಯ್ದೆ ಘಟ್ಟಿಯಂ      ೧೩೧

ಎನಗೆ ಪಗೆಯಪ್ಪ ಸಿರಿಯೊಡ
ನನವರತಂ ಕೂಡಿ ಬಾಳ್ವರಿವರೆಂಬೀ ಕೋ
ಪನದಿಂದಮೆನೆ ವಿಪತ್ತಿ ದ
ಲಿನಿಸುಂ ಪೊರ್ದದು ವಣಿಗ್ಜನಂಗಳನವಱಂ      ೧೩೨

ವ : ಮತ್ತಮಲ್ಲಿ

ರತಿಕೇಳೀವೇಳೆಯೊಳ್ ತತ್ಪ್ರಣಯಕಲಹದಿಂ ಪಿಂದುಮುಂದಾದ ಚೇತಃ
ಪತಿಯಂ ದುರ್ಮೋಹದಿಂ ಕಾಲ್ವಿಡಿದು ತಿಳಿಪುವೀಕೃತ್ಯದಿಂ ಮಾರುತವ್ಯಾ
ಹತಭಾಸ್ವದ್ದ್ವಾರ ಘಂಟಾನಿನದದಿನತಿರಮ್ಯೋರುತಳ್ಪಂಗಳಿಂ ಸಂ
ಯುತಮಾಗಿರ್ದೆಯ್ದೆ ಚೆಲ್ವಂ ಪಡೆದುದು ಗಣಿಕಾಭೂರಿಸೌಧಪ್ರತಾನಂ        ೧೩೩

ಅಲರ್ಗಣ್ಗಳ್ ಬೀಱೆ ವಿದ್ಯುತ್ಪ್ರಭೆಯನುರುಕುಚಂಗಳ್ ಮಹಾಹೇಮಕುಂಭಂ
ಗಳ ಚೆಲ್ವಂ ತೋಱೆ ತೋಳ್ಗಳ್ ಮೃದುಳತರಲತಾಶೋಭೆಯಂ ಪೋಲೆ ಕೇಶಾ
ವಳಿಗಳ್ ಮತ್ತಾಳಿನೀಕಾಂತಿಯನವಗಯಿಸಲ್ ಪ್ರೌಢವೇಶ್ಯಾಸಮೂಹಂ
ವಿಳಸತ್ಕಾಮಾಧಿರಾಜ ಪ್ರಬಳಬಳಮಿದೆಂಬಂತೆತೋಱುತ್ತುಮಿರ್ಕುಂ            ೧೩೪

ಸ್ನೇಹದನುಬಂಧಮಿನಿತುಂ
ಮೋಹದೊದಂ ಕಾಮದೇವ ದೀಪಾಂಕುರಸಂ
ದೋಹಮಾಗಿರ್ದು ಚಿತ್ರೋ
ದ್ದಾಹಮನಾಳ್ದತ್ತು ವಾರನಾರೀನಿವಹಂ        ೧೩೫

ಎನ್ನಿಂದಿಮ್ಮಡಿಗಾಡಿಯಂ ಪಡೆದು ತೋರ್ಪೀ ಸ್ತ್ರೀಯರೊಳ್ ಕೂಡಿದಂ
ದೆನ್ನಂ ಬಿಟ್ಟಪನೆಂದು ಪಾರ್ವತಿ ಮಹಾಭೂತೇಶನರ್ಧಾಂಗದೊಳ್
ಕೆನ್ನಂ ಪೊಕ್ಕೊಡನಿರ್ಪಳಂತೆ ವಿಳಸಲಕ್ಷ್ಮೀಮಹಾದೇವಿಯುಂ
ತನ್ನಾ ಕೃಷ್ಣನ ವಕ್ಷದೊಳ್ ನೆಲಸಿದಳ್ ತರ್ಕೈಸುವ ವ್ಯಾಜದಿಂ      ೧೩೬

ಉನ್ನತಜೈನಚೈತ್ಯನಿಳಯಂಗಳ ಮಂಜುಳರತ್ನಕೂಟನಿ
ಷ್ಪನ್ನಮೃಗಾರಿಜಾತ ಭಯದಿಂದೆನೆ ಶೀತಮಯೂಖಮಾಲಿ ತಾಂ
ಸನ್ನಹಿತಂ ನಭಸ್ಥಳದೊಳೆಯ್ದಿರುಳುಂಪಗಲುಂ ನಿರಂತರಂ
ತನ್ನ ಕುರುಂಗಮಂ ಪಿಣಿದು ನಿಲ್ಲದೆ ಸುತ್ತಿಬರುತ್ತಮಿರ್ಕವಂ        ೧೩೭

ಅವಱ ಘನಪಟ್ಟಸಾಲಾ
ನಿವಹದೊಳುತ್ಕೃಷ್ಟಜೈನಮುನಿಗಳ್ ಭರದಿಂ
ದವಗತ ಸಮಸ್ತಶಾಸ್ತ್ರರ್
ಪ್ರವರಗುಣಾವಾಸರಿರ್ಪರೊಲಿದನವರತಂ        ೧೩೮

ವ : ಮತ್ತಮಾ ಜಿನಾಲಯಂಗಳ ಮುಂದಣ ಮಂಗಳಮಯ ರಂಗಾವಳೀ ಭಂಗುರರಂಗ ದುತ್ತುಂಗತರ ಮಕರತೋರಣದೋರಣಿ ರಮಣೀಯಂಗಳಪ್ಪ ಭೋಗರಂಗ ಸ್ಥಾನಂಗಳೊಳ್

ಪದಚಳನಂ ಸುತಾಲಯಭೇದಮನುಗ್ಘಡಿಪಂತೆ ತೋಱೆ ಗೀ
ತದ ರಸಮೆಯ್ದೆ ಹಸ್ತಚಳನಕ್ಕನುಕೂಲಮದಾಗೆ ಚಾರುವಾ
ದ್ಯದ ನಿನದಂಗಳಿಂದೆ ವಲಭೀಸ್ಥಳಿ ಮಾರ್ದನಿಯಂ ಕೊಡುತ್ತಿರಲ್
ಸುದತಿಯರೊಲ್ದು ನರ್ತಿಪರನಂಗನ ಮೋಹಶರಂಗಳೆಂಬಿನಂ         ೧೩೯

ಮಣಿಮಯ ಭೂಮಿಯೊಳ್ ನಡೆವ ಪೌರವಧೂಪ್ರತಿಬಿಂಬದಂಭದಿಂ
ಫಣಿಪತಿ ಕನ್ಯಕಾನಿಕರಮುಚ್ಚಮನೋಮುದದಿಂದೆ ಬಂದು ತ
ತ್ಪ್ರಣುತ ವಿಳಾಸಮಂ ನೆಱೆಯೆ ನೋಳ್ಪಭಿವಾಂಛೆಯಿನೋದಿ ಪೋಪುದೀ
ಪ್ರಣಯದಿಂನೆಂಬವೋಲ್ ಬಿಡದ ಮಾರ್ಪೊಳಪಿಂ ರಮಣೀಯಮಾ ನೆಲಂ     ೧೪೦

ಹರಿನೀಳರಚಿತ ಸೌಧೋ
ತ್ಕರದೊಳ್ ಕೀಲಿಸಿದ ತೋರಮುತ್ತುಗಳಂದಂ
ಬರದೊಳ್ ಪಗಲುಂ ಮೂಡಿದ
ವರ ತಾರೆಗಳೆಂಬ ತೆಱದಿನೊಪ್ಪಿದವೆತ್ತಂ          ೧೪೧

ಪಳಿಕಿನ ಭಿತ್ತಿಯನೊಲವಿಂ
ನಳಿನಾಕ್ಷಿಯರೆಯ್ದೆ ನೋಡಿ ಪಲ್ಸುಲಿಯಲ್ ನಿ
ರ್ಮಳಮಾದೊಡಮಧರಚ್ಛವಿ
ಗಳ ಪೊಳೆಪಿಂದರುಣಮಾಗೆ ಸುಲಿಯುತ್ತಿರ್ಪರ್೧೪೨

ಇಂದುಮಯೂಖಲೇಖೆ ಹರಿನೀಲಶಿಲಾವಲಭಿಗವಾಕ್ಷದೊಳ್
ಬಂದುಱೆಪೊಕ್ಕು ಭಿತ್ತಿಗಳ ಮೇಲೆ ವಿಲಂಬಿಸೆ ಮುಗ್ಧಕಾಮಿನೀ
ವೃಂದಮದಲ್ಲಿ ನಿರ್ಮಲ ಮಿಮೌಕ್ತಿಕಹಾರಮಿದೆಂದು ಕೈಯನಾ
ನಂದದೆ ನೀಡಲಿಲ್ಲದಿರೆ ಮಾಳ್ಪುದು ಮೇಳದವರ್ಗೆ ಹಾಸ್ಯಮಂ    ೧೪೩

ಅಂಬರಮಾರ್ಗದೊಳ್ ನಡೆದುಬಂದ ಪರಿಶ್ರಮದಿಂ ಬಳಲ್ದ ತ
ನ್ನಿಂಬಿನ ಮಿತ್ರನಂ ಪವನಚಂದಳಕೇತುಪಟಂಗಳೆಂಬ ಚಿ
ತ್ರಂಬಡೆದಿರ್ದ ವೀಜನಚಯಂಗಳಿನಂದದಿ ಬೀಸುವಂತಿರೊ
ಪ್ಪಂಬಡೆದಲ್ಲಿ ಹರ್ಮ್ಯತತಿ ಮಾಳ್ಪುದು ನೋಳ್ಪರ ಕಣ್ಗೆ ಹಬ್ಬಮಂ        ೧೪೪

ಮುತ್ತಿನಹಾರಮೆಂಬ ವರನಿರ್ಝರವಾರಿಯಿನೊಳ್ಪುವೆತ್ತ ತ
ತ್ಪತ್ತನಯೋಷಿದುಚ್ಚಕುಚಮಂಡಲಮೆಂಬ ಮಹೀಧ್ರ ದುರ್ಗಮಂ
ಚಿತ್ತಜನೆಂಬ ರಾಜನೊಸೆದೇಱಿ ಸುದುಸ್ಸಹತೇಜನಾಗಿ ಲೋ
ಕತ್ರಯದೊಳ್ ತ್ರಿಲೋಚನನನಾದೊಡಮಂತವನೆಯ್ದೆ ಲೆಕ್ಕಿಸಂ     ೧೪೫

ವ : ಮತ್ತಮಾಪುರಂ ಕಳಾಧರವಿರಾಜಿತಮಾಗಿಯುಂ ದೋಷೋಚ್ಚಯಮಲ್ತು ವಿಶಿಷ್ಟಲಕ್ಷ್ಮೀಸಮಾಲಕ್ಷಿತಮಾಗಿಯುಂ ಖರದಂಡಮಲ್ತು ವಿಸ್ತೃತಸೂತ್ರನಿಧಿ ಸನಾಥ ಮಾಗಿಯುಂ ಮಹಾಭಾಷ್ಯಮಲ್ತು ಉಮಾಸಮುಪಗತಮಾಗಿಯುಮರ್ಧನಾರಿಯಲ್ತು ಪೀತಾಂಬರಧಾಮರಮಣೀಯಮಾಗಿಯುಂ ಗದಾಭಿಯುಕ್ತಮಲ್ತುಮಂತುಮಲ್ಲದೆಯುಂ

ಅಗಣಿತವಜ್ರಮುದ್ರರಿನನೇಕಸಪುಣ್ಯ ಜನಂಗಳಿಂ ಪ್ರಸಿ
ದ್ಧಿಗೆ ನೆಲೆಯಾಗಿ ತೋರ್ಪೆನೆಗೆ ತಾಂ ಗಡ ಪಾಸಟಿಯೊರ್ವನೊರ್ವನಿಂ
ಸೊಗಯಿಪ ಶಕ್ರಪತ್ತನಕಮೆಂದದುವಂ ನಗುವಂತಿರೊಪ್ಪುಗುಂ
ಮಿಗೆ ನಿಜಚಂದ್ರಕಾಂತಗೃಹಸಂತತಿ ಕಾಂತಿಗಳಿಂದೆ ತತ್ಪುರಂ           ೧೪೬

ಸುರತತಿ ಸಂತತಂ ಕಣ್ಣೆಮೆಯಿಕ್ಕದೆ ನೋಡುತಿರ್ದ ದು
ರ್ಧರತರದೃಷ್ಟಿದೋಷಪರಿಹಾರನಿಮಿತ್ತಕಮಾಗಿ ರಾತ್ರಿಸೌಂ
ದರಿ ಪಿಡಿದೆತ್ತುವಾರತಿಯ ಬೆಳ್ಳಿಯಂ ಭಾಜನಮೆಂಬವೊಲ್ ಮಹಾ
ಪುರಮನನೂನಮಂ ಬಳಸುತಿರ್ಪುದು ಪೂರ್ಣಸುಧಾಂಶುಮಂಡಲಂ೧೪೭

ವ : ಅಂತು ಛಂದೋವಿದ್ಯೆಯಂತೆ ನಾನಾ ಛಂದಂಬಡೆದು ರಂಜಿಸುವ ತತ್ಪುರದ ಮಧ್ಯಕ್ಕಳಂಕಾರಮೆನಿಸಿ

ಖರಕರನ ಕುದುರೆಗಳ್ಗು
ದ್ಧುರದೂರ್ವಾಂಕುರದ ಶಂಕೆಯಂ ಮಾಡುತ್ತುಂ
ಹರಿನೀಲರಚಿತ ಸಾಲಂ
ನರನಾಥನ ಚಾರುಗೇಹಮಂ ಬಳಸಿರ್ಕುಂ          ೧೪೮

ವ : ಅದಱ ನಾನಾಪ್ರಕಾರ ನೂತ್ನರತ್ನಖಚಿತಂಗಳಪ್ಪ ತೋರಣಂಗಳಿಂ ಪೇಶಲಮಾದ ಪ್ರಥಮದ್ವಾರಪ್ರದೇಶದೊಳ್

ಪಾಗುಡಮಾಗಿ ಬಂದು ಸಮಯೋಚಿತಮಂ ಸಲೆಸಾರ್ದು ಪಾರ್ದು ಮುಂ
ಬಾಗಿಲೊಳಿರ್ದ ಗಂಧಗಜದಾನಜಲಂಗಳಿನಾದ ಪಂಕದೊಳ್
ವೇಗಿಗಳಪ್ಪ ವಾಜಿಗಳ ಫೇನಲವಂಗಳವಲ್ಲಿಗಿಲ್ಲಿಗಿಂ
ಬಾಗಿಯೆ ಬೀಳೆ ಪೋಲ್ತುದುದು ಪಂಕದೊಳಿಕ್ಕಿದ ರಂಗವಾಲಿಯಂ   ೧೪೯

ವ : ಮತ್ತಮಲ್ಲಿಂದೊಳಗೆ

ಆನೆಗಳ ಸಾಲೆಗಳ್ ಪರ
ಮಾನಂದಮನೆಯ್ದೆ ಮಾಳ್ಪುವಖಿಳಜನಕ್ಕಂ
ದಾನ ಪರಿಮಳವಿಲೋಭನಿ
ಲೀನಾಳಿಕುಳಪ್ರಣಾದದಿಂ ಮುಖರಂಗಳ್         ೧೫೦

ಹಯಮಂದಿರಂಗಳೆಲ್ಲರ
ನಯನಂಗಳ್ಗೀವುತಿರ್ಪುವತಿಶಯಮಂ ತ
ಮ್ಮಯ ರತ್ನಕಳಶಕಿರಣೋ
ಚ್ಚಯದೊಳ್ ತೇಂಕಾಡುತಿರ್ದವೆಂಬಂತೆವೊಲಂ            ೧೫೧

ಯಮನ ನಾಲಗೆಯ ತೆಱದಿಂ
ದಮಿತ ಭಯಂಕರ ಸುತೀಕ್ಷ್ಣ ಶಸ್ತ್ರಂಗಳಿನಾ
ದಮೆ ನಿಚಿತಮಾದ ಶಾಲಾ
ಸಮುದಯಮನಿಶಂ ಬೆಡಂಗನವಗಯಿಸಿರ್ಕುಂ    ೧೫೨

ನಿರುಪಮರತ್ನನಿರ್ಮಿತವಿಶಾಲಸಭಾಸದನಂ ನಿಜಪ್ರಭಾ
ಪರಿಕರವಾರಿಯೊಳ್ ವಿಕಸದಂಬುಜಮೆಂಬಿನಮೆಯ್ದೆ ಲಕ್ಷ್ಮಿಯಂ
ಧರಿಸಿ ವಿರಾಜಿಕುಂ ಸುಕವಿರಾಜವಿನೋದವಿಲಾಲಿತಂ ನಿರಂ
ತರಿತವಿಚಿತ್ರಪತ್ರರಮಣೀಯಮನೂನಮಧುವ್ರತಾನ್ವಿತಂ೧೫೩

ವ : ಮತ್ತಮಲ್ಲಿಂದೊಳಗೆ

ಅಡಿಕಿಲ್ಗೊಂಡೊಪ್ಪುವೇಳುಂನೆಲೆಗಳ ಮಣಿಮಾಡಂಗಳಿಂದಂ ವಿಚಿತ್ರಂ
ಬಡೆದಿರ್ದುತ್ತುಂಗಕೂಟಂಗಳಿನತುಳಮಹಾಕಾಂತಿಯಿಂ ಗಾಡಿಯಿಂ ನೂ
ರ್ಮಡಿ ಮಾಳ್ಪೊಳ್ಪದ್ಮರಾಗಪ್ರಘಟಿತ ಕಳಶೌಘಂಗಳಿಂ ಕೌತುಕಕ್ಕಂ
ದೆಡೆಯಾಯ್ತೆಯ್ದುದ್ಘರಾಜಾಲಯಮಖಿಳನುತಂ ಸಪ್ತಕಕ್ಷಾಸಮೇತಂ         ೧೫೪

ಉದಿತದಿನೇಶನೆಂಬ ಮಣಿಕಂದುಕಮಂ ಧರೆಯೆಂಬ ಕಾಂತೆ ತ
ನ್ನುದಯಗಿರೀಂದ್ರಮೆಂಬ ಕರದಿಂದಮೆ ಹಾಕಿ ತದಸ್ತಶೈಲಮೆಂ
ಬೊದವಿದ ಹಸ್ತದಿಂದೆ ಪಿಡಿವಲ್ಲಿ ಪುರಾಂಗನೆ ಮಧ್ಯದೊಳ್ ವಿ
ನೋದದೆ ಪಿಡಿಯಲ್ಕದಂ ಕರಮನೆತ್ತಿದವೊಲ್ ಮೆಱೆಗುಂ ನೃಪಾಲಯಂ      ೧೫೫

ಕಡಪದ ಕಂಡರಣೆಯ ಬೇ
ಗಡವೆಸದ ವಿಚಿತ್ರಮಪ್ಪ ಕೆಲಸದ ಗತಿಯಂ
ನಡೆನೋಡಿ ಚತುರ್ಮುಖನುಂ
ಬಿಡದೆ ಕರಾಂಗುಳಿಯನೆಯ್ದೆ ತೂಗದೆ ಮಾಣಂ  ೧೫೬

ಒಸರ್ವ ಸುಧಾಂಶುಕಾಂತಮಯಕೂಟದೊಳಂ ಪ್ರತಿಬಿಂಬರೂಪದಿಂ
ಶಶಧರಬಿಂಬಮೊಪ್ಪುತ್ತಿರಲಲ್ಲಿಯ ಕಾಂತೆಯರಾಸ್ಯಶೋಭೆಯಂ
ಮಿಸುಗದೆ ಕಳ್ದೊಡಾ ಧರಣಿಪಂ ಸೆಱೆಯಿಕ್ಕಿರಲಾಗಳುಬ್ಬೆಗಂ
ಮಸಗಿಯಳುತ್ತಮಿರ್ದ ತೆಱದಿಂದದು ಕಣ್ಗೊಳಿಕುಂ ಜನಂಗಳಂ       ೧೫೭

ಮಣಿಶಿಖರಂಗಳಿಂ ಬಗೆವೊಡೆನ್ನಮೊಲೊಪ್ಪಮನಾಂತುದೆಂಬ ತ
ತ್ಪ್ರಣಯದಿನಾ ನೃಪಾಲಯಮನೀಕ್ಷಿಸಲೆಂದು ಸುರಾದ್ರಿ ಬಂದು ತಾ
ನೆಣಿಕೆಗತೀತಮಾದ ವರರೂಪಮುಮಂ ಧರಿಸಿರ್ದುದೆಂಬಿನಂ
ಪ್ರಣುತೆಯರಪ್ಪ ರಾಣಿಯರ ಗೇಹಚಯಂ ಬಳಸಿರ್ದುದಂತದಂ     ೧೫೮

ನೆಲೆಮಾಡಂಗಳ ಚೂಳಿಕಾಗ್ರಮನಡರ್ದೇಱಿರ್ದ ಕಾಂತಾಸ್ಯಮಂ
ಡಳಮಂ ನೋಡಿ ಸಮಾನಮಾಗದೆ ಕರಂ ನಾಣ್ಚಿರ್ದವೊಲ್ ಮೇಘಸಂ
ಕುಳಮಂ ತಾಂ ಮಱೆಗೊಂಡು ಸಂಕುಚಿತ ವಿಸ್ತಾರಾಂಶುಕಂ ಕಂದನೆ
ಯ್ದೊಳಕೊಂಡಿರ್ದ ಸುಧಾಕರಂ ಕೆಳಗೆ ಪೋಪಂ ಪ್ರೋಚ್ಚಸೌಧಂಗಳಾ           ೧೫೯

ಮರಕತಗೇಹಭಿತ್ತಿಗಳ ಕಾಂತಿಗಳಿಂ ಪುದಿದಿರ್ದ ಪಿತ್ತಿಲೊಳ್
ಕರಮೆಸೆದಿರ್ದ ಭಾವಿಗಳ ಪಕ್ಕದೊಳಿರ್ಪ ರಥಾಂಗಯುಗ್ಮಮ
ಲ್ಲಿರುಳಿನ ಶಂಕೆಯಿಂ ಪಗಲೊಳಾದೊಡಮೆಯ್ದೆ ವಿಯೋಗದುಃಖದೊಳ್
ಪೊರೆದೂದಱುತ್ತುಮಿರ್ಪುದು ವಿಭಿನ್ನತಟಾಶ್ರಯಮಾಗಿ ನಾಡೆಯುಂ          ೧೬೦

ಗರುಡೋದ್ಗಾರದ ಪಚ್ಚೆಯ
ಕಿರಣದೊಳೆಳವುಲ್ಲ ಶಂಕೆಯಿಂ ಸ್ಫಟಿಕಾಂಶೂ
ತ್ಕರದೊಳ್ ಜಳಶಂಕೆಯಿನಾ
ದರದಿಂ ಮೊಗಮಿಡುವವಲ್ಲಿ ಮೃಗಶಾಬಂಗಳ್            ೧೬೧

ವ : ಮತ್ತಮಾ ನಿರುಪಮರೂಪೆಯರಪ್ಪರಸಿಯರನೋಲಯಿಸಲೆಂದು ಬಂದು ಕಿಱೆದುಂಪೊಳ್ತು ಸೇವಾವಿನೋದದೊಳಿರ್ದು ಬಳಿಯಂ ಕಳುಹಿಸಿಕೊಂಡು

ಅರುಣಿತ ಮೃದುಪಾದನ್ಯಾಸರಕ್ತೀಭರದ್ಭಾ
ಸುರಹಿಮಕರ ಕಾಂತಗ್ರಾವ ರಾಜಾಂಗಣಂ ರು
ಕ್ಸರಿಪಿಹಿತನಖಾಹ್ವಾನೋತ್ಕಮೆಂಬಂತೆ ಕಾಲುಂ
ಗುರದಲಿ ರುತಿಯೊಪ್ಪೆ ಸ್ತ್ರೀಗಣಂ ಪೋಪುದಲ್ಲಿಂ          ೧೬೨

ವ : ಮತ್ತಮಾ ರಾಜಭವನದೇಕಪ್ರದೇಶದೊಳ್

ಒಳಗಣ ಪೂಜಾರಚನಾ
ವಿಳಸನಮಂ ಪೊಱಗೆ ತೋಱಿಸುತ್ತಂ ಮೆಱೆಗುಂ
ಪಳಿಕಿನ ಶಿಲೆಯಿಂ ಮಾಡಿದ
ಥಳಥಳಿಪ ವಿಶಾಳಚಾರುದೇಹಾರಗೃಹಂ         ೧೬೩

ವ : ಮತ್ತೊಂದೆಡೆಯೊಳ್

ನಾನಾಪ್ರಕಾರ ರತ್ನವಿ
ತಾನಂಗಳ ಬಹಳರಾಶಿಯಿಂ ತುಂಬಿ ಕರಂ
ಭೂನುತ ಭಂಡಾರಾಲಯ
ಮಾ ನರಪನಿವಾಸದಲ್ಲಿ ರಂಜಿಸುತಿರ್ಕುಂ         ೧೬೪

ವ : ಅದಲ್ಲದೆಯುಂ

ಪಿರಿದುಂ ಪುಣ್ಯಸಮೃದ್ಧಿಭಾಜನಮಿದೆಂದೆನ್ನಲ್ಲಿಗೆಳ್ತಂದಪಂ
ಸುರರಾಜಾರ್ಚಿತನಪ್ಪ ಪಂಚದಶತೀರ್ಥಾಧೀಶ್ವರಂ ನಿನ್ನೊಳಾ
ದರಮಂ ಮಾಡದೆ ಪೋಪುದೆಂಬ ಮದದಿಂ ಸರ್ವಾರ್ಥಸಿದ್ಧಾಖ್ಯಮಂ
ದಿರಮಂ ಮೂದಲಿಪಂತೆ ಗೀತರವದಿಂದೊಪ್ಪಿತ್ತು ರಾಜಾಲಯಂ   ೧೬೫

ಭೂರಿತರ ರತ್ನಕುಟ್ಟಿಮ
ಧಾರಿಣಿಯೊಳ್ ತಾರಕಾಳಿ ಬಿಂಬಿಸೆ ನಿಶಿಯೊಳ್
ಭೂರಮಣಿ ತನ್ನೃಪಾಲಯ
ಚಾರುತೆಯಂ ನೋಡಲೆಂದು ಕಣ್ದೋಱಿದ ವೊಲ್        ೧೬೬

ಧ್ವಜಪಟವೃಂದ ಪಲ್ಲವಿತಮೆಲ್ಲೆಡೆಯೊಳ್ ನೆಱೆಕೀಲಿಸಿರ್ದ ಪೀ
ನಜನಮನಃಪ್ರಮೋದಕರ ಮೌಕ್ತಿಕಪುಷ್ಟಿತಮುದ್ಘಚೋದ್ಯಭಾ
ವಜನನದಕ್ಷರತ್ನಕಳಶಾವಳಿ ಸತ್ಫಳಿತಂ ದಲಾಗಿ ಭೂ
ಮಿಜಮೆನೆ ರಾಜಗೇಹಮದು ಶೋಭೆಯನಾಂತೆಸೆಗುಂ ನಿರಂತರಂ    ೧೬೭

ಅದಱೊಳ್ ಸಾಮ್ರಾಜ್ಯಲೀಲಾಮುದಿತಹೃದಯನಿರ್ಪಾ ಮಹೀವಲ್ಲಭಂ ಸಂ
ವಿದಿತಾನೇಕಾಂತತತ್ತ್ವಂ ರಿಪುಕುಳಕುಧರಸ್ಫೋಟವಜ್ರಾಯುಧಂ ದಿ
ಕ್ಪದರಾಜತ್ಕೀರ್ತಿಕಂ ಬಾಹುಬಲಿಸುಕವಿರಾಜಂ ಸಮಸ್ತಾಭಿವಾಂಛಾ
ಪ್ರದಕಲ್ಪಕ್ಷ್ಮಾರುಹಂ ಭೂಪತಿವಿನತಪದಂ ಚಾತುರೀಜನ್ಮಗೇಹಂ   ೧೬೮

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮಜಿನ ಸಮಯ ಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವ ಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಕಥಾವತರಣವರ್ಣನಂ ಪ್ರಥಮಾಶ್ವಾಸಂ.