ಶ್ರೀರಮಣಂ ವಿಶದಯಶೋ
ರಾರಾಜಿತನೆಯ್ದಿದಂ ಮಹೋತ್ಸಾಹಮನಾ
ಚಾರಸಮೇತಂ ಭುವನಜ
ನಾರಾಧ್ಯಂ ಸರಸಚತುರಕವಿಕುಳತಿಳಕಂ            ೧

ವ : ಅಂತು ಬಂದು ಮೂರ್ಧಾಭಿಷಿಕ್ತಂ ತನ್ನಯ ಮನೋವಲ್ಲಭೆಯರ್ಧಾಸನ ದೊಳುದ್ಧವಂ ಕೈಮಿಗೆ ದೇವಿಯ ಕೋಮಳಾಂಗಯಷ್ಟಿಯಂ ಮುಟ್ಟಿ ಸೋಂಕಿ ಕುಳ್ಳಿರ್ದು ಭಾಮಾಸಭಾಶೋಭೆಯಂ ನೋಡುತ್ತುಂ ಹಾವಭಾವವಿಳಾಸವಿಭ್ರಮಾಧಿಕ್ಯಗರ್ವಿತ ಸರ್ವಸೇವಾಗಾಣಿಕ್ಯ ಮಧ್ಯಮಾಣಿಕ್ಯರೂಪೆಯಾಗಿ ಸೊಗಯಿಸುವ ತತ್ಸುವ್ರತಾಮಹಾ ದೇವಿಯ ರೂಢಿವೆತ್ತ ಪ್ರೌಢಿಯಂ ಗಾಡಿಯಂ ನೀಡುಂನೋಡಿ ಮನದೆಗೊಂಡು ಸಂತೋಷದಂತನೆಯ್ದಿದನಂತರಂ ಸ್ಥಿರೋತ್ತಾನಿತನೇತ್ರನಾಗಿ ಸಮುತ್ತಂಭಿತಮಾದ ವಿಕಸಿತ ಪ್ರಶಸ್ತಹಸ್ತತಳಮಂ ಕಪೋಳಮೂಳಕ್ಕಾಂಕೆಗೊಟ್ಟು ವಿಷಣ್ಣಾಂತರಂಗಂ ತನ್ನೊಳಿಂತೆಂದಂ

ಈ ರೂಪೀ ಕುಲಮೀ ಕಳಾವಿಭವಮೀ ವಾಗ್ಮಿತ್ವ ಚಾತುರ್ಯಮೀ
ಸಾರಾಸಾರವಿವೇಕಮೀ ಸಿರಿಯುಮೀ ಚಾರಿತ್ರಮೀ ಚಾಗಮೀ
ಚಾರುಶ್ರೀಜಿನಭಕ್ತಿಯೆಂಬಿವಿನಿತುಂ ಸತ್ಪುಣ್ಯದಿಂದಾದುದೀ
ವಾರೀರತ್ನದೊಳೀಕೆಯಲ್ಲದವರಲ್ಲೊಂದಾದೊಡಂ ದುರ್ಲಭಂ   ೨

ಮೃಗಮದಕಾಂತಿಯಂ ಪರಮರತ್ನಮೃದುತ್ವಮನುದ್ಘಕರ್ಣಿಕಾ
ರಗತಮೆನಿಪ್ಪ ಸೌರಭಮುಮಂ ಹರಿಚಂದನದೊಂದು ನೇರಿತಂ
ಮಿಗೆ ಬಿದಿ ಕೊಂಡು ನಿರ್ಮಿಸಿದನೀಕೆಯನಲ್ಲದೊಡೆಂತು ಬಂದುದೀ
ಸೊಗಯಿಪ ಕಾಂತಿಯುಂ ಮೃದುತೆಯುಂ ಸುರಭಿತ್ವಮುಮೆಯ್ದೆ ನೇರಿತುಂ  ೩

ಆದೊಡಮೇನುಮೀ ಸತಿಯ ಜವ್ವನಮೆಂಬ ಮಹಾಮಹೀರುಹಂ
ಮೇದುರರೂಪಮೆಂಬ ರಸದಿಂದಭಿವೃದ್ಧಿಯನೆಯ್ದಿ ಕಾಲಸಂ
ಪಾದಿತ ಚಾರುಪುಷ್ಟಿತಮದಾಗಿಯುಮಾತ್ಮಜನೆಂಬ ಸತ್ಫಲೋ
ತ್ಪಾದದ ಲಾಭಮಿಲ್ಲದಂದು ನಿಷ್ಫಲಮಾದುದು ಲೋಕದೊಳ್ ಕರಂ        ೪

ಎನಿತೆನಿತುಂ ಸ್ವಬಾಂಧವ ಸಹಸ್ರಮದುಳ್ಳೊಡಮೇನು ಮತ್ತಮಂ
ತೆನಿತೆನಿತುಂ ಸ್ವಗೋತ್ರಜಜನಂಗಳುಮುಳ್ಳೊಡಮೇನು ಪುತ್ರಸಂ
ಜನಿ ತನಗಿಲ್ಲದಂದು ನರನಾವನೊ ದುಃಖಮನೆಯ್ದನಂಬರಂ
ವಿನುತಹಿಮಾಂಶುವಿಲ್ಲದೊಡೆ ತಾರೆಗಳುಳ್ಳೊಡಮೆಂತು ರಂಜಿಕುಂ            ೫

ಕುಲದೀಪನೆನಿಪ ತನಯಂ
ನಿಳಯದೊಳುಜ್ಜಳಿಸಿ ಬೆಳಗದಿರ್ದೊಡೆ ಧಾತ್ರೀ
ತಳದೊಳದು ಮೆಱೆಯದೆಂತೆನೆ
ವಿಳಸಿತತಮದಿಂದ ಪುದಿದ ಮನೆಯಂತೆ ವಲಂ   ೬

ಸರಸಿರುಹಂಗಳಿಲ್ಲದ ಕೊಳಂ ದಿನನಾಯಕನಿಲ್ಲದಾಗಸಂ
ಸುರುಚಿರಶಾಸ್ತ್ರಮಿಲ್ಲದ ತಪಂ ವಧುವಿಲ್ಲದ ಲೀಲೆ ಸತ್ಪ್ರಭಾ
ಪರಿಕರಮಿಲ್ಲದುದ್ಘಮಣಿಯೆಂತು ಧರಿತ್ರಿಯೊಳೊಪ್ಪದಂತೆ ಸೌಂ
ದರಸುತನಿಲ್ಲದೆನ್ನ ಕುಲಮೆಂತದು ಪೆರ್ಚಿ ಸಮಂತು ರಾಜಿಕುಂ      ೭

ಎನ್ನ ಕುಲಾಂಕುರಂ ದಲೆನಿಪಾತ್ಮಜನಂ ನೆಱೆಕಾಣದೀಗಳೆ
ನ್ನನ್ವಯಲಕ್ಷ್ಮಿ ತನ್ನಯ ಸುಭೋಗಸಮಾಶ್ರಯಭಂಗಶಂಕೆಯಿಂ
ದುನ್ನತಚಿಂತೆ ನಟ್ಟುನಿಲೆ ಚಿತ್ತದೊಳಾಕುಳೆ ಸುಯ್ದು ಸುಯ್ಲಿನಿಂ
ತನ್ನ ಕರಾಗ್ರಪಂಕಜಮನೆಯ್ದೆ ಮುರುಂಟಿಸುತಿರ್ಪಳಾವಗಂ          ೮೮

ಶಶಿಕಿರಣಂಗಳಿಂ ಹಿಮಕಣಂಗಳಿನುದ್ಘಸುಧಾರಸಚ್ಛಟಾ
ಪ್ರಸರದಿನಂಬುಜಂಗಳಿನುದಾರವಿಮೌಕ್ತಿಕಹಾರಯುಷ್ಟಿಯಿಂ
ದಸುಕೆಯ ಪಲ್ಲವಂಗಳ ಸಮೂಹದಿನಪ್ಪ ಸುಖಕ್ಕಿದಗ್ಗಳಂ
ಲಲಿತಸುತಾಂಗಸಂಗತದಿನಪ್ಪ ಸುಖಂ ಮನುಜರ್ಗೆ ಲೋಕದೊಳ್   ೯

ಏನಂ ಮಾಳ್ಪೆನಿದಾವದೇವತೆಯನಾನಾರಾಧಿಪೆಂ ನಿಷ್ಠೆಯಿಂ
ದಾನಾರಂ ಬೆಸಗೊಳ್ವೆನೀ ವಿಷಯದೊಳ್ ಮತ್ಪೌರುಷಂ ಕೊಳ್ಳದಿ
ನ್ನೇನುಂ ಸಂದೆಯಮಿಲ್ಲ ಧರ್ಮದೊದವಿಂ ಸಾಧ್ಯಂ ದಲೀ ಕಾರ್ಯಮೆಂ
ದಾ ನಾಥಂ ವರಧರ್ಮಮಂ ಬಿಡದೆ ಮಾಳ್ಪುದ್ಯೋಗಮಂ ತಾಳ್ದಿದಂ          ೧೦

ವ : ಇಂತು ನಿರಂತರಿತಚಿಂತಾಸಮುದ್ರಾಂತರಾಳತರಂಗಿತಾಂತರಂಗ ನಾಗಿರ್ಪುದುಂ ತತ್ಸಮಯದೊಳೊರ್ವನುದ್ಯಾನಪಾಲಕಂ ಮುನೀಶ್ವರಸಮಾಗ ಮನೋತ್ಸಾಹವಾರ್ತಾನಿವೇದನೋತ್ಸುಕಂ ನಿರ್ಯತ್ಪ್ರಮದಾಶ್ರುಧಾರಾಪೂರಮುತ್ಸಿಕ್ತನುದಂಚಿತ ರೋಮಾಂಚಸಂಚಯಕಂಚುಕಿತಗಾತ್ರಂ ಕಯ್ಯೊಳ್ ಕುಡಿಯಂ ಪಿಡಿದೆತ್ತಿಕೊಂಡರಮನೆಯ ಬಾಗಿಲೊಳ್ ಬಂದುನಿಂದು ತನ್ನ ಬರವಂ ಪಡಿಯಱಂಗಱೆಪುವುದುಮಾತಂ ಪೋಗಿಯರಸಂಗೆ ಬಿನ್ನಪಂಗೆಯ್ಯೆ ಬರವೇಳೆಂಬುದುಂ

ದರದಳಿತಂಗಳಪ್ಪ ಕುಸುಮಸ್ತಬಕಂಗಳನೆಯ್ದೆ ತಾಳ್ದಿ ಪೀ
ವರಸುರಸಂಗಳಪ್ಪ ವರಪಕ್ವಫಲಂಗಳ ಸಂಚಯಂಗಳಂ
ಧರಿಸಿ ತದೀಶವಾಂಛಿತಫಳಪ್ರದಮಪ್ಪ ಸುಕಲ್ಪವೃಕ್ಷದಂ
ತಿರೆ ನಡೆತಂದನಂದು ವನಪಾಳಕನುನ್ನತಹರ್ಷಪಾಳಕಂ    ೧೧

ವ : ಅಂತು ಬಂದು ವಿನಯವಿನಮಿತೋತ್ತಮಾಂಗನಾಗಿ ತಾಂ ತಂದ ಕಾಲ ನಿಷ್ಪನ್ನಂಗಳಾದ ಪುಷ್ಪಫಲಂಗಳಂ ಕಾಣಿಕೆಯಂ ಕೊಟ್ಟು ಮುಂದೆ ಕುಳ್ಳಿರ್ದು ತನ್ನಯ ಧವಳ ಚೇಳಾಂಚಳಮನಧರಸವಿಧರಕ್ಕೆ ತಂದು ಬಿನ್ನಪಮೆಂದಿಂತೆಂದಂ

ದೇವಕಳಾವಿಳಾಸದೊದವಿಂದೆ ದಿಗಂಬರಮಾರ್ಗಭೂಷಿಣೀ
ಭಾವಮನೆಯ್ದಿ ತಾರಕಿಗಳೊಳ್ ಪುದಿದಿರ್ದ ಸುಧಾಂಶು ಬಪ್ಪವೊಲ್
ಪಾವನಬೋಧಯೋಗಿ ಸಮುದಾಯಸಮನ್ವಿತನಾಗಿ ಬಂದನೀ
ಭೂವಳಯಕ್ಕೆ ಚಾರಣಮುನೀಶ್ವರನಂಬರಮಾರ್ಗದತ್ತಣಿಂ          ೧೨

ವ : ಪ್ರಚೇತರೆಂಬಾಚಾರ್ಯವರ್ಯರೈನೂರ್ತಂಡ ಚಾರಣಋಷಿಸಮು ದಾಯಂಬೆರಸು ಬಂದು ನಮ್ಮೀ ಪುರದ ಬಹಿರ್ಭಾಗದೊಳಿರ್ದುದ್ಯಾನವನಾಂತ ರ್ಭಾಗಮಂ ಪೊಕ್ಕು ತತ್ಪ್ರಸ್ಥಕ್ರೀಡಾಶೈಲೊಚೂಡಾಪ್ರಸ್ಥದೊಳೊಂದಿಂದುಕಾಂತಶಿಲಾಮಯ ಮಾ[ದು]ತ್ತುಂಗ ರಂಗಾಗ್ರದಲ್ಲಿ ಬಿಜಯಂಗೆಯ್ದು ಪಂಥಾತಿಚಾರಕ್ರಿಯೆಯಂ ತೀರ್ಚಿ ಸಮೀಪವರ್ತಿ ಶಿಷ್ಯಪ್ರಶಿಷ್ಯವರ್ಗಕ್ಕೆ ವಿಶುದ್ಧಸಿದ್ಧಾಂತಾದಿ ಸಮಸ್ತಶಾಸ್ತ್ರವ್ಯಾಖ್ಯಾನಮಂ ಮಾಡುತ್ತುಮಿರ್ದರಾ ಮುನೀಶ್ವರರ ಮಹಾಮಹಿಮೆಯಿಂದಾನೊರ್ವನೇ ವಿಪುಳಪುಳಕಂ ಗಳಿಂದಂಕುರಿತನಾದೆನಿಲ್ಲ ವಸಂತಸಮಯಮನಪೇಕ್ಷಿಸದಲ್ಲಿಯ ವೃಕ್ಷಂಗಳುಮಂಕುರಿ ತಂಗಳಾದುವು ಮತ್ತಮವರ ಮಾಹಾತ್ಮಮಂ ಪೇಳ್ವೊಡೆನ್ನಳವಲ್ಲೆಂದು ಬಿನ್ನಪಂಗೆಯ್ಯಲಾ ಮುನೀಂದ್ರಚಂದ್ರಮನ ಸಮಾಗಮನವಾರ್ತಾಚಂದ್ರಿಕಾಪ್ರಸರದಿಂದಾ ಮಹೀಪಾಳತಿಳಕನ ಮನೋಗತಚಿಂತಾಸಂತಾಪಮೊರ್ಮೊದಲೊಳ್ ಪಿಂಗಿಪೋಗಲೊಡಮಾಗಳಾತನ ನೇತ್ರಂಗಳಿಂದುಕಾಂತಪುತ್ರಿಕಾಪ್ರತಿಮಾನಂಗಳಾದುವು ಕರಂಗಳಂಭೋಜಲೀಲಾಪಾಲಕಂಗಳಾದುವು ನಿರಂತರಿತಪರಮಾನಂದಸಂದೋಹನಿರವಧಿಪಯೋಧಿಪ್ರತಿನಿಧಿಯಾಗೆ ಕಾರ್ಗಾಲದ ಮೇಘಧ್ವನಿಯಂ ಕೇಳ್ದ ನವಿಲಂತನೂನಸಂಭ್ರಮಭ್ರಮಿತಾಂತರಂನಾಗಿ

ವರಸಿಂಹಾಸನದಿಂದಮೆಳ್ದು ಧರಣೀಪಾಳಂ ಪ್ರಚೇತೋಮುನೀ
ಶ್ವರನಿರ್ದಾದೆಸೆಯತ್ತಲೇಳಡಿಯುಮಂ ಸದ್ಭಕ್ತಿಯಿಂ ಪೋಗಿ ನಿ
ರ್ಭರದಿಂದಾನತನಾದನೆಂತು ದಿನಪಂ ಪೂರ್ವಾದ್ರಿಯಿಂದೆಳ್ದು ತಾ
ನಿರದಪ್ಪಂ ನತನಾಪ್ರಚೇತನನಿವಾಸಾಶಾಂತದತ್ತಲ್ ಕರಂ೧೩

ವ : ಅನಂತರಂ ವಿಶಿಷ್ಟೇಷ್ಟಫಳಪ್ರದಾಳಯಕಂಗಳಪ್ಪ ತನ್ನಯ ಮನೋರಥ ಮಹೀಜ ಬೀಜಾಯಮಾನಪ್ರಸೂನಫಲಂಗಳಂ ಕಾಣಿಕೆಯಂ ಕೊಟ್ಟ ವನಪಾಲಂಗೆ ಪ್ರತ್ಯುಪ ಕಾರಮಂ ಮಾಳ್ಪ ಬಗೆಯಿಂದೆಂಬಂತೆ ದೇಯಾದೇಯವಿಚಾರಮಿಲ್ಲದೆ ತೃಪ್ತಿಯೇ ಸೀಮೆಯೆಂಬನ್ನೆವರಂ ದ್ವೀಪಾಂತರಾಯತಾದೃಷ್ಟಪೂರ್ವಾನರ್ಘ್ಯಮಾದ ಸಮಸ್ತ ವಸ್ತುವಂ ವಿಸ್ತೃತಪ್ರೀತಿಯಿಂದಂಗಚಿತ್ತಮಂ ಕೊಟ್ಟು ತನ್ಮುನೀಂದ್ರಪಾದಾರವಿಂದ ದ್ವಂದ್ವಸಂದರ್ಶನೋತ್ಸವಸಮುತ್ಸುಕಂ ಯಾತ್ರಾನಿಮಿತ್ತಂ ಪ್ರಸ್ಥಾನಭೇರಿಯಂ ಪೊಯಿಸಿದಾಗಳ್

ಪಿರಿದುಂ ಪ್ರಸ್ಥಾನಭೇರೀರವಮಖಿಳದಿಶಾಭೋಗಭಾಗಂಗಳಂ ಮೇ
ಘರವಂ ತಾನೆಂಬಿನಂ ವ್ಯಾಪಿಸೆ ಪುರಜನಮೆಲ್ಲಂ ಮಯೂರಾಳಿಯಂತು
ದ್ಧುರಸಂತೋಷಂಗಳಿಂದಂ ನಟನರಸವಶೀಭೂತಮಾಯ್ತೀ ಜಗಂ ಬಂ
ಧುರಶಬ್ದಾದ್ವೈತಮಂ ಪಾಳಿಸಿದುದು ಭರದಿಂ ತುಂಬಿ ತಚ್ಛಬ್ದದಿಂದಂ      ೧೪

ಆಗಳನೂನಸಂಭ್ರಮಪರಿಭ್ರಮದಂಗನೆಯರ್ ಸ್ವಗೇಹದೊಳ್
ಬೇಗದೆ ಗಂಧಸಾರಜಳದಿಂ ಚಳಯಂಗಳನೆಯ್ದೆ ಕೊಟ್ಟು ಮುಂ
ಬಾಗಿಲೊಳುನ್ನತಧ್ವಜಚಯಂಗಳನೆತ್ತಿಸಿ ರಂಗವಾಲಿಯಂ
ರಾಗದೊಳಿಕ್ಕಿ ಬೀದಿಯೊಳಮಂದುಱೆ ಮಾಡಿದರಷ್ಟಶೋಭೆಯಂ  ೧೫

ರತ್ನಚಯಂಗಳಿಂ ಮಿಗುವ ಮುತ್ತುಗಳಿಂ ನೆಱೆಕೀಲಿಸಿರ್ದ ದಲ್
ನೂತ್ನಮೆನಿಪ್ಪಲಂಕರಣಮಂ ಸಲೆತೊಟ್ಟು ಜನಂಗಳುಂ ವಧೂ
ರತ್ನಗಣಂಗಳುಂ ಕಳಶದರ್ಪಣಮಂ ಪಿಡಿದರ್ ಕೆಲಂಬರುಂ
ಯತ್ನದೆ ತಾಳ್ದರಷ್ಟವಿಧದರ್ಚನೆ ವಸ್ತುಸುಭಾಜನಂಗಳಂ            ೧೬

ವ : ಆ ಮುನೀಂದ್ರಂ ಬಂದನೆಂಬೊಂದಾನಂದಂ ಕೈಮಿಕ್ಕು ತನ್ನಗರೀ ಮಂದಿರವೃಂದಂಗಳೊಳ್ ತುಂಬಿ ಪವಣಿಸದೆ ಮರ್ತ್ಯಮೂರ್ತಿಯಂ ಕೈಕೊಂಡು ಪೊಱ ಪೊಣ್ಮಿದುದೆಂಬಂತೆ ಪುರಜನಂಗಳ್ ಕುದುರೆಗಳು ರಥಂಗಳನೇಱೆ ಮಾನಿನಿಯರ್ ಪಿಡಿಗಳಂ ಪಿಡಿದೇಱಿ ತಂತಮ್ಮ ಮನೆಗಳಿಂ ಪೊಱಮಟ್ಟುಬಂದರಮನೆಯ ವಿರಾಜಮಾನ ರಾಜಾಂಗಣದೊಳ್ ನಿಂದಿರ್ಪುದುಂ

ಅತಿಶಯಮಾದ ಭೂಷಣ ವಿಭೂಷಿತನಾಗಿ ನರೇಂದ್ರಕುಂಜರಂ
ಸತಿಯೊಡಗೂಡಿ ಬಂದಿಭಮನೇಱಿ ಧೃತಾಂಕುಶನೊಪ್ಪಿದಂ ದಿವ
ಸ್ಪತಿಯೊಲವಿಂ ಪುಲೋಮಜೆಯೊಳೊಂದಿ ನಿಜಾಭ್ರಗಜೇಂದ್ರಮಂ ಮಹೋ
ನ್ನತಿಯೊಳಮೇಱಿ ರಂಜಿಸುವವೊಲ್ ಸುಮನಃಪ್ರಸರಪ್ರಸೇವಿತಂ   ೧೭

ನಿರುಪಮರೂಪನೀಕ್ಷಿಸುವ ಪೌರವಧೂನರಲೋಲಲೋಚನೋ
ತ್ಕರಪರಿಕೀಲಿತಾಮಲಶರೀರ ಸುಕಾಂತಿಯನುಳ್ಳ ಭೂಮಿಪಂ
ಧರಣಿಯೊಳೊಪ್ಪಿದಂ ಮಿಗೆ ಸಹಸ್ರವಿಲೋಚನನಂತಿರಾಗಳು
ದ್ಧುರಧವಳಾತಪತ್ರದಡಿಯೊಳ್ ಚಮರೀರುಹಶೋಭಿಮಸ್ತಕಂ     ೧೮೮

ಗೀತರವಂಗಳುಂ ವಿವಿಧವಾದ್ಯಸಮೂಹದ ನಿಸ್ವನಂಗಳುಂ
ನೂತನವಲ್ಲಕೀ ಧ್ವನಿಗಳುಂ ಬಿಡದೋದುವ ಚಾರುಪಾಠಕ
ವ್ರಾತರವಂಗಳುಂ ದಶದಿಶಾತಟಮಂ ಪರಿಭೇದಿಸುತ್ತಿರಲ್
ಭೂತಳನಾಯಕಂ ತಳರ್ದನಂಗಜಮಲ್ಲನ ನೋಳ್ಪ ವಾಂಛೆಯಿಂ    ೧೯

ಕಿರಣಸಹಸ್ರಂಗಳ್ ಭಾ
ಸ್ಕರನೊಡನೆಯ್ತಪ್ಪ ಮಾಳ್ಕೆಯಿಂದೆಯ್ತಂದರ್
ನಿರುಪಮರಾಜಕುಮಾರರ್
ನರನಾಥನ ಪಿಂದೆ ರಾಗರಸದೊದವಿಂದಂ         ೨೦

ಸಮುಪಾತ್ತೋನ್ನತ ಮತ್ತವಾರಣ ಕರಂ ಸಜ್ಜಾಲಕೋಪೇತರಂ
ಸುಮಹಾಭೋಗ ವಿರಾಜಮಾನತರರಂ [ಮಾ]ನೋಚ್ಛ್ರಯಾಕಾಂತರಂ
ವಿಮಲಾಕಾರರನಿಕ್ಕೆಲಂಬಿಡಿದು ಬಪ್ಪ ಕ್ಷ್ಮಾಪರಂ ನೋಡಿದಂ
ರಮಣೀಯಂಗಳೆನಿಪ್ಪ ಕೇರಿಗಳೆ ಪಿಂದೆಯ್ತಪ್ಪವೊಲ್ ತೋರ್ಪರಂ೨೧

ಪಿರಿದುಂ ಸಂಪಲ್ಲವಾರಂಜಿತಮತುಳವಿಳಾಸಾಸ್ಪದಂ ಪತ್ರವಲ್ಲೀ
ಪರಿಶೋಭಾಸಂಯುತಂ ಭಾಸುರತರತಿಳಕಂ ಲಾಲನೀಯಾಯತಾಕ್ಷಂ
ಸ್ಮರರಾಜೋದ್ಯಾನಮೇಳ್ತಂದಪುದೆನೆ ಪುರನಾರೀಜನಂ ಸುತ್ತಲುಂ ಭೂ
ವರನೇತ್ರಪ್ರೀತಿಯಂ ಪುಟ್ಟಿಸುತೆ ನಡೆದುದತ್ಯಂತಸಂತೋಷದಿಂದಂ೨೨

ಒರ್ವೊರ್ವರ ದೇಹಂಗಳ
ದುರ್ವಹ ಸಂಘಟ್ಟನಂಗಳಿಂ ಹಾರಂಗಳ್
ನಿರ್ವರದೆ ಪಱಿದು ಬೀಳ್ದೊಡೆ
ಸರ್ವರ್ಗಂ ಚರಿಸಬಾರದಿರ್ದುದು ಮಾರ್ಗಂ       ೨೩

ಭೂಪನ ಮುಖಸರಸೀಜ ಸ
ಮೀಪದೊಳಂದಂಗರಾಗಗಂಧಕ್ಕೆಳಸಿ
ವ್ಯಾಪಿಸುವ ಭೃಂಗಮಾಳೆ ಮ
ನೋಪಸರತ್ತಿಮಿರಮಿರದೆ ಪೊಱಪೊಣ್ಮುವ ವೊಲ್        ೨೪

ಮುನ್ನಮೆ ಪೋಗಿ ಪುಷ್ಪಫಲಸಂಚಯಮಂ ನೆಱೆತಂದುಕೊಟ್ಟು ಸಂ
ಪನ್ನನ ಚಿತ್ತವೃತ್ತಿಗುಱೆ ಬಂದು ದಲೀ ಪದದೊಳ್ ವಿಶೇಷದಿಂ
ಮುನ್ನಿಸಿಕೊಂಬೆವೆಂಬ ಬಗೆಯಿಂ ಸಮಯೋಚಿತಸೇವನಾಪರರ್
ಸನ್ನಿದಮಾದ ವಂದನವನಕ್ಕಿರದೆಯ್ದಿದರಂದು ಬೇಗದಿಂ೨೫

ಆಶೀರ್ವಾದದ ನಿನದಂ
ಲೇಸಾಗಿಯೆ ನೆಗೆಯೆ ವಿವಿಧರಚನಾತಿಶಯೋ
ದ್ಭಾಸಿತನಗರೀದ್ವಾರಮ
ನೀಶಂ ಬಂದೆಯ್ದಿದಂ ಮನೋಮುದದಿಂದಂ    ೨೬

ಯತಿಭಾವಸಮೇತಂ ರಾ
ಜಿತಗುಣಕಂ ಸ್ವೀಕೃತಾಖಿಲಾಲಂಕಾರಂ
ಕ್ಷಿತಿಪಂ ಪೊಱಮಟ್ಟಂ ಸ
ನ್ನುತಕವಿಮುಖದಿಂದೆ ನೆಗೆವ ಪದ್ಯದ ತೆಱದಿಂ   ೨೭

ಪೊಱವೊಳಲಾತನ ಕಣ್ಣಂ
ಸೆಱೆವಿಡಿದುದು ತಾಯ ಕೆಲದ ಮಗುವಿನ ತೆಱದಿಂ
ಮಿಱುಗುವ ಬಹುಲಕ್ಷಣದಿಂ
ನೆಱೆರಮಣೀಯತ್ವದೊದವನಾಂತಿರ್ದು ಕರಂ   ೨೮

ವಿಕ್ರಮಪೂಜ್ಯಂ ಧರಣೀ
ಚಕ್ರಪ್ರಭು ಸರ್ವಮಂಗಳೋಪೇತನವಂ
ಮಿಕ್ಕು ಮಹಾಸೇನಾವೃತ
ನುಕ್ಕಿ ಮಹಾಸೇನನೆಂಬಿದಂ ಪ್ರಕಟಿಸಿದಂ          ೨೯

ವ : ಅಂತು ರುಂದ್ರಲೀಲೆಯಿಂ ಬರುತ್ತಿರ್ದ ನರೇಂದ್ರಂ ದೂರಾಂತರದೊಳತ್ಯುಚ್ಚೈಸ್ತನ ಶಾಖಿಲೇಖಾಶಾಖಾಶಿಖಾಮುಖಂಗಳಿಂದಾಕಾಶಮನಳ್ಳಿಱಿಯುತ್ತಿರ್ದ ಹೃದ್ಯಮಾದುದ್ಯಾನ ವನಮಂ ಕಂಡು ಮನದೆಗೊಂಡು ತನ್ನಯ ಮನೋ ವಲ್ಲಭೆಯ ಮುಖಕಮಳಾ ವಳೋಕನಂಗೆಯ್ದಿಂತೆಂದಂ

ಭೂವಳಯಕ್ಕಭೀಷ್ಟಫಳದಾಯಿಯೆನಿಪ್ಪ ಮಹಾಮಹೀಜಶಾ
ಖಾವಳಿ ಹಸ್ತಮಂ ನೆಗಪಿ ಸದ್ವಿನಯಧ್ವನಿಯಿಂದಮೊಪ್ಪಿ ತಾಂ
ಪೀವರನಾಳಿಕೇರರಸಧಾರೆಗಳಿಂ ಪರಿರಂಜಿಸುತ್ತುಮಿ
ರ್ದೀ ವನಮೀ ವನಂಬೊಲೆಸೆದತ್ತು ದಲೆನ್ನಯ ಮುಂದೆ ಲೀಲೆಯಿಂ೩೦

ಮೂಲಬಲಾನ್ವಿತಂ ವಿವಿಧಪತ್ರಸಮೂಹಸಮಂಚಿತಂ ಸಮು
ನ್ಮೀಲಿತದರ್ಪಕಂ ಕುವಳಯಪ್ರಥಿತಂ ಸುಖವೃದ್ಧಿಶೋಭಿತಂ
ಪಾಲಿತಸತ್ವಕಂ ವರಮಧುವ್ರತಸೇವ್ಯತರಂ ಕವೀಶ್ವರೋ
ಲ್ಲಾಲಿತಮಾಗಿ ರಾಜಪದಮಂ ಪಡೆದಂತೆಸೆದತ್ತಿದೆನ್ನ ವೊಲ್       ೩೧

ಕೆನ್ನಂ ಮಾಗಾಯ್ಗಳಿನ
ತ್ಯುನ್ನತಮಾದರಳಿಯೆಲೆಗಳಿಂದೊಪ್ಪುತ್ತುಂ
ನಿನ್ನಯ ನಂದನನಂತಿರೆ
ಸನ್ನುತಮೀ ನಂದನಂ ಕರಂ ಸೊಗಯಿಸುಗುಂ    ೩೨

ವಿಪರೀತಮಾಗಿಯುಂ ಸಾ
ಧುಪರಿಷದಾಶ್ರಯಮುಮಾದುದಕುಲೀನತೆಯಿಂ
ದುಪಗತಮಾಗಿಯುಮಿದು ತಾಂ
ವಿಪುಳಸುಗೋತ್ರಾಪಜಾತಮಾದುದು ಚಿತ್ರಂ     ೩೩

ಪಿರಿದುಂ ನೀಳ್ದ ಮಹೀರುಹಂಗಳ ಮಹಾಶಾಖಾಗ್ರಪುಷ್ಪೋತ್ಕರಂ
ಭರದಿಂದೊಪ್ಪಮನಾಳ್ದುದುಷ್ಣಕರನಶ್ವಂಗಳ್ ನಭೋಮಾರ್ಗದೊಳ್
ಬರುತುಂ ಪಲ್ಲವಮಂ ತಿನಲ್ಕೆಳಸಿ ವಕ್ತ್ರಾಗ್ರಂಗಳಂ ನೀಡಿ ಪೀ
ವರಫೇನಂಗಳ ಲೇಶಪಿಂಡಮದಱಲ್ಲೊಕ್ಕಿರ್ದುದೆಂಬಂದದಿಂ         ೩೪

ಕುಸುಮರಜಸ್ಸಮಾಜವರವಸ್ತ್ರಮನುಟ್ಟು ಕೊಳಂಗಳಲ್ಲಿ ರಂ
ಜಿಸುವ ಪಯಃಕಣಪ್ರಸರಮೆಂಬ ವಿಮೌಕ್ತಿಕಹಾರದಿಂ ವಿರಾ
ಜಿಸಿ ಲತೆಯೆಂಬ ದಂಡಮುಮನೆತ್ತಿ ಸಮೀರಣನೆಯ್ದಿತಿಂದು ಕೂ
ರಿಸಿ ವನಮೆಂಬ ಭೂಪನಿರದಟ್ಟಿದ ಕಟ್ಟಿಗೆಕಾಱನಂದದಿಂ  ೩೫

ವ : ಮತ್ತಮೀ ನಂದನವನದಲ್ಲಿ ಮುಂದೆ ಪೋದ ಸೈನಿಕರ ಕೋಳಾಹಳದಿಂ ಮಾಲೆಗೊಂಡು ಮೇಗೆ ನೆಗೆವುತ್ತಿರ್ದ ಪಿಕಶುಕಾದಿ ನಾನಾಪ್ರಾಕಾರ ಪಕ್ಷಿಗಳಿಂ ಪರಿಲಕ್ಷಿತಂಗಳಾದಕ್ಷೂಣ ವೃಕ್ಷಂಗಳಾಂ ಬಂದಪನೆಂಬುತ್ಸಾಹದಿಂ ವನಲಕ್ಷ್ಮಿಯೆತ್ತಿಸಿದ ಧ್ವಜಂಗಳಂ ತಿರ್ದುವು ಪೊಂಬಾಳೆಗಳ ಬಹಳಮಪ್ಪ ಪರಿಮಳಭರಕ್ಕೆಳಸುವಳಿಕುಳಂಗಳ ಶ್ರೇಣಿಯಿಂ ಸಮಾಲಂಬಿತಂಗಳಾಗಿ ಕೆಲದೊಳೊಪ್ಪಂಬೆತ್ತಿರ್ದ ಪೂಗದ್ರುಮಂಗಳಿಂದ್ರನೀಲಮಣಿಯ ತೋರಣದೋರಣಿ ಶೋಭೆಯನನುಕರಿಸುತ್ತಿರ್ದುವು ಮಂದಾನಿಳನೆಂಬ ನಟ್ಟವಿಗನ ಪ್ರೇರಣೆಯಿಂದ ಬಾಳತಾಳಂಗಳ ಮೇಳದೊಡಗೂಡಿ ಪ್ರವಾಲವಿಳಸಿತಲತೆಗಳ್ ತಾಂಡವಾಡಂಬರಮಂ ವಿಡಂಬಿಸುವಂತಿರ್ದುವು ಚಂದನತಿಳಕಾಂಕಿತೆಯಾದ ವನಶ್ರೀ ಪ್ರೀತಿಯಿಂದಕ್ಷತ ದೂರ್ವೆಗಳಿಂದೆನಗೆ ಮಂಗಳಮಂ ಮಾಡುವಂತಿರ್ದಳೆಂದು ನಿಜಪ್ರಾಣಿನಿಯೊಡನೆ ನುಡಿಯುತ್ತುಂ ತದುದ್ಯಾನಮನೆಯ್ದಿದಾಗಳ್

ಓಡುವ ವಾಜಿಸಂತತಿಗಳೆಂಬ ವರೋರ್ಮಿಗಳಿಂದೆ ದಾನದೊಳ್
ಕೂಡಿದ ಕುಂಜರಾವಳಿಗಳೆಂಬ ಬಹಿತ್ರಕದಂಬಕಂಗಳಿಂ
ಗಾಡಿಗೆ ತಾಣಮಾದ ಪುರುಸೈನ್ಯ ಸಮುದ್ರದ ತೀರದಲ್ಲಿ ದಲ್
ಮೂಡಿದ ಶೈವಳಾವಳಿಯ ಶಂಕೆಯನಂಕುರಿಸಿತ್ತು ನಂದನಂ           ೩೬

ವ : ಅನಂತರಂ

ಆ ವನದ ಪೊಱಗೆ ಸೈನ್ಯಮ
ನಾ ವಸುಧಾಧೀಶನಿರಿಸಿ ಗಂಧರ್ವರುಮಂ
ಸೇವಕಜನದಲ್ಲಿರಿಸಿದ
ನಾವೃತಕತಿಪಯಸುಭವ್ಯಸಮುದಯನಾಗಳ್   ೩೭

ಅನುಪಮಕರಾಗ್ರಮಂ ಪಾ
ವನಮಂ ನೆಱೆಮುಗಿದು ವಲ್ಲಭಾಸಂಯುಕ್ತಂ
ವನದೊಳಗೆ ಪೊಕ್ಕನಧಿಪಂ
ಘನಪಟಳಿಕೆಯೊಳಗೆ ಪುಗುವ ಚಂದ್ರನ ತೆಱದಿಂ  ೩೮

ವ : ಅಂತು ಪೊಕ್ಕನಂತರಮನತಿದೂರದೊಳ್ ಮುಂದೊಂದೊಡೆ ಯೊಳೊಂದಸುಕೆಯ ಮರನುನ್ನತಮಾದ ತನ್ನಯ ಕೊಂಬುಗಳಿಂದಾಗಸಮಂ ತುಡುಂಕುತ್ತುಂವೀತರಾಗಗಂಗೆಡೆಗೊಟ್ಟ ತಾಣದೊಳಾನಿರ್ಪುದುಚಿತಮಲ್ಲೆಂದು ರಾಗಂ ಬೇಗದಿಂ ಯೋಗಿಜನಂಗಳ ಚಿತ್ತವೃತ್ತಿಯಂ ಬಿಟ್ಟುಪೋಗಿ ಸಮಕ್ಷದೊಳಿರ್ದುಮಶೋಕ ವೃಕ್ಷದೊಳ್ ಪುಂಜಿಸಿರ್ದುದೆಂಬಂತೆ ಸಮುಲ್ಲಸತ್ಪಲ್ಲವಮಂಜರೀಪರಿರಂಜನದಿಂ ಕೆಂಕಮಾದ ಕಂಕೆಲ್ಲೀವೃಕ್ಷದ ಮೊದಲೊಳ್ ಪ್ರಕಟವಿಕಸ್ಫಟಿಕಶಿಲಾವಿಘಟಿತವಿಶಾಲ ಪ್ರದೇಶದೊಳ್

ನಿರುಪಮಕರುಣಾರಸದಿಂ
ಪರಿಪೂರ್ಣಂ ಸಕಳವಿಮಳವಿದ್ಯಾವಾಸಂ
ಪುರುಪುಣ್ಯಪುಂಜದಂತಿರೆ
ಭರದಿಂದೊಪ್ಪಿದುದು ಜೈನಮುನಿಸಮುದಾಯಂ          ೩೯

ಪೂವಿನ ಮಾಲೆಯಂತೆ ರಮಣೀಯ ಗುಣಾನುಗತಂ ದಲಾಗಿ ಮೇ
ಘಾವಳಿಕಾಲದಂತಿರೆ ವಿನಷ್ಟರಜೋವ್ರಜಮಾಗಿ ಪದ್ಮಿನೀ
ಜೀವಿತನಾಥ ಸತ್ಕಿರಣದಂತೆ ತಮೋಹರಮಾಗಿ ಕಣ್ಗೆ ಶೋ
ಭಾವಹಮಾದುದಲ್ಲಿ ಜಿನಯೋಗಿಜನಂಗಳ ಮೊತ್ತಮೆತ್ತಲುಂ       ೪೦

ವ : ಅದಱೊಳೊಂದೆಡೆಯೊಳ್

ಮುನಿಯೊರ್ವಂ ತನ್ನ ಶಿಷ್ಯಾವಳಿಗೆ ಪರಮಸಿದ್ಧಾಂತಮಂ ಪೇಳುತಿರ್ದಂ
ಮುನಿ ಮತ್ತೊರ್ವಂ ಮಹಾತರ್ಕದ ಬಗೆಯೊಳುಪನ್ಯಾಸಮಂ ಮಾಡುತಿರ್ದಂ
ಮುನಿ ಮತ್ತೊರ್ವಂ ಸಮಸ್ರಾಗಮದ ವರರಹಸ್ಯಂಗಳಂ ಪೇಳುತಿರ್ದಂ
ಮುನಿ ಮತ್ತೊರ್ವಂ ಕರಂ ಲೌಕಿಕ ಸಕಳಕಳಾಖ್ಯಾನಮಂ ಮಾಡುತಿರ್ದಂ         ೪೧

ದಿನಕರಬಿಂಬಕ್ಕಭಿಮುಖ
ರೆನಿಸಿರ್ದ ತಪೋಧನರ್ ಕೆಲರ್ ಚಿನ್ಮಯನಂ
ಮನದೊಳ್ ನಿಷ್ಕಂಪತೆಯಿಂ
ನೆನೆಯುತ್ತಿರ್ದರ್ ತಪಃಪ್ರಭಾವೋತ್ಯಧಿಕರ್     ೪೨

ವ : ತತ್ಕಾಲದೊಳಪಸಾರಿತನಿರವಶೇಷಚ್ಛತ್ರಚಾಮರಾದಿ ರಾಜಚಿಹ್ನನಪ್ಪ ಮಹಾರಾಜಂ
ವಿನಯದ ಪುಂಜಮೆ ಮನುಜರಾಜರೂಪಂ ಕೈಕೊಂಡು ಮುಂದೆ ಬಂದು ನಿಂದುದೆಂಬಂತೆ ಕೈಗಳಂ ಮುಗಿದು ಜಿನಮುನಿಗಳ ಸಮುದಾಯದ ಶೋಭೆಯಂ ನೋಡುತ್ತುಂ ಬರ್ಪಾಗಳಾ ಸಮುದಾಯದ ನಟ್ಟನಡುವೆ

ತನ್ನಿಂ ಬೇರ್ಕೆಯ್ದು ಮೆಯ್ಯಂ ಪಗಲಿದಿರುಳಿದೆಂಬೀ ವಿಭೇದಂ ದಲೇನುಂ
ಕೆನ್ನಂ ಮೆಯ್ದೋಱಿತಿಲ್ಲಂ ಬಗೆವೊಡೆ ನಿಜನಾಸಾಗ್ರನಿರ್ವ್ಯಗ್ರನೇತ್ರಂ
ತನ್ನಿಂ ತನ್ನಲ್ಲಿ ತನ್ನಂ ಸ್ಥಿರತರಮನದಿಂ ಭಾವಿಸುತ್ತಿರ್ದನಂ ನಿ
ಷ್ಪನ್ನೋದ್ಭೋಧ ಪ್ರಭಾವಾಧಿಕಯತಿಪತಿಯಂ ಕಂಡನಾಗಳ್ ನರೇಂದ್ರಂ    ೪೩

ಕೆಲದೊಳ್ ಮುನಿಪನ ಕುಂಚಂ
ಸಲೆ ನೋಳ್ಪರ ಕಣ್ಗೆ ಸೊಗಸನೀವುತ್ತಿರ್ಕುಂ
ವಿಳಸದ್ದಯಾಧ್ವಜಂ ಭೂ
ತಳದೊಳ್ ನೆಱೆ ನಿಮಿರ್ದು ಮೆಱೆವ ತೆಱದಂತೆ ವಲಂ     ೪೪

ಆ ಮುನಿಗಳ ಚರಣಾರುಣ
ತಾಮರಸಾಂಕಿತದ ರಾಜಹಂಸಿಯ ತೆಱದಿಂ
ವಾಮೇಂದುಕಾಂತಗುಂಡಿಗೆ
ಭೂಮಿಯೊಳೊಪ್ಪುತ್ತುಮಿರ್ದುದತಿಶಯದಿಂದಂ           ೪೫

ಪರಮತಪೋಲಕ್ಷ್ಮಿ ಮಹಾ
ದರದಿಂ ಕಸ್ತೂರಿಪಂಕಮಂ ಪೂಸಿದವೋಲ್
ಗುರುವರನ ಮೆಯ್ಯೊಳೆಲ್ಲಂ
ಪೊರೆಯೇಱಿದುದಮಮ ಬಹಳಮಲಮತಿಸಾಂದ್ರಂ       ೪೬

ಕೃತವಿಗ್ರಹದಂಡಂ ಭೂ
ನುತಮುಕ್ತಾಹಾರಕಂ ಪ್ರಜಾಪಂ ಧೀರಂ
ಯತಿಚಕ್ರವರ್ತಿಯೆಂಬಿದ
ನತಿಶಯಿಸುತ್ತಿರ್ದನಾಗಳಾ ಮುನಿಮುಖ್ಯಂ       ೪೭

ಭರದಿಂದಂ ಜಾತರೂಪಾಕೃತಿಯನಿರದೆ ತಾಳ್ದಿರ್ದು ಸೌವರ್ಣಪೂಜ್ಯೋ
ದ್ಧುರವತ್ಪಾದಂಗಳಿಂದಂ ಮೆಱೆದು ನಿರವಧಿಸ್ಥೈರ್ಯದಿಂದೊಪ್ಪಿ ತಾಂ ಮಂ
ದರಮೆಂಬಂತಿರ್ದ ಯೋಗೀಶ್ವರನನುರುಕಳಾವಾಸನಾಗಿರ್ದ ರಾಜಂ
ವರರಾಗಂ ಚಿತ್ತದೊಳ್ ಕೈಮಿಗುತಿರೆ ಬಲಗೊಂಡಂ ಮಹಾಭಕ್ತಿಯಿಂದಂ       ೪೮

ವ : ಅಂತು ಮೂಱುಸೂಳ್ವರಂ ಬಲಗೊಂಡು ಮೂಱುಬಾರಿ ಜಯಜಯ ಘೋಷಣಂಗೆಯ್ದು ಮಣಿಕನಕರಜತಮಯಂಗಳಾದ ಭಾಜನಂಗಳೊಳ್ ತುಂಬಿ ತಂದರ್ಚನಾದ್ರವ್ಯಂಗಳಿಂ ಪಾದಾರ್ಚನಾವಿರಚನಾನಂತರಂ ಪಂಚಮುಷ್ಟಿಪರಿನಿಷ್ಠಿತಾಂಗ ಯಷ್ಟಿಯಾಗಿ ವಂದನೆಯಂ ಮಾಡಿ ಮುಂದೆ ನೆಲದೊಳ್ ಕುಳ್ಳಿರ್ದು ನಿಟಿಳತಟಘಟಿ ತಾಂಜಳಿಪುಟನಾಗಿರ್ಪನ್ನೆಗಂ

ಅಗಣಿತ ದಯಾಂಬುನಿಧಿ ಶೀ
ತಗುವೆನಿಸುವ ಯೋಗಿಯೋಗನಿಷ್ಠಾಪನೆಯಂ
ಮಿಗೆಮಾಡಿ ಪರಸಿ ಮುಖದಿಂ
ನೆಗೆದುದು ವರಧರ್ಮವೃದ್ಧಿಯೆಂಬೀ ನಿನದಂ   ೪೯

ವ : ಅನಂತರಂ

ಮದದುದಯಕ್ಕೆ ಕಾರಣಮಿದೆನಿಸಿರ್ದ ಸಮಸ್ತರಾಜ್ಯಸಂ
ಪದದೊದವೆತ್ತಮೀ ವಿನಯರೂಪಸಮುತ್ಕರುಷಂ ದಲೆತ್ತಮಿಂ
ತಿದು ನವಪುಣ್ಯದಿಂದೆ ದೊರೆಕೊಂಡುದು ಭಾವಿಪೊಡೀನೃಪಂಗಮೆಂ
ದುದಿತಕೃಪಾರಸಂ ಬಿಡದೆ ನೋಡಿದನಾತನನಾ ಮುನೀಶ್ವರಂ        ೫೦

ವ : ಬಳಿಯಂ ನಿರ್ಭರಭಕ್ತಿಯಿಂದಾ ಸಾರ್ವಭೌಮಂ ರೋಮಾಂಚಚರ್ಚಿತ ಶರೀರನಾಗಿ ತನ್ಮುನೀಂದ್ರಚರಣಾರವಿಂದಮಂ ತನ್ನಯ ದಂತಪಂಕ್ತಿಕಾಂತಿಸಂತತಿಯೆಂಬ ಹರಿಚಂದನ ಚರ್ಚೆಯಿಂದರ್ಚಿಸುತ್ತುಮಿರ್ದಪನೆಂಬಂತೆ ಬಿನ್ನಪಮೆಂದಿಂತೆಂದಂ

ದೂರಂ ಪೋಗಿಯು ಪಾವನ
ಚಾರುಶ್ರೀಪದಮನೀಕ್ಷಿಸಲ್ವೇಳ್ಪುದು ಮ
ತ್ತೋರಂತಾತನೆ ಬಂದೊಡೆ
ಧಾರಿಣಿಯೊಳಗಾನೆ ಧನ್ಯನಾನೆ ಕೃತಾರ್ಥಂ        ೫೧

ಇಂದು ಮುನೀಶ ನಿನ್ನ ಚರಣಾಂಬುಜ ಸಂಗತಿಯಿಂದಮಾದೆ ನಾ
ನಿಂದು ಸಮಾನಕೀರ್ತಿಯುತನುನ್ನತಪುಣ್ಯನಿವಾಸನಾದೆನೀ
ದಂದುಗದಿಂದ ಪುಟ್ಟುವ ಕುದುಃಖಪರಂಪರೆಯೆಂಬ ತಾಪಮಂ
ಕುಂದಿಸಿದಾತನಾದೆನುರುಶಾಶ್ವತಲಕ್ಷ್ಮಿಯೊಳೊಂದಿ ಬಳ್ದಪೆಂ        ೫೨

ದಿನಪನ ಮುಂದೆ ಕತ್ತಲೆಯ ಮೊತ್ತದಗುರ್ವು ತೆರಳ್ದು ಪೋಪವೊಲ್
ಘನಮೆನಿಸಿರ್ದ ದಳ್ಳುರಿಯ ಮುಂದರಗೆಂತು ಕರಂಗಿಪೋಕುಮ
ತ್ತನಿಲನ ಮುಂದೆ ವಾರಿಧರದೊಡ್ಡು ಕರಂ ಪರಿದೋಡಿ ಪೋಪವೊಲ್
ಮುನಪತಿ ನಿನ್ನ ಮುಂದೆ ದುರಿತಪ್ರಕರಂ ನೆಱೆಕೆಟ್ಟುಪೋಗದೇ      ೫೩

ಅನುಪಮಮಾದ ಮತ್ತೆ ಬೆಳಗಂ ಸಲೆ ಪಾರದ ದೋಷಮಾತ್ರಸಂ
ಜನಿ ತನಗಿಲ್ಲದಂತರಿತಮಂ ವಿಶದೀಕರಿಸುತ್ತುಮಿರ್ಪ ಸ
ನ್ಮುನಿಪತಿ ನಿನ್ನ ಬೋಧಮಯದೃಷ್ಟಿಗಗೋಚರಮಾದ ವಸ್ತು ತಾಂ
ಘನಪಥಪುಷ್ಪಸನ್ನಿಭಮದೆಂದುಱೆ ಭಾವಿಪುದೆನ್ನಮಾನಸಂ         ೫೪

ನಿನ್ನಯ ಸಂದರ್ಶನದಿಂ
ದೆನ್ನಿಷ್ಟಂ ಸಿದ್ಧಮಾದುದದು ತಾಂ ಬೇಗಂ
ನಿನ್ನಿಂದಱಿಯಲ್ಪಟ್ಟೊಡ
ಮೆನ್ನ ಜಡತ್ವಾತಿರೇಕದಿಂ ಪೇಳ್ವೆನದಂ           ೫೫

ವ : ಅದೆಂತೆಂದೊಡೆನ್ನೀ ಪ್ರಾಣಪ್ರೀತೆಯಪ್ಪ ಕುಲಸ್ತ್ರೀಗೆ ಕಾಲದೊಳಾದೊಡಂ ಪುತ್ರಲಾಭಮಾಗದಿರ್ದುದು ರಾಜ್ಯಭಾರಧಾರಣಧೌರೇಯನಪ್ಪ ಕುಮಾರನನೊರ್ವನನಾದೊಡಂ ಕಾಣದ ಕಾರಣಮೀಗಳೀ ಚತುಸ್ಸಮುದ್ರಾಂಕಿತಮಾದ ಮೇದಿನೀಮಂಡಳ ಮೆನ್ನಯ ಬಾಹುದಂಡಕ್ಕೆ ಕೇವಳಂ ಭಾರಮಾಗಿ ತೋಱುತ್ತುಮಿರ್ದಪುದದಱಿಂದಾನತಿ ಕ್ಲೇಶಮಂ ತಾಳ್ದಿದೆಂ

ಧರ್ಮಮುಮರ್ಥಮುಂ ಬಿಡದೆ ಕಾಮಮುಮೆನ್ನೊಳಗೊಂದಕೊಂದು ಸಾ
ಸಿರ್ಮಡಿಯಾಗಿ ಪೆರ್ಚಿದುದು ಮತ್ತಿರದೀಗಳುಮೆನ್ನ ಮಾನಸಂ
ನಿರ್ಮಳಮಪ್ಪ ಮೋಕ್ಷಸುಖಮಂ ಪಿರದುಂ ಬಯಸುತ್ತುಮಿರ್ದೊಡಂ
ಪೆರ್ಮೆಯೊಳೊಂದುವಾತ್ಮಭವಲಾಭಮದಿಲ್ಲದೆ ಮಾಣ್ದು ಬಳ್ದಪೆಂ         ೫೬

ಎಮ್ಮಯ ವಂಶದೊಳ್ ನೆಗಳ್ದ ಭೂಪತಿಗಳ್ ವರಪುಣ್ಯರೆಲ್ಲರುಂ
ತಮ್ಮಯ ಕೆನ್ನೆಯೊಳ್ ನರೆಯನೀಕ್ಷಿಸಿದಾಕ್ಷಣದಲ್ಲಿ ರಾಜ್ಯಮಂ
ಸಮ್ಮದದಿಂದಮಾತ್ಮಭವರ್ಗಿತ್ತುಱೆ ದೀಕ್ಷಿತರಾದರಂತದ
ಕ್ಕಂ ಮನಮುಳ್ಳೊಡಂ ತನುಜರಿಲ್ಲದದಕ್ಕಡಸಿತ್ತು ವಿಘ್ನಕಂ       ೫೭

ಎಂದಾದಪನೀ ಲಲನೆಗೆ
ನಂದನನುರುರಾಜ್ಯಭಾರಧುರಧರನೆಂಬೀ
ಸಂದೇಹಮೆನ್ನ ಮನದೊಳ್
ಕುಂದದೆ ನೆಲಸಿರ್ದುದೆಂದು ಬಿನ್ನಯಿಸಲೊಡಂ              ೫೮

ವ : ಆಗಳಾ ಭೂಪಾಳನಂ ಮನದೊಳವಧರಿಸಿ ತನ್ಮುನೀಂದ್ರಚಂದ್ರಂ ತನ್ನಯ ದಶನರಶ್ಮಿವಿಸರಮೆಂಬ ಸುಧಾರಸಧಾರಪೂರದಿಂದಾತಂಗೆ ರಾಜ್ಯಾಭಿಷೇಕಮಂ ಮಾಳ್ಪಂತೆ ಮೃದುಮಧುರಗಂಭೀರಧ್ವನಿಯಿಂದಿಂತೆಂದಂ

ನೀನೆ ಕೃತಾರ್ಥಕಂ ಬಗೆಯೆ ನೀನೆ ವಿಶೇಷಿತ ಭಾಗ್ಯಭಾಜನಂ
ನೀನೆ ಸಮಸ್ತ ಸೌಖ್ಯನಿಧಿ ನೀನೆ ಜಗತ್ರಯದಿಂದೆ ವಂದ್ಯನುಂ
ನೀನೆ ವಿಶಿಷ್ಟಲಕ್ಷ್ಮಿಗೆ ನಿವಾಸನುಮೆಂದೊಡೆ ನಿನ್ನ ಪೆರ್ಮೆಯಂ
ಮಾನವರಾರ್ಪರೇ ಪೊಗಳಲುರ್ವರೆಯೊಳ್ ನರನಾಥಶೇಖರಾ        ೫೯

ನದಿಗಳ್ಗೆ ಸಿಂಧುವೆಂತಾ
ಸ್ಪದಮಾದುದದಂತೆ ಸಕಳಮಾಂಗಲ್ಯಕ್ಕಂ
ಪದಮಾಗಿರ್ದಪೆಯೆಂದೊಡೆ
ಪದೆಪಿಂ ನಿನ್ನಳವದನ್ಯಸಾಧಾರಣಮೇ            ೬೦

ಮೂಱುಂ ಜಗಮುಂ ನಿನ್ನೀ
ಮೀಱಿದ ಜಸಮೆಂಬ ಪಾಲ ಮುನ್ನೀರೊಳ್ ತಾಂ
ಬೇಱೊಂದು ನೊರೆಯ ತೆಱದಿಂ
ತೋಱುವುದಾದಪುದು ವಂದಿಜನಮಂದಾರಾ    ೬೧

ಇಂತಪ್ಪೀ ಚಿಂತೆಗಂ ಭಾಜನನವನಿಪ ನೀನಾಗೆ ತೀವ್ರಪ್ರಕಾಶಂ
ಧ್ವಾಂತಕ್ಕೆಂತಲ್ತು ತಾಂ ಭಾಜನಮವನಿಯೊಳಾಂ ಕ್ಷುಲ್ಲಕಂ ತಪ್ಪದೆಂಬೀ
ಭ್ರಾಂತಂ ಬಿಟ್ಟಿರ್ಪುದಿನ್ನಾದಪೆ ನಿಖಿಳಜನಾನೀಕದಿಂ ಪೂಜ್ಯಮಂ ನಿ
ನ್ನಂತಾವಂ ಜನ್ಮಸಾಫಲ್ಯಮನುಱೆ ಪಡೆದಂ ಭೂಪರೊಳ್ ಧರ್ಮಪಾಲಾ    ೬೨

ತ್ರಿಜಗದ್ಗುರುವೆನಿಸುವ ಧ
ರ್ಮಜಿನಾಧೀಶಂಗೆ ತಂದೆಯಾದಪೆಯೆಂದೊಡೆ
ನಿಜಪುಣ್ಯದೇಳ್ಗೆ ಲೋಕದೊ
ಳಜನಿಸಿದುದು ಪಿರಿದುಮದ್ಭುತತ್ವದ ಪೆಂಪಂ  ೬೩

ವ : ಮತ್ತಂ ನಿನ್ನ ಪತ್ನಿಯಪ್ಪ ಸುವ್ರತಮಹಾದೇವಿ ಸಾಮಾನ್ಯಳಲ್ತು

ಲಾವಣ್ಯಮೆಂಬ ರಸದಿಂ
ತೀವಿರ್ದು ಸಮುದ್ರವೇಳೆಯಂತೆಸೆದಿರ್ಪೀ
ದೇವಿ ನಿಜಗರ್ಭದೊಳ್ ಸ
ದ್ಭಾವದೆ ತಾಳ್ದಪಳನರ್ಘ್ಯರತ್ನಮನಾದಂ      ೬೪

ದುರಿತವಿಷಾಪಹರಂ ಭಾ
ಸುರಕಾಂತಿ ಸಮೇತಮಖಿಳಜನಸಂಸ್ತುತ್ಯಂ
ವರಮೀ ಸ್ತ್ರೀರತ್ನಂ ತಾಂ
ಧರಣೀತ್ರಯ ಪೂಜ್ಯಮೆಂದು ಬಗೆ ನೀಂ ಮನದೊಳ್      ೬೫

ಇನ್ನಱುದಿಂಗಳುಂ ನೆಱೆಯೆ ಪೋಪಬಳಿಕ್ಕ ಚತುರ್ದಶಾಧಿಕಂ
ಸನ್ನುತನಪ್ಪ ಧರ್ಮಜನನಾಯಕನೀಕೆಯ ಗರ್ಭದಲ್ಲಿಗ
ತ್ಯುನ್ನತಬೋಧಿ ಬಂದಪನಿದಂ ಸಲೆನಂಬು ಸುಧಾಂಶುಮಾಲಿಬಿಂ
ಬಂ ನಭದಿಂದೆ ಬಂದು ಕೊಳದೊಳ್ ಪ್ರತಿಬಿಂಬಿಸುವಂತೆ ರಾಗದಿಂ    ೬೬

ಸರ್ವಾರ್ಥಸಿದ್ಧಿಯಿಂದಂ
ನಿರ್ವೃಜಿನಜಿನಾಧಿನಾಥನೆಳ್ತಂತದಪನೀ
ಸರ್ವವಿನೂತೆಯ ಗರ್ಭ
ಕ್ಕುರ್ವರೆಗಾಶ್ಚರ್ಯಭಾವಮಂ ಮಾಡುತ್ತುಂ    ೬೭

ಕ್ಷುಲ್ಲಕರಪ್ಪ ಮಕ್ಕಳುಗಳಂ ಪಡೆವಂಗನೆಯರ್ ಪಲಂಬರಂ
ತುಳ್ಳೊಡಮೇನು ಪುಣ್ಯನಿಧಿಯಾದ ಸುಪುತ್ರನನೊರ್ವನಂ ಕರಂ
ಸಲ್ಲಲಿತಾಂಗನಂ ಪಡೆವ ಕಾಮಿನಿ ಧನ್ಯೆಯದೆಂತು ಪೂರ್ವದಿ
ಗ್ವಲ್ಲಭೆ ಚಂದ್ರನಂ ಪಡೆವಳೊರ್ವಳೆ ಸಾಲದೆಯನ್ಯರಿಂದಮೇಂ     ೬೮

ಇಂತಪ್ಪಾತ್ಮಜಲಾಭಮಲ್ಲದೆ ದಲೀ ಸಂಸಾರಿಗಳ್ಗಂ ಮಹಾ
ಸಂತೋಷಂ ಪೆಱತುಂಟೆ ನೋಳ್ಪೊಡಧಿಕಂ ನಾವಿರ್ವರೇ ಮಾನ್ಯರ
ತ್ಯಂತಂ ಭೂತ್ರಯದಲ್ಲಿಯೆಮ್ಮಯ ಲಸತ್ಗಾರ್ಹಸ್ಥ್ಯಮುಂ ಕಲ್ಪಪ
ರ್ಯಂತಂ ಶ್ಲಾಘ್ಯತೆಯಂ ಸಮಂತು ಪಡೆಗೆಂದಾನಂದಮಂ ತಾಳ್ದಿರಿಂ          ೬೯

ವ : ಎಂದಾ ಮುನೀಶ್ವರಂ ತನ್ನಯ ವಚನವಿಶೇಷದಿಂದಾ ದಂಪತಿಗಳ ಮನೋಗತ ಚಿಂತಾವಿಷಾದಮಂ ಪರಿಹರಿಸಿದೊಡಮಾಕ್ಷಣದೊಳವರಪರಿಮಿತ ಪರಮಾನುರಾಗ ರಸಮಂತರಂಗದೊಳ್ ತುಂಬಿ ತುಳುಂಕಾಡಿ ಪವಣಿಸದೆ ಪೊಱಪೊಣ್ಮಿದುದೆಂಬತೊರ್ಮೊದಲೊಳ್ ನಿಬಿಡಮಾಗೆ ನೆಗೆದ ಪ್ರಮಾದಾಶ್ರುಪ್ರವಾಹದಿಂ ವಿಪುಳಪುಳಕಾಂಕುರಂ ಪೆರ್ಚಿ ಭಾವಿ ಸುತೋದಯಶ್ರವಣದಿಂದಾದ ಸಂಮದದಿಂದ ವರಡಿಗೀರ್ವರುಮಡಿಗಡಿಗೆ ಪೊಡೆವಡುತ್ತುಂ ಮತ್ತಮದಭ್ರಸಂಭ್ರಮಸಂಜಾತ ಗದ್ಗದವಚನದಿಂದಾ ನೃಪಾಳತಿಳಕನಿಂತೆಂದಂ

ಆವ ಸ್ವರ್ಗದೊಳಿರ್ದಪಂ ಪರಮಸಮ್ಯಕ್ತ್ವಂ ದಲಾತಂಗೆ ಮ
ತ್ತಾವ ಪ್ರೋದ್ಭವದಲ್ಲಿಯಾದುದು ಜಿನಾಧೀಶತ್ವಮಂ ಮಾಳ್ಪ ಪು
ಣ್ಯಾವಿರ್ಭಾವಮದಾವಜನ್ಮದೊಳಗಾಯ್ತಿಂತೆಲ್ಲಮಂ ವಿಸ್ತರಂ
ನೀವೀ ಪೂರ್ವಭವಾನುಬಂಧಮನಿದಂ ಪೇಳಲ್ಕೆವೇಳ್ಕುಂ ಕರಂ       ೭೦

ಭಾವಿ ಜಿನಪತಿಯ ಪೂರ್ವಭ
ವಾವಳಿಯಂ ಕೇಳ್ವ ವಾಂಛೆಯೆನ್ನಯ ಮನದೊಳ್
ಪೀವರಮಾಗಿರ್ದಪುದೆಂ
ದಾ ವಸುಧಾಧೀಶನಾಗಳವರಂ ಕೇಳ್ದಂ            ೭೧

ಅವಧಿಜ್ಞಾನಂ ದಲೆಂಬೀಕ್ಷಣವಿಕಸನಮಂ ಮಾಡಿದಂ ಯೋಗಿಮುಖ್ಯಂ
ಪ್ರವರಾಚಾರಂ ಜಿನಾಧೀಶ್ವರಮತಗಗನೋಜ್ಜೃಂಭಮಾಣಾರ್ಕರೂಪಂ
ನವತೇಜೋರಾಜಿತಂ ಬಾಹುಬಲಿ ಸುಕವಿರಾಜಂ ಸುದುಸ್ಸಹ್ಯಚೇತೋ
ಭವದುರ್ಗರ್ವಾದ್ರಿಚೂರ್ಣೀಕರಣಪವಿಧರಂ ಚಾತುರೀಜನ್ಮಗೇಹಂ೭೨

ಗದ್ಯ : ಇದು ಸಕಳಭುವನಜನವಿನೂಯಮಾನಾನೂನ ಮಹಿಮಾಮಾನನೀಯ ಪರಮಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿ ದೇವಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾ ಕವಿಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಮುನೀಂದ್ರವಂದನಾ ನಿಮಿತ್ತಂ ಯಾತ್ರೋತ್ಸವವರ್ಣನಂತೃತೀಯಾಶ್ವಾಸಂ.