ಶ್ರೀಮದ್ದೇವೇಂದ್ರವೃಂದಸ್ಫುರದುರುಮಕುಟಶ್ರೇಣಿಮಾಣಿಕ್ಯರೋಚಿ
ಸ್ತೋಮಾಂಭೋಧೌತಪಾದಂ ನಿರವಧಿಸುಖದೃಗ್ಬೋಧವೀರ್ಯಸ್ವರೂಪಂ
ವಾಮಾಷ್ಟಪ್ರಾತಿಹಾರ್ಯಪ್ರಕಟಿತಪರಮಾರ್ಹಂತ್ಯಲಕ್ಷ್ಮೀಪ್ರಭಾವೋ
ದ್ದಾಮಂ ಮಾಳ್ಕಿಷ್ಟಸಂಸಿದ್ಧಿಯನೆಮಗನಿಶಂ ಧರ್ಮನಾಥಂ ಜಿನೇಂದ್ರಂ      ೧

ದಾರುಣಘಾತ್ಯಘಾತಿಕಲುಷಂ ಕಿಡೆ ನೈಜಗುಣಂಗಳೆಂಟುಮಾ
ಕಾರಮನೆಯ್ದೆ ತೋಱೆ ಚರಮಾಂಗಮಿತರ್ ಪರಿಪೂರ್ಣತೃಪ್ತಿಗಾ
ಧಾರರಮೂರ್ತರುದ್ಘತರಚಿನ್ಮಯರೀ ಭುವನಾಗ್ರದಲ್ಲಿ ನಿಂ
ದಾ ರಮಣೀಯರೀಗೆಮಗೆ ಸಿದ್ಧರಪಾರಸುಖಾಭಿವೃದ್ಧಿಯಂ        ೨

ವರಪಂಚಾಚಾರಮಂ ರಕ್ಷಿಸುವ ಪದೆಪು ಲೇಸಪ್ಪಿನಂ ಪತ್ತುಧರ್ಮಂ
ಸ್ಥಿರಮಾಗುತ್ತಿರ್ಪಿನಂ ಪನ್ನೆರಡುತಪಮಗುರ್ವಪ್ಪಿನಂ ವರ್ತಿಸುತ್ತುಂ
ದುರಘವ್ರಾತಂ ವಿನೇಯಪ್ರತತಿಯನಿನಿಸುಂ ಪೊರ್ದದಂತಾಗಿ ಮಾಳ್ಪು
ದ್ಧುರಬೋಧಾಚಾರ್ಯವರ್ಯರ್ ಕುಡುಗೆಮಗೆ ನಿಜಾಚಾರಮಂ ಪ್ರೇಮದಿಂದಂ         ೩

ಧರೆಯೊಳಗುಳ್ಳ ಭವ್ಯನಿವಹಕ್ಕೆ ದಯಾಮಯಮಪ್ಪ ಧರ್ಮಮಂ
ತೋಕರುಣದಿನೂಱಿ ನೆಱೆಪೇಳ್ದು ನಿಯಾಮಿಸುವರ್ ಸುಧರ್ಮದೊಳ್
ಪರಿಣತಜೈನತತ್ತ್ವರುಪದೇಶಕರೆನ್ನಯ ಚಿತ್ತಗೇಹದೊಳ್
ಭರವಸದಿಂ ಪ್ರಕಾಶಿಸುಗೆ ನಿಚ್ಚಲುಮುತ್ತಮಬೋಧರತ್ನಮಂ       ೪

ಹೃದಯದೊಳುಣ್ಮಿ ಪೊಣ್ಮಿ ಕರುಣಾರಸಮಾತತಚಾರುಶೀಲ ಸಂ
ಪದದೊಳನೂನಮಪ್ಪ ಚರಿತಂ ಸಲೆ ಕೆಯ್ಮಿಗೆ ವರ್ತಿಪರ್ ಸದಾ
ಮದನಮದಪ್ರಣಾಶಿಗಳಶೇಷಜನಸ್ತುತ ಸರ್ವಸಾಧುಗಳ್
ಸದಮಳಕೀರ್ತಿಧಾಮರೆಮಗೀಗೆ ನಿಜೋತ್ತಮ ಸಾಧುವೃತ್ತಿಯಂ    ೫

ಸಕಳಜನ ಸಿದ್ಧ ಸೂರಿ
ಪ್ರಕಟೋಪಾಧ್ಯಾಯ ಸಾಧುಗಳ್ ಜಗದುದ್ಧಾ
ರಕರೆಮಗೆ ಮುಕ್ತಿಸೌಖ್ಯ
ಪ್ರಕರಮನೊಲಿದೀವರಕ್ಕೆ ಕರುಣದಿನೆಂದುಂ      ೬

ಜಿನಮಾರ್ಗಂ ಪರಿಭಿನ್ನವತ್ಕುನಯವರ್ಗಂ ಸರ್ವದೋದ್ಯದ್ದಯಾ
ಸುನಿಸರ್ಗಂ ಗತಸೀಮಪುಣ್ಯಚಯಸರ್ಗಂ ತೀರ್ಣಮಿಥ್ಯಾತ್ವಕಾ
ನನದುರ್ಗಂ ಪ್ರವಿರಾಜಮಾನಗುಣಸಂಸರ್ಗಂ ಮಹಾಪಾಪನಾ
ಶಣಭರ್ಗಂ ಪರಮಾಪವರ್ಗಸುಖಮಂ ಭವ್ಯರ್ಗೆ ಮಾಳ್ಕಗ್ಗಳಂ      ೭

ಘನಮಿಥ್ಯಾತ್ವಾಂದಕಾರಪ್ರತತಿನಿಚಿತಲೋಕತ್ರಯೀಗೇಹದೊಳ್ ಪಾ
ವನಬೋಧಾವಾಸನಪ್ಪೀ ಜಿನಪತಿಯ ಲಸದ್ವಾಕ್ಯಮಾಣಿಕ್ಯದೀಪಂ
ವಿನುತಾರ್ಥವ್ರಾತಮಂ ಕಾಣಿಸದೆ ಬೆಳಗದಿರ್ದಂದು ಮೂಢತ್ವಯುಕ್ತಂ
ಜನಮಾದ್ಯಂತೋದ್ಘಸೌಖ್ಯಾಸ್ಪದ ಶಿವಪಥಮಂ ಕೆನ್ನಮಿನ್ನೆಂತು ಕಾಣ್ಗುಂ            ೮

ಭವಕಾಳಾಹಿ ವಿಷಾಪಹಾರ ಪಟುವದ್ಯುತ್ಕೃಷ್ಟ ಭವ್ಯಾಳಿಸಂ
ಭವಿರತ್ನತ್ರಯಮೆಂಬಲಂಕರಣಮಂ ತೊಟ್ಟಿರ್ದರಂ ಮುಕ್ತಿಭಾ
ರ್ಗವಿ ರೂಪೇಂದ್ರಿಯಮಿಲ್ಲರ್ದೊಡಮತಿಸ್ನೇಹಾಭಿಸಂಬಂಧದಿಂ
ದವರಂ ಸ್ವೀಕರಿಸಿರ್ಪಳಂತದೆಮಗಂ ಮಾಳ್ಕಿಷ್ಟಸೌಖ್ಯಂಗಳಂ        ೯

ವಿಮಳತರೋದ್ಘಬೋಧಬಿಸಶಾಲಿನಿ ಪನ್ನೆರಡಂಗಮೆಂಬನು
ತ್ತಮದಳಾರಾಜಿರಾಜಿನಿ ಲಸದ್ಗುಣಭಾಗ್ಭುವನ ಪ್ರವೃದ್ಧಿಸಂ
ಭ್ರಮಪರಿಶೋಭಿನಿರ್ವೃತಿ ಮಧುವ್ರತಮೋದಿನಿ ತತ್ಸರಸ್ವತೀ
ಕಮಳಿನಿ ತೋರ್ಕೆ ಮುಕ್ತಿಕಮಳಾಮುಖಮಂ ನಮಗೊಲ್ದು ಲೀಲೆಯಿಂ         ೧೦

ಸದ್ಧರ್ಮವೃತ್ತಿಸಕಳಜ
ನೋದ್ಧರಣಸಮರ್ಥೆ ಮಾನಸೀ ಯಕ್ಷಿ ಮಹಾ
ವೃದ್ಧಾಜ್ಜಿಕೆ ಮಾಳ್ಕೆ ಕೃಪಾ
ಬುದ್ಧಿಯಿನಾತ್ಮೀಯ ಕೃತಿಗೆ ನಿರ್ವಿಘ್ನತೆಯಂ  ೧೧

ಜಿನಪದಸರೋಜಮಧುಕರ
ನನುಪಮದುಸ್ಸಹ್ಯದರ್ಪಪೂರಿತಲೋಕಂ
ಜಿನಧರ್ಮವಿರೋಧಿವಿನಾ
ಶನಮಂ ಭರದಿಂದೆ ತೋರ್ಕೆ ಕಿನ್ನರ ಯಕ್ಷಂ       ೧೨

ವಿಳಸದರಿಷ್ಟಸೇನಗಣಭೃತ್ಪ್ರಭುವೆಂಬ ಪಯೋಧರಂ ಸಮು
ಜ್ವಳನಯಮೆಂಬ ಗರ್ಜನಯುತಂ ವರಭವ್ಯಜನಂಗಳೆಂಬ ಸ
ಲ್ಲಲಿತಮಯೂರನರ್ತನನಿಬಂಧನಮುನ್ನತಧರ್ಮಮೆಂಬ ಪೆ
ರ್ಮಳೆಯನನಾರತಂ ಕಱೆದು ಮಾಳ್ಪುದು ಲೋಕದ ತಾಪಶಾಂತಿಯಂ         ೧೩

ಗೌತಮಗಣಧರಯತಿಯಂ
ನೂತಗುಣವ್ರಾತರತ್ನಸರಿದಧಿಪತಿಯಂ
ಪೂತವರಕೀರ್ತಿತತಿಯಂ
ಭೂತಳಕೃತನುತಿಯನನುದಿನಂ ವಂದಿಸುವೆಂ     ೧೪

ಭೂತಬಲಿ ಪುಷ್ಪದಂತರ
ನಾತತಕಾರುಣ್ಯಜಳಧಿ ಹಿಮಕರನಿಭರಂ
ಸಾತಿಶಯಜ್ಞಾನಿಗಳಂ
ಧಾತ್ರೀಜನಮೆಯ್ದೆ ಬಣ್ಣಿಕುಂ ಮನದೊಲವಿಂ  ೧೫

ಪರಮಜಿನಮತನಭೋಂಗಣ
ಪರಿರಾಜಿತತರಣಿ ಗೃಧ್ರಪಿಂಛಾಚಾರ್ಯೋ
ದ್ಧುರ ಭವ್ಯಮಧುಕರಾವೃತ
ಚರಣಾಂಭೋಜಾತಯುಗಲಮೀಗೆಮಗೊಳ್ಪಂ೧೬

ಅಲಘಂಕಳಾಕಳಾಪದ ವಿಶೇಷಮನಾಂತು ಸಮಂತು ಸಂತತಂ
ತೊಲಗಿಸಿ ದುರ್ಮತೋರುತಮಮಂ ಸುದಿಗಂಬರಮಾರ್ಗಮಂ ಸಮು
ಜ್ವಳಿಸಿ ಸುಧಾಂಶುಬಿಂಬಮೆನೆ ತಾಪದ ಶಾಂತಿಯನುಂಟುಮಾಡಿದಂ
ಲಲಿತ ಸಮಂತಭದ್ರಮುನಿಪುಂಗವನೀ ಧರಣೀತಳಾಗ್ರದೊಳ್         ೧೭

ಮನದೊಲವಿಂದೆ ಕೀರ್ತಿಪುದು ಸರ್ವಜಗಜ್ಜನಮೆಯ್ದೆ ಚಾರುಧೀ
ಧನಪತಿ ಪೂಜ್ಯಪಾದಮುನಿರಾಜನನುದ್ಘಸಮಸ್ತತೇಜನಂ
ವಿನತಜನಪ್ರತಾನ ಸುರಭೂಜನನಸ್ತಮನೋಜರಾಜನಂ
ಜಿನಮತಸಿಂಧುರಾಜಪರಿವರ್ಧನಪೂರ್ಣನಿಶಾಧಿರಾಜನಂ  ೧೮

ಪರಮಸ್ಯಾದ್ವಾದ ವಿದ್ಯಾನಿಶಿತಕುಲಿಶದಿಂ ತೀವ್ರಮಿಥ್ಯಾತ್ವಧಾತ್ರೀ
ಧರಮಂ ಮುಂ ನುಚ್ಚುನೂಱಪ್ಪಿನೆಗಮೊಡೆದು ಸಜ್ಜೈನಧರ್ಮಪ್ರಭಾವಂ
ಪಿರಿದುಂ ಭೂಭಾಗದೊಳ್ ಮೇಲೆನಿಸಿ ಸೊಗಯಿಸಲ್ಮಾಡಿ ವಿಖ್ಯಾತಿವೆತ್ತೀ
ಧರೆಗಾಚಾರ್ಯಾಕಳಂಕವ್ರತಿಯ ಚರಣಮಂ ವಂದಿಪೆಂ ಭಕ್ತಿಯಿಂದಂ            ೧೯

ಎಸೆವ ಜಿನಧರ್ಮಮಂ ತಾಂ
ವಸುಧೆಯೊಳುದ್ಧರಿಸಿ ಕೀರ್ತಿಯಂ ಪಸರಿಸಿದಂ
ಕುಸುಮಶರಬಾಣಭಂಜನ
ನಸಮಗಣಂ ಕೊಂಡಕುಂದಯತಿಪತಿ ಸತತಂ      ೨೦

ಮಾರನ ಗರ್ವಮೆಂಬ ವರಪರ್ವತಮಂ ಹುಡಿಗುಟ್ಟಿ ರಾಜಿತಾ
ಚಾರವಿಶೇಷಮೆಂಬ ಕುಲಿಶಾಯುಧದಿಂದೆ ತಪಃಪ್ರಭಾವಮಂ
ಧಾರಿಣಿಯೊಳ್ ಕರಂ ತಳೆದನುತ್ತಮಭೂರಿಗುಣಾಳಿಶೋಭಿತಂ
ಚಾರುವಿಶಾಲಕೀರ್ತಿಮುನಿಪುಂಗವನಾತತಧೀನಿಕೇತನಂ     ೨೧

ಧೀರರಪಾರಸದ್ಗುಣಮಣಿವ್ರಜವಾರಿಧಿಗಳ್ ಕಷಾಯಸಂ
ಹಾರಿಗಳಾತ್ಮಭಾವಪರರಿದ್ಧ ಧರ್ಮರಾಜಿಗಳ್
ಭೂರಿಚರಿತ್ರ ಬಾಹುಬಲಿದೇವರಭಿಷ್ಟುತ ಪಾರ್ಶ್ವದೇವರುಂ
ಸೂರಿವಿನೂತನರ್ ವಿಶದ ಕೀರ್ತಿಯನಾಂತೆಸೆದರ್ ನಿರಂತರಂ          ೨೨

ಪರಮಶ್ರುತ ಮುನಿಗಳ ಸ
ತ್ಕರುಣಾವಾರಿಧಿಯೊಳೆಯ್ಗೆ ಮುಳ್ಗಿದ ಜೀವೋ
ತ್ಕರಮತಿಸುಖಿಯಾಗಿರ್ಕುಂ
ಭರದಿಂ ಮುಳ್ಗದೊಡೆ ದುಃಖಿಯಕ್ಕುಂ ಚಿತ್ರಂ   ೨೩

ವೀರಂ ಬಲಾಳರಾಮ ಮ
ಹೀರಮಣನ ಜೀವರಕ್ಷಕಂ ಸಕಳಕಳಾ
ಗಾರಂ ಜಿನಧರ್ಮಮನು
ದ್ಧಾರಿಸಿದಂ ಚಾರುಕೀರ್ತಿ ಪಂಡಿತದೇವಂ         ೨೪

ಪಟ್ಟಯತಿ ಧರ್ಮಭೂಷಣ
ಭಟ್ಟಾರಕರಂ ಜಗಜ್ಜನಂ ಸಂತೋಷಂ
ಬಟ್ಟು ಬಣ್ಣಿಸುತಮಿರ್ಕುಂ
ನೆಟ್ಟನೆ ಜಿನಧರ್ಮಭೂಷಣರನುರುಗುಣರಂ     ೨೫

ಕೊಂಡಾಡುತ್ತಿರ್ಕುಂ ಭೂ
ಮಂಡಳಮುರುಲಕ್ಷ್ಮೀ ಸೇನಭಟ್ಟಾರಕರಂ
ಖಂಡಿತಮತ್ಸ್ಯಧ್ವಜಕೋ
ದಂಡರನುದ್ಧಂಡವಾದಿ ಕರಿಹರಿನಿಭರಂ           ೨೬

ಜೈನಮತಾಂಬುರಾಶಿಪರಿವರ್ಧನಚಂದ್ರನನಸ್ತತಂದ್ರನಂ
ಮಾನಿತಸಾರಸರ್ವಗುಣರುಂದ್ರನನುನ್ನತಕೀರ್ತಿಸಾಂದ್ರನಂ
ಪೀನವಿಮೋಹವಾರಣಮೃಗೇಂದ್ರನನುದ್ಘಕೃಪಾನದೀಂದ್ರನಂ
ಭೂನುತಮೇಘಚಂದ್ರನನಶೇಷಜನಂ ನಲವಿಂದೆ ಬಣ್ಣಕುಂ           ೨೭

ಯತಿ ನಯಕೀರ್ತಿದೇವನನಪಾಸ್ತಸಮಸ್ತಮನೋವಿಭಾವನಂ
ವಿತತಮಹಾನುಭಾವನನುಪಾತ್ತಜಿನೇಶ್ವರಪಾದಸೇವನಂ
ಜಿತಖಳಕಾಮದೇವನನಶೇಷಜನಸ್ತುತಸಾಧುಭಾವನಂ
ಧೃತಶುಭಭಾವನಂ ಮುದದೆ ವಂದಿಸುವೆಂ ಗುರುಭಕ್ತಿಪೂರ್ವಕಂ     ೨೮

ಮುನ್ನಿನ ಕಾಲದೊಳ್ ನೆಗಳ್ದ ಭೂಪರನೀಗಳನೂನಕಾಂತಿಸಂ
ಪನ್ನಮೆನಿಪ್ಪ ಕಾವ್ಯಮಣಿದರ್ಪಣದೊಳ್ ನೆಱಿತೋಱಿಸುತ್ತುಮಿ
ರ್ಪುನ್ನತಚಾತುರೀನಿಳಯಮಾದ ಮಹಾಕವಿವೃಂದಮಂ ಕರಂ
ಮನ್ನಿಸಿ ನಿಚ್ಚಲುಂ ಬಿಡದೆ ಕೀರ್ತಿಸದಿರ್ಪವರಾರೊ ಲೋಕದೊಳ್  ೨೯

ಭಣಿತಾನೇಕನಯಂ ಗಜಾಂಕುಶನುದಾತ್ತಂ ನಾಗವರ್ಮಂ ರಸಾ
ಗ್ರಣಿ ಹಂಪಂ ಕವಿರಾಜ ನೇಮಕವಿ ಭಾಳಾಕ್ಷಾಖ್ಯಕಂ ಜನ್ನಿಗಂ
ಗುಣಿರನ್ನಂ ಕವಿಚಕ್ರಿಯಗ್ಗಳನುಮೆಂಬೀ ಸರ್ವವಿದ್ವಚ್ಛಿರೋ
ಮಣಿ ರಾಜತ್ಕವಿವೃಂದದಿಂದೆಸೆದುದೀ ಭೂಮಂಡಳಂ ಸಂತತಂ      ೩೦

ಬಹುಧಾನ್ಯವೃದ್ಧಿಗಾಗಿಯೆ
ಮಹಿಯೊಳ್ ಪ್ರಭವಿಸಿ ಕಳಾಧರೋನ್ನತಿಯಂ ನಿ
ರ್ವಹಿಸಿ ಶರತ್ಕಾಲದವೊಲ್
ಪ್ರಹತಿಸುಗೆ ಸಮಗ್ರಪಂಕಮಂ ಸುಜನೌಘಂ       ೩೧

ಏಕಸ್ವರೂಪ ಸುಜನಾ
ನೀಕಮನಕ್ಕೆಂತು ಸದೃಶಮಕ್ಕುಂ ಕಂಡೊಂ
ದಾಕಾರ ಸ್ವೀಕಾರದಿ
ನೇಕಸ್ಥಿತಿಯಲ್ಲದಿರ್ಪ ವಿಕಟಸ್ಫಟಿಕಂ೩೨

ಆ ಸಜ್ಜನಚಯದೊಳ್ ದೋ
ಷಾಸಕ್ತರೆನಿಪ್ಪ ದುರ್ಜನರ್ ಬೆರಸಿರ್ಪರ್
ಭಾಸುರಸುಧಾಂಶಬಿಂಬಕ
ಳಾಸಮುದಯದೊಳ್ ಕಳಂಕಮಿರ್ಪಂತೆ ವಲಂ   ೩೩

ವಕ್ರಗತಿಯುಭಯಜಿಹ್ವಂ
ಮಿಕ್ಕು ಜಗತ್ಪ್ರಾಣನಾಶಕಾರಿ ಧರಿತ್ರೀ
ಚಕ್ರದೊಳೆಯ್ದಿಪ ಕೃತಿಯಂ
ಚಕ್ರಿಯವೊಲ್ ಮಾಡಿ ದುರ್ಜನಂ ನೋಯಿಸುವಂ          ೩೪

ಖಳಸೇವೆಯಿಂದೆ ಮದ್ಗೋ
ಕುಳಮಾಕರ್ಣೋರುಪಾತ್ರದೊಳ್ ಪಿರಿದೊಂದ
ಗ್ಗಳಮಪ್ಪಮೃತಮನೀ ಭೂ
ವಳಯದೊಳನವರತಮೆಯ್ದೆ ಕಱೆಯುತ್ತಿರ್ಕುಂ            ೩೫

ಕವಿ ತಾಂ ಶ್ರವ್ಯಮೆನಿಪ್ಪ ಕಾವ್ಯಮನಿದಂ ಚಾತುರ್ಯದಿಂ ಪೇಳ್ದೊಡಂ
ಸುವಿವೇಕರ್ ಪರಿತೋಷಮಂ ತಳೆವರೆಂದುಂ ತಾಳರತ್ಯುದ್ಧತರ್
ನವಮಾಧುರ್ಯದ ಸೀಮೆಯಾದ ವಿಲಸತ್ಪೀಯೂಷದ ಸ್ವಾದಮಂ
ದಿವಿಜವ್ರಾತಮೆ ಬಲ್ಲುದಲ್ಲದೆ ಪಿಶಾಚಾನೀಕಮೇಂ ಬಲ್ಲುದೇ    ೩೬

ದುರ್ಜನರೆಯ್ದೆ ದೂಱಿದಪರೆಂದು ಮಾಹಕವಿ ಮಾಳ್ಪ ಕಾವ್ಯಮಂ
ಸಜ್ಜನವಂದ್ಯಮಂ ಬಿಡುವನಲ್ಲನದೆಂತೆನೆ ಹೇನಿಗಂಜಿ ಸಂ
ವರ್ಜಿಪರುಂಟೆ ಕುಂತಳಮನೊಲ್ಲರೆ ಕಂಟಕಕಂಜಿ ಯಾನಮಂ
ಸಜ್ಜೆ ನಿವಾಸಮಂ ಬಿಡುವರುಂಟೆ ಕುಮತ್ಕುಣದಂಶಭೀತಿಯಿಂ      ೩೭

ಪಳಿದಪರೆಂದಿದೊಂದು ಭಯದಿಂದೆ ವಿಚಾರಿಸಿ ಚಾರುಶಬ್ದದಿಂ
ದಳವಡುವರ್ಥದಿಂ ಸಮೆದೆ ನಾನದಱೊಳ್ ಮಱಹಿಂದೆ ದೋಷಮೊಂ
ದುಳಿದೊಡಮಂತದಂ ಪ್ರಕಟಿಪಾ ನೆವದಿಂ ನಿಜವಕ್ತ್ರದೊಳ್ ಬೆಳರ್
ತಳೆಯೆ ಸದೋಷಮಾದುದದು ಮತ್ಕೃತಿ ಶುದ್ಧಿಯನೆಯ್ದಿ ರಂಜಿಕುಂ         ೩೮

ಪುಣ್ಯದಿನುದ್ಘಮಪ್ಪ ಮತಿಯಾದೊಡೆ ಶಾಸ್ತ್ರಮನೋದಿ ಸದ್ಗುಣಾ
ಗಣ್ಯಜಿನೇಶ ಚಾರುಚರಿತಾಂಕಿತಕಾವ್ಯಮನೆಯ್ದೆ ಮಾಡಿ ನೈ
ಪುಣ್ಯವನಾಂತವಂ ಕವಿ ಕೃತಾರ್ಥನದಲ್ಲದೆ ಪಾಪಹೇತುವಂ
ಬಣ್ಣಿಸಿ ದುಃಖಮಂ ಪಡೆವನುಂ ಕವಿಯೇ ಕೃತಿಯುಂ ಕೃತಾರ್ಥಮೇ            ೩೯

ಎತ್ತಾನುಂ ಜಿನನಾಮಮಂ ಪಲವುಕಾಲಕ್ಕೊರ್ಮೆ ಜಿಹ್ವಾಗ್ರದಾ
ಯತ್ತಂ ಮಾಡಿದವರ್ಗೆ ಕರ್ಮಮನಿತುಂ ಕೆಟ್ಟೋಡಿಪೋಕೆಂದೊಡಾ
ಪೊತ್ತುಂ ತಚ್ಚರಿತೌಘಮಂ ಹೃದಯದೊಳ್ ತಾಳ್ದಿರ್ದು ತತ್ಕಾವ್ಯಮಂ
ಮತ್ತಂ ಮಾಳ್ಪನ ಪಾಪಹಾನಿಯನದೇನಂತಿಂತೆನಲ್ ತಕ್ಕುದೇ       ೪೦

ರಮಣೀಯಂ ಕೃತಭೂಪರಾಗಮಸಮಂ ಚಿತ್ರಾನುಬದ್ಧಂ ಸ್ಮರಾ
ಶ್ರಮಮಾಮೋದ ನಿವಾಸಮಪ್ಪ ವಿಲಸತ್ಕಾವ್ಯಂ ಮಹೀಚಕ್ರದೊಳ್
ಸುಮನೋಮಾಲ್ಯದವೊಲ್ ಸುನಾಯಕ ಗುಣಪ್ರೋದ್ದಾಮಮಾಗಿರ್ದೊಡು
ತ್ತಮಪುಣ್ಯಾಧಿಕಕಂಠಭೂಷಣಮದಕ್ಕಂತಲ್ಲದಂದುಕ್ಕುಮೇ        ೪೧

ಕೃತಿ ಲೇಸಲ್ಲದೊಡಂ ಜಿನೇಶ್ವರ ಕಥಾಸಂದರ್ಭಸಂಬಂಧಸಂ
ಗತಮಾಗಿರ್ದನಿಮಿತ್ತಮಾದರಿಸುವರ್ ವಿದ್ವಾಂಸರೀ ಕಾವ್ಯಮಂ
ಕ್ಷಿತಿಯೊಳ್ ಮೃಣ್ಮಯಪಿಂಡಮಂ ಧರಣಿಪಾಲಾಜ್ಞಾದಿಮುದ್ರಾಸಮಂ
ಕಿತಮಾಗಿರ್ದುದುಕಾರಣಂ ತಲೆಯಮೇಲಿಟ್ಟಾದರಂ ಮಾಡರೇ      ೪೨

ಕೃತಿ ಬಾಹುಬಲಿ ಮುನೀಶರ
ಮತಿಯೆಂಬ ವಿಶಿಷ್ಟಸಸ್ಯಮಂ ಪೆರ್ಚಿಸಿ ಸುಫ
ಲಿತಮಾಗಿ ಮಾಡಿದತ್ತೀ
ಕ್ಷಿತಿನುತ ನಯಕೀರ್ತಿಯತಿಯ ಕಾರುಣ್ಯರಸಂ    ೪೩

ಅಱಿಯದ ವಿದ್ಯೆಯಿಲ್ಲ ಬಿಡದೋದದ ಕೇಳದ ಶಾಸ್ತ್ರವಿಲ್ಲ ಕೂ
ರ್ತೆಱಗದ ಭೂಪರಿಲ್ಲ ಸಲೆ ಸೋಲದ ವಾದಿಗಳಿಲ್ಲ ಸಂತತಂ
ನೆಱೆಯೆ ಸಮಸ್ತರುಂ ಪೊಗಳದಿರ್ದ ಕವಿತ್ವಮುಮಿಲ್ಲ ಲೋಕದ
ಲ್ಲುಱೆನಯಕೀರ್ತಿದೇವಸುತ ಬಾಹುಬಲಿವ್ರತಿಶಕ್ತಿಯದ್ಭುತಂ      ೪೪

ನಯಕೀರ್ತಿವ್ರತಿನಂದನಂ ಸಕಳವಿದ್ಯಾಚಕ್ರವರ್ತ್ಯಾಹ್ವಯಂ
ದ್ವಯಭಾಷಾಕವಿತಾತ್ರಿಣೇತ್ರನುಹೋರಾಶಾಸ್ತ್ರ ಸರ್ವಜ್ಞಕಂ
ನಯಯಕ್ತಂ ವರಮೂಲಸಂಘದೊಡೆಯಂ ದೇಶೀಗಣಾಗ್ರೇಸರಂ
ಪ್ರಿಯದಂ ಪುಸ್ತಕಗಚ್ಛಪೂಣರತಿಳಕಂ ಶ್ರೀಕೊಂಡಕುಂದಾನ್ವಯಂ   ೪೫

ನಿಪುಣಂ ಷಟ್ತರ್ಕದೊಳ್ ವ್ಯಾಕರಣದೊಳಧಿಕಂ ಛಂದದೊಳ್ ತಾನಭಿಜ್ಞಂ
ವಿಪುಳಾಳಂಕಾರಭೇದಂಗಳೊಳತಿಚತುರಂ ಕಾವ್ಯದೊಳ್ ತಾನೆ ಬಲ್ಲಂ
ಸ್ವಪರೋದಾರಾಗಮವ್ಯಕ್ತಿಯೊಳತಿಕುಶಲಂ ನಾಟಕಾಖ್ಯಾನದೊಳ್ ತಾ
ನೆ ಪುರುಪ್ರಜ್ಞಾವಿಶೇಷಂ ಭುಜಬಳಿಯತಿಪಂ ಮತ್ತೆ ಬೊಟ್ಟೆತ್ತಲುಂಟೇ          ೪೬

ಇಂತಪ್ಪಧಿಕ ಸುಸಾಮ
ರ್ಥ್ಯಂ ತನಗಳವಟ್ಟು ತೋಱೆ ತಪಮಂ ಬಾಲ್ಯದೊ
ಳಾಂತು ನಿಜಕೀರ್ತಿ ಸಕಳದಿ
ಗಂತದೊಳೆಸೆವಂದು ಬಾಹುಬಲಿಮುನಿ ನೆಗಳ್ದಂ            ೪೭

ಮೊದಲೊಳ್ ಸಂಸ್ಕೃತಭಾಷೆಯಿಂ ಬುಧಜನಂ ಕೊಂಡಾಡುತಿರ್ಪಂತೆ ಸಂ
ಮದದಿಂ ಗುಮ್ಮಟನಾಥ ಸಚ್ಚರಿತವೆಂಬೀ ಕಾವ್ಯಮಂ ಪೇಳ್ದು ಮಾ
ಣದೆ ಕರ್ನಾಟಕದಿಂದೆ ಮತ್ತೆ ರಚಿಸಿ ಶ್ರೀಧರ್ಮನಾಥಪ್ರಬಂ
ಧದ ಪೆರ್ಚಂ ತಳೆದಂ ಸಮಂತುಭಯಭಾಷಾಕಾವ್ಯಕರ್ತೃತ್ವಮಂ     ೪೮

ನಯವಿದರೆಲ್ಲರುಂ ಪೊಗಳೆ ಜಾಣ್ಣುಡಿ ಮಿಕ್ಕಿರೆ ಕಾವ್ಯಮಂ ಗುಣೋ
ದಯವರಮಾಗೆ ಮಾಡಿ ನಯಕೀರ್ತಿಯತೀಶ್ವರರಗ್ರಶಿಷ್ಠನಿಂ
ತಯಯುತನಪ್ಪ ಬಾಹುಬಲಿಪಂಡಿತದೇವನಭಿಷ್ಟುತಂ ಮಹೋ
ಭಯಕವಿಚಕ್ರವರ್ತಿ ಪೆಸರಿಂದೆಸೆದಂ ಜಗದೊಳ್ ನಿರಂತರಂ            ೪೯

ವರಶೃಂಗಾರರಸಪ್ರವಾಹಮತುಳಾಲಂಕಾರಸಂಶೋಭಿತಂ
ಧರಣೀಮಂಡಲಲಾಲಿತಂ ಮೃದುಪದನ್ಯಾಸಾಭಿರಮ್ಯಂ ಸಮು
ದ್ಧುರಭಾವಂ ಕವಿಚಕ್ರವರ್ತಿಯ ಲಸತ್ಕಾವ್ಯಂ ಮಹಾವಾರಸೌಂ
ದರಿಯಂತೆಲ್ಲರನೆಯ್ದೆ ರಂಜಿಸಿ ಮನಸ್ಸಂತೋಷಮಂ ಮಾಡುಗುಂ            ೫೦

ಸುರಲೋಕದವೋಲಮೃತೋ
ತ್ಕರಮಂ ನೆಱೆಕಱೆದು ಬಾಹುಬಲಿಪಂಡಿತದೇ
ವರ ವಚನವಿಳಾಸಂ ಚಿ
ತ್ತರಮಂ ಸುರಸಾರ್ಥಲೀಲೆಯಂ ಪೆರ್ಚಿಸುಗುಂ   ೫೧

ಚಿತ್ತದೊಳಾವಗಂ ನೆಲಸಿದತ್ತು ಮಹಾಭ್ರಮೆ ನಿದ್ರೆಯೆಂಬಿದ
ತ್ತತ್ತಲೆ ಮೀಱಿ ಪೋಯ್ತ ಕವಿತಾಗ್ರಹಮೆಂಬ ಖಳಗ್ರಹಂ ಪೊದ
ಳ್ದೊತ್ತಿದೊಡಾದುದಿಂತಿನಿತುಮಾಗ್ರಹಿ [ಬಾಹುಬಳಂ] ಕವೀಶನ
ತ್ಯುತ್ತಮ ಪೂಜ್ಯನಾಗಿ ವರಕೀರ್ತಿಯನಾಂತನಿದೇಂ ವಿಚಿತ್ರಮೋ     ೫೨

ಮಳೆವನಿಯಂ ಧರಾತಳದೊಳೊಂದೆರಡೆಂದೆಣಿಸಲ್ಕೆ ಶಕ್ತಿಯಂ
ತಳೆದೊಡೆ ತಾಳಲಕ್ಕು ನಭಮಂ ಕರದಿಂದುಱೆ ಗೇಣನಿಟ್ಟು ಮ
ತ್ತಳೆವಡೆ ಲೆಕ್ಕಮಂ ಬಿಡದೆ ಮಾಳ್ಪಡಮಕ್ಕ ಜಿನೇಶ ಸದ್ಗುಣಾ
ವಳಿಗಳನೆಯ್ದೆ ಪೇಳಲರಿದೀ ಭುವನತ್ರಯದೊಳ್ ನಿರಂತರಂ         ೫೩

ಜಿನಗುಣಮೆಲ್ಲಮಂ ಕೊಱತೆಯಿಲ್ಲದೆ ಪೇಳ್ದಪೆನೆಂಬಿದುದ್ಘವಾ
ಗ್ವನಿತೆಗೆ ತೀರದಾ ಗಣಧರಾವಳಿಗಾಗದು ಪನ್ನಗಾಧಿರಾ
ಜನವಶವಲ್ಲ ಮತ್ತೆ ಜಡಬುದ್ಧಿಯನುಳ್ಳವನಾದೊಡನುವೀ
ಮನದೊಲವಿಂದೆ ಮಾಳ್ಪೆನದನೆಂಬವನಗ್ಗಳದೆಗ್ಗನಲ್ಲವೇ          ೫೪

ಆದೊಡಮೇನೊ ಮುನ್ನಿನ ಮಹಾಮುನಿನಾಥರ ವಾಕ್ಯದೋಜೆಯಿಂ
ಮೇದುರ ಧರ್ಮನಾಥಚರಿತಾಂಕಿತ ಕಾವ್ಯವಿಧಾನಶಕ್ತಿ ತಾ
ನಾದುದು ಜಾಡ್ಯನಪ್ಪೆಗನಮಂತವಱಿಂದದನೆಯ್ದೆ ಮಾಳ್ಪೆ ನಾಂ
ಮೇದಿನಿಯೊಳ್ ಗಜೇಂದ್ರಪಥದೊಳ್ ಪರಿವರ್ತಿಸುವಂತೆ ಕಾಳಭಂ   ೫೫

ಪೂರ್ವಾಚಾರ್ಯದಿನೇಶರುಂ ಸ್ವವಚನಪ್ರಜ್ಯೋತಿಯಂ ಮನ್ಮನೋ
ಖರ್ವಾತ್ಯುದ್ಘಗವಾಕ್ಷದೊಳ್ ಪುಗಿಸೆ ಮತ್ತಭ್ಯಂತರಾಗಾರಮಂ
ನಿರ್ವಾದಂ ಬೆಳಗುತ್ತಿರಲ್ ಬಹುವಿಧಾರ್ಥವ್ಯಕ್ತಿ ತಾನಾಗದೇ
ಸರ್ವೋರ್ವೀತಳದೊಳ್ ಪ್ರಸಿದ್ಧಿವಡೆಗುಂ ಕಾವ್ಯಂ ಸದರ್ಥೋತ್ಕರಂ           ೫೬

ಶುಭಪರಿಣಾಮಮೆಯ್ದೆ ಮನದೊಳ್ ನೆಲೆಗೊಳ್ಗು ದುರಿಂದ್ರಿಯಂಗಳ
ಪ್ರಭವಮಡಂಗಿಪೋಕು ಪರಭಾವನೆ ಪೊರ್ದದು ಪುಣ್ಯಹೇತುವೆಂ
ದಭಿನವಮಾಗಿ ಧರ್ಮಜಿನನಾಥಪುರಾಣಮನೊಲ್ದು ಪೇಳಲಾ
ನಭಿರುಚಿಯಿಂದೆ ತಂದೆನಿರದೀ ಮನಮಂ ಜಿನಭಕ್ತಿಯುಕ್ತಮಂ        ೫೭

ಮೊದಲೊಳ್ ತದ್ಧರ್ಮಶರ್ಮಾಭ್ಯುದಯಮನೊಲವಿಂದೋದಿ ಕರ್ಣಾ
ಟದಿಂ ಮತ್ತದನೀಗಳ್ ಪೇಳ್ವೆನೆಂಬುಜ್ಜಗದೊಳಿರುತಿರಲ್ ಭವ್ಯಸಂದೋಹಮಂ ಸ
ಮ್ಮದಮಾಗಲ್ ಜೀಯ ನೀವೀ ಕೃತಿಯನಿರದೆ ಪೇಳಲ್ಕೆ ವೇಳೆಂದೊಡೀ ಸೌ
ಹೃದಮೂರ್ತೋತ್ಕಂಪಮಾಗುತ್ತಿರೆ ವಿರಚಿಸಿದನಂ ಚಾತುರೀಜನ್ಮಗೇಹಂ    ೫೮

ಪ್ರಥಮಾ ನಿಯೋಗಯುಕ್ತಂ
ಪ್ರಥಿತಜಿನೇಶ್ವರವಿಬೋಧಬೀಜೋದ್ಭೂತಂ
ಪೃಥುನಯಶಾಖಾಕೀರ್ಣಂ
ಪೃಥುವೀದರದಲ್ಲಿ ಕೊರ್ಬಿ ಪರ್ವಿದುದೀಗಳ್  ೫೯

ಎತ್ತೆತ್ತಂ ನೋಳ್ಪಡೆಯಂ ಕಡೆನಡುಮೊದಲೆಂಬೀ ವಿಭೇದಂಗಳಂ ತೋ
ಱಿತ್ತಿಲ್ಲಿಂತೆಂದೆನಿಪ್ಪಾಗಸದೊಳಧಿಕವಾಯುತ್ರಯಾವೇಷ್ಟಿತಂ ಸಂ
ವಿತ್ತಂ ಷಡ್ಡ್ರವ್ಯಪೂರ್ಣಂ ಕೃತಿರಹಿತಮಧಸ್ತಿರ್ಯಗೂರ್ಧ್ವತ್ರಿಭೇದಾ
ಯತ್ತಂ ನಿತ್ಯೈಕರೂಪಂ ತ್ರಿಜಗಮೆಸೆಗುಮೀರೇಳುರಜ್ಜುಪ್ರಮಾಣಂ            ೬೦

ಆಲೋಕತ್ರಯಲಕ್ಷ್ಮಿಯ
ಲಾಲಿತ ತನುಮಧ್ಯಮೆನಿಪ ಮಧ್ಯಮಲೋಕಂ
ಲೀಲಾಸಂಖ್ಯಾತದ್ವೀ
ಪಾಳಿಸಮುದ್ರಂಗಳಿಂ ವಿರಾಜಿಸುತಿರ್ಕುಂ           ೬೧

ವ : ಅಲ್ಲಿಂದತ್ತಮೇಕರಜ್ಜು ವಿಸ್ತಾರಿತಮುಮಸ್ತೋಕಸ್ವಯಂಭೂರಮಣ ಜಳಧಿಪರಿವೃತ ಮುಮಾದನೇಕ ಸುಕೃತಾನೀಕದುಪಾರ್ಜನಬೀಜೋಕಮಾಗಿ ಸಮಸ್ತರ ನತ್ಯುತ್ತಮರಂ ಮಾಳ್ಪುದಱಿಂ ಮಧ್ಯಮಮಾಗಿಯುಮೆಲ್ಲಾ ಲೋಕಕ್ಕತ್ಯುತ್ತಮಮೆನಿಸಿ ಸೊಗಯಿಸುವ ಬಹಳಾಶ್ಚರ್ಯಕಾರಿಯಪ್ಪ ತಿರ್ಯಲ್ಲೋಕದ ನಟ್ಟನಡುವೆ

ಪುರುಚಂಚತ್ಫೇನಮುದ್ರಂ ನಿರವಧಿಮಣಿಭದ್ರಂ ನಿಮಗ್ನೀಕೃತಾರ್ಧಂ
ದರಕೃನ್ನಕ್ರಾದಿಭದ್ರಂ ಕೃತಕುಹರತಾಳರ್ದ್ರಂ ಮಹತ್ವಾದರಿದ್ರಂ
ವರಗಂಗಾಯೋಗರುದ್ರಂ ಘುಳುಘುಳುರವರೌದ್ರಂ ಮಹಾಭೀಷಣಾರ್ದ್ರಂ
ಗರಿಮಾರ್ದ್ರಂ ರಾಜಕುಂಭೀಕರಲವಣಸಮುದ್ರಂ ತರಂಗೋದ್ವಿನಿದ್ರಂ          ೬೨

ಆ ಪಾರಾಪಾರಮಧ್ಯಸ್ಥಿತಸರಸಿಜಮೆಂಬಂತೆ ಸಂಪನ್ನಜಂಬೂ
ದ್ವೀಪಂ ತಾಳ್ದಿತ್ತು ಚೆಲ್ವಂ ಬಹುವಿಧಪರಮಕ್ಷೇತ್ರಪತ್ರಾಭಿರಮ್ಯಂ
ಸರ್ಪಾಧಿಶೋರುದಂಡಂ ಕನಕಧರಣಿಭೃತ್ಕರ್ಣಿಕಾರಾಜಮಾನಂ
ಶ್ರೀಪೂರ್ಣಂ ಚಾರುಸೌಖ್ಯಪ್ರಬಲಪರಿಮಲಂ ಸರ್ವರಿಂ ಲಾಲನೀಯಂ          ೬೩

ಮೇರುನಗೇಂದ್ರಮೆಂಬ ವರಮೌಲಿಯನಿಕ್ಕಿ ದಿನೇಶರೆಂಬ ಪಂ
ಕೇರುಹಯುಗ್ಮಮಂ ಪಿಡಿದು ಲಾವಣವಾರಿಧಿಯೆಂಬ ವಸ್ತ್ರಮಂ
ಚಾರುವೆನಲ್ಕೆಯುಟ್ಟು ರಜತಾದ್ರಿಗಳೆಂಬ ಗಜಂಗಳಿಂದಲಂ
ಕಾರಮನೆಯ್ದಿ ಲಕ್ಷ್ಮಿಯವೊಲೊಪ್ಪಮನಾಳ್ದುದು ದೀಪಮಾವಗಂ            ೬೪

ಬಹುವಿಧಭೋಗಭೂಮಿ ಕುಲಗೋತ್ರವಿರಾಜಿ ಸಮಗ್ರವಾಹಿನೀ
ಮಹಿತತರಂ ವಿಶೇಷಿತಸುವರ್ಣಭರಂ ವಿಬುಧಾಳಿಸೇವಿತಂ
ಮಹಿಮಸಮನ್ವಿತಂ ವಿಶದಭೂರಿಯಶಸ್ತತಿ ಜಂಬುದೀಪಮೀ
ಮಹಿತಳದಲ್ಲಿ ತನ್ನ ಸಕಲಾಧಿಪತಿತ್ವಮನುಂಟುಮಾಡುಗುಂ       ೬೫

ವ : ಅಂತೊಂದು ಲಕ್ಷಯೋಜನವಿಸ್ತಾರದಿಂ ಪ್ರಶಸ್ತಮಾದ ಜಂಬೂದ್ವೀಪದ ಮಧ್ಯಕ್ಕಳಂಕಾರಮೆನಿಸಿ

ಪನ್ನಗಲೋಕಮಂ ಬಿಡದೆ ಮೆಟ್ಟಿ ಮನುಷ್ಯರ ಲೋಕಮೆಲ್ಲಮಂ
ತನ್ನಯ ಪಾದಸೇವನೆಯೊಳೊಂದಿಸಿ ಚೂಳಿಕೆಯಗ್ರಭಾಗದಿಂ
ಸ್ವರ್ನಿಳಯಂಬರಂ ನಿಮಿರ್ದು ಮೂಜಗದೊಳ್ ಮಹಿಮಾಪ್ರಭಾವದಿಂ
ದುನ್ನತಮಾದ ಮೇರುಗಿರಿ ಪುಟ್ಟಿಸುತಿರ್ದುದಗುರ್ವನಾವಗಂ        ೬೬

ಕೆಲದೊಳ್ ಬೀಳ್ವ ಪತಂಗಾ
ಕಳಿತ ಸುಮೇರುಪ್ರದೀಪಶಿಖಿಯೊಳ್ ಘನಕ
ಜ್ಜಳಮಂ ಕೊಳಲೆಂದಿಕ್ಕಿದ
ವಿಳಸಿತಖರ್ಪರದ ತೆಱದಿನಿರ್ದುದು ಗಗನಂ       ೬೭

ಕ್ಷಮೆಯಂ ತಾಳ್ದಿ ಸುಜಾತರೂಪಮಯರೂಪಿಂದೊಪ್ಪಿ ತುಚ್ಛೇತರಾ
ಗಮದೊಳ್ ಕೂಡಿ ಸುದರ್ಶನಾಖ್ಯೆಯನದಾವಂ ಪೆತ್ತನೆನ್ನಂತಿರು
ತ್ತಮಮಪ್ಪಾ ಮನುಜಂಗೆ ಮುಕ್ತಿ ಸಸಿನಂ ತಾನಕ್ಕುಮಿಂತೆಂದನು
ಕ್ರಮದಿಂ ಪೇಳ್ವವೊಲೊಪ್ಪುಗುಂ ತಿಳಿಸಿ ಮತ್ತೀ ಮಂದರಂ ಮಂದರಂ          ೬೮

ವ : ಆ ಮಂದರಮಹೀಧರದ ದಕ್ಷಿಣದಿಶಾಭಾಗದಲ್ಲಿ

ನಿರವಧಿಸುಖಕ್ಕೆ ಪಾತ್ರಂ
ಪರಮಜಿನಾಗಮಜಲಪ್ರವಾಹಪವಿತ್ರಂ
ಉರುತರಶೋಭಾಚಿತ್ರಂ
ಕರಮೆಸೆಗುಂ ರಯ್ಯಮಪ್ಪ ಭರತಕ್ಷೇತ್ರಂ          ೬೯

ಅದು ಗಂಗಾಸಿಂಧುಮಧ್ಯಸ್ಥಿತವರವಿಜಯಾರ್ಧಾದ್ರಿಯಿಂ ಭಿನ್ನಮಾಗಿ
ರ್ದುದಱಿಂ ಷಟ್ಖಂಡಮಾಗೊಪ್ಪಿದುದು ಬಹಳಲಕ್ಷ್ಮೀ ಮಹಾಭಾರದಿಂದಂ
ತ್ರಿದಶಾವಾಸಂ ನಿರಾಧಾರಕಮಿದು ಮುಱಿದೀ ಭೂಮಿಯೊಳ್ ಬೀಳ್ದುದೆಂಬಂ
ತುದಿತ ಶ್ರೀರಮ್ಯಮೆಲ್ಲಾ ಜನದ ನಯಚಿತ್ತಂಗಳಂ ಸೂಱೆಗೊಳ್ಗುಂ           ೭೦

ವ : ಆ ಷಡ್ಖಂಡದೊಳಖಂಡಶೋಭಾಕರಂಡಕಮಾದಾರ್ಯಾಖಂಡದಲ್ಲಿ

ಕಾಮಿತವಸ್ತುದಾಯಕಮೆನಿಪ್ಪ ವನಾವಳಿಕೋಶಮುತ್ತಮೋ
ದ್ದಾಮಸುವರ್ಣರತ್ನಖನಿಕಾಂತಿವಿಚಿತ್ರಿತದಿಕ್ಪ್ರದೇಶಮು
ತ್ಕೋಮಳಸಸ್ಯಸಂತತಿ ಹರಿದ್ಧರಣೀತಳಸನ್ನಿವೇಶಮೀ
ಭೂಮಿಯೊಳೊಪ್ಪುಗುಂ ವಿಳಸದುತ್ತರಕೌಸಳದೇಶಮಾವಗಂ        ೭೧

ಅದನಾನೇನೆಂದು ಕೊಂಡಾಡುವೆನಧಿಕತಟಾಕಂಗಳಿಂ ಸುತ್ತಲುಂ ಪ
ರ್ವಿದ ಕುಲ್ಯೌಘಂಗಳಿಂ ಕುಕ್ಕುಟಸಮುದಯಸಂಪಾತ್ಯಮಪ್ಪೂರ್ಗಳಿಂ ಪೆ
ರ್ಚಿದ ಸತ್ಪುಂಡ್ರೇಕ್ಷುವಾಟಂಗಳಿನೆಡೆದೆಱಹಿಲ್ಲಾಗಿ ತುಂಬಿರ್ದುದೆತ್ತಂ
ಮುದದಿಂ ನೋಳ್ಪಡಂ ಕೌತುಕಮನೊದವಿಸುತ್ತಿರ್ಪುದಾ ದೇಶಮೆಂದುಂ       ೭೨

ವರದಿಕ್ಪಾಲಪುರಂಗಳ್
ಸಿರಿಯಂ ನೋಡಲ್ಕನೇಕರೂಪಂ ಕೈಕೊಂ
ಡಿರದೆಳ್ತಂದವೊಲೆಸೆದುವು
ಭರದಿಂ ಪಿರಿದಪ್ಪ ತತ್ಪುರಂಗಳ್ ಪಲವುಂ       ೭೩

ಉದಯಾಸ್ತಗಿರಿಗಳೆಡೆಯೊಳ್
ಪದಪಿಂದೆಡೆಯಾಡುತಿರ್ಪ ರವಿಬಿಂಬಕ್ಕಾ
ಸ್ಪದಶೈಲಂಗಳಿವೆಂಬಂ
ದದಿನೊಪ್ಪುವುವಲ್ಲಿ ಧಾನ್ಯರಾಶಿಗಳೆಂದುಂ      ೭೪

ಬಡವನಿವನೆಂದು ಮೃಡನಂ
ಜಡೆಯಲ್ಲಿಯ ಗಂಗೆ ಬಿಟ್ಟು ಬಹುಮುಖದಿಂ ಸಿರಿ
ಯೊಡಗೂಡಿದ ಜನಪದದೊಳ್
ತೊಡದಿರ್ದವೊಲೆಯ್ದೆ ಪರಿಯುತಿರ್ಪುವು ತೊಱೆಗಳ್     ೭೫

ಪೃಷ್ಟಪಯೋಧರಮಂಡಲ
ಮಿಷ್ಟಲತಾಂತಂ ಸುಪತ್ರಪೂಗಂ ಚತುರೋ
ತ್ಕೃಷ್ಟವಿಟವಿತತಿಯಂತೆ ವಿ
ಶಿಷ್ಟನದೀತೀರತುರುಚಯಂ ರಂಜಿಸುಗುಂ       ೭೬

ಕನದುರುನಿತಂಬಮುಚ್ಚೈ
ಸ್ತನಮುದ್ಘವಿಳಾಸಕಂ ಮಹಾಭೋಗಯುತಂ
ವನಿತಾಜನದಮೊಲೊಪ್ಪಮ
ನನವರತಂ ಪಡೆದುವಲ್ಲಿ ಪರ್ವತವೃಂದಂ       ೭೭

ಗರ್ಭೀಕೃತಭುವನಂ ಸಂ
ದರ್ಭಿತ ಕರ್ಕಟಕ ಮೀನ ಮಕರಸುಚಾರಂ
ನಿರ್ಭರಹಂಸವರಾಬ್ಜಾ
ವಿರ್ಭಾವಂ ನಭದವೊಲ್ ಸರೋಗಣಮೆಸೆಗುಂ  ೭೮

ವ : ಮತ್ತಮಲ್ಲಿ

ಎಲರಿಂದಳ್ಳಾಡುವೀ ಕೂರಿದವೆನಿಪೆಲೆಗಳ್ ಕೋಮಳೇಕ್ಷುಪ್ರಕಾಂಡಂ
ಗಳನಾದಂತಾಗಲಲ್ಲಿಂದೊಸರ್ವ ರಸದ ಸಾರಪ್ರವಾಹಂಗಳಿಂದಂ
ಬೆಳಗುಂ ನೀರೂಟಮಂ ಪಾರದೆ ಕಳವೆಗಳ ಕ್ಷೇತ್ರಮೆಲ್ಲಂ ತದೀಯೋ
ಜ್ಜ್ವಳಶಾಲಿಕ್ಷೀರಪಾನಂಗಳಿನುಱೆ ಬೆಳೆಗುಂ ಕೀರಪೋತಪ್ರತಾನಂ    ೭೯

ಧರೆಯೆಂಬ ಜನನಿ ಪದ್ಮಾ
ಕರಮೆಂಬ ಕುಚಾಗ್ರದಲ್ಲಿ ತೀವಿರ್ದ ಮಹಾ
ಪರಮಕ್ಷೀರಮನಿತ್ತು
ದ್ಧರಿಪಳ್ ಸಸ್ಯಂಗಳೆಂಬ ಶಿಶುಗಳನೊಲವಿಂ     ೮೦

ಮೊಲೆಗಳ ಭಾರದಿಂ ಕಟಿತಟಂಗಳ ಭಾರದಿ ತೋರಮಾಗೆ ಸ
ಲ್ಲಲಿತಮೆನಿಪ್ಪ ಸೋರ್ಮುಡಿಯ ಭಾರದಿನೇಗಳುಮೇಳಲಾಱದು
ಜ್ಜ್ವಳಮೆನಿಸಿರ್ದ ಗೀತರಸದಿಂ ತೆನೆಯಂ ತಿನಲೆಂದು ಬಂದ ಮಂ
ಜುಳ ಹರಿಣಂಗಳಂ ಬಿಡದೆ ಬಾರಿಪುದಲ್ಲಿಯ ಪಾಮರೀಜನಂ        ೮೧

ಪಸುರೆಲೆ ಪಕ್ಕದಂತಿರೆ ಮನೋಹರಶೂಕಮದುದ್ಘತುಂಡದಂ
ತೆಸೆದಿರೆ ಮುಗ್ಧ ಕೀರಶಿಶು ತನ್ನಯ ಮಾತೃಕೆ ತಪ್ಪದೆಂದು ಬಂ
ದೊಸೆದದಱಗ್ರಮಂಜರಿಯೊಳಿರ್ದು ವಿನೋದಿಸೆ ಕಂಡು ತಾಯುಮಂ
ಶಿಶುವನಗಲ್ಚಲಾಗದೆನೆ ಸೋವದೆ ಪಾಮರಿ ಪೋದಳಂದದಂ        ೮೨

ಪಾಲುಣಲೆಂದು ಬಂದು ಗಿಳಿವಿಂಡುಗಳೀ ಕಮಳಸ್ಥಳಂಗಳಂ
ಮೇಲೆ ಮುಸುಂಕಿ ಕುಳ್ಳಿದಿರೆ ಭೂರಿಮೃಗಂಗಳಿನಪ್ಪ ಭೀತಿಯಿಂ
ಪಾಲಕಪಾಮರೀವಿತತಿ ಪಚ್ಚೆಯ ಬಣ್ಣದ ವಸ್ತ್ರದಿಂದದಂ
ಲೀಲೆಯೊಳೆಯ್ದೆ ಬಾಸಣಿಸಿತೆಂಬಭಿಶಂಕೆಯನುಂಟುಮಾಡುಗುಂ     ೮೩

ಲಲಿತಮೆನಿಪ್ಪೀ ನೀರಿಂ
ಬೆಳೆದು ಸಮೃದ್ಧಂಗಳಾದೆವೆಂದಾ ಸಸ್ಯಾ
ವಳಿಗಳ್ ಮಾರ್ಪೊಳೆಪಿಂ ತ
ಜ್ಜಳದೇವತೆಯರ್ಗೆ ಫಳಮನೀವವೊಲೆಸೆಗುಂ    ೮೪

ಮಂದಾನಿಳ ಭರವಸದಿಂ
ದಾಂದೋಳಿತ ಶಾಳಿಕಣಿಶಭೃತಮಹಿಯೆಸೆಗುಂ
ಕುಂದದ ತತ್ಸಂಪತ್ತಿಯ
ನಂದೀಕ್ಷಿಸಿ ತಲೆಯನೆಯ್ದೆ ತೂಗುವ ತೆಱದಿಂ     ೮೫

ಸುರುಚಿರಗಂಧಶಾಳಿವನದೊಳ್ ಭ್ರಮರೀನಿಕುರುಂಬಮೆಲ್ಲಿಯುಂ
ಪರಿಮಳಲೋಭದಿಂದೆ ಸುಳಿದಾಡುತಮಿರ್ದುದಪಾರಪಾಂಥರು
ತ್ತರಳಿತ ಚಾರುದೀರ್ಘತರ ದೃಷ್ಟಿಗಳಂ ಸೆಱೆಗೆಯ್ಯಲೆಂದು ಬಿ
ತ್ತರಿಸಿದ ಚಿನ್ನಕಬ್ಬುನದ ಸಂಕಲೆಯೆಂಬಿನಮಲ್ಲಿರರಂಜಿಕುಂ         ೮೬

ಪಿರಿದಪ್ಪಾ ಪರಿಕಾಲದೊಳ್ ಬೆಳೆದ ಪಂಕೇಜಾತಷಂಡಂಗಳು
ದ್ಧುರಭಾಸ್ವದ್ರಜಮೆಂಬ ಜೋಡನೊಲವಿಂದಂ ತೊಟ್ಟು ಸನ್ಮಂಡಲಾ
ಗ್ರರಥಂ ಮಂದಸಮೀರನಾ ಕಳಮಭೂರಿಕ್ರೂರಪತ್ರಾವಳೀ
ಪರಿಪೀಡಾಭರಭೀತನಾದ ತೆಱದಿಂದಲ್ಲಲ್ಲಿ ಸಂಚಾರಿಪಂ ೮೭

ತುದಿಯೊಳ್ ನೀರಸಮಾದೊಡಂ ಬಗೆವೊಡಂ ತದ್ಗ್ರಂಥಿಯಂ ಕೂಡಿ ಮಾ
ಣದೊಡಂ ಶಿಷ್ಟಫಲಂಗಳಿಲ್ಲದೊಡಮತ್ಯುದ್ದಂಡಮಾಗಿರ್ದೊಡಂ
ಪದೆದಾ ದೇಶದ ಕೂಟದಿಂ ರಸಮನೀವುತ್ತಿರ್ದುದಿಕ್ಷುಪ್ರಕಾಂ
ಡದ ತಂಡಂ ಜಗದಲ್ಲಿ ಲೇಸೊದವದೇ ಸದ್ವಸ್ತುಸಂಯೋಗದಿಂ     ೮೮

ಅಲರ್ದ ಬಯಲ್ದಾವರೆಗಳ್
ಸುಲಲಿತ ತದ್ದೇಶನೃಪತಿಗೆತ್ತಿದ ಶೋಭಾ
ಕಳಿತಂಗಳಪ್ಪ ಸತ್ತಿಗೆ
ಗಳ ತೆಱದಿಂ ಕಣ್ಗೆ ಸೊಗಸನೀವುವವೆಂದುಂ       ೮೯

ವ : ಮತ್ತಮತ್ಯಂತ ಪೇಶಲಮಾದ ತದ್ದೇಶದೊಳ್ ನೀಳ್ದು ಪರ್ವಿದ ರಾಜ ಮಾರ್ಗಂಗಳೆಂಬ ಲತಾವಿತಾನಂಗಳೊಳ್ ಪುಟ್ಟಿರ್ದಸ್ತೋಕಪರಿಪಕ್ವಫಲಸ್ತಬಕಂಗಳೆಂಬಂತೆ ಸುರಭಿ ಪರಿಮಳಮಿಳಿತ ಪರಮಾಮೃತಾಯಮಾನ ರಸಪ್ರಪೂರ್ಣತದುಚಿತ ನವ್ಯದ್ರವ್ಯ ಸಂಬಂಧುರಂಗಳಪ್ಪ ಚಂಚತ್ಕಾಂಚನ ಪ್ರಪಂಚಿತ ನಿರುಪಮ ಪ್ರಪಾಕಳಾಪ ಪ್ರಕಾಂಡ ಮಂಡಪಂಗಳಲ್ಲಿ

ಸರಸಿಜನೇತ್ರೆ ಸತ್ಕಳಶಮಂ ಪಿಡಿದೆತ್ತಿ ಮನೋಹರಾಂಬುವಂ
ವರಪರಿತೋಷದಿಂದೆಱೆವ ಪೊತ್ತಿನೊಳುದ್ಘಕುಚಂಗಳಕ್ಷಿಗೋ
ಚರಮುಮನೆಯ್ದೆ ಕಾಮಪರಿತಾಪದ ಪೆರ್ಚುಗೆಯಿಂದೆ ಶೋಷಿಸು
ತ್ತಿರೆ ಬಿಡದಾಗಳುಂ ಜಲಮನೀಂಟುವರಧ್ವಗರಾತುರತ್ವದಿಂ         ೯೦