ಶ್ರೀ ನೆಲಸೆ ವಕ್ಷದೊಳ್ ವಾ
ಕ್ಶ್ರೀ ನೆಲಸೆ ನಿಜಪ್ರಸನ್ನ ಮುಖದೊಳ್ ವಿಜಯ
ಶ್ರೀ ನೆಲಸೆ ಭುಜದೊಳೊಪ್ಪಿದ
ನಾ ನರಪಂ ಸರಸಚತುರಕವಿಕುಲತಿಳಕಂ           ೧

ಭೂನುತನಾ ನೃಪತಿ ಮಹಾ
ಸೇನಮಹಾರಾಜನೆಂಬ ಪೆಸರಂ ತಳೆದಂ
ಪೀನತರೇಕ್ಷ್ವಾಕುಕುಲಾಂ
ಭೋನಿಧಿ ಶಾರದನಿಶಾಕರಪ್ರತಿಮಾನಂ            ೨

ಆತನ ರೂಪಮೆಂಬುರುಸುಧಾರಸಮಂ ನಯನಂಗಳೆಂಬ ಸ
ತ್ಪಾತ್ರೆಗಳಲ್ಲಿ ಕಾಮಿನಿಯರಾತುರದಿಂ ಕುಡಿದಂತರಂಗದೊಳ್
ನೂತನಮಾಗಿ ತೀವಿದೊಡಮುಣ್ಮುವ ತಣ್ಬೆಮರೊಂದು ದಂಭದಿಂ
ದಾತತಮಾಗಿ ತಾಂ ಪೊಱಗೆ ಪೊಣ್ಮಿದುದೆಂಬಿನಮೊಪ್ಪಿ ತೋಱುಗುಂ          ೩

ವ : ಆ ಮಹೀಪಾಳಮೌಳಿಮಾಳಾಮಾಣಿಕ್ಯಮಯೂಖಪಟಳಿಕಾಜಟಿಳಿತ ಚರಣ ನಖಕಿರಣನ ಹಳಕುಳಿಶಕಳಶನಳಿನಾದ್ಯಕ್ಷೂಣಲಕ್ಷಣಪರಿಲಕ್ಷಿತಮಾಗಿ ಮಾಕಂದದ ಕೆಂದಳಿರಂದದಿಂ ಮೇದುರಮಾದ ಪಾದಪಲ್ಲವಂಗಳುಂ ಸುವೃತ್ತಂಗಳಾಗಿ ಮನೋಹರಂಗಳಾದ ಜಂಘಂಗಳುಂ ದೇಹಗೇಹಕ್ಕಾಧಾರಮಾಗಿ ಸಮುತ್ತಂ ಭಿತಂಗಳಾದ ಶಾತಕುಂಭ ಮಯಸ್ತಂಭಸನ್ನಿಭಂಗಳಾಗಿರ್ದೂರುಗಳುಂ ಸಿಂಹದ ಕಟಿಯಮತೆ [ಬರ್ಹಿ] ಮಾತ್ರಾಂತಂಗಳಾಗಿ ಬಟ್ಟಿದುವಾದ ಕಟಿತಟಂಗಳುಂ ಸಮುಲ್ಲಸಲ್ಲೋಮಮಂಜರಿ ಪರಿರಂಜಿತಮಾಗಿ ವೃತ್ತಾಯತಮಾದ ಮಧ್ಯ ಪ್ರವೇಶಮುಂ ವಿಶಿಷ್ಟಸಾಮ್ರಾಜ್ಯಲಕ್ಷ್ಮೀ ಭುಜಲತಾಸಮಾಲಿಂಗನ ಕೇಣೀಕೃತಮಾದ ವಿಶಾಲವಕ್ಷಸ್ಥಳಮುಂ ಚಿರಕಾಲೋ ದ್ವಹನದಿಂ ಕೊರಲ್ ಕುಸಿದು ಪರಿಶ್ರಾಂತಧರಣೀಂದ್ರಪರಿಸ್ರಮಪರಿಹರಣಾರ್ಥಮಾಗಿ ಧರಣೀಭಾರಪರಿಭರಣ ನಿರ್ಯುಕ್ತಂಗಳಾದ ಪ್ರಚಂಡದೋರ್ದಂಡಕಾಂಡಂಗಳುಂ ಗವೇಂದ್ರ ಕಂದರದಂತೆ ನಿಸ್ಥೂಲಾಕಾರದಿಂದೊಪ್ಪಂಬೆತ್ತಿರ್ದ ರೇಖಾತ್ರಯಾಂಕಿತಕಂಠಕಂದಳಮುಂ ಸಮಸ್ತನರನಾರೀಜನನಯನಮನೋಮಧುಕರನಿಕರಕ್ಕನಣುವಾಗಿ ತಣಿವನೀವ ಸ್ಮೇರ ಚಾರುಮುಖಕಮಳಮುಂ ಕಾಳಿಂದೀನದೀರಂಗತ್ತರಂಗಭಂಗಿಯಂತೆ ಭಂಗುರಮಾಗಿ ಸ್ನಿಗ್ಧ ಮುಗ್ಧಮಾದ ಕುಂತಳಕಳಾಪಮುಮತ್ಯಂತರಮಣೀಯಮಾಗಿರ್ಪುದಂತುಮಲ್ಲದೆಯುಂ

ಆ ಕಾಮದೇವನೀ ಭೂ
ಲೋಕದೊಳಸಮಾನಮಪ್ಪ ನೃಪರೂಪಂ ಕಂ
ಡಾಕಳಿತಾಶ್ಚರ್ಯರಸೋ
ದ್ರೇಕಭರಂ ತಲೆಯನೆಯ್ದೆ ತೂಗದೆ ಮಾಣಂ     ೪

ಅಱುವತ್ತುನಾಲ್ಕುಕಲೆಗಳ್
ಮೆಱೆದವು ತದ್ಭೂಪನಲ್ಲಿ ತಮ್ಮತಿಶಯಮಂ
ನೆಱೆ ನೋಳ್ಪ ವಾಂಛೆಯಿಂದಂ
ತಱಿಸಂದೊಂದೆಡೆಯೊಳೆಯ್ದೆ ಕೂಡಿದ ತೆಱದಿಂ೫

ಶ್ರುತವಾರ್ಧಿವಿಧುವೆನಿಪ್ಪಾ
ಕ್ಷಿತಿಪನ ದೆಸೆಯಿಂ ಪರಾಭವಂ ಬಂದಪುದೆಂ
ದತಿಶಯಪಠನಾರ್ಥಂ ಭಾ
ರತಿ ಪುಸ್ತಕಮಂ ಕರಾಗ್ರದಿಂ ಬಿಡಳಿನ್ನುಂ          ೬

ಅತಿನಿಶ್ಚಳಮಾಗಿಯುಮಾ
ಕ್ಷಿತಿಪನ ಗುಣಗಣಮುಮಖಿಳಜನಚಿತ್ತದೊಳು
ನ್ನತಮಾಗಿ ವರ್ತಿಸುತ್ತಿ
ರ್ಪತಿಶಯಮಂ ತಳೆದು ಮಾಳ್ಪುದದು ವಿಸ್ಮಯಮಂ     ೭

ದಾನಗುಣಪ್ರಿಯನಪ್ಪಾ
ಭೂನಾಥಂ ಲಕ್ಷಸಂಖ್ಯೆಯಿಂ ನುಡಿದೊಡಮಿಂ
ತೀ ನೆಲನೆಲ್ಲಂ ಪೊಗಳ್ವುದು
ಮಾನಿತಮಿತಭಾಷಿಯೆಂದು ಭರದಿಂದವನಂ      ೮

ಆತನ ಕೀರ್ತಿಯೆಂಬಮೃತವಾರಿಧಿ ಪತ್ತುದಿಗಂತರಾಳದೊಳ್
ನೂತನಮಾಗಿ ಪೆರ್ಚಿದೊಡೆ ಪುಟ್ಟಿದುವಾಗಸದಲ್ಲಿಯಬ್ಜ ಹಂ
ಸಾತತ ಮೀನ ಕರ್ಕಟಕ ಸನ್ಮಕರಂಗಳದಲ್ಲದಂದುಮ
ತ್ತೇತೆಱದೀ ಜಲೋದ್ಭವಿಗಳಾ ಸ್ಥಳವಾಸಿಗಳಾದಕಾರಣಂ            ೯

ಕಿನ್ನರದೇವದಂಪತಿಗಳಾ ನರನಾಥನ ಬೀರದೇಳ್ಗೆಯಂ
ಸನ್ನುತಮಾಗಿ ಪಾಡುತಿರಲಾದರದಿಂದಮೆ ಕೇಳ್ವ ಪೊತ್ತಿನೊಳ್
ಸ್ವರ್ನಿಳಯಾಧಿಪಂ ಬಿಡದೆ ಮೆಚ್ಚಿ ಕರಾಂಗುಳಿಚಾಳನಂಗೆಯ
ಲ್ಕುನ್ನತಮಾಗೆ ಕಂಕಣಝಣತ್ಕೃತಿ ನಿಶ್ಚಳಮಾಗಿ ಮಾಡುವಂ      ೧೦

ಆ ನರನಾಥನುಗ್ರತರತೇಜದ ಬೆಂಕೆ ದಿಶಾಕರೀಂದ್ರಭ
ಸ್ತ್ರಾನನಪೂತ್ಯತಿಪ್ರಭವಮಾರುತನಿಂ ಮಿಗಿಲಾಗಿ ವೈರಿಸಂ
ತಾನದನಲ್ಪಮಪ್ಪ ಕಟಕಂ ಜಗತೀಪಟದೊಳ್ ಪ್ರದಾಹಮಂ
ಪೀನಮೆನಲ್ಕೆ ತಾಳ್ದಿ ಪರಿವರ್ತಿಸುತಿರ್ಪುದದಾವಕಾಲಮುಂ           ೧೧

ಸುರತಾರ್ಥಿಗಳಪ್ಪರಿಗಳ
ನಿರದಪ್ಪಿದೊಡಂ ಕೃಪಾಣರಮಣಿಯನಾತಂ
ಭರದಿಂ ಪಾಣಿಗ್ರಹಣೋ
ದ್ಧುರಯೋಗ್ಯಳನೆಯ್ದೆ ಮಾಡಿ ಕರಮೊಸೆದಿರ್ಪಂ           ೧೨

ಪಿರಿದುಂ ತೇಜಸ್ವಿ ತೇಜಃಪ್ರಸರಮನಿರದಂತೆಲ್ಲಮಂ ಮುಚ್ಚಿ ಕಾಂತ್ಯು
ತ್ಕರಮೆಂಬೀ ಮಿಂಚನಾದಂ ಕಱೆದು ನಿನದಮಂ ತಾಳ್ದಿ ಕಾರ್ಗಾಲದೊಳ್ ಬಿ
ತ್ತರಿಸಿರ್ದೀ ಮೇಘಮೆಂಬಂತುದಯಿಸೆ ನೃಪಖಳ್ಗಂ ಮಹಾತೀಕ್ಷ್ಣಧಾರಾ
ಪರಿಪಾತತ್ರಾಸದಿಂದೋಡಿದರತಿಜವದಿಂ ರಾಜಹಂಸರ್ ನಿತಾಂತಂ   ೧೩

ಆತನ ಖಳ್ಗಮೆಂಬ ಖಳರಾಹು ಸಮುದ್ಯತರಾಜರಂ ಕಳಾ
ಖ್ಯಾತರೆನಿಪ್ಪರಂ ಪಿಡಿದು ನುಂಗಿದೊಡಂತವರೆಯ್ದೆ ಧಾತ್ರಿಯೊಳ್
ನೂತನಮಾಗಿ ಮುಳ್ಗಿ ನಿಖಿಳಾಶ್ವಮುಮಂ ದ್ವಿಜರಾಜಿಗಿತ್ತು ತ
ಮ್ಮಾತತಮಪ್ಪ ಚಾಗಮನಿಳಾತಳದೊಳ್ ಮೆಱೆದರ್ ನಿರಂತರಂ   ೧೪

ತಂತ್ರಯುತರಾದೊಡಂ ನಿಜ
ಮಂತ್ರಿಗಳಾ ನೃಪನ ಖಳ್ಗಭುಜಗನ ವಿಷಮಂ
ಸಂತೈಸಲಾಱರೆಂದರಿ
ಸಂತತಿಗಳ್ ಶಿರದೊಳಾಂತರಾತನ ಪದಮಂ      ೧೫

ದಿಕ್ಕುಗಳೆಲ್ಲಮಂ ನೆಱೆಯೆ ಸಾಧಿಸಿ ಕಪ್ಪಮನಯ್ದೆ ಕೊಂಬೆನೆಂ
ದುಕ್ಕುವದಿಂದೆ ಪೋಪ ನರನಾಥನ ಸೇನೆಯ ಭೂರಿಭೂರಿಭಾ
ರಕ್ಕೆ ಧರಾತಳಂ ಕುಸಿದು ಪೊತ್ತ ಫಣೀಶ್ವರಮೌಳಿಯೊಳ್ ಕರಂ
ಚೆಕ್ಕನೆ ಕೀಲಿಸಲ್ ಕಳೆಯಲಾಱದವಂ ತಳೆದಿರ್ಪನೀಗಳುಂ  ೧೬

ಸೇನೆಯ ಭಾರದಿಂ ಧರಣಿಮಂಡಳ ಕಂಪಿಸುವಂತೆ ಪೋಗುತಿ
ರ್ದಾ ನರನಾಯಕಂಗಗಿದು ಜಂಗಮಭೂಧರವೃಂದಮೊಂದೆ ಕಂ
ಪೋನ್ನತಮಾದುದಿಲ್ಲ ತದರಿವ್ರಜರಕ್ಷಣಮೆಂಬ ದೋಷದಿಂ
ತಾನಿರದಂಜಿದಂತೆ ನಡುಗಿತ್ತು ಕರಂ ಸ್ಥಿರಭೂಧರಾಳಿಯಂ            ೧೭

ದಂತಿವ್ರಜದಿಂದಂ ದ್ವಿಜ
ಸಂತತಿಯಿಂ ಖಳ್ಗಿವೃಂದದಿಂ ಹರಿಗಳನಾ
ದಂ ತುಂಬಿರ್ಪುದು ತನ್ನಹಿ
ಕಾಂತನ ಬಂಧುಗಳ ವೈರಿವರ್ಗದ ದುರ್ಗಂ        ೧೮

ಆತನ ವೇಳೆಗೆ ಸಂದರ್
ಭೂತಳದೊಳ್ ಕೆಲಬರರಿಗಳದನೊಲ್ಲದವರ್
ಮಾತೇಂ ಮತ್ತೆ ಕೆಲಂಬರ್
ಭೀತಾತ್ಮಕರಂಬುನಿಧಿಯ ವೇಳೆಗೆ ಸಂದರ್       ೧೯

ಧುರದೊಳಿವರೆನಗೆ ಮುನ್ನಂ
ಭರದಿಂ ಬೆಂಗೊಟ್ಟರೀಗಳೆಲ್ಲಿಂ ಬಂದೆ
ತ್ತಿರದೆಂದು ನೋಳ್ಪ ತೆಱದಿಂ
ದರಸಂ ನತರಾದ ಪಗೆಗಳಂ ಮುಟ್ಟಿರ್ದಂ         ೨೦

ಧಾಳಿಯನಿಟ್ಟರಿಧಾತ್ರೀ
ಪಾಳರ ಸಂಪತ್ತಿಯೆಲ್ಲಮಂ ತಂದೊಡೆ ಭೂ
ಪಾಳಂ ಕೊಳ್ಳದೆ ಭಟ್ಟ
ರ್ಗೋಲಯಿಸುವವರ್ಗೆ ಕೊಟ್ಟು ಮೆಱೆದಂ ಗುಣಮಂ     ೨೧

ಆ ರಾಜನ ಜನಲಾಲಿತ
ಚಾರುಯಶಃಪೂರ್ಣಚಂದ್ರಮಂಡಳದೊಳ್ ತ
ದ್ವೈರಿಗಳ ದುರ್ಯಶಂ ಪರಿ
ರಾರಾಜಿಸುಗುಂ ಕಳಂಕಮೆಂಬಂತೆ ವಲಂ           ೨೨

ಪರದಾರಮುಕ್ತನಾಗಿಯು
ಮಿರೆಯೊಳ್ ಪರದಾರಸಕ್ತನಾ ನರಪಾಳಂ
ಪರಿಕಿಪೊಡೆ ಮಾನ್ಯನಾಗಿಯು
ಮುರುತರಜನಮಾನ್ಯನಾದನಿದು ಚಿತ್ರತರಂ      ೨೩

ವ : ಮತ್ತಮಾ ನರೋತ್ತಮಂ ವಿಬುಧಪತಿಯಾಗಿಯುಂ ಗೋತ್ರವಿರೋಧಿಯಲ್ತು ಜಾತವೇದನಾಗಿಯುಂ ಸಮಾಶ್ರಿತಸಂತಪನೀಯದಾಯಿಯಲ್ತು ಧರ್ಮ ರಾಜನಾಗಿಯುಂ ಜಗತ್ಸಂಹಾರಕಾರಿಯಲ್ತು ಪುಣ್ಯಜನನಾಗಿಯುಂ ಕ್ರವ್ಯಾಹಾರಿಯಲ್ತು ಪ್ರಚೇತನಾಗಿಯುಂ ವಾರುಣೀಕೃತರತಿಯಲ್ತು ಜಗತ್ಪ್ರಾಣಮಾಗಿಯುಂ ಪರಿಧೃತಕು ಜಾತಿಯಲ್ತು ಧನಾಧಿಪತಿಯಾಗಿಯುಂ ಸಮುಪಾತ್ತವೈಶ್ರವಣಾಖ್ಯಾತಿಯಲ್ತು ಶಂಕರ ನಾಗಿಯುಂ ವಿಷಾದಿಯಲ್ತು ಅಹಿಜನಾಗಿಯುಂ ಪ್ರಭಂಜನಸೇವಿಯಲ್ತು ಕಲಾನಿಧಿ ಯಾಗಿಯುಂ ಶಿತಕರನಲ್ತುಮಿಂತು ನಿರ್ದೋಷದಿಕ್ಪಾಲಕನಾಗಿಯುಂ ಕಲಾನಿಧಿ ಯಾಗಿಯುಂ ಶೀತಕರನಲ್ತುಮಿಂತು ನಿರ್ದೋಷದಿಕ್ಪಾಲಕನಾಗಿಯುಂ ಅರಿಷಡ್ವರ್ಗಮಂ ನಿರಾಕರಿಸಿ ತ್ರಿವರ್ಗ ಸಂಪಾದಕನಾದಂ ಶಲ್ಯತ್ರಯಂಗಳಂ ಪರಿಹರಿಸಿದ ಶಕ್ತಿತ್ರಯಾಕ್ರಾಂತ ನಾದಂ ದುರ್ನೀತ ರಾಜ್ಯಕಂಟಕರಂ ವಿಸರ್ಜಿಸಿ ನಾನಾವಿಧ ರಾಜನೀತಿ ವಿರಾಜಮಾನ ನಾದನಂತುಮಲ್ಲದೆಯುಂ

ಭೋಗೀಂದ್ರಾವೇಷ್ಟಿತಂ ಸಂಯುತ ಪರಮವೃಷಂ ಭೂರಿಭೂತಿಪ್ರಯುಕ್ತಂ”
ಧೀಗಂಭೀರಂ ಕಳಾಸಂಕಳಿತನನುಪಮಂ ಸನ್ಮಹಾಸೇನಮಾನ್ಯಂ
ಭಾಗ್ಯಾಧಾರಂ ಶಿವಾಲಕ್ಷಿತನೆನಿಪ ಮಹೀಪಂ ಮಹಾದೇವನೆಂಬಂ
ತೀ ಗೋತ್ರಾಚಕ್ರದೊಳ್ ವಿಶ್ರುತನೆನಿಸಿದೊಡಂ ಕಾಮಸಂಹಾರಿಯಲ್ಲಂ        ೨೪

ಕಮಲೋಲ್ಸಾಸನಿಬಂಧನಂ ಕರಪರಿವ್ಯಾಪ್ತಾಖಿಲಾಶಂ ಬುಧ
ಪ್ರಮದೇಚ್ಛಾಪಟು ಕಾಶ್ಯಪೀಡಿತಗುಣಂ ಗಂಧರ್ವಸಂಸೇವಿತಂ
ದ್ಯುಮಣಿಪ್ರಾಭವನಾಗಿಯುಂ ಕುವಲಯಕ್ಕಾನಂದಮಂ ಮಾಳ್ಪ ಹೃ
ದ್ಗಮಮಪ್ಪದ್ಭುತಶಕ್ತಿಯಂ ತಳೆದನಾ ವಿಶ್ವಂಭರಾಧೀಶ್ವರಂ      ೨೫

ಜ್ಞಾನವಿಶೇಷಮೆಂಬ ಕಿರಣಂಗಳನುಳ್ಳ ಜಿನೇಂದ್ರಚಂದ್ರನಂ
ತಾನತಿಭಕ್ತಿಯಿಂದಿರದೆ ತಾಳ್ದಿದ ಕಾರಣಮಾ ಮಹೀಪಸ
ನ್ಮಾನಸದಲ್ಲಿ ಪೊರ್ದದು ತಮಂ ಕಿಱೆದಾದೊಡಮಂತಗುರ್ವುಮುಂ
ಪೀನಧನಾಢ್ಯರಪ್ಪ ನಿಜಕಿಂಕರರೊಳ್ ಮಡಗಿಟ್ಟನೆಂಬಿನಂ            ೨೬

ಉದಯಾಸ್ತಾದ್ರಿಗಳೆಂಬ ಪೀವರಕುಚಾಭೋಗಂಗಳಿಂ ಚಾರುತಾ
ಸ್ಪದಮಾಗಿರ್ದ ತರಂಗಿತಾಂಬುನಿಧಿಯೆಂಬುದ್ದಾಮಸದ್ವಸ್ತ್ರಮಂ
ಪದಪಿಂದುಟ್ಟು ಧರಿತ್ರಿಯೆಂಬ ರಮಣೀಯ ಸ್ತ್ರೀಯ ಚಾರೂರುದೇ
ಶದೊಳೊಯ್ದಿಟ್ಟ ಸುರಮ್ಯಮಪ್ಪ ಕರಮಂ ತಾಳ್ದಂ ನೃಪಂ ಭೋಗಮಂ    ೨೭

ಪರಬಲಸಂಹಾರಕನು
ದ್ಧುರ ಭಾಸ್ವದ್ವಜ್ರಮುದ್ರಕಂ ಸ್ವಸ್ಥಂ ಧೀ
ಸ್ಫುರಿತ ಗುರುಪ್ರಿಯನಪ್ಪಾ
ನರನಾಯಕನಿಂದ್ರನಂತಿರೊಪ್ಪಂಬಡೆದಂ          ೨೮

ವ : ಆ ಮನುಜಮನೋಜನೆನಿಪ ಮಹಾಸೇನ ಮಹಾರಾಜನ ಮನೋವಲ್ಲಭೆ

ವಿಶದಾಚಾರದೆ ಸುವ್ರತೆ
ಪೆಸರಿಂದಂ ಸುವ್ರತಾಮಹಾದೇವಿ ಕರಂ
ವಸುಮತಿಯೊಳ್ ತನ್ನಯ ಜಸ
ಮೆಸೆವಿನೆಗಂ ಪಡೆದಳಗ್ರಮಹಿಷೀಪದಮಂ        ೨೯

ಶುಭಪರಮಾಣುರಾಶಿಯನಜಂ ನೆಱೆಕೊಂಡದಱಲ್ಲಿ ಚೋದ್ಯಮ
ಪ್ಪಭಿನವಭೂರಿಭಾಗ್ಯದೊದವಂ ಚತುರತ್ಪಮನುದ್ಘರೂಪಮಂ
ವಿಭವವಿಶೇಷಮಂ ಬಿಡದೆ ಪೆರ್ಚಿಸಿ ದೇವಿಯ ರೂಪವಿದ್ಧಮಂ
ಪ್ರಭವಿಸುವಲ್ಲಿ ಬಿಳ್ದ ಪರಮಾಣುಗಳಿಂ ಸಮೆದಂ ಸುಧಾಧಿಯಂ   ೩೦

ಎತ್ತಾನುನೊರ್ಮೆ ಬಿದಿ ಕುಶ
ಲತ್ವದೆ ನಿರ್ಮಿಸಿದನೆಂಬ ತೆಱದಿಂದಾ ವನಿ
ತೋತ್ತಮೆಯ ರೂಪು ಜಗದೊಳ್
ಬಿತ್ತರಿಸುತ್ತಿರ್ದುದಮಮ ಕೌತುಕಭರಮಂ       ೩೧

ಕಾಮನ ವಿದ್ಯೆ ಕಾಮನಧಿದೇವತೆ ಕಾಮನ ಮಂತ್ರಶಕ್ತಿ ತ
ತ್ಕಾಮನ ಕೀರ್ತಿ ಕಾಮನ ಜಯಾಂಗನೆ ಕಾಮನ ವೀರಲಕ್ಷ್ಮಿಯೆಂ
ಬೀ ಮಹಿಮಪ್ರಭಾವದಿನಧಃಕರಿಪಳ್ ಮಹಿಳಾಸಮೂಹಚೂ
ಡಾಮಣಿ ಮೂಱುಲೋಕದೊಳಗುಳ್ಳ ವಿಳಾಸವತೀಜನಂಗಳಂ       ೩೨

ಶಶಿಕಳೆಯೊಂದೆಯೆಂತು ಕುಮುದಾಳಿ ವಿಕಾಸಮನೆಯ್ದೆ ಮಾಳ್ಪುದಂ
ತಸಿಯಳ ಗಾಡಿಯೊಂದೆ ಜಗತೀಜನಲೋಚನಸಂಚಯಕ್ಕೆ ಸಂ
ತೊಸಮನೆ ಮಾಡಿ ರೂಢಿವಡೆದತ್ತು ದಲೆಂದೊಡೆ ಮತ್ತೆ ಬಣ್ಣಿಸಲ್
ವಸುಮತಿಯಲ್ಲಿ ಬಲ್ಲನವನಾವನೊ ದೇವಿಯ ಚಾರುರೂಪಮಂ೩೩

ವ : ಅಂತುಮಲ್ಲದೆಯುಂ

ಅಂಬಿಕೆ ನಿನ್ನ ಚಾರುಮುಖಶೋಭೆಯನಿನ್ನುಱೆಕೇಳ್ದೊಡಾನಘಾ
ಲಂಬನನಪ್ಪೆನೆಂದು ತುಹಿನಾಂಶುಕುಟುಂಬಸಮೇತನಾಗಿ ಬಂ
ದಂಬುಜಪತ್ರನೇತ್ರೆಯ ಪದದ್ವಯಮಂ ನೆಱೆ ಮುಟ್ಟಿಕೊಂಡು ಮ
ತ್ತಂ ಬಿಡದಿರ್ದನೆಂಬ ತೆಱದಿಂ ಪದದೊಳ್ ನಖಪಂತಿ ರಂಜಿಕುಂ       ೩೪

ವ : ಅಂತುಮಲ್ಲದೆಯುಂ

ಅಂಬಿಕೆ ನಿನ್ನ ಚಾರುಮುಖಶೋಭೆಯನಿನ್ನುಱೆಕೇಳ್ದೊಡಾನಘಾ
ಲಂಬನನಪ್ಪೆನೆಂದು ತುಹಿನಾಂಶುಕುಟುಂಬಸಮೇತನಾಗಿ ಬಂ
ದಂಬುಜಪತ್ರನೇತ್ರೆಯ ಪದದ್ವಯಮಂ ನೆಱೆ ಮುಟ್ಟಿಕೊಂಡು ಮ
ತ್ತಂ ಬಿಡದಿರ್ದನೆಂಬ ತೆಱದಿಂ ಪದದೊಳ್ ನಖಪಂತಿ ರಂಜಿಕುಂ       ೩೪

ಲೀಲೆಯೊಳೊಂದಿ ತೋರ್ಪ ಗತಿಮಾತ್ರದೊಳಂ ಸಲೆರಾಜಹಂಸ ಸ
ಮ್ಮೇಲನಮಂ ಕಱುತ್ತಿರದೆ ಗೆಲ್ದು ನಿಜಪ್ರಭೆಯಂ ನಿಮಿರ್ಚುತಿ
ರ್ದೀ ಲತಿಕಾ ತನೂಚರಣಮೆನ್ನುಮನಿನ್ನುಱೆ ಗೆಲ್ಗುಮೆಂಬ ಭೀ
ಕೀಲಿತಮಾದುದೆಂಬ ತೆಱದಿಂ ಬಿಡದಂಬುಜಮಂಬುದುರ್ಗಮಂ      ೩೫

ಆಕೆಯ ಜಂಘಾಯುಗಳಮ
ದಾಕಳಿತಜಡೋರುಸಂಗಮಾದೊಡಮೆಂತುಂ
ಸ್ವೀಕೃತವಿಲೋಮಮಾದೊಡ
ಮೇಕಂ ಸದ್ವೃತ್ತಮಾದುದಿಂತಿಯ ಚಿತ್ರಂ         ೩೬

ಮನಸಿಜನೆಂಬ ಭೂಪನೊಸೆದಿರ್ಪ ವಿಲಾಸನಿವಾಸಮಿಂತಿದೆಂ
ದೆನಿಪ ತದಂಗಮೆಂಬ ಮನೆಗೆತ್ತಿದ ಲೋಚನಹಾರಿ ತಪ್ತವ
ತ್ಕನಕದ ಕಂಭಮೆಂಬ ತೆಱದಿಂ ನೆಱೆ ರಂಜಿಪುದಾ ಮಹೀಪ ಕಾ
ಮಿನಿಯ ವರೋರುಯುಗ್ಮಮನಿಶಂ ಸಮುಪಾತ್ತ ವಿಶಿಷ್ಟಶೋಭಕಂ           ೩೭

ಅರಸಿಯ ನಿತಂಬಮಂಡಲ
ಮುರುಶೋಭಾಭಾರಮಂ ಸಮುದ್ಘವಿಸಿ ಕರಂ
ಧರಿಯಿಸಿ ಸುವೃತ್ತಮಂ ವಿ
ಸ್ತರಿಸಿತ್ತದು ತನ್ನ ತಾಂ ಗುರುತ್ವದ ಪೆಂಪಂ     ೩೮

ಪಿರಿದುಂ ಶೃಂಗಾರಮೆಂಬೀ ರಸಭರಿತಮಹಾನಾಭಿಕೂಪಾಂತರಾಳೋ
ದ್ಧುರಮಜ್ಜತ್ಕಾಮಮತ್ತದ್ವಿಪಕರಟತಟಸ್ಥಾನಮಂ ಬಿಟ್ಟು ಮೇಗ
ಣ್ಗಿರದೇಱುತ್ತಿರ್ದ ಭೃಂಗಂಗಳ ಬಳಗಮಿದೆಂಬಂತಿರಾ ಸ್ತ್ರೀಯ ಚಾರೂ
ದರದೊಳ್ ಪುಟ್ಟಿರ್ದು ಚೆಲ್ವಂ ಪಡೆದುದು ಭರದಿಂ ರೋಮರಾಜಿಪ್ರಕಾಂಡಂ            ೩೯

ಗುರುವಾಗಿರ್ದ ನಿತಂಬಮೊಂದೆಡೆಯೊಳೊಪ್ಪುತ್ತಿರ್ದುದಾದಂ ಸುಹೃ
ತ್ತರಮಾಗಿರ್ದ ಕುಚದ್ವಯಂ ಬಗೆವೊಡಿತ್ತಲ್ ಪ್ರೋಚ್ಚಮಾಗಿರ್ದುದಾ
ನಿರದಿನ್ನೆಂತು ನಿಜೇಶನೊಳ್ ನೆರೆವೆನೆಂಬೀ ಚಿಂತೆಯಿಂದೆಂಬವೊಲ್
ಭರದಿಂದಂ ಬಡವಾದುದೆಯ್ದೆ ನಡು ತಾಂ ಭೂಪಾಲನರ್ಧಾಂಗಿಯಾ           ೪೦

ಮೂಜಗದೊಳ್ ಕಳಾವತಿಯುಮೀಕೆಯ ಶೀಲಗುಣಪ್ರತಾನದಿಂ
ಪೂಜ್ಯಳುಮೀಕೆಯೀಕೆಯೇ ಮನೋಹರರೂಪಿನ ಸೀಮೆಯಾಗಿ ರಾ
ರಾಜಿಸುತಿರ್ಪಳೆಂದು ಬಿದಿಯಾಕೆಯ ಕುಕ್ಷಿಯೊಳೀ ತ್ರಿರೇಖೆಯಂ
ಯೋಜಿಸಿದಂತಿರಾಯತವಳಿತ್ರಯಮಾವರಿಸಿತ್ತು ಶೋಭೆಯಂ        ೪೧

ಅರಸಿಯ ತೋರಮಾದ ಕಠಿನಸ್ತನಮಂಡಲಮಂಗಜಗೃಹಂ
ಪರಮವಿಳಾಸಮೆಂಬುರುಸುಧಾರಸಮಂ ನೆಱೆ ತುಂಬಿ ಬಯ್ಕೆಯಾ
ಗಿರಿಸಿದ ಹೇಮಕುಂಭದವೊಲೊಪ್ಪಮನಾಳ್ದುದದಂತುಮಲ್ಲದಂ
ದಿರದದನಂಟಿದಾಗಳೆ ಮನೋಜವಿಕಾರಮದೇಂತು ಪುಟ್ಟುಗುಂ     ೪೨

ಆ ದೇವಿಯ ನಳಿತೋಳ್ಗಳ್
ಮೇದುರಮಾಗಿರ್ದ ಲತೆಯ ಕಾಂಡದ ತೆಱದಿಂ
ಮೇದಿನಿಯೊಳಮದು ಚೆಲ್ವಿಂ
ಗಾದುದು ನೆಲೆ ತಾಳ್ದಿ ಕೋಮಳತ್ವದ ಪೆಂಪಂ  ೪೩

ತಾವರೆಗಳ್ ತಾವರೆಗಳ್
ಭೂವಳಯದೊಳಾದುವಾ ಮಹಾದೇವಿಯ ಶೋ
ಭಾವಿಳಸುಹಸ್ತತಳಮಂ
ಭಾವಿಸಿ ನಡೆನೋಡಿ ನಾಣ್ಚಿದಂತೆ ನಿತಾಂತಂಟ೪೪

ಮೂಱುಂ ರೇಖೆಗಳಿಂದಂ
ತೋಱಿಕೆಯಂ ಪಡೆದು ಸೊಗಸನೀವುತ್ತಿರ್ದಾ
ನೀಱೆಯ ಕೊರಳತಿಶಯಿತಂ
ಮಾಱುಂಗೊಂಡುದು ನೃಪಾಳತಿಳಕನ ಮನಮಂ            ೪೫

ಎಂದುಂ ಕುಂದದ ಕಂದಿನೊಳ್ ಪೊರೆಯದಾ ತನ್ವಂಗಿಯಾಸ್ಯೇಂದುವಂ
ಚಂದ್ರಂ ನೋಡೆ ಸಮಾನಮಪ್ಪ ಬಗೆಯಿಂದಂ ತನ್ನ ರೂಪಂ ಸಮಂ
ತಂದಿಂತೊಟ್ಟು ಸಮಸ್ತ ವಿಸ್ತೃತ ಕಳಾನೀಕಂಗಳಿಂ ಪೂರ್ಣಮಾ
ಗಂದಂ ಕೈಮಿಗೆಮಾಡಿ ಮಾಡಿಯಳಿವುತ್ತಿರ್ಪಂ ನಭೋಭಾಗದೊಳ್೪೬

ಸರಸಿಜಪತ್ರನೇತ್ರೆಯ ನಿರಸ್ತಕಳಂಕಕಪೋಳಮಂಡಳಂ
ನಿರುಪಮಚಾರುಭೂರಿತರಕಾಂತಿಗಳಿಂ ಪೊಳೆಯುತ್ತುಮಿರ್ದು ಭಾ
ಸುರವಿಧುಬಿಂಬದಂತೆ ಚೆಲ್ವಾದೊಡಮಂದು ಕಳಂಕಲೇಖೆಯಿಂ
ದೆರಡಱ ಭೇದಮಂ ಬಿಡದೆ ನಿಶ್ಚಯಿಸಿರ್ಪುದು ತತ್ಪುರೀಜನಂ        ೪೭

ಬಿಂಬದ ಪಕ್ವಮಾದ ಫಳಮೆಂಬಿನಮೀ ಜಗದಲ್ಲಿ ಚೆಲ್ವನಾ
ಲಂಬಿಸಿದತ್ತು ಮಾನಿನಿಯ ಸಾರಮೆನಿಪ್ಪಧರಂ ಮನೋಹರಂ
ತುಂಬಿ ಸುಧಾರಸಪ್ರಸರದಿಂದೆ ವಿರಾಜಿತಮಂತುಮಲ್ಲದಂ
ದಿಂಬಿನ ಪತ್ರವಲ್ಲಿ ನೆಱೆ ಗಲ್ಲದ ತಾಣದೊಳೆಂತು ಪುಟ್ಟುಗುಂ     ೪೮

ಮೃದುಮಧುರಂ ಗಭೀರಮವಿಕಾರಯುತಂ ಬಿದಿ ಕೊಟ್ಟ ಶಾಸನಂ
ಸದಮಳಧರ್ಮಯುಕ್ತಮೆನಿಸಿರ್ದ ಸುನಾದೆಯ ವಾಗ್ವಿಳಾಸಮಂ
ಪದೆದಿರದೆಯ್ದೆ ಕೇಳ್ದು ಘನಲಜ್ಜೆಯನಾಂತವೊಲಂದು ಬೀಣೆಯಾ
ದುದು ಮರನಂತು ಕೋಗಿಲೆ ಕರಂ ಕರಿದಾದುದು ವಿಹ್ವಳೀಕೃತಂ    ೪೯

ನಿಪ್ರೊಸತಪ್ಪ ರತ್ನಚಯಂ ಪಿಡಿದಾಯ್ದು ಸುಧಾರಸಂಗಳಿಂ
ತೊಪ್ಪನೆ ತೊ‌ಯ್ದವೊಲ್ ಪೊಳೆವ ಪಲ್ಗಳನಂದುಱೆ ತೂಗಲೆಂದು ಜಾ
ಣಪ್ಪಿ ವಿರಿಂಚಿ ಮಾಡಿದ ಸುವರ್ಣತುಳಾವರದಂಡಮೆಂಬವೊ
ಲೊಪ್ಪಮನಾಳ್ದುದಾ ನರಪಕಾಂತೆಯ ಸೌಂದರನಾಸಿಕಾಂಕುರಂ     ೫೦

ಬಾಲಕಿಯಲರ್ಗಣ್ಗಳ್ ಸಂ
ಲಾಲಿತ ಲಾವಣ್ಯರಸಮಯಾಬ್ಜಾಕರದೊಳ್
ಬಾಳೆಯ ಮೀಂಗಳ ತೆಱದಿಂ
ಲೀಲೆಯೊಳಂ ಪೊಳೆದು ತಳೆದವತಿಚಪಳತೆಯಂ  ೫೧

ಆ ನೃಪಚಿತ್ತವಲ್ಲಭೆಯ ಪುರ್ವುಗಳೆಂಬ ಶರಾಸನಂಗಳೊಳ್
ಮಾನಿತ ಪಕ್ಷ್ಮಪಾಳಿಕೆಗಳೆಂಬುರುನಾರಿಗಳಂ ತೊಡರ್ಚಿಯ
ನ್ಯೂನಕಟಾಕ್ಷಮಾಳಿಕೆಗಳೆಂಬ ಶರಂಗಳನೆಯ್ದೆ ಹೂಡಿ ತ
ನ್ಮಾನಸಜನ್ಮ ನೆಚ್ಚು ಮೆಱೆದಂ ಜಗತೀಜನಚಿತ್ತಲಕ್ಷ್ಯಮಂ           ೫೨

ಓಂಕಾರದ ಶಂಕೆಯನಂ
ದಂಕುರಿಸುತ್ತಿರ್ದುದಮನು ಕಸ್ತೂರೀತಿಲ
ಕಾಂಕಭ್ರೂಮಧ್ಯಂ ಹರಿ
ಣಾಂಕಾಸ್ಯೆಗೆ ಮಂಗಳತ್ವಮಂ ಸೂಚಿಪ ವೊಲ್  ೫೩

ಅಷ್ಟಮಿಯ ಚಂದ್ರನಂತಿರೆ
ದೃಷ್ಟಿಗೆ ಕಡುಚೆಲ್ವನಾದುದಾಕೆಯ ನಿಟಳಂ
ಪುಷ್ಪತರಕಾಂತಿಯಿಂದು
ತ್ಕೃಷ್ಟಂ ನಿಕಟಸ್ಥತಾರಕಂ ಪ್ರಸ್ತುತ್ಯಂ            ೫೪

ಪಿರಿದುಂ ಶೋಭೆಯನಾಂತವಾಕೆಯ ಲಸತ್ಪ್ರಾಮಾಣ್ಯಸಂಪತ್ತಿಯಂ
ಭರದಿಂದಕ್ಷರಚಾರುತಾಮಹಿಮೆಯಂ ತಾಳ್ದಿರ್ದ ಕರ್ಣಂಗಳೀ
ಧರಣೀಮಂಡಳದಲ್ಲಿ ಸಾರತರಸೌಖ್ಯಕ್ಕೀಕೆಯೇ ಸೀಮೆಯೆಂ
ದುರುಬುದ್ಧಿಪ್ರವಿಭಾಸಿಯಪ್ಪ ಬಿದಿ ಪತ್ರಾಲಂಬನಂಗೆಯ್ದವೊಲ್೫೫

ಕಾಳಿಂದೀನದಿಯಲ್ಲಿ ಪುಟ್ಟಿದ ತರಂಗೌಘಂಗಳಂತಾವಗಂ
ಹೇಳಾಲಂಬಿಗಳಾದವಾಕೆ ಶಿರದೊಳ್ ತಾಳ್ದಿರ್ದ ಕೇಶಂಗಳು
ತ್ತಾಲಂಗಳ್ ಪರಿಲಾಲನೀಯಪರಮಸ್ನಿಗ್ಧತ್ವಯುಕ್ತಂಗಳುಂ
ನೀಲಂಗಳ್ ತಳೆದಿರ್ದವಂದು ಪಿರಿದುಂ ಚೆಲ್ವಾದ ವಕ್ತ್ರತ್ವಮಂ      ೫೬

ನೂರ್ಮಡಿಯಾಗಿಯೆ ದೇವಿಯ
ಸೋರ್ಮುಡಿ ಬೆನ್ನಲ್ಲಿ ಚೆಲ್ವನಾವರಿಸಿತ್ತಾ
ನರ್ಮದೆಯ ಪೊನಲು ಕನಕದ
ನಿರ್ಮಳಶಿಲೆಯಲ್ಲಿ ಮುರಿದು ಪರಿವಂತೆ ವೊಲಂ           ೫೭

ವ : ಮತ್ತಂ

ಆ ಸುಕುಮಾರಿ ಚಾರುನವರತ್ನವಿಭೂಷಣಸಂಚಯಂಗಳಂ
ಲೇಸೆನಿಸಿರ್ದ ಮೆಯ್ಗೆ ಕಡುಭಾರ ವಿಡಾಯಿಗಳೆಂದು ಪುಷ್ಪಮಾ
ಲಾಸಮುದಾಯಮಂ ಮುಡಿಗೆ ಭಾರಮಿದೆಂದದಱ ಪ್ರಭಾವಳಿಯುಂ
ಭಾಸುರಮಪ್ಪ ಕಂಪು ತೊಡವಾದಡೆ ಸಾಕೆನುತಿರ್ಪಳಾವಗಂ          ೫೮

ರತಿಗಾನಂದವಿಧಾನಮೊಂದೆ ಗುಣಮಾ ಲಕ್ಷ್ಮೀಮಹಾದೇವಿಗಂ
ನುತಸೌಭಾಗ್ಯಮದೊಂದೆ ನೋಳ್ಪಡೆ ಗುಣಂ ವಾಗ್ದೇವಿಗಂ ಚಾತುರೀ
ಯುತಿಯೆಂಬೊಂದೆ ಗುಣಂ ಸತಿಗೆ ಮತ್ತಾನಂದಕಾರಿತ್ವಮುಂ
ನುತಸೌಭಾಗ್ಯಮುಮೆಯ್ದೆ ಜಾಣ್ಮೆಯೊದವುಂ ಕೂಡಿತ್ತಿಳಾಭಾಗದೊಳ್       ೫೯

ವ : ಮತ್ತಮಾ ದೇವಿ ಚಂದ್ರಕಳೆಯಂತೆ ಸಕಳಜನಾನಂದಕಾರಿಣಿಯುಂ ಪುಷ್ಪಮಾಲೆಯಂತೆ ದೃಢಗುಣಸಂಪನ್ನೆಯುಂ ಕಮಳಿನಿಯಂತಕ್ಷೂಣಲಕ್ಷ್ಮೀಸಮಾ ಲಕ್ಷಿತೆಯುಂ ಗಂಗೆಯಂತೆ ನಿರ್ಮಳಾಂತರಂಗೆಯುಂ ವನಲಕ್ಷ್ಮಿಯಂತೆ ವಿಶಿಷ್ಟ ಗೋತ್ರೋತ್ಪನ್ನೆಯುಂ ಮಳೆಗಾಲದ ದಿನಮಾಳಿಕೆಯಂತೆ ವಿದೂರಿತರಜೋವ್ರಜೆಯುಂ ಪ್ರಭಾಕರಪ್ರಭೆಯಂತೆ ಪ್ರತಿಧ್ವಸ್ತ ತಮಃಪ್ರಕರೆಯುಮೆನಿಪಳಂತುಮಲ್ಲದೆಯುಂ

ಗುಣದೊಳ್ ನಿತ್ಯತ್ವಮಂ ಮಧ್ಯದೊಳುಱೆಸದಸದ್ವಾದಮಂ ನೇತ್ರದೊಳ್ ತಾಂ
ಕ್ಷಣಿಕತ್ವಾಪತ್ತಿಯಂ ರೂಪಿನೊಳೆಸೆವ ಮಹಾದ್ವೈತಮಂ ಮಂದಯಾನ
ಕ್ಷಣದೊಳ್ ಜಾಡ್ಯತ್ವಮಂ ಕೀರ್ತಿಯೊಳಮಮ ಪರಿವ್ಯಾಪ್ತಕತ್ವಾದಿಯಂ ಧಾ
ರಿಣಿಯೊಳ್ ಸಂಪಾದಿಸುತ್ತುಂ ಮೆಱೆದಳಬಳೆ ವಿದ್ಯಾಂಗಿಯೆಂಬಂದದಿಂದಂ    ೬೦

ನಿಸಿತಕಟಾಕ್ಷಮೆಂಬ ಶರಮಂ ನಖಮೆಂಬ ಕಠಾರಮಂ ಸಮು
ಲ್ಲಸಿತ ಕುಚಾಗ್ರಮೆಂಬ ವರಚಕ್ರಮನುನ್ನತಕೇಶಭಾರಮೆಂ
ಬೆಸೆವುರುಪಾಶಮಂ ತಳೆದ ದೇವಿಯನಂಗಜಚಕ್ರವರ್ತಿ ಪೂ
ಜಿಸುವನಿದೆನ್ನ ಶಸ್ತ್ರದಿಧಿದೇವತೆಯೆಂದು ಜಗಜ್ಜಯೋತ್ಸುಕಂ      ೬೧

ವಕ್ರತೆ ಕೇಶದೊಳಲ್ಲದೆ
ಮಿಕ್ಕಿರ್ದ ಚರಿತ್ರದಲ್ಲಿ ಪೊರ್ದದು ಪಿರಿದುಂ
ಕರ್ಕಶತೆ ಕುಚದೊಳಲ್ಲದೆ
ತರ್ಕಜ್ಞೆಯ ಚಿತ್ತದಲ್ಲಿ ತೋಱದದೆಂದುಂ         ೬೨

ಮೂಱುಂಲೋಕದ ಸತಿಯರ್
ಮೀಱಿದ ಗುಣಶೀಲ ರೂಪಿನೊಳ್ ಪಾಸಟಿಯಂ
ತೋಱಿದವರಿಲ್ಲ ಬಂದಾ
ನೀಱೆಗೆ ಮಿಗೆ ತೊತ್ತಿರಾಗಿ ಬೆಸಕೆಯ್ವುದಱಿಂ   ೬೩

ವ : ಅದಲ್ಲದೆಯಂ

ಗುಣದೊಳ್ ಕೂಡಿದ ಚಾರುಚಾಪಲತೆಯಿಂದ ಧಾನುಷ್ಯಕಿಂತೊಪ್ಪುಗುಂ
ಮಣಿಯೆಂತೊಪ್ಪಮನಾಳ್ದು ತೋರ್ಪುದಧಿಕಂ ನೈರ್ಮಲ್ಯದೊಳ್ ಕೂಡಿದು
ಧ್ಘೃಣಿಯಿಂದಂತೆ ವಿಶೇಷಮಪ್ಪ ಗುಣದೊಳ್ ಸತ್ಕಾಂತಿಯೊಳ್ ಕೂಡಿದಾ
ಪ್ರಣುತಪ್ರೇಯಸಿಯಿಂದಮೀ ಜಗದೊಳಾ ಭೂಮೀಶನಂದೊಪ್ಪಿದಂ           ೬೪

ವಿಲಸತ್ಪದ್ಮೆಯೊಳೆಂತು ವಿಷ್ಣು ರತಿಯೊಳ್ ತಾನೆಂತು ಚಿತ್ತೋದ್ಭವಂ
ಕುಲದಿಂ ರೋಹಿಣಿಯೊಳ್ ಸುಧಾಕಿರಣನೆಂತೊಲ್ದಿರ್ಪನಂತಾವಗಂ
ಪಲಬರ್ ಪತ್ನಿಯರುಳ್ಳೊಡಂ ಚತುರೆಯಪ್ಪಾ ದೇವಿಯೊಳ್ ಭೂಮಿಭೃ
ತ್ತಿಲಕಂ ಮೋಹಮನೆಯ್ದೆ ಮಾಡಿ ಪಿರಿದೊಂದಾನಂದದಿಂ ಕ್ರೀಡಿಪಂ            ೬೫

ಪುರ್ವಿನ ಜರ್ವು ಚುಂಬನದಗುರ್ವು ಲಸತ್ಪುಳಕಾಂಕುರಂಗಳೊಂ
ದುರ್ವು ಮನೋಹರಾಧರಪರಿಗ್ರಹವಾಂಛೆಯ ಕೊರ್ವು ರಾಗದಿಂ
ದೊರ್ವರೊಳೊಲ್ವು ಕೈಮಿಗೆ ರತಿಕ್ರಿಯೆಯೊಳ್ ನೆರೆದಿರ್ದು ಕಾಲಮಂ
ನಿರ್ವಹಿಸುತ್ತುಮಿರ್ದರಸಮಾಯುಧನಾಡಿಪ ಜಂತ್ರದಂದದಿಂ         ೬೬

ಜನಪತಿಯುಂ ತತ್ಕಾಂತೆಯು
ಮನುನಯದಿಂದಿಷ್ಟವಿಷಯಭೋಗಂಗಳನಂ
ದನುಭವಿಸುತ್ತುಂ ಕಳೆದರ್
ಘನಮುದದಿಂ ಕೆಲವುವತ್ಸರಂಗಳನಿಳೆಯೊಳ್    ೬೭

ವ : ಇಂತು ನೆಗಳ್ತೆಗಂ ಪೊಗಳ್ತೆಗಮಳುಂಬಮಾದ ಸುವ್ರತಾಮಹಾದೇವಿಯೊಂದು ದಿವಸಮಿಂದುಕಾಂತಶಿಲಾಮಯಮಾಗಿ ಬಹಳಮಪ್ಪ ಬೆಳಗಿನ ಬಳಗಮಂ ವಿಯತ್ತಳದೊಳ್ ನೆಱೆಯೆ ಕಱೆಯುತ್ತುಮಿರ್ದ ನಿರವಧಿಶೋಭಾಸಮಧಿಕಮಾದ ಸೌಧತಳದೊಳಶೇಷವಿಶೇಷಿತಾಂತಃಪುರಸಾರಸೌಂದರೀಸಂದೋಹದೊಡಗೂಡಿ ವಿಮಳತರವಿಪುಳ ಮುಕ್ತಾಫಳಕಳಿತಸಕಳಾಳಂಕರಣಮನೆಯ್ದೆ ತೊಟ್ಟು ಥಳಥಳಿಸಿ ಪೊಳೆವ ಧವಳಚಾಮರಂಗಳ ಚಳಾಚಳ ವಿಳಸನದಿಂ ನೇರ್ಪಟ್ಟ ಲೀಲೆಯಿಂದೋಲಗಂಗೊಟ್ಟಿರ್ದು ಪಾಲ್ಗಡಲ ಪರಿಲಸಿತಲಹರಿಕಾತಳ್ಪತಳದೊಳೊಪ್ಪದಿಂ ಕುಳ್ಳಿರ್ದುಕ್ಷೂಣಕ್ಷೀರಬಿಂದುಗಳ ವೃಂದದಿಂದೊಂದಿ ತಜ್ಜ ಳದೇವತಾಸಂಘಾತಸಮಾಶ್ರಿತೆಯಾದ ಶ್ರೀದೇವಿಯ ಶಂಕೆಯನಂ ಕುರಿಸುತ್ತುಮಿರ್ದಾಗಳ್

ಪರಮೋರುದೇಶತತಿಯಿಂ
ನಿರುಪಮಮಪ್ಪಗ್ರಹಾರಚಯದಿಂ ಚೆಲ್ವಂ
ಧರಿಸಿತ್ತಾ ದೇವಿಯ ಸಭೆ
ಭರದಿಂದಂ ಕಾಮದೇವಸಾಮ್ರಾಜ್ಯದ ವೊಲ್   ೬೮

ವ : ಆ ಸಮಯದೊಳಾ ಮಹಾಸೇನಮಹಾರಾಜಂ ರಾಜರಾಜಾಧಿ ರಾಜನಂತೆ ರಾಜದಭಿನವವಿಭವಸಮಭಿಯೋಜ್ಯಮಾನನಾಗಿ ಕರ್ಣಬಾಹಾಲಂಬಮಾನ ಚಮರೀಜ ಸಮಾಜಪೂಜ್ಯಮಾನವಾಜಿರರಾಜಿಸಮಾರೂಢಪ್ರೌಢರಾಜಕ ರಾಜನ್ಯ ಕಂಬೆರಸು ಕಾ ತೂಹಳಕಾರಿ ವಾಹ್ಯಾಳಿವಿನೋದಮಂ ತೀರ್ಚಿ ಮರಳಿ ತನ್ನರಮನೆಗೆ ಬಂದು ರಾಜಾಂಗಣದೊಳ್ ನಿಂದು ಕೂಡಿ ಬಂದರಸುಮಕ್ಕಳಂ ಕಳಿಪಿ ನಿಜತಾಂಬೂಲಿಕ ನೊರ್ವಂಗೂಡಿ ಕರುಮಾಡಮಂ ಪತ್ತೆಸಾರ್ದು ನಿಲ್ವುದುಂ ಮೇಗಣ ನೆಲೆಯುಪ್ಪರಿಗೆಯ ಕಳಕಳರವಮಂ ಕೇಳ್ದು ಪಟ್ಟಮಾದೇವಿಯೋಲಗಸಾಲೆಗಭಿಮುಖನಾಗಿ

ನರನಾಥಂ ಬಂದುಪೊಕ್ಕಂ ನಿಜಸತಿಯ ಸಭಾಗೇಹಮಂ ಪ್ರೀತಿಯಿಂದಂ
ವರಸಮ್ಯಕ್ತ್ವಪ್ರಭಾವಂ ಬಹಳತರಕಳಾವಾರ್ಧಿಸಂಪೂರ್ಣಚಂದ್ರಂ
ಧರಣೀಶೋಲ್ಲಾಲಿತಂ ಬಾಹುಬಲಿ ಸುಕವಿರಾಜಂ ಸುರತ್ನತ್ರಯಾಲಂ
ಕರಣಂ ಸ್ಯಾದ್ವಾದವಿದ್ಯಾಕಮಳಮಧುಕರಂ ಚಾತುರೀಜನ್ಮಗೇಹಂ            ೬೯

ಗದ್ಯ : ಇದು ಸಕಳಭುವನಜನ ವಿನೂಯಮಾನಾನೂನ ಮಹಿಮಾಮಾನನೀಯ ಪರಮ ಜಿನಸಮಯಕಮಳಿನೀಕಳಹಂಸಾಯಮಾನ ಶ್ರೀಮನ್ನಯಕೀರ್ತಿದೇವ ಪ್ರಸಾದ ಸಂಪಾದಪಾದನಿಧಾನದೀಪವರ್ತಿಯುಭಯಭಾಷಾಕವಿಚಕ್ರವರ್ತಿ ಬಾಹುಬಲಿ ಪಂಡಿತದೇವ ಪರಿನಿರ್ಮಿತಮಪ್ಪ ಧರ್ಮನಾಥ ಪುರಾಣದೊಳ್ ಮಹಾಸೇನ ಮಹಾರಾಜ ರಾಜ್ಯೋದಯ ವರ್ಣನಂ ದ್ವಿತೀಯಾಶ್ವಾಸಂ.