ಕನ್ನಡ ವಿಶ್ವವಿದ್ಯಾಲಯವು ಕರ್ನಾಟಕ ಸರಕಾರದ ಆರ್ಥಿಕ ನೆರವಿನಿಂದ ರೂಪಿಸಿ, ಪ್ರಕಟಿಸುತ್ತಿರುವ ಸಮಗ್ರ ಕನ್ನಡ ಸಾಹಿತ್ಯ ಜೈನಸಾಹಿತ್ಯ ಸಂಪುಟಗಳ ಯೋಜನೆಯು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಮಹತ್ವಪೂರ್ಣವಾದದ್ದು. ೨೦೦೬ ರ ಶ್ರವಣಬೆಳಗೊಳದ ಐತಿಹಾಸಿಕ ಗೊಮ್ಮಟ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯು ಈ ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳ ಯೋಜನೆಯನ್ನು ರೂಪಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತು. ಕರ್ನಾಟಕ ಸರ್ಕಾರವು ಈಗಾಗಲೇ ಸಮಗ್ರ ವಚನಸಾಹಿತ್ಯ ಮತ್ತು ದಾಸಸಾಹಿತ್ಯ ಸಂಪುಟಗಳನ್ನು ಹೊರತಂದಿದ್ದು, ಈಗ ಸಮಗ್ರ ಜೈನಸಾಹಿತ್ಯ ಸಂಪುಟಗಳ ಪ್ರಕಟಣೆಯ ಮೂಲಕ ಪ್ರಾಚೀನ ಕನ್ನಡ ಸಾಹಿತ್ಯದ ಬಹಳ ಮಹತ್ವದ ಶರೀರವೊಂದನ್ನು ಪೂರ್ಣಗೊಳಿಸುತ್ತಿದೆ. ಈ ಸಮಗ್ರ ಜೈನಸಾಹಿತ್ಯ ಸಂಪುಟದ ಯೋಜನೆಯನ್ನು ೨೦೦೬ ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಭಾಗವಾಗಿ ಕರ್ನಾಟಕ ಸರ್ಕಾರ ಅಂಗೀಕರಿಸಿ ಸಾರಸ್ವತ ಮಹಾಮಸ್ತಕಾಭಿಷೇಕ ಮಾಡಿದ ಪುಣ್ಯಕ್ಕೆ ಪಾತ್ರವಾಗಿದೆ. ಈ ಯೋಜನೆಯ ಮಹತ್ವವನ್ನು ಮನಗಂಡು ಉದಾರವಾದ ಆರ್ಥಿಕ ನೆರವು ನೀಡಿದ ಆಗಿನ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎನ್. ಧರ್ಮಸಿಂಗ್ ಅವರಿಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಎಂ. ಪಿ. ಪ್ರಕಾಶ್ ಅವರಿಗೂ ಸನ್ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್. ಡಿ. ರೇವಣ್ಣ ಅವರಿಗೂ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅಂದು ಚಾಲನೆಗೊಂಡ ಯೋಜನೆಗೆ ಮತ್ತೆ ಜೀವ ತುಂಬಿದ ಈಗಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ವಿಶೇಷ ವಂದನೆಗಳನ್ನು ಸಲ್ಲಿಸುತ್ತೇನೆ. ಈ ಪ್ರಸ್ತಾಪವನ್ನು ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ಪರಿಷತ್ತಿನ ಸದಸ್ಯರಾದ ಡಾ. ಎಂ. ಆರ್. ತಂಗಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಲ್. ಹನುಮಂತಯ್ಯ, ಶ್ರೀ ಹಸನಬ್ಬ ಅವರ ನೆರವನ್ನು ವಿಶೇಷವಾಗಿ ಸ್ಮರಿಸುತ್ತೇನೆ. ಕನ್ನಡದ ಹಿರಿಯ ಸಾಹಿತಿಗಳಾದ ಮತ್ತು ಜೈನಸಾಹಿತ್ಯದಲ್ಲಿ ವಿಶೇಷ ಪಾಂಡಿತ್ಯವುಳ್ಳ ಡಾ. ಹಂಪ. ನಾಗರಾಜಯ್ಯ ಮತ್ತು ಡಾ. ಕಮಲಾ ಹಂಪನಾ ಅವರು ಈ ಸಂಪುಟಗಳ ರೂಪರೇಷೆಯಿಂದ ತೊಡಗಿ ಕರ್ನಾಟಕ ಸರಕಾರಕ್ಕೆ ಇದರ ಮಹತ್ವವನ್ನು ಮನವರಿಕೆ ಮಾಡಿಕೊಡುವವರೆಗೆ ವಿಶೇಷವಾದ ಕಾಳಜಿ ವಹಿಸಿ ಸಹಕರಿಸಿದ್ದಾರೆ.

ಪ್ರಾಚೀನ ಕನ್ನಡ ಸಾಹಿತ್ಯ ಆರಂಭವಾಗುವುದೇ ಜೈನ ಸಾಹಿತ್ಯ ಕೃತಿಗಳ ಮೂಲಕ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಆದಿಪುರಾಣಗಳು ಕನ್ನಡ ಸಾಹಿತ್ಯದ ಮೊತ್ತಮೊದಲ ಮಹಾಕಾವ್ಯಗಳು. ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಕನ್ನಡದ ಮೊತ್ತಮೊದಲ ಉಪಲಬ್ಧ ಗದ್ಯ ಗ್ರಂಥ. ಸಂಸ್ಕೃತವೇ ಸಾಹಿತ್ಯನಿರ್ಮಾಣದ ಪ್ರಧಾನ ಭಾಷೆಯಾಗಿದ್ದ ಭಾರತ ದೇಶದಲ್ಲಿ ಕನ್ನಡದಂತಹ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯರಚನೆ ಮಾಡುವ ಮೂಲಕ ಜೈನಕವಿಗಳು, ಪ್ರಾದೇಶಿಕ ಸಾಹಿತ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು. ಆದಿಕವಿ ಪಂಪ ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ ಕವಿತ್ವಂ ಎಂದು ಹೇಳಿದ್ದಾನೆ. ಪಂಪಕವಿಯು ಆದಿಪುರಾಣದಲ್ಲಿ ಆದಿನಾಥನ ಭವಾವಳಿಗಳನ್ನು ಮತ್ತು ಆತನ ಮಕ್ಕಳಾದ ಭರತ ಬಾಹುಬಲಿಯರು ರಾಜ್ಯದ ಒಡೆತನಕ್ಕಾಗಿ ಪರಸ್ಪರ ಎದುರಾಳಿಗಳಾಗುವ ಸನ್ನೀವೇಶವನ್ನು ಚಿತ್ರಿಸಿದ್ದಾರೆ. ಅಣ್ಣ ತಮ್ಮಂದಿರ ನಡುವೆ ಮುಖಾಮುಖಿ ಯುದ್ಧದಲ್ಲಿ ಅಣ್ಣ ಭರತ ಸೋಲುತ್ತಾನೆ, ತಮ್ಮ ಬಾಹುಬಲಿ ಗೆಲ್ಲುತ್ತಾನೆ. ಆದರೆ ಈ ರೀತಿ ಗೆದ್ದ ಬಾಹುಬಲಿಯು ರಾಜ್ಯದ ಒಡೆತನವನ್ನು ನಿರಾಕರಿಸಿ ವೈರಾಗ್ಯಪರನಾಗಿ ಪ್ರತಿಮಾ ಯೋಗದಲ್ಲಿ ನಿಂತು ಗೊಮ್ಮಟನಾಗುತ್ತಾನೆ. ಅಂತಹ ವೈರಾಗ್ಯದ ಪ್ರತಿಮೆಯಾದ ಗೊಮ್ಮಟನ ಮಹಾಮಸ್ತಕಾಭಿಷೇಕದ ನೆನಪಿಗಾಗಿ ಕನ್ನಡ ಸಾಹಿತ್ಯದ ಗೊಮ್ಮಟ ಸದೃಶ ಜೈನಕೃತಿಗಳನ್ನು ಮತ್ತೆ ಹೊಸದಾಗಿ ಶುಭ್ರಗೊಳಿಸಿ ಸಾಹಿತ್ಯ ಮತ್ತು ಶಾಸ್ತ್ರದ ವಿಭಿನ್ನ ಅರ್ಚನೆಗಳ ಮೂಲಕ ಅವುಗಳಿಗೆ ಪ್ರಕಟಣೆಯ ಅಭಿಷೇಕವನ್ನು ಮಾಡಲಾಗಿದೆ.

ಆದಿಕವಿ ಪಂಪನು ತನ್ನ ವಿಕ್ರಮಾರ್ಜುನ ವಿಜಯದಲ್ಲಿ ಬೆಳಗುವೆನಿಲ್ಲಿ ಲೌಕಿಕಮಂ ಅಲ್ಲಿ ಜಿನಾಗಮಮಂ ಎಂದು ಹೇಳಿಕೊಂಡಿದ್ದಾನೆ. ಹೀಗಾಗಿ ಪ್ರಾಚೀನ ಕಾವ್ಯಗಳಲ್ಲಿ ಲೌಕಿಕ ಮತ್ತು ಆಗಮಿಕ ಎನ್ನುವ ಕಾವ್ಯ ಮತ್ತು ಪುರಾಣಗಳ ನಿರ್ಮಾಣದ ಒಂದು ಪರಂಪರೆ ಕಾಣಿಸಿಕೊಳ್ಳುತ್ತದೆ. ಪಂಪನಿಂದ ತೊಡಗಿ ಪೊನ್ನ ರನ್ನರಿಂದ ಮುಂದುವರಿದು ಮುಂದಿನ ಕವಿಗಳಲ್ಲಿ ಆಗಮಿಕ ಕಾವ್ಯಗಳಾದ ತೀರ್ಥಂಕರರ ಪುರಾಣ ಕೃತಿಗಳ ನಿರ್ಮಾಣ ಒಂದು ನೋಂಪಿಯಂತೆ ಕಾಣಸಿಗುತ್ತದೆ. ಇನ್ನೊಂದು ಕಡೆ ನಯಸೇನ, ಜನ್ನ, ಬ್ರಹ್ಮಶಿವ, ವೃತ್ತವಿಲಾಸರಂತಹ ಕವಿಗಳು ಲೌಕಿಕ ಕಥೆಗಳಿಗೆ ಜೈನ ಆವರಣವನ್ನು ನಿರ್ಮಾಣ ಮಾಡಿ ಲೌಕಿಕ – ಧಾರ್ಮಿಕಗಳನ್ನು ಒಂದುಗೂಡಿಸುವ ವಿಶಿಷ್ಟ ಕಲೆಗಾರಿಕೆಯನ್ನು ಮೆರೆಯುತ್ತಾರೆ. ಹೀಗೆ ೨೪ ತೀರ್ಥಂಕರರ ಪುರಾಣಕಾವ್ಯ ಒಂದು ಧಾರೆಯಾದರೆ ಚರಿತ್ರೆ ಲೌಕಿಕಕಥೆ ನೀತಿಕಥೆಗಳ ಮೂಲಕ ಸಮಕಾಲೀನ ಬದುಕಿಗೆ ಸ್ಪಂದಿಸಿದ ವೈವಿಧ್ಯಮಯ ಕಾವ್ಯಪರಂಪರೆ ಪ್ರಾಚೀನ ಜೈನಸಾಹಿತ್ಯದ ಇನ್ನೊಂದು ಮುಖ್ಯಧಾರೆಯಾಗಿದೆ. ಇದರೊಂದಿಗೆ ಗದ್ಯಸಾಹಿತ್ಯದ ದೃಷ್ಟಿಯಿಂದ ಶಿವಕೋಟ್ಯಾಚಾರ್ಯನ ವೊಡ್ಡಾರಾಧನೆ ಮತ್ತು ಚಾವುಂಡರಾಯನ ಚಾವುಂಡರಾಯ ಪುರಾಣ ಇನ್ನೊಂದು ಪರಂಪರೆಯನ್ನು ಕಟ್ಟಿಕೊಡುತ್ತದೆ. ಒಂದು ಕಡೆ ಜೈನಧರ್ಮದ ಚೌಕಟ್ಟಿನ ಒಳಗಡೆ ಕತೆಗಳು ಮಾಧ್ಯಮವಾಗಿ ಬಳಕೆಯಾದರೆ, ಇನ್ನೊಂದೆಡೆ ಜೈನ ಧರ್ಮದ ಮೇಲ್ಮೈಗಾಗಿ ಸಾಧನೆ ಮಾಡಿದ ಸಾಂಸ್ಕೃತಿಕ ವ್ಯಕ್ತಿಯ ಸುತ್ತ ಕಥನವೊಂದು ನಿರ್ಮಾಣವಾಗುತ್ತದೆ. ಇವುಗಳ ನಡುವೆ ಇಮ್ಮಡಿ ನಾಗವರ್ಮನಂತಹ ಶಾಸ್ತ್ರಕಾರನು ಭಾಷೆ ಮತ್ತು ಕಾವ್ಯಲಕ್ಷಣಕ್ಕೆ ಸಂಬಂಧಿಸಿದ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾನೆ. ಮಧ್ಯಯುಗೀನ ಕಾಲದಲ್ಲಿ ರತ್ನಾಕರವರ್ಣಿಯಂತಹ ಕವಿಯು ಸಾಂಗತ್ಯದಲ್ಲಿ ಭರತೇಶವೈಭವ ಕಾವ್ಯ ರಚಿಸಿ ಜೈನಕಾವ್ಯಗಳ ಆಶಯದ ಸಾಂಸ್ಕೃತಿಕ ಪಲ್ಲಟವನ್ನು ದಾಖಲಿಸುತ್ತಾನೆ. ೧೮೦೦ ರ ಕಾಲಕ್ಕೆ ಬರುವ ದೇವಚಂದ್ರನ ರಾಜಾವಳಿ ಕಥೆಯು ಆಧುನಿಕ ಕನ್ನಡ ಪೂರ್ವದ ಕಥಾರಚನೆಯ ಅರುಣೋದಯದ ಹೆಜ್ಜೆಯಾಗಿ ಮುಖ್ಯವಾದ ಕೃತಿಯಾಗಿದೆ.

ಒಂದು ಅಂದಾಜಿನ ಪ್ರಕಾರ ಸುಮಾರು ೪೫೦ ಜೈನಕವಿಗಳು ೫೨೦ ಕ್ಕೂ ಹೆಚ್ಚಿನ ಕನ್ನಡ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಸುಮಾರು ಅರ್ಧದಷ್ಟು ಕೃತಿಗಳು ಲಭ್ಯವೆಂದು ನಾವು ಭಾವಿಸಿದರೂ ಇವುಗಳ ಪ್ರಮಾಣ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಗಣನೀಯ ಎನ್ನಿಸುತ್ತದೆ. ಮಹಾಕಾವ್ಯದಿಂದ ತೊಡಗಿ ಮುಕ್ತಕದ ವರೆಗೆ, ಗಣಿತಶಾಸ್ತ್ರದಿಂದ ಹಿಡಿದು ಸೂಪಶಾಸ್ತ್ರದ ವರೆಗೆ, ಜನಪದ ಕಥೆಯಿಂದ ಆರಂಭಿಸಿ ವಿಡಂಬನ ಸಾಹಿತ್ಯದ ವರೆಗೆ ಕನ್ನಡ ಜೈನಸಾಹಿತ್ಯದ ಹರಹು ವ್ಯಾಪಿಸಿಕೊಂಡಿದೆ.

ಪಂಪಕವಿಯು ತನ್ನ ಕಾವ್ಯದಲ್ಲಿ ಮಾರ್ಗ ಮತ್ತು ದೇಸಿಗಳ ಕುರಿತು ಮಾತನಾಡುತ್ತಾನೆ. ಕನ್ನಡ ಜೈನಸಾಹಿತ್ಯದ ಬಗ್ಗೆ ಹೇಳುವಾಗ ಜೈನ ಪುರಾಣಗಳ ಪರಿಭಾಷೆ ಮತ್ತು ಪರಿಮಾಣಗಳು ಮಾರ್ಗವಾದರೆ, ಇತಿಹಾಸ, ಸಮಾಜ, ಲೌಕಿಕ ಪ್ರಪಂಚ ದೇಶಿಯಾಗುತ್ತದೆ. ಪಂಪನ ಕಾವ್ಯಗಳ ನಾಣ್ನುಡಿಯಿಂದ ತೊಡಗಿ, ವಡ್ಡಾರಾಧನೆ ಕತೆಗಳ ಗ್ರಾಮೀಣ ಬದುಕಿನಿಂದ ಮುಂದುವರಿದು, ನಯಸೇನನ ಧರ್ಮಾಮೃತದ ಕಥೆಗಳ ಮಾಲೋಪಮೆಗಳಿಂದ ಹಾದು ಬಂದು ರತ್ನಾಕರನ ಭರತೇಶ ವೈಭವದ ನುಡಿಗಟ್ಟುಗಳ ವರೆಗೆ ಕನ್ನಡದ ನಿಜವಾದ ದೇಸಿಯನ್ನು ಜೈನಸಾಹಿತ್ಯ ನಿರ್ಮಿಸಿಕೊಂಡಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಂಪೂಕಾವ್ಯ ಪ್ರಕಾರ ಜೈನರಿಂದ ಆರಂಭವಾಯಿತು. ಸಾಂಗತ್ಯಕಾವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಜೈನಕವಿಗಳು. ಗದ್ಯವನ್ನು ಮೊದಲು ಮಾಡಿದವರು ಜೈನ ಕಥೆಗಾರರು. ಕಾವ್ಯಶಾಸ್ತ್ರ, ಛಂದಸ್ಸು, ವ್ಯಾಕರಣ, ಸೂಪಶಾಸ್ತ್ರದಂತಹ ಶಾಸ್ತ್ರ ಪಾಂಡಿತ್ಯವನ್ನು ಕನ್ನಡದಲ್ಲಿ ಕಟ್ಟಿಕೊಟ್ಟವರು ಜೈನರು. ಹೀಗೆ ಕನ್ನಡದ ವಿದ್ವತ್ತು, ವಿವೇಕ ಮತ್ತು ವಿಸ್ಮಯ ಕನ್ನಡ ಸಾಹಿತ್ಯದಲ್ಲಿ ಜೈನ ಕವಿಗಳಿಂದ ಅಪೂರ್ವವಾಗಿ ನಿರ್ಮಾಣವಾಗಿದೆ ಮತ್ತು ಪ್ರಸಾರವಾಗಿದೆ.

ಈ ಹಿನ್ನೆಲೆಯಲ್ಲಿ ಸಮಗ್ರ ಕನ್ನಡ ಸಾಹಿತ್ಯ ಯೋಜನೆಯನ್ನು ನಿಗದಿತ ಕಾರ್ಯವಿಧಾನದ ಮೂಲಕ ರೂಪಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕೆಂದು ನಾವು ತೀರ್ಮಾನಿಸಿಕೊಂಡೆವು ಇದಕ್ಕಾಗಿ ಈ ಕ್ಷೇತ್ರದಲ್ಲಿ ನುರಿತ ನಾಡಿನ ಹಿರಿಯರನ್ನೊಳಗೊಂಡ ಉನ್ನತ ಸಲಹಾ ಸಮಿತಿ ಹಾಗೂ ಸಂಪನ್ಮೂಲ ವಿದ್ವಾಂಸರನ್ನು ಈ ಬೃಹತ್ ಯೋಜನೆಯ ವ್ಯಾಪ್ತಿಗೆ ಒಳಗೊಳ್ಳಲು ಬಯಸಲಾಯಿತು. ಅದರಂತೆ ನಾಡಿನ ಗಣ್ಯ ವಿದ್ವಾಂಸರು ಈ ಬೃಹತ್ ಯೋಜನೆಯಲ್ಲಿ ಪಾಲ್ಗೊಂಡರೆಂಬುದು ಕನ್ನಡ ವಿಶ್ವವಿದ್ಯಾಲಯಕ್ಕೆ ಹೆಮ್ಮೆಯ ಸಂಗತಿ.

ಸಮಗ್ರ ಕನ್ನಡ ಜೈನ ಸಾಹಿತ್ಯ ಸಂಪುಟದ ಯೋಜನೆಯ ಉನ್ನತ ಸಲಹಾ ಸಮಿತಿಯ ಸದಸ್ಯರಾದ ಡಾ. ದೇ. ಜವರೇಗೌಡ, ಡಾ. ಜಿ. ಎಸ್. ಶಿವರುದ್ರಪ್ಪ. ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ, ಡಾ. ಹಂಪ. ನಾಗರಾಜಯ್ಯ, ಡಾ. ಕಮಲಾ ಹಂಪನಾ, ಡಾ. ಚಂದ್ರಶೇಖರ ಕಂಬಾರ, ಡಾ. ಎಂ. ಎಂ. ಕಲಬುರ್ಗಿ, ಡಾ. ಎಚ್. ಜೆ. ಲಕ್ಕಪ್ಪಗೌಡ, ಡಾ. ಎಂ. ಜಿ. ಬಿರಾದಾರ ಮತ್ತು ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು, ಕರ್ನಾಟಕ ಸರ್ಕಾರದ ಕಂದಾಯ ಮತ್ತು ಮುಜರಾಯಿ ಇಲಾಖೆಯ ಕಾರ್ಯದರ್ಶಿಗಳು ತಮ್ಮ ಸೂಚನೆ ಸಲಹೆಗಳಿಂದ ಈ ಸಂಪುಟಗಳ ಸ್ವರೂಪ ಮತ್ತು ಅನುಷ್ಠಾನಗಳ ಎಲ್ಲಾ ಹಂತಗಳಲ್ಲಿಯೂ ಮಾರ್ಗದರ್ಶನ ಕೊಟ್ಟಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಸಮಿತಿಯ ಸಂಚಾಲಕರಾಗಿ ಇಡೀ ಯೋಜನೆಯ ಅನುಷ್ಠಾನದ ಕೆಲಸವನ್ನು ಹೆಜ್ಜೆ ಹೆಜ್ಜೆಗೂ ಸಮರ್ಥವಾಗಿ ನಿರ್ವಹಿಸಿದ್ದಾರೆ. ಕುಲಸಚಿವರಾದ ಪ್ರೊ. ಕರೀಗೌಡ ಬೀಚನಹಳ್ಳಿ ಅವರು ಯೋಜನೆಯ ಆಡಳಿತಾತ್ಮಕ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ನಮ್ಮ ವಿಶ್ವವಿದ್ಯಾಲಯದ ಜೈನಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಂ. ಉಷಾ ಅವರು ಈ ಯೋಜನೆಯನ್ನು ರೂಪಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದಾರೆ.

ವಿಶ್ವವಿದ್ಯಾಲಯವು ಈ ಯೋಜನೆಯನ್ನು ಕೈಗೆತ್ತಿಕೊಂಡಾಗ ಪ್ರಕಟಣ ಸ್ವರೂಪವನ್ನು ಸ್ಥೂಲವಾಗಿ ಹೀಗೆ ಗುರುತಿಸಿಕೊಳ್ಳಲಾಯಿತು. ಇದು ಡೆಮ್ಮಿ ೧/೮ ಆಕಾರದ ಸುಮಾರು ಇಪ್ಪತ್ತು ಸಂಪುಟಗಳಿಂದ ಕೂಡಿರಬೇಕು. ಪ್ರತಿ ಸಂಪುಟವೂ ಅಂದಾಜು ೬೦೦ ಪುಟಗಳಾಗಿರಬೇಕು. ಸಂಪುಟದ ಸಂಪಾದಕರು ಆಯಾ ಸಂಪುಟಕ್ಕೆ ಸೂಕ್ತವಾದ ಕವಿ ಕಾವ್ಯ ಪರಿಚಯ, ಚಾರಿತ್ರಿಕ ಹಾಗೂ ಸಾಹಿತ್ಯಿಕ ಮಹತ್ವ ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಸ್ತಾವನೆ ಬರೆಯಬೇಕೆಂದು ನಿರ್ಣಯಿಸಲಾಯಿತು. ಸಂಪುಟಗಳು ಜನಪ್ರಿಯ ಆವೃತ್ತಿ ಆಗಿರುವುದರಿಂದ ಪಠ್ಯಗಳಲ್ಲಿ ಪಾಠಾಂತರಗಳಲ್ಲಿ ನೀಡಬೇಕಾಗಿಲ್ಲ. ಪ್ರತಿಯೊಬ್ಬ ಕವಿಯ ಸಮಗ್ರ ಕಾವ್ಯವನ್ನು ಒಂದು ಸಂಪುಟದಲ್ಲಿ ತರುವುದೆಂದು ಸಮಿತಿ ತೀರ್ಮಾನಿಸಿತು. ವಸ್ತು ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ಎರಡೆರಡು ಕಾವ್ಯಗಳನ್ನು ಒಂದೇ ಸಂಪುಟದಲ್ಲಿ ಅಳವಡಿಸುವುದು ಸೂಕ್ತವೆಂದು ತೀರ್ಮಾನ ತೆಗೆದುಕೊಳ್ಳಲಾಯಿತು. ಈಗಾಗಲೇ ಸಂಪಾದನೆಗೊಂಡು, ಪ್ರಕಟವಾಗಿರುವ ಕಾವ್ಯಗಳನ್ನು ಮೊದಲ ಹಂತದಲ್ಲಿ ತೆಗೆದುಕೊಳ್ಳವುದೆಂದೂ ಅಪೂರ್ವ ಕೃತಿಗಳನ್ನು ಈ ಮಾಲೆಯಲ್ಲಿ ಸೇರಿಸಿಕೊಳ್ಳವುದೆಂದೂ ನಿಶ್ಚಯಿಸಲಾಯಿತು. ಪಂಪ, ಪೊನ್ನ, ರನ್ನ, ಜನ್ನ, ನಾಗವರ್ಮ, ನಯಸೇನ, ಸಾಳ್ವ ಮುಂತಾದವರ ಕಾವ್ಯಗಳು ಈಗಾಗಲೇ ಮುದ್ರಣಗೊಂಡಿವೆ. ಆದರೂ ಪಾಠಕ್ಲೇಶ ಅರ್ಥಕ್ಲೇಶಗಳು ಹೇಗೋ ಉಳಿದುಬಿಟ್ಟಿವೆ. ಆದುದರಿಂದ ಎಲ್ಲ ಮುದ್ರಿತ ಪಾಠಗಳನ್ನು ಗಮನಿಸಿ ಈ ಎಲ್ಲ ಕ್ಲೇಶಗಳನ್ನು ನಿವಾರಿಸಿ ಸರ್ವಪ್ರತಿಪಾಠಗಳನ್ನು ಇಟ್ಟುಕೊಳ್ಳುವುದು ಅಗತ್ಯವೆಂದು ಸಮಿತಿ ಭಾವಿಸಿತು. ಗ್ರಂಥದ ಕೊನೆಗೆ ಶಬ್ಧಾರ್ಥಕೋಶ, ಪಾರಿಭಾಷಿಕಕೋಶ, ಸಹಾಯಕ ಸಾಹಿತ್ಯ ನೀಡುವುದು ಅಗತ್ಯವೆಂದು ಸಂಪಾದಕರಿಗೆ ಬಿನ್ನವಿಸಿಕೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಇಪ್ಪತ್ತು ಸಂಪುಟಗಳು ನಿಮ್ಮ ಎದುರಿಗಿವೆ. ಶ್ರಮಸಾಧ್ಯವಾದ ಇಂಥ ಕಾವ್ಯಗಳನ್ನು ಸಂಪಾದಿಸಿಕೊಟ್ಟ ಕನ್ನಡದ ಹಿರಿಯ ವಿದ್ವಾಂಸರಾದ ಎಲ್ಲ ಸಂಪಾದಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಈಗ ನಮಗೆ ಸಾಧ್ಯವಾಗಿದೆ.

ಬಾಹುಬಲಿ ಪಂಡಿತನ ‘ಧರ್ಮನಾಥ ಪುರಾಣ’ ಮತ್ತು ಮಧುರ ಕವಿಯ ‘ಧರ್ಮನಾಥ ಪುರಾಣ’ ಕಾವ್ಯಗಳನ್ನು ಕನ್ನಡದ ಹಿರಿಯ ವಿದ್ವಾಂಸರಾದ ಪ್ರೊ. ಎನ್. ಬಸವಾರಾಧ್ಯರವರು ಸಮರ್ಪಕವಾಗಿ ಪರಿಶ್ರಮಪೂರ್ವಕ ಸಂಪಾದನೆ ಮಾಡಿಕೊಟ್ಟಿದ್ದಾರೆ. ಬಾಹುಬಲಿ ಪಂಡಿತ ಮತ್ತು ಮಧುರ ಕವಿ ಇಬ್ಬರೂ ೧೪ನೇ ಶತಮಾನದಲ್ಲಿ ಇದ್ದ ಜೈನ ಕವಿಗಳು. ಬಾಹುಬಲಿ ಪಂಡಿತನು (೧೩೫೨) ೧೪ನೆಯ ತೀರ್ಥಂಕರನಾದ ಧರ್ಮನಾಥನ ಚರಿತೆಯನ್ನು ಪುರಾಣ ಕಾವ್ಯವನ್ನಾಗಿ ರಚಿಸಿದ್ದಾನೆ. ಹದಿನಾರು ಆಶ್ವಾಸಗಳುಳ್ಳ ದೀರ್ಘ ಚಂಪೂ ಕಾವ್ಯವು ಜೈನಪುರಾಣ ಕಾವ್ಯವೊಂದನ್ನು ಸಮಗ್ರವಾಗಿ ಕಟ್ಟಿಕೊಡುವ ರಚನೆಯಾಗಿದೆ. ಪ್ರಾಚೀನ ಮಹಾಕಾವ್ಯಗಳ ಅಷ್ಟಾದಶ ವರ್ಣನೆಗಳನ್ನು ಸಮಗ್ರವಾಗಿ ಒಳಗೊಂಡು ಜೈನಪುರಾಣಕಾವ್ಯದ ಎಲ್ಲ ಅವಯವಗಳನ್ನು ಸೇರಿಸಿಕೊಂಡು ಈ ಕಾವ್ಯವನ್ನು ರಚಿಸಲಾಗಿದೆ. ಪಂಪನು ‘ವಿಕ್ರಮಾರ್ಜುನ ವಿಜಯ’ ಮತ್ತು ‘ಆದಿ ಪುರಾಣ’ ಕಾವ್ಯಗಳನ್ನು ಅನುಕ್ರಮವಾಗಿ ಲೌಕಿಕ ಮತ್ತು ಆಗಮಿಕ ಕಾವ್ಯಗಳು ಎಂದು ಕರೆದುಕೊಂಡರೆ, ಬಾಹುಬಲಿ ಪಂಡಿತನು ತನ್ನ ‘ಧರ್ಮನಾಥ ಪುರಾಣ’ ದಲ್ಲಿ ಲೌಕಿಕ ಮತ್ತು ಆಗಮಿಕ ಕಾವ್ಯಗಳ ಲಕ್ಷಣಗಳನ್ನು ಒಂದೇ ಕಡೆ ಸೇರಿಸಿ ಪುರಾಣ ಕಾವ್ಯವೊಂದನ್ನು ನಿರ್ಮಿಸಿದ್ದಾನೆ. ಆದ್ದರಿಂದಲೇ ಆತನ ಕಾವ್ಯದ ವರ್ಣನೆಗಳಲ್ಲಿ ಪಂಪಭಾರತದ ಯುದ್ಧದ ಚಿತ್ರಗಳೂ ಇವೆ, ಆದಿಪುರಾಣದ ಜೈನ ಧಾರ್ಮಿಕ ವಿವರಗಳೂ ಇವೆ. ಒಂದು ಅರ್ಥದಲ್ಲಿ ಲೌಕಿಕ – ಆಗಮಿಕಗಳ ಸಮನ್ವಯವನ್ನು ತೀರ್ಥಂಕರ ಪುರಾಣಗಳ ಮಾದರಿಯನ್ನು ಸಾಧಿಸಿದವನು ಬಾಹುಬಲಿ ಪಂಡಿತನೆ. ಸಂಸ್ಕೃತದಲ್ಲಿ ‘ಗುಮ್ಮಟನಾಥ ಚರಿತೆ’ಯನ್ನು ಬರೆದಿರುವ ಬಾಹುಬಲಿ ಪಂಡಿತನು ಉಭಯಭಾಷಾ ಕವಿ ಚಕ್ರವರ್ತಿಯಾಗಿದ್ದು ಕನ್ನಡ ಮತ್ತು ಸಂಸ್ಕೃತದಲ್ಲಿ ಸಮಾನ ಪ್ರಭುತ್ವವನ್ನು ಹೊಂದಿದ್ದನು.

೧೪ನೇ ಶತಮಾನದಲ್ಲಿ ಬಾಹುಬಲಿ ಪಂಡಿತನ ಬಳಿಕ ಬಂದ ಮಧುರ ಕವಿಯೂ ಕೂಡ ‘ಧರ್ಮನಾಥ ಪುರಾಣಂ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದಾನೆ. ಇವನು ‘ಗುಮ್ಮಟ ಸ್ತುತಿ’ ಚಂಪೂ ಕಾವ್ಯಗಳನ್ನು ರಚಿಸಿರುವುದು ಕುತೂಹಲಕಾರಿಯಾದುದು. ಮಧುರ ಕವಿಯ ‘ಧರ್ಮನಾಥ ಪುರಾಣಂ’ ಸಂಪೂರ್ಣವಾಗಿ ದೊರೆತಿಲ್ಲ. ಈ ಕಾವ್ಯ ಸಂಪೂರ್ಣವಾಗಿ ರಚನೆಯಾಗದೆ ಇರುವ ಸಂಭವ ಕೂಡಾ ಇದೆ. ‘ಧರ್ಮನಾಥ ಪುರಾಣ’ ಚಂಪೂ ಕಾವ್ಯದಲ್ಲಿ ಕಾವ್ಯ ಮತ್ತು ಕವಿಗಳ ಕುರಿತು ಮಧುರ ಕವಿಯು ಮಾಡುವ ಟೀಕೆ, ನಿಂದೆ ಮತ್ತು ವಿಮರ್ಶೆ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಪ್ರಾಚೀನ ಮಹಾಕಾವ್ಯಗಳ ಅಷ್ಟಾದಶ ವರ್ಣನೆಗಳಿಗೆ ಬಹಳವಾಗಿ ಮಾರುಹೋಗಿರುವ ಮಧುರಕವಿಯು ಹೇಳುವ ಈ ಪದ್ಯ ಜನಪದ ಕವಿಗಳ ನಿಂದೆ ಎಂದು ಟೀಕೆಗೆ ಒಳಗಾಗಿದೆ :

ಪಂಡಿತರುಂ ವಿವಿಧಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೊರವರ
ಡುಂಡುಚಿಯೆ ಬೀದಿವರಿಯ ಬೀರನ ಕಥೆಯೇ    [೧.೫೭]

ಪಂಡಿತ ಕವಿ ಎಂಬ ಹೆಸರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯ ಹದಿನಾಲ್ಕನೇ ಶತಮಾನದಲ್ಲಿ, ದೇಸಿ ಪರಂಪರೆಗೆ ಪ್ರತಿಯಾಗಿ ಮತ್ತು ಪ್ರತಿಕ್ರಿಯೆಯಾಗಿ ಶಿಥಿಲಗೊಳ್ಳುತ್ತಿದ್ದ ಪಂಡಿತ ಪರಂಪರೆಯನ್ನು ಉಳಿಸಿಕೊಳ್ಳುವ ಮತ್ತು ಕಟ್ಟುವ ಪ್ರಯತ್ನವನ್ನು ಮಧುರ ಕವಿ ಮಾಡುತ್ತಾನೆ. ನಯಸೇನ ಕವಿಗೆ ಪ್ರತಿಯಾಗಿ ಮಧುರ ಕವಿಯನ್ನು ಜೈನ ಪರಂಪರೆಯಲ್ಲಿ ಗುರುತಿಸುವ ಅಗತ್ಯವಿದೆ. ಮಧುರ ಕವಿಯ ಹಂಪೆಯ ಶಾಸನವು ಪ್ರೌಢದೇವರಾಯನ ಮಂತ್ರಿ ಲಕ್ಷ್ಮೀಧರನ ಜನಪರ ಕಾರ್ಯಗಳನ್ನು ಬಿಂಬಿಸುವ ರಚನೆಯ ಶಾಸನವಾದರೂ ಇದು ಚಂಪೂಕಾವ್ಯದ ಮಾದರಿಯಲ್ಲಿ ಇದೆ. ತಾಯಿ ಹೇಳಿದ ‘ಕೆರೆಯಂ ಕಟ್ಟಿಸು ಬಾವಿಯಂ ಸವೆಸು’ ಎನ್ನುವ ಮಾತಿಗೆ ಅನುಗುಣವಾಗಿ ಜನಹಿತ ಕಾರ್ಯಗಳನ್ನು ಮಾಡಿದ ಲಕ್ಷ್ಮೀಧರ ಅಮಾತ್ಯನ ವರ್ಣನೆಯನ್ನು ಮಾಡುವ ಈ ಶಾಸನವು ಕನ್ನಡದಲ್ಲಿ ವಿಶಿಷ್ಟವಾಗಿದೆ. ಹೀಗಾಗಿ ಮಧುರನದ್ದು ದೇಸಿಯ ಮನಸ್ಸು, ಮಾರ್ಗದ ಅಭಿವ್ಯಕ್ತಿಯಾಗಿದೆ.

ಪ್ರೊ. ಎನ್. ಬಸವಾರಾಧ್ಯರು ಕನ್ನಡದ ಹಿರಿಯ ವಿದ್ವಾಂಸರಾಗಿ ಶಾಸ್ತ್ರಕಾರರಾಗಿ ಕನ್ನಡಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಾಚೀನ ಕನ್ನಡ ಕಾವ್ಯಗಳ ಸಂಪಾದನೆಯನ್ನು ಪರಿಶ್ರಮ ಮತ್ತು ಪ್ರೀತಿಯಿಂದ ನಡೆಸುತ್ತಾ ಬಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪ್ರಾಚೀನ ಕನ್ನಡ ಕಾವ್ಯಗಳ ಪ್ರಕಟಣೆಗೆ ಕಾರಣರಾಗಿದ್ದಾರೆ. ಈ ತುಂಬು ವಯಸ್ಸಿನಲ್ಲಿಯೂ ಕನ್ನಡ ಪರವಾದ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಮಹತ್ವದ ಕೃತಿಗಳು : ಹರಿಶ್ಚಂದ್ರ ಕಾವ್ಯ, ಆರಾಧ್ಯ ಚಾರಿತ್ರ, ಚತುರಾಚಾರ್ಯ ಚಾರಿತ್ರ, ಧರ್ಮನಾಥ ಪುರಾಣದಂತಹ ಅನೇಕ ಗ್ರಂಥಗಳ ಸಂಪಾದನೆ. ಹಳಗನ್ನಡ ನಿಘಂಟುವಿನಂತಹ ಅನೇಕ ವಿದ್ವತ್ ಗ್ರಂಥಗಳನ್ನು ರಚಿಸಿದ್ದಾರೆ. ಬಾಹುಬಲಿ ಪಂಡಿತನ ‘ಧರ್ಮನಾಥ ಪುರಾಣ’ ಮಧುರ ಕವಿಯ ‘ಧರ್ಮನಾಥ ಪುರಾಣ’ ಕಾವ್ಯಗಳನ್ನು ತಂಬಾ ಪರಿಶ್ರಮ ಮತ್ತು ಆಸಕ್ತಿಯಿಂದ ಸಮರ್ಪಕವಾಗಿ ಸಂಪಾದಿಸಿಕೊಟ್ಟು ಸಹಕರಿಸಿದ್ದಾರೆ. ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಆಭಾರಿಯಾಗಿದ್ದೇನೆ.

ಬಿ. ಎ. ವಿವೇಕ ರೈ
ಕುಲಪತಿ