ನಾಲ್ಕು ನೂರು ವರ್ಷಗಳ ಹಿಂದೆ ಗೆಲಿಲಿಯೊ ತನ್ನ ಪುಟ್ಟ ದೂರದರ್ಶಕವನ್ನು ಆಕಾಶದತ್ತ ತಿರುಗಿಸಿ ಚಂದ್ರ, ಗುರು, ಶನಿ, ಮೊದಲಾದ ಆಕಾಶಕಾಯಗಳ ನಿಕಟ ಪರಿಚಯ ಮಾಡಿಸಿದ.  ಅಂದಿನಿಂದ ಇಂದಿನವರೆಗೆ ದೂರದರ್ಶಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಮುಂದುವರಿಕೆಯಾಗಿದೆ.  ದೂರದರ್ಶಕಗಳ ಗಾತ್ರ, ಸಾಮರ್ಥ್ಯ, ಉಪಯುಕ್ತತೆಗಳಲ್ಲಿ ಸಾಕಷ್ಟು ಪ್ರಗತಿ ಕಾಣಬಹುದು.  ಕೃತಕ ಉಪಗ್ರಹಗಳ ಸಾಧನೆಯ ನಂತರ ಈ ಕ್ಷೇತ್ರಕ್ಕೆ ಮತ್ತಷ್ಟು ಪುಷ್ಟಿದೊರಕಿದೆ.

ಭೂಸ್ಥಿತ ದೂರದರ್ಶಕಗಳು ಎಷ್ಟೇ ದೊಡ್ಡದಾದರೂ ಅವುಗಳು ಗ್ರಹಿಸುವ ಬೆಳಕು ವಾತಾವರಣದ ಮೂಲಕ ಹಾಯ್ದು ಬರುವಾಗ ಸ್ವಲ್ಪಮಟ್ಟಿಗೆ ಕ್ಷೀಣಿಸುತ್ತದೆ.  ಗಾಳಿಯಲ್ಲಿನ ಧೂಳು, ತೇವಾಂಶ ಹಾಗೂ ಇತರ ಅನಿಲಗಳು ಬೆಳಕಿನ ತೀವ್ರತೆಯನ್ನು ಸ್ವಲ್ಪವಾದರೂ ಕಡಿಮೆ ಮಾಡುತ್ತವೆ. ಈ ನ್ಯೂನತೆಯನ್ನು ನಿವಾರಿಸಲು ವಿಜ್ಞಾನಿಗಳು ದೂರದರ್ಶಕವನ್ನು ಬಾಹ್ಯಾಕಾಶದಲ್ಲಿ, ಭೂಮಿಯನ್ನು ಸುತ್ತುವ ಕಕ್ಷೆಯಲ್ಲಿರಿಸಿ, ಇಲ್ಲಿಂದಲೇ ಅದನ್ನು ನಿಯಂತ್ರಿಸಿ, ಅದು ಅಪೇಕ್ಷಿತ ಆಕಾಶ ಪ್ರದೇಶದ ವೀಕ್ಷಣೆ ಮಾಡಿ, ಮಾಹಿತಿಯನ್ನು ಭೂಕೇಂದ್ರಕ್ಕೆ ಕಳಿಸುವ ವ್ಯವಸ್ಥೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇವೇ ಬಾಹ್ಯಾಕಾಶ ದೂರದರ್ಶಕಗಳು. ಅವುಗಳಲ್ಲಿ ಕೆಲವು ದೂರದರ್ಶಕಗಳ ಕಿರುಪರಿಚಯ ಇಲ್ಲಿದೆ.

ಹಬಲ್ ದೂರದರ್ಶಕ


ಅಮೆರಿಕ (ಯುಎಸ್‌ಎ)ದೇಶವು ಬಾಹ್ಯಾಕಾಶದಲ್ಲಿ ಸ್ಥಿತಗೊಳಿಸಿದ ದೂರದರ್ಶಕಗಳ ಒಂದು ಸರಣಿಯನ್ನು ಕೈಗೊಂಡಿತು. ಈ ಸರಣಿಯ ಮೊದಲ ಯತ್ನವೇ ಹಬಲ್ ದೂರದರ್ಶಕ.  ಇದರಲ್ಲಿನ ಪ್ರತಿಫಲನ ದರ್ಪಣ 2.4ಮೀ. ವ್ಯಾಸದ ಕ್ಯಾಸೆಗ್ರೇನ್ ನಿಮ್ನದರ್ಪಣ. ಈ ದೂರದರ್ಶಕ ಮತ್ತು ಅದರ ಸಂಗಡ ಇರುವ ಉಪಕರಣಗಳ ಒಟ್ಟು ತೂಕ 11ಟನ್‌ಗಳಷ್ಟು.  ಭೂಮಿಯಿಂದ 559ಕಿ.ಮೀ. ದೂರದ ಕಕ್ಷೆಯಲ್ಲಿ 97ನಿಮಿಷಗಳಿಗೊಮ್ಮೆ ಇದು ಪರಿಭ್ರಮಿಸುತ್ತಿದೆ. ಸೆಕೆಂಡಿಗೆ 8ಕಿ.ಮೀ. ವೇಗ ಅದರದ್ದು. ವಿಶ್ವದ ವಿಕಾಸಕ್ಕೆ ಕಾರಣವೆನ್ನಲಾದ ಒಂದು ನಿಗೂಢ ಕಾಳಶಕ್ತಿಯ (dark energy) ಆವಿಷ್ಕಾರದಲ್ಲಿ ಮಹತ್ವದ ಪಾತ್ರವಹಿಸಿತು. ಇದರಲ್ಲಿ ಹಲವು ಅತ್ಯಾಧುನಿಕ ಉಪಕರಣಗಳಿದ್ದು, ಪ್ರತಿಯೊಂದೂ ನಿಗದಿತ ವೀಕ್ಷಣಾ ಕಾರ್ಯವನ್ನು ನಿರ್ವಹಿಸುತ್ತವೆ. ವಿಶಾಲ ಕ್ಷೇತ್ರ ಕ್ಯಾಮೆರಾ ಮೂರು ಬಗೆಯ ವಿಕಿರಣಗಳನ್ನು -ನೇರಳಾತೀತ, ದೃಗ್ಗೋಚರ, ಅವಕೆಂಪು -ಗುರ್ತಿಸಬಲ್ಲದು ಹಾಗೂ ಗ್ರಹಿಸಬಲ್ಲದು; ‘ಕಾಸ್ಮಿಕ್ ಆರಿಜಿನ್ಸ್ ಸ್ಪೆಕ್ಟೋಗ್ರಾಫ್’ಎಂಬುದು ವಿಶ್ವಕಿರಣಗಳ ಮೂಲವನ್ನು ಗುರುತಿಸಿ, ದಾಖಲಿಸಬಲ್ಲುದು; ದೃಗ್ಗೋಚರ ಬೆಳಕನ್ನು ಗುರುತಿಸಿ ವಿಶ್ಲೇಷಿಸುವ ಸಲುವಾಗಿ ಇರುವುದು ಸರ್ವೇಕ್ಷಣ ಕ್ಯಾಮೆರಾ (Advanced Camera for Surveys); ಅತಿನೇರಳೆ, ದೃಗ್ಗೋಚರ, ಅವಕೆಂಪು ವಿಕಿರಣಗಳನ್ನು ರೋಹಿತ ಲೇಖಿಯಲ್ಲಿ ಗ್ರಹಿಸಿ, ಪ್ರತಿಬಿಂಬ ರಚಿಸುವ ದೂರದರ್ಶಕ; ಅತಿಸೂಕ್ಷ್ಮ ಮಾರ್ಗದರ್ಶಿ ಸಂವೇದಿಗಳು -ಮುಂತಾದವುಗಳ ಸಮೂಹವೇ ಇದರಲ್ಲಿ ಇವೆ.

ಈ ದೂರದರ್ಶಕವು 2004ರಲ್ಲಿ ಒಮ್ಮೆ ಮತ್ತು 2007ರಲ್ಲಿ ಮತ್ತೊಮ್ಮೆ ಕಾರಣಾಂತರಗಳಿಂದ ಕಾರ್ಯ ನಿಲ್ಲಿಸಿಬಿಟ್ಟಿತು. ಆಗ ವಿಜ್ಞಾನಿ ಗಗನ ಯಾತ್ರಿಗಳು ಆಕಾಶ ಲಾಳಿಯ ಮೂಲಕ ಅದರ ಬಳಿ ಹೋಗಿ, ದುರಸ್ತಿ ಮಾಡಿ ಹಿಂತಿರುಗಿದರು. ಇತ್ತೀಚೆಗೆ, ಮೇ 2009ರಲ್ಲಿಯೂ ಒಂದು ಬಾರಿ ದುರಸ್ತಿ ನಡೆದಿತ್ತು.

ಈ ದೂರದರ್ಶಕದಿಂದ ಪ್ರಾಪ್ತವಾಗಿರುವ ಮಾಹಿತಿಗಳನ್ನು ಬಳಸಿ ವಿಶ್ವದ ಉಗಮವಾಗಿ 13 – 14ಬಿಲಿಯನ್ ವರ್ಷಗಳಾಗಿವೆಯೆಂದು ನಿರ್ಧರಿಸಲಾಗಿದೆ.

ಚಂದ್ರ X-ರೇ ದೂರದರ್ಶಕ


ಆಕಾಶಲಾಳಿ ‘ಕೊಲಂಬಿಯ’ನೆರವಿನಿಂದ 23.7.1999ರಲ್ಲಿ ಉಡಾವಣೆಯಾದ ದೂರದರ್ಶಕ.  ಭೂಮಿಯಿಂದ 586ಕಿ.ಮೀ. ದೂರದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಇದರ ತೂಕ 4.79ಕಿ.ಗ್ರಾಂ ಹಾಗೂ ದರ್ಪಣದ ವ್ಯಾಸ 1.2ಮೀ. 1976ರಿಂದ ಅಮೆರಿಕ ಖಗೋಲ ವಿಜ್ಞಾನಿಗಳು ‘ಅಡ್ವಾನ್‌ಸ್ಡ್ X-ರೇ ಅಸ್ಟ್ರೊಫಿಸಿಕ್ಸ್ ಫೆಸಿಲಿಟಿ’ (AXAF)ರೂಪಿಸುತ್ತಿದ್ದು, ಅದು 1990ರ ವೇಳೆಗೆ ಪೂರ್ಣವಾಗಲಿತ್ತು. ಆದರೆ ಉಪಕರಣಗಳ ವಿನ್ಯಾಸ, ತೂಕ ಇತ್ಯಾದಿಗಳನ್ನು ಮಾರ್ಪಾಡು ಮಾಡಿದ್ದೇ ಅಲ್ಲದೇ AXAFನ ಹೆಸರನ್ನೂ ಸಹ ‘ಚಂದ್ರ X-ರೇ ದೂರದರ್ಶಕ’ಎಂದು ಬದಲಿಸಲಾಯಿತು.  ಭಾರತ ಸಂಜಾತ, ನೊಬೆಲ್ ಪಾರಿತೋಷಕ ವಿಜೇತ ಖಭೌತ ವಿಜ್ಞಾನಿ ಡಾ. ಎಸ್. ಸುಬ್ರಹ್ಮಣ್ಯನ್ ಚಂದ್ರಶೇಖರ್‌ರವರ ಗೌರವಾರ್ಥವಾಗಿ, ಅವರ ಹೆಸರನ್ನು ಇದಕ್ಕೆ ಇಡಲಾಯಿತು.  ಬಾಹ್ಯಾಕಾಶದಲ್ಲಿ ಪ್ರಸರಿತವಾಗುವ ಎಕ್ಸ್-ರೇಗಳ ಅಧ್ಯಯನ ಇದರ ಪ್ರಮುಖ ಕಾರ್ಯ.

ಡಿಸೆಂಬರ್ 1999ರಲ್ಲಿ ಯೂರೊಪಿನ ಬಹುದರ್ಪಣ X-ಕಿರಣ ದೂರದರ್ಶಕವೂ ಚಂದ್ರ ದೂರದರ್ಶನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ.

ಕಾಂಪ್ಟನ್ ಗಾಮಾ ಕಿರಣ ವೀಕ್ಷಣಾಲಯ


ನಾಸಾದವರು (NASA) ವ್ಯವಸ್ಥೆಗೊಳಿಸಿದ್ದ ನಾಲ್ಕು ಬಾಹ್ಯಾಕಾರ ವೀಕ್ಷಣ ಕೇಂದ್ರಗಳಲ್ಲಿ ಎರಡನೆಯದು. ಇದನ್ನು 5.4.1991ರಲ್ಲಿ ಅಟ್ಲಾಂಟಿಸ್ ಆಕಾಶಲಾಳಿಯ ನೆರವಿನಿಂದ ಕಕ್ಷೆಗೆ ರವಾನಿಸಲಾಗಿದ್ದಿತು. ಇದರ ತೂಕ 17ಟನ್‌ಗಳು. ಇದರಲ್ಲಿನ ನಾಲ್ಕು ಉಪಕರಣಗಳು ವಿದ್ಯುತ್ಕಾಂತೀಯ ರೋಹಿತಗಳನ್ನು – 30 kev ನಿಂದ 30 Gevವರೆಗೆ ಗ್ರಹಿಸಿ, ವಿಶ್ಲೇಷಿಸುವ ಸಾಮರ್ಥ್ಯ ಹೊಂದಿದ್ದುವು. 4.6.2000ದಂದು ಇದನ್ನು ಭೂಮಿಗೆ ಮರುಪ್ರವೇಶ ಮಾಡಿಸಲಾಯಿತು. ನೊಬೆಲ್ ಪಾರಿತೋಷಕ ವಿಜೇತ ಡಾ. ಆರ್ಥರ್ ಹೇಲಿ ಕಾಂಪ್ಟನ್ ಅವರ ಗೌರವಾರ್ಥ ಈ ಹೆಸರು.

ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕ


ನಾಸಾದವರ (NASA)ಸರಣಿಯ ಅಂತಿಮ ಬಾಹ್ಯಾಕಾಶ ದೂರದರ್ಶಕ. ಇದಕ್ಕೆ ಮೊದಲು ಸ್ಪೇಸ್ ಇನ್‌ಫ್ರಾರೆಡ್ ಟೆಲಿಸ್ಕೋಪ್ ಫೆಸಿಲಿಟಿ (SIRTF)ಎಂದು ಇದರ ಹೆಸರಾಗಿದ್ದಿತ್ತು.  950ಕಿ.ಗ್ರಾಂ ತೂಕದ ಇದನ್ನು 25.8.2003ರಂದು ಡೆಲ್ಟಾರಾಕೆಟ್ ಬಳಸಿ ಕೇಪ್ ಕೆನವರಾಲ್ (ಫ್ಲಾರಿಡಾ)ದಿಂದ ಉಡಾಯಿಸಲಾಯಿತು. ಇದು ಸೌರಕೇಂದ್ರ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ.  ಅವಧಿ 1ವರ್ಷ. ಇದರಲ್ಲಿ 0.85ಮೀ. ವ್ಯಾಸದ ದರ್ಪಣವಿದೆ. ಇದರ ಜೀವಿತಾವಧಿ 2.5ರಿಂದ 5ವರ್ಷ ಎಂದು ಲೆಕ್ಕ ಹಾಕಲಾಗಿತ್ತು. ಕಾರಣ ಇದರಲ್ಲಿ ಬಳಕೆಗಾಗಿ ತುಂಬಿಟ್ಟಿದ್ದ ಹೀಲಿಯಂ ದಾಸ್ತಾನು ಮುಗಿದುಹೋಗಬೇಕಿತ್ತು. ಆದರೆ ಆಶ್ಚರ್ಯಕರವೆಂಬಂತೆ ಇದು ಈಗಲೂ ಶ್ರೇಷ್ಠಮಟ್ಟದ ಬಾಹ್ಯಾಕಾಶ ಚಿತ್ರಗಳನ್ನು ಕಳಿಸುತ್ತಿದೆ. ಈ ದೂರದರ್ಶಕದ ಮುಖ್ಯ ಕೆಲಸ ಬಾಹ್ಯಾಕಾಶದಿಂದ ಬರುವ ಅವಕೆಂಪು ವಿಕಿರಣವನ್ನು ಸಂಗ್ರಹಿಸುವುದು. ಈ ಕೆಲಸಕ್ಕಾಗಿ ಇದರಲ್ಲಿ ಅವಕೆಂಪು ಕ್ಯಾಮೆರಾ, ಅವಕೆಂಪು ರೋಹಿತ ಮಾಪಕ ಮತ್ತು ಅವಕೆಂಪು ಲಂಭನ (ಡಿಟೆಕ್ಟರ್)ಗಳನ್ನು ಹೊಂದಿಸಲಾಗಿದೆ. ಬಾಹ್ಯಾಕಾಶ ಕಾಯಗಳಿಂದ ಬರುವ 3ರಿಂದ 180ಮೈಕ್ರಾನ್‌ನಷ್ಟು ತರಂಗ ದೂರವಿರುವ ವಿಕಿರಣಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಇದಕ್ಕಿದೆ (1 ಮೈಕ್ರಾನ್ ಎಂದರೆ 10-6ಮೀ).

ಇತ್ತೀಚೆಗೆ ಸ್ಪಿಟ್ಜರ್ ದೂರದರ್ಶಕ ಕಳುಹಿಸಿದ ಮಾಹಿತಿಯಿಂದ ಶನಿಗ್ರಹದ ಸುತ್ತ ಒಂದು ಬೃಹತ್ ಉಂಗುರ -ಶನಿಗ್ರಹದಿಂದ 6 ದಶಲಕ್ಷ ಕಿ.ಮೀ. ದೂರದಿಂದ 12ದಶ ಲಕ್ಷ ಕಿ.ಮೀ. ವ್ಯಾಪ್ತಿ –ಇರುವುದು ತಿಳಿದುಬಂದಿದೆ. ಈ ಉಂಗುರ ಉಂಟಾಗಲು ಶನಿಗ್ರಹದ ಉಪಗ್ರಹ ಫೀಬೆ (214 ಕಿ.ಮೀ. ವ್ಯಾಸ)ಯಿಂದ ಹೊರಹಾಕಲ್ಪಟ್ಟ ಧೂಳು, ಮಂಜಿನ ಕಣ ಕಾರಣವೆಂದು ಊಹಿಸಲಾಗಿದೆ.

ಕೆಪ್ಲರ್ ದೂರದರ್ಶಕ


NASA ದವರು ನಕ್ಷತ್ರಗಳ ಸುತ್ತ ಪರಿಭ್ರಮಿಸುತ್ತಿರಬಹುದಾದ ಭೂಸದೃಶ ಕಾಯ/ಗ್ರಹಗಳನ್ನು ಪತ್ತೆಹಚ್ಚಲು ಬಾಹ್ಯಾಕಾಶದಲ್ಲಿ ಕಕ್ಷೆಗೆ ಉಡಾಯಿಸಿರುವ ದೂರದರ್ಶಕ. 1039ಕಿಗ್ರಾಂ ತೂಕದ ಈ ದೂರದರ್ಶಕವನ್ನು 7.3.2009ರಂದು ಫ್ಲಾರಿಡಾದ ಕೇಪ್ ಕೆನವರಾಲ್ ಉಡಾವಣಾ ಕೇಂದ್ರದಿಂದ ಡೆಲ್ಟಾ ರಾಕೆಟ್ ಬಳಸಿ ಕಕ್ಷೆಗೆ ರವಾನಿಸಲಾಯಿತು. ಇದರಲ್ಲಿ 0.95ಮೀ. ವ್ಯಾಸದ ದರ್ಪಣವಿದೆ. 0.708ಚ.ಮೀ. ವಿಸ್ತಾರದಲ್ಲಿ ದ್ಯುತಿಗ್ರಹಣವಾಗುತ್ತದೆ. ಇದು 372.5ದಿನಗಳಿಗೊಮ್ಮೆ ಸೂರ್ಯನ ಸುತ್ತ ಪರಿಭ್ರಮಿಸುತ್ತದೆ. ಇದು ಸುಮಾರು 3.5ವರ್ಷಗಳ ಕಾಲ ಕಕ್ಷೆಯಲ್ಲಿದ್ದು ಒಂದು ಲಕ್ಷಕ್ಕೂ ಹೆಚ್ಚು ನಕ್ಷತ್ರಗಳ ಕಾಂತಿಯಲ್ಲಿನ ಏರಿಳಿತಗಳನ್ನು ದಾಖಲಿಸಿ ಭೂಕೇಂದ್ರಕ್ಕೆ ರವಾನಿಸುವ ಅಂದಾಜಿದೆ. ಒಂದು ನಕ್ಷತ್ರದ ಸುತ್ತ ಗ್ರಹ ಪರಿಭ್ರಮಿಸುತ್ತಿದ್ದರೆ ಉಂಟಾಗುವ ಸಂಕ್ರಮಣ (transit)ದಿಂದಾಗಿ, ಅದರಿಂದ ಬರುವ ಬೆಳಕಿನಲ್ಲಿ ಏರಿಳಿತಗಳುಂಟಾಗುತ್ತದೆ. ಇದನ್ನು ಗುರುತಿಸಲು 42 ಚಾರ್ಜ್ ಕಪಲ್ಡ್ ಡಿವೈಸಸ್‌ಗಳ ವ್ಯೆಹವಿರುವ ಬೃಹತ್ ಕ್ಯಾಮೆರಾವನ್ನು ಹೊಂದಿಸಲಾಗಿದೆ. ಬಾಹ್ಯಾಕಾಶದಲ್ಲಿರುವ ಕ್ಯಾಮೆರಾಗಳಲ್ಲಿ ಇದೇ ಅತಿದೊಡ್ಡದೂ ಸಹ.  ಏಮ್ಸ್ ರಿಸಚ್ ಸೆಂಟರ್ (Ame’s Research Center)ಇದರ ನಿಯಂತ್ರಣ ಹಾಗೂ ಇದರಿಂದ ಬರುವ ಮಾಹಿತಿಗಳ ವಿಶ್ಲೇಷಣಾ ಕಾರ್ಯವನ್ನು ವಹಿಸಿಕೊಂಡಿದೆ. ಸದ್ಯದಲ್ಲಿ ಸಿಗ್ನಸ್, ಲೈರಾ ಮತ್ತು ಡ್ರೇಕೊ ನಕ್ಷತ್ರ ಪುಂಜಗಳ ಪ್ರದೇಶವನ್ನು ಇದು ಪರಿಶೀಲಿಸುತ್ತಿದೆ.

(2015ರ ವೇಳೆಗೆ ಯೂರೊಪಿಯನ್ ಬಾಹ್ಯಾಕಾಶ ಸಂಸ್ಥೆ ಡಾಲಿನ್ ಎಂಬುದನ್ನೂ NASAವು ಬಾಹ್ಯಾಕಾಶ ವ್ಯತಿಕರಣ ಮಿಶನ್‌ನ್ನೂ ಉಡಾಯಿಸುವ ಯೋಜನೆ ಹಾಕಿವೆ).