ಹೆಬ್ಬಂಡೆ ಗುಂಡುಗಳ ಗಂಡುಗಲಿಗಳ ನಾಡು,
ಮಾನವನ ಪೌರುಷಕೆ ಕಲ್ಗರುಡಿಗಳ ಬೀಡು !
ಸತ್ವಕೆ ಸಾಹಸಕೆ, ಮಾರ್ಮಲೆತು ಕದನಕೆ
ನಿಂತು ತೊಡೆ ತಟ್ಟಿ ಅಧಟರ ಕರೆವ ರೌದ್ರ ಭೈ-
ರವ ವೀರರಾಟೋಪಕ್ಕೆ ತಕ್ಕುದೀ ತಾಣ !
ಲತೆಬಳುಕು ನಯನುಣುಪು ಸಲ್ಲದು ಇಲ್ಲಿ ; ಹೆದರಿ-
ಕೆಯ ಹೇಡಿ ಬಾಳ್ವೆಗೆ ಇಲ್ಲಿ ಮುಖವಿಲ್ಲ ! ಇತ್ತು

ಇಲ್ಲೊಂದು ಗಂಡುಗಲಿಗಳ ತಂಡ, ಕಲ್ಗುಂಡು-
ಗಳ ಕೇಳು ಹೇಳ್ವುವಂದಿನ ಕತೆಯ, ಗೌರವಕೆ
ತಲೆಗೊಟ್ಟು ಸೆಣಸಿದಂದಿನ ವ್ಯಥೆಯ ! ಕಲ್ಲಿನಲಿ
ಹುಟ್ಟಿ, ಕಲ್ಲಲಿ ಬೆಳೆದು, ಕಗ್ಗಲ್ಲಿನುಸಿರಾಡಿ
ಕಲ್ಲಿನ ಮಯ್ಯ ಪಡೆದು ಕಟ್ಟಿದರಣ್ಣ ಕಲ್ಲಿ-
ನೀ ಕೋಟೆಯನು ! ಸತ್ವ ಪೌರುಷ ಬೇಕೆ, ನಿನಗೆ ?
ಬಾ ಚಿತ್ರದುರ್ಗಕ್ಕೆ, ಬಂಡೆಗರುಡಿಯ ಮನೆಗೆ !