ನಾಡಿನ ಹೆಸರಾಂತ ಬೀನ್‌ ವಾದಕ ಡಾ. ಬಿಂದು ಮಾಧವ ಪಾಠಕರು ಹುಟ್ಟಿದ್ದು ೧೯೩೫ರಲ್ಲಿ ಹುಬ್ಬಳ್ಳಿಯಲ್ಲಿ. ಅವರ ತಂದೆ ಪಂ. ದತ್ತೋಪಂಚ ಪಾಠಕರು ಬೀನ್‌ ವಾದಕರಾಗಿದ್ದರು. ತಂದೆಯವರಲ್ಲಿ ಬೀನ್‌ ವಾದನದ ಶ್ರೀಕಾರ ಹಾಕಿಸಿಕೊಂಡ ಅವರು ದೇವಾಸದ ಸುಪ್ರಸಿದ್ಧ ಬೀನ್‌ ವಾದಕ ಉಸ್ತಾದ್‌ ರಜಿಬ್‌ ಆಲಿಖಾನರಲ್ಲಿ ಉನ್ನತ ಶಿಕ್ಷಣ ಪಡೆದು ಬೀನ್‌ ವಾದನದಲ್ಲಿ ಹೆಸರು ಸಂಪಾದಿಸಿದ್ದಾರೆ.

ಬೀನ್‌ ಹಾಗೂ ಸಿತಾರ ವಾದನದ ದೇಶದ ವಿರಳ ವಾದಕರಲ್ಲೊಬ್ಬರಾಗಿರುವ ಡಾ. ಬಿಂದು ಮಾಧವರು ಹಿಂದಿ, ಸಂಗೀತ ಹಾಗೂ ಇಂಗ್ಲೀಷ್‌ ಮೂರು ವಿಷಯಗಳಲ್ಲಿ ಎಂ.ಎ. ಪದವಿ ಹಾಗೂ ಡಾಕ್ಟರೇಟ್‌ ಪದವಿ ಪಡೆದು ಶಿರ್ಶಿಯ ಎಂ.ಎಂ. ಕಲಾ ಮಹಾವಿದ್ಯಾಲಯದಲ್ಲಿ ಸಿತಾರ ಪ್ರಾಧ್ಯಾಪಕರಾಗಿ ಹಾಗು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಂಗೀತ ವಿಭಾಗದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಸಂಗೀತ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ, ಹಿಂದಿ, ಮರಾಠಿ, ಇಂಗ್ಲೀಷ್‌, ಕೊಂಕಣಿ ಹಾಗೂ ಫ್ರೆಂಚ್‌ ಭಾಷೆ ಬಲ್ಲವರಾಗಿದ್ದ ಪಾಠಕರು “ಭಾರತೀಯ ಸಂಗೀತದ ಚರಿತ್ರೆ” (ಕ.ವಿ.ವಿ. ಧಾರವಾಡ) “ಡಾ. ಪುಟ್ಟರಾಜ ಗವಾಯಿ” ಮುಂತಾದ ಸಂಗೀತ ಪುಸ್ತಕ ಹಾಗೂ ಸಂಗೀತ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ.

ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದರಾಗಿದ್ದ ಅವರು ಬೆಂಗಳೂರು, ಮೈಸೂರು, ಹೈದ್ರಾಬಾದ್‌, ಪುಣೆ, ಭೂಪಾಲ ಮುಂತಾದ ಸಂಗೀತ ಸಮ್ಮೇಳನಗಳಲ್ಲಿ ಹಾಗೂ ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸಮ್ಮೇಳನಗಳಲ್ಲಿ ಬೀನ್‌ ವಾದನ ಕಛೇರಿ ನೀಡಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಕ.ವಿ.ವಿ. ಸಂಗೀತ ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿ, ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅನೇಕ ಜನ ಶಿಷ್ಯರನ್ನು ತಯಾರಿಸಿದ್ದಾರೆ. ಅಂಥವರಲ್ಲಿ ಪ್ರೊ. ರಾಮಚಂದ್ರ ವ್ಹಿ. ಹೆಗಡೆ, ಶ್ರೀಮತಿ ಜ್ಯೋತಿ ಹೆಗಡೆ ಹಾಗೂ ಮಗ ಡಾ. ಶ್ರೀಕಾಂತ ಪಾಠಕ ಉಲ್ಲೇಖನೀಯರಾಗಿದ್ದಾರೆ.

ಡಾ. ಬಿಂದುಮಾಧವ ಪಾಠಕರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೦-೯೧ನೇ ಸಾಲಿನ ವಾರ್ಷಿಕ ಪ್ರಶಸ್ತಿ, ಕರ್ನಾಟಕದ ಸರ್ಕಾರದ ಪ್ರತಿಷ್ಠಿತ ಕನಕ-ಪುರಂದರ ಪ್ರಶಸ್ತಿ (೧೯೯೫) ದೊರೆತಿವೆ.