ಇತಿಹಾಸ, ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಗಳನ್ನು ಅವಲೋಕಿಸಿದಾಗ ವಿಜಾಪುರ ಜಿಲ್ಲೆಯು ಜಗತ್ತಿನ ನಕಾಶೆಯಲ್ಲಿ ಸ್ಥಾನಗಳಿಸಿದ್ದು ತಿಳಿದು ಬರುತ್ತವೆ. ಇಲ್ಲಿ ಜಗತ್ಪ್ರಸಿದ್ಧವಾದ ಗೋಲಗುಮ್ಮಟ, ಹಿಂದೂ-ಅರೇಬಿಕ್ ಶೈಲಿಯ ವಾಸ್ತುಶಿಲ್ಪದ ಕಟ್ಟಡಗಳಿವೆ. ಭಾರತದ ಮೊದಲ ಕ್ರಾಂತಿಕಾರಕ ವಿಚಾರವಾದಿಯೆಂದು ಗುರುತಿಸಲ್ಪಟ್ಟ ಬಸವೇಶ್ವರರ ಜನ್ಮಭೂಮಿ ಜಿಲ್ಲೆಯಲ್ಲಿದೆ. ವಿಜಾಪುರ ಜಿಲ್ಲೆಯನ್ನು ಚಾಲುಕ್ಯರು, ರಾಷ್ಟ್ರಕೂಟರು, ಆದಿಲ್‌ಶಾಹಿ ಮುಂತಾದ ಅರಸು ಮನೆತನಗಳು ಆಳಿವೆ.

ವಿಜಾಪುರ ಜಿಲ್ಲೆಯು ಕೃಷ್ಣಾ ಹಾಗೂ ಭೀಮಾ ನದಿಗಳ ನಡುವೆ ನೆಲೆಗೊಂಡಿದೆ. ಮಧ್ಯದಲ್ಲಿ ಡೋಣಿ ನದಿ ಹರಿದಿದೆ ಇಲ್ಲಿನ ಫಲವತ್ತಾದ ಕಪ್ಪು ಮಣ್ಣಿನಲ್ಲಿ ಜೋಳ, ಗೋಧಿ, ಕುಸುಬಿ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಮರಡಿ ನೆಲದಲ್ಲಿ ಬೆಳೆಯುವ ಮಧುರವಾದ ದ್ರಾಕ್ಷಿ ಹಾಗೂ ದಾಳಿಂಬೆ, ಬಾರೆಹಣ್ಣು ಪರದೇಶಗಳಿಗೆ ರಫ್ತಾಗುತ್ತವೆ. ೧೧-೧೨ ಶತಮಾನದಲ್ಲಿ ಇದು ವಿಜಾಪೂರವೆಂದು ಉಲ್ಲೇಖಿತವಾಗಿದೆ. ವಿಜಾಪುರವು ಕಲ್ಯಾಣಿ ಚಾಲುಕ್ಯರ ಮತ್ತು ಸೇಉಣರ ಪ್ರಾದೇಶಿಕ ರಾಜಧಾನಿಯಾಗಿತ್ತು. ಮುಂದೆ ಆದಿಲ್‌ಶಾಹಿ ಸುಲ್ತಾನರ ರಾಜಧಾನಿಯಾಯ್ತು. ಆಗ ಅದನ್ನು ಬಿಜ್ಜಪುರ, ವಿದ್ಯಾಪುರ, ಬದ್ಯಾಪುರ, ಮಹ್ಮದೀಪುರ ವಿವಿಧ ಹೆಸರುಗಳಿಂದ ಕರೆಯಲಾಯ್ತು, ಇಷ್ಟಾದರೂ ಪ್ರಸ್ತುತ ಅದು ವಿಜಾಪುರವೆಂದು ಹೆಸರು ಪಡೆದಿದೆ.

ವಿಜಾಪುರ ಜಿಲ್ಲೆಯಲ್ಲಿ ಬಸವನ ಬಾಗೇವಾಡಿ (೧೯೭೪ ಚ.ಕಿ.ಮೀ.ವಿಸ್ತೀರ್ಣ) ಸಿಂದಗಿ (೨೧೭೬ ಚ.ಕಿ.ಮೀ.ವಿಸ್ತೀರ್ಣ) ಇಂಡಿ (೨೨೨೫ ಚ.ಕಿ.ಮೀ.ವಿಸ್ತೀರ್ಣ) ವಿಜಾಪುರ (೨೬೫೯ ಚ.ಕಿ.ಮೀ.ವಿಸ್ತೀರ್ಣ) ಮುದ್ದೇಬಿಹಾಳ (೧೫೦೨ ಚ.ಕಿ.ಮೀ.ವಿಸ್ತೀರ್ಣ) ಹೀಗೆ ಒಟ್ಟು ಐದು ತಾಲೂಕುಗಳಿವೆ. ಮತ್ತು ಅವುಗಳ ಒಟ್ಟು ವಿಸ್ತೀರ್ಣ ೧೦೫೩೬ ಚ.ಕಿ.ಮೀ ಇರುತ್ತದೆ. ಜಿಲ್ಲೆಯಲ್ಲಿ ಒಟ್ಟು ೬೪೮ ಹಳ್ಳಿಗಳಿವೆ.

ಸಂಶೋಧಕರು ಖೇಡ, ಇಂಗಳೇಶ್ವರ, ಸಾಲವಾಡಗಿ, ಕೊಲ್ಹಾರ, ನಿಂಬಾಳ, ತದ್ದೇವಾಡಿ, ಇಂಚಗೇರಿಗಳನ್ನು ಇತಿಹಾಸ ಪೂರ್ವದ ನೆಲೆಗಳೆಂದು ಗುರುತಿಸಿದ್ದಾರೆ. ೨ನೇ ಶತಮಾನದಲ್ಲಿ ಭಾರತಕ್ಕೆ ಆಗಮಿಸಿದ್ದ ಈಜಿಪ್ತಿನ ಟಾಲೆಮಿ ಇಂಡಿ ಹಾಗೂ ಕಲಕೇರಿಗಳನ್ನು ಪುರಾತನ ಸ್ಥಳಗಳೆಂದು ದಾಖಲಿಸಿದ್ದಾನೆ.

ವಿಜಾಪುರ ಜಿಲ್ಲೆಯನ್ನು ಭೌಗೋಳಿಕವಾಗಿ ಭೀಮಾ ಕಣಿವೆ, ಮಧ್ಯದ ಪ್ರಸ್ಥಭೂಮಿ, ಡೋಣಿ ಕಣಿವೆ, ವಿಜಾಪುರ ನಗರ ಪ್ರದೇಶ ಮತ್ತು ಕೃಷ್ಣಾನದಿ ಪ್ರದೇಶವೆಂದು ವಿಂಗಡಿಸಬಹುದು. ಕೃಷ್ಣಾನದಿಗೆ ಆಲಮಟ್ಟಿಯಲ್ಲಿ ನಿರ್ಮಿಸಿದ ಆಣೆಕಟ್ಟೆಯಿಂದ ವಿಜಾಪುರ, ರಾಯಚೂರ ಮತ್ತು ಕಲಬುರ್ಗಿ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಸೌಲಭ್ಯವುಂಟಾಗಿದೆ. ಜಿಲ್ಲೆಯ ಪ್ರಸ್ಥಭೂಮಿಯು ಜ್ವಾಲಾಮುಖಿಯ ಲಾವಾರಸದಿಂದ ಉಂಟಾಗಿದೆ. ಇಲ್ಲಿ ಪದರು ಕಲ್ಲುಗಳು ದೊರೆಯುತ್ತವೆ. ಅವೆಲ್ಲವೂ ಸುಣ್ಣದಂಶದಿಂದ ಕೂಡಿವೆ. ತಾಳಿಕೋಟಿಯ ಸುತ್ತಲಿನ ಪ್ರದೇಶದಲ್ಲಿ ೨೯೭ ದಶಲಕ್ಷ ಟನ್ನುಗಳಷ್ಟು ಸಿಮೆಂಟು ದರ್ಜೆಯ ಸುಣ್ಣದ ಪದರು ಶಿಲೆಗಳ ಗಣಿಗಾರಿಕೆ ಇದೆ.

ವಿಜಾಪುರ ಜಿಲ್ಲೆಯು ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದೆ. ಅಭಿನವ ಪಂಪ, ಅಗ್ಗಳ, ಅದೃಶ್ಯಕವಿ ಹಾಗೂ ನಾಗಚಂದ್ರರು ಹಳೆಗನ್ನಡ ಕಾವ್ಯ ರಚಿಸಿದ್ದಾರೆ. ಬಸವಣ್ಣ ಹಾಗೂ ಶರಣರು ವಚನಸಾಹಿತ್ಯ ಕೃಷಿಗೈದು ವಿಶ್ವ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಹರ್ಡೇಕರ ಮಂಜಪ್ಪ, ಮಧುರಚೆನ್ನ ಸಿಂಪಿಲಿಂಗಣ್ಣ ಮುಂತಾದ ಕವಿಮಾನ್ಯರು ಅಧುನಿಕ ಸಾಹಿತ್ಯ ಸೇವೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಕೋಮುಗಳ ಜನರಿದ್ದರೂ ಅವರಲ್ಲಿ ಭಾವೈಕ್ಯತೆ ಇದೆ. ಇಲ್ಲಿ ಪುರಾತನ ವಾಸ್ತು ವೈವಿಧ್ಯದಿಂದ ಕೂಡಿದ ದೇವಾಲಯ, ಮಸೀದೆ, ಜೈನ ಮಂದಿರ ಹಾಗೂ ಚರ್ಚುಗಳಿವೆ. ಆಲಮಟ್ಟಿ ಅಣೆಕಟ್ಟೆಯಲ್ಲಿ ಸಂಗ್ರಹವಾದ ಜಲಸಾಗರ ಹಾಗೂ ಗಾರ್ಡ್‌ನ್‌ಗಳು ನಯನ ಮನೋಹರವಾಗಿವೆ. ನಮ್ಮ ಮಕ್ಕಳಿಗೆ ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳಲು ಅವರು ಅವುಗಳನ್ನು ಕಣ್ಣಾರೆ ನೋಡಬೇಕು. ಸೌಂದರ್ಯವನ್ನು ಸವಿಯಬೇಕು. ಅವರ ಮನಸ್ಸು ಪ್ರಸನ್ನವಾಗಬೇಕು. ಅವರ ಜ್ಞಾನ ಬಾಂಢಾರ ಬೆಳೆಯಬೇಕು.

 

ವಿಜಾಪುರ ನಗರ

ಗೋಳಗುಮ್ಮಟ

ದೂರ: ಕೇಂದ್ರ ಬಸ್ ನಿಲ್ದಾಣದಿಂದ ೩ ಕಿ.ಮೀ

 

ಗೋಳಗುಮ್ಮಟವು ಮೊಹ್ಮದ ಆದಿಲ್‌ಶಾಹನಿಂದ ನಿರ್ಮಾಣವಾದ ಒಂದು ಅಚ್ಚರಿಯ, ಭವ್ಯ ರಚನೆಯಾಗಿದೆ. ಇದರ ಗುಮ್ಮಟ ಭಾರತದಲ್ಲಿಯೇ ಅತ್ಯಂತ ದೊಡ್ಡದು ತಳದಲ್ಲಿ ೧೨೪ ಅಡಿ ವ್ಯಾಸ ಉಳ್ಳದ್ದಾಗಿರುತ್ತದೆ. ಗುಮ್ಮಟದ ಒಳಗೆ ಕುಳಿತು ಮಾತನಾಡಿದರೆ, “ಗುಣಿತ ಪ್ರತಿಧ್ವನಿ”ಯ ತಾಂತ್ರಿಕ ನೈಪುಣ್ಯತೆ ಬೆರಗುಗೊಳಿಸುತ್ತದೆ. ಅಂತೆಯೇ ಇದನ್ನು “ಪಿಸುಮಾತಿನ ಮೊಗಸಾಲೆ” ಎನ್ನುತ್ತಾರೆ. ಗೋಳಗುಮ್ಮಟದ ಭವ್ಯತೆಗೆ ಬೆರಗುಗೊಳ್ಳದವರೇ ಇಲ್ಲ. ಗೋಳಗುಮ್ಮಟವು ದೇಶ ವಿದೇಶದ ಪ್ರವಾಸಿಗರ ಪ್ರೇಕ್ಷಣೀಯ ತಾಣವಾಗಿದೆ. ಈ ರಚನೆಯು ಕ್ರಿ.ಶ. ೧೫೬೧ ಕಾಲಕ್ಕೆ ಸಂಬಂಧಿಸಿದ್ದು. ಇದು ಜಗದ ಅಚ್ಚರಿಗಳಲ್ಲಿ ಒಂದಾಗಿದೆ.

 

ಇಬ್ರಾಹಿಮ್ ರೋಜಾ

ದೂರ: ಕೇಂದ್ರ ಬಸ್ ನಿಲ್ದಾಣದಿಂದ-೨ ಕಿ.ಮೀ.

 

ಇದು ಇಮ್ಮಡಿ ಇಬ್ರಾಹಿಮ್ ಆದಿಲ್‌ಷಾಹನ ವೈಭವ ಪೂರ್ಣ ಸಮಾಧಿ ಸ್ಮಾರಕವಾಗಿದೆ. ಈ ಕಟ್ಟಡವು ಒಂದು ಎತ್ತರವಾದ ಸಮತಲದ ಮೇಲಿದ್ದು, ೪೦೦ ಅಡಿಗಳ ವಿಶಾಲವಾದ ಆಯತಾಕಾರದ ಆವರಣವನ್ನು ಹೊಂದಿದೆ. ೧೧೬ ಅಡಿಗಳ ಚೌಕಾಕಾರದ ಈ ಕಟ್ಟಡದಲ್ಲಿ ೫೦ ಅಡಿ ಚೌಕದ ಒಂದು ಒಳಗೋಡೆ ಇದೆ. ಕಂಬಗಳ ಆಧಾರಿತ ಕಮಾನುಗಳ ಮೇಲ್ಛಾವಣಿಯಿಂದ ಸುತ್ತುವರೆದಿದ್ದು, ಎರಡು ತೆರೆದ ಕಂಬ ಸಾಲುಗಳಿವೆ. ನೆಲದಿಂದ ೮೦ ಅಡಿಗಳಷ್ಟು ಎತ್ತರವಾದ ಮಾಳಿಗೆಯ ಮೇಲಿಂದ ನಿರ್ಮಿಸಿರುವ ಸುಂದರವಾದ ಮಿನಾರಗಳು ಪ್ರತಿ ಮೂಲೆಯಲ್ಲೂ ಇವೆ. ನಾಲ್ಕು ಮೂಲೆಗಳಲ್ಲಿರುವ ಈ ಉನ್ನತವಾದ ಮಿನಾರಗಳ ನಡುವಿನ ಜಾಗದಲ್ಲಿ ಸೂಕ್ತ ಅಂತರದಲ್ಲಿ, ಸೂಕ್ಷ್ಮ ಮತ್ತು ಸುಂದರ ಜಾಲರಿಯ ಚೆಲುವು ಮೈವೆತ್ತ ಸಣ್ಣ ಸಣ್ಣ ಹೂಜಿಗಂಬಗಳಿವೆ. ಎರಡನೇ ಚೌಕದ ಮೇಲಿರುವ ಗುಮ್ಮಟ, ಮಾಳಿಗೆಯ ಸಮತಲದಿಂದ ಮೇಲೆದ್ದು, ಸುತ್ತಲೂ ಸಣ್ಣ ಸಣ್ಣ ಮಿನಾರುಗಳಿಂದ ಅಲಂಕೃತವಾಗಿದೆ.

ಜಾಮಿಯಾ ಮಸೀದೆ


ಗಗನ ಮಹಲ್


ಕಟ್ಟಡದ ಗೋಡೆಯ ಮೇಲೆ ನುಡಿಗುಚ್ಛಗಳು, ಪುಷ್ಪಗಳು, ಎಲೆ ಬಳ್ಳಿಗಳು, ಅಲಂಕಾರಿಕ ಕಂಬಗಳು, ಕಮಾನುಗಳು, ಕಟ್ಟಡದ ಚೆಲುವನ್ನು ಹೆಚ್ಚಿಸಿವೆ. ಒಳಕೋಣೆಯಲ್ಲಿ ಇಬ್ರಾಹಿಮ್ ಆದಿಲ್‌ಷಾಹ ಅವನ ರಾಣಿ ತಾಜಸುಲ್ತಾನ, ಅವರ ಮಗಳು, ಇಬ್ಬರು ಗಂಡು ಮಕ್ಕಳು, ಅವನ ತಾಯಿ ಹಾಜಿಬಡಿ ಸಾಹಿಬಾ ಇವರ ಗೋರಿಗಳಿವೆ.

 

ಕರೀಮ-ಉದ್-ದಿನ್‌ನ ಮಸೀದೆ

ದೂರ: ಕೇಂದ್ರ ಬಸ್ ನಿಲ್ದಾಣದಿಂದ-೦.೫ ಕಿ.ಮೀ.

ಸಾಲೋಟಿಗೆಯ ರೇವಯ್ಯ ಎಂಬ ಕಟ್ಟಡಗಾರನಿಂದ ಕ್ರಿ.ಶ. ೧೩೨೦ರಲ್ಲಿ ನಿರ್ಮಾಣವಾಗಿದೆ. ಹದಿನಾಲ್ಕನೇ ಶತಮಾನದ ಆದಿಭಾಗದಲ್ಲಿ ವಿಜಾಪುರದ ಗವ್ಹರ್ನರ್‌ನಾಗಿದ್ದ ಕರೀಮ-ಉದ್-ದಿನ್‌ನ ಸ್ಮಾರಕವಾಗಿದೆ. ಇದರ ನಿರ್ಮಾಣ ಶೈಲಿ ದಖ್ಖನ್ನಿನ ಹಳೆಯ ಹಿಂದೂ ಕಟ್ಟಡಗಳಂತೆ ಇದ್ದು, ಭಾರಿಯಾದ ಕಲ್ಲಿನ ಚಪ್ಪಡಿಗಳನ್ನು ಒಂದು ಕಂಬದಿಂದ ಇನ್ನೊಂದು ಕಂಬದ ವರೆಗೆ ಹಾಸಿ, ಸಿಮೆಂಟ ಅಥವಾ ಇನ್ನಾವುದೇ ವಸ್ತುವನ್ನು ಬಳಸದೇ ಕಲ್ಲಿನ ಮಾಳಿಗೆ ನಿರ್ಮಾಣ ಮಾಡಲಾಗಿದೆ.

 

ಇನ್ನಿತರ ಪ್ರೇಕ್ಷಣೀಯ ಸ್ಥಳಗಳು :

ಶ್ರೀ ಸಿದ್ಧೇಶ್ವರ ದೇವಸ್ಥಾನ, ಮಲೀಕ್-ಎ-ಮೈದಾನ ತೋಪು, ಮೇಹತರ್ ಮಹಲ್, ಜಲ ಮಂಜಿಲ್, ತಾಜ್ ಬಾವಡಿ, ಆಸರ ಮಹಲ, ಛೋಟಾ ಆಸರ, ಭೂತನಾಳ ಕೆರೆ  ಮುಂತಾದವುಗಳು.

ಬಾರಾ ಕಮಾನ್


ಜ್ಞಾನಯೋಗಾಶ್ರಮ

ದೂರ: ಕೇಂದ್ರ ಬಸ್ ನಿಲ್ದಾಣದಿಂದ-೫ ಕಿ.ಮೀ.

ಜ್ಞಾನಯೋಗಿ ಶ್ರೀಸಿದ್ಧೇಶ್ವರ ಶ್ರೀಗಳು

ವಿಜಾಪುರ ಕೇಂದ್ರ ಬಸ್ ನಿಲ್ದಾಣದಿಂದ “ಜ್ಞಾನಯೋಗಾಶ್ರಮ”ವು ಉತ್ತರಕ್ಕೆ ೫ ಕಿ.ಮೀ. ದೂರದಲ್ಲಿದೆ. ಶ್ರೀಮಲ್ಲಿಕಾರ್ಜುನ ಸ್ವಾಮಿಗಳು ಆಶ್ರಮದ ರುವಾರಿಗಳು. ಇವರ ಶಿಷ್ಯರೇ ಶ್ರೀಸಿದ್ಧೇಶ್ವರ ಸ್ವಾಮಿಗಳು. ಪರಮಪೂಜ್ಯ ಶ್ರೀಸಿದ್ಧೇಶ್ವರ ಮಹಾಸ್ವಾಮಿಗಳು ಯುಗದ ವ್ಯಕ್ತಿ, ದೊಡ್ಡ ಶಕ್ತಿ, ಚಾರಿತ್ರ್ಯವನ್ನು, ನೀತಿಯನ್ನು, ಸಮಯವನ್ನು ಗೌರವಿಸುವ, ಆರಾಧಿಸುವ ಸಂತರು. ಅನನ್ಯ ಮಾನವ ಪ್ರೇಮದ ಸಂದೇಶವನ್ನು ಜಗತ್ತಿಗೆ ಸಾರಿದವರು. ಇಂಥ ‘ನಡೆದಾಡುವ ದೇವರ’ ಕರ್ಮಸ್ಥಳವಾದ ಜ್ಞಾನಯೋಗಾಶ್ರಮವು, ಪ್ರವಾಸಿಗರಿಗೆ ಮನಶ್ಯಾಂತಿ ನೀಡುವ ಶಾಂತಿಧಾಮವಾಗಿದೆ.

 

ಶಿವಗಿರಿ
ದೂರ: ಕೇಂದ್ರ ಬಸ್ ನಿಲ್ದಾಣದಿಂದ-೫ ಕಿ.ಮೀ.

ಶಿವಗಿರಿಯು ವಿಜಾಪುರ ನಗರದ ಪೂರ್ವಕ್ಕೆ ಉಕ್ಕಲಿ ರಸ್ತೆಗೆ ಹೊಂದಿಕೊಂಡಿದೆ. ಇಲ್ಲಿ ೯೫ ಅಡಿ ಎತ್ತರದ ಕರ್ನಾಟಕದ ೨ನೇ ಭವ್ಯ ಶಿವನ ಧ್ಯಾನಸ್ಥ ಮೂರ್ತಿ ಗಮನ ಸೆಳೆಯುತ್ತದೆ. ಈ ಮೂರ್ತಿಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಇತ್ತೀಚೆಗೆ ನಿರ್ಮಿಸಲಾಗಿದೆ. ಇದರ ಸುತ್ತಲಿನ ಉದ್ಯಾನವನ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಮೂರ್ತಿಯನ್ನು  ಶ್ರೀ ಬಿ. ಕೆ. ಪಾಟೀಲ ಬೆನಕಟ್ಟಿ ಚಾರ್ಟೆಬಲ್ ಟ್ರಸ್ಟಿನವರು ಸ್ಥಾಪಿಸಿದ್ದಾರೆ.

 

ಫ. ಗು. ಹಳಕಟ್ಟಿ ಸ್ಮಾರಕ

ದೂರ: ಕೇಂದ್ರ ಬಸ್ ನಿಲ್ದಾಣದಿಂದ-೫ ಕಿ.ಮೀ.

 

ಕೇಂದ್ರ ಬಸ್ ನಿಲ್ದಾಣದಿಂದ ಉತ್ತರಕ್ಕೆ ೫ ಕಿ.ಮೀ. ದೂರದಲ್ಲಿ ಬಿ.ಎಲ್.ಡಿ.ಇ. ವೈದ್ಯಕೀಯ ಕಾಲೇಜ್ ಆವರಣದಲ್ಲಿ “ವಚನ ಪಿತಾಮಹ” ಫ. ಗು. ಹಳಕಟ್ಟಿಯವರ ಸ್ಮಾರಕವಿದೆ. ಕಾಲಗರ್ಭದಲ್ಲಿ ಮರೆಯಾಗಿ ಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ಪರಿಷ್ಕರಿಸಿ, ಸಂಪಾದಿಸಿ ಕನ್ನಡ ಸಾರಸ್ವತ ಲೋಕಕ್ಕೆ ಬಹು ಅಮೂಲ್ಯವಾದ ಕಾಣಿಕೆಯನ್ನು ನೀಡಿದ್ದಾರೆ. ಶಿಕ್ಷಣ ಪ್ರೇಮಿಗಳೂ, ಅನನ್ಯ ಮಾನವ ಪ್ರೇಮಿಗಳೂ ಮತ್ತು ತ್ಯಾಗಿಗಳು ಆಗಿದ್ದ ಶ್ರೀ ಫ. ಗು. ಹಳಕಟ್ಟಿಯವರ ಸ್ಮಾರಕವು ಪ್ರವಾಸಿಗರ ಶ್ರದ್ಧಾ ಕೇಂದ್ರವಾಗಿದೆ.

 

೭೭೦ ಲಿಂಗದ ಗುಡಿ

ದೂರ: ಕೇಂದ್ರ ಬಸ್ ನಿಲ್ದಾಣದಿಂದ-೫ಕಿ.ಮೀ.

ಪೂಜ್ಯ ಬಂಥನಾಳ ಶಿವಯೋಗಿಗಳು

ಕೇಂದ್ರ ಬಸ್ ನಿಲ್ದಾಣದಿಂದ ಉತ್ತರಕ್ಕೆ ೫ ಕಿ.ಮೀ. ದೂರದಲ್ಲಿ ಬಿ.ಎಲ್.ಡಿ.ಇ. ಆವರಣದಲ್ಲಿ ಕಾಣಸಿಗುವುದೇ ೭೭೦ ಅಮರಗಣಂಗಳ ಲಿಂಗದ ಗುಡಿಯಾಗಿದೆ.

ಕ್ರಿ.ಶ.೧೯೬೧ರಲ್ಲಿ ಶ್ರೀ ಬಂಥನಾಳ ಶಿವಯೋಗಿಗಳ ನೇತೃತ್ವದಲ್ಲಿ ೭೭೦ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಪೂಜ್ಯ ಬಂಥನಾಳ ಶಿವಯೋಗಿಗಳು ಜಿಲ್ಲೆಯಲ್ಲಿ ಜ್ಞಾನದೀಪ ಬೆಳಗಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಭಕ್ತರಿಂದ ಸಂಗ್ರಹಿಸಿದ ನಿಧಿಯಿಂದ ವಿಜಾಪುರದಲ್ಲಿ ಕಲೆ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯಗಳನ್ನು ಸ್ಥಾಪಿಸಿದರು. ಪೂಜ್ಯರ ಸಮಾಧಿ ಸ್ಮಾರಕವು ಇದರ ಪಕ್ಕದಲ್ಲಿಯೇ ಇತ್ತೀಚೆಗೆ ನಿರ್ಮಾಣವಾಗಿದೆ.