ಇಂಗಳೇಶ್ವರ

ಶ್ರೀರೇವಣಸಿದ್ಧೇಶ್ವರ ಮಂದಿರ (ಇಂಗಳೇಶ್ವರ ಗುಡ್ಡ)

ದೂರ: 
ಜಿಲ್ಲಾ ಕೇಂದ್ರದಿಂದ-೪೫ ಕಿ.ಮೀ.
ತಾಲೂಕ ಕೇಂದ್ರದಿಂದ-೧೧ ಕಿ.ಮೀ.

 

ವಚನ ಶಿಲಾ ಮಂಟಪ

ಇಂಗಳೇಶ್ವರವು ವಿಜಾಪುರದಿಂದ ಪೂರ್ವಕ್ಕೆ ೪೫ ಕಿ.ಮೀ. ದೂರದಲ್ಲಿದ್ದು, ಇದು ಬಸವಣ್ಣನವರ ತಾಯಿ ಮಾದಲಾಂಬಿಕೆಯ ತವರು ಮನೆಯಾಗಿದೆ. ಇಂಗಳೇಶ್ವರವು ಒಂದು ಐತಿಹಾಸಿಕವಾದ ಅಗ್ರಹಾರವಾಗಿತ್ತು. ಅದು ಹಲವಾರು ಐತಿಹಾಸಿಕ ಐತಿಹ್ಯಗಳನ್ನು ಹೊಂದಿದೆ. ಊರಿನ ಹೊರ ವಲಯದಲ್ಲಿರುವ “ಗುಡ್ಡದ ರೇವಣಸಿದ್ಧೇಶ್ವರ ದೇವಾಲಯ”ವು ಒಂದು ಪ್ರಮುಖವಾದ ದೇವಾಲಯವಾಗಿದೆ. ಅದೇ ರೀತಿ ಗ್ರಾಮದಲ್ಲಿ ಕಲ್ಮೇಶ್ವರ, ಸೋಮೇಶ್ವರ, ನಾರಾಯಣ, ಸಂಗಮೇಶ್ವರ ದೇವಾಲಯಗಳಿದ್ದು, ಇವುಗಳ ಪೈಕಿ ಶೋಬನದೇವರ ಗುಡಿಯನ್ನು ಕ್ರಿ.ಶ.೧೧೨೮ರಲ್ಲಿ ನೀಲಕಂಠನಾಯಕನೆಂಬ ಅಧಿಕಾರಿಯು ನಿರ್ಮಿಸಿದನೆಂದು ಶಾಸನಗಳಿಂದ ತಿಳಿಯುತ್ತದೆ.

ಹರ್ಡೇಕರ ಮಂಜಪ್ಪನವರು

ಅದೇ ರೀತಿಯಾಗಿ ಊರಿನಲ್ಲಿ ನೂತನವಾಗಿ “ವಚನ ಶಿಲಾ ಮಂಟಪ”ವನ್ನು ನಿರ್ಮಿಸಲಾಗಿದೆ. ಇಲ್ಲಿ ಬಸವಾದಿ ಶರಣರ ಸುಮಾರು ೪೩,೦೦೦ ವಚನಗಳನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ. ಇದರಿಂದಾಗಿ ವಚನಗಳ ಪರಂಪರೆ ಮುಂದಿನ ಪೀಳಿಗೆಗೆ ಹರಿದು ಬರಲು ಸಹಾಯಕವಾಗಿದೆ. ಆಲಮಟ್ಟಿಯು “ಕರ್ನಾಟಕದ ಗಾಂಧೀ” ಎಂದು ಚಿರಪರಿಚಿತರಾಗಿದ್ದ ಹರ್ಡೇಕರ ಮಂಜಪ್ಪನವರ ತಪೋಭೂಮಿಯಾಗಿರುವುದು ವಿಶೇಷವಾಗಿದೆ. ವಚನ ಸಾಹಿತ್ಯವನ್ನು ಸಂಶೋಧಿಸಿ, ಪರಿಷ್ಕರಿಸಿ, ಕನ್ನಡ ಸಾರಸ್ವತ ಲೋಕಕ್ಕೆ ಒದಗಿಸಿದ ಕೀರ್ತಿಯು ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ. ಇವರ ಸಮಾಧಿ ಸ್ಮಾರಕ ಆಲಮಟ್ಟಿ ಡ್ಯಾಮಸೈಟ್‌ನಲ್ಲಿರುವ ಎಂ.ಎಚ್.ಎಮ್. ಪ. ಪೂ. ಕಾಲೇಜಿನ ಆವರಣದಲ್ಲಿದೆ.

 

ಮುತ್ತಗಿ

ದೂರ:
ಜಿಲ್ಲಾ ಕೇಂದ್ರದಿಂದ-೪೦ ಕಿ.ಮೀ.
ತಾಲೂಕ ಕೇಂದ್ರದಿಂದ-೧೫ ಕಿ.ಮೀ.

ಮುತ್ತಗಿಯು ಒಂದು ಪ್ರಾಚೀನ ಅಗ್ರಹಾರವಾಗಿದ್ದು, ವಿಜಾಪುರದಿಂದ ಪೂರ್ವಕ್ಕೆ ೪೦ ಕಿ.ಮೀ. ಹಾಗೂ ಬಸವನ ಬಾಗೇವಾಡಿಯಿಂದ ೧೦ ಕಿ.ಮೀ. ದೂರದಲ್ಲಿದೆ. ಮುತ್ತಗಿಯಲ್ಲಿ ಬಾದಾಮಿ ಹಾಗೂ ಕಲ್ಯಾಣದ ಚಾಲುಕ್ಯರ ಕಾಲದ ದೇವಾಲಯಗಳು ಹಾಗೂ ಶಾಸನಗಳು ಕಂಡುಬರುತ್ತವೆ.

ಮುಖ್ಯವಾಗಿ “ಶಿವ ದೇವಾಲಯ”ವು ನಮ್ಮ ಗಮನ ಸೆಳೆಯುತ್ತದೆ. ಪ್ರವೇಶದ್ವಾರ, ನವರಂಗ, ಗರ್ಭಗೃಹ ಇವು ಶಿವ ದೇವಾಲಯದ ವಿಶೇಷತೆಗಳಾಗಿವೆ. ಇದಲ್ಲದೇ ಪ್ರಾಚೀನ ಸಂಗಮೇಶ್ವರ, ರುದ್ರಗಂಟಿ, ರಾಮಲಿಂಗ, ಸಿದ್ಧರಾಮ ಮತ್ತು ಅಶ್ವತ್ಥನಾರಾಯಣರ ದೇವಾಲಯಗಳು ಐತಿಹ್ಯವನ್ನು ಸಾರುತ್ತಿವೆ.

 

ಮನಗೂಳಿ

ದೂರ:
ಜಿಲ್ಲಾ ಕೇಂದ್ರದಿಂದ-೨೦ ಕಿ.ಮೀ.
ತಾಲೂಕ ಕೇಂದ್ರದಿಂದ-೨೦ ಕಿ.ಮೀ.

ಮನಗೂಳಿಯು ವಿಜಾಪುರದಿಂದ ಪೂರ್ವಕ್ಕೆ ೨೫ ಕಿ.ಮೀ. ದೂರದಲ್ಲಿದೆ. ಮನಗೂಳಿಯು ಶಾಸನಗಳ ಪ್ರಕಾರ ಮಾಣಿಕ್ಯವಳ್ಳಿ ಮನಿಂಗವಳ್ಳಿ ಎಂದು ಪ್ರಸಿದ್ಧವಾಗಿತ್ತು. ಮನಗೂಳಿಯು ಬಾಗೇವಾಡಿ ಅಗ್ರಹಾರದ ಆಡಳಿತಕ್ಕೆ ಒಳಪಟ್ಟ ಗ್ರಾಮವಾಗಿತ್ತು ಇಲ್ಲಿನ ರಾಮೇಶ್ವರ ದೇವಾಲಯವು ಕಲ್ಯಾಣದ ಚಾಳುಕ್ಯರ ಕಾಲದ ರಚನೆಯಾಗಿದೆ.

ಇದಲ್ಲದೇ ಮನಗೂಳಿಯಲ್ಲಿ ಹನುಮಂತ, ಸೋಮೇಶ್ವರ ದೇವಾಲಯಗಳು ಹಾಗೂ ವಿಠೋಬ, ರಾಘವೇಂದ್ರ ಸ್ವಾಮಿಗಳ ಮಠವು ಸುಪ್ರಸಿದ್ಧವಾಗಿವೆ.

 

ಹೂವಿನ ಹಿಪ್ಪರಗಿ

ದೂರ:
ಜಿಲ್ಲಾ ಕೇಂದ್ರದಿಂದ-೬೦ ಕಿ.ಮೀ.
ತಾಲೂಕ ಕೇಂದ್ರದಿಂದ-೧೫ ಕಿ.ಮೀ.

ಹೂವಿನ ಹಿಪ್ಪರಗಿಯು ಜಿಲ್ಲಾ ಕೇಂದ್ರದಿಂದ ೫೪ ಕಿ.ಮೀ. ದೂರದಲ್ಲಿದೆ. ಹಿಂದೆ ಇದು ರಾಷ್ಟ್ರಕೂಟರ ಕಾಲದ ಅಗ್ರಹಾರವಾಗಿತ್ತು. ರಾಷ್ಟ್ರಕೂಟರ ಅಮೋಘವರ್ಷನ ಕ್ರಿ.ಶ. ೮೬೨ರ ಶಾಸನದಲ್ಲಿ ಈ ಊರಿನ ಉಲ್ಲೇಖವಿದೆ.

ಊರಿನ ಅಗಸಿಯ ಹತ್ತಿರವಿರುವ ಕಲ್ಮೇಶ್ವರ ದೇವಾಲಯವು ಎತ್ತರವಾದ ಅಧಿಷ್ಠಾನ ಹೊಂದಿದ್ದು, ಗರ್ಭಗೃಹ, ನವರಂಗ ಹಾಗೂ ವೃತ್ತಾಕಾರದ ಕಿರುಸ್ತಂಭಗಳಿರುವ ಕಿರಿದಾದ ಮುಖಮಂಟಪಗಳಿವೆ. ಸುಂದರ ವೈಷ್ಣವ ದ್ವಾರಪಾಲಕರಿರುವ ಬಾಗಿಲುವಾಡದಲ್ಲಿ ಗಜಲಕ್ಷ್ಮೀ ಲಲಾಟ ಬಿಂಬವಿದೆ.

 

ಲಾಲ್ ಬಹಾದ್ದೂರ ಶಾಸ್ತ್ರೀ ಸಾಗರ, ಆಲಮಟ್ಟಿ

ದೂರ:
ಜಿಲ್ಲಾ ಕೇಂದ್ರದಿಂದ-೬೦ ಕಿ.ಮೀ.
ತಾಲೂಕ ಕೇಂದ್ರದಿಂದ-೩೩ ಕಿ.ಮೀ.


ಆಲಮಟ್ಟಿಯು ಜಿಲ್ಲಾ ಕೇಂದ್ರ ವಿಜಾಪುರದಿಂದ ದಕ್ಷಿಣಕ್ಕೆ ರಾಷ್ಟ್ರೀಯ ಹೆದ್ದಾರಿ ೧೩ರಲ್ಲಿ ೬೦ ಕಿ.ಮೀ. ದೂರದಲ್ಲಿದೆ. ನೈಸರ್ಗಿಕವಾಗಿ ಎರಡು ಗುಡ್ಡಗಳ ನಡುವೆ ಹಾಯ್ದು ಹೋಗುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಣೆಕಟ್ಟು ನೋಡುಗರ ಮನ ಸೆಳೆಯುತ್ತಿದ್ದು, ವಿವಿಧೋದ್ದೇಶ ಯೋಜನೆಗಳಿಗೆ ಸಹಕಾರಿಯಾಗಿದೆ. ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಂದ ವಿಜಾಪುರ, ಬಾಗಲಕೋಟೆ ಹಾಗೂ ಗುಲಬರ್ಗಾ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ.

 

ಉದ್ಯಾನವನದ ನೋಟಗಳು

ಉದ್ಯಾನವನದ ಪ್ರವೇಶ ದ್ವಾರಆಲಮಟ್ಟಿಯಲ್ಲಿರುವ ಕೃಷ್ಣಾ ಗಾರ್ಡನ್, ರಾಕ್ ಗಾರ್ಡನ್, ಇಟಾಲಿಯನ್ ಗಾರ್ಡನ್, ಮುಂತಾದ ಸುಂದರವಾದ ಮನಾಕರ್ಷಕ, ನಯನಮನೋಹರ ಉದ್ಯಾನವನಗಳು ಆಲಮಟ್ಟಿಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸಿವೆ. ಉದ್ಯಾನವನದಲ್ಲಿರುವ ಮೂರ್ತಿಶಿಲ್ಪಿಗಳು, ಪ್ರಾಣಿಗಳ ಮಾದರಿಗಳು, ಕೊಳಗಳು, ಗ್ರಾಮೀಣ ಬದುಕಿನ ಸತ್ವವನ್ನು ಸಾದರ ಪಡಿಸುತ್ತವೆ.