ಸಹಸ್ರಫಣಿ ಜೈನಮಂದಿರ

ದೂರ : ಕೇಂದ್ರ ಬಸ್ ನಿಲ್ದಾಣದಿಂದ-೫ ಕಿ.ಮೀ.

 

ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ೫ ಕಿ.ಮೀ. ದೂರದಲ್ಲಿ ಕ್ರಿ.ಶ. ೫ನೇ ಶತಮಾನಕ್ಕೆ ಸೇರಿದ “ಸಹಸಫಣಿ ಪಾರ್ಶ್ವನಾಥ ಬಸದಿ” ಆಕರ್ಷಕವಾಗಿದೆ. ಈ ಬಸದಿಯು ಚೌಕಾಕಾರವಾಗಿದ್ದು, ಅರೆಮೆರಗುಗೊಳಿಸಿದ ಕಲ್ಲುಗಳಿಂದ ಕಟ್ಟಲಾಗಿದೆ. ದಕ್ಷಿಣದ ಸಣ್ಣ ಪ್ರವೇಶದ್ವಾರವು ಆಯತಾಕಾರದ ಸಭಾಂಗಣಕ್ಕೆ ಒಯ್ದು ಅದು ದೇವಸ್ಥಾನದ ಪಶ್ಚಿಮ ಗೋಡೆಯುದ್ದಕ್ಕೂ ಇರುವ ದೇವಾಲಯದ ಬಾಗಿಲುಗಳವರೆಗೂ ಚಾಚಿಕೊಂಡಿದೆ. ಇಲ್ಲಿ ಮೂರು ಜಿನ ಮೂರ್ತಿಗಳಿದ್ದು, ಮಧ್ಯದಲ್ಲಿಯ ಮೂರ್ತಿ ಸಹಸ್ರಫಣಿ ಪಾರ್ಶ್ವನಾಥರದಾಗಿದೆ.

ಪಾರ್ಶ್ವನಾಥನ ತುದಿಯ ಹೆಡೆಗೆ ಹಾಲು ಎರೆದರೆ ಆ ಹಾಲು ೧೦೦೮ ಹೆಡೆಗಳ ಮುಖಾಂತರ ಹರಿದು ಬಂದು, ಪಾರ್ಶ್ವನಾಥನ ಮಸ್ತಕ ಮತ್ತು ಭುಜಗಳ ಮೇಲೆ ಬೀಳುವ ರೀತಿ ವಿಸ್ಮಯವಾಗಿದೆ.

 

ನರಸಿಂಹ ದೇವಸ್ಥಾನ

ಇದು ಕೇಂದ್ರ ಬಸ್‌ನಿಲ್ದಾಣದ ಹತ್ತಿರ ಇದೆ. ಇದನ್ನು ಎರಡನೆ ಇಬ್ರಾಂಹಿಮ್ ಆದಿಲ್‌ಶಾಹ ಕಟ್ಟಿಸಿದನೆಂದು ಮತ್ತು ಇದರಲ್ಲಿ ಪೂಜೆ ಸಲ್ಲಿಸಿದನೆಂದು ಹೇಳಲಾಗುತ್ತದೆ. ಈ ದೇವಾಲಯ ಹಿಂದು-ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ. ಇದನ್ನು ಇತ್ತೀಚೆಗೆ ನವೀಕರಿಸಲಾಗಿದೆ.

 

ಆಕಾಶವಾಣಿ ಕೇಂದ್ರ ವಿಜಾಪುರ

ಇದು ಮಹಾತ್ಮ ಗಾಂಧಿ ವೃತ್ತದಿಂದ ೪ ಕಿ. ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ವರ್ತುಲ ರಸ್ತೆಯಲ್ಲಿದೆ ಕೇಂದ್ರ ಸರಕಾರವು ಸ್ಥಾಪಿಸಿದ ‘ಪ್ರಸಾರ ಭಾರತಿ’ಯ ಮೊದಲ ಮಗುವಾಗಿ ದಿನಾಂಕ : ೧೮-೦೯-೧೯೯೭ ರಂದು ಎಫ್.ಎಮ್. ಬ್ಯಾಂಡಿನಲ್ಲಿ ಕಾರ್ಯನಿರ್ವಹಿಸುವ ಕೇಂದ್ರವಾಗಿ ಆರಂಭವಾಗಿದೆ.

ಕೆಲವು ಸ್ವಂತ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ಪ್ರಸಾರಮಾಡುವದರೊಂದಿಗೆ ದೆಹಲಿ, ಬೆಂಗಳೂರು, ಮುಂಬೈ ವಿವಿಧಭಾರತಿ ಕೆಂದ್ರಗಳ ಕಾರ್ಯಕ್ರಮಗಳನ್ನು ಮರು ಪ್ರಸಾರ ಮಾಡುತ್ತದೆ. ೨x೩ ಕಿ.ವ್ಯಾ. ಪ್ರಸಾರ ಸಾಮರ್ಥ್ಯ ಹೊಂದಿರುವ ಇದರ ಪ್ರಸಾರವು ಸುಮಾರು ೮೦. ಕಿ.ಮೀ. ದೂರದವರೆಗೂ ಕೇಳಿಬರುತ್ತದೆ.

ಇದು ಕೃಷಿ, ಜಾನಪದ ಕಲೆ, ಶಿಕ್ಷಣ, ಸಾಹಿತ್ಯ, ಸಂಗೀತ, ಮನರಂಜನೆ ಹಾಗೂ ಮಕ್ಕಳ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ನೀಡುತ್ತದೆ.

ಸೂಚನೆ : ಮಕ್ಕಳನ್ನು ಸಂದರ್ಶನಕ್ಕೆ ಕರೆದೊಯ್ಯುವವರು ಮುಂಚಿತವಾಗಿ ಸ್ಟೇಶನ್ ಇಂಜಿನೀಯರ್ ಇವರ ಲಿಖಿತ ಅನುಮತಿ ಪಡೆಯಬೇಕು.

 

ಸೈನಿಕ ಶಾಲೆ
ಸ್ಥಾಪನೆ : ೧೬-೦೯-೧೯೬೩

ದೂರ: ಕೇಂದ್ರ ಬಸ್ ನಿಲ್ದಾಣದಿಂದ-೪ ಕಿ.ಮೀ.

 ಕೇಂದ್ರ ಬಸ್ ನಿಲ್ದಾಣದಿಂದ ಪಶ್ಚಿಮಕ್ಕೆ ೪ ಕಿ.ಮೀ. ದೂರದಲ್ಲಿರುವ ಸೈನಿಕ ಶಾಲೆಯು ಒಂದು ಮುಖ್ಯ ಶಿಕ್ಷಣ ಸಂಸ್ಥೆಯಾಗಿದೆ. ಇದು ಕರ್ನಾಟಕ ರಾಜ್ಯದ ಏಕೈಕ ಸೈನಿಕ ಶಿಕ್ಷಣ ನೀಡುವ ಶಾಲೆಯಾಗಿದೆ. ಕರ್ನಾಟಕದ ವಿದ್ಯಾರ್ಥಿಗಳನ್ನು ೬ನೇ ತರಗತಿಗೆ ಪ್ರವೇಶ ಪರೀಕ್ಷೆ ಮೂಲಕ ಇಲ್ಲಿ ಆಯ್ಕೆ ಮಾಡಲಾಗುತ್ತದೆ. ಕೇಂದ್ರ ಪಠ್ಯವಸ್ತುವಿನ ಬೋಧನೆ ಇಲ್ಲಿ ಜರುಗುತ್ತಿದ್ದು, ದೇಶಕ್ಕೆ ಧಿರೋದಾತ್ತ ಸೈನಿಕರನ್ನು ತಯಾರಿಸುವ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ. ಪ್ರತಿ ವರ್ಷ ೯೦ ರಿಂದ ೧೦೦ ಬಾಲಕರನ್ನು ಮೆರಿಟ್ ಆದಾರದ ಮೇಲೆ ಸೇರಿಸಿಕೊಳ್ಳಲಾಗುತ್ತದೆ. ಒಮ್ಮೆ ಸೇರಿದ ಮಕ್ಕಳು ೧೨ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಾರೆ. ಸಧ್ಯ ೬೨೪ ಬಾಲಕರು ಶಿಕ್ಷಣ ಪಡೆಯುತ್ತಿದ್ದಾರೆ.

ಸೂಚನೆ : ಶಾಲೆಯನ್ನು ಸಂದರ್ಶಿಸುವರು ಪ್ರಾಚಾರ್ಯರ ಪೂರ್ವಾನುಮತಿ ಪಡೆಯಬೇಕಾಗುತ್ತದೆ.

 

ವಿಜಾಪುರ ಗ್ರಾಮೀಣ

ತೊರವಿ

ದೂರ / ಮಾರ್ಗ
ವಿಜಾಪುರ ನಗರದಿಂದ : ೬ ಕಿ. ಮೀ.
ಮಾರ್ಗ : ವಿಜಾಪುರದಿಂದ ಅಥಣಿ


‘ತೊರವಿ’ ವಿಜಾಪುರದಿಂದ ಪಶ್ಚಿಮಕ್ಕೆ ೬ ಕಿ.ಮೀ. ಅಂತರದಲ್ಲಿ ಅಥಣಿಗೆ ಹೋಗುವ ಮಾರ್ಗದಲ್ಲಿರುವ ಗ್ರಾಮ. ಈ ಗ್ರಾಮದಲ್ಲಿ ಪ್ರಾಚೀನ ಶ್ರೀಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಈ ದೇವಸ್ಥಾನ ಗುಹಾಂತರ ದೇವಾಲಯದಂತೆ ಗೋಚರಿಸುತ್ತದೆ. ಆಕರ್ಷಕವಾದ ನರಸಿಂಹ ವಿಗ್ರಹ ಗಮನ ಸೆಳೆಯುತ್ತದೆ.

೧೫ ನೇ ಶತಮಾನದಲ್ಲಿ ನರಹರಿ ಎಂಬ ಕವಿ, ‘ಕುಮಾರ ವಾಲ್ಮೀಕಿ’ ಎಂಬ ಹೆಸರಿನಿಂದ ನರಸಿಂಹ ದೇವಸ್ಥಾನದಲ್ಲಿಯೇ ಕುಳಿತು ‘ತೊರವಿ ರಾಮಾಯಣ’ವನ್ನು ರಚಿಸಿದ ಎಂಬ ಪ್ರತೀತಿ ಇದೆ. ‘ತೊರವಿ ರಾಮಾಯಣ’ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ.

ತೊರವಿಯಲ್ಲಿ ಪುರಾತನ ಕಾಲದ ಲಕ್ಷ್ಮೀ ದೇವಸ್ಥಾನವನ್ನು ವೀಕ್ಷಿಸಬಹುದು ಇತ್ತೀಚೆಗೆ ಪ್ರಾರಂಭವಾದ ದ್ರಾಕ್ಷಿ ಸಂಸ್ಕರಣದ ಘಟಕಕ್ಕೆ ಭೇಟಿ ನೀಡಬಹುದು.

 

ನವರಸಪುರ – ಸಂಗೀತ ಮಹಲ

ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ

ತೊರವಿ ಗ್ರಾಮಕ್ಕೆ ಹೊಂದಿಕೊಂಡಂತೆ ಈ ಸ್ಮಾರಕವಿದೆ. ಕಮಾನದ ರಚನೆ ಹೊಂದಿದ ಭವ್ಯ ಕಟ್ಟಡದ ಅವಶೇಷಗಳಿರುವ ಮಹಲ. ಇದನ್ನು ಎರಡನೇ ಇಬ್ರಾಹಿಮ್ ಆದಿಲ್‌ಶಾಹಿಯು ಸಂಗೀತ ಕಚೇರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಲುವಾಗಿ ನಿರ್ಮಿಸಿದ್ದ. ಈಗಲೂ ಜಿಲ್ಲಾಡಳಿತ ‘ನವರಸಪುರ ಸಂಗೀತ ಉತ್ಸವ’ ಎಂಬ ಜಿಲ್ಲಾ ಮಟ್ಟದ ಉತ್ಸವವನ್ನು ನಡೆಸುತ್ತದೆ.

 

ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯ

ತೊರವಿ ಗ್ರಾಮದ ಸಮೀಪದಲ್ಲಿಯೇ, ರಾಜ್ಯದ ಏಕೈಕ ವಿಶ್ವವಿದ್ಯಾನಿಲಯವಾಗಿ ಕರ್ನಾಟಕ ಮಹಿಳಾ ವಿಶ್ವವಿದ್ಯಾನಿಲಯವು ತಲೆ ಎತ್ತಿ ನಿಂತಿದೆ. ಮಹಿಳೆಯರನ್ನು ಶಿಕ್ಷಣದಿಂದ ಸಶಕ್ತರನ್ನಾಗಿಸುವ ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ತರುವ ಧ್ಯೇಯದೊಂದಿಗೆ ೨೦೦೩ ರಲ್ಲಿ ಸ್ಥಾಪಿತವಾದ ಇದರಲ್ಲಿ ಪ್ರಸ್ತುತ ೧೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದ ವಿವಿಧ ಭಾಗಗಳ ಮಹಿಳಾ ವಿದ್ಯಾರ್ಥಿನಿಯರು ಇಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ.

 

ಕುಮಟಗಿ

ದೂರ / ಮಾರ್ಗ
ವಿಜಾಪುರ ನಗರದಿಂದ : ೧೬ ಕಿ. ಮೀ.
ಮಾರ್ಗ : ವಿಜಾಪುರದಿಂದ ಸಿಂದಗಿ

ಇದು ಆದಿಲ್‌ಶಾಹಿ ಅರಸರ ವಿಹಾರ ತಾಣದ ಅವಶೇಷಗಳಿರುವ ಸ್ಥಳ. ಕುಮಟಗಿ ಗ್ರಾಮದ ಸಮೀಪವಿರುವ ಕೆರೆಯ ಬದಿಯಲ್ಲಿ ಸ್ಮಾರಕಗಳ ಸಮುಚ್ಛಯವಿದೆ. ಪಾತರಗಿತ್ತಿ ಮಹಲ, ಜಲ ಕ್ರೀಡಾಂಗಣ, ಮಹಲಿನ ಒಳಗೋಡೆಯ ಮೇಲಿನ  ಚಿತ್ರಗಳು ಆಕರ್ಷಕವಾಗಿವೆ. ನೀರಿನ ಕಾಲುವೆಗಳು, ಕೊಳವೆಗಳು ಗಮನ ಸೆಳೆಯುತ್ತವೆ.

 

ಕಾಖಂಡಕಿ

ದೂರ / ಮಾರ್ಗ

ವಿಜಾಪುರ ನಗರದಿಂದ ೩೦ ಕಿ.ಮೀ
ಮಾರ್ಗ – ವಿಜಾಪುರದಿಂದ ಜಮಖಂಡಿ

ಶ್ರೀ ಮಹಾಪತಿದಾಸರ ವೃಂದಾವನ

ಜಿಲ್ಲೆಯಲ್ಲಿ ಯೋಗಿಗಳೆಂದು ಖ್ಯಾತಿಹೊಂದಿದವರು ಕಾಖಂಡಕಿಯ ಶ್ರೀಮಹಿಪತಿದಾಸರು. ಎರಡನೇ ಅಲಿ ಆದಿಲ್‌ಶಾಹಿ (ಕ್ರಿ.ಶ.೧೬೫೬-ಕ್ರಿ.ಶ.೧೬೭೨) ವಿಜಾಪುರವನ್ನು ಆಳುತ್ತಿದ್ದ ಕಾಲದಲ್ಲಿ ಬಾದಶಹನ ಆಸ್ಥಾನದಲ್ಲಿ ದಿವಾನರಾಗಿದ್ದ ಶ್ರೀಮಹಿಪತಿರಾಯರು ಸಾರವಾಡದ ಶ್ರೀಭಾಸ್ಕರ ಸ್ವಾಮಿಗಳ ಅನುಗ್ರಹಕ್ಕೆ ಒಳಗಾಗಿ ಅಗ್ರಹಾರವಾಗಿದ್ದ ಕಾಖಂಡಕಿಗೆ ಬಂದು ಯೋಗಸಾಧನೆ, ಅನುಷ್ಠಾನದಲ್ಲಿ ತೊಡಗಿ ಆಧ್ಯಾತ್ಮಿಕ ಲೋಕದಲ್ಲಿ ಉನ್ನತ ಶಿಖರಕ್ಕೆ ತಲುಪಿದರು. ಕನ್ನಡ, ಮರಾಠಿ, ಹಿಂದಿ  ಮಿಶ್ರಭಾಷೆಗಳಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿ ಶ್ರೇಷ್ಠ ದಾಸರಾಗಿದ್ದಾರೆ. ಕಾಖಂಡಕಿಯಲ್ಲಿ ಶ್ರೀಮಹಿಪತಿದಾಸರ, ಶ್ರೀಕೃಷ್ಣರಾಯರ ವೃಂದಾವನಗಳಿವೆ.

 

ನಂದಿ ಸಕ್ಕರೆ ಕಾರ್ಖಾನೆ

ದೂರ / ಮಾರ್ಗ
ವಿಜಾಪುರ ನಗರದಿಂದ – ೫೨ ಕಿ.ಮೀ.
ಮಾರ್ಗ – ವಿಜಾಪುರದಿಂದ –ಗಲಗಲಿ

ಈ ಕಾರ್ಖಾನೆಯು ವಿಜಾಪುರದಿಂದ ೫೨ ಕಿ. ಮೀ ಅಂತರದಲ್ಲಿ ಗಲಗಲಿಗೆ ಹೋಗುವ ಮಾರ್ಗದಲ್ಲಿದೆ. ವಿಜಾಪುರ ಜಿಲ್ಲೆಯಲ್ಲಿ ಸ್ಥಾಪಿತವಾಗಿರುವ ಪ್ರಪ್ರಥಮ ಸಕ್ಕರೆ ಕಾರ್ಖಾನೆ. ಕಬ್ಬು ಬೆಳೆಗಾರರಿಗೆ ಈ ಕಾರ್ಖಾನೆ ವರದಾನವಾಗಿದ್ದು, ರೈತರ ಅನುಕೂಲಕ್ಕಾಗಿ ಕೃಷಿ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗವನ್ನು ಪ್ರಾರಂಭಿಸಿದೆ. ೧೮.೧೪ ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಹೊಂದಿದೆ. ಸಕ್ಕರೆ ಉತ್ಪಾದನಾ ವಿಧಾನವನ್ನು ಮಕ್ಕಳಿಗೆ ಇಲ್ಲಿ ಪರಿಚಯಿಸಬಹುದಾಗಿದೆ.

 

ಬಸವನ ಬಾಗೇವಾಡಿ ತಾಲೂಕು

ಬಸವನ ಬಾಗೇವಾಡಿ

ದೂರ: ಜಿಲ್ಲಾ ಕೇಂದ್ರದಿಂದ-೪೩ ಕಿ.ಮೀ.

ಬಸವೇಶ್ವರ ದೇವಾಲಯ

ಬಸವನ ಬಾಗೇವಾಡಿ ಪಟ್ಟಣವು ಜಿಲ್ಲಾ ಕೇಂದ್ರ ವಿಜಾಪುರದಿಂದ ಪೂರ್ವ ದಿಕ್ಕಿಗೆ ೪೩ ಕಿ.ಮೀ. ದೂರದಲ್ಲಿದೆ. ಪಟ್ಟಣದ ಪ್ರಮುಖ ದೇವಾಲಯವೆಂದರೆ “ಮೂಲನಂದೀಶ್ವರ”ನ ದೇವಾಲಯವಾಗಿದೆ. ೧೨ನೇ ಶತಮಾನಕ್ಕೂ ಹಳೆಯದಾದ ಈ ದೇವಾಲಯದ ಒಳಗೆ ಸಂಗಮೇಶ್ವರ ದೇವಾಲಯವೂ ಇದೆ ಹಾಗೂ ಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ ಮುಂತಾದವರ ವಿಗ್ರಹಗಳನ್ನು ಇಲ್ಲಿ ಕಾಣಬಹುದಾಗಿದೆ. ದೇವಾಲಯದ ಪ್ರವೇಶದ್ವಾರದಲ್ಲಿ ಬಲಕ್ಕೆ ಇರುವ ಶಿಲಾಶಾಸನಗಳು ಗಮನಾರ್ಹವಾಗಿವೆ. ಈ ದೇವಾಲಯದ ಹೊರವಲಯದ ಪ್ರಾಂಗಣವು ವಿಶಾಲವಾಗಿದ್ದು, ಅದಕ್ಕೆ ಹೊಂದಿಕೊಂಡಂತೆ “ಬಸವ ವೇದಿಕೆ” ಹಾಗೂ “ಬಸವತೀರ್ಥ” ಪ್ರವಾಸಿಗರ ಪ್ರೇಕ್ಷಣೀಯ ಸ್ಥಳಗಳಾಗಿವೆ.

 

ಬಸವ ಸ್ಮಾರಕ

ಜಗಜ್ಯೋತಿ ಶ್ರೀ ಬಸವೇಶ್ವರರು

ಬಸವನ ಬಾಗೇವಾಡಿಯಲ್ಲಿ ಪಟ್ಟಣದ ಮಧ್ಯಭಾಗದಲ್ಲಿರುವ ಬಸವಣ್ಣನವರು ಜನಿಸಿದ ಮನೆಯನ್ನು “ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ”ದ ಅಡಿಯಲ್ಲಿ “ಬಸವ ಸ್ಮಾರಕ”ವಾಗಿ ನಿರ್ಮಾಣ ಮಾಡಲಾಗಿದೆ. ಸದರಿ ಬಸವ ಸ್ಮಾರಕವು ಊರಿನ ಮಧ್ಯಭಾಗದಲ್ಲಿದ್ದು, ಅದರ ಒಳಾಂಗಣ ವಿಶಾಲವಾಗಿ ನಿರ್ಮಾಣವಾಗಿದೆ. ಅದರ ಒಳಗೆ ಮೂರ್ತಿ ಶಿಲಾರೂಪಕಗಳಿದ್ದು, ಅವು ಬಸವಣ್ಣನವರ ಬಾಲ್ಯದಿಂದ ಹಿಡಿದು ಐಕ್ಯವಾಗುವವರೆಗಿನ ಸಾಧನೆಗಳನ್ನು, ಸಂಗತಿಗಳನ್ನು ತಿಳಿಸಿ ಕೊಡುತ್ತವೆ. ಬಸವ ಸ್ಮಾರಕದ ಆಧುನಿಕ ಶೈಲಿಯ ಕಟ್ಟಡವೂ ಪ್ರವಾಸಿಗರ ಮನಸೂರೆಗೊಳ್ಳುತ್ತವೆ.