’ವೀಣೆಯ ಬೆಡಗಿದು ಮೈಸೂರು’ ಎನ್ನಿಸಿಕೊಳ್ಳುವ ಹಾಗೆ ಮಾಡಿದವರು ಮೈಸೂರಿನ ಮಹಾವೈಣಿಕರು ವೀಣೆ ಶೇಷಣ್ಣನವರು. ಅವರ ಸಮಕಾಲೀನರಾಗಿದ್ದ ವಿಭೂತಿ ಪುರುಷರೊಬ್ಬರು ನಮ್ಮ ದೇಶದ ಸಂಗೀತ ಕಲೆಯ ವೈಭವವನ್ನು ಭಾರತದ ಮೂಲೆಮೂಲೆಗೂ ಸಾರಿದರು. ಅಷ್ಟೇ ಅಲ್ಲ, ತಮ್ಮ ಸ್ವಂತ ಸಂಪಾದನೆಯಿಂದ ಲೋಕೋತ್ತರವಾದ ಮಂದಿರ ಒಂದನ್ನು ಮೈಸೂರು ನಗರದಲ್ಲಿ ಕಟ್ಟಿಸಿದರು. ಹಲವು ಪ್ರಸಿದ್ಧ ಶಿಲ್ಪಕಲಾ ಕೃತಿಗಳ ಸೊಗಸು ಇದಕ್ಕಿಲ್ಲದಿರಬಹುದು; ಹಲವು ಭವ್ಯ ಕಟ್ಟಡಗಳ ಗಾತ್ರ ಇದಕ್ಕಿಲ್ಲದಿರಬಹುದು. ಆದರೆ ಇದರ ಒಳಗಿನ ಪ್ರಶಾಂತತೆ, ದೈವಿಕ ವಾತಾವರಣ ಮತ್ತು ಸರಳತೆ ಆ ಕಟ್ಟಡಗಳಿಗಿಲ್ಲ.

ಎರಡು ಕಾಣಿಕೆಗಳು

ಯಾರಾದರೂ, “ಮೈಸೂರಿನಲ್ಲಿ ನೋಡಬೇಕಾದ ಸ್ಥಳಗಳು ಯಾವುವು?” ಎಂದು ಕೇಳಿದರೆ ಆ ಮಂದಿರದ ಹೆಸರನ್ನು ಧಾರಾಳವಾಗಿ ಹೇಳಬಹುದು. ಅದಕ್ಕೆ ಕಾರಣವಿಷ್ಟೆ. ಒಬ್ಬ ಕಲಾವಿದನು ತನ್ನ ಇಡೀ ಬಾಳಿನಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಸುಂದರವಾದ ಹಾಗೂ ದೈವಿಕತೆಯಿಂದ ಕೂಡಿದ ಮಂದಿರವೊಂದನ್ನು ಕಟ್ಟಿಸಿ ನಾಡಿಗೆ ಅರ್ಪಣೆ  ಮಾಡಿದುದು ಸಾಮಾನ್ಯವಲ್ಲ. ಆತನೇನು ಒಬ್ಬ ಶ್ರೀಮಂತ ಚಕ್ರವರ್ತಿಯಲ್ಲ. ಅದು ಒಂದು ಸರ್ಕಾರ ಹಣ ಖರ್ಚು ಮಾಡಿ ಕಟ್ಟಿಸಿದ ಕಟ್ಟಡವೂ ಅಲ್ಲ. ಚಿಕ್ಕ ವಯಸ್ಸಿನಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಆ ಕಲಾವಿದ. ಅದೊಂದರಿಂದಲೇ ಆ ಕಲಾವದನ ತ್ಯಾಗವು ಎಂತಹುದು ಎಂಬುದನ್ನು ತಿಳಿಯಬಹುದು. ಸಂಸ್ಥೆಗಳು ಆ ಮಂದಿರಕ್ಕಿಂತಲೂ ಭಾರೀ ಭವನಗಳನ್ನು ಕಟ್ಟಿಸಿರ ಬಹುದು. ಆದರೆ ಅವುಗಳು ಮೈಸೂರಿನ ಶ್ರೀ ಪ್ರಸನ್ನ ಸೀತಾರಾಮ ಮಂದಿರಕ್ಕೆ ಸರಿದೂಗಲಾರವು. ಆ ಮಂದಿರವನ್ನು ಕಟ್ಟಿಸಿ ಜನತೆಯ ಪದತಳದಲ್ಲಿ ಅರ್ಪಿಸಿದ ಮಹಾಪುರುಷರೇ ಗಾವಿಶಾರದ ಬಿಡಾರಂ ಕೃಷ್ಣಪ್ಪನವರು. ಅವರ ಕೊಡುಗೆಗಳು ಎರಡು. ಒಂದು ಶ್ರೀ ಪ್ರಸನ್ನ ಸೀತಾರಾಮ ಮಂದಿರ. ಅದು ನಾಡಿಗಾಯಿತು. ಮತ್ತೊಂದು ಅಪ್ರತಿಮ ಪಿಟೀಲು ವಿದ್ವಾಂಸ, ಸಂಗೀತಕಲಾನಿಧಿ ಟಿ. ಚೌಡಯ್ಯ. ಆ ಕೊಡುಗೆ ಕರ್ನಾಟಕ ಸಂಗೀತಕ್ಕಾಯಿತು. ತಮಗಾಗಿ ಏನನ್ನೂ ಉಳಿಸಿಕೊಳ್ಳಲಿಲ್ಲ. ಆದರೆ ಕೃಷ್ಣಪ್ಪನವರು ನಡೆದ ದಾರಿ ಮತ್ತು ನಡೆಸಿದ ಜೀವನ ಕಲಾವಿದರಿಗೆ ಮಾದರಿಯಾಗಿದೆ.

ಬಿಡಾರದವರು

ಮುಮ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನವನ್ನು ಆಳುತ್ತಿದ್ಆಗ, ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ಮಂಡಳಿಯೊಂದು ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯಗಳಲ್ಲಿ ತನ್ನ ಯಕ್ಷಗಾನ ಬಯಲಾಟಗಳನ್ನಾಡುತ್ತಾ ಜನಾದರಣೀಯವಾಗಿತ್ತು. ಒಮ್ಮೆ ದೊರೆಗಳು ಧರ್ಮಸ್ಥಳದಲ್ಲಿ ಆ ಮಂಡಳಿಯ ’ದಶಾವತಾರ’ ಬಯಲಾಟವನ್ನು ನೋಡಿ ಸಂತೋಷಪಟ್ಟರು. ತಮ್ಮ ರಾಣೀವಾಸದವರೂ ಆ ಮಂಡಳಿಯ ಬಯಲಾಟಗಳನ್ನು ನೋಡಲಿ ಎನಿಸಿತು. ಮಂಡಳಿಯನ್ನು ಮೈಸೂರಿಗೆ ಕರೆಸಿ ಅರಮನೆಯಲ್ಲಿ ಬಯಲಾಟಗಳನ್ನಾಡಲು ಅವಕಾಶ ಮಾಡಿಕೊಟ್ಟರು. ಆ ಮಂಡಳಿಗೆ ’ಬಿಡಾರದವರು’ ಎಂಬ ಹೆಸರು ಬಂದಿತು. ಮಂಡಳಿಯ ನಟವರ್ಗದಲ್ಲಿ ವಿಶ್ವನಾಥಯ್ಯ ಎಂಬುವನು ಹೆಂಗಸರ ಪಾತ್ರಗಳನ್ನು ಧರಿಸುತ್ತಿದ್ದ. ಅವನ ಹೆಂಡತಿ ಸರಸ್ವತಮ್ಮ  ಮತ್ತು ಇಬ್ಬರು ಮಕ್ಕಳು ಅವನ ಜೊತೆಗೆ ಇದ್ದರು. ಅವರಿಗೂ ’ಬಿಡಾರದವರು’ ಎಂಬ ಹೆಸರು ಬಂದು ಅದು ಶಾಶ್ವತವಾಗಿ ವಿಶ್ವನಾಥಯ್ಯನ ಮನೆಹಸರಾಗಿ ಉಳಿಯಿತು.

ಬಡತನದ ಬೇಗೆ

ವಿಶ್ವನಾಥಯ್ಯ ಉಡುಪಿಯ ಹತ್ತಿರದ ನಂದಳಿಕೆ ಗ್ರಾಮದವರು. ಅವರಿಗೆ ಇದ್ದ ಮಕ್ಕಳಿಬ್ಬರೂ ಗಂಡು ಮಕ್ಕಳು. ದೊಡ್ಡವನಾದ ಸುಬ್ಬರಾಯ ೧೮೬೧ ರಲ್ಲಿ ಹುಟ್ಟಿದ. ಎರಡನೆಯವನ ಜನನ ೧೮೬೬ ರಲ್ಲಿ. ಗೋಕುಲಾಷ್ಟಮಿಯಂದು ಹುಟ್ಟಿದುದರಿಂದ ಆ ಮಗುವಿಗೆ ಕೃಷ್ಣಪ್ಪ ಎಂದು ನಾಮಕರಣ ಮಾಡಲಾಯಿತು. ವಿಶ್ವನಾಥಯ್ಯ ಸ್ತ್ರೀ ಪಾತ್ರಗಳನ್ನು ವಹಿಸುವುದರಲ್ಲಿ ಎತ್ತಿದ ಕೈ ಎಂದು ಮೊದಲೇ ಹೇಳಿದೆ. ’ದಶಾವತಾರ’ ದಲ್ಲಿ ಅವರು ವಹಿಸಿದದ ಸೀತಾ ದೇವಿಯ ಪಾತ್ರವೂ ದೊರೆಗಳ ಮನಸ್ಸಿನಲ್ಲಿ ಅಚ್ಚೊತ್ತಿದ್ದ ಹಾಗಿದ್ದು ಮುಂದೆ ಅದು ಕೃಷ್ಣಪ್ಪನವರ ಬಾಳಿನ ಬೆಳಕಾಯಿತು.

ಕೃಷ್ಣಪ್ಪನಿಗೆ ಕೇವಲ ಹತ್ತು ವರ್ಷ ವಯಸ್ಸಾಗುವುದರೊಳಗೆ, ಸಂಸಾರದ ಹೊಣೆಯನ್ನು ಹೆಂಡತಿ ಸರಸ್ವತಮ್ಮನವರ ಮೇಲೆ ಹೇರಿ ವಿಶ್ವನಾಥಯ್ಯನವರು ಕಣ್ಣುಮುಚ್ಚಿದರು. ಹದಿನೈದು ವರ್ಷ ವಯಸ್ಸಿನ ಸುಬ್ಬರಾಯನನ್ನೂ ಹತ್ತು ವರ್ಷದ ಕೃಷ್ಣಪ್ಪನನ್ನು ಕಟ್ಟಿಕೊಂಡು ಒಂದು ತುತ್ತು ಅನ್ನಕ್ಕಾಗಿ ಆ ಸಾಧ್ವಿಯು ಪಟ್ಟ ಪಾಡು ಅಷ್ಟಿಷ್ಟಲ್ಲ. ಸುಬ್ಬರಾಯನಿಗೆ ಸೊಗಸಾದ ಕಂಠವಿತ್ತು. ಅನೇಕ ನಾಟಕದ ಮಟ್ಟುಗಳನ್ನೂ ದೇವರನಾಮಗಳನ್ನೂ ಇಂಪಾಗಿ ಹಾಡುತ್ತ ಭಿಕ್ಷೆಯೆತ್ತಿ ತನ್ನ ತಾಯಿ ಮತ್ತು ತಮ್ಮನನ್ನು ಸಾಕುತ್ತಿದ್ದನು. ಕೃಷ್ಣಪ್ಪನಿಗೆ ದೇವರನಾಮಗಳ ಮೂಲಕ ಸಂಗೀತದ ಪ್ರಥಮ ಪರಿಚಯವನ್ನು ಮಾಡಿಸಿ ಕೊಟ್ಟವನೇ ಸುಬ್ಬರಾಯ.  ಯಾವ ಕೆಲಸವನ್ನೂ ಮಾಡದೆ ಮನೆಯಲ್ಲಿ ತುಂಟನಾಗಿ ಕಾಲ ಕಳೆಯುತ್ತಿದ್ದ ಕೃಷ್ಣಪ್ಪನನ್ನೂ ಬಲವಂತವಾಗಿ ಕರೆದುಕೊಂಡು ಹೋಗಲಾರಂಭಿಸಿದ ಮೇಲೆಯೇ, ತಾಯಿಗೆ ಮನೆಯಲ್ಲಿ ಸ್ವಲ್ಪ ನೆಮ್ಮದಿ ಸಿಕ್ಕಲಾರಂಭಿಸಿದುದು.

ಒಂದು ಶುಕ್ರವಾರ ಮೈಸೂರಿನಲ್ಲಿ ವಾಸವಾಗಿದ್ದ ಕರೂರು ರಾಮಸ್ವಾಮಿಯೆಂಬ ಸುಮಾರು ೭೦ ವರ್ಷ ವಯಸ್ಸಿನ ಪ್ರಸಿದ್ಧ ವಿದ್ವಾಂಸರ ಸಂಗೀತ ಕಛೇರಿ ಏರ್ಪಾಡಾಗಿತ್ತು. ಅದನ್ನು ಕೇಳಲು ಸರಸ್ವತಮ್ಮ ತನ್ನ ಇಬ್ಬರು ಮಕ್ಕಳೊಡನೆ ಹೋಗಿದ್ದರು. ಕಚೇರಿ ಚೆನ್ನಾಗಿತ್ತು. ಸರಸ್ವತಮ್ಮನಿಗೆ ಆ ವಿದ್ವಾಂಸರಿಂದ ಕೃಷ್ಣಪ್ಪನಿಗೆ ಸಂಗೀತವನ್ನು ಹೇಳಿಸಬೇಕೆಂದು ಆಸೆ. ಕೃಷ್ಣಪ್ಪನನ್ನು ಶಿಷ್ಯನನ್ನಾಗಿ ಮಾಡಿಕೊಳ್ಳಬೇಕೆಂದು ಆಕೆ ರಾಮಸ್ವಾಮಿಯವರನ್ನು ಬೇಡಿಕೊಂಡರು. ಕೀರ್ತಿಶಿಖರದಲ್ಲಿ ಮೆರೆಯುತ್ತಿದ್ದ ಆ ವಿದ್ವಾಂಸರೆಲ್ಲಿ? ಬಡತನದ ದಳ್ಳುರಿಯಲ್ಲಿ ಬೇಯುತ್ತಿದ್ದ ಕೃಷ್ಣಪ್ಪನೆಲ್ಲಿ? ಆಗದ ಮಾತು. ಕುಂಟು ನೆಪಗಳನ್ನು ಒಡ್ಡಿ ರಾಮಸ್ವಾಮಿ ಯವರು ಜಾರಿಕೊಂಡರು.

ಅಣ್ಣ ಸುಬ್ಬರಾಯನ ಜೊತೆಯಲ್ಲಿ ಭಿಕ್ಷಾಟನೆಗೆ ಹೋಗುವುದೊಂದನ್ನು ಬಿಟ್ಟು ಕೃಷ್ಣಪ್ಪನಿಗೆ ಬೇರೆ ಮಾರ್ಗವೇ ಇರಲಿಲ್ಲ. ಆದರೆ ತುಂಟ ಸ್ವಭಾವದ ಅವನು ಅನೇಕ ವೇಳೆ ಸೋಮಾರಿತನದಿಂದ ಭಿಕ್ಷಾಟನೆಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದ. ಇದರಿಂದ ಮನೆಯಲ್ಲಿ ಜೀವನ ನಡೆಯುವುದೇ ಕಷ್ಟವಾಯಿತು. ಸುಬ್ಬರಾಯ ಹೇಳಿ ನೋಡಿದ. ತಮ್ಮ ದಾರಿಗೆ ಬರಲಿಲ್ಲ. ಮದುವೆ ಮಾಡಿಕೊಂಡು ಬೇರೆ ಸಂಸಾರವನ್ನು ಮಾಡಿದ. ಆಗ ಕೃಷ್ಣಪ್ಪನಿಗೆ ಬಡತನದ ಅರಿವಾಯಿತು. ಆದರೂ ಭಿಕ್ಷಾಟನೆಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದ. ತಾಯಿಯು ದಂಡಿಸ ಬೇಕಾಗಿತ್ತು. ಇದರಿಂದ ಕಣ್ಣು ತೆರೆದ ಕೃಷ್ಣಪ್ಪ ಪ್ರತಿದಿನವೂ ಮೈಸೂರು ಅರಮನೆಯ ಕೋಟೆ ಆಂಜನೇಯನ ದೇವಸ್ಥಾನದ ಮುಂದೆ ರಸ್ತೆಯಲ್ಲಿ ಕುಳಿತು ತನ್ನಲ್ಲಿದ್ದ ಬಟ್ಟೆಯ ತುಂಡನ್ನು ನೆಲದ ಮೇಲೆ ಹರಡಿ ಭಕ್ತಿಯಿಂದ ಆಂಜನೇಯನನ್ನು ಕುರಿತು ಹಾಡುತ್ತಿದ್ದ. ದಾರಿಹೋಕರು ಬಟ್ಟೆಯ ತುಂಡಿನ ಮೇಲೆ ಬಿಸಾಡುತ್ತಿದ್ದ ಪುಡಿಗಾಸುಗಳನ್ನು ತಂದು ಮನೆಯಲ್ಲಿ ತಾಯಿಗೆ ಕೊಟ್ಟು, ಆ ಉತ್ಪತ್ತಿಯಿಂದ ಜೀವನವನ್ನು ನಡೆಸಲಾರಂಭಿಸಿದ.

ಅಂಜಿಕಿನ್ಯಾತಕಯ್ಯ?

ಒಂದು ದಿನ ಕೃಷ್ಣಪ್ಪ ತನ್ನ ಆಟದಲ್ಲಿ ಮೈಮರೆತು ಸ್ನೇಹಿತರ ಜೊತೆಯಲ್ಲಿ ಹೊಡೆದಾಟದಲ್ಲೇ ಕಾಲಕಳೆದ. ಅಂದು ಒಂದು ಕಾಸೂ ಸಂಪಾದನೆಯಾಗಲಿಲ್ಲ. ಏನು ಮಾಡುವುದಕ್ಕೂ ತೋಚಲಿಲ್ಲ. ಆಂಜನೇಯನ ದೇವಸ್ಥಾನದ ಗೋಪುರವನ್ನೇ ನೆಟ್ಟದೃಷ್ಟಿಯಿಂದ ನೋಡಲಾರಂಭಿಸಿದ. ಆಗ ಒಂದು ಕೋತಿಯು ಕೃಷ್ಣಪ್ಪನನ್ನು ಕರೆಯುತ್ತಿರುವಂತೆ ಕಂಡಿತು. ಕೃಷ್ಣಪ್ಪನಿಗೆ ಹೆದರಿಗೆ ಉಂಟಾಗಿ ಕಣ್ಣು ಮುಚ್ಚಿಕೊಂಡು ಪುರಂದರದಾಸರ ಕಲ್ಯಾಣಿ ರಾಗದ ’ಅಂಜಿಕಿನ್ಯಾತಕಯ್ಯ, ಸಂಜೀವರಾಯರ ಸ್ಮರಣೆ ಮಾಡಿದ ಮೇಲೆ’ ಎಂಬ ದೇವರನಾಮವನ್ನು ಬಹಳ ಭಕ್ತಿಯಿಂದ ಹಾಡಿದ. ಆಹಾರವನ್ನೇ ಕಾಣದೆ ಕೃಶವಾಗಿದ್ದ ಕೃಷ್ಣಪ್ಪ ನೆಲಕ್ಕುರುಳಿ ಜ್ಞಾನ ತಪ್ಪಿದ. ಆ ಸಮಯದಲ್ಲಿ ಡಾ. ನಂಜುಂಡರಾಯರೆಂಬುದು ಅಲ್ಲಿಗೆ ಬಂದರು. ಪ್ರತಿದಿನವೂ ಅವರು ಕಚೇರಿಯಿಂದ ಮಧ್ಯಾಹ್ನ ಮನೆಗೆ ಹೋಗುವಾಗ ಕೃಷ್ಣಪ್ಪನು ಆಂಜನೇಯನ ದೇವಸ್ಥಾನದ ಮುಂದೆ ಕುಳಿತು ಹಾಡುತ್ತಿದ್ದುದನ್ನು ನೋಡುತ್ತಿದ್ದರು. ಆ ದಿವಸ ಅವರು ಅಲ್ಲಿಗೆ ಬಂದಾಗ ಕೃಷ್ಣಪ್ಪ ನೆಲದ ಮೇಲೆ ಜ್ಞಾನವಿಲ್ಲದೆ ಬಿದ್ದಿದ್ದಾನೆ. ಕೂಡಲೆ ಪ್ರಥಮ ಚಿಕಿತ್ಸೆಯನ್ನು ಮಾಡಿದರು. ಕೃಷ್ಣಪ್ಪನಿಗೆ ಎಚ್ಚರವಾದನಂತರ ಅವನಿಂದ ನಡೆದುದನ್ನು ಕೇಳಿ ಕೆಲವು ಹಣ್ಣುಗಳನ್ನು ತೆಗೆಸಿಕೊಟ್ಟು, ಮೇಲೆ ಸ್ವಲ್ಪ ಹಣವನ್ನೂ ಕೊಟ್ಟರು. ತಮ್ಮ ಜೊತೆಯಲ್ಲಿ ಮಂಡಿಪೇಟೆಗೆ ಕರೆದುಕೊಂಡು ಹೋಗಿ ತಮಗೆ ಪರಿಚಯವಿದ್ದ ಮಂಡೀ ವರ್ತಕರಿಂದ ಕೃಷ್ಣಪ್ಪ ಮತ್ತು ಅವನ ತಾಯಿಗೆ ಕೆಲವು ದಿನಗಳಿಗೆ ಬೇಕಾದಷ್ಟು ದವಸ ಧಾನ್ಯಗಳನ್ನು ಕೊಡಿಸಿ ಮನೆಗೆ ಕಳುಹಿಸಿದರು.

ಕೃಷ್ಣಪ್ಪ ಆಂಜನೇಯನನ್ನು ಕುರಿತು ಹಾಡುತ್ತಿದ್ದ

ಬೀದಿಯ ಗಾಯಕ ಅರಮನೆಯ ನಾಟಕಶಾಲೆಗೆ

ನಂಜುಂಡರಾಯರಿಂದ ಉಪಚರಿಸಲ್ಪಟ್ಟ ಕೃಷ್ಣಪ್ಪ ಮನೆಗೆ ಹಿಂತಿರುಗಿದ. ಮನೆ ತಲುಪುವ ಹೊತ್ತಿಗೆ ಅರಮನೆಯ ಕಚೇರಿಯ ಅಧಿಕಾರಿಯೊಬ್ಬರು ಮನೆಯ ಮುಂದೆ ನಿಂತಿದ್ದಾರೆ! ಅದನ್ನು ನೋಡಿ ಕೃಷ್ಣಪ್ಪನಿಗೆ ಎದೆ ಧಸಕ್ಕೆಂದಿತು. ತಾನು ಏನು ತಪ್ಪು ಮಾಡಿದ್ದೇನೋ ಯಾವ ವಿಪತ್ತು ಕಾದಿದೆಯೋ ಎಂಬ ಅಳುಕಿನಿಂದಲೇ ಮನೆಯನ್ನು ಪ್ರವೇಶಿಸಿ ತಾಯಿಯನ್ನು ಕಂಡು ಅರಮನೆಯ ಅಧಿಕಾರಿಯು ಅಲ್ಲಿಗೆ ಬಂದಿರುವ ಕಾರಣವನ್ನು ಕೇಳಿದ. ಅರಮನೆಯಿಂದ ಕರೆ ಬಂದಿದೆ ಎಂಬುದನ್ನು ಕೇಳಿ ನಡುಗಿದ. ಅಧಿಕಾರಿಗಳು ಅವನ ಹತ್ತಿರ ಬಂದು ಮೃದು ವಾಕ್ಯಗಳಿಂದ ಅವನನ್ನು ಸಂತೈಸಿದರು. ಅರಮನೆಗೆ ಕರೆತರುವಂತೆ ದೊರೆಗಳ ಅಪ್ಪಣೆಯಾಗಿದೆ ಎಂಬುದನ್ನು ತಿಳಿಸಿ ಕೃಷ್ಣಪ್ಪನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋದರು.

ಕೃಷ್ಣಪ್ಪನ ತಂದೆ ವಿಶ್ವನಾಥಯ್ಯ ಯಕ್ಷಗಾನ ನಾಟಕದಲ್ಲಿ ಸ್ತ್ರೀ ಪಾತ್ರ ಧರಿಸಿ ಅಭಿನಯಿಸಿದ್ದನ್ನು ಮಹಾರಾಜರು ನೋಡಿ ಸಂತೋಷ ಪಟ್ಟಿದ್ದರಲ್ಲವೇ? ಅದನ್ನು ಅವರು ಮರೆತಿರಲಿಲ್ಲ. ಅರಮನೆಯಲ್ಲಿ ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ಎಂಬ ಒಂದು ನಾಟಕದ ಕಂಪೆನಿ. ಅದರಲ್ಲಿ ಕೃಷ್ಣಪ್ಪನನ್ನು ತಿಂಗಳಿಗೆ ಐದು ರೂಪಾಯಿ ಸಂಬಳದ ಮೇಲೆ ನಟನನ್ನಾಗಿ ನೇಮಿಸಲಾಯಿತು. ಕೃಷ್ಣಪ್ಪನಿಗೆ ತುಂಬಾ ಸಂತೋಷವಾಯಿತು.

ಹೀಗೆ ಕೃಷ್ಣಪ್ಪ ನಟರಾದರು. ದೇವರು ಕೊಟ್ಟ ರೂಪ, ದೇಹದಾರ್ಢ್ಯ ಮತ್ತು ಸಂಗೀತ ಜ್ಞಾನ-ಇವುಗಳ ಸಹಾಯದಿಂದ ಕೃಷ್ಣಪ್ಪನವರು ತಮ್ಮ ಪಾತ್ರಗಳನ್ನು ಉತ್ತಮ ರೀತಿಯಲ್ಲಿ ವಹಿಸುತ್ತಿದ್ದರ. ’ಶ್ರೀರಾಮಪಾದುಕಾ ಪಟ್ಟಾಭಿಷೇಕ’ದಲ್ಲಿ ರಾಮನಾಗಿಯೂ ’ಶಾಕುಂತಲ’ ನಾಟಕದಲ್ಲಿ ಕಣ್ವರಾಗಿಯೂ ಪಾತ್ರವಹಿಸಿ ಸಂಗೀತದ ರಸದೌತಣವನ್ನು ನೀಡುತ್ತಿದ್ದರು. ಮುಂದೆ ಮುಮ್ಮಡಿ ಕೃಷ್ಣರಾಜರ ನಂತರ ಚಾಮರಾಜ ಒಡೆಯರು ದೊರೆಗಳಾದಾಗ ಕೃಷ್ಣಪ್ಪ ಅವರ ಅಭಿಮಾನಕ್ಕೆ ಪಾತ್ರರಾದರು. ರಾಜರ ಸಮೀಪವರ್ತಿಗಳಾಗಿದ್ದ ಗಿರಿಭಟ್ಟರ ತಮ್ಮಯ್ಯನವರಿಂದ ಸಂಗೀತ ಮತ್ತು ನಾಟಕಗಳಲ್ಲಿ ಶಿಕ್ಷಣ ಹೊಂದಿದರು. ಕಂಪೆನಿಯವರ ’ಪ್ರಹ್ಲಾದ ಚರಿತ್ರೆ’, ’ದ್ರುವ ಚರಿತ್ರೆ’ ಮತ್ತು ’ಅಂಬರೀಷ ಚರಿತ್ರೆ’ ನಾಟಕಗಳಲ್ಲಿ ಸೊಗಸಾಗಿ ಅಭಿನಯಿಸಿದುದರಿಂದ ಚಾಮರಾಜ ಒಡೆಯರು ಕೃಷ್ಣಪ್ಪನವರನ್ನು ಅರಮನೆಯ ನಾಟಕ ಕಂಪೆನಿಗೆ ತಿಂಗಳಿಗೆ ೩೦ ರೂಪಾಯಿ ಸಂಬಳದ ಮೇಲೆ ಮುಖ್ಯಸ್ಥರನ್ನಾಗಿ ನೇಮಿಸಿದರು.

ಗುರುಕುಲವಾಸ

ಮೈಸೂರಿನ ಸಂತೆಪೇಟೆಯ ಪ್ರಸಿದ್ಧ ವರ್ತಕರಾಗಿದ್ದ ಸಾಹುಕಾರ್ ತಿಮ್ಮಯ್ಯನವರು ಕೃಷ್ಣಪ್ಪನವರ ಬಾಳಿನಲ್ಲಿ ಪ್ರವೇಶಿಸದೆ ಇದ್ದಿದ್ದರೆ ಪ್ರಾಯಶಃ ಕೃಷ್ಣಪ್ಪನವರು ನಟರಾಗಿಯೇ ಉಳಿಯುತ್ತಿದ್ದರೇನೋ. ಅದರಿಂದ ರಂಗಭೂಮಿಗೆ ಲಾಭವಾಗಿ ಸಂಗೀತ ಪ್ರಪಂಚಕ್ಕೆ ಭಾರೀ ನಷ್ಟ ಉಂಟಾಗುತ್ತಿತ್ತು. ಆದರೆ ಅವರು ರಂಗಭೂಮಿಯಿಂದ ಸಂಗೀತ ಕ್ಷೇತ್ರಕ್ಕೆ ಬರುವಂತಾಯಿತು. ಆಂಜನೇಯನ ದೇವಸ್ಥಾನದಲ್ಲಿ ನಡೆದ ಕೃಷ್ಣಪ್ಪನವರ ಕಛೇರಿಯನ್ನು ಸಾಹುಕಾರ್ ತಿಮ್ಮಯ್ಯನವರು ಕೇಳಿ ಬೆರಗಾದರು. ’ಸಾಣೆ ಹಿಡಿದರೆ ಇದು ಉತ್ತಮವಾದ ವಜ್ರವಾಗುತ್ತದೆ’ ಎಂದು ಮನಸ್ಸಿನಲ್ಲಿ ಲೆಕ್ಕಹಾಕಿಕೊಂಡರು. ಈತನಿಗೆ ಒಳ್ಳೆಯ ಶಿಕ್ಷಣ ದೊರೆಯಬೇಕು ಎನಿಸಿತು ಅವರಿಗೆ. ಕೃಷ್ಣಪ್ಪನವರನ್ನು ನೇರವಾಗಿ ಕರೂರು ರಾಮಸ್ವಾಮಿಯವರ ಬಳಿಗೆ ಕರೆದುಕೊಂಡಿಹೋಗಿ, “ಸ್ವಾಮಿ ವಿದ್ವಾಂಸರೇ, ಇವರು ಕೃಷ್ಣಪ್ಪನವರು, ಚೆನ್ನಾಗಿ ಹಾಡುತ್ತಾರೆ. ದಯವಿಟ್ಟು ಇವರಿಗೆ ಪಾಠ ಹೇಳಿಕೊಡಿ. ನಾನು ತಿಂಗಳಿಗೆ ತಮಗೆ ನೂರು ರೂಪಾಯಿ ಸಂಭಾವನೆ ಕೊಡುತ್ತೇನೆ. ಒಲ್ಲೆ ಎನ್ನಬೇಡಿ” ಎಂದು ಪ್ರಾರ್ಥಿಸಿಕೊಂಡರು.

ರಾಮಸ್ವಾಮಿಯವರು ಕೃಷ್ಣಪ್ಪನವರ ಮುಖವನ್ನು ದೃಷ್ಟಿಸಿ ನೋಡಿದರು. ಹಿಂದೆ ನೋಡಿದ ಹಾಗೆ ಜ್ಞಾಪಕ. ತಲೆ ಕೆರೆದುಕೊಂಡರು. ಕೂಡಲೇ ನೆನಪಿಗೆ ಬಂದಿತು. ಈತನ ತಾಯಿಯೇ ಬಂದು, ’ಹುಡಗನಿಗೆ ಸಂಗೀತ ಹೇಳಿ ಕೊಡಿ’ ಎಂದು ಬೇಡಿಕೊಂಡಿದ್ದಳು. ಹಿಂದೆ ತಾವು ನೆಪ ಹೇಳಿ ಜಾರಿಕೊಂಡಿದ್ದು ಇವರಿಗೇನೇ. ಒಪ್ಪಿಕೊಳ್ಳಲು ಮನಸ್ಸಿಲ್ಲ. ಆದರೂ ಸಾಹುಕಾರರ ಮಾತನ್ನು ಮೀರುವಂತಿಲ್ಲ. ಅದೂ ಅಲ್ಲದೆ ತಿಂಗಳಿಗೆ ನೂರು ರೂಪಾಯಿ ಸಂಭಾವನೆ ಬೇರೆ. “ಆಗಲಿ” ಎಂದು ಒಪ್ಪಿದರು.

ಸಾಹುಕಾರರು ಅಲ್ಲಿಗೇ ಬಿಡಲಿಲ್ಲ. ಕೃಷ್ಣಪ್ಪನವರ ಸಂಸಾರವನ್ನು ಸಾಕುವ ದೊಡ್ಡ ಮನಸ್ಸು ಮಾಡಿದರು. ಯಾವ ಯೋಚನೆಯೂ ಇಲ್ಲದೆ ಕೃಷ್ಣಪ್ಪನವರು ಉತ್ಸಾಹದಿಂದ ಕಲಿಯಲಾರಂಭಿಸಿದರು. ಅತ್ಯಲ್ಪ ಕಾಲದಲ್ಲಿ ಸಂಗೀತ ವಿದ್ಯೆಯ ಸೂಕ್ಷ್ಮಗಳನ್ನು ಅರಿತುಕೊಂಡು ಗುರುವಿನ ಪ್ರೀತಿಯನ್ನು ಗಳಿಸಿದರು. ಅಲ್ಲಿಂದ ಮುಂದೆ ಪ್ರೌಢ ಶಿಕ್ಷಣವನ್ನು ಸಂಗೀತವಿದ್ಯಾಕಂಠೀರವ ಕರಿಗಿರಿ ರಾಯರಲ್ಲಿ ಮುಂದುವರಿಸಿದರು. ವೀಣೆ ಶೇಷಣ್ಣನವರಿಂದಲೂ ಅನೇಕ ಮುಖ್ಯ ವಿಷಯಗಳನ್ನು ತಿಳಿದುಕೊಂಡರು. ಈ ರೀತಿ ಸಂಗೀತದಿಂದ ಮನಸ್ಸನ್ನು ತುಂಬಿಸಿಕೊಂಡರು.

ಹಠಯೋಗಿ

ಕೃಷ್ಣಪ್ಪನವರ ಶರೀರ ಸೊಗಸಾಗಿತ್ತು. ಕೇಳಿದವರು ಮೈಮರೆಯುತ್ತಿದ್ದರು. ಆದರೆ ಅವರಿಗೆ ಮೊದಲಿನಿಂದ ಶಾರೀರ ಹಾಗಿರಲಿಲ್ಲ.

ಶಿಷ್ಯವೃತ್ತಿಯ ಪ್ರಾರಂಭದಲ್ಲಿ ಕೃಷ್ಣಪ್ಪನವರ ಶಾರೀರ ಗಡಸಾಗಿತ್ತು. ಅವರು ತಮ್ಮ ಶಾರೀರವನ್ನು ಹಠಯೋಗಿಯಂತೆ ಸಾಧನೆ ಮಾಡಿ ಹದಮಾಡಿಕೊಂಡರು. ಗುರುಗಳ ಅಪ್ಪಣೆಯಂತೆ ತಣ್ಣೀರಿನ ನಡುವೆ ಗಂಟೆ ಗಟ್ಟಲೆ ಕುಳಿತು ’ಆಕಾರ’ ಸಾಧನೆ ಮಾಡುತ್ತಿದ್ದರಂತೆ. ಅದಾದ ನಂತರ ಅಂಗಸಾಧನೆ. ಆಮೇಲೆ ಸ್ನಾನ. ಇದು ಕೃಷ್ಣಪ್ಪನವರ ಪ್ರಾತರ್ವಿಧಿಯಾಗಿತ್ತು. ಹೀಗೆ, ಉಗ್ರ ತಪಸ್ಸಿನಿಂದ ಇದ್ದು ತಮ್ಮ ಸಾಧನೆಯಿಂದ ತಮ್ಮ ಶಾರೀರ ಸಂಪತ್ತನ್ನೂ ಲಯ ಸಂಪತ್ತನ್ನೂ ರೂಢಿಸಿಕೊಂಡು ಕೊನೆಯವರೆವಿಗೂ ಕಾಪಾಡಿಕೊಂಡರು. ಕುತ್ತಿಗೆಗೆ ಶಾಖವಾದ ಉಣ್ಣೆಯ ವಸ್ತ್ರವನ್ನು ಸುತ್ತಿಕೊಳ್ಳದೆ ಎಂದೂ ಹೊರಗೆ ಹೊರಟವರಲ್ಲ. ಆಹಾರದಲ್ಲಿಯೂ ಬಲು ಕಟ್ಟುನಿಟ್ಟು, ವೇಳಾವೇಳೆಯಲ್ಲದೆ ಸಿಕ್ಕ ಕಡೆ ತಿನ್ನುತ್ತಿರಲಿಲ್ಲ. ಕೊನೆಗೆ ನಾಲ್ಕೈದು ಗಂಟೆಗಳ ಕಾಲ ನಡೆಯುತ್ತಿದ್ದ ತಮ್ಮ ಕಛೇರಿಗಳಲ್ಲಿ ಒಮ್ಮೆಯಾದರೂ ಒಂದು ಬಾಲ ಮೆಣಸನ್ನೂ ಬಾಯಿಗೆ ಹಾಕಿ ಕೊಳ್ಳುತ್ತಿರಲಿಲ್ಲ! ಕೃಷ್ಣಪ್ಪನವರ ಶಾರೀರವು ಎಳೆದತ್ತ ಬಾಗುತ್ತಿತ್ತು. ಮೊದಲಿನಿಂದ ಕೊನೆಯವರೆವಿಗೂ ಒಂದೇ ಇಂಪು. ಒಂದೇ ಶಕ್ತಿ. ಇದು ಅವರ ಸಾಧನೆಯ ಫಲ. ಹಾಡುವಾಗ ಅವರು ಕುಳಿತುಕೊಳ್ಳುತ್ತಿದ್ದ ಠೀವಿ ಪದ್ಮಾಸನದಲ್ಲಿ ಪ್ರಾಣಾಯಾಮಕ್ಕೆ ಕುಳಿತ ಹಾಗೆ. ದೇಹ, ಕುತ್ತಿಗೆ ಮತ್ತು ತಲೆ ಎಲ್ಲವೂ ಸ್ಥಿರವಾಗಿ, ನೇರವಾಗಿ, ದೃಢವಾಗಿರುತ್ತಿದ್ದವು. ಆದರಿಂದಲೇ ಅವರ ಸ್ವರ ಯಾವ ಸ್ಥಾಯಿಯಲ್ಲಾಗಲೀ ಅಲುಗಿಲ್ಲದೆ ಒಂದೇ ಸಮನೆ ನಡೆಯುತ್ತಿತ್ತು. ಮುಖದಲ್ಲಿ ಮಂದಹಾಸಕ್ಕಿಂತ ಸಿಂಹದ ಗಾಂಭೀರ್ಯವೇ ಹೆಚ್ಚು. ಅವರ ಶಾರೀರದ ಶುದ್ಧತೆ, ಬಲ ಮತ್ತು ಗಾಂಭೀರ್ಯ ಮತ್ತಾರ ಶಾರೀರದಲ್ಲಿಯೂ ಕಂಡುಬಂದಂತಿಲ್ಲ. ತಾಳಕ್ಕೇ ಹೆಚ್ಚು ಪ್ರಾಮುಖ್ಯ ಕೊಡುತ್ತಿದ್ದ ಒಬ್ಬ ಲಯಸುಖಿ ಅವರ ಗಾಯನದಲ್ಲಿದ್ದ ನೆಮ್ಮದಿ ಮತ್ತು ಪ್ರಶಾಂತತೆಯನ್ನು ಅನುಭವಿಸಿ, ’ಆಹಾ, ಹಾಡುವುದು ಎಂದರೆ ಹೀಗಲ್ಲವೆ?’ ಎಂದು ತೃಪ್ತಿಯಾಗಿ ಆ ರಾತ್ರಿಯೇ ಪ್ರಾಣ ಬಿಟ್ಟನಂತೆ!

ಸಾಹುಕಾರ್ ತಿಮ್ಮಯ್ಯನವರ ಸತತ ಪ್ರಯತ್ನದಿಂದ ಮೈಸೂರು ಮಹಾರಾಜರ ಕೃಪಾದೃಷ್ಟಿ ಕೃಷ್ಣಪ್ಪನವರ ಮೇಲೆ ಬಿದ್ದು, ಅವರು ಆಸ್ಥಾನ ವಿದ್ವಾಂಸರಾಗಿ ನೇಮಕ ಗೊಂಡರು.

ಸತ್ವ ಪರೀಕ್ಷೆ

ಬೆಂಗಳೂರಿನಲ್ಲಿ ರೈಲ್ವೆ ಕಚೇರಿಯಲ್ಲಿ ನರಸಿಂಹಯ್ಯ ಎಂಬ ರೆಸಿಡೆಂಟ್ ಇಂಜಿನಿಯರ್ ಕಚೇರಿಯ ಮ್ಯಾನೇಜರ್ ಒಬ್ಬರಿದ್ದರು. ಆತನಿಗೆ ಸಂಗೀತದ ಆಸಕ್ತಿ ಹೆಚ್ಚಾಗಿತ್ತು. ೧೮೯೪ ರಲ್ಲಿ ಆತ ಕೃಷ್ಣಪ್ಪನವರನ್ನು ಕರೆಸಿಕೊಂಡು ತನ್ನ ಮನೆಯಲ್ಲಿ ಅವರಿಂದ ಕಛೇರಿ ಮಾಡಿಸಿ ಸನ್ಮಾನ ಮಾಡಿದರು. ಸಭೆಯಲ್ಲಿ ನೆರೆದಿದ್ದ ರಸಿಕರು ಕೃಷ್ಣಪ್ಪನವರನ್ನು ’ಮಹಾವಿದ್ವಾಂಸರು’ ಎಂದು ಕರೆದರು.

ಈ ಸುದ್ದಿ ಮೈಸೂರನ್ನು ತಲಪಲು ತಡವಾಗಲಿಲ್ಲ. ಕೃಷ್ಣಪ್ಪನವರು ಮೈಸೂರಿಗೆ ಹಿಂತಿರುಗಿದ ಕೂಡಲೆ ವೀಣೆ ಶೇಷಣ್ಣನವರು ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡರು. ಆಗಲೇ ಅನೇಕ ಮಹಾವಿದ್ವಾಂಸರು ಅಲ್ಲಿ ಸಭೆ ಸೇರಿದ್ದರು. ಶೇಷಣ್ಣನವರು ಕೃಷ್ಣಪ್ಪನವರನ್ನು ಕುರಿತು, “ಕೃಷ್ಣಪ್ಪ, ಬೆಂಗಳೂರಿನ ರಸಿಕರು  ನಿನ್ನನ್ನು ’ಮಹಾ ವಿದ್ವಾಂಸ’ನೆಂದು ಸಾರಿದರಂತೆ. ’ವಿದ್ವಾಂಸ’ ಎನ್ನುವ ಪ್ರಶಸ್ತಿಯನ್ನು ಕೊಡುವುದು ನಮ್ಮಂತಹ ವಿದ್ವಾಂಸರಿಗೆ ಸೇರಿದ ಹಕ್ಕು. ಇರಲಿ, ನೀನು ಈ ದಿವಸ ಇಲ್ಲಿ ಸೇರಿರುವ ವಿದ್ವಾಂಸರ ಮುಂದೆ ಹಾಡಿ ನಿನಗೆ ಕೊಟ್ಟಿರುವ ಪ್ರಶಸ್ತಿಯನ್ನು ಉಳಿಸಿಕೊ” ಎಂದು ಗುಡುಗಿದರು.

ಕೃಷ್ಣಪ್ಪನವರಿಗೆ ಇದು ಒಂದು ದೊಡ್ಡ ಸವಾಲಾಗಿತ್ತು. ಹಾಡುವುದೇ ಅಥವಾ ತಮಗೆ ಕೊಟ್ಟಿದ್ದ ಪ್ರಶಸ್ತಿಯನ್ನು ಕಳಚಿಕೊಟ್ಟು ತೆಪ್ಪಗೆ ಇರುವುದೇ ಎನ್ನುವ ಯೋಚನೆ ಯಲ್ಲಿದ್ದರು.

ಅಷ್ಟರೊಳಗೆ ಸಭೆಯಲ್ಲಿದ್ದ ದಕ್ಷಿಣ ದೇಶದ ವಿದ್ವಾಂಸನೊಬ್ಬನು ಎದ್ದುನಿಂತು, “ಸ್ವಾಮಿ, ತಾವೇನು ಪೂರಾ ಕಚೇರಿ ಮಾಡಬೇಕಾಗಿಲ್ಲ. ನಾನು ಹಾಡಿ ತೋರಿಸುವ ಪಲ್ಲವಿಯನ್ನು ಸ್ವಲ್ಪ ವಿನ್ಯಾಸ ಮಾಡಿ, ನೆರವಲು ಮತ್ತು ನಾಲ್ಕಾವರ್ತ ಸ್ವರ ಹಾಡಿದರೆ ಸಾಕು. ನಿಮಗೆ ಬಂದಿರುವ ’ಮಹಾವಿದ್ವಾಂಸ’ ಪಟ್ಟವನ್ನು ಒಪ್ಪಿಕೊಳ್ಳುತ್ತೇವೆ” ಎಂದು ಹೇಳಿದ. ಆತ ಆಗಲೇ ತನ್ನ ಮನೆಯಲ್ಲಿ ಯಾರಿಗೂ ತಿಳಿಯದೆ ಆರು ತಿಂಗಳ ಕಾಲ ಗುಟ್ಟಾಗಿ ಆರು ಅಕ್ಷರ ಕಾಲದ ಪಲ್ಲವಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ ಕೊಂಡಿದ್ದ. ಅದನ್ನು ಹಾಡಿ ತೋರಿಸಿದ.

ಮೊದಲ ಬಾರಿಗೆ ಕೇಳಿದ್ದ ಪಲ್ಲವಿಯನ್ನು ವಿನ್ಯಾಸ ಮಾಡಿ, ನೆರವಲು ಮತ್ತು ನಾಲ್ಕಾವರ್ತ ಸ್ವರ ಹಾಡುವುದು ಎಂದರೆ ಬಹಳ ಕಷ್ಟದ ಕಾರ್ಯ. ಆತನ ಧೋರಣೆ ಕೃಷ್ಣಪ್ಪನವರನ್ನು ಕೆರಳಿಸಿತು. ಆದರೂ ಸಂಯಮವನ್ನು ತಂದುಕೊಂಡು ಎದ್ದುನಿಂತು ಶೇಷಣ್ಣನವರನ್ನು ಕುರಿತು, “ಗುರುಗಳೇ, ನನಗೆ ಇಂದು ಏನೇ ಕೀರ್ತಿ, ಗೌರವಗಳು ಲಭಿಸಿದ್ದರೂ ಅವುಗಳು ತಮ್ಮ ಆಶೀರ್ವಾದದಿಂದಲೇ ಹೊರತು ಮತ್ತಾವುದರಿಂದಲೂ ಅಲ್ಲ. ತಮ್ಮ ಅಪ್ಪಣೆಗೂ ಮತ್ತು ಈ ವಿದ್ವಾಂಸರ ಸವಾಲಿಗೂ ಸಿದ್ಧವಾಗಿದ್ದೇನೆ. ನನ್ನದೂ ಒಂದೂ ಷರತ್ತಿದೆ. ನಾನು ಹಾಡಿದ ನಂತರ ನಾನೂ ಒಂದು ಪಲ್ಲವಿಯನ್ನು ಇಲ್ಲಿಯೇ, ತಮ್ಮೆದುರಿನಲ್ಲಿಯೇ ತಯಾರು ಮಾಡಿ ಕೊಡುತ್ತೇನೆ. ಅದನ್ನು ಈ ವಿದ್ವಾಂಸರು ಹಾಡಬೇಕು. ಆಗಬಹುದೇ” ಎಂದು ಕೇಳಿದರು. ಶೇಷಣ್ಣನವರೂ ಆ ವಿದ್ವಾಂಸನೂ “ಆಗಬಹುದು” ಎಂದರು.

ಶೇಷಣ್ಣನವರು ಆನಂದಬಾಷ್ಪಗಳನ್ನು ಸುರಿಸುತ್ತ ಕೃಷ್ಣಪ್ಪನವರನ್ನು ತಬ್ಬಿಕೊಂಡರು

ಕೃಷ್ಣಪ್ಪನವರು ಸವಾಲಿಗಿದ್ದ ಆರು ಅಕ್ಷರ ಕಾಲದ ಪಲ್ಲವಿಯನ್ನು ಲೀಲಾಜಾಲವಾಗಿ ಮೂರು ಕಾಲದಲ್ಲಿಯೂ ಹಾಡಿ, ನೆರವಲ್ ಮಾಡಿ, ಸ್ವರಗಳನ್ನು ಹಾಕಿದರು. ವಿದ್ವಾಂಸನ ಬಾಯಿ ಕಟ್ಟಿಹೋಯಿತು. ಗರ ಬಡಿದವನಂತೆ ಕುಳಿತಿದ್ದ. ಶೇಷಣ್ಣನವರು ಧಿಗ್ಗನೆದ್ದು ಆನಂದಭಾಷ್ಪಗಳನ್ನು ಸುರಿಸುತ್ತ ಕೃಷ್ಣಪ್ಪನವರನ್ನು ತಬ್ಬಿಕೊಂಡು, “ಅಪ್ಪಾ, ನಿನ್ನ ಶಕ್ತಿ, ವಿದ್ವತ್ತುಗಳಲ್ಲಿ ನನಗೆ ಪೂರಾ ನಂಬಿಕೆಯಿದ್ದರೂ ನಿನ್ನ ಯೋಗ್ಯತೆಯನ್ನು ಎತ್ತಿ ತೋರಿಸುವುದಕ್ಕಾಗಿ ಈ ನಾಟಕವನ್ನು ಆಡಿದೆ. ನೀನು ನಿಜವಾಗಿಯೂ ಮೈಸೂರಿನ ಗಾನಕೇಸರಿ” ಎಂದು ಹೇಳಿ ವಿದ್ವಾಂಸನ ಮುಖವನ್ನು ನೋಡಿದರು. ಆತನು ಪೆಚ್ಚಾಗಿ ದೇಶಾವರಿ ನಗೆಯನ್ನು ತಂದುಕೊಂಡ “ಹೌದು, ಹೌದು” ಎಂದು ಕೋಲೇ ಬಸವನಂತೆ ತಲೆ ಅಲ್ಲಾಡಿಸಿದನು. ಶೇಷಣ್ಣನವರು ಒಡ್ಡಿದ ಪರೀಕ್ಷೆಯಿಂದ ಕೃಷ್ಣಪ್ಪನವರು ಪುಟಕ್ಕೆ ಇಟ್ಟ ಚಿನ್ನದಂತಾಗಿ, ಅವರ ಅಂತಃಸತ್ವವು ಪ್ರಕಾಶಿಸಿತು.

ದಿಗ್ವಿಜಯ

ಹಿರಿಯ ವಿದ್ವಾಂಸರು ಭಾರತದ ಬೇರೆಬೇರೆ ಸ್ಥಳಗಳಿಗೆ ಹೋಗಿ ತಮ್ಮ ಸಾಮರ್ಥ್ಯವನ್ನು ತೋರಿಸುವುದು, ರಾಜಮಹಾರಾಜರ ಆಸ್ಥಾನಗಳಲ್ಲಿ ಮತ್ತು ಸಂಗೀತ ವಿದ್ವಾಂಸರ ಸಭೆಗಳಲ್ಲಿ ಹಾಡಿ ಮೆಚ್ಚಿಕೆ ಪಡೆಯುವುದು ಆಗಿನ ಪದ್ಧತಿ. ಕೃಷ್ಣಪ್ಪನವರು ತಿರುಚಿರಾಪಳ್ಳಿ, ತಂಜಾವೂರು, ದೇವಕೋಟೆ, ಮಧುರೆ ಮತ್ತು ಮದರಾಸು ನಗರಗಳಲ್ಲಿ ರಸಿಕರೂ ವಿದ್ವಾಂಸರೂ ಆಶ್ಚರ್ಯಪಟ್ಟು ತಲೆದೂಗುವಂತೆ ಕಛೇರಿಗಳನ್ನು ಮಾಡಿ ಮೈಸೂರಿನ ಕೀರ್ತಿ ಪತಾಕೆಯನ್ನು ಎತ್ತಿಹಿಡಿದರು. ೧೯೦೪ ರಲ್ಲಿ ಮದರಾಸಿನಲ್ಲಿ ನಡೆದ ಕಚೇರಿಯಲ್ಲಿ ಕೃಷ್ಣಪ್ಪನವರಿಗೆ ಸಿಂಹದ ಮುಖವನ್ನೊಳಗೊಂಡ ಚಿನ್ನದ ತೋಡಾವನ್ನೂ ಯೋಗ್ಯತಾ ಪತ್ರವನ್ನೂ ಅರ್ಪಿಸಲಾಯಿತು. ಅದೇ ವರ್ಷ ಮೈಸೂರಿನಲ್ಲಿ ಅವರ ಕಚೇರಿ ನಡೆದು ವಿದ್ವಾಂಸರು ಅವರ ಬಲಗೈಗೆ ಗಂಟೆಯಿಂದ ಕೂಡಿದ ರತ್ನಖಚಿತವಾದ ತೋಡಾವನ್ನು ತೊಡಿಸಿದರು. ೧೯೧೦ ರಲ್ಲಿ ಶ್ರೀ ಶಿವಗಂಗಾ ಮಠದ ಸ್ವಾಮಿಗಳು ಮೈಸೂರಿಗೆ ಆಗಮಿಸಿ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಬಿಜಯ ಮಾಡಿಸಿದ್ದರು. ಸ್ವಾಮಿಗಳವರ ಪೂಜಾಕಾಲದಲ್ಲಿ ಕೃಷ್ಣಪ್ಪನವರು ಹಾಡಿ, ಸ್ವಾಮಿಗಳವರಿಂದ ’ಗಾಯಕ ಶಿಖಾಮಣಿ’ ಬಿರುದುಪತ್ರವನ್ನು ಪಡೆದರು. ಮಂತ್ರಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ಮುಂದೆ ಹಾಡಿ ಅಲ್ಲಿನ ಶ್ರೀಗಳವರ ಕೃಪೆಗೆ ಪಾತ್ರರಾದರು. ಶ್ರೀಗಳು ಪ್ರತಿ ವರ್ಷವೂ ಮಂತ್ರಾಲಯದ ಮಠದಿಂದ ಕೃಷ್ಣಪ್ಪನವರಿಗೂ ಅವರ ನಂತರ ಅವರ ವಂಶಕ್ಕೂ ಇಪ್ಪತ್ತೈದು ರೂಪಾಯಿಗಳು ವರ್ಷಾಶನವಾಗಿ ಸಂದಾಯವಾಗುವಂತೆ ಅನುಜ್ಞೆ ಮಾಡಿದರು. ೧೯೧೧ ರಲ್ಲಿ ಗದ್ದಾಲ್ ಸಂಸ್ಥಾನದ ಭೂಪತಿ ಸೀತಾರಾಮ ಭೂಪಾಲರ ಸಮ್ಮುಖದಲ್ಲಿ ಕೃಷ್ಣಪ್ಪನವರ ಕಛೇರಿ ನಡೆದು ಅದರಿಂದ ಸುಪ್ರೀತನಾದ ದೊರೆ ಚಿನ್ನದ ಅವಲಕ್ಕಿ ಸರವನ್ನು ಕೃಷ್ಣಪ್ಪನವರ ಕುತ್ತಿಗೆಗೆ ಹಾಕಿ, ’ಗಾಯಕ ಶಿಖಾಮಣಿ’ ಎಂಬ ಬಿರುದನ್ನು ಕೊಟ್ಟು ಗೌರವಿಸಿದ. ಉತ್ತರ ಹಿಂದುಸ್ಥಾನದಲ್ಲಿ ಅನೇಕ ಕಡೆ ಕೃಷ್ಣಪ್ಪನವರು ಸೊಗಸಾದ ಕಚೇರಿಗಳನ್ನು ಮಾಡಿ ಕರ್ನಾಟಕಕ್ಕೆ ಕೀರ್ತಿಯನ್ನು ತಂದರು.

ಗಾನವಿಶಾರದ

೧೯೧೦ ರಲ್ಲಿ ಶ್ರೀಮದ್ಯುವರಾಜ ಕಂಠೀರವ ನರಸಿಂಹ ರಾಜ ಒಡೆಯರ್ರವರ ವಿವಾಹವು ನಡೆಯಿತು. ನಾಲ್ಮಡಿ ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲವದು. ಪ್ರತಿಯೊಬ್ಬ ಆಸ್ಥಾನ ವಿದ್ವಾಂಸನೂ ನವ ರಾಜದಂಪತಿಗಳಿಗೆ ಯಶಸ್ಸನ್ನು ಕೋರಿ ಒಂದೊಂದು ನವರಾಗ ಮಾಲಿಕೆಯನ್ನು ಆಶೀರ್ವಾದ ರೂಪದಲ್ಲಿರುವಂತೆ ರಚಿಸಿ ಒಪ್ಪಿಸಬೇಕೆಂದು ಪ್ರಭುಗಳು ಅಪ್ಪಣೆ ಮಾಡಿದರು.

ಕೃಷ್ಣಪ್ಪನವರಿಗೆ ಇದೊಂದು ಹೊಸ ಪರೀಕ್ಷೆ. ಏಕೆಂದರೆ ಅಲ್ಲಿಯವರೆಗೂ ಅವರು ಯಾವ ವಿಧವಾದ ಕವನ ರಚನೆಗೂ ಕೈಹಾಕಿರಲಿಲ್ಲ. ರಾಜಾಜ್ಞೆಗೆ ಎದುರುಂಟೇ? ಸರಿ. ಅರಮನೆಯಿಂದ ಮನೆಗೆ ಹಿಂದಿರುಗುವಾಗ ಎಂಬತ್ತು ಖಾಲಿ ಹಾಳೆಗಳ ಒಂದು ಪುಸ್ತಕವನ್ನೂ ಎರಡು ಪೆನ್ಸಿಲ್ಗಳನ್ನೂ ಕೊಂಡು ಕೊಂಡರು. ಮನೆಯನ್ನು ಸೇರಿ, ಕೈಕಾಲು ತೊಳೆದು ಕೊಂಡು, ಮಡಿಯನ್ನುಟ್ಟು ದೇವರಮನೆ ಹೊಕ್ಕರು. ಖಾಲಿ ಪುಸ್ತಕವನ್ನು ದೇವರ ಮುಂದಿಟ್ಟು, ಅರಿಶಿನ-ಕುಂಕುಮವನ್ನು ಅದರ ಮೇಲೆ ಹಾಕಿ ಮೊದಲನೆಯ ಹಾಳೆಯಲ್ಲಿ ದಪ್ಪಕ್ಷರದಲ್ಲಿ ’ಶ್ರೀ’ ಎಂದು ಬರೆದರು.

ಮುಂದೆ?

ಮುಂದೆ ಏನು ಬರೆಯಲೂ ತೋರಲಿಲ್ಲ.

ಕವನ ರಚನೆ ಮಾಡಲು ಸ್ಫೂರ್ತಿ ಬರಲೆಂದು ಸರಸ್ವತಿಯ ಪಟವನ್ನು ನೋಡುತ್ತ ಕುಳಿತರು. ಬಹಳ ಹೊತ್ತು ಕಳೆಯಿತು. ಆದರೆ ಏನೂ ಹೊಳೆಯಲಿಲ್ಲ.

ಕೃಷ್ಣಪ್ಪನವರು ಕವನ ರಚನೆಯ ಆಸೆಯನ್ನು ತೊರೆದು ಮತ್ತೆ ವೇಷವನ್ನು ಬದಲಾಯಿಸಿಕೊಂಡು ಅರಮನೆಗೆ ಓಡಿದರು. ಪ್ರಭುಗಳನ್ನು ಕಂಡು, “ಮಹಾ ಸ್ವಾಮಿಯವರು ನನ್ನನ್ನು ಕ್ಷಮಿಸಬೇಕು. ನನಗೆ ಕವನ ರಚನೆ ಮಾಡಲು ಬರುವುದಿಲ್ಲ. ಅಪ್ಪಣೆಯಾದರೆ ಯಾರಿಂದಲಾದರೂ ಕವನ ರಚನೆ ಮಾಡಿಸಿ ಅದಕ್ಕೆ ಸ್ವರ ಜೋಡಣೆ ಮಾಡುತ್ತೇನೆ” ಎಂದು ನಿಜವನ್ನೇ ಹೇಳಿದರು.

ಪ್ರಭುಗಳು ಕೃಷ್ಣಪ್ಪನವರ ಸರಳತೆಯನ್ನು ಮೆಚ್ಚಿಕೊಂಡು ಮುಗುಳುನಗುತ್ತಾ, “ಹಾಗೆಯೇ ಮಾಡಿ ಕೃಷ್ಣಪ್ಪನವರೇ” ಎಂದರು.

ಕೃಷ್ಣಪ್ಪನವರು ಅರಮನೆಯಿಂದ ನೆಟ್ಟಗೆ ತಮ್ಮ ಆಪ್ತಮಿತ್ರರಾದ ತೆಲುಗು ವಿದ್ವಾಂಸ ಕೊಪ್ಪರಂ ಅಪ್ಪಾವು ಶೆಟ್ಟರ ಮನೆಗೆ ಹೋಗಿ, ಅವರಿಗೆ ಸಂದರ್ಭವನ್ನು ವಿವರಿಸಿ, ಅವರಿಂದ ಕವನ ರಚನೆಯನ್ನು ಮಾಡಿಸಿ ಮನೆಗೆ ತೆಗೆದುಕೊಂಡು ಬಂದು, ಅದಕ್ಕೆ ಸರಿಯಾದ ವರ್ಣ ಮಟ್ಟನ್ನು ಹಾಕಿದ ನಂತರವೇ ಆಹಾರವನ್ನು ಸೇವಿಸಿದುದು. ಆ ಆಶೀರ್ವಚನವನ್ನು ಮಹಾರಾಜರ ಮುಂದೆ ಸುಶ್ರಾವ್ಯವಾಗಿ ಹಾಡಿದರು. ಪ್ರಭುಗಳು ಅದನ್ನು ಬಹಳವಾಗಿ ಮೆಚ್ಚಿಕೊಂಡು ದರ್ಬಾರಿನಲ್ಲಿ ಕೃಷ್ಣಪ್ಪನವರಿಗೆ ’ಗಾನವಿಶಾರದ’ ಎಂಬ ಬಿರುದನ್ನು, ರತ್ನಖಚಿತವಾದ ತೋಡಾ ಮತ್ತು ಅತ್ಯುತ್ತಮವಾದ ಖಿಲ್ಲತು ಜೊತೆಯಲ್ಲಿ ದಯಪಾಲಿಸಿದರು. ಬಿರುದು ಕೃಷ್ಣಪ್ಪನವರಿಗೆ ಅನ್ವರ್ಥವಾಯಿತು.

ಶ್ರೀ ಪ್ರಸನ್ನ ಸೀತಾರಾಮ ಮಂದಿರ

ಮೈಸೂರಿನ ಶಿವರಾಮಪೇಟೆಯಲ್ಲಿ ಬಿಡಾರಂ ಕೃಷ್ಣಪ್ಪನವರು ಕಟ್ಟಿಸಿದ ಶ್ರೀ ಪ್ರಸನ್ನ ಸೀತಾರಾಮ ಮಂದಿರವು ತಂಜಾವೂರಿನ ಸಂಗೀತ ಮಹಲು ಮತ್ತು ಹಂಪೆಯ ಪದ್ಮ ಭವನದಂತೆ ಲೋಕೋತ್ತರವಾದದ್ದು. ಸಂಗೀತ ಮಹಲು ಮತ್ತು ಪದ್ಮ ಭವನ – ಇವುಗಳನ್ನು ರಾಜಮಹಾರಾಜರು ಕಟ್ಟಿಸಿದರು. ಆದರೆ ಶ್ರೀ ಪ್ರಸನ್ನ ಸೀತಾರಾಮ ಮಂದಿರದ ನಿರ್ಮಾತೃ ಒಬ್ಬ ಕಲಾವಿದ. ಕಲಾವಿದನೊಬ್ಬ ತನ್ನ ಸ್ವಂತ ಸಂಪಾದನೆಯಿಂದ ಕಟ್ಟಿಸಿದ ಈ ಅಮೂಲ್ಯ ಭವನಕ್ಕೆ ಸಮನಾದುದು ಯಾವುದೂ ಇಲ್ಲವೆಂದೂ ತಪ್ಪೇನಿಲ್ಲ.

ಮೈಸೂರಿನಲ್ಲಿ ಅನೇಕ ಕಡೆ ಸಣ್ಣಪುಟ್ಟ ರಾಮ ಮಂದಿರಗಳಿದ್ದವು. ಶ್ರೀರಾಮನನ್ನೂ ಆಂಜನೇಯನನ್ನೂ ಮನಸಾರೆ ಭಕ್ತಿಯಿಂದ ಪೂಜಿಸುತ್ತಿದ್ದ ಕೃಷ್ಣಫ್ಪನವರು ಸ್ವಲ್ಪವೂ ಬಿಂಕ, ಬಿಗುಮಾನಗಳಿಲ್ಲದೆ ಆ ಮಂದಿರಗಳಿಗೆಲ್ಲ ಹೋಗಿ ಬರುತ್ತಿದ್ದರು. ’ಲೆಕ್ಕವಿಲ್ಲದಷ್ಟು ಕಛೇರಿಗಳನ್ನು ಮಾಡಬೇಕು. ವಿದ್ವಾಂಸರನ್ನು ಸಂತೋಷಪಡಿಸಬೇಕು. ಅವರ ಮನ್ನಣೆಯನ್ನು ಪಡೆಯಬೇಕು. ಹೇರಳವಾಗಿ ಹಣವನ್ನು ಸಂಪಾದಿಸಿ ಅನೇಕ ಧರ್ಮಕಾರ್ಯಗಳನ್ನು ಮಾಡಬೇಕು. ತಡೆಯಿಲ್ಲದೆ ರಾಜ ಜಪವನ್ನು ಮಾಡಬೇಕು’ ಇವು ಅವರ ಹೆಬ್ಬಯಕೆಗಳಲ್ಲಿ ಕೆಲವು.

’ಹಿಂದೆ ಆಗಿರಬಾರದು, ಮುಂದೆ ಆಗಬಾರದು. ಅಂತಹ ರಾಮಮಂದಿರವೊಂದನ್ನು ಕಟ್ಟಬೇಕು’ ಎಂಬ ಹೊಸ ಹಂಬಲ ಕೃಷ್ಣಪ್ಪನವರನ್ನು ಹಿಡಿಯಿತು. ತಮಗೆ ಬೇಕಾದವರಲ್ಲಿ ಹೇಳಿಕೊಂಡರು. ಇಲ್ಲಿಯೂ ಸಾಹುಕಾರ್ ತಿಮ್ಮಯ್ಯನವರೇ ಮುಂದು. ಅವರು ಕೃಷ್ಣಪ್ಪನವರ ಸೂಚನೆಯನ್ನು ಸ್ವಾಗತಿಸಿ ಕೆಲವು ಹಿತೈಷಿಗಳನ್ನು ಸೇರಿಸಿ ಒಂದು ಸಭೆಯನ್ನು ಕರೆದರು. ಸಭೆಯಲ್ಲಿ ಕೃಷ್ಣಪ್ಪನವರ ಯೋಚನೆಯನ್ನು ಮುಂದಿಟ್ಟರು. ಇಂತಹ ಸತ್ಕಾರ್ಯವನ್ನು ಯಾರು ತಾನೆ ಬೇಡವೆನ್ನುತ್ತಾರೆ? ಎಲ್ಲರೂ ಪೂರ್ಣ ಬೆಂಬಲ ನೀಡುವುದಾಗಿ ವಾಗ್ದಾನ ಮಾಡಿದರು. ಶುಭ ದಿನವೊಂದರಲ್ಲಿ ಶಂಕು ಸ್ಥಾಪನೆಯಾಯಿತು. ತಮ್ಮ ಕಛೇರಿಗಳ ಆದಾಯವಷ್ಟನ್ನೂ ಮಂದಿರದ ನಿರ್ಮಾಣಕ್ಕೆ ಸುರಿದರು. ಅರಮನೆಯ ಸಂಬಳವನ್ನು ತಮ್ಮ ಸಂಸಾರದ ರಥವನ್ನು ನಡೆಸುವುದಕ್ಕೆ ಇಟ್ಟರು. ತಮ್ಮ ಶಿಷ್ಯರೊಡನೆ ದಕ್ಷಿಣ ದೇಶದಲ್ಲೆಲ್ಲ ಸಂಚರಿಸಿ ಅವರುಗಳಿಂದ ಕಛೇರಿಗಳನ್ನು ಮಾಡಿಸಿ ನಿಧಿಯನ್ನು ಸಂಗ್ರಹಿಸಿದರು. ಕೊನೆಗೆ ತಮ್ಮ ಪತ್ನಿ ತುಂಗಮ್ಮನವರ ಮಂಗಳಸೂತ್ರವನ್ನೂ ಇದಕ್ಕೇ ವಿನಿಯೋಗಿಸಿದರು. ಅರಿಶಿನ ಹಚ್ಚಿದ ದಾರವೊಂದನ್ನು ಕತ್ತಿನಲ್ಲಿ ಧರಿಸಿ, ಮಂಗಳಸೂತ್ರವನ್ನು ಬಿಚ್ಚಿ ಪತಿಯ ಕೈಲಿಟ್ಟು, ’ಕೃಷ್ಣಾರ್ಪಣ’ವೆಂದ ಆ ಸಾಧ್ವಿಯ ತ್ಯಾಗ ಎಷ್ಟು ದೊಡ್ಡದು? ಹಿಡಿದ ಕೆಲಸವನ್ನು ಮಾಡಲೇಬೇಕೆಂಬ ಒಂದೇ ಹಠದಿಂದ ಕಾರ್ಯೋನ್ಮುಖರಾಗಿ, ಅದರಂತೆ ನಡೆದುಕೊಂಡರು. ೧೯೨೮ ರಲ್ಲಿ ರಾಮಮಂದಿರದ ಸ್ಥಾಪನೆ ಮತ್ತು ಕಟ್ಟಡದ ಆರಂಭೋತ್ಸವಗಳನ್ನು ವಿಜೃಂಭಣೆಯಿಂದ ನೆರವೇರಿಸಿದರು. ಅಂದು ಶಿಷ್ಯರೆಲ್ಲರೂ ಹಾಡಿದರು.

ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು ಸಾಹಿತ್ಯ-ಸಂಗೀತ ಎರಡು ಕ್ಷೇತ್ರಗಳಲ್ಲಿಯೂ ಹೆಸರಾದವರು. ಅವರು ಕೃಷ್ಣಪ್ಪನವರ ಶಿಷ್ಯರು. ಆ ದಿನ ಅವರು ತ್ಯಾಗರಾಜರ ರವಿಚಂದ್ರಿಕೆ ರಾಗದ ’ಮಾಕೇಲರಾ ವಿಚಾರಮು’ ಕೃತಿಯನ್ನು ಹಾಡಿದಾಗ “ಹೌದು ಶರ್ಮರೇ, ನಿಜವಾಗಿಯೂ ನನಗೇತಕ್ಕೆ ಚಿಂತೆ? ಶ್ರೀರಾಮಚಂದ್ರನೇ ಎಲ್ಲವನ್ನೂ ನಡೆಸಿಕೊಳ್ಳುತ್ತಾನೆ” ಎಂದರು ಕೃಷ್ಣಪ್ಪನವರು. ಶಿಷ್ಯರ ಒತ್ತಾಯಕ್ಕೆ ಕಟ್ಟುಬಿದ್ದು ಕೃಷ್ಣಪ್ಪನವರು ತ್ಯಾಗರಾಜರ ವಸಂತ ರಾಗದ “ಸೀತಮ್ಮ ಮಾಯಮ್ಮ” ಕೃತಿಯನ್ನು ಹಾಡಿದರು. ಅದನ್ನು ಕೇಳಿದವರು ಇಂದಿಗೂ ಅದನ್ನು ಜ್ಞಾಪಿಸಿಕೊಂಡು ಪುಳಕಿತರಾಗುತ್ತಾರೆ.

ಮಂದಿರವೇನೋ ಸಿದ್ಧವಾಯಿತು. ಆದರೆ ರಾಮ ಪಟ್ಟಾಭಿಷೇಕವು ಆ ಮಂದಿರದಲ್ಲಿ ಇನ್ನೂ ನಡೆದಿರಲಿಲ್ಲ. ಅದಕ್ಕೆ ಮೊದಲು ಇಪ್ಪತ್ತೈದನೆಯ ಮಹಾಪಟ್ಟಾಭಿಷೇಕವು ಹಳೆಯ ಮಂದಿರಗಳಲ್ಲಿ ನಡೆಯಿತು. ಅದಾದ ಎರಡು ಮೂರು ದಿವಸಗಳ ನಂತರ ಒಂದು ಅನಿರೀಕ್ಷಿತವಾದ ಘಟನೆಯು ನಡೆಯಿತು. ರಾಳ್ಲಪಲ್ಲಿಯವರು ಬೆಂಗಳೂರಿಗೆ ಯಾವುದೋ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಅವರು ಹಿರಿಯ ಪತ್ರಿಕೋದ್ಯಮಿಗಳಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮರ ಮನೆಗೆ ಹೋದರು. ಅವರು ಸೊಗಸಾದ ಚಾಮರದ ಕೂದಲನ್ನು ರಾಳ್ಲಪಲ್ಲಿಯವರಿಗೆ ಕೊಟ್ಟು, “ಇದನ್ನು ಬಂಗಾಳದಿಂದ ನನಗೆ ನನ್ನ ಸ್ನೇಹಿತರೊಬ್ಬರು ಕಳುಹಿಸಿದ್ದಾರೆ. ನನಗೆ ಇದರ ಉಪಯೋಗವಿಲ್ಲ. ನೀವು ನಿಮ್ಮ ದೇವತಾಕಾರ್ಯಕ್ಕೆ ಉಪಯೋಗಿಸಿಕೊಳ್ಳಿ” ಎಂದರು. ರಾಳ್ಲಪಲ್ಲಿಯವರು ಅದನ್ನು ಮೈಸೂರಿಗೆ ತೆಗೆದುಕೊಂಡು ಬಂದು ಕೃಷ್ಣಪ್ಪನವರಿಗೆ ಕೊಟ್ಟರು. ಗುರುಗಳು ಅದನ್ನು ತೆಗೆದುಕೊಳ್ಳುತ್ತಾ, “ಶರ್ಮರೇ, ರಾಮಚಂದ್ರರ ಲೀಲೆಯನ್ನು ಹೇಗೆ ವರ್ಣಿಸಲಿ? ಎರಡು ಮೂರು ದಿನಗಳ ಕೆಳಗೆ ಮುದುಕಿಯೊಬ್ಬಳು ಚಾಮರದ ಬೆಳ್ಳಿಯ ಹಿಡಿಯೊಂದನ್ನು ನನಗೆ ಕೊಟ್ಟಳು. ನೀವು ಇಂದು ಅದಕ್ಕೆ ಬೇಕಾಗುವ ಚಾಮರವನ್ನೇ ಕೊಟ್ಟಿದ್ದೀರಿ. ಇದು ಒಂದು ಅದ್ಭುತ ಪವಾಡ. ಇದರ ಪುಣ್ಯ ನಿಮಗೂ ತಾತಾಚಾರ್ಯ ಶರ್ಮರಿಗೂ ಮತ್ತು ಮುದುಕಿಗೂ ಸೇರಿದ್ದು. ಅದನ್ನು ನೋಡಿ ಆನಂದಿಸುವ ಭಾಗ್ಯ ನನಗದು” ಎಂದು ಆನಂದಬಾಷ್ಪವನ್ನು ಸುರಿಸಿದರು.

ರಾಮಮಂದಿರದಲ್ಲಿ ರಾಮಪಟ್ಟಾಭಿಷೇಕವು ನಿಧಾನವಾಯಿತು. ಆ ಸಂದರ್ಭದಲ್ಲಿ ಒಂದು ವಿಚಿತ್ರ ಸಂಗತಿ ನಡೆಯಿತು ಎಂದು ಹೇಳುತ್ತಾರೆ.

ಒಂದು ದಿನ ಭಜನೆ ನಡೆಯುತ್ತಿದೆ. ಕೋತಿಯೊಂದು ಮಂದಿರದೊಳಗೆ ಬಂದು ರಾಮಚಂದ್ರನ ಪಟದ ಕಡೆ ನೋಡುತ್ತ ಸುಮ್ಮನೆ ಕುಳಿತುಕೊಂಡಿತು. ಯಾರು ಓಡಿಸಿದರೂ ಅದು ಅಲ್ಲಿಂದ ಕದಲಲಿಲ್ಲ. ಕೃಷ್ಣಪ್ಪನವರೇ ಒಂದು ತಟ್ಟೆಯಲ್ಲಿ ರಾಮಚಂದ್ರನ ಪ್ರಸಾದವನ್ನಿಟ್ಟುಕೊಂಡು ಬಂದು ಆ ತಟ್ಟೆಯನ್ನು ಕೋತಿಯ ಮುಂದೆ ಇಟ್ಟರು. ಆದರೆ ಅದು ತಟ್ಟೆಯ ಕಡೆ ನೋಡಲೂ ಇಲ್ಲ. ಯಾರನ್ನೂ ತೊಂದರೆಪಡಿಸದೆ ಪಟವನ್ನೇ ನೋಡುತ್ತ ಕುಳಿತಿತ್ತು. ಕೃಷ್ಣಪ್ಪನವರಿಗೆ ಏನೂ ತೋಚಲಿಲ್ಲ. ಅವರ ಪಕ್ಕದಲ್ಲಿ ಕೈಕಟ್ಟಿಕೊಂಡು ನಮ್ರತೆಯಿಂದ ಶಿಷ್ಯ ಚೌಡಯ್ಯನವರು ನಿಂತಿದ್ದರು. ಕೃಷ್ಣಪ್ಪನವರು ಅವರ ಕಡೆ ನೋಡಿದರು. “ಚೌಡಯ್ಯ, ಕೋತಿಯನ್ನು ನೋಡಿದರೆ ನನಗೆ ಸಾಕ್ಷಾತ್ ಆಂಜನೇಯನಂತೆ ಕಾಣಿಸುತ್ತದೆ. ರಾಮಪಟ್ಟಾಭಿಷೇಕವನ್ನು ನಾನು ಇನ್ನೂ ನಡೆಸದಿರುವುದನ್ನು ನನಗೆ ಜ್ಞಾಪಿಸುತ್ತದೆಯೋ ಏನೋ. ಯಾವುದಕ್ಕೂ ಪುರೋಹಿತರನ್ನು ಕಂಡು ಪಟ್ಟಾಭಿಷೇಕಕ್ಕೆ ಒಂದು ಶುಭಮುಹೂರ್ತವನ್ನು ಗೊತ್ತುಮಾಡು. ಪಟ್ಟಾಭಿಷೇಕವನ್ನು ನಡೆಸೋಣ” ಎಂದರು. ಒಡನೆಯೇ ಕೋತಿಯು ತಟ್ಟೆಯಲ್ಲಿದ್ದ ಹೂವಿನ ಹಾರವನ್ನು ತೆಗೆದುಕೊಂಡು ಓಡಿಹೋಯಿತು!

ಕೃಷ್ಣಪ್ಪನವರು ರಾಮಪಟ್ಟಾಭಿಷೇಕವನ್ನು ಬಹು ವೈಭವದಿಂದ ನಡೆಸಿದರು. ಅಂತೂ ’ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರ’ ಭಾಗ್ಯ ಅವರದಾಯಿತು.

ಸಂಗೀತ ಶಾಲೆಯೊಂದನ್ನು ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ತೆರೆಯಬೇಕೆಂದೂ ಕೃಷ್ಣಪ್ಪನವರಿಗೆ ಆಸೆ. ಆದರೆ ಅದು ಅವರ ಜೀವಿತ ಕಾಲದಲ್ಲಿ ಕನಸಾಗಿಯೇ ಉಳಿಯಿತು. ಅವರ ನಂತರ ಆ ಯೋಜನೆಯು ಕಾರ್ಯ ರೂಪಕ್ಕೆ ಬಂದು ’ಕೃಷ್ಣ ಗಾಯನ ಸಂಗೀತ ಶಾಲೆ’ಯ ಉದಯವಾಯಿತು. ಅಲ್ಲದೆ ಚೌಡಯ್ಯನವರು ’ಶ್ರೀ ಅಯ್ಯನಾರ್ ಸಂಗೀತ ಕಲಾಶಾಲೆ’ಯನ್ನು ಮಂದಿರದಲ್ಲಿ ಸ್ಥಾಪಿಸಿದರು.

ಶ್ರೀ ಪ್ರಸನ್ನ ಸೀತಾರಾಮ ಮಂದಿರವು ಮೈಸೂರಿನ ಅಪೂರ್ವ ನಿಧಿ. ಸುಮಾರು ೬೦೦ ಜನರು ಕೂಡಬಹುದಾದ ಚೊಕ್ಕವಾದ ಸಭಾಂಗಣ. ಗೋಡೆಗಳ ಮೇಲೆ ನಾಲ್ಕು ಕಡೆಗಳಲ್ಲೂ ದಶಾವತಾರದ ತೈಲಚಿತ್ರಗಳಿವೆ. ಮಹಾ ವಿದ್ವಾಂಸರ ಭಾವಚಿತ್ರಗಳೂ ಇದ್ದು ಸಂಗೀತ ವಾತಾವರಣವನ್ನು ಕಲ್ಪಿಸಿದೆ. ಸಂಗೀತಗಾರರು ಕುಳಿತುಕೊಳ್ಳುವ ವೇದಿಕೆಯ ಎದುರು ನಯನ ಮನೋಹರವಾದ ಗರ್ಭಗುಡಿ ಇದೆ. ಅದರೊಳಗೆ ಶ್ರೀರಾಮಚಂದ್ರನ ಪಟ್ಟಾಭಿಷೇಕದ ಭಾರೀ ತೈಲಚಿತ್ರವಿದೆ. ಹೊರಗಡೆ ವರಾಂಡಕ್ಕೆ ಸೇರಿದಂತೆ ಎರಡು ಭಾಗಗಳಲ್ಲಿಯೂ ಎರಡು ಕೊಠಡಿಗಳಿವೆ. ಒಳಗೆ ಸಭಾಂಗಣದ ಬಲಭಾಗದಲ್ಲಿ ಮತ್ತೊಂದು ಕೊಠಡಿಯಿದೆ. ವೇದಿಕೆಯ ಹಿಂದಿನ ಗೋಡೆಯ ಮೇಲೆ ಕೃಷ್ಣಪ್ಪನವರ ಭಾವಚಿತ್ರವು ರಾರಾಜಿಸುತ್ತಿದೆ. ಅದನ್ನು ನೋಡಿದರೆ ಕೃಷ್ಣಪ್ಪನವರೇ ಎದ್ದುಬಂದು ನಮ್ಮನ್ನು ಕರೆಯುತ್ತಿರುವಂತಿದೆ. ಮಂದಿರಕ್ಕೆ ಸೇರಿದಂತೆ ತೋಟವೊಂದಿದೆ. ಮಂದಿರದಲ್ಲಿ ಮಹಾ ವಿದ್ವಾಂಸರುಗಳು ಕಛೇರಿಗಳನ್ನು ಮಾಡಿ ಜೇನಿನ ಮಳೆಗರೆದಿದ್ದಾರೆ.

ಕೆಲವು ಪ್ರಸಂಗಗಳು

ಕೃಷ್ಣಪ್ಪನವರದು ಎದ್ದುಕಾಣುವ ವ್ಯಕ್ತಿತ್ವ. ಆಕರ್ಷಕವಾದ ರೂಪ. ಭವ್ಯವಾದ ನಿಲುವು. ಸಾಮು ಮಾಡಿ ರೂಢಿಸಿಕೊಂಡ ದೇಹದಾರ್ಢ್ಯ. ಅವರ ಪ್ರಗತಿಯನ್ನು ಕಂಡು ಆಗದವರು ಅವರ ಜೀವಕ್ಕೆ ಅಪಾಯವನ್ನು ಎಷ್ಟೋ ಬಾರಿ ತಂದಿದ್ದರೂ ಏನೂ ಆಗದೆ ಉಳಿದುಕೊಂಡಿದ್ದರು. ಇದಕ್ಕೆ ಅವರ ತಾಯಿಯ ರಕ್ಷೆಯೇ ಕಾರಣ.

ಕೃಷ್ಣಪ್ಪನವರ ಜೀವನದಲ್ಲಿ ಅನೇಕ ಸ್ವಾರಸ್ಯವಾದ ಪ್ರಸಂಗಗಳು ನಡೆದವು. ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿದೆ.

ಕೃಷ್ಣಪ್ಪನವರಿಗೆ ನಶ್ಯದ ಚಟವಿತ್ತು. ಒಂದು ದೊಡ್ಡ ಬೆಳ್ಳಿ ಡಬ್ಬಿಯಲ್ಲಿ ಉಂಡೆ ನಶ್ಯ, ಸುವಾಸನೆ ಸಾಮಾನು, ಪುಡ ನಶ್ಯ ಮತ್ತು ಸುಣ್ಣ ಇವುಗಳನ್ನು ಹಾಕಿಟ್ಟಿಕೊಂಡಿದ್ದು, ಯಾವಾಗಲೂ ಡಬ್ಬಿಯನ್ನು ಕೈಯಲ್ಲಿ ಹಿಡಿದಿರುತ್ತಿದ್ದರು. ಕಚೇರಿಗೆ ಹೋಗುವಾಗಲೆಲ್ಲ ಮರೆಯದೆ ಕೊಂಡೊಯ್ಯುತ್ತಿದ್ದರು.

ಒಮ್ಮೆ ಮಹಾರಾಜರ ಪೂಜಾಕಾಲದಲ್ಲಿ ಕೃಷ್ಣಪ್ಪನವರು ಹಾಡಬೇಕಾಯಿತು. ಮಾಮೂಲಿನಂತೆ ಕೈಯಲ್ಲಿ ನಶ್ಯದ ಡಬ್ಬಿ ಹಿಡಿದು ಅರಮನೆಗೆ ಹೋದರು. ಅಲ್ಲಿ ದೊರೆಗಳು ಪೂಜಾಮಗ್ನರಾಗಿದ್ದರು. ಅದು ಮುಗಿಯುವುದರೊಳಗೆ ಪಕ್ಕದ ಕೋಣೆಯಲ್ಲಿ ಶ್ರುತಿ ಮಾಡಿಕೊಂಡು ಸಿದ್ಧರಾಗಿ, ದೊರೆಗಳ ಕರೆ ಬರುವುದರೊಳಗೆ ನಶ್ಯ ಹಾಕಿಕೊಂಡು ಬಿಡೋಣವೆಂದು, ಡಬ್ಬಿಯಿಂದ ಒಂದು ಚಿಟಿಕೆ ನಶ್ಯವನ್ನು ತೆಗೆದುಕೊಂಡು ಮೂಗಿನ ರಂಧ್ರಕ್ಕೇರಿಸಿದರು. ಅಷ್ಟರೊಳಗೆ, “ಬುದ್ಧಿಯವರು ಕರೆಯುತ್ತಾರೆ, ಬರಬೇಕು” ಎಂದು ಊಳಿಗದವನು ಕರೆದ. ಮೂಗಿನ ಮೇಲೆ ಮೆತ್ತಿದ್ದ ನಶ್ಯವನ್ನೂ ಒರೆಸಿಕೊಳ್ಳದೆ ಹೋಗಿ ಹಾಡಲಾರಂಭಿಸಿದರು. ಯಾಕೋ ಶಾರೀರವು ಬಿಡದೆ ತೊಂದರೆ ಕೊಟ್ಟಿತು. ಹೇಗೋ ಸಾವಿರಿಸಿಕೊಂಡು ತಮ್ಮ ಕೆಲಸವನ್ನು ಮುಗಿಸಿದರು. ಮಹಾರಾಜರಿಗೆ ಎಲ್ಲಿ ಅಸಮಾಧಾನವಾಗಿದೆಯೋ ಎಂಬ ಹೆದರಿಕೆ ಬೇರೆ. ಮನೆಗೆ ಬಂದರು. “ಈ ಹಾಳು ನಶ್ಯದ ದುರಭ್ಯಾಸದಿಂದಲೇ ಅಲ್ಲವೇ ಇವತ್ತು ತೊಂದರೆ ಆದದ್ದು! ಇದೇ ಕೊನೆ. ಇನ್ನು ಮೇಲೆ ಮುಟ್ಟುವುದಿಲ್ಲ” ಎಂದು ಪ್ರಮಾಣ ಮಾಡಿ, ಬೀದಿಯಲ್ಲಿ ಹೋಗುತ್ತಿದ್ದ ಬ್ರಾಹ್ಮಣನೊಬ್ಬನನ್ನು ಕರೆದು ತಾಂಬೂಲದೊಂದಿಗೆ ಎರಡು ರೂಪಾಯಿ ದಕ್ಷಣೆ ಇಟ್ಟು ನಶ್ಯದ ಡಬ್ಬಿಯನ್ನು ಅವನಿಗೆ ದಾನ ಮಾಡಿ ಕೈಮುಗಿದರು. ಅಂದು ಬಿಟ್ಟ ಅಭ್ಯಾಸವನ್ನು ಮತ್ತೆ ತಮ್ಮ ಹತ್ತಿರಕ್ಕೆ ಸೇರಿಸಲಿಲ್ಲ ಕೃಷ್ಣಪ್ಪನವರು.

ಒಂದಾವರ್ತಿ ಚಾಮುಂಡಿಬೆಟ್ಟದ ತೆಪ್ಪೋತ್ಸವದಲ್ಲಿ ಕೃಷ್ಣಪ್ಪನವರೂ ವಾಸುದೇವಾಚಾರ್ಯರೂ ಜೊತೆಯಲ್ಲಿ ಹಾಡಬೇಕೆಂದು ಮಹಾರಾಜರು ಅಪ್ಪಣೆ ಮಾಡಿದರು. ಅಲ್ಲಿಗೇ ಸುಮ್ಮನಿದ್ದಿದ್ದರೆ ತೊಂದರೆಯಿರುತ್ತಿರಲಿಲ್ಲ. ನಾರಾಯಣಿ ರಾಗದ ’ಮಹಿಷಾಸುರ ಮರ್ದಿನಿ’ ಕೃತಿಯನ್ನೇ ಹಾಡಬೇಕು ಎಂದು ಹೇಳಿದ್ದರು. ಇಬ್ಬರಿಗೂ ಆ ಕೃತಿಯ ಪಾಠವಿಲ್ಲ. ಪಿಟೀಲು ದೊಡ್ಡ ವೆಂಕಟರಮಣಯ್ಯ “ಪಲ್ಲವಿ ಧಾಟಿ ನನಗೆ ಗೊತ್ತು” ಎಂದು ಹಾಡಿ ತೋರಿಸಿದರು. ವಿದ್ವಾಂಸರಿಬ್ಬರೂ ಅಷ್ಟನ್ನೇ ಗಟ್ಟಿಮಾಡಿ ಕೊಂಡರು. ತೆಪ್ಪವು ಮಹಾರಾಜರ ಹತ್ತಿರ ಹೋದಾಗ ಅದನ್ನು ಹಾಡಿ, ಅದಕ್ಕೆ ಕೃಷ್ಣಪ್ಪನವರು ಸ್ವರ ಹಾಡಿ ತೆಪ್ಪವು ಈಚೆ ದಡಕ್ಕೆ ಬಂದಾಗ ಸುಮ್ಮನಾಗುತ್ತಿದ್ದರು. ಹಾಗೂ ಹೀಗೂ ಅಂದಿನ ಪರೀಕ್ಷೆ ಮುಗಿಯಿತು. ’ಸದ್ಯ’ ಎಂದು ಇಬ್ಬರೂ ಧಾರಾಳವಾಗಿ ಉಸಿರುಬಿಟ್ಟರು.

ತುಂಗಮ್ಮನವರು ತಮ್ಮ ಮಂಗಳಸೂತ್ರವನ್ನೇ ರಾಮಮಂದಿರಕ್ಕೆಂದು ಪತಿಗೆ ಅರ್ಪಿಸಿದರು

ಮಾರನೆಯ ದಿನವೇ ಮಹಾರಾಜರು ಇಬ್ಬರಿಗೂ ಹೇಳಿಕಳುಹಿಸಿದರು. ಅವರು ಬಂದ ಮೇಲೆ, “ನೋಡಿ ಕೃಷ್ಣಪ್ಪನವರೇ, ಆಚಾರ್ಯರೇ, ನಿನ್ನೆ ನೀವಿಬ್ಬರೂ ತೆಪ್ಪದಲ್ಲಿ ಹಾಡಿದ ಪಲ್ಲವಿ ಚೆನ್ನಾಗಿತ್ತು. ಅನುಪಲ್ಲವಿ ಮತ್ತು ಚರಣಗಳನ್ನು ಕೇಳಬೇಕೆಂಬ ಆಸೆ ನಮಗಿದೆ. ನೀವಿಬ್ಬರೂ ಆ ಕೃತಿಯನ್ನು ಪೂರ್ತಿ ಪಾಠ ಮಾಡಿಕೊಂಡು ನಾಡಿದ್ದು ಸಜ್ಜೆಯಲ್ಲಿ ನಮಗೆ ಒಪ್ಪಿಸಿ” ಎಂದು ಹೇಳಿ ತುಂಟ ನಗುವೊಂದನ್ನು ಬೀರಿದರು. ವಿದ್ವಾಂಸರಿಬ್ಬರಿಗೂ ಮುಖವು ಬಿಳಿಚಿಕೊಂಡಿತು. ಆದರೂ ಪೆಚ್ಚು ನಗೆಯೊಂದನ್ನು ಬಲವಂತವಾಗಿ ಮುಖದ ಮೇಲೆ ತರಿಸಿಕೊಂಡು, “ಅಪ್ಪಣೆ, ಅಪ್ಪಣೆ” ಎಂದು ಹೇಳಿ ಹೊರಬಿದ್ದರು.

ಸಾಹುಕಾರ್ ತಿಮ್ಮಯ್ಯನವರ ಮನೆಯಲ್ಲಿ ಕೃಷ್ಣಪ್ಪನವರ ಹಾಡುಗಾರಿಕೆ ನಡೆಯಿತು. ಚೌಡಯ್ಯನವರ ಪಿಟೀಲು ಮತ್ತು ಪುಟ್ಟಸ್ವಾಮಯ್ಯ (ಮೂಗಯ್ಯ) ನವರ ಮೃದಂಗ ಪಕ್ಕವಾದ್ಯಗಳು. ಕೃಷ್ನಪ್ಪನವರ ಅಂದಿನ ಸಂಗೀತ ಕೇಳಿದವರಿಗೆ ಅಪಾರ ಸಂತೋಷ ಕೊಡುವಂತಹದು. ತಿಮ್ಮಯ್ಯನವರು ಸುಪ್ರೀತರಾಗಿ ಒಂದು ತಟ್ಟೆಯಲ್ಲಿ ೨೦೦ ರೂಪಾಯಿಗಳ ಸಂಭಾವನೆಯನ್ನಿಟ್ಟುಕೊಂಡು ಅದನ್ನು ಕೃಷ್ಣಪ್ಪನವರಿಗೆ ಕೊಡಹೋದರು. “ಏನಿದು ಸಾಹುಕಾರರೇ, ಇದೆಲ್ಲ ಯಾಕೆ? ನಿಮ್ಮಿಂದ ನಾನು ಈಗಾಗಲೇ ಉಪಕೃತನಾಗಿರುವುದು ಸಾಲದೇ? ನಿಮ್ಮ ವಿಶ್ವಾಸದಿಂದ ನಾನಿಂದು ಒಬ್ಬ ಮನುಷ್ಯನಾಗಿದ್ದೇನೆ. ಅದನ್ನು ನಾನೆಂದೂ ಮರೆಯುವುದಿಲ್ಲ” ಎಂದು ವಿನಯದಿಂದ ನಿರಾಕರಿಸಿದರು. ಆದರೆ ತಿಮ್ಮಯ್ಯನವರು ಸೋಲಲ್ಲಿಲ್ಲ. ಕೃಷ್ಣಪ್ಪನವರು ಸಂಭಾವನೆಯನ್ನು ತೆಗೆದುಕೊಳ್ಳುವವರೆಗೂ ಬಿಡಲಿಲ್ಲ.

ಹೀಗೆ ವೇದಿಕೆಯ ಮೇಲೆ, ಹೊರಗೆ ಎಷ್ಟೋ ನೆನಪಿನಲ್ಲಿ ಉಳಿಯುವಂತಹ ಪ್ರಸಂಗಗಳು. ಅವಕ್ಕೆ ಲೆಕ್ಕವಿಲ. ಅವುಗಳಿಂದ ಕೃಷ್ಣಪ್ಪನವರ ಸೌಜನ್ಯವು ಜಾಸ್ತಿಯಾಗುತ್ತಿತ್ತೇ ವಿನಾ ಅಹಂಕಾರವು ಮತ್ರ ಅವರ ಬಳಿ ಸುಳಿಯುತ್ತಿರಲಿಲ್ಲ. ಕೃಷ್ಣಪ್ಪನವರು ಎಂದೂ ಇಪ್ಪತ್ತೆರಡು, ಇಪ್ಪತ್ನಾಲ್ಕು ಶ್ರುತಿಗಳ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಶ್ರುತಿಗಳ ವಿಚಾರವಾಗಿ ಅವರನ್ನು ಪ್ರಶ್ನೆ ಮಾಡಿದ ಹಿಂದುಸ್ಥಾನಿ ಸಂಗೀತ ಶಾಸ್ತ್ರ ಪಂಡಿತ ಪ್ರೊ. ಭಾತ್ಕಂಡೆಯವರಿಗೆ “ಹನ್ನೆರಡು ಶ್ರುತಿಗಳನ್ನು ಸರಿಯಾಗಿ ಹಾಡಿ ಜಯಿಸಿಕೊಂಡರೆ ಸಾಕು” ಎಂದು ಉತ್ತರಿಸಿದರು. ರಾಗ ಲಕ್ಷಣದ ವಿಷಯವವಾಗಿ ಯಾರಾದರೂ ಏನನ್ನಾದರೂ ಕೇಳಿದರೆ, “ನನ್ನನ್ನು ಕೇಳಬೇಡಿ” ಎನ್ನುತ್ತಿದ್ದರು. ಶಂಕರಾಭರಣ, ಕಲ್ಯಾಣಿ, ತೋಡಿ, ಮೋಹನ, ಭೈರವಿ, ಮುಖಾರಿ-ಇವು ಅವರ ಮೆಚ್ಚಿನ ರಾಗಗಳು. ಅವರಿಗೆ ನೂರೆಂಟು ತಾಳಗಳಲ್ಲಿ ಪಲ್ಲವಿ ಹಾಡುವ ಶಕ್ತಿ ಇತ್ತು. ಇಂತಹ ಶಕ್ತಿ ಇರುವ ವಿದ್ವಾಂಸರು ವಿರಳ. ಆದರೂ ಕೃಷ್ಣಪ್ಪನವರು ಏಕಾಏಕಿ ಕಛೇರಿಗಳಲ್ಲಿ ಹಾಡಿ ಪಕ್ಕ ವಾದ್ಯಗಾರರ ತೇಜೋವಧೆ ಮಾಡುತ್ತಿರಲಿಲ್ಲ.

ಆಗಿನ ಕಾಲದಲ್ಲಿ ವಿದ್ವಾಂಸರು ಪುರಂದರದಾಸರು ಕನ್ನಡದಲ್ಲಿ ರಚಿಸಿದ ದೇವರನಾಮಗಳನ್ನು ಹಾಡುತ್ತಿರಲಿಲ್ಲ.  ಸಂಸ್ಕೃತ ಮತ್ತು ತೆಲುಗು ಭಾಷೆಗಳ ಹಾಡುಗಳಿಗೆ ಪ್ರಾಶಸ್ತ್ಯ. ಆದರೆ ಪುರಂದರದಾಸರು ಕರ್ನಾಟಕ ಸಂಗೀತದ ಪಿತಾಮಹರು. ಪುರಂದರದಾಸರ ದೇವರನಾಮಗಳನ್ನು ಕಛೇರಿಗಳಲ್ಲಿ ಹಾಡಲು ಮೊದಲು ಆರಂಭಿಸಿದವರು ಕೃಷ್ಣಪ್ಪನವರೇ. ಬರಿಯ ದೇವರನಾಮಗಳಿಂದಲೇ ನಾಲ್ಕೈದು ಗಂಟೆಗಳ ಕಾಲ ಕಚೇರಿಯನ್ನು ತೂಗಿಸುವ ಸಾಮರ್ಥ್ಯ ಅವರಿಗಿತ್ತು. ಕೃಷ್ಣಪ್ಪನವರ ಹಾಡಿಕೆಯಲ್ಲಿದ್ದ ಸ್ವರಶುದ್ಧತೆಗಾಗಿ ಅವರನ್ನು ’ಶುದ್ಧ ಸ್ವರಾಚಾರ್ಯ’ ರೆಂದು ಕರೆಯುವ ವಾಡಿಕೆಯಿತ್ತು.

ಶಿಷ್ಯ ಸಮುದಾಯ

ತಾವು ಹೇಗೆ ಗುರುವಿನ ಪಾದದಡಿಯಲ್ಲಿ ಕುಳಿತು ನಿಷ್ಠೆಯಿಂದ, ಒಂದು ಕಟ್ಟುಪಾಡಿಗೆ ಒಳಗಾಗಿ ಸಂಗೀತ ವಿದ್ಯೆಯನ್ನು ಕಲಿತರೋ, ಅದರಂತೆಯೇ ತಮ್ಮ ಶಿಷ್ಯರೂ ವಿದ್ಯಾರ್ಜನೆ ಮಾಡಬೇಕೆಂಬ ಆಕಾಂಕ್ಷೆ ಕೃಷ್ಣಪ್ಪನವರಿಗಿತ್ತು. ಅದು ಹಾಗೆಯೇ ನಡೆಯಿತು. ಅವರ ಶಿಷ್ಯ ವೃಂದವು ದೊಡ್ಡದು. ಅವರ ಶಿಷ್ಯರಲ್ಲಿ ಹಲವಾರು ಭಾರತದಲ್ಲಿಯೇ ಹಿರಿಯ ಸಂಗೀತಗಾರರ ಪಂಕ್ತಿಗೆ ಸೇರಿದವರು. ಅದರಲ್ಲಿಯೂ ಚೌಡಯ್ಯನವರು ಬಹು ಪ್ರಸಿದ್ಧರಾದವರು. ಪಿಟೀಲು ವಾದನದಲ್ಲಿ ಇವರ ಸಮಾನರಿಲ್ಲ ಎನ್ನಿಸಿಕೊಂಡ ಚೌಡಯ್ಯನವರಂತಹ ಕಲಾವಿದನ ಉದಯ ಯುಗಕ್ಕೊಮ್ಮೆ. ಕೃಷ್ಣಪ್ಪನವರ ಶಿಷ್ಯವೃಂದವು ಅವರ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಿದೆ. ನಿಜಕ್ಕೂ ಕೃಷ್ಣಪ್ಪನವರು ಧನ್ಯಜೀವಿ.

ಚಿರಶಾಂತಿ

ಕೃಷ್ಣಪ್ಪನವರು, ’ಎಲ್ಲಿರುವೆ ತಂದೆ ಬಾರೋ’, ’ಕರುಣಾಕರ ನೀನೆಂಬುವುದೇತಕೋ’, ’ಕಂಡು ಕಂಡು ನೀ ಎನ್ನ’ ಮುಂತಾದ ದೇವರನಾಮಗಳನ್ನೂ ಅಳಿಯ ಲಿಂಗರಾಜರ ನೀಲಾಂಬರಿ ರಾಗದ ’ಶೃಂಗಾರ ಲಹರಿ’ ಕೃತಿಯನ್ನೂ ಗ್ರಾಮಫೋನ್ ರಿಕಾರ್ಡುಗಳ ಮೂಲಕ ಬೆಳಕಿಗೆ ತಂದುದಷ್ಟೇ ಅಲ್ಲ, ’ಅಂಬ ನನ್ನು ಬ್ರೋವವೇ’ (ಧರ್ಮವತಿ ರಾಗ) ಮತ್ತು ಇನ್ನೂ ಕೆಲವು ಕೃತಿಗಳನ್ನು ರಚಿಸಿಕೊಟ್ಟಿದ್ದಾರೆ. ಸಾಹಿತ್ಯವನ್ನು ರಾಳ್ಲಪಲ್ಲಿಯವರಿಂದ ರಚಿಸಿ, ತಾವು ಸ್ವರ ಜೋಡಣಿ ಮಾಡಿದರು.

ಬಿಡಾರಂ ಕೃಷ್ಣಪ್ಪನವರು ಅರವತ್ತೈದು ವರ್ಷಗಳ ತುಂಬು ಜೀವನವನ್ನು ನಡೆಸಿ, ಆದರ್ಶ ಗಾಯಕರೆಂದು ಹೆಸರು ಪಡೆದು, ೧೯೩೧ ರ ಜುಲೈ ೨೯ ರಂದು ಅಂದರೆ ಆಷಾಢ ಶುದ್ಧ ಪೂರ್ಣಿಮೆಯ ದಿನ ಶ್ರೀರಾಮಚಂದ್ರನ ಪಾದಾರವಿಂದವನ್ನು ಸೇರಿದರು. ಅವರ ಭೌತಿಕ ದೇಹವು ನಶಿಸಿತು ನಿಜ. ಆದರೆ ಅವರ ಪ್ರತಿಭೆ ಮತ್ತು ಪಾಂಡಿತ್ಯ ಅವರ ಶಿಷ್ಯರ ಮೂಲಕ ವ್ಯಕ್ತವಾಗುತ್ತಿವೆ. ಅವರ ಆತ್ಮಜ್ಯೋತಿಯು ಅವರು ಸ್ಥಾಪಿಸಿದ ಶ್ರೀ ಪ್ರಸನ್ನ ಸೀತಾರಾಮ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದೆ ಎನ್ನಲು ಅಡ್ಡಿಯಿಲ್ಲ.