“ಕನ್ನಡ ನಾಡು ಕಲೆಯ ಬೀಡು” ಅನ್ನುವುದು ಲೋಕವಿದಿತವಾದ ಮತ್ತು ಇತಿಹಾಸ ವೇದ್ಯವಾದ ರೂಢಿಯ ಮಾತು.

ಹೊಯ್ಯಳ ಪರಮ ಸುಂದರ ಶಿಲ್ಪ, ಪಂಪ-ರನ್ನರ ರಸ-ಕಾವ್ಯ, ಬಸವಣ್ಣನವರು ಮತ್ತು ಅವರ ಅನುಭವ ಮಂಟಪದ ಶಿವ ಶರಣ-ಶರಣೆಯರ ಸರಳ ಸುಂದರ ವಚನಗಳು, ಅಲ್ಲದೆ ಪುರಂದರಾದಿ ಹರಿದಾಸ ಪದ-ಸಂಪದದ ಭಕ್ತಿ ಸುಧೆಯ ಹೊನಲು-ಇವೆಲ್ಲ ಕನ್ನಡ ನಾಡಿನ ಕಲಾ ಸಿರಿಯ ಕೀರ್ತಿ ವೈಭವಗಳನ್ನು ದಿಶೆದಿಶೆಗಳಲ್ಲೂ ಸಾರಿವೆ, ಸಾರುತ್ತಿವೆ. ಮೇಲಾಗಿ ಭಾರತೀಯ ಸಂಗೀತದ ಮೂಲವೇ ಕನ್ನಡನಾಡು ಅನ್ನುವರಲ್ಲವೆ?

ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದಲ್ಲಿ ಈ ಪುಣ್ಯಭೂಮಿಯ ಸಂಗೀತ ಲೋಕದಲ್ಲಿ ಅವತರಿಸಿದ ಲೋಕಮಾಣ್ಯ ಗಾಯಕರು, ವಾದಕರು, ಗಾನಕಲಾ ಪರಿಣತರು, ಅನುಭಾವಿಗಳು, ಪ್ರಾತಃಸ್ಮರಣೀಯರಾದ ವಿಭೂತಿ ಪುರುಷರು ಅನೇಕರು. ಆರಿಸಿದ ಈ ಸಾಲಿನಲ್ಲಿ ಮೆರೆದ ಉತ್ತುಂಗ ಗಾಯಕರು, ನಮ್ಮ “ಬಿಡಾರದ” ಕೃಷ್ಣಪ್ಪನವರು. ಅವರ ಬಾಳಿನ ಬೆಳವಣಿಗೆ, ಸಂಗೀತ-ತಪಸ್ಸು, ಸಿದ್ಧಿಗಳು ಮಹತ್ವ ಪೂರ್ಣವಾದವು.

ಸ್ವತಃ ಕವಿಗಳೂ ಮಹಾ ಕಲಾರಸಿಕರೂ ಆದ ಮುಮ್ಮಡಿ ಕೃಷ್ಣರಾಜ ಒಡೆಯರು ಆಳಿದ ಕಾಲವದು-ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಯಕ್ಷಗಾನ ತಂಡದವರಿಂದ ಪ್ರದರ್ಶನವೊಂದು ಅರಮನೆಯಲ್ಲಿ ನಡೆಯಿತು. ಸುಪ್ರೀತರಾದ ಮಹಾಸ್ವಾಮಿಯವರು ಆ ತಂಡದ ಕೆಲವರನ್ನು ಮೈಸೂರಿನಲ್ಲೇ ಉಳಿಸಿಕೊಂಡು, ಶಿವರಾಮಪೇಟೆಯಲ್ಲಿ ಅವರಿಗೆಲ್ಲ “ಬಿಡಾರ”ಗಳನ್ನು ಕಟ್ಟಿಸಿಕೊಟ್ಟರು. ಅರಮನೆಯಲ್ಲಿ ಅವರನ್ನೆಲ್ಲ ಬಿಡಾರದವರಂದೇ ಕರೆಯುತ್ತಿದ್ದರು. ಅವರ ಪೈಕಿ ಬಿಡಾರದ ವಿಶ್ವನಾಥಯ್ಯನವರದೂ ಒಂದು ಚಿಕ್ಕಸಂಸಾರ. ಕ್ರಿ.ಶ. ೧೮೬೬ನೇ ಸಂವತ್ಸರದ ಗೋಕುಲಾಷ್ಟಮಿಯಂದು, ವಿಶ್ವನಾಥಯ್ಯನವರ ಎರಡನೆಯ ಮಗ ಕೃಷ್ಣ ಹುಟ್ಟಿದ್ದು. ಮನೆಯ ಸಾಂಕೇತಿಕ ಹೆಸರಿನ ಪ್ರಕಾರ ಕೃಷ್ಣ, “ಬಿಡಾರದ ಕೃಷ್ಣ” ನಾಗಿ ಬೆಳದದ್ದು.

ವಿಶ್ವನಾಥಯ್ಯ ಕೃಷ್ಣನ ಬಾಲ್ಯದಲ್ಲೇ ತೀರಿಕೊಂಡರು. ಸರಿ, ಸಂಸಾರದಲ್ಲಿ ಅಮರಿಕೊಂಡದ್ದು ಬರೀ ಬಡತನ.

ಕೃಷ್ಣನ ಪೋಷಣೆಯ ಭಾರ ಅಸಹಾಯಕಳಾದ ತಾಯಿ ಹಾಗೂ ವಯಸ್ಸಿನಲ್ಲಿ ಸ್ವಲ್ಪ ಹಿರಿಯನಾದ ಅಣ್ಣ ಸುಬ್ಬರಾಯನ ಮೇಲೆ ಬಿತ್ತು. ಹೊತ್ತು ಹೊತ್ತಿನ ಕವಳಕ್ಕೂ ಕಷ್ಟ. ಅಣ್ಣನ ಜೊತೆಯಲ್ಲಿ ತಾಳ ಕಟ್ಟಿಕೊಂಡು ಹರಿದಾಸರ ಪದಗಳನ್ನು ಹಾಡಿಕೊಂಡು ಮನೆಮನೆಗೂ ಹೋಗಿ ಭಿಕ್ಷೆ ತಂದರೇನೇ ಅಂದಿನ ಕವಳ. ಇಂತಹ ಕಡು ಬಡತನದಲ್ಲೇ ಬೆಳೆದು ಬಂತು ಬಾಲಕ ಕೃಷ್ಣನ ಬಾಳು. ಶಾಲೆಗೆ ಹೋಗಿ ಓದುವ ಅವಕಾಶವೂ ಹೆಚ್ಚು ಕಡಿಮೆ ಇಲ್ಲ ಅನ್ನಬಹುದಾದ ಪರಿಸ್ಥಿತಿ. ಅಣ್ಣ-ತಮ್ಮ ಇಬ್ಬರಿಗೂ ಇದ್ದ ಆಸ್ತಿ ಒಂದೇ. ಅದೇ, ಹರಿದಾಸರ ಪದಗಳು.

ಒಂದು ದಿನ, ಅಣ್ಣನಿಗೇನೊ ತೊಂದರೆ; ಭಿಕ್ಷೆಗೂ ಹೋಗಲಾಗಲಿಲ್ಲ. ಕೃಷ್ಣ, ಕೋಟೆ-ಆಂಜನೇಯನ ದೇವಸ್ಥಾನದ ಮುಂದೆ ಹಾಡುತ್ತಾ ಗಳಿಕೆಗೆ ಕುಳಿತ, ಗ್ರಹಚಾರ! ಅಂದು ಎಷ್ಟು ಹೊತ್ತು ಹಾಡಿದರೂ ಮೂರು ಕಾಸೂ ಸಿಗಲಿಲ್ಲ. ಹಸಿದ ಹೊಟ್ಟೆ ಬೇರೇ! ಹಾಡಿ ಹಾಡಿ ಸುಸ್ತಾದ ಹುಡುಗ ಅಸಹಾಯಕತೆಯಿಂದ ಕಣ್ಣಿನಲ್ಲಿ ನೀರು ಸುರಿಸುತ್ತಿದ್ದ. ಹಸಿವು ಮತ್ತು ಬಿಸಿಲಿನ ಬೇಗೆಯಿಂದ ಸುಸ್ತಾಗಿ ಬಿದ್ದಿದ್ದ, ಹುಡುಗ. ಕೃಷ್ಣ! ದೈವಲೀಲೆಯೇ ವಿಚಿತ್ರ! ಅದೇ ಕೃಷ್ಣನ ಪಾಲಿನ ಅಮೃತ ಘಳಿಗೆಯಾಯ್ತು! ಬಿದ್ದ ಕೃಷ್ಣನನ್ನು ಸಂತೈಸಿ ಎಬ್ಬಿಸಿದರು. ಸಾಹುಕಾರರೊಬ್ಬರು-ಕೃಷ್ಣನ ಪಾಲಿಗೆ ಬಂದ, ಬಾಳ ದೇವರು! ತಿಮ್ಮಯ್ಯನವರೆಂದು ಅವರ ಹೆಸರು. ಮೊದಲು, ಕೃಷ್ಣನ ಕೈಗೆ ಒಂದು ರೂಪಾಯಿ ಕೊಟ್ಟು, “ಸಂಗೀತ ಕಲಿಯುವೆಯಾ ಮಗು”? ಎಂದರು. ಅಳುವಿನ ನೋವಿನಲ್ಲೂ ನಗು ಬಂತು, ಕೃಷ್ಣನಿಗೆ! “ಕವಳಕ್ಕೇ ಕಷ್ಟವಾಗಿರುವಾಗ, ಸಂಗೀತ ಕಲಿಯೋದು ಎಲ್ಲಿ ಬಂತು, ಸ್ವಾಮಿ?” ಅಂದ ಕೃಷ್ಣ. “ನೋಡು, ನಾಳೆ ಇಲ್ಲಿಗೇ ಈ ಹೊತ್ತಿಗೇ ಬಾ” ಅಂತ ಹೇಳಿ ಕೃಷ್ಣನನ್ನ ಮನೆಗೆ ಕಳುಹಿಸಿದರು, ಸಾಹುಕಾರರು.

ಮಾರನೆಯ ದಿನ!………………..ಕೃಷ್ಣನನ್ನು, “ಗಾನವಿಶಾರದ”ನನ್ನಾಗಿಸಿದ ಆ ಮೊದಲ ದಿನ! ಆಡಿದ ಮಾತಿನಂತೆ ಸಾಹುಕಾರರು ಆಗಿನ ಹಿರಿಯ ವಿದ್ವಾಂಸರಾಗಿದ್ದ ಕರೂರು ರಾಮಸ್ವಾಮಿಯವರಲ್ಲಿ ಸಂಗೀತ ಪಾಠಕ್ಕೆ ಸೇರಿಸಿದರು. ಗುರು ಸಂಭಾವನೆ ಮತ್ತು ಕೃಷ್ಣನ ಪೋಷಣೆಯನ್ನು, ಆ ಮಹಾನುಭಾವ, ತಿಮ್ಮಯ್ಯ ವಹಿಸಿಕೊಂಡರು.

ಗುರುಗಳಾದ ರಾಮಸ್ವಾಮಿಯವರಿಗೆ ಕೃಷ್ಣನ ಕುಟುಂಬದವರೆಲ್ಲ ಗೊತ್ತಿದ್ದವರು. ವಾತ್ಯಸಲ್ಯದಿಂದ ಕೃಷ್ಣನಿಗೆ ಪಾಠ ಹೇಳಿದರು.

ಹಾಡಲು ಕುಳಿತು ಕೊಳ್ಳಬೇಕಾದ ಕ್ರಮ, ಅ ಕಾರದ ಸಾಧನೆಗಳಿಂದ ಧ್ವನಿಸಂಸ್ಕರಣಗೊಳಿಸುವ ವಿಧಾನ, ಎಲ್ಲವನ್ನೂ ನಿರ್ವಂಚನೆಯಿಂದ ಕಲಿಸಿಕೊಟ್ಟರು. ಗಾಯಕನಿಗೆ ಅಂಗಸಾಧನೆ. ವ್ಯಾಯಾಮ ಎಷ್ಟು ಅಗತ್ಯ ಅನ್ನುವುದನ್ನು ಅರಿತ ಗುರುಗಳು ಶಿಷ್ಯನನ್ನು ಗರಡಿಗೆ ಕಳಿಸಿದರು.

ಕೆಲವು ವರ್ಷಗಳಲ್ಲೇ ಕೃಷ್ಣನಿಗೆ ಗಾಯನ ಲಕ್ಷಣ-ಲಕ್ಷ್ಯವೆಲ್ಲ ಕರಗತವಾಯಿತು. ಮಂದ್ರ, ಮಧ್ಯಮ ಹಾಗೂ ತಾರ ಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಹಾಡುವ ಜಾಡು ಸಿಕ್ಕಿತು. ವಿಳಂಬದಿಂದ ಅತಿದ್ರುತಕಾಲಗಳಲ್ಲೂ ಹಾಡುವ ಹಿಡಿತ ಬಂತು, ಹದ ಸಿಕ್ಕಿತು, ಕಂಠಕ್ಕೆ. ಹೀಗೆ ನಡೆಯಿತು ಕೃಷ್ಣನ ಸಾಧನೆ. ಪ್ರತಿದಿನ ಗಂಟೆಗಟ್ಟಲೆ ನಡೆಯಿತು. ಕೃಷ್ಣನ ಸಂಗೀತ ಪ್ರಗತಿ ಕಂಡು ಹಿಡಿಸಲಾರದಷ್ಟು ಸಂತೋಷ ಗುರುಗಳಿಗೂ, ಸಾಹುಕಾರ ತಿಮ್ಮಯ್ಯನವರಿಗೂ, ತಾರುಣ್ಯದ ವಯಸ್ಸು! ಕೃಷ್ಣನ ಶಾರೀರ, ಶರೀರ ಎರಡೂ ಸುದೃಢವಾದವು.

ಸುಂದರಕಾಯ, ಸುಭಗಶಾರೀರ ಮತ್ತು ವರ್ಷಗಟ್ಟಲೆ ಮಾಡಿ ಸಾಧನೆ-ಸಿದ್ಧಿಗಳಿಂದ ಕೃಷ್ಣ ವ್ಯಕ್ತಿತ್ವ ಗಣ್ಯವಾಯಿತು. ವಿದ್ವತ್ಪೂರ್ಣ ಸಂಗೀತ ವಶವಾಯಿತು. ಕರಿಗಿರಿರಾಯರು ಮತ್ತು ವೈಣಿಕ ಶಿಖಾಮಣಿ ಶೇಷಣ್ಣ ಇಬ್ಬರಲ್ಲೂ ಪಾಠದ ಮಾರ್ಗದರ್ಶನ ಪಡೆದ ಕೃಷ್ಣ ಮಹಾವಿದ್ವಾಂಸನಾದ.

ಸಾಹುಕಾರ ತಿಮ್ಮಯ್ಯನವರು ಮೈಸೂರು ಟೌನ್ ಹಾಲಿನಲ್ಲಿ ಕಚೇರಿ ಏರ್ಪಡಿಸಿದರು. ದಿವಾನ್ ಶೇಷಾದ್ರಿ ಆಯ್ಯರ್ ಅವರ ಆಧ್ಯಕ್ಷತೆ! ಕೃಷ್ಣ ಅಮೋಘವಾಗಿ ಹಾಡಿ ವಿದ್ವತ್-ಕ್ಷೇತ್ರದ ಸಂಪೂರ್ಣ ಮೆಚ್ಚುಗೆ ಗಳಿಸಿದ. ದಿವಾನರಿಗೆ ಅರಿಕೆ ಮಾಡಿಕೊಂಡು ಅರಮನೆಯಲ್ಲೂ ಕಚೇರಿ ಏರ್ಪಾಡಿಸುವಂತೆ ಮಾಡಿದರು ಸಾಹುಕಾರರು. ಮಹಾಸ್ವಾಮಿಯವರಾದ ಶ್ರೀ ಚಾಮರಾಜ ಒಡೆಯರು, ಕೃಷ್ಣನ ಸಂಗೀತ ಕೇಳಿ ಸಂತೃಪ್ತರಾಗಿ ಅರಮನೆ ವಿದ್ವಾಂಸರನ್ನಾಗಿ ನೇಮಿಸಿಕೊಂಡರು.

ಅಂದಿನಿಂದ ಸಾಹುಕಾರರು ಕೃಷ್ಣನ ಅಭ್ಯುದಯದಿಂದ ಸಂತಸಗೊಂಡು, “ಕೃಷ್ಣಪ್ಪನವರೇ” ಎಂದು ಕರೆದರು. ಬಾಲಕನಾಗಿದ್ದ ಕೃಷ್ಣ, ಈಗ “ಬಿಡಾರ”ದ ಕೃಷ್ಣಪ್ಪನವರಾದರು. ಸಾಹುಕಾರ ತಿಮ್ಮಯ್ಯನವರನ್ನು ಸ್ಮರಿಸಿಕೊಂಡು ದೀಪ ಹಚ್ಚುತ್ತಿದ್ದರು ಕೃಷ್ಣಪ್ಪನವರು, ಕನ್ನಡ ನಾಡೇ ಕೃತಜ್ಞತೆಯಿಂದ ಸ್ಮರಿಸಬೇಕಾದವರು. ಮಹಾನುಭಾವರಾದ ಸಾಹುಕಾರ ತಿಮ್ಮಯ್ಯನವರು!!!

ಅರಮನೆಯಲ್ಲೇ ಮಹಾರಾಜರ ನಾಟಕ ಕಂಪೆನಿಯೊಂದು ಸ್ಥಾಪಿತವಾಯಿತು. ಕೃಷ್ಣಪ್ಪನವರು ಆ ಕಂಪೆನಿಯಲ್ಲಿ ನಟರಾಗಿ ಕೀರ್ತಿಗಳಿಸಿದರು. ಭಾವಕ್ಕೆ ತಕ್ಕಂತೆ ಪದಗಳನ್ನು ಉಚ್ಚರಿಸುವುದು ಅವುಗಳಿಗೆ ತಕ್ಕ ನಾದ ಕೊಡುವುದು ಮತ್ತು ಮುಖದಲ್ಲಿ ಆ ಭಾವ ಸೂಚಿಸುವುದು ಇವೆಲ್ಲ ಕೃಷ್ಣಪ್ಪನವರಿಗೆ ಅಲ್ಲಿ ಅನುಭವವಾಯಿತು . ಈ ಗುಣಗಳೆಲ್ಲ ಅವರು ಹಾಡುವಾಗ ಕಂಡುಬರುತ್ತಿದ್ದವು.

ಕೃಷ್ಣಪ್ಪನವರ ಕೀರ್ತಿ ದಿನೇ ದಿನೇ ಬೆಳೆದು ಬಂತು. ಹೊರನಾಡಿನಿಂದಲೂ ಆಹ್ವಾನಗಳು ಮೇಲಿಂದ ಮೇಲೆ ಬರತೊಡಗಿದವು. ಎಲ್ಲಿ ಹೋದರೂ ಅವರ ಸಂಗೀತಕ್ಕೆ ಅಪೂರ್ವ ಮನ್ನಣೆ. ಆ ನಾದ ಶುದ್ಧಿ, ಲಯಶುದ್ಧಿ, ಯಾವ ವೇಗದಲ್ಲೂ ಖಚಿತವಾಗಿ ಅಖಂಡವಾಗಿ ತುಂಬು ಕಂಠದಿಂದ ಹೊಮ್ಮುತ್ತಿದ್ದ ಆ ಸಂಗತಿಗಳು, ತಾನ-ವಿತಾನಗಳು, ಸುಸ್ಪಷ್ಟ ಸಾಹಿತ್ಯ ಉಚ್ಚಾರಣೆ, ಅಲ್ಲದೆ ಈ ಎಲ್ಲ ಅಂದಗಳಿಂದ ಕೂಡಿದ ಭಾವ ಈ ಕಲಾಗುಣಗಳಿಗೆ ಎಲ್ಲೆಲ್ಲೂ ವಿದ್ವಾಂಸರು ಮತ್ತು ಕಲಾರಸಿಕರು ಮನಸಾರೆ ಮಣಿದರು. ಹೋಗಿ ಹಾಡಿದಲ್ಲೆಲ್ಲ ವಿದ್ವತ್ ಮರ್ಯಾದೆ, ವಿದ್ವಾಂಸರ ಹಾಗೂ ರಸಿಕರ ಸ್ನೇಹ ಆದರಗಳನ್ನು ಸಂಪಾದಿಸಿದರು. ಅವರ ಭವ್ಯಾಕೃತಿ, ವಿದ್ವತ್ತು ಹಾಗೂ ಇತರ ವಿದ್ವಾಂಸರಲ್ಲಿ ಅವರು ತೋರಿಸುತ್ತಿದ್ದ ವಿದ್ವದೌದಾರ್ಯ ಇಂತಹ ವಿಶೇಷ ಗುಣಗಳಿಂದಾಗಿ ಎಲ್ಲರೂ ಇವರನ್ನು ಪೂಜ್ಯ ಭಾವನೆಯಿಂದ ಆದರಿಸಿದರು. ಅದರಲ್ಲೂ ತಮಿಳುನಾಡಿನ ವಿದ್ವಾಂಸರೂವಿದ್ವದಭಿಮಾನಿಗಳೂ ಇವರಲ್ಲಿಟ್ಟಿದ್ದ ಪ್ರೀತಿ, ಗೌರವ ಅಪಾರ. ವಿದ್ವದ್ಭೂಷಣವಾದ ಇವರ ಗಂಭೀರ್ಯಾ ವಿನಯಗಳಿಗೆ ಮಾರು ಹೋಗದವೃ ವಿರಳ.

ಇವರ ಕೀರ್ತಿಗನುಗುಣವಾಗಿ ಮಹಾರಾಜರು ಇವರಿಗೆ ಗಾನವಿಶಾರದ ಎಂಬ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಸಂತೇಪೇಟೆಯ ಕುಂಚಿಟಿಗ ಸಾಹುಕಾರರೆಲ್ಲ ಸೇರಿ, ಇವರಿಗೆ ಮರ್ಯಾದೆ ಸಲ್ಲಿಸಿ, ಅಂಗೈಯುಗಲದ ರತ್ನಪದಕವುಳ್ಳ ಬಂಗಾರದ ಹಾರವನ್ನು ಅರ್ಪಿಸಿದರು.

ತಮಿಳುನಾಡಿನ ಪಂಡಾರ ಸನ್ನಿಧಿಯ ಶ್ರೀಗಳವರು ಮಠದ ಉತ್ಸವ ಸಂದರ್ಭದಲ್ಲಿ ಇವರ ಸಂಗೀತ ಕಚೇರಿ ಏರ್ಪಡಿಸಿ ಕೇಳಿ, ಅತ್ಯಂತ ಸಂತೋಷದಿಂದ, ಗಾಯಕ ಶಿಖಾಮಣಿ ಎಂಬ ಬಿರುದು ಮತ್ತು ಬಂಗಾರದ ತೋಡಾವನ್ನು ಅನುಗ್ರಹಿಸಿದರು.

“ಸಂಗೀತ ಚಕ್ರವರ್ತಿ ಮಹಾ ವೈದ್ಯನಾಥ ಅಯ್ಯರ್ ಅವರ ನಂತರ, ಆ ಮಟ್ಟದ ಸಂಗೀತವನ್ನು ಬಿಡಾರಂ ಕೃಷ್ಣಪ್ಪನವರಲ್ಲೇ ನಾವು ಕೇಳಿ ಸಂತೋಷಪಟ್ಟದು. ಅಯ್ಯರ್‌ರವರ ಕಂಚಿನ ಕಂಠಂದ ಹೊಮ್ಮತ್ತಿದ್ದ ಮಿಂಚಿನಂತಹ ಆ ಸಂಗತಿಗಳನ್ನು ಇಂದು “ಬಿಡಾರಂ”ರವರ ಕಂಠದಿಮದ ಮಾತ್ರ ಕೇಳಿದ್ದೇವೆ.” ಅನ್ನುವ ಪ್ರಶಸ್ತಿ ಪತ್ರವನ್ನೂ ಅನುಗ್ರಹಿಸಿದರು.

ಹೀಗೆ ದಿಗ್ವಿಜಯದಿಂದ ಯಶೋವಂತರಾಗಿ ಹಿಂತಿರುಗಿದ ಕೃಷ್ಣಪ್ಪನವರನ್ನು ಕಂಡ ವೈಣಿಕ ಶಿಖಾಮಣಿ ಶೇಷಣ್ಣನವರ ಆನಂದಕ್ಕೆ ಪಾರವೇ ಇಲ್ಲ. “ಅಯ್ಯಾ ಕೃಷ್ಣಪ್ಪ, ಚತುಸ್ಸಾಗರ ಮಧ್ಯದ ಭೂಮಂಡಲದಲ್ಲಿ ನಿನ್ನ ಹಾಗೆ ಹಾಡುವವರು ಸಿಕ್ಕುವುದು ದುರ್ಲಭ”. ಅನ್ನುವ ಮಾತುಗಳಿಂದ ಹಾರ್ದಿಕವಾಗಿ ಹರಸಿದರು.

ವಿದ್ವಾಂಸರಲ್ಲಿ ಯಾವ ಅಸಹನೆಯನ್ನಾಗಲೀ, ಅಸಹಾನುಭೂತಿಯನ್ನಾಗಲೀ ತೋರಿಸದಿದ್ದ ಇವರನ್ನು ಕಂಡು ಕರುಬುವ ವಿದ್ವಾಂಸರೊಬ್ಬರು ಆ ಕಾಲದಲ್ಲಿ ಮೈಸೂರಿನಲ್ಲಿದ್ದರು. ಅವರ ಹೆಸರು ತಿರುವಯ್ಯಾರ್ ಸುಬ್ರಹ್ಮಣ್ಯಂ ಅಯ್ಯರ್, ಅಸೂಯಾಪರರಾದ ಅವರೂ ಶೇಷಣ್ಣನವರ ಸಮ್ಮುಖದಲ್ಲಿ, “ಪಲ್ಲವಿ” ಸವಾಲ್ ಹಾಕಿ ಕೃಷ್ಣಪ್ಪನವರಿಂದ ಸೋತು ಸುಮ್ಮನಾದರಂತೆ.

“ತಮ್ಮ ವಿದ್ವತ್ತಿನಲ್ಲಿ ಅಚಲ ಆತ್ಮ ವಿಶ್ವಾಸ, ಕೃಷ್ಣಪ್ಪನವರಿಗೆ. ತಮಗೆ ಗೊತ್ತಿಲ್ಲದ್ದಕ್ಕೆ, ಕೈ ಹಾಕುತ್ತಿರಲಿಲ್ಲ, ಆದರೆ ಗೊತ್ತಿದ್ದ ವಿಷಯದಲ್ಲಿ ಮಾತ್ರ ಬ್ರಹ್ಮನಿಗೂ ಹೆದರಲಿಲ್ಲ”. ಎಂದು ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ತಮ್ಮ ಗುರುಗಳಾದ ಕೃಷ್ಣಪ್ಪನವರ ಬಗೆಗೆ ಹೇಳುತ್ತಿದ್ದುದುಂಟು.

ಮಿಕ್ಕ ವಿದ್ವಾಂಸರಲ್ಲಿ ಅವರಿಗಿದ್ದ ಆದರಾಭಿಮಾನ ಅಷ್ಟೇ ಹಿರಿದು. ಅವರದು ವೀರೋಚಿತವಾದ ಔದಾರ್ಯ! ಯಾರಲ್ಲಿ ಎಷ್ಟು ವಿದ್ವತ್ತಿದೆಯೋ ಅಷ್ಟಕ್ಕೇ ಸಂತೋಷಪಟ್ಟು ಹೊಗಳುವ ಹೃದಯ, ಅವರದು. ಶಿಷ್ಯರಿಗೆಲ್ಲ, “ಎಲ್ರ ಸಂಗೀತಾನೂ ಕೇಳ್ರಯ್ಯಾ. ಚೆನ್ನಾಗಿದ್ದರೆ ಗ್ರಹಿಸಬಹುದು. ಇಲ್ಲದಿದ್ದರೆ ಏನು ಮಾಡಬಾರದು ಅನ್ನೋದಾದ್ರೂ ತಿಳಿಯುತ್ತದ್ದಲ್ಲ. ಸಂಗೀತ ಕೇಳದೆಯೇ ವಿದ್ವಾಂಸರನ್ನು ಅಳೆಯಬೇಡಿ.” ಎಂದು ಹೇಳುತ್ತಿದ್ದರು.

ಮತ್ತೊಬ್ಬ ಹಿರಿಯ ವಿದ್ವಾಂಸರಾದ ಆರ್.ಆರ್. ಕೇಶವಮೂರ್ತಿಗಳು, “ಮಾತೃದೇವೋ ಭವ-ಪಿತೃದೇವೊ ಭವ-ಆಚಾರ್ಯದೇವೋ ಭವ-ಈ ಮೂರನ್ನೂ ನಮ್ಮ ಗುರುಗಳಾದ ಕೃಷ್ಣಪ್ಪನವರಿಗೆ ಸಲ್ಲಿಸಿ ಸಾರ್ಥಕವಾದ ಸಂತೋಷಪಡಬೇಕಾದವರು ಅವರ ಶಿಷ್ಯರೆಲ್ಲ!” ಎಂದು ಆನಂದ ಬಾಷ್ಪ ಸುರಿಸುತ್ತಿದ್ದರು.

ಇನ್ನು ಅವರ ಪಾಠಕ್ರಮವಂತೂ ವಿಶಿಷ್ಟವಾದದ್ದು! ಕಲಿಸಲು ಕೂತಾಗ, ತಾವು ಕಲಿಯಲು ಪಟ್ಟ ಕಷ್ಟಗಳೆಲ್ಲ ಸ್ಮರಣೆಗೆ ಬರುತ್ತಿತ್ತೋ ಏನೋ! ವಯಸ್ಸು ಅರವತ್ತು ಮೀರಿದ್ದರೂ ದಿವಸಕ್ಕೆ ಹತ್ತಾರು ಗಂಟೆ ಪಾಠ ಹೇಳುತ್ತಿದ್ದರು. ಪಾಠವೆಂದರೆ ಹೇಗೆ? ಪರಮ ಖಚಿತ. ದಿನಕ್ಕೆ ಒಂದೇ ಸಂಗತಿ ಬಂದರೂ ಸಾಕು, ಶಿಷ್ಯನಿಗೆ, ಆದರೆ ಬಂದದ್ದು ಮಾತ್ರ ಖಚಿತವಾಗಿರಬೇಕು. ಮುಖ್ಯಸ್ವರವಿರಲಿ! ಗಮಕದಲ್ಲೂ ಒಂದು ಅನುಸ್ವರ ಕೂಡ ಸ್ಥಾನಪಲ್ಲಟವಾಗಕೂಡದು. ಎಲ್ಲ ರೀತಿಯ ಗಮಕಗಳನ್ನೂ ಪ್ರತ್ಯೇಕವಾಗಿ ಎಲ್ಲ ‘ಗತಿ’ಗಳಲ್ಲೂ ಅಭ್ಯಾಸಮಾಡಿಸುತ್ತಿದ್ದರು.

ಯಾವ ರಚನೆಯನ್ನೇ ಆಗಲಿ, ದಿನದಿನವೂ ಒಂದೇ ‘ಕಾಲ’ದಲ್ಲಿ ಹಾಡಕೂಡದು, ಅವರ ಪ್ರಾಕರ, ಪಾಠಕ್ರಮವಂತೂ ಬಲು ಕಠಿಣ. ಆದರೆ ಶಿಷ್ಯರನ್ನು ಪೋಷಿಸುತ್ತಿದ್ದುದು! ಸ್ವತಃ ಶಿಷ್ಯರ ತಂದೆ-ತಾಯಿಗಳಿಗೂ ಸಾಧ್ಯವಾಗದಷ್ಟು ವಾತ್ಯಲ್ಯ ಪೂರ್ಣ.

ಭಾರತೀಯ ಸಂಗೀತ ಪದ್ಧತಿಗಳೆರಡರಲ್ಲೂ-ಅಂದರೆ ಇಂದು ನಾವು ಕರೆಯುತ್ತಿರುವ ಕರ್ಣಾಟಕೀ ಮತ್ತು ಹಿಂದುಸ್ತಾನಿ ಪದ್ಧತಿಗಳು ಅವರಿಗೆ ಸಮಾನ ಗೌರವ. ಅಬ್ದುಲ್ ಕರೀಂಖಾನ್‌ರ ಸಂಗೀತವೆಂದರೆ ಪ್ರಾಣ. ಆ ಶ್ರುತಿ ಶುದ್ಧತೆ, ನಾದ ಮಾಧುರ್ಯಕ್ಕೆ ಹೃದಯವನ್ನೇ ಸೂರೆಗೂಡುತ್ತಿದ್ದರು.

ದಾಕ್ಷಿಣಾತ್ಯ ವಿದ್ವಾಂಸರಲ್ಲಿದ್ದಷ್ಟೇ ಗೌರವ, ಸ್ನೇಹ, ವಿಶ್ವಾಸ ಉತ್ತರಾದಿ ವಿದ್ವಾಂಸರಲ್ಲೂ ಬೆಳೆಸಿದ್ದರು ಹಾಗೂ ಗಳಿಸಿದ್ದರು. ಸ್ವತಃ ತಾವೇ ಅನೇಕ ಉತ್ತಾರಾದಿ ರಾಗಗಳ ಪರಿಚಯವನ್ನು ಮಾಡಿಕೊಂಡಿದ್ದರು. ತಮ್ಮ ವಿನಿಕೆಯಲ್ಲಿ ಕೆಲವನ್ನು ಹಾಡುತ್ತಲೂ ಇದ್ದರು. (ಮತ್‌ಕರ್ ಮೋಹ ಘಾಟಿ; ಹರಿಭಜನಕೋ ಮಾನರೇ! ಇದನ್ನು ಕೇಳಿದ ನೆನಪು ನನ್ನಲ್ಲಿ ಮಾಸದೇ ಇದೆ.)

ಕನ್ನಡನಾಡಿನ ಮಹಾವಿದ್ವಾಂಸರಲ್ಲಿ ವಿಶಿಷ್ಟಸ್ಥಾನ ಕೃಷ್ಣಪ್ಪನವರಿಗೆ ಸಲ್ಲಬೇಕಾದದ್ದು ಅವರ ಅಮೋಘವಾದ ವಿದ್ವತ್ತಿಗೆ ಮಾತ್ರವಲ್ಲ ಅವರಿಗೆ “ವೀರಪೂಜೆ” ಸಲ್ಲಬೇಕಾದದ್ದು ಅವರು ಕನ್ನಡದ ಹರಿದಾಸ ಪದಗಳಿಗೆ, ವಿದ್ವತ್‌ವಲಯದಲ್ಲಿ ಗಳಿಸಿಕೊಟ್ಟ ಸ್ಥಾನ ಮತ್ತು ಪ್ರಚಾರಕ್ಕಾಗಿ, ಅದು ಅವರು ಕೈಗೊಂಡ ಬೃಹತ್ ದೀಕ್ಷೆ. ಹಸುಳೆಯಾಗಿ ಅವರು ಹಾಡಿದ್ದೂ ಹರಿದಾಸರ ಪದಗಳನ್ನು. ಹಸನಾದ ವಿದ್ವಾಂಸರಾಗಿ “ಗಾನವಿಶಾರದ”ರಾದ ಮೇಲೂ ತನಗಾಗಿ ಹಾಡಿದ್ದೂ ಹರಿದಾಸರ ಪದಗಳನ್ನು. ಅವುಗಳಲ್ಲಿ ಕೃಷ್ಣಪ್ಪನವರಿಗೆ ಅಂತಹ ಭಕ್ತಿ!

ಹರಿದಾಸ ಪಂಥಕ್ಕೆ, ಅವುಗಳ ಪ್ರಚಾರಕ್ಕೆ ಕೃಷ್ಣಪ್ಪನವರು ಸಲ್ಲಿಸಿದ ಸೇವೆಯು ರಾಮಕೃಷ್ಣ ಪರಮಹಂಸರ ಪಂಥ ಪ್ರಚಾರಕ್ಕೆ ವಿವೇಕಾನಂದರು ಸಲ್ಲಿಸಿದ ಸೇವೆಗೆ ಸರಿಸಮಾನವಾದದ್ದು!

ಮಹಾನುಭಾವರಾದ ತ್ಯಾಗರಾಜಸ್ವಾಮಿಗಳು, ಶ್ಯಾಮಶಾಸ್ತ್ರಿಗಳು ಮತ್ತು ಮುತ್ತುಸ್ವಾಮಿ ದೀಕ್ಷಿತರು ಇವರ ರಚನೆಗಳಲ್ಲಿ ಅತ್ಯಂತ ಗೌರವ ಕೃಷ್ಣಪ್ಪನವರಿಗೆ. ಆದರೆ, ಇವರಿಗೆಲ್ಲ ಮಾರ್ಗದರ್ಶಿಗಳಾದ “ಸಂಗೀತ ಪಿತಾಮಹ”ರಾದ ಪುರಂದರದಾಸರು ಮತ್ತು ಅವರ ಸಮಕಾಲೀನರಾದ ವ್ಯಾಸತೀರ್ಥರು, ವಾದಿರಾಜರು ಹಾಗೂ ಕನಕದಾಸರು ಇಂತಹ ಹರಿದಾಸ ಶ್ರೇಷ್ಠರಿಗೆ ತಮ್ಮ ಆತ್ಮವನ್ನೇ ಧಾರೆಯೆರೆದಿದ್ದ ಕೃಷ್ಣಪ್ಪನವರು ದಿನಾಂಕ ೨೯-೭-೧೯೩೧ರಲ್ಲಿ ಶ್ರೀರಾಮನಲ್ಲಿ ಐಕ್ಯವಾದರು.

ಕೃಷ್ಣಪ್ಪನವರ ಜೀವನ ಮತ್ತು ಕಲೆಗಳ ಪರಿಶುದ್ಧ ಸಾಧನೆ ಸಿದ್ಧಿಗಳ ಅಭಿಜಾತ ಕಳಶ ಮೈಸೂರು ಶಿವರಾಂ ಪೇಟೆಯಲ್ಲಿ ಅವರು ಕಟ್ಟಿಸಿರುವ “ಪ್ರಸನ್ನ ಸೀತಾರಾಮ ಮಂದಿರ”. ಮಂದಿರದ ಒಳಹೊಕ್ಕರೆ ಸಾಕು, ಅಲ್ಲಿ ಕಾಣುವುದೊಂದು “ದಿವ್ಯ’ ಪ್ರಪಂಚ.

ಭವ್ಯವಾದ ಮಂಟಪದಲ್ಲಿ ಮಂಡಿಸಿರುವ ಬಹು ಸುಂದರನಾದ ಸಪರಿವಾರವಾದ ‘ಪ್ರಸನ್ನಸೀತಾರಾಮ’ನನ್ನು ಕಣ್ಣು ತುಂಬಿ ನೋಡಬೇಕು, ರೋಮಾಂಚನವನ್ನುಂಟುಮಾಡುವ, ಅಭಿರಾಮ ಆ ರಾಮ! ದಿವ್ಯ ಮಂಗಳ ರೂಪ! ಅದನ್ನು ನೋಡಿದಷ್ಟೂ ಮತ್ತೆ ಮತ್ತೆ ನೋಡಬೇಕೆನ್ನಿಸುವ ಚಾರು ರೂಪ! ಆ ಪ್ರಸನ್ನ ಮೂರುತಿಯ ಮುಂದಿರುವ ಆ ಸಭಾಂಗಣ! ಸಂಗೀತ ವೇದಿಕೆಯ ಎಡ-ಬಲ ಭಾಗಗಳಲ್ಲಿ, ಅವರಿಗೂ ಹಿಂದೆ ಇದ್ದ ಸಂಗೀತ ಮಹಾನುಭಾವರ ಬಣ್ಣದಲ್ಲಿ ಚಿತ್ರಿಸಿರುವ ಚಿತ್ರಪಟಗಳು. ಮೇಲಿನ ಸಾಲಿನಲ್ಲಿ ಎರಡೂ ಕಡೆ ಸೊಗಸಾಗಿ ಚಿತ್ರಿಸಿರುವ ದಶಾವತಾರದ ಬಹುದೊಡ್ಡ ಆಕರ್ಷಣೀಯ ಚಿತ್ರಗಳು!

ಇವೆಲ್ಲವನ್ನೂ ನೋಡಿದಾಗ ಆಗುವ ಆನಂದ ಸ್ವಾನುಭವಕ್ಕೆ ಮೀಸಲಾದದ್ದು, ಕೃಷ್ಣಪ್ಪನವರ ಕಲಾ ಸೌಂದರ್ಯ ಪ್ರಜ್ಞೆಗೆ ಇವು ಜೀವಂತ ಸಾಕ್ಷಿ!

ಇಂದು ನಮ್ಮ ಕನ್ನಡನಾಡಿನಲ್ಲಿ ಕಾಣುತ್ತಿರುವ ಕನ್ನಡದ ಅಲಕ್ಷ್ಯಮನೋಧರ್ಮ, ಕನ್ನಡತನದ ಆಲಸ್ಯ, ಕನ್ನಡ ಕಲೆ ಮತ್ತು ಕಲಾವಿದರಲ್ಲಿ ಕನ್ನಡಿಗರೇ ತೋರಿಸುತ್ತಿರುವ ಅಭಿಮಾನ ಶೂನ್ಯತೆ, ಇವು ಸಂಪೂರ್ಣವಾಗಿ ಅಳಿಯಬೇಕಾದರೆ, “ಕನ್ನಡ ಬಿಡಲಾರದ ಮತ್ತು ಕನ್ನಡವೂ ಬಿಡಲಾರದ” ಕೃಷ್ಣಪ್ಪನವರನ್ನು ಆಗಾಗ ನೆನೆಯುತ್ತಿರಬೇಕು. ಅವರು ಪ್ರಾತಃಸ್ಮರಣೀಯರು!!! ಸದಾ ಸ್ಮರಣೀಯರು!!!