ಇಲ್ಲ, ನಿನಗೆ ಬಿಡುವಿಲ್ಲ –
ಒಂದೇ ಸಮನೆ ನೊಗಕೆ ಕೊರಳನು ಬೆಸೆದು
ಗಾಣ ತಿರುಗುವ ನಿನಗೆ ಬಿಡುವೇ ಇಲ್ಲ.

ನಿನ್ನೆದೆಯ ಹಂತ ಹಂತದ ಮೇಲೆ
ನೂರಾರು ಕಡತಗಳ ಕಂತೆ,
ಹೆಗಲ ಜಂತೆಯ ತುಂಬ ಜೋತಾಡುತಿವೆ
ಎಷ್ಟೊಂದು ಯೋಜನೆಯ ಚಿಂತೆ !
ದಿನ ಬೆಳಗು ಇಲ್ಲಿ ಈ ಸಭೆಯಲ್ಲಿ, ಅಲ್ಲಿ ಆ ಗೋಷ್ಠಿಯಲಿ
ನಿನ್ನ ಅಧ್ಯಕ್ಷತೆ ;
ಈ ಮನೆಯ ಕೋಣೆ ಕಿರು ಕೋಣೆಯೊಳು ಆಗಾಗ
ಗಂಡ ಹೆಂಡಿರ ಜಗಳ,
ಅಕ್ಕ ಪಕ್ಕದ ಮನೆಯ ವಹಿವಾಟಿಗೂ ನಿನಗೆ ಆಮಂತ್ರಣ.
ಹೇರಿದಷ್ಟೂ ಹೊತ್ತು ನಡೆವ ಲಾರಿಯ ಹಾಗೆ ಸಾಗುತ್ತಲೇ ಇರುವ
ಈ ನಿನಗೆ,
ಎಂದೋ ಒಮ್ಮೆ ಬಿಡುಗಡೆ ಬಂದ ಗೀತವನು ಕೇಳಲೂ ಬಿಡುವಿಲ್ಲ !

ವರುಷಕೊಮ್ಮೆ ನಿನಗೆ ನೀರೆರೆದು, ಹೊಸ ಬಟ್ಟೆ ತೊಡಿಸಿ,
ಸಾಲು ಸೈನ್ಯಗಳ ಗೌರವ ರಕ್ಷೆಯನ್ನಿತ್ತು, ನಭಕೆ ಬಾವುಟವೆತ್ತಿ,
ಬಾನುಲಿಯ ಬಾಯಿ ಕವಿ ಹೊಸೆದ ಸ್ವಾತಂತ್ರ್ಯಗೀತವನು
ಕಿವಿಗೆ ಗಿಡಿದಾಗ, ಒಂದಿಷ್ಟು ಮುಗುಳುನಗೆಯಿಂದ ಕೊರಳೆತ್ತಿ
ಹಾಗೇ ನಿಂತು ನೆನೆಯಬಹುದೋ ಏನೋ ಆ ದಿನವ-
ಹನ್ನೊಂದು ವರುಷದ ಹಿಂದೆ ನಟ್ಟ ನಡುರಾತ್ರಿ
ಹನ್ನೆರಡು ಗಂಟೆಯಲಿ
ನಿನಗಾದ ಸೊಗವ.
*     *     *
ಹನ್ನೊಂದು ವರುಷದ ಹಿಂದೆ
ನಟ್ಟ ನಡುರಾತ್ರಿ ಹನ್ನೆರಡು ಘಂಟೆ !
ಕಗ್ಗಲ್ಲಿನೆದೆಗೆ ಬಡಿದಿತ್ತು ಹೂವಿನ ಫಿರಂಗಿ !
ಕಲ್ಲು ಕರಗಿತು ; ಕಗ್ಗತ್ತಲೊಡೆದು ಬಾನು ಬೆಳಕಾಯ್ತು ;
ಬಿದ್ದ ಬಾವುಟವೆದ್ದು ಧರ್ಮಚಕ್ರದ ಮೇಲೆ ಸಿಂಹಪೌರುಷದಿಂದ
ಕೊರಳೆತ್ತಿ ಗುಡುಗಿತು.
ಗರುಡಗರಿ ಗಾಳಿಯಲಿ ಹಾರಿಹೋದವು ದೂರ
ತುಡುಗು ಮೋಡದ ಹಡಗು
ಚಿಕ್ಕೆ ಚಪ್ಪಾಳೆಯಲಿ ಚಂದ್ರನುದ್ಘಾಟಿಸಿದ ಹೊಸತು ಬೆಡಗು !
“ಇದು ನಿನ್ನದೇ ; ಈ ಹೊಲ, ಈ ಜಲ, ಈ ಜನತೆ,
ಈ ಮುಗಿಲು, ಈ ಗಾಳಿ, ಇದು ನಿನ್ನದೇ…”
ಕುಗ್ಗಿ ಕುಸಿದಿದ್ದ ಹುಡಿಮಣ್ಣು ಹೆಡೆಯೆತ್ತಿ ಬಾನಗಲ ಬೆರಗು-
ಗಣ್ಣಾಗಿ ದಿಟ್ಟಿಸಿತು
ಸಿಂಗರದ ಬಂಗಾರದೆಳೆವೆಳಗು ತಂಪಾಗಿ ಹರಡಿತು.
*     *     *
ಬಿಡುಗಡೆಯ ಹಿಗ್ಗಿನಲಿ ಮುಗಿಲುದ್ದ ಎದ್ದ ಹೆಗಲಿನ ಮೇಲೆ
ಬಿತ್ತು ಕಾಣದ ಭಾರ !
ಇದು ದೊಡ್ಡ ಸಂಸಾರ :
ಎಷ್ಟೊಂದು ದುಡಿದು ತಂದರು ಕೂಡ ಒಳಗೊಳಗೆ ಬೆಳೆಯುತಿದೆ
ಬಿಲಗಳ ತೋಡಿ, ಬೆಳೆಯೆಲ್ಲವನು ತಿಂದು ಬಚ್ಚಿಡುವ
ಹೆಗ್ಗಣದ ಪರಿವಾರ !

ತಲೆಯೊಳಗೆ ಹೆಬ್ಬಂಡೆ ಗುಂಡುಗಳ ಕಿಷ್ಕಿಂಧೆ ;
ಎದೆ ತುಂಬ ಹೊದರು ಹೊದರಾದ ದಂಡಕಾರಣ್ಯ :
ಚಿತ್ತ ಪಂಪಾಸರವೊ ಪಾಚಿಕಟ್ಟಿದ ರೊಚ್ಚೆ ;
ಬಿತ್ತಿದರೆ ಬೀಜವೇ ಸೀದು ಸಿಡಿಯುವ ‘ಸಹರ !’
ಆದರೂ-
ಕಟ್ಟುತ್ತಿದ್ದೇವೆ ನಾವೀಗ ಹೊಸ ನಾಡನ್ನು,
‘ಶುಭಮಸ್ತು’ – ಎನ್ನು,
ಎಂದಿನಿಂದಲೊ ಏನೊ ವರುಷ ವರುಷವು ಊರೂರು ಕೇರಿಕೇರಿಗೆ ನುಗ್ಗಿ
ಮನೆ ಮಾರುಗಳ ಕೊಚ್ಚಿ ಮೊರೆವ ಮಾರಿಯ ಹೊನಲ
ಭೋರ್ಗರೆವ ನಾಗರನ
ಸ್ತಬ್ಧಗೊಳಿಸಿದೆ ಇದೆಕೊ ಕಟ್ಟಿದಣೆಕಟ್ಟುಗಳ ಮಂತ್ರದಂಡ !
ಬಂಡೆಬಂಡೆಯ ಎಬ್ಬಿ, ಹೊದರುಗಿದುರನು ಸವರಿ
ಹದಮಾಡುತಿಹುದಿಗೋ
ಯಂತ್ರಮದಗಜಮುಸಲದಂತದೋರ್ದಂಡ.
ಶತಮಾನಗಳ ಕಾಲ ಬಾಯಾರಿ ಬಿದ್ದ ಬಂಜರ ಬಸಿರು
ಜುಳುಜುಳನೆ ಬಳಿಗೈತಂದ ನೀರಿನೊಲವನು ಕುಡಿದು
ಹಸುರ ಬೆಸಲಾಗುತಿದೆ !
ಮಳೆ ಬಿಸಿಲು ಗಾಳಿಯಲಿ ಮಣ್ಣಗೆದು ಮಂಕರಿ ಹೊತ್ತು,
ಕಟ್ಟಡ ಕಟ್ಟಿ,
ಹಳ್ಳಿಹಳ್ಳಿಯ ಹಣತೆಗೆಣ್ಣೆಬತ್ತಿಯನೂಡಿ,
ವೀಣೆ ತಂಬೂರಿಯೆದೆಗೆ ಹೊಸತು ತಂತಿಯ ನೀಡಿ, ಶ್ರುತಿಮಾಡಿ
ಹರಿಯುತಿದೆ ನಾಡನಾಡಿಯ ತುಂಬ ನೂತ್ನ ಚೇತನ ಶಕ್ತಿ,
ಇಂದಲ್ಲ ನಾಳೆ ಮೈತುಂಬಿಕೊಂಡು ನಿಲ್ಲುವುದು ಈ ನಾಡು
ಸಾವಧಾನದಿ ಕಾದು ನೋಡು.