ಉಪ್ಪು ಕಡಲನು ಉತ್ತು ನಡೆವ ನೇಗಿಲ ದೋಣಿ,
ಸುತ್ತಲೂ ಕತ್ತಲಿನ ತರಂಗವಾಣಿ !
ಗಜಿಬಿಜಿಯ ಗೊಂದಲದ ಬಣ್ಣ ಬದುಕಿನ ಭ್ರಮರ
ಕಿಕ್ಕಿರಿದ ತೀರವದೊ ದೂರ ದೂರ
ಇಲ್ಲಿ ಬಿಡುಗಡೆ ಗಾಳಿ ಹಾಡುತಿದೆ ಕಿವಿಯೊಳಗೆ
ಈ ಚೆಲುವಪಾರ.

ಎತ್ತರದ ಹುತ್ತಗಳ ಹಾವುಗಣ್ಣಿನ ಮಹಲು,
ಬಳಬಳಸಿ ಮೈಸೋತು ಬಿದ್ದ ದಾರಿಯ ನೆರಳು.
ಮಧುಮತ್ತ ಉನ್ಮತ್ತ ಮಂತ್ರಗಾರನ ಮಾಟ
ಆ ಕಡೆಯ ನೋಟ.

ಅಲ್ಲಿಂದ-
ಬಿಡುಗಡೆಯ ಕಡೆಗೆ ಬಿರುಗಣ್ಣ ತೆರೆದು ದಿಟ್ಟಿಸುತಿಹುದು
ಬಂಧನದ ದೀಪಮಾಲೆ.
ಇಲ್ಲಿಂದ – ತೆರೆತೆರೆಯ ಸ್ವಚ್ಛಂದ ಕವನವನು ಬರೆಯುತಿದೆ
ಕಡಲ ಲೀಲೆ.

ಹೀಗೆಯೇ ಹೀಗೆಯೇ ತೆರೆಯ ಕುದುರೆಯನೇರಿ
ಸಾಗಬಾರದೆ ದೋಣಿ ಮುಂದೆ ಮುಂದೆ,
ತೀರವುಳಿಯಲಿ ಹೀಗೆ ಹಿಂದೆ ಹಿಂದೆ
ಸಾಗಬಾರದೆ ಹೀಗೆ, ಅವ್ಯಕ್ತ ಗಂಭೀರ ತಮದಂತರಾಳದಲಿ
ಬೇರೊಂದು ಬೆಳಕನ್ನು ಬಗೆದು ಹುಡುಕಿ,
ಗರುಡ ರೆಕ್ಕೆಯ ತೊಟ್ಟು, ಚಿಕ್ಕೆಗಣ್ಣನು ಬಿಟ್ಟು
ನೀಲಿಯಾಳವ ಕುಕ್ಕಿ ಮುಗಿಲ ಮುಕ್ಕಿ.
ಸಾಗಬಾರದೆ ಮುಂದೆ
ತೀರ ಉಳಿಯಲಿ ಹಿಂದೆ
ಇರಲಿ ಜೊತೆಯೊಳು ನವ್ಯ ಚೈತನ್ಯವೊಂದೆ.
*     *     *     *
ಕನಸಿನಲೆಗಳನೇರಿ ತೇಲುತಿರೆ ತೆಕ್ಕನೆಯೆ
ತಿರುಗಿ ಸಾಗಿತು ದೋಣಿ ದಡದ ಕಡೆಗೆ.
[ಕಾಳಸರ್ಪದ ಕಣ್ಣ ಸೆಳೆತದಲ್ಲಿರೆ ಹಕ್ಕಿ
ಬಾನ ಚಿಕ್ಕೆಯ ಕಡೆಗೆ ಹೊರಡಬಹುದೆ ?]
ದಡಕೆ ಕಟ್ಟಿದ ದೋಣಿ ದಡಕೆ ಬರುವುದೆ ಸಹಜ
ಕಟ್ಟಕಡೆಗೆ.

ಅಯ್ಯೋ, ಏನಿದು ಮತ್ತೆ ? ತಿರುಗಿ ಬಂದಿತೆ ತೀರ ?
ಕಿವಿಯೊಳಿನ್ನೂ ಇಹುದು ಹೆಗ್ಗಡಲ ಮರ‍್ಮರ.
ನಿಟ್ಟುಸಿರೆಳೆದು, ಹತ್ತಿ ನಿಂತೆವು ದಡಕೆ,
ದೋಣಿ ಮೈ ಚಾಚಿತ್ತು ಕಡಲಲೆಯ ಹಾಸುಗೆಗೆ !