ಮನೆಯ ಸುತ್ತಲು ನೆರಳು…
ಯಾವುದೋ ಉರುಳು ಕೊರಳನರಸಿದೆ ಇರುಳು.
ಗೋಡೆಯ ಮೇಲೆ, ಛಾವಣಿಯ ಮೇಲೆ
ಸದ್ದು ನಿದ್ರಿಸುತಿರುವ ಮರದ ಎಲೆಗಳ ಮೇಲೆ
ಕಾಣಿಸದ ನೆರಳೊಂದು ಸಂಚರಿಸಿದೆ
ರೂಪವಲ್ಲದ ಭೀತಿ ಸುಳಿದಾಡಿದೆ !
ಲಕ್ಷನಕ್ಷತ್ರಗಳ ಬಿರುಗಣ್ಣ ಬೆಳಕಿನಡಿಯಲ್ಲಿ,
ಕತ್ತಲಲಿ ಕದಡಿರುವ ಮನೆಮನೆಯ ರೂಹುಗಳು
ಮರವೆಯಲಿ ಮುಳುಗಿರುವ ಹಳೆ ನೆನಪಿನಂತಿರಲು
ಉರಿಯುತಿದೆ ಕೋಣೆಯಲಿ ಹಣತೆಯೊಂದೇ ಒಂದು
ಸಾಕ್ಷಿಯೊಲು ನಿಂದು !
ಉಸಿರ ತಿದಿಯೊತ್ತುತಿದೆ,
ವ್ಯರ್ಥಗತ ಶತಮಾನ ಶೂನ್ಯದೊಲು
ಕಣ್ಣ ನೋಟ
ಎಲ್ಲಿಗೋ ಓಟ !
ಪಟಪಟನೆ ರೆಕ್ಕೆ ಬಡಿದಿದೆ ಹಕ್ಕಿ
ಇಷ್ಟು ದಿನ ಈ ಪಂಜರದಿ ಸಿಕ್ಕಿ,
ಇಂದು ಬಿಡುಗಡೆಯ ಬಯಕೆಯುಕ್ಕಿ ;
ಒಂದೇ ಸಮನೆ ತಾರಾಡುತಿದೆ, ಅದೋ
ಪಂಜರದ ಒಳಗೆ.
ಸುತ್ತಲೂ ಕಂಬಿ, ಬರಿ ಕಂಬಿ
ಹಾರೈಸುತಿದೆ ಹಕ್ಕಿ ಬಿಡುಗಡೆಯ ನಂಬಿ
“ಸಾಕು ಮಾಡೋ ಜನ್ಮ, ಸಾಕು ಮಾಡೋ.”
……………………..
ಕಡೆಗೆ ಕರೆ ಮುಟ್ಟಿತು,
ಅವನೆದೆಯ ತಟ್ಟಿತು.
ಕಾಣದಿಹ ಕೈಯೊಂದು ಬಂದು ಬಾಗಿಲ ತೆರೆದು
‘ಹೊರಡಿನ್ನು’ – ಎಂದಿತು.
ಮುಗಿಲುದ್ದ ಚಿತ್ರಪಟ ಬಿಚ್ಚಿತು
ಮೆರವಣಿಗೆ ನಡೆಯಿತು.
ಬಲುದಿನದ ಬಯಕೆ ಕಡೆಗಿಂದು ಸಂದಿತು !
ಬರಿಯ ಪಂಜರ ಬಿತ್ತು ; ಯಾರೋ ಎಸೆದ
ಮುರುಕು ಪೆಟ್ಟಿಗೆಯಂತೆ,
ಬಿರುಗಾಳಿಯಲಿ ಬಿದ್ದ ಮುರುಕು ಗುಡಿಸಲಿನಂತೆ
ಹರಿದೆಸೆದ ಹಳೆ ಬಟ್ಟೆಯಂತೆ.
ಮುಗಿಯಿತು ಸಂತೆ,
ಇನ್ನು ನಿಶ್ಚಿಂತೆ.
ನಿಡುಬಯಸಿ ಕಾದಿದ್ದ ಘಳಿಗೆ ಬಂದಿತು ಕಡೆಗೂ ;
ಬಿರುಗಾಳಿಯಬ್ಬರದಿ ಹೊಯ್ದಾಡಿದೀ ಹಡಗು
ಮುಳುಮುಳುಗಿ ತಳ ಕಂಡು
ವಿಶ್ರಾಂತಿ ಪಡೆಯಿತು.
ಪಯಣ ಕಡೆ ಮುಟ್ಟಿತು.
* * *
ಹಸಿದ ನೆಲ ‘ಆ’ ಎಂದು ಬಾಯ್ದೆರೆದು ಕೇಳಿತ್ತ್ತು.
ಬಂತೆ ಆಹಾರ ?
ಅದರ ಋಣ ಅದಕೆ ಸಂದಾಯವಾಯಿತು.
ಹೊಂಚುಹಾಕುತ ಕಾದ ಪಂಚಭೂತಗಳೆಲ್ಲ
ತಮ್ಮ ಪಾಲುಂಡವು,
ತೃಪ್ತೋಸ್ಮಿ ಎಂದವು.
* * *
ಬಲು ದಿನದ ನರಳನಾಲಿಸಿದ ಗೋಡೆಗಳು
ನಿಟ್ಟುಸಿರ ಬಿಟ್ಟವು.
ಅವಳ ಬಾಳಿನ ಕತೆಯ ಪುಟಪುಟವ ಮಗುಚಿ
ಯಾವ ಕಯ್ಯೋ ಏನೊ ಪುಸ್ತಕವ ಮುಚ್ಚಿತು.
ಬೆಳಕಿರುವ ತನಕ ಹೊಲದಲ್ಲಿ ಮೈಮುರಿದು ದುಡಿದು.
ಬೀಜವ ಬಿತ್ತಿ, ತೆನೆತೆನೆಯನೆತ್ತಿದ ಜೀವ
ನಾಟಕವ ಮುಗಿಸಿತು,
ತಾಯ್ತನದ ಅಕ್ಕರೆಯ ಸವಿಯೊಂದೆ ಉಳಿಯಿತು.
Leave A Comment