‘ಇಲ್ಲಿ ಏನಿದೆ ಮಣ್ಣು’? – ಎಂದೆಯಲ್ಲವೆ ನೀನು !
ನಿನ್ನಂಥ ಅಭಿಮಾನಶೂನ್ಯರಿಗೆ ಇದು ಮಣ್ಣೆ ;
ಬಲ್ಲೆ, ನೀ ನುಡಿವ ಮಾತಿನ ಹಿಂದೆ ಮರೆಯಾಗಿ
ನಿಂತಿಹುದು ನಿನ್ನಂಥ ಸಾಸಿರ ಮಂದಿ ! ಮಣ್ಣೆ
ಇದು ಮರುಳೆ ? ನಮ್ಮ ನಡೆನುಡಿಗಳನು ಪರಿಕಿಸುತ
ಕುಳಿತಿರುವ ಭೂತಕಾಲದ ಕಣ್ಣು ! ನೋಡಯ್ಯ
ಹೆಂಬೇಡಿ, ತಲೆಯೆತ್ತಿ ನೋಡು ; ಸುತ್ತಲೂ ಕೋಟೆ
ಕೊತ್ತಲವೆದ್ದು, ‘ನಾವಲ್ಲ ಮಣ್ಣು, ಬದುಕಿದಂ-
ತಿಹ ನೀವು !’ – ಎಂದಣಕವಾಡುತಿದೆ ! ಹಿರಿದಾದ
ಸತ್ವದಲಿ, ಮುಗಿಲ ಹೆಗಲಲಿ ತಾಳಿ ನಿಂತಿದ್ದ
ಪೌರುಷತೆ, ಈಗ ಈ ಗುಡ್ಡದಲಿ, ಮರಗಳಲಿ,
ಬಳ್ಳಿಯಲಿ, ಮಣ್ಣ ಕಣ ಕಣಗಳಲಿ ಮೌನದಲಿ
ನೋಡುತಿದೆ ನಮ್ಮೆಡೆಗೆ, ಈ ಸಣ್ಣತನ ಸಾಕು
ಹಿರಿತನವನರಿಯಲೂ ಹಿರಿಯತನವಿರಬೇಕು.