ಮಲೆನಾಡಿನಲ್ಲಿ ಶಮೆಬಿದಿರು ಖರೀದಿಗೆ ಬಯಲುಸೀಮೆ ವ್ಯಾಪಾರಿಗಳು ಹಳ್ಳಿ ಹಳ್ಳಿ ತಿರುಗುತ್ತಿದ್ದಾರೆ. ೧೩ ಅಡಿ ಉದ್ದದ ಒಂದು ಗಳುವಿಗೆ ೧೨-೧೮ರೂಪಾಯಿ ಬೆಲೆ. ಹೊಳೆದಂಡೆ, ಹಿತ್ತ್ತಿಲು, ಅಡಿಕೆ ತೋಟಗಳಂಚಿನಲ್ಲಿ  ನೆಟ್ಟು  ಮರೆತಿದ್ದ ಶಮೆಯತ್ತ ಕೃಷಿಕರ ಆಸಕ್ತಿ ನಿಧಾನಕ್ಕೆ ಹೆಚ್ಚಿದೆ. ವಿಶೇಷ ಆರೈಕೆಯಿಲ್ಲದೇ  ಶೂನ್ಯಕೃಷಿಯಲ್ಲಿ ಬೆಳೆದ ಶಮೆ ಬಿದಿರು ಮಾರಾಟದಲ್ಲಿ ಆರೆಂಟು ಸಾವಿರ ರೂಪಾಯಿ ಆದಾಯ ಗಳಿಸಿದವರು ಅಲ್ಲಲ್ಲಿ ಸಿಗುತ್ತಾರೆ. ಮನೆ ಬಾಗಿಲಿಗೆ ಬರುವ ವ್ಯಾಪಾರಿಗಳು ಕಡಿದು ಒಯ್ಯುವ ಕೆಲಸ ನಿರ್ವಹಿಸುತ್ತಾರೆ. ಸುಲಭದಲ್ಲಿ  ಸಿಗುವ ಬಿದಿರು ಆದಾಯ ಸಹಜವಾಗಿ ಬಿದಿರು ಕೃಷಿಗೆ ಹೊಸ ಉತ್ತೇಜನ ನೀಡುತ್ತಿದೆ.

ಬಿದಿರಿಗೆ  ಬೆಲೆ  ಏರುತ್ತದೆಂದು ಮಾರುಕಟ್ಟೆಯ ಸ್ಥಿತಿ ಗಮನಿಸಿದವರಿಗೆ ೧೦ ವರ್ಷದ ಹಿಂದೆಯೇ ತಿಳಿದಿತ್ತು. ಕಾಡಿನ ಡೌಗಾ, ಕಿರು ಬಿದಿರು ಹೂವರಳಿಸಿದ ಪರಿಣಾಮ ಕ್ರಮೇಣ ಗುಡಿ ಕೈಗಾರಿಕೆಗೆ ಬಿದಿರಿನ ಕೊರತೆ ಆರಂಭ. ದಾವಣಗೇರಿ, ರಾಣಿಬೆನ್ನೂರು, ಹಾವೇರಿ, ಗದಗ, ಹಡಗಲಿ, ಬಳ್ಳಾರಿ, ರಾಯಚೂರು ಪ್ರದೇಶದ ಬಾಂಬು ಬಜಾರಗಳಿಗೆ ದಶಕಗಳ ಹಿಂದೆ ಅಧ್ಯಯನಕ್ಕೆ ಭೇಟಿ ನೀಡಿದ್ದಾಗ ಕಾಡು ಬಿದಿರಿನ ಕೊರತೆಯ ಚಿತ್ರಗಳು ಕಾಣುತ್ತಿದ್ದವು. ಗಡ್‌ಹಿಂಗ್ಲಜ್, ಗೋವಾ, ಸಾವಂತವಾಡಿ, ಕೊಲ್ಲಾಪುರ ಪ್ರಾಂತ್ಯದಿಂದ ಕರ್ನಾಟಕದ ಬಾಂಬು ಬಜಾರುಗಳಿಗೆ ಬಿದಿರು ರವಾನೆ ಆಗಷ್ಟೇ ಚುರುಕುಪಡೆದಿತ್ತು. ಬಿದಿರು ಕೃಷಿ ವಿಚಾರದಲ್ಲಿ ಅಲ್ಲೊಂದು ಇಲ್ಲೊಂದು ಯಶೋಗಾಥೆಗಳು ಕಾಣುತ್ತಿದ್ದವು, ಅಡಿಕೆಗೆ ಬೆಲೆ ಬಂದಿದ್ದರಿಂದ ಬಿದಿರು ಕೃಷಿಯತ್ತ ಗಮನಹರಿಸಲು ಮಲೆನಾಡಿನ ಕೃಷಿಕರಿಗೆ ಆಗ ಪುರುಸೊತ್ತಿರಲಿಲ್ಲ! ಕರ್ನಾಟಕ ಅರಣ್ಯ ಇಲಾಖೆ ಬಿದಿರು ನೆಡುತೋಪು ಬೆಳೆಸಿತ್ತಾದರೂ ಅದು ಕೇವಲ ಪ್ರಾಯೋಗಿಕ ಮಟ್ಟಕ್ಕೆ ಸೀಮಿತವಾಗಿತ್ತು. ಪ್ರತಿ ೫  ಮೀಟರ್‌ಗೆ ಒಂದರಂತೆ  ಹೆಕ್ಟೇರಿಗೆ ೩೦೦ ಸಸಿ ನೆಡಬಹುದು, ಗೊಬ್ಬರ, ಕಾವಲು, ಬೆಂಕಿಯಿಂದ ರಕ್ಷಣೆಯ ಕೆಲಸ ನಿರ್ವಹಿಸಿದರೆ  ೭ ವರ್ಷದಲ್ಲಿ ಪ್ರತಿ ಸಸಿ ಬುಡದಿಂದ ೧೨-೩೬ಬಿದಿರು ದೊರೆಯುವ ಮಾಹಿತಿಯನ್ನು ಇಲಾಖೆ ಬಿತ್ತರಿಸಿತ್ತು. ಆದರೂ  ಕೃಷಿಯತ್ತ ಯಾರೂ ಆಸಕ್ತಿವಹಿಸಲಿಲ್ಲ. ಬಯಲುಸೀಮೆಗಳಲ್ಲಿ ವಿಶೇಷವಾಗಿ ಬುಟ್ಟಿ, ಮೊರ, ಚಾಪೆ, ತಟ್ಟಿ, ಕಣಜ ತಯಾರಿಕೆಗೆ ಬಳಕೆಯಾಗುತ್ತಿದ್ದ  ಬಿದಿರು ಮಲೆನಾಡು, ಕರಾವಳಿಯಿಂದ ಪುರೈಕೆಯಾಗಬೇಕು.  ಪ್ರತಿಯೊಂದು ಬಾಂಬು ಬಜಾರಗಳಿಗೂ ವಾರಕ್ಕೆ  ೪-೫ ಸಾವಿರ ಶಮೆ ಬಿದಿರು ಅಗತ್ಯವಿತ್ತಾದರೂ ಪೂರೈಕೆ ಅಗತ್ಯ ಪ್ರಮಾಣದಲ್ಲಿ ಇರಲಿಲ್ಲ. ಶಿವಮೊಗ್ಗ, ಉತ್ತರ ಕನ್ನಡದ ಕಾಡಿನ ಹೆಬ್ಬಿದಿರು ಹೂವರಳಿಸಿದ ೫ ವರ್ಷದ ಈಚೆಗಂತೂ ಬಿದಿರಿನ ಕೊರತೆ ಇಮ್ಮಡಿಸಿತು. ಪರಿಣಾಮ ಕೃಷಿ ಮೂಲದ  ಶಮೆಬಿದಿರು ಬಳಕೆ ಹೆಚ್ಚಿತು.

ರಾಣಿಬೆನ್ನೂರಿನ ಪುಟೇರಮಠ ಪ್ರದೇಶ ವೀಳ್ಯದೆಲೆ ವಹಿವಾಟು ಕೇಂದ್ರ. ಇಲ್ಲಿನ ವೀಳ್ಯದೆಲೆ ಮಾರಾಟಕ್ಕೂ, ಶಮೆ ಬಿದಿರಿಗೂ ಹಲವು ದಶಕಗಳ ನೆಂಟಸ್ತನ! ಹರಿಹರ, ಉತ್ತರ ಕನ್ನಡದ ಹೊನ್ನಾವರಗಳಲ್ಲಿ ಬೆಳೆಯುವ ವೀಳ್ಯದೆಲೆ ಬಿದಿರಿನ ಪುಟ್ಟ ಬುಟ್ಟಿಯಲ್ಲಿ  ಪ್ಯಾಕ್‌ಆಗಿ ಮುಂಬೈ, ಕಲ್ಕತ್ತ, ಕಾಶ್ಮೀರ ಪ್ರದೇಶಗಳಿಗೆ ರವಾನೆಯಾಗುತ್ತದೆ. ಬಳ್ಳಿಯಿಂದ ಕೊಯ್ದ ಎಲೆ ಬಿಸಿಲು ನಾಡಿನಲ್ಲಿ ಬೇಗ ಬಾಡಿ ಒಣಗುತ್ತದೆ. ಬಿದಿರಿನ ಬುಟ್ಟಿಯಲ್ಲಿ ಭತ್ತದ ಹುಲ್ಲು ತುಂಬಿ ಶೇಖರಿಸಿದರೆ ೭-೮ ದಿನವಾದರೂ ಎಲೆ ಒಣಗುವದಿಲ್ಲವೆಂಬ ತಂತ್ರ ಇಲ್ಲಿನ ವ್ಯಾಪಾರಿಗಳಿಗೆ ತಿಳಿದಿದೆ. ಉತ್ಕೃಷ್ಟ ಮಟ್ಟದ ಎಲೆಗಳನ್ನು ವಿಂಗಡಿಸಿ ಬುಟ್ಟಿಯಲ್ಲಿ ಭರ್ತಿಮಾಡಿ ವಿಮಾನ, ರೇಲ್ವೆ, ಲಾರಿಗಳ ಮುಖೇನ ಸಾಗಣೆಯಾಗುತ್ತದೆ. ಶೀತಲಪೆಟ್ಟಿಗೆಯಲ್ಲಿ ತುಂಬಿ ಕಳಿಸುವದು  ವೆಚ್ಚದಾಯಕ. ಇಲ್ಲಿ ಶಮೆ ಬಿದಿರು ವ್ಯಾಪಾರಿಗಳ ಸುಲಭ, ಸುರಕ್ಷಿತ ಅಗ್ಗದ ಪ್ಯಾಂಕಿಂಗ್ ವ್ಯವಸ್ಥೆ.  ೧೯೯೬ರ ಪೂರ್ವದಲ್ಲಿ ಹೊನ್ನಾವರದ ರಾಣಿ ಎಲೆಯೆಂಬ ಉತ್ಕೃಷ್ಟವಾದ ಎಲೆ ಕರಾಚಿಗೆ ಹೋಗುತ್ತಿತ್ತು. ಎಲೆಗಳನ್ನು ಸುರಕ್ಷಿತ ರವಾನಿಸಲು  ಮೇದಾರರು  ಪುಟ್ಟ ಪುಟ್ಟ ಬುಟ್ಟಿ ತಯಾರಿಸಿದರು, ಇದನ್ನು ‘ಕರಾಚಿ ಬುಟ್ಟಿ’ ಎಂದು ಆಗ ಕರೆಯುತ್ತಿದ್ದರು. ಈಗ ಎಲೆ ಸಾಗಿಸುವ ಶಮೆ ಬಿದಿರಿನ ಬುಟ್ಟಿಗೆ ಕರಾಚಿ ಬುಟ್ಟಿಯೆಂಬ ಹೆಸರಿದೆಯಾದರೂ ಹೆಚ್ಚಿನ ಎಲೆಗಳು ಕಲ್ಕತ್ತ, ಮುಂಬೈಗೆ ಹೋಗುತ್ತವೆ. ಎಲೆ ಸಾಗಣೆಗೆ ಬುಟ್ಟಿ ಅನುಕೂಲತೆ ಅರಿತವರು ಈಗಲೂ ಬಳಕೆ ಮುಂದುವರಿಸಿದ್ದಾರೆ. ಪರಿಣಾಮ ಶಮೆ ಬಿದಿರು ಬೇಡಿಕೆ ಏರುತ್ತಿದೆ. ಇದಲ್ಲದೇ ಇನ್ನಿತರ ಬಿದಿರು ಮಾರುಕಟ್ಟೆಗಳಲ್ಲಿ  ಕೃಷಿ ಬಳಕೆಯ ವಸ್ತು ತಯಾರಿಕೆಗೆ ಬಿದಿರು ಬಳಕೆಯಾಗುತ್ತಿರುವದರಿಂದ ಕೊರತೆ ಬಿದಿರಿಗೆ ಬೆಲೆ ತಂದಿದೆ.

ಇನ್ನೆಷ್ಟು ವರ್ಷ ಬಿದಿರಿಗೆ ಈ ಬೆಲೆ ಉಳಿಯುತ್ತದೆ? ಬುಟ್ಟಿ ನೇಯಲು ಮೇದಾರರರು ಸಿದ್ದರಿರುವ ತನಕ ಬೆಲೆ ಇದ್ದೇ ಇರುತ್ತದೆ! ಈಗ ಹೂವರಳಿಸಿದ  ಕಾಡಿನ ಬಿದಿರು ಬೆಳೆಯಲು ಇನ್ನು ೧೫-೨೦ ವರ್ಷ ಬೇಕು. ನೀರಾವರಿ, ಸೂಕ್ತಪೋಷಕಾಂಶ, ಸಂರಕ್ಷಣೆಯ ವಿಶೇಷ ಗಮನ ನೀಡಿದರೆ  ಕೇವಲ ೪-೫ ವರ್ಷಗಳಲ್ಲಿ ಶಮೆ ಬಿದಿರು ಉತ್ಪಾದನೆ ಸಾಧ್ಯವಿದೆ. ಹೊಳೆ, ಹಳ್ಳ, ಕೆರೆಗಳ ಅಂಚಿನಲ್ಲಿ  ಬಿದಿರು ಬೆಳೆಸಲು ಅವಕಾಶವಿದೆ. ಸೊಪ್ಪಿನ ಬೆಟ್ಟಗಳ ತಗ್ಗಿನ ಪ್ರದೇಶಗಳಲ್ಲಿ ಬಿದಿರು ತೋಟ ಮಾಡಬಹುದು. ಮಾವು, ತೆಂಗು, ಗೇರು, ಅಡಿಕೆ ತೋಟಗಳ ಅಂಚಿನಲ್ಲಿ  ಕೃಷಿ ಅವಕಾಶಗಳಿವೆ. ಅಡಿಕೆ ತೋಟದಂತೆ ಇದನ್ನೇ ಕೃಷಿಯಾಗಿ ಮಾಡಲು ಸಾಧ್ಯವಿಲ್ಲದಿದ್ದರೂ ಪ್ರತಿ ಕುಟುಂಬ ನೂರಾರು ಬಿದಿರು ಹಿಂಡು ಬೆಳೆಸಿದರೂ ಒಂದಿಷ್ಟು ಆದಾಯ ನಿರಂತರವಾಗಿ ದೊರೆಯುವ ಅವಕಾಶವಿದೆ. ಈಗ ಉದ್ಯೋಗ ಖಾತ್ರಿ ಯೋಜನೆ ಕೆಲಸದ ಅವಕಾಶ ನೀಡುತ್ತಿದೆ, ಇದೇ ಯೋಜನೆಯಿಂಂದ ಬಿದಿರು ಕೃಷಿ ನಡೆಸಿದರೆ ಉದ್ಯೋಗದ ಜತೆಗೆ ಆದಾಯದ ಅವಕಾಶವೂ ತೆರೆದುಕೊಳ್ಳುತ್ತದೆ.